ಒಂದು ತುಂಬು ನಗೆ…

ಆರ್  ವಿ ಭಂಡಾರಿ ನೆನಪಿನ ಸಹಯಾನದಲ್ಲಿ ಕಂಡ ದೃಶ್ಯ ಇದು. ಐ ಜಿ ಸನದಿ ಹಾಗೂ ಜಯಂತ ಕಾಯ್ಕಿಣಿ ಒಂದು ತುಂಬು ನಗೆಯನ್ನು ವಿನಿಮಯ ಮಾಡಿಕೊಂಡಿದ್ದು ಹೀಗೆ…

ಇನ್ನಷ್ಟು ಫೋಟೋಗಳು ಓದುಬಜಾರ್ ನಲ್ಲಿದೆ.

ಭೇಟಿಕೊಡಿ-ಓದು ಬಜಾರ್

“ನನ್ನವ್ವ ಫಲವತ್ತಾದ ಕಪ್ಪು ನೆಲ”

ಸರಯೂ ಚೈತನ್ಯ

ಲಂಕೇಶರ “ಅವ್ವ”, ನಾನು ಮತ್ತೆ ಮತ್ತೆ ಓದಿಕೊಳ್ಳುವ ಕವಿತೆ. ಹಾಗೆ ನೋಡಿದರೆ ಲಂಕೇಶರ “ಅವ್ವ” ಎಲ್ಲರ ಅವ್ವನೂ ಆಗಿಬಿಡುವಂಥವಳು. ಒಂದಿಡೀ ತಾಯಂದಿರ ಪರಂಪರೆಯನ್ನೇ ಒಳಗೊಂಡು ನುಡಿವ ಹೆಂಗಸು ಆಕೆ.

“ನನ್ನವ್ವ ಫಲವತ್ತಾದ ಕಪ್ಪು ನೆಲ” ಎಂಬುದೇ ಒಂದು ಬೆಳಕಿನ ಸಾಕ್ಷಾತ್ಕಾರದ ಹಾಗಿದೆ. ಶ್ರಮ ಸಂಸ್ಕೃತಿಯನ್ನೂ ಮಾತೃ ಪರಂಪರೆಯನ್ನೂ ಒಂದೆಡೆಯಲ್ಲಿ ಕಂಡುಕೊಳ್ಳುವ ಪ್ರತಿಮೆ ಅನ್ನಿಸುತ್ತದೆ ಅದು.

img_1126.jpgಪಾರ್ವತಿದೇವಿ ಕೊಳೆಯಿಂದ ಕೂಡಿದ ತನ್ನ ಮೈಯ ಬೆವರಿಂದಲೇ ಗೊಂಬೆ ಮಾಡಿ ಅದಕ್ಕೆ ಜೀವ ಕೊಟ್ಟಳು; ಆತನೇ ಗಣಪತಿ ಎಂಬ ಕಥೆಯೊಂದು ಬರುತ್ತದೆ. ಕೃಷಿ ಸಂಸ್ಕೃತಿಯ ಮನಸ್ಸು ತಾಯಿ ಮತ್ತು ಮಗುವಿನ ಸಂಬಂಧವನ್ನು ರೂಪಕಗೊಳಿಸಿರುವ ಬಗೆಗಿನ ಅಸಾಮಾನ್ಯ ನಿದರ್ಶನ ಈ ಕಥೆ. ಕರುಳ ಕುಡಿಯ ಬಗೆಗಿನ ತಾಯ ಗ್ಯಾನ, ಸಂವೇದನೆಯ ಜಗತ್ತಿನಲ್ಲಿ ಬಹುಶಃ ಯಾವಾಗಲೂ ಎತ್ತರದ ಸ್ಥಾನದಲ್ಲೇ ಇರುವಂಥದ್ದು.

“ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ”

ಈ ಅವ್ವನ ಕಥೆ, ಮಗುವಿಗೆ ಹಾಲೂಡಿದರೆ ಎದೆ ಬಿಗುವು ಸೋರಿ ಹೋದೀತು ಎಂದು ಆತಂಕಗೊಳ್ಳುವ “ಪೇಜ್ ಥ್ರೀ” ಮಮ್ಮಿಯದಲ್ಲ; ಬದಲಾಗಿ ನಿರಂತರ ಜೀವ ತೇಯುವ, ಎಲ್ಲ ನೋವನ್ನೂ ಒಂದು ನಿಟ್ಟುಸಿರಲ್ಲೇ ನುಂಗಿಕೊಳ್ಳುವ ಶಕ್ತಿವಂತೆಯ ಕಥೆ.

“ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ”

ಹೀಗೆ ಯಾನ ಮುಗಿಸುವ ಅವ್ವ, ಅನ್ನ ಕೊಡುವ ಹೊಲದ ಕಸುವಿಗಾಗಿ, ಜೀವನದ ಜೊತೆಗಾರನ ಸಂತೋಷಕ್ಕಾಗಿ ತನ್ನದೆಂಬುವ ಪ್ರತಿ ಕ್ಷಣವನ್ನೂ ಒತ್ತೆಯಿಟ್ಟಿದ್ದವಳು. ಅವಳದೊಂದು ನಿಸ್ವಾರ್ಥ ಪಯಣ.

“ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.” ಇನ್ನಷ್ಟು

ಗುರುವೇ ನಮನ

magicvesselsborder

‘ಗುರುವಿಗೇಕೆ ಒಂದು ನಮನ ಸಲ್ಲಿಸಬಾರದು?’ ಎಂಬ ಪ್ರಶ್ನೆಯೊಂದಿಗೆ ನಮ್ಮೆದುರು ನಿಂತವರು ಕೆ ಅಕ್ಷತಾ. ಕವಯತ್ರಿ, ಅಹರ್ನಿಶಿ ಪ್ರಕಾಶನದ ಕೇಂದ್ರ ಬಿಂದು. ‘ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಸಂಕಲನದ ಮೂಲಕ ಪರಿಚಿತರಾದ ಇವರ ಕಾವ್ಯ ಲೋಕಕ್ಕೆ ಇನ್ನಷ್ಟು ಆಳವಾದ ವಿಸ್ತರಣೆಯನ್ನು ನೀಡಿದವರು ಮತ್ತೊಬ್ಬ ಕವಿ ವೆಂಕಟ್ರಮಣ ಗೌಡ. ಅಕ್ಷತಾ ನೀಡಿದ ಒತ್ತಾಸೆಯಿಂದಾಗಿ ‘ಅವಧಿ’ ಪಾಲಿಗೆ ಗುರು ದಿನ ಒಂದು ನೆನಪಿನಲ್ಲಿಡಬೇಕಾದ ದಿನವಾಗಿ ಬದಲಾಗಿವೆ. ಅಕ್ಷತಾ ಗೆ ವಂದನೆ ಹೇಳುತ್ತಾ ಗುರುಗಳು ಗುರುವಿಗೆ ನಮನ ಸಲ್ಲಿಸಿದ್ದನ್ನು ನಿಮ್ಮ ಮುಂದಿಡುತ್ತಿದ್ದೇವೆ.

-ಅವಧಿ ಬಳಗ

magicvesselsborder

ಇಂದು ಬದುಕು ಕಲಿಸಿದವರ ದಿನ. ಗುರುವಿನ ದೃಷ್ಟಿಯಲ್ಲಿ ಅವರಿಗಿಷ್ಟವಾದ ಗುರುವಿನ ಬಗೆಗೆ ಬೆದಕುವ ಪ್ರಯತ್ನವಿದು. ತಮಗೆ ಸ್ಪೂರ್ತಿ, ಶಕ್ತಿ, ಪ್ರೇರಣೆಯಾದ ಗುರುವಿನ ಬಗೆಗೆ ಬರೆದಿರುವ ಈ ಆರು ಜನ ಅಧ್ಯಾಪಕರು, ಅವರ ಮೇಷ್ಟ್ರುಗಳಂತೆ ವಿಶಿಷ್ಟರೂ, ವಿದ್ಯಾರ್ಥಿಗಳಿಗೆ ಪ್ರೀತಿ, ಪ್ರೇರಣೆ ನೀಡುತ್ತಿರುವವರೂ ಆಗಿದ್ದಾರೆ.

1459055735_3480b4050e

ಶಿವಮೊಗ್ಗ ಜಿಲ್ಲೆಯ ಯುವ ರಾಜಕಾರಣಿಯೊಬ್ಬರು ನನಗೆ ಮ್ಯಾಥ್ಸ್ ಕಲಿಸಿದವರೇ ಶೈಲಾ ಮೇಡಂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಒಂದಷ್ಟು ಜನ ಶೈಲಾರ ಬಳಿ ಹೇಳಿದಾಗ ಅದರಿಂದ ಯಾವುದೇ ರೀತಿಯಲ್ಲೂ ಹಿಗ್ಗದ ಶೈಲಾ ಮೇಡಂ ನಿರ್ಲಿಪ್ತ ಸ್ವರದಲ್ಲಿ ನನ್ನ ವಿದ್ಯಾರ್ಥಿಗಳಿಗೆ ನಾನು ಮ್ಯಾಥಮ್ಯಾಟಿಕ್ಸ್ ಜೊತೆ ಪ್ರಾಮಾಣಿಕತೆಯ ಪಾಠವನ್ನು ಹೇಳಿಕೊಟ್ಟಿದ್ದೆ ಎಂದು ಹೇಳಿ ಸುಮ್ಮನಾದರು. ಇದೊಂದು ಚಿಕ್ಕ ಘಟನೆ ಸಾಕು ಶೈಲಾ ಟೀಚರ್ ಎಂಥವರೆಂದು ಹೇಳಲು.

ಮೇಷ್ಟ್ರು ಎಂಬ ಶಬ್ದ ಕಿವಿಯ ಮೇಲೆ ಬಿದ್ದ ಕೂಡಲೇ ನನ್ನ ಕಣ್ಣೆದುರಿಗೆ ಸುಳಿವ ಹಲವರಲ್ಲಿ ಎಂ.ಸಿ.ಪ್ರಕಾಶ್ ಮೇಷ್ಟ್ರು ಖಂಡಿತವಾಗಿ ಒಬ್ಬರು ಎನ್ನುತ್ತಾರೆ ಎಂ.ಎಸ್. ಆಶಾದೇವಿ. ಹಲವು ವರ್ಷಗಳ ಕಾಲ ಮಯೂರ ಪತ್ರಿಕೆಯಲ್ಲಿ ಅನುವಾದಿತ ಕವಿತೆಗಳ ಬಗ್ಗೆ ಕಾವ್ಯಬಿಂದು ಅಂಕಣದಲ್ಲಿ ಅರ್ಥಪೂರ್ಣವಾದ ವ್ಯಾಖ್ಯಾನ ನೀಡುತ್ತಿದ್ದ ಪ್ರಕಾಶ್ ಆ ಮೂಲಕ ಕಾವ್ಯಾಸಕ್ತರೆಲ್ಲರಿಗೂ ಕವಿತೆಯ ಓದನ್ನು ಕಲಿಸಿದವರು.

ನೀನಾಸಂ ಶಿಬಿರ ನಡೆಯುವಾಗ ಓಹ್ ಮೇಡಂ, ಮೇಡಂ ಎಂಬ ಒಕ್ಕೂರಲ ಧ್ವನಿ ಕೇಳಿ ಬಂದತ್ತ ತಿರುಗಿದರೆ ಅಲ್ಲಿ ತಮ್ಮ ಎಂದಿನ ಚೈತನ್ಯ ಶಾಲಿ ನಗುವಿನೊಂದಿಗೆ ಪೂರ್ಣಿಮಾ ಮೇಡಂ ಯಾವ ಭಿನ್ನಭಾವವೂ ಇಲ್ಲದೆ ಎಲ್ಲರೊಂದಿಗೆ ಬೆರೆತು ಕುಶಲೋಪರಿ ನಡೆಸುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಸಾಗರದ ಎಲ್.ಬಿ. ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿರುವ ಪೂರ್ಣಿಮಾರ ಪಾಠದಷ್ಟೆ ಅವರ ಚೈತನ್ಯಶಾಲಿ ವ್ಯಕ್ತಿತ್ವ ಕೂಡ ಪ್ರಾರಂಭದ ಬ್ಯಾಚ್ನಿಂದ ಹಿಡಿದು ಇಂದಿನ ವಿದ್ಯಾರ್ಥಿಗಳವರೆಗೂ ಎಲ್ಲರನ್ನು ಪ್ರಭಾವಿತಗೊಳಿಸುತ್ತಿದೆ.

ಬದುಕು, ಸಾಹಿತ್ಯ, ವೃತ್ತಿ ಜೀವನ ಎಲ್ಲದರಲ್ಲೂ ಶ್ರದ್ದೆ ಮತ್ತು ಶಿಸ್ತಿಗೆ ವಿಶೇಷ ಮಹತ್ವ ನೀಡುವ ಸುಮಿತ್ರಾ ಮೇಡಂ ವಿದ್ಯಾರ್ಥಿಗಳಲ್ಲೂ ಶ್ರದ್ದೆ ಮತ್ತು ಶಿಸ್ತಿನ ಜೊತೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು ನಿರಂತರವಾಗಿ ಶ್ರಮಿಸುತ್ತಿರುವವರು.

ತನ್ನ ವಿದ್ಯಾರ್ಥಿ ಜೀವನದಲ್ಲಿ ಕನ್ನಡದ ಹಲವು ಶ್ರೇಷ್ಟ ಗುರುಗಳ ಪಾಠ ಕೇಳುವ ಪುಣ್ಯ ಪಡೆದ ಆಶಾದೇವಿ ಮೇಡಂ ಅದೇ ಗುರುಪರಂಪರೆಯ ಮುಂದುವರಿಕೆಯಂತೆ ಗೋಚರವಾಗುತ್ತಾರೆ. ಅಪಾರವಾದ ಓದು, ಖಾಚಿತ್ಯ ಪೂರ್ಣ ದೃಷ್ಟಿಕೋನ, ಸಾಹಿತ್ಯದ ಬಗೆಗೆ ಎಣೆಯಿಲ್ಲದ ಪ್ರೀತಿ ಇವು ಆಶಾದೇವಿಯವರಿಗೆ ತರಗತಿ ಒಳಗೆ ಮತ್ತು ಹೊರಗೆ ನಿರಂತರವಾಗಿ ವಿದ್ಯಾರ್ಥಿಗಳನ್ನು ಸೃಷ್ಟಿಸಿಕೊಡುತ್ತಿದೆ. ಮೇಡಂ ಶಿಷ್ಯರಿಗೆ ಎಷ್ಟು ಪ್ರೀತಿ ಪಾತ್ರರು ಎನ್ನುವುದಕ್ಕೆ ಎರಡು ವರ್ಷದ ಹಿಂದೆ ಬೆಂಗಳೂರಿಗೆ ವರ್ಗಾವಣೆಗೊಂಡು ಬರುವಾಗ ನ್ಯಾಮತಿಯ ವಿದ್ಯಾರ್ಥಿಗಳ ಒದ್ದೆಯಾದ ಕಣ್ಣಂಚು, ಗದ್ಗದವಾದ ಧ್ವನಿಯೇ ಸಾಕ್ಷಿ.

ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಸೂಕ್ಷ್ಮ ಜೀವಿ ಶಾಸ್ತ್ರವನ್ನು ಭೋದಿಸುವ ಡಾ.ಸಿ.ರವೀಂದ್ರನಾಥ್ ಜೊತೆಗೆ ಸೂಕ್ಷ್ಮವಾಗಿ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುತ್ತಿರುವವರು. ತರಗತಿಯಲ್ಲಿ ಸೂಕ್ಷ್ಮ ಜೀವಿ ಶಾಸ್ತ್ರವನ್ನು ಜೆನ್ ಕಥೆಯನ್ನು, ಹಾಯ್ಕು ಕಾವ್ಯವನ್ನು ವಿಶಿಷ್ಟವಾಗಿ ಸಂಯೋಜಿಸಿ ಪಾಠ ಮಾಡುವ ರವೀಂದ್ರನಾಥ್ ಆದ್ದರಿಂದಲೇ ವಿದ್ಯಾರ್ಥಿ ಸಮೂಹದ ನೆಚ್ಚಿನ ಸರ್.

-ಕೆ ಅಕ್ಷತಾ

magicvesselsborder

ಎಲ್ಲಾದರು ಇರು ಎಂತಾದರೂ ಇರು

-ಎಲ್ .ಸಿ. ಸುಮಿತ್ರಾ

scan0039 (1)

ಶಾಮಣ್ಣಮೇಷ್ಟ್ರು-

ಹೀಗೆ ಹೇಳಿದರೆ ಯಾರಪ್ಪಾಇವರು ಅನಿಸಬಹುದು. ನಮ್ಮೂರಿನ ಜನ ಅವರನ್ನು ಹಾಗೇ ಕರೀತಿದ್ದರು. ಈಗ ಕಡಿದಾಳ್ ಶಾಮಣ್ಣ ಅಂದರೆ ತಿಳಿಯ ಬಹುದು. ನನಗೆ ಹೈಸ್ಕೊಲ್ ನಲ್ಲಿ ಎರಡು ವರ್ಷ ಪಾಠ ಹೇಳಿದ ಮೇಷ್ಟ್ರುಗಳಲ್ಲಿ ಇವರು ವಿಶಿಷ್ಟ ವ್ಯಕ್ತಿತ್ವದವರು. ನಾವು ಮೇಷ್ಟ್ರು ಹೇಳಿದ್ದನ್ನು ವೇದವಾಕ್ಯವೆಂದು ತಿಳೀತಿದ್ದ ಕಾಲ ಅದು. ಸಮಾಜ ವಿಜ್ನಾನ ಪಾಠ ಮಾಡುತ್ತಿದ್ದ ಶಾಮಣ್ಣ ನಮ್ಮ ಇತರ ಅಧ್ಯಾಪಕರಿಗಿಂತ ಉಡಿಗೆತೊಡಿಗೆ ಆಚಾರ ವಿಚಾರಗಳಲ್ಲಿ ಭಿನ್ನರಾಗಿದ್ದರು.

ಮೈಸೂರಿನ ಮಾನಸಗಂಗೋತ್ರೀಲಿ ಸಮಾಜಶಾಸ್ತ್ರದ ಎಮ್,ಎ. ಓದಿನ ನಂತರ ಕೆಲವು ಕಾಲ ಪ್ರೆಸ್ ನಡೆಸಿ ಆಮೇಲೆ ಕಡಿದಾಳ್ ಗೆ ಮರಳಿ ನಮ್ಮ ಶಾಲೆಯಲ್ಲಿ ಅಧ್ಯಾಪಕರಾದರು.

ಜುಬ್ಬಾ,ಪೈಜಾಮ ತೊಡುತ್ತಿದ್ದ ಶಾಮಣ್ಣನವರಿಗೆ ಟ್ರಿಮ್ ಮಾಡಿದ ಗಡ್ಡವಿತ್ತು. ಅದು ಆ ಕಾಲಕ್ಕೆ ವಿಶೇಷವಾಗಿತ್ತು. ನಮ್ಮ ಮೇಷ್ಟ್ರುಗಳು ಯಾರೂ ಹಾಡು ಹೇಳುತ್ತಿರಲಿಲ್ಲ .ಆದರೆ ಶಾಮಣ್ಣನವರದು ವರ್ಣರಂಜಿತ ವ್ಯಕ್ತಿತ್ವವಾಗಿತ್ತು. ವಿದ್ಯಾರ್ಥಿಗಳ ನಡುವೆ ಕುಳಿತು ತಲೆ ಕುಣಿಸುತ್ತಾ ‘ಎಲ್ಲಾದರು ಇರು ಎಂತಾದರೂ ಇರು’ ಹಾಡುತ್ತಿದ್ದ ಅವರ ಭಂಗಿ ನೆನಪಿನ ಭಿತ್ತಿಯಲ್ಲಿ ಹಸಿರಾಗಿದೆ. ದೀಪಾವಳಿಯಲ್ಲಿ ವಿದ್ಯಾರ್ಥಿಗಳ ‘ಅಂಟಿಗೆ ಪಂಟಿಗೆ’ ತಂಡ ಕಟ್ಟಿಕೊಂಡು ರಾತ್ರಿಹೊತ್ತು ಮನೆಮನೆಗೆ ದೀಪ ತೆಗೆದುಕೊಂಡು ಹೋಗಿ ಹಾಡು ಹೇಳಿ ಹಣ ಸಂಗ್ರಹಿಸಿ , ಆ ಹಣದಿಂದ ಶಾಲೆಯ ಸುತ್ತ ತಂತಿ ಬೇಲಿ ನಿರ್ಮಿಸಿದರು ಶಾಮಣ್ಣ. ಬಾರಿಸು ಕನ್ನಡ ಡಿಂಡಿಮವ, ಎಲ್ಲಾದರೂ ಇರು ಮುಂತಾದ ಕುವೆಂಪು ಗೀತೆಗಳನ್ನು ವೃಂದ ಗಾನವಾಗಿ ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಕ್ಲಾಸ್ ನಲ್ಲಿ ಸಂಕೋಚದಿಂದ ಮುದುಡಿಕೊಳ್ಳುತ್ತಿದ್ದ ನನಗೆ ವೇದಿಕೆಯ ಮೇಲೆ ಭಾಷಣ ಮಾಡಲು ಕಲಿಸಿದವರು ಅವರೆ.

ತಮ್ಮ ಸಹ್ಯಾದ್ರಿ ಪ್ರಕಾಶನದಿಂದ ಪ್ರಕಟಿಸಿದ ಪುಸ್ತಕಗಳನ್ನು ಅವರು ನಮ್ಮ ತಂದೆಗೆ ತಂದುಕೊಟ್ಟಿದ್ದರು. ತೇಜಸ್ವಿಯವರ ಸ್ವರೂಪ, ಲಂಕೇಶರ ‘ಬಿಚ್ಚು’ಕವನಸಂಗ್ರಹ, ಕಂಬಾರರ ಹೇಳತೇನ ಕೇಳ, ಲೋಹಿಯಾ ವಿಚಾರಗಳ ಅನುವಾದಿತ ಪುಸ್ತಕಗಳು ಹೀಗೆ ನನಗೆ ಓದಲು ಸಿಕ್ಕಿದವು. ಒಂದು ಬಗೆಯಲ್ಲಿ ಆದರ್ಶಗಳನ್ನು ತುಂಬಿಕೊಂಡು ಅವುಗಳನ್ನು ವಿದ್ಯಾರ್ಥಿಗಳಿಗೂ ತಮ್ಮ ಪರಿಸರದ ಜನಗಳಿಗೂ ತಲುಪಿಸಲು ಪ್ರಯತ್ನಿಸುತ್ತಿದ್ದ ಶಾಮಣ್ಣ ಭಿನ್ನ ವಾಗಿಕಾಣುತ್ತಿದ್ದರು. ಅಮೆರಿಕಾದಲ್ಲಿ ಮನಶಾಸ್ತ್ರದ ಉನ್ನತ ಅಧ್ಯಯನ ನಡೆಸಿದ ಅವರ ಬಂಧುವೊಬ್ಬರು ಕಡಿದಾಳ್ ಗೆ ಬಂದಾಗ ಅವರನ್ನು ನಮ್ಮ ಸ್ಕೂಲ್ ಗೆ ಕರೆತಂದು ಅಮೆರಿಕಾದ ಶಾಲೆಗಳು, ಅಲ್ಲಿನ ವಿದ್ಯಾಭ್ಯಾಸ ಕ್ರಮ ಕುರಿತು ಭಾಷಣ, ಸಂವಾದ ಏರ್ಪಡಿಸಿದ್ದರು. ತುಂಬಾ ಉತ್ಸಾಹದಿಂದ ಹೊಸ ವಿಚಾರಗಳನ್ನು ಆ ಪರಿಸರದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದರು.

ಶಿಕ್ಷಕರು ಎಂದರೆ ಕೆಲವು ವಿದ್ಯಾರ್ಥಿಗಳು ಶಿಕ್ಷೆ ಕೊಡಲು ಇರುವವರೆಂದೇ ಭಾವಿಸಿಕೊಂಡವರಿಗೆ ಹಾಗಲ್ಲ ಎಂದು ತೋರಿಸಿಕೊಟ್ಟವರು ಶಾಮಣ್ಣ. ಆಮೇಲೆ ಅವರು ಶಿಕ್ಷಕ ವೃತ್ತಿಯನ್ನು ಬಿಟ್ಟು ಕೃಷಿಕರಾದರು. ತೀವ್ರ ಸಾಮಾಜಿಕ ಕಾಳಜಿ ಹೊಂದಿದ್ದ ಶಾಮಣ್ಣನವರಿಗೆ ನಾಲ್ಕು ಗೋಡೆಗಳ ಒಳಗಿನ ತರಗತಿಗಿಂತ ಹೊರಗಿನ ಜಗತ್ತು ಮುಖ್ಯವೆನಿಸಿರಬೇಕು. ರೈತ ಸಂಘಟನೆಯಲ್ಲಿ ಅವರು ತೊಡಗಿಕೊಂಡರು.

ಈಗ ಅವರು ಭಗವತಿಕೆರೆಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದೇನೆಂದು ಹೇಳಿದರು . ಆ ಮಕ್ಕಳಿಗಾಗಿ ದಶಕಗಳ ಹಿಂದಿನ ತಮ್ಮ ಹಾರ್ಮೊನಿಯಮ್ ರಿಪೇರಿ ಮಾಡಿಸಿರುವುದಾಗಿ ಹೇಳಿದಾಗ ಅವರೊಳಗಿನ ಮೇಷ್ಟ್ರು ಇನ್ನೂ ಜಾಗ್ರುತವಾಗಿರುದು ನನಗೆ ಖಚಿತವಾಯಿತು. ತುಂಬಾ ಸರಳ ಸ್ವಭಾವದ ಶಾಮಣ್ಣ ತಾವು ತೆಗೆದ ಅಪರೂಪದ ಫೊಟೊಗಳ ಪ್ರದರ್ಶನ ಮಾಡಲು ಸ್ಕೂಲು, ಕಾಲೇಜುಗಳಿಗೆ ಆಹ್ವಾನಿಸಿದರೆ ತಾವೇ ಬ್ಯಾಗ್ ಗಳನ್ನು ಹೊತ್ತುಕೊಂಡು ಬಸ್ ನಲ್ಲೇ ಪ್ರಯಾಣಿಸಿ ಬರುತ್ತಾರೆ. ಅವರು ನಿಜವಾದ ಗಾಂಧೀವಾದಿ.

ನಾಲ್ಕೈದು ವರ್ಷಗಳ ಹಿಂದೆ ನನ್ನ ಎರಡು ಪುಸ್ತಕಗಳ ಅನಾವರಣ ಕಾರ್ಯಕ್ರಮವನ್ನು ನಮ್ಮ ಮನೆಯಲ್ಲೇ ಏರ್ಪಡಿಸಿ ನನ್ನ ಅಧ್ಯಾಪಕರು ಕೆಲವರನ್ನು ಕರೆದಿದ್ದೆ. ಆಗ ಪುಸ್ತಕ ಬಿಡುಗಡೆ ಮಾಡಿದವರು ಶಾಮಣ್ಣ. ಬಕುಲದ ದಾರಿಯ ಕವಿತೆಗಳನ್ನು ಅವರು ಆನಂತರ ಶಿವಮೊಗ್ಗೆಯ ಕಾರ್ಯಕ್ರಮವೊಂದರಲ್ಲಿ ವಾಚಿಸಿದರೆಂದು ತಿಳಿಯಿತು.

ಕಾವ್ಯ ಪರಿಮಳದ ಗುರು

-ಎಂ.ಎಸ್.ಆಶಾದೇವಿ

ಇಷ್ಟಕ್ಕೂ ಗುರುಗಳೆಂದರೆ ನಿತ್ಯ ವರ್ತಮಾನ ತಾನೆ. ತಾನು ವಿದ್ಯಾರ್ಥಿಯಾಗಿದ್ದೆ ಎನ್ನುವುದು ನಿಜವಾದ ಗುರುಶಿಷ್ಯರ ಸಂಬಂಧದ ಮಟ್ಟಿಗೆ ಎಂದಿಗೂ ನಿಜವಲ್ಲವಲ್ಲ. ಕಲಿಯುವುದರ ನಿರಂತರತೆಯನ್ನು ಕಲಿಸುವವರೇ ಗುರುಗಳು ತಾನೆ. ಕಾವ್ಯದ ರುಚಿ ಹುಟ್ಟಿಸಿದವರು, ಕಾವ್ಯದ ಮಾಂತ್ರಿಕ ಘಳಿಗೆಗಳನ್ನು ಹಿಡಿದುಕೊಟ್ಟವರು, ಹಲವು ಕ್ಷೇತ್ರಗಳಲ್ಲಿ ಯಾವುದು ನನ್ನದೆಂದು ಗೊಂದಲಿಸಿದಾಗ ಇದೇ ನಿನ್ನದು ಎಂದು ಕಣ್ಣೆದುರಿಗೆ ನಿಲ್ಲಿಸಿದವರು, ಲೋಕಾರ್ಥದಲ್ಲಿ ಕಲಿಸದೇ ಕಲಿಸುತ್ತಿರುವವರು ಇವರಲ್ಲಿ ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ? (ಕೋರಿ ಮೇಡಂ, ಭಾಗ್ಯಲಕ್ಷ್ಮಿ, ಗೀತಾ ಸತ್ಯವತಿ, ಎಂ.ಸಿ. ಪ್ರಕಾಶ್, ಗುರುರಾಜ ಕರ್ಜಗಿ, ಸೌಮಿತ್ರಾ ಚಕ್ರವರ್ತಿ, ಕೆ.ವಿ.ಎನ್, ಕೀ ರಂ, ಲಕ್ಷ್ಮಿನಾರಾಯಣ ಭಟ್ಟ, ಚಿದಾನಂದ ಮೂರ್ತಿ, ಡಿ. ಆರ್. ಎನ್, ಅನಂತಮೂರ್ತಿ, ಟಿ.ಪಿ.ಅಶೋಕ್, ಕೆ.ವಿ.ಸುಬ್ಬಣ್ಣ, ವೈದೇಹಿ… ಎನಿತು ಜೀವಗಳಿಗೆ ಎಷ್ಟು ಋಣಿಯೋ ನಾನು)

ಇಂಥ ನನ್ನ ಪುಣ್ಯ ವಿಶೇಷಗಳಲ್ಲಿ ಒಬ್ಬರ ಬಗೆಗೆ ಒಂದು ಮಾತು ಹೇಳಬಹುದಾದರೆ…

img_6943

ಒಂದು ಒಳ್ಳೆಯ ಪದ್ಯ ಓದಿದ ತಕ್ಷಣ ನನಗೆ ಕಿ.ರಂ ಈ ಪದ್ಯದ ಬಗ್ಗೆ ಏನು ಹೇಳಬಹುದು ಎನ್ನುವ ಪ್ರಶ್ನೆ ಆಯಾಚಿತವಾಗಿ ಬರುತ್ತದೆ. ಮೇಷ್ಟ್ರು ಈ ಪದ್ಯವನ್ನು ಬೇರೆ ತರಹ ನೋಡ್ತಾರೇನೋ ಎನ್ನುವ ಕುತೂಹಲ ಮೂಡುತ್ತದೆ. ಈ ಕುತೂಹಲದ ಜೊತೆಯಲ್ಲೇ ಅವರು ಹೀಗೆ ಓದಬಹುದು ಅನ್ನೋದನ್ನ ನಾನೇ ಹುಡುಕಿ ಕಟ್ಟಬೇಕು ಅನ್ನುವ ಆಸೆಯೂ, ಹಠವೂ ಹುಟ್ಟುತ್ತದೆ. ಕಿ.ರಂ ಅವರ ಶಿಷ್ಯರಿಗೆಲ್ಲ ನಿತ್ಯ ಗುರುವಾಗಿರುವುದು ಹೀಗೆ. ಕೆಟ್ಟ ಪದ್ಯ ಓದಿದಾಗಲೆಲ್ಲ ಕಿ.ರಂ ಹೇಳುವ ಮಾತು ಒಬ್ಬ ಕಾವ್ಯಜೀವಿ ಸಹಜವಾಗಿ ಹೇಳುವಂಥದ್ದು, `ಸರಿ, ಆದರೆ ನನಗೆ ಬೇಕಾಗಿರೋದು ಕಾವ್ಯರೀ… ಕಾವ್ಯದ ಬಗ್ಗೆ ಮಾತಾಡೋಕೆ ಮಾತ್ರ ನಾನು ತಯಾರು… ಸುಮ್ಮನೇ ನನ್ನ ಟೈಮ್ ವೇಸ್ಟ್ ಮಾಡ್ಬೇಡಿ…’

ಎಷ್ಟು ಹೊತ್ತಿಗೋ ಫೋನ್ ಮಾಡಿದಾಗ ಮೇಷ್ಟ್ರು ಮೊದಲ ಪ್ರಶ್ನೆಯಾಗಿ ಏನು ಓದ್ತಾ ಇದ್ದೀಯಾ… ಅಂತ ಕೇಳಿದರೆ ಆವತ್ತು ಅದೃಷ್ಟ ಖುಲಾಯಿಸಿದೆ ಅಂತಲೇ ಅರ್ಥ. ನೆನ್ನೆ ಅಕ್ಕಮಹಾದೇವಿ ಜೊತೆ ವಾಕಿಂಗ್ ಹೋಗಿದ್ದೆ ಅಂತಲೋ, ಕುಮಾರವ್ಯಾಸ ನೆನ್ನೆ ರಾತ್ರಿ ನಮ್ಮ ಮನೆಗೆ ಊಟಕ್ಕೆ ಬಂದಿದ್ದ ಅಂತಲೋ ಶುರು ಮಾಡಿ ಅವರ ಕಾವ್ಯ, ಆ ಕಾವ್ಯದ ಬಗೆಗೆ ಇಲ್ಲಿಯ ತನಕ ಬಂದಿರುವ ವಿಮರ್ಶೆಯ ಸಾದ್ಯಂತ ಓದು… ಈ ಎಲ್ಲವನ್ನೂ ಕಣ್ಣೆದುರಿಗೆ ಇಟ್ಟುಕೊಂಡು … ಆ ಕಾವ್ಯ ತನ್ನೊಳಗೆ ಅಡಗಿಸಿಕೊಂಡಿರುವ ಇನ್ನೊಂದು ಸಾಧ್ಯತೆಯನ್ನು ಜಾದೂಗಾರ ಒಳಗಿನಿಂದ ತೆಗೆದು ತೋರಿಸುವ ಹಾಗೆ ತೆರೆದು ತೋರಿಸುತ್ತಾರೆ. ಕಾವ್ಯದ ಬಗೆಗಿನ ಮುಕ್ಕಾಗದ ಪ್ರೀತಿಯನ್ನು ಪರಿಮಳದ ಹಾಗೆ ಕಿರಂ ಹರಡುವುದು ಹೀಗೆ.

ಯಾಕೋ ಹೊಟ್ಟೆ ಉರಿಸ್ತೀರಿ? ಕಲೀರ್ಯೋ…

-ಶೈಲಾ ಕಟ್ಟೆ

aನಸುಗಪ್ಪು ವರ್ಣದ ಎತ್ತರ ನಿಲುವಿಗೊಪ್ಪುವ ಅಚ್ಚ ಬಿಳುಪಿನ ಅಂಗಿ ಪಂಚೆ, ಹಣೆಯ ಮೇಲೆ ಢಾಳ ವಿಭೂತಿ, ಕನ್ನಡಕದ ಹಿಂದಿನ ಚೂಪು ಕಣ್ಣುಗಳು, ಸದಾ ನಗುತ್ತಿರುವಂತೆ ಕಾಣುವ ಕೊಂಚ ಉಬ್ಬು ಹಲ್ಲಿನ, `ದೊಡ್ಡ ಮಲ್ಲಪ್ಪ ಮಾಸ್ಟರ್’ ಒಂದು ಕೈಯಲ್ಲಿ ಪುಸ್ತಕದ ಹೊರೆ, ಇನ್ನೊಂದು ಕೈಯಲ್ಲಿ ಪಂಚೆ ಚುಂಗು ಹಿಡಿದು ಜರಕಿ ಚಪ್ಪಲಿಯ ಸದ್ದಿನೊಂದಿಗೆ, ಶಾಲಾವರಣದಲ್ಲಿ ನಡೆದು ಬರುತ್ತಿದ್ದರೆ, ಎದುರಾಗುವ ಮಕ್ಕಳು ತಕ್ಷಣ ಪಕ್ಕಕ್ಕೆ ಸರಿದು ವಿನಯದಿಂದ ಕೈ ಜೋಡಿಸಿ ವಂದಿಸುತ್ತಿದ್ದ ರೀತಿಯೇ ಅವರ ವ್ಯಕ್ತಿತ್ವವನ್ನು ಅರ್ಥೈಸುತ್ತಿತ್ತು.

asಹಿಂದಿ ಶಿಕ್ಷಕರಾಗಿದ್ದರೂ ಎಲ್ಲ ವಿಷಯಗಳನ್ನು ಸೈ ಎನ್ನುವಂತೆ ಕಾಳಜಿಯಿಂದ ತಯಾರಾಗಿ ಬಂದು ಕಲಿಸುವ ಸರ್, ಬುದ್ಧಿವಂತರ ಪಾಲಿನ ಗೆಳೆಯ, ಆಲಸಿಗಳನ್ನು, ತರಲೆಗಳನ್ನು ಕಂಡರೆ ಕೆಂಡ ಕಾರುತ್ತಿದ್ದರು. ತಮ್ಮ ಹೊಡೆತ ತಾಳಲಾರದೆ, ಕೈ ಕಾಲುಜ್ಜಿಕೊಳ್ಳುತ್ತಾ ಕುಸು ಕುಸು ಮಾಡುತ್ತಿದ್ದ ಹುಡುಗರನ್ನು ಹೊಡೆದ ಕ್ಷಣ ಮಾತ್ರದಲ್ಲೆ ಹತ್ತಿರ ಕರೆದು ಯಾಕೋ ಅಪ್ಪ! ಹೊಟ್ಟೆ ಉರಿಸ್ತೀರಿ? ಕಲೀರ್ಯೋ. ಎನ್ನುವಾಗ ಅವರ ತುಂಬಿ ಬರುತ್ತಿದ್ದ ಕಣ್ಣಾಲಿಗಳು ಮತ್ತು ಗದ್ಗದಿಸುತ್ತಿದ್ದ ಧ್ವನಿ, ಇಡೀ ತರಗತಿಯನ್ನು ಅವರಿಗೆ ಶರಣಾಗಿಸಿಬಿಡುತ್ತಿತ್ತು. ಕಲಿಯಲೇಬೇಕೆಂಬ ಛಲ ಮೂಡಿಸುತ್ತಿತ್ತು.

ಇಂದೂ ಶಿಸ್ತು ,ಶ್ರದ್ಧೆ ಈ ಪದಗಳೊಂದಿಗೆ ತಕ್ಷಣ ತೇಲಿ ಬರುವ ನೆನಪು 60-70ರ ದಶಕದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಹಳ್ಳಿ ಹಂಚದಕಟ್ಟೆಯಲ್ಲಿ ನನ್ನ ಗುರುಗಳಾಗಿದ್ದ `ದೊಡ್ಡ ಮಲ್ಲಪ್ಪ ಮಾಸ್ಟರ್’ ರವರದು.

ನನ್ನ ವಿದ್ಯಾರ್ಥಿ ಸಮೂಹ ನನಗೆ ದೊಡ್ಡ ಗುರು

ಎಲ್ಲೆಡೆ ಕಾಣುವ ಗುರು

-ಡಾ.ಎಂ.ಸಿ ಪ್ರಕಾಶ್

thoughts-squiggles-2

ನನ್ನ ಮೆಚ್ಚಿನ ಗುರು ಯಾರೆಂದು ಯೋಚಿಸ ಹೊರಟಾಗ ಅನಿಸಿತು, ಯಾರೊಬ್ಬರೂ ಅಲ್ಲ!

ಎಳೆಯ ವಯಸ್ಸಿನಲ್ಲೆ ವಾತ್ಸಲ್ಯ ತೋರಿಸಿದ ಶ್ರೀ ನಾಯಕ್ ಅವರೇ, ಶಿಸ್ತಿನ ಪಾಠದ ಶ್ರೀ ಸಿ.ವೈ ನಾಯಕ್ ಅವರಿರಬಹುದೇ, ಪ್ರೀತಿ ವಿಶ್ವಾಸದ ಶ್ರೀ ಫಾತರ್ಫೇಕರ್ ಆಗಿರಬಹುದೇ, ಸ್ನಾತಕೋತ್ತರದ ಸಮಯದಲ್ಲಿ ಸ್ಪೂರ್ತಿದಾಯಕರಾದ ಡಾ.ಅನಂತಮೂರ್ತಿಯವರೆನ್ನಲೇ, ಅತ್ಯಂತ ಹರಿತ ತರ್ಕದ ಡಾ. ದಾಮೋದರ್ ರಾವ್ ಅವರೇನು? ಅತಿ ಹೆಚ್ಚು ಮೆಚ್ಚಿನವರು, ಅಚ್ಚು ಮೆಚ್ಚಿನವರು ಎಂದು ಒಬ್ಬರನ್ನೇ ಬೆರಳೆತ್ತಿ ತೋರುವುದು ಕಷ್ಟ ಎನ್ನಿಸುತ್ತಿದೆ. ಯಾರ ಜ್ಞಾನವನ್ನಾಗಲಿ, ಯಾರ ವಿಶಿಷ್ಟ ಶೈಲಿಯನ್ನಾಗಲಿ, ಪಾಠದ ರೀತಿಯನ್ನಾಗಲಿ ರುಚಿಸಿಕೊಂಡು ಅನುಭವಿಸುವ ಸ್ವಭಾವದ ನನಗೆ ಎಲ್ಲ ಗುರುಗಳೂ ಒಂದಲ್ಲ ಒಂದು ವಿಧದಲ್ಲಿ ಮೆಚ್ಚಿನವರು.

ಇದಕ್ಕಿಂತ ಹೆಚ್ಚಾಗಿ ದಿನದಿನದ ಬದುಕಿನಲ್ಲಿ ನಾನು ಕಾಣುವ ಪ್ರತಿ ವ್ಯಕ್ತಿ- ಅವರು ವಿದ್ಯಾವಂತರಾಗಿರಲಿ, ಇಲ್ಲದಿರಲಿ ಜಾಣರಾಗಲಿ, ಅಲ್ಲದಿರಲಿ, ದೊಡ್ಡವರೋ, ಸಣ್ಣವರೋ ನನಗೆ ಗುರುವೆಂದೇ ಭಾಸವಾಗಿದೆ, ಏಕೆಂದರೆ, ಪ್ರತಿಯೊಬ್ಬರಲ್ಲಿಯೂ ಕಲಿಯುವುದಿದೆ. ಉದ್ಧಟ ರಾಜಕುಮಾರನೊಬ್ಬನಿಗೆ ಗುರುಗಳು ಪ್ರತಿಯೊಬ್ಬರಿಂದಲೂ ಕಲಿಯುವುದಿದೆ ಎಂದಾಗ ಆತ ಅವರನ್ನು ಕಾರಾಗೃಹಕ್ಕೆ ಕರೆದೊಯ್ದು -ಅಲ್ಲಿಯ ಕುದುರೆ ಕಳ್ಳನಿಂದ, ಬೀಗ ತೆಗೆಯುವುವನಿಂದ ಏನು ಕಲಿಯಲಿ ಎಂದಾಗ, ಯಾವ ಹೊಸ ಕುದುರೆಯನ್ನಾದರೂ ತಕ್ಷಣ ವಶಪಡಿಸಿಕೊಳ್ಳುವ ತಂತ್ರ ಕಲಿ, ಯಾವುದೇ ಬೀಗವಾಗಲಿ ತೆಗೆಯುವ ಕೌಶಲ ಕಲಿ ಎಂದರಂತೆ, ಅತ್ಯಂತ ಕ್ರೂರನಾದ, ಕೊಲೆಗಡುಕನಾದ, ಹತ್ತಾರು ಸ್ತ್ರೀಯರ ಮಾನಭಂಗ ಮಾಡಿದ ದುಷ್ಟನಿಂದ ಏನು ಕಲಿಯಲಿ ಎಂದು ಕೇಳಿದ ರಾಜಕುಮಾರನಿಗೆ, ಗುರುಗಳು ಮನುಷ್ಯ ಏನು ಮಾಡಬಾರದೆಂಬುದನ್ನು ಇವನಿಂದ ಕಲಿ ಎಂದರಂತೆ.

ಹೀಗೆ ನನಗೆ ನೂರಾರು ಗುರುಗಳು ಎಲ್ಲಕ್ಕಿಂತ ಮಿಗಿಲಾಗಿ ಪ್ರತಿನಿತ್ಯ ಪಾಠ ಹೇಳುವ ಪರಿಯನ್ನು, ಬದಲಿಸಿಕೊಳ್ಳಬೇಕಾದುದನ್ನು ತಿಳಿಸುವ, ತಮ್ಮ ಏಕಾಗ್ರತೆಯಿಂದ, ತಮ್ಮ ಚಿತ್ತ ಚಂಚಲತೆಯಿಂದ , ತಮ್ಮ ಜಾಣತನದಷ್ಟೇ ಕಲಿಯಲಾಗದ ದಡ್ಡತನದಿಂದಲೂ ನನ್ನ ಕಲಿಸುವ ಶಕ್ತಿಗೆ ಸವಾಲೆಸೆಯುವ- ನನ್ನ ವಿದ್ಯಾರ್ಥಿ ಸಮೂಹ ನನಗೆ ದೊಡ್ಡ ಗುರು

ಈ ಎಲ್ಲರಿಗೂ – ಗುರುಭ್ಯೋ ನಮಃ

`ಬ’ ಅಕ್ಷರ ಬರಿ

ಒಂದು ಬೆಳಕಿನ ಕಿರಣ

-ಡಾ.ಸಿ.ರವೀಂದ್ರನಾಥ್

slide11-300x225

ನನ್ನನ್ನು ಪ್ರಭಾವಿಸಿದ ಗುರುವಿನ ಬಗ್ಗೆ ಬರೆಯಲು ಹೊರಟಾಗ ನನ್ನ ನೆನಪಿನ ಸುರುಳಿ ಬಿಚ್ಚಿ ಕಣ್ಣ ಮುಂದೆ ನಿಂತದ್ದು ದೇವರೆಡ್ಡಪ್ಪ ಮೇಷ್ಟ್ರ ಚಿತ್ರ. ಅವರು ನನ್ನ ಪ್ರಾಥಮಿಕ ಶಾಲಾ ಗುರುಗಳಾಗಿದ್ದರು. ನಾನಾಗ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ರೋಡಲಬಂಡಾ ಕ್ಯಾಂಪಿನಲ್ಲಿದ್ದೆ. ಅಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೆಯ ತರಗತಿ ಓದುತಿದ್ದೆ, ಒಂದು ದಿನ ನಮಗೆಲ್ಲ ಕನ್ನಡ ಹೇಳಿಕೊಡಲು ಹೊಸ ಮೇಷ್ಟ್ರು ಬರುತ್ತಾರೆ ಎಂಬ ವಿಷಯ ತಿಳಿಯಿತು. ನಮಗೆಲ್ಲ ಕುತೂಹಲ. ಮೇಷ್ಟ್ರು ವಯಸ್ಸಾದವರೋ, ಚಿಕ್ಕವರೋ, ಪ್ಯಾಂಟ್ ಹಾಕುತ್ತಾರೋ ಅಥವಾ ಪಂಚೆ ಉಡುತ್ತಾರೋ ಎಂಬೆಲ್ಲ ಪ್ರಶ್ನೆಗಳು ಮನದಲ್ಲಿ ಮೂಡಿದ್ದವು. ಅವರು ತರಗತಿಗೆ ಬಂದ ಮೊದಲ ದಿನ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.

ಪೂರ್ಣ ತೋಳಿನ ಶರ್ಟ್, ಶುಭ್ರ ಬಿಳಿ ಧೋತರ ತೊಟ್ಟ ಸುಮಾರು ಇಪ್ಪತೈದು ವರ್ಷದ ಯುವಕನೊಬ್ಬ ತರಗತಿಯನ್ನು ಪ್ರವೇಶಿಸಿದಾಗ ಎಲ್ಲರಿಗೂ ಭಯ ಮಿಶ್ರಿತ ಕುತೂಹಲ. ಅವರು ಬಂದವರೇ ತಮ್ಮ ಪರಿಚಯ ಹೇಳಿಕೊಂಡು ಹಾಜರಿ ಪುಸ್ತಕ ಹಿಡಿದು ಮೊದಲ ವಿದ್ಯಾರ್ಥಿಯನ್ನು ಕರೆದು ಅವನ ಕೈಗೆ ಚಾಕ್ ಪೀಸ್ ಕೊಟ್ಟು ಬೋರ್ಡ್ ನ ಮೇಲೆ `ಬ’ ಅಕ್ಷರ ಬರಿ ಎಂದು ಹೇಳಿದಾಗ ಎಲ್ಲರಿಗೂ ಅಚ್ಚರಿ. ಅವನು ಬರೆದಾದ ಮೇಲೆ ಏನೂ ಹೇಳದೆ ಮುಂದಿನ ವಿದ್ಯಾರ್ಥಿಯನ್ನು ಕರೆದು ಅವನಿಗೂ `ಬ’ ಅಕ್ಷರ ಬರೆಯಲು ಹೇಳಿದರು. ಹೀಗೆ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಒಬ್ಬೊಬ್ಬರನ್ನಾಗಿ ಕರೆದು ಎಲ್ಲರಿಂದಲೂ `ಬ’ ಅಕ್ಷರ ಬರೆಸಿದರು. ಎಲ್ಲ ಬರೆದ ನಂತರ ಗಂಭೀರವಾಗಿ ಹೇಳಿದರು. `ಎಲ್ಲರೂ ತಪ್ಪು ಬರೆದಿದ್ದೀರಿ’. ನಾವೆಲ್ಲ ನಾಚಿಕೆಯಿಂದ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ ಏನೂ ಅರ್ಥವಾಗದೆ ಕುಳಿತೆವು.

ಅವರು ಹೇಳಿದರು `ಕನ್ನಡ ನಮ್ಮ ಮಾತೃಭಾಷೆ, ಕನ್ನಡ ವರ್ಣಮಾಲೆಯ ಒಂದೊಂದು ಅಕ್ಷರಕ್ಕೂ ಅದರದೇ ಆದ ಪ್ರಾಮುಖ್ಯತೆ ಹಾಗೂ ಸ್ಥಾನಮಾನಗಳಿವೆ. ಅದನ್ನು ಗೌರವಿಸಿ ಶ್ರದ್ಧೆಯಿಂದ ಕಲಿಯಬೇಕು. ನೀವು ಬರೆದಿರುವುದು `ಓ’. `ಬ’ ಹೀಗೆ ಬರೆಯಬೇಕು ನೀವೆಲ್ಲ ಅಕ್ಷರವನ್ನು ಅರ್ಧಕ್ಕೆ ತಂದು ನಿಲ್ಲಿಸಿದ್ದೀರ. ಪೂರ್ಣ ಮೇಲಿನವರೆಗೆ ಎಳೆದು ಬರೆದಿಲ್ಲ. ಅಂದಿನಿಂದ ಪ್ರತಿದಿನ ನಮಗೆ ಕನ್ನಡ ಕಾಪಿ ಬರೆಹ, ವ್ಯಾಕರಣ, ಶಬ್ದಗಳ ಅರ್ಥ ಇವುಗಳನ್ನು ಆಸಕ್ತಿಯಿಂದ ಹೇಳಿಕೊಡುತ್ತಿದ್ದರು. ಒಂದೂ ತಪ್ಪಿಲ್ಲದೆ ಬರೆಯುವವರಿಗೆ ಚಾಕೋಲೇಟ್ ಕೊಡುತ್ತಿದ್ದರು.

ಹೀಗೆ ನಮ್ಮ ಕನ್ನಡ ಉತ್ತಮಪಡಿಸಿದ ಅವರು ಕೆಲ ಹೊಸ ಆಟಗಳನ್ನು ಹೇಳಿಕೊಟ್ಟರು. ಅದೂ ಚಂದ್ರನ ಬೆಳಕಿನಲ್ಲಿ! ರಾತ್ರಿ 8 ಗಂಟೆಗೆ ನಮ್ಮನ್ನೆಲ್ಲ ಆಟದ ಮೈದಾನಕ್ಕೆ ಕರೆಸಿ ಚಂದ್ರನ ಬೆಳಕಿನಲ್ಲಿ ಕುಸ್ತಿ, ಕಬಡ್ಡಿ ಆಡಿಸುತ್ತಿದ್ದರು. ಅದೊಂದು ಅದ್ಭುತ ಅನುಭವ.

ನಾನು ಹತ್ತನೆಯ ತರಗತಿಗೆ ರಾಯಚೂರಿಗೆ ಬಂದಾಗ ಅವರ ಸಂಪರ್ಕ ಕಡಿದು ಹೋಯಿತು. ಆ ವರ್ಷ ನಾನು ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದಾಗ ನನಗೆ ಮೊದಲು ನೆನಪಾದದ್ದು ದೇವರೆಡ್ಡಪ್ಪ ಮೇಷ್ಟರು. ನಂತರ ಅವರನ್ನು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ. ಅಬ್ಬಾ 33 ವರುಷಗಳೇ ಕಳೆದು ಹೋಗಿವೆ ಅವರನ್ನು ನೋಡಿ ! ಅವರು ಹೇಗಿದ್ದಾರೋ, ಎಲ್ಲಿದ್ದಾರೋ ಒಂದೂ ತಿಳಿಯದು. ಹೋಗಿ ಬರಬೇಕು, ಈ ಕಾಲದ ಹಾದಿಯಲ್ಲಿ ಮತ್ತೊಮ್ಮೆ ಅವರನ್ನು ಕಾಣಬೇಕು…

ಬಂಧುವಾಗಿ ನಮ್ಮ ಬಳಿ..

-ಕೆ.ಎಸ್. ಪೂರ್ಣಿಮಾ

w5

ಹೈಸ್ಕೂಲಿನ ದಿನಗಳು–ತುಂಬ ಉತ್ಸಾಹದ, ವಿಚಿತ್ರ ಸಂಕೋಚಗಳ, ಸಣ್ಣ ಸಣ್ಣ ನಾಚಿಕೆಗಳ ವಯಸ್ಸು. ನಮ್ಮೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ, ಅಲ್ಲಿನ ಎಲ್ಲ ಶಿಕ್ಷಕರು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಪ್ರಭಾವಿಸುತ್ತಾರೆ ಎಂದು ಭಾಸವಾಗುತ್ತಿದ್ದ ಕಾಲ. ಹಾಗಿದ್ದೂ ಕೆಲವರ ಬಗ್ಗೆ ಮೆಚ್ಚುಗೆ, ಕೆಲವರ ಬಗ್ಗೆ ಆಕರ್ಷಣೆ, ಕೆಲವರ ಬಗ್ಗೆ ಭಯ, ಇನ್ನು ಕೆಲವರ ಬಗ್ಗೆ ನಿರಾಸಕ್ತಿ ಈ ಎಲ್ಲವು ಅಪ್ರಯತ್ನವಾಗಿ ಮೂಡಿದ ಭಾವನೆಗಳು.

ಇಂಥ ವಾತಾವರಣದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತಮ್ಮ ಲವಲವಿಕೆಯ ವರ್ತನೆ, ಆಲೋಚನೆಗಳಿಂದಾಗಿ ವಿಶಿಷ್ಟರಾಗಿ ಕಾಣುತ್ತಿದ್ದ ಶಾಂತಾರಾಮ-ಸರ್ವೇ ಸಾಮಾನ್ಯವಾಗಿ -ಎಸ್.ಆರ್.ಎಸ್. ಎಂದೇ ಪರಿಚಿತರಾಗಿದ್ದ ಆ ಮೇಷ್ಟರು ನನಗೆ ಇಂದಿಗೂ ನೆನಪಾಗುತ್ತಾರೆ. ಮೂಲತ: ಅವರು ವಿಜ್ಞಾನ ಶಿಕ್ಷಕರು. ನಮಗೆ ವಿಜ್ಞಾನ ಹಾಗು ಗಣಿತ ಕಲಿಸುತ್ತಿದ್ದವರು. ನನ್ನ ಹಗಲುಗನಸಿನ ಮನಸ್ಸಿನಲ್ಲಿ ಗಣಿತ ಅಷ್ಟಾಗಿ ಕೂರುತ್ತಿರಲಿಲ್ಲ. ಹಾಗಾಗಿ ಅವರ ಕಲಾತ್ಮಕ ಆಲೋಚನೆ ಪ್ರತಿಭೆಗಳ ಬಗ್ಗೆ ತುಂಬ ಸೆಳೆತವಿದ್ದರೂ ಅವರ ಜತೆ ಸಹಜ ಮಾತುಕತೆ ನಡೆಸಲು ಸಹ ನನ್ನ ಗಣಿತಭಯ ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಆದರೆ ಎಸ್.ಆರ್.ಎಸ್ ನಮ್ಮ ಶಾಲೆಯಲ್ಲಿ ಕೇವಲ ಶಿಕ್ಷಕರು ಮಾತ್ರವಾಗಿರದೆ ತಮ್ಮ ಬಹುಮುಖ ವ್ಯಕ್ತಿತ್ವದಿಂದ. ಬಹುಮುಖೀ ಆಸಕ್ತಿಗಳಿಂದ, ಶಿಸ್ತಿನ ವರ್ತನೆಯಿಂದ, ತಮ್ಮ ಪ್ರತಿಭೆಯಿಂದ ಉತ್ತಮ ಸಂವೇದನೆಗಳ ಆದರ್ಶದ ಪ್ರತೀಕದಂತಿದ್ದರು.

ಆ ನಂತರ ಎಷ್ಟೋ ದಶಕಗಳು ಕಳೆದಿವೆ. ಶಾಂತಾರಾಮ ಮೇಷ್ಟ್ರು ಈಗ ನಮ್ಮ ಮನೆಯ ಬಳಿಯೇ ವಾಸವಾಗಿದ್ದಾರೆ. ಆಗಿಗಿಂತ ಬಹಳಷ್ಟು ವಿಸ್ತಾರವಾದ ಇಂದಿನ ಬಾಳ ಸಂದರ್ಭದಲ್ಲಿ ಅವರನ್ನು ಮತ್ತೆ ಮತ್ತೆ ಭೇಟಿ ಮಾಡುತ್ತೇನೆ. ಸಂಸಾರದ್ದೇ ಆಗಿರಲಿ ಸಮಾಜದ್ದೆ ಆಗಿರಲಿ ಅಥವಾ ಅವರ ಇನ್ನೊಂದು ಗಾಢವಾದ, ತೀವ್ರವಾದ ಆಸಕ್ತಿ ವಿಶೇಷ–ಸಂಗೀತವಾಗಿರಲಿ-ಅವುಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತ ಅದರಿಂದಾಗಿ ನನ್ನ ಬುದ್ಧಿ ಮನಸ್ಸು ಹಿಗ್ಗಿವೆ ಅಲ್ಲವೇ ಅಂತ ಆನಂದಪಡುತ್ತೇನೆ. ದಿಢೀರಂತ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ತೊಂದರೆ ಬಂದರೆ, ನ್ಯಾಶನಲ್, ಇಂಟರ್ನ್ಯಾಶನಲ್ ವಿಷಯಗಳ ಮಾಹಿತಿ ಬೇಕಾಗಿದ್ದರೆ ನಾನು ಅವರ ಜತೆ ಚರ್ಚಿಸಿ ನಿರ್ಧರಿಸಲು ಅವರಲ್ಲಿಗೆ ಓಡುತ್ತೇನೆ. ಅತ್ಯಂತ ಕೃತಕೃತ್ಯತೆಯ ಸಂಗತಿ ಎಂದರೆ -ಸಂಗೀತ,ಸಾಹಿತ್ಯ, ರಾಜಕೀಯ, ಸಮಾಜ, ವಿಜ್ಞಾನ, ಆರೋಗ್ಯ,ವಾಸ್ತುಶಿಲ್ಪ—-ಹೀಗೇ ಇನ್ನೂ ಅನೇಕ ಆಸಕ್ತಿಗಳು, ಜ್ಞಾನಗಳು ಮೈಗೂಡಿದಂಥ ಅವರ ವ್ಯಕ್ತಿತ್ವ ನನ್ನ ದೃಷ್ಟಿಯಲ್ಲಿ ಮತ್ತಷ್ಟೂ ಮೇಲೇರಿದೆ. ಅಂಥ ಹೃದಯವಂತ, ಸರಳ, ಜೀವಂತಿಕೆ ತುಂಬಿದ, ತನ್ನ ಸಹಾಯ ಬಯಸಿದವರನ್ನು ಎಂದೂ ಉಪೇಕ್ಷಿಸದ, ಹಲವರ ದೃಷ್ಟಿಯಲ್ಲಿ ವಿಕ್ಷಿಪ್ತವೆನ್ನಿಸುವ ಈ ಜೀನಿಯಸ್-ಎಸ್.ಆರ್.ಎಸ್ ನನಗೆ ಚಿರಗುರುವಾಗಿ, ಬಂಧುವಾಗಿ ನಮ್ಮ ಬಳಿಯಿರುವುದೇ ನನಗೆ ಸಿಗುತ್ತಿರುವ ವಿಶೇಷ ಸಮಾಧಾನ, ಸಂತೋಷ ಹಾಗು ತೃಪ್ತಿ.

ಗುರುದಕ್ಷಿಣೆಯಾಗಿ ಕೇಳುವುದೇನೆಂದರೆ ..

ರಾಧಿಕಾ ಎಮ್. ಜಿ

mgradhikaa@yahoo.com

ಪ್ರಿಯ ವಿದ್ಯಾರ್ಥಿನಿಯರೇ, ಐದು ವರ್ಷದ ನಮ್ಮ ನಿಮ್ಮ ಸಂಬಂಧ ಕೊನೆಗೆ ಬರುತ್ತಿದೆ. ಇಲ್ಲಿಯವರೆಗೆ ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೆವು. ಎಷ್ಟೋ ಬಾರಿ ಕಾಲೇಜಿನ ಪ್ರಾಧ್ಯಾಪಕರು ನಿಮ್ಮನ್ನು ಬಯ್ದಿದ್ದೇವೆ, ನೀವು ಮಾಡುತ್ತಿರುವುದು ತಪ್ಪಿದ್ದಲ್ಲಿ ತಪ್ಪೆಂದು ತೋರಿಸಿದ್ದೇವೆ. ಅದು ನಿಮ್ಮ ಕೋಪಕ್ಕೆ ಕಾರಣವಾಗಿರಲಿಕ್ಕೂ ಸಾಕು. ನಮ್ಮ ಬೆನ್ನ ಹಿಂದೆ ನೀವೆಲ್ಲರೂ ನಮ್ಮನ್ನು ನಿಂದಿಸಿರಲೂಬಹುದು. ಆದರೆ ನಮಗೆ ಅದಕ್ಕೆ ಬೇಸರವಿಲ್ಲ. ಕಾರಣ ಕೋಪದ ಭರದಲ್ಲಿ ವ್ಯಕ್ತಿಯ ಭಾವನೆಗಳು ವ್ಯಕ್ತವಾಗುವುದೇ ಹೀಗೆ.

2008062257750201ನನ್ನ ಪ್ರಕಾರ ಯಾವುದೇ ವ್ಯಕ್ತಿಯನ್ನು ಮೂರು ಮಂದಿ ಮಾತ್ರ ದಂಡಿಸಬಹುದು, ತಿದ್ದಬಹುದು. ಅವರೆಂದರೆ ತಂದೆ, ತಾಯಿ ಮತ್ತು ಗುರುಗಳು. ಗುರುವಾಗಿ ನಾನು ತಿಳಿ ಹೇಳುವುದು ನನ್ನ ನೈತಿಕ ಕರ್ತವ್ಯವೆಂದೇ ತಿಳಿದಿದ್ದೇನೆ. ನಿಮ್ಮ ಜೊತೆಯಿದ್ದು ನನ್ನ ವಿದ್ಯಾರ್ಥಿ ಜೀವನ ಕಣ್ಮುಂದೆ ಬರುತ್ತಿರುತ್ತದೆ. ನಿಮ್ಮೊಡನೆ ಕಳೆದ ಒಂದೊಂದು ಕ್ಷಣವೂ ಅವಿಸ್ಮರಣೀಯ. ಪಾಠ ಮಾಡುವಾಗ ನನಗೆ ಏನೂ ತಿಳಿದಿಲ್ಲವೆಂದೇ ಅಂದುಕೊಂಡು ನಿಮಗೆ ಅರ್ಥವಾಗುವ ರೀತಿಯಲ್ಲಿ ಹೇಳಲು ಸರ್ವ ಪ್ರಯತ್ನವನ್ನೂ ಮಾಡಿದ್ದೇನೆ. ಎಲ್ಲ ವಿದ್ಯಾರ್ಥಿಗಳೊಡನೆಯೂ ನಿಷ್ಪಕ್ಷಪಾತದಿಂದಿರಲು ಆದಷ್ಟೂ ಪ್ರಯತ್ನಿಸಿದ್ದೇನೆ.

ನಮ್ಮ ಹಿಂದೂ ಪದ್ಧತಿಯ ಪ್ರಕಾರ ಶಿಷ್ಯರ ಕಾಲು ಭಾಗದಷ್ಟು ಗಳಿಕೆ ಗುರುಗಳಿಗೆ ಸಲ್ಲಬೇಕಾದ್ದು. ನಾನು ಗುರುದಕ್ಷಿಣೆಯಾಗಿ ಕೇಳುವುದೇನೆಂದರೆ ನೀವು ಎಲ್ಲೇ ಇರಿ, ನಿಮ್ಮ ಜೀವನದಲ್ಲಿ ಎಂದೆಂದಿಗೂ ಪ್ರಾಮಾಣಿಕರಾಗಿರಿ. ಹಣ ಸಂಪಾದಿಸಲು ಅನೇಕ ಮಾರ್ಗಗಳಿವೆ. ಆದರೆ ಹಣ ಜೀವನದಲ್ಲಿ ಎಲ್ಲವೂ ಅಲ್ಲ. ಮಾನಸಿಕ ನೆಮ್ಮದಿ ನಿಸ್ಪೃಹ ಸೇವೆಯಿಂದ ಮಾತ್ರ ಸಾಧ್ಯ. ಹಣ ಕ್ಷಣಿಕ. ಕಾಲಾನಂತರ ಪ್ರಾಮಾಣಿಕತೆಯೇ ನೆಮ್ಮದಿಗೆ ಹಾದಿ.

ಯಾವುದೇ ಕೆಟ್ಟದ್ದಕ್ಕಾಗಲಿ ಒಳ್ಳೆಯದ್ದಕ್ಕಾಗಲಿ ಒಂದು ಕೊನೆಯಿದ್ದೇ ಇರುತ್ತದೆ. ಆ ದಿನ ಇಂದು ಬಂದಿದೆ ಅನಿಸುತ್ತಿದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ.

ಹತ್ತು ಹಲವು ವರ್ಷಗಳ ಹಿಂದೆ ನಮ್ಮ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ, ಆತ್ಮೀಯ ಪ್ರಾಧ್ಯಾಪಕಿ, ಸುಧಾ ಮೂರ್ತಿಯವರ ಈ ಮಾತನ್ನು ಕೇಳಿ ನಮ್ಮಲ್ಲನೇಕರ ಕಣ್ಣಲ್ಲಿ ನೀರಾಡಿತ್ತು. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಏಕಾಕಿ ವಿದ್ಯಾರ್ಥಿನಿಯೊಂದಿಗೆ ಕಂಪ್ಯೂಟರ್ ವಿಭಾಗವನ್ನು ಆರಂಬಿಸಿ, ಮುಂದೆ ಸಾವಿರಾರು ವಿದ್ಯಾರ್ಥಿನಿಯರ ಉತ್ತಮ ಭವಿಷ್ಯಕ್ಕೆ ಹಾದಿ ಮಾಡಿಕೊಟ್ಟವರು ಸುಧಾ ಮೂರ್ತಿ. ಸತತವಾಗಿ ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ಉತ್ತಮ ಹೆಸರನ್ನು ಗಳಿಸಿರುವ ವಿಭಾಗದ ಹಿಂದಿರುವುದು ಸುಧಾ ಮೂರ್ತಿಯವರ ಹಲವು ವರುಷಗಳ ಪರಿಶ್ರಮ.

ಇನ್ನಷ್ಟು

Previous Older Entries

%d bloggers like this: