ಕಾಸು ಕುಡಿಕೆ -63
ಬೆನ್ನುಬಿಡದ ಬೇತಾಳ-ಪೋಂಜ್ಹೀ ಭೂತ.
ಜಯದೇವ ಪ್ರಸಾದ ಮೊಳೆಯಾರ
ಆಶೆ ಬಲೆಯನು ಬೀಸಿ ನಿನ್ನ ತನ್ನೆಡೆಗೆಳೆದು
ಘಾಸಿನೀಂಬಡುತ ಬಾಯ್ಬಿಡಲೋರೆ ನೋಡಿ
ಮೈಸವರಿ ಕಾಲನೆಡವಿಸಿ ಗುಟ್ಟಿನಲಿ ನಗುವ
ಮೋಸದಾಟವು ದೈವ ಮಂಕುತಿಮ್ಮ||
ಈ ಬಾರಿ ಗುರುಗುಂಟಿರಾಯರ ಬಾಯಲ್ಲಿ ನೀರೂರಿದ್ದು ಮಾತ್ರವಲ್ಲ, ಅಲ್ಲಿಗೆ ಬೋರ್ ಹೊಡೆದು ಒಂದು ಅರ್ಧ ಇಂಚು ನೀರೇ ಸಿಕ್ಕಿದಂತಾಯಿತು. ಕಾರಣ, ಬೆಳಗ್ಗಿನ ಚಳಿಗೆ ದಿನ ಪತ್ರಿಕೆಯ ಹೊದಿಕೆಯೆಡೆಯಲ್ಲಿ ಬೆಚ್ಚಗೆ ಹಾಯಾಗಿ ನಿದ್ದೆ ಹೊಡೆಯುತ್ತಾ ಮನೆಗೆ ಬಂದು ‘ಥಡ್’ ಅಂತ ಬಿದ್ದ ಗರಿ ಗರಿ ಪಾಂಪ್ಲೆಟ್!
ಈ ಪಾಂಪ್ಲೆಟ್ ನಲ್ಲಿ ‘ಬೇತಾಳ ಫೈನಾನ್ಸ್’ ಎಂಬ ಕಂಪೆನಿಯ ವಾರ್ಷಿಕ 120% ಬಡ್ಡಿ ಕೊಡುವಂತಹ ಒಂದು ಫಿಕ್ಸ್ಡ್ ಡೆಪಾಸಿಟ್ ಸ್ಕೀಮಿನ ಒಂದು ಸುಂದರ ಜಾಹೀರಾತು ಇತ್ತು. ಯಾವುದೇ ಸುರಸುಂದರಿಯ ಮುಖಾರವಿಂದವಿಲ್ಲದೆ ಬರೇ ದೊಡ್ಡ ದೊಡ್ಡ ಕುಂಬಳಕಾಯಿ ಅಕ್ಷರಗಳಲ್ಲಿ 120% ಬಡ್ಡಿ ದರದ ಸುವರ್ಣ ಅವಕಾಶ ಅಂತ ಬರೆದುಕೊಂಡು ಇತ್ತು. 120% ಬಡ್ಡಿದರ ಕೊಡ್ಬೇಕಾದ್ರೆ ಯಾವ ಹುಡುಗಿಯ ಮುಖಾರವಿಂದದ ಅಗತ್ಯ ಯಾಕೆ ಬೇಕು ಸ್ವಾಮಿ? ನೀವೇ ಹೇಳಿ. ಜುಜುಬಿ 10-12% ಗಾದ್ರೆ ಹುಡ್ಗೀರ್ ಬೇಕಾಗ್ತಾರೆ. ಇನ್ನೂ ಕಡಿಮೆ ಆದ್ರೆ ಕಿಲ್ಲರ್ ಬಿಪಾಶಾನೇ ಬೇಕು. ಆದ್ರೆ 120 ಕ್ಕೆ ಯಾರೂ ಬೇಡ. ಅಲ್ವೆ? ದುಡ್ಡಿನ ನಶೆಯೇ ಅಂತದ್ದು. ರಾಯರು ಪಂಪ್ಲೆಟ್ ಅನ್ನು ಒಮ್ಮೆ ಕೂಲಂಕುಶವಾಗಿ ಓದಿ ‘ಗ್ಯಾರಂಟಿ ಪ್ರತಿಫಲ’ ಎಂಬಿತ್ಯಾದಿ ವೇದವಾಕ್ಯಗಳನ್ನು ಎರಡೆರಡು ಬಾರಿ ಓದಿ ಭದ್ರತೆಯ ಬಗ್ಗೆ ಖಚಿತ ಪಡಿಸಿಕೊಂಡು ಮನಸ್ಸಿನಲ್ಲಿಯೇ ಆ 120% ಮಂಡಿಗೆ ತಿನ್ನುವ ಸ್ಕೆಚ್ ಹಾಕತೊಡಗುತ್ತಾರೆ.
ಆ ಬಳಿಕ, ಸ್ನಾನಮಾಡಿ ಶುಚೀಭೂತರಾದ ರಾಯರು ತಮ್ಮ ಫೇಸಾರವಿಂದವನ್ನು ಸಿಂಗರಿಸಿ, ಇಲ್ಲದ ಕೂದಲಿನ ತಲೆಯ ಮೇಲೆ ಒಮ್ಮೆ ಶಾಸ್ತ್ರಕ್ಕೆ ಕೂಂಬಾಡಿಸಿ, ತಮ್ಮ ಚರ್ಮದ ಮೆಟ್ಟನ್ನು ಮೆಟ್ಟಿ ಚರ್ ಚರ್ ಎನ್ನಿಸುತ್ತಾ ಬಸ್ಟಾಪಿನ ಕಡೆ ತಮ್ಮ ಪಾದವನ್ನು ಬೆಳೆಸಿದರು. ಕಿಸೆಯಲ್ಲಿ ನೀಟಾಗಿ ನಾಲ್ಕು ಮಡಿಸಿದ ಪಾಂಪ್ಲೆಟ್ ಭದ್ರವಾಗಿ ಕುಳಿತಿತ್ತು. ರಾಯರು ಈ ಬೇತಾಳ ಫೈನಾನ್ಸ್ ಕಚೇರಿಯನ್ನು ತಲಪಿದಾಗ ಬೆಳಗ್ಗೆ ಹತ್ತು ಘಂಟೆಯಾಗಿತ್ತು. ಆಗಾಗಲೇ ಹತ್ತಾರು ಜನ ಫೈನಾನ್ಸ್ ಕಚೇರಿ ತೆರೆಯುವುದನ್ನೇ ಕಾದು ಕುಳಿತಿದ್ದರು.
ಇತ್ತೀಚಿನ ಟಿಪ್ಪಣಿಗಳು