ಫ್ರೀಡ್ಮನ್ ಫ್ರೀ ಟಾಕ್

ಕೆ ಕರಿಸ್ವಾಮಿ ವಿಜಯ ಕರ್ನಾಟಕದ ಹಿರಿಯ ಪತ್ರಕರ್ತರು. ಈ ಹಿಂದೆ ಇದೆ ಪತ್ರಿಕೆಯ ಗಂಗಾವತಿ ಆವೃತ್ತಿಯ ಮುಖ್ಯಸ್ಥರಾಗಿದ್ದವರು.

ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿಓದುಬಜಾರ್

baraka-6

-ಕರಿಸ್ವಾಮಿ.ಕೆ

ಬೆಂಗಳೂರಿನ ತಾಜ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಹೆಸರಾಂತ ಪತ್ರಕರ್ತ ಹಾಗೂ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ `ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಪುಸ್ತಕದ ಕರ್ತೃ ಥಾಮಸ್ ಲಾರೆನ್ ಫ್ರೀಡ್ಮನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಸುಮಾರು ಮೂರು ನೂರು ಆಹ್ವಾನಿತರ ಸಮ್ಮುಖದಲ್ಲಿ ಜಗತ್ತಿನ ಐಟಿ ಐಕಾನ್ ಗಳಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮತ್ತು ಫ್ರೀಡ್ಮನ್ ಮುಖಾಮುಖಿಯಾಗಿದ್ದರು.

`ಇಮ್ಯಾಜಿನಿಂಗ್ ಇಂಡಿಯಾ ಇನ್ ಎ ಹಾಟ್, ಫ್ಲ್ಯಾಟ್, ಅರೌಂಡ್ ಕ್ರೌಡೆಡ್ ವರ್ಲ್ಡ್’ ಎಂಬ ವೇದಿಕೆ ಮೇಲೆ ಇವರನ್ನು ಮುಖಾಮುಖಿ ಮಾಡಿಸಿದ್ದು ಪೆಂಗ್ವಿನ್ ಮತ್ತು ಎನ್ ಡಿ ಟಿ ವಿ . ಇದು ಪೆಂಗ್ವಿನ್ ಇತ್ತೀಚೆಗೆ ಪ್ರಕಟಿಸಿರುವ ನಿಲೇಕಣಿ ಅವರ ಇಮ್ಯಾಜಿನಿಂಗ್ ಇಂಡಿಯಾ’ ಫ್ರೀಡ್ಮನ್ ಅವರ ಇತ್ತೀಚಿನ ಕೃತಿ. `ಹಾಟ್, ಫ್ಲ್ಯಾಟ್, ಅರೌಂಡ್ ಕ್ರೌಡೆಡ್ ವರ್ಲ್ಡ್’ ಪುಸ್ತಕಗಳನ್ನು ಪ್ರಮೋಟ್ ಮಾಡಲು ಏರ್ಪಡಿಸಿದ್ದ ಕಾರ್ಯಕ್ರಮವಾದರೂ ಅಲ್ಲಿ ಅನೇಕ ಗಂಭೀರ ಸಮಸ್ಯೆಗಳ ಬಗ್ಗೆ ಇಬ್ಬರೂ ಒಂದೂವರೆ ಗಂಟೆ ನಿರರ್ಗಳವಾಗಿ ಅಭಿಪ್ರಾಯ ಹಂಚಿಕೊಂಡರು. ಪ್ರೇಕ್ಷಕರ ಪ್ರಶ್ನೆಗಳಿಗೂ ಉತ್ತರಿಸಿದರು. ಎಂದಿನಂತೆ ಎನ್ ಡಿ ಟಿ ವಿ ಯ ದೊಡ್ಡ ಗಂಟಲಿನ ಬರ್ಖಾ ದತ್ ಈ ಇಬ್ಬರು ಐಕಾನ್ ಗಳನ್ನೂ ಮತ್ತು ಪ್ರೇಕ್ಷಕರನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅದೊಂದು ಅಪರೂಪದ ಸಂಜೆ.

ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪತ್ರಕರ್ತನಾಗಿ ಮಾಡಿದ ಕೆಲಸಕ್ಕೆ ಮೂರು ಬಾರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಪಡೆದಿರುವ, ಥಾಮಸ್ ಫ್ರೀಡ್ಮನ್ ಮತ್ತು ನಂದನ್ ನಿಲೇಕಣಿ ಅವರ ಜತೆಗಿನ ಸಂವಾದದಲ್ಲಿ ಜಾಗತಿಕ ತಾಪಮಾನ ಏರಿಕೆ, ಹಣಕಾಸು ಹಿಂಜರಿತ, ಜಾಗತೀಕರಣ, ಎನರ್ಜಿ ಟೆಕ್ನಾಲಜಿ, ಪ್ರಜಾಪ್ರಭುತ್ವ, ಕಾನೂನು, ಸ್ಲಂ ಡಾಗ್ ಮಿಲೆನಿಯರ್, ಭಯೋತ್ಪಾದನೆ ಮತ್ತು ಯುದ್ಧ ಮುಂತಾದ ಅನೇಕ ವಿಷಯಗಳು ಬಂದವು. ಇಬ್ಬರೂ ಒಟ್ಟಾಗಿ ಒತ್ತಿ ಒತ್ತಿ ಜಪಿಸಿದ ಮಂತ್ರ `ಆಶಾವಾದ’. ಇದೊಂದೇ ಆರ್ಥಿಕ ಹಿಂಜರಿತದಿಂದ ಪ್ರಪಂಚವೇ ತತ್ತರಿಸಿರುವಾಗ ಎಲ್ಲರೂ ಗುರಿಮುಟ್ಟಲು ಇರುವ ಏಕೈಕ ಮಾರ್ಗ ಎಂದು ಹೇಳಿದ್ದು ಆ ಅರ್ಥಪೂರ್ಣ ಮಾತುಕತೆಯ ಒಟ್ಟು ಸಾರಾಂಶದಂತಿತ್ತು.

ಲಘುಹಾಸ್ಯದ ಧಾಟಿಯಲ್ಲೇ ಬರ್ಖಾ ಮತ್ತು ಪ್ರೇಕ್ಷಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಫ್ರೀಡ್ಮನ್ಎಲ್ಲರ ಮನ ಗೆದ್ದರು. ನಮ್ಮೆಲ್ಲಾ ತಂತ್ರಜ್ಞಾನ ಪರಿಸರದ ಜೀವವೈವಿಧ್ಯ(Ecosystem)  ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಬೇಕು. ಆರ್ಥಿಕ ಸ್ಥಿರತೆಗೆ ಇಂಧನ ತಂತ್ರಜ್ಞಾನ(energy technology) ಹೊಸ ಮಂತ್ರವಾಗಬೇಕು. ಆರ್ಥಿಕ ಪಾರುಗಾಣಿಕೆಯಷ್ಟೇ ಮುಖ್ಯವಾಗಿ ತಕ್ಷಣ ಗಮನಹರಿಸಬೇಕಿರುವುದು ಇಂಧನ ತಂತ್ರಜ್ಞಾನ. ಅದು ಬೆಳೆಯದೇ ಹೋದರೆ ಇನ್ನೊಂದು ಕೈಗಾರಿಕಾ ಕ್ರಾಂತಿ ಸಾಧ್ಯವಿಲ್ಲ. ಅರಬ್ ರಾಷ್ಟ್ರಗಳು ಆಂತರಿಕ ಸ್ವಾತಂತ್ರ್ಯದ ಕೊರತೆ, ಮಹಿಳೆಯರ ಬಲವರ್ಧನೆ ಆಧುನಿಕ ಶಿಕ್ಷಣಗಳ ಬಗ್ಗೆ ತಕ್ಷಣ ಗಮನ ನೀಡಬೇಕು. ಎಲ್ಲರೂ ಸ್ವತಂತ್ರವಾಗಿ ನಡೆದಾಡಲು, ಮಾತನಾಡಲು ಅಲ್ಲಿರುವ ಉಸಿರುಗಟ್ಟುವ ವಾತಾವರಣವನ್ನು ತಿಳಿಗೊಳಿಸದೆ ಜಗತ್ತಿನೊಟ್ಟಿಗೆ ಶಾಂತಿಯುತ ಸಂಬಂಧ ಏರ್ಪಡಿಸಿಕೊಳ್ಳಲು ಸಾಧ್ಯವಿಲ್ಲ. ತನ್ನ ಸ್ಥಳೀಯ ಶಕ್ತಿಯನ್ನು ಜಾಗತೀಕರಣಗೊಳಿಸುವ ಮೂಲಕ ನಾಯಕತ್ವ ವಹಿಸಿಕೊಳ್ಳುವ ಶಕ್ತಿ ಬೆಂಗಳೂರಿಗಿದೆ. ಅಮೆರಿಕ ಇಂಥದೇ ಅವಕಾಶವನ್ನು ಉಪಯೋಗಿಸಿಕೊಂಡು ಬೆಳೆದಿದೆ. ಇಂತಹ ಅವಕಾಶ ಬಂದರೆ ಬೆಂಗಳೂರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಮೆರಿಕ ಕೂಡ ತಲೆತಲಾಂತರದಿಂದ ನಿರ್ಲಕ್ಷಿಸಿರುವ ಪರಿಸರ, ಇಂಧನ, ವಲಸೆ, ವೃದ್ಧಾಪ್ಯ ಪಿಂಚಣಿ ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿರುವುದು ತುರ್ತು. ಸ್ಲಂ ಡಾಗ್ ಮಿಲೆನಿಯರ್ ಚಿತ್ರವನ್ನು ಕೇವಲ ಕಲೆಯಾಗಿ ಮಾತ್ರ ನೋಡಬೇಕು. ಭಾರತದ ಸ್ವಾತಂತ್ರ್ಯ, ಆತ್ಮವಿಶ್ವಾಸಗಳನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು ಫ್ರೀಡ್ಮನ್.

ತಮ್ಮ ಹೆಸರಾಂತ ಪುಸ್ತಕ `ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಗೆ ಆ ಹೆಸರು ಇಡಲು ನಿಲೇಕಣಿ ಕಾರಣ ಎಂದ ಫ್ರೀಡ್ಮನ್, ನಂದನ್ ಅವರನ್ನು ಸಂದರ್ಶಿಸಿದಾಗ ಅವರು ಹೇಳಿದ `ದಿ ಪ್ಲೇಯಿಂಗ್ ಫೀಲ್ಡ್ ಈಸ್ ಬೀಯಿಂಗ್ ಲೆವೆಲ್ಡ್’ ಎಂಬ ಉಕ್ತಿಯೇ ಅಂತಿಮವಾಗಿ `ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಎಂಬ ಹೆಸರಿನ ಉಗಮಕ್ಕೆ ಕಾರಣವಾಯಿತು ಎಂದು ವಿವರಿಸಿದರು. ಪ್ರಶ್ನೆಗಳಿಗೆ ಚುಟುಕಾಗಿ ಮತ್ತು ಲಘು ಧಾಟಿಯಲ್ಲಿ ಉತ್ತರಿಸಲು ನಂದನ್ ಕೂಡಾ ಹಿಂದೆ ಬೀಳಲಿಲ್ಲ. ಸತ್ಯಂನ ಹಗರಣದ ಮೂಲ `ರಿಯಲ್ ಎಸ್ಟೇಟ್’ ಎಂಬ ಚಟಾಕಿ ಹಾರಿಸಿದ ನಿಲೇಕಣಿ, ಇಂಥ ಹಗರಣಗಳು ಭಾರತದ ಐಟಿ ಉದ್ಯಮ ತನ್ನ ಬದ್ಧತೆ ಮತ್ತು ಪಾರದರ್ಶಕತೆಯನ್ನು ಪುನಾ ನಿರೂಪಿಸಬೇಕಾದ ಸ್ಥಿತಿಗೆ ದೂಡಿದೆ. ಹಗರಣ ಭಾರತಕ್ಕೆ ಕಪ್ಪು ಚುಕ್ಕೆಯಾದರೂ ಅದು ವಿಶ್ವಾಸಾರ್ಹತೆಗೆ ದೊಡ್ಡ ಹಾನಿ ಮಾಡಲಾರದು. ಆದರೆ ಇನ್ನು 30 ವರ್ಷಗಳನಂತರ ಭಾರತಕ್ಕೆ ಸಿಗುವ ಮಾನವಶಕ್ತಿಯ (Human capital) ಲಾಭ ಬೇರೆ ಯಾವುದೇ ದೇಶಕ್ಕೆ ಸಿಗಲು ಸಾಧ್ಯವಿಲ್ಲ. ಆಗ ದೇಶದ ಯುವಜನರೇ ಬಹುಸಂಖ್ಯಾತರಾಗಿರುತ್ತಾರೆ. ಇದನ್ನೇ demographic dividend ಎಂದು ಕರೆದರು ನಿಲೇಕಣಿ. ಒಂದು ದೇಶದ ಚರಿತ್ರೆಯಲ್ಲಿ ಒಮ್ಮೆ ಮಾತ್ರ ಬರುವ ಸುವರ್ಣ ಅವಕಾಶ ಇದು. ಭಾರತದಲ್ಲಿ ಹುಟ್ಟುವ ಮಕ್ಕಳ ಅನುಪಾತ ಕ್ರಮೇಣ ಕಡಿಮೆಯಾಗುತ್ತಿದ್ದು ಹಿರಿಯರ ಸಂಖ್ಯೆಯೂ ಕುಗ್ಗಲಿದೆ ಆಗ ದೇಶದ ಸಮಗ್ರ ಬೆಳವಣಿಗೆ ಭರದಿಂದ ಸಾಗುತ್ತದೆ. ಹಗರಣಗಳಲ್ಲಿ ಭಾರತವೇನೂ ಏಕಸ್ವಾಮ್ಯತೆ ಸಾಧಿಸಿಲ್ಲ ಏಕೆಂದರೆ ಅಮೆರಿಕದಲ್ಲೂ ಹಗರಣಗಳಿವೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಒಂದು ಹಗರಣದ ಆರೋಪಿಯನ್ನು ತಿಂಗಳುಗಳೇ ಕಳೆದರೂ ಬಂಧಿಸಿಲ್ಲ. ಆದರೆ ಭಾರತದಲ್ಲಿ ಒಂದು ದೊಡ್ಡ ಸಂಸ್ಥೆಯ ಮುಖ್ಯಸ್ಥನನ್ನು ಹಗರಣ ಹೊರಬಿದ್ದ ಮೂರು ದಿನಗಳಲ್ಲಿ ಬಂಧಿಸಲಾಯಿತು. ಇದು ಭಾರತ ಹೊಂದಿರುವ ನ್ಯಾಯ ವ್ಯವಸ್ಥೆಯ ಸಂಕೇತ. ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ ಎಂದರು.

ಭಾರತದ ಪ್ರತಿ ಮನುಷ್ಯ ಎರಡು ಟನ್ ಕಾರ್ಬನ್ ಅನ್ನು ವಾತಾವರಣಕ್ಕೆ ಸೇರಿಸುತ್ತಿದ್ದರೆ, ಅದೇ ಅಮೆರಿಕದಲ್ಲಿ ಪ್ರತಿಯೊಬ್ಬನೂ 20 ಟನ್ ಸೇರಿಸುತ್ತಿದ್ದಾನೆ. ಆದರೂ ಭಾರತ ಕಾರ್ಬನ್ ನಿಯಂತ್ರಣದ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ಭಾರತ ಅವಕಾಶಗಳ ಬಾಂಬ್ ಮೇಲೆ ಕುಳಿತಿದೆ ಆದರೆ ಅದಕ್ಕೆ ಇಚ್ಛಾಶಕ್ತಿ ಇರುವ ನಾಯಕತ್ವದ ಕೊರತೆ ಮತ್ತು ರಾಜಕೀಯ ಕ್ಷೋಭೆ ದೊಡ್ಡ ತೊಡಕುಗಳಾಗಿವೆ. ಭಾರತ ಇತರ ಆರ್ಥಿಕ ಮೂಲಗಳ ಕಡೆಯೂ ಗಮನಹರಿಸಬೇಕೆಂಬ ಪಾಠವನ್ನು ಈ ಹಿಂಜರಿತದಿಂದ ಕಲಿಯಬೇಕು ಹಾಗೆಯೇ ಇತರ ಮೂಲಸೌಕರ್ಯಗಳ ಸುಧಾರಣೆಗೆ ತುರ್ತಾಗಿ ಗಮನ ಕೊಡಬೇಕು.

ಸ್ಲಂ ಡಾಗ್ ಮಿಲೆನಿಯರ್ ನಲ್ಲಿ ಭಾರತವನ್ನು ಚಿತ್ರಿಸಿರುವ ಕ್ರಮ ಸರಿಯೇ ಎಂಬ ಪ್ರಶ್ನೆಗೆ ಅದರಿಂದ ನಮ್ಮ ಆತ್ಮವಿಶ್ವಾಸವನ್ನು ಕುಂದಿಸಿಕೊಳ್ಳಬೇಕಾಗಿಲ್ಲ. ಅದನ್ನು ಚಿತ್ರವಾಗಿಯಷ್ಟೇ ನೋಡಬೇಕು ಏಕೆಂದರೆ ಆ ಸಿನಿಮಾ ಇಡೀ ಭಾರತದ ಚಿತ್ರಣ ನೀಡುವುದಿಲ್ಲ. ಆ ಚಿತ್ರದಲ್ಲಿ ಚಿತ್ರಿಸಿರುವುದಕ್ಕಿಂತ ಭಾರತ ಹೆಚ್ಚು ವೈವಿಧ್ಯಮಯ ಮತ್ತು ಸಂಕೀರ್ಣವಾಗಿಯೂ ಇದೆ ಎಂದರು ನಿಲೇಕಣಿ.

ಕಾರ್ಯಕ್ರಮದ ನಂತರ, ತಾವು ಕೊಂಡ ಪುಸ್ತಕದಲ್ಲಿ ಅವರಿಬ್ಬರ ಹಸ್ತಾಕ್ಷರ ಪಡೆಯಲು ಪುಸ್ತಕ ಪ್ರೇಮಿಗಳು ಎರಡು ಉದ್ದದ ಸಾಲುಗಳಲ್ಲಿ ನಿಂತಿದ್ದರು. ನನ್ನ ಸರದಿಯಲ್ಲಿ ಫ್ರೀಡ್ಮನ್ ಅವರಿಗೆ ವಿಜಿಟಿಂಗ್ ನೀಡಿ ಪರಿಚಯಿಸಿಕೊಂಡೆ. ಮುಗುಳ್ನಕ್ಕು, ಹಾಯ್ ನೈಸ್ ಮೀಟಿಂಗ್ ಯೂ ಅಂದರು. ದೊಡ್ಡ ಅಂಕಣಕಾರ,ಲೇಖಕ, ಪತ್ರಕರ್ತನ ಜತೆ ಏನು ಮಾತನಾಡಬೇಕೆಂದು ತಕ್ಷಣಕ್ಕೆ ಹೊಳೆಯಲಿಲ್ಲ. ಪುಸ್ತಕದಲ್ಲಿ ಸುಮ್ಮನೆ ಸಹಿ ಹಾಕಿಕೊಡುತ್ತಾರೆ ಎಂದು ಎಣಿಸಿದ್ದೆ. ಎಲ್ಲರೊಂದಿಗೂ ಮಾತನಾಡುತ್ತಿದ್ದುದಷ್ಟೇ ಅಲ್ಲದೆ ಅವರು ಹೇಳಿದ ವಿಷಯಗಳನ್ನು ಅವರವರ ವಿಜಿಟಿಂಗ್ ಕಾರ್ಡ್ ನಲ್ಲಿ ದಾಖಲಿಸಿಕೊಳ್ಳುತ್ತಿದ್ದುದು ಕುತೂಹಲಕಾರಿಯಾಗಿತ್ತು. ಜಾಗವಿಲ್ಲದ ವಿಜಿಟಿಂಗ್ ಕಾರ್ಡ್ ಗಳ ಮೂಲೆಮೂಲೆಗಳಲ್ಲೂ ಬರೆದುಕೊಳ್ಳುತ್ತಿದ್ದರು.

ನ್ಯೂಯಾರ್ಕ್ ಟೈಮ್ಸ್ ನ ನಿಮ್ಮ ಅಂಕಣವನ್ನು ತಪ್ಪದೆ ಓದುತ್ತೇನೆ ಅಂದೆ. ವೆರಿಮಚ್ ಅಪ್ರಿಷಿಯೇಟೆಡ್ ಅಂದರು. ಸೋ.., ಎಂದು ಮಾತು ಮುಂದುವರಿಸುವಂತೆ ಸೂಚಿಸಿದರು. ಹಣಕಾಸು ಹಿಂಜರಿತದ ಸಮಯದಲ್ಲಿ ಬೇಲೌಟ್(ಪಾರುಗಾಣಿಕೆ) ಬಗ್ಗೆ ನೀವು ತಳೆದಿದ್ದ ನಿಲುವು ನನಗೆ ತುಂಬ ಇಷ್ಟವಾಯಿತು ಎಂದೆ. ಹೇಗೆ ಎಂಬಂತೆ ನೋಡಿದರು. ಉತ್ತಮ ಶಕ್ತಿಯುತ ಸೋಲಾರ್ ಕಾರುಗಳನ್ನು ಸಂಶೋಧಿಸಲು ಹಣ ವಿನಿಯೋಗಿಸುವ ಬದಲು ಔಟ್ಡೇಟೆಡ್ ಆಗುತ್ತಿರುವ ಕಾರುಗಳನ್ನು ತಯಾರಿಸುವ ಕಂಪನಿಗಳಿಗೆ ಹಣದ ನೆರವು (ಪಾರುಗಾಣಿಕೆ)ನೀಡುವುದು ಡಿವಿಡಿಗಳು ಔಟ್ಡೇಟೆಡ್ ಆಗುವಾಗ ಕ್ಯಾಸೆಟ್ ತಯಾರಿಕೆಗೆ ಹಣ ಕೊಟ್ಟಂತೆ ಎಂಬ ನಿಮ್ಮ ಅಭಿಪ್ರಾಯದ ಹಿಂದಿನ ಲಾಜಿಕ್ ತುಂಬಾ ಚನ್ನಾಗಿದೆ ಎಂದು ಹೇಳಿದೆ.

ಥ್ಯಾಂಕ್ಯು, ಥ್ಯಾಂಕ್ಯು ವೆರಿಮಚ್ ಅಂದು ನನ್ನ ವಿಜಿಟಿಂಗ್ ಕಾರ್ಡ್ ಮೇಲೆ ಏನನ್ನೋ ಗೀಚಿಕೊಂಡರು. ಗಂಭೀರವಾಗಿ ಮಾತನಾಡುತ್ತಲೇ ಆಟೋಗ್ರಾಫ್ ಹಾಕಿಕೊಟ್ಟು ಇನ್ನೊಬ್ಬರನ್ನು ಸ್ವಾಗತಿಸುವಂತೆ ಆ ಕಡೆ ನಗೆ ಬೀರಿದರು. 

 

Kariswamy_K@yahoo.com

ಅಲ್ಲಿ ದೂಳು ಕೇವಲ ಹಾದಿಯಲ್ಲಿ ಮಾತ್ರ ಇರಲಿಲ್ಲ…

-ಅಮರೇಶ ನುಡಗೋಣಿ

 

kt4ಚಿತ್ರ: ಸೃಜನ್

 

ಎಚ್ಚರವಾದಾಗ ಬೆಳಿಗ್ಗೆ ಆರು ಗಂಟೆ, ರೈಲಿನಲ್ಲಿ ಗದ್ದಲ ಇರಲಿಲ್ಲ. ಕಿಡಕಿ ಮೂಲಕ ನೋಡುತ್ತಿದ್ದಂತೆ ನನ್ನ ಮನಸ್ಸು ಮುದುಡಿತು. ಮುಂಗಾರಿನ ಬಳೆ ಬಂದ ಮೇಲೆ ಭೂಮಿ ಖಾಲಿಖಾಲಿ! ಮಳೆಗೆ ಬೆಳೆಯುವ ನಾಡಿನ ಆ ಪ್ರದೇಶ ಬರೀ ಮೈಲೆ ಅನ್ನ ನೀರಿಲ್ಲದಂತೆ ಮಲಗಿತ್ತು. ನಡುನಡುವೆ ಬರುವ ನಿಲ್ದಾಣಗಳಲ್ಲೂ ಜನ ಉತ್ಸಾಹದಿಂದೇನೂ ಏರಿ ಇಳಿಯುವುದು ಕಾಣಲಿಲ್ಲ. ಶಾಲೆಗೆ ಹೋಗುವ ಮಕ್ಕಳು ಮಾತ್ರ ಉಮೇದಿನಿಂದ ಇದ್ದದ್ದು ಕಂಡಿತು. ನಾನು, ರಾಜಶೇಖರ ರೈಲಿನಿಂದ ಇಳಿದಾಗ ಸ್ಟೇಷನ್ನಿನಲ್ಲಿ ಜನ ಅಷ್ಟೇನೂ ಇರಲಿಲ್ಲ. ನಮಗಾಗಿ ನಮ್ಮ ಕ್ಲಾಸ್ಮೇಟ್ ಒಬ್ಬರು ಕಾಯುತ್ತಾ ನಿಂತಿದ್ದರು ಎಂ.ಎ.ನಲ್ಲಿ ನಾನು ಆತ ಒಂದೇ ಕಡೆ ಕುಳಿತು ಪಾಠ ಕೇಳಿದ್ದೆವು. ವಿಚಿತ್ರವೆಂದರೆ ಈಗ ಬೆಟ್ಟಿಯಾಗುತ್ತಿದ್ದುದು 20ವರ್ಷಗಳ ನಂತರ. ನಡುವೆ ಕಂಡದ್ದು, ಮಾತಾಡಿದ್ದು ಇಲ್ಲ.

ರೈಲು ನಿಲ್ದಾಣದಿಂದ ಹೊರಗೆ ಬಂದಾಗ ಊರಿನ ಜನ ವಿಚಿತ್ರ ಕುತೂಹಲದಿಂದ ಒಂದೇ ವಿಷಯ ಮಾತಾಡಿಕೊಳ್ಳುತ್ತಿದ್ದರು. ಮುಂಜಾನೆಯ ಸಮಯದಲ್ಲಿ ಅಂದು ಬಜಾರದ ಉದ್ದಕ್ಕೂ ಜನ. ದಾಳಿಗೆ ಮುನ್ನ ಆವರಿಸುವ ಭೀತಿಯನ್ನು ತುಂಬಿಕೊಂಡು ಗುಂಪುಗುಂಪಾಗಿ ಬೆಂಕಿಯ ಮೇಲೆ ನಿಂತವರಂತೆ ಚಡಪಡಿಸುತ್ತಿದ್ದರು.

ನನಗೆ ಈ ಊರಿನ ಓಣಿ, ಬಜಾರಗಳಲ್ಲಿ ನಡೆಯುತ್ತಿದ್ದರೆ ನುಣುಪಾದ ಶಹಾಬಾದ್, ತಾಂಡೂರ್, ಸೇಡಂ ವರಸೆಗಳು (ತೆಳುವಾದ ನುಣುಪಾದ ಬಂಡೆಗಳು) ಕಣ್ಣಿಗೆ ಹೊಡೆಯುತ್ತಿದ್ದವು. ಹಂಪೆಯ ಬಂಡೆ, ಕಲ್ಲುಗಳನ್ನು ನೋಡಿದ ನನಗೆ ನೆಲದಲ್ಲಿ ಸಿಗುವ ಪದರು ಪದರು ಹಾಸುಕಲ್ಲುಗಳನ್ನು ನೋಡುವುದೇ ಹಬ್ಬವಾಯಿತು. ಊರ ಮುಕ್ಕಾಲು ಪಾಲು ಮನೆಗಳು ಈ ಪರಸೆಗಳಿಂದ ಮನೆಗಳೇ, ಚರಂಡಿಗಳಿಲ್ಲ. ಇದ್ದರೂ ಸುಮ್ಮನೆ ಬಿದ್ದಿದ್ದವು. ಓಣಿಯಲ್ಲಿ ನಡೆದರೆ ಯಾವುದೋ ಪುರಾತನ ಕಾಲದ ಊರುಗಳಲ್ಲಿ ನಡೆದ ಅನುಭವ. ಸಿಮೆಂಟ್ ಉದ್ದಿಮೆಯಿಂದ ಈ ಊರಿಗೆ ಯಾವ ಲಾಭವಾದಂತೆ ಕಾಣಲಿಲ್ಲ. ಓಣಿಗಳಲ್ಲಿ ಸಿಮೆಂಟಿನ ದಾರಿಗಳು ಅವರವರ ಮನೆಯ ಮುಂದೆ ಸಿಮೆಂಟಿನ ದಾರಿಗಳ ಮೇಲೆ ಬಟ್ಟೆ ಒಗೆಯುವುದು, ಕಟ್ಟಿಗೆ ಒಣ ಹಾಕುವುದು, ಕಾಳುಕಡಿಗಳನ್ನು ಒಣಗಲು ಹಾಕಿರುವುದು ಕಂಡಿತು.

ಮಕ್ಕಳು ಮನೆ ಮುಂದಿನ ಸಿಮೆಂಟಿನ ದಾರಿಯಲ್ಲೇ ಮಂಡಿಯೂರಿಕೊಂಡು ಓದುವುದು, ಬರೆಯುವುದು, ಆಡುವುದು ನಡೆದಿತ್ತು. ಗೆಳೆಯನ ಮನೆ ಹೊಕ್ಕಾಗ ಎಂಟುಗಂಟೆ. ಅವರು ಉಪನ್ಯಾಸಕರು ಮನೆ ಅಂದರೆ ಉದ್ದಕ್ಕೆ ಮೂರು ಕೊಠಡಿಗಳು, ದೊಡ್ಡದಾದ ಅಡಿಗೆ ಮನೆಯಲ್ಲೇ ಬಚ್ಚಲು. ಮನೆಯೊಡತಿ ಒಲೆ ಮುಂದೆ ಕುಂತು ಅಡಿಗೆ ಮಾಡುತ್ತಿದ್ದಳು. ಅಲ್ಲೇ ಮಕ್ಕಳು ಹೋಂ ವರ್ಕ್ ಮಾಡುತ್ತಿದ್ದರು. ಎಲ್ಲವೂ ಅಡಿಗೇ ಮನೆಯಲ್ಲೇ. ಬಚ್ಚಲ ಎತ್ತರ ಮೂರು ಅಡಿ. ಅಲ್ಲಿ ಸ್ನಾನ ಮಾಡಲು ತೊಡಗಿದೆ. ಮನೆಯೊಡತಿ ಖಾಸಗಿ ಶಾಲೆಯಲ್ಲಿ ಮೂರಂಕಿ ದಾಟದ ಸಂಬಳಕ್ಕೆ ದುಡಿಯುವ ಶಿಕ್ಷಕಿ.

‘ನಿಮ್ಮ ಪಾಠ ಬಸಯ್ಯ ಮತ್ತು ಜೇನುಗೂಡು ನಾನೇ ಓದಿಸ್ತೀನಿ, ಅಣ್ಣೋರೆ ‘ ಅಂದಳು. ತಣ್ಣಗೆ ನಿಂತು ‘ಹೌದೇನಮ್ಮ?’ ಅಂದೆ. ‘ಪಾರ್ಗೋಳು ಪಾಠ ಕೇಳಿ ಅಳ್ತಾವ್ರೀ! ಮತ್ತೆ ಮತ್ತೆ ಅದೇ ಪಾಠ ಮಾಡ್ರೀ, ಟೀಚರ್ ಅಂತ ಗಂಟು ಬೀಳ್ತಾವ್ರೀ’ ಅಂದಳು. ನನಗೆ ಮಾತಾಡಲು ಮುಜುಗುರವಾಯ್ತು. ಅದೇ ಹೊತ್ತಿಗೆ ಆಕೆಯ ದೊಡ್ಡ ಮಗಳು ಓಡಿ ಬಂದು. ‘ಅವ್ವಾ, ಬಸಯ್ಯ ಮತ್ತು ಜೇನುಗೂಡು ಪಾಠ ಬರೆದೋರು ಇವರೇ ಅಲ್ಲೇನು?’ ಅಂತ ನಿಂತಳು. ‘ಹೂಂನೇ’ ಅಂದಳು ಖುಷಿಯಿಂದ.

ಅಲ್ಲಿಂದ ರಾವೂರು ಎಂಬ ಹಳ್ಳಿಗೆ ಹೊರಟಾಗ ಸಂಜೆಯ ಮೂರುಗಂಟೆ. ತಾಲ್ಲೂಕು ಕೇಂದ್ರದ ಬಜಾರದಲ್ಲಿ ಹೊರಟಾಗ ಇಡೀ ಊರೇ ಬಜಾರದಲ್ಲಿತ್ತು. ಬಜಾರದ ರಸ್ತೆಯ ಅಗಲೀಕರಣ ನಡೆದಿತ್ತು. ಪಾನ್ಬೀಡಾ ಅಂಗಡಿಗಳನ್ನು ಯಂತ್ರ ಎತ್ತಿ ಎತ್ತಿ ಲಾರಿಯಲ್ಲಿ ಇಡುತ್ತಿತ್ತು. ಅದರ ಮಾಲೀಕ ಕುಟುಂಬ ವರ್ಗ ನಿಂತು ತಮ್ಮ ಜೀವವನ್ನೇ ಅಲ್ಲಿಟ್ಟು ಅದಕ್ಕೊದಗಿದ ಸ್ಥಿತಿಯನ್ನು ದುಖಃದಿಂದ ನೋಡಿ ಅನುಭವಿಸುತ್ತಿದ್ದರು. ಕೆಡವಲಾದ ಅಂಗಡಿ, ಹೋಟೆಲ್ ಗಳ ಅಳಿದುಳಿದ ಸಾಮಾನುಗಳನ್ನು ಅದರದರ ಒಡೆಯರು ಸಂಗ್ರಹಿಸುತ್ತಾ ಸಾಗಿಸುತ್ತಾ ಪರದಾಡುತ್ತಿದ್ದರು.

ಬೆಳಗಿನ ಹೊತ್ತು ಆ ದಾಳಿಯ ಬಗ್ಗೆ ಜನ ಚಿಂತೆಗೀಡಾಗಿದ್ದರು. ಈಗ ದಾಳಿಗೆ ಸಿಕ್ಕು ಏದುಸಿರು ಬಿಡುತ್ತಿದ್ದರು. ಆಟೋಗಳು ಇಲ್ಲ. ಬಜಾರವೇ ಬಂದು ವಿದ್ಯುತ್ ಇಲ್ಲ. ನಾನು ನಿಂತು ನೋಡುವುದರಲ್ಲೇ ತಲ್ಲೀನನಾಗಿದ್ದೆ. ಕ್ರೇನ್ ಎಂಬ ಯಂತ್ರ ಒಂದು ಪಾನ್ಬೀಡಾ ಡಬ್ಬಿ ಅಂಗಡಿಯನ್ನು ಎತ್ತಿ ಲಾರಿಗೆ ಹಾಕುವ ಸಿದ್ದತೆಯಲ್ಲಿತ್ತು. ‘ನದಾಫ್ ಕಾ ದುಕಾನ್’ ಅಂತ ಅಲ್ಲಿದ್ದ ಗುಂಪು ಕೂಗುತ್ತಿತ್ತು. ‘ಆ ಮಾರವಾಡಿ ದುಖಾನ್ ನೋಡ್ರೀ ಮುಸುಡಿ ಒಡಕಂಡಿದೆ’ ಅಂತ ಕೂಗುತ್ತಾ ಖುಷಿಯಲ್ಲಿದ್ದ ಗುಂಪು ಕಂಡಿತು. ಊರು ಅಲ್ಲೋಲ ಕಲ್ಲೋಲ.

ತಾಲ್ಲೂಕಿನ ರಾವೂರಿಗೆ ಬಹಳ ಎಂದರೆ ಮೂವತ್ತು ಕಿಲೋಮೀಟರ್ ದೂರ ಇಲ್ಲ. ಚಿತ್ತಾಪೂರದಿಂದ ರಾವೂರಿಗೆ ಎಂಟು ಕಿಲೋಮೀಟರ್. ಚಿತ್ತಾಪುರಕ್ಕೆ ಬರುವುದರಲ್ಲೇ ನಾನು ಸುಸ್ತು. ಒಂದು ಜೀಪು ಹತ್ತಿದೆವು. ಹತ್ತು ಜನ ಕೂಡುವ ಜೀಪಿನಲ್ಲಿ 22 ಜನ ಕುಳಿತ್ತಿದ್ದರು. ಬೇಡವೆಂದರೂ ಜನ ಏರಿಬಿಡುತ್ತಿದ್ದರು.

ಆ ರಸ್ತೆಯನ್ನು ನೋಡಿದರೆ ಅದು ಒಮ್ಮೆಯೂ ರಿಪೇರಿ ಕಂಡಿಲ್ಲ. ಮನುಷ್ಯನಿಗೇ ಅದರ ಮೇಲೆ ನಡೆಯಲು ಬರುವುದಿಲ್ಲ; ಜೀಪು ಆ ರಸ್ತೆ ಮೇಲೆ ಹೇಗೆ ಹೋಗುತ್ತದೆ ಎಂದು ನನ್ನ ಆತಂಕ. ಅದೇ ತಾನೇ ನಡೆಯಲು ಕಲಿಯುತ್ತಿದ್ದ ಮಗುವಿನಂತೆ ಜೀಪು ಹೊರಟಿತ್ತು. ನಡುನಡುವೆ ಇಳಿವವರು, ಏರುವವರು. ಈ ಪ್ರಯಾಣದ ಬಗ್ಗೆ ಜನ ಹೇಗೆ ಯೋಚಿಸುತ್ತಿರಬಹುದು ಅಂತ ಗಮನಿಸಿದೆ. ಹೆಂಗಸರು, ಗಂಡಸರು ಅವರವರ ಚಿಂತೆಗಳಲ್ಲೇ ಹರಟೆ ಹೊಡೆಯುತ್ತಿದ್ದರು. ಒಂದು ಕನ್ಯೆ ನೋಡಿ ಬಂದವರ ಗುಂಪು ಜೀಪಿನಲ್ಲಿತ್ತು. ಆ ಕನ್ಯೆಯನ್ನು ಹೆಂಗಸರು, ಗಂಡಸರು ವರ್ಣಿಸುತ್ತಿದ್ದರಲ್ಲ, ಅದನ್ನು ಕೇಳುತ್ತಿದ್ದ ನನಗೆ ರೋಮಾಂಚನವಾಯಿತು! ಧರ್ಮಸಿಂಗ್, ಖರ್ಗೆ ಹಾಗೂ ಚಿತ್ತಾಪುರದ ಶಾಸಕನನ್ನು ಬಯ್ಯುತ್ತ ಕುಳಿತಿದ್ದವರ ನಡುವೆ ನನ್ನನ್ನು ಆ ಕನ್ಯೆಯ ವರ್ಣನೆ ಸೆಳೆದಿತ್ತು.

‘ಆಕೆ ಕುಡಿದ ನೀರು ಹೊಟ್ಟೆಯಲ್ಲಿ ಕಾಣ್ತದೆ’ ಅಂತ ಒಬ್ಬರು. ‘ಬೆಳದಿಂಗಳಿಗೆ ಬಾಡುತ್ತಾಳೆ’ ಅಂತ ಇನ್ನೂಬ್ಬರು! ದಾರಿಯುದ್ದಕ್ಕೂ ಶಹಬಾದ್ ಪರಸೆಗಳ ರಾಶಿ. ಗಣಿಗಳು, ಪಾಲೇಶ್ ಮಾಡುವ ಫ್ಯಾಕ್ಟರಿಗಳು. ವೇಸ್ಟ್ ಪೀಸುಗಳ ರಾಶಿ ರಾಶಿ ಅಂಗೈ ಅಗಲದ, ಗೇಣು ಉದ್ದದ ಪರಸೆಗಳು ನನ್ನನ್ನು ಮರುಳು ಮಾಡಿದವು. 8 ಕಿಲೋಮೀಟರ್ ಸಾಗುವುದಕ್ಕೆ ಒಂದೂವರೆ ತಾಸು ಸಮಯ. ರಾವೂರಿಗೆ ಇಳಿದಾಗ ಧೂಳೇ ಧೂಳು! ಅಲ್ಲಿ ಇರುವುದಕ್ಕೇ ಜನ ಸಾಧ್ಯವಿಲ್ಲ ಆದರೆ ಜನ ತಣ್ಣಗೆ ಇದ್ದರು. ಆ ರಾವೂರಿನ ತುಂಬ ಕಲ್ಲುಗಳ ಗಣಿಗಳು, ಸಿಮೆಂಟ್ ಫ್ಯಾಕ್ಟರಿಗಳು, ಪದರಿನ ಹಾಸು ಬಂಡೆಗಳನ್ನು ಪಾಲೀಸ್ ಮಾಡುವ, ಟೈಲ್ಸ್ ಗಳ ಮಾದರಿಯಲ್ಲಿ ಸಿದ್ಧ ಮಾಡುವ ಫ್ಯಾಕ್ಟರಿಗಳು. ಊರ ಜನರನ್ನು ವಿಚಾರಿಸಿದರೆ ಅವುಗಳ ಸರಿಯಾದ ಮಾಹಿತಿ ಅಥವಾ ಅವುಗಳ ಉದ್ದಿಮೆ, ವ್ಯಾಪಾರಗಳ ಬಗ್ಗೆ ಅರಿವು ಇರಲಿಲ್ಲ.

ಧೂಳು ತಡೆಯದೆ ಮನೆ ಸೇರಿದೆವು. ಶಾಹಾಬಾದಿ ಪರಸೆಗಳಿಂದ ಕಟ್ಟಿದ ಮನೆಗಳವು. ಆದುನಿಕ ತಂತ್ರಜ್ಞಾನ ಬಳಸದೇ ಕಟ್ಟಿದ ದೇಶೀ ಜ್ಞಾನ ಪರಂಪರೆಯಿಂದ ಸೃಷ್ಟಿಯಾದ ಮನೆಗಳನ್ನು ಮೂಕನಾಗಿ ನೋಡುತ್ತಾ ಬೆರಗಾದೆ. ರಾತ್ರಿ ನನ್ನ ವಿದ್ಯಾರ್ಥಿನಿಯ ಗಂಡನ ಮನೆಯಲ್ಲಿರುವುದು ಅನಿವಾರ್ಯವಾಗಿತ್ತು. ಸಿಮೆಂಟ್ ಫ್ಯಾಕ್ಟರಿಯಲ್ಲಿ ಏಳೆಂಟು ವರ್ಷ ದುಡಿದು, ಅದು ಮುಚ್ಚಿದ್ದರಿಂದ ಎಂ.ಎ. ಪಿ.ಹೆಚ್.ಡಿ ಮಾಡಿಕೊಂಡಿರುವ ಹೆಂಡತಿಗೆ ಕೆಲಸ ಸಿಗುತ್ತದೆಂದು 15 ವರ್ಷಗಳಿಂದ ದಾರಿ ಕಾಯುತ್ತಿದ್ದ ಆತ. ರಾತ್ರಿ ಮನೆಯಲ್ಲಿ ಊಟವಿಲ್ಲ. ಆ ಊರಲ್ಲಿ ಯಾವ ಖಾನಾವಳಿಯಿಂದ ಊಟ ತಂದು ತಿನ್ನುವುದು?

ರಾತ್ರಿ ಆ ಮನೆಯಲ್ಲಿ ಕುಂತು ಸುತ್ತಲೂ ನೋಡಿದೆ. ನಿಜವಾಗಿಯೂ ಭಯ ಬಂತು. ವೋಲ್ಟೇಜ್ ಕಡಿಮೆ, ಬೆಳಕು ಮಂದ, ಮುಂಬಾಗಿಲು ದಾಟಿ ಹೊರಬಂದು ಕಟ್ಟೆಗೆ ಕುಂತೆ. ಓಣಿಯಲ್ಲಿ ಜನರೇ ಇಲ್ಲ. ಮನೆಗಳಲ್ಲಿ ಜನಗಳು ಇದ್ದಾರೆಂಬ ಸುಳಿವು ಕಿವಿಗೊಟ್ಟು ಕೇಳಿದರೆ ಮಾತ್ರ ಸಿಗುತ್ತಿತ್ತು. ದೊಡ್ಡ ದೊಡ್ಡ ಮನೆಗಳ ಬಾಗಿಲು ಬಿಟ್ಟರೆ ಕಿಟಕಿಗಳನ್ನು ಹುಡುಕಿಯೇ ಪತ್ತೆ ಹಚ್ಚಬೇಕು. ಪುರಾತನ ಕಾಲದ ಊರುಗಳು. ಅಲ್ಲಿ ಕೂಡಲೂ ಭಯವಾಯ್ತು. ಎದ್ದು ಆತಂಕದಿಂದ ಸುತ್ತಲೂ ನೋಡಿದೆ. ಓಣಿಗಳು, ಕತ್ತಲ ಸಂದಿಗಳು. ದೇವರೇ ಗತಿ ಅಂದುಕೊಂಡೆ. ಊಟ ತಂದಾಗಲೇ ಮತ್ತದೇ ಗೆಳೆಯರೆಂಬ ಮನುಷ್ಯನ ಸಂಪರ್ಕ ಬಂದದ್ದು.

ಸ್ನೇಹಿತನ ಮನೆಯಲ್ಲಿ ಟಾಯ್ಲೆಟ್ ಇಲ್ಲ. ನೀರೂ ಇಲ್ಲ. ಅಡಿಗೆ ಮನೆಯಲ್ಲಿ ಗ್ಯಾಸ್ ಇಲ್ಲ. ನನ್ನ ವಿದ್ಯಾರ್ಥಿನಿ ಅಲ್ಲಿ ಜೀವನ ಮಾಡುತ್ತಿದ್ದದು ಕಂಡು ನನಗೆ ದುಃಖವಾಯಿತು. ಆಕೆಯ ಗಂಡನನ್ನು ದೈರ್ಯವಾಗಿ ಕೇಳಿದೆ- ‘ನೀವು ಈ ಮನೆಯಲ್ಲಿ ಹೇಗೆ ಇರುತ್ತೀರಿ’ ಅಂತ. ಆತ ಬ್ರಾಹ್ಮಣ. 55 ಎಕರೆ ಭೂಮಿ ಇರುವ ಭೂಮಾಲೀಕ. ಒಕ್ಕಲುತನದಿಂದ ದಿವಾಳಿ ಎದ್ದು, ಒಕ್ಕಲುತನದ ಸಹವಾಸ ಬೇಡವೆಂದು ದೂರ ಉಳಿದಿದ್ದ. ದುಡಿಯಲು ಸಾದ್ಯವಾಗದೆ, ಆಳುಗಳ ಮೇಲೆ, ದನಕರುಗಳ ಮೇಲೆ ಒಕ್ಕಲುತನ ಮಾಡಲು ಸಾದ್ಯವಿಲ್ಲವೆಂದು ಬೇಸತ್ತ, ಹೆಂಡತಿ ದುಡಿಯುವ 2500ರ ಸಂಬಳದಲ್ಲಿ ಆಕೆಯ ಜತೆಗಿದ್ದು ಬದುಕುತ್ತಿದ್ದ. ಮನೆ ಹೊಲ ದಿಂದ ಕಾಳುಕಡಿ ಒಯ್ದು ಜೀವನ ನಡೆಸುತ್ತಿದ್ದ ಆತ, ಆತನ ಹೆಂಡತಿ. ಅವರ ಜೀವನವನ್ನು ಕಣ್ಣಾರೆ ನೋಡಿ ಬೇಸರವಾಗತೊಡಗಿತು.

ಫಿಡೆಲ್ ಎಂಬ ಮಾವಿನ ವಾಟೆ

my-cuba-book.jpgಫಿಡೆಲ್ ಕ್ಯಾಸ್ಟ್ರೋ ಕುರಿತ ಗುಜ್ಜಾರ್ ರೇಖಾ ಚಿತ್ರವನ್ನು ಮೆಚ್ಚಿ ಹಲವರು ಪತ್ರ ಬರೆದಿದ್ದಾರೆ. ಆಷ್ಟೇ ಅಲ್ಲದೆ ಕ್ಯಾಸ್ಟ್ರೋ ಕುರಿತು ಇನ್ನಷ್ಟು ಮಾಹಿತಿಯನ್ನೂ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ ಎನ್ ಮೋಹನ್ ಅವರ ‘ನನ್ನೊಳಗಿನ ಹಾಡು ಕ್ಯೂಬಾ’ದಿಂದ ಫಿಡೆಲ್ ಅವರ ಮನ ಮುಟ್ಟುವ ಮಾತುಗಳನ್ನು ನೀಡುತ್ತಿದ್ದೇವೆ. ಪುಸ್ತಕದ ಮುನ್ನುಡಿಯಲ್ಲಿ ಮೋಹನ್ ಬರೆದ ಸಾಲುಗಳೂ ಇಲ್ಲಿವೆ.

 

far7-g.jpgಮೋಡ ಇದೆ ಎಂದ ಮಾತ್ರಕ್ಕೆ ಆಕಾಶದಲ್ಲಿ ಸೂರ್ಯನಿಲ್ಲ ಎಂದು ಅರ್ಥವೇನು? ಮೋಡ ಹನಿಯೊಡೆದು ನೆಲಕ್ಕುದುರಿದರೆ ಅಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸೂರ್ಯನಿದ್ದಾನೆ.

***

fidelx-large.jpgಹಸಿದು ಸಾಯುವಂತೆ ಮಾಡಿದರು, ಹಂಚಿ ತಿನ್ನುವುದನ್ನು ಕಲಿತೆವು. ರೋಗಗಳಿಂದ ನರಳಿ ಸಾಯುವಂತೆ ಮಾಡಿದರು. ಹಸಿರು ಎಲೆಗಳಿಂದ ಜೀವ ಉಳಿಸಿಕೊಂಡೆವು. ನಮ್ಮ ದನಿಗಳನ್ನು ಕುಗ್ಗಿಸಲು ಯತ್ನಿಸಿದರು, ಅವು ಮರುಧ್ವನಿಗಳಾದವು ನಿಮ್ಮ ಎದೆಗಳಲ್ಲಿ.

***

 

616b856fbce072020c191055be0153a0-grande.jpgಪ್ರತಿಯೊಂದು ಗ್ರಾಮ್ ಹಾಲಿಗಾಗಿ, ಪ್ರತಿಯೊಂದು ಔಷಧಿಯ ಬಾಟಲಿಗಾಗಿ, ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಇಲ್ಲವಾಗುತ್ತಿರುವ ಕಾಪಿ ಪುಸ್ತಕಕ್ಕಾಗಿ, ದಿಗ್ಭಂಧನದ ವಿರುದ್ಧ ಘೋಷಣೆ ಮೊಳಗಿಸಿದ ಪ್ರತಿಯೊಂದು ದನಿಗಾಗಿ, ದೇಶದ ವಿರುದ್ಧ ನಡೆಯುತ್ತಿರುವ ಪ್ರತೀ ಅಪಪ್ರಚಾರಕ್ಕಾಗಿ, ನೀವು ಎತ್ತಿಹಿಡಿದಿರುವ ಈ ಕ್ಯೂಬಾ ಬಾವುಟಕ್ಕಾಗಿ ನಾವು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತೇವೆ.

***

277719734_3486203aee.jpgಇದು ಆರ್ಥಿಕ ದಿಗ್ಭಂಧನವಲ್ಲ. ಇದು ಯುದ್ಧ. ಇಡೀ ವಿಶ್ವದಲ್ಲಿ ನಮ್ಮೊಂದಿಗೆ ಮಾತ್ರ ನಡೆಯುತ್ತಿರುವ ಯುದ್ಧ. ಪ್ರತಿಯೊಬ್ಬರೂ ಈ ಯುದ್ಧದಲ್ಲಿ ಸೆಣಸುತ್ತಿದ್ದಾರೆ. ಪ್ರತಿ ಬಾರಿ ಮಕ್ಕಳನ್ನು ನೋಡಿದಾಗ ಅವರು ಮಹಾಯುದ್ಧದ ಮಧ್ಯದಲ್ಲಿ ನಿಂತಿದ್ದಾರೆ ಎನಿಸುತ್ತದೆ. ಹಾಲುಗಲ್ಲದ ಮಕ್ಕಳು ಯುದ್ಧದ ಮಧ್ಯೆ ಇರುವ ಯೋಧರಾಗಿ ಕಾಣುತ್ತಿದ್ದಾರೆ.

***

 

 

fidelcastrocaricature.jpgಬಹುಮತವಿರುವ ಒಂದು ಅಭಿಪ್ರಾಯಕ್ಕೆ ರಾಜನ ಶಕ್ತಿಗಿಂತಲೂ ಹೆಚ್ಚಾದ ಬಲವಿದೆ. ಅನೇಕ ನೂಲುಗಳಿಂದ ಹೆಣೆಯಲಾದ ಹಗ್ಗವು ಒಂದು ಸಿಂಹವನ್ನು ಬೇಕಾದರೂ ಕಟ್ಟಿಹಾಕುತ್ತದೆ.

 

 

 

123.jpg

ಮಾವಿನ ವಾಟೆ

————————–

ಫಿಡೆಲ್ ಹಣ್ಣಾಗಿದ್ದಾರೆ.

 

ಹಾಡಿಗೂ ಮುಪ್ಪುಂಟೇ? ಜಗತ್ತಿಗೆ ಒಂದು ದೀಪ ಕೊಟ್ಟ, ಪ್ರತಿಯೊಬ್ಬರಿಗೂ ತಮಗೆ ಬೇಕಾಗಿದ್ದು ಗುನುಗಿಕೊಳ್ಳುವ ತಾಖತ್ತು ಕೊಟ್ಟ ಫಿಡೆಲ್ ಮತ್ತೆ ಚಿಗುರೊಡೆದು ಬರಲೆಂದೇ ಇರುವ ಮಾವಿನ ವಾಟೆ. ಸೂರ್ಯನ ಕಿರಣ ಎಲ್ಲಿದ್ದು ಏನು ಮಾಡಿತು ಎಂಬುದು ವಿಜ್ಞಾನದ ತೆಕ್ಕೆಗೂ ಹೇಗೆ ಸಿಗುವುದಿಲ್ಲವೋ ಹಾಗೆ ಫಿಡೆಲ್.

ಜಿ ಎನ್ ಮೋಹನ್

(“ನನ್ನೊಳಗಿನ ಹಾಡು ಕ್ಯೂಬಾ” ಪುಸ್ತಕದ ಮುನ್ನುಡಿಯಿಂದ)

ಯಾರಿಲ್ಲಿಗೆ ಬಂದವರು ಕಳೆದ ಇರುಳು?

fidel-gujjarappa1.jpgfidel-gujjar2.jpg

ಫಿಡೆಲ್ ಕ್ಯಾಸ್ಟ್ರೋ ಇಂದು ಕ್ಯೂಬಾ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ. ಅಂಗೈ ಅಗಲ ಇರುವ ಒಂದು ದೇಶ ಅಷ್ಟು ದೊಡ್ಡ ಅಮೆರಿಕಾದ ಅಹಂಕಾರವನ್ನು ಮೆಟ್ಟಿ ನಿಂತದ್ದು ಇತಿಹಾಸ. ಈ ಇತಿಹಾಸಕ್ಕೆ ಮುಂದಡಿ ಇಟ್ಟದ್ದು ಫಿಡೆಲ್, ಚೆಗೆವಾರ ಹಾಗೂ ರೌಲ್ ಕ್ಯಾಸ್ಟ್ರೋ. ಪುಟ್ಟ ನೌಕೆ ‘ಗ್ರಾನ್ಮಾ’ ಹತ್ತಿ ಹೊರಟ ಈ ದಂಡು ನಿರ್ಮಿಸಿದ ಇತಿಹಾಸ ಒಂದು ಗಾಢ ಕತ್ತಲೆಯ ನಡುವಿನ ಪುಟ್ಟ ದೀಪದಷ್ಟೇ ದೊಡ್ಡದು.

my-cuba-book.jpgನಮ್ಮ ಗುಜ್ಜಾರ್ ಗೆ ಫಿಡೆಲ್ ಕಂಡರೆ ಇನ್ನಿಲ್ಲದ ಹೆಮ್ಮೆ. ಅವರು ಈ ಹಿಂದೆ ರಚಿಸಿದ ಫಿಡೆಲ್  ಕುರಿತ ರೇಖಾಚಿತ್ರ ಇಲ್ಲಿದೆ. ಕ್ಯೂಬಾ ಬಗ್ಗೆ ಹೆಚ್ಚಿನ ವಿವರಕ್ಕೆ ನಮ್ಮ ಬ್ಲಾಗ್ ನ ಲಿಂಕ್ ವಿಭಾಗ ನೋಡಿರಿ. ಅಲ್ಲಿ ಜಿ ಎನ್ ಮೋಹನ್ ಬರೆದ ‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕವಿದೆ.

ಕೆಂಪು ಪ್ರೇಮದ ರಾಯಭಾರ!

 alexandra1.jpg

ಫೆಮಿನಿಸಂ ಎಲ್ಲಿಂದಾದರೂ ಶುರುವಾಗಿರಲಿ,
ಅಲೆಕ್ಸಾಂಡ್ರಾಳ ಮನೆಯ ಉಪ್ಪಿನ ಋಣದಿಂದ
ಅದು ಮುಕ್ತವಾಗಿರಲಿಕ್ಕಂತೂ ಸಾಧ್ಯವಿಲ್ಲ!

______________________ 

“ರೆಡ್ ಲವ್”.

ಅದೊಂದು ಕಾದಂಬರಿ. ಆ ಕಾದಂಬರಿಯ ಕಡೆಯಲ್ಲಿ ಕಥಾನಾಯಕಿ ತನ್ನ ಪ್ರಿಯಕರನನ್ನು ಬಿಟ್ಟುಬಿಡುತ್ತಾಳೆ. ಆದರೆ ಆತನಿಂದ ತನ್ನೊಳಗೆ ಅಂಕುರಿಸಿರುವ ಗರ್ಭವನ್ನು ಹಾಗೇ ಉಳಿಸಿಕೊಳ್ಳುವ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ.

“ರೆಡ್ ಲವ್” ಬರೆದವಳ ಕಥೆಯೂ ಹೆಚ್ಚು ಕಡಿಮೆ ಇದೇ ಬಗೆಯದು. ಮದುವೆಯಾದ ಮೂರು ವರ್ಷಗಳ ಬಳಿಕ ಗಂಡನನ್ನು ಬಿಡುತ್ತಾಳೆ. ಅದಾಗಲೇ ಆತನಿಂದ ಪಡೆದಿರುವ ಮಗುವನ್ನು ಅಷ್ಟೇ ಪ್ರೀತಿಯಿಂದ ಬೆಳೆಸುತ್ತಾಳೆ.

“ಪುರುಷನ ಅಗತ್ಯವಿಲ್ಲ” ಎಂಬ ನಿಶ್ಚಯದಲ್ಲಿ ಹಾಗೆ ನಡೆದವಳು ಅಲೆಕ್ಸಾಂಡ್ರಾ ಕೊಲೊಂಟಾಯ್. ರಷ್ಯಾದ ಸಮಾಜವಾದಿ ಚಳವಳಿಯ ಇತಿಹಾಸದಲ್ಲಿ ಬಲು ಘನತೆಯುಳ್ಳ ಹೆಸರು ಅವಳದು. ಒಂದು ದೇಶದ ರಾಯಭಾರತ್ವವನ್ನು ನಿಭಾಯಿಸಿದ ವಿಶ್ವದ ಮೊದಲ ಮಹಿಳೆ ಎಂಬ ಹಿರಿಮೆ ಕೂಡ ಅವಳ ಖಾತೆಯಲ್ಲಿದೆ. ೧೯೧೭ರ ರಷ್ಯನ್ ಕ್ರಾಂತಿಯ ವೇಳೆ ಲೆನಿನ್ನನ ಪಕ್ಷದಲ್ಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿದ್ದ ಏಕೈಕ ಮಹಿಳೆ ಕೂಡ. ಲೆನಿನ್ನನ ಪಕ್ಷದಲ್ಲಿ ಮಹಿಳಾ ಘಟಕ ಸ್ಥಾಪನೆಗೆ ಕಾರಣಳಾದವಳೂ ಅವಳೇ.

ಅಲೆಕ್ಸಾಂಡ್ರಾ ಕ್ರಮಿಸಿದ ರಾಜಕೀಯ ಹೆದ್ದಾರಿಯ ಚಿತ್ರಣ ಸಿಗಲು ಇಷ್ಟು ವಿವರಗಳು ಸಾಕು. ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ಈ ಹೆದ್ದಾರಿಯನ್ನು ಅವಳು ಮಹಿಳಾ ಸಮುದಾಯದ ಬದುಕನ್ನು ಸುಂದರಗೊಳಿಸುವ ದಿಕ್ಕಿಗೆ ತಿರುಗಿಸಿಕೊಂಡಳು ಎಂಬುದು; ಮತ್ತು ಇದನ್ನು ಅವಳು ಅಕ್ಷರ ಲೋಕದ ಬಾಂಧವ್ಯದ ಮೂಲಕ ಸಾಧಿಸಿದಳು ಎಂಬುದು.

alexandra2.jpg

ಅಪ್ಪ ಸೇನಾಧಿಕಾರಿಯಾಗಿದ್ದ. ಅಮ್ಮ ಕೂಡ ಶ್ರೀಮಂತ ಕುಟುಂಬದವಳು. ಅಪ್ಪನಿಗೆ ಇವಳ ಅಮ್ಮ ಎರಡನೆಯ ಪತ್ನಿ.  ಮಗಳೆಂದರೆ ಇಬ್ಬರಿಗೂ ಅಚ್ಚುಮೆಚ್ಚು. ಉಕ್ರೇನ್, ರಷ್ಯಾ ಮತ್ತು ಫಿನ್ ಲ್ಯಾಂಡಿನ ಹಿನ್ನೆಲೆ ಅವಳ ಬಾಲ್ಯಕ್ಕೆ. ಎಲ್ಲವೂ ಇತ್ತು. ಆದರೆ ಅವಳು ಬಯಸಿದ್ದ ಸ್ವಾತಂತ್ರ್ಯ ಮಾತ್ರ ಕನಸಾಗಿತ್ತು. ತನಗನಿಸಿದ್ದನ್ನು ಹೇಳಬೇಕೆಂಬ ಅವಳ ಬಯಕೆಗೆ ಅಲ್ಲಿ ಜಾಗವಿರಲಿಲ್ಲ. ತನ್ನ ಸುತ್ತಲಿನ ಇತರ ಮಕ್ಕಳೊಂದಿಗೆ ಬೆರೆತು ಆಡುವ ಆಸೆಗೆ ಇಂಬಿರಲಿಲ್ಲ. ಅವಳು ಶಿಕ್ಷಣ ಪಡೆದದ್ದು ಕೂಡ ಇತರ ಮಕ್ಕಳಿಗಿಂತ ಭಿನ್ನವಾಗಿ. ಮನೆಪಾಠದ ಮೂಲಕ. ಅದರಿಂದ ಅವಳಿಗೆ ಎಷ್ಟು ನಷ್ಟವಾಯಿತೊ. ಆದರೆ, ಜಗತ್ತಿಗೊಬ್ಬ ಹೋರಾಟಗಾರ್ತಿ ಸಿಕ್ಕಿದಳು. ಅಲೆಕ್ಸಾಂಡ್ರಾಗೆ ಮನೆಪಾಠ ಹೇಳಲು ನೇಮಕವಾಗಿದ್ದವನು ಅವರ ಕುಟುಂಬ ಮಿತ್ರನೇ ಆಗಿದ್ದ ಸಾಹಿತ್ಯ ಚರಿತ್ರಕಾರ. ಆತ ಅವಳಲ್ಲಿದ್ದ ಸಾಹಿತ್ಯಿಕ ಪ್ರತಿಭೆಯನ್ನು ಗುರುತಿಸಿದ. ಬರೆಯೋದಕ್ಕೆ ಹೇಳಿದ. ಸೇನಾಧಿಕಾರಿಯ ಮಗಳು ಕೈಯಲ್ಲಿ ಲೇಖನಿ ಹಿಡಿದಳು. ಮಹಿಳಾ ಲೋಕಕ್ಕೆ ಶಕ್ತಿ ಬಂತು.

ಅಕ್ಷರಗಳ ಜೊತೆಗಿನ ಅವಳ ಸಂಬಂಧ, ಬರವಣಿಗೆಯ ಮೂಲಕ ಸಮಾಜದ ಕಡೆಗೆ ಮತ್ತು ಸಮಾಜದ ಮೂಲಕ ಬರವಣಿಗೆಯ ಕಡೆಗೆ ಸಾಗುವ ಯಾನವಾಗಿತ್ತು. ಹಲವಾರು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದವಳು ಅತ್ಯಂತ ಬಡತನವನ್ನು ಬದುಕುತ್ತಿರುವವರ ಮನೆಯಂಗಳದ ತಲ್ಲಣಗಳನ್ನು ಕಣ್ಣಾರೆ ಕಂಡಳು. ಅದೇ ಹೊತ್ತಲ್ಲಿ ಆಕೆ ಮಾರ್ಕ್ಸ್ ವಾದವನ್ನೂ ಅಧ್ಯಯನಿಸುತ್ತಿದ್ದಳು. ಈ ದೇಶ-ಕೋಶಗಳ ಸಂಗಾತದಲ್ಲಿ, ತನ್ನ ದಾರಿ ಏನು ಎಂಬುದು ಅವಳಿಗೆ ಗೊತ್ತಾಯಿತು.

ರಷ್ಯಾದ ಯೂನಿವರ್ಸಿಟಿ ಆಫ್ ಜೂರಿಚ್ ನಲ್ಲಿ ಲೇಬರ್ ಹಿಸ್ಟರಿಯನ್ನು ಓದಿದಳು. ರಷ್ಯಾದ ಕೈಗಾರಿಕೆಗಳಲ್ಲಿ ದುಡಿವವರ ಕುರಿತ ರಾಜಕೀಯ ಪತ್ರಿಕೆಯೊಂದರಲ್ಲಿ ಲೇಖನಗಳನ್ನು ಬರೆಯತೊಡಗಿದಳು. ಮಾರ್ಕ್ಸ್ ವಾದ ಹಲವು ದಾರಿಗಳ ಮೂಲಕ ಅವಳ ಮನದ ಜಗುಲಿಗೆ ಬಂದು ಕೂತಿತು. ಅವಳ ಧೋರಣೆ ಹೊಸ ಬೆಳಕಿನಲ್ಲಿ ಪಯಣ ಶುರು ಮಾಡಿತು.

ಹೆಚ್ಚು ಕಡಿಮೆ ಈ ಹೊತ್ತಲ್ಲೇ, ಫಿನ್ ಲ್ಯಾಂಡಿನ (ಆಕೆಯ ತಾಯಿಯ ತವರು) ಜನರ ಸ್ವಾತಂತ್ರ್ಯ ಹೋರಾಟ ಅಲೆಗ್ಸಾಂಡ್ರಾಳ ಮನಸ್ಸಲ್ಲಿ ಸುಳಿಯಿತು. ಫಿನ್ ಲ್ಯಾಂಡಿನ ಶ್ರಮಿಕ ವರ್ಗ ಸಂಘಟಿತವಾಗುವುದಕ್ಕೆ ನೆರವಾಗುವುದು ತನ್ನ ಕರ್ತವ್ಯ ಅನ್ನಿಸಿತು. ಫಿನ್ ಲ್ಯಾಂಡಿನ ಜನತೆ ಮತ್ತು ರಷ್ಯಾದ ನಿರಂಕುಶಾಧಿಪತ್ಯದ ನಡುವಿನ ಸಂಘರ್ಷದ ಬಗ್ಗೆ ಬರೆಯಲಾರಂಭಿಸಿದಳು.

ರಷ್ಯಾದಲ್ಲಿ ನೂರಾರು ಕಾರ್ಮಿಕರನ್ನು ಬಲಿ ತೆಗೆದುಕೊಂಡ, “ರಕ್ತಸಿಕ್ತ ಭಾನುವಾರ” ಎಂದೇ ರಷ್ಯಾದ ಕಾರ್ಮಿಕ ಹೋರಾಟದ ಚರಿತ್ರೆಯಲ್ಲಿ ದಾಖಲಾಗಿರುವ ದುರಂತದ ಬಳಿಕ ಅಲೆಕ್ಸಾಂಡ್ರಾ ಕಾರ್ಮಿಕ ಚಳವಳಿಗೆ ತನ್ನ ಪ್ರಯತ್ನ ಆರಂಭಿಸಿದಳು. ಅದರಲ್ಲೂ ಮಹಿಳಾ ಕಾರ್ಮಿಕರನ್ನು ಸಂಘಟಿಸುವತ್ತ ಗಮನ ಕೇಂದ್ರೀಕರಿಸಿದಳು. ಈ ಹಂತದಲ್ಲಿ ಆಕೆ ರಷ್ಯಾ ಸರ್ಕಾರದ ಕೆಂಗಣ್ಣಿಗೂ ತುತ್ತಾಗಬೇಕಾಯಿತು. ರಷ್ಯಾ ಬಿಟ್ಟು ಜರ್ಮನಿಗೆ ತೆರಳುವುದು ಅನಿವಾರ್ಯವಾಯಿತು. ಮುಂದಿನ ಕೆಲ ವರ್ಷಗಳ ಕಾಲ ಹಲವಾರು ಕೃತಿಗಳನ್ನು ಬರೆದಳು. ೧೯೦೫ರಿಂದ ೧೯೦೮ರವರೆಗಿನ ಅವಧಿಯಲ್ಲಿ ಕಾರ್ಮಿಕ ಮಹಿಳೆಯರು ತಮ್ಮ ಹಿತಾಸಕ್ತಿಗಾಗಿ ಹೋರಾಟಕ್ಕಿಳಿಯುವಂತೆ ಅವರನ್ನು ಸಂಘಟಿಸುವುದಕ್ಕೆ ನಡೆಸಿದ ಆಂದೋಲನ, ಅಲೆಕ್ಸಾಂಡ್ರಾಳನ್ನು ಚರಿತ್ರೆಯ ಪುಟಗಳು ಮರೆಯಲಾರದಂತೆ ಮಾಡಿದವು. 

ಮಹಿಳೆಯ ಉಸಿರುಗಟ್ಟಿಸುವ ಪುರುಷ ರೂಪಿತ ಸಂಹಿತೆಗಳ ವಿರುದ್ಧದ ಅವಳ ಅಸಹನೆ ಹೋರಾಟವಾಗಿ ನಿಂತಿತು. ಬಾಲ್ಯದಿಂದಲೇ ವಿಲಕ್ಷಣ ಬಂಧನದ ಕಟು ನೆನಪು ಕಟ್ಟಿಕೊಂಡು ಬಂದಿದ್ದ ಆಕೆಗೆ, ಅದರ ವಿರುದ್ಧ ಪ್ರತಿಭಟಿಸುವ ಮಾರ್ಗಗಳು ತನ್ನ ವೈಯಕ್ತಿಕ ಬದುಕಿನ ಹಾದಿಯಲ್ಲೇ ಕಂಡಿದ್ದವು ಕೂಡ. ತನ್ನ ೨೧ನೇ ವಯಸ್ಸಲ್ಲಿ ತಾನೇ ಆರಿಸಿಕೊಂಡ ಹುಡುಗನೊಂದಿಗೆ ಮದುವೆಯಾದ ಆಕೆ, ತನ್ನ ಅಪ್ಪ ಅಮ್ಮನ ಇಷ್ಟದ ವಿರುದ್ಧ ಪ್ರತಿಭಟಿಸಲೆಂದೇ ಆ ಮದುವೆ ಮಾಡಿಕೊಂಡದ್ದಾಗಿ ಆಮೇಲೆ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾಳೆ. ಗಂಡನೆಂದರೆ ತನಗೆ ಆಮೇಲೆಯೂ ದ್ವೇಷವೇನಿರಲಿಲ್ಲ; ಆದರೆ ಗೃಹಿಣಿಯಾಗಿ, ಒಂದು ಅಧಿಕಾರ ಭಾವದ ವರ್ತುಲದಲ್ಲಿ ಬದುಕುವುದು ತನಗೆ ಪಂಜರದ ಬದುಕು ಎನ್ನಿಸಿತು ಎಂದು ಹೇಳಿಕೊಂಡಿದ್ದಾಳೆ. 

ಹಾಗೆ ನೋಡಿದರೆ, ಮೊದಲಿಂದಲೂ ಅವಳು ಧಿಕ್ಕರಿಸಿದ್ದೇ ಅಧಿಕಾರಯುತ ಲೈಂಗಿಕತೆಯನ್ನು. ಮಹಿಳೆಯನ್ನು ಲೈಂಗಿಕ ನಿರ್ಬಂಧಗಳಿಂದ ಮುಕ್ತಗೊಳಿಸುವುದು ಅಲೆಕ್ಸಾಂಡ್ರಾ ಹೋರಾಟದ ಪ್ರಧಾನ ಗುರಿಯಾಗಿತ್ತು. ಆಕೆಯ ಆತ್ಮಕಥೆಯ ಹೆಸರೇ “Autobiography of a Sexually Emancipated Communist Woman” ಎಂದಿದೆ. “ಲೈಂಗಿಕ ಬಯಕೆ ಅನ್ನುವುದು ಒಂದು ನಾಚಿಕೆಯ ಮತ್ತು ಪಾಪದ ವಿಚಾರ ಎಂಬ ಭಾವನೆ ಇಲ್ಲವಾಗಬೇಕು; ಅದು ಹಸಿವು ಮತ್ತು ನೀರಡಿಕೆಯಷ್ಟೇ ಸಹಜವಾದ ಅಗತ್ಯ ಎಂಬುದನ್ನು ಮನಗಾಣಬೇಕು” ಎಂದು ಪ್ರತಿಪಾದಿಸಿದಳು ಅಲೆಕ್ಸಾಂಡ್ರಾ. ಮುಕ್ತ ಪ್ರೇಮದ ಬಗೆಗಿನ ಅವಳ ಮಾತುಗಳು ಕೂಡ ಸಮಾಜ ಹುಬ್ಬೇರಿಸುವಂತಾಗಲು ಕಾರಣವಾಗಿದ್ದವು. ಸಾಂಪ್ರದಾಯಿಕ ಕಲ್ಪನೆಯ ಮದುವೆ ಬಗ್ಗೆಯೂ ಅವಳ ತೀವ್ರ ವಿರೋಧವಿತ್ತು.

ಫೆಮಿನಿಸಂ ಎಲ್ಲಿಂದಾದರೂ ಶುರುವಾಗಿರಲಿ, ಅಲೆಕ್ಸಾಂಡ್ರಾಳ ಮನೆಯ ಉಪ್ಪಿನ ಋಣದಿಂದ ಅದು ಮುಕ್ತವಾಗಿರಲಿಕ್ಕಂತೂ ಸಾಧ್ಯವಿಲ್ಲ!

…ಹಾಗಂತ ಬೆತ್ತಲಾಗಿ ಓಡಾಡೋಕ್ಕಾಗುತ್ತಾ?

ವೇಶ್ಯೆಯರ ಬಗ್ಗೆ ಮಾತನಾಡಲೂ ಹಿಂಜರಿಯುವ ಸ್ಥಿತಿಯಿರುವಾಗ, ಆ ನತದೃಷ್ಟೆಯರ ಲೋಕವನ್ನು ಮಾತನಾಡಿಸಲು ಮುಂದಾದವರು ಪತ್ರಕರ್ತೆ ಕುಸುಮಾ ಶಾನಭಾಗ. ಸುಮಾರು ಹತ್ತು ವರ್ಷಗಳ ಕಾಲ ಅವರು ಬೀದಿ ವೇಶ್ಯೆಯರ ಬದುಕಿನ ಬಗ್ಗೆ ಅಧ್ಯಯನ ನಡೆಸಿದರು. ವೇಶ್ಯೆಯರ ನಿಕೃಷ್ಟ ಬದುಕಿನ ಕಥೆಗಳನ್ನು ಕುಸುಮಾ ಅವರು ಓರ್ವ ಆಪ್ತಳಂತೆ ಆಲಿಸಿದ್ದಾರೆ. ಆ ನೋವಿನ ಕಥೆಗಳಿಗೆ ಅವರು ಕೊಟ್ಟ ಅಕ್ಷರ ರೂಪವೇ “ಕಾಯದ ಕಾರ್ಪಣ್ಯ” ಎಂಬ ಕೃತಿ. ಅದರಲ್ಲಿ ಬಂದು ಕೂಡಿರುವ ಹಲವು ಕಥೆಗಳ ನಡುವೆ, ಬೀದಿ ಹುಡುಗಿಯೊಬ್ಬಳು ನಿತ್ಯ ಡೈರಿ ಬರೆಯುವ ರೂಢಿ ಇಟ್ಟುಕೊಂಡಿದ್ದರ ಬಗೆಗಿನ ವಿವರ ಮಿಂಚಂತೆ ಸೆಳೆಯುತ್ತದೆ. ಆಕೆಯ ಡೈರಿಯಲ್ಲಿನ ಎರಡು ಪ್ರಸಂಗಗಳನ್ನು ಕುಸುಮಾ ಅವರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಕತ್ತಲ ಲೋಕದ ಕರಾಳತೆಯ ನೂರು ಮುಖಗಳನ್ನು ಹಿಡಿದಿಟ್ಟಿವೆ ಈ ತಳಮಳದ ದಾಖಲಾತಿಗಳು.

* * *

painting11.jpg

“ಹಿಂದಿನ ದಿನ ಬೀಟು ಪೊಲೀಸರಿಗೆ ಪೈಸೆ ಹಣ ಕೊಟ್ಟಿರಲಿಲ್ಲ. ಇವತ್ತು ಬೀದಿಯಲ್ಲಿ ಮತ್ತೆ ನನ್ನನ್ನು ನೋಡಿದರೆ ಅವನು ಎಳೆದುಕೊಂಡು ಹೋಗಿ ಸ್ಟೇಟ್ ಹೋಮಿನಲ್ಲಿ ಹಾಕುವುದು ಗ್ಯಾರಂಟಿ. ನಾನು ಬೀದಿಗೆ ಬಂದುಬಿಟ್ಟಿದ್ದೇನೆ. ಕ್ಯಾಶ್ ಫಾರ್ಮಸಿ ಹತ್ತಿರ ನಿಂತಿದ್ದೆ. ರಿಚ್ ಮಂಡ್ ಸರ್ಕಲ್ ಕಡೆಯಿಂದ ಪೊಲೀಸರು ಬರುತ್ತಿರುವುದು ನೋಡಿದೆ. ತಪ್ಪಿಸಿಕೊಳ್ಳೋದು ಹೇಗೇಂತ ಯೋಚಿಸುತ್ತಿದ್ದೆ. ಕ್ಯಾಶ್ ಫಾರ್ಮಸಿಯ ಒತ್ತಿನ ಹೋಟೆಲಿನಿಂದ ಯುವಕನೊಬ್ಬ ಹೊರಗೆ ಬಂದ. ಅವನು ಪಾರ್ಕ್ ಮಾಡಿದ್ದ ಬೈಕನ್ನು ಸ್ಟಾರ್ಟ್ ಮಾಡುವುದರಲ್ಲಿದ್ದ. ನಾನು ಓಡಿ ಹೋಗಿ ಬೈಕ್ ಹತ್ತಿರ ನಿಂತುಕೊಂಡೆ. ನನಗೆ ಡ್ರಾಪ್ ಕೊಡುವಂತೆ ಹೇಳಿದೆ. ಅವನು ಒಪ್ಪಲಿಲ್ಲ. ಗಲಾಟೆ ಮಾಡೋದಾಗಿಯೂ, ಜೋರಾಗಿ ಕಿರುಚಿಕೊಳ್ಳುತ್ತೇನೆಂತಲೂ ಹೇಳಿದೆ. ಅವನು ಹೆದರಿ ಹೋದ. ಎಲ್ಲಿಗೆ ಬಿಡಬೇಕೂಂತ ಕೇಳಿದ. ನಾನು ಶಿವಾಜಿ ನಗರಕ್ಕೆ ಬಿಡುವಂತೆ ಕೇಳಿದೆ. ಅವನು ನನ್ನೊಡನೆ ಯಾಕೆ ಏನು ಅಂತ ಒಂದು ಮಾತೂ ಆಡಲಿಲ್ಲ. ಶಿವಾಜಿನಗರದಲ್ಲಿ ಬಿಟ್ಟು ಹೊರಟು ಹೋದ.

“ಆ ಬೀಟ್ ಪೊಲೀಸಿಗೆ ಎಷ್ಟು ಹಣ ಕೊಟ್ಟರೂ ಸಾಕಾಗುತ್ತಿರಲಿಲ್ಲ. ನಮ್ಮ ಸಂಪಾದನೆಯ ಅರ್ಧದಷ್ಟು ಅವನ ಜೇಬಿಗೇ ಹೋಗುತ್ತಿತ್ತು. ಅವನಿಗೆ ಬುದ್ಧಿ ಕಲಿಸಲೇಬೇಕು ಅಂದುಕೊಂಡಿದ್ದೆ. ನಿನ್ನೆ ರಾತ್ರಿ ಆ ಅವಕಾಶ ನನಗೆ ಸಿಕ್ಕಿತು. ರಸ್ತೆಗೆ ಬಂದಿದ್ದೆ. ಮಾಮೂಲಿ ಕೇಳಿದ. ಯಾವತ್ತಿನಷ್ಟೆ ಕೊಟ್ಟೆ. ಸಾಲದೆಂದು ದಬಾಯಿಸಿದ. ನಾನು ಅವನ ಕೈಯಲ್ಲಿದ್ದ ಸ್ಟಿಕ್ ಕಿತ್ತುಕೊಂಡು ಓಡಿದೆ. ವುಡ್ ಲ್ಯಾಂಡ್ ಮುಂದಿನ ಸರ್ಕಲ್ ವರೆಗೂ ಓಡಿಕೊಂಡು ಹೋದೆ, ಅಲ್ಲಿ ಆಟೋ ಹತ್ತಿಕೊಂಡು ಮನೆಗೆ ಹೋಗಿಬಿಟ್ಟೆ. ಇನ್ನೂ ಸರಿಯಾಗಿ ಬೆಳಗಾಗಿರಲಿಲ್ಲ. ಮನೆ ಬಾಗಿಲು ತಟ್ಟಿದ ಸದ್ದಾಯಿತು. ಬಾಗಿಲು ತೆಗೆದೆ. ಅದೇ ಪೊಲೀಸ್ ನಿಂತಿದ್ದ. “ಸ್ಟಿಕ್ ಕೊಡು ದಮ್ಮಯ್ಯ” ಹೇಳಿದ, ನಾನು ಮಾಮೂಲಿಗಿಂತ ಹೆಚ್ಚು ವಸೂಲಿ ಮಾಡುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡೆ. ಅವನು ಇನ್ನು ಮುಂದೆ ಹೆಚ್ಚು ವಸೂಲಿ ಮಾಡೋದಿಲ್ಲ, ಹಿಡಿದು ಪೆಟ್ಟಿಕೇಸ್ ಹಾಕುವುದಿಲ್ಲ ಅಂದ ಮೇಲೆ ಸ್ಟಿಕ್ ಕೊಟ್ಟು ಕಳಿಸಿದೆ. ಬೀಟ್ ಪೊಲೀಸರು ಸ್ಟಿಕ್ ಇಲ್ಲದೆ ಕೆಲಸ ಮಾಡುವಂತಿಲ್ಲ. ಇದು ಗೊತ್ತಿದ್ದುದರಿಂದಲೇ ಹೀಗೆ ಮಾಡಿದ್ದೆ.

“ರಿಚ್ ಮಂಡ್ ರಸ್ತೆ, ಮಾರ್ಕ್ ರಸ್ತೆ, ಎಂ.ಜಿ.ರಸ್ತೆಗೆ ರಾತ್ರಿ ಬರುತ್ತಿದ್ದ ನಮ್ಮನ್ನೆಲ್ಲ ಪೊಲೀಸರು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಗೆ ಕರೆದೊಯ್ದರು. ಸೂಳೆಗಾರಿಕೆ ಮಾಡ್ತೀರಾಂತ ಪೊಲೀಸ್ ಇನ್ಸ್ ಪೆಕ್ಟರ್ ನಮಗೆಲ್ಲ ಲಾಠಿ ಬೀಸಿ ಬೀಸಿ ಹೊಡೆದರು. ಕೈ ಬಳೆಗಳು ಒಡೆದು ಗಾಯವಾಯಿತು. ಮೈ ಮೇಲೆ ಕೆಂಪು ಬರೆಗಳು. ಅವರು ಹೊಡೆಯುತ್ತಲೇ ಇದ್ದರು. ನಾವೆಲ್ಲ ಅಳುತ್ತಿದ್ದೆವು. ಲಾಠಿ ಎಸೆದು ಕುರ್ಚಿಯಲ್ಲಿ ಕುಳಿತುಕೊಂಡರು. ನಮ್ಮ ಕೈಯಲ್ಲಿದ್ದ ವಾಚುಗಳನ್ನೆಲ್ಲ ಬಿಚ್ಚಿಸಿ ನೆಲಕ್ಕೆ ಹಾಕಿದರು. ಅವನ್ನೆಲ್ಲಾ ತುಳಿದು ಹಾಕಿದರು. ಒಬ್ಬರೂ ವಾಚುಗಳನ್ನು ತೆಗೆದುಕೊಳ್ಳುವ ಹಾಗಿಲ್ಲವೆಂದು ಆರ್ಡರ್ ಮಾಡಿ ಮನೆಗಳಿಗೆ ಹೋಗುವಂತೆ ಆಜ್ಞೆ ಮಾಡಿದರು. ಜೊತೆಗೆ ನಾವು ಎಲ್ಲಿ ಹೋಗುತ್ತೇವೆಂದು ನೋಡಲು ಹಿಂದೆಯೇ ಪೊಲೀಸರನ್ನು ಕಳಿಸಿದರು. ಇನ್ಸ್ ಪೆಕ್ಟರ್ ಅವತ್ತು ಇಪ್ಪತ್ತು ಮೂವತ್ತು ಹುಡುಗಿಯರ ಅನ್ನಕ್ಕೆ ಕಲ್ಲು ಹಾಕಿದರು.”

*

“ಗೂಂಡಾಗಳಿಂದ ತಪ್ಪಿಸಿಕೊಳ್ಳುವುದು ನಮಗೆ ಯಾರಿಗೂ ಸುಲಭವಲ್ಲ. ಯಾರು ಗೂಂಡಾಗಳು ಎಂದು ಗುರುತಿಸುವುದು ಕಷ್ಟ. ಕೆಲವು ಸಲ ಮೆಜೆಸ್ಟಿಕ್ ಗೂಂಡಾಗಳು ರಿಚ್ ಮಂಡ್ ಸರ್ಕಲ್ ಕಡೆಗೆ ಬರುತ್ತಾರೆ, ಹುಡುಗಿಯರು ಬೇಕೂಂತ. ಆದರೆ ಗೂಂಡಾಗಳು ನಾವು ಓಡಾಡುವ ರಸ್ತೆಗಳಿಗೆ ಪೊಲೀಸರ ಕಣ್ಣು ತಪ್ಪಿಸಿ ಹಾಜರಾಗುತ್ತಾರೆ. ಎಷ್ಟೋ ಸಲ ಅವರು ಪೊಲೀಸರನ್ನೂ ಕ್ಯಾರ್ ಮಾಡೋದಿಲ್ಲ. ನನ್ನನ್ನು ಕೆಲವು ಹುಡುಗರು ಕರೆದರು. ಅವರು ದುಡ್ಡು ಕೊಡುವುದಿಲ್ಲವೆಂದು ನಾನು ಹೋಗಲು ಒಪ್ಪದೆ ಮಾರ್ಕ್ ರಸ್ತೆಯಿಂದ ಚರ್ಚ್ ಸ್ಟ್ರೀಟ್ ಗೆ ತಿರುಗಿಕೊಂಡೆ. ಕಾರಿನಲ್ಲಿ ಎಂ.ಜಿ. ರೋಡಿನಿಂದ ಬಂದ ಈ ಹುಡುಗರು ನನ್ನನ್ನು ಎತ್ತಿ ಕಾರೊಳಗೆ ಹಾಕಿಕೊಂಡರು. ಕರೆದಾಗ ಬರಲಿಲ್ಲವೆಂದು ಮುಖದ ಮೇಲೆ ಬ್ಲೇಡಿನಿಂದ ಗೀರಿದರು. ರಕ್ತ ಬರುತ್ತಿತ್ತು, ಒರೆಸಲೂ ಬಿಡಲಿಲ್ಲ. ಅಶ್ಲೀಲವಾಗಿ ಮಾತಾಡಿಕೊಂಡು ಕಬ್ಬನ್ ಪಾರ್ಕಿನೊಳಗೆ ಕರೆದುಕೊಂಡು ಹೋದರು. ಒಬ್ಬರಾದ ಮೇಲೆ ಒಬ್ಬರು ಉಪಯೋಗಿಸಿಕೊಂಡರು. ನನ್ನ ಬಟ್ಟೆಗಳನ್ನೆಲ್ಲಾ ಸುತ್ತಿ ಕಾರೊಳಗೆ ಹಾಕಿಕೊಂಡು ನನ್ನನ್ನು ಅಲ್ಲೇ ಬಿಟ್ಟು ಹೋಗಿಬಿಟ್ಟರು. ನಾನು ಕಿರುಚಿಕೊಂಡೆ. ಗೋಗರೆದೆ. ಕೇಳಲಿಲ್ಲ. ಮೈ ಮೇಲೆ ಬಟ್ಟೆಯೇ ಇಲ್ಲ. ಬೆಳಗಾದರೆ ಜನ ತಿರುಗಾಡುತ್ತಾರೆ. ದಿಕ್ಕು ತೋಚದಂತೆ ಆಯಿತು.

“ಇನ್ನೂ ಬೆಳಕಾಗಿರಲಿಲ್ಲ. ಪೊಲೀಸರು ಹೋಗುತ್ತಿರುವುದು ನೋಡಿದೆ. ಅವರನ್ನು ಜೋರಾಗಿ ಕರೆದೆ. “ಅಣ್ಣಾ, ಗೂಂಡಾಗಳು ಹೀಗೆ ಮಾಡಿವೆ. ಮೈ ಮೇಲೆ ಬಟ್ಟೆಯಿಲ್ಲ. ಮನೆಗೆ ಹೋಗಬೇಕು, ಸ್ವಲ್ಪ ಸಹಾಯ ಮಾಡಣ್ಣ…” ಪೊಲೀಸರಲ್ಲೂ ಒಳ್ಳೆಯವರಿರುತ್ತಾರೆ. ಬೆಡ್ ಶೀಟ್ ತಂದುಕೊಟ್ಟರು. ಆಟೋ ಮಾಡಿಕೊಟ್ಟು, ಡ್ರೈವರನಿಗೆ ನನ್ನನ್ನು ಮನೆಗೆ ಬಿಡುವಂತೆ ಹೇಳಿದರು. ಆ ಪೊಲೀಸಣ್ಣನಿಗೆ ಒಳ್ಳೇದಾಗಲೀಂತ ದೇವರನ್ನು ಬೇಡಿಕೊಂಡೆ. ನಾನು ದೇವರ ಪೂಜೆ ಮಾಡುವಾಗೆಲ್ಲಾ ಆ ಪೊಲೀಸಣ್ಣನಿಗೆ ಒಳ್ಳೇದಾಗಲೀಂತ ಪ್ರಾರ್ಥಿಸುತ್ತೇನೆ. ನಾವು ಸೂಳೆಯರೇ ಇರಬಹುದು. ಹಾಗೇಂತ ಮೈಮೇಲೆ ಬಟ್ಟೆಯಿಲ್ಲದೆ ರಸ್ತೆಯಲ್ಲಿ ಓಡಾಡಲಿಕ್ಕಾಗುತ್ತಾ?”

ಇದು ಪುಟ್ಟ ಹಣತೆಯ ರೂಪಕ

ಮೂಲತಃ ಕವಿಯಾಗಿರುವ ಪತ್ರಕರ್ತ ಜಿ ಎನ್ ಮೋಹನ್ ಅವರ ಕ್ಯೂಬಾ ಪ್ರವಾಸ ಕಥನ, ನನ್ನೊಳಗಿನ ಹಾಡು ಕ್ಯೂಬಾ. ಅಮೆರಿಕಾಕ್ಕೆ ಸೆಡ್ದು ಹೊಡೆದು ನಿಂತಿರುವ ಸ್ವಾಭಿಮಾನಿ ಚೈತನ್ಯದ ದೇಶ ಕ್ಯೂಬಾ ಬಗೆಗಿನ ಅವರ ತನ್ಮಯೀ ಧ್ಯಾನ, ಅಂತಃಕರಣದ ಪ್ರೀತಿಯೇ ಕಥನವಾಗಿ ಅವತರಿಸಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಕನ್ನಡ ಸ್ನಾತಕೋತ್ತರ ಪದವಿಗೆ ಪಠ್ಯ, ತಮಿಳು, ತೆಲುಗು ಹಾಗೂ ಹಿಂದಿಗೆ ಅನುವಾದ ಇವು ಈ ಪುಸ್ತಕಕ್ಕೆ ಸಂದ ಗೌರವಗಳು. ಕತ್ತಲೆಯಲ್ಲಿ ಲೋಕ ಅಳುತ್ತಿರುವಾಗ, ಅಭಯ ನೀದುವ ಪುಟ್ಟ ಹಣತೆ ಎಂದು ಮೋಹನ್ ಅವರು ಕ್ಯೂಬಾವನ್ನು ಈ ಪ್ರವಾಸ ಕಥನದ ಕೊನೆಯಲ್ಲಿ ಬಣ್ಣಿಸುತ್ತಾರೆ. ಆ ಪುಟ್ಟ ಹಣತೆಯ ಕಥೆ ಈಗ ಆನ್ ಲೈನ್ ಪುಟಗಳಲ್ಲಿ ಲಭ್ಯ. ಇದನ್ನು ಅವಧಿ ಮೂಲಕ ಕೊಡಲು ಅವಕಾಶ ಮಾಡಿಕೊಟ್ಟ ಮೋಹನ್ ಅವರಿಗೆ ವಂದನೆಗಳು. ಇಲ್ಲಿ ಬಲಬದಿಯಿರುವ ಲಿಂಕ್ಸ್ ಅಡಿಯಲ್ಲಿ ನನ್ನೊಳಗಿನ ಹಾಡು ಕ್ಯೂಬಾ ಕ್ಲಿಕ್ಕಿಸಿದರೆ ತೆರೆದುಕೊಳ್ಳುತ್ತದೆ ಕ್ಯೂಬಾ.

%d bloggers like this: