ಶೀರ್ಷಿಕೆ ನೋಡಿ ‘ಇದೇನಪ್ಪ ತೇಜಸ್ವಿಗೂ 20:20 ಕ್ರಿಕೆಟ್ಟಿಗೂ ಏನು ಸಂಬಂಧ’ ಎಂದು ತಲೆಕೆರೆದುಕೊಳ್ಳಬೇಡಿ. ಇಂದು ನಮ್ಮ ತೇಜಸ್ವಿಯವರ 72ನೇ ಹುಟ್ಟಿದ ಹಬ್ಬ. ನನ್ನ ಬ್ಲಾಗಿನಲ್ಲಿ ಅವರ ಬಗ್ಗೆ ಏನಾದರೂ ಬರೆಯಬೇಕೆಂಬ ಆಸೆ ನನಗೆ. ಆದರೆ ಏನು ಬರೆಯುವುದು? ತೇಜಸ್ವಿ ಮತ್ತು ಅವರ ಸಾಹಿತ್ಯದ ನಿತ್ಯವಿದ್ಯಾರ್ಥಿಯಾದ ನನಗೆ ಅವರ ಬಗ್ಗೆ ಬರೆಯುವುದೆಂದರೆ ಭಾರೀ ಸಂಭ್ರಮ ಜೊತೆಗೇ ಭಯವೂ ಕೂಡಾ! ಬರೆಯುವುದಕ್ಕಿಂತ ಅವರ ಸಾಹಿತ್ಯವನ್ನು ಓದುತ್ತಾ ಮನಸ್ಸಿನಲ್ಲಿಯೇ ಅನುಸಂಧಾನ ಮಾಡಿ ಆನಂದಿಸುವುದೇ ನನಗೆ ಹೆಚ್ಚು ಇಷ್ಟ.
ಅವರ ಪುಸ್ತಕಗಳನ್ನು ಓದುವಾಗ ನನಗೆ ‘ಪಂಚಿಂಗ್ ಲೈನ್’ ಎಂದು ಕಂಡು ಬಂದ ವಾಕ್ಯಗಳನ್ನು ಅಡಿಗೆರೆ ಎಳೆಯುವುದು, ಬರೆದಿಟ್ಟುಕೊಳ್ಳುವುದು ಮಾಡಬೇಕೆಂದುಕೊಳ್ಳುತ್ತಿದ್ದೆ. ಆದರೆ ಓದುವಾಗ ಆ ವಿಷಯವೇ ಮರೆತು ಅವರ ಕೃತಿಗಳೊಳಗೆ ನಾನು ಇಳಿದುಬಿಡುತ್ತಿದ್ದೆ. ಇಲ್ಲ ಬಲವಂತವಾಗಿ ಅಡಿಗೆರೆ ಎಳೆಯಲು ಹೊರಟರೆ, ಓದುವುದೇ ನಿಂತುಹೋಗುತ್ತಿತ್ತು; ಜೊತೆಗೆ ಎಲ್ಲವೂ ಪಂಚಿಂಗ್ ಲೈನ್‌ಗಳಂತೆಯೇ ಕಾಣುತ್ತಿದ್ದವು! ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಮರುಓದಿಗೆ ಒಳಪಡಿಸುವಾಗ ಈ ರೀತಿಯ ಚಡಪಡಿಕೆ ಕಡಿಮೆಯಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದ್ದರಿಂದ ಇತ್ತೀಚಿಗೆ ನಾನು ಮತ್ತೆ ಓದಿದ ‘ಸಹಜಕೃಷಿ’ ಪುಸ್ತಕದಲ್ಲಿ ಈ ಅಡಿಗೆರೆ ಎಳೆಯುವ ಕಾರ್ಯದಲ್ಲಿ ಸ್ವಲ್ಪಮಟ್ಟಿನ ಯಶಸ್ಸು ನನ್ನದಾಗಿದೆ. ಹಾಗೆ ಅಡಿಗೆರೆ ಎಳೆದ ಸಾಲುಗಳಲ್ಲಿ ಇಪ್ಪತ್ತನ್ನು ಆಯ್ದು ಇಂದು ನಿಮ್ಮೆದುರಿಗೆ ಇಡುತ್ತಿದ್ದೇನೆ. ಅದಕ್ಕೇ ಈ T20=ತೇಜಸ್ವಿ ಟ್ವೆಂಟಿ!
ಚಿತ್ರ: ಡಿ ಜಿ ಮಲ್ಲಿಕಾರ್ಜುನ್
ಸಹಜಕೃಷಿಯನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ಸಹಜಕೃಷಿಯನ್ನು ಓದಿದವರೂ ಮತ್ತೊಮ್ಮೆ ಸಹಜಕೃಷಿಯನ್ನು ಓದುವಂತಾದರೆ ಡಬಲ್ ಖುಷಿ ನನ್ನದು.
ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.
ಭಾರತದ ಆಧುನೀಕರಣದ ಕತೆಯೆಂದರೆ ಒಬ್ಬರ ಅನ್ನ ಇನ್ನೊಬ್ಬರು ಕಿತ್ತುಕೊಂಡ ಕತೆ.
ದಿನವೂ ನೂರಾರು ವಸ್ತುಗಳನ್ನು ಉತ್ಪಾದಿಸಿ ಜಾಹಿರಾತುಗಳ ಮುಖಾಂತರ ಪ್ರಚೋದಿಸುವ ಆಧುನಿಕ ಕೈಗಾರಿಕೆಗಳಿಗೆ ಸರಳ ಜೀವನ ಸೋಂಕು ರೋಗದಂತೆ ಭಯಾನಕವಾಗಿ ಕಾಣುತ್ತದೆ.
ಪೃಥ್ವಿಯ ಮೇಲೆ ಮಾನವ ಉದಿಸುವುದಕ್ಕೂ ಮೊದಲೇ ರೂಪುಗೊಂಡ ಈ ಗಿಡಮರಗಳಿಗೆ ಮಾನವನ ಕೃತಕ ಕೃಷಿಯ ಅಗತ್ಯವಿಲ್ಲ.
ಭೂಮಿ ಮಿಲಿಯಗಟ್ಟಲೆ ವರ್ಷಗಳಿಂದ ಜೀವಸೃಷ್ಟಿ ಮಾಡುತ್ತಾ ಬಂದ ಅದಮ್ಯ ಚೈತನ್ಯದ ಅಕ್ಷಯ ಪಾತ್ರೆ.
ಇತ್ತೀಚಿನ ಟಿಪ್ಪಣಿಗಳು