
“ಡೋರ್ ನಂ 142”
ಬಹುರೂಪಿ
ಅವತ್ತು ಪೇಪರ್, ಪೇಪರ್ ಥರಾ ಇರ್ಲಿಲ್ಲ. ದಪ್ಪ ದಪ್ಪ ಅಕ್ಷರ ಇತ್ತು. ಯಾವತ್ತೂ ಆ ಥರಾ ದಪ್ಪ ಅಕ್ಷರದಲ್ಲಿ ಬಂದಿರೋ ಪೇಪರ್ ನೋಡೇ ಇರ್ಲಿಲ್ಲ. ನಾನು ಏಳನೇ ಕ್ಲಾಸ್. ಅಲ್ಲೀವರ್ಗೂ ಪೇಪರ್ ಅಂದ್ರೆ ನಮಗೆ ಒಂದಿಷ್ಟು ಎಲೆಕ್ಷನ್ನು, ಇಂದಿರಾಗಾಂಧಿ ಫೋಟೋ, ಕಾಂಗ್ರೆಸ್ ನ ಸಿಂಬಲ್ ಹಸು-ಕರು ಇಷ್ಟೇ ಗೊತ್ತಿದ್ದಿದ್ದು. ಹಸು-ಕರು ಕಾಂಗ್ರೆಸ್ ನಲ್ಲಿ ಏನೋ ಗಲಾಟೆ ಆಯ್ತಂತೆ. ಕೈ ಕಾಂಗ್ರೆಸ್ ಬಂತಂತೆ ಅನ್ನೋದು ಗೊತ್ತಾಗಿದ್ದು ಪೇಪರ್ ಆಟ ಆಡೋವಾಗ.
ಅಣ್ಣನಿಗೆ ನಾವು ದಿನಾ ಪೇಪರ್ ಓದ್ಬೇಕು. ಅದ್ರಲ್ಲಿರೋ ನ್ಯೂಸ್ ತಿಳ್ಕೋಬೇಕು ಅಂತ ಆಸೆ, ಅದಕ್ಕೆ ಕಾಲೇಜಿಗೆ ಹೋಗೋವಾಗ ಇವತ್ತು ಪೇಪರ್ ಓದಿ ೫ ಇಂಪಾರ್ಟೆಂಟ್ ನ್ಯೂಸ್ ಯಾವುದು ಅಂತ ಬರೆದಿಡು ಅನ್ನೋರು. ಯಾವನಪ್ಪ ಓದ್ತಾನೆ ಆಟ ಆಡೋದು ಬಿಟ್ಟು. ಸರೀ ಮನೇಲಿ ಇದ್ದ ನಾಲ್ಕೂ ಜನಾನೂ ಬರೀಬೇಕಿತ್ತು. ನಾವು ಪ್ಲಾನ್ ಮಾಡ್ದೊ, ದಿನಕ್ಕೆ ಒಬ್ರು ಪೇಪರ್ ಓದಿ ೫ ವಿಷಯ ಬರೆದಿಡೋದು, ಉಳಿದವರು ಅದನ್ನೇ ಮೇಲೆ ಕೆಳಗೆ ಮಾಡಿ ಬರೆದಿಡೋದು. ನಾಲ್ಕೂ ಜನರು ಬರೆದಿರೋದ್ರಲ್ಲೇ ೫ ವಿಷಯ ಮಾತ್ರ ಇರೋದು. ಆದ್ರೆ ಆರ್ಡರ್ ಮಾತ್ರ ಚೇಂಜ್. ಸಂಜೆ ಅಣ್ಣ ಬರ್ತಿದ್ದ ಹಾಗೆ ಎಲ್ಲಾರೂ ಬರೆದಿರೋದು ಓದೋರು. ನಾಲ್ಕೈದು ದಿನ ಆಯ್ತು, ಆರನೆ ದಿನ ಫಟಾರ್ ಅಂತ ಕುಂಡಿ ಮೇಲೆ ಬಿತ್ತು ಲಾತ. ಕುಂಯ್ಯೋ ಅಂತ ಅಳಕ್ಕೆ ಶುರು ಮಾಡಿದ್ವಿ. ಪೇಪರ್ ಓದಿ ನ್ಯೂಸ್ ಬರೀತಾ ಇದ್ದ ನಮ್ಮ ಕಳ್ಳಾಟ ಗೊತ್ತಾಗೋಗಿತ್ತು.
ನನಗೆ ಪೇಪರಲ್ಲಿ ಬರೋ ಚಿತ್ರ ಎಲ್ಲಾ ಕಟ್ ಮಾಡಿ ಅಂಟಿಸೋ ಹುಚ್ಚು ತಗುಲ್ಕೊಳ್ತು. ಅವಾಗ ಕಾಂಗ್ರೆಸ್ ಅಂದ್ರೆ ಹಸು-ಕರು ಗುರುತು.
ಒಂದಿನಾ ಇದ್ದಕ್ಕಿದ್ದ ಹಾಗೆ ಇಂದಿರಾಗಾಂಧಿ ಇನ್ಮೇಲೆ ನನ್ನ ಗುರುತು ಕೈ ಅಂದ್ಬಿಟ್ರು. ಅವತ್ತಿನವರೆಗೂ ಒಂದು ಚಿತ್ರ ಅಂಟಿಸ್ತಾ ಇದ್ದವನು ಈಗ ಇನ್ನೊಂದು ಪೇಜಲ್ಲಿ ಕೈ ಚಿತ್ರಾನೂ ಅಂಟಿಸ್ದೆ. ಅವಾಗ ಗೊತ್ತಾಗಿದ್ದು ಆ ಕಾಂಗ್ರೆಸ್ ಒಡೆದೋಗಿತ್ತು. ಇಂದ್ರಮ್ಮನ ಗ್ಯಾಂಗ್ ಆಚೆ ಬಂದಿತ್ತು. ದೇಶದ ರಾಜಕೀಯ ಹೊಸಾ ದಿಕ್ಕಿಗೆ ಹೊರಳಿಕೊಳ್ತಾ ಇತ್ತು. ಆದ್ರೆ ನಂಗೆ ಮಾತ್ರ ಇದು ಒಂದು ಪೇಜ್ ಅಲ್ಲ ಎರಡು ಪೇಜ್ ವಿಷಯ ಇನ್ಮೇಲೆ ಅಂತ ಮಾತ್ರ ಗೊತ್ತಾಯ್ತು.
ಹೀಗಿರೋವಾಗೇನೇ ಸಡನ್ನಾಗಿ ಪೇಪರ್ ದಪ್ಪ ಅಕ್ಷರದಲ್ಲಿ ಬಂತು. ಅವಾಗ ಯಾವ ಪೇಪರ್ ಇತ್ತು, ಪ್ರಜಾವಾಣಿ ಮಾತ್ರ. ಕಾಂಡೋಂ ಅಂದ್ರೆ ನಿರೋಧ್, ಬ್ರೆಡ್ ಅಂದ್ರೆ ಮಾರ್ಡ್ರನ್ ಬೆಡ್, ಬೆಂಕಿಪೊಟ್ಟಣ ಅಂದ್ರೆ ಚೀತಾಫೈಟ್, ಬಿಸ್ಕತ್ ಅಂದ್ರೆ ಕ್ವಾಲಿಟೀಸ್, ಪೇಪರ್ ಅಂದ್ರೆ ಪ್ರಜಾವಾಣಿ ಅಷ್ಟೆ.
ಪೇಪರ್ ನೋಡಿ ಏನಪ್ಪಾ ಅಂದೆ. ಎಮರ್ಜೆನ್ಸಿ ಬಂದಿದೆ ಅಂದ್ರು ಏನಂಗಂದ್ರೆ ಅಂತಾ ಪ್ರಶ್ನೆ ಹಾಕ್ದೆ. ಯಾರಿಗೊತ್ತಿತ್ತು, ನಮ್ಮಪ್ಪನಾಣೆಗೂ ನಮ್ಮಪ್ಪನಿಗೂ ಗೊತ್ತಿರಲಿಲ್ಲ. ಎಮರ್ಜೆನ್ಸಿ ಅಂದ್ರೆ ಇಂಡಿಯಾ-ಪಾಕಿಸ್ತಾನ ವಾರ್ ಅಂತ ಅಷ್ಟೆ ಗೊತ್ತಿದ್ದದ್ದು. ರಾಗಿ, ಬೇಳೆ ಸಿಗೋದು ಕಷ್ಟ, ಸೀಮೆ ಎಣ್ಣೆ ಮೊದಲೇ ಸ್ಟಾಕ್ ಮಾಡ್ಕೊಬೇಕು ಅಂತ ಅಷ್ಟೆ ಗೊತ್ತಿದ್ದದ್ದು. ಆಗ ಪಾಕಿಸ್ತಾನ ವಾರ್ ಇಲ್ಲ ಚೈನಾ ಗಲಾಟೆ ಇಲ್ಲ ಆದ್ರೂ ಎಮರ್ಜೆನ್ಸಿ. ದೇಶದೊಳಗೆ ಯುದ್ಧ ಅಂತೆ ಅಂತ ನಮ್ಮಪ್ಪ ಹಂಗೂ ಹಿಂಗೂ ಒಂದಷ್ಟು ಜ್ಞಾನ ಸಂಪಾದಿಸ್ಕೊಂಡು ಸಾಯಂಕಾಲ ಹೇಳಿದ್ರು. ಸರಿ ಬಿಡು ಅತ್ಲಾಗೆ ಅಂತ ನಾವೂ ಸುಮ್ಮನಾಗಿಬಿಟ್ವಿ. ಆಮೇಲ್ಯಾಕೋ ಪೇಪರ್ ಸಪ್ಪೆ ಆಗೋಯ್ತು. ನಮ್ದೂ ಎಲ್ಲ ವಿಷಯ ತುಂಬಿಕೊಳ್ಳೋ ಅಷ್ಟು ದೊಡ್ಡ ತಲೇನೂ ಅಲ್ಲ, ಸುಮ್ಮನಾಗಿಬಿಟ್ವಿ.
ಆಮೇಲೆ ಹೈಸ್ಕೂಲು ಸೇರಿದೆ. ಎರಡು ಬಸ್ ಬದಲಾಯಿಸಿ ದೂರದ ಸ್ಕೂಲ್ ಸೇರ್ಕೋಬೇಕಾಗಿತ್ತು. ಒಂದಿನಾ ಬಸ್ ಮೆಜೆಸ್ಟಿಕ್ ದಾಟಿ, ಕಾರ್ಪೊರೇಷನ್ ಸರ್ಕಲ್ ಹತ್ರ ಹೋಗ್ತಾ ಇತ್ತು, ಅವಾಗ ಕಣ್ಣಿಗೆ ಬಿತ್ತು ಗೋಡೆ ಮೇಲೆ ಒಂಥರಾ ವಿಚಿತ್ರ ಪೋಸ್ಟರ್. ಎಮರ್ಜೆನ್ಸಿ ವಿರುದ್ಧ ಸ್ಲೋಗನ್. ಇಂದ್ರಾಗಾಂಧಿಗೆ ಧಿಕ್ಕಾರ.
ಅಯ್ಯೋ ಪಾಪ ಅಂದ್ಕೊಂಡೆ. ಯಾಕಂದ್ರೆ ಇಂದ್ರಾಗಾಂಧಿ ಅಂದ್ರೆ ನಮ್ಗೆ “ನಮ್ಮನೆಯೋಳೆ” ಅನ್ನಿಸ್ಬಿಟ್ಟಿತ್ತು. ಯಾಕಂದ್ರೆ ಒಂದಿನಾ ಇಂದ್ರಾಗಾಂಧಿ ಬೆಂಗ್ಳೂರಿಗೆ ಬಂದಿದ್ರಾ, ನಮ್ಮನೆ ಹತ್ರಾನೇ ಹೋಗ್ಬೇಕಿತ್ತು. ನಮ್ಮನೆಯೋರು, ಪಕ್ಕದ ಮನೆಯೋರು, ಎದುರುಗಡೆ ಮನೆಯೋರು, ಹಿಂದಿನ ಬೀದಿಯೋರು, ಸರ್ಕಲ್ ಹತ್ರ ಇದ್ದೋರು, ಅಂಗಡಿ ಇಟ್ಕೊಂಡಿದ್ದೋರು ಅಂತಾ ಊರಿಗೆ ಊರೇ ವದ್ಕೊಂಡು ಬಂದ್ಬಿಟ್ಟಿದೆ ಅನ್ನೋ ಹಾಗೆ ಎಲ್ರೂ ಇಂದ್ರಾಗಾಂಧೀನ ನೋಡೋಕೆ ಬಂದ್ಬಿಟ್ಟಿದ್ರು. ಸುಂಯ್ ಅಂತ ಬಂತು ನೋಡಿ, ಒಂದು ಜೀಪು, ಎರಡು ಜೀಪು ಮೂರು ಜೀಪು, ಲೆಕ್ಕ ಹಾಕ್ತಾನೇ ಇದ್ವಿ ಒಂದು ಕಾರು ಬಂದು ಚಕ್ಕಂತ ನಿಂತ್ಕೊಳ್ತು, ಬಾಗಿಲು ಓಪನ್ ಆಯ್ತು. ಯಾರಪ್ಪ ಅಂತ ನೋಡುದ್ರೆ ಅದೇ ಕಪ್ಪು ಕನ್ನಡಕ, ತಲೆ ಮೇಲೆ ಸೆರಗು ಆಮೇಲೆ… ಆಮೇಲೆ.. ಹಾಂ ರಾಜ್ ಕುಮಾರ್ ಮೂಗು ಅರೇ ಇಂದ್ರಾಗಾಂಧಿನೇ ಇಳಿದ್ರು. ಜನ ರೋಡ್ ಸೈಡ್ ನಲ್ಲಿ ಇದ್ರಲ್ಲಾ ಅಲ್ಲಿಗೇ ಬಂದ್ರು ಎಷ್ಟೊಂದು ಜನ ಹಾರ ಹಾಕಿದ್ರು. ಹಾರಾ ಹಾಕಿಸ್ಕೊಳ್ತಾನೆ ಇದ್ದಿದ್ದೇನು. ಹಾಕಿದ ಹಾರಾ ತೆಗೆದು ಜನರತ್ತ ಎಸೀತಾ ಇದ್ದಿದ್ದೇನು. ಅದನ್ನ ಹಿಡ್ಕೊಳ್ಳೋದಿಕ್ಕೆ ಪೈಪೋಟಿ ಏನು! ಸಖತ್ತಾಗಿತ್ತು.
ಇಂತಾ ಇಂದ್ರಾಗಾಂಧೀಗೆ ಬೈದವರಲ್ಲಾ ಅಂತ ಕ್ಲಾಸ್ ರೂಮ್ ನಲ್ಲಿ ಕೂತಾಗ್ಲೂ ಬೇಜಾರಾಗೋಗಿತ್ತು. ಸಾಯಂಕಾಲ ಮನೇಗೆ ಬಂದವ್ನೆ ಅಣ್ಣನ ಕೇಳ್ದೆ, ಇಲ್ಲಾ ಸಿಕ್ಕಾಪಟ್ಟೆ ಜನಾನ ಸಾಯಿಸ್ಬಿಟ್ಳಂತೆ ಅಂದ್ರು. ರೋಡ್ ಸೈಡ್ ಇಂದ್ರಾಗಾಂಧಿ, ಡೆಲ್ಲಿ ಇಂದ್ರಾಗಾಂಧೀನೇ ಬೇರೆ ಬೇರೆನಾ ಅನಿಸ್ತು. ಆಮೇಲೆ ಶುರುವಾಯ್ತು ನೋಡಿ, ನಾನು ನೋಟ್ ಬುಕ್ಕಲ್ಲಿ ಚಿತ್ರ ಅಂಟಿಸೋದು ಬಿಟ್ಟಿರ್ಲಿಲ್ವಲ್ಲಾ. ಈಗ ನೋಟ್ ಬುಕ್ ಮೇಲೆ ನೋಟ್ ಬುಕ್ ಬೇಕಾಯ್ತು. ಜೆ.ಪಿ ಅಂತೆ. ಮೊರಾರ್ಜಿ ಅಂತೆ, ಜಾರ್ಜ್ ಫರ್ನಾಂಡಿಸ್ ಅಂತೆ, ಜಗಜೀವನರಾಂ ಅಂತೆ ಯಾರ್ಯಾರ್ದೋ. ಅದ್ರಲ್ಲಿ ಒಂದು ಮಾತ್ರ ಚೆನ್ನಾಗಿ ನೆನಪಿದೆ. ಕಾರ್ಟೂನು, ಜೆಪಿ ಹಾಸಿಗೇನಲ್ಲಿ ಮಲ್ಕೊಂಡಿದಾರೆ. ತಲೇಲಿ ನವಿಲುಗರಿ ಇದೆ, ಕಾಲತ್ರ ಮೊರಾರ್ಜಿ ದೇಸಾಯಿ, ತಲೆ ಹತ್ರ ಜಗಜೀವನರಾಂ ಇದಾರೆ. ಏನಪ್ಪ ಇದು ಅನಿಸ್ತು. ನನಗೆ ಕಾಡ್ತಾ ಇದ್ದದ್ದು ನವಿಲುಗರಿ. ಅಲ್ಲಾ ಕೃಷ್ಣನಿಗೆ ಮಾತ್ರ ನವಿಲುಗರಿ ಇರುತ್ತೆ, ಇದ್ಯಾಕಪ್ಪ ಇಲ್ಲಿ ಇನ್ಯಾರಿಗೋ ನವಿಲುಗರಿ ಹಾಕಿದಾರೆ ಅಂತ. ಆಮೇಲೆ ಯಥಪ್ರಕಾರ ಅಣ್ಣನ್ನ ಕೇಳ್ದೆ, ಅವ್ರು ಜಗಜೀವನರಾಂಗೆ ಮೋಸ ಆಗೋಯ್ತು ಪ್ರಧಾನಿ ಆಗಲ್ಲ ಅಂದ್ರು ಆಮೇಲೆ ಆ ಕಾರ್ಟೂನು ಹಿಡ್ಕಂಡು ಮಹಾಭಾರತದ ಕಥೆ ಹೇಳಿದ್ರು. ಕೃಷ್ಣ ಮಲಗಿರ್ತಾನೆ ಕಾಲತ್ರ ಧರ್ಮರಾಯ, ತಲೆ ಹತ್ರ ದುರ್ಯೋಧನ, ಕೃಷ್ಣ ನಿದ್ದೆಯಿಂದ ಎದ್ದಾಗ ಫಸ್ಟ್ ಯಾರ ಕಡೆ ನೋಡ್ತಾನೋ ಅವ್ರಿಗೇ ಕೃಷ್ಣನ ಸಪೋರ್ಟು ಅಂತ.
ಅಲ್ಲಾ ಯಾರಾದ್ರು ಕಣ್ಣನ್ನ ತಲೆ ಹಿಂದಕ್ಕೆ ಬಿಟ್ಕೊಂಡು ಎದ್ದೇಳ್ತಾರಾ. ಲಕ್ಕಿಡಿಪ್ಪು ಧರ್ಮರಾಯನಿಗೆ ಬಂತು, ಅಣ್ಣ ಇದನ್ನ ಹೇಳೋವಾಗ ಮದ್ವೆ ಮನೇಲಿ ಸರಿಯಾದ ಪ್ಲೇಸಲ್ಲಿ ಊಟಕ್ಕೆ ಕೂತ್ಕೋಬೇಕು ಅಂತ ತಮಾಷೆ ಮಾಡ್ತಾ ಇದ್ದದ್ದು ಜ್ಞಾಪಕಕ್ಕೆ ಬಂತು. ಭಟ್ಟರು ಎಲ್ಲಿಂದ ಬಡಿಸ್ಕೊಂಡು ಬರ್ತಾರೆ, ನೋಡ್ಕೊಂಡು ಫಸ್ಟ್ ಆ ಪ್ಲೇಸ್ ಹಿಡ್ಕೊಬೇಕು ಅಂತ. ಪಾಪ ದುರ್ಯೋಧನನಿಗೆ ಭಟ್ರು ಯಾವ ಕಡೆ ಇಂದ ಕೋಸಂಬ್ರಿ ಹಾಕ್ತಾ ಬರ್ತಾರೆ ಅಂತ ಗೊತ್ತಾಗ್ಲಿಲ್ಲ, ಕೆಲ್ಸ ಕೆಡ್ತು.
ನಮ್ಮನೇಲೂ ಒಂದು ಹಸುಕರು ಇತ್ತು. ಅದೇನೋ ಒಂಥರಾ ಅದ್ರ ಜೊತೆ ಇದ್ರೆ ಖುಷಿ ಆಗೋದು. ಅದ್ರಲ್ಲೂ “ಅಂಬಾ” ಅಂದ್ರೆ ನಾವೇ ಕೂಗ್ತಾ ಇದೀವೇನೋ ಅನಿಸೋದು. ಅದಕ್ಕೆ ಇರ್ಬೇಕು ಕಾಂಗ್ರೆಸ್ ಪಾರ್ಟಿಗೂ ಹಸು-ಕರು ಸಿಂಬಲ್ ಇತ್ತಲ್ಲ, ನಮ್ದೇ ಪಾರ್ಟಿ ಅನಿಸ್ಬಿಟ್ಟಿತು. ಇವಾಗ ಕೈ ಬಂತಲ್ಲ. ಒದ್ದಾಟ ಶುರು ಆಗೋಯ್ತು. ಇಂದ್ರಾಗಾಂಧೀ ಬೇಕು ಆದ್ರೆ ಹೆಂಗಪ್ಪ ಹಸು-ಕರು ಬಿಟ್ಟೋಗೋದು ಅಂತ.
ಒಂದಿನಾ ರೋಡಲ್ಲಿ ಆಟ ಆಡ್ತಾ ಇದ್ವಿ. ಕುಂಟೇಬಿಲ್ಲೆ ಆಟ. ಅವಾಗ “ಮತ ಕೊಡಿ, ಮತ ಕೊಡಿ, ಮತ ಕೊಡಿರಿ ಸೈಕಲ್ ಗುರುತು, ಸೈಕಲ್ ಗುರುತು, ಸೈಕಲ್ ಗುರುತಿಗೇ” ಅಂತಾ ಬಂದು ಸೈಕಲ್ ಗೆ ಮೈಕ್ ಕಟ್ಟಿಕೊಂಡು ಯಾರೋ ಹಾಡು ಹೇಳ್ಕೊಂಡು ಬರ್ತಿದ್ರು. ಎಂತಾ ಷಾಕ್ ಆಯ್ತು ಅಂತೀರಾ? “ಹಸು-ಕರು” ಇದೆ, ಈಗ “ಕೈ” ಇದೆ ಅಂತ ಗೊತ್ತಿತ್ತು. ಇದ್ಯಾವದಪ್ಪಾ ಮಧ್ಯದಲ್ಲಿ ಸೈಕಲ್ಲು ಅಂತ. ಮಹದೇವ ಬಣಕಾರ್ ಅಂತ ಒಬ್ರು ಇದ್ರು, ಅವ್ರು ಎಲೆಕ್ಷನ್ ಗೆ ನಿಂತ್ಕೊಂಡಿದ್ರು. ಸೈಕಲ್ ಗುರುತು ಸಿಕ್ಕಿತ್ತು. ಅವಾಗ್ಲೇ ನಮ್ಗೆ ಗೊತ್ತಾಗಿದ್ದು ಎಲೆಕ್ಷನ್ನು ಅಂದ್ರೆ ಬರೀ ಇಂದ್ರಾಗಾಂಧಿ ಅಲ್ಲ ಮಹದೇವ ಬಣಕಾರೂ ನಿಂತ್ಕೊಬೌದು ಅಂತ. ಯಾವ ಪಾರ್ಟಿ ಅಂದ್ರೆ ಪಾರ್ಟೀನೇ ಇಲ್ಲ. ಇದೇನಪ್ಪ ವಿಚಿತ್ರ ಅನಿಸ್ತು. ಫಸ್ಟ್ ಟೈಮು ನಮ್ಮ ಸಾಯಂಕಾಲದ ಕುಂಟೇಬಿಲ್ಲೆ ಆಟ ಸ್ಟಾಪ್ ಆಗೊಯ್ತು. ಅವತ್ತೆಲ್ಲಾ ಅದೇ ಯೋಚ್ನೆ, ಇದೆಂಗೆ? ಅಣ್ಣನ ಕೇಳೋಣ ಅಂದ್ರೆ ಊರಲ್ಲಿರಲಿಲ್ಲ ಸರೀ ರಾತ್ರಿ ಎಲ್ಲಾ ಯೋಚನೆ ಮಾಡಿ ಬೆಳಗ್ಗೆ ಎದವನೇ ಅಲ್ಲಿ ಇಲ್ಲಿ ಹುಡುಕಿ ಒಂದು ಸೈಕಲ್ ಚಿತ್ರ ಹುಡುಕಿದೆ. ನೋಟ್ ಬುಕ್ ತೆಗೆದೆ ಹೊಸಾಹಾಳೆ ಓಪನ್ ಮಾಡ್ದೆ, ಸೈಕಲ್ ಚಿತ್ರಾನೂ ಅಲ್ಲಿ ಅಂಟಿಸ್ದೆ. ಹಸುಕರು, ಕೈ, ಸೈಕಲ್ಲು ಎಲ್ಲಾ ಸೇರಿಸಿದ್ರೆ ಎಲೆಕ್ಷನ್ನು ಅನ್ನೋದಂತೂ ಅರ್ಥ ಆಯ್ತು.
ನಾನು ಬಸ್ಸಿನಲ್ಲಿ ಬರೋವಾಗ ಒಂದು ದೊಡ್ಡ ಮಿಲ್ ಸಿಗ್ತಿತ್ತು, ಉದ್ದ ಕಾಂಪೌಂಡು. ಅದಂತೂ ನನಗೆ ಎಲೆಕ್ಷನ್ ಪಾಠ ಮಾಡೋದು. ಆ ಗೋಡೆ ಮೇಲೆ ಒಂದಿನಾ ಗರೀಬಿ ಹಠಾವೋ ಅಂತ ಬಂತು. ಆಮೇಲೆ ಇನ್ನೊಂದು ಪಾರ್ಟಿಯವರು ಗರೀಬರನ್ನೇ ಹಠಾವೋ ಮಾಡ್ತಿದಾರೆ ಅಂತ ಬರೆದ್ರು.
ನನಗೆ ಈಗ್ಲೂ ತುಂಬಾ ಚೆನ್ನಾಗಿ ಜ್ಞಾಪ್ಕ ಇರೋದು ಟ್ವೆಂಟಿ ಪಾಯಿಂಟ್ ಪ್ರೋಗ್ರಾಂ. ಇಂದ್ರಾಗಾಂಧಿ ದೇಶದ ಉದ್ಧಾರ ಮಾಡೋಕೆ ಅಂತ ೨೦ ಅಂಶದ ಸೂತ್ರ ರಚಿಸಿದ್ರು. ಎಲ್ಲಾ ಗೋಡೆ ಮೇಲೆ ಅದೇ, ೨೦ ಪಾಯಿಂಟ್ ಪ್ರೋಗ್ರಾಂ ಬಗ್ಗೇನೇ ಒಂದಿನಾ ಯಾರೋ ಅದರ ಪಕ್ಕ “ಟಿಕ್-೨೦” ಅಂತ ಬರೆದ್ರು. ಈ “೨೦ ಪಾಯಿಂಟ್ ಸೇವಿಸಿರಿ, ಸತ್ತು ನರಕ ಸೇರಿರಿ” ಅಂತ ಬರೆದ್ರು. ಆಮೇಲೆ ಅದೇ ಕಾಂಪೌಂಡ್ ಮೇಲೆ “ಪ್ರಾಬ್ಲಂಸ್ ಆರ್ ಪ್ಲೆಂಟಿ, ಪಾಯಿಂಟ್ಸ್ ಆರ್ ಟ್ವೆಂಟಿ, ರಿಸಲ್ಟ್ಸ್ ಆರ್ ಎಂಪ್ಟಿ” ಅಂತ ಸ್ಲೋಗನ್ ಕಾಣಿಸ್ತು.
ಎಲೆಕ್ಷನ್ ಅನ್ನೋದು ಡೆಲ್ಲಿ ಸಮಾಚಾರ. ಡೆಲ್ಲಿನಲ್ಲಾಗುತ್ತೆ. ಡೆಲ್ಲಿ ಬೇಕು ಅಂತ ಆಗುತ್ತೆ ಅಂದ್ಕೊಂಡಿದ್ದೆ. ಆಮೇಲೆ ಗೊತ್ತಾಯ್ತು ಎಲೆಕ್ಷನ್ ಅನ್ನೋದು ಪೇಪರಲ್ಲೂ ಆಗುತ್ತೆ, ಕಾಂಪೌಂಡ್ ಗೋಡೆ ಮೇಲೂ ಆಗುತ್ತೆ. ಅಷ್ಟೇ ಅಲ್ಲ, ನನ್ನ ನೋಟ್ ಬುಕ್ ಒಳಗೂ ಆಗುತ್ತೆ ಅಂತ.
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು