ಹೆಸರು ಮಾತ್ರ ಅಪಾರ, ಆದರೆ ದಿನವೆಲ್ಲಾ ಈತನ ಮುಂದೆ ಕುಳಿತರೂ ಮಾತನಾಡುವುದು ಮೂರೇ ಪ್ಯಾರ- ಇದು ಅಪಾರ ಅವರನ್ನು ಬಲ್ಲ ಎಲ್ಲರ ಅನುಭವ. ‘ಮಾತು ಕಡಿಮೆ, ಬರೀ ದುಡಿಮೆ’ ಅಂತೇನಾದರೂ ಇವರು ನಿರ್ಧಾರ ಮಾಡಿದ್ದಾರೋ ನಮಗೆ ಗೊತ್ತಿಲ್ಲ. ಕನ್ನಡ ಪುಸ್ತಕ ಲೋಕಕ್ಕಂತೂ ನಿಜಕ್ಕೂ ‘ಅಪಾರ’ ಕೊಡುಗೆ ನೀಡಿದ್ದಾರೆ. ಅಪಾರ ಮಾಡುವ ಮುಖಪುಟವೂ ಚೆನ್ನ , ಒಳಪುಟಗಳ ವಿನ್ಯಾಸವೂ ಚೆನ್ನ. ಕನ್ನಡ ಪುಸ್ತಕಕ್ಕೆ ಇಂಗ್ಲಿಷ್ ಟಚ್ ನೀಡಿದ ಕೈಚಳಕ ಇವರದ್ದು.
ವಿಜಯ ಕರ್ನಾಟಕದಲ್ಲಿ ಇವ್ರು ‘ರೀ’ ಹೆಸರಲ್ಲಿ ‘ಕಾಮೆಂಟ್ ರೀ’ ಎನ್ನುವ ಕಾಲಂ ಬರೆಯುತ್ತಿದ್ದಾರೆ. ಇದು ಜಸ್ಟ್ ನಮ್ಮ ಗುಮಾನೀರೀ. ದೈನಿಕ ಸುದ್ದಿಗೆ ಕಾಮೆಂಟ್ ವಗ್ಗರಣೆ ಇವರ ವಿಶೇಷತೆ. ಇಲ್ಲಿದೆ ಸ್ಯಾಂಪಲ್. ಪೂರಾ ಬೇಕು ಅನ್ನೋದಾದರೆ ವಿಸಿಟ್ ಮಾಡಿ- ಅಪಾರ

ವಿವಾಹವಾಗಲು ವರನಿಗೆ ಹದಿನೆಂಟಾದರೆ ಸಾಕು ಎಂದು ಕಾನೂನು ಆಯೋಗ ಹೇಳಿದೆ. ವೋಟು ಹಾಕಬಲ್ಲ ಹುಡುಗ ಕಾಟು ಹತ್ತಲಾರನೆ ಎಂಬುದು ಆಯೋಗದ ಲಾಜಿಕ್ಕು. ಹಾಗಾಗಿ ಇನ್ನು ಮುಂದೆ ಮೀಸೆ ಮೂಡಿರದ ಪೋರರೆಲ್ಲಾ ಬಾಸಿಂಗ ಕಟ್ಟಿಕೊಂಡು ಹಸೆಮಣೆ ಮೇಲೆ ಕೂತುಬಿಡಬಹುದು. ಮಾಂಗಲ್ಯಂ ತಂತು ನಾನೇನಾ ಎಂದು ಮಂತ್ರ ಹೇಳಿಕೊಡುವ ಮೊದಲು ಪುರೋಹಿತರು ‘ಮದುವೆ ಗಂಡು ನೀನೇನಾ’ ಅಂತಲೂ ಕೇಳಿ ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಠಾಣೆಯಲ್ಲಿ ಅನೇಕ ಮದುವೆಗಳಿಗೆ ಪೌರೋಹಿತ್ಯ ನೀಡಿದ ಹಿರಿಮೆಯ ಸುಭಾಷ್ ಭರಣಿಯಂಥ ಪೊಲೀಸರಿಗೆ ಇನ್ನು ಕರ್ತವ್ಯದ ಹೊರೆ ಹೆಚ್ಚಲಿದೆ. ಅಂಥವರ ಸಾಧನೆ ಮೆಚ್ಚಿ ‘ಶಭಾಷ್’ ಭರಣಿ ಅಂದರೆ ಅದರಲ್ಲೇನು ತಪ್ಪು?!
***
ಚಳಿಗಾಲ ನಿರೀಕ್ಷೆಗಿಂತ ಬೇಗನೇ ಜಾಗ ಖಾಲಿ ಮಾಡಿದೆ. ಶಿವರಾತ್ರಿ ಬಂದ ನಂತರ ಶಿವಶಿವಾ ಅಂತ ಓಡಬೇಕಾದ ಚಳಿಗಾಲ ಒಂದು ತಿಂಗಳ ಮೊದಲೇ ನಾಪತ್ತೆ. ಕಾಶ್ಮೀರದಲ್ಲೇನೋ ೧೦ ಅಡಿ ಎತ್ತರದವರೆಗೆ ಹಿಮ ಆವರಿಸಿ ಜನರಿಗೆ ‘ಹಿಮಯಾತನೆ’ ಆಗುತ್ತಿದ್ದರೂ ಬೆಂಗಳೂರಿನಲ್ಲಿ ಮಾತ್ರ ಆಗಲೇ ಸೆಖೆಯ ಶೆಖೆ ಆರಂಭವಾಗಿದೆ. ಪ್ರತಿ ವರ್ಷ ಬೇಸಗೆ ಆರಂಭವನ್ನು ನಾವು ಸ್ವತಃ(ಮೈಯಾರ ಅನ್ನಬಹುದೆ?!)ಅನುಭವಿಸಿದರೂ, ಅದು ಮನದಟ್ಟಾಗುವುದು ಪತ್ರಿಕೆಗಳಲ್ಲಿ ಚಂದದ ತೆಳು ಹಸಿರು ಬಣ್ಣದ ಕಲ್ಲಂಗಡಿ ಹಣ್ಣಿನ ಸೌಂದರ್ಯ ರಾಶಿಯ ನಾಲ್ಕು ಕಾಲಂ ಫೋಟೋವನ್ನು ನೋಡಿದ ಮೇಲೇ ಅಲ್ಲವೆ? ಅದನ್ನೇ ಸೋಸಿಲಿಯ ಪ್ರಾಸದ ಮಾತಲ್ಲಿ ಹೇಳುವುದಾದರೆ ಹೀಗೆ:
ವಸಂತ ಋತುವಿನ ಸ್ವಾಗತಕೆ ಕೋಗಿಲೆಯ ಹಾಡು
ಬೇಸಗೆ ಆಗಮನ ಸಾರಲು ಕಲ್ಲಂಗಡಿಯ ಲೋಡು !
ಈ ಬೇಸಗೆ ನಿಮ್ಮನ್ನು ತಣ್ಣಗಿಟ್ಟಿರಲಿ.
***
ಕಳೆದ ವಾರವಿಡೀ ಪತ್ರಿಕೆಗಳಲ್ಲಿ ಪದೇಪದೇ ಎದ್ದು ಕಂಡದ್ದು ಎರಡು ಸುದ್ದಿಗಳು. ಒಂದು ಸ್ಪೀಡ್ ಗವರ್ನರ್ , ಮತ್ತೊಂದು ಗವರ್ನರ್ ಸ್ಪೀಡ್! ಒಂದಾದ ಮೇಲೊಂದರಂತೆ ಎರಡು ವಿವಾದಿತ ನಿರ್ಣಯಗಳನ್ನು ತೆಗೆದುಕೊಂಡ ರಾಜ್ಯಪಾಲ ಠಾಕೂರ್ ಮೂರು ದಿನ ಸತತವಾಗಿ ಮುಖಪುಟದಲ್ಲಿ ಮಿಂಚಿದರು. ರಾಷ್ಟ್ರಪತಿ ಆಳ್ವಿಕೆ ಅಂದರೆ ರಾಜಕೀಯಕ್ಕೆ ರಂಗು ಇರದು ಎಂಬ ಕಲ್ಪನೆಗಳೆಲ್ಲಾ ಈಗ ಹಳೆಯವಾದವಲ್ಲವೆ?
***
ಹರ್ಭಜನ್ ಸಿಂಗ್ ವಿರುದ್ಧ ಜನಾಂಗೀಯ ನಿಂದನೆ ಆರೋಪ ಬಂತಲ್ಲ, ಆ ಶಾಕ್ ಅನ್ನು ತಡೆದುಕೊಳ್ಳಲು ಬೇಕಾದ ಮಾನಸಿಕ ಶಕ್ತಿಗಾಗಿ ನಮ್ಮ ಕ್ರಿಕೆಟ್ ಆಟಗಾರರು (ಹರಿ?)ಭಜನ್‌ಗಳನ್ನು ಕೇಳುತ್ತಿದ್ದಾರೆಂಬ ಸುದ್ದಿ ಬಂದಿದೆ. ಅದರಿಂದ ಪ್ರಯೋಜನವೂ ಆಗಿದೆಯಂತೆ. ವಯಸ್ಸಾಯ್ತು ಅಂತ ಕುಂಬ್ಳೆ, ಲಕ್ಷ್ಣಣ್ ದ್ರಾವಿಡ್, ಗಂಗೂಲಿಯರನ್ನು ಮನೆಗೆ ಕಳಿಸಿದರೆ , ಈ ಯುವ ಪಡೆ ಭಜನೆಗಿಳಿದಿರುವುದು ಒಂಥರಾ ಕಾಮಿಡಿಯಾಗಿದೆ ಅಲ್ಲವೆ?
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು