ಅಕ್ಷತಾ ಬರೆದದ್ದು: ಥ್ಯಾಂಕ್ಸ್

ಅಹರ್ನಿಶಿ ಪ್ರಕಾಶನದ ಮೂಲಕ ಸಾಕಷ್ಟು ಮೌಲ್ಯಯುತ ಪುಸ್ತಕಗಳನ್ನು ಕೊಟ್ಟಿರುವ ಕೆ ಅಕ್ಷತಾ ಎರಡು ವರ್ಷದ ಹಿಂದೆ ‘ಅವಧಿ’ಗೆ ಅಂಕಣ ಬರೆಯುತ್ತಿದ್ದರು. ದಣಪೆಯಾಚೆ..ಅಂತ.

ಆ ಸರಣಿಯ ‘ಪಲ್ಯ ಎಂಬ ಆತ್ಮವಿಶ್ವಾಸ‘ ಲೇಖನವನ್ನು ಮತ್ತೆ ಪ್ರಕಟಿಸಿದ್ದೆವು. ಆ ಲೇಖನ ಕೊಟ್ಟ ಆತ್ಮವಿಶ್ವಾಸದ ಬಗೆಗೂ ಅಕ್ಷತಾ ಇಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.

ಎರಡು ವರುಷದ ಹಿಂದೆ ನಾನು ಬರೆದ ಲೇಖನವನ್ನು ಅವಧಿಯಲ್ಲಿ ಮತ್ತೊಮ್ಮೆ ನೋಡಿ ನಂಗೆ ನಿಜ ಖುಷಿಯಾಯಿತು. ಪ್ರಕಟಿಸಿದ ಅವಧಿ ಬಳಗಕ್ಕೂ ಮತ್ತು ಓದಿ ಪ್ರತಿಕ್ರಿಯಿಸಿದ ಸಹೃದಯಿ ಓದುಗ ಮಿತ್ರರೆಲ್ಲರಿಗೂ ಥ್ಯಾಂಕ್ಸ್.

ಒಂದು ರೀತಿಯಲ್ಲಿ ಸ್ವಂತದ ಬರವಣಿಗೆಯನ್ನೇ ಮರೆತಿದ್ದವಳನ್ನು ಈ ಲೇಖನ ಮತ್ತೆ ನನ್ನಲ್ಲಿ ಕವಿತೆ , ಇತ್ಯಾದಿ ಬರವಣಿಗೆ ಮಾಡುವ ಆಶೆಯನ್ನು ಹುಟ್ಟಿಸಿದೆ . ಕಿ.ರಂ , ಅನಂತಮೂರ್ತಿ, ಶಾಮಣ್ಣ ಮತ್ತಿತರ ಮಾತು ಗಳನ್ನು ಬರಹಕ್ಕೆ ಇಳಿಸುವುದನ್ನೆ ಮತ್ತೆ ಮತ್ತೆ ಅಭ್ಯಾಸ ಮಾಡುತ್ತಾ ಮತ್ತು ಅದರಲ್ಲಿ ಅಗಾಧವಾದ ಸುಖವನ್ನು ಕಾಣುತಿದ್ದ ನನಗೆ ಸ್ವಂತದ ಬರವಣಿಗೆ ಮರೆತೇ ಹೋದಹಾಗೆ ಆಗಿತ್ತು ಅಂದ್ರು ಸುಳ್ಳಲ್ಲ .

ನಿಜ ಅಂದ್ರೆ ಇತ್ತೀಚಿನ ದಿನದಲ್ಲಿ ನಾನು ಏನು ಬರೆದು ಇಲ್ಲ . ಗೆಳೆಯರ ಕೈಲಿ ಈ ಬಗ್ಗೆ ಬಯ್ಯಿಸಿಕೊಳ್ಳುವುದು ಅಭ್ಯಾಸ ಆಗಿತ್ತು . ಪ್ರಕಾಶನದ ದಸೆಯಿಂದ ನಾನು ಸ್ವಂತದ ಬರವಣಿಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನ ಗೆಳೆಯರ ಅಭಿಪ್ರಾಯ ಆದರೆ ನಿಜವೆಂದರೆ ಅದಲ್ಲ ಕಾರಣ . ಬೇರೆಯೇ ಇದೆ. ಏನೆಂದರೆ ಬೇರೆಯವರ ಮಾತುಗಳನ್ನು ಬರಹಕ್ಕೆ ತರುವುದೆಂದರೆ ಆಲಿಸುವುದು ಮತ್ತು ಅದನ್ನು ಯಥಾವತ್ತಾಗಿ ಬರೆಯುವುದಲ್ಲ ನನ್ನ ಪಾಲಿಗೆ . ಆ ಮಾತಿನ ಒಳಗಿನ ದ್ವನಿಯನ್ನು ಗ್ರಹಿಸಬೇಕು . ಅದನ್ನು ಅಭ್ಯಾಸ ಮಾಡುತ್ತಲೇ ಇದ್ದೇನೆ .

ಅದರ ನಡುವೆ ಸ್ವಂತದ ಬರವಣಿಗೆಯನ್ನು ಮರೆತೇ ಬಿಟ್ಟಿದ್ದ ನನ್ನೆದುರಿಗೆ ನನ್ನ ಬರವಣಿಗೆಯನ್ನು ಹಿಡಿದು ಮತ್ತೆ ಬರೆಯುವ ಆಶೆಯನ್ನು ಉಕ್ಕಿಸಿದ್ದೀರಿ,ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿ . ಯಾಕೆಂದರೆ ನನಗೀಗ ಇಂಥದೊಂದು ಸಾಕ್ಷಾತ್ಕಾರದ , ಮೆಚ್ಚಗೆಯ, ಸ್ಪಂದನೆಯ ಅಗತ್ಯವಿತ್ತು . ಬರವಣಿಗೆಯ ಮನಸ್ಸೇ ವಿಚಿತ್ರ ಅನಿಸ್ತದೆ.ಯಾರು ಕೇಳಲಿ ಬಿಡಲಿ ನಾನು ನನಗಾಗಿ ಹಾಡುವೆ ಅಂತ ಗಟ್ಟಿ ಮಾಡಿಕೊಂಡೆ ಬರವಣಿಗೆ ಮಾಡ್ತೀವಿ. ಆದರೆ ಕೇಳೋ ಹಾಗೆ ಹಾಡಬೇಕು ಅನ್ನೋ ಪ್ರಜ್ಞೆ ಇರೋ ಹಾಗೆ ಓದೋ ಹಾಗೆ ಬರೀಬೇಕು ಅನ್ನೋ ಆಶೆಯೂ ಸುಪ್ತವಾಗಿ ಇದ್ದೆ ಇರ್ತದೆ.

ಹಾಗೆ ತುಂಬಾ ಸರ್ತಿ ಬರವಣಿಗೆ ಮಾಡಿದ ಮೇಲೆ ಅದು ನನ್ನದಲ್ಲ ಓದುಗನದು.ಹೊಗಳಲಿ ಬಯ್ಯಲಿ ಏನಾದ್ರು ಮಾಡ್ಕೊಳಿ ಅಥವಾ ಪ್ರತಿಕ್ರಿಯಿಸದೇನೆ ಇರೋದು ಅವರ ಹಕ್ಕು ಅಂದುಕೊಳ್ಳುವವಳು ನಾನು. ಆದರೆ ಈ ಹೊತ್ತು ಇದನ್ನ ನೋಡಿ ಖುಷಿ ಆಗಲಿಲ್ಲ ಅಂದ್ರೆ ಸುಳ್ಲಾಗ್ತದೆ. ಮತ್ತೆ ಬರೆಯೋ ಆಶೆ ಹುಟ್ಟಲೇ ಇಲ್ಲ ಅಂದ್ರೆ ಸುಳ್ಲಾಗ್ತದೆ

 

ಪಲ್ಯ ಎಂಬ ಆತ್ಮವಿಶ್ವಾಸ

ಅಕ್ಷತಾ ಕೆ

 

ದಣಪೆಯಾಚೆ…

ಆವತ್ತು ಭಾನುವಾರ ರಜಾದಿನ ಅಮ್ಮನಿಗೆ ಕೊಬ್ಬರಿ ಮಿಠಾಯಿ ಮಾಡಲು ಹೇಳಬೇಕೆಂದು ಪುಟ್ಟಿ ಲೆಕ್ಕ  ಹಾಕಿದ್ದಳು. ಆದರೆ ಟೀಚರಾಗಿದ್ದ ಅವಳಮ್ಮನಿಗೆ ಆವತ್ತೂ ರಜವಿರಲಿಲ್ಲ. ಶಾಲೆಯಲ್ಲಿ ಮೀಟಿಂಗ್ ಇದೆ ಪುಟ್ಟಿ ಬೇಗ ಬಂದ್ಬಿಡ್ತೀನಿ ನೀನು, ತಮ್ಮ ಇಬ್ಬರೂ ಮನೆಯಲ್ಲೆ ಆಟವಾಡಿಕೊಂಡು ಇರಿ ಎಲ್ಲಿಗೂ ಹೋಗ್ಬೇಡಿ ಎಂದು ಹೇಳಿ ಅಮ್ಮ ಹೊರಟು ಹೋದಾಗ ಪುಟ್ಟಿಗೆ ತುಂಬಾ ನಿರಾಶೆಯಾಗಿತ್ತು. ಆದರೆ ಬೇಜಾರಾಗಿ ಕೂರಲು ಪುರಸೊತ್ತೆಲ್ಲಿದೆ. ಶಿಶುವಿಹಾರಕ್ಕೆ ಹೋಗುವ ಅವಳ ತಮ್ಮ ತುಂಬಾ ತಂಟೆಕೋರ. ಅವನನ್ನು ನೋಡಿಕೊಳ್ಳುವ ಜವಾಬ್ದಾರಿ ಐದನೇ ಕ್ಲಾಸು ಓದುವ ಪುಟ್ಟಿಯದು.

121

ಪುಟ್ಟಿ ತಮ್ಮನಿಗೆ ಈ ಹೊತ್ತು `ಪುಟ್ಟ ಅಮ್ಮ’. ಅಕ್ಕ ತಮ್ಮ ಸೇರಿ ಹಾವು ಏಣಿ , ಕವಡೆ, ಕಳ್ಳಪೊಲೀಸ್ ಏನೇನೋ ಆಡಿದರು. ತಮ್ಮ ಎದುರು ಮನೆಯ ಗಣೇಶನೊಂದಿಗೆ ಚಿನ್ನಿದಾಂಡು ಆಡಲು ಹೊರಟಾಗ ಈಗ ಬಿಸಿಲಿದೆ, ಸಂಜೆ ಹೊತ್ತಿಗೆ ಆಡಕ್ಕೋಗು ಎಂದು ತಡೆದಳು. ತಮ್ಮ ಹೋಗೆ ಹೋಗ್ತೀನಿ ಎಂದು ಹಠ ಮಾಡಿದಾಗ ಅಮ್ಮ ಬಂದ್ಮೇಲೆ  ಕೊಬ್ಬರಿ ಮಿಠಾಯಿ ಮಾಡ್ತಾಳೆ . ನೀನು ಈಗ ನನ್ನ ಮಾತು ಕೇಳದಿದ್ದರೆ ಅಮ್ಮನಿಗೆ ಹೇಳಿ ಒಂದೂ ಮಿಠಾಯಿ ಕೊಡ್ಸಲ್ಲ ನೋಡ್ತಾ ಇರು ಎಂದು ಬೆದರಿಕೆ ಹಾಕಿದಳು.  ಅಮ್ಮ ತಿನ್ನಲು ಕೊಡುವ ಜಿಲೇಬಿ, ಬೇಯಿಸಿದ ಮೊಟ್ಟೆ ಎಲ್ಲದರಲ್ಲೂ ತಮ್ಮನಿಗೆ ತನ್ನದರಲ್ಲೂ ಪಾಲು ಕೊಡುತಿದ್ದ ಅಕ್ಕನ ಈ ರೀತಿಯ ಬೆದರಿಕೆಗೆ ತಮ್ಮ ತತ್ತರಿಸಿದ. ಆಡಲು ಸಂಜೆಯೇ ಹೋಗುವುದಾಗಿ ಹೇಳಿದ.

ಆದರೆ ಕೂಡಲೇ ನನಗೆ ಹಸಿವಾಗ್ತಿದೆ ತಿನ್ನೋದಕ್ಕೆ ಏನಾದರೂ ಕೊಡು ಎಂದು ವರಾತ ಪ್ರಾರಂಭಿಸಿದ. ಪುಟ್ಟಿ ಅಡುಗೆ ಮನೆಗೆ ಹೋಗಿ ನೋಡಿದಳು ಒಂದು ಪಾತ್ರೆಯಲ್ಲಿ ಹಾಲು ಬಿಟ್ಟರೆ ಬೇರೇನು ಇರಲಿಲ್ಲ. ಬೆಳಿಗ್ಗೆ ಮಾಡಿದ ಉಪ್ಪಿಟ್ಟು ಖಾಲಿಯಾಗಿತ್ತು. ತಿನ್ನುವಂತ ವಸ್ತು ಬೇರೇನು ಸಿಗಲಿಲ್ಲ. ಒಂದು ಡಬ್ಬಿಯಲ್ಲಿ ಒಂದಿಷ್ಟು ಹುರಿದ ಸೇಂಗಾಬೀಜವಿತ್ತು ಅದನ್ನೆ ತಂದು ತಮ್ಮನಿಗೆ ಕೊಡುತ್ತಾ ಇದನ್ನು ತಿನ್ನು, ಅಮ್ಮ ಈಗ ಬರ್ತಾಳೆ ಬಂದ ಕೂಡ್ಲೆ ಅಡುಗೆ ಮಾಡ್ತಾಳೆ ಊಟ ಮಾಡಿಬಿಡೋಣ ಪುಟ್ಟಾ ಎಂದು ತಮ್ಮನನ್ನು ರಮಿಸಿದಳು. ಆದರೆ ಅಮ್ಮ ಹನ್ನೆರಡು ಗಂಟೆಯಾದರೂ  ಬರಲೇ ಇಲ್ಲ. ಕಡ್ಲೆ ಬೀಜವನ್ನು ಒಂದೆ ಪಟ್ಟಿಗೆ ತಿಂದು ಮುಗಿಸಿದ್ದ ತಮ್ಮ  ಮತ್ತೆ ಹಸಿವು ಎಂದು ಮತ್ತೆ ವರಾತ ತೆಗೆದ.

ಇನ್ನಷ್ಟು

ಗೆಜ್ಜೆ ಕಟ್ಟಿ ಅಜ್ಜಿ ಮನೆಯಲ್ಲಿ

img_18851

ಕೆ ಅಕ್ಷತಾ

ಪ್ರಾಥಮಿಕ ಶಾಲೆಯಲ್ಲಿದ್ದ ದಿನಗಳು. ಬೇಸಿಗೆ ರಜೆ ಬಂತೆಂದರೆ ಎಲ್ಲಾ ಗೆಳತಿಯರು ಅವರವರ ಅಜ್ಜಿ ಮನೆಗೆ ಹೋಗಿ ಬಿಡೋರು. ನನಗೆ ಹೋಗಲಿಕ್ಕೆ ಅಜ್ಜಿಯ ಮನೆಯೇ ಇಲ್ಲ ಅಂತ ಬೇಜಾರಾಗೋದು. ಅಮ್ಮನ ಅಮ್ಮ ನಮ್ಮನೆಯಲ್ಲೆ ಇದ್ದರು. ಅಪ್ಪನ ಅಮ್ಮನ ಮನೆಯು ನಮ್ಮನೆಗೆ ಒಂದರ್ಧ ಮೈಲಿ ದೂರದಲ್ಲಿ ಕಾಡೊಳಗಿತ್ತು. ನಾನು ಶಿಶುವಿಹಾರದಲ್ಲಿದ್ದಾಗ ಅಲ್ಲಿನ ಟೀಚರ್ ಗೊಬ್ಬೆ ಸೀರೆ ಉಟ್ಟ ಒಬ್ಬ ಅಜ್ಜಮ್ಮನನ್ನು ತೋರಿಸಿ ಅವರು ನಿಮ್ಮಜ್ಜಿ ಕಣೇ ಅಂದಿದ್ರು. ನಾನು ಇಲ್ಲ ಇವರು ನಮ್ಮಜ್ಜಿಯಲ್ಲ, ನಮ್ಮಜ್ಜಿ ಮನೇಲಿದ್ದಾರೆ ಅಂದಿದ್ದೆ. ಆದರೂ ಅನುಮಾನ ಕಾಡಿ ಅಮ್ಮನ ಬಳಿ ಈ ಬಗ್ಗೆ ಕೇಳಿದಾಗ; ಹೌದು ಅವರು ನಿಮ್ಮ ಅಣ್ಣ(ಅಪ್ಪ)ನ ಅಮ್ಮ ಅಂದಿದ್ರು. ಅವರ್ಯಾಕೆ ನಮ್ಮನೆಗೆ ಬರೋಲ್ಲ ಅನ್ನೋ ಪ್ರಶ್ನೆ ಕಾಡಿದ್ರೂ ಕೇಳೋಕೆ ಹೋಗ್ಲಿಲ್ಲ. ನನ್ನ ಅಪ್ಪ ಅಮ್ಮ ಬೇರೆ ಬೇರೆ ಜಾತಿಯವರು ಆದ್ದರಿಂದ ಕಟ್ಟೇರಮನೆಯರು ನಮ್ಮನೆಗೆ ಬರೋಲ್ಲ ನಾವು ಅಲ್ಲಿಗೆ ಹೋಗೋಲ್ಲ ಅನ್ನೋದು ಮುಂದೆ ತಿಳೀತಾ ಹೋಯ್ತು. ಆಮೇಲೆ ನಿಧಾನಕ್ಕೆ ಆ ಮನೆಯಿಂದ ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ, ಅಕ್ಕ ಎಲ್ಲ ನಮ್ಮನೆಗೆ ಬರೋಕೆ ಶುರು ಮಾಡಿದ್ರು. ಅಪ್ಪನೂ ಆಗೀಗ ಆ ಮನೆಗೆ ನಮ್ಮನ್ನು ಕರ್ಕೊಂಡ್ಹೋಗೋರು. ಆದರೆ ಅಜ್ಜಿ, ದೊಡ್ಡಮ್ಮ ಮಾತ್ರ ನಮ್ಮನೆಗೆ ಬರ್ತಿರಲಿಲ್ಲ. ಅಮ್ಮನೂ ಅವರ್ಮನೆಗೆ ಹೋಗ್ತಿರಲಿಲ್ಲ. ಅಮ್ಮಮ್ಮ ನಮ್ಜೊತೆ ಇದ್ದಿದ್ದರಿಂದ ನನಗೇನೂ ಬೇರೆ ಅಜ್ಜಿ ಬೇಕೆನ್ನಿಸುತ್ತಾ ಇರಲಿಲ್ಲ.

XXL_-L-464377227ಕಲೆ: ಗುಜ್ಜಾರ್

ನಾನಾಗ ಐದನೇ ಕ್ಲಾಸಿನಲ್ಲಿದ್ದೆ, ಬೇಸಿಗೆ ರಜೆಯಿತ್ತು ನಮ್ಮಮ್ಮ ಟೀಚರಾಗಿದ್ರೂ ರಜೆಯಲ್ಲಿ ಪ್ರವಾಸ, ನೆಂಟರಮನೆ ಅಂತ ಎಲ್ಲಿಗೂ ಕರ್ಕೊಂಡು ಹೋಗ್ತಾ ಇರಲಿಲ್ಲ. ಮನೆಯಲ್ಲೆ ಕೆಲ್ಸ ಮಾಡ್ಕೊಂಡು ಇರಬೇಕಾಗಿತ್ತು. ಒಂದಿನ ಸಂಜೆ ಅಪ್ಪ, ಅಮ್ಮ, ತಂಗಿ,ತಮ್ಮ, ನಾನು ಎಲ್ಲ ಮಾತಾಡ್ತಾ ಕೂತಿದ್ವಿ. ಯಾವುದೋ ಮಾತಿಗೆ ಅಪ್ಪ ಇದ್ದೋರು `ಕಟ್ಟೇರಮನೆಯಲ್ಲಿ ಒಂದ್ವಾರ ಇದ್ದು ಬನ್ನಿ ನೋಡನಾ’ ಅಂತ ಸವಾಲೊಡ್ಡಿದರು. ಆಯ್ತು ನಾನಿದ್ದು ಬರ್ತೀನಿ ಅಂದೆ. ಹತ್ತಿರದಲ್ಲೆ ಇದ್ದರೂ ಒಂದು ರೀತಿಯಲ್ಲಿ ಅಪರಿಚಿತವಾಗಿಯೇ ಉಳಿದಿರುವ ಆ ಮನೆಯಲ್ಲಿ ಅದೂ ಒಂದ್ವಾರ ಉಳಿದುಕೊಳ್ಳಲು ತಮ್ಮ ಮಕ್ಕಳ್ಯಾರೂ ಇಷ್ಟು ಸುಲಭಕ್ಕೆ ಒಪ್ತಾರೆ ಅಂತ ಅಪ್ಪನೇ ನಂಬಿರ್ಲಿಲ್ಲ ಅನಿಸತ್ತೆ. ಅದಕ್ಕೆ ಇದೇ ಸಂದರ್ಭ ಅಂತ; `ಹೋದ ಪುಟ್ಟ ಬಂದ ಪುಟ್ಟ’ ಕಥೆಯಾಗಬಾರ್ದು, ಹೋದ ಮೇಲೆ ಅಲ್ಲಿ ಒಂದ್ವಾರ ಉಳಿದುಕೊಂಡೆ ಬರ್ಬೇಕು ಯಾವುದೇ ಕಾರಣಕ್ಕೂ ಮಧ್ಯದಲ್ಲೇ ಬರಬಾರ್ದು ಅಂದ್ರು. ನಾನು ಅಪ್ಪ ಹೇಳಿದಕ್ಕೆಲ್ಲ ಹೂಂ ಗುಟ್ಟಿದೆ. ಬೇಸಿಗೆ ರಜೆ ಮುಗಿಸಿ ಬಂದ ಗೆಳತಿಯರು ಅವರಜ್ಜಿ ಮನೆಯ ಪ್ರವಾಸ ಕಥನ ಹೇಳುವಾಗ ಒಂದು ರೀತಿಯ ಅನಾಥಭಾವ ಅನುಭವಿಸುತ್ತಿದ್ದ ನನಗೆ ಈ ಬಾರಿ ನನ್ನ ಕಥನವನ್ನು ಹೇಳುವ ಸಂದರ್ಭವನ್ನು ಅಪ್ಪ ಕಲ್ಪಿಸಿಕೊಡುತ್ತಿರುವಾಗ ಹೋಗಲೊಲ್ಲೆ ಎಂದು ಬಿಟ್ಟೇನೆ ನಾನು?

ಸರಿ, ಇವಳ ಬಟ್ಟೆ ಪ್ಯಾಕ್ ಮಾಡಿ, ಬಿಟ್ಟು ಬರ್ತೀನಿ ಅಂತ ಅಪ್ಪ ಕೂಡಲೇ ಹೊರಟು ಬಿಟ್ರು. ಅಮ್ಮ, ಅಮ್ಮಮ್ಮ ಇಬ್ರಿಗೂ ನಾನು ಅಜ್ಜಿ ಮನೆಗೆ ಕುಣಿದುಕೊಂಡು ಹೊರಟಿದ್ದು ಇರಿಸು ಮುರಿಸು ತಂದಿತ್ತು. ಆ ಮನೆ ಅಪ್ಪನನ್ನು ಬಿಟ್ಟು ಉಳಿದವರಿಗೆ ಅಪರಿಚಿತವಾಗಿ ಇದ್ದಿದ್ದೇ ಇದಕ್ಕೆ ಕಾರಣವಿರಬಹುದು. ಆದರೆ ನಾನೇ ಹೋಗ್ತೀನಿ ಅಂತ ನಿಂತ ಕಾಲಲ್ಲಿ ಹೊರಟಿರುವಾಗ ಬೇಡ ಹೋಗೋದು ಅಂತ ತಡೆದರೆ ಅಪ್ಪನಿಗೆ ನೋವಾಗ್ತದೆ ಅನ್ಕೊಂಡು ಸುಮ್ಮನಾದ್ರು. ಆದರೆ ಅಮ್ಮನ ಭಾವನೆಯನ್ನು ಅವರ ಕಣ್ಣುಗಳು ಸ್ಪಷ್ಟವಾಗಿ ಸಾರುತ್ತಿದ್ದವು. ಆದ್ದರಿಂದಲೇ ನಾನು ಅವುಗಳನ್ನು ದೃಷ್ಟಿಸುವ ಸಾಹಸಕ್ಕೆ ಹೋಗ್ಲಿಲ್ಲ. ಅಮ್ಮ ಜಾಣತನದಿಂದ ಒಂದೇ ಒಂದು ಜೊತೆ ಬಟ್ಟೆಯನ್ನು ಚೀಲಕ್ಕೆ ಹಾಕಿಕೊಟ್ರು. ನಾನು ನಂಗೆ ಒಂದೆ ಜೊತೆ ಬಟ್ಟೆ ಸಾಲಲ್ಲ, ಏಳು ದಿನಕ್ಕೆ ಏಳು ಜೊತೆ ಬಟ್ಟೆ ಬೇಕು ಅಂತಾ ಎಷ್ಟೇ ಹಠ ಹಿಡಿದ್ರೂ ಅಮ್ಮ ಕೇಳಲಿಲ್ಲ. ಕಟ್ಟೇರಮನೆಯೇನು ಕಾಶಿಯಲ್ಲಿಲ್ಲ. ಅಲ್ಲಿಂದ ಪ್ರಕಾಶ, ನರೇಂದ್ರ ಯಾರಾದ್ರೂ ಬರ್ತಾನೆ ಇರ್ತಾರೆ, ಅವರ ಹತ್ರ ಬೇಕಂದ್ರೆ ನಿನ್ನ ಬಟ್ಟೆ ಕಳಿಸಿಕೊಡ್ತೀನಿ ಅಂತ ಖಡಾ ಖಂಡಿತವಾಗಿ ಘೋಷಿಸಿ ನನ್ನ ಬಾಯಿ ಮುಚ್ಚಿಸಿದ್ರು.

ಅಪ್ಪ ಆಕ್ಷಣವೇ ನನ್ನನ್ನು ಹೊರಡಿಸಿಕೊಂಡು ಕಟ್ಟೇರಮನೆಗೆ ಹೋಗಿ ಅಲ್ಲಿ ಅಜ್ಜಿ ಮತ್ತು ಚಿಕ್ಕಮ್ಮಂಗೆ `ಇವಳು ಇಲ್ಲೊಂದ್ವಾರ ಇದ್ದು ಬರ್ತೀನಿ ಅಂತ ಇವರಮ್ಮಂಗೆ ಹೇಳಿ ಬಂದಿದ್ದಾಳೆ. ಇರ್ತಾಳೋ ನಾಳೇನೆ ಟೆಂಟ್ ಕೀಳ್ತಾಳೋ ನೋಡನಾ’ ಅಂತ ಹೇಳಿ ನನ್ನನ್ನ ಅಲ್ಲೆ ಬಿಟ್ಟು ವಾಪಾಸ್ ಹೋದ್ರು. ಅಜ್ಜಿ ಮನೆಯಲ್ಲಿ ಎರಡು ಸಂಸಾರಗಳು ವಾಸ ಮಾಡ್ತಿದ್ವು. ಒಂದು ಭಾಗದಲ್ಲಿ ಅಜ್ಜಿ ಚಿಕ್ಕಪ್ಪ, ಚಿಕ್ಕಮ್ಮ, ಮತ್ತೊಂದು ಭಾಗದಲ್ಲಿ ದೊಡ್ಡಪ್ಪ, ದೊಡ್ಡಮ್ಮ, ಅಣ್ಣ, ಅಕ್ಕ (ದೊಡ್ಡಪ್ಪನ ಮಕ್ಕಳು)ಇರುತ್ತಿದ್ದರು.

ಅಜ್ಜಿ ಮನೆಗೆ ಬಂದ ಅರೆಗಳಿಗೆಯಲ್ಲೇ ಬೇಸರವಾಗಲಿಕ್ಕೆ ಶುರುವಾಯ್ತು. ನಮ್ಮನೆಯಲ್ಲಾಗಿದ್ರೆ ರಾಶಿ, ರಾಶಿ ಪತ್ರಿಕೆ, ಪುಸ್ತಕಗಳಿರುತಿದ್ದವು. ಅವುಗಳನ್ನು ಓದುತ್ತಾ ಹಾಗೆ ಮೈ ಮರೆತು ಬಿಡುತ್ತಿದ್ದೆ. ಜೊತೆಗೆ ಅಕ್ಕಪಕ್ಕದ ಮನೆಯಲ್ಲಿ ಓರಗೆಯ ಗೆಳತಿಯರಿದ್ದರು. ಆದರೆ ಇಲ್ಲಿ ಎಲ್ಲಿ ಹುಡುಕಿದರೂ ಒಂದು ಪುಸ್ತಕ, ಪತ್ರಿಕೆ ಏನೂ ಸಿಗಲಿಲ್ಲ. ಅಕ್ಕಪಕ್ಕದಲ್ಲಿ ಮನೆಗಳು ಇರಲಿಲ್ಲ. ಕೊನೆಗೆ ಇಡೀ ಮನೆ ಶೋಧಿಸಿ ದೇವರ ಪಟದಡಿಯ ಕಪಾಟಿನಲ್ಲಿ ಸರ್ವಜ್ಞನ ವಚನಗಳು ಅನ್ನೋ ಪುಸ್ತಕ ಸಿಕ್ಕಿದಾಗ ನನಗಾದ ಖುಷಿ ಅಷ್ಟಿಷ್ಟಲ್ಲ. ಅದನ್ನು ಮತ್ತೆ ಮತ್ತೆ ಓದಿದೆ.

ಅಜ್ಜಿ ಮನೆಯಲ್ಲಿ ಎಲ್ಲರಿಗೂ ಬೇಗ ಮಲಗಿ ಬೇಗ ಏಳೋ ಅಭ್ಯಾಸ ಇತ್ತು. ಅಜ್ಜಿ ಆ ದಿವಸ ನನ್ನನ್ನು ತಮ್ಮ ಪಕ್ಕ ನಡುಮನೆಯಲ್ಲಿ ಮಲಗಿಸಿಕೊಂಡ್ರು. ಆದರೆ ಮಲಗುತ್ತಿದ್ದಂತೆ ಗಾಢ ನಿದ್ದೆಗೆ ಜಾರುತಿದ್ದ ನನಗೆ ನನಗೆ ಎಷ್ಟು ಹೊತ್ತಾದ್ರೂ ನಿದ್ದೇನೆ ಬರ್ಲಿಲ್ಲ. ಚಿಕ್ಕಪ್ಪನ ಕೋಣೆಯಿಂದ ಹಿಟ್ಟು ಬೀಸ್ತಾ ಇರೋ ಶಬ್ದ ಬರ್ತಿತ್ತು. `ಅಜ್ಜಿ, ಚಿಕ್ಕಮ್ಮ ಈಗ್ಯಾಕೆ ಹಿಟ್ಟು ಬೀಸ್ತಿದಾರೆ’ ಅಂದೆ. ಅಜ್ಜಿ ನಿದ್ದೆಗಣ್ಣಲ್ಲೆ, ಹೂಂ ಹಿರೇರು ಗಾದೆ ಮಾಡಿದಾರಲ್ಲ, `ಹಗಲಿಡೀ ಹಾರಾಟ, ಗಂಡ ಬರೋ ಹೊತ್ತಿಗೆ ಗೂರಾಟ’ ಅಂತ ಇದೂ ಹಂಗೇಯ’ ಎಂದು ಜೋರಾಗೇ ಗೊಣಗಿದ್ರು. ನನಗೆ ಮಲಗಿದಲ್ಲೇ ಕಸಿವಿಸಿ ಆಗೋಕೆ ಶುರುವಾಯ್ತು. ಥೂ ಅಜ್ಜಿ ಎಷ್ಟು ಕೊಳಕು ಶಬ್ದ ಮಾತಾಡ್ತಾರಪ್ಪ, ಅಮ್ಮ ಇದಕ್ಕೆ ಹೋಗೋದು ಬೇಡ ಅಂದ್ರೇನೋ ಅನ್ನಿಸ್ತು. ಅಮ್ಮ ಕೊಂಕಣಿಯವರಾದ್ದರಿಂದ ಮನೆಯಲ್ಲಿ ಅಪ್ಪ ಒಬ್ಬರನ್ನು ಬಿಟ್ಟು ಎಲ್ಲರೂ ಕೊಂಕಣಿ ಮಾತಾಡ್ತಿದ್ವಿ. ಗಂಡ ಬರೋಹೊತ್ತಿಗೆ.., ಗೂರಾಟ ಇಂಥ ಶಬ್ದಗಳೆಲ್ಲ ಅಪರಿಚಿತವಾಗಿದ್ವು. ಜೊತೆಗೆ ಅಮ್ಮ ಮನೆಯಲ್ಲೂ ಸ್ಟ್ರಿಕ್ಟ್ ಟೀಚರ್ರೆ. ಅಮ್ಮನ ಲಿಸ್ಟ್ನಲ್ಲಿ ಕೆಲವು ಕೆಟ್ಟ ಪದಗಳು ಅಂತ ಇದ್ವು. ಅವನ್ನೂ ಯಾರೂ ಮಾತಾಡುವಂತಿರಲಿಲ್ಲ. ಒಂದುವೇಳೆ ಮಾತಾಡಿದ್ವಿ ಅಂದ್ರೆ ಶಿಕ್ಷೆ ಗ್ಯಾರಂಟಿ. ಈಗ ಅಜ್ಜಿ ಮಾತಾಡಿದ್ದು ಆ ಲಿಸ್ಟಿಗೆ ಸೇರಿತ್ತು. ಜೊತೆಗೆ ನಂಗೆ ಒಳಗೊಳಗೆ ಖುಷಿನೂ ಆಯ್ತು. ನಾನು ಓದುತ್ತಿದ್ದ ಕನ್ನಡ ಶಾಲೆಯಲ್ಲಿ ನನ್ನ ಗೆಳತಿಯರು ಆಡೋ ಎಷ್ಟೋ ಶಬ್ದಗಳನ್ನು ನಾನು ಅಮ್ಮನ ಹೆದರಿಕೆಯಿಂದ ಆಡ್ತಿರಲಿಲ್ಲ. ಆದರೀಗ ಅಜ್ಜಿ ಮನೆಯಲ್ಲಿ ಯಾರದೇ ಹೆದರಿಕೆ ಇಲ್ಲದೇ ಮಾತಾಡಬಹುದು ಅನ್ನಿಸ್ತು.

ಇನ್ನಷ್ಟು

ಮತ ಬಲವೂ ಆಗಬಹುದು…

ದಣಪೆಯಾಚೆ

ak11

ಕೆ ಅಕ್ಷತಾ

ನಾನು ಚಿಕ್ಕವಳಿರುವಾಗ ವೋಟ್ ಹೇಗೆ ಹಾಕೋದು ಎನ್ನುವುದು ನನ್ನನ್ನು ಚುನಾವಣೆ ಬಂದಾಗೆಲ್ಲ ಕಾಡುತಿದ್ದ ಪ್ರಶ್ನೆಯಾಗಿತ್ತು. ಅಮ್ಮ, ಅಪ್ಪ ಅಜ್ಜಿ ಎಲ್ಲರನ್ನು ಇದರ ಬಗ್ಗೆ ಕೇಳಿ ಕೇಳಿ ತಲೆ ತಿನ್ನುತಿದ್ದೆ. ವೋಟ್ ಹಾಕಲು ಅಮ್ಮ, ಅಜ್ಜಿ ಹೋಗುವಾಗ ನಾನು ಹೋಗಿ ಅವರ ಜೊತೆ ಸರತಿ ಸಾಲಿನಲ್ಲಿ ನಿಲ್ಲುತಿದ್ದೆ. ಆದರೆ ನನಗೆ ಒಳಗೆ ಮಾತ್ರ ಹೋಗಗೊಡುತಿರಲಿಲ್ಲ. ಒಳಗೆ ಹೋದ ಅಮ್ಮ ಹೊರಗೆ ಬರುವಾಗ ಆಕೆಯ ಬೆರಳಿಗೆ ಇಂಕು ತಾಗಿರುವುದನ್ನು ನೋಡಿ ಆ ಇಂಕನ್ನು ನಮಗೆ ಬೇಕಾದ ಗುರುತಿನ ಮುಂದೆ ಒತ್ತಿದರೆ ವೋಟ್ ಹಾಕಿದಂತೆ ಎಂದು ತಿಳಿದಿದ್ದೆ. ನಮ್ಮೂರಲ್ಲಿ ಬಹಳಷ್ಟು ಜನ ಹೆಬ್ಬೆಟ್ಟು ರುಜು ಮಾಡ್ತಾ ಇದ್ದವರನ್ನು ನಾ ನೋಡಿದ್ದರಿಂದ ವೋಟು ಹಾಕೋದು ಅದೇ ರೀತಿ ಎಂದು ತಿಳಿದಿದ್ದೆ. ನನಗೆ ವೋಟು ಹಾಕುವುದರ ಬಗ್ಗೆ ಸ್ಪಷ್ಟ ಕಲ್ಪನೆ ಬಂದಿದ್ದು ನಾನು ಮೊದಲ ಬಾರಿಗೆ ಮತ ಚಲಾಯಿಸಿದಾಗಲೇ.

vote_ti1n1_17334

ಚುನಾವಣೆ ಎಂದರೆ ಹಣದ ಹಂಚುವಿಕೆ, ಹೆಂಡದ ಮತ್ತು, ಜಗಳ ಗಲಾಟೆ ಅಬ್ಬರ ಪರಸ್ಪರ ಕೆಸರೆರಚುವಿಕೆ ಏನೇ ಇರಲಿ ಅವೆಲ್ಲವನ್ನು ಬಿಟ್ಟು ಒಂದಿಷ್ಟು ಕುತೂಹಲದ, ಆಪ್ತವಾದ, ಪತ್ರಿಕೆಗಳಲ್ಲಿ ಸ್ಥಾನ ಪಡೆಯದ ಹಲವು ಘಟನೆಗಳು ಚುನಾವಣೆ-ಮತದಾನಕ್ಕೆ ಸಂಬಂಧಪಟ್ಟಂತೆ ನಡೆಯುತ್ತಲೇ ಇರುತ್ತದೆ. ಪ್ರತಿ ಮನೆ, ಬೀದಿ, ಊರು ಎಲ್ಲೆಲ್ಲೂ…

ನಾನು ಹೈಸ್ಕೂಲಿನ ಕೊನೆಯ ವರ್ಷದಲ್ಲಿ ಓದುವಾಗ ಆ ವರ್ಷ ವಿಧಾನಸಭೆಗೆ ಚುನಾವಣೆ ನಡೆಯುವುದಿತ್ತು. ನನ್ನ ಗೆಳತಿಯೊಬ್ಬಳ ಹೆಸರು ಅದೇ ತಾನೇ ಮತದಾನ ಪಟ್ಟಿ ಸೇರಿ ಆಕೆ ಪ್ರಥಮ ಬಾರಿಗೆ ಮತದಾನ ಮಾಡುವ ಉಮೇದಿನಲ್ಲಿದ್ದಳು. ನಮ್ಮ ಹೆಸರು ಇನ್ನು ಮತ ಪಟ್ಟಿಗೆ ಸೇರಿಲ್ಲದೆ ಇದ್ದಿದ್ದರಿಂದ ನಮಗಾರಿಗೂ ಅವಕಾಶ ಇರಲಿಲ್ಲ. ಈ ಅಂಶವೂ ಅವಳ ಹೆಮ್ಮೆಯನ್ನು ಹೆಚ್ಚಿಸಿತ್ತು. ಅವಳು ನಮ್ಮಗಳೆಲ್ಲರ ಹತ್ತಿರವೂ ತಿಂಗಳ ಹಿಂದಿನಿಂದಲೂ ಯಾರಿಗೆ ವೋಟು ಹಾಕಲಿ ಅಂತ ಕೇಳೋದು ನಾವು ದಿನಕ್ಕೊಬ್ಬರ ಪರ ನಿಂತು ಅವರಿಗೆ ಹಾಕು ಅಂತ ಒಂದಿನ, ಮರುದಿನವೇ ನಿರ್ಧಾರ ಬದಲಿಸಿ ಇವರಿಗೆ ಹಾಕು ಅಂತ ಹೇಳೋದು. ಮೂರನೇ ದಿನ ಅವರ್ಯಾರು ಬೇಡ ಅಂತೇಳಿ ಮಗದೊಬ್ಬರ ಪರ ನಿಲ್ಲುವುದು ಹೀಗೆ ನಡೆಯುತಿತ್ತು. ಜೊತೆಗೆ ನಮ್ಮ ಅಪ್ಪಂದಿರ ಹತ್ತಿರವೂ ಯಾರು ಗೆಲ್ಲಬಹುದು, ಯಾರು ಒಳ್ಳೆಯ ಅಭ್ಯರ್ಥಿ ಅಂತೆಲ್ಲ ಕೇಳಿ ವಿಷಯ ತಿಳಿದುಕೊಂಡು ಬರುತಿದ್ದೆವು ಅವಳಿಗಾಗಿ. ಆದರೆ ನಮ್ಮ ಅಪ್ಪಂದಿರು ಅವರು ಯಾವ ಪಕ್ಷದಲ್ಲಿದ್ದಾರೋ ಆ ಪಕ್ಷದ ಅಭ್ಯರ್ಥಿಯೇ ಸರ್ವಶ್ರೇಷ್ಠ ಅಂತ ಹೇಳಿ ನಂಬಿಸುತಿದ್ದುದರಿಂದ ಈ ವಿಷಯದಲ್ಲಿ ನಮ್ಮನಮ್ಮಲ್ಲೆ ವಾಗ್ವಾದಗಳು ಜಗಳಗಳು ಆಗತೊಡಗಿದವು. ಅದು ಆ ವಯಸ್ಸಿನಲ್ಲಂತೂ ಎಲ್ಲ ಹೆಣ್ಣುಮಕ್ಕಳಿಗೂ ಅವರವರ ಅಪ್ಪ ಹೇಳಿದ್ದೇ ಸರಿ. ಅದರ ಬಗ್ಗೆ ಚಕಾರ ಎತ್ತುವ ಹಾಗೆ ಇಲ್ವಲ್ಲ.

ವೋಟು ಹಾಕಲು ಅರ್ಹತೆ ಇರುವ ಗೆಳತಿಯೇನೂ ಕಡಿಮೆಯವಳಲ್ಲ ನನ್ನ ಹತ್ತಿರ ನಾನು ಹೇಳಿದವರಿಗೆ ವೋಟ್ ಹಾಕ್ತೀನಿ ಅಂತ ಮಾತು ಕೊಡೋದು. ಇನ್ನೊಬ್ಬಳ ಹತ್ತಿರವೂ ಇದೇ ಮಾತು ಹೇಳುವುದು. ಮೂರನೆಯವಳು ಏನಾದ್ರೂ ಹೇಳಿದರೆ ಅವಳು ಹೇಳಿದ ಹಾಗೆ ಕೇಳೋದು ಹೀಗೆ ಮಾಡೋಳು. ಆದರೆ ಚುನಾವಣೆಗೆ ಮೂರ್ನಾಲ್ಕು ದಿನ ಇರುವಾಗ ಇಷ್ಟು ದಿನದ ಉಮೇದನ್ನೆಲ್ಲ ಕಳೆದುಕೊಂಡವಳಂತೆ ಅಳು ಮುಖ ಮಾಡಿಕೊಂಡು ಶಾಲೆಗೆ ಬಂದಳು. ಅವಳ ಊರಿನ ಒಂದಷ್ಟು ದೊಡ್ಡವರು `ಎಷ್ಟು ಹೇಳಿದರೂ ಊರಿಗೊಂದು ರಸ್ತೆ ಮಾಡಿಸಿಕೊಟ್ಟಿಲ್ಲ, ಕೆರೆಯಲ್ಲಿ ಹೂಳು ಎತ್ತಿಸಿಕೊಟ್ಟಿಲ್ಲ ಅದಕ್ಕೆ ಈ ಬಾರಿ ಊರಿನ ಯಾರೂ ಓಟು ಹಾಕಬೇಡಿ. ಯಾಕೆ ವೋಟ್ ಹಾಕಿಲ್ಲ ಅಂತ ಕೇಳಕ್ಕೆ ರಾಜಕಾರಣಿಗಳು ನಮ್ಮೂರಿಗೆ ಬರ್ತಾರೆ ಈ ರಸ್ತೆ ಇಲ್ಲದಲ್ಲಿ ಬರೋ ಕಷ್ಟ ಅವರಿಗೆ ಗೊತ್ತಾಗಲಿ. ಒಂದು ವೇಳೆ ಮಾತು ಮೀರಿ ವೋಟು ಹಾಕಿದರೆ ಅಂಥವರಿಗೆ ಊರಿಂದ ಬಹಿಷ್ಕಾರ ಹಾಕೋದು ಎಂದು ಫರ್ಮಾನು ಹೊರಡಿಸಿದ್ದಾರಂತೆ’ ಈ ರೀತಿ ತನ್ನ ವೋಟ್ ಹಾಕುವ ಹಕ್ಕಿಗೆ ಚ್ಯುತಿ ಬಂದದಕ್ಕಾಗಿ ಅವಳು ದುಃಖಿತಳಾಗಿದ್ದಳು.

ಊರು ಮನೆಯಿಂದ ಹೊರಗೆ ಹಾಕಿಸ್ಕಳದಕ್ಕಿಂತ ವೋಟು ಹಾಕದೆ ಇರೋದೆ ಒಳ್ಳೆದು ಎಂದು ನಾವೆಲ್ಲರೂ ಭಾವಿಸಿದೆವು. ಆಕೆಯು ಹಾಗೆಂದುಕೊಂಡೆ ಸಮಾಧಾನ ಮಾಡಿಕೊಂಡಳು. ಮುಂದೆ ನಮ್ಮಲ್ಲಿ ಚುನಾವಣೆ ಬಗ್ಗೆ ಅಂಥ ಕುತೂಹಲ ಇರಲಿಲ್ಲ. ಆದರೆ ಮತದಾನದ ಮರುದಿನ ಆಕೆ ಏಯ್ ವೋಟ್ ಹಾಕಿಬಂದೆ ನೋಡ್ರೆ ಅಂತ ಇಂಕಿನ ಕಲೆ ಹಾಗೆ ಉಳಿದಿದ್ದ ಬೆರಳು ಮುಂದೆ ಮಾಡಿದಾಗಲೇ ಮತ್ತೆ ನಮ್ಮ ಕುತೂಹಲ ಕೆರಳಿದ್ದು. ಮತ್ತೆ ಯಾರೂ ವೋಟ್ ಮಾಡೋ ಹಾಗಿಲ್ಲ ಅಂತ ಹೇಳಿದಾರೆ ಅಂತಿದ್ದೆ ಎಂದು ನಾವೆಲ್ಲ ರಾಗ ಎಳೆದರೆ. ಆಕೆ ಅಯ್ಯೋ ಅದೇನಾಯ್ತು ಗೊತ್ತೇನ್ರೆ ನಮ್ಮೂರಿನ ಮರಗೆಲಸದ ವೆಂಕಟ ಮತ್ತು ಅವನ ಜೊತೆ ಇರೋ ಮೂರು ಜನ ಕೆಲಸಗಾರರು ಬೇರೆ ಊರಿಗೆ ಕೆಲಸಕ್ಕೆ ಅಂತ ಹದಿನೈದು ದಿನದ ಹಿಂದೆ ಹೋದವರು ನಿನ್ನ ಬೆಳೆಗ್ಗೆ ಊರಿಗೆ ಬಂದಿದಾರೆ. ಅವರಿಗೆ ವಿಷಯ ಗೊತ್ತಿಲ್ಲ. ಪೇಟೆಯಲ್ಲಿ ಬಸ್ ಇಳಿದು ಊರಿಗೆ ನಡ್ಕೊಬರಬೇಕು.

ವೋಟ್ ಹಾಕಕ್ಕಿರದು ಪೇಟೆಯಲ್ಲೆ ಆದರಿಂದ ವೋಟ್ ಹಾಕೇ ಊರಿಗೆ ಹೋಗಿಬಿಡೋಣ. ಮನೆಗೆ ಹೋಗಿ ಮತ್ತೆ ಯಾರು ಇಲ್ಲಿಗೆ ನಡ್ಕೊಬರ್ತಾರೆ ಅಂತ್ಹೇಳಿ ವೋಟ್ ಹಾಕೆ ಬಂದ್ಬಿಟ್ಟಿದ್ದಾರೆ. ಇವರನ್ನು ನೋಡಿ ಊರವರೆಲ್ಲ ಊರಿನವರು ಒಬ್ರು ವೋಟು ಹಾಕಿಲ್ಲ ಅಂದ್ರೆ ಅದು ಬೇರೆ ಪ್ರಶ್ನೆ ಈಗ ನಾಲ್ಕು ಜನ ವೋಟ್ ಹಾಕಿ ಆಗಿದೆ. ಸ್ಟ್ರೈಕ್ ಮಾಡೋದ್ರಲ್ಲಿ ಅರ್ಥ ಇಲ್ಲ ಈಗ ಎಲ್ಲರೂ ಓಟು ಹಾಕಣ ಮುಂದಿನ ಚುನಾವಣೆಯಲ್ಲಿ ಎಲ್ಲರು ಮೊದಲೇ ಮಾತಾಡಕಂಡು ಒಬ್ಬರೂ ವೋಟ್ ಹಾಕದು ಬೇಡ ಎಂದು ನಿರ್ಧರಿಸಿದರಂತೆ. ಅಂತೂ ಗೆಳತಿಯ ವೋಟ್ ಹಾಕೋ ಕನಸು ನನಸಾಗಿತ್ತು.

ನಮ್ಮೂರಿನಲ್ಲಿ ಒಬ್ಬರು ಮುಖಂಡರಿದ್ದರು. ಅವರು ಲಾಗಾಯ್ತಿನಿಂದ ಕಾಂಗ್ರೆಸ್ ಪಕ್ಷದ ಮುಂದಾಳು. ವೋಟು ಅಂದ ಕೂಡಲೇ ಕೈ ಮುಂದೆ ಒತ್ತದು ಅಂತ ಅವರ ಮನಸ್ಸಿನಲ್ಲಿ ಕುಳಿತು ಬಿಟ್ಟಿತ್ತು. ಆದರೆ ಅವರ 60 ನೇ ವಯಸ್ಸಿನಲ್ಲಿ ಕಾಂಗ್ರೆಸ್ ಅವರ ಗೆಳೆಯನಿಗೆ ಕೈ ಕೊಟ್ಟು ಅವರ ವಿರೋಧಿಗೆ ವಿಧಾನಸಭೆ ಚುನಾವಣೆಗೆ ಟಿಕೇಟ್ ಕೊಟ್ಟು ಬಿಟ್ಟಿತು. ಅವರ ಗೆಳೆಯ ಒಮ್ಮೆ ಕಾಂಗ್ರೆಸ್ನಿಂದ ಗೆದ್ದು ಶಾಸಕನಾಗಿದ್ದವರು. ಆದರೆ ಈ ಬಾರಿ ಟಿಕೇಟ್ ಸಿಕ್ಕಿರಲಿಲ್ಲವಾದರಿಂದ ಅವರನ್ನು ಜನತಾ ಪಕ್ಷದವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಟಿಕೇಟ್ ಕೊಟ್ಟರು. ನಮ್ಮೂರಿನ ಮುಖಂಡರು ಕೂಡಲೇ ಜನತಾಪಕ್ಷ ಸೇರಿ ಅವರ ಸಭೆಯಲ್ಲಿ ಹಾರ ಹಾಕಿಸಿಕೊಂಡು ಆ ಪಕ್ಷದ ಮುಖಂಡರೊಂದಿಗೆ ಫೋಟೋಕ್ಕೆ ಫೋಸ್ ಕೊಟ್ಟು ಮಿಂಚಿದರು. ಕಾಂಗ್ರೆಸ್ಗೆ ಪ್ರಚಾರ ಮಾಡ್ತಿದ್ದವರು ಈ ಬಾರಿ ಜನತಾ ಪಕ್ಷದ ಪರ ಪ್ರಚಾರಕ್ಕೆ ನಿಂತರು. ಪ್ರತಿ ಮನೆಯ ಮೆಟ್ಟಿಲು ತುಳಿದು. ಗೃಹಿಣಿಯರು, ಮುದುಕಿಯರು ಎಲ್ಲರನ್ನು ಕರೆದು ನೋಡಿ ಕೈಗೆ ವೋಟ್ ಹಾಕಿ ಅಂತಿದ್ದೆ ಈ ಸರ್ತಿ ನೇಗಿಲು ಹೊತ್ತ ರೈತನಿಗೆ ವೋಟ್ ಹಾಕಬೇಕು ಅಂತ ಹೇಳ್ತಾ ಇದೀನಿ ನೀವು ನಾ ಹೇಳಿದ ಹಾಗೆ ಮಾಡಬೇಕು. ಯಾವ ಗುರುತು ಹೇಳಿ ನೇಗಿಲು ಹೊತ್ತ ರೈತ ಗೊತ್ತಾಯ್ತಲ್ಲ ಎಂದು ಅವರ ಬಾಯಿಂದ ಮೂರು ಮೂರು ಸರ್ತಿ ಹೇಳಿಸಿ ಖಾತ್ರಿ ಮಾಡಿಕೊಂಡು ಹೋದರು. ಚುನಾವಣೆ ದಿನವೂ ತಮ್ಮ ಹಿಂಬಾಲಕರ ಜೊತೆ ತಾವು ಸೇರಿದ ಹೊಸ ಪಕ್ಷಕ್ಕೆ ಜಯಘೋಷ ಕೂಗುತ್ತಲೆ ಮತದಾನ ಕೇಂದ್ರ ಪ್ರವೇಶಿಸಿದರು. ಏನಾದರೇನು ಕಲ್ತಿದ್ದು ಬಿಡಕ್ಕಾಗ್ತದೆಯಾ? ಹೋದ್ರು ಹೋಗಿದ್ದೆ ಲಾಗಾಯ್ತಿನಂತೆ ಕೈಗೆ ಮತ ಹಾಕೆ ಬಿಟ್ಟರು.

ಅಲ್ಲಿಂದ ಹೊರಗೆ ಬಂದ ಮೇಲಾದರೂ ನೆನಪಾಗಬಹುದಿತ್ತು ತಾವು ಮಾಡಿದ ಘನ ಕಾರ್ಯ! ಆದರೆ ಅಲ್ಲೇ ಕೆಳಗಿದ್ದ ನೇಗಿಲ ಹೊತ್ತ ರೈತನ ಚಿಹ್ನೆ ಹಾಗೆ ಆಗಗೊಡಲಿಲ್ಲ. ಮತದಾನದ ಕೇಂದ್ರದ ಅಧಿಕಾರಿಗಳಿಗೆ ಹೀಗಾಗಿದೆ ಇನ್ನೊಂದು ಬ್ಯಾಲಟ್ ಪೇಪರ್ ಕೊಡಿ(ಆಗಿನ್ನೂ ಎಲೆಕ್ಟ್ರಾನಿಕ್ ಮತ ಯಂತ್ರ ಬಂದಿರಲಿಲ್ಲ) ಎಂದು ಕೇಳಿದರು. ಆಗಲ್ಲ ಒಬ್ಬರಿಗೆ ಒಂದೇ ಮತ ಎಂದು ಅವರು ಹೇಳಿದರು. ಏಯ್ ನಾನು ಈ ಊರಿನ ಮುಖಂಡ ಇದೀನಿ ನಂಗೆ ಆಗೋದಿಲ್ಲ ಎಂದ್ರೆ ಏನು ಜಗಳಕ್ಕೆ ನಿಂತರು. ಊರಿನ ಮುಖಂಡರಿರಲಿ ದೇಶದ ಪ್ರಧಾನಿಗೂ ಒಂದೇ ವೋಟು ಅದರಲ್ಲಿ ಬೇರೆ ಮಾತೇ ಇಲ್ಲ ಎಂಬ ಉತ್ತರ ಬಂತು. ಅಷ್ಟೊತ್ತಿಗೆ ಮತದಾನ ಕೇಂದ್ರದ ಒಳಗೆ ಗುರುತು ಪತ್ತೆಗಾಗಿ ಕೂತಿದ್ದ ಐದಾರು ಹುಡುಗರು ಇವರೆಡೆಗೆ ನೋಡಿಕೊಂಡು ತಮ್ಮತಮ್ಮಲ್ಲೇ ನಗ ತೊಡಗಿದರು. ಮುಖಂಡ್ರು ಸೀಲ್ ಇಸ್ಕಂಡವರೇ ಎಲ್ಲ ಗುರುತುಗಳ ಮೇಲೂ ಒತ್ತಿ ಯಾರಿಗೂ ತಮ್ಮ ವೋಟು ಸಿಗದ ಹಾಗೆ ವ್ಯವಸ್ಥೆ ಮಾಡಿ ಹೊರಗೆ ಬಂದರು. ಈ ಘಟನೆ ನಮ್ಮೂರ ಕಡೆಯ ಹೆಂಗಸರಿಗೆ ಬಾವಿಕಟ್ಟೆಯ ಬಳಿ, ಗದ್ದೆ ಬಯಲ ಬಳಿ ಸೇರಿದಾಗ ಆಡಿಕೊಂಡು ನಗಲು ಬಹಳ ದಿನದವರೆಗೆ ವಸ್ತುವಾಗಿತ್ತು.

ನಮ್ಮ ಪಕ್ಕದ ಮನೆಯಲ್ಲಿ ಮಂಡ್ಯ ಕಡೆಯ ಕುಟುಂಬವಿತ್ತು. ಪ್ರತಿ ಚುನಾವಣೆಗೂ ವಿಧಾನಸಭೆ, ಲೋಕಸಭೆ ಇರಲಿ ಗ್ರಾಮಪಂಚಾಯ್ತಿ ಚುನಾವಣೆಯಿಂದ ಹಿಡಿದು ಎಲ್ಲ ಚುನಾವಣಾ ಸಂದರ್ಭದಲ್ಲೂ ಆ ಕುಟುಂಬ ಮಂಡ್ಯಕ್ಕೆ ಹೋಗಿ ಮತ ಚಲಾಯಿಸಿ ಬರಬೇಕಿತ್ತು. ಗಂಡ ಹೆಂಡತಿ ಇಬ್ಬರೂ ಕೆಲಸದಲ್ಲಿದ್ದರು. ಇಬ್ಬರು ಪುಟ್ಟ ಮಕ್ಕಳು ಬೇರೆ. ಚುನಾವಣಾ ದಿನಾಂಕ ಬೇರೆ ಆಗಿದ್ದರೆ ಅಲ್ಲಿ ಚುನಾವಣೆ ನಡೆಯೋ ದಿನ ಇಲ್ಲಿ ರಜೆ ಸಿಕ್ಕುತಿರಲಿಲ್ಲ. ಒಟ್ಟಾರೆ ಎಲ್ಲ ರೀತಿಯಲ್ಲೂ ಗೋಳು. ಏನ್ರಿ ಇದು ಇಲ್ಲೇ ಮತಪಟ್ಟಿಯಲ್ಲಿ ಹೆಸರು ಸೇರಿಸಬಾರದೆ ಎಂದರೆ ಅಯ್ಯೋ ನಿಮಗೆ ಗೊತ್ತಿಲ್ಲ ರೀ ನಮ್ಮ ಮಾವಂದು ಪಾಳೆಗಾರಿಕೆ ಬುದ್ದಿ ಕಣ್ರಿ ಅವರು ಹೇಳಿದ್ದೇ ನಡಿಬೇಕು. ನಮ್ಮನೆಯವರು ಸೇರಿ ಆರು ಜನ ಗಂಡು ಮಕ್ಕಳು. ನಾಲ್ಕು ಜನ ಬೇರೆ ಬೇರೆ ಕಡೆ ಇದೀವಿ ಆದರೆ ವೋಟ್ ಹಾಕಕ್ಕೆ ಮಾತ್ರ ಊರಿಗೆ ಹೋಗಬೇಕು. ಮಕ್ಕಳು ಸೊಸೆಯರ್ದು ಇರಲಿ ಮೊಮ್ಮಕ್ಕಳ ಹೆಸರು ಸಹ ಅಲ್ಲೇ ಸೇರಿಸಿದಾರೆ ಅಂತೀನಿ.

ಚುನಾವಣೆ ದಿನ ನೋಡಬೇಕು ನಮ್ಮಾವ ಒಳ್ಳೆ ರೇಷ್ಮೆ ಪಂಚೆ ಉಟ್ಕಂಡು ಶಲ್ಯ ಹೆಗಲಮೇಲೆ ಹಾಕಿ ಬೆಳ್ಳಂಬೆಳಗೆ ಹೊರಟ್ರೆ ಅವರ ಹಿಂದೆ ಅತ್ತೆ, ಗಂಡುಮಕ್ಕಳು ಸೊಸೆಯರು, ಮೊಮ್ಮಕ್ಕಳು ಹೀಗೆ. ಒಂದಿಡಿ ರಸ್ತೆ ಸಾಕಾಗಲ್ಲ ಕಣ್ರಿ ನಮ್ಮಿಡೀ ಕುಟುಂಬ ನಡೆಯೋಕೆ. ಊರವರೆಲ್ಲ ಮನೆಯಿಂದ ಹೊರಗೆ ಬಂದು ಬಂದು ನೋಡ್ಕಂಡು ಹೋಗ್ತಾವ್ರೆ ಏನಪ್ಪ ಇದು ಮೆರವಣಿಗೆ ಹೊರಟಿದೆ ಅಂತ. ಮತ್ತೆ ಅವರ ಪಕ್ಷ ಇದೆಯಲ್ಲ ಆ ಪಕ್ಷಕ್ಕೆ ನಮ್ಮನೆಯಿಂದಲೇ ಇಪ್ಪತ್ತು ವೋಟು ಅಂತ ಬೀದಿಲೆಲ್ಲ ಸಾರ್ಕಂಡು ಹೋಗೋದು ಬೇರೆ. ಆದರೆ

ನಿಜ ಹೇಳ್ತೀನ್ರಿ ಎಲ್ಲ ಚುನಾವಣೆಗೂ ಅಲ್ಲೆ ಹೋಗಿ ವೋಟ್ ಹಾಕಬೇಕು ಅದಕ್ಕೇನೂ ಮಾಡೋ ಹಾಗಿಲ್ಲ ನಮ್ಮ ಕರ್ಮ. ಆದರೆ ಒಂದೆ ಒಂದು ಸರ್ತಿನೂ ಅವರು ಹೇಳಿದ ಪಕ್ಷಕ್ಕೆ ವೋಟ್ ಹಾಕಿಲ್ಲಾ ಕಣ್ರಿ ನಾನು. ಅವರು ಯಾವ ಪಕ್ಷದವನಿಗೆ ಬಯ್ತಾ ಇರ್ತಾರೋ ಅವರಿಗೆ ವೋಟ್ ಹಾಕಿದ್ದೀನಿ ಹಿಂಗಾದರೂ ನನ್ನ ಸಿಟ್ಟು ಕಡಿಮೆಯಾಗಲಿ ಅಂತ. ನನಗೆ ಮತ್ತೂ ಒಂದು ಅನುಮಾನ ಇದೆ. ಅನುಮಾನ ಏನು ಸತ್ಯಾನೇ ಅಂದ್ರು ಸರಿ ನನ್ನ ವಾರಗಿತ್ತಿಯರು ನನ್ನ ಹಾಗೆ ಮಾಡಿ ಅವರ ಸಿಟ್ಟನ್ನು ತೀರಿಸ್ಕಂತಾರೆ ಅಂತ… ವಿರೋಧ ವ್ಯಕ್ತಪಡಿಸಲು ಮಾತಿನ ಬಲವೇ ಬೇಕಂತ ಹೇಳಿದವರು ಯಾರು? ಮತ ಬಲವೂ ಆಗಬಹುದು.

ದಣಪೆ ದಾಟಿ ಬೆಟ್ಟಕ್ಕೆ….

ಕೆ ಅಕ್ಷತಾ

ak1

 

 

 

ದಣಪೆಯಾಚೆ

ಸುತ್ತ ಗೋಡೆಯಂತೆ ಸುತ್ತುವರೆದಿರುವ ಹೆಬ್ಬಂಡೆಗಳು ನಡುವೆ ಕಲ್ಲಿನಿಂದ ಕಟ್ಟಿದ ಪುಟ್ಟ ಕೊಳ ಹಿಂದಿನ ಬಾರಿ ಬಂದಾಗ ಕೊಳದಲ್ಲಿ ನೀರಿತ್ತು ಈ ಬಾರಿ ಇರಲಿಲ್ಲ. ಅಮ್ಮನ ಘಟ್ಟದ ಜೇನುಕಲ್ಲಮ್ಮ ದೇವಸ್ಥಾನದ ಆವರಣಕ್ಕೆ ಕಾಲಿಟ್ಟ ಕೂಡಲೇ ಇವನಿಗೆ ಇಲ್ಲೆಲ್ಲೋ ಒಂದು ಕೊಳ ಇದೆ ಕಣೋ ಎಂದೆ. ಕೊಳವಾ ಇನ್ನೆಂತಾ ಎಂದು ಹಾಸ್ಯ ಮಾಡಿದ. ಇಲ್ಲ ಕಣೋ ಇಲ್ಲೆಲ್ಲೋ ಒಂದು ಕೊಳ ಇತ್ತು ನನಗೆ ಖರೆ ನೆನಪಿದೆ ಎಂದೆ. ಹಿಂದಿನ ಬಾರಿಯೆಂದರೆ ಒಂದೆರಡು ವರ್ಷದ ಹಿಂದಿನ ಕತೆಯಲ್ಲ ಬರೋಬ್ಬರಿ ಹತ್ತು ವರ್ಷಗಳ ಹಿಂದೆ. ಹಿಂದಿನ ದಿನ ಹೋದವರ ಮನೆಯ ದಾರಿಯನ್ನು ಮರುದಿನದವರೆಗೂ ನೆನಪಿಟ್ಟುಕೊಳ್ಳಲು ಸೋಲುವ ತನ್ನ ಹೆಂಡತಿ ಅದ್ಯಾವಾಗಲೋ ಭೇಟಿಕೊಟ್ಟ ಅಮ್ಮನಘಟ್ಟದಲ್ಲಿ ಇಲ್ಲೆಲ್ಲೊ ಒಂದು ಕೊಳವಿದೆ ಎಂದು ಹುಡುಕಲು ಹೊರಟರೆ ಅವನಿಗೆ ಅದೊಂದು ಜೋಕಾಗಿ ಕಾಣದೆ ಇನ್ನೇನಾಗಿ ಕಂಡೀತು.

ಆದರೆ ನನಗೆ ಅಷ್ಟು ಚೆನ್ನಾಗಿ ಕೊಳದ ಬಗ್ಗೆ ನೆನಪಿಟ್ಟುಕೊಳ್ಳಲು ಕಾರಣವಿತ್ತು. ಆಗ ಪ್ರಥಮ ಪಿಯುಸಿಯಲ್ಲಿದ್ದೆ ಗೆಳತಿ ರಂಜನಾ ದಸರಾ ರಜೆಯಲ್ಲಿ ಅಮ್ಮನಘಟ್ಟ ತೋರಿಸಲು ಕರೆದುಕೊಂಡು ಬಂದಿದ್ದಳು. ಅವಳ ಸೋದರತ್ತೆಯ ಮೂವರು ಮಕ್ಕಳು ನಮ್ಮ ಜೊತೆಗಿದ್ದರು. ರಂಜೂ ನನ್ನ ಪಾಲಿನ ಗೆಳತಿ ಮತ್ತು ಗೈಡ್. ಸುತ್ತ ಮುತ್ತಲ ಅದೆಷ್ಟೋ ಊರುಗಳಿಗೆ ನನ್ನನ್ನು ಕರೆದೊಯ್ದು ತೋರಿಸಿದವಳು ಅವಳೇ. ಅಮ್ಮನಘಟ್ಟಕ್ಕೆ ಬಂದಾಗಲೂ ಎಂದಿನಂತೆ ನಾವೆಲ್ಲರು ತಂದ ದಾರಿ ಖರ್ಚಿನ ಹಣ ರಂಜೂವಿನ ಬ್ಯಾಗಲ್ಲಿತ್ತು. ಬುತ್ತಿಯ ಗಂಟು, ನೀರಿನ ಬಾಟಲಿ ಬಾಳೆ ಹಣ್ಣಿದ್ದ ಚೀಲ ಹೀಗೆ ಒಬ್ಬೊಬ್ಬರ ಹೆಗಲಿಗೆ ಒಂದೊಂದು ಜವಾಬ್ದಾರಿ ಗಂಟು ಬಿದ್ದಿತ್ತು. ಅವರವರ ಅರ್ಹತೆಗೆ ತಕ್ಕಂತೆ. ಮೊದಲಿಗೆ ಕೊಳದ ಬಳಿ ಹೋದವರೇ ಅಲ್ಲಿ ಸ್ವಲ್ಪ ಹೊತ್ತು ಕೂತು ಕೊಳದ ನೀರಿನಲ್ಲಿ ನಮ್ಮ ಪ್ರತಿಬಿಂಬ ನೋಡುತ್ತಾ ಸಂಭ್ರಮಿಸಿ ನಂತರ ದೇವಸ್ಥಾನದ ಆವರಣಕ್ಕೆ ಕಾಲಿಟ್ಟೆವು.

p1000828ಅಷ್ಟರೊಳಗೆ ಎದುರಿಗಿದ್ದ ಗುಡ್ಡ ಹತ್ತಿ ಒಂದು ಪ್ರದಕ್ಷಿಣೆ ಹಾಕಿ ಎಲ್ಲೆಲ್ಲಿ ಏನೇನಿದೆ ಎಂದು ಕಣ್ಣಾಡಿಸಿದ್ದೆವು. ಆವತ್ತು ನವರಾತ್ರಿಯ ದಿನವಾದ್ದರಿಂದ ದೇವಸ್ಥಾನದಲ್ಲಿ ಜನರಿದ್ದರು. ಆರತಿ ತಟ್ಟೆಗೆ ಕಾಸು ಕೊಡು ಎಂದು ರಂಜನಾಳನ್ನು ಕೇಳಿದಾಗಲೇ ಅವಳಿಗೆ ತನ್ನ ಹೆಗಲಲ್ಲಿದ್ದ ಬ್ಯಾಗ್ ಇಲ್ಲ ಎಂದು ನೆನಪಾದದ್ದು. ಎಲ್ಲಿ ಬಿಟ್ಟೆ ಎಂದು ನೆನಪಾಗುತ್ತಿಲ್ಲ. ಗುಡ್ಡದ ಸುತ್ತ ಹೋಗಿ ಹುಡುಕಿದೆವು ಅಲ್ಲೆಲ್ಲು ಇರಲಿಲ್ಲ. ಮತ್ತೆ ಮತ್ತೆ ನೆನಪಿಸಿಕೊಂಡೆವು ಎಲ್ಲಿ ಕೂತೆವು, ಎಲ್ಲಿ ಎದ್ದೆವು, ಎಲ್ಲಿ ನಡೆದೆವು ಎಂದೆಲ್ಲ. ಜೊತೆಗೆ ಯಾರಾದರೂ ತೆಗೆದುಕೊಂಡು ಹೋಗಿದ್ದರೆ ಮುಂದಿನ ಕತೆಯೇನು ಎಂಬ ಪ್ರಶ್ನೆಯು ಎದುರಿಗಿತ್ತು. ನಮ್ಮಲ್ಲೆ ಒಬ್ಬರು ಕೊಳದ ಹತ್ತಿರ ಇರಬಹುದು ಎಂದರು. ಓಹೋ ಹೌದಲ್ಲ ಎಂದು ಹೋಗಿ ನೋಡಿದರೆ ಅಲ್ಲಿ ಬ್ಯಾಗು ಸುರಕ್ಷಿತವಾಗಿತ್ತು. ಈಗ ಇದನ್ನು ಹೇಳಿದರೆ ಒಂದು ಸಾಮಾನ್ಯ ಘಟನೆಯನ್ನು ಹೇಳಿದ ಹಾಗೆ ಆಗುತ್ತದೆ. ಆದರೆ ಲೋಕ ಕಂಡಿಲ್ಲದ ನಮಗೆ ಅಂದು ಆದ ಆತಂಕ ತಾಕದೆ ಹೋಗುತ್ತದೆ. ಅದಕ್ಕೆ ನಾನು ಇವನಿಗೆ ಹೇಳಲು ಹೋಗಲಿಲ್ಲ.

ಅಮ್ಮನಘಟ್ಟಕ್ಕೆ ಹೋಗಬೇಕೆಂದು ಏಳೆಂಟು ವರ್ಷಗಳಲ್ಲಿ ಹತ್ತಾರು ಬಾರಿ ಅನ್ನಿಸಿದಿದೆ. ಸುತ್ತಲೂ ಗುಡ್ಡ ಬೆಟ್ಟಗಳಿಂದ ಆವೃತ್ತವಾದ, ನೈಸರ್ಗಿಕವಾಗಿ ರೂಪಿತವಾಗಿರುವ ಬೃಹತ್ ಕಪ್ಪು ಬಂಡೆಯ ಅಡಿ ಬಂಡೆಯನ್ನೆ ಮೇಲ್ಚಾವಣಿಯನ್ನಾಗಿಸಿ ಬೇರೆ ಛಾವಣಿಯನ್ನೆ ಕಟ್ಟದೆ ಸಣ್ಣದೊಂದು ಗುಡಿ ಕಟ್ಟಿ ಅಲ್ಲಿ ಅಮ್ಮನ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಆಗ ಇಲ್ಲಿ ಬೇರೆ ಯಾವುದೇ ಬಿಲ್ಡಿಂಗ್ ಗಳಿರಲಿಲ್ಲ. ಉದ್ದಾನುದ್ದ ಹಬ್ಬಿರುವ ಬಂಡೆ ಮಳೆಯಿಂದ, ಬಿಸಿಲಿಂದ ದೇವಿಯನ್ನು, ಭಕ್ತರನ್ನು ರಕ್ಷಿಸುತಿತ್ತು. ಅಂದು ಈ ಪ್ರಾಕೃತಿಕವಾದ ಸೊಬಗಿನ ದೇವಿ ಸನ್ನಿಧಿ ನಮಗೆಲ್ಲರಿಗೂ ಇಷ್ಟವಾಗಿತ್ತು. ಆದರೆ ಇತ್ತೀಚೆಗೆ ಅಮ್ಮನಘಟ್ಟಕ್ಕೆ ಹೋಗಬೇಕೆಂದು ಕೊಂಡಾಗೆಲ್ಲ ಅಭಿವೃದ್ದಿಯ ಹೆಸರಿನಲ್ಲಿ ಬಂಡೆಗಳನ್ನೆ ಸರಿಸಿ ದೊಡ್ಡ ದೊಡ್ಡ ಬಿಲ್ಡಿಂಗ್ ಮಾಡಿ ಅದರ ನಡುವೆ ದೇವಿಯನ್ನಿಟ್ಟು, ಬಂಡೆಗಳೇ ಕಾಣದಂತಾಗಿರಬಹುದು, ಸುತ್ತಲಿದ್ದ ಗುಡ್ಡವನ್ನೆ ಬೋಳಿಸಿ ದೊಡ್ಡ ದೊಡ್ಡ ರಸ್ತೆ ಮಾಡಿಸಿರಬಹುದು, ಜನ ಜಂಗುಳಿ ನೆರೆದು ಕಾವಲಿಗೆ ಪೊಲೀಸರು, ಮುಂದೆ ಹೋಗಿ ಎಂದು ದೂಡುವ ಸಹ ಭಕ್ತರು, ಏನೇನು ಪೂಜೆ ಇದೆ ಬೇಗ ಬೇಗ ಹೇಳಿ ಎಂದು ಆರ್ಡರ್ ಮಾಡುವ ವಿಶೇಷ ಪೂಜೆ ಮಾಡಿಸದವರನ್ನು ಕೆಕ್ಕರಿಸಿ ನೋಡುವ ಪೂಜಾರಿಗಳು ಹೀಗೆ ಏನೇನೋ ಬೇರೆ ಹಲವು ದೇವಸ್ಥಾನದಲ್ಲಾದಂತೆ ಇಲ್ಲೂ ಮಾರ್ಪಾಡುಗಳಾಗಿರಬಹುದು ಎಂದೆನ್ನಿಸಿ ಅಮ್ಮನಘಟ್ಟಕ್ಕೆ ಹೋಗುವ ನನ್ನ ಆಸೆಯನ್ನು ಮುರುಟಿಸಿಬಿಡುತ್ತಿತ್ತು.

ಎಲ್ಲದರಂತೆ ದೇವಸ್ಥಾನಗಳು ವ್ಯಾಪಾರ, ವ್ಯವಹಾರದ ಕೇಂದ್ರಗಳಾಗಿ ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಅಲ್ಲಿ ಭಕ್ತಿ, ಶಾಂತಿ, ಮೌನಕ್ಕೆ ಸ್ಪೇಸ್ ಇರಬೇಕು ಎಂದು ಬಯಸುವುದೇ ಅರಿವುಗೇಡಿತನ ಎಂದು ನನಗೆ ಗೊತ್ತು. ಆದರೂ ಮನಸ್ಸು ಅಮ್ಮನಘಟ್ಟದ ಪ್ರಾಕೃತಿಕ ಸೌಂದರ್ಯ ಹಾಳಾಗುವುದನ್ನು ಬಯಸಿರಲಿಲ್ಲ. ಅಮ್ಮನಘಟ್ಟ ನೋಡಲು ಈ ಭಾನುವಾರ ಹೊರಟೇ ಬಿಟ್ಟೆವು. ಶಿವಮೊಗ್ಗೆಯಿಂದ ಎರಡು ಗಂಟೆಗಳ ದಾರಿ. ನಾವು ಹೋಗುವಷ್ಟರಲ್ಲಿ ಭಟ್ಟರು ಪೂಜೆ ಮುಗಿಸಿ ಹೊರಟು ಹೋಗಿದ್ದರು. ಅವರು ಅದೇ ತಾನೇ ದೇವಾಲಯದ ಹೊಸಿಲಿಗೆ ಏರಿಸಿದ ಕೆಂಪು ದಾಸವಾಳದ ಹೂವುಗಳು ಬಿರಿದು ನಿಂತಿದ್ದವು. ಹೆಚ್ಚಿನ ಯಾವ ಬದಲಾವಣೆಯು ಆಗಿರಲಿಲ್ಲ. ದೇವಿಗೆ ಬಂಡೆಯೇ ಮೇಲ್ಚಾವಣಿಯಾಗಿತ್ತು. ಸುತ್ತಲೂ ಆವೃತ್ತವಾದ ಕಾಡು ಗುಡ್ಡಗಳು ನಾಶವಾಗಿರಲಿಲ್ಲ. ಊಟದ ಹಾಲ್ ಇರಬಹುದು ಅದೊಂದು ಬಿಲ್ಡಿಂಗ್ ನಿರ್ಮಾಣ ಹಂತದಲ್ಲಿತ್ತು. ಕೊಳದ ಸುತ್ತ ಗೇಟ್ ನಿರ್ಮಿಸಿದ್ದರು. ಅದಕ್ಕೆ ಕೊಳ ಕೂಡಲೇ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ದೇವಸ್ಥಾನದ ಎದುರಿಗೆ ಇದ್ದ ಮಾವಿನಮರದ ತುಂಬಾ ಕಾಯಿಗಳು. ಇವನು ಹೊಸದೊಂದು ಸಾಹಸ ಮಾಡುವ ಉಮ್ಮೇದಿನಲ್ಲಿ ದೋಟಿ ಹುಡುಕಿ ಮಾವಿನ ಕಾಯಿ ಬೀಳಿಸಲು ಪ್ರಯತ್ನ ಮಾಡಿದ. ನಾನು ತಡಿ ಮಾರಾಯ ನಿಮ್ಮಮ್ಮನಿಗೆ ನೀನು ಮಾವಿನ ಕಾಯಿ ಕೆಡಗುತ್ತಿರುವ ಫೋಟೋ ತೋರಿಸಲೇ ಬೇಕು ಎಂದು ಕ್ಯಾಮರಾ ಹಿಡಿದು ಕ್ಲಿಕ್ಕಿಸತೊಡಗಿದೆ. ಏಕೆಂದರೆ ಇವರಮ್ಮ ದೋಟಿ ಹಿಡಿದು ನುಗ್ಗೆಕಾಯಿ ಕೊಯ್ಯುವಾಗ ಇವನು ನಿಂತು ನೋಡುತ್ತಿರುತ್ತಾನೆ. ಫೋಟೋಗೆ ಫೋಸ್ ಕೊಟ್ಟಿದ್ದಷ್ಟೆ ಬಂತು ಕೊನೆಗೂ ಉದುರಿಸಲು ಶಕ್ಯವಾಗಿದ್ದು ಒಂದೆ ಒಂದು ಮಾವಿನಕಾಯಿ. ಇನ್ನು ಮುಂದೆ ನುಗ್ಗೆಕಾಯಿ ಕೊಯ್ಯೋ ವಿಷಯದಲ್ಲಿ ಇವನನ್ನು ದೂರೋ ಹಾಗೆ ಇಲ್ಲ ಏಕೆಂದರೆ ಅತ್ತೆ ದೋಟಿ ಹಿಡಿದು ಒಮ್ಮೆ ಮರ ಕುಲಕಿಸಿದರೆ ಸಾಕು ಹತ್ತಾರು ನುಗ್ಗೆಕಾಯಿಗಳು ನೆಲಕ್ಕುದರುತ್ತವೆ.

ಅಮ್ಮನಘಟ್ಟದ ಬಂಡೆಯಡಿಯಲ್ಲಿ ಕೂತು ಎದುರಿದ್ದ ಪ್ರಕೃತಿ ಸೊಬಗಿಗೆ ಕಣ್ಣು ನೆಟ್ಟೆವು. ಮೌನದಲ್ಲೂ ಮನಸ್ಸು ತುಂಬಿಕೊಂಡಿತ್ತು. ಕುವೆಂಪು ಅವರ ಪ್ರಕೃತಿಗೀತೆಗಳು ಒಂದೊಂದಾಗಿ ನೆನಪಾದವು. ಈಡೇರಲಾರದು ಎಂದು ಗೊತ್ತಿದ್ದರೂ ಈ ಪ್ರಕೃತಿ ಸನ್ನಿಧಿ ಹೀಗೆ ಇರಲಿ ಎಂದು ಬೇಡಿದೆ. ಈಗ ಮನೆಗೆ ಬಂದು ಇವನು ತೆಗೆದ ಅಲ್ಲಿನ ಫೋಟೋಗಳನ್ನು ಕಂಪ್ಯೂಟರ್ಗೆ ಡೌನ್ ಲೋಡ್ ಮಾಡುವಾಗ `ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಿ’ ಎಂಬ ದೇವಸ್ಥಾನದ ಗೋಡೆಯ ಮೇಲಿನ ದೊಡ್ಡ ಬೋರ್ಡ್ ಕಾಣಿಸಿತು. ಅಲ್ಲಿ ಎರಡ್ಮೂರು ಗಂಟೆ ಕಳೆದಿದ್ದರೂ ಈ ಬೋರ್ಡ್ ಕಣ್ಣಿಗೆ ಬಿದ್ದಿರಲಿಲ್ಲ ಹೇಗೆ?

ಜೈಲಲ್ಲಿ ಹುಟ್ಟಿದ ಕೃಷ್ಣ ಕಟ್ಟಿದ್ದು ಬೃಂದಾವನ

-ಅಕ್ಷತಾ ಕೆ

ps2003love-posters

ಇದೆಲ್ಲ ನಡೆಯೋದು ಹೀಗೇ ಇರಬೇಕು. ಮೊದಲಿಗೆ ಪ್ರೇಮಿಗಳ ದಿನ ಆಚರಿಸಬಾರದು ಅಂತ ವರಾತ ತೆಗೆದರು. ನಿಜ ಹೇಳಬೇಕೆಂದರೆ ಅಮ್ಮಂದಿರ ದಿನ, ಪರಿಸರ ದಿನ, ಸಸ್ಯಹಾರಿಗಳ ದಿನದ ರೀತಿಯಲ್ಲೆ ಈ ಪ್ರೇಮಿಗಳ ದಿನ ಸಹ ಅಜ್ಞಾತವಾಗಿತ್ತು. ಪ್ರೇಮಿಸುವವರು ಕಾಲ ದೇಶದ ಹಂಗಿಲ್ಲದೆ ಪ್ರೇಮಿಸುತಿದ್ದರು. ಯಾವಾಗ ಈ ವರಾತ ಶುರುವಾಯಿತೋ  ಆವಾಗ ಹಳ್ಳಿ ಮೂಲೆಯಲ್ಲಿ ತಮ್ಮ ಪಾಡಿಗೆ ತಾವೇ ರೂಪಿಸಿಕೊಂಡ ಬೃಂದಾವನದಲ್ಲಿ `ಅಕೋ ರಾಧೆ, ಅವನೇ ಶ್ಯಾಮ’ ಎಂದು ನಲಿಯುತ್ತಿದ್ದ ಜೀವಗಳಿಗೂ ಓಹೋ ನಮಗೂ ಒಂದು ದಿನವಿದೆ ಎಂಬುದು ತಿಳಿಯಿತು.

ಆದರೆ ಅದರ ಮುಂದುವರೆದ ಭಾಗ ಮಾತ್ರ ಭೀಬತ್ಸ. ಇಷ್ಟು ದಿನ ಪ್ರೇಮಿಗಳ ದಿನ ಆಚರಿಸಬಾರದು ಎಂದೆಲ್ಲ ಅಡ್ಡಿ ಮಾಡುತ್ತಿದ್ದ ಮಹಾನುಭಾವರು ಈಗ ಪ್ರೇಮಿಸಲು ಬಾರದು ಎನ್ನುತ್ತಿದ್ದಾರೆ. ಅದನ್ನು ನೇರವಾಗಿ ಹೇಳಲಾಗದೇ ಪ್ರೇಮಿಗಳ ದಿನ ಹುಡುಗ ಹುಡುಗಿ ಒಟ್ಟಿಗೆ ಕಂಡರೆ ಅವರಿಗೆ ತಾಳಿ ಕಟ್ಟಿಸುತ್ತೇವೆ, ರಾಖಿ ಕಟ್ಟಿಸುತ್ತೇವೆ ಎಂಬಂತಹ ಮಾತುಗಳನ್ನು ಆಡುತಿದ್ದಾರೆ. ಅಂತೂ ಹುಡುಗ ಹುಡುಗಿಯ ನಡುವೆ ತಾಳಿ, ರಾಖಿ ಎರಡನ್ನೂ ಕಟ್ಟಿಕೊಳ್ಳದೇ ಇರುವಂತಹ, ಇವೆರಡರ ಹಂಗಿರದ ಸ್ನೇಹ ಎಂಬುದು ಇರಲೇಬಾರದು ಎನ್ನುವಂತಹ ದುರುಳರ ಆಲೋಚನೆಯಿದು.

ಅಪ್ಪ-ಅಮ್ಮಂದಿರು ನಮ್ಮ ಹುಡುಗಿ ಆ ಹುಡುಗನ ಜೊತೆ ಅಲೀಬಾರ್ದು, ನಮ್ಮ ಹುಡುಗ ಆ ಹುಡುಗಿಯನ್ನು ಪ್ರೇಮಿಸಬಾರದು ಅಂತೆಲ್ಲ ಖ್ಯಾತೆ ತೆಗೆದರೆ, ನಮ್ಮ ಹುಡುಗಿ ಚಿನ್ನದಂತವಳು ಆ ಹುಡುಗನೇ ಏನೋ ಮಳ್ಳು ಹಚ್ಚಿದ್ದಾನೆ ಎಂದೆಲ್ಲ ಮುಳು ಮುಳು ಅತ್ತರೆ, ಹುಡುಗ ಹುಡುಗಿಗೆ ಸ್ವಲ್ಪ ಮಟ್ಟಿನ ಅಡ್ಡಿ ಆತಂಕ ಒಡ್ಡಿದರೆ ಅವರ ನೋವು, ದುಃಖ ಎಲ್ಲ ಸಹಜವಾದದ್ದು. ಅದರಲ್ಲಿ ಯಾವ ರಾಜಕೀಯ ಅಥವಾ ಬೇರೆ ರೀತಿಯ ಹಿತಾಸಕ್ತಿಗಳು ಇರುವುದಿಲ್ಲ. ಸಂಸ್ಕೃತಿಯ ಉಳಿವಿನ ಹೆಸರಲ್ಲಿ ಯಾವ ಅಪ್ಪ ಅಮ್ಮನು ತಮ್ಮ ಮಕ್ಕಳ ಪ್ರೇಮಕ್ಕೆ ಅಡ್ಡಿ ಬರುವುದಿಲ್ಲ ಬದಲಿಗೆ ಬದುಕಿನ ಅನಿವಾರ್ಯತೆ, ಆತಂಕಗಳು ತಮ್ಮ ಮಕ್ಕಳ ಪ್ರೇಮಕ್ಕೆ ಅಡ್ಡಿ ಬರಲು ಕಾರಣವಾಗಿರುತ್ತವೆ. ಅದಕ್ಕೆ ಯಾವ ಅಪ್ಪ ಅಮ್ಮನು ಟಿವಿಯಲ್ಲಿ, ಪತ್ರಿಕೆಗಳಲ್ಲಿ ಕಾಣಿಸಿಕೊಂಡು, ಘೋಷಿಸಿಕೊಂಡು ತಮ್ಮ ಮಕ್ಕಳ ಪ್ರೇಮವನ್ನು ವಿರೋದಿಸುವುದಿಲ್ಲ. ಹಾಗೆ ಅಡ್ಡಿ ಮಾಡುವ ಸಂದರ್ಭದಲ್ಲೂ ಕೂಡಾ ತಮ್ಮ ಮಗ/ಮಗಳಿಗೆ ಇದರಿಂದ ನೋವಾಗುತ್ತಿದೆ ಎಂದು ಅಪ್ಪ ಅಮ್ಮಂದಿರಿಗೆ ತಿಳಿದಿರುತ್ತದೆ. ಅವರೂ ಕೂಡಾ ತಮ್ಮ ಕಾರ್ಯಕ್ಕೆ ಒಳಗೊಳಗೆ ನೋಯುತ್ತಿರುತ್ತಾರೆ. ಅಪ್ಪ, ಅಮ್ಮ ವಿರೋಧಿಸುವುದು, ಆಶೀರ್ವದಿಸುವುದು ಎಲ್ಲ ತೀರ ವೈಯಕ್ತಿಕ ಮಟ್ಟದಲ್ಲಿ ನಡೆದುಹೋಗುತ್ತದೆ. ಅದೇ ಸಂಘಟನೆ, ಸರ್ಕಾರಗಳು  ಇಂಥದ್ದರ ಮಧ್ಯೆ ಬಂದಾಗ ಇಡೀ ವಾತಾವರಣವೇ ಅಸಹನೀಯವಾಗುತ್ತದೆ. ಜೀವ ವಿರೋಧಿಯಾಗುತ್ತದೆ.

ಲಂಕೇಶರ ‘ಕಲ್ಲು ಕರಗುವ ಸಮಯ’ದಲ್ಲಿ ಲಿಂಗಾಯಿತರ ಹುಡುಗಿ ಶ್ಯಾಮಲೆ ಬೇಡರ ಹುಡುಗ ತಿಪ್ಪಣ್ಣನನ್ನು ಪ್ರೇಮಿಸುವ ವಿಷಯ ತಿಳಿದ ಶ್ಯಾಮಲೆಯ ಅಪ್ಪ ಮಲ್ಲಯ್ಯ ಅವರಿಬ್ಬರ ಪ್ರೇಮವನ್ನು ಮುಗಿಸಲು ವಿವಿಧ ಪ್ರಯತ್ನಗಳನ್ನು ಮಾಡಿ ಸೋತು ಕೊನೆಗೆ ತಿಪ್ಪಣ್ಣನನ್ನೇ ಕೊಲ್ಲಲು ಹೊರಡುತ್ತಾನೆ. ಆದರೆ ಲಜ್ಜೆ, ಪ್ರೇಮ ತುಂಬಿದ ತಿಪ್ಪಣ್ಣನೆದುರಿಗೆ ಮಲ್ಲಯ್ಯ ತೆಗೆದುಕೊಂಡು ಹೋಗಿದ್ದ ರಿವಾಲ್ವರ್ ಅವನ ಜೇಬಿನಲ್ಲೆ ಉಳಿದರೆ, ಅವನ ಬೆದರಿಕೆ, ಬಯ್ಗುಳಗಳು ಅವನನ್ನೇ ಇನ್ನಷ್ಟು ಅಸಹಾಯಕನನ್ನಾಗಿಸುತ್ತವೆ. ತಿಪ್ಪಣ್ಣ ಈ ಘಟನೆಯನ್ನು ನೆನೆಯುತ್ತಾ ನಂತರದಲ್ಲಿ ಶ್ಯಾಮಲೆಗೆ  ` ನಿಮ್ಮ ತಂದೆಯವರನ್ನು ನೆನೆದು ಅತ್ತುಬಿಟ್ಟೆ. ಆವತ್ತು ನಮ್ಮನೆಗೆ ಬಂದಾಗ ಮೇಲುಗಡೆ ಸಿಟ್ಟಿದ್ರೂ ಅವರಿಗೆ ಒಳಗೆ ಆಗ್ತಿದ್ದ ನೋವು ನನಗೆ ಗೊತ್ತಿತ್ತು. ಎರಡು ಸಲ ತೋಟದ ಹತ್ರ ಬಂದು ಹಿಂತಿರುಗಿದೆ. ಯಾಕೆ ಅಂದ್ರೆ…  ನಾನು ನಿಮ್ಮನ್ನು `ಮದುವೆಯಾಗೋಲ್ಲ’ ಅಂದಿದ್ರೆ ಅವರಿಗೂ ಬೇಸರ ಆಗ್ತಿತ್ತು.’ ಎಂದು ಹೇಳಿದ ಮಾತೇನಿದೆ ಇದು ಮಕ್ಕಳ ಪ್ರೇಮದ ವಿಷಯದಲ್ಲಿ ಅಪ್ಪ ಅಮ್ಮನ ಮನಸ್ಥಿತಿಯನ್ನು ಹಿಡಿದಿಡುತ್ತದೆ. ಆದರೆ ಇದನ್ನೆಲ್ಲ ಯಾರಿಗೆ ಹೇಳುವುದು? ಸಾಹಿತ್ಯದ ಬಗೆಗಿರಲಿ ಬದುಕಿಗೇ ವಿರೋಧಿಗಳಾಗಿರುವವರಿಗೆ ಹೇಳುವುದಾದರೂ ಏನನ್ನು?

ಪ್ರೇಮ ನಿಜವಾಗಿದ್ದರೆ ಅದು ಸತ್ಯ, ಪ್ರಾಮಾಣಿಕತೆಯನ್ನು ಹುಟ್ಟಿಸುತ್ತದೆ. ಪ್ರೇಮಿಸಲೇಬಾರದು ಎಂದು ನಿರ್ಬಂಧ ಹೇರುವವರು ಗಮನಿಸಬೇಕಾದದ್ದು ಪ್ರೇಮವನ್ನು ಕಸಿದುಕೊಂಡರೆ ನಾವು ಅವರಿಂದ ಈ ಎಲ್ಲ ಅಂಶಗಳನ್ನು ಕಸಿದುಕೊಳ್ಳುತ್ತೇವೆ ಎಂಬುದನ್ನು. ಇನ್ನು ಯಾರದು ನಿಜವಾದ ಪ್ರೇಮ. ಯಾವುದು ನಿಜವಾದ ಪ್ರೇಮ ಎಂದೆಲ್ಲ ಪರೀಕ್ಷೆ ಮಾಡುವ ಹಕ್ಕು ಸಹ ಯಾವ ಸಂಘಟನೆ, ಸಂಸ್ಥೆಗಳಿಗೂ ಇಲ್ಲ. ಪು.ತಿ.ನ ಅವರ ಗೋಕುಲ ನಿರ್ಗಮನದಲ್ಲಿ ಗೋಪಿಯರು `ನಿಲ್ಲಿಸದಿರು ವನಮಾಲಿ ಕೊಳಲಗಾನವ ನಿಲ್ಲಿಸೇ ನೀ ಕಳೆವುದೆಂತೋ ಭವಭೀತಿಯ ಕೇಶವ’ ಎಂದು ಪದೇ ಪದೇ ಬೇಡುತ್ತಲೇ ಇರುತ್ತಾರೆ. ವನಮಾಲಿಯ ಕೊಳಲಗಾನದ ಲೋಕದಿಂದ ಹೊರಬಂದ ಕೂಡಲೇ ಭವದ ಭೀತಿ ಆ ಹೆಣ್ಣು ಮಕ್ಕಳನ್ನು ಭಾಧಿಸುತ್ತದೆ. ಅಂದಿನಿಂದ ಇಂದಿನವರೆಗೂ  ಅಧಿಕಾರದಲ್ಲಿರುವವರು ಈ ಭೀತಿಯನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ. ವನಮಾಲಿಯ ಕೊಳಲಗಾನ ಎನ್ನುವುದು ಏನಿದೆ ಅದೊಂದು ರೂಪಕ. ಜಗತ್ತಿನ ಕ್ಷುದ್ರತೆಯನ್ನು ಮೀರಲೋಸುಗ ಕಟ್ಟಿಕೊಂಡ ರೂಪಕ. ಇಂಥ ಹಲವು ರೂಪಕಗಳ ಜಗತ್ತನ್ನು ಹೆಣ್ಣಾದವಳು ಕಟ್ಟಿಕೊಳ್ಳುತ್ತಲೇ ಇಂಥಹ ಕ್ಷುದ್ರತನವನ್ನು ಮೀರಿ ತನಗೆ ಬೇಕಾದ ಗಂಡಿನ ಆಯ್ಕೆ, ಪ್ರೇಮ ಎಲ್ಲವನ್ನು ಪಡೆದುಕೊಳ್ಳುತ್ತಲೇ ಬಂದಿದ್ದಾಳೆ.

ಕೃಷ್ಣ ಹುಟ್ಟಿದ ದೇಶ ನಮ್ಮದು. ಆತ ಪ್ರೇಮಮಯಿ. ದ್ರೌಪದಿಯಂತಹ ಶಕ್ತಿವಂತ ಹೆಣ್ಣು ಮಗಳ ಬಹು ನೆಚ್ಚಿಗೆಯ ಗೆಳೆಯ. ಮುಗ್ದ ರಾಧೆಯ ಪ್ರೇಮಿ. ಕೃಷ್ಣ ಸೃಷ್ಟಿಸಿದ್ದು ಬೃಂದಾವನ. ಕಾರಾಗೃಹದಲ್ಲಿ ಹುಟ್ಟಿದ ಕೃಷ್ಣ ಸೃಷ್ಟಿಸಿದ್ದು ಬೃಂದಾವನ. ಆತನಿಗೆ ಮನುಷ್ಯರ ಬದುಕಿನ ಬಗ್ಗೆ ಉತ್ತಮ ಪರಿಕಲ್ಪನೆಯಿತ್ತು. ಇಲ್ಲದೇ ಹೋಗಿದ್ದರೆ ಜೈಲನ್ನೇ ನಿರ್ಮಿಸುತ್ತಿದ್ದ . ಕೃಷ್ಣ ಬೃಂದಾವನ ನಿರ್ಮಿಸಿದ. ಅಲ್ಲಿ ಗಂಡಸರಷ್ಟೆ ಹೆಣ್ಣುಮಕ್ಕಳಿಗೂ ಆದ್ಯತೆಯಿತ್ತು. ತುಸು ಹೆಚ್ಚೆ ಇತ್ತೆಂದರೂ ಸರಿಯೇ. ಕೃಷ್ಣ ರಾಧೆಯರು ಸೇರಿ ನಿಮರ್ಿಸಿದ ಬೃಂದಾವನವನ್ನು ನಾಶಪಡಿಸುವ ಅಧಿಕಾರ ಯಾರಿಗೂ ಇಲ್ಲ. ಎಷ್ಟೆ ನಾಶ ಪಡಿಸಿದ್ದೇವೆಂದು ಬೀಗಿದರೂ ಅದು ನಮ್ಮೆಲ್ಲರ ಮನದ ಮೂಲೆಯಲ್ಲಿ ರೂಪಕವಾಗಿ ಬೆಳೆಯುತ್ತಲೇ ಇರುತ್ತದೆ.

ಟು ಸರ್ ವಿತ್…

ಅಕ್ಷತಾ ಕೆ

ak11

ದಣಪೆಯಾಚೆ…

ನಾನು ನಗ್ತಿದ್ದೆ… ಬಹಳ ಬಹಳ ನಗ್ತಿದ್ದೆ. ಅದು ಎದುರಿಗಿರುವವರನ್ನು ತಲುಪಿ ಅವರಿಗೂ ನಗುವಿನ ಸಾಂಕ್ರಾಮಿಕ ಕಾಯಿಲೆ ಹತ್ತಿ ಬಿಡಬೇಕು ಹಾಗೆ ನಗ್ತಿದ್ದೆ. ಮತ್ತೆ ಮಾತಾಡ್ತಿದ್ದೆ. ತುಂಬಾ ತುಂಬಾ ಮಾತು. ಹುಡುಗ. ಹುಡುಗಿಯರೆಂಬ ಭೇದವಿಲ್ಲದೆ ಎಲ್ಲರ ಜೊತೆ ಬೆರೆತು ಮಾತು-ನಗೆ, ನಗೆ-ಮಾತು. ನನ್ನ ಕಂಠವೂ ಸ್ವಲ್ಪ ದೊಡ್ಡದೆ, ಮೈಕ್ ಇಲ್ಲದಿದ್ದಾಗ ಭಾಷಣ ಮಾಡಲು ಉಪಯೋಗಕ್ಕೆ ಬರುವಂತದ್ದು. ಗಲಗಲ ಮಾತು ಮತ್ತು ನಗುವಿನಿಂದಾಗಿ ನಾನು ಎಲ್ಲರ ಹಿತವಚನ ಕೇಳ್ಬೇಕಾಗಿತ್ತು. ಪ್ರೈಮರಿ ಶಾಲೆಯಲ್ಲಿದ್ದಾಗ ಈ ಬಗ್ಗೆ ಯಾರ ಆಬ್ಜೆಕ್ಷನ್ನೂ ಇರಲಿಲ್ಲ. ಎಲ್ಲವೂ ಸಹಜವಾಗಿತ್ತು.

ಹೈಸ್ಕೂಲಿಗೆ ಬಂದ ಕೂಡಲೇ ನನ್ನ ಮಾತು, ನಗೆ ಎರಡನ್ನೂ ನಿಲ್ಲಿಸಬೇಕು ಎಂದು ನನ್ನ ಜಗತ್ತಿನ ಅಪ್ಪಣೆಯಾಯಿತು. ಯಾಕೆ ನಿಲ್ಲಿಸಬೇಕು ಎಂಬ ಪ್ರಶ್ನೆಗೆ ಉತ್ತರವಿಷ್ಟೆ; ಹೆಣ್ಣುಮಕ್ಕಳು ಕಡಿಮೆ ನಗ್ಬೇಕು, ಕಡಿಮೆ ಮಾತಾಡ್ಬೇಕು; ಅಷ್ಟೆ ಅಲ್ಲ ನಗು ಮತ್ತು ಮಾತು ಎರಡೂ ಮೆಲುದನಿಯಲ್ಲಿರಬೇಕು. `ಜೋರಾಗಿ ನಗಾಡೋಳು, ಮಾತಾಡೋಳು ಹೆಣ್ಣೆ ಅಲ್ಲ’. ಹುಡುಗಿ ಹೆಣ್ಣಾಗುವ ಆ ಸಂದರ್ಭದಲ್ಲೆ ಗಲಗಲ ಎನ್ನುವಂತಹ ನಗು ಮತ್ತು ಮಾತಿನಿಂದಾಗಿ ನನ್ನಲ್ಲೆ ನನ್ನ ಹೆಣ್ತನದ ಬಗ್ಗೆ ಶಂಕೆ ಹುಟ್ಟಿದ್ದೂ ಇದೆ. ಆಗೆಲ್ಲ ತಪ್ಪಿತಸ್ಥ ಭಾವನೆ ಅನುಭವಿಸಿದ್ದೇನೆ. ನಗು ಮತ್ತು ಮಾತು ಎರಡನ್ನೂ ಅಪರಾಧವೆಂದು ಪರಿಗಣಿಸಿ `ಪರಿಪೂರ್ಣ ಹೆಣ್ಣಾಗುವ’ ನಿಟ್ಟಿನಲ್ಲಿ ನಾನು ನಾಲ್ಕು ಹೊತ್ತು ಬಿಗಿದುಕೊಂಡೆ ಇರಲು ಪ್ರಯತ್ನಿಸುತ್ತಿದ್ದೆ-ಮುಖವನ್ನು ಅಷ್ಟೆ ಅಲ್ಲ ಮನಸ್ಸನ್ನು. ಜೊತೆಗೆ ಮತ್ತೊಂದಿಷ್ಟು ಬಿಗಿದುಕೊಳ್ಳುವ ವಿಷಯಗಳಿದ್ದವು; ಜಡೆ ಹೆಣೆದುಕೋ, ಕೂದಲು ಬಿಟ್ಕಂಡು ಅಲೀಬೇಡ, ಎಲ್ಲೇ ಹೋಗ್ಬೇಕಿದ್ರೂ ನಮ್ಮ ಒಪ್ಪಿಗೆ ಪಡೆದೇ ಹೊರಗೆ ಕಾಲಿಡಬೇಕು. ಲಕ್ಷಣವಾಗಿ ಹೂ ಮುಡಿದುಕೊಂಡು ಕುಂಕುಮ ಹಚ್ಕೊ, ಮಣ್ಣಿನ ಬಳೆ ಒಡೆಯುತ್ತದೆ; ಒಡೆದು ಹೋಗುವಂತ ಆಟ ಆಡ್ಬೇಡ. `ಹುಡುಗರ ಜೊತೆ ಏನು ಮಾತು? ಅವರಿಗ್ಯಾಕೆ ನೀನು ನೋಟ್ಸ್ ಕೊಡೋದು? ಮೊದಲಿಗೆ ಪ್ರಾರಂಭ ಆಗೋದು ಹೀಗೆ…’?

a-11

`ಏನು ಪ್ರಾರಂಭ ಆಗೋದು?’ `ಅದೆಲ್ಲ ಗೊತ್ತಿಲ್ವ, ಒಳ್ಳೆ ಮಳ್ಳಿ ತರ ಆಡ್ಬೇಡ’. `ಹೂಂ ಗೊತ್ತಾಯ್ತು, ಹುಡುಗರ ಜೊತೆ ಮಾತಾಡೋದು ತಪ್ಪು, ಅದಕ್ಕಿಂತ ದೊಡ್ಡ ತಪ್ಪು ಮಾತಾಡೋದ್ರಿಂದ ಆಗೋ ಪರಿಣಾಮ ಏನು ಅಂತ ಕೇಳೋದು’. ಆಯ್ತು ಆಯ್ತು ಎಲ್ಲದಕ್ಕೂ ತಲೆ ಆಡಿಸ್ತಿದ್ದೆ. ಅವರು ವಿಧಿಸಿದ ನಿಯಮಗಳನ್ನೆಲ್ಲ ಅವರು ಹೇಳಿದ್ದಕ್ಕಿಂತ ಕಠೋರ ರೀತಿಯಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದೆ. ಅದೆಷ್ಟೇ ಕಷ್ಟವಾದ್ರೂ. ಹೂವು, ಕುಂಕುಮ ಮರೆತು ಹೋಗಿ, ನನ್ನ ಮರೆಗುಳಿ ಗುಣದ ಬಗ್ಗೆಯೇ ದುಃಖಿತಳಾದೆ. ಹುಡುಗರ ಜೊತೆ ಮಾತಾಡೋದಿರ್ಲಿ ಅವರ ಮುಖ ನೋಡುವುದನ್ನು ತಪ್ಪಿಸತೊಡಗಿದೆ. ಹಾಗೊಮ್ಮೆ ಮಾತಾಡಿಸಿದ್ರೂ ಯಾರಾದ್ರೂ ನನ್ನನ್ನ ಗಮನಿಸ್ತಿದ್ದಾರ ಎಂಬ ಎಚ್ಚರಿಕೆಯ ಕಣ್ಣಿಟ್ಟಿರುತ್ತಿದ್ದೆ. ಯಾರಿಗೂ ಗೊತ್ತಾಗದಂತೆ ಕದ್ದು ಕನ್ನಡಿಯ ಮುಂದೆ ನಿಂತು ಕೂದಲು ಬಿಚ್ಚಿ ಹರವಿಕೊಂಡು, ವಿವಿಧ ಭಂಗಿಗಳಲ್ಲಿ ನನ್ನ ನಾ ಪ್ರಸೆಂಟ್ ಮಾಡಿಕೊಳ್ತಾ ನೋಡಿಕೊಳ್ತಿದ್ದೆ. ಇಂತಹ ಕದ್ದು ಮುಚ್ಚಿದ ಚಟುವಟಿಕೆಗಳು ಜೊತೆಗೆ ಪ್ರಜ್ಞಾಪೂರ್ವಕವಾಗಿ ಕಟ್ಟಿ ಹಾಕಿದಷ್ಟೂ ಅಪ್ರಜ್ಞಾಪೂರ್ವಕವಾಗಿ ಪುಟಿದು ಬರುತ್ತಿದ್ದ ಮಾತು ಮತ್ತು ನಗೆ ನನ್ನಲ್ಲಿ ಅಪರಾಧಿ ಭಾವ ಮೂಡಿಸಿ ಗೊಂದಲಕ್ಕೀಡು ಮಾಡೋದು.

ಹೆಣ್ಣಿಗಿರಬೇಕಾದ ಗುಣ ನಡತೆ ಅಂತ ಇವರೆಲ್ಲ ಏನು ಹೇಳ್ತಿದ್ದಾರೊ ಅವ್ಯಾವು ನನ್ನಲ್ಲಿಲ್ಲ. ಅವನ್ನು ನನ್ನೊಳಗೆ ತಗೊಳೋಕೆ ಹೋದಷ್ಟು ನಾನು ಖಾಲಿ ಖಾಲಿ ಆದಂತೆನಿಸೋದು. ನಾನು ಹೆಣ್ಣೇ ಅಲ್ವಾ ಹಾಗಾದ್ರೆ? ಅಂತ ತಳಮಳಿಸೋ ಸಂದರ್ಭದಲ್ಲಿ… ಸರ್ ಅಲ್ಲಿ ನೀವಿದ್ರಿ. ತಳಮಳದ ಮನಸ್ಸಿಗೆ ಧೈರ್ಯ ತುಂಬಲು. `ನೀನು ಹೆಣ್ಣೇ, ಈ ಮಾತು, ನಗೆ ಎಲ್ಲ ಕಂಟ್ರೋಲ್ ಮಾಡ್ಲಿಕ್ಕೆ ನಿನ್ನ ಕೈಲಿ ಸಾಧ್ಯವಿದೆ’ ಎಂಬ ಆಶಾವಾದದ ಯಾವ ಮಾತನ್ನೂ ನೀವು ಆಡಿ ತೋರಿಸಲಿಲ್ಲ. ಬದಲಿಗೆ ಆ ಬಗ್ಗೆ ಯೋಚಿಸಿ ಹಣ್ಣಾಗುವುದಕ್ಕೆ, ನನ್ನೊಳಗೆ ನಾನು ಖೊಟ್ಟಿಯಾಗುವುದಕ್ಕೆ ಅವಕಾಶ ಕೊಡದಂತೆ ಕಾದಿರಿ.

ಏಳೆಂಟು ವಿದ್ಯಾರ್ಥಿಗಳಿದ್ದ ಸಂಸ್ಕೃತದ ತರಗತಿಯದು. ನೀವು ನಮಗೆ ಮೇಷ್ಟ್ರು. ನಿಮ್ಮ ಜೊತೆ ನಮಗೆ ನೇರ ಸಂಭಾಷಣೆ ಸಾಧ್ಯವಾಗ್ತಿತ್ತು. ಸಂಸ್ಕೃತ ನಮಗೆಲ್ಲ ಹೊಸ ಭಾಷೆ. ಅದರಲ್ಲೂ ಶೂದ್ರರ ಮನೆಯ ಹುಡುಗಿಯಾದ ನನಗೆ ಸಂಪೂರ್ಣ ಅಪರಿಚಿತವಾದ ಭಾಷೆ. ಆದರೆ ಆ ಬಗ್ಗೆ ಆತಂಕ ಪಡಲು ಅವಕಾಶವೇ ಇಲ್ಲದಂತೆ ನೀವು ಹೆಚ್ಚಾಗಿ ಕನ್ನಡದಲ್ಲೇ ಮಾತಾಡ್ತಿದ್ರಿ. ಸಂಸ್ಕೃತವನ್ನು ಓದಿ ಕನ್ನಡದಲ್ಲಿ ವಿವರಿಸ್ತಿದ್ರಿ. ಕನ್ನಡ ಭಾಷೆಯ ಸ್ಪರ್ಷ, ಸೊಗಡು, ಗಂಧ ದೊರಕಿದ್ದು ನಿಮ್ಮ ಸಂಸ್ಕೃತದ ತರಗತಿಯಲ್ಲಿ.

ಒಂದು ದಿನ ನಿಮ್ಮ ತರಗತಿಯಲ್ಲಿ ಏನೋ ಚರ್ಚೆ ನಡೆಯುತ್ತಿತ್ತು. ನಾನು ಜೋರು ಜೋರಾಗಿ ಮಾತಾಡ್ತಿದ್ದೆ. ನೀವು ಎಂದಿನ ನಿಮ್ಮ ಮಂದಸ್ಮಿತ ನಿಲುವಿನೊಂದಿಗೆ ಆಲಿಸ್ತಿದ್ದಿರಿ. ಜೊತೆಗೆ ಉಳಿದ ವಿದ್ಯಾರ್ಥಿಗಳು ಮಾತಿಗೆ ಸೇರಿಕೊಂಡು ಚರ್ಚೆ ಸ್ವಾರಸ್ಯಮಯ ಘಟ್ಟಕ್ಕೆ ತಲುಪಿದಾಗ ಬೆಲ್ ಆಯಿತು. ನೀವು ಕ್ಲಾಸಿಂದ ಹೊರ ಹೋಗೋಕೆ ಬಾಗಿಲು ದಾಟ್ತಿದ್ದಂತೆ, ತರಗತಿಯಲ್ಲಿ ಅದುವರೆಗೆ ಸುಮ್ಮನೆ ಸುಭಗಿಯಂತೆ ಕೂತಿದ್ದ ಸಹಪಾಠಿಯೊಬ್ಬಳು ನನ್ನನ್ನು ಉದ್ದೇಶಿಸಿ, `ಗಟ್ಟಿ ಧ್ವನಿಯಲ್ಲಿ ಎಷ್ಟೊಂದು ಮಾತಾಡ್ತೀಯಪ್ಪಾ’ ಎಂದು ತನ್ನ ವೈರಾಗ್ಯ ಪ್ರಕಟಿಸಿದಳು. ನೀವು ಬಾಗಿಲನ್ನು ಇನ್ನೇನು ದಾಟಬೇಕಿದ್ದವರು ಮತ್ತೆ ಮರಳಿಬಂದು ನನ್ನ ಸಹಪಾಠಿಯ ಎದುರಿಗೆ ನಿಂತು `ಮಿಣ್ಣಗಿರುವವರ ಬಣ್ಣ ಬೇರೆ’ ಅನ್ನೋ ಒಂದೆ ಒಂದು ವಾಕ್ಯ ಹೇಳಿ ಹೊರಟೋದ್ರಿ. ಮೊದಲಬಾರಿಗೆ ನನಗನ್ನಿಸಿದ್ದನ್ನು ಹೇಳಿಕೊಳ್ಳುವ ಬಗ್ಗೆ ಯಾವುದೇ ತಪ್ಪಿತಸ್ಥ ಭಾವನೆ ನನ್ನೊಳಗೆ ಮೂಡದೇ ಇರುವಂತೆ ನೋಡಿಕೊಂಡ್ರಿ.

ನನ್ನ ನಗೆ ಮತ್ತು ಮಾತನ್ನು ಕಡಿಮೆ ಮಾಡಲು ಕಾರಣಕರ್ತರು ನೀವೇ. ನಮ್ಮ ಹೈಸ್ಕೂಲ್ ನಲ್ಲಿ ಅಗಾಧವಾದ ಪುಸ್ತಕ ಸಂಗ್ರಹವಿತ್ತು. ದೊಡ್ಡ ದೊಡ್ಡ ಕಪಾಟುಗಳಲ್ಲಿ ಪುಸ್ತಕಗಳನ್ನು ತುಂಬಿಟ್ಟಿದ್ದರು. ಯಾರಿಗೂ ಕೊಡುತ್ತಿರಲಿಲ್ಲ. ತರಗತಿ ಪುಸ್ತಕದಿಂದ ವಿಚಲಿತರಾಗಿ ಕಥೆ ಪುಸ್ತಕದತ್ತ ಆಕರ್ಷಿತರಾಗಿಬಿಟ್ಟರೆ ಎಂಬ ಎಚ್ಚರಿಕೆ. ಆದರೆ ನೀವು ಉಳಿದವರ ಅಡ್ಡಿ, ಆತಂಕಗಳನ್ನೆಲ್ಲ ಎದುರಿಸಿ, ಬದಿಗೊತ್ತಿ, ಪುಸ್ತಕಗಳ ಧೂಳು ಕೊಡವಿ ನಮಗೆ ಓದಲು ಕೊಟ್ರಿ, ಓದಿಸಿದ್ರಿ, ಚರ್ಚಿಸಿದ್ರಿ. ಹೆಚ್ಚು ಹೆಚ್ಚು ಓದಿದಷ್ಟೂ ಮತ್ತಷ್ಟು ಮಗದಷ್ಟು ಪುಸ್ತಕ ಕೊಟ್ಟು ಓದುವಂತೆ ಮಾಡಿದ್ರಿ. ಪುಸ್ತಕಗಳ ಒಡನಾಟದಲ್ಲಿ ನನ್ನ ಮಾತು ಆದಷ್ಟು ಕಳೆದೇ ಹೋಯ್ತು. ನಗು ಮನಸ್ಸಿನ ಆನಂದವಾಗಿ ಪರಿವರ್ತನೆಯಾಯ್ತು. ಮತ್ತು ಹೀಗೆಲ್ಲ ಯಾವುದೇ ಒತ್ತಡವಿಲ್ಲದೆ ಅಪ್ರಜ್ಞಾಪೂರ್ವಕವಾಗಿ ನಡೆಯಿತು. ನೀವು ನಮಗೆಂದೂ ಉಳಿದ ಮೇಷ್ಟ್ರುಗಳಂತೆ ಅಲ್ಲಿಗೆ ಹೋಗ್ಬೇಡಿ ಇಲ್ಲಿಗೆ ಹೋಗ್ಬೇಡಿ ಎಂದು ಕಟ್ಟುನಿಟ್ಟು ಮಾಡ್ಲಿಲ್ಲ. ಬದಲಿಗೆ ಕಾಡು ಸುತ್ತುವ ಆಶೆಯನ್ನು, ವಿವಿಧ ಹಣ್ಣು, ಹೂವು, ಪ್ರಾಣಿ, ಪಕ್ಷಿಗಳ ಪ್ರಪಂಚದ ಬಗ್ಗೆ ಕುತೂಹಲವನ್ನು ನಮ್ಮಲ್ಲಿ ಹುಟ್ಟಿಸಿದ್ರಿ. ಆದ್ದರಿಂದ ಎಲ್ಲಿಗೆ ಹೋಗೋದಾದ್ರೂ ನಿಮಗೆ ಹೇಳಿಯೇ ಹೋಗೋಣ ಅಂತ ನನಗೆ ಅನ್ನಿಸೋದು.

ನೀವು ಕುಂಕುಮ ಹಚ್ಚಿಕೊಂಡು ಬರ್ತಿದ್ರಿ. ಆದರೆ ಆ ಬಗ್ಗೆ ನಮಗ್ಯಾರಿಗೂ ಕಟ್ಟುನಿಟ್ಟು ಮಾಡ್ತಿರಲಿಲ್ಲ. `ನಾವು ಮಕ್ಕಳು, ನಾವು ಎಳೆಯರು. ನಾವು ಹೇಗಿದ್ದರೂ ಚೆಂದ ಎಂಬುದನ್ನು ನಮಗೆ ಮನದಟ್ಟು ಮಾಡಿಸಿದ್ರಿ. ಆದ್ರಿಂದ ಕನ್ನಡಿ ಮುಂದೆ ಗಂಟೆ ಗಟ್ಟಲೆ ಕಳೆಯುವ, ಹುಡುಗರನ್ನು ನೋಡದೇ ಮುಖ ಮರೆಸಿಕೊಳ್ಳುವಂತ ಅಸಹಜ ವರ್ತನೆಗಳು ಬಹಳ ದಿನ ನಡೆಯಲಿಲ್ಲ.

ಯಾವತ್ತೂ ಹೊಡೆದು, ಬೈದು ಮಾಡದ ನೀವು ಬಲಪ್ರಯೋಗದಿಂದ ಏನನ್ನೂ ಕಲಿಸೋಕೆ ಸಾಧ್ಯವೇ ಇಲ್ಲ ಅಂತ ನಂಬಿದ್ರಿ. ಕೈಯಲ್ಲಿ ಸದಾ ಕಾಲ ಕೋಲನ್ನು ಹಿಡಿದೇ ಇರುವ, ತಾವೇ ತಪ್ಪು ಮಾಡಿದಾಗಲೂ ಅದನ್ನು ಮರೆಸುವುದಕ್ಕೆ ಹುಡುಗರ ಮೇಲೆ ಬಲಪ್ರಯೋಗ ಮಾಡ್ತಿದ್ದ ಮೇಷ್ಟ್ರುಗಳಿಂದ ಕಲಿಸಲಾಗದೇ ಇರುವುದನ್ನು ಒಂದು ದಿನಕ್ಕೂ ಹೊಡೆಯದೆ ಬಡಿಯದೆ ನೀವು ಕಲಿಸಿದ್ರಿ. ಇಪ್ಪತೈದು, ಇಪ್ಪತ್ತಾರು ವರ್ಷದ ನೀವು ಹಿರಿಯ ಗೆಳೆಯನಂತೆ ಕಾಣಿಸ್ತಿದ್ರಿ. ಜಗತ್ತಿನ ಜ್ಞಾನ ಶಾಖೆಗಳನ್ನೆಲ್ಲ ಅರೆದು ಕುಡಿದಂತಹ ಆದರೆ ಆ ಬಗ್ಗೆ ಕಿಂಚಿತ್ ಅಹಂಕಾರವಿಲ್ಲದ, ಪಾಂಡಿತ್ಯ ಪ್ರದರ್ಶಿಸದ ನಮ್ಮೊಡನೆ ನಮ್ಮಂತೆ ಬೆರೆತು ಒಂದಾಗುವ ಜೊತೆಗೆ ನಮ್ಮ ಅನಿಸಿಕೆಗಳನ್ನು ಹೇಳಲು ಪ್ರೇರೇಪಿಸುವ, ಕೇಳಿಸಿಕೊಳ್ಳುವ ಕಾತರ ತೋರುವ ಹಿರಿಯ ಗೆಳೆಯ. ನೀವು ಕಲಿಸಿದ ಪಾಠ ಅಗಾಧವಾದದ್ದು, ಟೆಕ್ಸ್ಟ್ ಬುಕ್ ಗಳ ಸೀಮಿತತೆಗೆ ನಿಲುಕದೆ ಹೋದಂತದ್ದು, ಸರ್ ನೀವು ಯಾವಾಗ್ಲೂ ತಾಳ್ಮೆಯಿಂದ ಇರ್ತಾ ಇದ್ರಿ. ನಮಗೂ ಅದನ್ನೆ ಕಲಿಸಿಕೊಟ್ರಿ. ಎಷ್ಟೋ ಕಠಿಣ ಸಂದರ್ಭದಲ್ಲಿ ನೀವು ಅಂದು ಹಚ್ಚಿಕೊಟ್ಟ ತಾಳ್ಮೆ ಎಂಬ ದೀಪ ಬೆಳಕು ತೋರಿಸಿದೆ. ಬುಧವಾರ ನಮಗೆ ನಿಮ್ಮ ಕ್ಲಾಸಿರ್ತಾ ಇರಲಿಲ್ಲ. ಆವತ್ತಿಡಿ ದಿನ ಏನನ್ನೋ ಕಳೆದುಕೊಂಡ ಹಾಗಾಗೋದು. ನಿಮ್ಮನ್ನ ಆವತ್ತು ತುಂಬಾ ತುಂಬಾ ನೆನಪಿಸಿಕೊಳ್ತಿದ್ದೆ.

ಒಂದೆ ಒಂದು ವರ್ಷ ನೀವು ನಮಗೆ ಪಾಠ ಹೇಳಿದ್ದು. ಮುಂದೆ ನಮ್ಮ ಶಾಲೆಯನ್ನೆ ಬಿಟ್ಟು ಹೊರಟು ಹೋದ್ರಿ. ನೀವು ಹೋದ ದಿನದಿಂದ ಎಲ್ಲ ವಾರಗಳು ಖಾಲಿ ಖಾಲಿ ಬುಧವಾರಗಳೇ. ಆವತ್ತಿಂದ ಇವತ್ತಿನವರೆಗೂ ನಿಮ್ಮನ್ನ, ನಿಮ್ಮ ತರಗತಿಯನ್ನ ನಿಮ್ಮ ಪಾಠವನ್ನು, ನಿಮ್ಮ ಸ್ನೇಹಮಯಿ ವರ್ತನೆಯನ್ನು ತುಂಬಾ ತುಂಬಾ ನೆನಪಿಸಿಕೊಳ್ಳುತ್ತೇನೆ ಮಾಧವ ಹೊಳ್ಳ ಸರ್.

ಹಾಡೋ ಹುಡುಗರಿಗೆ ಆಟಾನೂ ಬೇಕು

ಅಕ್ಷತಾ ಕೆ

ak1

ದಣಪೆಯಾಚೆ…

 

ಇತ್ತೀಚಿಗೆ ನಮ್ಮ ಮನೆಗೆ ಬಂದ ಹಿರಿಯರೊಬ್ಬರು ಆ ಹುಡುಗರ ಮನೆಗೆ ನನ್ನನ್ನು ಕರೆದೊಯ್ದಿದ್ದರು. ಮೊದಲನೆಯವನು ಏಳನೇ ತರಗತಿ. ಚಿಕ್ಕವನಿನ್ನೂ ಐದನೇ ತರಗತಿ. ಇಬ್ಬರೂ ಹಾಡುಗಾರರು. ಈಗಾಗಲೇ ಕನ್ನಡದ ಎಲ್ಲ ಟಿವಿ ಚಾನೆಲ್ ಗಳ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಎರಡನೇ ಸುತ್ತು, ಮೂರನೇ ಸುತ್ತು, ಸೆಮಿಫೈನಲ್ ಹೀಗೆಲ್ಲ ವಿವಿಧ ಹಂತಗಳಿಗೆ ತಲುಪಿ ಬಂದಿದ್ದಾರೆ. ಮುಂದಿನ ಕೆಲವು ಸ್ಪರ್ದೆಗಳಿಗೆ ತಯಾರಿಯನ್ನು ಮಾಡಿಕೊಳ್ಳುತಿದ್ದಾರೆ.

ಈ ವಿವರಗಳನ್ನೆಲ್ಲ ಹುಡುಗರ ತಾಯಿ ನಮಗೆ ನೀಡಿದರು. ಜೊತೆಗೆ ಆ ಚಾನೆಲ್ ನ ನಿರೂಪಕರು ತಮ್ಮ ಮಗನಿಗೆ ನಿನ್ನ ಹೆಸರಿಗೆ ತಕ್ಕಂತೆ ನಿನ್ನ ಕಂಠ ಸಿರಿಯು ಅದ್ಭುತ ಎಂದು ಹೊಗಳಿದ್ದನ್ನು, ಇನ್ನೊಂದು ಚಾನೆಲ್ನಲ್ಲಿ ತೀರ್ಪುಗಾರರು ತಮ್ಮ ಮಗನ ಪರವಿದ್ದರೂ ವೀಕ್ಷಕರ ಎಸ್ ಎಂಎಸ್ ಜಾಸ್ತಿ ಸಂಖ್ಯೆಯಲ್ಲಿ ಬೇರೆಯವನಿಗೆ ಹೋದುದರಿಂದ ತಮ್ಮ ಮಗ ಸೋಲುಣ್ಣಬೇಕಾಯಿತೆಂದು, ಮಗದೊಂದರಲ್ಲಿ ತೀರ್ಪುಗಾರರೆ ಮೋಸ ಮಾಡಿಬಿಟ್ಟರು ಎಂದೆಲ್ಲ ವಿವರಣೆ ನೀಡಿದರು.

 

ttap_music_15

ಅಲ್ಲೇ ನಿಂತು ಇದನ್ನೆಲ್ಲ ಕೇಳಿಸಿಕೊಳ್ಳುತಿದ್ದ ಆ ಇಬ್ಬರು ಹುಡುಗರು ಅಮ್ಮನ ಮಾತಿನಿಂದ ಮುಜುಗರ ಪಡುತ್ತಿರುವುದು ಸ್ಪಷ್ಟ ಗೋಚರಿಸುತ್ತಿತ್ತು. ಅವಕ್ಕೆ ಸ್ಪರ್ಧೆ ಎಂದರೆ ಸ್ಪರ್ಧೆ ಅಷ್ಟೆ, ಅದಕ್ಕಿಂತ ಹೆಚ್ಚಲ್ಲ. ಗೆದ್ದರೂ ಸೋತರೂ ಅದರ ನಡುವಿನ ಅಂತರ ತುಂಬಾ ಕಡಿಮೆ. ಆದರೆ ಹಿರಿಯರಿಗೆ ಅದರ ನಡುವೆ ಭೂಮಿ ಆಕಾಶದಷ್ಟು ಅಂತರ. ಅಷ್ಟೊತ್ತಿಗೆ ಆ ಹುಡುಗರ ಅಪ್ಪ ಬಂದರು. ನಮಗೆ ಹಲೋ ಹೇಳಿದವರೇ ಎಲ್ಲಿ ಹಾರ್ಮೋನಿಯಮ್ ತೆಗೆದುಕೊಂಡು ಬನ್ನಿ ಇವರೆದುರಿಗೆ ಎರಡು ಹಾಡು ಹೇಳಿ. ಈ ಅಂಕಲ್ ತುಂಬಾ ಚೆನ್ನಾಗಿ ಹಾಡು ಹೇಳ್ತಾರೆ ನಿಮ್ಮ ಹಾಗೆ ಅವಕಾಶ ಸಿಗ್ಲಿಲ್ಲ ಅದಕ್ಕೆ ಎಲ್ಲೂ ಹಾಡ್ಲಿಲ್ಲ. ನಿಮ್ಮ ಹಾಗೆಲ್ಲ ಅವಕಾಶ, ಪ್ರೋತ್ಸಾಹ ಎಲ್ಲ ಸಿಕ್ಕಿದ್ದರೆ ಇವತ್ತು ಏನಾಗಿಬಿಡ್ತಿದ್ದರೋ ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ನನ್ನನ್ನು ಅವರ ಮನೆಗೆ ಕರೆದೊಯ್ದಿದ್ದ ಹಿರಿಯರ ಮುಖ ನೋಡಿದರು!

ಹುಡುಗರಿಬ್ಬರು ಹಾರ್ಮೋನಿಯಮ್ ತಾರದೇ ನೀ ಕೇಳು ನೀ ಕೇಳು ಎಂದು ಪರಸ್ಪರ ಗುನುಗು ಸ್ವರದಲ್ಲಿ ಒತ್ತಾಯಿಸುತ್ತಾ ಅಲ್ಲೇ ನಿಂತಿದ್ದರು. ಅವರಿಬ್ಬರು ಹಾಡಲು ಈ ಕ್ಷಣದಲ್ಲಿ ಮನಸಿಲ್ಲ ಎಂದು ನನಗೆ ಖಾತ್ರಿಯಾಯಿತು. ಮನಸಿಲ್ಲದೆ ಏನನ್ನೂ, ಯಾವ ಕಾರಣಕ್ಕೂ, ಯಾವ ಅನಿವಾರ್ಯತೆಗೂ ಮಾಡುವ ಅವಶ್ಯಕತೆ ಇದೆ ಎಂದು ನನಗೆ ಅನ್ನಿಸುವುದಿಲ್ಲ. ಜೊತೆಗೆ ಸಂಜೆ ಸಮಯದಲ್ಲಿ ಕ್ರಿಕೆಟ್ ಫೀಲ್ಡ್ ಕರೆಯುತ್ತಿರಲು ಯಾವ ಹುಡುಗನಾದರೂ ಯಾಕೆ ಒತ್ತಾಯಪೂರ್ವಕವಾಗಿ ಹಾಡಬೇಕು? ಅಂಥ ಅನಿವಾರ್ಯವಾದರೂ ಏನಿದೆ? ಇರಲಿ ಬಿಡಿ ಇನ್ನೊಂದು ದಿನ ನಿಮ್ಮ ಹಾಡು ಕೇಳಲಿಕ್ಕೆ ಅಂತಲೇ ಬರುತ್ತೇವೆ. ಆಗಿನಿಂದ ಅಣ್ಣ ತಮ್ಮ ಎಲ್ಲಿಗೋ ಹೋಗಲು ತಯಾರಿ ಮಾಡಿಕೊಳ್ಳುತಿದ್ದೀರಿ ಹೋಗಿ ಎಂದು ಬಿಟ್ಟೆ. ಇನ್ನಷ್ಟು

ಪ್ಯಾಸೆಂಜರ್ ರೈಲು ಹಾಗೂ ನಾನು-ಇಬ್ಬರೂ ನಿಧಾನಿ

ಅಕ್ಷತಾ ಕೆ

ದಣಪೆಯಾಚೆ…

 

‘ಎಂಥ ಎಂಥ ಲೋಕಾನೋ, ಎಂಥ ಎಂಥ ಲೋಕಾನೋ’ ಎಂಬ ಇತ್ತೀಚಿನ ಯಾವುದೋ ಸಿನಿಮಾದ ಹಾಡು ಎಲ್ಲೆಂದರಲ್ಲಿ ಕಿವಿಗೆ ಬೀಳುವಾಗ ನನಗೆ ರೈಲಿನಲ್ಲಿ ನಾನು ಕಂಡ ವೈವಿಧ್ಯಮಯ ಲೋಕಗಳ ನೆನಪಾಗುತ್ತದೆ.

ಇತ್ತೀಚಿನ ಒಂದೆರಡು ವರ್ಷಗಳಲ್ಲಿ ನನ್ನ ಜೀವ ಮತ್ತು ಭಾವದ ಜೊತೆ ಬೆಸೆದ ಹಲವು ತಂತುಗಳು ರಾಜಧಾನಿಯಲ್ಲೆ ಬೀಡು ಬಿಟ್ಟಿರುವುದರಿಂದ ನಾನು ಎರಡು ತಿಂಗಳಿಗೊಮ್ಮೆಯಾದರೂ ಬೆಂಗಳೂರಿಗೆ ಭೇಟಿ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಮೊದ ಮೊದಲು ಬಸ್ಸೋ, ಟ್ರೈನೋ ಎಂದೆಲ್ಲ ಮೊದಲೇ ಯೋಚಿಸಿ ರಿಸರ್ವೇಶನ್ ಮಾಡಿಸಿ ಪ್ರಯಾಣದ ದಿನ ಹತ್ತಿರ ಬಂದಂತೆ ಈಗ ಹೋಗಲೋ, ಮತ್ತೊಮ್ಮೆ ಹೋಗಲೋ ಎಂದೆಲ್ಲ ಆತಂಕ, ಸಂಧಿಗ್ದತೆಗೆ ಬೀಳುತಿದ್ದ ನನಗೆ ಪ್ಯಾಸೆಂಜರ್ ಟ್ರೈನ್ಗಳಲ್ಲಿ ಓಡಾಡುವುದು ಅಭ್ಯಾಸವಾದ ಮೇಲೆ ಈ ಎಲ್ಲ ಗೊಂದಲಗಳು ತಪ್ಪಿವೆ.

ಕವಿತೆಯೊಂದು ಉಸುರುವಂತೆ ` ಹೀಗೆ ಹೊರಟುಬಿಡುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ ಯಾವುದಾದರೇನು ಬಸ್ಸು ಎಂದು ಹೊರಟೇಬಿಟ್ಟೆ’ ಎನ್ನುತ್ತದೆ. ಹಾಗೆ ನಾನು ಕೂಡಾ ಪ್ಯಾಸೆಂಜರ್ ಟ್ರೈನ್ನಲ್ಲಿ ಸೀಟಂತೂ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಬೆಂಗಳೂರಿನಲ್ಲಿರುವ ಯಾವುದೋ ಒಂದು ತಂತು ತುಸು ಎಳೆದರೂ ಸಾಕು ಹೊರಟೇಬಿಡುತ್ತೇನೆ.

train_boy

ಎಕ್ಸ್ಪ್ರೆಸ್ ಟ್ರೈನಿನಲ್ಲಿ ಕಿಟಕಿ ಪಕ್ಕ ಸೀಟು ಸಿಕ್ಕರೆ ಕಣ್ಣನ್ನು ಹೊರಕ್ಕೆ ನೆಡುವುದು, ರಾತ್ರಿಯ ಟ್ರೈನಾದರೆ ತಮ್ಮ ಪಾಡಿಗೆ ತಾವು ಮಲಗಿಕೊಳ್ಳುವುದು, ಪಕ್ಕದವನು ಗೊರಕೆಯ ಅಸಾಮಿಯಾಗಿದ್ದರೆ ಅವನಿಗೆ ಹಿಡಿಶಾಪ ಹಾಕುವುದು, ಲಗೇಜುಗಳು ಜಾಸ್ತಿಯಿದ್ದರೆ, ಅಮೂಲ್ಯವಾದ ವಸ್ತುವೇನಾದರೂ ಬಳಿ ಇದ್ದರೆ ಒಂದು ರೀತಿಯ ಭಯದಲ್ಲೆ ಅಲರ್ಟ್ ಆಗಿದ್ದು ನಿದ್ದೆ ಮಾಡದೇ ಅದನ್ನು ಕಾಯುವುದು ಈ ರೀತಿಯ ದೃಶ್ಯಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ಆದರೆ ಪ್ಯಾಸೆಂಜರ್ ಟ್ರೈನಿನ ಪ್ರಯಾಣ ಎಲ್ಲವಕ್ಕಿಂತ ವಿಭಿನ್ನ.

ಚಲಿಸುತ್ತಿದೆಯೋ ಇಲ್ಲವೋ ಎಂದು ಒಳಗೆ ಕೂತವರಿಗೆ ಹಲವು ಬಾರಿ ಗೊಂದಲ ಹುಟ್ಟಿಸುವಷ್ಟು ನಿಧಾನಕ್ಕೆ ಚಲಿಸುವ, ಗಳಿಗೆಗೊಮ್ಮೆ ಕ್ರಾಸಿಂಗ್ ಕಾರಣಕ್ಕೆ ಎಕ್ಸ್ಪ್ರೆಸ್ಗಳಿಗೆಲ್ಲ ದಾರಿ ಮಾಡಿಕೊಟ್ಟು ನಿಂತೆ ಬಿಡುವ ರೈಲಿದು. ಇದಕ್ಕೆ ಬರುವ ಹೆಚ್ಚಿನ ಪ್ರಯಾಣಿಕರು ಕಾಲದ ಹಂಗಿಗೆ ಒಳಪಟ್ಟವರಲ್ಲ, ಶಿವಮೊಗ್ಗೆಯಿಂದ ಬೆಳಗಿನ ಜಾವ 5.15ಕ್ಕೆ ಹೊರಡುವ ರೈಲು ಮದ್ಯಾಹ್ನ 11.30ಕ್ಕೆ ಬೆಂಗಳೂರು ತಲುಪುತ್ತದೆಯಾದರೂ, 12.30ಕ್ಕೆ ತಲುಪಿದರೂ ಏನೀಗ ಎನ್ನುವ ಜಾಯಮಾನದ ಪ್ರಯಾಣಿಕರೇ ಹೆಚ್ಚು. ಆ ದೀರ್ಘ ಸಮಯದ ತನಕದ ಮಾತಾಡದೇ ಗುಮ್ಸುಮ್ ಆಗಿರುವುದಾದರೂ ಹೇಗೆ ಹೇಳಿ?

ಅದು ಎಕ್ಸ್ ಪ್ರೆಸ್ ಟ್ರೈನಿನ ಹಾಗೆ ಯಾರಿಗೆ ಯಾರೂ ಬೆನ್ನು ಹಾಕಿ ಕೂರುವುದಿಲ್ಲ, ಬಸ್ಸಿನ ಹಾಗೆ ಪ್ರಯಾಣ ಆಯಾಸ ತರುವುದಿಲ್ಲ, ರಾತ್ರಿ ಟ್ರೈನಿನ ಹಾಗೆ ಮಲಗುವ ವ್ಯವಸ್ಥೆಯು ಇಲ್ಲ. ಎಲ್ಲ ಎದುರು ಬದುರು ಸೀಟುಗಳು ಒಂದೊಂದು ಸೀಟಿನಲ್ಲೂ ನಾಲ್ಕು ಜನ ಕೂರುವ ವ್ಯವಸ್ಥೆ ಇದ್ದರೂ ಕನಿಷ್ಟ ಐದಾರು ಜನರಂತೂ ಕೂತೆ ಇರುತ್ತಾರೆ. ಆರು+ಆರು ಜನ ಎದುರು ಬದರು ಕೂತು ಮೌನವಾಗಿದ್ದರೆ ಸರ್ವಜನಾಂಗದ ಶಾಂತಿಯ ತೋಟ ಭಾರತದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತಿತ್ತೆ? ಆದ್ದರಿಂದ ಪರಸ್ಪರ ಮಾತುಕಥೆಯಲ್ಲಿ ತೊಡಗುತ್ತಾರೆ. ಮಾತು ಕಥೆಯಾಗಿ, ಹಾಡಾಗಿ ಹರಿಯುತ್ತದೆ. ಸಂಕಷ್ಟ ಕೇಳಿದಾಗೊಮ್ಮೆ ಛೆ ಎಂಬ ಉದ್ಗಾರ, ಸಂತೋಷದ ವಿಷಯ ಕೇಳಿದಾಗ ಕುಲುಕುಲು ನಗು ಎಲ್ಲ ಭೋಗಿಗಳಲ್ಲೂ ಅನುರಣಿಸುತ್ತದೆ.

ತಾಯಿಯ ಮಡಿಲಲ್ಲಿರುವ ಪುಟ್ಟ ಮಗು ರೈಲು ಪ್ರಯಾಣದ ಉದ್ದಕ್ಕೂ ಪಕ್ಕದ, ಎದುರಿನ ಸೀಟಿನಲ್ಲಿ ಕೂತ ಹಲವರ ಮಡಿಲೇರಿ ಮತ್ತೆ ಮರಳಿ ತಾಯಿಯ ಮಡಿಲಿಗೆ ಬರುತ್ತದೆ. ಸ್ವಲ್ಪ ಹೊತ್ತು ತಾಯಿಗೂ ವಿರಾಮ ಕೊಡಬೇಕೆನ್ನುವ ದೊಡ್ಡ ಮನದ ಜೀವಗಳು ಪ್ಯಾಸೆಂಜರ್ ರೈಲಿನಲ್ಲಲ್ಲದೆ ಇನ್ನೆಲ್ಲಿ ಕಾಣಲು ಸಾಧ್ಯ? ಪ್ಯಾಸೆಂಜರ್ ರೈಲಿನ ಮಹಿಳಾ ಭೋಗಿಯ ಲೋಕವಂತೂ ನನಗೆ `ಕಿರುಗೂರಿನ ಗಯ್ಯಾಳಿಗಳನ್ನೆ’ ನೆನಪಿಗೆ ತರುತ್ತದೆ. ಎರಡು ಜಡೆ ಸೇರುವುದಿಲ್ಲ ಎಂಬ ಪಭೃತಿಗಳು ಒಮ್ಮೆ ಈ ಭೋಗಿಯನ್ನು ಟಿಕೇಟ್ ಕಲೆಕ್ಟರ್ ನ ಮಾರುವೇಷದಲ್ಲಾದರೂ ಬಂದು ನೋಡಿ ಹೋಗಬೇಕು.

ಒಮ್ಮೆ ಒಬ್ಬ ತಾಯಿ ಪೂರ್ತಿ ಟಿಕೇಟ್ ತೆಗೆದುಕೊಳ್ಳಬೇಕಾದ ಮಗನಿಗೆ ಅರ್ಧ ಟಿಕೇಟ್ ಖರೀದಿ ಮಾಡಿದ್ದಳು, ಟಿಕೇಟ್ ಕಲೆಕ್ಟರ್ ಬಂದವನೇ ಅರ್ಧ ಟಿಕೇಟ್ ನೋಡಿ ಯಾವ ತರಗತಿಯಲ್ಲಿ ಓದುತ್ತೀಯ ಎಂದು ಕೇಳಿದ, ತಾಯಿ ವಯಸ್ಸು ಸುಳ್ಳು ಹೇಳು ಎಂದು ಮಗನಿಗೆ ಹೇಳಿಕೊಟ್ಟಿದ್ದಳು, ತರಗತಿಯನ್ನಲ್ಲ, ಅದಕ್ಕೆ ಹುಡುಗ ಬಹು ಉತ್ಸಾಹದಿಂದ ಎಂಟನೇ ತರಗತಿ ಎಂದ. ಕಲೆಕ್ಟರ್ ಪೂರ್ತಿ ಟಿಕೇಟ್ ಮಾಡಿಸುವಲ್ಲಿ ಅರ್ಧ ಟಿಕೇಟ್ ಮಾಡಿಸಿದ್ದೀರಾ 350 ರೂಪಾಯಿ ದಂಡ ಕಟ್ಟಿ ಎಂದು ಕೂತ. ಆ ಹೆಂಗಸು ದುಡ್ಡಿಲ್ಲ ಕಣಣ್ಣ ಅಂದ್ಲು. ಅದೆಲ್ಲ ನಂಗೊತ್ತಿಲ್ಲ, ತಿಪಟೂರಲ್ಲಿ ಇಳಿದುಕೊಂಡು ಟಿಕೇಟ್ ತಗಂಬನ್ನಿ ಅಂದ, ಅಣ್ಣಾ ಅಲ್ಲಿ ಇಳಿದು ಟಿಕೇಟ್ ತಗಳ್ಳೋ ತನಕ ಈ ರೈಲು ಹೊರಟುಬಿಡತ್ತೆ. ಇದು ಬಿಟ್ಟರೆ ರೈಲಿಲ್ಲ ಅಂದ್ಲು. ಅಲ್ಲಮ್ಮ ಬಸ್ಸಿಗಿಂತ ಅರ್ಧದಷ್ಟು ರೇಟು ಕಡಿಮೆ ಆದ್ರೂ ಹೀಗೆ ಮಾಡ್ತೀರಾ ಅಂದ್ರೆ ಹೇಗೆ? ಬಸ್ಸಿಗೆ ಅವನು ಕೇಳಿದಷ್ಟು ಕೊಟ್ಟು ಹೋಗಲ್ವಾ? ಟಿಕೇಟ್ ತಗೊಳ್ಳಿ ಇಲ್ಲಾ ಅಂದ್ರೆ ಪಕ್ಕದ ಸ್ಟೇಷನ್ನಲ್ಲಿ ಇಳ್ಕಂಡು ಒಯ್ತಾ ಇರಬೇಕು ಎಂದು ಫರ್ಮಾನು ಹೊರಡಿಸಿದ. ಇನ್ನಷ್ಟು

ಅಮ್ಮಂದಿರಿಗೆ ಯಾವುದು ಅಸಾಧ್ಯ?

ಅಕ್ಷತಾ ಕೆ

ದಣಪೆಯಾಚೆ…

ಪಿಕ್ನಿಕ್ ಅನ್ನೋದು ಎಲ್ಲರಿಗೂ ಯಾಕೆ ಇಷ್ಟ ಆಗತ್ತೆ ಎಂದು ತರಗತಿಯೊಂದರಲ್ಲಿ ಕೇಳಿದಾಗ ಒಬ್ಬ ವಿದ್ಯಾರ್ಥಿ ಯಾಕೆಂದರೆ ಪಿಕ್ನಿಕ್ ಅನ್ನೋದು ಶಾರ್ಟ್ ಪಿರಿಯಡ್ ದಾಗಿರತ್ತೆ.. ಮತ್ತೆ ಎಲ್ಲಿಂದ ಹೊರಟಿದ್ದೇವೋ ಅಲ್ಲಿಗೆ ವಾಪಾಸ್ ಬಂದೆ ಬರುತ್ತೇವೆ ಎಂಬ ಖಾತ್ರಿ ಮತ್ತು ವಾಪಾಸ್ ಬರಲೇಬೇಕು ಎಂಬ ಅನಿವಾರ್ಯತೆ ಪಿಕ್ನಿಕ್ ನ ಒಂದೊಂದು ಕ್ಷಣವನ್ನು ಅನುಭವಿಸುವಂತೆ ಪ್ರೇರೇಪಿಸುತ್ತದೆ ಎಂದು ಉತ್ತರಿಸಿದ್ದ.

ಇದೀಗ ಅಮ್ಮಂದಿರ ವರ್ಗಾವಣೆ ಪ್ರಾರಂಭವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಗನ, ಅನಿವಾರ್ಯತೆ ಇದೆ ಅಂತಾದರೆ ಮಗಳ ಮನೆಯಲ್ಲಿ ನೆಲೆಸಲು ಅಮ್ಮಂದಿರು ತೆರಳುತಿದ್ದಾರೆ. ಆದರೆ ಇದರ ಅನುಭವ ಪಿಕ್ನಿಕ್ ನಂತಿಲ್ಲ. ಯಾಕೆಂದರೆ ತಾವೆಲ್ಲಿಂದ ತೆರಳುತಿದ್ದಾರೋ ಅಲ್ಲಿ ತಮ್ಮ ನೆನಪಿಗೊಂದು ಚಿಕ್ಕ ನವಿಲುಗರಿಯನ್ನೂ ಬಿಟ್ಟು ಹೋಗಲು ಅಮ್ಮಂದಿರಿಗೆ ಅವಕಾಶವಿಲ್ಲ ಹಾಗೆಂದು ವಿಧವೆ ಅಮ್ಮನ ಮುಂದಿನ ಬದುಕಿನ ಸಂಪೂರ್ಣ ಜವಾಬ್ದಾರಿ ಹೊತ್ತ ಮಗ ಬಹಳ ಪ್ರೀತಿಯಿಂದಲೇ ಏನೇನಿದೆಯೋ ಎಲ್ಲ ವಿಲೇವಾರಿ ಮಾಡಿ, ಯಾರಿಗಾದ್ರೂ ಏನಾದ್ರೂ ಸಣ್ಣ, ಪುಟ್ಟ ವಸ್ತುಗಳನ್ನು ಕೊಡೋದಿದ್ದರೆ ಕೊಟ್ಟು ಬಂದ್ಬಿಡು ಏನೂ ಬಾಕಿ ಉಳಿಸಿಕೊಳ್ಳಬೇಡ ಮತ್ತೆ ವಾಪಾಸ್ ಹೋಗೋ ಪ್ರಶ್ನೆ ಏನು ಇಲ್ವಲ್ಲ ಎಂದು ಹೇಳಿದ್ದಾನೆ.

castingಕಳೆದ ಒಂದು ದಶಕದಲ್ಲಂತೂ ಪ್ರತಿ ವರ್ಷ ಬೆಂಗಳೂರಿಗೆ ನೆಲೆಸಲು ತೆರಳುವ ಅಮ್ಮಂದಿರ ಸಂಖ್ಯೆ ಹೆಚ್ಚುತಿದೆ. ಇಳಿವಯಸ್ಸಿಗೆ ಕಾಲಿಟ್ಟ ಅಮ್ಮಂದಿರು ತಾವು 30,40 ವರ್ಷ ಬದುಕನ್ನು ಕಟ್ಟಿಕೊಂಡ ಊರು, ಮನೆ ಎಲ್ಲವನ್ನು ಬಿಟ್ಟು ಮಗನ ಹಿಂದೆ ಕಣ್ಣಿ ಕಟ್ಟಿದ ಕರುವಿನಂತೆ ಹಿಂಬಾಲಿಸುತಿದ್ದಾರೆ. ಇಳಿವಯಸಿನಲ್ಲಿ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಬದುಕುವ ಪ್ರಶ್ನೆ ಧುತ್ತೆಂದು ಎದುರು ಬಂದಾಗ ಆಸ್ತಿ, ಮನೆ ಎಲ್ಲ ಮಾರಿ ನನ್ನ ಜೊತೆ ಬಂದ್ಬಿಡಮ್ಮ ಎಂಬ ಮಗನ ಮಾತು ಸರಿ ಎಂದೇ ಅನಿಸುತ್ತದೆ.

ಮಲೆನಾಡಿನ ಹಳ್ಳಿ ಮೂಲೆಯಲ್ಲಿ ಸಂಸಾರ ಕಟ್ಟಿಕೊಂಡು, ತೋಟ ಮಾಡಿಕೊಂಡು ಮೂವತ್ತು, ಮೂವತೈದು ವರ್ಷದಿಂದ ಬದುಕುತಿದ್ದ ಹೆಂಗಸರು ಸಹ ಎಲ್ಲ ಮಾರಿ ಬೆಂಗಳೂರಿನಲ್ಲಿ ನೆಲೆಯಾಗಿರುವ ಮಗನ ಮನೆಗೆ ಹೋಗಲು ಒಲವು ತೋರಿಸಿದಾಗ ನನಗೆ ಬಹಳ ಅಚ್ಚರಿಯಾಯಿತು. ಆ ಹೆಂಗಸರು ಹೇಳುವುದು ಅವರಂತೂ ಇಲ್ಲಿಗೆ ಬರುವುದಿಲ್ಲ , ಅದರ ಬದಲಿಗೆ ನಾವೇ ಅಲ್ಲಿಗೆ ಹೋಗಿರೋದೆ ಸರಿ ಅನ್ನಿಸ್ತದೆ.

ಇಲ್ಲ ಅಂದರೆ ವರ್ಷಕ್ಕೊಮ್ಮೆ ಮಕ್ಕಳ ಜೊತೆ ಬರುವ ಮೊಮ್ಮಕ್ಕಳಿಗೆ ನಮ್ಮ ಸಂಪರ್ಕವೇ ಇರುವುದಿಲ್ಲ. ಕುಟುಂಬದಲ್ಲಿ ಪರಸ್ಪರ ಒಂದು ಮೋಹ ಬೆಳೆಯುತ್ತದಲ್ಲ ಅದೇ ಇರುವುದಿಲ್ಲ. ಹೀಗೆ ಹೇಳುವಾಗ ಅಮ್ಮಂದಿರ ನಿರ್ಧಾರ ತುಂಬಾ ಸರಿ ಅನ್ನಿಸ್ತದೆ. ಆದರೆ ಊರಲ್ಲಿ ಆಸ್ತಿ, ಮನೆ ಮಾರಿ ಹಾಕಿ ಬಂದ ಅಮ್ಮಂದಿರು ಸುಖವಾಗಿ, ನೆಮ್ಮದಿಯಿಂದ ಇದ್ದಾರೆಯೇ ಎಂದು ನೋಡಿದರೆ ಹಾಗಿರುವವರ ಸಂಖ್ಯೆ ಬೆರಳೆಣಿಕೆಯಷ್ಟು ಇಲ್ಲ ಎಂದೆ ಹೇಳಬಹುದು. ಆರ್ಥಿಕವಾಗಿ ಮಗನ ಮೇಲೆ ಪೂರ್ತಿ ಅವಲಂಬಿಸಿರುವ ಅಮ್ಮಂದಿರಿರಲಿ ಕೊನೆಗಾಲದಲ್ಲಿ ಗಂಡನ ಪೆನ್ಷನ್ ಹಣ, ಆಸ್ತಿ, ಮನೆ ಮಾರಿದ ಹಣ ಎಂದು ಜೋಪಾನವಾಗಿ ಇಟ್ಟುಕೊಂಡಿರುವ ಅಮ್ಮಂದಿರು ಸಹ ಒಂದು ರೀತಿ ಕೊರಗಿನಲ್ಲಿ, ಅನಿವಾರ್ಯತೆಯಲ್ಲಿ ಅಲ್ಲಿರುವಂತೆ ಕಾಣುತ್ತದೆ ವಿನಃ ಯಾವುದೇ ಸಂತೋಷ ಅಥವಾ ಸಂತೃಪ್ತಿಯಿಂದಲ್ಲ.

ಪತಿ ತೀರಿಹೋದ ಮೇಲೆ ಹಳ್ಳಿಯಲ್ಲಿದ್ದ ಆಸ್ತಿ, ಮನೆ ಎಲ್ಲ ಮಾರಿಕೊಂಡು ಬೆಂಗಳೂರಿಗೆ ಹೋಗಿರುವ ನನ್ನ ಗೆಳತಿಯ ಅಮ್ಮನನ್ನು ಈ ಬಗ್ಗೆ ಕೇಳಿದರೆ ಅವರು ಹೇಳಿದರು 4 ಎಕರೆ ಗದ್ದೆ, 1 ಎಕರೆ ತೋಟವಿತ್ತು, ಮನೆಯನ್ನು ಸೇರಿಸಿ ಎಲ್ಲ ಮಾರಿಬಿಟ್ಟೆ, ಮಗ ಹೇಳಿದ ಅಂತ ಹಾಗೆ ಮಾಡಿದೆ ಮಗ ಸೊಸೆ ಒಳ್ಳೆಯವರೇ ಆದರೆ ಒಂದು ವರ್ಷವಾಯಿತು ಇಲ್ಲಿಗೆ ಬಂದು ಒಮ್ಮೆಯು ಊರಿಗೆ ಹೋಗಲೇ ಇಲ್ಲ. ಹೋಗೋಕೆ ಯಾವ ಕಾರಣವೂ ಇಲ್ಲ. ಆದರೆ ತುಂಬಾ ಸರ್ತಿ ಅನ್ನಿಸೋದು ಮನೆ ಮತ್ತು ಒಂದೆಕ್ರೆ ಆಸ್ತಿಯನ್ನಾದರೂ ಮಾರದೇ ಇಟ್ಕೊಬೇಕಿತ್ತು. ಮನಸು ಬಂದಾಗ ಅಥವಾ ಮನಸು ಕೆಟ್ಟಾಗ ಊರಿಗೆ ಬರಬಹುದಿತ್ತು. ಒಂದು ನೆಲೆ ಅಂತ ಇರ್ತಿತ್ತು.

ಸಮಾಜಶಾಸ್ತ್ರಜ್ಞರಾಗಿರುವ ನನ್ನ ಗೆಳೆಯರೊಬ್ಬರು ಒಂದು ವಿಷಯದ ಬಗ್ಗೆ ನನ್ನ ಗಮನ ಸೆಳೆದರು. ಅವರು ಹೇಳಿದ್ದು ಹೆಂಗಸರು 65,70 ವರ್ಷದವರೆಗೂ ತುಂಬಾ ಚೈತನ್ಯಶಾಲಿಗಳಾಗೆ ಇರುತ್ತಾರೆ. ಸಾಕಷ್ಟು ಕೆಲಸಗಳನ್ನು ಮಾಡಲು ಅವರಿಂದ ಸಾಧ್ಯವಾಗುತ್ತದೆ. ಆದರೆ ಹಳ್ಳಿಯಿಂದ ಒಂದು 55, 60 ವಯಸ್ಸಲ್ಲಿ ಮಗನ ಮನೆಯಲ್ಲಿ ನೆಲೆಸಲು ಬೆಂಗಳೂರಿಗೆ ಬರುತ್ತಾರಲ್ಲ ಅವರಲ್ಲಿ ಹೆಚ್ಚಿನ ಹೆಂಗಸರು ಮಾನಸಿಕವಾಗಿ ತುಂಬಾ ಬಳಲುತ್ತಿರುತ್ತಾರೆ. ಜೊತೆಗೆ ಹಳ್ಳಿಯಲ್ಲಿ ಅವರು ಮಾಡುತಿದ್ದ ಅರ್ಧದಷ್ಟು ಕೆಲಸವನ್ನು ಮಾಡಲು ಅವರಿಂದ ಇಲ್ಲಿ ಸಾದ್ಯವಾಗುತ್ತಿಲ್ಲ. ಯಾವಾಗಲೂ ಒಂದು ರೀತಿಯ ನಾಸ್ಟಾಲ್ಜಿಯಾದಲ್ಲಿರುತ್ತಾರೆ’.

ಯಾಕೆ ಹೀಗಾಗುತ್ತದೆ ಎಂದೆ. ನಿರ್ಧಿಷ್ಟವಾಗಿ ಇದೇ ಕಾರಣ ಎಂದು ಹೇಳುವಂತಿಲ್ಲ ಹಲವು ಹತ್ತು ಕಾರಣಗಳಿವೆ ಆದರೆ ಮುಖ್ಯವಾಗಿ ತಾವು ಬದುಕಿ ಬಾಳಿದ ಊರನ್ನು ಬಿಟ್ಟುಬರುವುದು ಎಷ್ಟೆ ಮಗ\ಮಗಳು ಮೊಮ್ಮಕ್ಕಳ ಹಂಬಲವಿದ್ದರೂ ತುಂಬಾ ಮಾನಸಿಕವಾಗಿ ಹೈರಾಣ ಮಾಡುವಂತದ್ದು, ಹಳ್ಳಿಯಲ್ಲಿ ಸಂಬಂದಿಕರು, ನೆರೆಹೊರೆ, ಅಷ್ಟೇ ಅಲ್ಲದೆ ಮನೆಯ ಆಳುಕಾಳುಗಳೊಂದಿಗೂ ಅಧಿಕಾರಯುತವಾಗಿ ಒಳಗಿನಿಂದ ಸಂಬಂದ ಕಟ್ಟಿಕೊಂಡಿರುತ್ತಾರೆ. ಅದು ಇಲ್ಲಿ ಹೇಗೆ ಸಾಧ್ಯ. ಮನೆ ಕೆಲಸದವಳು ಸಹ ಇಲ್ಲಿ ಪ್ರೊಫೆಶನಲ್ ಆಗಿ ವರ್ತಿಸುತ್ತಿರುತ್ತಾಳೆ. ಇರೋದನ್ನ ಕಾಪಾಡಿಕೊಂಡು ಹೋಗಬಹುದಷ್ಟೆ, ಹೊಸ ಸ್ನೇಹ ಸಂಬಂಧ ಬೆಳೆಸುವ ವಯಸ್ಸು ಇದಲ್ಲ. ಜೊತೆಗೆ ಮಗ, ಸೊಸೆ, ಮೊಮ್ಮಕ್ಕಳ ಲೋಕ ಬೇರೆ ಇರುತ್ತದೆ ಆ ಲೋಕವನ್ನು ಪ್ರವೇಶಿಸಲು ಇವರಿಗೆ ಸಾಧ್ಯವಿಲ್ಲ ಹೀಗಾದಾಗ ಒಂಟಿತನಕ್ಕೆ ಬೀಳುತ್ತಾರೆ, ತಮ್ಮ ಮನಸಿಗೂ ಕಿರಿಕಿರಿ ಮಾಡಿಕೊಂಡು ಉಳಿದವರಿಗೂ ಕಿರಿಕಿರಿ ಅನ್ನಿಸತೊಡಗುತ್ತಾರೆ.

ಇದಕ್ಕೆ ಪರಿಹಾರ ಏನು ಎಂದೆ.

ಅದನ್ನು ಅಮ್ಮಂದಿರೇ ಹುಡುಕಿಕೊಳ್ತಾರೆ ಜಗತ್ತಿನ ಬೆಳವಣಿಗೆಗಳೊಂದಿಗೆ ಮೌನವಾಗಿಯೇ ಅನುಸಂಧಾನ ನಡೆಸುತ್ತಾ ಅದರಲ್ಲಿ ಯಶಸ್ವಿಯು ಆಗುತ್ತಾ ಬಂದಿದ್ದಾರಲ್ಲವೇ ಅಮ್ಮಂದಿರು. ಮಕ್ಕಳ ಟ್ರ್ಯಾಕ್ಗೆ ತಾವೇ ಹೋಗುತ್ತಾ ಆ ಮೂಲಕ ಮಕ್ಕಳನ್ನು ತಮ್ಮ ಟ್ರ್ಯಾಕ್ಗೆ ಎಳೆದಿಟ್ಟು ಕೊಂಡು ಪೊರೆಯುತ್ತಾ ಬಂದಿದ್ದಾರೆ. ಅಮ್ಮಂದಿರಿಗೆ ಯಾವುದು ಅಸಾಧ್ಯ ಎಂದರು.

Previous Older Entries

%d bloggers like this: