ಜೋಗಿ ಬರೆದಿದ್ದಾರೆ: ಮಾತಿನ ಹೆಣ ಬಿದ್ದ ಮನಸಿನಂಗಳದಲ್ಲಿ….

‘ಅವಳಿಂದ ನಾನೇನು ಬಯಸುತ್ತಿದ್ದೇನೆ ಅಂತ ಕೇಳಿಕೊಂಡರೆ ಏನೂ ಇಲ್ಲ. ಏನೇನೂ ಇಲ್ಲ. ನಮ್ಮಿಬ್ಬರ ಮಧ್ಯೆ ಸೆಕ್ಸ್ ಇಲ್ಲ. ಅವಳ ದೇಹವನ್ನು ನಾನು ಬಯಸುತ್ತಿಲ್ಲ. ಆದರೂ ಅವಳ ಜೊತೆ ಮಾತಾಡಬೇಕು ಅನ್ನಿಸುತ್ತೆ. ಅವಳಿಗೆ ವ್ಯಾಲೆಂಟೇನ್ ಡೇ ದಿನ ಒಂದು ಸಂದೇಶ ಕಳಿಸಬೇಕು ಅನ್ನಿಸುತ್ತೆ. ಅವಳ ಜೊತೆ ಹರಟುವ ಮನಸ್ಸಾಗುತ್ತೆ. ಏನಿದು ಹೇಳಿ?’

ಗೆಳೆಯ ಕೇಳಿದ. ಅದನ್ನು ಹಂಬಲ ಎಂದು ಕರೆಯುತ್ತಾರೆ ಎನ್ನಬೇಕಿನ್ನಿಸಿತು. ಅದು ಹಂಬಲವೇ ಹೌದಾ, ವ್ಯಾಮೋಹವೂ ಇರಬಹುದಾ, ಅಥವಾ ಒಂದು ಚಟವಾ, ವೈವಿಧ್ಯವನ್ನು ಬಯಸುವ ಮನಸ್ಸಿನ ತುಡಿತವಾ? ನೂರೆಂಟು ಪ್ರಶ್ನೆಗಳು. ಮಾತು ಯಾತನೆಯ ದಿಡ್ಡಿ ಬಾಗಿಲು.

ಅಂಥ ಹಂಬಲ ಅನೇಕರನ್ನು ಕಾಡುವುದನ್ನು ನೋಡಿದ್ದೇನೆ. ಅದು ಅಪಾಯಕಾರಿಯೇನೂ ಅಲ್ಲ. ಸುಮ್ಮನೆ ಒಂದು ಸೆಳೆತ. ಅದು ವಿವಾಹಬಾಹಿರ ಸಂಬಂಧವಾಗಿ ಅರಳುವುದೂ ಇಲ್ಲ. ಹಾಗಂತ ಒಣಗಿ ಹೋಗುವ ಸೆಲೆಯೂ ಅಲ್ಲ. ಹೆಂಡತಿಗೋ ಗಂಡನಿಗೂ ಸಿಟ್ಟು ಬರಿಸುವ, ದಾಂಪತ್ಯದಲ್ಲಿ ಸಣ್ಣದೊಂದು ವಿರಸ ಮೂಡುವಂತೆ ಮಾಡುವ ಅಂಥ ಸಂಬಂಧಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಸುಮ್ಮನೆ ಬಿಟ್ಟುಬಿಡಬೇಕು.

ಇನ್ನಷ್ಟು

ಜೋಗಿ ಬರೆಯುತ್ತಾರೆ: ಇಲ್ಲಿ ಸಲ್ಲದ ಮಾತು…

(ಮಮತಾ ಜಿ. ಸಾಗರ ಲೇಖನಗಳ ಸಂಗ್ರಹಕ್ಕೆ ಜೋಗಿ ಬರೆದ ನಾಲ್ಕು ಮಾತು)

ಮಮತಾ ಸಾಗರ

ಯಾವುದೋ ಅಜ್ಞಾತ ದೇಶಗಳಲ್ಲಿ, ಅಪರಿಚಿತ ಕವಿಗಳ ಜೊತೆ ಓಡಾಡಿಕೊಂಡಿದ್ದು ಒಂದಾನೊಂದು ದಿನ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ, ನಮಗೇ ಗೊತ್ತೇ ಇಲ್ಲದ ಅದ್ಯಾವುದೋ ಭಾಷೆಯ ಕವಿಯನ್ನು ಹಿಡಿದು ತಂದು ಮುಂದೆ ಕೂರಿಸಿ, ಸೂಫಿ ಹಾಡುಗಳನ್ನು ಕೇಳಿಸಿ, ಸುಮ್ಮನೆ ಊಟ ಹಾಕಿಸಿ, ಒಮ್ಮೆ ಎತ್ತರದ ಮನೆಯ ರಾಣಿಯಂತೆಯೂ ಮತ್ತೊಮ್ಮೆ ಬಾಲ್ಯಗೆಳೆತಿಯಂತೆಯೂ ಇನ್ನೊಮ್ಮೆ ಅದಮ್ಯ ಜೀವನೋತ್ಸಾಹದ ಬತ್ತದ ಸೆಲೆಯಂತೆಯೂ ಭಾಸವಾಗುತ್ತಾರೆ ಮಮತಾ. ಇವರ ಮನೆ ಏಳು ಸುತ್ತಿನ ಕೋಟೆಯಂತೆಯೂ ವೀರಪಾಂಡೆ ಕೋಟ್ಟೈಯಿಲೆ ಎಂಬ ಹಾಡಲ್ಲಿ ಕಾಣಿಸುವ ದುರ್ಗದಂತೆಯೂ ನನಗೆ ಕಂಡು ಬೆಕ್ಕಸ ಬೆರಗಾಗಿಸಿದೆ. ವಿಶ್ವವಿದ್ಯಾಲಯ, ಕವಿಗೋಷ್ಠಿ, ನಾಟಕ, ಸಿನಿಮಾ, ಶಂಕರಪುರದ ಇಡ್ಲಿ, ಗಂಭೀರ ಚಿಂತನೆ, ತುಂಟಮಾತು, ಶರಂಪರ ಜಗಳ, ಜಿದ್ದಾಜಿದ್ದಿ, ಯಾವತ್ತೂ ಒಂದೇಟಿಗೆ ಸಿಗದ ಮೊಬೈಲು, ಬಗಲಿಗೆ ಬಿದ್ದ ಎಚ್ ಎನ್ ಆರತಿ -ಇವೆಲ್ಲ ಸೇರಿದರೆ ಮಮತಾ ಸಾಗರ ಭರ್ತಿ ಮತ್ತು ಪೂರ್ತಿ.

ಅವರ ಬರಹ

ಈಕೆಯ ಕುರಿತು ಹೊಟ್ಟೆಕಿಚ್ಚು. ಈಕೆಯ ಸುತ್ತಾಟದಲ್ಲಿ ಹುಟ್ಟುವ ಕವಿತೆ, ಎದುರಾಗುವ ಅನುಭವ, ಸಿಕ್ಕುವ ಸ್ತ್ರೀಪುರುಷರು, ಮನೆಯಾಳು, ಲಕ್ಷ್ಮಿ, ಸೂಫಿ, ಈಸೋಪ- ಎಲ್ಲರೂ ಸೇರಿದ ಶ್ರೀಮಂತ ಚರಿತೆ ಇದು. ಇಲ್ಲಿ ಸಲ್ಲುವ ಮಾತು ಅಲ್ಲಿಯೂ ಸಲ್ಲುತ್ತದೆ ಎಂದು ನಂಬುವುದು ಕತೆಗಾರ. ಅದು ಎಲ್ಲೆಲ್ಲಿಯೂ ಸಲ್ಲುತ್ತದೆ ಎಂದು ಭ್ರಮಿಸುವುದು ವಿಮರ್ಶಕ. ಎಲ್ಲ ಕಾಲಕ್ಕೂ ಸಲ್ಲುತ್ತದೆ ಎನ್ನುವ ಭರವಸೆ ಕವಿಗೆ. ಅದು ನಿಜದ ನಂಬುಗೆ ಕೂಡ.

ಮಮತಾ ಬರೆದ ಗದ್ಯ ಒಂದೇ ಗುಟುಕಿಗೆ ಓದುತ್ತಾ ಹೋದಾಗ ಎದುರಾದದ್ದು ವೈವಿಧ್ಯಮಯ ಅನುಭವಗಳ ಸಂತೆ. ಮಮತಾ ಯಾಕೆ ಕಾದಂಬರಿ ಬರೆಯಬಾರದು ಎಂಬ ಪ್ರಶ್ನೆ. ಎಂದೂ ತೀರ ಭಾವುಕವಾಗಿ ಮಾತಾಡದ, ಆದರೆ ಆರ್ದ್ರತೆ ಕಳೆದುಕೊಳ್ಳದ ಮಮತಾ ಬರಹ, ಆಕೆಯ ಖಾಸಗಿ ಡೈರಿಯಂತಿದೆ. ಆಕೆ ಮನಸ್ಸಿನಲ್ಲೇ ಮಾಡಿಕೊಂಡ ಟಿಪ್ಪಣಿಯಂತಿದೆ. ಇವು ಮುಂದೊಂದು ದಿನ ಕತೆಯಾಗಿಯೋ ಕವಿತೆಯಾಗಿಯೋ ಆತ್ಮಕತೆಯಾಗಿ ಮರುರೂಪ ತಳೆಯುವುದರಲ್ಲಿ ನನಗಂತೂ ಅನುಮಾನವಿಲ್ಲ. ಮಮತಾಗೂ ಆ ಅನುಮಾನ ಬೇಕಿಲ್ಲ.

ಇನ್ನಷ್ಟು

ಜೋಗಿ ಬರೆಯುತ್ತಾರೆ: ವೆಲ್ಕಂ ಟು ಗಾಂಧಿನಗರ್

ಡಬ್ಬಿಂಗ್ ಎಂಬ ಸುನಾಮಿ

ಸಮ್ಮೇಳನಾಧ್ಯಕ್ಷರಾದ ಶ್ರೀ ವೆಂಕಟಸುಬ್ಬಯ್ಯನವರೇ, ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ಪದ್ಮಭೂಷಣ ಡಾ ಬಿ ಸರೋಜಾದೇವಿ ಅವರೇ, , ಜೆ.ಎಂ. ಪ್ರಹ್ಲಾದ್ ಮತ್ತು ಕೇಸರಿ ಹರವೂ ಅವರೇ, ಸಿನಿಮಾಸಕ್ತರೇ, ಚಿತ್ರರಂಗದ ಗಣ್ಯರೇ,

ನಾನಿವತ್ತು ಅತ್ಯಂತ ಅಪ್ರಸ್ತುತ ಎಂದು ಕಾಣಿಸುವಂಥ, ಆದರೆ ಅಪ್ರಸ್ತುತವಲ್ಲದ ಮತ್ತು ಅಪ್ರಸ್ತುತ ಆಗಬಾರದ ವಿಚಾರವೊಂದರ ಬಗ್ಗೆ ನನ್ನ ಪ್ರಬಂಧವನ್ನು ಮಂಡಿಸಲಿದ್ದೇನೆ. ಈ ಕಷ್ಟಕಾಲದಲ್ಲಿ ದುಷ್ಟಕಾಲದಲ್ಲಿ ಕೆಲವೊಂದು ಸಂಗತಿಗಳ ಕುರಿತು ಮಾತಾಡುವುದು ಕೂಡ ಅಪರಾಧ ಎಂಬಂತೆ ಭಾಸವಾಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ನಮ್ಮ ಚಿತ್ರರಂಗದ ಬದಲಾದ, ಇನ್ನೂ ಬದಲಾಗುತ್ತಿರುವ ನಿಲುವು.

ಇವತ್ತಿನ ಚಿತ್ರರಂಗ ಹೇಗಿದೆ ಅನ್ನುವುದನ್ನು ನೋಡೋಣ. ಸಾಹಿತ್ಯ ಸಮ್ಮೇಳನ ಆರಂಭವಾದ ದಿನ ಬಿಡುಗಡೆಯಾದ ಕನ್ನಡ ಚಿತ್ರದ ಹೆಸರು ‘ಕಳ್‌ಮಂಜ’. ನಾನು ತೀರಾ ವರ್ತಮಾನದಲ್ಲಿ ನಿಂತು ಮಾತಾಡುವುದಿದ್ದರೆ ‘ಕಳ್‌ಮಂಜ’ ಸಿನಿಮಾ ನೋಡಿಕೊಂಡು ಬಂದು, ಕನ್ನಡ ಚಲನಚಿತ್ರದ ಸಾಮಾಜಿಕ ಹೊಣೆಗಾರಿಕೆ ಏನು ಅನ್ನುವುದನ್ನು ವಿವರಿಸಬೇಕು. ಇದು ಪರಿಸ್ಥಿತಿ.

ಅದನ್ನು ಬಿಟ್ಟುಬಿಡೋಣ. ತಾನು ಹಾಕಿದ ಹಣವನ್ನು ಮರಳಿ ಪಡೆಯುವುದು, ಸಾಧ್ಯವಾದರೆ ಹಾಕಿದ ಹಣದ ಹತ್ತೋ ಇಪ್ಪತ್ತೋ ಪಟ್ಟು ಮೊತ್ತವನ್ನು ವಾಪಸ್ಸು ಪಡೆಯುವುದು ನಿರ್ಮಾಪಕನ ಮೊಟ್ಟ ಮೊದಲ ಜವಾಬ್ದಾರಿ. ಹೀಗಾಗಿ ಚಿತ್ರ ಆರಂಭವಾಗುವ ಮೊದಲೇ ತನ್ನ ಆರ್ಥಿಕ ಹೊಣೆಗಾರಿಕೆ ಏನು ಅನ್ನುವುದು ನಿರ್ಮಾಪಕನ ಪ್ರಕಾರ ನಿಗದಿ ಆಗಿರುತ್ತದೆ. ಇಷ್ಟಾಗುತ್ತಿದ್ದಂತೆ ಆತ ಆ ನಿಟ್ಟಿನಲ್ಲಿ ತನ್ನ ಕಾರ್ಯ ಆರಂಭಿಸುತ್ತಾನೆ. ಆಗ ಅವನು ಹುಡುಕುವುದು ಕತೆಗಾಗಿ.

ಇನ್ನಷ್ಟು

ಜೋಗಿ ಕೇಳುತ್ತಾರೆ: ಹೌದೂ… ನಾನೇಕೆ ಬರೆಯುತ್ತೇನೆ?


ಇಪ್ಪತ್ತನಾಲ್ಕು ವರ್ಷ ಹಿಂದಿನ ಮಾತು.

ನಾನು ಮತ್ತು ಗೆಳೆಯ ಗೋಪಾಲಕೃಷ್ಣ ಕುಂಟಿನಿ ಆಗಷ್ಟೇ ಪದವಿ ಮುಗಿಸಿದ್ದೆವು. ಅವನಿಗೆ ಹತ್ತಾರೆಕರೆ ತೋಟವಿತ್ತು. ಹೀಗಾಗಿಯೇ ಅವನ ಭವಿಷ್ಯ ಕೂಡ ನಿರ್ಧಾರವಾಗಿತ್ತು. ಅಷ್ಟು ಹೊತ್ತಿಗಾಗಲೇ ನಾನು ಮನೆ ಕಳೆದುಕೊಂಡು ಖುಷಿಯಾಗಿ ಕೂತಿದ್ದೆ. ನನ್ನ ಜೊತೆಗಿದ್ದದ್ದು ಗೆಳೆಯನ ಪ್ರೀತಿ ಮತ್ತು ಏನು ಬೇಕಾದರೂ ಮಾಡಬಲ್ಲೆ ಎಂಬ ಬಿಡುಬೀಸು ಮನಸ್ಸು.

ಆ ನಿರುಮ್ಮಳ ಸ್ಥಿತಿಯಲ್ಲಿದ್ದಾಗ ನೆನಪಾಗುತ್ತಿದ್ದದ್ದು ಯಶವಂತ ಚಿತ್ತಾಲರ ಕಾದಂಬರಿ ಶಿಕಾರಿ’. ತೇಜಸ್ವಿಯವರ ಕರ್ವಾಲೋ’ ಮತ್ತು ಚಿದಂಬರ ರಹಸ್ಯ’, ಲಂಕೇಶರ ಟೀಕೆಟಿಪ್ಪಣಿ. ಎಷ್ಟೋ ಸಲ ನಮ್ಮನ್ನು ಪೊರೆಯುತ್ತಿದ್ದದ್ದು ಲಂಕೇಶರ ಬರಹಗಳೇ. ನಡುನಡುವೆ ಕೇಳುತ್ತಿದ್ದ ಭಾವಗೀತೆಗಳು. ಆಗೊಮ್ಮೆ ಈಗೊಮ್ಮೆ ಅನಂತಮೂರ್ತಿ ಮಾಡುತ್ತಿದ್ದ ಭಾಷಣಗಳು. ತುಂಬ ಸತಾಯಿಸಿದೆ ಓದಿಸಿಕೊಂಡ ಶಾಂತಿನಾಥ ದೇಸಾಯಿ, ಬಿ . ಸಿ. ದೇಸಾಯಿ, ನೀರಭದ್ರ, ರಾಜಶೇಖರ ನೀರಮಾನ್ವಿ, ಕುಂವೀ, ಬೇಂದ್ರೆ, ಕುವೆಂಪು. ನಮ್ಮ ಕಾಲಕ್ಕಾಗಲೇ ಮಾಸ್ತಿ ಹಳಬರಾಗಿದ್ದರು. ಶಿವರಾಮಕಾರಂತರ ಕಾದಂಬರಿಗಳು ಬೋರು ಹೊಡೆಸುತ್ತಿದ್ದವು. ಅದೇ ಹೊತ್ತಿಗೆ ನಮ್ಮನ್ನು ಆಕರ್ಷಿಸಿದ್ದು ದೇವನೂರು ಮಹಾದೇವ ಮತ್ತು ಸಿದ್ಧಲಿಂಗಯ್ಯ.

ಈ ಲೇಖಕರ ಸಂಘದಲ್ಲಿ ಹೊತ್ತು ಹೋಗುತ್ತಿತ್ತು. ನೇತ್ರಾವತಿ ನದಿಯ ಸೇತುವೆಯ ಮೇಲೆ ಕೂತು ನಾನು, ಕುಂಟಿನಿ ಗೋಪಾಲಕೃಷ್ಣ, ಸುಬ್ರಾಯ, ಅಶ್ರಫ್, ಆಂಟನಿ, ಹಮೀದ್, ರಾಧಾಕೃಷ್ಣ, ಸುಬ್ರಹ್ಮಣ್ಯ, ಪುತ್ತೋಳಿ- ಹೀಗೊಂದಷ್ಟು ಮಂದಿ ಹರಟುತ್ತಿದ್ದೆವು. ನಾವು ಓದಿದ ಪುಸ್ತಕಗಳೋ ಲಂಕೇಶರು ಬರೆದ ಲೇಖನಗಳೋ ಆವತ್ತಿನ ಚರ್ಚೆಯ ವಸ್ತು. ಆ ಚರ್ಚೆ ಕೂಡ ವಿಚಿತ್ರ ರೂಪ ಪಡೆಯುತ್ತಿತ್ತು. ಒಮ್ಮೊಮ್ಮೆ ವಿಷ್ಣುವರ್ಧನ್ ಶ್ರೇಷ್ಠನೋ ರಾಜಕುಮಾರನೋ ಎಂಬ ಕುರಿತೂ ಮಾತಾಗುತ್ತಿತ್ತು. ನಾವೆಲ್ಲ ಏಕಪಕ್ಷೀಯವಾಗಿ ವಿಷ್ಣುವರ್ಧನ ಅನ್ನುತ್ತಿದ್ದೆವು. ಅದಕ್ಕೆ ಕಾರಣ ವಿಷ್ಣುವರ್ಧನ್ ಚಿತ್ರರಂಗದಲ್ಲಿ ತುಳಿತಕ್ಕೆ ಒಳಗಾದವರು ಎಂಬುದೂ ಒಂದು ಕಾರಣ.

ಇನ್ನಷ್ಟು

ಜೋಗಿ ಬರೆಯುತ್ತಾರೆ: ಕಾಡಿನ ಕತೆಗಳನ್ನು ಓದುವ ಮುಂಚೆ..

ಕಾಡಿನ ಕತೆಗಳನ್ನು ಓದುವ ಮುಂಚೆ ಒಂದಷ್ಟು ಕಾಡಲ್ಲೂ ಅಲೆದಾಡಿ

ತರಗಲೆ ಬಿದ್ದ ಕಾಡು. ಕಾಲಡಿಯಲ್ಲಿ ಮೆತ್ತೆ ಹಾಸಿದ ಹಾಗೆ ಒಣಗಿದ ಎಲೆಗಳು ರಾಶಿ ರಾಶಿ. ಅದರ ಮೇಲೆ ಹೆಜ್ಜೆಯಿಟ್ಟರೆ ಚರಬರ ಸದ್ದು. ಸದ್ದಾಗದಂತೆ ನಡೆಯಲು ಯತ್ನಿಸಿದರೆ ಕೆದಂಬಾಡಿ ಜತ್ತಪ್ಪ ರೈಗಳ ನೆನಪು. ಅವರು ಓಡಾಡಿದ ಜಾಗಗಳಿವು. ಸುಳ್ಯ ಪುತ್ತೂರು ಪಂಜ ಶಿರಾಡಿ ವೇಣೂರಿನ ಕಾಡುಗಳು. ಇಲ್ಲಿಗೆ ಯಾವ ಕೆನ್ನೆತ್ ಅಂಡರ್‌ಸನ್ನೂ ಬರಲಿಲ್ಲ. ಜಿಮ್ ಕಾರ್ಬೆಟ್ ಕಾಲಿಟ್ಟಿರಲಿಲ್ಲ. ಶ್ರೀಮಂತರಾದ ಬಂಟರು ಇಲ್ಲಿಯ ಕಾಡು ಪ್ರಾಣಿಗಳನ್ನು ನಿಯಂತ್ರಿಸಿದ್ದು. ಅವರು ಕೊಂದ ಹುಲಿಗಳ ಲೆಕ್ಕ ಯಮ ನೋಡಿ ನಕ್ಕ!

ಹುಲಿ ಕೊಂದವರ ನಾಡಿನಿಂದಲೆ ಬಂದವರು ಹುಲಿ ಸಂರಕ್ಷಣೆಯ ಉಲ್ಲಾಸ ಕಾರಂತರು. ಎರಡು ಪರಸ್ಪರ ವಿರುದ್ಧ ಕಾಲಘಟ್ಟದ ನಿಲುವನ್ನು ಗಮನಿಸಿ. ಒಂದು ಕಾಲದಲ್ಲಿ ಹುಲಿ ಕೊಲ್ಲುವುದು ಅನಿವಾರ್ಯವಾಗಿತ್ತು. ಈ ಉಳಿಸುವುದು ಅನಿವಾರ್ಯವಾಗಿದೆ. ಹಾಗಿದ್ದರೂ ಮಡಿಕೇರಿಯಲ್ಲೊಂದು ನರಭಕ್ಷಕ ಹುಲಿ ಸೇರಿಕೊಂಡಿದೆಯಂತೆ. ಅದನ್ನು ಕೊಲ್ಲುವುದಕ್ಕೂ ಅಪ್ಪಣೆ ಸಿಕ್ಕಿದೆಯಂತೆ.

ಕಾಡನ್ನು ಯಾರೂ ಗುಡಿಸುವುದಿಲ್ಲ. ಹೀಗಾಗಿ ಬಿದ್ದ ಎಲೆಯೆಲ್ಲ ಮಳೆಗಾಲದಲ್ಲಿ ಕೊಳೆತು ಮಣ್ಣಾಗಿ, ಮರಕ್ಕೆ ಗೊಬ್ಬರವಾಗಿ ಅಷ್ಟರ ಮಟ್ಟಿಗೆ ಪ್ರತಿಮರವೂ ಸ್ವಾವಲಂಬಿ. ಆ ಮಣ್ಣಲ್ಲಿ ಹುಟ್ಟಿ ಸಾಯುವ ಹೆಸರಿಲ್ಲದ ಗಿಡಗಳೂ ಗೊಬ್ಬರವಾಗಿಯೇ ಸಲ್ಲುತ್ತವೆ. ಆಷಾಢದ ಗಾಳಿ ಆ ತರಗೆಲೆಗಳನ್ನು ಹಾರಿಸಿಕೊಂಡು ಹೋಗಿ, ಮೊದಲ ಮಳೆಗೆ ಅವು ಕೊಚ್ಚಿಕೊಂಡು ಹೋಗಿ ಹತ್ತಿರದ ನದಿಯನ್ನು ಸೇರಿದರೂ ಹಾಗೆ ಹೋಗುವುದು ಸಾಸಿವೆ, ಉಳಿಯುವುದು ಸಾಸಿರ.

ಇನ್ನಷ್ಟು

ಜೋಗಿ ಬರೆಯುತ್ತಾರೆ: ಮೂಡಿಗೆರೆ ರಸ್ತೆಯಲ್ಲಿ ಒಂದು ಸಣ್ಣ ಎಡಮುರಿ ತಿರುವು

ಚಿತ್ರ: ಸಂಜು ಒಡೆಯರ್

ಇವತ್ತು ಮೂರು ಪುಸ್ತಕ ಕೊಂಡು ತಂದೆ. ಅದರಲ್ಲಿ ಒಂದು ಓದಿ ಮುಗಿಸಿದೆ. ಇನ್ನೆರಡು ನಾಳೆ ಓದಬೇಕು ಅಂದುಕೊಂಡಿದ್ದೇನೆ ಅಂತ ಹಿರಿಯ ಮಿತ್ರ ಬಿ. ಸುರೇಶ ಬರೆದುಕೊಳ್ಳುತ್ತಾರೆ. ಮೊನ್ನೆಮೊನ್ನೆಯಷ್ಟೇ ಅವರು ಪುಟ್ಟಕ್ಕನ ಹೈವೇ ಸಿನಿಮಾ ಮುಗಿಸಿ ಬಂದಿದ್ದಾರೆ. ಆ ಖುಷಿಗೋ ಅಷ್ಟೂ ದಿನ ತನುಮನಗಳನ್ನು ಆ ಚಿತ್ರದಲ್ಲಿ ತೊಡಗಿಸಿಕೊಂಡ ಹುರುಪಿಗೋ ಒಂದಷ್ಟು ಓದು, ಅಲ್ಲಿ ಇಲ್ಲಿ ಸುತ್ತಾಟ, ಪುಸ್ತಕ ಬಿಡುಗಡೆಯಲ್ಲಿ ಒಂದಷ್ಟು ಗೆಳೆಯರೊಂದಿಗೆ ಹರಟೆ. ಮತ್ತೆ ಹೊಸ ಚಿತ್ರಕತೆ ಮಾಡುತ್ತಾ, ಮತ್ತೊಂದು ನಾಟಕ ಬರೆಯುತ್ತಾ, ಸುರೇಂದ್ರನಾಥ್ ನಾಟಕದಲ್ಲಿ ನಟಿಸುತ್ತಾ ಸುರೇಶ್ ದಿನಗಳು ಕಳೆದುಹೋಗುತ್ತವೆ. ಬೇಂದ್ರೆ ಆಡಾಡ್ತಾ ಆಯುಷ್ಯ ಅಂದಿದ್ದು ಇದನ್ನೇ ಇರಬೇಕು.

ಇಂಥವರು ನನ್ನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುತ್ತಾರೆ. ಕಿರಿಯ ಮಿತ್ರರಾದ ಅಪಾರ ರಘು, ಚೇತನ್ ನಾಡಿಗೇರ್ ಮುಂತಾದವರು ಇವತ್ತು ಇಂಥದ್ದೊಂದು ಸಿನಿಮಾ ನೋಡಿದೆ ಅಂತ ಹೇಳುತ್ತಲೇ ಇರುತ್ತಾರೆ. ಗೆಳೆಯರಾದ ಮಂಜುನಾಥ ಸ್ವಾಮಿ, ವಸುಧೇಂದ್ರ ಮತ್ತು ನನ್ನ ಹಿರಿಯ ಮಿತ್ರರಾದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮುಂತಾದವರೆಲ್ಲ ತಿಂಗಳಿಗೆ ಒಂದಾದರೂ ಪ್ರವಾಸ ಹೋಗುತ್ತಾರೆ. ಫೋನ್ ಮಾಡಿದಾಗೆಲ್ಲ ಯಾವುದೋ ಬೆಟ್ಟದಲ್ಲಿದ್ದೇವೆಂದೋ ನದಿ ತೀರದಲ್ಲಿದ್ದೇವೆಂದೋ ಹೇಳುತ್ತಲೇ ಇರುತ್ತಾರೆ.

ಬಿಡುಗಡೆ ಎಷ್ಟು ಸರಳ. ಒಂದು ದಿನದ ಮಟ್ಟಿಗೆ ಫೋನ್ ಸ್ವಿಚಾಫ್ ಮಾಡಿ, ಯಾವ ಭಯವೂ ಇಲ್ಲದೇ ಒಂದು ಫಿಶಿಂಗ್ ಕ್ಯಾಂಪಿಗೋ ಮತ್ತೆಲ್ಲಿಗೋ ಹೋಗಿ ಬರುವುದು ಸಾಧ್ಯವಾದರೆ ಅಂದುಕೊಳ್ಳುತ್ತಲೇ ಕಾಲ ಕಳೆದುಹೋಗುತ್ತದೆ. ಮತ್ತದೇ ಬೆಳಗು, ಮತ್ತದೇ ಮಧ್ಯಾಹ್ನ, ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ.

ಮೊನ್ನೆ ಮೂಡಿಗೆರೆಯಲ್ಲಿರುವ ತೇಜಸ್ವಿಯವರ ಮನೆಗೆ ಹೋಗಿಬಂದಾಗ ಮನಸ್ಸು ನಿರಾಳವಾಯಿತು. ಪೂರ್ಣಚಂದ್ರ ತೇಜಸ್ವಿಯವರಿಲ್ಲದ ಮನೆ. ರಾಜೇಶ್ವರಿ ಅಮ್ಮ ಆಪ್ತವಾಗಿ ಮಾತಾಡಿಸಿದರು. ತೋಟ ತೋರಿಸಿದರು. ತೇಜಸ್ವಿಯವರು ಖುಷಿಗೆಂದು ನಿರ್ಮಿಸಿದ್ದ ಪುಟ್ಟ ಜಲಪಾತ ಈ ವರುಷದ ಮಳೆಗೆ ಹಾಳಾಗಿದ್ದನ್ನು ತೋರಿಸಿದರು. ಮನೆ ಮುಂದಿನ ಕೆರೆಯಲ್ಲಿ ಎಂದಿನಂತೆ ಹಂಸ, ಕೊಕ್ಕರೆಗಳು ಈಜುತ್ತಿದ್ದವು. ಮನೆಯೊಳಗೆ ತೇಜಸ್ವಿಯವರು ಬಳಸುತ್ತಿದ್ದ ಟೇಬಲ್ಲು ಬಟ್ಟೆ ಹೊದ್ದುಕೊಂಡು ಕೂತಿತ್ತು.

ಇನ್ನಷ್ಟು

ಶ್ರೀಲಂಕಾದಲ್ಲಿ ಜೋಗಿ

ಲಂಕಾದಹನದ ಪ್ರಸಂಗವು

ಮಾವಿನ ಕಾಯಿ ಮಾರುವ ಮುದುಕ, ಎಳನೀರು ಹೆಚ್ಚುತ್ತಾ ನಿಂತ ಹೆಣ್ಮಕ್ಕಳು, ಏರ್ ಪೋರ್ಟು, ಬಸ್ಸು ನಿಲ್ದಾಣ ಎಲ್ಲ ಕಡೆಯೂ ಅವರದ್ದೇ ಸಾಮ್ರಾಜ್ಯ. ಬರೀ ಹೆಣ್ಣುಮಕ್ಕಳು ಮತ್ತು ಮುದುಕರು ಮಾತ್ರ ಕೆಲಸ ಮಾಡುತ್ತಾರಾ ಇಲ್ಲಿ ಅನ್ನಿಸುವಂತ ದೇಶ. ನಮ್ಮ ಪ್ರಕಾರ ಇದಕ್ಕೊಂದು ಪೌರಾಣಿಕ ಹಿನ್ನೆಲೆ. ಆದರೆ ಇಲ್ಲಿನ ಮಂದಿಗೆ ಅದ್ಯಾವುದರ ಪರಿವೆಯೂ ಇಲ್ಲ. ಅವರ ಪಾಲಿಗ ಬುದ್ಧನೇ ಸರ್ವಸ್ವ. ಭಕ್ತಿಗೆ, ವ್ಯಾಪಾರಕ್ಕೆ, ಆರಾಧನೆಗೆ. ಪ್ರದರ್ಶನಕ್ಕೆ, ಮಾರಾಟಕ್ಕೆ, ವಿದೇಶಿ ವಿನಿಮಯ ಗಳಿಸುವುದಕ್ಕೆ ಬುದ್ಧನೇ ಸಿದ್ಧಪುರುಷ.

ಅದು ಇವತ್ತಿನ ಶ್ರೀಲಂಕಾ. ರಸ್ತೆಗಳು ಚೆನ್ನಾಗಿದ್ದರೂ ಜನ ಗೊಣಗಾಡುತ್ತಾರೆ. ಬಹಳ ವರ್ಷದ ನಂತರ ಅವರು ಮನೆಕಡೆ ತಿರುಗಿ ನೋಡಿದ್ದಾರೆ ಅನ್ನಿಸುತ್ತದೆ. ಇಷ್ಟು ವರ್ಷ ಅವರಿಗೆ ಬೇಲಿ ಭದ್ರಮಾಡುವ ಚಿಂತೆಯಿತ್ತು. ಈಗ ಬೇಲಿ ಬಲವಾಗಿದೆ. ಒಳಗಿನ ಸಮಸ್ಯೆಗಳನ್ನು ನಿಭಾಯಿಸುವುದು ಮುಖ್ಯವಾಗಿ ಕಾಣಿಸುತ್ತಿದೆ.

ಹುಡುಗರೆಲ್ಲ ದಣಿದಿದ್ದಾರೆ. ಯುದ್ಧ ಈಗಷ್ಟೇ ಮುಗಿದಿದೆ. ಹೀಗಾಗಿ ಅವರು ಆರಾಮಾಗಿ ತಿರುಗಾಡಿಕೊಂಡಿದ್ದಾರೆ. ತಮ್ಮ ತಮ್ಮ ಪ್ರೇಯಸಿಯರನ್ನು ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ. ಯುದ್ಧದ ಕರಾಳ ನೆರಳು ಮರೆಯಾಗಿಲ್ಲ. ಆ ದಿನಗಳ ನೆನಪು ಅವರನ್ನು ಇನ್ನೂ ಬಾಧಿಸುತ್ತಿದೆ. ಹೀಗಾಗಿ ಸಣ್ಣ ಭಯವೊಂದು ಎಲ್ಲರನ್ನೂ ಕಾಡುತ್ತಿದೆ ಎಂದು ಸಿನಿಮಾ ನಿರ್ದೇಶಕ ಪ್ರಸನ್ನ ವಿತನಗೆ ವಿವರಿಸುತ್ತಾರೆ. ಅವರ ಪ್ರಕಾರ ಶ್ರೀಲಂಕಾದ ಕುರಿತು ಬರೆಯುವವರೆಲ್ಲ ಹೊರಗೆ ನಿಂತು ದೇಶವನ್ನು ನೋಡುತ್ತಾರೆ. ಒಳಗಿದ್ದು ಅನುಭವಿಸಿ ಬರೆಯುವ ಲೇಖಕರ ಬರಹಗಳು ಇಂಗ್ಲಿಷಿಗೆ ಅನುವಾದವಾಗಿಲ್ಲ. ಶ್ರೀಲಂಕಾದ ಅನೇಕ ಬರಹಗಾರರು ಎಲ್ಲೋ ದೂರ ಕೂತು, ಹಳೆಯ ನೆನಪಿನಿಂದ ಬರೆಯುತ್ತಾರೆ ಅಷ್ಟೇ. ಅವರಿಗೂ ದೇಶದಲ್ಲಿ ಏನಾಗುತ್ತಿದೆ ಅನ್ನುವುದು ಗೊತ್ತಿಲ್ಲ.

ಇನ್ನಷ್ಟು

ಜೋಗಿ ಚಿತ್ರಗಳು

ಜೋಗಿಯ ‘ಮಾಯಾ ಕಿನ್ನರಿ’…..

ಜೋಗಿಯ ‘ಮಾಯಾ ಕಿನ್ನರಿ’, ‘ರೂಪ ರೇಖೆ‘ ಮತ್ತು ‘ನದಿಯ ನೆನಪಿನ ಹಂಗು‘  ಕೃತಿಗಳ ಬಿಡುಗಡೆ ಸಮಾರಂಭ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಜರುಗಿತ್ತು. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಮೂರೂ ಕೃತಿಗಳನ್ನು ರವಿ ಬೆಳಗೆರೆ, ಲಕ್ಷ್ಮೀಶ ತೋಳ್ಪಾಡಿ, ಉಪೇಂದ್ರ ಬಿಡುಗಡೆ ಮಾಡಿದರು.

ಸಮಾರಂಭದ ಇನ್ನಷ್ಟು ಫೋಟೋಗಳು ಡಿ ಸಿ ನಾಗೇಶ್ ಕ್ಯಾಮರ ಕಣ್ಣಲ್ಲಿ …..

ದೊಡ್ಡ ಸೈಜ್ ನಲ್ಲಿ ನೋಡಲು ಪ್ರತೀ ಫೋಟೋದ ಮೇಲೆ ಕ್ಲಿಕ್ಕಿಸಿ.

ಇನ್ನಷ್ಟು ಫೋಟೋಗಳು : ಓದು ಬಜಾರ್


ಜೋಗಿ: ಫಸ್ಟ್ ಜ್ಹಲಕ್

ಜೋಗಿಯ ಮೂರು ಕೃತಿಗಳ ಬಿಡುಗಡೆ ಇಂದು ಬೆಂಗಳೂರಿನಲ್ಲಿ ನೆರವೇರಿತು. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಮೂರೂ ಕೃತಿಗಳನ್ನು ರವಿ ಬೆಳಗೆರೆ, ಲಕ್ಷ್ಮೀಶ ತೋಳ್ಪಾಡಿ, ಉಪೇಂದ್ರ ಬಿಡುಗಡೆ ಮಾಡಿದರು.

ಆತ್ಮೀಯ ಸಮಾರಂಭದ ಮೊದಲ ಫೋಟೋಗಳನ್ನು ಇಲ್ಲಿ ನೀಡುತ್ತಿದ್ದೇವೆ. ದೊಡ್ಡ ಸೈಜ್ ನಲ್ಲಿ ನೋಡಲು ಪ್ರತೀ ಫೋಟೋದ ಮೇಲೆ ಕ್ಲಿಕ್ಕಿಸಿ. ಡಿ ಸಿ ನಾಗೇಶ್ ತೆಗೆದ ಫೋಟೋಗಳು ಇನ್ನಷ್ಟು ‘ಅವಧಿ’ಯಲ್ಲಿ ಕಾಣಿಸಿಕೊಳ್ಳಲಿದೆ. ಕಾದು ನೋಡಿ-

Previous Older Entries

%d bloggers like this: