E ಪರಿಯ ಬದುಕು

ಸೂತ್ರಧಾರ ರಾಮಯ್ಯ

IT ಪೈಟಿ – ಅರ್ಥ ಗಿರ್ತಾ

ಟೆಕ್ಕಿ ಪಿಕ್ಕಿ

ನೆಲವಿಲ್ಲ ನೆಲೆಯಿಲ್ಲ;

ಭವಿತವ್ಯ ಶುದ್ಧಿಲ್ಲ.

ನಿದ್ದಿಲ್ಲ ಬುದ್ಧಿಲ್ಲ;

ಹೆಂಡ ಬಿಟ್ಟೆದ್ದಿಲ್ಲ.

ಹಾಡಿದ್ದೆ ಹಾಡು

ಬಿಟ್ಟದ್ದೇ ಬೀಡು.

ಪಾಪ…. ಹಕ್ಕೀ ಪಿಕ್ಕೀ!

ಇವರು ಅಷ್ಟೇ:

ಧನವಿದ್ದು ಮುದವಿಲ್ಲ;

ಬದುಕಲ್ಲಿ ಸೊಗವಿಲ್ಲ.

ಗಣಕದ ಉರುಳ ಉದ್ಯೋಗ;

ಹಗಲಿರಳು ಉದ್ವೇಗ.

ದೇಹವೆಂಬುದು ಯಂತ್ರ

ಮನದಿ ಅಇಟಿಯ ಮಂತ್ರ.

ಮನೆ ಎಲ್ಲೋ, ಮಡದಿ ಎಲ್ಲೋ,

ಪಾಪ… ಟೆಕ್ಕೀ ಪಿಕ್ಕಿ!

More

‘ಬೊಳುವಾರು’ ದಾರಿಯಲ್ಲೊಂದು ಇಣುಕು…

– ಬಿ ಎಂ ಬಷೀರ್

ಗುಜರಿ ಅಂಗಡಿ

ನಾಲ್ಕು ದಿನಗಳ ಹಿಂದೆ ಇದ್ದಕ್ಕಿದ್ದಂತೆಯೇ ನನ್ನ ಮೆಚ್ಚಿನ ಕತೆಗಾರ ಬೊಳುವಾರು ಮೊಹಮ್ಮದ್ ಕುಂಞಯವರು ಮೊಬೈಲ್ ಕರೆ ಮಾಡಿದ್ದರು. ‘ನಿಮಗೆ ಥ್ಯಾಂಕ್ಸ್ ಹೇಳಲು ಫೋನ್ ಮಾಡುತ್ತಿದ್ದೇನೆ’ ಎಂದು ಬಿಟ್ಟರು. ‘ಯಾಕೆ’ ಎನ್ನುವುದು ಅರ್ಥವಾಗಲಿಲ್ಲ. ಅವರೇ ಮುಂದುವರಿಸಿದರು ‘‘ನಾನು ಬರೆಯುತ್ತಿರುವ ಕಾದಂಬರಿ 500 ಪುಟದಲ್ಲೇ ನಿಂತಿತ್ತು. ನೀವು ನನ್ನ ಬಗ್ಗೆ ಪತ್ರಿಕೆಯಲ್ಲಿ ಬರೆದಿದ್ದ ಲೇಖನವನ್ನು ಮೊನ್ನೆ ಓದಿದ ಬಳಿಕ ಮತ್ತೆ ಬರೆಯುವುದಕ್ಕೆ ಸ್ಫೂರ್ತಿ ಬಂತು. ಈಗ ಮತ್ತೆ ಬರಹ ಮುಂದುವರಿಸುತ್ತಿದ್ದೇನೆ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳುತ್ತಿದ್ದೇನೆ’’ ಎಂದು ಬಿಟ್ಟರು. ಯಾವ ಲೇಖಕ ನಮ್ಮ ಬಾಲ್ಯವನ್ನು ತನ್ನ ಕತೆ,ಕಾದಂಬರಿಗಳ ಮೂಲಕ ಶ್ರೀಮಂತಗೊಳಿಸಿದ್ದನೋ, ಯಾವ ಲೇಖಕ ನಮ್ಮ ಚಿಂತನೆಗಳನ್ನು, ವಿಚಾರಗಳನ್ನು ತಿದ್ದಿ ತೀಡಿದ್ದನೋ, ಯಾವ ಲೇಖಕ ಅಕ್ಷರಗಳನ್ನು ಉಣಿಸಿ ನಮ್ಮನ್ನು ಬೆಳೆಸಿದ್ದನೋ ಆ ಲೇಖಕ ಏಕಾಏಕಿ ಹೀಗಂದು ಬಿಟ್ಚರೆ, ನಮ್ಮಂತಹ ತರುಣರ ಸ್ಥಿತಿಯೇನಾಗಬೇಕು? ಅಲ್ಲವೆ!? ‘‘ನಿಮ್ಮದು ದೊಡ್ಡ ಮಾತು…ಸಾರ್…’’ ಎಂದು ಬಿಟ್ಟೆ. ಆದರೆ ಅವರು ತುಸು ಭಾವುಕರಾಗಿದ್ದರು ಎಂದು ಕಾಣುತ್ತದೆ ‘‘ಇಲ್ಲ ಬಶೀರ್…ಇದು ನನ್ನ ಹೃದಯದಿಂದ ಬಂದ ಮಾತು…’’ ಎಂದರು.‘‘ಬರೆಯುವುದು ನಿಂತಾಗೆಲ್ಲ ನೀವು ನನ್ನ ಬಗ್ಗೆ ಬರೆದ ಲೇಖನವನ್ನು ಓದುತ್ತಾ…ಮತ್ತೆ ಬರೆಯಲು ಸ್ಫೂರ್ತಿ ಪಡೆಯುತ್ತೇನೆ’’ ಎಂದರು. ಈಗ ಭಾವುಕನಾಗುವ ಕ್ಷಣ ನನ್ನದು. ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಆ ಲೇಖನವನ್ನು ಬರೆದಿದ್ದೆ. ತುಸು ಅವಸರದಿಂದಲೇ ಗೀಚಿದ್ದೆ. ಅವರ ಬರಹಕ್ಕೆ ಸ್ಫೂರ್ತಿ ಕೊಡುವಷ್ಟು ಸುಂದರವಾಗಿದೆಯೇ ಅದು? ಅಥವಾ ತಮ್ಮ ಮಾತುಗಳ ಮೂಲಕ ನನಗೇ ಬರೆಯುವುದಕ್ಕೆ ಸ್ಫೂರ್ತಿ ಕೊಡುತ್ತಿದ್ದಾರೆಯೆ? ಆ ಕ್ಷಣಕ್ಕೆ ನನಗೆ ಅರ್ಥವಾಗಲಿಲ್ಲ. ಆದರೆ, ಅವರ ಮಾತುಗಳ ‘ಹ್ಯಾಂಗೋವರ್’ನಿಂದ ಇನ್ನೂ ನಾನು ಹೊರ ಬಂದಿಲ್ಲ. ಬೊಳುವಾರರ ಕುರಿತಂತೆ ನಾನು ಪತ್ರಿಕೆಯಲ್ಲಿ ಬರೆದ ಆ ಲೇಖನವನ್ನು ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.

ಬೊಳುವಾರು!

ಅದು ಎಂಬತ್ತರ ದಶಕದ ದಿನಗಳು.

ಪುತ್ತೂರು, ಉಪ್ಪಿನಂಗಡಿ ಆಸುಪಾಸಿನಲ್ಲಿ ಮಾತ್ರವಲ್ಲ, ದಕ್ಷಿಣ ಕನ್ನಡಾದ್ಯಂತ ಬೊಳುವಾರು ಎನ್ನುವ ಪುಟ್ಟ ಊರಿನ ಕುಖ್ಯಾತಿ ಹರಡಿತ್ತು. ದಕ್ಷಿಣಕನ್ನಡದ ಸಂಘಪರಿವಾರದ ಬೀಜ ಮೊಳಕೆ ಯೊಡೆದು ಹಬ್ಬಿದ್ದು ಇದೇ ಬೊಳುವಾರಿನಲ್ಲಿ. ಪುತ್ತೂರು ಆಗ ಸಂಪೂರ್ಣ ಬಿಜೆಪಿ ಮತ್ತು ಆರೆಸ್ಸೆಸ್ ಕೈ ವಶವಾಗಿತ್ತು. ಉರಿಮಜಲು ರಾಮಭಟ್ಟರು ಪುತ್ತೂರಿನ ಶಾಸಕರಾಗಿದ್ದ ಕಾಲ ಅದು. ಬೊಳುವಾರಿನ ಸಂಘಪರಿವಾರದ ಹುಡುಗರ ‘ಗ್ಯಾಂಗ್‌ವಾರ್’ಗಳು ಸುತ್ತಲಿನ ಪರಿಸರದಲ್ಲಿ ಕುಖ್ಯಾತಿಯನ್ನು ಪಡೆದಿದ್ದವು. ಉಪ್ಪಿನಂಗಡಿ ಆಸುಪಾಸಿನ ಮುಸ್ಲಿಮರು ಪುತ್ತೂರಿಗೆ ಕಾಲಿಡಲು ಅಂಜುತ್ತಿದ ದಿನಗಳದು. ಇಂತಹ ಸಂದರ್ಭದಲ್ಲೇ ಮುತ್ತಪ್ಪ ರೈ ಮತ್ತು ಆತನ ಹುಡುಗರ ಪ್ರವೇಶ ವಾಯಿತು. ವಿನಯಕುಮಾರ್ ಸೊರಕೆ ಎಂಬ ಯುವ ತರುಣ ರಾಜಕೀಯಕ್ಕೆ ಕಾಲಿಟ್ಟರು. ಉರಿಮಜಲು ರಾಮಭಟ್ಟರಿಂದ ಪುತ್ತೂರು ತಾಲೂಕಿನ ಜನ ಅದೆಷ್ಟು ಬೇಸತ್ತು ಹೋಗಿದ್ದ ರೆಂದರೆ, ಸೊರಕೆ ಹೆಸರು ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತು. ಆ ಚುನಾವಣೆಯಲ್ಲಿ ಭಾರೀ ಬಹು ಮತದಿಂದ ವಿನಯಕುಮಾರ್ ಎನ್ನುವ ಅಮುಲ್ ಬೇಬಿ ಆಯ್ಕೆಯಾದರು. ಈ ಗೆಲುವು ಪುತ್ತೂರಿನ ಮೇಲೆ ಅದೆಷ್ಟು ಪರಿಣಾಮ ಬೀರಿ ತೆಂದರೆ, ನಿಧಾನಕ್ಕೆ ಕೋಮುಗಲಭೆ, ಗ್ಯಾಂಗ್ ವಾರ್‌ಗಳ ಸದ್ದಡಗಿತು. ಆರೆಸ್ಸೆಸ್‌ನ ಅಧಿನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ಬಾವ ಉರಿಮಜಲು ರಾಮಭಟ್ಟರು ಶಾಶ್ವತ ಮೂಲೆ ಸೇರಿದರು. ನಿಧಾನಕ್ಕೆ ‘ಬೊಳವಾರ’ನ್ನು ಜನ ಮರೆಯತೊಡಗಿ ದರು.

More

ಭೀಮಸೇನ ಜೋಷಿ ಜೋಡಿ ಕ್ರಿಕೆಟ್..

ಭೀಮಸೇನ್ ಜೋಶಿ ಅವರ ಎರಡು ಓವರ್ ಬ್ಯಾಟಿಂಗ್

-ಡಿ ಗರುಡ

ಗರುಡ ಪುರಾಣ

ನಮ್ಮೂರಿನ ಮಹಾ ಗಾಯಕಾ ಭೀಮಸೇನ್ ಜೋಶಿ ಅವರು ನಮ್ಮನ್ನ ಬಿಟ್ಟು ಹೋದ್ರು. ಅದಕ್ಕ ಭಾಳ ಧುಕ್ಕಾ ಆತು. ನಮ್ಮೂರಿನ ಇಬ್ಬರು ಮಹಾ ಗಾಯಕರು ಒಬ್ಬರಾದಮ್ಯಾಗ ಒಬ್ರು ಹ್ವಾದ್ರು. ಅದಕ್ಕ ಭಾರಿ ಧುಕ್ಕಾ ಆಗ್ಯದ. ಪಂಡಿತ್ ಪುಟ್ಟರಾಜ ಗವಾಯಿಗೋಳು ಹ್ವಾದ್ರು; ಆಮ್ಯಾಗ ಪಂಡಿತ್ ಭೀಮಸೇನ್ ಜೋಶಿಯವ್ರು ಹ್ವಾದ್ರು. ಇಬ್ರೂ ದೊಡ್ಡ ಗಾಯಕ್ರು. ದೇಶಾ ಮಾತ್ರ ಅಲ್ಲ ವಿದೇಶಾನೂ ಮೆಚ್ಚಿಕೊಂಡಿದ್ದ ಗಾಯಕ್ರು ಅವ್ರು. ಅಂಥಾ ಗಾಯಕ್ರು ನಮ್ಮೂರಿನವ್ರು ಅಂತ ಹೇಳಿಕೊಳ್ಳಾಕ ಹೆಮ್ಮೆ ಆಗ್ತತ.

ಗವಾಯಿಗಳನ್ನ ಮಠದಾಗ ಪಾದ ಮುಟ್ಟಿ ನಮಸ್ಕಾರಾ ಮಾಡಿ ಆಶಿರ್ವಾದಾ ಪಡೀತಿದ್ವಿ. ಅವ್ರಿಗೆ ನಮ್ಮ ಊರಿನ್ಯಾಗ ದೇವ್ರ ಸ್ಥಾನ. ಭೀಮಸೇನ್ ಜೋಶಿ ಅವರೂ ಹಾಂಗ ಇದ್ರು. ದೇವರಹಾಂಗ ಇದ್ದ ಮನುಷಾರು ಅವರು. ಯಾರಿಗೂ ಕೆಟ್ಟದ್ದು ಮಾತಡಿದ್ದು ನಾವಂತೂ ಊರಾಗಿದ್ದವ್ರು ಕೇಳಿಲ್ಲಾ. ಹಾಡಿಕೊಂಡು, ಹಾಡು ಕೇಳಿಸಿ ಸಂತೋಷಾ ಪಡತಿದ್ರು.

ನಾನು ಸಣ್ಣವಾಗಿದ್ದಾಗ ಅವರನ್ನ ಮೂರು-ನಾಕ್ ಬಾರಿ ನೋಡಿದ್ದೆ. ಹತ್ತಿರದಾಗಿಂದ ಮಾತಾಡಿಸಿದ್ದೆ, ಮಜಾ ಅಂದ್ರ ಒಮ್ಮೆ ಅವರ ಜೊತಿಗೆ ಕ್ರಿಕೆಟ್ ಆಟಾನೂ ನಮ್ಮ ಗೆಳೆಯಾರ ಆಡಿದ್ದೆ. ಆಮ್ಯಾಗ ನೋಡಿದ್ದು ಒಮ್ಮೆ ಪುಣೆನ್ಯಾಗ ನಮ್ಮ ಗೆಳಿಯಾ ಸುನಿಲ್ ಮರಾಠೆ ಹೋಟೆಲಿನ್ಯಾಗ. ಆವಾಗ ಅವರ ಜೊತಿಗೆ ಮಾತಾಡಿ, ಗದಗಿನ ನಮ್ಮ ಓಣ್ಯಾಗ ಒಮ್ಮೆ ಕ್ರಿಕೆಟ್ ಆಡಿದ್ದನ್ನ ನಾನು ಮತ್ತ ಸುನಿಲ್ ಮರಾಠೆ ನೆನಪಿಸಿದ್ವಿ. ಆವಾಗ ಅವ್ರು “ಭಾಳ ದೊಡ್ಡವ್ರ ಆಗಿರಲ್ಲಾ” ಅಂತ ಹೇಳಿದ್ದು ಇನ್ನು ನನ್ನ ನೆನಪಿನ್ಯಾಗ ಐತಿ.

ಸುನಿಲ್ ಮರಾಠೆ ಗದಗಿನಿಂದ ಹ್ವಾದಮ್ಯಾಗ, ಪುಣೆನ್ಯಾಗ ಹೋಟೆಲ್ ಮಾಡಿಕೊಂಡು ದೊಡ್ಡ ಹೋಟೆಲ್ ಉದ್ಯಮಿ ಆದಾವ. ಭಿಮಸೇನ್ ಜೋಶಿ ಅವರು ಆಗಾಗ ಅವನ ಹೋಟೆಲಿಗೆ ಬರತಿದ್ರು. ನಾನೂ ಒಮ್ಮೆ ಹಿಂಗ ಹೋಗಿದ್ದಾಗ ಅಲ್ಲೆ ಸಿಕ್ಕಿದ್ರು. ಗರುಡರ ಮನಿ ಹುಡುಗಾ ಅಂತ ಹೇಳಿ ನೆನಪು ಮಾಡಿಕೊಟ್ಟಾಗ “ವಲ್ಲಭನ ಮಗಾ ಏನು…?” ಅಂತ ಕೇಳಿದ್ರು. ನಾನು “ಹೌದ್ರಿ; ಅವತ್ತ ನಾವು ಸಣ್ಣವ್ರು ಇದ್ದಾಗ ನಿಮ್ಮನಿ ಹಿಂದಿನ ಓಣಿನ್ಯಾಗ ಕ್ರಿಕೆಟ್ ಆಡಿತಿದ್ವಿ. ಅವತ್ತೊಮ್ಮೆ ನೀವು ನಮ್ಮ ಜೊತಿಗೆ ಆಟಾ ಆಡಿದ್ರ್ಯಲ್ಲಾ…!” ಅಂತ ಹೇಳಿ ನೆನಪು ಮಾಡಿಕೊಟ್ಟಿದ್ದೆ. ಆವಾಗ ಅವರು ಸಣ್ಣ ಮಕ್ಕಳಹಾಂಗ ನಕ್ಕಿದ್ದು ಇನ್ನೂ ಕಣ್ಣಮುಂದ ಕಟ್ಟಿಧಾಂಗ ಅದ.

More

ಅವರೆ ಕಾಳು ಸೀಸನ್ ಮುಗಿಯುವ ಮುನ್ನ

-ಮಾಲತಿ ಶೆಣೈ

ನೆನಪಿನ ಸಂಚಿ

ಬೆಂಗಳೂರಿಗೆ ಬಂದ ಮೊದಲ ಎರಡು ವರ್ಷ ನಾನು ಅವರೆ ಕಾಳಿನ ಸುದ್ದಿಗೆ ಹೋಗ್ಲೇ ಇಲ್ಲ. ಮುಂಬೈನಲ್ಲಿ ಅದು ಸಿಗುತ್ತಿರಲಿಲ್ಲ.ನಮ್ಮ ಆಫಿಸ್ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನ ಏಳನೆ ಮಹಡಿಯಲ್ಲಿತ್ತು. ಕೆಲವೊಮ್ಮೆ break ತೆಗೊಂಡು ಕಿಟಕಿಯಿಂದ ಕೆಳಗೆ ನೋಡಿದ್ರೆ, ಕೆಳಗಡೆ ತರಕಾರಿ ಮಾರುವವರು ರಾಶಿ ರಾಶಿ ಅವರೆಕಾಳನ್ನು ಬಿಡಿಸಿ ನೀರಿನಲ್ಲಿ ಹಾಕಿಡತಿದ್ರು. ನಮ್ಮ ಆಫಿಸ್ ನವರು ಯಾರಿಗೂ ಅವರೆಕಾಳಿನ ಬಗ್ಗೆ ತಿಳಿದಿರಲಿಲ್ಲ. ಜನರು ಮುಗಿಬಿದ್ದು ತೆಗೆದುಕೊಂಡು ಹೋಗುವುದನ್ನು ನೋಡುತ್ತಿದ್ದೆ ವಿನ: ನಾನಂತು ಅದರ ತಂಟೆಗೆ ಹೋಗಿರಲಿಲ್ಲ.

ಆಮೇಲೆ ನಿಧಾನವಾಗಿ ವಿಜಯಕರ್ನಾಟಕದ ಅಂಕಣಕಾರರಾದ ಶ್ರೀವತ್ಸ ಜೋಶಿಯವರ ಪರಿಚಯವಾಯ್ತು. ಅವರ ಮೂಲಕ thatskannada ಡಾಟ್ ಕಾಮ್ websiteನ ಪರಿಚಯವಾಯ್ತು. ಅಲ್ಲಿ ಅವರೆಕಾಳಿನ ಉಪ್ಪಿಟ್ಟಿನ ವಿವರಣೆ ಹಾಗೂ ಕಮೆಂಟ್ ಗಳನ್ನು ಓದಿ ಬಾಯಲ್ಲಿ ನೀರೂರಿತು. ನಾನು ಯಾವಗಾದರೊಮ್ಮೆ try ಮಾಡಬೇಕೆಂದು ಅಂದುಕೊಂಡಿದ್ದೆ ಅಷ್ಟೆ. ಶ್ರೀಕಾಂತ್ ಹತ್ತಿರ mention ಮಾಡಿದಾಗ, ಅವರು ಹಿಂದೊಮ್ಮೆ ಅವರ ಫ್ರೆಂಡ್ ಮನೆಯಲ್ಲಿ ಅವರೆಕಾಳು ಉಪ್ಪಿಟ್ಟು ಮತ್ತು ಚಟ್ನಿ ತಿಂದಿದ್ದು ನೆನಸಿಕೊಂಡು, ಸ್ವಲ್ಪ extra fittings (ಮಕ್ಕಳ term) ಇಟ್ಟು ಅದನ್ನು ರಸವತ್ತಾಗಿ ಬಣ್ಣಿಸಿದಾಗ, ಸ್ವಲ್ಪ ಹೊಟ್ಟೆಕಿಚ್ಚಾಗಿದ್ದು ನಿಜ. but ಪುನಃ ಅದು ನನ್ನ ಮನಸ್ಸಿನಿಂದ ಆಚೆ ಹೋಯ್ತು. ಮತ್ತು ಅಷ್ಟರಲ್ಲೇ ನಮ್ಮ ಹೊಸ ಆಫಿಸ್ ರಾಜಾಜಿನಗರ ಎರಡನೇ ಬ್ಲಾಕ್ ನಲ್ಲಿ ಶುರು ಮಾಡಿದ್ವಿ. ನನ್ನನ್ನು ಅಲ್ಲಿಗೆ ವರ್ಗಾಯಿಸಿದರು.

ಹೊಸ ಆಫಿಸಿಗೆ ಹೋದ ಕೆಲವೆ ದಿನದಲ್ಲಿ ನಮ್ಮ ಆಫಿಸ್ ಗೆ ಗೋವಿಂದರಾಜನ್ ಅನ್ನುವವರು ನಮ್ಮನ್ನು join ಆದರು. ಅವರು ಕೆಲವೊಮ್ಮೆ ಬೆಳಿಗ್ಗೆ ಅಲ್ಲಿ ಹತ್ತಿರದ ಹೋಟಲ್ ನಿಂದ ಅವರ favorite ಪಡ್ಡು (hoppers) ತರಿಸುತ್ತಿದ್ದರು. ಒಂದು ಸಲ ಪಡ್ಡು ಇರಲಿಲ್ಲ ಅದಕ್ಕೆ ಅವರೆಕಾಳಿನ ಅಕ್ಕಿ ರೊಟ್ಟಿ ತರಿಸಿ ತಿನ್ನುವಾಗ ನನಗೆ ಅದರ ಪರಿಮಳ ಬಂದು ನಾಚಿಕೆ ಬಿಟ್ಟು ಅವರ ಹತ್ತಿರ ಒಂದು piece ತೆಗೊಂಡು ತಿಂದೆ. ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ ಪರಮಾನಂದಂ..ಪರಮಸುಖದಂ…. ಆಮೇಲೆ ಅವರು ಹೋಟಲ್ ನಿಂದ ಏನಾದ್ರೂ ತರಿಸುವಾಗ ನಾನು ನನಗೋಸ್ಕರ ಅಕ್ಕಿ ರೊಟ್ಟಿ ತರಿಸ್ತಿದ್ದೆ. ಬೆಳಿಗ್ಗೆ ಒಂದು ರೊಟ್ಟಿ ತಿಂದ್ರೆ ಆಮೇಲೆ ಇಡೀ ದಿನ ಹಸಿವೆ ಆಗ್ತಿರಲಿಲ್ಲ. ನನ್ನ ಊಟದ ಡಬ್ಬಿ ಉಳಿದವರು ಹಂಚಿಕೊಳ್ಳುತ್ತಿದ್ದರು.ಮತ್ತೆ ಮನೇಯಲ್ಲೇ ಮಾಡಬೇಕೆನ್ನುವ ಹುಮ್ಮಸ್ಸು ಬಂತು. ಯಾಕೆಂದ್ರೆ ಅಕ್ಕಿ ರೊಟ್ಟಿ ಸಿಗುವ ಅಶೋಕಾ ಹೋಟಲ್ ಮುಚ್ಚಿ ಬಿಟ್ಟು ಅಲ್ಲಿ ರಾಗಿ ಮುದ್ದೆ ಹೋಟಲ್ ಬಂತು 😦

More

ಸೂಫಿ..ಸೂಫಿ..

ಸಾಮಾಜಿಕ ಚಿಂತನೆ ಮತ್ತು ಸೂಫಿ-ಸಂತರು

-ವಿ  ಎನ್ ಲಕ್ಷ್ಮೀನಾರಾಯಣ

ಈಚಿನ ದಿನಗಳಲ್ಲಿ ಸಾಮಾಜಿಕ ಬದಲಾವಣೆಯ ಮಾತು ಬಂದಾಗಲೆಲ್ಲಾ ಕನ್ನಡದ ಬುದ್ಧಿಜೀವಿಗಳು ಮತ್ತು ಚಿಂತಕರು ಗಾಂಧೀಜಿಯವರ ಚಿಂತನೆಗಳನ್ನು ಬುದ್ಧ, ಬಸವ, ಅಲ್ಲಮ ಮುಂತಾದ ಸಂತರು ಮತ್ತು ಅನುಭಾವಿಗಳ ಲೋಕದೃಷ್ಟಿಯೊಂದಿಗೆ ತಾಳೆಹಾಕಿ ತಮ್ಮ ಚಿಂತನೆಗಳನ್ನು ಪ್ರಸರಿಸುವುದು ವಾಡಿಕೆಯಾಗಿದೆ. ಜಾಗತೀಕರಣದ ಕೆಡಕುಗಳಿಗೆ ಪರಮಹಂಸರು, ರಮಣ, ಸೂಫಿ-ಸಾಧು-ಸಂತರ ಜೀವನದೃಷ್ಟಿ ಪರಿಣಾಮಕಾರಿಯಾದ ಸಿದ್ಧೌಷಧವೆಂಬಂಥ ದೃಷ್ಟಿಕೋನವನ್ನು ಅವರು ಬಿಂಬಿಸುತ್ತಾರೆ. ಲೋಭ, ದುರಾಸೆಗಳಿಂದ ನಮ್ಮನ್ನು ನಾವು ಬಿಡಿಸಿಕೊಂಡರೆ ಸಾಮಾಜಿಕ ವಿಷಮತೆ ತಾನೇತಾನಾಗಿ ಮಾಯವಾಗುತ್ತದೆ ಎಂದು ಹೇಳುತ್ತಾರೆ. ಸಂಪ್ರದಾಯವಾದೀ ಪ್ರಸಿದ್ಧ ಲೇಖಕರು ಮತ್ತು ಶ್ರದ್ಧಾವಂತ ಮಹಿಳೆಯರು ಆಚರಿಸುವ ಧಾಮರ್ಿಕತೆ, ಆಸ್ತಿಕತೆ ಮತ್ತು ನಂಬಿಕೆ ಮೂಲದ ಆಚರಣೆಗಳು ವಾಸ್ತವವಾಗಿ ವಸಾಹತುಶಾಹಿಯ ವಿರುದ್ಧ ದೇಸೀನೆಲೆಯ ಶಿಕ್ಷಿತ-ಅಶಿಕ್ಷಿತ-ಅಸಹಾಯಕ ಮುಗ್ಧಜನರು ಕೈಗೊಂಡ ಕ್ರಾಂತಿಕಾರೀ ಪ್ರತಿಭಟನೆಗಳು ಎಂದು ನಂಬುತ್ತಾರೆ. ಹಾಗೆಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಕೋಮುವಾದವನ್ನು ಎದುರಿಸಲು ಸೂಫಿ-ಸಂತ ಮೂಲದ ಹಾಡು-ಸಂಗೀತ-ಸಾಹಿತ್ಯವನ್ನು, ಜಾಗತೀಕರಣವನ್ನು ಎದುರಿಸಲು ಆಸ್ತಿಕ ಮೂಲದ ದೇಸೀತನವನ್ನು ಮೈಗೂಡಿಸಿ ಕೊಳ್ಳಬೇಕೆಂದು ಇಂಥವರು ಹೇಳುತ್ತಾರೆ.

ಒಂದೆಡೆ ಸಾಮಾಜಿಕವಾಗಿ, ಕಳ್ಳತನ, ಕೊಲೆ, ಸುಲಿಗೆ, ದರೋಡೆಗಳು ಬಲಗೊಳ್ಳುತ್ತಿದ್ದರೆ, ರಾಜಕೀಯವಾಗಿ ಭ್ರಷ್ಟಾಚಾರ, ಜಾತೀಯತೆ, ಕೋಮುವಾದ, ಪರಮತಅಸಹನೆಯ ಫ್ಯಾಸಿಸ್ಟ್ ಧೋರಣೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಉತ್ತರದಾಯಿತ್ವವಿಲ್ಲದ ದುರಾಡಳಿತ ವ್ಯಾಪಕವಾಗುತ್ತಿದೆ. ಮತ್ತೊಂದೆಡೆ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳು ನಮ್ಮ ಧುರೀಣರಿಗೆ ಮತ್ತು ಯುವಜನರಿಗೆ ಗಂಭೀರ ಸಮಸ್ಯೆಗಳೆಂದು ಅನ್ನಿಸದೆ ಕೇವಲ ಜಾಗತಿಕ ಜನಜೀವನದ ಸಹಜ ಸ್ಥಿತಿಗತಿಗಳಾಗಿವೆ. ಭ್ರಷ್ಟರು ಇಲ್ಲವೆ ಅಸಹಾಯಕರಾದ ನ್ಯಾಯಾಧೀಶರು ಜನಸಾಮಾನ್ಯರಿಗೆ ಸಹಜನ್ಯಾಯವಲ್ಲ, ಸಾಂವಿಧಾನಿಕ ನ್ಯಾಯವೊದಗಿಸಲೂ ಸಾಧ್ಯವಾಗದಷ್ಟು ಕುರುಡರಾಗಿದ್ದಾರೆ. ಜನರ ಅಭಿಪ್ರಾಯ-ಭೇದ ಭಿನ್ನತೆಗಳನ್ನು ದುಗುಡ-ದುಮ್ಮಾನಗಳನ್ನೂ ಸರಕನ್ನಾಗಿಸಿ ಮಾರಿಕೊಳ್ಳುತ್ತಿರುವ ಮಾಧ್ಯಮಗಳು ವ್ಯಾಪಾರಿಗಳ ಜೇಬಿನಲ್ಲಿ ಸೇರಿಕೊಂಡಿವೆ. ಪಕ್ಷರಾಜಕಾರಣ ಪರಸ್ಪರವಾಗಿ ಬ್ಲಾಕ್ಮೇಲ್ ಮಾಡಿ ಹಣ ಮಾಡುವ,ಅಸ್ತಿತ್ವ ಉಳಿಸಿಕೊಳ್ಳುವ ಮಾಫಿಯಾ/ದಲ್ಲಾಳಿಗಳ ಸಂಘಟಿತ ದಂಧೆಯಾಗಿದೆ. ಇವುಗಳ ಜೊತೆಗೆ, ಹವಾಮಾನ ವೈಪರೀತ್ಯದ ತೊಂದರೆಗಳಾದ ಅತಿವೃಷ್ಟಿ-ಅನಾವೃಷ್ಟಿ, ಪ್ರವಾಹ, ಶೀತಗಾಳಿ, ಬಿಸಿಗಾಳಿ ರೈತರು, ದುರ್ಬಲರು ಮತ್ತು ಶಕ್ತಿಹೀನರಿಗೆ ಹಿಂದೆಂದೂ ಕಂಡರಿಯದಷ್ಟು ಕಷ್ಟನಷ್ಟಗಳನ್ನು ತಂದೊಡ್ಡುತ್ತಿವೆ. ಕೈತುಂಬಾ ಹಣಗಳಿಸುವ ಮಧ್ಯಮವಗರ್ೀಯರು ಹೊಟ್ಟೆತುಂಬಿದಮೇಲೆ ತಮ್ಮನ್ನು ಕಾಡುವ ಬದುಕಿನ ಬರಡುತನ, ಏಕತಾನತೆ, ಅನಾರೋಗ್ಯದ ದಿಗಿಲುಗಳಿಗೆ ಬಾಬಾಗಳು, ಭಕ್ತಿ, ಸೂಫಿ, ಅನುಭಾವಗಳ ವ್ಯಾಪಾರಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಜಾಗತೀಕರಣದ ಧೂರ್ತರಾಜಕೀಯಕ್ಕೆ ಪಯರ್ಾಯವಾದ ರಾಜಕೀಯ ದರ್ಶನ-ಚಿಂತನೆಗಳು ಇದ್ದೂ ಇಲ್ಲದಂತಿರುವ ಸ್ಥಿತಿಗೆ ತಲುಪಿವೆ.

More

ಲೈಫು ಚಿತ್ರಾನ್ನ

-ಮಧು ಕೃಷ್ಣಮೂರ್ತಿ

ರಸಿಕರ ರಾಜ್ಯ

This article was first published in Swarnasetu 2004, an annual magazine brought out by Kannada Koota of Northern California. Later it was also published in thatskannada web portal.

ಏನ್‌ ಗುರು ಸಮಾಚಾರ? ಸಪ್ಪೆ ಮುಖ ಹಾಕಿಕೊಂಡಿದ್ದ ಆಪ್ತ ಗೆಳೆಯನ್ನ ಈ ರೀತಿ ನಾನು ಕೇಳಿದಾಗ ಬಂದ ಉತ್ತರ ’ಲೈಫು ಚಿತ್ರಾನ್ನ ಆಗೋಗಿದೆ ಗುರು’ ಎಂದು. ಮನಸ್ಸಿಗೆ ಬಹಳ ವ್ಯಥೆಯಾಯಿತು. ಪಾಪ! ಹೀಗೇಕಾಯಿತು? ಚಿತ್ರಾನ್ನಕ್ಕೆ ಈ ಗತಿ ಏಕೆ ಬಂತು? ಜೀವನದ ಅರಾಜಕತೆಯನ್ನು ಹಾಗು ನೀರಸತೆಯನ್ನು ವರ್ಣಿಸಲು ಚಿತ್ರಾನ್ನವೇ ಆಗಬೇಕೆ? ಹಾಗೆ ನೋಡಿದರೆ ಚಿತ್ರಾನ್ನ ತಿನ್ನಲು ಬಹಳಾ ರುಚಿ ಅಗಿರುತ್ತೆ. ಜೊತೆಗೆ ನೋಡಲು ಅಂದವಾಗಿರುತ್ತೆ ಕೂಡ.

14 ವರುಷದ ಹಿಂದೆ ಚನ್ನರಾಯಪಟ್ಟಣದ ನನ್ನ ಚಿಕ್ಕಮ್ಮ ಮಾಡಿದ್ದ ಚಿತ್ರಾನ್ನವನ್ನು ಜ್ಞಾಪಿಸಿ ಕೊಂಡರೆ ಇಂದಿಗೂ ನನ್ನ ಬಾಯಲ್ಲಿ ನೀರೂರುತ್ತೆ. ಮಲ್ಲಿಗೆ ಹೂವಿನಂತ ಹಳದಿ ಬಣ್ಣದ ಅನ್ನ, ಎಣ್ಣೆಯಲ್ಲಿ ಹುರಿಯಲ್ಪಟ್ಟ ಕಂದು ಬಣ್ಣದ ಕಡ್ಲೆ ಬೀಜ, ಅಲ್ಲಲ್ಲಿ ಮೆರಗು ನೀಡುವ ಹಸಿ ಮೆಣಸಿನ ಕಾಯಿ, ಕರಿಬೇವು ಮತ್ತು ಕರಿ ಸಾಸಿವೆ! ಇಂತಹ ಚಿತ್ರಾನ್ನವನ್ನು ಇವನ ಗೋಳಿನ ಜೀವನಕ್ಕೆ ಹೋಲಿಸುವುದೆ? ಅವನಿಗೆ ಹೇಳಿದೆ ‘ತಪ್ಪು! ದೊಡ್ಡ ತಪ್ಪು! ಇನ್ನೂ ಬೇಕಾದರೆ ಸಾರನ್ನಕ್ಕೆ ಹೋಲಿಸ್ಕೊ.’ ಇದನ್ನು ಕೇಳಿದ ಸ್ನೇಹಿತ ನಿಬ್ಬೆರಗಾಗಿ ನನ್ನನ್ನೇ ನೋಡುತ್ತಾ ನಿಂತ. ಸಾರನ್ನದ ಈ ಮಹತ್ವ ತನಗೆ ತಿಳಿದಿರಲಿಲ್ಲವಲ್ಲ ಎಂದು ಅವನಿಗೆ ತನ್ನ ಬಗ್ಗೆಯೇ ಸ್ವಲ್ಪ ನಿರಾಶೆಯಾಗಿರಬೇಕು. ಅದಕ್ಕೆ ಇರಬೇಕು ಅದಾದ ನಂತರ ಅವನು ನನ್ನ ಬಳಿ ಆ ವಿಷಯ ಮಾತಾಡಿಲ್ಲ.

ನಿಜ ಹೇಳ್ಬೇಕು ಅಂದ್ರೆ ನನಗೂ ಸಾರನ್ನಕ್ಕು ಸ್ವಲ್ಪ ಅಷ್ಟಕ್ಕಷ್ಟೆ ! . ಒಂದು ಮನೇಲಿ ಇವತ್ತು ಅಡಿಗೆ ಮಾಡಲಾಗಿದೆ ಅನ್ನೋದಕ್ಕೆ ಅನ್ನ ಸಾರು ಒಂದು ಸುಳ್ಳು ಸಾಕ್ಷಿಯೇ ಹೊರತು ಅದಂರಿಂದಲೇ ಹೊಟ್ಟೆ ತುಂಬಿಸ್ಕೋಬೇಕಾದ್ರೆ ಬಹಳ ಕಷ್ಟ ಸ್ವಾಮಿ. ಜೊತೆಗೆ ಹಪ್ಪಳ ಸಂಡಿಗೆ ಕರಿದಿದ್ರೆ ಚೆನ್ನಾಗಿರುತ್ತೆ. ಆದ್ರೆ ಇಲ್ಲಿ ಅಮೇರಿಕಾದಲ್ಲಿ ಅದನ್ನೆಲ್ಲ ಕರಿಯೋದೊ ಂದು ದೊಡ್ಡ ತಲೇನೋವು. ಕರಿಯೋದು ಸುಲಭ. ಆದ್ರೆ ಆ ಕರಿದ ಎಣ್ಣೆ ಎಸಿಯೋದು ಒಂದು ರಂಪ? ಅಂಗಡಿ ಸಮೋಸ ಇರೋದ್ರಿಂದ, ಏನೋ ಒಂದಷ್ಟು ಸಾರನ್ನವನ್ನ ಗಂಟಲಲ್ಲಿ ಇಳಿಸ್ಬೋದು.

More

ತಂಗಿ ಬರೆದಿದ್ದಾಳೆ..

ಗೆಳೆಯರೇ, ನಾನು ಮುಂಬಯಿಯಲ್ಲಿ ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಬರೆದ ಕವಿತೆ ಇದು. ಬಳಿಕ ನನ್ನ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ ಕೃತಿಯಲ್ಲಿ ಈ ಕವನ ಪ್ರಕಟಗೊಂಡಿತು. 1996ರಲ್ಲಿ ಈ ಕೃತಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’ಯೂ ದೊರಕಿತ್ತು.

ನನ್ನ ತೀರಾ ಹಳೆಯ ಈ ಕವಿತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಹಂಚಿಕೊಂಡಿದ್ದೇನೆ.

-ಬಿ ಎಂ ಬಷೀರ್

ಗುಜರಿ ಅಂಗಡಿ

ನನ್ನ ಪುಟ್ಟ ತಂಗಿಗೀಗ ತಿಳಿದು ಹೋಗಿದೆ

ನಾ ಕೊಟ್ಟ ನವಿಲು ಗರಿಗೆ ಎಂದೂ

ಜೀವ ಬರುವುದಿಲ್ಲ ಎಂದು

ಪತ್ರದಲ್ಲಿ ತಿಳಿಸಿದ್ದಾಳೆ

ನಾನೀಗ ಬೆಳೆದಿದ್ದೇನೆ!

ಹಾರಿ ಬಿಟ್ಟ ಗಾಳಿಪಟ

ದೈತ್ಯ ವೃಕ್ಷದ ಎದೆಗೂಡೊಳಗೆ ಸಿಕ್ಕಿ

ಹರಿದು ಚೆಲ್ಲಾಪಿಲ್ಲಿಯಾದ ಬಗೆ;

ನಿನ್ನೆಯ ಮುಂಗಾರು ಮಳೆ ತಿಳಿಸಿ ಹೋಗಿದೆ…

ನೀ ಕೊಟ್ಟ ಕಾಗದದ ದೋಣಿ

ಅದರೊಳಗೇ ಕರಗಿ ಕಡಲ ಸೇರಿದೆ!

More

ಗುಡ್ ಬೈ ಶಾನಭಾಗ್. ಟೇಕ್ ಕೇರ್

ಎಂ ಎಸ್ ಶ್ರೀರಾಮ್

ಇಂದು ಸುಚಿತ್ರದಲ್ಲಿ ಪ್ರೀಮಿಯರ್ ಬುಕ್ ಹೌಸ್ ನ ಶಾನಭಾಗರ ಬಗ್ಗೆ ಡಾಕ್ಯುಮೆಂಟರಿ ಚಿತ್ರ ಪ್ರದರ್ಶನವಿದೆ. ಈ ಹಿನ್ನೆಲೆಯಲ್ಲಿ ಎಂ ಎಸ ಶ್ರೀರಾಮ್  ಈ ಹಿಂದೆ ಬರೆದ ಲೇಖನ ನೆನಪಾಯಿತು.

ಆ ಲೇಖನ ಆತ್ಮೀಯವಾಗಿ ಪುಸ್ತಕ ಅಂಗಡಿಯ ಎಲ್ಲಾ ಮೂಲೆಯನ್ನೂ ಪರಿಚಯಿಸುತ್ತದೆ. ಆ ಖುಷಿ ಓದಿಗಾಗಿ ಆ ಲೇಖನ ಇಲ್ಲಿದೆ.

ಎರಡು ವರ್ಷಗಳ ನಂತರ… ಮುಚ್ಚಿದ ಪ್ರೀಮಿಯರ್

ಇಪ್ಪತ್ತೈದು ವರ್ಷಗಳ ಹಿಂದೆ, ಬಿ.ಕಾಂ ವಿದ್ಯಾರ್ಥಿಯಾಗಿ ನಾನು ನನ್ನ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹಾಯಕ ಕೋಚಿಂಗಿಗೆ ಹೋಗುತ್ತಿದ್ದಾಗ ಒಂದು ದಿನ ಅಲ್ಲಿ ಪಾಠ ಮಾಡುತ್ತಿದ್ದ ವಿಶ್ವನಾಥ್ ಹೇಳಿದ್ದರು: “ನಮ್ಮ ವಿತ್ತೀಯ ನಿರ್ಮತಿಯ ತಲ್ಲಣಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕಾದರೆ, ನೀನು ಶೂಮೇಕರನ ಸ್ಮಾಲ್ ಇಸ್ ಬ್ಯೂಟಿಫುಲ್ ಓದು. ನಾನು ಪ್ರೀಮಿಯರ್ ಬುಕ್ ಷಾಪಿನ ಶಾನ್‌ಭಾಗಿಗೆ ಹೇಳಿದ್ದೇನೆ. ನಮ್ಮವರಿಗೆ ಆತ ೧೫% ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರುತ್ತಾರೆ”. ಹೀಗೆ ಸ್ಮಾಲ್ ಇಸ್ ಬ್ಯೂಟಿಫುಲ್ ಅನ್ನುವ ಪುಸ್ತಕವನ್ನು ಹುಡುಕಿ ಹೊರಟ ನನಗೆ ಆ ಪುಸ್ತಕದ ಟೈಟಲ್ಲಿನ ಅರ್ಥದ ಪದರ-ಮಜಲುಗಳು ಶಾನಭಾಗರ ಪ್ರೀಮಿಯರ್ ಬುಕ್ ಷಾಪ್ ನೋಡಿದಾಗ ತಟ್ಟಿತು. ಪುಟ್ಟ ಅಂಗಡಿಯಲ್ಲಿ ಎಷ್ಟೊಂದು ಭಂಡಾರವನ್ನು ಅಡಕಮಾಡಿ ಇಡಬಹುದು ಅನ್ನುವುದಕ್ಕೆ ಪ್ರೀಮಿಯರ್ ಸಂಕೇತವಾಯಿತು. ಆದರೆ ಅದನ್ನು ಬ್ಯೂಟಿಫುಲ್ ಎಂದು ಕರೆಯುವುದಕ್ಕೆ ಮಾತ್ರ ಸಾಧ್ಯವಾಗಿರಲಿಲ್ಲ. ಅದರ ಆತ್ಮ ಬ್ಯೂಟಿಫುಲ್ ಆದರೂ ಆ ಅಂಗಡಿಯಲ್ಲಿ ಪುಸ್ತಕಗಳನ್ನು ಆಯುವುದಕ್ಕೆ ಪಳಗಿದ ಕೈಗಳೇ ಬೇಕಾಗಿದ್ದುವು.

ಆ ಪುಸ್ತಕದಂಗಡಿಗೆ ಹೋದ ಕೂಡಲೇ ನನಗೆ ಅರಿವಾದದ್ದು ಒಂದು ವಿಷಯ: ನಮ್ಮ ವಿಶ್ವನಾಥ್ ಅವರ ಹೆಸರನ್ನು ಹೇಳದಿದ್ದರೂ ಆ ಪುಸ್ತಕದ ಮೇಲೆ ನನಗೆ ರಿಯಾಯಿತಿ ಸಿಗುತ್ತಿತ್ತು ಅನ್ನುವ ಸತ್ಯ. ಪ್ರೀಮಿಯರ್‍ ಗೆ ಹೋದವರಿಗೆಲ್ಲಾ ಕನಿಷ್ಟ ೧೦% ರಿಯಾಯಿತಿಯನ್ನು ಶಾನಭಾಗ್ ಕೊಡುತ್ತಿದ್ದರು… ಮತ್ತು ನಮ್ಮಂತಹ ರೆಗ್ಯುಲರ್ ಗಳಿಗೆ ನಮ್ಮ ಒಟ್ಟಾರೆ ಬಿಲ್ಲು ಮತ್ತು ಅವರ ಮೂಡಿನನುಸಾರ ೧೫-೨೦ ಪ್ರತಿಶತ ರಿಯಾಯಿತಿ ಸಿಗುತ್ತಿತ್ತು. ಪ್ರೀಮಿಯರ್‍ ನಲ್ಲಿ ಇದ್ದ ಪುಸ್ತಕಗಳ ವಿಸ್ತಾರಕ್ಕೆ ಅವರು ಯಾವ ರಿಯಾಯಿತಿಯನ್ನೂ ಕೊಡದೆಯೇ ಅಂಗಡಿಯನ್ನು ನಡೆಸಬಹುದಿತ್ತು. ಹೀಗಾಗಿ ನಾನು ಪ್ರೀಮಿಯರ್ ಬುಕ್ ಷಾಪಿಗೆ ರಿಯಾಯಿತಿಗೆಂದೇ ಹೋದದ್ದು ನೆನಪಿಲ್ಲ. ಅಲ್ಲಿಗೆ ಹೋಗುವುದೇ ಒಂದು ಅನುಭವ. ಬೆಂಗಳೂರು ಬಿಟ್ಟು ಬಹಳಕಾಲದಿಂದ ಹೊರನಾಡಿಗನಾಗಿರುವ ನನಗೆ ಬೆಂಗಳೂರಿಗೆ ಬಂದಾಗಲೆಲ್ಲಾ ಪ್ರೀಮಿಯರ್ ಬುಕ್ ಷಾಪಿನ ಯಾತ್ರೆ ಅನಿವಾರ್ಯವಾಗಿಬಿಟ್ಟಿತ್ತು. ಮಿಕ್ಕ ಎಷ್ಟೋ ಪುಸ್ತಕದಂಗಡಿಗಳಿಗೆ ನಾನು ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿದರೂ, ಪ್ರೀಮಿಯರ್ ನ ಅನುಭವವೇ ವಿಚಿತ್ರ ವೈಶಿಷ್ಟ್ಯತೆಯನ್ನು ನೀಡುತ್ತಿತ್ತು.

More

‘ರೈತನಾಗುವ ಹಾದಿಯಲ್ಲಿ’ ಪೆಜತ್ತಾಯ

ಬಾಲಕೃಷ್ಣ ನಾಯಕ್

ಬೆಂಗಳೂರಿನ ಗೆಳೆಯ ಸೃಷ್ಟಿ ನಾಗೇಶ್ ತನ್ನ ದೇಸಿ ಪ್ರಕಾಶನದ ಮೂಲಕ ಪ್ರಕಟಿಸುವ ಎಸ್.ಮಧುಸೂಧನ್ ಪೆಜತ್ತಾಯ ಅವರು ಬರೆದ ’ರೈತನಾಗುವ ಹಾದಿಯಲ್ಲಿ’ ಕನ್ನಡ ಪುಸ್ತಕಲೋಕದಲ್ಲಿ ಈಗಾಗಲೇ ಒಂದು ಭರವಸೆಯ ಕೃತಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಪುಸ್ತಕದ ಬೆನ್ನುಡಿಯಲ್ಲಿ ಜಿ.ಎಸ್.ಎಸ್. ರಾವ್ ಅವರು ಯಶಸ್ವೀ ರೈತರೊಬ್ಬರು, ಸುಮಾರು ನಲವತ್ತೈದು ವರ್ಷಗಳ ಹಿಂದೆ, ರೈತರಾಗಲು ಹೊರಟಾಗಿನ ಪ್ರಾರಂಭದ ಒಂದು ವರ್ಷದ ಕಥೆ! ಎಂದು ಬರೆಯುತ್ತಾರೆ.

ಆದರ್ಶದ ಬೆನ್ನು ಹತ್ತಿದ ಯುವಕನೊಬ್ಬನ ನಿಜ ಜೀವನದ ಸಾಹಸಗಾಥೆಯನ್ನು ಕಥೆಯಾಗಿಸಿದ್ದಾರೆ, ಪೆಜತ್ತಾಯರು. ತಾವು ನಡೆದ ಹಾದಿಯಲ್ಲಿ ಎದುರಾದ ಪ್ರಕೃತಿ ವಿಕೋಪಗಳು, ಸಾಮಾಜಿಕ ವೈಪರೀತ್ಯಗಳು, ಮನುಷ್ಯರ ಸ್ವಭಾವಗಳು ಇವುಗಳ ನಡುವೆಯೂ ಗುರಿಸಾಧನೆ ಮಾಡುವುದು ಈ ಕೃತಿಯ ತಿರುಳು. ವಿಷಾದದಲ್ಲಿ ಕೊನೆಯಾಗಬಹುದಾಗಿದ್ದ ಘಟನೆಗಳು ಕೂಡ ತಿಳಿಹಾಸ್ಯದ ಲೇಪನವನ್ನೊಳಗೊಂಡು ಸಹ್ಯವಾಗಿಬಿಡುತ್ತವೆ. ಸಮಾಜದ ಮತ್ತು ಪರಿಸರಸದ ಅವಿಭಾಜ್ಯ ಅಂಗವೆಂದು ತಮ್ಮನ್ನು ಗುರುತಿಸಿಕೊಂಡಿರುವ ಪೆಜತ್ತಾಯರು, ರೋಚಕ ಚಿತ್ರಗಳನ್ನು ನೀಡುತ್ತಾರೆ. ತಾವು ಪಟ್ಟ ಪಾಡನ್ನು ಹಾಡಾಗಿಸಿರುವ ಕೃತಿ ಇದು, ಎನ್ನುತ್ತಾರೆ ರಾವ್ ಅವರು.

ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ’ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಇವರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಅವರು ’ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ.

More

ದೆಹಲಿ ಕನ್ನಡ ಸಂಘಕ್ಕೆ ಹೊಸ ನೇತೃತ್ವ

ಅಧ್ಯಕ್ಷ ವೆಂಕಟಾಚಲ ಹೆಗಡೆ

ಕಾರ್ಯದರ್ಶಿ ಸಿ ಎಂ ನಾಗರಾಜ್

ಜನವರಿ ಒಂಬತ್ತರಂದು ನಡೆದ ದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಗೆದ್ದ ಹೊಸ ಕಾರ್ಯಕಾರಿ ಸಮಿತಿಯು ಅಧಿಕಾರ ವಹಿಸಿಕೊಂಡಿದೆ.

ಹೊಸ ಸಮಿತಿಯಲ್ಲಿ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ, ಉಪಾಧ್ಯಕ್ಷ ಬಿ.ಕೆ. ಬಸವರಾಜ್ ಮತ್ತು ಉಷಾ ಭರತಾದ್ರಿ, ಕಾರ್ಯದರ್ಶಿ ಸಿ.ಎಂ. ನಾಗರಾಜ್, ಜಂಟಿ ಕಾರ್ಯದರ್ಶಿ ಎನ್.ಆರ್.ಶ್ರೀನಾಥ್ ಮತ್ತು ರೇಣುಕಾ ನಿಡಗುಂದಿ ಮತ್ತು ಕೋಶಾಧಿಕಾರಿ ಕೆ.ಆರ್. ರಾಮಮೂರ್ತಿ ಅವರಿದ್ದಾರೆ. ಅಲ್ಲದೆ ಸಮಿತಿಯಲ್ಲಿ ಅಂಜನಿ ಗೌಡ, ಎಸ್.ಸಿ. ಹೇಮಲತಾ, ಟಿ.ಎಂ. ಮೈಲಾರಪ್ಪ, ಪಿ.ಸಿ. ಶ್ರೀನಿವಾಸ, ಸಿ.ಆರ್. ಶ್ರೀನಿವಾಸ್, ಜಿ.ಬಿ. ಹೆಗಡಿ, ಆನಂದ ಮುರುಗೋಡ್, ಬಿ. ನಾರಾಯಣ ಅವರು ಸೇರಿ ಎಂಟು ಸದಸ್ಯರಿದ್ದಾರೆ.

ಸುಮಾರು ೩೭೦೦ ಅಜೀವ ಸದಸ್ಯರಿರುವ ದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಸುಮಾರು ೮೦೦ ಸದಸ್ಯರು ಮತದಾನ ಮಾಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿ ಎರಡು ಮತಗಳ ಅಂತರದಲ್ಲಿ ಡಾ. ಹೆಗಡೆಯವರು ವಿಜಯ ಗಳಿಸಿದರು.

(ಕೆಂಪು ಕೋಟೆ ವರದಿ)

Previous Older Entries Next Newer Entries

%d bloggers like this: