ಹೋಗಿ, ಮತ್ತೆ ಬರಬೇಡಿ…

-ಎಸ್  ಸಿ ದಿನೇಶ್ ಕುಮಾರ್

ದೇಸಿಮಾತು


ಹಾಗೆ ದಡಬಡ ಅಂತ
ಬಾಗಿಲು ಬಡೀಬ್ಯಾಡಿ
ನಾನು ತೆರೆಯುವುದಿಲ್ಲ

 

ನಿಮ್ಮ ಹೆಜ್ಜೆ ಸಪ್ಪಳವನ್ನು ಗುರುತಿಸಬಲ್ಲೆ
ಸುಡುಸುಡು ನಿಟ್ಟುಸಿರು ಕೂಡ ತಾಕುತ್ತಿದೆ
ಕೂಗಿದ್ದೂ ಕೇಳಿಸಿದೆ, ಆದರೂ ಕದ ತೆಗೆಯಲೊಲ್ಲೆ

ನೀವು ಹೀಗೆ ಬರುತ್ತೀರೆಂದೇ
ಕುಯ್ಯೋ ಅನ್ನುವ ಬಾಗಿಲನ್ನು ಜೋರಾಗಿ ಬಡಿದು
ಚಿಲಕ ಹಾಕಿ, ಬೀಗ ಜಡಿದು ಕುಳಿತಿದ್ದೇನೆ

ಇಗೋ ಇವಳು ಈಗಷ್ಟೆ ಬಂದು
ನನ್ನ ಎದೆಗೊರಗಿ ನಿದ್ದೆ ಹೋಗಿದ್ದಾಳೆ
ಹಗಲಿಡೀ ದಣಿದಿದ್ದಾಳೆ, ಏಳಿಸಕೂಡದು

ನಾನು ಮಲಗಿದ ಜಾಗದಲ್ಲೇ ಗೋರಿಗಳಿವೆ
ನನ್ನವೇ ತರೇವಾರಿ ಗೋರಿಗಳು
ನಾನೇ ಕೈಯಾರೆ ನೆಲಬಗೆದು ಮಣ್ಣು ಮಾಡಿದ್ದೇನೆ

ಈ ಗೋರಿಗಳೋ, ಒಮ್ಮೊಮ್ಮೆ ಜೀವ ತಳೆದು
ಆಕಳಿಸಿ, ಮೈಮುರಿದೆದ್ದು ಊಳಿಡುತ್ತವೆ;
ಶತಮಾನಗಳ ಮಹಾಮೌನವನ್ನು ಮುರಿಯುತ್ತವೆ

ಇವಳಿಗೆ ಇದೇನೂ ಗೊತ್ತಿಲ್ಲ
ಪ್ರತಿರಾತ್ರಿ ಜೋಗುಳ ಹಾಡಿ
ತೋಳೊಳಗೆ ಮಲಗಿಸುತ್ತೇನೆ

ನನ್ನದಿನ್ನೂ ಬಿಸಿಬಿಸಿ ರಕ್ತ
ನೆತ್ತರ ಕಾವಿಗೆ ಅವಳು
ಬೆಚ್ಚಗೆ ಮಲಗುತ್ತಾಳೆ

ಬೇಡ, ಅವಳ ನಿದ್ದೆಗೆ ಭಂಗ ತಾರದಿರಿ
ಶಬ್ದವೆಂದರೆ ಅಲರ್ಜಿ ಅವಳಿಗೆ
ಅಪಶಕುನಗಳಿಗೆ ಬೆಚ್ಚುತ್ತಾಳೆ, ಹೊರಟು ಹೋಗಿ

ಮತ್ತೆ ವಾಪಾಸು ಬರಲೂಬೇಡಿ
ಬಂದು ಹೀಗೆಲ್ಲ ಬಾಗಿಲು ಬಡಿದು ಕಾಡಬೇಡಿ
ಸತ್ತವರನ್ನು ಹೀಗೆಲ್ಲ ಏಳಿಸುವುದು ಸಲ್ಲ

Posted by ದಿನೇಶ್ ಕುಮಾರ್ ಎಸ್.

ರಾಮಯ್ಯ ಮತ್ತು ಕಾವ್ಯ

ಹಸಿದ ಕಂದನ ಒಡಲ ತುಡಿತ

ಹುಲಿಕುಂಟೆ ಮೂರ್ತಿ
ರಾಮಯ್ಯನವರು ಬಂದರು.. ತಮ್ಮ ಪದ್ಯಗಳನ್ನು ಓದಿದರು. ಕಳೆದ ಮೂವತ್ತು ಮೂವತ್ತೈದು ವರ್ಷಗಳಿಂದ ತಮ್ಮೆದೆಯಲ್ಲಿ ಕಾಪಿಟ್ಟುಕೊಂಡಿದ್ದ ಕಾವ್ಯದ ಜಲಧಾರೆ ಹರಿಸಿದರು. ಅವರ ಕಾವ್ಯ ದಲಿತ ಸಂಘರ್ಷ ಸಮಿತಿಯ ಹುಟ್ಟು, ಬೆಳವಣಿಗೆ, ಮೂರ್ನಾಲ್ಕು ದಶಕಗಳ ಕನ್ನಡ ಜನತೆಯ ಪ್ರತಿಸ್ಪಂಧನ, ಸಮಕಾಲೀನ ತಲ್ಲಣಗಳು, ಅದರೆದುರಿಗೆ ನಾವು ಕಂಡುಕೊಳ್ಳಬೇಕಾದ ಜಾಡು.. ಹೀಗೆ.. ಸಿಟ್ಟಾಗಿ, ಬೆಂಕಿಯಾಗಿ, ನೀರಾಗಿ, ಹಸಿದ ಕಂದನ ಒಡಲ ತುಡಿತವಾಗಿ.. ಕಂದನಿಂದ ದೂರವಾದ ತಾಯಿಯ ಎದೆಜಿನುಗಾಗಿ.. ಅವರ ಕಾವ್ಯ ರೂಪು ಪಡೆಯುತ್ತಿದ್ದರೆ, ಇದಕ್ಕೆ ಸಾಕ್ಷಿಯಾಗಿದ್ದ ಅರವತ್ತೈದು-ಎಪ್ಪತ್ತು ಎದೆಗಳಲ್ಲಿ.. ತಾವು ಉಂಡ ಅನ್ನದ ಹಿಂದಿನ ಬೆವರಿನ, ಆ ಬೆವರ ನೆತ್ತರ- ಅತ್ತರಿನ ಲೆಕ್ಕಾಚಾರ..

‘ಎಲ್ಲಿದ್ದಾರೆ ಬೇಂದ್ರೆ..?’ ಎಂಬ ಪದ್ಯದಿಂದ ಆರಂಭವಾದ ಈ ಕಾವ್ಯಧಾರೆ, ಕೂಡಲ ಸಂಗಮ, ಸಮಕಾಲೀನ ಅಕ್ಷರ ರಾಜಕಾರಣ, ಅನ್ನದ ರಾಜಕಾರಣ, ಯೂನಿವರ್ಸಿಟಿ, ಅಕ್ಯಾಡೆಮಿಕ್ ಅತಂತ್ರತೆ, ದಲಿತ ಸಂಸ್ಕೃತಿಯ ವಿಸ್ಮೃತಿಯ ನೆಲೆ, ಆಂದ್ರದ ನಕ್ಸಲೀಯ ಚಳವಳಿಯ ಮುಗ್ಗುರಿಕೆ, ಉತ್ತರ ಕರ್ನಾಟಕದ ದಲಿತ ಹೆಣ್ಣುಮಕ್ಕಳ ಬಾಳ ಬೆಳೆಕಿನ ಕಗ್ಗೊಲೆ.. ಎಲ್ಲವೂ, ಎಲ್ಲವು… ಪದ್ಯದ ವಸ್ತುಗಳೇ.. ಪದ್ಯ ಕೇಳಿ ಗಂಟಲು ಒಣಗಿದ್ದ ಕಾವ್ಯಾಸಕ್ತರಿಗೆ ಈಗ ಸಮಕಾಲೀನ ಭೀಕರ ತಲ್ಲಣಗಳನ್ನು ಎದುರಿಸಲು ಯಾರು ಏನು ಮಾಡುತ್ತಿದ್ದೀರಿ..? ಎಂಬ ಚಾಟಿ ಬೀಸು… More

ಹೊಸ ಪದ್ಯಗಳೊಂದಿಗೆ ಕೆ ರಾಮಯ್ಯ

ಕರ್ನಾಟಕದ ದಲಿತಲೋಕದ ಮೂರ್ನಾಲ್ಕು ದಶಕಗಳ ತಲ್ಲಣಗಳನ್ನು ಅಂಗೈಯಲ್ಲಿಟ್ಟುಕೊಂಡು ಪರಿತಪಿಸಿದವರು ಕೋಟಿಗಾನಹಳ್ಳಿ ರಾಮಯ್ಯ. ಈಚಿನ ನಾಲ್ಕು ವರ್ಷಗಳಿಂದ ಕೋಲಾರದ ಅಂತರಗಂಗೆ ಬೆಟ್ಟಕ್ಕೆ ತಮ್ಮ ‘ಆದಿಮ’ದ ಮೂಲಕ ಹೊಸ ಉಸಿರು ತುಂಬಲು ಹವಣಿಸುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಯ ಕಲಾತಂಡಗಳು ಹಾಡುವ ಹಾಡುಗಳಿಗೆ ಬೆಳಕಿನ ಬಣ್ಣ ಬಳಿದ ರಾಮಯ್ಯ, ತಮ್ಮ ಅಕ್ಷರಗಳಲ್ಲಿ ಆರ್ದ್ರ ಭಾವನೆಗಳನ್ನು ಬಿಚ್ಚಿಟ್ಟವರು. ಆದಿಮದ ಕೆಲಸಗಳಲ್ಲಿ ಬರೆಯುವುದನ್ನು ಬಿಟ್ಟಿದ್ದ ಅವರು, ಕಳೆದ ಒಂದೆರಡು ತಿಂಗಳಿನಿಂದ ಹೊಸ ಪದ್ಯ ಬರೆಯುತ್ತಿದ್ದಾರೆಂದು ಗುರುಗಳಾದ ಡಾಮ್ನಿಕ್ ಹೇಳಿದಾಗ ‘ಬಯಲು ಗೆಳೆಯರೆಲ್ಲ’ ಖುಷಿ ಪಟ್ಟೆವು..

ನಮ್ಮ ಎರಡನೇ ಶನಿವಾರದ ‘ಬಯಲು’ ಸಭೆಗೆ ರಾಮಯ್ಯ ಬರಲು ಒಪ್ಪಿದ್ದಾರೆ.. ತಮ್ಮ ಹೊಸ ಪದ್ಯಗಳೊಂದಿಗೆ.. ನೀವೂ ಬನ್ನಿ..

ನಮ್ಮೊಂದಿಗೆ ಗುರುಗಳಾದ ಕೆ.ವೈ.ನಾರಾಯಣಸ್ವಾಮಿ, ಡಾಮ್ನಿಕ್, ಮಂಜುನಾಥ ಅದ್ದೆ.. ಇರುತ್ತಾರೆ.

08.01.2011 ಶನಿವಾರ ಮಧ್ಯಾನ್ಹ 4 ಗಂಟೆಗೆ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ..

-ಹುಲಿಕುಂಟೆ ಮೂರ್ತಿ

 

ಈ ನೀಲು..

ಅಶೋಕ್ ಶೆಟ್ಟರ್

ಶಾಲ್ಮಲಾ

ಈ ನೀಲು,
ಕಾವ್ಯಕ್ಷೇತ್ರದ ಈ ಬ್ಲ್ಯೂ,
ಫಿಲ್ಮೀ ಹುಡುಗಿಯರಿಗೆ ಮಿಗಿಲಾದ ನಿಗೂಢೆ
ಹಲವರ ಕಾಡುವ ಕನ್ಯಾಮಣಿ
ಆಹಾ ಏನಾಕೆಯ ಕಾವ್ಯಸರಣಿ!

ಬೇರಾರೂ ಕಾಣದ್ದನ್ನು ಕಾಣುತ್ತಾಳೆ
ಕಂಡದ್ದು ಕಂಡ ಹಾಗೆ ಹೇಳುತ್ತಾಳೆ
ಎಲ್ಲೆಡೆಯಿಂದ ಬರುವ ಸುದ್ದಿ ಶಬ್ದ ಲಯ ಆಟ ಹೂಟಗಳಿಗೆ
ಕಿವಿ ತೆರೆದು ಕೂತಿರುತ್ತಾಳೆ
ಮೂಡ್ ಬಂದರೆ ಒಮ್ಮೊಮ್ಮೆ
ಪ್ರೇಮ,ಕಾಮ,ಕಾವ್ಯದ ಅ ಆ ಇ ಈ ಹೇಳತೊಡಗುತ್ತಾಳೆ.

ಗಂಡನ ಸೋಮಾರಿತನದ ಬಗ್ಗೆ ಗೊಣಗದ
ಮಕ್ಕಳ ಸ್ಕೂಲು, ಫೀಸು, ಪ್ರೊಗ್ರೇಸ್ ರಿಪೋರ್ಟ್ ಇತ್ಯಾದಿ ಕೊರೆಯದ
ಏರುತ್ತಿರುವ ಬೆಲೆ, ಗ್ಯಾಸ್ ಸಿಲಿಂಡರ್ ವಿಳಂಬ
ಕಾಂಪೌಂಡಿನೊಳಗೆ ಹಂದಿ ನುಗ್ಗುವದೇ ಮೊದಲಾದ
ಲೌಕಿಕದ ಮಾತಾಡದ
ಈ ಪಾರಮಾರ್ಥೆ ಬರೆಯದಿದ್ದರೆ
ಕೊರಡು ಕೊನರದಿರುವದೇ ಬರಡು ಚಿಗುರದಿರುವದೇ
ಕ್ರಾಂತಿ ಘಟಿಸದಿರುವದೇ.. ಅರಿಯೆ

ಆದರೆ
ಹುಲ್ಲುಗರಿಕೆ ಹೂವು ಗಿಡ ಮರ ಬಳ್ಳಿಗಳ ಔನ್ನತ್ಯಕ್ಕೇರಿಸುವ
ದಿನನಿತ್ಯದ ನೋಟಗಳಿಗಸಂಖ್ಯ ಅರ್ಥ ಹೊಮ್ಮಿಸುವ
ಗರತಿಯರಿಗೆ ಕಚಗುಳಿ ಇಡುವ
ಹುಡುಗಿಯ ತುಂಟತನ ತತ್ವಜ್ನಾನಿಯ ಗಾಂಭೀರ್ಯ ಮೆರೆವ
ಮಾನವಸ್ವಭಾವದ ಆಳಕ್ಕೆ ಇಳಿವ ಈ ರಮಣಿ ಬರೆದರೆ
ಕಪ್ಪುಮಸಿಯ ಬಾಟಲ್ ನಲ್ಲಿ ಕಟ್ಟಿರುವೆಯ ಅದ್ದಿ
ಬಿಳಿಯ ಹಾಳೆಯ ಮೇಲೆ ಓಡಿಸಿದಂತಿರುತ್ತದೆ.

ಪಾಳೆಗಾರಿಕೆ ಯಜಮಾನಿಕೆಗಳ ದಿಟ್ಟತನದ ಬಗ್ಗೆ
ಈ ಕೋಮಲೆ ಇತ್ತೀಚೆಗೆ ಮಾತಾಡತೊಡಗಿದ ಧಿಮಾಕಿಗೆ
ಅಸುಖ ಪಟ್ಟವರ ಮಾತು ಬಿಡಿ
ಅಕ್ಷರವಿಟ್ಟಳುಪದೊಂದಗ್ಗಳಿಕೆಯೇನೂ ಇಲ್ಲದ ಈಕೆ
ಅಕ್ಷರಗಳ ಹೊಡೆದುಹಾಕುವ ಚಂದಕ್ಕೇ ಮಾರು ಹೋಗಿದ್ದಾನೆ ಇಲ್ಲೊಬ್ಬ
ಹೀಗೆ ಕಚಗುಳಿ ಇಟ್ಟಂತೆ ಕವಿತೆ ಬರೆಯುವ ಈಕೆ ಪ್ರತಿಕ್ರಾಂತಿಕಾರಿಣಿಯಾದರೂ ಸರಿಯೇ
ನಾನವಳ ವರಿಸುವೆ ಎನ್ನುತ್ತಾನೆ ಇನ್ನೊಬ್ಬ

ಇನ್ನುಳಿದಂತೆ ಇವಳನ್ನು ಹಲವಾರು ಡ್ರೆಸ್ ಗಳಲ್ಲಿ ಕಲ್ಪಿಸಿಕೊಂಡಿರುವ
ಕನ್ನಡದ ತರುಣ ಕವಿಗಣ ಈಗ ಇವಳ ಅಡ್ರೆಸ್ ಅಷ್ಟು ಸಿಕ್ಕರೆ ಸಾಕು
ಇವಳಾರಾಕೆ ಇವಳಾರಾಕೆ ಇವಳಾರಾಕೆ ಎಂದೆಣಿಸದೇ
ಈಕೆ ನಮ್ಮಾಕೆ ಈಕೆ ನಮ್ಮಾಕೆ ಈಕೆ ನಮ್ಮಾಕೆ ಎಂದೆಣಿಸಿ
ಪ್ರೇಮಪತ್ರಗಳ ಮಹಾಪೂರವನ್ನೇ ಹರಿಸಿ
“ಚಲ್ ಮೇರೆ ನೀಲೂ” ಎಂದು ಹೆಗಲ ಮೇಲೆ ಕೈಹಾಕಿ ಹೊರಡಲು ಸಿದ್ಧವಿದೆ

“ಈ ಹೆಣ್ಣುಗಳೇ ಹೀಗೆ”, “ನಾವು ಹುಡುಗಿಯರೇ ಹೀಗೆ”, “ಅತ್ತು ಬಿಡೇ ಗೆಳತಿ”
ಎಂದು ಸೊರಸೊರಗುಟ್ಟುವ ಕವಯಿತ್ರಿಸ್ತೋಮದ ನಡುವೆ
ನೀಲುನಂಥ ಹತ್ತಾರು ಪಗದ್ಯ ಅಥವ ಗಪದ್ಯ ಪ್ರತಿಭೆಗಳೇನಾದರೂ ಪುಟಿದೆದ್ದರೆ
ನಾನು ಗಂಡಸರ ಕಾವ್ಯ ಓದುವದನ್ನೂ ಬಿಡಬೇಕೆಂದಿದ್ದೇನೆ…. ….!!

ಜೋಗಿ ಹೊಸ ಕವಿತೆ : ಈ ರಾತ್ರಿ ಮಳೆಯಾಗುತ್ತದೆ..

ನಾನು

ಈ ರಾತ್ರಿ ಮಳೆಯಾಗುತ್ತದೆ

ಎಂದು ಕಾಯುತ್ತಿದ್ದೇನೆ.

ಬೆಳಗ್ಗೆ ಭಯಂಕರ ಸೆಕೆ, ಮಗಳು

ಅದ್ಯಾರ ಜೊತೆಗೋ ಓಡಾಡುತ್ತಿದ್ದಾಳೆ

ಎಂಬ ಅನುಮಾನ, ಅಮ್ಮನಿಗೂ

ಅಪ್ಪನಿಗೂ ಇಳಿವಯಸ್ಸಿನ ಜಗಳ,

ಹಂಡೆಯಲ್ಲಿ ಕೊಳೆತ ಮೀನು

ಮೈತುಂಬ ಮತ್ಯ್ಸಗಂಧ.

ಈ ರಾತ್ರಿ ಮಳೆಯಾಗುತ್ತದೆ

ಎಂಬ ನಿರೀಕ್ಷೆ.

ಊರು ತುಂಬ ಗಲಾಟೆ, ಅದ್ಯಾರಿಗೂ

ನನ್ನ ಮೇಲೆ ಸಿಟ್ಟು, ಮತ್ಯಾರಿಗೋ ಹೊಟ್ಟೆಕಿಚ್ಚು.

ಮಾತಾಡಿದರೆ ತಕರಾರು, ಸುಮ್ಮನಿದ್ದರೆ

ಸಂಕಟ. ಉಸಿರು ಒಳಗೆಳೆದುಕೊಂಡರೆ

ಸೀಸ, ಕಾರ್ಬನ್ನು. ನನಗಾಗಿಯೇ ಕಾಯುತ್ತಿರುವ

ಸಂಚಾರಿ ಪೊಲೀಸು.

ಇವತ್ತು ರಾತ್ರಿ ಮಳೆಯಾಗುತ್ತದೆ

ಎಂದು ಹವಾಮಾನ ವರದಿ.

ವಿಪರೀತ ರಕ್ತದೊತ್ತಡ, ಔಷಧಿ ಅಂಗಡಿಗೆ

ರಜಾ. ಪತ್ರಿಕೆಯಲ್ಲಿ ಪಂಚರಂಗಿ ಗೆದ್ದ ಸುದ್ದಿ

ಭಾರತೀಯ ಕ್ರಿಕೆಟ್ ಟೀಮಿಗೆ ಹೀನಾಯ ಸೋಲು

ಕಿರುಚುವ ಅವಳು, ಪರಚುವ ಅವನು,

ಕ್ಷಣಕ್ಷಣಕ್ಕೂ ಬಡಕೊಳ್ಳುವ ಮೊಬೈಲು.

ನಾನೇ ತುಳಿದುಕೊಂಡ ನನ್ನದೇ ಕಾಲು.

ಈ ರಾತ್ರಿ ಮಳೆಯಾಗುತ್ತದೆ ಎಂದು ಕುರುಡುಗಣ್ಣಲ್ಲಿ

ಆಕಾಶ ನೋಡುವ ಅಪ್ಪನ ಭವಿಷ್ಯ

ಹೊಡೆದಾಡುವ ಮಂತ್ರಿಮಂಡಲ

ರಾಜೀನಾಮೆ ನಾಟಕ, ಮುಗಿಯದ ಮೆಟ್ರೋ

ಪ್ರತಿಕೃತಿ ಸುಟ್ರೋ, ಬಿಗ್‌ಬಜಾರಿನಲ್ಲಿ ಒಂದಕ್ಕೆರಡು

ಫ್ರೀ, ಮನೆತುಂಬ ಬೇಡದ ಕುರ್ಚಿ, ಮೇಜು, ಹೂಕುಂಡ.

ಯುಮುನೆಗೆ ಮಹಾಪೂರ, ಪರಸಂಗದ ಸಚಿವನಿಗೆ

ವೀರ್ಯಪರೀಕ್ಷೆಯಲ್ಲಿ ಸೋಲು.

ಆ ರಾತ್ರಿ ಮಳೆಯಾಯಿತು. ನನಗೋ ಗಾಢ ನಿದ್ದೆ.

ಎದ್ದು ಕಿಟಕಿ ಬಳಿ ಕುಳಿತು

ಜಗತ್ತನ್ನೇ ಶಪಿಸುತ್ತಾ….

ಈ ರಾತ್ರಿ ಮಳೆಯಾಗುತ್ತದೆ

ಎಂದು ಕಾಯುತ್ತಿದ್ದೇನೆ


ಆಗಸ್ಟ್ ತಿಂಗಳೇ ಹೀಗೆ..

-ಸುಶ್ರುತ ದೊಡ್ಡೇರಿ

ಮೌನಗಾಳ

ಕಲೆ: ಗುಜ್ಜಾರಪ್ಪ

ಇದ್ದಕ್ಕಿದ್ದಂತೆ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಿಡುವ ಮಳೆ
ಊರಲ್ಲಿ ಯಾರೋ ತೀರಿಕೊಂಡರಂತೆ ಎಂಬ ಸುದ್ದಿ
ಯಾಕೋ ನಿದ್ದೇನೇ ಬರ್ತಿಲ್ಲ ಅಂತ ಹುಡುಗಿಯ ಎಸ್ಸೆಮ್ಮೆಸ್ಸು
ಕರವೀರದ ಹೂವನ್ನು ಸೀಪಿದ ಸಿಹಿಯ ನೆನಪು
ಬಾನಿಯಲ್ಲಿ ನೆನೆಸಿಟ್ಟ ಮೈಲುತುತ್ತ ಕಂಡರೆ
ನಾಳೆ ಕೊಳೆ ಔಷಧಿ ಹೊಡೆಯಲು ಶೀನ ಬರುತ್ತಾನೋ ಇಲ್ಲವೋ ಚಿಂತೆ
ಈ ಆಗಸ್ಟ್ ತಿಂಗಳೇ ಹೀಗೆ

ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳನ್ನು ಜೋಡಿಸಿ ಮಾಡಿದ ಕೊಲಾಜ್
ಅದರಲ್ಲೇ ಅರ್ಥ ಹುಡುಕುವ ಹುಂಬತನ
ಜಾರುವ ಬಚ್ಚಲುಕಲ್ಲಿಗೆ ಬ್ಲೀಚಿಂಗ್ ಪೌಡರ್ ಹೊಯ್ದು ತರೆದು ತರೆದು ಕೈನೋವು
ನಿಂಬೆಹಣ್ಣು ಹಿಂಡುವಾಗ ಬೀಜವೂ ಬಿದ್ದುಹೋಗಿ ಎಲ್ಲಾ ಕಹಿಕಹಿ
ಮಲ್ಲಿಗೆ ಕ್ಯಾಲೆಂಡರಿನಲ್ಲಿ ಸೈಕಲ್ ಪ್ಯೂರ್ ಅಗರಬತ್ತಿಯ ಜಾಹೀರಾತು
ಎಷ್ಟೇ ಪ್ರಯತ್ನಪಟ್ಟರೂ ನಗು ತಾರದ ಗಂಗಾವತಿ ಬೀಚಿಯ ಜೋಕು
ಛೇ, ಈ ಆಗಸ್ಟ್ ತಿಂಗಳೇ ಹೀಗೆ

ಊರ ಗಣಪೆ ಮಟ್ಟಿಯ ಮರೆಯಲ್ಲಿ ನೀಲಿಹೂವೊಂದು ಬಿಟ್ಟಂತೆ ಕನಸು
ಕಲಾಸಿಪಾಳ್ಯದ ಬೀದಿನಾಯಿ ಬೆದೆಗೆ ಬಂದು ಅಂಡರ್‌ಪಾಸ್ ಕೆಳಗೆ ಕಾಮಕೇಳಿ
ಕನ್ನಡ ನಿಘಂಟಿನ ಕೊನೇಪುಟದಲ್ಲಿ ಳಕಾರದ ಆತ್ಮಹತ್ಯೆ
ಮಿಥುನ ರಾಶಿಯನ್ನು ಹಾದುಹೋಗುವಾಗಲೆಲ್ಲ ಇನ್ಸಾಟ್-ಬಿ ಉಪಗ್ರಹಕ್ಕೆ ಏನೋ ಪುಳಕ
ಸೋರುತ್ತಿರುವ ನಲ್ಲಿ ಕೆಳಗಿನ ಬಕೇಟಿನಲ್ಲಿ ಕ್ಷಣಕೊಂದು ಅಲೆಯ ಉಂಗುರ
ಶನಿವಾರದ ಜಾಗರದ ಪರಿಣಾಮ, ಶಂಕರ ಭಾಗವತರ ಮದ್ದಲೆಗೆ ಭಾನುವಾರ ಮೈಕೈ ಸೆಳೆತ
ಏನು ಮಾಡೋದು, ಈ ಆಗಸ್ಟ್ ತಿಂಗಳೇ ಹೀಗೆ

ಟೀವಿಯಲ್ಲಿ ಕತ್ರೀನಾ ಕೈಫಿಗೆ ಈ ಚಳಿಯಲ್ಲೂ ದಿನಕ್ಕೆ ನೂರಾ‌ಎಂಟು ಸಲ ಸ್ನಾನ
ಅಂಬೋಲಿ ಘಾಟಿನಲ್ಲಿ ಹಸಿದ ಇಂಬಳದ ಅಂಗುಲ-ಅಂಗುಲ ನಡಿಗೆ
ನೈಟ್ ಬಸ್ಸು ನಿಂತ ಡಾಬಾದಲ್ಲಿ ಅಣ್ಣಾವ್ರ ಹಾಡಿನ ಉಸ್ತುವಾರಿ
ಅಲ್ಲಲ್ಲೆ ನಿಲ್ಲುವ ಮನಸುಗಳಿಗೆ, ಅರಳಲಣಿಯಾಗಿರುವ ಮೊಗ್ಗುಗಳಿಗೆ
ನೀರು ಜಿನುಗಿಸುತಿರುವ ಒರತೆಗಳಿಗೆ, ಅಂಚೆಪೆಟ್ಟಿಗೆಯಲ್ಲಿರುವ ಪತ್ರಗಳಿಗೆ
ಮುತ್ತಮಧುಗ್ರಾಹೀ ಅಧರಗಳಿಗೆ, ಬೆಳ್ಳಿನೂಪುರ ಘಲ್ಲುಘಲ್ಲೆನೆ ಉಷೆ
ಹೇಳಿದೆನಲ್ಲಾ, ಈ ಆಗಸ್ಟ್ ತಿಂಗಳೇ ಹೀಗೆ

ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು

-ದಿನಕರ ದೇಸಾಯಿ

200px-DinakaraDesai

ದಿನಕರನ ಚುಟುಕ

ಇಂದ್ರ ದೇವನ ಮೊನ್ನೆ ಮಾಡಿ ಟೆಲಿಫೋನು

ಕೇಳಿದನು:ದೇಸಾಯಿ, ಹೇಗಿದ್ದಿ ನೀನು?

ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು

ಪ್ರತಿ ಕಳಿಸಿ ಅದು ನನ್ನ ಲೆಕ್ಕಕ್ಕೆ ಹಚ್ಚು

ಅಂಕೋಲೆ ಹುಡುಗಿ

ಗೋಕರ್ಣದಿಂದ ಉತ್ತರಕ್ಕೆ ಅಂಕೋಲೆ

ಇಲ್ಲುಂಟು ದೇಸಾಯಿ ದಿನಕರನ ಬಾಲೆ

ಎಲ್ಲರನ್ನೂ ಕೆಣಕುವಳು ಈ ತುಂಟ ಹುಡಗಿ

ಹಿಡಿಯ ಹೋದರೆ ಕುಳಿತುಕೊಳ್ಳುವಳು ಅಡಗಿ

ಅಂಕೋಲೆ ಉಪ್ಪು

ಗೃಹಮಂತ್ರಿ ಹೇಳಿದರು: ಎಲೆ ಚುಟುಕ ಜೋಕೆ

ಅತ್ಯಂತ ಉಗ್ರವಾಗಿದೆ ನಿನ್ನ ಟೀಕೆ.

ಚುಟುಕವೆಂದಿತು: ನನಗೆ ಹಾಕುವೆನೆ ಸೊಪ್ಪು

ನಾನು ಅಂಕೋಲೆ ಸತ್ಯಾಗ್ರಹದ ಉಪ್ಪು.

ಅಹಿಂಸಾಮಯ ಯುದ್ಧ

ಲೇಖನಿಯ ಹಿಡಿದು ಸರಕಾರದ ವಿರುದ್ಧ

ಪ್ರತಿ ದಿವಸವೂ ನಾನು ಹೂಡಿದೆನು ಯುದ್ಧ.

ಬಂದೂಕುಗಳ ಬದಲು ಚುಟುಕಗಳ ಬಾಣ.

ಎಷ್ಟು ಚುಚ್ಚಿದರೇನು ? ಬಿಡಲಿಲ್ಲ ಪ್ರಾಣ!

ಅಂಬಿಕಾತನಯದತ್ತರ ಕೃತಿ

ಅಂಬಿಕಾತನಯದತ್ತರ ಕೃತಿಯನೋದು

ಭಾವನಾಲೋಕದಲಿ ಅದು ಒಂದು ಜಾದು.

ಅರಗಳಿಗೆಯಲಿ ನೀನು ಮಂಗಳಕ್ಕೆ ಹಾರಿ.

ಕುಳಿತುಕೊಳಬಹುದು ಬ್ರಹ್ಮಾಂಡಗಳನೇರಿ.

ಅವ್ವನ ಅಂಗನವಾಡಿ

-1-

ಬಡ ಮಕ್ಕಳ ತೊಟ್ಟಿಲು

ಅಂಗನವಾಡಿಯಲ್ಲಿ

ನನ್ನವ್ವ ಏಸೊಂದು ಮಕ್ಕಳ ತಾಯಿ !

ಅಷ್ಟೂ ಮಕ್ಕಳ ಅವ್ವ

ನನ್ನ ಸ್ವಂತ ಎನ್ನುವ ಹಿಗ್ಗಿಗೆ

ಮಕ್ಕಳಲೋಕದಿ ನಾ ರಾಜನೆ ಆಗಿದ್ದೆ!

ಟೀಚರಮ್ಮನ ಮಗನೆನ್ನುವ

ಊರವರ ಅಕ್ಕರೆಯ

ಹಾರೈಕೆಯಲ್ಲಿ ನಾ ಊರ ತಾಯಂದಿರ

ಮಗನಾದದ್ದು ಈಗಲೂ ಸೋಜಿಗ !

-2-

ಆಗ ಅಂಗನವಾಡಿಗಳಿಗೆ ಬರುತ್ತಿದ್ದ

ಅಮೇರಿಕಾದ

ಸೋಯಾಬೀನ್ ಹಿಟ್ಟು ಎಣ್ಣೆಯ

ಭಾರತಾಂಬೆಯ ಬಡ ಮಕ್ಕಳೆಲ್ಲಾ

ತಿಂದು ಬೆಳೆಯುತ್ತಿದ್ದರು!

ಅವ್ವ ಕರುಣಾಳು ದೇಶವೆಂದು

ಮನದಲ್ಲಿ ವಂದಿಸುತ್ತಿದ್ದಳು !

ಅಲ್ಲಿ ನಾಯಿಗೆ ಹಾಕುವ ಫುಡ್ಡನ್ನು

ಅಂಗನವಾಡಿಗಳಿಗೆ

ಕೊಡುತ್ತಾರೆಂಬ ಎಲ್ಲೋ ಕೇಳಿದ ಸುದ್ದಿ

ನಿಜವೇ ಎಂದು

ಅವ್ವನನ್ನು ಮುಗ್ದವಾಗಿ ಕೇಳಿದ್ದೆ.

ಯಾರೋ ಹೇಳಿದ್ದು ?

ಎಂದು ಸಿಡಿಮಿಡಿಗೊಂಡಿದ್ದಳು !

ನನಗಾಗ ಅಂಗನವಾಡಿ ಮಕ್ಕಳು

ನಾಯಿಮರಿಗಳಂತೆ

ಕಂಡದ್ದು ಈಗಲೂ ನೆನಪಿದೆ !

More

ನನಗೊಬ್ಬಳು ಹೆಂಡತಿಯಿದ್ದಳು

-ರಾಘವೇಂದ್ರ ಜೋಶಿ

ಕಲೆ: ಸುಘೋಷ್ ನಿಗಳೆ

ನನಗೊಬ್ಬಳು ಹೆಂಡತಿಯಿದ್ದಳು

ಎಲ್ಲರಿಗಿರುವಂತೆ.

ನನಗೊಬ್ಬಳು ಮಗಳಿದ್ದಳು

ಎಲ್ಲರಿಗಿರುವಂತೆ.

ಮೊದಮೊದಲು

ಭುಜದೊಳಗೆ ತಂಪಿತ್ತಾ

ತಂಪಿದ್ದುದರಿಂದ ಭುಜಬಲವಿತ್ತಾ

ಗೊತ್ತಿಲ್ಲ;

ಮಜವಂತೂ ಗಜವಾಗಿತ್ತು.

ಒಂದೇ ಒಂದು ಕೊಸರಿತ್ತು

ಮಕ್ಕಳಿಲ್ಲದ ಕೊರತೆಯಿತ್ತು

ಮತ್ತು

ನಂಬಿಕೆಯಿತ್ತು;

ತಮಸೋಮ ಜ್ಯೋತಿರ್ಗಮಯದೊಳಗೆ

ಎಂಟೂ ಮುಕ್ಕಾಲು ವರ್ಷ

ಬೆಟ್ಟವನೇರಿ ಕಣಿವೆಯಿಳಿದು

ಬೆವರಿಳಿಸಿ ಸುಸ್ತಾಗಿ

ಕೊನೆಗೊಮ್ಮೆ ಅಶ್ವತ್ಥ ವೃಕ್ಷದ ಕಟ್ಟೆಯಲ್ಲಿ

ಜೋಡಿ ನಾಗರಗಳ ಗಂಟು

ನೋಡಿದ ಬಳಿಕ

ಮಗಳು ಸ್ವಯಂಭೂ!

ಸಿಟ್ಟಿತ್ತು ಹೆಂಡತಿಗೆ

ನನ್ನ ಹುಚ್ಚಾಟಗಳ ಬಗ್ಗೆ.

ಹೆಂಡತಿಯ ಹೆಸರೂ ಒಂದೇ

ಮಗಳದೂ ಅದೇ.

ಇದೇ ಕಾರಣಕ್ಕೆ

ಅವಳಿಗೆ ಅಸಹನೆಯಿತ್ತು

ಜಗತ್ತಿನ ಕುಹಕದ ಮಾತಿಗೆ,ನೋಟಕ್ಕೆ.

ಕಿರಿಕಿರಿಯಿತ್ತು ಅವಳಿಗೆ

ಮಗಳ ಬಗೆಗಿನ ನನ್ನ ಪ್ರೀತಿಗೆ.

ಅನುಮಾನವಿತ್ತು ತನ್ನದೇ

ಸ್ನಿಗ್ಧ ಚೆಲುವಿನ ಬಗ್ಗೆ.

ಆದರೂ ಆಕೆ ಯಾವತ್ತೂ

ಬೊಗಸೆ ಮುಚ್ಚಿಕೊಂಡವಳಲ್ಲ;

ನನ್ನ ಪಕ್ಕೆಲುಬಿನ ಕಫಕ್ಕೆ,ಕೆಮ್ಮಿಗೆ.

ಮೊನ್ನೆ ವಿಮಾನ ಪತನಗೊಂಡಾಗ

ಸುಟ್ಟು ಹೋದಳು

ಬೊಗಸೆ ಮುಚ್ಚಿತ್ತು

ನನಗೆ ಅಳಲಾಗಲಿಲ್ಲ ಕಿರುಚಲಾಗಲಿಲ್ಲ.

ಕಣ್ಣೆದುರಿಗೆ ನಿಂತ ನಿಜದ

ಚಿತ್ರಪಟ ನೋಡಿ ಸಂಕಟಗೊಂಡೆ.

ಹೌದು,ಇಷ್ಟುದಿನ ಅವಳು ನನಗೆ

ಬರೇ ಹೆಂಡತಿಯಾಗಿರಲಿಲ್ಲ;

ಚೊಕ್ಕಟ ಮಗಳಾಗಿದ್ದಳು..

ಕೆಟ್ಟತಲೆಯ ನಾಲ್ಕು ಘಟ್ಟಗಳು

– ರಾಘವೇಂದ್ರ ಜೋಶಿ

ಪಾಠ ಒಂದು:

ಅ-ಅಗಸ

ಆ-ಆನೆ

ಈತ ಗಣಪ ಆತ ಈಶ

ಈಶನ ಮಗ ಗಣಪ

ಕಮಲಳ ಲಂಗ ಥಳಥಳ

ಸೂರ್ಯನ ಬೆಳಕು ಫಳಫಳ..

ವ್ಹಾ! ಎಂಥ ಸರಳರೇಖೆ.

ಪಾಠ ಎರಡು:

ಜಲಜನಕವು

ಆಮ್ಲಜನಕದೊಂದಿಗೆ

ವರ್ತಿಸುತ್ತಿರುವಾಗ-

ಅವನು

ಅವಳ ಹೆಸರನ್ನು

ನೀಲಿ ಹೃದಯದೊಂದಿಗೆ

ಡೆಸ್ಕಿನಲ್ಲಿ ದಟ್ಟವಾಗಿ

ಕೆತ್ತುತ್ತಿದ್ದ.

ಮುಂದಿನ ಪಿರಿಯಡ್ಡು

ಅಭಿಜ್ಞಾನ ಶಾಕುಂತಲ.

ಹುಡುಗನ ಪೆನ್ನಲ್ಲಿ

ಹನಿ ಇಂಕಿಲ್ಲ.

ಮುಂಜಾನೆಯ ಕನಸು

ಯಾವತ್ತೂ ನಿಜವಾಗದು.

ಕನಸು ನನಸಾಗುವ

ಅವಸರದಲ್ಲಿ

ಕನಸು

ಕನವರಿಕೆಯಾಗುವ

ಗೊಂದಲವೇ ಹೆಚ್ಚು

ಸುಂದರ ಮತ್ತು

ಅಪೇಕ್ಷಣೀಯ.

ಸದ್ಯ,

ಮುಂಜಾನೆಯ ಕನಸು

ಬರೀ ಸಿಹಿನಿದ್ದೆ

ಮಾತ್ರ ತರಬಲ್ಲದು.

ಎಲ್ಲ ಮರೆಯಬೇಕಿದೆ

ಹಿಂದೆ ಸಾಗಬೇಕಿದೆ.

ಕಮಲಳ ಲಂಗವನ್ನು

ಮತ್ತೊಮ್ಮೆ ಥಳಥಳಿಸಬೇಕಾಗಿದೆ

ಶಕುಂತಲೆಯ ಕತೆ

ಸರಿಯಾಗಿ ಬರೆಯಬೇಕಿದೆ

ಅಕಟಕಟಾ,

ಎಷ್ಟು ಬೈದರೂ

ಬರಲಾರ ದೂರ್ವಾಸ

ಕೊಡಲಾರ

ಮರೆವಿನ ಶಾಪ.

ಅವರು ಅಂತಾರೆ:

ಮಾನವನಿಗೆ

ಏಳೇ ಜನ್ಮ.

ಮುಗಿಸಿಯಾಗಿದೆ

ಏಳೇಳು ಜನ್ಮ.

ಆದರೂ

ಮತ್ತೊಮ್ಮೆ ಹುಟ್ಟುವಾಸೆ

at least,

ಅವಳ ಮನೆಯ

ಎಮ್ಮೆ ಕಟ್ಟುವ

ಗೂಟವಾಗಿ!

Previous Older Entries Next Newer Entries

%d bloggers like this: