ರಾಜಿನಾಮೆ ಕೊಡಿಸಿದ ಕೋಳಿಸಾರು

ಬಿಳುಮನೆ ರಾಮದಾಸ್

ಒಂದು ಕಾಲದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಂದಾಯ ಇಲಾಖೆಯ ಡಿ.ಸಿಗಳೇ ಡಿ.ಸಿಯಾಗಿರುತ್ತಿದ್ದರು. ಈಗಿನಂತೆ ಇಲಾಖೆಯ ಅಧಿಕಾರಿಗಳಿಗೆ ಬಡ್ತಿ ಕೊಟ್ಟು ಡಿ.ಸಿ ಹುದ್ದೆಗೆ ಏರಿಸಿರಲಿಲ್ಲ.

ಮೈಸೂರು ವಿಭಾಗದಲ್ಲಿ ಕಂದಾಯ ಇಲಾಖೆಯ ಡಿ.ಸಿಯೊಬ್ಬರು ಆಡಳಿತದ ಅಧಿಕಾರಿಯಾಗಿದ್ದರು. ಅವರು ಭಾರಿ ಭ್ರಷ್ಟರಾಗಿದ್ದರು. ಅವರಿಗೆ ನೌಕರರ ವರ್ಗಾವಣೆಯಲ್ಲಿ ಲಂಚವಾಗಿ ಹಣ ಕೊಡದಿದ್ದರೆ ಕೋಳಿಯನ್ನು ತಂದು ಕೊಟ್ಟರೂ ಸಾಕಿತ್ತು. ಅವರಿಗೆ ಕೋಳಿ ಸಾರು ಅಂದರೆ ಬಹಳ ಇಷ್ಟ. ಡಿ.ಸಿ.ಸಾಹೇಬರ ಕಚೇರಿಯ ಗುಮಾಸ್ತನೊಬ್ಬ ಸಾಹೇಬರಿಗೆ ಅನೇಕ ಬಾರಿ ವರ್ಗಾವಣೆಯನ್ನು ಕೇಳಿದರೂ ಸಾಹೇಬರು ಆತನಿಗೆ ವರ್ಗಾವಣೆಯನ್ನು ಕೊಟ್ಟಿರಲಿಲ್ಲ.

ಸುಮ್ಮನೆ ವರ್ಗಾವಣೆ ಕೊಡಲಾಗುತ್ತದೆಯೆ? ಸಾಹೇಬರಿಗೆ ಏನನ್ನಾದರೂ ಕೊಡುವುದಿಲ್ಲವೆ? ನೌಕರನಿಗೆ ಸಾಹೇಬರು ಏನನ್ನಾದರೂ ಕೊಡುವ ಶಕ್ತಿ ಇರಲಿಲ್ಲ. ಮತ್ತು ಡಿ.ಸಿ. ಸಾಹೇಬರ ಕಚೇರಿಯಲ್ಲಿರುವ ನೌಕರರಿಗೆ ಮೇಲಾದಾಯವೇನೂ ಇಲ್ಲದಿದ್ದರಿಂದ ಆತ ಏನನ್ನೂ ಕೊಡಲಾಗಿರಲಿಲ್ಲ. ಸಾಹೇಬರು ತನಗೆ ವರ್ಗಾವಣೆ ಕೊಡದಿದ್ದುದರಿಂದ ಆತ ಸಾಹೇಬರ ಕೆಲಸಕ್ಕೆ ಕೊಡಲಿ ಪೆಟ್ಟು ಕೊಡಲು ನೋಡಿದ.

More

ತೇಜಸ್ವಿಯವರಿಗೆ, ಹಳ್ಳಿಯ ಪರವಾಗಿ ಕೃತಜ್ಞತೆ

– ಕೆ.ಪಿ.ಸುರೇಶ್

2007041301830301ಉದ್ಯೋಗ ತೊರೆದು ಮಲೆನಾಡಿನ ಮೂಲೆಗೆ ಬಂದು ಕುಳಿತ ನನ್ನಂಥವನಿಗೆ ತೇಜಸ್ವಿ ದಕ್ಕಿದ ಬಗೆ ನನಗೂ ಕéತುಕವೇ.

ನಾನು ಊರಿಗೆ ಮರಳುವ ವೇಳೆಗೆ, ತೇಜಸ್ವಿಯವರಿಂದ ವಾಚಾಮಗೋಚರ ಬೈಸಿಕೊಳ್ಳುವಷ್ಟು ನಾನು ಅವರಿಗೆ ಆತ್ಮೀಯನಾಗಿದ್ದೆ. ಅದು ಅಷ್ಟೇನೂ ಮುಖ್ಯವಲ್ಲ. ಅದರೆ ಊರಿಗೆ ಬಂದು, ಹಳ್ಳಿಯ ಸಂಕಷ್ಟಗಳನ್ನು, ಕೃಷಿಯ ದ್ರಾಬೆ ಕಷ್ಟಗಳನ್ನು ಊರವರೊಂದಿಗೆ ಅನುಭವಿಸುತ್ತಾ ಅರಿತಾಗಲೇ ತೇಜಸ್ವಿ ನನಗೆ ಮುಖ್ಯವಾದದ್ದು.

ಎರಡು ಮೂರು ಸಂದರ್ಭಗಳನ್ನು ಇಲ್ಲಿ ದಾಖಲಿಸುವುದು ಒಳ್ಳೆಯದು-

1)  ‘ಈಗ್ಗೆ 15 ವರ್ಷಗಳ ಮೊದಲು ಪ್ರಾಯಶಃ ರಾಜ್ಯದಲ್ಲೇ ಮೊದಲು, ಪರ್ಯಾಯ ಕೃಷಿ ವಿಧಾನಗಳ ಬಗ್ಗೆ ನಮ್ಮೂರಲ್ಲಿ ಕಮ್ಮಟವೊಂದನ್ನು ಏರ್ಪಡಿಸಿ, ನಾರಾಯಣರೆಡ್ಡಿ ಮತ್ತಿತರರನ್ನು ಕರೆದು, ತೇಜಸ್ವಿಯವರನ್ನು ಆಹ್ವಾನಿಸಿದ್ದೆವು. ಹಿಂದಿನ ನಾಲ್ಕು ವರ್ಷಗಳ ಪರಿಚಯ, ಸಲಿಗೆಯ ಮೇಲೆ ನಾನು ದಮ್ಮಯ್ಯ ಹಾಕಿದ್ದೆನಾದರೂ, ಅವರ ಬಂದಾರೆಂಬ ಧೈರ ಇರಲಿಲ್ಲ. ಕಾರ್ಯಕ್ರಮದ ದಿನ, ಎರಡು ಕಾರುಗಳಲ್ಲಿ ತಮ್ಮ ಶ್ರೀಮತಿಯವರನ್ನು ಒಂದಷ್ಟು ಆಸಕ್ತರನ್ನು ತುಂಬಿಕೊಂಡು ತೇಜಸ್ವಿ ಹಾಜರಾಗಿದ್ದರು. ಕಾರಲ್ಲಿ ಬಂದ ಅವರಿಗೆ ಟಿ.ಎ. ಕೊಡುವ ಸ್ಥಿತಿಯಲ್ಲಿ ನಾವಿರಲಿಲ್ಲ. ಅಂತೂ ಕವರಲ್ಲಿ ಎಷ್ಟೋ ಕಾಸು ಮಡಗಿ ಕೈಗಿತ್ತರೆ, ನೀವೇ ಓತ್ಲಾ ಹೊಡಿತಿದೀರಾ.ಇಟ್ಕಳ್ರಯ್ಯಾ ಎಂದು ನಕ್ಕು ವಾಪಾಸು ಮಾಡಿದ್ದರು.’

2) ನಮ್ಮೂರಿನ ಸೇತುವೆ ಬಗ್ಗೆ ಕಂಡ ಕಂಡ ಕಚೇರಿ ಸುತ್ತಿ ನಾನು ಸೋತಿದ್ದೆ. ಗ್ರಾಮಗಳ ಅಭಿವೃದ್ಧಿ ಕಾಮಗಾರಿ ಚಕ್ರವ್ಯೂಹದ ಬಗ್ಗೆ ನಾನೀಗ ಪಾರಂಗತ; ಅದು ಒತ್ತಟ್ಟಿಗಿರಲಿ, ತೇಜಸ್ವಿಯವರಿಗೆ ನಮ್ಮ ಕಷ್ಟ ಹೇಳಿದೆ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿದ್ದ ಸ್ವಣರ್ಾ ಪ್ರಭಾಕರ್ ಅವರಿಗೆ ತೇಜಸ್ವಿ ಒಂದು ಪತ್ರ ಬರೆದರು, ತೇಜಸ್ವಿ ಪತ್ರ ಬರೆದಿದ್ದರೆ ಎಂಬ ಸಂಭ್ರಮಕ್ಕೆ ಪ್ರಾಯಶಃ ಅನುದಾನ ಮಂಜೂರಾಗಿ, ಸೇತುವೆ ಆಯಿತು.

3) ಶಾಲಾಭಿವೃದ್ಧಿ ಸಮಿತಿಗಳಿಗೆ ಆಯ್ಕೆ ಮಾಡುವ ಅಧಿಕಾರವನ್ನು ಶಾಸಕರಿಗೆ ನೀಡುವ ದುರುಳ ನಿಧರ್ಾರವನ್ನು ಎಸ್.ಎಂ.ಕೃಷ್ಣ ಸಕರ್ಾರ ಕೈಗೊಂಡಿತ್ತು. ಸ್ಥಳೀಯವಾಗಿ ನಾವು ಪ್ರತಿಭಟನಾ ನಿರ್ಣಯ ಕೈಗೊಂಡರೂ ಅದಕ್ಕೇನೂ ಬೆಲೆ ಬರಲಿಲ್ಲ. ನಾನು ಈ ವಿಚಾರವನ್ನು ಅನಂತಮೂತರ್ಿ ಮತ್ತು ತೇಜಸ್ವಿಯವರ ಗಮನಕ್ಕೆ ತಂದೆ. ಅನಂತಮೂತರ್ಿ ನೇರ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದರು. ತೇಜಸ್ವಿ ನೇರ ವಿಶ್ವನಾಥ್ ಅವರಿಗೆ ಫೋನಿನಲ್ಲಿ ತಗಲಿಕೊಂಡು ಉಗಿದರಂತೆ. ಮುಂದಿನ ಶೈಕ್ಷಣಿಕ ಮಾರ್ಗದಲ್ಲಿ ಈ ತಲೆಹೋಕ ಆಜ್ಞೆ ರದ್ದಾಯಿತು! ಈ ಸಕರ್ಾರ ಮತ್ತೆ ಈ ದುರುಳ ಅಧಿಕಾರವನ್ನು ಚಾಲ್ತಿ ಮಾಡಿದೆ.

2007041301820301

ಆದರೆ ಈ ಬಾರಿ ಸಣ್ಣ ಊರುಗಳಲ್ಲಿ ಪುಢಾರಿ ಪಕ್ಷರಾಜಕೀಯ ಬೇರೂರಿದ್ದನ್ನು ನಾನು ಗಮನಿಸಿ, ತೇಜಸ್ವಿಯವರಿಗೆ ತಿಳಿಸಿದೆ. ಅವರು ವಿಷಾದದಲ್ಲಿ ‘ತಗೊಳಪ್ಪಾನಂದೂ ಲೆಟರ್. ಇವೆಲ್ಲ ಹೇಳೋ ಮಾತಿಗೆ ಬೆಲೆ ಇಲ್ಲಾಂತಾದ್ರೂ ದಾಖಲೆ ಆಗಲಿ.! ಎಂದು ವಿಷಾದದಲ್ಲಿ ಹೇಳಿದ್ದರು.

ತೇಜಸ್ವಿಯವರು ತಮ್ಮ ವ್ಯಕ್ತಿತ್ವದ ಶಕ್ತಿಯ ಒಂದು ಭಾಗವನ್ನು ತಾವು ನಿತ್ಯ ಗಮನಿಸುತ್ತಿದ್ದ ಗ್ರಾಮೀಣ ಸಂಕಷ್ಟದ ನಿವಾರಣೆಗೆ ನೀಡುತ್ತಿದ್ದುದು ನನಗೆ ಗೊತ್ತು.

ಫುಕವೋಕಾನ ಬಗ್ಗೆ ಪುಸ್ತಕ ಬರೆದರು. ರೈತಾಪಿ ಕಷ್ಟದ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮೂರಿನಂಥ ಅನಾಮಿಕ ಹಳ್ಳಿಗಳ ಕಷ್ಟಕ್ಕೆ ಸ್ಪಂದಿಸಿದರು.

ಹಾಗೇ, ನನ್ನಂಥವನು ಪ್ರಯೋಗದ ಹುಂಬುಹಾದಿಯಲ್ಲಿ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಾಗ ದುಗುಟಪಟ್ಟರು.

‘ನೋಡಯ್ಯಾ, ಎಲ್ಲಾ ಫ್ಲಾಗ್ ಹಿಡ್ಕಂಡ್ ಸಿಟಿ ಸೇರಿದ್ರು, ಅಲ್ಲಿಂದ್ಲೇ ರಿಲೇ ಮಾಡ್ತಿದಾರೆ’ ಎಂದು ಹೋರಾಟಗಾರ ಬುದ್ಧಿ ಜೀವಿಗಳ ಬಗ್ಗೆ ವ್ಯಗ್ರರಾಗಿ ಹೇಳುತ್ತಾ ‘ಹಳ್ಳೀಲಿರೋದು ಮುಖ್ಯವಲ್ಲಾ, ಸದಾ ವಿರೋಧ ಪಕ್ಷವಾಗಿರೋದು ಮುಖ್ಯ. ನೀ ಏನಾದ್ರೂ ಕಾಸನ್ನು ತಿಂದೇ ಮತ್ತೇ ನೀನೂ ಅವ್ರಂಗೇ ಆಗ್ತೀಯ’ ಎನ್ನುತ್ತಿದ್ದರು.

ಕೃಷಿಯ ನಿತ್ಯ ಆತಂಕ, ಜಂಜಾಟದ ಗ್ರಾಮೀಣ ಬದುಕು ಅಂಚಿಗೆ ಸರಿಯುತ್ತಿರುವ ಈ ದುಷ್ಕಾಲದಲ್ಲಿ, ಅಕ್ಷರ ಬಲ್ಲ ನಾನು ನನ್ನೂರಿಗೆ ಧ್ವನಿಯಾಗಿ, ನನ್ನಂಥೋರಿಗೆ ತೇಜಸ್ವಿ ಧ್ವನಿಯಾಗಿ, ಬೆಂಗಳೂರಿಗೆ ಕೇಳಿಸುವ ಸಾಧ್ಯತೆಯೇ ನಮಗೊಂದು ಆಶಾಕಿರಣವಾಗಿತ್ತು.

ಈಗ ಪ್ರೋಫೆಸರ್ ನಂಜುಂಡಸ್ವಾಮಿ ಸುಂದರೇಶ್, ತೇಜಸ್ವಿ ಹೀಗೆ ಹಳ್ಳಿಗಳ ಸಂಕಟಕ್ಕೆ ದನಿಯಾಗುವವರು ಎದ್ದು ಹೋಗುತ್ತಿದ್ದಂತೆ.. ದುಗುಡ ಹೆಚ್ಚುತ್ತಿದೆ.

ಚಿತ್ರಗಳು: ದಿ ಹಿಂದೂ

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ

pic_cinema01ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ ಗ್ಯಾಲರಿಗಳಲ್ಲಿ ಕೂತು ಸಿನಿಮಾ ನೋಡುತ್ತಾ ಬಂದವನು. ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯಕುಮಾರ್,ಲೀಲಾವತಿ, ಭಾರತಿ, ಜಯಂತಿ ನನ್ನ ಊಹೆಯ ಮತ್ತು ಕನಸಿನ ಲೋಕವನ್ನು ತೆರೆಯುತ್ತಿದ್ದ ಜನರು. ನಾನು ಲಂಕೇಶರ ಸಿನಿಮಾಗಳಿಗೆ ಕೆಲಸ ಮಾಡುತ್ತಲೇ ಇತರರ ಕೆಲವು ಸಿನಿಮಾಗಳಿಗೆ ಕೆಲಸ ಮಾಡಿದ್ದೆ. ಲಂಕೇಶರ ಸಿನಿಮಾಗಳು ಮತ್ತು ನಾನು ತೆಗೆದ ಸಿನಿಮಾ, ಸಾಕ್ಯ್ಷಚಿತ್ರಗಳು, ಧಾರಾವಾಹಿ ಮುಂತಾಗಿ ಕೆಲವು ಅನುಭವ, ನೆನಪುಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

ಎಸ್.ರಾಮಸ್ವಾಮಿ ಈಗಾಗಲೇ ಇಬ್ರಾಹಿಂ ಜೊತೆ ಸೇರಿಕೊಂಡು ಕನ್ನಡ ರಂಗಭೂಮಿಯ ಮೈಲಿಗಲ್ಲಾದ-ಸಂಕ್ರಾಂತಿ, ದೊರೆ ಈಡಿಪಸ್, ಜೋಕುಮಾರಸ್ವಾಮಿ ನಾಟಕಗಳನ್ನು ಬೆಂಗಳೂರಿನಲ್ಲಿ ಆಡಿಸಿದ್ದರು. ಶಿರಾಳಕೊಪ್ಪದಲ್ಲಿ ಜಮೀನಿದ್ದು, ಶಿವಮೊಗ್ಗ ಬಿಟ್ಟು ಬೆಂಗಳೂರಿಗೆ ವಾಸ ಬದಲಿಸಿದ್ದರು. ಅವರು ಸತ್ಯುರವರ ‘ಕನ್ನೇಶ್ವರರಾಮ’ ಮಾಡಿದಂದಿನಿಂದಲೂ ನನಗೆ ಪರಿಚಿತರು. 1978-79ರಲ್ಲಿ ಅವರಿಗೆ ಒಂದು ಸಿನಿಮಾ ಚಿತ್ರಕತೆ ಬರೆಯುವ ಅವಕಾಶ ಬಂತು. ಸರಿ, ಕೆಲಸವಿಲ್ಲದ ನನ್ನನ್ನು ಅವರ ಸಹಾಯಕ್ಕಾಗಿ ಆರಿಸಿಕೊಂಡರು. ಇಷ್ಟೆಲ್ಲಾ ದೀರ್ಘ ಮುನ್ನುಡಿ ಏಕೆಂದರೆ, ಆ ಸಿನಿಮಾದಲ್ಲಿ ಕಲ್ಯಾಣ್ ಕುಮಾರ್ ಉದಯಕುಮಾರ್, ಭಾರತಿ ನಟಿಸಿದರು.

ಆ ಚಿತ್ರದ ಹೆಸರು ‘ಚಿತ್ರಕೂಟ’. ಅದರ ನಿರ್ದೇಶಕರು ಗೌರಿಸುಂದರ್, ಮೃದುಮಾತಿನ ಇನ್ನೂಬ್ಬರ ಮನಸ್ಸನ್ನು ನೋಯಿಸದ ಗೌರಿಸುಂದರ್ ನನಗೆ ತಿಳಿದಂತೆ ಚಿತ್ರ ನಿರ್ಮಾಣ ಬಿಟ್ಟು ಈಗ ಪುಸ್ತಕ ಪ್ರಕಾಶನ ಮಾಡುತ್ತಿದ್ದಾರೆ. ಬೆಂಗಳೂರಿನ ಮಿನರ್ವದ ಕಾಮತ್ ಹೋಟೇಲಿನಲ್ಲಿ ನಮಗೆಲ್ಲಾ ಹಾಡುಗಳ ಸಂಯೋಜನೆ ಮತ್ತು ಚಿತ್ರಕಲೆ ತಯಾರಿಸಲು ಒಂದು ರೂಂ ಮಾಡಿದ್ದರು. ಮೈಸೂರು ಅನಂತಸ್ವಾಮಿ ಸಂಗೀತ ನಿರ್ದೇಶಕರು.

pic_cinema01ಚಿತ್ರದ ಸಂಕ್ಷಿಪ್ತ ಕತೆ-ಸಣ್ಣ ಊರಿನ ಒಂದು ಟೆಂಟ್ ನಲ್ಲಿ ಚಿಕ್ಕವಳಾಗಿದ್ದಾಗಳಿಂದ ಆಪರೇಟರೊಬ್ಬನ ಆರೈಕೆಯಲ್ಲಿ ಬೆಳೆದ ನಾಯಕಿ ಅಲ್ಲಿಗೆ ಬಂದ ಶೂಟಿಂಗ್ ನವರ ಕಣ್ಣಿಗೆ ಬಿದ್ದ ನಾಯಕಿಯಾಗುತ್ತಾಳೆ. ಅವಳ ಬದುಕು, ಕಷ್ಟ ಮತ್ತು ಪ್ರೇಮ, ಇದೇ ಹಂದರ.

ಬೆಳಗ್ಗೆ ಗೌರಿಸುಂದರ್ ಬರುತ್ತಿದ್ದರು. ಮೂರು ಜನ ಮಾತಾಡುವುದನ್ನು ನಾನು ಲೇಖನಿಗಿಳಿಸುತ್ತಿದ್ದೆ. ಕೆಲಸದಲ್ಲಿದ್ದ ಆನಂತಸ್ವಾಮಿ ಸಂಜೆ ಹೋಟೇಲಿಗೆ ಬರುತ್ತದ್ದರು. ಹೊಸ ರಾಗಗಳನ್ನು ಅನ್ವೇಷಿಸುವ ಮೊದಲು ಹಳೆಯ ನೆಚ್ಚಿನ ಹಾಡುಗಳನ್ನು ಹಾಡುತ್ತಿದ್ದರು ಹಾರ್ಮೋನಿಯಂ ಮುಂದೆ ಅವರು ತಲ್ಲೀನರಾಗುವ ಅವರ ಕ್ರಮ ಮತ್ತ ಉತ್ತಮ ಕವನಗಳ ಮೇಲಿದ್ದ ಅವರ ಪ್ರೀತಿ ನನಗೆ ಸದಾ ಹಸಿರು. ಕತ್ತಲು ಜಾಸ್ತಿಯಾದಂತೆ ರಾಮಸ್ವಾಮಿ ಕಳಚಿಕೊಳ್ಳಲು ನೋಡುತ್ತಿದ್ದರು. ಏಕೆಂದರೆ ರಂ ಬಾಟಲ್ ಬರುವ ಸಮಯವಾಗುತ್ತಿತ್ತು. ಗುಂಡು ಹಾಕದ ಅವರು, ಕುಡಿಯುವ ನನ್ನನ್ನು ಸಂಗೀತದೊಟ್ಟಿಗೆ ಬಿಟ್ಟು ಹೋಗುತ್ತಿದ್ದರು.

ರಾಮಸ್ವಾಮಿ, ಅನಂತಸ್ವಾಮಿ, ಪಾರ್ಥಸಾರಥಿ, ನಿಸಾರ್ ಅಹಮದ್ ಬಹಳ ಸ್ನೇಹಿತರು. ಗಾಂಧಿಬಜಾರಿನಲ್ಲಿ ಸೇರುತ್ತಿದ್ದರು. ಇವರು ಸೇರಿ ಪ್ರಥಮ ಕ್ಯಾಸೆಟ್ ‘ನಿತ್ಯೋತ್ಸವ’ ನಿರ್ಮಿಸಿದ್ದನ್ನು ಹತ್ತಿರದಿಂದ ನೋಡಿದ್ದೇನೆ.

ಮೊದಲು ಮೂಲ ಕತೆಯನ್ನು ಹಿಗ್ಗಿಸಿ ದೃಶ್ಯಗಳಿಗೆ ಸಂಬಾಷಣೆ ಬರೆಯುವುದೆಂದು ತೀರ್ಮಾನಿಸಿದೆವು. ಗೌರಿಸುಂದರ್ ಮೂಲಕತೆಯನ್ನು ತಂದುಕೊಟ್ಟರು. ರಾಮಸ್ವಾಮಿ ಬಹಳ ವಿನೋದಪ್ರಿಯರಾಗಿದ್ದು ಅವರು ಹೂಸುವುದನ್ನೇ ಅಗಾಗ ಸುದ್ದಿ ಮಾಡಿ ಅದನ್ನು ಬಿಟ್ಟು ನಾವು ರೂಂನಿಂದ ಹೊರಹೋಗುವಂತೆ ಮಾಡುತ್ತಿದ್ದರು. ಕತೆ ಓದುತ್ತಾ ಒಬ್ಬರೇ ನಗಾಡತೊಡಗಿದರು. ‘ಇಲ್ಲಿ ನೋಡು’ಎಂದು ಮೂಲಕತೆ ಕೊಟ್ಟರು. ಅದರಲ್ಲಿ ಹುಡುಗಿಯಾಗಿರುವ ನಾಯಕಿ ದನ ಮೇಯಿಸುವುದು ಮುಂತಾಗಿ ಮಾಡುತ್ತಿರುತ್ತಾಳೆ ಕರುವೊಂದನ್ನು ಹಿಡಿದುಕೊಂಡು ಬರುತ್ತಿರುವಾಗ ದೃಶ್ಯ ಬದಲಾಗಿ ಅವಳು ದೊಡ್ಡವಳಾಗಿ ಹಸುವನ್ನು

ಹಿಡಿದುಕೊಂಡು ಬರುವ ದೃಶ್ಯ ಕಂಡುಬರುತ್ತದೆ, ಎಂದು ಬರೆದು ಹಸು(ಹೆಣ್ಣು) ಎಂದು ಒತ್ತುಕೊಟ್ಟು ತಿದ್ದಿದ್ದು ಕೊಂಡು ಎಲ್ಲರೂ ನಕ್ಕರು. ಹಸು ಹೆಣ್ಣಲ್ಲದೆ ಗಂಡಾಗಿರುತ್ತದೆಯೇ?

pic_cinema01ಗೌರಿಸುಂದರ್ ಒಬ್ಬರೇ ಚಿತ್ರ ನಿರ್ಮಿಸಿದರೆಂದು ಕಾಣುತ್ತದೆ. ನಮ್ಮನ್ನೆಲ್ಲಾ ಹಣಕಾಸು ಊಟತಿಂಡಿಗಳಲ್ಲಿ ಚೆನ್ನಾಗೇ ನೋಡಿಕೊಂಡರು. ಹಾಗಾಗಿ ಅವರ ಕಷ್ಟ ನಮ್ಮ ಕಷ್ಟ ಅನ್ನುವ ಮಟ್ಟಕ್ಕೆ ನಾವೂ ಸಹ ಇದ್ದೆವು. ಚಿತ್ರಕತೆ-ಸಂಬಾಷಣೆ ಎಲ್ಲಾ ತಯಾರಾಯಿತು. ಎಲ್ಲರಿಗೂ ಕತೆ ಹೇಳುವ ಮತ್ತು ಅವರ ಅಭಿಪ್ರಾಯ ಕೇಳುವ ಸರದಿ ನಮಗೆ ದೊರೆಕಿತು. ನನಗೆ ನನ್ನ ಬಾಲ್ಯದ ಕನಸು ಹೀಗೆ ಯೌವನದಲ್ಲಿ ನಿಜವಾಗಿ ಕಂಡು ಉದಯಕುಮಾರ್, ಕಲ್ಯಾಣ್ ಕುಮಾರ್, ಭಾರತಿ ಅವರನ್ನು ಸಾಕ್ಷಾತ್ ಕಂಡು ಒಡನಾಡುವ ಗಳಿಗೆ ದೊರಕಿಬಿಟ್ಟಿತು. ಕೆಲವೊಮ್ಮೆ ನಿರ್ದೇಶಕರೇ ಕತೆ ಮುಂತಾಗಿ ಹೇಳುತ್ತಿದ್ದರು. ಭಾರತಿಯವರಿಗೆ ಮಾತ್ರ ನಾವು ಕತೆ ಹೇಳಬೇಕಾಗಿ ಬಂದಿತ್ತು. ಅವರು ಕತೆಯೆಲ್ಲಾ ಕೇಳಿ ‘ಸರಿ, ಆ ಚಿಕ್ಕ ಹುಡುಗಿಯ ಪಾತ್ರ ಯಾರ ಕೈಯಲ್ಲಿ ಮಾಡಿಸುತ್ತೀರಾ?’ ಎಂದು ಪ್ರಶ್ನೆ ಹಾಕಿದರು. ನಾವು ಅದು ನಿರ್ದೇಶಕರಿಗೆ ಬಿಟ್ಟ ವಿಚಾರವೆಂದೆವು. ಅವರು ಸ್ವಲ್ಪ ಹೊತ್ತು ಯೋಚಿಸಿ ‘ನೋಡಿ ಇಷ್ಟು ಒಳ್ಳೆ ಕತೆ, ಹುಡುಗಿ ದೊಡ್ಡವಳಾದ ಮೇಲೆ ನನ್ನ ತರ ಕಾಣಬೇಕಲ್ಲವೇ ಇನ್ನೇನು ಮಾಡಲಿಕ್ಕೇ ಆಗುತ್ತೇ ಅಲ್ವಾ. ನಿರ್ವಾಹವಿಲ್ಲದೆ ನಾನೇ ಲಂಗ ಹಾಕಿಕೊಂಡು ಮಾಡ್ತೇನೆ ಬಿಡಿ..’ ಅಂದರು.

ನಾನು, ರಾಮಸ್ವಾಮಿ ಮುಖಮುಖ ನೋಡಿಕೊಂಡೆವು. ನಂತರ ನಿರ್ದೇಶಕರು ಅವರನ್ನು ಒಪ್ಪಿಸಿದ ನಂತರ ಕನ್ನಡಪ್ರಭದ ನಾರಾಯಣಸ್ವಾಮಿಯವರ ಮಗಳು ಅಪರ್ಣರನ್ನು ಆ ಪಾತ್ರಕ್ಕೆ ಹಾಕಿದರು.

More

ಕನ್ನಡಕ್ಕೆ ಅವರು ಇನ್ನೇನು ಕೊಡಬೇಕಿತ್ತು?

nsshankarಎನ್ ಎಸ್ ಶಂಕರ್ ತಮ್ಮ ಚಿತ್ರಗಳ ಮೂಲಕ ಎಲ್ಲರಿಗೂ ಪರಿಚಿತರು. ಅಷ್ಟೇ ಅಲ್ಲ, ಶಂಕರ್ ಉತ್ತಮ ವಿಶ್ಲೇಷಣೆಗೂ ಹೆಸರಾದವರು ಸುದ್ದಿ ಸಂಗಾತಿ, ಮುಂಗಾರು ಪತ್ರಿಕೆಗಳಲ್ಲಿ ಇವರು ಒತ್ತಿದ ಛಾಪು ಮರೆಯಲಾಗದ್ದು.

‘ಕನ್ನಡ ಟೈಮ್ಸ್’ ಪತ್ರಿಕೆಗೆ ಶಂಕರ್ ಅವರು ರಾಜ್ ಬಗ್ಗೆ ಬರೆದ ಬರಹ ಇಲ್ಲಿದೆ. ರಾಜ್ ಅವರ ಹುಟ್ಟು ಹಾಗೂ ಸಾವು ಎರಡನ್ನೂ ಕಂಡ ಈ ಎಪ್ರಿಲ್ ತಿಂಗಳಲ್ಲಿ ಶಂಕರ್ ಅವರ ಈ ಲೇಖನ ಮತ್ತೆ ಅವರ ಹಿರಿಮೆಯನ್ನು ಸಾರುತ್ತಿದೆ.

ರಾಜ್ ಕೊಟ್ಟಿದ್ದು

-ಎನ್.ಎಸ್.ಶಂಕರ್

_41553690_raj203bapನಾನು ಮಾದ್ಯಮಿಕ ಶಾಲೆಯಲ್ಲಿದ್ದೆನೆಂದು ತೋರುತ್ತದೆ; ಪಾಂಡವಪುರದಲ್ಲಿ. ರಾಜ್ ಕುಮಾರ್ ಯಾವುದೋ ಸಮಾರಂಬಕ್ಕೆ ಆ ಊರಿಗೆ ಬಂದಿದ್ದರು. ಆ ವೇಳೆಗಾಗಲೇ ರಾಜ್ ಎಂದರೆ ಅಪಾರ ಭಕ್ತಿಪರವಶತೆ ಬೆಳೆಸಿಕೊಂಡಿದ್ದ ನಾನು, ಸಂಜೆಗತ್ತಲಲ್ಲಿ ಅವರು ಜನಜಂಗುಳಿಯ ನಡುವೆ ವೇದಿಕೆಯತ್ತ ನಡೆದು ಹೋಗುವಾಗ ಒಂದೇ ಒಂದು ಸಲ ಅವರ ಕೈಯೋ ಕಾಲೋ ಸೋಕಿದರೆ ಸಾಕೆಂದು ಹರಸಾಹಸ ಮಾಡಿದೆ. ಆ ಸುಯೋಗ ಅಂದು ಒದಗಲೇ ಇಲ್ಲ. ಮುಂದಕ್ಕೆ ಅವರನ್ನು ಮುಟ್ಟಿ ಕೈಕುಲುಕಿಸಿ ಮಾತನಾಡಿಸುವ ಅವಕಾಶ ಸಿಕ್ಕಿದ್ದು ನಾನು ಪತ್ರಕರ್ತನಾದ ಮೇಲೆ, ಮತ್ತು ಇನ್ನೂ ಮುಂದಕ್ಕೆ ಚಿತ್ರ ನಿರ್ದೇಶಕನಾದ ಮೇಲೆ. ಅದೇ ಚಿಕ್ಕ ಹುಡುಗನಾಗಿ ಅವರನ್ನು ಕಂಡಾಗ ‘ರಾಜ್ ನಾನು ಕಲ್ಪಿಸಿಕೊಂಡಷ್ಟು ಎತ್ತರ ಇಲ್ಲವಲ್ಲ!’ ಎಂದು ಸೋಜಿಗಪಟ್ಟ ನೆನಪು… ಮತ್ತೆ ಅವರನ್ನು ಒಮ್ಮೆ ಮುಟ್ಟಿದರೆ ಸಾರ್ಥಕವೆಂದು ಅಷ್ಟು ಉತ್ಕಟವಾಗಿ ಅನಿಸಿದ್ದೇಕೆ? ಮುಂದಕ್ಕೆ ನಾನು ಈ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಯತ್ತಿಸಿದ್ದಕ್ಕೆ ಆ ರಾಜ್ ಕುಮಾರ್ ಎಂಬ ಮೋಡಿ ಎಷ್ಟರ ಮಟ್ಟಿಗೆ ಕಾರಣವಾಯಿತು?…

ಕೆಲವು ಪ್ರಶ್ನೆಗಳಿಗೆ ಸಂಪೂರ್ಣ ಉತ್ತರ ಸಿಕ್ಕುವುದಿಲ್ಲ.

ನನ್ನಂತೆಯೇ ರಾಜ್ ಕುಮಾರ್ ಅವರನ್ನು ನೋಡಬೇಕು, ಮಾತಾಡಿಸಬೇಕು ಎಂಬ ಉತ್ಕಟ ಹಂಬಲ- ಈ ನಾಡಿನ ಬಹುತೇಕರದ್ದಾಗಿತ್ತು ಎಂದು ಘೋಷಿಸಲು ಸಮೀಕ್ಷೆಯ ಅಗತ್ಯವೇನೂ ಇಲ್ಲ. ರಾಜ್ ಸಮೂಹ ಪ್ರಜ್ಞೆಯನ್ನು ಆವರಿಸಿದ್ದ ಪವಾಡ ಅಂಥದ್ದು.

ನೋಡುತ್ತ ಹೋದರೆ, ರಾಜ್ ತಮ್ಮ ಚಿತ್ರಗಳ ಮೂಲಕ ಗಳಿಸಿಕೊಂಡಿದ್ದ ಸರ್ವಗುಣ ಸಂಪನ್ನತೆಯ ವರ್ಚಸ್ಸು; ಅವರ ಇಮೇಜ್ ಹಾಗೂ ರಾಜ್ ವ್ಯಕ್ತಿತ್ವ- ಇವೆರಡೂ ಒಂದೇ ಎಂದು ಜನ ನಂಬುವಂತಿದ್ದ ಅವರ ನಡವಳಿಕೆ; ವ್ಯಕ್ತಿಯ ನೆರಳೇ ವ್ಯಕ್ತಿಯಾದ ಸೋಜಿಗ ನೆನಪಿಗೆ ಬರುತ್ತದೆ. ರಾಜ್ ತೆರೆಯ ಮೇಲೆ ಸಿಗರೇಟು ಸೇದಿದ್ದಿದೆ. (ತಕ್ಷಣಕ್ಕೆ ‘ವಾತ್ಸಲ್ಯ’ ಚಿತ್ರದ ನೆನಪಾಗುತ್ತಿದೆ.) ರಾಜ್ ವರ್ಚಸ್ಸು ಅದನ್ನು ಮುಂದುವರಿಯಲು ಬಿಡಲಿಲ್ಲ. ಅವರು ದ್ವಿಪಾತ್ರದಲ್ಲಿ ನಟಿಸಿದ ‘ದಾರಿ ತಪ್ಪಿದ
ಮಗ’ ಚಿತ್ರದಲ್ಲಿ ಒಬ್ಬ ಸದ್ಗುಣಿಯಾದರೆ, ಇನ್ನೊಬ್ಬ ದುಷ್ಟ, ಆ ದುಷ್ಟ ಪಾತ್ರದಾರಿ ರಾಜ್-ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದನ್ನು ಹೆಂಗಸರು ಸಹಿಸಲಿಲ್ಲ. ‘ನೀವು ಒಂದು ಪಾತ್ರವಾಗಿ ಕೂಡ ಒಂದು ಹೆಣ್ಣನ್ನು ಅವಮಾನ ಮಾಡುವಂತಿಲ್ಲ; ಮಾಡಿದರೆ ಜನ ಅದನ್ನೇ ಅನುಸರಿಸುತ್ತಾರೆ..’ ಅನ್ನುವ ಕೂಗೆದ್ದಿತು! ಅಂದರೆ ತಾವು ಆರಿಸಿಕೊಂಡ ಚಿತ್ರಗಳು ಮತ್ತು ಪಾತ್ರಗಳ ಮೂಲಕ ತೂಗಿ ಕೊಟ್ಟ ಗುಣ ದೋಷಗಳ ತಕ್ಕಡಿ, ತಲೆಮಾರುಗಳ ಕಾಲ ಸಮೂಹದ ಒಳಿತು ಕೆಡುಕಿನ ಕಲ್ಪನೆಗಳ ಬುನಾದಿಯಾಗಿತ್ತು. ಕನ್ನಡ ಸಂಸ್ಕೃತಿಯಲ್ಲಿ ಶ್ರೇಷ್ಠವಾದದ್ದೆಲ್ಲದರ ಮೂರ್ತರೂಪವಾಗಿ ರಾಜ್ ಕಾಣುತ್ತಿದ್ದರು. ಮತ್ತು ಅವರ ಕೈಯಲ್ಲಿ ಕನ್ನಡ ಸುರಕ್ಷಿತ ಎನ್ನುವ ಭಾವ ಉಕ್ಕುತ್ತಿತ್ತು. ಅದಕ್ಕೇ ಅವರಿಗೆ ಅವಮಾನವಾದರೆ ಕನ್ನಡಿಗ ರೊಚ್ಚಿಗೇಳುತ್ತಿದ್ದ. ರಾಜ್ ಹೀಗೆ ಸ್ವತಃ ಪುರಾಣವಾಗಿದ್ದು ನಮ್ಮ ಕಾಲದ ದೊಡ್ಡ ಕೌತುಕಗಳಲ್ಲೊಂದು.

ರಾಜ್ ತಮ್ಮ ಇಮೇಜಿನಿಂದಾಗಿ ಕನ್ನಡದ ಸಾರಸರ್ವಸ್ವದೊಂದಿಗೆ ಸಾಧಿಸಿದ್ದ ಇಂಥ ತಾದ್ಯಾತ್ಮದ ಮೂಲಕವೇ ನಿರ್ವಿವಾದ ಸಾಸ್ಕೃತಿಕ ನಾಯಕನಾಗಿ ರೂಪುಗೊಂಡದ್ದು ಸಹಜವಾಗಿತ್ತು. ಕುವೆಂಪು ಒಂದು ಬಗೆಯಲ್ಲಿ ಕನ್ನಡದ, ಅದರಲ್ಲೂ ಶೂದ್ರ ಸಮೂಹದ ಸ್ವಾಬಿಮಾವನ್ನು ಸಂಕೇತಿಸಿದರೆ, ರಾಜ್ ಇನ್ನೊಂದು ಬಗೆಯಲ್ಲಿ ಕನ್ನಡಿಗನ ಭಾವ ಪ್ರಪಂಚವನ್ನು ಕಲಕಿದರು. ಜನ ತಮ್ಮ ಮೇಲಿಟ್ಟಿದ್ದ ಆರಾಧನಾ ಭಾವವನ್ನು ಕನ್ನಡಾಭಿಮಾನವಾಗಿ ಪರಿವರ್ತಿಸಿದ್ದು -ಬಹುಷಃ ರಾಜ್ ಕುಮಾರರ ಬಹು
ದೊಡ್ಡ ಕೊಡುಗೆ ಎಂಬುದು ನನ್ನ ಗ್ರಹಿಕೆ.

ರಾಜ್ ಕುಮಾರರಿಗೆ ಆರಂಭದಿಂದಲೂ ಬೇರೆಬೇರೆ ಭಾಷೆಗಳಿಂದ ಆಹ್ವಾನಗಳಿದ್ದವು. ಅವರ ಜೊತೆಯ ಕಲ್ಯಾಣ್ ಕುಮಾರ್ ತಮಿಳಿನಲ್ಲೂ ದೊಡ್ಡ ನಟ ಅನಿಸಿಕೊಂಡಿದ್ದಾಗ ಕೂಡ, ರಾಜ್ ಕನ್ನಡ ಬಿಟ್ಟು ಕದಲಲಿಲ್ಲ. ‘ನೀವೇಕೆ ಬೇರೆ ಭಾಷೆಗಳಿಗೆ ಕಾಲಿಡಲಿಲ್ಲ?’ ಎಂದು ಒಮ್ಮೆ ನಾನು ಕೇಳಿದ್ದಕ್ಕೆ ಅವರು ‘ಯಾಕೋ, ಅವಾಗ ಬೇರೆ ಎಲ್ಲೂ ಹೋಗೋದು ಬೇಡ ಅನಿಸಿತು’ ಅಂದಿದ್ದರು. ಅವರ ಕನ್ನಡ ಪ್ರೇಮವೂ ಲೆಕ್ಕಾಚಾರಗಳನ್ನು ಮೀರಿದ ಇಂಥ ಮುಗ್ದ ಆಸೆಯಷ್ಟೇ, ಕನ್ನಡಿಗರ ಕಣ್ಮಣಿಯಾಗಿ ಬೆಳೆದ ರಾಜ್, ಕನ್ನಡ ಭಾಷೆಯ ಚಂದ ಅರಳುವಂತೆ, ಅದರ ಸೊಗಸು ಮನ ಮುಟ್ಟುವಂತೆ ಸಂಭಾಷಣೆ ಹೇಳಿದರು. ಮತ್ತು ಆ ಶೈಲಿ ಅವರನ್ನು ನಾಲ್ಕು ತಲೆಮಾರುಗಳ ಕಾಲ ಅನಕ್ಷರಸ್ಥರ ಪಾಲಿನ ಕನ್ನಡ ಮೇಷ್ಟರನ್ನಾಗಿ ಮಾಡಿತ್ತು..!

ರಾಜ್ ಕುಮಾರರಿಗೆ ಹೀಗೆ ಕನ್ನಡಿಗ ಎಣೆಯಿಲ್ಲದ ಪ್ರೀತಿ ಸುರಿದು ಕೊಟ್ಟರೂ ರಾಜ್ ಪ್ರತಿಯಾಗಿ ಕೊಟ್ಟಿದ್ದೇನು ಎಂದು ಕೇಳುವವರು ನಿನ್ನೆ ಈವತ್ತಿನವರಲ್ಲ. ನಮ್ಮ ಬುದ್ದಿವಂತ ವರ್ಗ ಒಂದು ಪ್ರಶ್ನೆಯನ್ನು ಅನಾದಿಕಾಲದಿಂದಲೂ ಮುಂದಿಡುತ್ತಲೇ ಬಂದಿದೆ. ರಾಜರುಗಳು ಕೆರೆಕಟ್ಟೆ ತೋಡಿಸಿ, ಸಾಲುಮರ ನೆಡಿಸಿ, ಧರ್ಮ ಶಾಲೆ ಕಟ್ಟಿಸಿ ಮಾಡುತ್ತಿದ್ದ ಜನ ಸೌಕರ್ಯಗಳಂತೆಯೇ ಸಾಂಸ್ಕೃತಿಕ ಕೊಡುಗೆಗಳೂ ಕಣ್ಣಿಗೆ ಕಾಣುವಂತಿರಬೇಕು ಅನ್ನುವಂಥದೊಂದು ಕಿರಾಣೀ
ವ್ಯಾಪಾರಿಯ ಮನೋಧರ್ಮ ಆ ಪ್ರಶ್ನೆಯ ಹಿಂದೆ ಇದ್ದಂತಿದೆ! ಇರಲಿ. ರಾಜ್ ತಮ್ಮ ಕಾಯಕದ ಮೂಲಕವೇ ಬಿತ್ತಿದ ಕನ್ನಡ ಪ್ರಜ್ಞೆಯ ಆಚೆಯೂ ಅವರೇನು ಮಾಡಿದರು ಎಂಬುದನ್ನು ನೋಡಿದರೆ ಬಹುಷಃ ಆ ಪ್ರಶ್ನೆಗೆ ಉತ್ತರ ಸಿಗಬಹುದು.

2006042101920301ರಾಜ್ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ಬಿಡುಗಡೆಯಾಗಿದ್ದು 1954ರಲ್ಲಿ ಕರ್ನಾಟಕ ಏಕೀಕರಣವಾದದ್ದು 1956ರಲ್ಲಿ. ಅದುವರೆಗೆ ಕನ್ನಡನಾಡು ಎಂಬುದು ಅಖಂಡ ಭೂಪ್ರದೇಶವಲ್ಲ. ಆಗ ನಾಡು ಬೌಗೋಳಿಕವಾಗಿ ಒಂದಾದಾಗಲೂ, ಈ ನೆಲದ ಭಾವ ಪ್ರಪಂಚ ಪ್ರತ್ಯೇಕ ತುಂಡುಗಳ ಕೃತಕ ಹೊಲಿಗೆಯಂತೇ ಇತ್ತು.

ಆಗ ಸರ್ವತ್ರ ಭಾವೈಕ್ಯ ಸಾಧಿಸುವುದು ನಾಡ ಮುಂದಿನ ಬಹು ದೊಡ್ಡ ಸವಾಲಾಗಿತ್ತು. ಆಗೇಕೆ, ಈಗಲೂ ಪ್ರಾದೇಶಿಕ ಅಸಮತೋಲನದ ಡಿ.ಎಂ.ನಂಜುಂಡಪ್ಪ ವರದಿಯ ಚರ್ಚೆ ನಡೆದಿಲ್ಲವೇ?… ಈ ಭಾವೈಕ್ಯದ ಕೆಲಸ ಸ್ವಲ್ಪ ಮಟ್ಟಿಗೆ ಏಕೀಕರಣವಾದಿಗಳಿಂದ , ಇನ್ನು ಸ್ವಲ್ಪ ಮಟ್ಟಿಗೆ ಸಾಹಿತಿಗಳಿಂದ ನಡೆಯುತ್ತಾ ಬಂತು.

ನೆನಪಿಡಿ; ಆ ಕಾಲದಲ್ಲಿ ವರ್ಷಕ್ಕೆ ನಾಲ್ಕಾರು ಚಿತ್ರಗಳು ಬಿಡುಗಡೆಯಾದರೆ ಅದೇ ಹೆಚ್ಚು. ಅಂದರೆ ಬಹುಪಾಲು ಕಲಾವಿದರು ಬಿಡುವಾಗಿಯೇ ಇರುತ್ತಿದ್ದರು. ಹೀಗಿರುವಾಗ ರಾಜ್ ಆ ಬಿಡುವಾಗಿರುತ್ತಿದ್ದ ಕಲಾವಿದರನ್ನೆಲ್ಲಾ ಗುಡ್ಡೆ ಹಾಕಿಕೊಂಡು ರಾಜ್ಯಾದ್ಯಂತ ಜನರ ಬಳಿ ಹೋದರು, ಊರೂರು ಸುತ್ತಿದರು. ನಾಟಕಗಳನ್ನು ಆಡಿದರು. ಆ ಮೂಲಕ ಜನರನ್ನು ಭಾವನಾತ್ಮಕವಾಗಿ ಹತ್ತಿರ ಸೆಳೆದುಕೊಂಡು ಕನ್ನಡದ ಬಗ್ಗೆ ಕನ್ನಡ ಚಿತ್ರಗಳ ಬಗ್ಗೆ ಅಕ್ಕರೆ ಉಕ್ಕುವಂತೆ ಮಾಡಿದರು. ಜೀವನ ನಿರ್ವಹಣೆ ಮತ್ತು ಚಿತ್ರೋದ್ಯಮದ ಹಿತ-ಇವಿಷ್ಟೇ ಅವರ ಉದ್ದೇಶವಾಗಿದ್ದರೂ, ಅವರ ಪ್ರಯತ್ನಗಳು ಕ್ರಮೇಣ ಕನ್ನಡನಾಡು, ಕನ್ನಡ ಸಂಸ್ಕೃತಿ ಒಂದು ಎಂಬ ಅಭಿಮಾನವನ್ನು ಚಿಗುರಿಸುತ್ತ ಹೋದವು. ರಾಜ್ ಮುಂದಕ್ಕೆ ಪ್ರವಾಹ ಪರಿಹಾರ ನಿಧಿಸಂಗ್ರಹಕ್ಕೆ ಹೋಗಿದ್ದು ಕೂಡ ಗೋಕಾಕ್ ಚಳುವಳಿಯಷ್ಟೇ ಪ್ರಬಲವಾಗಿ ಕನ್ನಡಿಗರನ್ನು ಪರಸ್ಪರ ಹತ್ತಿರ ತಂದಿದ್ದನ್ನು ನೆನೆಸಿಕೊಳ್ಳಬೇಕು.

ರಾಜ್ ಕುಮಾರರ ಬೇರೆಲ್ಲಾ ಕಾಣಿಕೆಗಳನ್ನು ಮರೆತು ನೋಡಿದರೂ, ಅಖಂಡ ಕನ್ನಡ ಪ್ರಜ್ಞೆಯೊಂದನ್ನು ಸಾದ್ಯವಾಗಿಸಿದ ಅವರ ಪರಿಶ್ರಮವೇ ಮಹತ್ತರ ಸಾಧನೆಯಾಗಿ ಗೋಚರವಾಗುವುದಿಲ್ಲವೇ? ಕನ್ನಡಕ್ಕೆ ಅವರು ಇನ್ನೇನು ಕೊಡಬೇಕಿತ್ತು?

ನನ್ನ ಹಾಡು, ನನ್ನ ಪುಸ್ತಕ

ಕಿನ್ನರಿ

deepulag269ಪುಸ್ತಕ ಮತ್ತು ಹಾಡು ನನಗೆ ತುಂಬಾ ಇಷ್ಟವಾದ ಎರಡು ಸಂಗತಿಗಳು.  ಈಗಲೂ, ಹಿಂದೆಯೂ ಹಾಗೂ ಮುಂದೆಯೂ ಇವೆರಡೂ ನನಗೆ ತುಂಬಾ ಇಷ್ಟ. 

ಸಾಧಾರಣವಾಗಿ ಜನರು ಖುಷಿ ಸಂದರ್ಭಗಳಲ್ಲಿ, ಒತ್ತಡವನ್ನು ಕಳೆದುಕೊಳ್ಳಲು ಅಥವಾ ಪಾರ್ಟಿಗಳ  ರಂಗು ಹೆಚ್ಚಿಸಲು ಹಾಡಿನ ಮೊರೆ ಹೋಗ್ತಾರೆ.  ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹಾಡು ಇಷ್ಟ ಇರುತ್ತೆ.  ನನಗೆ, ನನ್ನ ಮೂಡ್ಗೆ ತಕ್ಕಂತೆ ಬೇರೆ ಬೇರೆ ರೀತಿಯ ಹಾಡುಗಳು ಇಷ್ಟ ಆಗುತ್ತೆ.

ನಾನು ಹೆಚ್ಚಾಗಿ ಇಷ್ಟ ಪಡೋದು ಬಾಲಿವುಡ್ ಹಾಡುಗಳನ್ನ ಹಾಗೂ ಕೆಲವು ಇಂಗ್ಲೀಷ್ ಹಾಡುಗಳು.  ಹಾಡುಗಳ ಬಗ್ಗೆ ನಾನು ಹೆಚ್ಚಾಗಿ ಹಂಚಿಕೊಳ್ಳೋದು ನನ್ನ ಕಸಿನ್ ಹತ್ತಿರ.  ಅವನು ಚೆನ್ನಾಗಿ ಹಾಡ್ತಾನೆ.  ನಮ್ಮಿಬ್ಬರಿಗೂ ಒಂದೇ ಬಗೆಯ taste ಇದೆ. 

ಮೊದ ಮೊದಲು ನಾನು ಸುಮ್ಮನೆ ಖುಷಿಗಾಗಿ ಹಾಗೂ ರಿಲ್ಯಾಕ್ಸ್ ಮಾಡೋಕ್ಕೆ ಹಾಡು ಕೇಳ್ತಿದ್ದೆ.  ಆಮೇಲೆ ಡ್ಯಾನ್ಸ್ ನ  ಪ್ರೀತಿಯಿಂದ ಹಾಡಿನ ಪ್ರೀತಿಯೂ ಹೆಚ್ಚಾಯ್ತು.  ಡ್ಯಾನ್ಸ್ ಮಾಡುವಾಗ ಹಾಡಿನ ಸಾಹಿತ್ಯ, ಸಂಗೀತದ ಲಯ ಹಾಗೂ ತಾಳಗಳು ತುಂಬಾ ಮುಖ್ಯ.  ಹಾಗೇ ಡ್ಯಾನ್ಸ್ ಮಾಡ್ತಾ ಮಾಡ್ತಾ ಹಾಡಿಗೆ ತಕ್ಕಂತೆ ತುಟಿಯನ್ನು ಆಡಿಸಬೇಕಲ್ಲ.  ಅದರಿಂದಾಗಿ ನಾನು ಹಾಡಿನ ಸಾಹಿತ್ಯವನ್ನ ಕಲೀತಾ ಹೋದೆ. ಒಂದೇ ಹಾಡನ್ನ ಮತ್ತೆ ಮತ್ತೆ ಕೇಳಿ ಅದರ ಸಾಹಿತ್ಯವನ್ನ ಕಲಿತೆ.  ಆದರೂ ಒಮ್ಮೊಮ್ಮೆ ಸಾಹಿತ್ಯ ತಪ್ಪಾಗುತ್ತೆ.  ಆಗೆಲ್ಲ ನನ್ನ ಕಸಿನ್ ಅಣಕಿಸ್ತಾನೆ.  ಹಿಂದೆಲ್ಲ ಹೀಗೆ ಅಣಕಿಸಿದರೆ ನನಗೆ ಸಿಟ್ಟು ಬರ್ತಿತ್ತು.  ಈಗ ಸಿಟ್ಟು ಮಾಡ್ಕೊಳ್ಳಲ್ಲ.  ಸ್ಪೋರ್ಟೀವ್   ಆಗಿ ತೊಗೊಳ್ತೀನಿ.  ಅವನಿಂದಾಗಿಯೇ ನಾನು ಟಿವಿಯಲ್ಲಿ ಬರೋ ಹಾಡುಗಳ ಕಾರ್ಯಕ್ರಮಗಳನ್ನ ನೋಡೋಕ್ಕೆ ಶುರು ಮಾಡ್ದೆ,  ಈಗ ಅಂತಹ ಎಲ್ಲ ಕಾರ್ಯಕ್ರಮ ನೋಡ್ತೀನಿ.  ಅವನೂ ಕೂಡ ಅಂತಹ ಕಾರ್ಯಕ್ರಮಗಳಿಗೆ ಆಡಿಷನ್ ಮಾಡಿದಾನೆ.

ನನ್ನ ಅಪ್ಪ – ಅಮ್ಮ ಇಬ್ಬರೂ ನನಗೆ ಹಾಡಿನ ಸಿಡಿಗಳನ್ನು ಕೊಡಿಸ್ತಾರೆ.  ನನ್ನಪ್ಪ ನನಗೆ  `ಐ-ಪಾಡ್ಕೂಡ ತೆಕ್ಕೊಟ್ಟಿದಾರೆ.  ಅದಿಲ್ಲದೆ ನನಗೆ ಇರೋಕ್ಕೇ ಸಾಧ್ಯವಿಲ್ಲ.  ಅದು ನನ್ನ ಹೃದಯದಲ್ಲಿ ಇಟ್ಕೊಂಡಿರೋ ಸಂಗಾತಿ ಹಾಗೂ ಒಂದು ದೊಡ್ಡ ನಿಧಿ.  ಇದಕ್ಕೆ ಮೊದಲು ಅಪ್ಪ ನನಗೆ `ವಾಕ್ಮನ್ ಸಿಡಿ ಪ್ಲೇಯರ್ತಂದು ಕೊಟ್ಟಿದ್ರು.  ಅದರಲ್ಲೂ ತುಂಬಾ ಹಾಡು ಕೇಳ್ತಿದ್ದೆ.  ಸಿಡಿಗಳನ್ನ ಇಟ್ಕೊಳ್ಳೋಕೆ ದೊಡ್ಡ ಪೌಚ್ ಕೊಡ್ಸಿದಾರೆ.  ಅಪ್ಪನ ಜೊತೆ ನಡೆಸುವ ತಿರುಗಾಟದಲ್ಲಿ `ಪ್ಲಾನೆಟ್ ಎಂಭೇಟಿ ನಮ್ಮ ಮೊದಲ ಕಾರ್ಯಕ್ರಮ ಆಗಿರುತ್ತೆ.  ನನಗೆ ಸುಸ್ತು ಆಗುವವರೆಗೂ ನಾವು ಅಲ್ಲಿರ್ತೀವಿ.  ಆಮೇಲೆ ಬ್ಲಾಸಂ ಬುಕ್ ಶಾಪ್ ಅಥವಾ ಕ್ರಾಸ್ ವರ್ಡ್ಸ್  ಗೆ ಹೋಗ್ತೀವಿ.  ಐ-ಪಾಡ್ ಗೆ  ಮೊದಲು ಮೊಬೈಲ್ನಲ್ಲಿ ಎಫ್ ಎಂ ಸ್ಟೇಷನ್ ಕೇಳ್ತಿದ್ದೆ.  ಹೊಸ ಹಾಡಿನ ಸಿಡಿ ಸಿಕ್ಕಿಲ್ಲ ಅಂದ್ರೆ ಎಫ್ ಎಂನಲ್ಲಿ ಕೇಳೋದು.  ಈಗ ನನ್ನ ಅಣ್ಣಂದಿರೂ ಹಾಡಿನ ಸಿಡಿ ಕೊಡಿಸ್ತಾರೆ.  ಅವರ ಮೊಬೈಲ್ಗಳಲ್ಲಿ ಒಳ್ಳೊಳ್ಳೆ ಹಾಡುಗಳನ್ನ ಡೌನ್ ಲೋಡ್ ಮಾಡಿಕೊಂಡು ಬಂದು ನನ್ನ ಐ-ಪಾಡ್ಗೆ ಹಾಕಿ ಕೊಡ್ತಾರೆ. 

girl-walking-through_ubr00041ಹಾಗೇನೇ ಪುಸ್ತಕಗಳೂ ನನ್ನ ಪ್ರೀತಿಯ ಸಂಗಾತಿಗಳು.  ನನ್ನ ಪ್ರಕಾರ ಪುಸ್ತಕಗಳನ್ನ ಓದುವುದರಿಂದ ಒಳ್ಳೆಯದೇ ಆಗುತ್ತೆ.  ಓದುವುದು ಯಾವ ರೀತಿಯಲ್ಲೂ ಕೆಟ್ಟದ್ದಲ್ಲ.  ಅದರಲ್ಲೂ ಓದುವುದರಿಂದ ನಮ್ಮ ಭಾಷೆ ಮತ್ತು ಶಬ್ದ ಜ್ಞಾನ ತುಂಬಾ ಬೆಳೆಯುತ್ತೆ.  ಕೆಲವೊಂದು ಪುಸ್ತಕಗಳಂತೂ ಎಷ್ಟೊಂದು ಕಲ್ಪನೆ ಮತ್ತು ಕಲಾತ್ಮಕತೆಯಿಂದ ತುಂಬಿರುತ್ತೆ.  ಅವುಗಳನ್ನ ಓದೋದೇ ಒಂದು ಖುಷಿ. 

ನನಗೆ ನೆನಪಿರುವ ವಯಸ್ಸಿನಿಂದಲೂ ಪುಸ್ತಕಗಳು ನನ್ನ ಪ್ರೀತಿಯ ಸಂಗಾತಿಗಳು.  ಫೇಮಸ್ ಫೈವ್ , ಹ್ಯಾರಿ ಪಾಟರ್, ಅಗಾಥಾ ಕ್ರಿಸ್ಟೀ ಹಾಗೂ ಲಾರಾ ಎಂಗೆಲ್ಸ್  ಸರಣಿ ಪುಸ್ತಕಗಳು ನನಗೆ ಇಷ್ಟವಾದ ಪುಸ್ತಕಗಳು.  ಸಾಹಸ ಹಾಗೂ ರೋಚಕತೆ ಇರುವ ಪುಸ್ತಕ ಅಂದ್ರೆ ಹೆಚ್ಚು ಖುಷಿ.  ಎಲ್ರೂ ಕೂಡ ಕನಿಷ್ಠ ಪಕ್ಷ ಕಾಮಿಕ್ಸ್ ಸ್ಟ್ರಿಪ್ ಗಳನ್ನಾದರೂ ಓದ್ಬೇಕು.  ಅದು ಎಷ್ಟೊಂದು ಖುಷಿ ಕೊಡುತ್ತೆ.  ಹಾಗೂ ನಮ್ಮ ಭಾಷೆನೂ ಬೆಳೆಯುತ್ತೆ.

ಈ ಪುಸ್ತಕಗಳನ್ನ ಬರೆಯುವ ಲೇಖಕರ ಬಗ್ಗೆ ನನಗೆ ಆಶ್ಚರ್ಯ ಆಗುತ್ತೆ.  ಜಗತ್ತಿನ ಎಲ್ಲ ಜನರ ಆಸಕ್ತಿ, ಅಭಿಪ್ರಾಯಗಳನ್ನ ದೃಷ್ಟಿಯಲ್ಲಿಟ್ಟುಕೊಂಡು ಬರೀತಾರಲ್ಲ ಅವರು ಅದು ಹೇಗೆ ಸಾಧ್ಯ ಅಂತ.  ಹೀಗೆ ಬರೆಯೋಕ್ಕೆ ಅವರು ಎಷ್ಟೆಲ್ಲ ಯೋಚನೆ ಮಾಡಬೇಕಲ್ವ!  ಓದುಗರಿಗೆ ಅರ್ಥ ಆಗುವ ಭಾಷೆ ಬಳಸ್ಬೇಕು!  ಒಬ್ಬೊಬ್ಬ ಲೇಖಕರದೂ ಒಂದೊಂದು ಶೈಲಿ.  ಎಲ್ಲರ ಶೈಲಿಯೂ ಚೆನ್ನಾಗಿರುತ್ತೆ.  ಹಾಗೇ ತುಂಬಾ ಜನಪ್ರಿಯವೂ ಆಗಿರುತ್ತೆ.  ಈ ಲೇಖಕರು ಕೆಲವು ವಿಷಯಗಳನ್ನ ಎಷ್ಟೊಂದು ಬೇರೆ ಬೇರೆ ರೀತಿಯಲ್ಲಿ ಕಲ್ಪಿಸಿಕೊಳ್ತಾರಲ್ಲ ಅಂತ ಅನ್ನಿಸುತ್ತೆ.  ಇಂತಹ ಅದ್ಭುತ ಶಕ್ತಿಯ ಲೇಖಕರಲ್ಲಿ ನನ್ನ ಪ್ರೀತಿಯ ಕೆಲವು ಲೇಖಕರಿದ್ದಾರೆ – ಎನಿಡ್ ಬ್ಲೈಟನ್, ಜೆ.ಕೆ.ರೋಲಿಂಗ್, ಅಗಾಥಾ ಕ್ರಿಸ್ಟೀ, ಲಾರಾ ಎಂಗೆಲ್ಸ್  ವೈಲ್ಡರ್…

ಪುಸ್ತಕ ಓದೋದ್ರಿಂದ ಆಗುವ ಖುಷಿ ಬೇರೆಯದರಿಂದ ಆಗಲ್ಲ.  ಪುಸ್ತಕದ ಖುಷಿ ಮತ್ತು ಆಕರ್ಷಣೆ ನಿಲ್ಲಿಸೋಕ್ಕೆ ಆಗಲ್ಲ.  ಅದರಿಂದಾಗೇ ನನಗೆ ಪುಸ್ತಕ ಓದೋದಂದ್ರೆ ತುಂಬಾ ಇಷ್ಟ.  ಪುಸ್ತಕಗಳು ನನ್ನನ್ನು ಸೆಳೆದುಕೊಳ್ತಾವೆ.  ನಾನು ಎಲ್ಲಿಗೇ ಹೋಗಲಿ ನನ್ನ ಜೊತೆ ಪುಸ್ತಕಗಳು ಇರುತ್ತವೆ. 

ಸಿ.ಡಿ.ಗಳ ಹಾಗೇನೇ ನಾನು ತುಂಬಾ ಪುಸ್ತಕ ಕೊಳ್ತೀನಿ.  ಪುಸ್ತಕಗಳ ಬಗ್ಗೆ ನನ್ನ ಅಭಿಪ್ರಾಯಾನಾ ನನ್ನ ಅಪ್ಪ – ಅಮ್ಮಾನೂ ಪ್ರೋತ್ಸಾಹಿಸ್ತಾರೆ.  ಅವರಷ್ಟೇ ಅಲ್ಲ, ಇನ್ನೂ ಕೆಲವರು ನನ್ನ ಈ ಓದುವ ಹವ್ಯಾಸವನ್ನ ತುಂಬಾ ಪ್ರೋತ್ಸಾಹಿಸ್ತಾರೆ.  ಅಂತಹವರಿಂದಾಗೀನೇ ನಾನು `ಕನ್ನಡ ಟೈಮ್ಸ್ನಲ್ಲಿ ಹ್ಯಾರಿ ಪಾಟರ್ ನ ಆರು ಪುಸ್ತಕಗಳ ಬಗ್ಗೆ ಲೇಖನ ಬರೆದೆ.  ಅದಂತೂ ಒಂದು ದೊಡ್ಡ ಮರೆಯಲಾಗದ ಅನುಭವ ನನಗೆ. 

ಮತ್ತೊಮ್ಮೆ ಪುಸ್ತಕ ಓದೋದು ಮತ್ತು ಹಾಡು ಕೇಳೋದು ನನ್ನ ಪ್ರೀತಿಯ ಹವ್ಯಾಸಗಳು ಅಂತ ಹೇಳಿ ಈ ನನ್ನ ಬರವಣಿಗೆಯನ್ನ ಇಲ್ಲಿಗೆ ಮುಗಿಸ್ತೀನಿ.

 

 

ತುಂಗಾನದಿಯ ಜಾಡಿನಲ್ಲಿ ತೇಜಸ್ವಿ, ಲಂಕೇಶ್ ಜೊತೆಗೆ

t-card3-2

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅವರ ಆತ್ಮೀಯ ಮೆಲುಕು ಇಲ್ಲಿದೆ. ‘ನೀರು’ ಕಾದಂಬರಿ, ‘ಬಹುವಚನ’ ಅಂಕಣ 

ಸಂಕಲನ ಅಗ್ರಹಾರ ಜೀವನ ಪ್ರೀತಿಗೆ ಕನ್ನಡಿ ಹಿಡಿದ ಕೃತಿಗಳು.

ತೇಜಸ್ವಿಯವರ ಜೊತೆ ಒಡನಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಅಗ್ರಹಾರ ಇಲ್ಲಿ ಬಣ್ಣಿಸಿದ್ದಾರೆ. ‘ಕನ್ನಡ ಟೈಮ್ಸ್’ನಿಂದ ಈ ಬರಹವನ್ನು ಆರಿಸಿಕೊಳ್ಳಲಾಗಿದೆ.

 

-ಅಗ್ರಹಾರ ಕೃಷ್ಣಮೂರ್ತಿ

ಪೂರ್ಣಚಂದ್ರ ತೇಜಸ್ವಿ ಕೋಕಿಲೋದಯ ಚೈತ್ರ ಮುಂತಾಗಿ ತಮ್ಮ ಮಕ್ಕಳಿಗೆ ಕಾವ್ಯಾತ್ಮಕ ಹೆಸರುಗಳನ್ನಿಡುತ್ತಿದ್ದ ಕುವೆಂಪು ಅವರ ಬಗ್ಗೆ ಕೆಲವು ಪ್ರಭೃತಿಗಳು ಓಹೊಹೊ ಅನ್ನುತ್ತಿದ್ದುದನ್ನು ನಾನೇ ಕೇಳಿಸಿಕೊಳ್ಳುತ್ತಿದ್ದೆ. ಅಂದರೆ, ಇನ್ನು ನನಗಿಂತ ಹಿರಿಯರ ಬಗ್ಗೆ ಹೇಳಲೇಬೇಕಾಗಿಲ್ಲ. ಅಸಾಮಾನ್ಯ ಅಪ್ಪನಿಂದ ತೇಜಸ್ವಿಯೆಂಬ ಹೆಸರನ್ನಷ್ಟೇ ಪಡೆದ ಪೂಚಂತೇ ಸ್ವಯಂ ತೇಜಸ್ವಿನಿಂದ ಪ್ರಜ್ವಲಿಸಿದ ತಾರೆ. ಅವರು ಅಪರೂಪಕ್ಕೊಮ್ಮೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾಗ ನೆರೆಯುತ್ತಿದ್ದ ಅಭಿಮಾನಿಗಳ ಹಿಂಡನ್ನು ಕಂಡವರಿಗೆ ತಾರೆಯೆಂಬ ಶಬ್ಧದ ಅರ್ಥ ನಿಚ್ಚಳವಾಗಿ ಹೊಳೆಯುತ್ತದೆ. ಆನರಿಗೆ ಬೇಕೆಂದಾಗ ಪುಗಸಟ್ಟೆ ಸಿಗುವ ಸಾಹಿತಿ ವರ್ಗಕ್ಕೆ ಸೇರದ, ಮೂಡಿಗೆರೆಯಲ್ಲಿ ಅಡಗಿದ್ದ ಈ ಲೇಖಕ ಕನ್ನಡಿಗರ ಗಗನ ಕುಸುಮದಂತಿದ್ದರು. ಮೈಸೂರಿನ ಕೆ. ರಾಮದಾಸ್, ಶ್ರೀರಾಮ್, ಕಡಿದಾಳ್ ಶಾಮಣ್ಣ, ಕೆಲಕಾಲ ಲಂಕೇಶ್, ಕೆಲಮಟ್ಟಿಗೆ ಬಿ.ಎಲ್.ಶಂಕರ್ ಇಂಥ ಕೆಲವೇ ವ್ಯಕ್ತಿಗಳು ಈ ಗಗನಕುಸುಮವನ್ನು ಯಾವಾಗಲೂ ತಮ್ಮ ಕೈಯಲ್ಲೇ ಇಟ್ಟುಕೊಂಡಿರುತ್ತಾರೆಂದು ಎಲ್ಲರಿಗೂ ಈರ್ಷೆ ಉಂಟಾಗುತ್ತಿತ್ತು.

‘ಯಾಕಳುವೆ ತೇಜಸ್ವೀ’ ಬಗ್ಗೆ ನಮಗೆ ಸ್ಕೂಲಿನಲ್ಲಿ ಪಾಠ ಹೇಳುತ್ತಿದ್ದ ಮೇಷ್ಟ್ರು ನಾರಾಯಸ್ವಾಮಿ ಯಾವುದೋ ವಿಚಾರ ಸಂಕಿರಣಕ್ಕೆ ತೇಜಸ್ವಿ ಬಂದಿದ್ದಾರೆಂದು ಗೊತ್ತಾಗಿ ಅವರನ್ನು ನೋಡಲು ಏದುಸಿರು ಬಿಡುತ್ತಾ ಓಡಿ ಬಂದುದನ್ನು ಕಂಡಿದ್ದೇನೆ. ಆ ವೇಳೆಗೆ ನಾವೆಲ್ಲ ಅಲ್ಲಿ ಸೇರಿದ್ದೆವು. ಅವರು ಬಂದ ಬಂದವರೆ ಬೀಚನಹಳ್ಳಿಯನ್ನು ಕರೆದು ‘ಲೇ ಗೌಡ. ತೇಜಸ್ವಿ ಬಂದೌನಂತೆ ಎಲ್ಲವೌನ್ಲ ತೇಜಸ್ವಿ ಎಲ್ಲವೌನ್ಲ’ ಎಂದು ಪಿಸುಗುಡತ್ತಾ ಪರದಾಡುತ್ತಿದ್ದುದು ನನ್ನ ಕಣ್ಣಿಗೆ ಕಟ್ಟಿದಂತಿದೆ. ‘ನೋಡಿ ಸಾರ್ ಅಲ್ಲಿ ನಿಂತಿದ್ದಾರೆ’ ಎಂದು ನಾವು ತೋರಿಸಿದಾಗ ಅವರನ್ನು ನೋಡಿ, ‘ಆ ಖಾಕಿ ಪ್ಯಾಂಟೂ ಒಳ್ಳೆ ಡ್ರೈವರ್ ಇದ್ದಂಗೌನಲ್ಲೋ’ ಎಂದು ಅಚ್ಚರಿಯನ್ನೂ, ನಿರಾಶೆಯನನೂ ಹೊತ್ತು ಅವರ ಮುಖವನ್ನೇ ತದೆಕಚಿತ್ತರಾಗಿ ನೋಡುತ್ತಾ ನಿಂತಿದ್ದ ಮೇಷ್ಟ್ರು ಮುಖ ನನಗೆ ಈಗಲೂ ನೆನಪಿದೆ. ಅವರ ಮಾತನ್ನು ಸತ್ಯ ಮಾಡುವೆನೆಂಬಂತೆ ಕೆಲ ಕ್ಷಣಗಳಲ್ಲೇ ಸೆನೆಟ್ ಹಾಲಿನಿಂದ ಹೊರಬಂದು ತಮ್ಮ ಎಣ್ಣೆನೀರು ಕಂಡಿರದ, ಧೂಳು ಅಡರಿದ್ದ ಜೀಪೇರಿ ಡ್ರೈವ್ ಮಾಡುತ್ತಾ ಹೊರಟೇ ಬಿಟ್ಟರು ತೇಜಸ್ವಿ. ವಿಚಾರ ಸಂಕಿರಣ ತನ್ನ ಪಾಡಿಗೆ ತಾನು ನಡೆಯುತ್ತಿತ್ತು. ಅವರು ಅವತ್ತು ನವ್ಯದ ವಾಹನದಿಂದ ಇಳಿದು ತಮ್ಮ ಭಿನ್ನ ಶೈಲಿಯ ಕಡೆಗೆ ಡ್ರೈವ್ ಮಾಡುತ್ತಾ ಹೋದಂತೆ ಗೋಚರಿಸುತ್ತಿತ್ತು.

ಲಂಕೇಶರ ಜೊತೆಗೆ ಅವರ ಸಂಬಂಧ ಅತಿಮಧುರವಾಗಿದ್ದ ದಿನಗಳಲ್ಲಿ, ಅವರು ಬೆಂಗಳೂರಿಗೆ ಬಂದಾಗ, ಲಂಕೇಶ್ ಫೋನ್ ಮಾಡಿ, ‘ಸಾಯಂಕಾಲ ತೇಜಸ್ವಿ ಬರ್ತಾರೆ ಬಾ’ ಅಂದು ಕರೆಯುತ್ತಿದ್ದರು. ನಮ್ಮ ಸಾಂಸ್ಕೃತಿಕ ಜಗತ್ತಿನ ಇಬ್ಬರು ಮಹಾ ಪ್ರತಿಭಾ ಸಂಪನ್ನರ ಜೊತೆಗೆ ಕಳೆದ ಆ ಸಂಜೆಗಳು ನನ್ನ ಸ್ಮರಣೀಯ ಗಳಿಗೆಗಳು.

ಒಂದು ಸಲ ಲಂಕೇಶರ ಮಗಳು ಕವಿತಾ, ಆಕೆಯ ಗೆಳತಿ, ನಾನು ಮತ್ತು ಲಂಕೇಶ್ ಮೂಡಿಗೆರೆಗೆ ಹೊರಟೆವು. ಲಂಕೇಶ್ ನಮ್ಮ ಡ್ರೈವರ್! ಆಗ ಅವರ ಹತ್ತಿರ ಡಾಲ್ಫಿನ್ ಎಂಬ ಪುಟಾಣಿ ಕಾರಿತ್ತು. ದಾರಿಯುದ್ದಕ್ಕೂ ಲಂಕೇಶರ ಪಾಠಗಳು, ಸೆಡವುಗಳು ಇತ್ಯಾದಿ ಕುರಿತು ಬರೆಯಲು ಇದು ಸಮಯವಲ್ಲ. ನಾವು ಮೂಡಿಗೆರೆ ತಲುಪಿದಾಗ ಸಂಜೆ ಕಳೆದಿತ್ತು. ತೇಜಸ್ವಿಯವರ ಮನೆಯ ಮುಂದಿನ ಪುಟ್ಟ ಅಂಗಳದಲ್ಲೇ ಕುಳಿತು ಮಾತಾಡಿದೆವು. ಅವರ ಅತಿಥಿ ಕೊಠಡಿಗಳಲ್ಲಿ ಮಲಗುವ ವ್ಯವಸ್ಥೆ ಊಟ, ಮತ್ತೆ ಮಾತು. ತೇಜಸ್ವಿ ಸಿಗರೇಟ್ ಸೇದದೇ ಕುಳಿತಿದ್ದ ನನ್ನ ಬಳಿ ನಿಂತು ‘ಇಲ್ಲಿ ಯಾರಾರ ಸಿಗರೇಟ್ ಸೇದಿದೆ ನೋಡ್ಕಂಡಿರು ಮತ್ತೆ.’ ಎಂದು ನನ್ನೆಡೆಗೆ ಬೆರಳು ತೋರಿಸುತ್ತಾ ನಿಂತರು. ನಾನು ಲಂಕೇಶ್ ಕಡೆಗೆ ನೋಡಿದೆ. ಅವರು ನಗುತ್ತಾ ತಮ್ಮದೇ ಶೈಲಿಯಲ್ಲಿ ಸಿಗರೇಟ್ ಎಳೆಯುತ್ತಿದ್ದರು. ಮತ್ತೆ ಸ್ವಲ್ಪ ಹೊತ್ತು ಹರಟೆ, ಮಾತು. ಮಾರನೆ ಬೆಳಿಗ್ಗೆ ತೇಜಸ್ವಿ ನಮಗೆ ಕಾಡು ತೋರಿಸಲು ಕರೆದೊಯ್ಯುವೆನೆಂದು ಹೇಳಿ ಮಲಗಲು ಹೋದರು.

More

ನನ್ನ ದೇವರು

ದೇವನೂರ ಮಹಾದೇವ

ಕನ್ನಡದ ಪ್ರಸಿದ್ದ ವಾರಪತ್ರ್ರಿಕೆಯೂಂದು ‘ನನ್ನ ದೇವರು’ ಹೆಸರಡಿ ಲೇಖಕರ, ಚಿಂತಕರ ಅನಿಸಿಕೆಗಳನ್ನು  ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನು ಕೇಳಿದರೆ ಇರಲಿ ಎಂದು ನಾನು ಬರೆಯ ಬೇಕಾದುದನ್ನು ಅಂದಾಜಿಸಿಕೊಂಡಿದ್ದೆ. ಆದರೆ ಪತ್ರಿಕೆಯವರು ನನಗೆ ದೇವರಿಲ್ಲ ಎಂದು ಅಂದಾಜಿಸಿಕೂಂಡೋ ಏನೋ ನನ್ನನ್ನು ಕೇಳಲೇ ಇಲ್ಲ.

ನಾನು ಅಂದಾಜಿಸಿಕೊಂಡಿದ್ದ ನನ್ನ ದೇವರು ನನ್ನೊಳಗೇ ಉಳಿಯಿತು.
ನನ್ನ ದೇವರು ನನ್ನೊಳಗೆ ಉಳಿದಿರುವುದು ಹೀಗೆ:
ಕವಿ ಸಿದ್ದಲಿಂಗಯ್ಯ ನನಗೆ ಒಮ್ಮೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ-ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ಒಂದು ಗುಡಿ ಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈ ಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ.

‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’
‘ನಿನಗೊಂದು ಗುಡಿ ಮನೆ ಕಟ್ತಾ ಇದ್ದೀವಿ ತಾಯಿ’
‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದಿರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?’
‘ನನಗಿಲ್ಲ ತಾಯಿ’-ಅಲ್ಲೊಬ್ಬ ಹೇಳ್ತಾನೆ.
‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೆ ಮನೆ ಬೇಡ’
ಹೀಗೆಂದ ಮಂಚಮ್ಮ ಮನೆಮಂಚಮ್ಮನಾಗಿ ಬಿಡುತ್ತಾಳೆ!

ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆ ಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ-ಅದೇ ನನ್ನ ದೇವರಾಗುತ್ತದೆ.

ನೆಲ್ಸನ್ ಮಂಡೇಲರಿಗೆ ಕ್ಷೌರ ಮಾಡುವ ಆಸೆ…

ಕೆ.ಎಲ್.ಚಂದ್ರಶೇಖರ್  ಐಜೂರ್

ಹಜಾಮ ಬಂದ ನೋಡ್ರೋ ಅನ್ನುತ್ತಿದ್ದ ಅದೇ ಜನ ಈಗ ‘ಏನ್ಸಾರ್ ಹೇಗ್ ನಡೀತಿದೆ  ಬಿಜ್ನೆಸ್ಸು?’ ಅಂತ ಕೇಳ್ತಾರೆ. ಅವರು ಹಜಾಮ ಎಂದಾಗ ನಾನು ಅನುಭವಿಸಿದ ನೋವು ಈಗವರು ತೋರಿಸುತ್ತಿರುವ ಕಾಳಜಿ ಕರಗುವಂತೆ ಮಾಡುವುದಿಲ್ಲ….’

ಹಾಗಂತ ಹೇಳಿ ದೊಡ್ಡ ನಗೆಯೋದಿಗೆ ನನ್ನನ್ನು ಸ್ವಾಗತಿಸಿ ಹೆಗಲ ಮೇಲೆ ಕೈಯಿಟ್ಟು ಮಾತಾಡಿದವರು ಮುತ್ತುರಾಜ್. ಬನಶಂಕರಿ ಷಾಪಿಂಗ್ kaamplekna ಹೊಟ್ಟೆಯೊಳಗಿರುವ ‘ಅಮೇರಿಕನ್ ಹೇರ್ dresars’ ನ ಮಾಲೀಕ ಮುತ್ತುರಾಜ್, ಈಗೊಂದಿಷ್ಟು ವರ್ಷಗಳಿಂದ ಕಲಾವಿದನೆಂದು ಹೆಸರು ಮಾಡಿರುವ ವ್ಯಕ್ತಿ.

ಅದೇ ಆಗಷ್ಟೇ ಸಿಡಿಲಿನಂತೆ ಬಂದೆರಗಿದ ತನ್ನ ದೊಡ್ಡಮ್ಮನ ಸಾವಿನ ಸುದ್ದಿಯ ದುಃಖವನ್ನು ಒಂದೆಡೆ ಅದುಮಿಟ್ಟುಕೊಂಡು ನನ್ನೊಂದಿಗೆ ತನ್ನ ವೃತ್ತಿಜೀವನದ ಕಷ್ಟ ಸುಖಗಳೊದಿಗೆ ತನ್ನ ಗತಕಾಲದ ನೆನಪುಗಳನ್ನು ಕರೆದುಕೊಂಡ ಮುತ್ತುರಾಜ್ ಮಾತುಗಳು ಎಲ್ಲರನ್ನೂ ಕಲಕುವಂತದ್ದವು.

‘ನಾನು ಮೂಲತಃ ದೇವನಹಳ್ಳಿ ತಾಲ್ಲೂಕಿನವನು. ನನಗೆ ಹತ್ತು ವರ್ಷವಿದ್ದಾಗಲೇ ನನ್ನ ತಂದೆಯ ಜತೆಗೆ ಕ್ಷೌರಿಕ ವೃತ್ತಿಯ ಕಲಿಕೆಯಲ್ಲಿ ತೊಡಗಿ ಅವರೊಂದಿಗೆ ಹೊಟ್ಟೆಪಾಡಿಗಾಗಿ ಊರೂರು ಸುತ್ತುತ್ತಿದ್ದೆ. ನನಗಿನ್ನೂ ಗಾಯದ ಮಚ್ಚೆಯಂತೆ ಚೆನ್ನಾಗಿ ನೆನಪಿದೆ- ನನ್ನ ತಂದೆ ಊರಿನ ಎಲ್ಲಾ ಜನಗಳ ಬಳಿಗೂ ಹೋಗಿ ಅವರಿಗೆ ಕ್ಷೌರ ಮಾಡುತ್ತಿದ್ದರು. ಆದರೆ ಅವರು ದಲಿತ ಕೇರಿಗಳಿಗೆ ಮಾತ್ರ ಹೋಗುತ್ತಿರಲಿಲ್ಲ. ದಲಿತರ ಕೇರಿಯಿಂದ ಹೊಲೆಯರ ಯಂಕ ಮತ್ತದೇ ಜಾಗದಲ್ಲಿ ಪ್ರತ್ಯಕ್ಷನಾಗಿ ತಾನು ಪಡೆದುಕೊಂಡಿದ್ದ ಕತ್ತರಿಯನ್ನು ಮರಳಿ ನನ್ನ ತಂದೆಯವರಿಗೆ ಹಿಂತಿರುಗಿಸುತ್ತಿದ್ದ. ನಂತರ ತಂದೆ ಆ ಕತ್ತರಿಯನ್ನು ಸಗಣಿಯಿಂದ ತಿಕ್ಕಿ ತೊಳೆಯುತ್ತಿದ್ದರು. ನನಗಿದು ತಮಾಷೆಯಾಗಿ ಕಾಣುತ್ತಿತ್ತು.

ಅಷ್ಟೊತ್ತಿಗಾಗಲೇ ನಾನು ನನ್ನ ತಂದೆಯ ವೃತ್ತಿಯೊಂದಿಗೆ ನಂಟು ಬೆಳೆಸಿಕೊಂಡಿದ್ದೆ. ನಾನು  ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರಬೇಕಾದರೆ ನನ್ನ ಸ್ನೇಹಿತ ಹೊಲೆಯರ ನಾಣಿ ಹುಟ್ಟಿನಿಂದಲೂ ಕ್ಷೌರಿಕರನ್ನೇ ಕಾಣದವನಂತೆ ಉದ್ದಾನುದ್ದ ಕೂದಲು ಬಿಟ್ಟು ಎಲ್ಲರಲ್ಲೂ ಹಾಸ್ಯದ, ಗೇಲಿಯ ವಸ್ತುವಾಗಿದ್ದ. ಅದೊಂದು ದಿನ ನಾನು ಮನೆಯಲ್ಲಿ ಯಾರಿಗೂ ಕಾಣದಂತೆ ಕತ್ತರಿಯೊಂದನ್ನು ನನ್ನ ಬ್ಯಾಗಿನಲ್ಲಿ ಅವಿಸಿಟ್ಟು ಶಾಲೆಗೆ ಹೋಗಿ ಅಲ್ಲಿ ನನ್ನ ಸ್ನೇಹಿತ ನಾಣಿಯನ್ನು ಶಾಲೆಯ ಹಿಂದಕ್ಕೆ ಕರೆದುಕೊಂಡು ಹೋದೆ. ನನಗೆ ತಿಳಿದಿದ್ದ ಕ್ಷೌರಿಕ ಪ್ರಾವೀಣ್ಯತೆಯನ್ನು ಬಳಸಿಕಂಡು ಅವನ ಉದ್ದನೆಯ ಕೂದಲನ್ನು ನನ್ನ ಕತ್ತರಿಗೆ ಅರ್ಪಿಸಿದ್ದೆ.

ನಂತರ ನಾನು ಮನೆಗೆ ಬರುವಷ್ಟರಲ್ಲಿ ಅದು ಹೇಗೋ ಯಾರಿಂದಲೋ ನಾನು ನನ್ನ ಸ್ನೇಹಿತ ನಾಣಿಗೆ ಕ್ಷೌರ ಮಾಡಿದ್ದು ‘ಹೊಲೇರ ನಾಣಿಗೆ ಹಜಾಮತ್ ಮಾಡ್ದ’ ಎಂಬ ಸುದ್ದಿಯಾಗಿ, ಆ ಸುದ್ದಿ ನಾನು ಊರು ಬಿಡುವಂತೆ ಮಾಡಿತು. ಅದೊಂದು ದಿನ ಶಾಲೆ ಬಿಡಿಸಿ ನನ್ನ ತಂದೆ ರಾತ್ರೋರಾತ್ರಿ ನೆಂಟರೊಬ್ಬರ ಸಹಾಯದಿಂದ ನನ್ನನ್ನು ಮೈಸೂರಿನ ನೆಂಟರೊಬ್ಬರ ಮನೆ ತಲುಪುವಂತೆ ಮಾಡಿತು. ಮುಂದೆ ನಾನು ಮೈಸೂರಿಗೆ ಬಂದು ಬೆಳೆಯುತ್ತಾ ಹೋದಂತೆ ಈ ನಾಟಕ, ಸಿನಿಮಾ, ಮೈಸೂರಿನ ಟೌನ್ ಹಾಲ್ ಎಲ್ಲವೂ ನನ್ನ ಬದುಕಿನ ಭಾಗವಾಗಿ ಹೋಯಿತು.

ಗೆಳೆಯರನ್ನು ಕಟ್ಟಿಕೊಂಡು ಕುರುಕ್ಷೇತ್ರ ನಾಟಕ ಮಾಡುತ್ತಿದ್ದಾಗ ಅತಿಥಿಯಾಗಿ ಬಂದ ಖ್ಯಾತ ನಟ ಉದಯ್ ಕುಮಾರ್ ನನ್ನ ಅಭಿನಯ ನೋಡಿ ಅವರ ಉದಯ ಕಲಾನಿಕೇತನದೊಳಕ್ಕೆ ಕರೆದುಕೊಂಡರು.ಅವರು ನನ್ನ ಕ್ಷೌರಿಕ ವೃತ್ತಿ ಮತ್ತು ನಟನೆಯ ಪ್ರವೃತ್ತಿ ಎರಡನ್ನೂ ಗೌರವಿಸಿ ನಾನು ಮೈಸೂರಿನಲ್ಲಿ ಬೆಳೆಯುವಂತೆ ಉತ್ತೇಜಿಸಿದರು.

1991 ರಲ್ಲಿ ಮೈಸೂರಿನಲ್ಲೇ ಇದ್ದೆ. ಅವತ್ತೊಂದು ದಿನ ಪತ್ರಿಕೆಗಳ ಮುಖಪುಟದ ತುಂಬಾ ನೆಲ್ಸನ್ ಮಂಡೇಲಾರ ಫೋಟೋ ಮತ್ತು ಲೇಖನಗಳಿದ್ದವು. 27 ವರ್ಷಗಳ ಕಾಲ ಅವರು ಆಫ್ರಿಕಾದ ಜೈಲಿನಲ್ಲಿದ್ದು ಬಿಡುಗಡೆಯಾದ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿ ಕರಗಿ ಹೋಗಿದ್ದೆ. ನೆಲ್ಸನ್ ಮಂಡೇಲಾರ ಬಗ್ಗೆ ಸಿಕ್ಕಷ್ಟು
ತಿಳಿದುಕೊಂಡೆ. ಮುಂದೆ ಕಲೆ ಮತ್ತು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದ ಮೇಲೆ ನನ್ನ ಜಾತಿ ಮತ್ತು ವೃತ್ತಿಯ ಕಾರಣಗಳಿಗಾಗಿ ನಾನು ಬಾಡಿಗೆಗೆ ಮನೆ ಸಿಗದೆ ಪರಿತಪಿಸುವಂತಾದೆ. ದೊಡ್ಡ ಹುದ್ದೆಯಲ್ಲಿದ್ದ, ದೊಡ್ಡ ಪತ್ರಿಕೆಗಳಲ್ಲಿದ್ದ ನನ್ನ ಜಾತಿಯವರನ್ನು ಗುರುತಿಸಿ ಅವರನ್ನು ಹುಡುಕಿಕೊಂಡು ಹೋದಾಗ ಅವರೆಲ್ಲಾ
ನನ್ನಿಂದ ತಪ್ಪಿಸಿಕೊಂಡು ದೂರ ಹೋಗುತ್ತಿದ್ದರು.

ಮುಂದೆ ಹೇಗೋ ನನ್ನ ಕ್ಷೌರಿಕ ವೃತ್ತಿಯ ಮೂಲಕ ಬೆಂಗಳೂರಿನಲ್ಲಿ ನನ್ನ ಪುಟ್ಟ ಬದುಕನ್ನು ಕಟ್ಟಿಕೊಂಡೆ. ಜುಲೈ 18, 1997 ನಾನು ಮರೆಯಲಾಗದ ದಿನ. ಅವತ್ತು ನನ್ನ ಹೀರೋ ನೆಲ್ಸನ್ ಮಂಡೇಲಾ ಹುಟ್ಟಿದ ದಿನ. ಅವತ್ತು ಬೆಂಗಳೂರಿನಲ್ಲಿ ತೊಡಗಿಕೊಂಡಿರುವ ನನ್ನದೇ ವೃತ್ತಿಯ 25 ಜನರ ಪುಟ್ಟ ತಂಡ ಕಟ್ಟಿಕೊಂಡು, ಬೆಂಗಳೂರಿನ ಎಲ್ಲಾ ಸ್ಲಮ್ಮುಗಳಲ್ಲೂ ಅಲೆದು ಸಿಕ್ಕಷ್ಟು ಮಂದಿಗೆ ಉಚಿತ ಕ್ಷೌರ ಮಾಡಿದೆವು. ಹಳೆಯ ಸೆಂಟ್ರಲ್ ಜೈಲ್ ಪ್ರವೇಶಿಸಿ ಅಲ್ಲಿನ ಖೈದಿಗಳಿಗೆ ಉಚಿತ ಕ್ಷೌರ ಮಾಡಿದೆವು. ಇವತ್ತಿಗೂ ಆ ಖೈದಿಗಳು ನನ್ನನ್ನು ಅಭಿಮಾನದಿಂದ ನೋಡುತ್ತಾರೆ.

1999ರಲ್ಲಿ ಅಸ್ಪೄಶ್ಯತಾ ಆಂದೋಲನ ಎಂಬ ಬ್ಯಾನರ್ ಕಟ್ಟಿಕೊಂಡು ನಮ್ಮ ಪುಟ್ಟ ತಂಡ ಈ ನಾಡಿನ ಎಲ್ಲಾ ಜಿಲ್ಲೆಗಳಿಗೂ ಹೋಗಿ, ವಿಶೇಷವಾಗಿ ದಲಿತರ ಕೇರಿಗಳ ದೇವಸ್ಥಾನದ ಚಾವಡಿ, ಅಶ್ವಥ್ಥ ಕಟ್ಟೆಗಳಲ್ಲಿ ಅಂಬೇಡ್ಕರ್, ಗಾಂಧಿ, ನೆಲ್ಸನ್ ಮಂಡೇಲರ ಫೋಟೋಗಳನ್ನು ತೂಗು ಹಾಕಿ ‘ಅಸ್ಪೃಶ್ಯತೆಗೆ ದಿಕ್ಕಾರ’
ಎಂಬ ಬೀದಿ ನಾಟಕ ಆಡಿಸುತ್ತಾ ಎಲ್ಲರಿಗೂ ಕ್ಷೌರ ಮಾಡುತ್ತಿದ್ದೆವು.

‘ಹಜಾಮ’ ಎನ್ನುವ ಪದ ನನಗೆ ನೋವುಂಟುಮಾಡಿದೆ, ನಿಜ. ಆದರೆ ಈ ವೃತ್ತಿಯಲ್ಲಿ ನನಗೆ ಅವಮಾನ, ಅನುಮಾನ ಮತ್ತು ಸನ್ಮಾನಗಳು ದೊರೆತಿವೆ. ನಾನು ಕತ್ತರಿ ಹಿಡಿದು ಬೀದಿಗೆ ಬಂದ ಮೇಲೆ ನನ್ನನ್ನು ಪತ್ರಿಕೆಗಳು ಗುರುತಿಸಿದವು. ನನ್ನನ್ನು ಬೆಂಬಲಿಸಿ ಅನೇಕ ಸಾಹಿತಿಗಳು ಮಾತಾಡಿದರು. ಪ್ರೊ.ಜಿ.ವೆಂಕಟ
ಸುಬ್ಬಯ್ಯ, ಎ.ಎನ್.ಮೂರ್ತಿರಾಯರು, ನಿಟ್ಟೂರು ಶ್ರೀನಿವಾಸರಾಯರು, ಚೆನ್ನವೀರ ಕಣವಿ, ಹಾಮಾನಾ, ಯು.ಆರ್. ಅನಂತಮೂರ್ತಿ, ಡಾ ಎಲ್. ಹನುಮಂತಯ್ಯ, ಗಿರೀಶ್ ಕಾರ್ನಾಡ್, ಶಿವರಾಮ ಕಾರಂತರಂತಹ ದೊಡ್ಡ ಸಾಹಿತಿಗಳನ್ನು ಮುಟ್ಟಿ ಅವರಿಗೆ ಕ್ಷೌರ ಮಾಡಿದ ಸ್ಪರ್ಶಸುಖ ನನಗೆ ಸಿಕ್ಕಿದೆ. ನನ್ನ ವೃತ್ತಿಯ ಬಗ್ಗೆ ನನಗೆ ಪ್ರೀತಿ ಇದೆ. ಈ ವೃತ್ತಿ ನನಗೆ ಎಲ್ಲರ ಪ್ರೀತಿಯನ್ನು ಗಳಿಸಿಕೊಟ್ಟಿದೆ.

‘ಒಮ್ಮೆ ನೆಲ್ಸನ್ ಮಂಡೇಲಾರನ್ನು ಮುಟ್ಟಿ ಅವರಿಗೆ ಕ್ಷೌರ ಮಾಡಬೇಕೆಂಬ ಮಹತ್ವದ ಕನಸೊಂದು ನನ್ನಲ್ಲಿ ಹುಟ್ಟಿಕೊಂಡಿದೆ. ಸೌತ್ ಆಫ್ರಿಕಾದ ಎಂಬೆಸಿಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯರೊಬ್ಬರು ನನಗೆ ಪಾಸ್ಪೋರ್ಟ್ ಕೊಡಿಸಿ ನೆಲ್ಸನ್ ಮಂಡೇಲಾರನ್ನು ಕಾಣುವ ನನ್ನ ಕನಸಿಗೆ ಬೆಂಬಲವಾಗಿ ನಿಂತಿದ್ದಾರೆ. ಬಹುಶಃ ಈ ವರ್ಷದ ಕೊನೆಯಲ್ಲಿ ನಾನು ಮಂಡೇಲರನ್ನು ಮುಟ್ಟುವ ನಿರೀಕ್ಷೆಯಲ್ಲಿದ್ದೇನೆ’.

ಹಾಗಂತ ಹೇಳಿ ದೀರ್ಘವಾದ ನಿಟ್ಟುಸಿರಿಟ್ಟು ಮಾತು ಮುಗಿಸಿದ ಮುತ್ತುರಾಜು ನನ್ನ ಕಣ್ಣನ್ನೇ ನೋಡುತ್ತಿದ್ದರು.

ಕಥೆ ಹೇಳಲೆಂದೇ ಬದುಕಿರುವ ಮಾರ್ಕ್ವೆಸ್

ಗಾಳಿಬೆಳಕು

ನಟರಾಜ ಹುಳಿಯಾರ್

ಐದಾರು ವರ್ಷಗಳ ಕೆಳಗೆ ಲ್ಯಾಟಿನ್ ಅಮೆರಿಕಾದ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್ ಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆಗ ಮಾರ್ಕ್ವೆಸ್ ನ ಮನಸ್ಥಿತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಸಾವನ್ನು ಮುಂದೂಡಲೋ ಅಥವಾ ಸಾವಿನ ಆತಂಕದಿಂದ ಪಾರಾಗಲೋ ಎಂಬಂತೆ ಮಾರ್ಕ್ವೆಸ್ ಆತ್ಮಚರಿತ್ರೆ ಬರೆಯಲಾರಂಭಿಸಿದ. ಎರಡು ವರ್ಷಗಳ ಕೆಳಗೆ ಆ ಆತ್ಮಚರಿತ್ರೆ `ಲಿವಿಂಗ್ ಟು ಟೆಲ್ ದಿ ಟೇಲ್ ಪ್ರಕಟವಾಯಿತು. ಬೃಹತ್ ಸಂಪುಟವಾದ ಈ ಆತ್ಮಚರಿತ್ರೆ ಮಾರ್ಕ್ವೆಸ್ ಬದುಕಿನ ತಾರುಣ್ಯದ ಘಟ್ಟದಲ್ಲಿ ನಿಂತಿದೆ. ಇದಾದ ನಂತರ ಮಾರ್ಕ್ವೆಸ್`ಇನ್ನೂ ಎರಡು ಸಂಪುಟ ಬರೆಯುತ್ತೇನೆ ಎಂದಿದ್ದ. ಪ್ರಾಯಶಃ ಬರೆಯುತ್ತಿರಬಹುದು. ಆದರೆ ಅವನ ಪುಸ್ತಕದ ಶೀರ್ಷಿಕೆ `ಕತೆ ಹೇಳಲು ಬದುಕುತ್ತಿರುವೆ’ ಎಂಬುದು ನೆನಪಾದಾಗಲೆಲ್ಲ ವಿಚಿತ್ರವಾದ ರೋಮಾಂಚನವಾಗುತ್ತಿರುತ್ತದೆ.

 
ಮಾರ್ಕ್ವೆಸ್ ಪುಸ್ತಕದ ಈ ಶೀರ್ಷಿಕೆ ಅನೇಕರಲ್ಲಿ ಅರೇಬಿಯನ್ ನೈಟ್ಸ್ ಕತೆಗಳನ್ನು ನೆನಪಿಸಿದ್ದರೆ ಆಶ್ಚರ್ಯವಲ್ಲ: ಹೆಂಗಸರ ಬಗ್ಗೆ ಅಸೂಯೆ, ಅನುಮಾನಗಳ ಗೀಳಿಗೆ ತುತ್ತಾದ ಅರೇಬಿಯಾದ ಸುಲ್ತಾನ ಶೆಹ್ರಿಯಾರ್ ಪ್ರತಿಸಂಜೆ ಒಬ್ಬಳನ್ನು ಮದುವೆಯಾಗುತ್ತಾನೆ. ಮಾರನೆಯ ಬೆಳಗ್ಗೆ ಅವಳನ್ನು ಮುಗಿಸುತ್ತಾನೆ. ಈ ಪರಿಪಾಠವನ್ನು ಮುಂದುವರಿಸುತ್ತಿದ್ದ ಸುಲ್ತಾನ ಜಾಣಹುಡುಗಿ ಶಹರ್ಜಾದೆಯನ್ನು ಒಂದು ಸಂಜೆ ವರಿಸುತ್ತಾನೆ. ಆ ರಾತ್ರಿ ಅವಳು ಕತೆಯೊಂದನ್ನು ಹೇಳತೊಡಗುತ್ತಾಳೆ. ಅವಳ ಕತೆಯೊಳಗಣ ಕತೆಯ ರಚನೆ ಎಷ್ಟೊಂದು ಅದ್ಭುತವಾಗಿರುತ್ತದೆಂದರೆ, ಬೆಳಗಾಗುವುದರೊಳಗೆ ಮುಂದಿನ ಕತೆ ಏನಿರುತ್ತದೆ ಎಂದು ರಾಜನಿಗೆ ಕುತೂಹಲ ಹುಟ್ಟುತ್ತದೆ. ಮತ್ತೆ ರಾತ್ರಿ ಕತೆ ಶುರುವಾಗುತ್ತದೆ… ಹೀಗೆ ಸಾವಿರದ ಒಂದು ರಾತ್ರಿಯವರೆಗೂ ಈ ಅರೇಬಿಯನ್ ನೈಟ್ಸ್ ಕತೆಗಳು ಮುಂದುವರಿಯುತ್ತವೆ. ಶಹಜರ್ಾದೆಯನ್ನು ಕೊಲ್ಲುವ ಇರಾದೆಯನ್ನು ಕೊನೆಗೂ ಸುಲ್ತಾನ ಕೈ ಬಿಡುತ್ತಾನೆ.

 
ಈ ಕತೆಗಳ ಮೋಹಕ ಲೋಕ ಹಾಗೂ ಉದ್ದೇಶವನ್ನು ಕುರಿತು ಯೋಚಿಸುತ್ತಿದ್ದರೆ, ಹಳ್ಳಿಯೂರುಗಳಲ್ಲಿ ವಿಘ್ನ ನಿವಾರಣೆಗೆ ಕತೆ ಓದಿಸುವ ಆಚರಣೆ ನೆನಪಾಗುತ್ತದೆ. ಸಾವಿರಾರು ವರ್ಷಗಳಿಂದಲೂ ಕತೆ ಎನ್ನುವುದು ಅಪಾಯಗಳನ್ನು ದಾಟಬಲ್ಲ, ಸಾವನ್ನು ಮುಂದೂಡಬಲ್ಲ ಸಾಧನವೆಂಬಂತೆ ಬಳಕೆಯಾಗುತ್ತಾ ಬಂದಿರುವ ರೀತಿ ಕಂಡು ಅಚ್ಚರಿಯಾಗುತ್ತದೆ. ಕಾಲದ ನಾಗಾಲೋಟದ ನಡುವೆ ಕೂಡ ಮಾನವನ ಮೂಲ ಭಯ, ಬಯಕೆಗಳು ಹೆಚ್ಚು ಕಡಿಮೆ ಹಾಗೆಯೇ ಉಳಿದುಬಿಡುತ್ತವೆಯೆ? ಇಪ್ಪತ್ತೊಂದನೆಯ ಶತಮಾನದ ಶುರುವಿನಲ್ಲಿ ಬಂದ ಮಾರ್ಕ್ವೆಸ್ ನ ಆತ್ಮಚರಿತ್ರೆಯಲ್ಲೂ ಶಹರ್ಜಾದೆಯ ಭಯ ಹಾಗೂ ಬಯಕೆಗಳ ಪ್ರತಿಬಿಂಬವಿದೆ, ನಿಜ. ಆದರೆ `ಲಿವಿಂಗ್ ಟು ಟೆಲ್ ದಿ ಟೇಲ್ ಎಂಬ ಶೀರ್ಷಿಕೆ ಹಾಗೂ ಈ ಪುಸ್ತಕ ಕೇವಲ ಸಾವನ್ನು ಮುಂದೂಡುವ ಬಯಕೆಗಷ್ಟೇ ಸೀಮಿತವೆಂದು ನನಗನ್ನಿಸಿಲ್ಲ. ಮಾಕ್ವರ್ೆಜ್ ಇಷ್ಟು ದೀರ್ಘಕಾಲ ಬದುಕಿರುವುದೇ ಕತೆ ಹೇಳಲು ಎಂಬುದನ್ನೂ ಇದು ಹೇಳುತ್ತದೆ. ಎಲ್ಲರ ಹಾಗೆ ಮಾಕ್ವರ್ೆಜ್ ಕೂಡ ಒಬ್ಬ ಮಾನವಜೀವಿಯಾಗಿ ಬಗೆಬಗೆಯ ಪಾತ್ರ ನಿರ್ವಹಿಸಿದ್ದಾನೆ. ಪತ್ರಕರ್ತ, ಪ್ರೇಮಿ, ವಿಟ, ಪತಿ, ಬುದ್ಧಿಜೀವಿ, ಖ್ಯಾತಿವಂತ, ನೊಬೆಲ್ ಪ್ರಶಸ್ತಿ ಪಡೆದ ದೊಡ್ಡ ಲೇಖಕ, ಕ್ರಾಂತಿಗಳಿಗೆ ಫಂಡ್ ಮಾಡಬಲ್ಲಷ್ಟು ಪ್ರಭಾವಶಾಲಿ…ಇದೆಲ್ಲಕ್ಕಿಂತ ಹೆಚ್ಚಾಗಿ, ನನ್ನ ಸೀಮಿತ ಓದಿನ ತಿಳಿವಳಿಕೆಯ ಪ್ರಕಾರ ಇವತ್ತು ಜಗತ್ತಿನಲ್ಲಿ ಬದುಕಿರುವ ಅತ್ಯಂತ ಶ್ರೇಷ್ಠ ಕಾದಂಬರಿಕಾರ…

 
ಮೊನ್ನೆ ಮಾರ್ಚ್ ತಿಂಗಳಿಗೆ ಎಂಬತ್ತೊಂದು ವರ್ಷ ತಲುಪಿದ  ಮಾರ್ಕ್ವೆಸ್ ಕಳೆದ ವರ್ಷ ಸಭೆಯೊಂದರಲ್ಲಿ ತನ್ನ ಪ್ರಖ್ಯಾತ ಕಾದಂಬರಿ `ಒನ್ ಹಂಡ್ರಡ್ ಯಿಯರ್ಸ್ ಆಫ್ ಸಾಲಿಟ್ಯೂಡ್ (ಎ.ಎನ್.ಪ್ರಸನ್ನ ಈ ಅದ್ಭುತ ಕಾದಂಬರಿಯನ್ನು ಕನ್ನಡೀಕರಿಸಿ ಕೊಲೆ ಮಾಡಿರುವ ಗಂಭೀರ ಆಪಾದನೆಗಳಿವೆ, ಇರಲಿ!) ಕಾದಂಬರಿ ಬರೆದ ಕಾಲವನ್ನು ಮತ್ತೆ ನೆನಪಿಸಿಕೊಂಡಿದ್ದ:  ಮಾರ್ಕ್ವೆಸ್ ಈ ಕಾದಂಬರಿ ಬರೆಯುವ ಹದಿನೆಂಟು ತಿಂಗಳ ಕಾಲ ಮನೆ ನಿಭಾಯಿಸಲು ಅವನ ಹೆಂಡತಿ ಮರ್ಸಿಡಿಸ್ ತನ್ನ ಒಡವೆಗಳನ್ನು ಮಾರಿದ್ದಳು. ಆಗಸ್ಟ್ 1967ರಲ್ಲಿ ಬರೆದು ಮುಗಿಸಿದ ಈ ಕಾದಂಬರಿಯನ್ನು ಕಳೆದ ನಲವತ್ತೊಂದು ವರ್ಷಗಳಲ್ಲಿ ಜಗತ್ತಿನ ಐವತ್ತು ಮಿಲಿಯನ್ಗಿಂತ ಹೆಚ್ಚು ಜನ ಓದಿದ್ದಾರೆ. 1967ರಲ್ಲಿ ಆ ಕಾದಂಬರಿ ಬರೆದು ಮುಗಿಸಿದ ಮೇಲೆ ಮಾರ್ಕ್ವೆಸ್ ಹಾಗೂ ಮರ್ಸಿಡಿಸ್ ಕಾದಂಬರಿಯ ಹಸ್ತಪ್ರತಿಯನ್ನು ಬ್ಯೂನಸ್ ಐರಿಸ್ನಲ್ಲಿದ್ದ ಸಂಪಾದಕನೊಬ್ಬನಿಗೆ ಕಳಿಸಲು ಪೋಸ್ಟ್ ಆಫೀಸಿಗೆ ಹೋಗುತ್ತಾರೆ. ಅದರ ಅಂಚೆವೆಚ್ಚ 82 ರೂಪಾಯಿ. ಆದರೆ ಅವರ ಹತ್ತಿರ ಇದ್ದದ್ದು 53 ರೂಪಾಯಿ. ಅಂಚೆ ತೂಕ ಕಡಿಮೆಯಾಗಲೆಂದು ಹಸ್ತಪ್ರತಿಯನ್ನು ಎರಡು ಭಾಗ ಮಾಡಿ ಮೊದಲು ಒಂದು ಭಾಗವನ್ನು ಸಂಪಾದಕನಿಗೆ ಕಳಿಸುತ್ತಾರೆ. ತಮಾಷೆಯೆಂದರೆ, ಅದನ್ನು ಕಳಿಸಿದ ಮೇಲೆ ತಾವು ಕಾದಂಬರಿಯ ಎರಡನೆಯ ಭಾಗ ಕಳಿಸಿದ್ದೇವೆಂಬುದು ಇಬ್ಬರಿಗೂ ಗೊತ್ತಾಗುತ್ತದೆ! ಅದೃಷ್ಟವಶಾತ್, ಆ ಸಂಪಾದಕನಿಗೆ ಕಾದಂಬರಿಯ ಮೊದಲ ಭಾಗವನ್ನು ಓದುವ ಕಾತುರ ಹುಟ್ಟುತ್ತದೆ. ಆತ ಮೊದಲ ಭಾಗವನ್ನು ಕಳಿಸುವಂತೆ ಕೋರಿ ಹಣ ಕಳಿಸುತ್ತಾನೆ. ಆಮೇಲೆ ಕಾದಂಬರಿಯ ಮೊದಲ ಭಾಗ ಅವನಿಗೆ ತಲುಪುತ್ತದೆ. ಸಭೆಯಲ್ಲಿ ಇದೆಲ್ಲ ನೆನೆಸಿಕೊಂಡ ಮಾರ್ಕ್ವೆಸ್ ನ ಲಹರಿಯಲ್ಲಿ ಎಲ್ಲ ಬರಹಗಾರರಲ್ಲೂ ಅಸೂಯೆ ಹುಟ್ಟಿಸಬಲ್ಲ ಮಾತುಗಳಿವೆ:

 


`ಹದಿನೇಳು ವರ್ಷದವನಾಗಿದ್ದಾಗಿನಿಂದ ಹಿಡಿದು ಇವತ್ತಿನ ಬೆಳಗ್ಗೆಯ ತನಕ ನಾನು ಮಾಡಿರುವುದು ಇಷ್ಟೇ. ಪ್ರತಿದಿನ ಬೇಗ ಏಳುವುದು, ಹಿಂದೆಂದೂ ಯಾರೂ ಹೇಳದ ಕತೆಯೊಂದನ್ನು ಹೇಳಿ, ಅಸ್ತಿತ್ವದಲ್ಲೇ ಇಲ್ಲದ ಓದುಗನ ಬದುಕನ್ನು ಖುಷಿಯಲ್ಲಿಡುವ ಏಕಮಾತ್ರ ಉದ್ದೇಶದಿಂದ ಟೈಪ್ರೈಟರ್ ಮೇಲಿನ ಖಾಲಿಹಾಳೆಯನ್ನು ತುಂಬಿಸಲು ಕೀಗಳ ಮೇಲೆ ಬೆರಳಿಡುವುದು…ನನ್ನ ರೂಮಿನ ಏಕಾಂತದಲ್ಲಿ ಕೂತು ಬರೇ 28 ಅಕ್ಷರಗಳನ್ನು ಹಾಗೂ ಎರಡು ಬೆರಳುಗಳನ್ನು ನನ್ನ ಏಕಮಾತ್ರ ಅಸ್ತ್ರವಾಗಿ ಬಳಸಿ ಬರೆದದ್ದನ್ನು ಹತ್ತು ಲಕ್ಷ ಜನ ಓದುತ್ತಾರೆ ಎಂದರೆ ಇದು ನಿಜಕ್ಕೂ ಒಂದು ಹುಚ್ಚಲ್ಲವೆ!
ಎಂಬತ್ತೊಂದು ದಾಟಿರುವ ಮಾರ್ಕ್ವೆಸ್ ತನ್ನ ಹದಿನೇಳನೆಯ ವಯಸ್ಸಿನಿಂದ ಇಲ್ಲಿಯವರೆಗೆ, ಅಂದರೆ ಸುಮಾರು ಅರವತ್ತನಾಲ್ಕು ವರ್ಷಕಾಲ ದಿನನಿತ್ಯ ಹೊಸತನ್ನು ಬರೆಯಬಲ್ಲ ಲೇಖಕನಾಗಿ, ಅದರಲ್ಲೂ ಜೀವಂತವಾಗಿ ಬರೆಯುವ ಲೇಖಕನಾಗಿ ಉಳಿದಿರುವುದು ಅದ್ಭುತವಾಗಿದೆ. ತನ್ನ ಸಮಾಜದ ಎಲ್ಲ ಟೆನ್ಷಷ್ಗಳನ್ನೂ ಕಣ್ಣುಬಿಟ್ಟು ನೋಡುವ, ಅನುಭವಿಸುವ ಲೇಖಕ ಆರೇಳು ದಶಕಗಳ ಕಾಲ ಅತ್ಯಂತ ಮಹತ್ವದ್ದನ್ನೇ ಸೃಷ್ಟಿಸಬಲ್ಲವನಾಗಿ ಉಳಿಯುವುದು, ಹೆಚ್ಚುಕಡಿಮೆ ಒಂದು ಶತಮಾನದ ಚರಿತ್ರೆಗೆ ಸಾಕ್ಷಿಯಾಗಿ ಅದನ್ನು ಆಳವಾಗಿ ಗ್ರಹಿಸಿ ಬರೆಯಬಲ್ಲವನಾಗಿರುವುದು, ಅದರ ಜೊತೆಗೆ ನಿರಂತರ ಸೃಜನಶೀಲನಾಗಿ ಉಳಿದಿರುವುದು ನಿಜಕ್ಕೂ `ಭುವನದ ಭಾಗ್ಯ’ ಅಲ್ಲವೆ?

 
ನಮ್ಮಲ್ಲಿ ಕಾರಂತ, ಕುವೆಂಪು, ಮಾಸ್ತಿ ಎಲ್ಲರೂ ದೀರ್ಘಕಾಲ ಬದುಕಿದ್ದರೂ ಅವರ ಕ್ರಿಯಾಶೀಲತೆಯ ಕಾವು ಅರವತ್ತರ ಅಂಚಿಗೆ ಆರಿದಂತೆ ಕಾಣುತ್ತದೆ. ಕಾರಂತರ ಜೀವಿತದಲ್ಲಿ ಕಡೆಯ ಹತ್ತಾರು ವರ್ಷಕಾಲ ನಿಜಕ್ಕೂ ಅರ್ಥಪೂರ್ಣವಾದಕತೆಗಳು ಅವರೊಳಗಿದ್ದರೂ ಅದನ್ನು ಹೇಳಿ ಬರೆಸಲು ಹೋಗಿ ತಮ್ಮ ಕಲೆಯನ್ನು ಕಳಕೊಂಡಂತಿದೆ. ಮಾರ್ಕ್ವೆಸ್ 81ರ ವಯಸ್ಸಿನಲ್ಲಿ ಕೂಡ ಇನ್ನೂ ಯಾರಿಗೂ ಹೇಳಿ ಬರೆಸಿದಂತಿಲ್ಲ. ಬರೆಯುವುದಕ್ಕೂ, ಬರೆಸುವುದಕ್ಕೂ ಇರುವ ಮುಖ್ಯ ವ್ಯತ್ಯಾಸ ಎಲ್ಲ ಬರಹಗಾರರಿಗೂ ಗೊತ್ತಿರುತ್ತದೆ: ಬರವಣಿಗೆಯೆಂಬುದು ಅಂತಿಮವಾಗಿ ತನ್ನೊಡನೆ ನಡೆಸುವ ಸಂವಾದ. ಅದನ್ನು ಇನ್ನೊಬ್ಬರಿಗೆ ಹೇಳಿ ಬರೆಸಿದಾಗ, ಇನ್ನೊಬ್ಬರೊಡನೆ ನಡೆಸುವ ಸಂವಾದವಾದಾಗ ಅದು ಎಕ್ಸ್ಟರ್ನಲ್ ಆಗುತ್ತದೆ. ಹಾಗಾದತಕ್ಷಣ ಬರವಣಿಗೆಯ ಜೀವ ಕುಂದಿ ಅದರ ಸ್ಟ್ರಕ್ಚರ್ ಸಡಿಲವಾಗತೊಡಗುತ್ತದೆ.

 
 ಮಾರ್ಕ್ವೆಸ್ ಬದುಕಿದ್ದು ಹಾಗೂ ಬದುಕಿರುವುದೇ ಕತೆ ಹೇಳಲು; ಅಂದರೆ `ಲಿವಿಂಗ್ ಟು ಟೇಲ್ ಎನ್ನುವುದು ಅವನ ಇಡೀ ಜೀವನದ ಮೂಲ ಉದ್ದೇಶಕ್ಕೇ ಅನ್ವಯಿಸುವ ಮಾತು. ಮಾರ್ಕ್ವೆಸ್ ನನ್ನು ಒಂದು ಇಡೀ ಜೀವಮಾನ ಹಿಡಿದಿಟ್ಟಿರುವ ಈ ಧ್ಯಾನಶೀಲ ಉದ್ದೇಶ ಎಲ್ಲ ಲೇಖಕ, ಲೇಖಕಿಯರಿಗೂ ಸ್ಫೂರ್ತಿ, ಪ್ರೇರಣೆ ತರುವ ಮಾದರಿಯಂತಿದೆ; ಒಂದು ಜೀವಮಾನದ ಧ್ಯಾನ ಕಲಿಸಿಕೊಡುವ ಕುಶಲತೆ, ತರುವ ಆಳ, ಹೊಸತನ, ಹೊಳೆಯಿಸುವ ಸತ್ಯಗಳು ಹಾಗೂ ವಿಶಿಷ್ಟ ಜೀವನದರ್ಶನ ಎಷ್ಟು ವ್ಯಾಪಕವಾಗಿರಬಹುದಲ್ಲವೇ ಎಂಬುದರ ಬಗ್ಗೆ ನಾವೆಲ್ಲ ಒಮ್ಮೆಯಾದರೂ ಗಾಢವಾಗಿ ಚಿಂತಿಸುವಂತೆ ಮಾಡುತ್ತದೆ. ಮಾರ್ಕ್ವೆಸ್ ನ`ಲಿವಿಂಗ್ ಟು ಟೆಲ್ ದಿ ಟೇಲ್’ ಎಂಬ ಜೀವನದ ಗುರಿ ನಮ್ಮನಮ್ಮ ಜೀವನದ ಉದ್ದೇಶಗಳನ್ನು ನಾವು ಆಗಾಗ್ಗೆಯಾದರೂ ಸ್ಪಷ್ಟಪಡಿಸಿಕೊಳ್ಳಬೇಕೆಂದು ಪಿಸು ನುಡಿಯುತ್ತದೆ.

ಗೇರುತೋಪಿನ ಕಾವಲುಗಾರ

ಹೈವೇ 7                                                                     ವಿ ಎಂ ಮಂಜುನಾಥ್ 

———-

ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭ ಎಂಬ ಆತ್ಮಕಥನದ ಕೆಲವು ವಿಶಿಷ್ಟ ಭಾಗಗಳು 

 

* * *

ನನ್ನ ಗ್ರಾಮದ ಕುಂಟಮುನಿಸ್ವಾಮಿ ಗೇರುತೋಪಿನ ಕಾವಲುಗಾರನಾಗಿ ಸೇರಿಕೊಂಡ. ಅವನಿಗೆ ಒಂದು ಕೈ ಇರಲಿಲ್ಲ. ನಾನು ಚಿಕ್ಕಂದಿನಿಂದ ಅವನನ್ನು ಹತ್ತಿರದಿಂದ ನೋಡಿ ಬೆಳೆದಿದ್ದರೂ ಅದು ಯಾವ ಕೈ ಎಂದು ನನಗೆ ಈಗ ಹೇಳಲಾಗುತ್ತಿಲ್ಲ ಎನ್ನುವುದು ಸಂಕಟ ತರಿಸುತ್ತಿದೆ. ಅವನು ಕೈ ಕಳೆದುಕೊಂಡಿದ್ದು ಅಪಘಾತದಲ್ಲಿ. ಇವನು ಮೂಲತಃ ಲಾರಿಡ್ರೈವರ್. ಇವನು ಬ್ಯಾರೆಲ್ಗಟ್ಟಲೆ ಸಾರಾಯಿ ಹೀರಿ ಹಾಕುತ್ತಿದ್ದ. ಹೀಗೆ ಅತಿಯಾಗಿ ಕುಡಿದುಕೊಂಡು ಹಾದಿಬದಿಯ ಪೊದೆಗಳಲ್ಲಿ ಕಾದು ಕುಳಿತ ನಾಲ್ಕೈದುಹೆಣ್ಣುಗಳನ್ನು ಲಾರಿಯಲ್ಲಿ ಹತ್ತಿಸಿಕೊಂಡು ವೇಗವಾಗಿ ಓಡಿಸತೊಡಗಿದ. ಅವರೊಂದಿಗೆ ಚಕ್ಕಂದವಾಡುತ್ತ, ರೈಲ್ವೆ ಲೆವೆಲ್ಕ್ರಾಸಿಂಗ್ ಅನ್ನು ಗಮನಿಸದೆ ರೈಲಿಗೆ ಟ್ರಕ್ ಗುದ್ದಿ ತನ್ನ ಒಂದು ಕೈ ಕಳೆದುಕೊಂಡ. ಹೀಗೆ ಅವನ ಸ್ವೇಚ್ಛಾಚಾರ ತೆರೆ ಕಂಡೀತೆಂದು ನಾವೆಲ್ಲರೂ ಅಂದುಕೊಳ್ಳುವಷ್ಟೊತ್ತಿಗೆ ಅವನ ನಿಜವಾದ ಕಾಮಪ್ರಚೋದಕ ಮದ್ಯಸೇವನೆ, ತೆವಲುಗಳು ಆರಂಭಗೊಂಡಿದ್ದವು. ಇದ್ದ ಒಂದು ಕೈನಲ್ಲೇ ಹರಾಮಿ ಹೆಂಗಸರನ್ನು ಸಂಭಾಳಿಸುತ್ತಿದ್ದ. ನಶೆಯಲ್ಲಿರುತ್ತಿದ್ದ ಸುಂದರಿಯನ್ನು ಜಾಣತನದಿಂದ ಓಲೈಸುತ್ತಿದ್ದ. ಹೆಗಲಿನ ಮೇಲೆ ಟವೆಲ್ ಹಾಕಿಕೊಂಡಿರುತ್ತಿದ್ದ ಈತ ಬೀಡಿ ಸೇದುತ್ತಾ ಮಳೆಗಾಲದಲ್ಲಿ ನಮ್ಮ ಮನೆಗಳ ಚಾವಣಿಗಳ ಕೆಳಗೆ ನಿಂತುಕೊಂಡಿರುತ್ತಿದ್ದ. ಮಳೆನೀರಿನಿಂದ ನೆನೆದ ಹಕ್ಕಿಯೊಂದು ಗರಿಗೆದರುವಂತೆ ಅವನು ತನ್ನ ತಲೆಯನ್ನು ಕೊಡವಿಕೊಳ್ಳುತ್ತಿದ್ದ.
ಕಳ್ಳತನ, ವೇಶ್ಯಾವೃತ್ತಿ, ಇಸ್ಪೀಟು, ಕಳ್ಳಭಟ್ಟಿ ಸಾರಾಯಿ ದಂಧೆಯಲ್ಲಿ ನಿರತನಾಗಿದ್ದ ಕುಂಟಮುನಿಸ್ವಾಮಿಗೆ ಕೃತಜ್ಞತೆ ಎಂಬುದು ಕೂದಲೆಳೆಯಷ್ಟೂ ಇರಲಿಲ್ಲ. ಬಹುಶಃ ಅವನ ಸದ್ಯದ ಅಸಹಾಯಕತೆ ಹಾಗೂ ಹಿಂದಿನ ಮಾದಕ ಬದುಕಿನ ನೆನಪುಗಳು ಅವನ ಅವಿಧೇಯತೆಗೆ ಕಾರಣವಿರಬಹುದು. ಹೀಗೆ ನಮ್ಮ ಮನೆಗಳ, ಸಾಲುಹುಣಸೆಮರಗಳ, ಗುಜರಿ ಅಂಗಡಿ ಮುಂದೆ ಕುಳಿತಿರುತ್ತಿದ್ದ ಕುಂಟಮುನಿಸ್ವಾಮಿ ಯಾರಾದರೂ ಹಣವಂತರು, ಪರಿಚಯಸ್ಥರು ಸಾರಾಯಿ ಅಂಗಡಿ ಕಡೆಗೆ ಬರುತ್ತಿದ್ದರೆ ಮೊದಲೇ ಅವರ ಬಳಿಗೆ ಓಡಿಹೋಗಿ, ಅವರನ್ನು ಹಿಂಬಾಲಿಸುತ್ತಿದ್ದ. ಕೈ ಇಲ್ಲದಿದ್ದರೂ ಯಾರದ್ದಾದರೂ ಸೈಕಲ್ಗಳನ್ನು ವೇಗವಾಗಿ ಓಡಿಸುತ್ತಿದ್ದ. ಇವನು ಬಹುಕಾಲ ಸಾರಾಯಿ ಅಂಗಡಿ ಮತ್ತು ಬಾರ್ಗಳಲ್ಲೇ ತನ್ನ ಬದುಕನ್ನು ಕಳೆದ. ಸುಂದರಿ ಮತ್ತು ಆಚಾರಮ್ಮನಿಗೆ ಹಣವಂತ ಗಿರಾಕಿಗಳನ್ನು ಹಿಡಿದು ತರುತ್ತಿದ್ದ ನಿಸ್ಸೀಮ. ಇವನ ಹೆಂಡತಿ ಮತ್ತು ಮಕ್ಕಳು ಯಾರು ಎಲ್ಲಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಮ್ಮೆ ಇವನ ಹೆಂಡತಿಮಕ್ಕಳು ಊರಿಗೆ ಬಂದುಹೋಗಿದ್ದು ಮಾತ್ರ ನೆನಪಿದೆ.
ದೊಡ್ಡವಯಸ್ಸಿನ ಕುಂಟಮುನಿಸ್ವಾಮಿ ಮತ್ತು ಇವನಷ್ಟೇ ವಯಸ್ಸಿನ ಇವನ ತಮ್ಮನನ್ನು ಸಾಕುತ್ತಿದ್ದದ್ದು ಇವರಿಬ್ಬರನ್ನೂ ಹೆತ್ತವಳೇ. ಏಕೆಂದರೆ ಇವರು ದುಡಿದದ್ದೆಲ್ಲಾ ಇವರ ಸಾರಾಯಿ ಸೇವನೆಗೆ ಸಾಕಾಗುತ್ತಿತ್ತು. ಇವರ ತಾಯಿ ಸಾಹುಕಾರರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ನಾನು ಸ್ಕೂಲಿಗೆ ಹೋಗುವಾಗ ಅವಳು ರಸ್ತೆಯ ಒಂದು ಬದಿಯಲ್ಲೇ ನಡೆದುಬರುತ್ತಿದ್ದಳು. ಕೈಯಲ್ಲಿ ಒಂದು ದೊಡ್ಡಚೀಲವಿರುತ್ತಿತ್ತು. ಅದರಲ್ಲಿ ರೊಟ್ಟಿ, ಅನ್ನ ಇರುತ್ತಿತ್ತು. ಅವಳು ಮನೆಗೆಲಸ ಮುಗಿಸಿಕೊಂಡು ಹಿಂದಿರುಗಿ ಬರುವಾಗ ಪೇಪರ್, ಕಬ್ಬಿಣ, ಬಾಟಲ್ಗಳನ್ನು ಹಾಯ್ದು ತರುತ್ತಿದ್ದಳು. ಅವೆಲ್ಲವನ್ನೂ ಗುಜರಿಗೆ ಹಾಕಿ, ಬಂದ ಹಣದಿಂದ ಇಬ್ಬರು ಮಕ್ಕಳಿಗೆ ಬನ್ನು ತೆಗೆದುಕೊಂಡು ಹೋಗುತ್ತಿದ್ದಳು. ವಯಸ್ಸಾದ ಆ ಹೆಂಗಸು ಮನೆಯ ಮುಂದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಳು. ಊಟದಲ್ಲೇನಾದರೂ ಸ್ವಲ್ಪ ತಡವಾಯ್ತು ಅಂದ್ರೆ ಮಕ್ಕಳಿಬ್ಬರೂ ಸೇರಿಕೊಂಡು ಬಡಿದು ಹಾಕುತ್ತಿದ್ದರು.
ಈ ಮೂವರಲ್ಲಿ ಕುಂಟಮುನಿಸ್ವಾಮಿ ಕ್ಷಯರೋಗಕ್ಕೆ ತುತ್ತಾಗಿ ಮೂಲೆ ಸೇರಿದ. ಅಂತಹ ಸಂದರ್ಭದಲ್ಲಿ ಅವನ ತಾಯಿ ಅವನನ್ನು ಉಳಿಸಿಕೊಳ್ಳಲು ಹೆಣಗಾಡಿದಳು. ಅವನು ತೀರಿಕೊಂಡ. ಅವನ ತಾಯಿ ಗೋಳಾಡುತ್ತಿದ್ದರೆ, ಇನ್ನೊಬ್ಬ ಮಗ ಕಂಠಮಟ್ಟ ಕುಡಿದು ಒಳ್ಳೇ ದೆವ್ವ ಬಂದಂತೆ ನಿಂತಿದ್ದ. ಒಂದೇ ಕೋಣೆಯಲ್ಲಿ ಮೂವರು ನರೆಗೂದಲಿನವರೇ ಜೀವಿಸುತ್ತಿದ್ದು ಕಡೆಗೆ ಇಬ್ಬರೇ ಉಳಿದರು. ನಾನು ಈಗ ಹೇಳಿದ್ದು ಎಷ್ಟೋ ವರ್ಷಗಳ ಹಿಂದಿನ ಮಾತು. ಉಳಿದೊಬ್ಬ ಮಗ ಮದುವೆಯೇ ಆಗಲಿಲ್ಲ. ಈಗ ಅವನು ಹೈವೇಯಲ್ಲಿ ಕಡ್ಡಿ ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುವುದನ್ನು ಈಗಲೂ ನೋಡಬಹುದು. ನಮ್ಮ ಮನೆಯ ಆಸುಪಾಸಿನಲ್ಲೇ ಇವರು ಬೆಳೆದಿದ್ದರಿಂದ ಈಗಲೂ ನಮ್ಮ ಮನೆಯವರು ಯಾರಾದರೂ ಕಾಣಿಸಿದರೆ, ಈತ ಬೇಗಬೇಗ ನಮ್ಮ ಬಳಿಗೆ ಓಡಿಬಂದು ಕೈ ಒಡ್ಡುತ್ತಾನೆ. ಇವರಿಬ್ಬರನ್ನೂ ಸಾಕಿದ ತಾಯಿ ಇನ್ನೂ ಬದುಕಿದ್ದಾಳೆ.  
ಕುಂಟಮುನಿಸ್ವಾಮಿ ಗೇರುತೋಪಿನಲ್ಲಿ ಕಾವಲುಗಾರನಾಗಿ ಸೇರಿಕೊಂಡರೂ ಅದು ನೆಪಮಾತ್ರವಾಗಿತ್ತು. ಹೆಣ್ಣುಗಳನ್ನು ಹುಡುಕಿಕೊಂಡು ಬರುವ ಸೈನಿಕರಿಗೆ ತಲೆಹಿಡುಕನಾಗಿ ತನ್ನ ಕೆಲಸವನ್ನು ಆರಂಭಿಸಿದ. ಸಂಜೆಯಾಗುತ್ತಿದ್ದಂತೆ ಗೇರುತೋಪಿನಲ್ಲಿ ಮುನಿಸ್ವಾಮಿ ಬೇರೆಬೇರೆ ಹೆಣ್ಣುಗಳ ಸಂಗಡ ಕುಳಿತಿರುತ್ತಿದ್ದ. ಬೇರೆಬೇರೆ ಊರುಗಳಿಗೆ ಈ ದಂಧೆಗಾಗಿ ಹೆಣ್ಣುಗಳನ್ನು ಕರೆತರುತ್ತಿದ್ದ. ಇದರ ಜೊತೆಗೆ ಗೇರುತೋಪು ಕಾವಲು ಕಾಯುತ್ತಲೇ ಜೀಡಿಬೀಜಗಳನ್ನು ಮಾರಿಕೊಳ್ಳುತ್ತಿದ್ದ. ಜೀಡಿಬೀಜಗಳು ದುಬಾರಿಯಾದ್ದರಿಂದ ಯಾವಾಗಲಾದರೂ ಮನೆಗೆ ಬರುವಾಗ ಕದ್ದು ತಂದು ಅಂಗಡಿಗಳಿಗೆ ಮಾರಿಕೊಳ್ಳುತ್ತಿದ್ದ.

ಅಪ್ಪ ಅದೇ ಗೇರುತೋಪಿನ ಹಾದಿಯಲ್ಲಿ ಹೋಗುತ್ತಾ ಬರುತ್ತಿದ್ದದ್ದರಿಂದ ಅವರ ಕೈಗೆ ಜೀಡಿಬೀಜಗಳ ಚೀಲವನ್ನು ಕೊಟ್ಟು ಕಳುಹಿಸುತ್ತಿದ್ದ. ಸಂಜೆ ನಮ್ಮ ಮನೆಗೆ ಬಂದು ಪಡೆದುಕೊಳ್ಳುತ್ತಿದ್ದ. ಕುಂಟಮುನಿಸ್ವಾಮಿಗೆ ಕುಡಿಯಲಷ್ಟೇ ಹಣ ಬೇಕಾದ್ದರಿಂದ ಹೆಚ್ಚಿಗೇನೂ ಹಣ ಕೇಳುತ್ತಿರಲಿಲ್ಲ. ಅಮ್ಮ ಆಗಾಗ ಹಣ ಕೊಟ್ಟು ಜೀಡಿಬೀಜಗಳನ್ನು ಕೊಳ್ಳುತ್ತಿದ್ದಳು. ಹೆಚ್ಚಿಗೇನಾದರೂ ಹಣ ಕೇಳಿದರೆ ಅಪ್ಪ ಅವನನ್ನು ಬೈಯುತ್ತಿದ್ದರು.

ಸೈನಿಕರ ಮೈಮನಗಳನ್ನು ತಣಿಸಲು ದೂರದೂರುಗಳಿಂದ ಗೇರುತೋಪಿಗೆ ಬರುತ್ತಿದ್ದ ಹೆಣ್ಣುಗಳಿಗೆ, ಸೈನಿಕರಿಗೆ ಮದ್ಯ, ಊಟ ಸರಬರಾಜು ಮಾಡುತ್ತಿದ್ದ. ತನಗೆ ಬರಬೇಕಾದ ಕಮೀಷನ್ಗಾಗಿ ಆತ ಅವರಿಂದ ಒದೆಸಿಕೊಂಡು ಗೇರುತೋಪಿನಿಂದ ನಿರ್ಗಮಿಸಿದ್ದನ್ನು ಅನೇಕ ಸಲ ನೋಡಿದ್ದೇನೆ. ಸೈನಿಕರು ಅಷ್ಟುದೂರದಲ್ಲಿ ಕಾಣುತ್ತಿದ್ದಂತೆ ಅವರ ಹತ್ತಿರ ಓಡುತ್ತಿದ್ದ. ಅಪ್ಪ ಕೆಲಸದಿಂದ ಹಿಂತಿರುಗುವಾಗ ಕುಂಟಮುನಿಸ್ವಾಮಿಯ ಜೊತೆ ಮರದ ಕೆಳಗೆ ಕುಳಿತುಕೊಂಡು ಎಲೆಅಡಿಕೆ, ಬೀಡಿ ಸೇದುವುದು ರೂಢಿಯಾಗಿತ್ತು.
ಹೀಗೆ ಗೇರುತೋಪನ್ನು ಕೊಂಡವರಿಗೆ ಕುಂಟಮುನಿಸ್ವಾಮಿಯ ತಲೆಹಿಡುಕತನದ ಜೊತೆಜೊತೆಗೇ ಗೇರುಬೀಜ ಕದಿಯುವುದು ಗೊತ್ತಾಗಿ ಅವನನ್ನು ಒದ್ದು, ಗೇರುತೋಪಿನಿಂದ ಹೊರಗೆ ಅಟ್ಟಿದರೂ ಅವನು ಮತ್ತೆಮತ್ತೆ ಕೆಲಸ ಕೇಳಿಕೊಂಡು ಅದೇ ಗೇರುತೋಪಿಗೆ ಹೋಗುತ್ತಿದ್ದ.

 

Previous Older Entries

%d bloggers like this: