–ಬಿ ಎ ವಿವೇಕ ರೈ
ಇಲ್ಲಿ ಜರ್ಮನಿಯಲ್ಲಿ ಇವತ್ತು ಹಿಮ ಇಲ್ಲ. ಮಳೆ ಇಲ್ಲ. ಮೋಡ ಕವಿದಿದೆ. ೫ ಡಿಗ್ರಿ ಇದೆ, ದಶಂಬರ್ ಗಿಂತ ಉತ್ತಮ.
ಆದರೆ ಇಲ್ಲಿನ ಹವೆ ನಮ್ಮ ದೇಶದ ರಾಜಕೀಯದಂತೆ .
ಯಾವಾಗ ಹೇಗಿರುತ್ತದೆ ಎಂದು ಹೇಳಲು ಆಗುವುದಿಲ್ಲ.
13 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
–ಬಿ ಎ ವಿವೇಕ ರೈ
ಇಲ್ಲಿ ಜರ್ಮನಿಯಲ್ಲಿ ಇವತ್ತು ಹಿಮ ಇಲ್ಲ. ಮಳೆ ಇಲ್ಲ. ಮೋಡ ಕವಿದಿದೆ. ೫ ಡಿಗ್ರಿ ಇದೆ, ದಶಂಬರ್ ಗಿಂತ ಉತ್ತಮ.
ಆದರೆ ಇಲ್ಲಿನ ಹವೆ ನಮ್ಮ ದೇಶದ ರಾಜಕೀಯದಂತೆ .
ಯಾವಾಗ ಹೇಗಿರುತ್ತದೆ ಎಂದು ಹೇಳಲು ಆಗುವುದಿಲ್ಲ.
08 ಜನ 2011 4 ಟಿಪ್ಪಣಿಗಳು
–ಬಿ ಎ ವಿವೇಕ ರೈ
ಮಂಗಳೂರು ನಗರದಲ್ಲಿ ವಾಸ್ತವ್ಯಕ್ಕಾಗಿ ನಾನು ಮೊದಲು ಬಂದದ್ದು ೧೯೬೮ರಲ್ಲಿ.ಇಲ್ಲಿನ ಸಿಟಿ ಬಸ್ಸುಗಳು ಆ ಕಾಲದಿಂದ ಈ ಕಾಲದವರೆಗೂ ಖಾಸಗಿ ಒಡೆತನದಲ್ಲಿವೆ.ಇವರಲ್ಲಿ ಬಹಳ ಮಂದಿ ಒಂದೆರಡು ಬಸ್ಸು ಇಟ್ಟುಕೊಂಡು ಜೀವನ ಸಾಗಿಸುವವರು.ಜನಸಾಮಾನ್ಯರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದವರು.ಮಂಗಳೂರು ಸಿಟಿ ಬಸ್ಸುಗಳ ಬಗ್ಗೆ ಸಾಕಷ್ಟು ಜೋಕುಗಳಿವೆ,ಟೀಕೆಗಳೂ ಇವೆ.ಆದರೆ ಇಷ್ಟು ಕಡಮೆ ದರದಲ್ಲಿ ಈ ರೀತಿ ಸೇವೆ ಒದಗಿಸುವ ವ್ಯವಸ್ಥೆ ವಿಶೇಷವಾದುದು
ನಾನು ೧೯೬೮ರಿನ್ದ ೨೦೦೦ದಲ್ಲಿ ನನ್ನ ಕಾರು ಕೊಳ್ಳುವವರೆಗೆ ಮಂಗಳೂರು ಸಿಟಿ ಬಸ್ಸುಗಳನ್ನೇ ನೆಚ್ಚಿಕೊಂಡವನು ಮತ್ತು ಮೆಚ್ಚಿಕೊಂಡವನು.ಈ ಬಾರಿ ಜರ್ಮನಿಯಿಂದ ಮಂಗಳೂರಿಗೆ ಬಂದವನು ನನ್ನ ಕಾರನ್ನು ಬದಿಗೆ ಬಿಟ್ಟು ,ಸಿಟಿ ಬಸ್ಸುಗಳಲ್ಲೇ ಓಡಾಡಿದೆ.ಅದು ನೋಸ್ತಾಲ್ಜಿಯಾ ಅಷ್ಟೇ ಅಲ್ಲ,ರೋಮಾಂಚಕ ಕೂಡಾ.ನಿನ್ನೆ ದಿನ ,ನನಗೆ ತುಂಬಾ ಪರಿಚಿತ ಹಾಗೂ ಇಷ್ಟವಾದ ೫ ಮತ್ತು ೨೭ ರೂಟಿನ ಸಿಟಿ ಬಸ್ಸುಗಳಲ್ಲಿ ಸಂಚಾರ ಮಾಡಿದೆ.ನನ್ನ ಮೊದಲ ವಸತಿಯ ಕೋಣೆ ಇದ್ದದ್ದು ಅತ್ತಾವರದಲ್ಲಿ,ಮತ್ತೆ ಕಂಕನಾಡಿ ಬೈಪಾಸ್ ರಸ್ತೆಯಲ್ಲಿ.ಆಮೇಲೆ ೧೯೮೭ರಿನ್ದ ಮಾರ್ನಮಿಕಟ್ಟೆಯ ಬಳಿ.ಹಾಗಾಗಿ ಐದು ಮತ್ತು ಇಪ್ಪತೇಳು ರೂಟಿನ ಸಿಟಿಬಸ್ಸುಗಳು ನನ್ನ ಆತ್ಮಸಂಗಾತಿಗಳು.ಕೊಣಜೆಗೆ ವಿಶ್ವವಿದ್ಯಾಲಯಕ್ಕೆ ಹೋಗುವಾಗ ಐವತ್ತೊಂದು ನಂಬರಿನ ಸಿಟಿ ಬಸ್ಸು.
ನಾನು ಮಂಗಳೂರಿಗೆ ಮೊದಲ ಬಾರಿ ೧೯೬೮ರಲ್ಲಿ ಬಂದಾಗ ಮಿಸ್ಕಿತ್ ಎಂಬ ಸಿಟಿ ಬಸ್ ಇತ್ತು.ಮುಂದಕ್ಕೆ ಚಾಚಿದ ಮೂಗು ಇದ್ದ ,ಆ ಚಿಕ್ಕ ಬಸ್ಸಿನಲ್ಲಿ ಡ್ರೈವರ್ ಪಕ್ಕದಲ್ಲಿ ಮೂರು ಸೀಟುಗಳು ಇದ್ದುವು.ಈ ಭಾಗವು ಬಸ್ಸಿನ ಉಳಿದ ಭಾಗದಿಂದ ಸರಿಗೆಯ ಗೋಡೆಯಿಂದ ಬೇರೆಯಾಗಿತ್ತು.ಡ್ರೈವರ್ ಪಕ್ಕದ ಈ ಸೀಟಿನಲ್ಲಿ ಕುಳಿತುಕೊಳ್ಳುವುದು ನಮಗೆ ಸಂಭ್ರಮದ ಸಂಗತಿ ಆಗಿತ್ತು.ಈ ಮಿಸ್ಕಿತ್ ಬಸ್ ಬಾವಟೆ ಗುಡ್ಡೆ ಏರುವಾಗ ಅನೇಕ ಬಾರಿ ಮೇಲೆ ಹೋಗಲಾಗದೆ ನಿಲ್ಲುತ್ತಿತ್ತು.ಆಗ ಡ್ರೈವರ್ ಹೊರಗೆ ಬಂದು ,ಅದರ ಮೂತಿಯೊಳಗೆ ಸರಳು ತೋರಿ ತಿರುಗಿಸಿ, ಹೊಗೆ ಎಬ್ಬಿಸಿದ ಬಳಿಕವೇ ಬಸ್ಸು ಜೀವ ತಾಳಿ ಮುಂದೆ ಹೋಗಲು ಸಂಮತಿಸುತಿತ್ತು.ಆಗ ಸಿಟಿ ಬಸ್ಸಿನ ಕನಿಷ್ಠ ದರ ಏಳು ಪೈಸೆ. ನಿನ್ನೆ ನಾನು ಕೇಳಿದಾಗ ನಾಲ್ಕು ರೂಪಾಯಿ ಎಂದರು.ಅದೇನು ಹೆಚ್ಚು ಅನ್ನಿಸಲಿಲ್ಲ.
ಮಂಗಲೋರಿನ ಸಿಟಿ ಬಸ್ಸುಗಳಲ್ಲಿ ಏರುವ ಮತ್ತು ಇಳಿಯುವ ಅವಸರ, ಕಾತರ ಮತ್ತು ಜಾಣ್ಮೆ ನನಗೆ ಕರಗತ ಆದದ್ದು ಮುಂದೆ ಬದುಕಿನಲ್ಲಿ ತುಂಬಾ ಪ್ರಯೋಜನಕ್ಕೆ ಬಂತು.ಯಾವಾಗಲೂ ಏರುವ ,ಬೇಕೆಂದಾಗ ಇಳಿಯುವ ಮನಸ್ಸು ಮತ್ತು ಹಕ್ಕು -ಬದುಕನ್ನು ಕ್ರಿಯಾಶೀಲ ಮಾಡುತ್ತದೆ.ಎಲ್ಲರೊಡನೆ ಒಂದಾಗಿ ಸಕಲರನ್ನು ಅರಿಯಲು ಅವಕಾಶವನ್ನು ಕಲ್ಪಿಸುತ್ತದೆ.ಆರ್ಥಿಕವಾಗಿ ತುಂಬಾ ಅಗ್ಗದ ಪ್ರಯಾಣದ ಸೌಲಭ್ಯ ದೊರೆಯುತ್ತದೆ. ನಮ್ಮ ಅಹಂಕಾರ ಮತ್ತು ಅಂತಸ್ತುಗಳನ್ನು ಕರಗಿಸುತ್ತದೆ.
22 ಜೂನ್ 2010 2 ಟಿಪ್ಪಣಿಗಳು
ಪ್ರೊ. ಬಿ ಎ ವಿವೇಕ್ ರೈ ಅವರ ‘ಇರುಳ ಕಣ್ಣು’
ಸಂಕಲನದಿಂದ ಆಯ್ದ ಲೇಖನ. ಪ್ರಜಾವಾಣಿಯಲ್ಲಿ ಈ ಲೇಖನ 11 ಸೆಪ್ಟೆಂಬರ್, 2009 ರಂದು ಅಂಕಣವಾಗಿ ಪ್ರಕಟಗೊಂಡಿದೆ.
————————-
ಹೆಲಿಕಾಫ್ಟರ್ ಅಪಘಾತದಲ್ಲಿ ದುರ್ಮರಣಕ್ಕೆ ಈಡಾದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ ರೆಡ್ಡಿ ಅವರ ಸಾವಿನ ಸುದ್ದಿಯನ್ನು ಕೇಳಿ ಮತ್ತು ಮಾಧ್ಯಮಗಳಲ್ಲಿ ನೋಡಿ ಸಾವನ್ನು ಆಹ್ವಾನಿಸಿದ ಅಭಿಮಾನಿಗಳ ಸಂಖ್ಯೆ 344 ಎನ್ನುವ ವರದಿಯೊಂದು ಆಘಾತಕಾರಿಯಾದುದು. ರಾಜಕೀಯ ಉದ್ದೇಶಗಳಿಗೆ ಅನುಸಾರವಾಗಿ ಈ ಸಂಖ್ಯೆಯು ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಆದರೆ ಅದು ನೂರರ ಗಡಿಯನ್ನು ದಾಟಿದೆ ಎನ್ನುವುದು ನಿಜವಿರಬಹುದು. ಇವರಲ್ಲಿ ಕೆಲವರು ಆತ್ಮಹತ್ಯೆಗೆ ಶರಣಾದರೆ, ಇನ್ನು ಕೆಲವರು ಹೃದಯಾಘಾತದಿಂದ ಸಾವನ್ನಪ್ಪಿದ ದುರಂತ ಸಂಭವಿಸಿದೆ. ನಾಯಕರ ಬಗೆಗಿನ ಅಭಿಮಾನಿಗಳ ಅಭಿಮಾನದ ಉದ್ವೇಗ, ಸಾವನ್ನು ಆಹ್ವಾನಿಸುವ ಅತಿರೇಕದ ಶಿಖರಕ್ಕೆ ಅಪ್ಪಳಿಸಿ, ನೂರಾರು ಕುಟುಂಬಗಳ ಭವಿಷ್ಯವನ್ನು ಚೂರುಚೂರು ಮಾಡಿದೆ. ಇವರಾರೂ ಸರಕಾರದ ಅಥವಾ ಸಾರ್ವಜನಿಕರ ಶ್ರದ್ಧಾಂಜಲಿ, ಅನುಕಂಪ ಅಥವಾ ನೆರವಿನ ಅವಕಾಶವನ್ನು ಪಡೆಯುವುದಿಲ್ಲ. ಅವರ ಕುಟುಂಬಗಳ ಅನಾಥ ಮಕ್ಕಳು ನಿರ್ಗತಿಕರಾಗುತ್ತಾರೆ, ಹೆಣ್ಣುಮಕ್ಕಳು ಅಸಹಾಯಕ ವಿಧವೆಯರಾಗುತ್ತಾರೆ.
ಪ್ರಭು, ಒಡೆಯ ಅಥವಾ ಸ್ವಾಮಿಗಾಗಿ ಪ್ರಾಣಾರ್ಪಣೆ ಮಾಡುವ ಪ್ರಾಚೀನ ಮತ್ತು ಮಧ್ಯಯುಗೀನ ಪ್ರಭುತ್ವದ ಅಥವಾ ಪಾಳೆಯಗಾರಿಕೆಯ ಸಮಾಜವೊಂದು ಪ್ರಜಾಪ್ರಭುತ್ವದ ಯುಗದಲ್ಲಿಯೂ ಪಳೆಯುಳಿಕೆಯಾಗಿ ಉಳಿದುಕೊಂಡು ಬಂದು ಜೀವಂತವಾಗಿರುವುದು ಆತಂಕದ ಸಂಗತಿ. ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಒಡೆಯನಿಗಾಗಿ ಪ್ರಾಣತ್ಯಾಗ ಮಾಡುವ, ಆತ್ಮಬಲಿದಾನದ ನಿದರ್ಶನಗಳು ಇತಿಹಾಸದಲ್ಲಿ ಕಾಣಸಿಗುತ್ತವೆ. ಜೋಳದ ಪಾಳಿ, ವೇಳೆವಾಳಿ, ಲೆಂಕವಾಳಿಗಳ ಪ್ರಸ್ತಾವ ಕರ್ನಾಟಕದ ಪ್ರಾಚೀನ ಕಾವ್ಯಗಳಲ್ಲಿ ಮತ್ತು ಶಾಸನಗಳಲ್ಲಿ ದೊರೆಯುತ್ತದೆ. ವೈಷ್ಣವ ರಾಜರುಗಳ ಕಾಲಕ್ಕೆ ಪ್ರಚುರವಾದ ಗರುಡ ಪದ್ಧತಿಯು ಒಡೆಯನಿಗಾಗಿ ಸರ್ವಾರ್ಪಣೆ ಮಾಡುವ ‘ಲೆಂಕ’ ಅಥವಾ ಭಟನ ಸಮರ್ಪಣಾ ಭಾವವನ್ನು ತಿಳಿಸುತ್ತದೆ. ವಿಷ್ಣುವಿಗೆ ಗರುಡ ಇದ್ದ ಹಾಗೆ, ಒಬ್ಬ ರಾಜನಿಗೆ ಒಬ್ಬ ನಿಷ್ಠಾವಂತ ಸೇವಕ, ಅಭಿಮಾನಿ ಇರುತ್ತಾನೆ ಎನ್ನುವುದು ಅಲ್ಲಿನ ಕಲ್ಪನೆ. ‘ಕೀಳ್ಗುಂಟೆ’ ಎನ್ನುವ ಪದ ಕನ್ನಡ ಶಾಸನಗಳಲ್ಲಿ ದೊರೆಯುತ್ತದೆ. ಒಡೆಯನ ಚಿತೆ ಅಥವಾ ಸಮಾಧಿಯ ಕೆಳಗಡೆ ಸೇವಕ ಮಲಗಿ, ತನ್ನ ಪ್ರಾಣವನ್ನು ತ್ಯಜಿಸುವ ‘ಸ್ವಾಮಿಭಕ್ತಿ’ಯ ಒಂದು ಪರಮಾವಧಿ ಅದು. ಕರ್ನಾಟಕದ ವೀರಗಲ್ಲುಗಳಲ್ಲಿಯೂ ಆತ್ಮಬಲಿದಾನದ ಇಂತಹ ಮಾದರಿಗಳು ದೊರೆಯುತ್ತವೆ. (ಉಲ್ಲೇಖಗಳು : ಡಾ.ಎಂ.ಚಿದಾನಂದಮೂರ್ತಿ ಅವರ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಮತ್ತು ‘ಸಂಶೋಧನ ತರಂಗ’ ಸಂಪುಟಗಳು).
ದಕ್ಷಿಣ ಭಾರತದ ಸ್ಮಾರಕ ಕಲ್ಲುಗಳ ಅಧ್ಯಯನ ಗ್ರಂಥ ಕೆ. ರಾಜನ್ ಅವರ ‘South Indian Memorial Stones’. (ತಂಜಾವೂರು, 2000). ಇದರಲ್ಲಿ ಆಂಧ್ರಪ್ರದೇಶದ ಸ್ಮಾರಕ ಕಲ್ಲುಗಳ ವಿವರಗಳನ್ನು ಕೊಡಲಾಗಿದೆ. ಒಟ್ಟು 476 ಇಂತಹ ಸ್ಮಾರಕ ಕಲ್ಲುಗಳಲ್ಲಿ 346 ರಾಯಲಸೀಮ ಪ್ರದೇಶದ ಅನಂತಪುರ, ಚಿತ್ತೂರು, ಕಡಪ ಮತ್ತು ಕರ್ನೂಲು ಜಿಲ್ಲೆಗಳಲ್ಲಿವೆ. ಚಿತ್ತೂರಿನಲ್ಲಿ 127 ಮತ್ತು ಕಡಪದಲ್ಲಿ 112 ಎಂದು ದಾಖಲಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ಆರ್ ಅವರ ಹುಟ್ಟೂರು ಕಡಪಜಿಲ್ಲೆಯಲ್ಲಿ ಇರುವುದು ಮತ್ತು ಬಹುತೇಕ ಅಭಿಮಾನಿಗಳ ಆತ್ಮಾಹುತಿಯ ಪ್ರಕರಣಗಳು ಈ ಭಾಗದಿಂದಲೇ ದಾಖಲಾಗಿರುವುದು ಆಕಸ್ಮಿಕವೆಂದು ಭಾವಿಸಬೇಕಾಗಿಲ್ಲ. ಪ್ರಾಚೀನ ಕಾಲದ ರಾಜಪ್ರಭುತ್ವ ಮತ್ತು ಮಧ್ಯಯುಗೀನ ಕಾಲದ ಸ್ಥಳೀಯ ಅರಸು ಮನೆತನಗಳು, ಆಧುನಿಕ ಕಾಲದ ಪಾಳೆಯಗಾರಿಕೆಯ ಕುಟುಂಬ ವ್ಯವಸ್ಥೆ, ರಾಜಕೀಯ ರಂಗದಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಒಡೆಯ-ಭೃತ್ಯ, ಪ್ರಭು-ಪ್ರಜೆ, ನಾಯಕ-ಸೇವಕ-ಈ ಸಂಬಂಧ ಹೊಸ ರೂಪಾಂತರಗಳನ್ನು ಹೊಂದುತ್ತಾ ಬಂದು, ಅಭಿಮಾನವೆನ್ನುವ ಪರಿಭಾಷೆಯ ಒಳಗೆ ಊಳಿಗಮಾನ್ಯ ಪದ್ಧತಿಯು ರೂಪಾಂತರವನ್ನು ಹೊಂದಿ ಸಕ್ರಿಯವಾಗಿರುವುದನ್ನು ಕಾಣಬಹುದು.
ಪ್ರಜಾಪ್ರಭುತ್ವದ ಆಧುನಿಕ ಸಂದರ್ಭದಲ್ಲಿ ಮಧ್ಯಯುಗೀನ ಕಾಲದ ಊಳಿಗಮಾನ್ಯ ಮತ್ತು ವಂಶಾಡಳಿತ ಪದ್ಧತಿಯನ್ನು ನಿವಾರಿಸಿಕೊಳ್ಳದಿದ್ದರೆ, ಜನರ ನಡುವಿನಿಂದ ಸಾಮುದಾಯಿಕ ನಾಯಕರು ಹುಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ತಂದೆಯ ಬಳಿಕ ಮಗ ಅಥವಾ ಮಗಳು ಆಳಬೇಕು ಎನ್ನುವ ಆಲೋಚನೆಯೇ ಪ್ರಜಾಪ್ರಭುತ್ವದ ಸಾಮುದಾಯಿಕತೆಯ ತತ್ತ್ವಕ್ಕೆ ವಿರುದ್ಧವಾದುದು.
ಜನಪ್ರಿಯ ನಾಯಕರ ಜನೋಪಯೋಗಿ ಕೆಲಸಗಳು ಸಹಜವಾಗಿಯೇ ಗೌರವವನ್ನು ವಿಶ್ವಾಸವನ್ನು ಅಭಿಮಾನವನ್ನು ಉಂಟುಮಾಡುತ್ತವೆ. ಹಾಗಾಗಿ, ಅಂತಹ ನಾಯಕರ ಅಕಾಲಿಕ ಅಗಲಿಕೆ, ಭಾವೋದ್ವೇಗವನ್ನು, ನೋವನ್ನು ತರುವುದು ಸಹಜವಾದುದು. ಅಂತಹ ಸಂದರ್ಭದಲ್ಲಿ ಭಾವನಾತ್ಮಕ ಸಂಬಂಧ ಹೊಂದಿರುವವರು ಅಳುವುದು, ರೋದಿಸುವುದು ತುಂಬ ಮಾನವೀಯವಾದುದು. ಆದರೆ, ಅವುಗಳನ್ನು ನಿಧಾನವಾಗಿಯಾದರೂ ನಿಯಂತ್ರಿಸುವ ವ್ಯವಸ್ಥೆಯನ್ನು ನಾವು ಕಲ್ಪಿಸಿಕೊಳ್ಳಬೇಕು. ನಾಯಕರೊಬ್ಬರ ದುರಂತ ಸಾವಿನ ವೇಳೆಗೆ ಮಾಧ್ಯಮಗಳಲ್ಲಿ, ಅದರಲ್ಲೂ ಪ್ರಧಾನವಾಗಿ ದೃಶ್ಯಮಾಧ್ಯಮಗಳಲ್ಲಿ ಮತ್ತೆ ಮತ್ತೆ ಪ್ರಸಾರವಾಗುವ ಭಾವೋತ್ಕರ್ಷದ ಸಂಗತಿಗಳು ಸಂವೇದನಾಶೀಲರಾದ ಯಾರನ್ನೇ ಆಗಲಿ ಕಲಕುತ್ತವೆ ಮತ್ತು ಭಾವೋದ್ವೇಗಕ್ಕೆ ಒಳಗು ಮಾಡುತ್ತವೆ. ಅಂತಹ ಸನ್ನಿವೇಶಗಳಲ್ಲಿ ಅದನ್ನು ಶಮನಮಾಡುವ, ನಿಯಂತ್ರಿಸುವ, ಮಾರ್ಗಗಳನ್ನು ಅಳವಡಿಸಬೇಕು ಮತ್ತು ಸಾವಿನ ವಿದ್ಯಮಾನವೊಂದು ಅತಿರಂಜಿತ ಸಂಕಥನವಾಗಿ ರೂಪಾಂತರಗೊಳ್ಳಬಾರದು.
04 ಮೇ 2010 1 ಟಿಪ್ಪಣಿ
in 1, ಬಿ ಎ ವಿವೇಕ ರೈ, ಬ್ಲಾಗ್ ಮಂಡಲ
ಐಸಲೆಂಡ್ ಜ್ಲಾಲಾಮುಖಿ ಉಗುಳಿದ ಬೂದಿಮೋಡಗಳು ಕಳುಹಿಸಿದ ಮೇಘ ಸಂದೇಶದಂತೆ ಜರ್ಮನಿಗೆ ಬೇಸಿಗೆ ಸೆಮೆಸ್ಟರಿಗೆ ಸಕಾಲಕ್ಕೆ ಹೋಗಲು ಸಾಧ್ಯವಾಗದೆ ಹತ್ತು ದಿನ ತ್ರಿಶಂಕು ಸ್ವರ್ಗವನ್ನು ಅನುಭವಿಸಿ, ಮತ್ತೆ ಮೇ ದಿನದ ಮುನ್ನಾದಿನ ಫ್ರಾಂಕ್ ಫಾರ್ತ್ ಮೂಲಕ ವೂರ್ಜ್ಬರ್ಗ್ ತಲುಪಿದಾಗ ಎಲ್ಲೆಲ್ಲೂ ಮೇ ದಿನದ ಮಾತು.ಅದರಲ್ಲಿ ವಿಶೇಷ ವೆಂದರೆ ಎಡ-ಬಲಗಳ ಮೆರವಣಿಗೆ ಮತ್ತು ಸಂಘರ್ಷ . ಜರ್ಮನಿಯ ಅನೇಕ ನಗರಗಳಲ್ಲಿ ಕಳೆದ ಸುಮಾರು ಎರಡು ದಶಕಗಳಿಂದ ಈ ಹೋರಾಟ ಪ್ರತೀವರ್ಷ ಮೇ ದಿನದಂದು ನಡೆಯುತ್ತಾ ಬಂದಿದೆ. ಬರ್ಲಿನ್ , ಹ್ಯಾಂಬರ್ಗ್, ವೂರ್ಜಬರ್ಗ್ , ಶ್ವೇಇನ್ ಫಾರ್ತ್ ಮುಂತಾದೆಡೆ ಇದು ಅಧಿಕ. ಸರಕಾರಕ್ಕೆ ಪೊಲೀಸರಿಗೆ ದೊಡ್ಡ ತಲೆನೋವು. ಬರ್ಲಿನ್ ಗೋಡೆ ಬಿದ್ದುಹೋದರೂ, ರಾಜಕೀಯ ಮನಸ್ಸುಗಳು ತಮ್ಮ ಗೋಡೆಗಳನ್ನು ಕಾಠಿಣ್ಯವನ್ನು ಕಳಚಿಲ್ಲ . ಹಿಟ್ಲರನ ಭೂತ ಕಣ್ಮರೆಯಾಗಿಲ್ಲ ಮತ್ತು ಪೂರ್ವಜರ್ಮನಿಯ ಪೂರ್ವ ಜನ್ಮದ ವಾಸನೆ ಹೋಗಿಲ್ಲ.
‘ ನವನಾಜಿಗಳು ‘ಎನ್ನುವ ಹೆಸರೇ ಫ್ಯಾಸಿಸಂನ ಹೊಸ ಅವತಾರ. ‘ ಹಳೆಯ ನಾಜಿ’ ಗಳನ್ನು ಬಹಿಷ್ಕರಿಸಿದಾಗ ನಿಷೇಧಿಸಿದಾಗ ಅದಕ್ಕೆ ಇನ್ನೊಂದು ಹೆಸರು ಮತ್ತು ಹೊಸ ಸಂಘಟನೆಯ ಆಕಾರ ಕಾಣಿಸಿಕೊಳ್ಳುತ್ತದೆ. ಫ್ಯಾಸಿಸಂ ಮತ್ತು ಮೂಲಭೂತವಾದದ ಲಕ್ಷಣವೇ ಅದು. ಸಂರಚನೆಗಳನ್ನು ಅಂತರಂಗದ ಕಾರ್ಯಸೂಚಿಗಳನ್ನು ಅರ್ಥಮಾಡಿಕೊಳ್ಳಬಲ್ಲವರಿಗೆ ಮಾತ್ರ ಇದು ಅರ್ಥ ಆಗುತ್ತದೆ. ಹೊರ ಆಕಾರ ,ಹೆಸರು ಮಾತ್ರ ನೋಡುವವರಿಗೆ ಅದು ಬೇರೆ ಆಗಿಯೇ ಕಾಣಿಸುತ್ತದೆ.’ದೇವನೊಬ್ಬ , ನಾಮ ಹಲವು’ ಎನ್ನುವ ಸೂತ್ರ ದೇವರಿಗೆ ಮಾತ್ರ ಅಲ್ಲ, ದೇವರಂತೆ ಅಭಿನಯಿಸುವವರಿಗೆ ಎಲ್ಲರಿಗೂ ಅನ್ವಯ ಆಗುತ್ತದೆ. ಹಾಗಾಗಿ ಕಾಲ ,ದೇಶ ಮತ್ತು ಪರಿಸರ ಬೇರೆ ಆಗಿದ್ದರೂ ಸಮಾನ ಸಂರಚನೆಗಳು ಇರಲು ಸಾಧ್ಯ.
ಈ ನವನಾಜಿಗಳು ಜರ್ಮನಿಯಲ್ಲಿ ಮೇ ದಿನದಂದು ಮೆರವಣಿಗೆ ನಡೆಸುವ ಮೂಲಕ ಕಾರ್ಮಿಕರ ಒಲವು ಪಡೆಯುವ ಮತ್ತು ಆ ಮೂಲಕ ಗತಕಾಲದಲ್ಲಿ ಹೂತುಹೋದ ತಮ್ಮ ಅನನ್ಯತೆಯನ್ನು ಪ್ರಕಟಿಸುವ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಸಾಮುದಾಯಿಕ ಮತ್ತು ಶ್ರಮದ ದಿನವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ನವನಾಜಿಗಳ ಪ್ರಯತ್ನಕ್ಕೆ ಜರ್ಮನ್ ಸರಕಾರ ತಡೆ ಒಡ್ಡಿತು , ಮೆರವಣಿಗೆ ನಡೆಸಲು ಒಪ್ಪಿಗೆ ಕೊಡಲಿಲ್ಲ. ನವನಾಜಿಗಳು ಕೋರ್ಟಿಗೆ ಅಹವಾಲು ಸಲ್ಲಿಸಿದರು.ಮೆರವಣಿಗೆ ನಡೆಸುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು ಎಂದು ಹೇಳಿ ಕೋರ್ಟ್ ಅವರಿಗೆ ಮೇ ದಿನದಂದು ಮೆರವಣಿಗೆ ನಡೆಸಲು ಒಪ್ಪಿಗೆ ಕೊಟ್ಟಿತು.ಇದನ್ನು ವಿರೋಧಿಸಿದ ಎಡ ಪಂಥೀಯರು ನವನಾಜಿಗಳ ಮೆರವಣಿಗೆಯನ್ನು ತಡೆಯುವ ನಿರ್ಧಾರ ಮಾಡಿದರು.ಇಲ್ಲಿ ಆರಂಭ ಆಯಿತು ಎಡ-ಬಲಗಳ ಸಂಘರ್ಷ.ಈ ಹೋರಾಟದಲ್ಲಿ ಎಡದವರೊಂದಿಗೆ ,ಬಲಪಂಥೀಯರು ಹೊರತುಪಡಿಸಿ ಎಲ್ಲರೂ ಒಟ್ಟಾದರು.
ಹಾಗೆ ನೋಡಿದರೆ ಜರ್ಮನಿಯ ಕೇಂದ್ರ ಸರಕಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ -ಎರಡೂ ಕಡೆಗಳಲ್ಲಿ-ನವನಾಜಿಗಳೂ ಇಲ್ಲ, ಪೂರ್ಣ ಎದಪನ್ಥೀಯರೂ ಇಲ್ಲ. ಆಡಳಿತ ನಡೆಸುವ ಸರಕಾರದಲ್ಲಿ ಇರುವ ಪಕ್ಷಗಳು-ಕ್ರಿಸ್ತಿಯನ್ ಡೆಮೋ ಕ್ರೆಟ್ಸ್ ಮತ್ತು ಲಿಬರಲ್ಸ್ . ವಿರೋಧ ಪಕ್ಷದಲ್ಲಿ ಮುಖ್ಯವಾಗಿ ಇರುವವರು -ಸೋಸಿಯಲಿಸ್ಟ್ ಡೆಮೋ ಕ್ರೆಟ್ಸ್ ಮತ್ತು ಗ್ರೀನ್ಸ್ ( ಹಸುರು ಪಕ್ಷದವರು -ರೈತರು, ಪರಿಸರದವರು ), ಸ್ವಲ್ಪ ಎಡದವರು .ಇದರಲ್ಲಿ ಆಳುವ ಪಕ್ಷ ಕೇಂದ್ರದಿಂದ ಸ್ವಲ್ಪ ಬಲಕ್ಕೆ ವಾಲಿದರೆ , ವಿರೋಧ ಪಕ್ಷಗಳು ಕೇಂದ್ರದಿಂದ ಸ್ವಲ್ಪ ಎಡಕ್ಕೆ ವಾಲುತ್ತವೆ.ಆದರೆ ಅತಿ ಬಲಪಂಥೀಯ ಅಥವಾ ಪೂರ್ಣ ಎಡಪಂಥೀಯ ಗುಂಪುಗಳು ಈ ಎರಡೂ ಕಡೆ ಸ್ಥಾನ ಪಡೆಯಲು ಸಾಧ್ಯ ಆಗಿಲ್ಲ. ಇದು ಆಧುನಿಕ ಜರ್ಮನಿಯ ಜನರ ಬದಲಾದ ಮನೋಧರ್ಮವನ್ನು ತಿಳಿಸುತ್ತದೆ.ಸಮ್ಮಿಶ್ರ ಚಿಂತನೆಯ ಯುಗ ಜಗತ್ತಿನಾದ್ಯಂತ ಆರಂಭವಾಗಿದೆ.ಭಾರತ ಇದಕ್ಕೆ ಒಳ್ಳೆಯ ನಿದರ್ಶನ.ಇದು ಕೊಡುವ ಸಂದೇಶ ಏನು ಎಂಬ ಗೋಡೆ ಮೇಲಿನ ಬರಹವನ್ನು ಓದಲಾಗದವರು ಅಥವಾ ಓದಿಯೂ ಒಪ್ಪಲು ಸಿದ್ಧವಿಲ್ಲದವರು ಅನ್ಯ ಮಾರ್ಗಗಳಿಂದ ಆದರೂ ತಮ್ಮ ಅಸ್ತಿತ್ವ ತೋರಿಸಲು ಮೆರವಣಿಗೆ ಹೊರಡುತ್ತಾರೆ.ಮೇ ದಿನದ ಮೆರವಣಿಗೆ ನವನಾಜಿಗಳ ಅಂತಹ ಒಂದು ಪ್ರದರ್ಶನ.
ಮೇ ದಿನ ಶನಿವಾರ ವೂರ್ಜಬರ್ಗ್ ನಗರದಲ್ಲಿ ಒಂದು ಸುತ್ತು ಬಂದೆ. ಸರಕಾರೀ ರಜೆ ಆದ್ದರಿಂದ ಯಾವುದೇ ಅಂಗಡಿ ಕಚೇರಿ ಬಾಗಿಲು ತೆರೆದಿಲ್ಲ.ಎಲ್ಲೆಲ್ಲೋ ನೀರವ ಮೌನ , ಬೇಸಗೆಯ ತಣ್ಣನೆಯ ಬಿಸಿಲಿನಲ್ಲಿ ಪ್ರಶಾಂತ ವಾತಾವರಣದಲ್ಲಿ ನಡೆಯುವ ದುಡಿಮೆ ಮಾಡುವುದೇ ಸೊಗಸು.ವಸಂತಕಾಲ ಬಂದಿದೆ.ಮರಗಿಡಗಳು ಹಸುರು ಚೆಲ್ಲಿ ನಳನಳಿಸುತ್ತಿವೆ.ಚಿಗುರು ಹೂವು ಅರಳುತ್ತಿವೆ. ‘ವಸಂತ ಬಂದ ,ಋತುಗಳ ರಾಜ ‘ ಎನ್ನುವಷ್ಟು ಸಂಭ್ರಮ ಪ್ರಕೃತಿಯಲ್ಲಿ. ಸುಮಾರು ಹತ್ತು ಸಾವಿರದಷ್ಟು ಜನರು, ಪ್ರಧಾನವಾಗಿ ಎಡಪಂಥೀಯರು ನವನಾಜಿಗಳ ಮೆರವಣಿಗೆಯ ವಿರುದ್ಧ ಪ್ರತಿಭಟಿಸಿದರು.ನವನಾಜಿಗಳ ಪ್ರದರ್ಶನ ಗಮನ ಸೆಳೆಯಲಿಲ್ಲ.ಪೋಲಿಸ್ ಬಂದೋಬಸ್ತು ಜೋರಾಗಿ ಇದ್ದ ಕಾರಣ ಹಿಂಸಾಚಾರ ಸಂಭವಿಸಲಿಲ್ಲ.
ಈ ದಿನ ಭಾನುವಾರ ಹವಾಮಾನ ತುಂಬಾ ಚೆನ್ನಾಗಿದೆ.೧೫ ರಿಂದ ೧೮ ಡಿಗ್ರಿ ಉಷ್ಣತೆ.ತಂಪಾದ ಹಿತವಾದ ಮೆದುವಾದ ಗಾಳಿ ಬೀಸುತ್ತಿದೆ.ಭಾನುವಾರದ ಈ ದಿನ ನಗರದ ಮುಖ್ಯ ಕೇಂದ್ರಗಳಲ್ಲಿ ಎಲ್ಲೆಲ್ಲೂ ಮಕ್ಕಳದೇ ಸಾಮ್ರಾಜ್ಯ.ಮಕ್ಕಳ ಆಟಗಳು , ಕುಣಿದಾಟ, ಬಣ್ಣ ಬಣ್ಣಗಳಲ್ಲಿ ಚಿತ್ರ ಬರೆದು ನಕ್ಕು ನಲಿಯುವ ಮಕ್ಕಳು. ನಿನ್ನೆ ದುಡಿಯುವವರ ದಿನ ಆದರೆ ,ಇಲ್ಲಿ ಇಂದು ಪಕ್ಷ ಪಂಥ ಇಲ್ಲದ, ಭಾವಗಳ ಬೆಸಯುವ ಪುಟಾಣಿ ಮಕ್ಕಳ ದಿನ. ಗುಪ್ತ ಕಾರ್ಯಸೂಚಿ ಇಲ್ಲದ, ನಾಳೆಯ ಈ ನಾಯಕರು ಸೌಹಾರ್ದದ ಬಣ್ಣದ ಸಂಗೀತದ ಕುಣಿತದ ಹೊಸ ನಾಡೊಂದನು ಕಟ್ಟಲು ಮೆರವಣಿಗೆ ಹೊರಟಿದ್ದಾರೆ -ವೂರ್ಜಬರ್ಗಿನ ನಗರದ ಬೀದಿಗಳಲ್ಲಿ ಮತ್ತು ನಗರವನ್ನು ಸೀಳುವ ಮಾಯಿನ್ ನದಿಯ ದಂಡೆಯ ಇಕ್ಕೆಲಗಳಲ್ಲಿ.
05 ಏಪ್ರಿಲ್ 2010 3 ಟಿಪ್ಪಣಿಗಳು
in ನೆನಪು, ಬಿ ಎ ವಿವೇಕ ರೈ
ಅಸಹಜ ಅವಧೂತ ಡಾ. ಶ್ರೀನಿವಾಸ ಹಾವನೂರ
-ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ
1980 ಮಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದಾಗ, ಅದರ ಮೊದಲ ಕುಲಪತಿಯಾಗಿ ಬಂದವರು ಪ್ರಸಿದ್ದ ಇತಿಹಾಸ ತಜ್ಞರಾದ ಪ್ರೊ. ಬಿ ಷೇಖ್ ಅಲಿ ಅವರು. ಆಗ ಅಸ್ತಿತ್ವದಲ್ಲಿ ಇದ್ಧ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಏಳು ವಿಭಾಗಗಳಿದ್ದು, ಅವುಗಳಲ್ಲಿ ಯಾವುದರಲ್ಲೂ ಪ್ರಾದ್ಯಾಪಕರು ಇರಲಿಲ್ಲ. ಅವುಗಳಲ್ಲಿ ಕನ್ನಡ ವಿಭಾಗ ಕೂಡ ಒಂದು. ಹೊಸ ವಿಶ್ವವಿದ್ಯಾಲಯದ ಆರಂಭದ ಹಂತದಲ್ಲಿ ಕರಾರಿನ ರೂಪದಲ್ಲಿ ತಜ್ಞರೊಬ್ಬರನ್ನು ಪ್ರಾದ್ಯಾಪಕರಾಗಿ ನಿರ್ದಿಷ್ಟ ಅವಧಿಗೆ ಆಹ್ವಾನಿಸುವ ಅವಕಾಶ ಇರುತ್ತದೆ. ಕುಲಪತಿಗಳಾದ ಪ್ರೊ, ಬಿ. ಷೇಖ್ ಅಲಿ ಅವರು ಒಂದು ದಿನ ಕನ್ನಡ ವಿಭಾಗದಲ್ಲಿದ್ದ ನನ್ನನ್ನು ಈ ಕುರಿತು ವಿಚಾರಿಸಿದರು. ಯಾವುದಾದರೂ ಒಬ್ಬ ಹಿರಿಯ ವಿದ್ವಾಂಸರನ್ನು ಆಹ್ವಾನಿಸುವ ಪ್ರಸ್ತಾಪವನ್ನು ತಿಳಿಸಿದರು. ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿರುವವರು ಯಾರೂ ಕೊಣಾಜೆಗೆ ಬರಲು ಸಾಧ್ಯವಿರಲಿಲ್ಲ ಹಾಗಾಗಿ ನನ್ನ ಗುರುಗಳಾದ ಡಾ. ಹಾ. ಮಾ. ನಾಯಕ ಅವರಲ್ಲಿ ಈ ವಿಷಯ ಪ್ರಸ್ತಾಪಿಸಿದೆ .
ಅವರು ಸಾಕಷ್ಟು ಯೋಚಿಸಿ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಗ್ರಂಥಾಲಯದಲ್ಲಿ ಡಾ ಶ್ರೀನಿವಾಸ ಹಾವನೂರ ಇದ್ದಾರೆ ಹೊಸಗನ್ನಡದ ಅರುಣೋದಯದ ಬಗ್ಗೆ ಡಾಕ್ಟರೇಟ್ ಮಾಡಿದ್ದಾರೆ. ಒಳ್ಳೆಯ ಸಂಶೋಧಕರು ಹಾಗೂ ಕೆಲಸಗಾರರು ಎಂದು ತಿಳಿಸಿ, ಅವರನ್ನು ಸಂಪರ್ಕಿಸಿ, ಅವರ ವ್ಯಕ್ತಿ ವಿವರವನ್ನು ನನಗೆ ತಲುಪುವಂತೆ ಮಾಡಿದರು. ಅದರಲ್ಲಿ ಇವರ ಎಂ. ಎ. ಕನ್ನಡ ಮತ್ತು ಪಿ ಎಚ್ ಡಿಯ ಅರ್ಹತೆಗಳೊಂದಿಗೆ ಗ್ರಂಥಾಲಯದ ಅಪಾರ ಅನುಭವ. ಅಧ್ಯಯನಗಳ ಮಾಹಿತಿ ಕೂಡ ಇತ್ತು. ಒಂದು ದಿನ ಹಾವನೂರರನ್ನು ಸಂಪರ್ಕಿಸಿ ಮಂಗಳೂರಿಗೆ ಬರಲು ಹೇಳಿದೆ. ಕುಳ್ಳಗಿನ ದೇಹದ, ಬೋಳು ತಲೆಯ, ನೇರ ದೃಷ್ಟಿಯ, ಸಂಕ್ಷಿಪ್ತ ಸ್ವಷ್ಟ ಮಾತಿನ ಹಾವನೂರರ ಭೇಟಿ ಆಯಿತು ಅವರನ್ನು ಕರೆದು ಕೊಂಡು ಕುಲಪತಿಯವರ ಭೇಟಿ ಮಾಡಿಸಿದೆ . ಮಾತುಕತೆ ನೆಡೆಯಿತು, ಹಾವನೂರರು ಬರಲು ಒಪ್ಪಿಕೊಂಡರು.
ಹೀಗೆ 1982 ರಲ್ಲಿ ಡಾ ಶ್ರೀನಿವಾಸ ಹಾವನೂರರು ಮಂಗಳೂರು ವಿಶ್ವವಿದ್ಯಾಯಲದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡರು. ಆ ಸಂದರ್ಭದಲ್ಲಿ ಕೆಲವು ಅಪಸ್ವರದ ಮಾತುಗಳು ಕೇಳಿ ಬಂದವು . ನಾನು ಅವರನ್ನು ಉದ್ದೇಶಪೂರ್ವಕವಾಗಿ ಕರೆದುಕೊಂಡು ಬಂದಿದ್ದೇನೆ ಎಂದೂ ಹಾವನೂರ ಅವರಿಗೆ ಕನ್ನಡದ ಪ್ರಾಧ್ಯಾಪಕರಾಗುವ ಅರ್ಹತೆ ಇಲ್ಲ ಎಂದು ಅವರಿಗೆ ಬೋಧನಾನುಭವ ಇಲ್ಲ ಎಂದೂ ಇತ್ಯಾದಿ ಇತ್ಯಾದಿ. ಹಾವನೂರರು ಇವು ಯಾವುದನ್ನು ಲೆಕ್ಕಿಸದೆ 1982-84 ರವರೆಗೆ ಎರಡು ವರ್ಷಗಳ ಕಾಲ ಕನ್ನಡ ವಿಭಾಗವನ್ನು ಕಟ್ಟಿದರು ಮತ್ತು ಮುನ್ನಡೆಸಿದರು. ಅವರ ಮುಖ್ಯ ಆಸಕ್ತಿಗಳಲ್ಲಿ ಒಂದು ಆಕರ ಸಾಮಗ್ರಿಗಳ ಸಂಗ್ರಹ . ಇದಕ್ಕಾಗಿ ದಕ್ಷಿಣ ಕನ್ನಡ ಜೆಲ್ಲೆಯ ಮೂಲೆಮೂಲೆಗಳಿಂದ ಹಸ್ತಪ್ರತಿಗಳು, ಹಳೆ ಪುಸ್ತಕಗಳು, ಹಳೆಯ ಪ್ರತಿಗಳು , ಕಡತಗಳು, ವಾರ್ಷಿಕ ಮತ್ತು ಕಾಲಿಕ ಸಂಚಿಕೆಗಳು, ಸಂಪುಟಗಳು ಹೀಗೆ ಅಪೂರ್ವ ಪಳೆಯುಳಿಕೆಗಳ ಸಾಮಗ್ರಿಗಳ ಭಂಡಾರವೇ ಕನ್ನಡ ವಿಭಾಗಕ್ಕೆ ಹರಿದು ಬಂತು. ವಿಭಾಗದಲ್ಲಿ ಕನ್ನಡ ವಾಜ್ಞಯ ಮಾಹಿತಿ ಕೇಂದ್ರವೊಂದನ್ನು ಆರಂಭಿಸಿದರು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಸಾಹಿತ್ಯ ಸಂಸ್ಕೃತಿಗಳ ಸಾಮಗ್ರಿಗಳನ್ನು ಮೂಲೆ ಮೂಲೆಗಳಿಂದ ಹೊತ್ತು ತಂದರು. ಹಾವನೂರರು ತಂದು ರಾಶಿ ಹಾಕಿದ ಸ್ವದೇಶಾಭಿಮಾನಿ, ನವಯುಗ, ರಾಷ್ಟ್ರಮತ , ರಾಷ್ಟ್ರಬಂಧು, ಕಂಠೀರವ ಇಂತಹ ಅನೇಕ ಹಳೆಯ ಪತ್ರಿಕೆಗಳ ಅಮೂಲ್ಯ ಸಾಮಗ್ರಿ ಮುಂದೆ ಅನೇಕ ಸಂಶೋಧಕರ ಸಂಶೋಧೆನೆಗಳಿಗೆ, ಗ್ರಂಥ ಪ್ರಕಟಣೆಗಳಿಗೆ ನೆರವಾಯಿತು. ವೆಂಕಟರಾಯ ಪುಣಿಂಚತ್ತಾಯರ ಸಂಗ್ರಹದ ತುಳು ಭಾಗವತೋ ಎಂಬ ತುಳು ಹಸ್ತ ಪ್ರತಿಯನ್ನು ಗುರುತಿಸಿ , ಅದರ ಪ್ರಕಟಣೆಗಾಗಿ ಕೇಂದ್ರ ಸರ್ಕಾರದ ಹಸ್ತ ಪ್ರತಿ ಸಂಪನ್ಮೂಲ ಇಲಾಖೆಯಿಂದ ಧನ ಸಹಾಯ ಪಡೆದು, ಪ್ರಕಟಣೆಯ ಕಾರ್ಯವನ್ನು ಆರಂಭಿಸಿದರು. ತಮ್ಮಲ್ಲಿದ್ದ ಕಡಲಾಚೆಯ ಕನ್ನಡ ಸಂಪತ್ತು ಭಂಡಾರದ ಪ್ರತಿಗಳನ್ನು ಮಾಡಿಸಿ ಕನ್ನಡ ವಿಭಾಗವನ್ನು ಶ್ರೀಮಂತಗೊಳಿಸಿದರು .
ಕನ್ನಡ ಎಂ.ಎ. ಪಾಠಪಟ್ಟಿಯಲ್ಲಿ ಡಾ. ಹಾವನೂರ ಅವರು ಸೇರ್ಪಡೆಗೊಳಿಸಿದ ಕನ್ನಡ –ಸಂಸ್ಕೃತ ಸಂಬಂಧ ಎನ್ನುವ ಪತ್ರಿಕೆ, ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾದವಿವಾದಗಳಿಗೆ ಎಡೆಕೊಟ್ಟಿದ್ದು ವಿಷಾದದ ಸಂಗತಿ. ಹಾವನೂರರು ಸಂಸ್ಕೃತದ ಪರವಾಗಿ, ಕನ್ನಡ ವಿರೋಧಿಯಾಗಿ ಈ ಪತ್ರಿಕೆಯನ್ನು ಸೇರಿಸಿದ್ದಾರೆ ಎನ್ನುವ ತಪ್ಪು ಕಲ್ಪನೆ ಮತ್ತು ಆ ಕುರಿತು ನಡೆದ ಪತ್ರಿಕೆಗಳಲ್ಲಿನ ವಾದ-ವಿವಾದ ಹಾವನೂರ ಅವರ ಮನಸ್ಸಿಗೆ ನೋವುಂಟು ಮಾಡಿತು. ಆದರೆ ಅವೆಲ್ಲವನ್ನು ನುಂಗಿಕೊಂಡು ಸ್ಥಿತಪ್ರಜ್ಞರಂತೆ ಕನ್ನಡ ಕೆಲಸವನ್ನು ಮಾಡಿದರು. ವಿಭಾಗದಲ್ಲಿರುವಾಗಲೇ ನಾ ದಾಮೋದರಶೆಟ್ಟಿ ಮತ್ತು ತಾಳ್ತಜೆ ವಸಂತ ಕುಮಾರ ಅವರಿಗೆ ಪಿ ಎಚ್ ಡಿಗೆ ಮಾರ್ಗದರ್ಶನವಿತ್ತು, ಎರಡು ಒಳ್ಳೆಯ ಪಿ ಎಚ್ ಡಿ ಪ್ರಬಂಧಗಳ ನಿರ್ಮಾಣಕ್ಕೆ ಕಾರಣಕರ್ತರಾದರು.
01 ಏಪ್ರಿಲ್ 2010 6 ಟಿಪ್ಪಣಿಗಳು
in 1, ಬಿ ಎ ವಿವೇಕ ರೈ
ಇಂದು ಎಪ್ರಿಲ್ ೧. ಮೂರ್ಖರ ದಿನ. ಏನಂದ್ರಿ..? ಮೂರ್ಖರ ದಿನ ಅಂತಾನಾ..? ಹಾಗಾದ್ರೆ ಪ್ರೊ. ಬಿ ಎ ವಿವೇಕ ರೈ ಅವರು ತುಳುವಿನಿಂದ ಅನುವಾದಿಸಿರುವ ಈ ಕಥೆ ಓದಿ. ಮೂರ್ಖರು ಯಾರು ಜಾಣರು ಯಾರು ಅಂತ ಗೊತ್ತಾಗುತ್ತೆ. ಹ್ಯಾಪಿ ನಿಮ್ಮ ದಿನ..
ಒಂದು ಊರಿನಲ್ಲಿ ‘ಇಟ್ಟು’ ಎನ್ನುವವನು ಒಬ್ಬನು ಇದ್ದನು.ಅನಾಥನಾದ ಅವನು ಜೀವನ ಸಾಗಿಸಲು ‘ ಸದ್ದು ‘ ಎಂಬ ಸಾಹುಕಾರನಲ್ಲಿ ಒಂದು ಸಾವಿರ ರೂಪಾಯಿ ಸಾಲ ತೆಗೆದುಕೊಂಡನು. ಆದರೆ ಅವನಿಗೆ ಸಾಲ ತೀರಿಸಲು ಸಾಧ್ಯ ಆಗಲಿಲ್ಲ. ಕೊನೆಗೆ ‘ಸದ್ದು ‘ ಸಾಹುಕಾರನ ಕಟ್ಟಪ್ಪಣೆಯಂತೆ ‘ಇಟ್ಟು’ ಆ ಊರನ್ನೇ ಬಿಟ್ಟು ಹೊರಟನು.
ಹಾಗೆ ಊರು ಬಿಟ್ಟು ಹೊರಟ. ‘ಇಟ್ಟು ‘ ಹಗಲಿಡೀ ನಡೆದು , ರಾತ್ರಿ ಒಂದು ಮನೆಗೆ ಹೋದನು. ಆ ಮನೆಯಲ್ಲಿ ಒಬ್ಬಳು ಅಜ್ಜಿ ಮತ್ತು ಅವಳ ಮೊಮ್ಮಗಳು ಇದ್ದರು. ಇಟ್ಟುವು ಅವರಲ್ಲಿ ” ನಾನು ದೂರದ ಊರಿಗೆ ಹೋಗುವವನು. ಇವತ್ತು ಇಲ್ಲೇ ತಂಗಿ , ನಾಳೆ ಬೆಳಗ್ಗೆ ನನ್ನ ಊರಿಗೆ ಹೋಗುತ್ತೇನೆ ” ಎಂದನು. ಇವನ ಮಾತನ್ನು ನಂಬಿದ ಅಜ್ಜಿಯು , ರಾತ್ರಿ ಅಲ್ಲಿಯೇ ತಂಗಲು ಹೇಳಿ , ಅವನಿಗೆ ಬೇಕಾದ ವ್ಯವಸ್ಥೆ ಮಾಡಿದಳು. ಊರು ಬಿಟ್ಟ ಚಿಂತೆಯಲ್ಲಿ ಇಟ್ಟುವಿಗೆ ರಾತ್ರಿ ನಿದ್ರೆಯೇ ಬರಲಿಲ್ಲ .ಮುಂಜಾವಿನ ವೇಳೆ ಅಜ್ಜಿಯು ಮೊಮ್ಮಗಳಲ್ಲಿ ‘ ಅಪ್ಪ’ ತಿಂಡಿ (ಅಕ್ಕಿಯನ್ನು ರುಬ್ಬಿ ,ಕಾವಲಿಯ ಕುಳಿಗಳಲ್ಲಿ ಹೊಯ್ದು ,ಬೇಯಿಸಿ ಮಾಡುವ ತಿಂಡಿ )ಮಾಡಲು ಹೇಳಿ , ತಾನು ಮಲಗಿದಳು. ನಿದ್ರೆ ಬಾರದ ಇಟ್ಟುವೂ ಎದ್ದು , ಅಡಿಗೆ ಮನೆಗೆ ಹೋದನು. ಅಜ್ಜಿಯ ಮೊಮ್ಮಗಳೊಂದಿಗೆ ಊರಿನ ಸಮಾಚಾರ ಮಾತಾಡುತ್ತಿರುವಾಗ ,ಮೊಮ್ಮಗಳು ಇವನ ಹೆಸರೇನೆಂದು ಕೇಳಿದಳು.
ಇಟ್ಟುವು ತನ್ನ ಹೆಸರು ‘ ಸುಮ್ಮನೆ ‘ ಎಂದು ಹೇಳಿದನು. ಮೊಮ್ಮಗಳು ‘ ಅಪ್ಪ’ ಬೇಯಿಸಿ ಸಿದ್ಧಮಾಡಿ ಇಟ್ಟಾಗ , ಇಟ್ಟುವು ‘ ಅಪ್ಪ’ ದ ಬುಟ್ಟಿಯನ್ನೇ ಎತ್ತಿಕೊಂಡು ಓಡಿದನು. ಗಾಬರಿಗೊಂಡ ಮೊಮ್ಮಗಳು ಅಜ್ಜಿಯನ್ನು ಕೂಗಿ , ‘ ಅಪ್ಪ’ ವನ್ನೆಲ್ಲಾ ಕೊಂಡುಹೋದ ” ಎಂದಳು. ಅಜ್ಜಿಯು ” ಯಾರು ಕೊಂಡುಹೋದದ್ದು ?’ ಎಂದು ಕೇಳಿದಾಗ , ಮೊಮ್ಮಗಳು ” ‘ಸುಮ್ಮನೆ’ ” ಎಂದಳು. ‘ ಈ ಮೊಮ್ಮಗಳು ತಮಾಷೆಗೆ ಹೇಳುವುದು’ ಎಂದು ಭಾವಿಸಿ ಅಜ್ಜಿಯು ಮೊಮ್ಮಗಳನ್ನು ಗದರಿಸಿ ಮಲಗಿಸಿದಳು. ಮೊಮ್ಮಗಳಿಗೆ ನಿಜ ಸಂಗತಿಯನ್ನು ಅಜ್ಜಿಗೆ ಮನವರಿಕೆ ಮಾಡಿಕೊಡಲು ಸಾಕು ಸಾಕಾಯಿತು. ಕೊನೆಗೂ ಅಜ್ಜಿಗೆ ವಿಷಯ ಅರ್ಥ ಆದಾಗ , ಕಾಲ ಕೈ ಮೀರಿತ್ತು. ಅಜ್ಜಿಯು ತಲೆಯ ಮೇಲೆ ಕೈ ಇಟ್ಟು ಸುಮ್ಮನಿರಬೇಕಾಯಿತು.
26 ಮಾರ್ಚ್ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1, ಬಿ ಎ ವಿವೇಕ ರೈ
ಇಂದು ಮಂಗಳೂರಿನಲ್ಲಿ ಎಸ್ ವಿ ಪಿ ಪ್ರಶಸ್ತಿಯನ್ನು ಕನ್ನಡದ ಪ್ರಸಿದ್ಧ ವಿಮರ್ಶಕರಾದ ಟಿಪಿ ಅಶೋಕ ಅವರಿಗೆ ಪ್ರದಾನ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಎಸ್ ವಿ ಪಿ ಯವರ ಪ್ರೀತಿಯ ಶಿಷ್ಯನಾಗಿ ನನ್ನ ಆತ್ಮೀಯ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
೧೯೬೮ರ ಜುಲೈ :ಹನಿ ಕಡಿಯದೇ ಸುರಿಯುತ್ತಿದ್ದ ಧಾರಾಕಾರ ಮಳೆಗೆ, ಬಂಟ್ವಾಳದ ನೆರೆಗೆ ಅಂಜದೆ , ಮೈಸೂರಿನಿಂದ ಘಟ್ಟ ಇಳಿದು ಬಂದ ಎಸ. ವಿ. ಪರಮೇಶ್ವರ ಭಟ್ಟರು ಕೇವಲ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿ ೧೯೭೪ ಮಾರ್ಚ್ ನಲ್ಲಿ ನಿವ್ರುತ್ತರಾಗಲಿಲ್ಲ. ಸುಮಾರು ಆರು ವರ್ಷಗಳ ಕಾಲ ಅವರು ಮಂಗಳೂರನ್ನು ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ದಿಗ್ವಿಜಯ ಸಾಧಿಸಿದರು. ಅಲ್ಲಿ ಯುದ್ಧವಿಲ್ಲ , ಸಾವು ನೋವುಗಳಿಲ್ಲ .ಅದೊಂದು ಬುದ್ಧನ ಶಾಂತಿ ಯಾತ್ರೆಯಂತೆ. ಅಲ್ಲಿನ ಮಂತ್ರ ಕನ್ನಡ , ಮಾತು ಸಾಹಿತ್ಯ , ಬದುಕು ಸಂಸ್ಕೃತಿ.
ಪೂರ್ಣ ಓದಿಗೆ ಭೇಟಿ ಕೊಡಿ: ಬಿ ಎ ವಿವೇಕ ರೈ
26 ಮಾರ್ಚ್ 2010 7 ಟಿಪ್ಪಣಿಗಳು
in 1, ಬಿ ಎ ವಿವೇಕ ರೈ
ಹಂಪಿ ಕನ್ನಡ ವಿ ವಿ , ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದ ಕುಲಪತಿಗಲಾಗಿದ್ದ, ಪ್ರಸ್ತುತ ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಬಿ ಎ ವಿವೇಕ ರೈ ಅವರಿಗೆ ಈ ಸಾಲಿನ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಶ್ರವಣಬೆಳಗೊಳದ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಈ ಪ್ರಶಸ್ತಿಯನ್ನು ನೀಡುತ್ತದೆ. ಸಾಹಿತ್ಯ, ಸಾಂಸ್ಕೃತಿಕ, ಸಮಾಜ ಸೇವೆ, ಮಾಧ್ಯಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಒಂಬತ್ತು ಗಣ್ಯರನ್ನು ಈ ಬಾರಿ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ 21 ಸಾವಿರ ರೂ. ನಗದು, ಪದಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಮಾರ್ಚ್ 28ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು
ಇತ್ತೀಚಿನ ಟಿಪ್ಪಣಿಗಳು