ಓದುಗ ಎಂಬ ಪೋಲಿಸ್

ಗಾಳಿ ಬೆಳಕು

gali5_thumbnail-1ನಟರಾಜ್ ಹುಳಿಯಾರ್

ನೀವು ಇತ್ತೀಚಿಗೆ ಬರೆದ ಕವಿತೆಗಳಲ್ಲಿ ಹಳೆಯ ರೊಚ್ಚು ಇಲ್ಲವಲ್ಲ? ಎಂದರು ಒಬ್ಬರು. ನಿಮ್ಮ ಕವಿತೆಗಳ ಬೆಂಕಿಯ ಗುಣ, ಬಡಿದೆಬ್ಬಿಸುವ ಗುಣ ಎಲ್ಲಿ ಮರೆಯಾಯಿತು? ಎಂದರು ಇನ್ನೊಬ್ಬರು. ನೀವು ಎಂ.ಎಲ್.ಸಿ ಆದಮೇಲೆ ನಿಮ್ಮ ಕಾವ್ಯ ತನ್ನ ಶಕ್ತಿ ಕಳೆದುಕೊಂಡಿದೆ ಎಂದು ಮತ್ತೊಬ್ಬರು ಹೇಳಿಕೆ ಕೊಟ್ಟರು.

ಅವರೆಲ್ಲ ಕನ್ನಡ ಅಧ್ಯಾಪಕರು, ರಿಫ್ರೆಶರ್ ಕೋರ್ಸ್ ಒಂದರಲ್ಲಿ ‘ಕವಿಯೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲಿತಕವಿ ಸಿದ್ಧಲಿಂಗಯ್ಯನವರು ಓದಿದ್ದ ಈಚಿನ ಕವಿತೆಗಳಿಗೆ ಆ ಅಧ್ಯಾಪಕರು ಪ್ರತಿಕ್ರಿಯಿಸುತ್ತಿದ್ದರು. ಅವತ್ತು ಸಿದ್ಧಲಿಂಗಯ್ಯವನವರು ಓದಿದ ಕವಿತೆಗಳು ಕೊಂಚ ಮೆಲುದನಿಯ, ಕವಿ ತನ್ನೊಳಗೇ ಮಾತಾಡಿಕೊಳ್ಳುತ್ತಿದ್ದ ಕವಿತೆಗಳಾಗಿದ್ದವು. ಅವುಗಳ ಜೊತೆಗೇ ಅವರು ಒಂದರೆಡು ಹಳೆಯ ಕವಿತೆಗಳನ್ನೂ ಓದಿದ್ದರು. ಆದರೆ ಅವನ್ನು ಹಿಂದಿನ ಆವೇಶದಲ್ಲಿ ಓದದೆ ಕೊಂಚ ಮೆಲುದನಿಯಲ್ಲಿಯೇ ಓದಿದ್ದರು.

books3

ಓದುಗರ ಪ್ರತಿಕ್ರಿಯಗಳನ್ನು ಕೇಳಿಸಿಕೊಂಡ ಸಿದ್ಧಲಿಂಗಯ್ಯ, ಒಂದು ಕಾಲಕ್ಕೆ ಹಸಿವು ಹಾಗೂ ಬಡತನ ನನ್ನ ತೀವ್ರವಾದ ಅನುಭವವಾಗಿತ್ತು. ಆಗ ಆ ಅನುಭವಕ್ಕೆ ತಕ್ಕ ಕವಿತೆಗಳನ್ನು ಬರೆದೆ. ಆದರೆ ಹಸಿವೊಂದೇ ಮುಖ್ಯ ಅನುಭವವಾಗದೇ ಇರುವ ನನ್ನ ಇಂದಿನ ಸ್ಥಿತಿಯಲ್ಲಿ ಎದುರಾಗುತ್ತಿರುವ ಹೊಸ ಅನುಭವ, ಕಾಳಜಿಗಳನ್ನಾಧಾರಿಸಿದ ವಸ್ತುಗಳನ್ನು ಕುರಿತು ಇವತ್ತು ಬರೆಯುತ್ತಿದ್ದೇನೆ ಅನ್ನಿಸುತ್ತೆ ಎಂದರು.

ಆದರೆ ಕವಿಯ ಬದಲಾದ ಇಮೇಜನ್ನು ಒಪ್ಪಲು ಆ ಓದುಗರು ಸಿದ್ಧರಿರಲಿಲ್ಲ.. ಕವಿ ಅಥವಾ ಲೇಖಕನೊಬ್ಬ ಬೆಳದಂತೆ ಅವನ ಆಸಕ್ತಿಯ ಕೇಂದ್ರಗಳು ಹಾಗೂ ವಸ್ತುಗಳು ಕೂಡ ಬದಲಾಗುತ್ತಿರುತ್ತವೆ ಎಂಬ ಅಂಶವನ್ನು ಪರೀಕ್ಷಿಸಿ ನೋಡಲು ಆ ಸಾಹಿತ್ಯದ ಅಧ್ಯಾಪಕರುಗಳು ತಯಾರಿರಲಿಲ್ಲವೆಂಬುದು ಅಚ್ಚರಿಯುಂಟುಮಾಡಿತ್ತು. ಸೂಕ್ತ ವಿಮರ್ಶಾ ಪರಿಕರಗಳ ಮೂಲಕ ಸಿದ್ಧಲಿಂಗಯ್ಯನವರ ಅಂದಿನ ಕಾವ್ಯ ಮತ್ತು ಇಂದಿನ ಕಾವ್ಯವನ್ನು ಹೋಲಿಸಿ ಅವರ ಈಚಿನ ಕಾವ್ಯ ಸತ್ವ ಕಳೆದುಕೊಂಡಿದೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು. ‘ಹೊಲೆ ಮಾದಿಗರ ಹಾಡು’ ಬರೆದಾಗ ಅದನ್ನು ಓದಿ ಬೆಳೆದ ಅವರ ವಾರಗೆಯ ಅಧ್ಯಾಪಕರು ಅಲ್ಲಿಂದಾಚೆಗೆ ಬೆಳೆಯಲು ನಿರಾಕರಿಸಿದಂತಿತ್ತು.

ಇನ್ನಷ್ಟು

ಪರಿವರ್ತನೆಯ ಗಡಿಯಾರದ ಮುಳ್ಳೊಂದು ಮೇಲೆ ಕೆಳಗೆ

ಪ್ರೊ ಬಿ ಎ ವಿವೇಕ ರೈ ಅವರು ಹೀಗೆ ಹಾರೈಸಿದ್ದಾರೆ. ಅವರ ಹಾರೈಕೆ ‘ಅವಧಿ’ಯದ್ದೂ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು-

೨೦೧೧-ಪರಿವರ್ತನೆಯ ನಿಜದ ಹೊಸ ವರ್ಷವಾಗಲಿ.

‘ಪರಿವರ್ತನೆಯ ಗಡಿಯಾರದ ಮುಳ್ಳೊಂದು ಮೇಲೆ ಕೆಳಗೆ ,ಬೆಳಕಿನಲ್ಲಿ ಕತ್ತಲೆಯಲ್ಲಿ ,ನ್ಯಾಯ ಅನ್ಯಾಯಗಳ ನಡುವೆ ,ಒಳಿತು ಕೆಡುಕುಗಳ ಸುತ್ತ ತೊನೆದಾಡುತ್ತ ,ಕೊನೆಗೂ ಒಂದು ಕಡೆ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತದೆ.’

‘ಸಾಮಾಜಿಕ ಆಂದೋಲನ’ ಎಲ್ಲರ ಬದುಕಿಗೆ ಹೊಸ ವರ್ಷ ಆಗಬಲ್ಲುದು,ಹೊಸ ಹರ್ಷ ತರಬಲ್ಲುದು.ಎಲ್ಲರ ಬದುಕಿಗೆ ಅರ್ಥವನ್ನು ಸ್ವಾಭಿಮಾನವನ್ನು ,ಎಲ್ಲರಿಗೆ ಜವಾಬ್ದಾರಿಯನ್ನು ತರುವ ನಿಜವಾದ ‘ಹೊಸ ವರ್ಷ’ ಹಾರೈಕೆಯಾಗಿ ಮಾತ್ರ ಉಳಿಯದೆ ,ನಿಜದ ನೆಲೆಯಾಗಲಿ.ದಿನನಿತ್ಯದ ಕಾಮನ ಬಿಲ್ಲಾಗಲಿ

 

ಶಾಲೆ ಎಂಬುದು ಹೀಗೆ…

ಶಾಲೆಯ ಬಗ್ಗೆ ಒಂದು ಪುಸ್ತಕ ಕಂಡೆ. going to school in india ಎನ್ನುವ ಪುಸ್ತಕ. ಅದು ನನ್ನ ಮನದೊಳಗೆ ಎರಡು ವರ್ಷಕ್ಕಿಂತಲೂ ಹೆಚ್ಚು ಕಾಲ ಉಳಿದು ಹೋಯ್ತು. ಕಾಡುವ ಪುಸ್ತಕ.

ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಜವಾಬ್ದಾರಿ ನೀಡುವ ಪುಸ್ತಕ. ದೇಶದ ಮೂಲೆ ಮೂಲೆಯಲ್ಲಿ ಶಾಲೆ ಎಂಬ ಕನಸನ್ನು ಬೆನ್ನಟ್ಟಲು ಹೇಗೆಲ್ಲಾ ಶ್ರಮಿಸುತ್ತಾರೆ ಎಂದು ನಾನು ಕಂಡು ಕೊಂಡ ಪುಸ್ತಕ. ಈ ಪುಸ್ತಕ ಇಂದು ಕೇವಲ ಪುಸ್ತಕ ಅಲ್ಲ, ಒಂದು ಚಳವಳಿ. ಆ ಹಿನ್ನೆಲೆಯಲ್ಲಿ ಮೂಡಿಬಂದ ನೆನಪುಗಳು ಇಲ್ಲಿವೆ.

-ಜಿ ಎನ್ ಮೋಹನ್

ಪಶ್ಚಿಮಘಟ್ಟದ ಆ ದಟ್ಟ ಕಾನನವನ್ನು ಮಣಿಸಿಯೇಬಿಡಬೇಕು ಎಂಬ ಹಂಬಲ. ಸರಿ ಬೆಂಗಳೂರಿನಿಂದ ಒಂದು ದೊಡ್ಡ ದಂಡೇ  ಕುದುರೆಮುಖ ಪರ್ವತ ಏರಲು ಆರಂಭಿಸಿತು. ಬೆಳ್ತಂಗಡಿಯಿಂದ ಆರಂಭಿಸಿ, ಕುದುರೆಮುಖ ನೆತ್ತಿ ಮುಟ್ಟಿ, ಕಳಸದಲ್ಲಿ ಮತ್ತೆ ರಸ್ತೆಗೆ ಸೇರಬೇಕು. ಬೆನ್ನಿಗೆ ಒಂದಷ್ಟು ದಿನದ ಊಟ, ಬಗಲಲ್ಲಿ ನೀರಿನ ಬಾಟಲಿಗಳನ್ನು ಹೊತ್ತು, ಹೆಜ್ಜೆ ಹೆಜ್ಜೆಗೂ ಏದುಸಿರು ಬಿಡುತ್ತಾ ಬೆಟ್ಟ ಹತ್ತುತ್ತಾ ಇದ್ದೆವು. ಎದುರಿಗೆ ಒಬ್ಬ ಹುಡುಗ. ಖಾಕಿ ಚೆಡ್ಡಿ, ಬಿಳಿ ಅಂಗಿ ತೊಟ್ಟು, ಬೆನ್ನಿಗೆ ಬ್ಯಾಗ್ ಏರಿಸಿಕೊಂಡು ಜಿಂಕೆಯ ವೇಗದಲ್ಲಿ ಬೆಟ್ಟ ಹತ್ತುತ್ತಾ ನೋಡ ನೋಡುತ್ತಿದ್ದಂತೆಯೇ ಆ ಘಟ್ಟಗಳಲ್ಲಿ ಮರೆಯಾಗಿಯೇ ಹೋದ. ಆತ ನೆಲ್ಸನ್, ಕುದುರೆಮುಖದ ನೆತ್ತಿಯಲ್ಲಿರುವ ಸೈಮನ್ ಲೋಬೋ ಕುಟುಂಬದ ಆತ ಅಕ್ಷರಗಳನ್ನು ಎಟುಕಿಸಿಕೊಳ್ಳಬೇಕಾದರೆ ಪ್ರತಿ ದಿನಾ ಕುದುರೆಮುಖವನ್ನು  ಹತ್ತಿ ಇಳಿಯಬೇಕು.

ಮಂಗಳೂರಿನ ಬಂದರು ಪ್ರದೇಶದಲ್ಲಿ ನಿಂತಿದ್ದೆ. ‘ಫೋಂ, ಫೋಂ’ ಎನ್ನುವ ದೊಡ್ಡ ಸದ್ದು ಕೇಳಿಸಿತು. ಅದೂ ನದಿಯ ಮೇಲಿನಿಂದ. ಎದುರಿಗೆ ಕಣ್ಣು ಹಾಯಿಸಿದರೆ ಅರೇಬಿಯಾ ಸಮುದ್ರವೂ, ನೇತ್ರಾವತಿ ನದಿಯೂ ತೆಕ್ಕೆಗೆ ಬಿದ್ದಂತೆ ಕಾಣಿಸುತ್ತಿತ್ತು. ಅದರ ಮಧ್ಯೆ ಇರುವುದೇ ಬೆಂಗ್ರೆ. ಅಲ್ಲಿಂದ ಈ ದೋಣಿ ಹಾದು ಬರುತ್ತಿತ್ತು. ನಾನು ದೋಣಿ ನೋಡುತ್ತಾ ನಿಂತೆ. ಆಗ ‘ಹೋ’ ಎನ್ನುವ ಹರ್ಷದ ಕೇಕೆ ಕೇಳಿಬಂತು. ಒಂದೇ ನಿಮಿಷಕ್ಕೆ ದೋಣಿಯೂ ಹೊಯ್ದಾಡುವಂತೆ ಮಾಡಿ ನೂರಾರು ಮಕ್ಕಳು ಆಚೆಗೆ ಜಿಗಿದರು. ಇವರೆಲ್ಲಾ ಆ ದ್ವೀಪದಿಂದ ನಗರದ ಹತ್ತಾರು ಶಾಲೆಗಳನ್ನು ಮುಟ್ಟಬೇಕಾದವರು. ಅಕ್ಷರದ ಬೆಳಕು ಕಾಣಬೇಕಾದರೆ ಪ್ರತಿ ನಿತ್ಯ ಈ ದೋಣಿಯಾಟ ನಡೆಯಲೇಬೇಕು. ದೋಣಿ ಇಲ್ಲದಿದ್ದರೆ ಮಂಗಳೂರು ನಗರಕ್ಕೆ ‘ನೀವು ಯಾರೋ, ಇನ್ನು ನಾವು ಯಾರೋ’ ಎನ್ನುವ ಮರೆವು.

ಇನ್ನು ಮೆಘಾನೆ. ಶಿವಮೊಗ್ಗದ ಎತ್ತರದ ಗುಡ್ಡದಲ್ಲಿ ಅರಳಿಕೊಂಡಿರುವ ಹಳ್ಳಿ. ಅಲ್ಲಿಗೆ ಹುಚ್ಚಪ್ಪ ಮಾಸ್ತರ್ ಅವರ ಜೊತೆ ಕಾಲಿಟ್ಟಿದ್ದೆ. ಇನ್ನೂ ಸೈಕಲ್ ನೋಡದ ಹತ್ತಾರು ಜನ ಅಲ್ಲಿದ್ದಾರೆ. ಪಕ್ಕಾ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕ್ಯಾನ್ವಾಸ್ ಇರುವ ಹಳ್ಳಿ . ಅಲ್ಲಿಗೆ ಮುಟ್ಟಲು ನಾವು ಮೇಲೆ ಏರುತ್ತಿರುವಾಗ ಹುಡುಗ ಹುಡುಗಿಯರ ದೊಡ್ಡ ಗುಂಪು ಕೆಳಕ್ಕೆ ಇಳಿಯುತ್ತಿತ್ತು. ‘ಎಲ್ಲಿಗ್ರೋ’ ಅಂದ್ರು ಮಾಸ್ತರರು. ‘ಶಾಲೆಗೆ’ ಅನ್ನುತ್ತಾ ಮಕ್ಕಳು ಸರ,ಸರ ಹಾದು ಹೋದರು. ಅಕ್ಷರದ ಬೆಳಕು ಕಾಣಬೇಕಾದರೆ ಬೆಟ್ಟಗಳಿಂದ ಕೆಳಗೆ ಜಾರುಬಂಡಿಯಂತೆ ಇಳಿಯಬೇಕಿತ್ತು.

ಇನ್ನೊಮ್ಮೆ ಪಶ್ಚ್ಜಿಮ ಘಟ್ಟಗಳ ತಪ್ಪಲಿನ ಹಳ್ಳಿಗೆ ಕಾಲಿಟ್ಟಿದ್ದೆ. ಜುಳು ಜುಳು ಹರಿಯುವ ನದಿ. ಅದರ ಆಚೆಯಿಂದ ಮಕ್ಕಳು ಈ ದಡ  ಸೇರಬೇಕು ಒಂದು ಹಸಿರಿನ ಬಿದಿರು ಬೊಂಬು ಎರಡೂ ದಂಡೆಗಳನ್ನು ಬೆಸೆದಿತ್ತು. ಅದನ್ನು ಹಿಡಿದು ಹುಡುಗರು ತಂತಿಯ ಮೇಲಿನ ನಡಿಗೆಯಂತೆ ಸರ್ಕಸ್ ಮಾಡುತ್ತಾ ಈಚೆ ದಡ ಸೇರಿಯೇಬಿಟ್ಟರು. ಅಕ್ಷರದ ಬೆಳಕು ಕಾಣಬೇಕೆಂದರೆ ಆ ಸರ್ಕಸ್ ದಿನನಿತ್ಯ ನಡೆಯಬೇಕು

ನನ್ನ ಮಗಳೇ ಶಾಲೆಗೆ ಹೋಗುವ ಕಾಲ ಬಂತು. ಬ್ಯಾಗ್ ನಲ್ಲಿ ಅವಳಿಗೆ ಬೇಕಾದ ಪುಸ್ತಕ ಓರಣವಾಗಿಟ್ಟೆ. ಬೆಳ್ಳಂಬೆಳಗ್ಗೆ ಸ್ನಾನ ಮಾಡಿಸಿದ್ದಾಯ್ತು. ಯೂನಿಫಾರಂ ತೊಡಿಸಿ, ಕುತ್ತಿಗೆಗೆ ಟೈ ಬಿಗಿದು, ತಿಂಡಿ ತಿನ್ನಿಸಿ, ಬ್ಯಾಸ್ಕೆಟ್ ನಲ್ಲಿ ನೀರು, ಊಟದ ಡಬ್ಬಿ ಇಟ್ಟು  ಟಾಟಾ ಮಾಡಿ, ಗೇಟಿನ ಬಳಿ ನಿಲ್ಲಿಸಿದರೆ ಸಾಕು ಐದು ನಿಮಿಷದಲ್ಲಿ ಬರುವ ಘಮ್ಮತ್ತಿನ ಹಳದಿ ವ್ಯಾನ್ ಮಗಳನ್ನು ಎಗರಿಸಿಕೊಂಡು ಹೋಯಿತು. ಮತ್ತೆ ಸಂಜೆ ಆಫೀಸಿನಿಂದ ಬರುವ ವೇಳೆಗೆ ಅದೇ ಮಗಳು ಆರಾಮವಾಗಿ  ಟಾಮ್ ಅಂಡ್ ಜೆರ್ರಿ ಲೋಕದಲ್ಲಿ ಇಲಿ ಬೆಕ್ಕಿನ ಜೊತೆ ಗುದ್ದಾಡುತ್ತಾ ಕೂತಿದ್ದಳು. ಎಷ್ಟು ಸಲೀಸು..?

‘ಶಾಲೆಗೆ ಹೋಗುವೆವು.. ನಾವು ಶಾಲೆಗೆ ಹೋಗುವೆವು..’ ಅನ್ನುವ ದನಿ ಟಿ. ವಿ ಯಲ್ಲಿ ಕೇಳುತ್ತಿದ್ದಂತೆ ನನ್ನ ಮನಸ್ಸು ಒಂದು ಸುತ್ತು ಆ ಬೆಂಗ್ರೆಯನ್ನೂ, ಮೆಘಾನೆಯನ್ನೂ, ದಿಡುಪೆಯನ್ನೂ, ಕುದುರೆಮುಖವನ್ನೂ ಸುತ್ತಿ ಬರುತ್ತದೆ. ಹೌದಲ್ಲಾ ಮಕ್ಕಳು ಶಾಲೆಗೆ ಹೇಗೆಲ್ಲಾ ಹೋಗುತ್ತಾರೆ ಅಂತ ಒಂದು ದಿನ ಇಂಗ್ಲೆಂಡ್, ಕೆನಡಾ, ಅಮೇರಿಕಾ ಅಂತ ಸುತ್ತುತ್ತಿದ್ದ ಲೀಸಾ ಹೆದ್ಲಾಫ್ ಗೆ ಸಹಾ ಅನಿಸಿತು. ಒಂದು ದಿನ ಮಗ ಆಲಿವರ್ ಲೀಸಾಗೆ ಕೇಳಿದ ‘ಅಮ್ಮಾ, ಇಂಡಿಯಾದಲ್ಲಿ ಶಾಲೆಗೇ ಹೇಗೆ ಹೋಗ್ತಾರಮ್ಮಾ?’ ಅಂತ. ಲೀಸಾ ಮಗುವಿನ ಪ್ರಶ್ನೆಗೆ ನಕ್ಕು ಸುಮ್ಮನಾಗಿಬಿಡಬಹುದಿತ್ತು. ಲೀಸಾ ಸುಮ್ಮನೆ ಕೂರಲಿಲ್ಲ. ಬ್ಯಾಕ್ ಪ್ಯಾಕ್ ಏರಿಸಿಕೊಂಡು, ವೀಸಾ ರೆಡಿ ಮಾಡಿಕೊಂಡು ಭಾರತಕ್ಕೆ ಬಂದೇಬಿಟ್ಟಳು. ಅಲ್ಲಿಂದ ಆರಂಭ ಆಯ್ತು ನೋಡಿ ಶಾಲೆ ಮತ್ತು ಲೀಸಾ ನಂಟು. ದೇಶದ  ಮೂಲೆ ಮೂಲೆ ಶಾಲೆಗಳಿಗೆ ಭೇಟಿ ಕೊಟ್ಟಳು, ಪರ್ವತ ಏರಿ, ಮರಳುಗಾಡು ಹೊಕ್ಕು, ಸರೋವರದಲ್ಲಿ ಬೋಟ್ ಹತ್ತಿ, ತೂಗು ಸೇತುವೆಯಲ್ಲಿ ನಡೆದು ಹೋಗಿ ಮಕ್ಕಳು ಹೇಗೆಲ್ಲಾ ಶಾಲೆಗೇ ಹೋಗುತ್ತಾರೆ ಅಂತ ನೋಡಿಕೊಂಡು ಬಂದೇಬಿಟ್ಟಳು. ಹೋದಲ್ಲೆಲ್ಲಾ ನಿತಿನ್ ಉಪಾಧ್ಯೆ ಕ್ಯಾಮೆರಾ ಕ್ಲಿಕ್ ಕ್ಲಿಕ್ ಅಂತು. ಇಷ್ಟೆಲ್ಲಾ ಆದ ಮೇಲೆ ಲೀಸಾಗೆ ಅನಿಸಿತು ಇದನ್ನ ಆಲಿವರ್ ಗೆ ಮಾತ್ರ ಅಲ್ಲ ಇಡೀ ಜಗತ್ತಿಗೆ ಹೇಳಬೇಕು ಅಂತ. ಆಗ ಹೊರಬಂತು ನೋಡಿ ‘Going to School in India’ ಪುಸ್ತಕ.

ಕಿಲೋ ಮೀಟರ್ ಗಟ್ಟಲೆ ನಡೆದು, ಮಳೆಯಲ್ಲಿ ನೆಂದು, ಪ್ರವಾಹ ಬಂದಾಗ ಕಕ್ಕಾಬಿಕ್ಕಿಯಾಗಿ, ಮನೆಗೆ ಹೋಗುವ ರಸ್ತೆಗಳೇ ಮುಚ್ಚಿ ಹೋಗಿ, ದೋಣಿ ದಾಟುವಾಗ ಸಮುದ್ರವೇ ಮಕ್ಕಳನ್ನು ನುಂಗಿ ಹಾಕಿ, ಬಿರು ಧಗೆಯ ಮರಳುಗಾಡಲ್ಲಿ ಕಾಲಲ್ಲಿ ರಕ್ತ ಬರುವಂತೆ ನಡೆದು, ಎತ್ತಿನ ಬಂಡಿಯಲ್ಲಿ, ಟ್ರಕ್ ಗಳಲ್ಲಿ, ರೋಪ್ ವೇ ಗಳಲ್ಲಿ ಕೂತು ಮಕ್ಕಳು ಶಾಲೆ ಸೇರುತ್ತಿದ್ದಾರೆ. ಆ ಮಕ್ಕಳಿಗಿರುವುದು ‘ಚಿನ್ನ ಚಿನ್ನ ಆಸೈ’. ಓದಿ ದೊಡ್ಡವನಾಗಿ ಅಮ್ಮನನ್ನ ಸಾಕಬೇಕು, ಒಬ್ಬ ಒಳ್ಳೆ ಹುಡುಗಿ ಆಗಬೇಕು, ನಾನು ನೋಡಿದ ಟ್ರೇನ್ ನ ಡ್ರೈವರ್ ಆಗಬೇಕು, ನನ್ನ ಅಪ್ಪನನ್ನ ಹೆದರಿಸದ ಪೊಲೀಸ್ ಆಗಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಇನ್ನೂ ಸಾಕಷ್ಟು ಮಕ್ಕಳಿಗೆ ಕಲಿಸುವ ಟೀಚರ್ ಆಗಬೇಕು.. ಎಷ್ಟೆಲ್ಲಾ ಕನಸುಗಳು…?

ಒಂದು ಪುಸ್ತಕವಾಗಿ ಬಂದ ಲೀಸಾ ಕನಸು ಈಗ ಪುಸ್ತಕ ಮಾತ್ರವಲ್ಲ. ದೊಡ್ಡ ಚಳವಳಿ. ಶಾಲೆಗೆ ಹೋಗುವ ಮಕ್ಕಳಿಗೆ ಶಾಲೆಯನ್ನು ಎಟುಕಿಸಿಕೊಡುವ ಪ್ರಯತ್ನ, ಅಕ್ಷರದ ಬೆಳಕಲ್ಲಿ ಬೆಳೆದು ಒಂದು ಮಾದರಿಯಾಗಿ ಎದ್ದು ನಿಂತವರ ಸ್ಫೂರ್ತಿ ಕಥೆಗಳನ್ನೂ ಹರಡುವ ಚಳವಳಿ. ಹೀಗೆ ‘ಶಾಲೆಗೆ ಹೋಗುವೆವು’ ಎನ್ನುವ ಹಾಡು ಕೇವಲ ಹಾಡಲ್ಲ . ಅದು ಬರಿಗಾಲಿನಲ್ಲಿ ಕನಸುಗಳನ್ನೂ ಬೆನ್ನತ್ತುತ್ತಿರುವವರ ಕಥೆ. ಹಾಗಾಗಿಯೇ ಇನ್ನೇನು ಶಾಲೆಯ ಬಾಗಿಲು ತೆರೆಯುತ್ತಿದೆ. ನನಗೆ ಮತ್ತೆ ನನ್ನ ಆ ಶಾಲೆಗೇ ಹೋಗಿ ಕೂರುವ ಮನಸ್ಸಾಗುತ್ತಿದೆ. ಬನ್ನಿ ನಮ್ಮ ವಯಸ್ಸು ಎಷ್ಟಿದ್ದರೇನು ಶಾಲೆಗೆ ಹೋಗೋಣ.

ಆ ತಾಯಿಯ ನೆನಪಲ್ಲಿ….

scan00032.jpgಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ ನೆನಪಿಸುವ ತಾಯಿ ಇವರು.

ಇದೆ ಗುಂಗಿನಲ್ಲೇ ನಾಗತಿಹಳ್ಳಿ ರಮೇಶ್  ತಮ್ಮ ತಾಯಿಯನ್ನೂ ನೆನೆಯುತ್ತಾ ಎಸ್ ಆರ್ ರಾಮಕೃಷ್ಣರ ಜೊತೆ ಕೈಗೂಡಿಸಿ ‘ಅವ್ವ’ ದ್ವನಿಮುದ್ರಿಕೆ ರೂಪಿಸಿದ್ದು. ಇಲ್ಲವಾದ ಆ ತಾಯಿಯ ನೆನಪಲ್ಲಿ ಇಂದು ಸಂಗೀತ ಘೋಷ್ಟಿಯಿದೆ. ಗೆಳೆಯ ನಟರಾಜ್ ಹುಳಿಯಾರ್ ಬರೆದ ಒಂದು ಆತ್ಮೀಯ ಬರಹವಿದೆ.

ಇಂದು ಸಂಜೆ 5-45 ಕ್ಕೆ ಸುಚಿತ್ರ ಫಿಲಂ ಸೊಸೈಟಿ ಯಲ್ಲಿ

ಸುಮತಿ ಮೂರ್ತಿ ಅವರಿಂದ ಹಿಂದುಸ್ತಾನಿ ಗಾಯನ

ತಬಲಾ: ರಾಜಗೋಪಾಲ್ ಕಲ್ಲೂರ್ಕರ್, ಹಾರ್ಮೋನಿಯಂ ಎಸ್ ಆರ್ ರಾಮಕೃಷ್ಣ

+++

ತಾಯಿಯೊಬ್ಬರು ಇಲ್ಲವಾದರು

-ನಟರಾಜ್ ಹುಳಿಯಾರ್

ಸಾಮಾನ್ಯವಾಗಿ ಒಂಚೂರೂ ಉಬ್ಬು ತೋರದೆ ಸರಳವಾಗಿದ್ದ ಅವರು ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದರೆಂಬ ಚಿತ್ರವನ್ನು ನಮ್ಮಂಥವರು ಊಹಿಸಿಕೊಳ್ಳುವುದು ಕೂಡ ಕಷ್ಟವಿತ್ತು. ಮನೆಯ ತುಂಬ ವೃದ್ಧರು, ಖಾಯಿಲೆಯವರು, ಮಕ್ಕಳು, ಮಕ್ಕಳ ಸ್ನೇಹಿತರು, ಬರುವವರು, ಹೋಗುವವರು… ಎಲ್ಲರಿಗೂ ಅವರು ಊಟ ಹಾಕುತ್ತಾ, ಕಾಫಿ ಕೊಡುತ್ತಾ, ಸಾಧ್ಯವಾದರೆ ನಗುತ್ತಾ, ಎದುರಾದ ಕಹಿ, ಕಷ್ಟವನ್ನೆಲ್ಲಾ ನುಂಗುತ್ತಾ ಅಸಾಧ್ಯ ನಿರ್ಲಿಪ್ತತೆಯನ್ನು ಸಾಧಿಸಿದವರಂತೆ ಕಾಣುತ್ತಿದ್ದರು. ಅವರ ನಿರ್ಲಿಪ್ತತೆಯನ್ನು ನಾವು ಮೆಚ್ಚಿದರೆ “ಹಾಗೆ ನೋಡಿದರೆ ಪ್ರತಿದಿನವೂ ಜಗಳವಾಡಲು ಇಲ್ಲಿ ಕಾರಣವಿತ್ತು” ಎಂದು ನಕ್ಕು ಸುಮ್ಮನಾಗುತ್ತಿದ್ದರು. ಅವರ ಅಡುಗೆ ಮನೆಯ ಒಳಗೆ ಎಲ್ಲ ಜಾತಿಗಳವರೂ ಆರಾಮಾಗಿ ನುಗ್ಗುತ್ತಿದ್ದರು. ಹನ್ನೆರಡು ಗಂಟೆ ರಾತ್ರಿಯಲ್ಲಿ ಕೂಡ ನಮ್ಮಂಥವರಿಗೆ ಲೆಕ್ಕವಿಲ್ಲದಷ್ಟು ದಿನ ಅವರ ಅಡುಗೆಮನೆಯಲ್ಲಿ ಊಟವಿರುತ್ತಿತ್ತು. ನಾಲ್ಕು ವರ್ಷಗಳ ಕೆಳಗೆ ಅವರನ್ನು ಕ್ಯಾನ್ಸರ್ ಆವರಿಸಿತ್ತು. ಕೆಲಕಾಲ ಚಿಕಿತ್ಸೆ ಪಡೆದ ನಂತರ, ಅದನ್ನು ಗೆದ್ದು ಬಂದ ಛಾಯೆಯೂ ಇಲ್ಲದೆ, ಖಾಯಿಲೆಯೇ ಆಗದಿದ್ದವರಂತೆ ಬಾಗಿಲ ಬಳಿ ನಗುತ್ತಾ ನಿಂತಿದ್ದರು. ಒಂದು ವರ್ಷ ಹಾಗೇ ಇದ್ದು, ಕಳೆದ ಮೂರು ತಿಂಗಳಂತೂ ಒಳಗೊಳಗೇ ಭಯಂಕರವಾಗಿ ಅಸಾಧ್ಯ ನೋವನ್ನು ಹಲ್ಲು ಕಚ್ಚಿ ಸಹಿಸಿ ಕಣ್ಮುಚ್ಚಿದರು.

ಇನ್ನಷ್ಟು

ದಲಿತರಿಂದ ದಲಿತರಿಗಾಗಿ

ಗಾಳಿ ಬೆಳಕು

gali5_thumbnail-1

ನಟರಾಜ್ ಹುಳಿಯಾರ್

ನೀನು ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆಯುತ್ತಿರುವ ಈ ‘ಬರೆವ ಬದುಕು’ ಅಂಕಣದಲ್ಲಿ ಬೇರೆಯವರ ಬಗ್ಗೆ ಮೃದುವಾಗಿ ಬರೆಯುತ್ತೀಯ, ಅದೇ ‘ನಮ್ಮವರ’ ಬಗ್ಗೆ ಮಾತ್ರ ಕಟುವಾಗಿ ಬರೆಯುತ್ತೀಯ ಎಂದು ದಲಿತ ಕವಿಯೊಬ್ಬ ದೂರಿದ. ಯೋಚಿಸುತ್ತೇನೆ ಎಂದು ಸುಮ್ಮನಾದೆ. ಆದರೆ ಅವನು ಬಳಸಿದ ‘ನಮ್ಮವರು’ ಎಂಬ ಪದ ನನ್ನ ತಲೆಯಲ್ಲೇ ಉಳಿಯಿತು. ಅದಕ್ಕೂ ಹಿಂದೆ ಈ ‘ನಮ್ಮವರು’ ಎಂಬ ಪದ ನನ್ನನ್ನು ಚಕಿತನಾಗಿಸಿದ್ದ ಸಂದರ್ಭವೊಂದು ನೆನಪಾಯಿತು.

ದಲಿತ ಸಾಹಿತ್ಯ ಕಮ್ಮಟವೊಂದರಲ್ಲಿ ದಲಿತ ಲೇಖಕರೊಬ್ಬರು ದಲಿತ ಮತ್ತು ಬಂಡಾಯ ಕತೆಗಳನ್ನು ವಿಮರ್ಶಿಸುತ್ತಾ, ಒಂದೆರಡು ಸಲ ‘ನಮ್ಮವರು’ ಎಂಬ ಮಾತನ್ನು ಬಳಸಿದಾಗ ‘ಅರೆ! ಇದೇನೋ ಚಿತ್ರವಾಗಿ ಕೇಳಿಸುತ್ತಿದೆಯಲ್ಲ’ ಅನ್ನಿಸಿತ್ತು. ನೆನಪಿನಿಂದ ಹೇಳುವುದಾದರೆ ಆ ಲೇಖಕರು ಹೇಳಿದ ವಾಕ್ಯಗಳಲ್ಲಿ ಕೆಲವು ಹೀಗಿದ್ದವು:

 asd

1. .ಕುಂ. ವೀರಭದ್ರಪ್ಪನವರು ದಲಿತ ಪಾತ್ರಗಳಲ್ಲಿ ಸಿಟ್ಟು ತುಂಬುದಕ್ಕೂ ‘ನಮ್ಮವರು’ ದಲಿತ ಪಾತ್ರಗಳ ಮೂಲಕ ಸಿಟ್ಟು ಹೊರಹೊಮ್ಮಿಸುವುದಕ್ಕೂ ವ್ಯತ್ಯಾಸವಿದೆ.

2. ಬೆಸಗರಹಳ್ಳಿ ರಾಮಣ್ಣನವರಂಥ ದಲಿತೇತರ ಲೇಖಕರು ಈ ಥರದ ಸನ್ನಿವೇಶದಲ್ಲಿ ದಲಿತ ಹೆಣ್ಣಿನ ಮಾನಭಂಗವಾಗುವಂತೆ ಚಿತ್ರಿಸಿಬಿಡುತ್ತಾರೆ. ಆದರೆ ‘ನಮ್ಮವರು’ ಇದೇ ಕತೆಯನ್ನು ಬರೆದಾಗ ಆ ಹೆಂಗಸಿಗೆ ಆತ್ಮಗೌರವವನ್ನು ತುಂಬಿ ತಲೆಯೆತ್ತಿ ನಡೆಯುವಂತೆ ಮಾಡುತ್ತಾರೆ

ನಾನು ಪ್ರಸ್ತಾಪಿಸಿರುವ ದಲಿತೇತರ ಲೇಖಕರ ಹೆಸರುಗಳು ಬೇರೆ ಇರಬಹುದು. ಆದರೆ ಸದರಿ ವಿಮರ್ಶಕರ ಒಟ್ಟು ವಿಮರ್ಶಾ ವೈಖರಿ ಹಾಗೂ ಹೋಲಿಕೆ ಹೆಚ್ಚೂಕಡಿಮೆ ಈ ಜಾಡಿನಲ್ಲೇ ಇತ್ತು. ಒಂದು ಜಾತಿಯ ಅನುಭವವನ್ನು ಆ ಜಾತಿಗೆ ಸೇರಿದ ಲೇಖಕರೇ ಬರೆದರೆ ಹೆಚ್ಚು ಅಧಿಕೃತವಾಗಿರುತ್ತದೆಂಬ ವಾದಕ್ಕಿಂತ ಭಿನ್ನವಾಗಿ ಕೇಳಿಸುತ್ತಿದ್ದ ಈ ವಾದಕ್ಕೆ ಕೊಂಚ ಮತೀಯವಾದಿ ಛಾಯೆಯೂ ಬಂದಂತಿತ್ತು. ಸಾಹಿತ್ಯದಲ್ಲಿ, ಅದರಲ್ಲೂ ಸಾಹಿತ್ಯ ವಿಮರ್ಶೆಯಲ್ಲಿ, ಸುಳಿಯಬಾರದ ಸ್ವಜನ ರಕ್ಷಣೆಯ ವಾಸನೆ ಅಲ್ಲಿ ಮೂಗಿಗೆ ಹೊಡೆಯುವಂತಿತ್ತು. ಅಂದು ತಮ್ಮೆದುರು ದಲಿತ ಕೇಳುಗರೇ ಹೆಚ್ಚಾಗಿ ಇದ್ದುದರಿಂದ ಆ ವಿಮರ್ಶಕರು ಈ ಭಾಷೆ ಬಳಸುತ್ತಿದ್ದಾರೆಂದು ಅನ್ನಿಸಿದರೂ ಆ ಧಾಟಿಯನ್ನು ಕೇಳಿಸಿಕೊಳ್ಳುವುದು ಅಷ್ಟೇನೂ ಹಿತಕರವಾಗಿರಲಿಲ್ಲ. ಆದರೆ ದಲಿತ ಸಂಘರ್ಷ ಸಮಿತಿ ಪ್ರಬಲವಾಗಿದ್ದ ಕಾಲದಲ್ಲಿ ನಾನು ಭೇಟಿಯಾಗುತ್ತಿದ್ದ ದ.ಸಂ.ಸ.ದ ಗೆಳೆಯರು ನಮ್ಮವರ ಮೇಲೆ ಅಟ್ರ್ಯಾಸಿಟಿ ಆಗಿದೆ ಅಂತಲೋ, ನಮ್ಮವನೊಬ್ಬನಿಗೆ ಕಾಲೇಜಿನಲ್ಲಿ ಸೀಟು ಬೇಕು ಅಂತಲೋ ಮತಾಡುತ್ತಿದ್ದಾಗ ಎಂದೂ ಹೀಗನ್ನಿಸುತ್ತಿರಲಿಲ್ಲ. ಅಥವಾ ಕವಿ ಗೋವಿಂದಯ್ಯನವರ ‘ಕಣ್ಣೀರ ಮಣ್ಣಲ್ಲಿ’ ಎಂಬ ಪದ್ಯದಲ್ಲಿ ‘ಬರಿ ಹೆಸರಿಗೆ ಬಸಿರಾದವರು- ಇವರು ನಮ್ಮವರು’ ಎಂಬುದನ್ನು ಓದಿದಾಗ ಪದ್ಯ ಚೆನ್ನಾಗಿಲ್ಲವೆನ್ನಿಸಿದರೂ ‘ನಮ್ಮವರು’ ಎಂಬ ಪದ ಸಹಜವಾಗಿಯೇ ಕೇಳಿಸುತ್ತಿತ್ತೇ ಹೊರತು ಅಲ್ಲಿ ಜಾತೀಯ ದನಿ ಇದ್ದಂತೆ ಕಾಣುತ್ತಿರಲಿಲ್ಲ.

ಆದರೆ ‘ಬರೆವ ಬದುಕು’ ಅಂಕಣ ಮುಗಿಯುವ ಕೆಲ ವಾರಗಳ ಮುಂಚೆ ಈ ಟಿಪ್ಪಣಿಯ ಆರಂಭದಲ್ಲಿ ಹೇಳಿದ ಗೆಳೆಯ ಪುನಃ ‘ನಮ್ಮವರು’ ಎಂಬ ಪದವನ್ನು ಬಳಸಿದ ಸಂದರ್ಭದಿಂದಾಗಿ ಮತ್ತೆ ಮುಜುಗರವಾಗತೊಡಗಿತು. ಆ ಬಗ್ಗೆ ತನ್ನ ಅಭಿಪ್ರಾಯ ಹೇಳಿದ ಗೆಳೆಯ ಈ ಅಂಕಣದಲ್ಲಿ ನಮ್ಮವರು ಇನ್ನೂ ಯಾರ್ಯಾರದು ಬರುತ್ತೆ? ಎಂದು ವಿಚಾರಿಸಿದ. ಅದಕ್ಕೆ ಏನೋ ಒಂದು ಉತ್ತರಕೊಟ್ಟ ನನಗೆ ನಂತರ ಅನ್ನಿಸಿದ್ದು ಇದು: ಈತ ಎಂದೂ ತನ್ನ ಸ್ವಂತದ ಲೇಖನ, ಕತೆ, ಕವಿತೆಯ ಬಗ್ಗೆ ನನ್ನ ಬಳಿ ಹೇಳಿಕೊಂಡಿಲ್ಲ. ತನ್ನನ್ನು ನಾನು ಮೆಚ್ಚಲಿ ಎಂದು ಪರೋಕ್ಷವಾಗಿ ಕೂಡ ಸೂಚಿಸಿಲ್ಲ. ಅಷ್ಟರಮಟ್ಟಿಗೆ ನಿಸ್ವಾರ್ಥಿಯಾದ ಈತನಿಗೆ ‘ತಮ್ಮ’ ಲೇಖಕರಿಗೆ ನ್ಯಾಯ ಸಲ್ಲಬೇಕೆಂದು ಅನ್ನಿಸಿದೆ, ಅದು ಸಹಜವಾದದ್ದು; ಆದರೆ ಈ ದಲಿತ ಲೇಖಕ- ಚಳುವಳಿಗಾರನಿಗೆ ಆ ಅಂಕಣದಲ್ಲಿ ಬರಬೇಕಾದ ಕನ್ನಡದ ಇತರ ಉತ್ತಮ ಲೇಖಕರ ಬಗ್ಗೆ ವಿಚಾರಿನಬೇಕು ಅನ್ನಿಸಲಿಲ್ಲ; ಹಾಗೆಯೇ ಕನ್ನಡ ಸಾಹಿತ್ಯದಲ್ಲಿ ಇದೀಗ ದನಿ ಮೂಡಿಸುತ್ತಿರುವ ಮಹಿಳೆಯರ ಬಗ್ಗೆಯಾಗಲೀ ಅಥವಾ ಬೆಸ್ತ, ಗಾಣಿಗ, ಬಲಿಜ, ಕುಂಬಾರ ಇತ್ಯಾದಿ ಕೆಳಜಾತಿಗಳ ಲೇಖಕರ ಬಗ್ಗೆಯಾಗಲೀ ವಿಚಾರಿಸಬೇಕು ಅನ್ನಿಸದೆ ತಮ್ಮವರ ಬಗ್ಗೆ ಮಾತ್ರ ಕೇಳಬೇಕೆನ್ನಿಸುತ್ತಿದೆಯೆಲ್ಲ ಹೀಗೆಲ್ಲಾ ಅನ್ನಿಸುತ್ತಿದ್ದಂತೆ ಒಳಗೊಳಗೇ ಕಸಿವಿಸಿಯಾಗತೊಡಗಿತು. ಮೊದಲ ತಲೆಮಾರಿನ ದಲಿತ ಲೇಖಕರಲ್ಲಿ (ಎಷ್ಟು ಬೇಗ ದಲಿತ ಲೇಖಕರ ಎರಡನೇ ತಲೆಮಾರು ಕೂಡ ಬಂದುಬಿಟ್ಟಿದೆ, ಗಮನಿಸಿ) ಕಾಣದ ಈ ಹೊಸ ಬಗೆಯ ಸ್ವಜಸಹಿತರಕ್ಷಣೆ ಆತಂಕಕಾರಿ ಎನ್ನಿಸತೊಡಗಿತು. ಈ ಧೋರಣೆ ಎಲ್ಲಿಗೆ ಮುಟ್ಟುತ್ತಿದೆಯೆಂದರೆ ಹೊಸ ದಲಿತ ಲೇಖಕರು ಹಿರಿಯ ಅಥವಾ ತಮ್ಮ ಸಮಕಾಲೀನ ದಲಿತ ಲೇಖಕರ ಪುಸ್ತಕ ಹಾಗೂ ಸಾಹಿತ್ಯ ಸಾಧನೆಗಳನ್ನು ಕಂಡು ಮಾತ್ರ ಸಂಭ್ರಮಗೊಳ್ಳತೊಡಗುತ್ತಾರೆ; ಅದರಲ್ಲೂ ಪುರುಷ ದಲಿತ ಬರಹಗಾರರು ಅವರಿಗೆ ಮುಖ್ಯವಾಗಿ ಕಾಣುತ್ತಾರೆಯೇ ಹೊರತು ಜಾಹ್ನವಿ ಥರದ ಲೇಖಕಿಯಲ್ಲ. ಇತರ ಲೇಖಕರು ದಲಿತರ ಬಗ್ಗೆ ಬರೆದದ್ದು ಮಾತ್ರ ತಮ್ಮ ಅವಗಾಹನೆಗೆ, ಚರ್ಚೆಗೆ ಅರ್ಹವೆಂದು ಅವರಿಗೆ ಕಂಡುಬರತೊಡಗುತ್ತದೆ. ದಲಿತರ ನೋವನ್ನು ಚಿತ್ರಿಸುವ ಭಾಗಗಳು ಮಾತ್ರ ‘ಒಳ್ಳೆಯ ಸಾಹಿತ್ಯ’ವೆಂದು ಅನ್ನಿಸತೊಡಗುತ್ತದೆ.

ಇವೆಲ್ಲವನ್ನೂ ಊಹೆಯಿಂದ ಹೇಳದೆ, ನಾನು ಆಗಾಗ್ಗೆ ಗಮನಿಸಿದ್ದಷ್ಟನ್ನೆ ಇಲ್ಲಿ ಹೇಳುತ್ತಿದ್ದೇನೆ. ಈ ಬಗೆಯ ಅಸಾಹಿತ್ಯಿಕ ಬೆಳವಣಿಗೆಗಳನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮೂಲಕ ವಿವರಿಸುವುದು ಕೂಡ ವ್ಯರ್ಥ. ಬರಬರುತ್ತಾ ದಲಿತ ಲೇಖಕರ ಬಗ್ಗೆ ಅಂಧಾಭಿಮಾನದಿಂದ ವರ್ತಿಸುವುದು ಕೂಡ ಇಂಥ ಬೆಳವಣಿಗೆಗಳ ಹಿಂದೆಯೇ ಶುರುವಾಗುತ್ತದೆ. ಬಹಳಷ್ಟು ದಲಿತ ವಿಮರ್ಶೆ ಕೂಡ ಸರಿಯಾದ ಸಾಹಿತ್ಯಿಕ ಮಾನದಂಡಗಳನ್ನು ರೂಪಿಸಿಕೊಳ್ಳಲಾರದೆ ಇದೇ ಬಲೆಯಲ್ಲಿ ಸಿಕ್ಕಿಕೊಂಡಂತೆ ತೋರುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಬ್ರಾಹ್ಮಣ ಲೇಖಕರ ಬಗ್ಗೆ ಬ್ರಾಹ್ಮಣರು ಅಥವಾ ಕುವೆಂಪು ಅವರ ಬಗ್ಗೆ ಒಕ್ಕಲಿಗರು ಇಂಥ ಅಸಹ್ಯಕರ ಮಾದರಿಗಳನ್ನು ಹೇರಳವಾಗಿ ಸೃಷ್ಟಿಸಿಹೋಗಿದ್ದಾರೆ. ಹೊಸ ಕಾಲದ ಲೇಖಕರು ಕೂಡ ಅದಕ್ಕೆ ತಮ್ಮ ಕಾಣಿಕೆ ಕೊಡಹೊರಟಿರುವುದು ದುರದೃಷ್ಟಕರ.

(ಜೂನ್ 24, 1998)

ನನ್ನಲ್ಲಿ ಅಪಾರ ಕೃತಜ್ಞತೆ ಹುಟ್ಟಿಸಿದ ಪುಸ್ತಕ

ಗಾಳಿ ಬೆಳಕು

gali5_thumbnailನಟರಾಜ್ ಹುಳಿಯಾರ್

ಒಂದು ದಲಿತ ಆತ್ಮಕತೆ

ಓ ಜಾನಪದ ಕತೆ ನಿಮ್ಮೂರ ಕಡೆಯೂ ಇರಬಹುದ: ಚಳಿಯಲ್ಲಿ ಹೊದೆಯಲು ಕಂಬಳಿ ಕೂಡ ಇಲ್ಲದೆ ನಡುಗುತ್ತಾ ಮಲಗಿದ ಬಡವನ ಗುಡಿಸಲಿಗೆ  ಕಳ್ಳನೊಬ್ಬ ನುಗ್ಗುತ್ತಾನೆ. ತನ್ನ ಕಂಬಳಿ ತೆಗೆದು ಬದಿಗಿಟ್ಟು ಗುಡಿಸಿಲನ್ನೆಲ್ಲಾ ತಡಕಾಡಿ ವಾಪಸ್ ಬಂದು ನೋಡುತ್ತಾನೆ: ಅಷ್ಟು ಹೊತ್ತಿಗಾಗಲೇ ಮನೆಯೊಡೆಯ ಕಳ್ಳನ ಕಂಬಳಿ ಹೊದ್ದು ಆನಂದದಿಂದ, ಆಗಾಗ್ಗೆ ಬರ್ತಿರಣ್ಣ ಎಂದು ಕೇಳಿಕೊಳ್ಳುತ್ತಾನೆ.

ಒಂದು ನಿರ್ಧಿಷ್ಟ ಸಮುದಾಯದಲ್ಲಿ ಹುಟ್ಟಿದ ಕತೆಗಳಲ್ಲಿ ಆ ವರ್ಗದ ದುಃಖ, ಕನಸುಗಳು ಇರುತ್ತವೆಂಬುದನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಮೇಲೆ ಹೇಳಿದ ಬಡತನದ ಕತೆ ದಲಿತಕತೆಯಾಗಿ ಬದಲಾಗುವ ಈ ಬಗೆ ನೋಡಿ: ಒಂದೂರಾಗೆ ಗಂಡಹೆಂಡ್ತೀರಿದ್ರು. ಇಬ್ಬರೂ ಹಳೆ ಮೆಟ್ಟಿ ರಿಪೇರಿ ಮಾಡ್ಕಂಡು ಹೊಟ್ಟೆ ಹೊರೀತಿದ್ರು. ಇರೋಕ್ಕೊಂದು ಗುಡ್ಲು. ಉಡಾಕ್ಕೊಂದು ದುಪ್ಟಿ. ಆ ದುಪ್ಟೀನ್ನೇ ರಾತ್ರಿ ಹೊತ್ನಾಗೆ ಇಬ್ರೂ ಸೇರಿ ಹೊದ್ಕೊಂಡು ಮಲಗ್ತಿದ್ರು. ಬೆಳಕಾಗುತ್ತಿದ್ದಂತೆ ಹೆಂಡತಿ ಅದೇ ದುಪ್ಟೀನ ಸೀರೆ ಮಾಡ್ಕಂಡು ಉಟ್ಕಳ್ತಿದ್ಲು.

-ತುಂಬಾಡಿ ರಾಮಯ್ಯನವರ ‘ಮಣೆಗಾರ’ ಎಂಬ ಆತ್ಮಕತೆಯಲ್ಲಿ ಬರುವ ಮೇಲೆ ಹೇಳಿದ ಕತೆಯ ಈ ರೂಪವನ್ನು ನೋಡಿ ಈ ಕತೆ ಆದಿಮರೂಪಿಯಾದದ್ದಿರಬಹುದು ಎನ್ನಿಸಿತು. ಪ್ರೊ.ಕಾಳೇಗೌಡ ನಾಗವಾರ ಅವರು ಕಳಿಸಿದ ಈ ಆತ್ಮಕತೆಯನ್ನು ಒಂದೇ ಪಟ್ಟಿನಲ್ಲಿ ಓದಿ ಮುಗಿಸಿದಾಗ ನನ್ನ ನೆನಪಿನಲ್ಲಿ ಉಳಿದ ಚಿತ್ರಗಳಲ್ಲಿ ಇದೂ ಒಂದು. ಸಾಹಿತಿಯಲ್ಲದ ರಾಮಯ್ಯ ತಮ್ಮ ಕತೆ ಹೇಳುವ ರೀತಿ ಕೂಡ ಈ ಜಾನಪದ ಕತೆಯ ಶೈಲಿಯಲ್ಲೇ ಇದೆ. ಈವರೆಗೂ ಅಷ್ಟಾಗಿ ಏನನ್ನೂ ಬರೆಯದ ರಾಮಯ್ಯ ತಮ್ಮ ಬಾಲ್ಯದ ಘಟನೆಗಳನ್ನು ಒಮ್ಮೆ ಕವಿ ಜಿ.ವಿ. ಆನಂದಮೂರ್ತಿಯವರಿಗೆ ಹೇಳುತ್ತಿದ್ದಾಗ, ಆನಂದಮೂರ್ತಿ ಅವನ್ನೆಲ್ಲಾ ಪುಸ್ತಕ ರೂಪದಲ್ಲಿ ಬರೆಯಲು ಹೇಳುತ್ತಾರೆ. ಆ ನೆನಪುಗಳನ್ನು ಓದಿ ಮುನ್ನುಡಿ ಬರೆದ ಕಾಳೇಗೌಡರು ರಾಮಯ್ಯನವರಿಗೆ ‘ತುಂಬಾಡಿ ರಾಮಯ್ಯ’ ಎಂದು ಹೆಸರಿಡುತ್ತಾರೆ.

dbw2-1

ರಾಮಯ್ಯನವರ ಆತ್ಮಕತೆ ಮೆಲ್ಲಗೆ ನಿಮ್ಮ ಒಳಕ್ಕಿಳಿಯುವುದು ಇಲ್ಲಿ ಅಸ್ಪೃಶ್ಯನೊಬ್ಬ ತನ್ನ ಕತೆ ಹೇಳುತ್ತಿದ್ದರೂ ಆತ್ಮಮರುಕ ಹೆಚ್ಚಿಗೆ ಇಲ್ಲದಿರುವುದರಿಂದ. ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡರೆ ಹಣ ಕೊಡುತ್ತಾರೆಂಬ ಆಸೆಯಿಂದ ಆಪರೇಷನ್ ಮಾಡಿಸಿಕೊಂಡ ಅಪ್ಪ ಆಸ್ಪತ್ರೆಯ ಊಟವನ್ನು ಮನೆಮಂದಿಯ ಜೊತೆ ಹಂಚಿಕೊಳ್ಳಲು ತಂದ ಪ್ರಸಂಗ ಹೇಳುವಾಗ ಕೂಡ ರಾಮಯ್ಯ ನಿರ್ಲಿಪ್ತವಾಗಿರಬಲ್ಲರು. ಹಾಗೆಯೇ ಒಂದು ಹೊತ್ತಿನ ಊಟಕ್ಕೆ ಪರದಾಡುವ ತಾವು ಓದಿದ್ದನ್ನೂ ಗೊಣಗದೆ ದಾಖಲಿಸಬಲ್ಲರು. ನಗರಕ್ಕೆ ಓದಲು ಹೊರಟ ಹುಡುಗನ ಮನೆಯವರ ಅಳಲನ್ನು ‘ತಬ್ಬಲಿಯು ನೀನಾದೆ ಮಗನೆ’ ಎಂಬ ನುಡಿಗಟ್ಟಿನಲ್ಲಿ ಗ್ರಹಿಸಬಲ್ಲರು. ತಮ್ಮ ಹಳ್ಳಿಯಲ್ಲಿ ಅಸ್ಪೃಶ್ಯರೂ ಸವರ್ಣೀಯ ಕೆಳಜಾತಿಯವರೂ ಬಡತನ-ಕಡುಬಡತನಗಳ ನಡುವೆ ಇದ್ದರೆಂಬುದನ್ನು ರಾಮಯ್ಯ ಬಾಲ್ಯದಲ್ಲೇ ಕಂಡುಕೊಂಡರು. ಸ್ಕೂಲಿನ ರಜಾದಿನಗಳಲ್ಲಿ ಅಪ್ಪನ ಜೊತೆ ಹಳ್ಳಿಗಳಿಗೆ ಚಪ್ಪಲಿ ಹೊಲೆಯಲು ಹೋಗುತ್ತಿದ್ದ ದಿನಗಳ ಬಗ್ಗೆ ರಾಮಯ್ಯ ಬರೆಯುತ್ತಾರೆ:

ಹಳ್ಳಿಯವರ ಚಪ್ಪಲಿಗಳನ್ನು ರಿಪೇರಿ ಮಾಡುವುದೆಂದರೆ, ಅದಕ್ಕಿಂತ ರಣಹಿಂಸೆಯ ಕೆಲಸ ಮತ್ಯಾವುದೂ ಇಲ್ಲ. ಇವರ ಚಪ್ಪಲಿಗಳು ಎಷ್ಟು ಸವೆದಿರುತ್ತಿದ್ದವು ಎಂದರೆ, ಕೆಲವು ಚಪ್ಪಲಿಗಳಿಗೆ ಹಿಮ್ಮಡಿಗಳೇ ಇರುತ್ತಿರಲಿಲ್ಲ! ಮತ್ತೂ ಕೆಲವು ಚಪ್ಪಲಿಗಳಿಗೆ ಟಾಕಾ ಹಾಕಲು ಅಥವಾ ಮೊಳೆ ಹೊಡೆಯಲು ಒಂದು ರಾಗಿ ಕಾಳಿನಷ್ಟೂ ಜಾಗವಿರದೆ ಕತ್ತು ಹೋಗಿರುತ್ತದ್ದವು.

ಅಸ್ಪೃಶ್ಯತೆಯನ್ನು ಆಚರಿಸುವ, ಪೋಷಿಸುವ ಜಾತಿಗಳ ವಿರುದ್ಧ ರಾಮಯ್ಯನವರು ತೀರಾ ಕಹಿಯಾಗಲಾರರು. ಇದಕ್ಕೆ ತುಮಕೂರು ಜಿಲ್ಲೆಯ ತುಂಬಾಡಿ ಗ್ರಾಮದಲ್ಲಿ ಇದ್ದ ವಿಚಿತ್ರ ಸಾಮರಸ್ಯವೂ ಕಾರಣವಿರಬಹುದು. ದಲಿತರ ಮೇಲೆ ಹಲ್ಲೆ ಎಂಬುದನ್ನೇ ಕೇಳರಿಯದ ಊರು ತುಂಬಾಡಿ. ಒಂದೂ ಮುಸ್ಲಿಂ ಕುಟುಂಬವಿರದ ಈ ಊರಿನಲ್ಲಿ ಬಾಬಯ್ಯನ ಜಾತ್ರೆಯನ್ನು ಎಲ್ಲ ಜನಾಂಗದವರೂ ಆಚರಿಸುತ್ತಾರೆ. ಈ ಹಳ್ಳಿಯಲ್ಲಿ ಲಿಂಗಾಯತರ ಎರಡು ಮನೆ ಹಾಗೂ ಜೈನರ ಎರಡು ಮನೆಗಳನ್ನು ಬಿಟ್ಟರೆ, ಉಳಿದೆಲ್ಲ ಜಾತಿಗಳವರು ಪರಸ್ಪರ ಎಲ್ಲರನ್ನೂ ಅಣ್ಣ, ತಮ್ಮ, ತಂಗಿ, ಚಿಕ್ಕಪ್ಪ, ದೊಡ್ಡಪ್ಪ, ತಾತ, ಅತ್ತೆ ಎಂದೇ ಸಂಭೋಧಿಸುತ್ತಾರೆಂದು ರಾಮಯ್ಯ ಬರೆಯುತ್ತಾರೆ: ಕುರುಬರ ಬೀರಯ್ಯನವರ ಹೆಂಡತಿ ಮುತ್ತಮ್ಮ ಮತ್ತು ಪುಟ್ಟರಂಗಯ್ಯನವರ ಹೆಂಡತಿ ನರಸಮ್ಮವರು ನನಗೆ ಹಳ್ಳಿಯ ಸಂಪ್ರದಾಯದಂತೆ ಅತ್ತೆಯಾಗಬೇಕು. ಅವರೂ ಕೂಡ ನನ್ನನ್ನು ‘ಅಳಿಯ’ ಎಂದೇ ಕೂಗುತ್ತಿದ್ದರು.

ಇಂಥ ಪ್ರಸಂಗಗಳನ್ನು ವೈಭವೀಕರಿಸಿ ತಮ್ಮೂರಿನಲ್ಲಿ ಅಸ್ಪಶ್ಯತೆಯೇ ಇರಲಿಲ್ಲವೆಂದೇನೂ ರಾಮಯ್ಯ ಸೂಚಿಸುವುದಿಲ್ಲ. ಅಂಥ ಸನ್ನಿವೇಶಗಳನ್ನೂ ಅವರು ದಾಖಲಿಸುತ್ತಾರೆ: .ಆದರೆ ನಮ್ಮ ಹಳ್ಳಿಯಲ್ಲಿದ್ದ ಜೈನರ ಮನೆಗಳಲ್ಲಿದ್ದ ಅಂಗಡಿಗಳಿಗೆ ನಾವು ಸಾಮಾನು ಕೊಳ್ಳಲು ಹೋದರೆ, ಅವರು ತೊಣಚಿ ಹತ್ತಿದ ಹಸು ಎಗರಾಡುವಂತೆ ನಮ್ಮನ್ನು ನೋಡಿದ ಕೂಡಲೆ ಎಗರಾಡುತ್ತಿದ್ದರು. ಎದ್ದು ಓಡಾಡಲಾರದಷ್ಟು ಸ್ಥೂಲದೇಹಿಯಾಗಿದ್ದ ಸಿರಿದೇವಮ್ಮನವರು ಒಂದು ಉದ್ದನೆಯ ಬಿದಿರುಕೋಲಿಗೆ ತಟ್ಟೆಯನ್ನು ಸಿಕ್ಕಿಸಿ ಕುಂತಲ್ಲಿಂದಲೇ ಕಿಟಕಿಯಲ್ಲಿ ನಿಂತಿರುತ್ತಿದ್ದ ನಮಗೆ ವ್ಯಾಪಾರ ಮಾಡುತ್ತಿದ್ದರು. ಆದರೆ ಈ ಬಗೆಯ ಅನುಭವದ ನಡುನಡುವೆಯೇ ಸವರ್ಣೀಯರು ತಮ್ಮ ನರಕವನ್ನು ಮೀರುವ ಉದಾತ್ತವಾದ ಬಗೆಗಳನ್ನೂ ರಾಮಯ್ಯ ನೆನೆಯುತ್ತಾರೆ: ..ವಡ್ಡಗೆರೆಯಲ್ಲಿ ವಕ್ಕಲಿಗರ ಹುಲಿಯಪ್ಪಜ್ಜ ಎಂಬುವವರು ಊರುಗೋಲು ಹಿಡಿದು ಮಕ್ಕಳಿಗೆಲ್ಲಾ ಸಮನಾಗಿ ಉಪ್ಪಿಟ್ಟು ಹಂಚುವಂತೆ ನೋಡಿಕೊಳ್ಳುತ್ತಿದ್ದರು. ಹುಲಿಯಪ್ಪಜ್ಜನಿಗೆ ಮಕ್ಕಳ ಮೇಲೆ ಪ್ರೀತಿ ಎಷ್ಟಿತ್ತೆಂದರೆ, ಮನೆಯಲ್ಲಿ ತನಗೆ ಕೊಟ್ಟಿದ್ದ ರೊಟ್ಟಿಯನ್ನು ತಿನ್ನದೆ ಬಟ್ಟೆಯಲ್ಲಿ ಮುಚ್ಚಿಟ್ಟುಕೊಂಡು ಬಂದು ಹೊಲೆಮಾದಿಗರ ಹಟ್ಟಿಯ ಬಳಿ ನಿಂತು ಮಕ್ಕಳನ್ನು ಕರೆದು ರೊಟ್ಟಿ ಹಂಚುತ್ತಿದ್ದರು.

ಮನೆಯಲ್ಲಿ ಊಟವಿಲ್ಲದೆ, ಸ್ಕೂಲಿನಲ್ಲಿ ಮಧ್ಯಾಹ್ನ ಹುಳುಗಳು ತುಂಬಿದ ಉಪ್ಪಿಟ್ಟಿಗೆ ಕಾದು ನಿಂತು ರಾಮಯ್ಯನೆಂಬ ಹುಡುಗ ಮುಂದೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತನಾಗುವ ತನಕದ ಕತೆಯಲ್ಲಿ ಸ್ವಾತಂತ್ರ್ಯೋತ್ತರ ದಲಿತ ವ್ಯಕ್ತಿಗಳ ಬೆಳವಣಿಗೆಯ ಕತೆಯೂ ಬೆರೆತು ಹೋಗುತ್ತದೆ. ಅನೇಕ ದಲಿತ ಲೇಖಕರಂತೆ ರಾಮಯ್ಯ ಕೂಡಾ ಬಾಲ್ಯದ ಬಗೆಗೆ ಮಾತ್ರ ಗಾಢವಾಗಿ ಬರೆದು, ನಂತರದ ಕತೆ ಹೇಳುವಾಗ ಸುಮ್ಮನೆ ಓಡತೊಡಗುತ್ತಾರೆ. ದಲಿತ ಕವಿ ಸಿದ್ಧಲಿಂಗಯ್ಯನವರ ‘ಊರುಕೇರಿ’ ಆತ್ಮಕಥನ ಕೂಡ ದಲಿತ ಸಂಘರ್ಷ ಸಮಿತಿಯ ಅನುಭವವನ್ನು ಹೇಳುವಲ್ಲಿ ಯಶಸ್ವಿಯಾಗಿಲ್ಲ. ತುಂಬಾಡಿ ರಾಮಯ್ಯನವರಿಗೂ ಹಾಗೇ ಆಗಿದೆ. ಆದರೂ ಈ ನಡುವೆ ತಮ್ಮ ಪ್ರಜ್ಞೆಯನ್ನು ರೂಪಿಸಿದ ನಾಗಪ್ಪನವರ ಬಗ್ಗೆ ರಾಮಯ್ಯ ಕೊಡುವ ಒಂದು ವಿವರ ಕರ್ನಾಟಕದ ಶೂದ್ರರು ಹಾಗೂ ದಲಿತರಲ್ಲಿ ಉಂಟಾದ ವೈಚಾರಿಕ ಪ್ರಜ್ಞೆಯ ಬೆಳವಣಿಗೆಯ ಅಧ್ಯಯನದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ: ನಾಗಪ್ಪನವರು ತಮ್ಮ ಮನೆಯಲ್ಲಿ ಸಾಕಷ್ಟು ಪುಸ್ತಕಗಳನ್ನು ಇಟ್ಟುಕೊಂಡಿದ್ದರು. ಅದರಲ್ಲಿ ಕುವೆಂಪುರವರ ಪುಸ್ತಕಗಳು ಹೆಚ್ಚಾಗಿದ್ದವು. ಕುವೆಂಪುರವರ ‘ನೂರು ದೇವರನೆಲ್ಲಾ ನೂಕಾಚೆ ದೂರ’ ಎಂಬ ಕವನವನ್ನು ನಾಗಪ್ಪನವರು ಕಂಠಗತ ಮಾಡಿಕೊಂಡಿದ್ದರು. ‘ನೀವೆಲ್ಲಾ ಕುವೆಂಪು, ಅಂಬೇಡ್ಕರ್ ಅವರಂತೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು’ ಎಂದು ಸದಾ ನಮಗೆ ಹೇಳುತ್ತಿದ್ದರು ವಿದ್ಯಾರ್ಥಿ ಜೀವನದ ಈ ಫ್ರಭಾವಗಳ ಜೊತೆಗೇ ಪಂಚಮ, ಲಂಕೇಶ್ ಪತ್ರಿಕೆ, ದೇವನೂರ ಮಹಾದೇವರ ಬರವಣಿಗೆಗಳೂ ರಾಮಯ್ಯನವರ ಪ್ರಜ್ಞೆಯನ್ನು ರೂಪಿಸಿದವು.

‘ಮಣಿಗಾರ’ ಎಂಬ ಈ ಆತ್ಮಕಥನ ಓದಿದ ನಂತರ ತಲೆಯಲ್ಲಿ ಉಳಿದ ಚಿತ್ರಗಳಲ್ಲಿ ಆಯ್ದ ಕೆಲವನ್ನು ಕೊಡುವ ಮೂಲಕ ಈ ಬರಹವನ್ನು ರೂಪಿಸಲೆತ್ನಿಸಿದ್ದೇನೆ. ಬರಬರುತ್ತಾ ರಾಮಯ್ಯ ವಂದನಾರ್ಪಣೆಯ ಪಟ್ಟಿ ಕೊಡುತ್ತಾರೆ, ಕೆಲವೊಮ್ಮೆ ಅನಗತ್ಯ ಮಾನವಶಾಸ್ತ್ರೀಯ ವಿವರಗಳನ್ನು ಕೊಡುತ್ತಾರೆ ಎಂದೆಲ್ಲ ಅನ್ನಿಸತೊಡಗಿದರೂ ಅವರ ಏರಿಳಿತವಿಲ್ಲದ ಬರವಣಿಗೆ ನಮ್ಮನ್ನು ಕದಡುವಂತಿದೆ. ರಾಮಯ್ಯನವರ ಪುಸ್ತಕದಲ್ಲಿ ನನ್ನನ್ನು ಬಹುವಾಗಿ ಆವರಿಸಿದ ಒಂದು ‘ಅ-ಸಾಮಾಜಿಕ’ ಘಟನೆಯನ್ನು ಹೇಳಿ ಈ ಬರಹ ಮುಗಿಸುತ್ತೇನೆ. ಅದು ರಾಮಯ್ಯ ತಮ್ಮ ಅಪ್ಪನ ಜೊತೆ ಚಪ್ಪಲಿ ರಿಪೇರಿ ಮಾಡಲು ಹೋದಾಗ ನಡೆದ ಒಂದು ವಿಚಿತ್ರ ಘಟನೆ:

ಆವೊತ್ತು ಕಾಡುಗೊಲ್ಲರ ಪೈಕಿ ಒಬ್ಬಾತ ತಾವು ಚಪ್ಪಲಿ ರಿಪೇರಿ ಮಾಡುತ್ತಿದ್ದ ಜಾಗಕ್ಕೆ ತನ್ನ ಪಿಳ್ಳಂಗೋವಿಯೊಂದಿಗೆ ಬಂದ. ಅಪ್ಪನಿಂದ ಚಪ್ಪಲಿ ರಿಪೇರಿ ಮಾಡಿಸಿಕೊಂಡವನು, ತನ್ನ ಪಿಳ್ಳಂಗೋವಿಯನ್ನು ಅಲ್ಲೇ ಮರೆತು ಕುರಿ ಎಬ್ಬಿಸಲು ಹೊರಟುಹೋದ. ಅಲ್ಲಿ ಅವನ ಚಪ್ಪಲಿ ಹೊಲೆದ ಮೇಲೆ, ಸಾಮಾನುಗಳನ್ನು ನಾನು ತಿದಿ’ಯಲ್ಲಿಟ್ಟೆ. ಅದಾವ ಮಾಯದಲ್ಲೋ ನನಗೂ ಗೊತ್ತಾಗದೆ ಮರೆತು ಅಲ್ಲೇ ಇದ್ದ ಪಿಳ್ಳಂಗೋವಿಯನ್ನೂ ‘ತಿದಿ’ಯಲ್ಲಿಟ್ಟೆ. ಕುರಿ ಎಬ್ಬಿಸುವ ಕೆಲಸವಾದ ಮೇಲೆ ಕಾಡುಗೊಲ್ಲರವನು ತನ್ನ ಪಿಳ್ಳಂಗೋವಿಯನ್ನು ಜ್ಞಾಪಿಸಿಕೊಂಡು ಅಲ್ಲಿ-ಇಲ್ಲಿ ಹುಡುಕಾಡಿ ಎಲ್ಲೂ ಸಿಗದೆ ಕೊನೆಗೆ ನಾವಿದ್ದಲ್ಲಿಗೆ ಬಂದು ಅಪ್ಪನ ಹತ್ತಿರ ತನ್ನ ಪಿಳ್ಳಂಗೋವಿ ಕೇಳಿದ. ಪಿಳ್ಳಂಗೋವಿ ನಮ್ಮ ತಿದಿಯಲ್ಲಿದ್ದದ್ದು ಅಪ್ಪನಿಗೆ ಗೊತ್ತಿರಲಿಲ್ಲ. ಆದ್ದರಿಂದ ಅಪ್ಪ ಅವನಿಗೆ ಪಿಳ್ಳಂಗೋವಿಯನ್ನು ನಾವು ನೋಡಲಿಲ್ಲವೆಂದೂ, ನೀನದನ್ನು ಇಲ್ಲಿಗೆ ತಂದೇ ಇರಲಿಲ್ಲವೆಂದೂ ಇನಿಕಿಲ್ಲದಂತೆ ಹೇಳಿದ. ಆದರೆ ಅವನಾದರೋ ಕುರಿಗಳನ್ನು ಒಂಟಿಯಾಗಿ ಕಾಯುವಾಗ, ರಾತ್ರಿ ಹೊತ್ತು ಬೆಂಕಿ ಮುಂದೆ ಕೂತು ಚಳಿ ಕಾಯಿಸಿಕೊಳ್ಳುವಾಗ ತನಗಿದ್ದ ಒಂದೇ ಒಂದು ಸಂಗಾತಿಯನ್ನು ನಮ್ಮಪ್ಪನ ಮಾತಿಗೆ ಮರುಳಾಗಿ ಕಳೆದುಕೊಳ್ಳಲು ತಯಾರಿರಲಿಲ್ಲ. ಅಪ್ಪನ ಮಾತನ್ನು ಸುತರಾಂ ಒಪ್ಪದೆ ತಿದಿಯನ್ನು ತಡಕಿಯೇ ಬಿಟ್ಟ. ತಿದಿಯಲ್ಲಿದ್ದ ಪಿಳ್ಳಂಗೋವಿ ಅವನ ಕೈಗೆ ಸಿಕ್ಕಿತು. ತಿದಿಯಿಂದ ಅವನು ಪಿಳ್ಳಂಗೋವಿಯನ್ನು ಹೊರತೆಗೆದದ್ದನ್ನು ನೋಡಿ ಅಪ್ಪನ ಮುಖ ಕಳೆಗುಂದಿತು. ನನಗೂ ಕಸಿವಿಸಿಯಾಗಿ ತಲೆತಗ್ಗಿಸಿದೆ. ಅನಾಯಸವಾಗಿ ನನ್ನೆಡೆಗೆ ಬಂದಿದ್ದ ಪಿಳ್ಳಂಗೋವಿ ಮಣೆಗಾರ ಹುಡುಗನಿಗೆ ನುಡಿಯಲೊಲ್ಲದೆ ತನ್ನೊಡೆಯನಿಗೆ ದನಿಯಾಗಲು ಮರಳಿ ಅವನ ಕೈ ಸೇರಿತ್ತು. ಅಪ್ಪ ಮಾತ್ರ ಏನೂ ಹೇಳಲಾಗದೆ ಸುಮ್ಮನೆ ಕುಳಿತಿದ್ದ.

ಈಚೆಗೆ ನನ್ನಲ್ಲಿ ಅಪಾರ ಕೃತಜ್ಞತೆ ಹುಟ್ಟಿಸಿದ ಪುಸ್ತಕಗಳಲ್ಲಿ ‘ಮಣೆಗಾರ’ ಕೂಡ ಒಂದು.

(ಮಾರ್ಚ್ 22, 2000)

ಬರಲಿರುವ ದುರಂತದ ಮುನ್ಸೂಚನೆ..

‘ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ’

ಗಾಳಿಬೆಳಕು

mmmm-ನಟರಾಜ್ ಹುಳಿಯಾರ್

ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್ ರೂಮ್ ಪುಸ್ತಕಗಳನ್ನು ಬಿಟ್ಟು ಇತರ ಪುಸ್ತಕಗಳನ್ನು ಓದಲು ಶುರು ಮಾಡಿದಾಗ ಬಹುತೇಕ ಲೇಖಕರು ಜಾತ್ಯತೀತ ಮೌಲ್ಯಗಳನ್ನೇ ಪ್ರತಿಬಿಂಬಿಸುತ್ತಿದ್ದರೆಂದು ಕಾಣುತ್ತದೆ. ನಮ್ಮಂಥವರಲ್ಲಿ ಅನೇಕ ಬಗೆಯ ಅಸಮಾನತೆಗಳ ವಿರುದ್ಧ ಅಸಮಾಧಾನ, ಸಿಟ್ಟು ಬೆಳೆಯತೊಡಗಿದ್ದು ಈ ಕಾರಣದಿಂದಲೇ. ಹಾಗೆ ನಮಗೆಲ್ಲ ಪ್ರೇರಣೆಯಾದ ಲೇಖಕರಲ್ಲಿ ಬ್ರಾಹ್ಮಣರೂ ಇದ್ದರು, ದಲಿತರೂ, ಶೂದ್ರರೂ ಇದ್ದರು. ಆದರೆ ಈಚಿನ ವರ್ಷಗಳ ಒಂದು ವಿದ್ಯಮಾನ ನನಗೆ ತೀರಾ ಆತಂಕಕಾರಿಯಾಗಿ ಕಾಣತೊಡಗಿದೆ. ನಮ್ಮ ಕತೆ, ಕಾದಂಬರಿ, ವಿಮರ್ಶೆಗಳ ವಲಯದಲ್ಲಿರುವ ಬಹುತೇಕ ಬ್ರಾಹ್ಮಣ ಬರಹಗಾರರು ಹಾಗೆಯೇ ಸೆಕ್ಯುಲರ್ ಆಗಿ ಉಳಿದಿದ್ದಾರೆ. ಆದರೆ ಅಕ್ಷರ ಬಳಸುವ ದೊಡ್ಡ ಸಂಖ್ಯೆಯ ಬ್ರಾಹ್ಮಣರು ಪತ್ರಿಕೆ, ಟೆಲಿವಿಷನ್, ಇಂಟರ್ನೆಟ್, ಮುಂತಾದ ಕಡೆ ಮತೀಯವಾದವನ್ನು ಬಿತ್ತುವ, ಬೆಳೆಸುವ, ಪೋಷಿಸುವ ವಿಕೃತ ಕೆಲಸದಲ್ಲಿ ತೊಡಗಿದ್ದಾರೆ. ಉಳಿದ ಅನೇಕ ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೂಡ ಇದೇ ಕೆಲಸವನ್ನು ಮುಂದುವರಿಸುವವರು ಹೆಚ್ಚು ಕಾಣತೊಡಗಿದ್ದಾರೆ. ಈ ವರ್ಗದ ಜೊತೆಗೆ ಇನ್ನುಳಿದ ಜಾತಿಗಳಲ್ಲಿ ಭಾಷಣ, ಬರಹಗಳನ್ನು ಬಳಸಬಲ್ಲ ವಿದ್ಯಾವಂತರು ಕೂಡ ಸೇರಿಕೊಳ್ಳತೊಡಗಿದ್ದಾರೆ.

 

ನಮ್ಮ ಅಕ್ಷರಲೋಕದ ಈ ಬೇಜವಾಬ್ದಾರಿತನ, ವಿಶ್ವಾಸಘಾತುಕತನ ಹಾಗೂ ಭಂಡ ಸ್ಟ್ರ್ಯಾಟಿಜಿ ನಿಜಕ್ಕೂ ಭಯಾನಕವಾಗಿದೆ. ಸತ್ಯವನ್ನು ತಿರುಚುವವರು, ಭೈರಪ್ಪ-ಚಿದಾನಂದ ಮೂರ್ತಿಗಳನ್ನು, ಸಂಘಪರಿವಾರದ ಕುಟಿಲ ಕಾರ್ಯನೀತಿಯನ್ನು ಮೆಚ್ಚುವವರು ಕೂಡ ಇವರೇ ಆಗಿದ್ದಾರೆ ಎಂಬುದು ಇನ್ನಷ್ಟು ಆತಂಕ ಹುಟ್ಟಿಸುತ್ತದೆ. ಆದರೂ ಕನ್ನಡದ ಉತ್ತಮ ಬರಹಗಾರರಲ್ಲಿ ಶೇಕಡಾ ತೊಂಬತ್ತು ಮಂದಿ ಇನ್ನೂ ಜಾತ್ಯತೀತ ಮೌಲ್ಯಗಳ ಪರವಾಗಿದ್ದಾರೆ ಎಂಬ ಸತ್ಯ ಈ ಆತಂಕವನ್ನು ಕೊಂಚ ಹಿನ್ನೆಲೆಗೆ ದೂಡುತ್ತದೆಂಬುದು ನಿಜ. ಆದರೆ ಆರೋಗ್ಯಕರ ಮೌಲ್ಯಗಳನ್ನು ಬಿಂಬಿಸಬೇಕಾದ ನಮ್ಮ ಮಾಧ್ಯಮಗಳಲ್ಲಿ ಇಂಥ ಪ್ರಜ್ಞಾವಂತ ಬರಹಗಾರರ ದನಿ ಕ್ಷೀಣವಾಗತೊಡಗಿದೆ. ಬಾಯಿಗೆ ಬಂದದ್ದನ್ನು ಒದರುವ, ಕಂದಾಚಾರವನ್ನು ಬಿತ್ತುವ, ಅಲ್ಪಸಂಖ್ಯಾತರ ವಿರುದ್ಧ ವಿಷ ಕಾರುವ ಪುಢಾರಿಗಳ, ಸಾಂಸ್ಕೃತಿಕ ಗೂಂಡಾಗಳ ದುಷ್ಟ ದನಿಗಳು ಅಲ್ಲಿ ಹೆಚ್ಚು ಕೇಳತೊಡಗಿವೆ. ಬಲಪಂಥೀಯ ವಲಯಗಳ ಸೈತಾನರ ಕಾರ್ಖಾನೆಯಲ್ಲಿ ತಯಾರಾಗುವ ವಿತಂಡವಾದಗಳನ್ನು ಸತ್ಯವೆಂದು ಬಿಂಬಿಸಲು ನಮ್ಮ ಮಾಧ್ಯಮಗಳಲ್ಲಿನ ಅರ್ಧಭಾಗದಷ್ಟು ಮಂದಿ ಮಾಡುತ್ತಿರುವ ಸಂಚು ಅತ್ಯಂತ ಅಪಾಯಕಾರಿಯಾಗಿದೆ. ಈ ನೀಚತನದಲ್ಲಿ ಕನ್ನಡನಾಡಿನ ಮೇಲುಜಾತಿಗಳ ಹಾಗೂ ಎಲ್ಲ ಜಾತಿಗಳ ವಿಕೃತ ಅಕ್ಷರಸ್ಥ ಲೋಕ ಭಾಗಿಯಾಗುತ್ತಿರುವುದು ಕನ್ನಡ ಸಂಸ್ಕೃತಿ ಈಚೆಗೆ ತಲುಪುತ್ತಿರುವ ಭಯಾನಕ ಘಟ್ಟಕ್ಕೆ ಸಾಕ್ಷಿಯಂತಿದೆ.

protest2ನಾನು ಬಲ್ಲಂತೆ ಪೂರ್ವಗ್ರಹಗಳನ್ನು ಬಿತ್ತುವವರು ಹಾಗೂ ಪೂರ್ವಗ್ರಹಗಳನ್ನು ಸಮರ್ಥನೆ ಮಾಡುವವರು ಎಂದೂ ಅರ್ಥಪೂರ್ಣ ರೈಟರ್ ಆಗಲಾರರು. ಪೂರ್ವಗ್ರಹಗಳ ವಿರುದ್ಧ ಬರೆಯುವ, ಅವುಗಳನ್ನು ಕದಲಿಸುವ ಛಾತಿಯುಳ್ಳವರು ಮಾತ್ರ ಲೇಖಕನೋ, ಲೇಖಕಿಯೋ ಆಗಬಲ್ಲರು. ಆದರೆ ಈ ಪೂರ್ವಗ್ರಹಗಳನ್ನು ಜಾಣ ವಾದದಲ್ಲಿ ಜೋಡಿಸಿ ಅವಕ್ಕೆ ದಿನನಿತ್ಯ ಪ್ರಚಾರ ಕೊಡುವುದು; ಅದನ್ನೆಲ್ಲ ಪ್ರಜ್ಞಾವಂತ ಚಿಂತಕರು, ಹೋರಾಟಗಾರರು ದಿನನಿತ್ಯ ಪ್ರತಿಭಟಿಸುತ್ತಾ, ಅವಕ್ಕೆ ಪ್ರತಿಕ್ರಿಯೆ ಬರೆದು ತಮ್ಮ ಸಮಯ ವ್ಯರ್ಥ ಮಾಡಿಕೊಳ್ಳಲಿ ಎಂಬುದು ಬಲಪಂಥೀಯ ಗುಂಪುಗಳ ವ್ಯವಸ್ಥಿತ ಹುನ್ನಾರವಾಗಿದೆ. ಅಂದರೆ ಸದ್ಯದ ಕರ್ನಾಟಕದಲ್ಲಿ ದೊಡ್ಡ ರಾಜಕೀಯ ಬದಲಾವಣೆಗಳನ್ನು ತರುವ ಬಗ್ಗೆ ಪ್ರಜ್ಞಾವಂತರು ತಲೆಕೆಡಿಸಿಕೊಳ್ಳದೆ ಮತಾಂತರದ ಹುಸಿ ಸಮಸ್ಯೆಗಳು, ಭೈರಪ್ಪನವರ ಕಾದಂಬರಿ – ಈ ಥರದ ಸಿಲ್ಲಿ ಸಮಸ್ಯೆಗಳ ಬಗೆಗಷ್ಟೇ ತಲೆ ಕೆಡಿಸಿಕೊಳ್ಳಲಿ ಎಂಬುದು ಈ ಆಸಕ್ತ ಹಿತಗಳ ವಲಯದ ಆಶಯ.

protest4ಆದರೆ ಈ ವಲಯಗಳು ಎಷ್ಟು ಪುಕ್ಕಲು ವಲಯಗಳೆಂದರೆ, ಅನಂತಮೂರ್ತಿಯವರು, ‘ಭೈರಪ್ಪ ಒಬ್ಬ ಕಾದಂಬರಿಕಾರನೇ ಅಲ್ಲ’ ಎಂದರೆ ಅದನ್ನು ವಿಮರ್ಶೆಯ ಉಪಕರಣಗಳಿಂದ ಎದುರಿಸಲಾರದೆ ಎಸ್.ಎಂ.ಎಸ್. ಚೀರಾಟ ನಡೆಸಿ ಒಂದು ದಿನದ ‘ವಿಮರ್ಶಾ’ ಗೆಲುವನ್ನು ಸಾಧಿಸಲೆತ್ನಿಸುತ್ತವೆ. ಸಾಹಿತ್ಯವನ್ನು ಕುರಿತು ವ್ಯವಧಾನವಾಗಿ ಚಿಂತಿಸಿ, ಗ್ರಹಿಸಿ, ಪ್ರತಿಕಿಯ್ರಿಸಬೇಕಾದ ಕಡೆ, ಪುಸ್ತಕವನ್ನೇ ಓದದ ಎಸ್.ಎಂ.ಎಸ್. ವಿಮರ್ಶಕರನ್ನು ಸೃಷ್ಟಿಸುವ ನವ ಮ್ಯಾನೇಜ್ಮೆಂಟ್ ಶೈಲಿಯ ಚಿಲ್ಲರೆ ಕೆಲಸಗಳು ಶುರುವಾಗಿವೆ. ಆದರೆ ಈ ವಲಯಗಳು ಎಷ್ಟೇ ತಿಪ್ಪರಲಾಗ ಹೊಡೆದರೂ ಭೈರಪ್ಪನವರಂಥ ಮತೀಯವಾದಿಯನ್ನು ಒಬ್ಬ ದೊಡ್ಡ ಲೇಖಕ ಎಂದು ಕನ್ನಡದ ಪ್ರಜ್ಞಾವಂತ ಜಗತ್ತು ಒಪ್ಪಿಕೊಂಡಿಲ್ಲ ಎನ್ನುವುದು ಇಲ್ಲಿನ ಹೆಗ್ಗಳಿಕೆ. ಬಂಜಗೆರೆ ಜಯಪ್ರಕಾಶರ ‘ಆನುದೇವಾ ಹೊರಗಣವನು’ ಪುಸ್ತಕದ ಬಗ್ಗೆ ಎಷ್ಟೇ ಚೀರಾಟ ನಡೆದರೂ ಅದನ್ನು ಬೆಂಬಲಿಸುವವರ ಸಂಖ್ಯೆಯೂ ಬೆಳೆಯುತ್ತಲೇ ಹೋಯಿತು ಎಂಬುದನ್ನು ಮರೆಯದಿರೋಣ. ‘ಆನುದೇವಾ…’ ಪುಸ್ತಕದ ಸಂದರ್ಭದಲ್ಲಿ ಹಲವು ವೀರಶೈವರು ನಡೆದುಕೊಂಡ ರೀತಿ ಇನ್ನೂ ನಮ್ಮ ಕಣ್ಣ ಮುಂದೆಯೇ ಇದೆ. ಸ್ವತಃ ಜಾತಿ ಬಿಡಬೇಕೆಂದು ಹೊರಟ ಬಸವಣ್ಣ ದಲಿತ ಕುಲದಲ್ಲಿ ಹುಟ್ಟಿರಬಹುದು ಎಂದು ಊಹೆ ಮಾಡಿದ್ದಕ್ಕೇ ವೀರಶೈವರು ಇಷ್ಟೊಂದು ಬೆಚ್ಚುತ್ತಾರೆಂದರೆ, ಅವರ ತಲೆಯೊಳಗಣ ಮೇಲುಜಾತಿಯ ಪ್ರಜ್ಞೆ ಎಷ್ಟು ಭೀಕರವಾಗಿದೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಈ ಸಂಶೋಧನೆಗೆ ಆಧಾರವಿಲ್ಲದಿದ್ದರೆ ಅದನ್ನೇ ಪಾಂಡಿತ್ಯಪೂರ್ಣವಾಗಿ ಮಂಡಿಸಿ ಆ ಪುಸ್ತಕದ ವಾದವನ್ನು ಎದುರಿಸಲಾರದ ವೀರಶೈವ ಸನಾತನಿಗಳು ಪುಸ್ತಕದ ಮುಟ್ಟುಗೋಲಿನವರೆಗೂ ಹೋದರು. ಜಾತಿ ಸಂಘಟನೆಗಳ ನಾಯಕರು ಹಾಗೂ ಮೀಡಿಯಾ ಮ್ಯಾನೇಜರ್ ಗಳು ಸಾಹಿತ್ಯ ಕೃತಿಯ ಅರ್ಹತೆಯನ್ನು, ಶ್ರೇಷ್ಠತೆಯನ್ನು ತೀರ್ಮಾನಿಸುವ ಈ ಠೇಂಕಾರ ಅಪಾಯಕಾರಿಯಾದುದು. ವಿಜ್ಞಾನ, ವೈದ್ಯಕೀಯ, ನ್ಯಾಯಪದ್ಧತಿ, ಇಂಜಿನಿಯರಿಂಗ್, ಕಂಪ್ಯೂಟರ್ ಮುಂತಾದ ಕ್ಷೇತ್ರಗಳಲ್ಲಿ ಹೊಸ ಪುಸ್ತಕ, ಹೊಸ ಆಲೋಚನೆಗಳು ಬಂದಾಗ ಆಯಾ ಕ್ಷೇತ್ರಗಳ ತಜ್ಞರು ಈ ಬಗ್ಗೆ ಅಧಿಕೃತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಒಂದು ಸಾಹಿತ್ಯಕೃತಿ ಅಥವಾ ಸಂಶೋಧನಾ ಕೃತಿ ಬಂದರೆ, ಅದನ್ನು ಓದದೆಯೇ ಯಾರು ಬೇಕಾದರೂ ಅದರ ಬಗ್ಗೆ ನಿರ್ಣಯಾತ್ಮಕವಾಗಿ ಮಾತಾಡಬಹುದು; ಅದರ ವಿರುದ್ಧ ಫರ್ಮಾನು ಹೊರಡಿಸಬಹುದು ಎಂಬುದು ಕಳವಳಕಾರಿ ಬೆಳವಣಿಗೆ.

ಇನ್ನಷ್ಟು

ಓದದ ಪುಸ್ತಕಗಳ ಭಯ

ಗಾಳಿಬೆಳಕು

mmmmನಟರಾಜ ಹುಳಿಯಾರ್

ಬೆಂಗಳೂರು ವಿಶ್ವವಿದ್ಯಾಲಯದ ಸೆಮಿನಾರೊಂದರಲ್ಲಿ ಭಾಷಣಗಳನ್ನು ಕೇಳಿಸಿಕೊಳ್ಳುತ್ತಿದ್ದ ಎಂ.ಎ. ವಿದ್ಯಾರ್ಥಿಯೊಬ್ಬ ಅವತ್ತು ಟೀ ಬ್ರೇಕಿನಲ್ಲಿ ಇವರೆಲ್ಲ ಮಾತಾಡುವುದನ್ನು ಕೇಳಿದರೆ ಇವರೆಲ್ಲಾ ನಿದ್ದೇನೇ ಮಾಡೊಲ್ಲವೇನೋ ಅನ್ನಿಸುತ್ತೆ ಎಂದು ಅಚ್ಚರಿ, ಭಯ ಎರಡೂ ತುಂಬಿದ ದನಿಯಲ್ಲಿ ಹೇಳಿದ. ವಿದ್ಯಾರ್ಥಿಯಾದ ಅವನಿಗೆ ಆ ಸೆಮಿನಾರ್ ಹಕ್ಕಿಗಳು ಹಗಲೂರಾತ್ರಿ ಓದಿ ಅರಗಿಸಿಕೊಂಡಿರಬಹುದಾದ ಪುಸ್ತಕಗಳ ಬಗ್ಗೆ ಭಯವಿತ್ತು! ವೇದಿಕೆಯ ಮೇಲೆ ಯಾವುದೋ ವಸ್ತುವಿನ ಬಗ್ಗೆ ನಿ ರರ್ಗಳವಾಗಿ ಮಾತಾಡುವವರ, ವಿಶ್ಲೇಷಿಸುವವರ ಬಗ್ಗೆ ಅನೇಕರಿಗೆ ಇರುವ ಈ ಭಯ ‘ಪ್ರಾತಿನಿಧಿಕ’ವೆಂದು ಕಾಣುತ್ತದೆ.

ಡಿ.ಆರ್. ನಾಗರಾಜ್ ಅವರ ಬಗ್ಗೆ ಕೆಲವರಿಗೆ ಇಂಥ ಭಯವಿತ್ತು. ಅವರ ಪರಿಚಯವಾದ ಹೊಸತರಲ್ಲಿ ಅವರ ಮನೆಯ ಪುಸ್ತಕಗಳ ರಾಶಿಯನ್ನು ನಿಬ್ಬೆರಗಾಗಿ ನೋಡುತ್ತಾ ಇವನ್ನೆಲ್ಲಾ ಓದಿದೀರಾ ಸಾರ್? ಎಂದೆ. ತಕ್ಷಣ ಡಿ.ಆರ್. ಮತ್ತೆ? Each one of them ಎಂದರು. ಅನಾತೊಲ್ ಫ್ರಾನ್ಸ್ ಎಂಬ ಫ್ರೆಂಚ್ ಲೇಖಕನ ಬೃಹತ್ ಗ್ರಂಥಭಂಡಾರವನ್ನು ನೋಡಿದ ಮುಗ್ಧನೊಬ್ಬ ಇವನೆಲ್ಲಾ ಓದಿದೀರಾ ಸಾರ್? ಎಂದು ಅವನನ್ನು ಕೇಳಿದಾಗ ಆತ ಕೊಟ್ಟ ಉತ್ತರ : ಹತ್ತರಲ್ಲಿ ಒಂದು ಭಾಗ ಕೂಡ ಇಲ್ಲ. ನೀನು ನಿಮ್ಮ ಮನೆಯಲ್ಲಿರುವ ಪಿಂಗಾಣಿ ಪಾತ್ರೆಗಳನ್ನು ದಿನಾಲೂ ಬಳಸುತ್ತೀಯೇನಯ್ಯ? ಹಾಗೇನೇ ಪುಸ್ತಕಗಳ ವಿಚಾರ ಕೂಡ.

book

ಅದಿರಲಿ, ಅವತ್ತು ಡಿ.ಆರ್. ಉತ್ತರ ಕೇಳಿದ ನಂತರ ನಾನು ಮೆಲ್ಲಗೆ ಕಪಾಟಿನಿಂದ ಕೆಲವು ಪುಸ್ತಕಗಳನ್ನು ತೆಗೆದು ನೋಡಿದರೆ ಅಲ್ಲಲ್ಲಿ ಮಾರ್ಕ್ ಮಾಡಿದ ಗುರುತುಗಳಿದ್ದವು. ವಿದೇಶೀ  ಮದ್ಯಪಾನಿಗಳು ಒಂದು ಬಾರ್  ನಲ್ಲಿ ಕೆಲಕಾಲ ಕುಡಿದು ಇನ್ನೊಂದು ಬಾರ್ ಗೆ, ನಂತರ ಮತ್ತೊಂದು ಬಾರ್ ಗೆ  ಜಿಗಿದು ‘ಬಾರ್ ಹಾಪಿಂಗ್’ ಮಾಡುವಂತೆ ಡಿ.ಆರ್. ಕೂಡ ‘ಬುಕಿಂಗ್ ಹಾಪಿಂಗ್’ ಮಾಡಿರಬಹುದೆಂದು ಸಮಾಧಾನ ಮಾಡಿಕೊಳ್ಳಲೆತ್ನಿಸಿದರೂ ಅವರು ಈ ಪುಸ್ತಕಗಳನ್ನೆಲ್ಲಾ ಓದಿ ಮುಗಿಸಿರಬಹುದೆಂಬ ಭಯ ಮಾತ್ರ ಮುಂದುವರಿಯಿತು. ಪುಸ್ತಕವೊಂದರ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು, ಅದನ್ನು ಹತ್ತಾರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳಬಲ್ಲ, ಹಾಗೂ ಯಾವಾಗ ಬೇಕಾದರೂ ಅದನ್ನು ಸಂಗ್ರಹ ರೂಪದಲ್ಲಿ ಹೇಳಬಲ್ಲ ಶಕ್ತಿ ಡಿ.ಆರ್. ಅವರಿಗಿತ್ತು. ಒಮ್ಮೊಮ್ಮೆ ಈ ಶಕ್ತಿಯಿಂದಾಗಿಯೇ ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ತಮ್ಮ ಸರೀಕರಲ್ಲಿ ವಿಚಿತ್ರ ಇರಿಸುಮುರಿಸು ಹುಟ್ಟಿಸಬಲ್ಲವರಾಗಿದ್ದರು. ಒಮ್ಮೆ ಡಿ.ಆರ್. ಶಿಮ್ಲಾಕ್ಕೆ ಹೊರಟಾಗ ‘ಲಂಕೇಶ್ ಪತ್ರಿಕೆ’ಯ ಆಫೀಸಿನಲ್ಲಿ ನಡೆದ ಪುಟ್ಟ ಬೀಳ್ಕೊಡುಗೆ ಪಾರ್ಟಿಯಲ್ಲಿ ಅಗ್ರಹಾರ ಕೃಷ್ಣಮೂರ್ತಿ ತಮ್ಮ ಒಂದು ಕುತೂಹಲಕರ ಕನಸನ್ನು ವರ್ಣಿಸಿದ್ದರು. ಒಂದು ರಾತ್ರಿ ಇದ್ದಕಿದ್ದಂತೆ ಕೃಷ್ಣಮೂರ್ತಿಯವರ ಕನಸಿನಲ್ಲಿ ಪ್ರತ್ಯಕ್ಷವಾದ ಡಿ.ಆರ್. ಯಾವುದೋ ಪುಸ್ತಕವನ್ನು ಕೃಷ್ಣಮೂರ್ತಿಯವರ ಮುಖಕ್ಕೆ ಹಿಡಿದು ಈ ಪುಸ್ತಕ ಓದಿದೀಯಾ ಗುರೂ? ಎಂದು ಗಂಭೀರ ಮುಖಮುದ್ರೆ ಹೊತ್ತು ಕೇಳಿದ್ದರು. ತಾವು ಪುಸ್ತಕಗಳಿಂದ ಪಡೆದ ಜ್ಞಾನವನ್ನು ಅದ್ಭುತ ವಿಶ್ಲೇಷಣೆಗಳಿಗೆ ಬಳಸುತ್ತಿದ್ದ ಡಿ.ಆರ್. ಅದನ್ನು ಇನ್ನೊಬ್ಬರ ಮೇಲೆ ಆಯುಧವನ್ನಾಗಿ ಬಳಸುತ್ತಾರೇನೋ ಎಂಬ ಅನುಮಾನ ಕೂಡ ಅವರ ಪರಿಚಿತರಲ್ಲಿದ್ದದ್ದನ್ನು ಈ ಕನಸು ಸೂಚಿಸುವಂತಿದೆ.

ನಾವು ಎಂ.ಎ.ಯಲ್ಲಿದ್ದಾಗ ಇಡೀ ಕ್ಲಾಸಿನಲ್ಲೇ ಬುದ್ಧಿವಂತನಾಗಿದ್ದ ಸಹಪಾಠಿಯೊಬ್ಬ ನಮ್ಮನ್ನೆಲ್ಲ ಹೆದರಿಸುತ್ತಿದ್ದುದು ಹೆಚ್ಚೂಕಡಿಮೆ ಹೀಗೆಯೇ. ನಾವೆಲ್ಲಾ ಎಲಿಯಟ್ನ ವೇಸ್ಟ್ ಲ್ಯಾಂಡ್ ಎಂಬ ಖಂಡಕಾವ್ಯವನ್ನು ಓದಿ ಮುಗಿಸಿ ಅವುಗಳ ಸಾಲುಗಳನ್ನು ನಾಲಿಗೆಯ ತುದಿಯ ಮೇಲಿಟ್ಟುಕೊಂಡು ನೀವು ಎಲಿಯಟ್ನ ‘ಫೋರ್ ಕ್ವಾಟ್ರೆಟ್ಸ್’ ‘ಪ್ರೂಫ್ರಾಕ್’ – ಇವೆಲ್ಲಾ ಓದಿದ್ದರೆ ಈ ಪದ್ಯ ಹೇಗ್ರಯ್ಯಾ ಅರ್ಥವಾಗುತ್ತೆ? ಎಂದು ಭಯೋತ್ಪಾದನೆಶುರುಮಾಡುತ್ತಿದ್ದ. ನಾವು ಹಾಗೂ ಹೀಗೂ ಅವನು ಹೇಳಿದ ಮೂರು, ನಾಲ್ಕು ಪದ್ಯಗಳನ್ನು ಓದಿಕೊಂಡು ಬಂದರೆ, ಜಾರ್ಜ್ ಸಾಂತಾಯನನ್ನ ಓದಿದೀರೇನ್ರಯ್ಯ, ಅವನು ಎಲಿಯಟ್ ನ ಗುರು. ಮೊದಲು ಅವನನ್ನು ಓದಿಕೊಂಡು ಬನ್ನಿ  ಎನ್ನುತ್ತಿದ್ದ. ನಾವು ಇವನೆಲ್ಲ ಓದಲಾಗದಿದ್ದಕ್ಕೋ ಏನೋ ಅವನು ಕೆಲಕಾಲ ನಮ್ಮೆಲ್ಲರ ದುಃಸ್ವಪ್ನವಾಗತೊಡಗಿದ !

‘ಜ್ಞಾನ’ ಎಂದರೆ ನಾವು ಓದಿರುವೆವೆಂದು ಭ್ರಮಿಸಿದ ಪುಸ್ತಕಗಳ ಸಂಖ್ಯೆ ಎಂಬ ಕಲ್ಪನೆ ಕೂಡ ಇಂಥ ದುಃಸ್ವಪ್ನಗಳಿಗೆ ಕಾರಣವಾಗಿರಬಹುದೇನೋ! ಇಂಡಿಯಾದಲ್ಲಂತೂ ಅನೇಕರಿಗೆ ‘ಪಾಂಡಿತ್ಯ’ವೆಂದರೆ ಗೊತ್ತಲ್ಲ? ಲೈಬ್ರರಿಯಲ್ಲಿ ತಮಗೆ ಸಿಕ್ಕ ಒಂದು ಮುಖ್ಯ ಪುಸ್ತಕ ಯಾರಿಗೂ ಸಿಗದಂತೆ ತಾವೇ ಇಟ್ಟುಕೊಂಡು ಅದರಿಂದ ಆಯ್ದ ಸಾಲುಗಳನ್ನು ಉಲ್ಲೇಖಿಸುತ್ತಿರುವುದು. ಅಕಸ್ಮಾತ್ ನಿಮ್ಮ ಬಳಿ ಸ್ವಲ್ಪ ಹಣವಿದ್ದು ಈಚಿನ ವಿದೇಶಿ  ಪುಸ್ತಕಗಳು ಸಿಕ್ಕರಂತೂ ಮುಗಿದೇಹೋಯಿತು. ಒಬ್ಬ ಪಂಡಿತನಿಗೆ ಇನ್ನೊಬ್ಬ ಪಂಡಿತನ ಬಗ್ಗೆ ಇರುವ ಭಯಗಳಲ್ಲಿ ತನಗೆ ಸಿಕ್ಕಿದ ಪುಸ್ತಕ ಅವನಿಗೆ ಸಿಕ್ಕಿದರೇನು ಗತಿ ಎಂಬುದೂ ಒಂದು! ಯೂನಿವರ್ಸಿಟಿ  ಕ್ಯಾಂಪಸ್ಸಿನಲ್ಲಿ ಅಡ್ಡಾಡುವ ಅನೇಕ ರಿಸರ್ಚ್  ಸ್ಕಾಲರುಗಳ ಮುಖದ ಮೇಲೆ ಸದಾ ಸ್ಥಾಯಿಯಾಗಿರುವ ಭಯ ಕೂಡ ಇದೇ. ಭಾರತದ ಯೂನಿವರ್ಸಿಟಿಗಳಲ್ಲಂತೂ ರಿಸರ್ಚ್ ಸ್ಕಾಲರುಗಳ ಇಡೀ ಸಂಶೋಧನೆಯ ಅವಧಿ ಆ ಪುಸ್ತಕ ಸಿಕ್ಕಿಲ್ಲವಲ್ಲ ಎಂಬ ಭಯದಲ್ಲೇ ಉರುಳಿಹೋಗುತ್ತಿರುತ್ತದೆ.

ಈಗ ಇಂಗ್ಲೀಷಿನಲ್ಲಿ ರಿಸರ್ಚ್ ಮಾಡುವವರಿಗೆ ಇಂಟರ್ನೆಟ್ನಲ್ಲಾದರೂ ಹೇಗೋ ಕೆಲಬಗೆಯ ಸಾಮಗ್ರಿಯಂತೂ ಸಿಕ್ಕೇಬಿಡುತ್ತದೆ. ಆದರೆ ಕನ್ನಡ ಸಾಹಿತ್ಯದಲ್ಲಿ ರಿಸರ್ಚ್    ಮಾಡುವ ಹಾಗೂ ಕೇವಲ ಕನ್ನಡ ಮಾತ್ರ ಬಲ್ಲ ವಿದ್ಯಾ ರ್ಥಿಗಳ ಪಾಡು ಮಾತ್ರ ಯಾರಿಗೂ ಬೇಡ. ಅದಕ್ಕೋ ಏನೋ ಅವರಲ್ಲನೇಕರು ಕೇವಲ ಪುಸ್ತಕ ಶಿಕಾರಿಕಾರರಾಗಿ ಅಥವಾ ಪುಸ್ತಕ ಸಂಗ್ರಹಕಾರರಾಗಿ ಕೊನೆಯಾಗುತ್ತಾರೆ. ನಮ್ಮ ಅನೇಕ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳ ಬಗ್ಗೆ ಒಮ್ಮೆ ಸಿನಿಕ ಮೇಷ್ಟ್ರರೊಬ್ಬ ಮಾಡಿದ ವ್ಯಾಖ್ಯಾನ ಇದು: ನಾಲ್ಕು ವರ್ಷದ ರಿಸರ್ಚ್ ಅವಧಿಯಲ್ಲಿ, ಮೊದಲ ವರ್ಷ : ತನ್ನ ಸಂಶೋಧನೆಯ ವಸ್ತುವಿಗೆ ಅಗತ್ಯವಾದ ಪುಸ್ತಕಗಳ ಹೆಸರು ಬರದುಕೊಳ್ಳುವುದು. ಎರಡನೆಯ ವರ್ಷ : ಆ ಪುಸ್ತಕಗಳನ್ನು ಲೈಬ್ರರಿಗಳಲ್ಲಿ ಹುಡುಕುವುದು, (ಲೈಬ್ರರಿಗಳಲ್ಲಿ ‘ಹುಡುಕುವುದು’ ಎಂದರೆ ಅವು ಸಿಗುವುದಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.) ಅಥವಾ ರಿಸರ್ಚ್  ಕೂಡ ಶ್ರೀಮಂತರ ಲಕ್ಷುರಿಯಾಗಿರುವ ದೇಶದಲ್ಲಿ ಪುಸ್ತಕಗಳಿಗಾಗಿ ಬೇಡುವುದು. ಮೂರನೇಯ ವರ್ಷ : ಹಾಗೆ ಬೇಡಿದ ಪುಸ್ತಕಗಳಲ್ಲಿ ಕೆಲವು ಸಿಕ್ಕರೂ ಸಿಗಬಹುದು. ನಾಲ್ಕನೆಯ ವರ್ಷ : ಕೊನೆಗೂ ಥೀಸಿಸ್ ಮುಗಿಯುವ ಹೊತ್ತಿಗೆ ಆ ಪುಸ್ತಕಗಳಿಂದ ಓಡಿಹೋದರೆ ಸಾಕು ಎನಿಸುತ್ತಿರುತ್ತದೆ

ಇದು ಪೂರ್ಣ ಸತ್ಯವಲ್ಲ ಎಂದು ವಾದಿಸುವವರಿರಬಹುದು; ಆದರೆ ಇದರಲ್ಲಿ ಸತ್ಯವಿಲ್ಲ ಎನ್ನುವ ವೀರರು ಮಾತ್ರ ಯಾರೂ ಇರಲಾರರು. ಮನುಷ್ಯನ ಬಗೆಬಗೆಯ ಭಯಗಳನ್ನು ಕುರಿತು ಮಾತಾಡುವ ಮನಃಶಾಸ್ತ್ರಜ್ಞರು ನಾವು ಓದದ ಪುಸ್ತಕಗಳ ಭಯ ಕುರಿತು ಚಿಂತಿಸಿದಂತಿಲ್ಲವಲ್ಲ ಎಂದು ತಮಾಷೆಯಾಗಿ ಯೋಚಿಸುತ್ತಿರುವಾಗಲೇ, ರಾತ್ರಿ ಮಲಗುವ ಮುನ್ನ ಒಮ್ಮೊಮ್ಮೆ ನನ್ನ ಪುಸ್ತಕದ ಕಪಾಟಿನತ್ತ  ಕಣ್ಣಾಡಿಸಿದರೆ ಹುಟ್ಟುವ ಭಯ ಮೆಲ್ಲಗೆ ಪುಟಿಯತೊಡಗಿತು. ಆ ಭಯ ಏನೆಂದು ನೀವೇ ಊಹಿಸಬಹುದು: ಒಂದೇ ಆಂಗಲ್ ನಲ್ಲಿ ಎಷ್ಟೋ ತಿಂಗಳಿಂದ ಮುಖ ವಾರೆ ಮಾಡಿ ರಾತ್, ದಾಸ್ತೋವ್ಸ್ಕಿ, ಗುಂಟರ್ ಗ್ರಾಸ್ ರ ಕಾದಂಬರಿಗಳು, ಪ್ರತಿವರ್ಷ ಮುಂದಿನ ಬೇಸಿಗೆಗೆ ಓದಿಯೇ ತೀರಬೇಕೆಂದು ಸಂಕಲ್ಪ ತೊಟ್ಟ ‘ವಾರ್ ಅಂಡ್ ಪೀಸ್’ ಮತ್ತು. ಡಿ.ಆರ್. ಕನಸಿನಲ್ಲಿ ಬರುವ ಮುನ್ನ ಇವನೆಲ್ಲಾ ಓದಿ ಮುಗಿಸಬೇಕು..

(ಫೆಬ್ರವರಿ 10, 1999)

ಕಟಕಟೆಯಲ್ಲಿ ಪುಸ್ತಕಗಳು

ಗಾಳಿಬೆಳಕು

mmmmನಟರಾಜ ಹುಳಿಯಾರ್

ಅನಂತಮೂರ್ತಿಯವರ ‘ಅವಸ್ಥೆ’ ಪ್ರಕಟವಾಗಿ ಸಿನಿಮಾ ಆದಾಗ ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ ಕೋರ್ಟಿಗೆ ಹೋದರು. ಈ ಕಾದಂಬರಿಯನ್ನಾಧರಿಸಿದ ಸಿನಿಮಾದಲ್ಲಿ ತಮ್ಮ ಪತಿಯನ್ನು ವಿಕೃತವಾಗಿ ಚಿತ್ರಿಸಲಾಗಿದೆ ಎಂದು ಮಾನನಷ್ಟ ಮೊಕದ್ದಮೆ ಹೂಡಿದರು. ಜೊತೆಗೆ ಗೋಪಾಲಗೌಡರ ಶಿಷ್ಯರೂ ಗಲಾಟೆ ಎಬ್ಬಿಸಿದರು. ಆದರೆ ಸೋನಕ್ಕ ಅತ್ಯಂತ ಸಭ್ಯ ಮಹಿಳೆ. ಭಾವನಾತ್ಮಕವಾಗಿ ಘಾಸಿಗೊಂಡಿರಬಹುದಾದ ಅವರು ಈ ಮಾನನಷ್ಟದ ದಾವೆಯಲ್ಲಿ ಒತ್ತಾಯಿಸಿದ್ದ ಸಾಂಕೇತಿಕ ಪರಿಹಾರ ಒಂದು ರೂಪಾಯಿ ಮಾತ್ರ.

ಇತ್ತ, ತಮ್ಮ ಕಾದಂಬರಿಯನ್ನು ಕೋರ್ಟಿಗೆ ಎಳೆದದ್ದನ್ನು ಕಂಡ ಲೇಖಕ ಅನಂತಮೂರ್ತಿಯವರಿಗೆ ಸಹಜವಾಗಿಯೇ ಷಾಕ್ ಆಯಿತು. ಜೆ.ಪಿ, ಲೋಹಿಯಾ ಮುಂತಾಗಿ ತಾವು ಕಂಡ ಆದರ್ಶವಾದಿ ರಾಜಕಾರಣಿಗಳ ದ್ವಂದ್ವ, ಸವಾಳುಗಳನ್ನೆಲ್ಲಾ ಸೇರಿಸಿ ತಾವು ಹೆಣೆದ ರಾಜಕೀಯ ನಾಯಕನೊಬ್ಬನ ಪಾತ್ರವನ್ನು ಕೇವಲ ಗೋಪಾಲಗೌಡರ ತದ್ರೂಪಿಯೆಂದು ಕರೆದ ತಕ್ಷಣ ಅನಂತಮೂರ್ತಿಯವರಿಗೆ ನೋವಾಯಿತು. ಇದೊಂದು ಸಂಕೀರ್ಣವಾದ ಪಾತ್ರ, ಇದು ನನ್ನ ಸ್ವಂತ ಸೃಷ್ಟಿ ಎಂದು ಅವರು ಕೋರ್ಟಿಗೆ ಮನದಟ್ಟು ಮಾಡಲು ಇದ್ದದ್ದು ಶುದ್ಧ ಸಾಹಿತ್ಯಿಕ ಸಂಕೇತಗಳೇ ಹೊರತು ಪೀನಲ್ ಕೋಡುಗಳಲ್ಲ. ಅತ್ಯಂತ ಮೂರ್ತವಾದ, ಕರಾರುವಕ್ಕಾಗಿ ವಿವರಿಸಲಾದ ಸೂತ್ರಗಳ ಭಾಷೆಯಲ್ಲಿ ವ್ಯವಹರಿಸುತ್ತಾ ಅಪ್ಪಟ ವಾಸ್ತವದಲ್ಲಿ ಮುಳುಗಿರುವ ಕೋರ್ಟಿಗೆ ಕಾಲ್ಪನಿಕ ಕೃತಿಯೊಂದನ್ನು ಪ್ರವೇಶಿಸಲು ಯಾವ ಬಾಗಿಲು ತಾನೇ ಇದ್ದೀತು? ಇಂಥ ಅಪರಾಧದ ಅರ್ಥ ಇಂಥದ್ದು ಎಂದು ವಿವರಿಸಿ ನ್ಯಾಯ ಕೊಡುವ ಸಂಸ್ಥೆಗೆ ಸಂಕೇತ, ಪ್ರತಿಮೆ, ರೂಪಕ, ಕಲ್ಪನೆ, ಸರ್ರಿಯಲಿಸಂ, ಮ್ಯಾಜಿಕ್ ರಿಯಲಿಸಂ – ಇವನೆಲ್ಲ ಮನವರಿಕೆ ಮಾಡಿಕೊಡಬಲ್ಲ ಭಾಷೆಯನ್ನು ಯಾವ ವಿಮರ್ಶಕ ತಾನೇ ರೂಪಿಸಬಲ್ಲ? fact (ವಾಸ್ತವವಿವರಗಳ) ಜೊತೆಗೆ ಮಾತ್ರ ವ್ಯವಹರಿಸುವ ಸಂಸ್ಥೆಗೆ fiction (ಕಲ್ಪನೆಯ) ನ್ಯಾಯಬದ್ಧತೆಯ ಬಗ್ಗೆ ಹೇಗೆ ಮನವರಿಕೆ ಮಾಡಿಕೊಡುವುದು? ಇವೆಲ್ಲ ಪ್ರಶ್ನೆಗಳೂ ಅನಂತಮೂರ್ತಿಯವರನ್ನು ಕಾಡಿರಬಹುದು.

CB068378

ಆಗ ತಮ್ಮಂಥ ಸೃಜನಶೀಲ ಲೇಖಕನ ಕೃತಿಯೊಂದನ್ನು ಕೋರ್ಟಿಗೆ ಎಳೆಯುವುದು ಅನೈತಿಕ ಎಂದು ಅನಂತಮೂರ್ತಿಯವರಿಗೆ ಅನ್ನಿಸುತ್ತದೆ. ಸಾಹಿತ್ಯದ ಸ್ವಾಯತ್ತ ಜಗತ್ತಿನ ಮೇಲೆ ಅಸಾಹಿತ್ಯಿಕ ದಾಳಿ ಮಾಡುತ್ತವೆ ಎಂಬ ರೀತಿಯ ಮಾತುಗಳು ಅವರ ಬಾಯಿಂದ ಸಲೀಸಾಗಿ ಬರುತ್ತವೆ. ಅದಕ್ಕೂ ಹಿಂದೆ ಅವರ ಐವತ್ತನೇ ಹುಟ್ಟುಹಬ್ಬದ ದಿನವೋ ಅಥವಾ ಆ ಹುಟ್ಟುಹಬ್ಬದ ಅಂಗವಾಗಿಯೋ ನಡೆಸಲಾದ ಸೆಮಿನಾರ್ ದಿನ ನಡೆದ ವಿಚಿತ್ರ ಘಟನೆಯೊಂದನ್ನು ಇಲ್ಲಿ ನೆನಪಿಸುತ್ತಿದ್ದೇನೆ. ಅವತ್ತು ಭಾನುವಾರ, ಅಂದಿನ ‘ಕನ್ನಡ ಪ್ರಭ’ದ ಸಾಪ್ತಾಹಿಕದಲ್ಲಿ ಸುಮತೀಂದ್ರ ನಾಡಿಗರು (ಬೇಕೆಂತಲೇ ಆ ಲೇಖನ ಸರಿಯಾಗಿ ಆವತ್ತೇ ಪ್ರಕಟವಾಗುವಂತೆ ಯೋಜಿಸಿ) ಅನಂತಮೂರ್ತಿಯವರು ಕೃತಿಚೌರ್ಯ ಮಾಡಿದ್ದಾರೆ ಎಂದು ಮ್ಯಾಲಮುಡ್ ನ ‘ಮೌರ್ನರ್’ ಕತೆಯ ಭಾಗಗಳನ್ನೂ ‘ಮೌನಿ’ ಕತೆಯ ಭಾಗವನ್ನೂ ಅಕ್ಕಪಕ್ಕಕ್ಕಿಟ್ಟು ತೋರಿಸಿದ್ದರು. ಆಗ ಕೂಡ ಅನಂತಮೂರ್ತಿಯವರಿಗೆ ಹಾಗೂ ನಮ್ಮಂಥ ಅನೇಕ ಸಾಹಿತ್ಯದ ವಿದ್ಯಾರ್ಥಿಗಳಿಗೆ ನಾಡಿಗರ ನಡೆ ಅನೈತಿಕ ಅನಿಸಿತು. ಅಂದು ಕೆಲವು ಹುಂಬ ಸಾಹಿತಿಗಳು ಇದನ್ನು ಕೋರ್ಟಿಗೆ ಹಾಕಬೇಕೆಂದು ಕೂಗಿದ್ದರು. ಆದರೆ ಅನಂತಮೂರ್ತಿಯವರ ವಿದ್ಯಾರ್ಥಿ ಜಿ.ಕೆ.ಗೋವಿಂದರಾವ್ ಅನಂತಮೂರ್ತಿಯವರನ್ನು ಉಗ್ರವಾಗಿ ಸಮರ್ಥಿಸಿ ಇಡೀ ಸಾಹಿತ್ಯವೇ ಒಬ್ಬರಿಂದ ಒಬ್ಬರು ಪಡೆಯುವ ಕೆಲಸ ಎಂದು ಆಧಾರಸಹಿತ ತೋರಿಸಿ ಈ ವಿವಾದ ತಣ್ಣಗಾಗುವಂತೆ ನೋಡಿಕೊಂಡರು. ಅವತ್ತು ಗೋವಿಂದರಾಯರಿಗೆ ಕೃತಜ್ಞರಾಗಿದ್ದ ಅನಂತಮೂರ್ತಿಯವರು ಇದೇ ಗೋವಿಂದರಾವ್ ಅನಂತಮೂರ್ತಿಯವರ ಡಾಲರ್ ಕಾಲನಿ ಮನೆಯ ವಿರುದ್ಧ ಪ್ರತಿಭಟಿಸಿದಾಗ ಅವರನ್ನು ಬಾಯಿಗೆ ಬಂದಂತೆ ಜರೆದರು. ತಮ್ಮ ಬಗ್ಗೆ ಗೋವಿಂದರಾವ್ ಶುದ್ಧ ನೈತಿಕ ಪ್ರಶ್ನೆಯೊಂದನ್ನು ಎತ್ತಿದ ತಕ್ಷಣ ‘ಬೇಕಿದ್ದರೆ ಕೋರ್ಟಿಗೆ ಹೋಗಿ ನೋಡೋಣ’ ಎಂದರು! ನೈತಿಕ ಪ್ರಶ್ನೆಯೊಂದು ಕೋರ್ಟಿನಲ್ಲಿ ಬಗೆಹರಿಯುವುದಿಲ್ಲ ಎಂಬುದು ಅನಂತಮೂರ್ತಿಯವರಿಗೆ ಗೊತ್ತಿರದಿರಲು ಸಾಧ್ಯವೇ? ಅಂದರೆ ತಮ್ಮ ಪತಿಗೆ ಅನ್ಯಾಯವಾಗಿದೆಯೆಂದು ಭಾವನೆಯ ಮಟ್ಟದಲ್ಲಿ ನೊಂದ ಸೋನಕ್ಕ ಕೋರ್ಟಿಗೆ ಹೋದರೆ ಅದು ಅನೈತಿಕ. ಅದೇ ತಾವು ನೈತಿಕ ಪ್ರಶ್ನೆ ಎದುರಿಸಿದಾಗ ಕೋರ್ಟು ಬೇಕು! ಇನ್ನಷ್ಟು

ಕನ್ನಡಿಯಿಂದ ಎಷ್ಟು ದೂರ?

ಗಾಳಿಬೆಳಕು

ನಟರಾಜ ಹುಳಿಯಾರ್

ಮೈಗಾಡ್! ಭಯವಾಗುತ್ತೆ ಎಂದು ಆ ಕಲಾವಿದೆ ಪುಸ್ತಕ ವಾಪಸ್ ಕೊಟ್ಟಳು. ಕೇವಲ ಎರಡು ದಿನದ ಹಿಂದೆ ‘ಶಿವಗಂಗಾ’ ಎಂಬ ಸ್ತ್ರೀವಾದಿ ಕಾದಂಬರಿಯನ್ನು ಆ ಕಲಾವಿದೆಗೆ ಕೊಟ್ಟಿದ್ದೆ. ಫೆಮಿನಿಸ್ಟ್ ಚಳುವಳಿಗಳಲ್ಲಿ ಭಾಗಿಯಾಗಿರುವ ಚಂಪಾವತಿ ಎಂಬ ಇಂಗ್ಲೀಷ್ ಅಧ್ಯಾಪಕಿ ಪ್ರಕಟಿಸಿರುವ ಕಾದಂಬರಿ ಇದು. ತನ್ನ ವರ್ಣಚಿತ್ರಗಳಲ್ಲಿ ಹೆಣ್ಣಿನ ಅಂತರಂಗ ಕುರಿತ ಪ್ರತಿಮೆಗಳನ್ನೇ ಹೆಚ್ಚು ಬಳಸುವ ಕಲಾವಿದೆಯೊಬ್ಬಳಿಗೆ ಈ ಸ್ತ್ರೀವಾದಿ ಕಾದಂಬರಿಯಿಂದ ಒಳ್ಳೊಳ್ಳೆಯ ಐಡಿಯಾಗಳು ಸಿಗಬಹುದು ಎಂಬ ಭ್ರಮೆಯಲ್ಲಿ ನಾನಿದ್ದರೆ, ಆಕೆ ಆ ಕಾದಂಬರಿ ಓದುವುದನ್ನು ಅರ್ಧಕ್ಕೇ ನಿಲ್ಲಿಸಿ, ಹೆದರಿ ಹಿಂದಕ್ಕೆ ಕೊಟ್ಟಿದ್ದಳು.

ಕಳೆದ ತಿಂಗಳು ಈ ಕಾದಂಬರಿಯ ಕೆಲಭಾಗಗಳನ್ನು ಓದಿದಾಗ ಲೇಖಕಿ ಸ್ವಲ್ಪ ಬೋಲ್ಡ್ ಆಗಿ ಬರೆದಿರುವಂತೆ ಕಂಡರೂ ಬಹಳಷ್ಟು ಕಡೆ ಬರವಣಿಗೆ ಹಸಿಹಸಿಯಾಗಿದೆಯೆನ್ನಿಸಿತ್ತು. ಆ ಬಗ್ಗೆ ಏನೂ ಹೇಳದೆ, ಈ ಕಾದಂಬರಿಯಲ್ಲಿ ಹೆಣ್ಣಿನ ಬಗ್ಗೆ ಕಹಿಸತ್ಯಗಳಿವೆ ಎಂದು ಭಯವಾಗಿಯೆ? ಎಂದೆ.

mirror_images

ಅಯ್ಯೋ, ಅದಲ್ಲ.. ನನ್ನ ಹಲ್ಲು ಎಂದು ಕಲಾವಿದೆ ಇಳಿಮುಖ ಮಾಡಿಕೊಂಡಳು. ಅರ್ಥವಾಗಲಿಲ್ಲ.
ಇನ್ನೇನು ಕಣ್ಣಂಚಿನಿಂದ ಹನಿ ಉರುಳಲಿತ್ತು. ಈಚೆಗೆ ಪರಿಚಯವಾದ ಈ ಕಲಾವಿದೆ ಗಂಭೀರ ಮುಖವನ್ನಷ್ಟೇ ಕಂಡಿದ್ದೆನೇ ಹೊರತು ಅಳು ಮುಖವನ್ನು ಕಂಡಿರಲಿಲ್ಲ. ನಿನ್ನ ಹಲ್ಲು ಏನಾಯಿತು? ಅಂದೆ.

ಪ್ರಶ್ನೆ ಮುಗಿಯುವ ಮುನ್ನವೇ ಆಕೆಯ ಕಣ್ಣಿಂದ ನೀರು ಒಸರತೊಡಗಿತು. ಆ ಕಾದಂಬರೀಲಿ ಬರೋ ಗಂಗಾ ಚಿಕ್ಕವಯಸ್ಸಿನಲ್ಲೇ ಎಲ್ಲ ಹಲ್ಲುಗಳನ್ನೂ ಕೀಳಿಸಿಕೋಬೇಕಾಗುತ್ತೆ. ನಾನು ಮೂರು ದಿವಸದಿಂದ ಯಾವ ಮಾತ್ರೆ ತಗೊಂಡ್ರೂ ಹಲ್ಲುನೋವು ನಿಂತಿಲ್ಲ. ಇಷ್ಟು ಚಿಕ್ಕವಯಸ್ಸಿಗೇ ಹಲ್ಲು ಕಳಕೊಂಡ್ರೆ ಎಂದು ಕಲಾವಿದೆ ಸಣ್ಣಗೆ ಬಿಕ್ಕತೊಡಗಿದಳು.

ನಾನು ನಗತೊಡಗಿದೆ. ಅವಳ ಭಯ ಅರ್ಥವಾಗಿತ್ತು. ಆಕೆಗೆ ಹಲ್ಲು ನೋವಿರುವುದು ಮೊದಲೇ ಗೊತ್ತಿದ್ದರೆ ಈ ಕಾದಂಬರಿ ಕೊಡುತ್ತಿರಲಿಲ್ಲ! ಒಮ್ಮೆ ಜರ್ಮನ್ ವಿಮರ್ಶಕ ವಾಲ್ಟರ್ ಬೆಂಜಮಿನ್ ಗೆ ಹುಷಾರಿರಲಿಲ್ಲ. ಅಂದು ಸಂಜೆ ಅವನು ನಾಟಕಕಾರ ಬ್ರೆಕ್ಟ್ ಮನೆಗೆ ಹೋದಾಗ ಏನು ಓದುತ್ತೀಯ? ಎಂದು ಕೇಳುತ್ತಾನೆ ಬ್ರೆಕ್ಟ್ ದಾಸ್ತೋವಸ್ಕಿ ಯ ‘ಕ್ರೈಂ ಅಂಡ್ ಪನಿಷ್ಮೆಂಟ್’ ಓದುತ್ತಿದ್ದೇನೆ ಎನ್ನುತ್ತಾನೆ ಬೆಂಜಮಿನ್. ತಕ್ಷಣ ಹೌಹಾರುವ ಬ್ರೆಕ್ಟ್ ತಾನು ಹರೆಯದಲ್ಲಿ ಬಹುಕಾಲ ನರಳಿದ ಖಾಯಿಲೆಯೊಂದು ಶುರುವಾಗಿದ್ದು ತನ್ನ ಕ್ಲಾಸ್ಮೇಟನೊಬ್ಬ ಷಿಯಾನೋದಲ್ಲಿ ಷಾಪಿನ್ (ಸಾಮಾನ್ಯವಾಗಿ ಕಳವಳ, ವಿಷಾದಗಳ ಭಾವವನ್ನು ಸೃಷ್ಟಿಸುವ ಸಂಗೀತಗಾರ) ನುಡಿಸಿದಾಗ ಎಂದು ನೆನೆಸಿಕೊಳ್ಳುತ್ತಾ ಹೇಳುತ್ತಾನೆ: “ಷಾಪಿನ್ ಮತ್ತು ದಾಸ್ತೋವ್ಸ್ಕಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲರು”.

ಬ್ರೆಕ್ಟ್ ಹೇಳಿದ್ದರಲ್ಲಿ ಅರ್ಧ ತಮಾಷೆ, ಅರ್ಧ ಸತ್ಯ ಎರಡೂ ಇದ್ದಿರಬಹುದು. ಈ ಮಾತನ್ನು ಓದಿದಾಗ, ಖಾಯಿಲೆಯಾದಾಗ ಎಂಥ ಪುಸ್ತಕ ಓದಬೇಕು ಎಂದು ಪ್ರತ್ಯೇಕ ಪಟ್ಟಿಯನ್ನೇ ಮಾಡಿಕೊಳ್ಳಬೇಕೇನೋ ಎನ್ನಿಸಲಾರಂಭಿಸಿತು. ಬೇಂದ್ರೆಯವರ ‘ಒಲವೆ ನಮ್ಮ ಬದುಕು’, ಕಾರಂತರ ‘ಬೆಟ್ಟದ ಜೀವ’, ಕುವೆಂಪು ಅವರ ‘ಕಾನೂರು ಹೆಗ್ಗಡತಿ’, ತೇಜಸ್ವಿಯವರ ‘ಕರ್ವಾಲೋ’, ಲಂಕೇಶರ ‘ಟೀಕೆ-ಟಿಪ್ಪಣಿ’, ಜೇನ್ ಆಸ್ಟಿನ್, ವುಡ್ ಹೌಸ್, ಶೇಕ್ಸ್ಪಿಯರನ ಸಾನೆಟ್ಟುಗಳು ಹೀಗೆ ಖಾಯಿಲೆಯ ಸಮಯದಲ್ಲಿ ತಾಯಿಯಂತೆ ನಮ್ಮನ್ನು ಸಂತೈಸಬಲ್ಲ ಕೆಲವು ಪುಸ್ತಕಗಳು ಹಾಸಿಗೆಯ ಪಕ್ಕದಲ್ಲಿರಬೇಕೆನ್ನಿಸುತ್ತದೆ.

ಆದರೆ ಮೇಲೆ ಹೇಳಿದ ಕಲಾವಿದೆಯ ಸಮಸ್ಯೆ ಒಂದು ಪುಸ್ತಕದ ಪಾತ್ರಗಳು, ಘಟನೆಗಳನ್ನು ನೋಡುವಾಗ ಸರಿಯಾದ ಅಂತರ ಇರಿಸಿಕೊಳ್ಳದ್ದರಿಂದಲೂ ಹುಟ್ಟಿರಬಹುದೆಂದು ಈಗ ಅನ್ನಿಸುತ್ತಿದೆ. ನಾವು ಸಾಹಿತ್ಯವನ್ನು ಕನ್ನಡಿಯೆಂದೂ ಕೈದೀವಿಗೆಯೆಂದೂ ಕರೆದರೂ ಕನ್ನಡಿಯಿಂದ ಎಷ್ಟು ದೂರ ನಿಂತು ಮುಖ ನೋಡಿಕೊಳ್ಳಬೇಕೆಂಬ ಎಚ್ಚರ ಅತ್ಯಂತ ನಿರ್ಣಾಯಕವಾದದ್ದು. ಆದರೆ ನಾವು ಏನೆಲ್ಲ ಅಂತರದ, ವಿಮರ್ಶೆಯ ಮಾತಾಡಿದರೂ ಒಂದು ಕಾದಂಬರಿಯನ್ನೋ, ಕತೆಯನ್ನೋ, ಭಾವಗೀತೆಯನ್ನೋ ಬಹಳಷ್ಟು ಸಲ ಪರ್ಸನಲ್ ಆಗಿಯೇ ಓದುತ್ತಿರುತ್ತೇವೆ. ಒಮ್ಮೆ ‘ಬಾಂಬೆ’ ಎಂಬ ಜನಪ್ರಿಯ ಸಿನಿಮಾ ನೋಡುವಾಗ ತಮಗೆ ಅಳು ಬಂದದ್ದರ  ಬಗ್ಗೆ ಲಂಕೇಶರು ಬರೆದಾಗ, ನನ್ನ ಪರಿಚಿತರೊಬ್ಬರು ಪರವಾಗಿಲ್ಲಯ್ಯ, ನಿಮ್ಮ ಮೇಷ್ಟ್ರು ಕಡು ವಿಚಾರವಾದಿ ಅಂದುಕೊಂಡಿದ್ದರೆ, ಅವರೂ ನಮ್ಮ ಥರವೇ! ಎಂದು ಸಮಧಾನಪಟ್ಟಿದ್ದರು. ಹಾಗಾದರೆ ಒಂದು ಸಿನಿಮಾ ನೋಡುವಾಗ ಕಛೇರಿಗಳಲ್ಲಿ ತಲೆದೂಗುತ್ತಾ ಕೂರುವ ನಾವು ಬರಬರುತ್ತಾ ಯಾಕೆ ತಲೆದೂಗುತ್ತಿದ್ದೇವೆ ಎಂಬುದೇ ಮರೆತು ಹೋಗಿ ಅಭ್ಯಾಸಬಲದಿಂದ ಕತ್ತು ಹಾಕುತ್ತಿರುತ್ತೇವೆ ಎಂದು ಮಿಲನ್ ಕುಂದೇರ ಒಮ್ಮೆ ಹೇಳಿದ್ದ. ಇದೊಂದು ವಿಚಿತ್ರ ಸ್ಥಿತಿ. ನಾಟಕ, ಸಿನಿಮಾ ನೋಡುವಾಗ ಅಥವಾ ಕಾದಂಬರಿ ಓದುವಾಗ ತನ್ಮಯತೆಯಿರದಿದ್ದರೆ ಮನ ಕರಗುವುದಿಲ್ಲ. ಆದರೆ ಮನ ಕರಗಿ ಮಾತುಮಾತಿಗೆ  ಅಳುವವನಿಗೆ ಕೃತಿಯ ನೋಟ ಸಿಕ್ಕುವುದಿಲ್ಲ. ಹಾಗಾದರೆ ಒಂದು ಕೃತಿಯನ್ನು ಖಾಸಗಿ ಅನುಭವದಂತೆ ನೋಡಿಯೂ ವಿಮರ್ಶಾತ್ಮಕವಾಗಿರುವುದು ಸಾಧ್ಯವೆ? ಇನ್ನಷ್ಟು

Previous Older Entries

%d bloggers like this: