ಎಚ್ಚೆಸ್ವಿ ಅನಾತ್ಮ ಕಥನ: ತಂಬೂರಿಯ ತಂತಿ ಕಿತ್ತು ಹೋದ ಮೇಲೂ…

ಮನುಷ್ಯ ಸಂಬಂಧಗಳೆಲ್ಲವೂ ನಮ್ಮ ನಮ್ಮ ಅಹಂಕಾರಗಳ ಗೊಣಸಿನ ಮೇಲೆ ಕೂತಿವೆಯೆ? ಯಾಕೋ ಈ ಇಳಿಹೊತ್ತಿನಲ್ಲಿ ಒಮ್ಮೆಗೇ ಈ ಪ್ರಶ್ನೆ ಮೂಡಿ ನನ್ನ ಎದೆ ಧಸಕ್ಕೆಂದಿದೆ. ಇಷ್ಟು ದಿನ ಮನಸ್ಸಿನ ಯಾವ ಮುಡುಕಿನಲ್ಲಿ ಈ ಪ್ರಶ್ನೆ ಹುದುಗಿಕೊಂಡಿತ್ತೋ? ಈವತ್ತು ಯಾಕಾದರೂ ನನ್ನ ಮುಚ್ಚಿದ ಕಣ್ಮುಂದಿನ ಹಳದಿಗಪ್ಪು ತೆರೆಯ ಮೇಲೆ ಒಮ್ಮೆಗೇ ಮೂಡಿತೋ ನಾನು ಉತ್ತರಿಸಲಾರೆ.ಈಗಾಗಲೇ ಕಳೆದುಹೋಗಿರುವ ಅನೇಕ ಆಪ್ತರು ನನ್ನ ಕಣ್ಣ ಮುಂದೆ ಪೆರೇಡು ನಡೆಸುತ್ತಾರೆ. ಈ ಎಲ್ಲ ಮುಖಗಳೂ ಯಾಕೆ ಮಂಕಾಗಿವೆ? ಯಾಕೆ ಯಾವ ಮುಖದಲ್ಲೂ ಉತ್ಸಾಹವೇ ಕಾಣದಾಗಿದೆ? ನನ್ನ ಕಣ್ಣಿಗೆ ಅವರು ಕಾಣುತ್ತಿರುವಂತೆ ನಾನು ಅವರ ಕಣ್ಣಿಗೆ ಕಾಣುತ್ತಿಲ್ಲವೋ ಹೇಗೆ? ಮೆಲ್ಲಗೆ ಆಕಾಶದಿಂದ ಕತ್ತಲ ಫರದೆ ಕೆಳಗಿಳಿಯುತ್ತಾ ಇದೆ. ಅವರು ಕತ್ತಲ ಕಾವಳದಲ್ಲಿ ನಿಧಾನಕ್ಕೆ ಮರೆಯಾಗಲಿಕ್ಕೆ ಹತ್ತಿದ್ದಾರೆ.

ವರ್ತಮಾನಕ್ಕೆ ಭೂತದ ಕಾಟವಿದೆ. ಆದರೆ ಭೂತಕ್ಕೆ ವರ್ತಮಾನದ ಹಂಗಿಲ್ಲವೋ ಹೇಗೆ? ಎಡಗೈ ಅತ್ತಿತ್ತ ತಿರುವುತ್ತಾ ನಿಧಾನಕ್ಕೆ ನಡೆಯುತ್ತಾ ಇರುವವಳು ನನ್ನ ಪತ್ನಿ. ಆಕೆಯನ್ನು ಗಮನಿಸಿಯೇ ಇಲ್ಲ ಎಂಬಂತೆ ಆಕೆಯನ್ನು ಹಿಂಬಾಲಿಸುತ್ತಾ ಇರುವವರು ನನ್ನ ಅಜ್ಜಿಯರು. ಅವರಾದರೂ ಪರಸ್ಪರ ಅಪರಿಚಿತರಂತೆ ನಡೆಯುತ್ತಾ ಇದ್ದಾರೆ. ಅವರ ಹಿಂದೆ ಜಲೋದರದ ಭಾರ ಹೊತ್ತು ತೇಕುತ್ತಾ ನಡೆಯುತ್ತಿರುವವರು ನನ್ನ ಅಜ್ಜ. ಮತ್ತೆ ಇವರು? ನನಗೆ ತುಂಬ ಪ್ರಿಯವಾದ ಆಕೃತಿಯಾಗಿತ್ತಲ್ಲ ಅದು? ಯಾರು ಮಾರಾಯರೇ ಆಕೆ? ನನ್ನ ಗೆಳೆಯ ನಾರಾಯಣನ ಪತ್ನಿ ನಾಗಿಣಿಯಲ್ಲವೇ?

ನಾಗಿಣಿ ನನ್ನ ಗೆಳೆಯನ ಕೈಹಿಡಿದ ಹೊಸದರಲ್ಲಿ ಚಾಮರಾಜಪೇಟೆಯ ನಮ್ಮ ಬಾಡಿಗೆ ಗೂಡಿಗೆ ಊಟಕ್ಕೆ ಅತಿಥಿಗಳಾಗಿ ಬಂದಾಗ ನಾನು ಆಕೆಯನ್ನು ಮೊದಲು ನೋಡಿದ್ದು. ತೆಳ್ಳಗೆ ಬಳ್ಳಿಯ ಹಾಗೆ ಇದ್ದರು ಆಕೆ. ಮದುವೆಯ ಹೋಮ ಕುಂಡದ ಕೆಂಪು ಇನ್ನೂ ಆಕೆಯ ಕಣ್ಣುಗಳಲ್ಲಿ ಹೊಳೆಯುತ್ತಾ ಇತ್ತು. ಬಲೇ ಮಾತುಗಾರನಾಗಿದ್ದ ನನ್ನ ಗೆಳೆಯನಿಗೆ ಹೋಲಿಸಿದರೆ ಆಕೆ ಪರಮ ಮೌನಿ. ನಮ್ಮ ಇಡೀ ಮನೆ ನನ್ನ ಗೆಳೆಯನ ನಗೆ, ಕೇಕೆ, ಉತ್ಸಾಹದ ಮಾತುಗಳಿಂದ ತುಂಬಿಹೋಗಿತ್ತು. ಆಕೆ ಬೆರಗು ಮತ್ತು ಮುಗ್ಧತೆಯನ್ನು ಮುಖದಲ್ಲಿ ಬಚ್ಚಿಟ್ಟುಕೊಳ್ಳುತ್ತಾ ಮೆಲ್ಲಗೆ ನನ್ನ ಪತ್ನಿಯ ಜತೆ ಅಡುಗೆ ಮನೆಯ ಮಬ್ಬುಗತ್ತಲೆಗೆ ಸರಿದಿದ್ದಳು. ಈಡು ಜೋಡು ತುಂಬ ಚೆನ್ನಾಗಿದೆ ಎಂದು ರಾತ್ರಿ ನನ್ನ ಹೆಂಡತಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದಳು. ಉತ್ಸಾಹದ ಅಂಕ ಮುಗಿದ ಮೇಲೆ ನಾಗಿಣಿ ತುಂಬ ಒಳ್ಳೆಯ ಹುಡುಗಿ ಎಂಬ ಮಾತು ನನ್ನ ಪತ್ನಿಯ ಬಾಯಿಂದ ಹೊರಬಿತ್ತು. ಆ ಮಾತು ಪೂರ್ತಿ ಕಿವಿಯಲ್ಲಿ ಇಂಗುವ ಮೊದಲೇ ನಾನು ಒತ್ತಿಬರುತ್ತಿದ್ದ ನಿದ್ದೆಯಲ್ಲಿ ಮುಳುಗುತ್ತಾ ಇದ್ದೆ….

ಇನ್ನಷ್ಟು

ಎಚ್ಚೆಸ್ವಿ ಅನಾತ್ಮ ಕಥನ: ಮರೆಯಲಾಗದ ಆ ಅಗರಬತ್ತಿ ಕಂಪು..

ನಾನು ಓದಿದ್ದಿ ಮ.ಮಾ.ಮು ಹೈಸ್ಕೂಲಿನಲ್ಲಿ. ಅಂದರೆ ಮಲ್ಲಾಡಿಹಳ್ಳಿ ಮಾದಣ್ಣನವರ ಮುನಿಸಿಪಲ್ ಹೈಸ್ಕೂಲಿನಲ್ಲಿ. ೧೯೫೭ರಿಂದ ೫೯ರ ವರೆಗೆ. ನಾನು ಕನ್ನಡ ಮೀಡಿಯಮ್ ತಗೊಂಡಿದ್ದೆ. ಜಿ.ಸೀತಾರಾಮಯ್ಯ ಅಂತ ನಮ್ಮ ಹೆಡ್ ಮಾಸ್ಟರ್. ಅವರ ವೇಷ ವಿಶೇಷವಾಗಿದ್ದುದರಿಂದ ನನಗೆ ಈವತ್ತೂ ಅವರನ್ನು ಮರೆಯಲಿಕ್ಕೇ ಆಗಿಲ್ಲ. ಮಲ್ಲು ಪಂಚೆಯನ್ನು ಕಚ್ಚೆ ಹಾಕಿ ಉಡುತ್ತಾ ಇದ್ದರು. ಮೇಲೆ ಒಂದು ಕರೀ ಕೋಟು. ತೆಳ್ಳನೆಯ ಚಪ್ಪಲಿಗಳು. ಬಿಸಿಲು ಇರಲಿ ಇಲ್ಲದಿರಲಿ ತಲೆಯ ಮೇಲೆ ಒಂದು ಕೊಡೆ. ಅದು ಮಾಮೂಲಿ ಕರೀಕೊಡೆಯಾಗಿದ್ದರೂ ಅದರ ಮೇಲೆ ಒಂದು ಬಿಳಿ ಬಟ್ಟೆಯ ಕವರ್ ಇರುತ್ತಾ ಇತ್ತು.

ಇಂಥ ಕೊಡೆ ನಾನು ಮೊಟ್ಟಮೊದಲು ನೋಡಿದ್ದು ನಮ್ಮ ಎಚ್.ಎಮ್ ಕೈಯಲ್ಲೇ. ಅವರು ತಲೆಗೆ ಮೈಸೂರು ರುಮಾಲು ಹಾಕುತ್ತಿದ್ದುದರಿಂದ ಅವರ ತಲೆಯ ಮೇಲೆ ಕ್ರಾಪಿತ್ತೆ, ಅಥವಾ ಜುಟ್ಟಿತ್ತೆ, ಅಥವಾ ಬೊಕ್ಕ ತಲೆಯೇ ಯಾವುದೂ ತಿಳಿಯುವಂತಿರಲಿಲ್ಲ. ಅವರಿಗೆ ಬೇರೆ ವೇಷವನ್ನು ನಾನು ಕಲ್ಪಿಸುವುದೂ ಸಾಧ್ಯವಿರಲಿಲ್ಲ. ಕೊಂಚ ಉಬ್ಬುಹಲ್ಲಿದ್ದ ಒಳ್ಳೆ ಕೆಂಬಿಳಿ ಬಣ್ಣದ ಅವರು ಹಣೆಯ ಮೇಲೆ ಸಣ್ಣಗೆ ಮತ್ತು ದುಂಡಗೆ ಒಂದು ಸಾದು ಇಟ್ಟುಕೊಳ್ಳುತ್ತಿದ್ದರು. ಬಂದಿದ್ದೇನೇಯೇ, ಹೋದದ್ದೇನೆಯೇ, ಕೊಟ್ಟಿದ್ದೇನೆಯೇ ಎಂದು ಯೇ ಸೇರಿಸಿ ದೀರ್ಘವೆಳೆದು ಮಾತಾಡುವುದು ಅವರ ರೂಢಿಯಾಗಿತ್ತು.

ಇನ್ನಷ್ಟು

ಎಚ್ಚೆಸ್ವಿ ಬರೆಯುತ್ತಾರೆ: ಅದು ಮದುವೆ ಕಥೆ

ಚಳುವಳಿಕಾಲದಲ್ಲೊಂದು ಮದುವೆ ದಿಬ್ಬಣ…..

ಎಚ್.ಎಸ್.ವೆಂಕಟೇಶಮೂರ್ತಿ

ಭೀಮಜ್ಜಿ ಊರಿಗೆ ಬಂದಾಗ ನಾನು ಅವರ ಪಕ್ಕದಲ್ಲೇ ಮಲಗುತ್ತಿದ್ದೆ. ಕಾರಣ ಅವರು ನನಗೆ ಒಳ್ಳೊಳ್ಳೆ ಕಥೆ ಹೇಳುತಾ ಇದ್ದರು. ನನ್ನ ಕಂಚಿನ ತೇರು ಅಂತ ಪದ್ಯ ಇದೆಯಲ್ಲ, ಅದರ ಮೂಲ ಭಿತ್ತಿ ನನಗೆ ದೊರೆತದ್ದು ದೊಡ್ಡಜ್ಜಿಯಿಂದಲೇ. ಕೆಲವು ಸಾರಿ ಭೀಮಜ್ಜಿಯಂಥ ಕಥಾಸರಿತ್ಸಾಗರವೂ ಯಾಕೋ ಬತ್ತಿ ಹೋಗೋದು. ಎಲ್ಲಾ ಕಥೆ ಮುಗಿಯಿತಪ್ಪಾ….ಇನ್ನೇನು ಹೇಳ್ಳಿ ನಾನು?- ಅಂತ ಉದ್ಗಾರ ತೆಗೆಯುತ್ತಿದ್ದರು. ನಾನು ಸುಮ್ಮನಾಗುತ್ತಿರಲಿಲ್ಲ. ನೀನೇ ಹೊಸ ಕಥೆ ಕಟ್ಟಿ ಹೇಳು ಅನ್ನುತಾ ಇದ್ದೆ.

ಒಂದು ರಾತ್ರಿ ದೀಪ ಆರಿಸಿ ಎಲ್ಲಾ ಮಲಗಿದ ಮೇಲೆ…ನನಗೆ ನಿದ್ದೆ ಬರತಾ ಇಲ್ಲ…ಎನಾದರೂ ಕಥೆ ಹೇಳು- ಅಂತ ದೊಡ್ಡಜ್ಜಿಯನ್ನ ಕಾಡ ತೊಡಗಿದೆ. ದೊಡ್ಡಜ್ಜಿ ಸ್ವಲ್ಪ ಹೊತ್ತು ಏನೂ ಮಾತಾಡಲಿಲ್ಲ. ಕೊನೆಗೆ, ನಿಮ್ಮಮ್ಮನ ಮದುವೆ ಕಥೆ ಹೇಳುತೀನಿ ಕೇಳು ಅಂತ ಶುರು ಮಾಡಿದರು. ನಾನು ಅಂಗಾತ ಮಲಗಿದ್ದೆ. ಸೂರಿನ ತುಂಬ ಬೆಳಕಿನ ಕಿಂಡಿಗಳು ಕಾಣುತಾ ಇದ್ದವು. ಅದೊಳ್ಳೆ ಆಕಾಶದ ಹಾಗೇ ನನಗೆ ಕಾಣುತಾ ಇತ್ತು. ಬೆಂಗಟೆ ಬಳಿ ಇದ್ದ ಬೆಳಕಿಂಡಿ ಅಡ್ಡಂಬಡ್ಡ ಚಂದ್ರನ ಹಾಗಿತ್ತು. ಹೀಗೆ ನನ್ನದೇ ಆಕಾಶದ ಕೆಳಗೆ ಮಲಗಿ ನಾನು ನನ್ನ ಅಮ್ಮನ ಮದುವೆ ಕಥೆ ಕೇಳತೊಡಗಿದೆ.

********

ನಿಮ್ಮ ಅಮ್ಮನಿಗೆ ಹನ್ನೆರಡು ನಡೀತಾ ಇತ್ತು. ನಮ್ಮ ಮನೇಲಿ ನರಸಿಂಹ ಮೂರ್ತಿ ಅಂತ ಸ್ಕೂಲ್ ಮೇಷ್ಟ್ರು ಬಾಡಿಗೆಗೆ ಇದ್ದರು. ಅವರಿಗೆ ಬಸವಾಪಟ್ಣಕ್ಕೆ ವರ್ಗವಾಯಿತು. ಅವರು ಹೆಂಡತಿ ಇಬ್ಬರು ಮಕ್ಕಳನ್ನ ಇಲ್ಲೇ ಬಿಟ್ಟು ಬಸವಾಪಟ್ಣಕ್ಕೆ ಹೋದರು. ವಾರ ವಾರ ಬಂದು ಹೋಗಿ ಮಾಡುತಾ ಇದ್ದರು. ಅಲ್ಲಿ ಅವರು ನಾರಾಯಣಭಟ್ಟ ಅಂತ ಒಬ್ಬ ಹುಡುಗನ್ನ ನೋಡಿದಾರೆ. ಭಾಳ ಜಾಣನಂತೆ ಅವನು. ನೋಡಕ್ಕೂ ಲಕ್ಷಣವಾಗಿದ್ದನಂತೆ. ನಮ್ಮ ರತ್ನಂಗೆ ಇವನು ಒಳ್ಳೆ ಜೋಡಿ ಆಗ್ತಾನೆ..ವರಸಾಮ್ಯ ಚೆನ್ನಾಗಿರತ್ತೆ ಅಂದಕಂಡು ಮೇಷ್ಟ್ರು ಹುಡುಗನ್ನ ಕರದು ವಿಚಾರಿಸಿದಾರೆ. ನಾನು ಹುಡುಗಿ ನೋಡಿ ಆಮೇಲೆ ಹೇಳ್ತೀನಿ ಅಂದನಂತೆ ತುಮುಕೂರು ಕಾಲೇಜಲ್ಲಿ ಇಂಟರ್ ಓದುತ್ತಿದ್ದ  ಆ ಕಿಲಾಡಿ ಹುಡುಗ. ಆಯಿತು ಹಂಗೇ ಮಾಡು ಅಂದಿದಾರೆ ನಮ್ಮ ಮೇಷ್ಟ್ರು.

ಇನ್ನಷ್ಟು

ಸಮ್ಮೇಳನದ ಗುಂಗಲ್ಲಿ ನನ್ನ ಹಾಡಿನ ಹಳ್ಳ

ನಿಸ್ಸೀಮವೆನಿಸುವ ಹಾಡಿನ ಸೀಮೆ….

-ಎಚ್.ಎಸ್.ವೆಂಕಟೇಶಮೂರ್ತಿ

ಸಾಹಿತ್ಯ ಸಮ್ಮೇಳನಕ್ಕೆ ನೀವು ಯಾವಾಗ ಭೆಟ್ಟಿಕೊಡುತ್ತೀರಿ? ಎಂದು ಪತ್ರಿಕಾ ಮಿತ್ರರು ಫೋನ್ ಮಾಡಿದಾಗ, ಎರಡನೇ ದಿನ ಮಧ್ಯಾಹ್ನ ಎಂದೆ. ಆವತ್ತು ನಮ್ಮ ಕವಿಗಳು ಕವಿತೆಯನ್ನು ವಾಚಿಸುವ ಅವನ್ನು ನಮ್ಮ ಸುಗಮ ಸಂಗೀತ ಗಾಯಕರು ಹಾಡುವ ಕಾರ್ಯಕ್ರಮವಿತ್ತು. ಗೋಷ್ಠಿಯನ್ನು ಡಾ ಸಾ ಶಿ ಮರುಳಯ್ಯ ಉದ್ಘಾಟಿಸುವವರಿದ್ದರು. ಡಾ ಅನಂತಮೂರ್ತಿಗಳ ಅಧ್ಯಕ್ಷತೆ. ಜಿ.ಎಸ್.ಸಿದ್ಧಲಿಂಗಯ್ಯ, ಲಕ್ಷ್ಮೀನಾರಾಯಣ ಭಟ್ಟ, ಸುಬ್ರಾಯಚೊಕ್ಕಾಡಿ, ಜಯಂತಕಾಯ್ಕಿಣಿ,ಎಂ.ಎನ್.ವ್ಯಾಸರಾವ್, ಪ್ರತಿಭಾನಂದಕುಮಾರ ಮೊದಲಾದ ನನಗೆ ಪ್ರಿಯರಾದ ಅನೇಕ ಆಪ್ತರು ಗೋಷ್ಠಿಯಲ್ಲಿ ಪದ್ಯ ಓದುವವರಿದ್ದರು. ಅವರನ್ನು ಭೆಟ್ಟಿಮಾಡುವ ಇರಾದೆಯಿಂದ ನಾನಲ್ಲಿಗೆ ಹೋಗಿದ್ದು.

ನಾನು ಸಮ್ಮೇಳನ ನಡೆಯುವ ಜಾಗಕ್ಕೆ ಹೋದಾಗ ಅಲ್ಲಿ ಸೇರಿದ್ದ ಜನಸಂದಣಿ ಬೆರಗುಹುಟ್ಟಿಸುವಂತಿತ್ತು. ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಯುತ್ತಾ ಇತ್ತು. ಕವಿಗೋಷ್ಠಿ ಪ್ರಾರಂಭವಾಗುವಷ್ಟರಲ್ಲಿ ಪುಸ್ತಕ ಮಳಿಗೆಗೆ ಭೆಟ್ಟಿಕೊಟ್ಟು ಬರೋಣವೆಂದುಕೊಂಡು ಆ ಕಡೆ ನಾನು ಮತ್ತು ನನ್ನ ಮಗ(ಸುಹಾಸ) ಹೋದರೆ, ಅಲ್ಲಿ ಪ್ರವೇಶಿಸಲಾರದಷ್ಟು ಜನಸಂದಣೆ. ಅಲ್ಲಿ ಹೋದರೆ ಉಸಿರುಕಟ್ಟಿ ಕೆಮ್ಮು ಶುರುವಾಗುವುದು ಗ್ಯಾರಂಟಿ ಎನ್ನಿಸಿ, ಸಭೆ ನಡೆಯುತ್ತಿದ್ದ ಬೃಹದ್ ಮಂಟಪದ ಕಡೆ ಹೊರಟೆವು. ಮಂಟಪದ ಹೊರಗೆ ಜ್ಯೋತಿಮಹದೇವ, ಜಿ.ಕೆ.ರವೀಂದ್ರಕುಮಾರ್, ಬಸು ಬೇವಿನಗಿಡ ……., ಹೀಗೆ ಅನೇಕ ಗೆಳೆಯರ ಅನಿರೀಕ್ಷಿತ ಭೆಟ್ಟಿಯಾಗಿ ಖುಷಿಯಾಯಿತು. ಜೊತೆಗೆ ನಾನು ನೋಡೇ ಇರದ ನನ್ನ ಅನೇಕ ಓದುಗರ ಜತೆ ಮುಖಾಮುಖಿ. ಅವರ ಅಭಿಮಾನ ತುಂಬಿದ ಕಣ್ಣುಗಳಲ್ಲಿ ನನ್ನ ಬರವಣಿಗೆಯ ಅನೇಕ ಹಾಳೆಗಳು ತೆರೆಯುತ್ತಾ ಇದ್ದವು.

ದಾವಣಗೆರೆಯ ಜಿಲ್ಲಾ ಕನ್ನಡಪರಿಷತ್ತಿನ ಅಧ್ಯಕ್ಷರೂ ನನ್ನ ಹಳೆಯ ಮಿತ್ರರೂ ಆದ ಸದಾಶಿವಪ್ಪ ಶಾಗಲೆ ಸಿಕ್ಕಿ, ಇಲ್ಲೇಕೆ ನಿಂತಿದ್ದೀರಿ, ವಿ ಐ ಪಿ ಗೇಟ್ ಮೂಲಕ ನೀವು ಒಳಗೆ ಹೋಗಿ, ಹತ್ತಿರದಿಂದ ಕಾರ್ಯಕ್ರಮ ನೋಡಬಹುದು ಎಂದು ಆಸೆ ಹುಟ್ಟಿಸಿದರು. ಪ್ರಯತ್ನಿಸೋಣ ಎಂದು ಅಲ್ಲಿಗೆ ಹೋದಾಗ ಪುಲೀಸ್ ಮಂದಿ ಗೇಟನ್ನು ಮುಚ್ಚಿ ಒಳಗೆ ಸ್ಥಳವಿಲ್ಲ ಎಂದು ಕೈ ಆಡಿಸಿದರು. ಸದಾಶಿವಪ್ಪ ನನ್ನನ್ನೊಬ್ಬನನ್ನಾದರೂ ಒಳಗೆ ಬಿಡುವಂತೆ ಕೋರಿ, ನನಗೆ ಪ್ರವೇಶ ದೊರಕಿಸಿದರು! ಸಾಹಿತ್ಯಸಮ್ಮೇಳನದಲ್ಲಿ ಸಾಹಿತಿಗಳಿಗೆ ಪ್ರವೇಶ ಇಷ್ಟು ಕಷ್ಟಸಾಧ್ಯ ಎನ್ನುವುದು ಅರಿವಿಗೆ ಬಂದಾಗ ಸಣ್ಣ ಮುಗುಳ್ನಗೆ ನನ್ನ ಅರಿವಿಲ್ಲದೆಯೇ ಬಾಯಿಂದ ಹೊರಕ್ಕಿಣುಕಿತು. ಅಂತೂ ನಾನು ನನ್ನ ಪೂರ್ವಜನ್ಮ ಪುಣ್ಯವಿಶೇಷದಿಂದ ಪ್ರವೇಶಗಿಟ್ಟಿಸಿ ಒಳಕ್ಕೆ ಹೋದ ಮೇಲೆ ಕುಳಿತುಕೊಳ್ಳುವುದಕ್ಕೆ ಕುರ್ಚಿಯೇನಾದರೂ ಸಿಕ್ಕುತ್ತದೋ ಎಂದು ಸುತ್ತೂ ಕಣ್ಣಾದಿಸತೊಡಗಿದೆ. ಕೆಲವರು ಬನ್ನಿ..ಇಲ್ಲಿ ಕುಳಿತುಕೊಳ್ಳಿ ಎನ್ನುತ್ತಾ ತಮ್ಮ ಆಸನಗಳನ್ನು ತೆರವು ಮಾಡಲು ನೋಡಿದರು.

ಇನ್ನಷ್ಟು

ಎಚ್ಚೆಸ್ವಿಕಾಲಂ: ಉಗ್ಗುಸುಬ್ಬಜ್ಜನ ಕುದುರೇ ಬಾಕಿ….

-ಎಚ್.ಎಸ್.ವೆಂಕಟೇಶಮೂರ್ತಿ

ನಮ್ಮ ಪುಟ್ಟಜ್ಜನ ಅಣ್ಣನ ಹೆಸರು ಸುಬ್ಬಣ್ಣ ಅಂತ. ಆತನಿಗೆ ಸ್ವಲ್ಪ ಉಗ್ಗು ಇದ್ದುದರಿಂದ ಎಲ್ಲರೂ ಸುಬ್ಬಜ್ಜನನ್ನು ಉಗ್ಗುಸುಬ್ಬಣ್ಣ ಎಂದೇ ಕರೆಯುತ್ತಿದ್ದರು. ನಾನು ನೋಡಿದ ಹಾಗೆ ಸುಬ್ಬಜ್ಜನಿಗೆ ಹೆಂಡತಿ ಮಕ್ಕಳು ಯಾರೂ ಇರಲಿಲ್ಲ. ಮನೆ ಮಾರಿನ ಜವಾಬುದಾರಿಯೂ ಇರಲಿಲ್ಲ. ಹಾಗಾಗಿ ಆತ ಅಲಕ್ ನಿರಂಜನ್ ಅಂತ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಇದ್ದರು. ಪುಟ್ಟಜ್ಜ ಅರ್ಧ ಹಾಸ್ಯ ಅರ್ಧ ವ್ಯಂಗ್ಯದಿಂದ ನಮ್ಮ ನಾರದ ಮಹರ್ಷಿಗಳು ಇನ್ನೂ ಉಪಹಾರಕ್ಕೆ ಆಗಮಿಸಿಲ್ಲವೇ? ಎಂದು ನರಸಮ್ಮಜ್ಜಿಯನ್ನು ಕೇಳುತ್ತಾ ಇದ್ದರು.

ಸುಬ್ಬಜ್ಜನ ಮೂಲ ನೆಲೆ ಅವರ ತಮ್ಮ ಪುಟ್ಟಣ್ಣ ವಾಸ್ತವ್ಯ ಹೂಡಿದ್ದ ಕೆಲ್ಲೋಡೇ ಆಗಿದ್ದರೂ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಾದುದರಿಂದ ವರ್ಷಪೂರ ತಮ್ಮ ಬಂಧುಬಳಗದ ಮನೆಗಳಿಗೆ ಭೆಟ್ಟಿ ಕೊಡುತ್ತಾ ದಿಮ್ ರಂಗ ಎಂದುಕೊಂಡು ಆರಾಮವಾಗಿ ಬಾಳು ನೂಕುತ್ತಾ ಇದ್ದರು. ಒಂದು ವಿಶೇಷ ಎಂದರೆ ಅವರು ಯಾರ ಮನೆಯಲ್ಲೂ ಒಂದು ರಾತ್ರಿಗಿಂತ ಹೆಚ್ಚು ಉಳಿಯುತ್ತಿರಲಿಲ್ಲ. ಸುಬ್ಬಜ್ಜ ನಮ್ಮೂರಿಗೂ ವರ್ಷಕ್ಕೊಂದು ಬಾರಿಯಾದರೂ ಭೆಟ್ಟಿ ಕೊಡುತ್ತಾ ಇದ್ದರು. ದೊಡ್ಡಪ್ಪಾ ಇನ್ನೂ ಒಂದು ದಿನ ಇದ್ದು ಹೋಗಬಾರದೆ? ಎಂದು ಸೀತಜ್ಜಿ ಉಪಚಾರದ ಮಾತು ಹೇಳಿದರೆ, ಸುಬ್ಬಜ್ಜ ತುಟಿಯ ಸಂದಿಯಲ್ಲೇ ನಕ್ಕು “ನಂಟರ ಮನೇಲಿ…ಒಂದು ದಿ ದಿ ದಿನಕ್ಕಿಂತ ಹೆಚ್ಚು ನಿಲ್ಲ ಬಾರದವ್ವಾ…” ಅನ್ನುತ್ತಿದ್ದರು. ದಕಾರ ಬಂದಾಗಲೆಲ್ಲಾ ಅವರಿಗೆ ಉಗ್ಗು ಒತ್ತಿಕೊಂಡು ಬರುತ್ತಾ ಇತ್ತು.

ಸುಬ್ಬಜ್ಜನನ್ನು ಕಂಡರೆ ನನಗಂತೂ ವಿಪರೀತ ಪ್ರೀತಿ. ಅದಕ್ಕೆ ಕಾರಣ ಅವರು ಬಂದವರೇ ,” ಪುಟ್ಟಾ ಬಾರೋ ಇಲ್ಲಿ. ದಿ ದಿ ದಿವಿನಾದ ಉತ್ತುತ್ತಿ ತಂದಿದೀನಿ…ಬಾ…ಒಂದು ಮುತ್ತಿಗೆ ಒಂದು ಉತ್ತುತ್ತಿ….ಬಾ ….ಬಾ…” ಎನ್ನುತ್ತಾ ಹತ್ತಿರ ಹೋದರೆ ನನ್ನನ್ನು ಬಾಚಿತಬ್ಬಿಕೊಂಡು ಮುಖದ ತುಂಬ ಲೊಚ ಲೊಚ ಮುದ್ದುಕೊಡುತ್ತಾ ಇದ್ದರು. ಸೀತಜ್ಜಿಗೆ ಇದು ಕಸವಿಸಿಯ ಸಂಗತಿಯಾಗಿತ್ತು. ನಾನು ಎಲ್ಲಿ ಸುಬ್ಬಜ್ಜ ಕೊಟ್ಟ ಉತ್ತುತ್ತಿ ತಿಂದು ಬಿಡುತ್ತೇನೋ ಅಂತ ಅವಳ ಆತಂಕ. ಆ ಆತಂಕಕ್ಕೆ ಏನು ಕಾರಣ ಎಂದು ನಾನು ಊಹಿಸದವನಾಗಿದ್ದೆ.

ಸುಬ್ಬಜ್ಜನ ವೇಷ ಭೂಷಣ ಮರೆಯಲಿಕ್ಕೇ ಸಾಧ್ಯವಿಲ್ಲ. ಈಶ್ವರನ ಗುಡಿ ತಿರುವಿನಲ್ಲಿ ಅವರು ಕಂಡ ಕೂಡಲೇ ಅದು ಸುಬ್ಬಜ್ಜನೇ ಎಂಬುದು ನನಗೆ ತಿಳಿಯುತ್ತಿತ್ತು. ಓ..ಸುಬ್ಬಜ್ಜ ಬಂತು ಅಂತ ನಾನು ಗಟ್ಟಿಯಾಗಿ ಅರಚುತ್ತಾ ಇದ್ದೆ. ಸುಬ್ಬಜ್ಜನದು ಬಣ್ಣ ಮಾಸಿದ ಕರೀಟೋಪಿ. ಕರೀಬಣ್ಣದ ಕೋಟು. ಹೆಗಲಿಗೆ ಒಂದು ಚೀಲ, ಒಂದು ಸಿಲವರ ಚೊಂಬು ಹುರಿ ಕಟ್ಟಿ ಜೋತುಬಿಟ್ಟುಕೊಂಡಿರುತ್ತಿದ್ದರು. ಚೀಲವೇನೋ ಸರಿ. ಆದರೆ ಆ ಸಿಲವರ ಚೊಂಬನ್ನು ಹೆಗಲಿಗೆ ನೇಲಿಸಿಕೊಂಡು ಈ ಮುದುಕ ಯಾಕೆ ಅಲೆಯುತ್ತಾರೋ ಎಂದು ನಾನು ಕುತೂಹಲದಿಂದ ಸುಬ್ಬಜ್ಜನ ಸಿಲವರ್ ಚೊಂಬನ್ನೇ ನೋಡುತ್ತಾ ಇದ್ದೆ. ಸುಬ್ಬಜ್ಜನ ಕಚ್ಚೆಪಂಚೆ ಮಾಸಿ ಗಿಮಟವಾಗಿರುತ್ತಾ ಇತ್ತು. ಅವರ ಬಾಯಿಂದ ಬೀಡಿ ವಾಸನೆ ಗಮ್ಮಂತ ಹೊಡೆಯುತ್ತಾ ಇತ್ತು. ಬಂದವರೇ ಸುಬ್ಬಜ್ಜ ತಮ್ಮ ಕೈಚೀಲವನ್ನು ಮಂಚದ ಮೇಲೆ ಇಟ್ಟು, ಸಿಲವರದ ಚೊಂಬನ್ನು ಮಾತ್ರ ಪಡಸಾಲೆ ಮೂಲೆಯಲ್ಲಿ ಇಟ್ಟು, ಏ ಹುಡುಗ ಇದನ್ನ ಮುಟ್ಟಿಗಿಟ್ಟೀ ಮತ್ತೆ…ಇದರಲ್ಲಿ ನಮ್ಮೂರ ಚೌಡೀನ ಮಡಗಿದೀನಿ…ದು ದು ದು ದ್ದೂರ ಇರಬೇಕು ಇದರಿಂದ…”ಅನ್ನುತ್ತಿದ್ದರು!.

ಇನ್ನಷ್ಟು

ಎಚ್ಹೆಸ್ವಿ ಮತ್ತೆ ಬರೆದಿದ್ದಾರೆ: ಗಟ್ಟಿಯಾಗಿ ಅತ್ತುಬಿಡಬೇಕು ಅನ್ನಿಸುತ್ತಾ ಇತ್ತು.

ಮತ್ತೊಂದು ಮಳೆಗಾಲ..

-ಎಚ್.ಎಸ್.ವೆಂಕಟೇಶಮೂರ್ತಿ

ಅರವತ್ತೇಳು ವರ್ಷಗಳಷ್ಟು ಹಿಂದಿನ ಒಂದು ಕಥೆ ಹೇಳಲಿಕ್ಕೆ ಹೊರಟಿದ್ದೇನೆ.ಆ ಹುಡುಗಿಗೆ ಗಂಡ ತೀರಿಕೊಂಡಾಗ ಕೇವಲ ಹದಿನೇಳರ ವಯಸ್ಸು. ಆಗ ಅವಳು ದಿನ ತುಂಬಿದ ಬಸುರಿ. ಸಾಯುವ ಮುನ್ನ ಗಂಡ ಅವಳನ್ನು ಕೂಗಿ ಕರೆದು ಅವಳ ಉಬ್ಬಿದ ಹೊಟ್ಟೆಯ ಮೇಲೆ ಪ್ರಯಾಸದಿಂದ ತನ್ನ ಕೈ ಆಡಿಸುತ್ತಾ ಕುಸಿದ ದನಿಯಲ್ಲಿ ಹೇಳಿದ್ದಿಷ್ಟೆ: “ನಾನಿನ್ನು ಉಳಿಯೋದಿಲ್ಲ…ಆದರೆ ನಾನು ಹೋದರೂ ನಿನ್ನ ಮಗ ಇರ್ತಾನೆ….ಅವನೇ ನಿನ್ನ ಕಾಪಾಡ್ತಾನೆ…ಸರಿಯಾಗಿ ನೋಡಿಕೋ….ಅವನು ಹು-ಟ್ಟಿ-ದ ಮೇ-ಲೆ”…. ಅಲ್ಲಿಗೆ ಕಥೆ ಮುಗಿಯಿತು. ಆದರೆ ವಾಕ್ಯ ಇನ್ನೂ ಮುಗಿದೇ ಇರಲಿಲ್ಲ. ಕೆಲವು ವಾಕ್ಯಗಳ ಹಣೇಬರ ಇದು. ಅವು ಅಪೂರ್ಣವಾಗಿಯೇ ಉಳಿಯುತ್ತವೆ. ಅಪೂಣವಾಗಿ ಉಳಿಯೋದರಿಂದಲೇ ಅವು ಯಾವತ್ತೂ ಮುಗಿಯೋದಿಲ್ಲ. ಹೀಗೆ ಸಾಯುವ ಗಂಡ ಒಂದು ಅಪೂರ್ಣ ವಾಕ್ಯವನ್ನು ಮುಗಿಯದಂತೆ ಉಳಿಸಿ ತನ್ನ ಋಣ ಹರಿದುಕೊಂಡ. ಹುಡುಗಿ ರಂಭಾಟ ಮಾಡಿ ಅಳುವುದಕ್ಕೂ ಮನೆಯಲ್ಲಿದ್ದ ಅಮ್ಮ, ದೊಡ್ಡಮ್ಮ ಅವಕಾಶ ಕೊಡಲಿಲ್ಲ. ನೀನು ಹೀಗೆ ಹೊಟ್ಟೆ ಬಡಿದುಕೊಂಡು ಅತ್ತರೆ ನಿನ್ನ ಕೂಸಿಗೇ ಅಪಾಯ ಕಣೇ…ಎಂದು ಗಿರಿಗಿರಿ ಕಣ್ಣು ತಿರುಗಿಸುತ್ತಾ ಭೀಮಜ್ಜಿ ಕೂಗಿದಾಗ, ಹುಡುಗಿ ಥಟಕ್ಕನೆ ಸ್ತಬ್ಧಳಾಗಿಬಿಟ್ಟಳು. ಹೀಗೆ ಸರಿಯಾಗಿ ಅಳುವುದಕ್ಕೂ ಅವಕಾಶವಿಲ್ಲದೆ ಗಂಡನ ಶವವನ್ನು ಬೀಳ್ಕೊಡಬೇಕಾಯಿತು.

ದಿನತುಂಬಿದ ಮೇಲೆ ಹುಟ್ಟಿದ್ದು ಗಂಡು ಕೂಸು. ನಗುತ್ತಾ ಅಳುತ್ತಾ ಆ ಮಗುವನ್ನು ಅಮ್ಮ, ದೊಡ್ಡಮ್ಮ ಸ್ವಾಗತಿಸಿದರು. ಗಂಡ ಸತ್ತ ನಕ್ಷತ್ರ ಚೆನ್ನಾಗಿರಲಿಲ್ಲ. ಅದಕ್ಕಾಗಿ ಹುಡುಗಿಯ ಸಂಸಾರ ಮನೆಬಿಟ್ಟು ಇನ್ನೂ ಪೂರ್ತಿಯಾಗಿರದ ಯಾರದ್ದೋ ಹೊಸಮನೆಯಲ್ಲಿ ಬಿಡಾರ ಹೂಡಿತ್ತು. ಅದನ್ನ ಹೊಸಮನೆ ಅಂತಲೇ ಆ ಕೇರಿಯಲ್ಲಿ ಎಲ್ಲರೂ ಕರೆಯುತ್ತಾ ಇದ್ದರು. ಹೊಸಮನೆ ಅಪೂರ್ಣವಾಗಿ ಉಳಿದಿದ್ದುದರಿಂದ ಆ ಮನೆ ಹಳೆಯದಾಗುವ ಚಾನ್ಸೇ ಇರಲಿಲ್ಲ. ಆ ಹೊಸ ಮನೆಯ ಪಡಸಾಲೆಯ ಪಕ್ಕ ಇದ್ದ ಕೋಣೆಯಲ್ಲಿ ಹುಡುಗಿ ಬೆಸಲಾದದ್ದು. ಹೆರಿಗೆ ಆದಾಗ ಅಜ್ಜ ಊರಲ್ಲಿ ಇರಲಿಲ್ಲ. ಹಳ್ಳಿಗೆ ಹೋಗಿದ್ದ. ಬಂದ ಕೂಡಲೇ ಅವನಿಗೆ ಕಂಡದ್ದು ಮುಂಬಾಗಿಲ ಬಳಿ ಸೆಗಣೀಕಟ್ಟೆ ಕಟ್ಟಿ ಮಾಡಿದ್ದ ನೀರಿನ ಕುಣಿ. ಅಜ್ಜನಿಗೆ ಗೊತ್ತಾಯಿತು. ಓಹೋ ಮಗು ಹುಟ್ಟೇ ಬಿಟ್ಟಿದೆ. ಸೆಗಣಿ ಕುಣಿಯಲ್ಲಿ ಕಾಲು ಅದ್ದುತ್ತಾ ಅಜ್ಜ ಹೊರಗಿಂದಲೇ ಕೂಗಿದ: ಎಂಥ ಕೂಸೇ?

ಇನ್ನಷ್ಟು

ಎಚ್ಎಸ್ವಿ ಕಂಡ ಹೊಸ ವರ್ಷ: ಈಗ ಹೋಳಿಗೆಯ ಕಾಲ ಮುಗಿದಿದೆ

-ಎಚ್.ಎಸ್.ವೆಂಕಟೇಶಮೂರ್ತಿ

(ಉದಯವಾಣಿಯಲ್ಲಿ ಬಂದ ಲೇಖನ)

ಮೊದಲೆಲ್ಲ ನಾವು ಯುಗಾದಿಯನ್ನೇ ಹೊಸ ವರ್ಷದ ಆದಿ ಅಂದುಕೊಂಡಿದ್ದೆವು! ದುಂಡನೆಯ ರೊಟ್ಟಿಯನ್ನು ಎಲ್ಲಿಂದಲೂ ತಿನ್ನಲು ಶುರುಹಚ್ಚಬಹುದು ಎಂಬುದು ತಿಳಿಯದಿದ್ದ ಕಾಲವದು! ಈಚೀಚೆಗೆ ಜನವರಿ ಒಂದು ವರ್ಷಾರಂಭ ಎನ್ನುವುದು ನಮ್ಮ ಅರಿವಿಲ್ಲದೆಯೇ ಅನುಭವಕ್ಕೆ ಬಂದುಬಿಟ್ಟಿದೆ. ಅದೀಗೀಗ ಯುಗಾದಿಗೆ ಪರ್ಯಾಯವೆನ್ನುವಂತೆ ಮನೆಯೊಳಗೂ ಪ್ರವೇಶಿಸಿಬಿಟ್ಟಿದೆ. ಆದರೆ ಇದರ ಮುಖಚರ್ಯೆ ಯುಗಾದಿಗಿಂತ ಭಿನ್ನವಾಗಿರುವುದನ್ನು ಯಾರೂ ಗಮನಿಸಬಹುದು.

ಆ ದಿನಗಳಲ್ಲಿ ಮನೆಯ ಧೂಳು ಹೊಡೆಯುವುದರಿಂದ ಶುರುಹಚ್ಚಿ, ಸುಣ್ಣ ಬಣ್ಣ ಕಾರಣೆ ಕಿಗ್ಗಾರಣೆ ಅಂತ ನಮ್ಮ ಅಜ್ಜಿ ಮತ್ತು ಅಮ್ಮ ತಿಂಗಳುಗಟ್ಟಲೆ ಹಬ್ಬದ ಸವರಣೆ ಮಾಡುತ್ತಿದ್ದರು. ಧೂಳು ಜಾಡಿಸುವುದು ಎಂದರೆ ಅದೇನು ಸಾಮಾನ್ಯ ಸಾಹಸವೇ? ಮಡಿಕೋಲಿಗೆ ಕಡ್ಡಿಪೊರಕೆ ಕಟ್ಟಿ ಅಜ್ಜ ಅಟ್ಟದ ದೆಬ್ಬೆಯ ಮೇಲೆ ನಿಂತು ಸೂರಿಗೆ ಕಟ್ಟಿಕೊಂಡ ಜೇಡದ ಬಲೆಗಳನ್ನು ಕೆಳಕ್ಕೆ ಬೀಳಿಸುತ್ತಿದ್ದರು.ಅಟ್ಟದ ಎರಡು ಗೋಡೆ ಸಂಧಿಸುವ ಯಾವುದೇ ಮೂಲೆ ನೋಡಿದರು ಅಲ್ಲಿ ಜೇಡ ಬಲೆ ಹೆಣೆದೇ ಇರುತ್ತಿತ್ತು. ಅದೆಲ್ಲವನ್ನು ಪೊರಕೆಯಿಂದ ಕೆರೆದು ಕೆಳಕ್ಕೆ ಕೆಡವುದರೊಳಗೆ ಅಜ್ಜನ ತೋಳು ಬಿದ್ದುಹೋಗುತ್ತಿತ್ತು

ತಲೆ ಮೂಗಿಗೆಲ್ಲಾ ಬಟ್ಟೆ ಸುತ್ತಿಕೊಂಡು ಅಜ್ಜ, ಅಜ್ಜಿ ಧೂಳು ಝಾಡಿಸುವ ದೃಶ್ಯ ಯಾರೋ ಮುಸುಕು ಹಾಕಿದ ದರೋಡೆಗಾರರು ಮನೆಗೆ ನುಗ್ಗಿರುವ ಕಲ್ಪನೆ ಕೊಡುತ್ತಾ ಇತ್ತು. ಎನ್.ನರಸಿಂಹಯ್ಯನವರ ಕಾದಂಬರಿಗಳಲ್ಲಿ ಇಂಥ ಮುಸುಕಿನ ಖೂಳರ ಕಥೆಗಳು ಅನೇಕ ಬರುತ್ತಾ ಇದ್ದವಲ್ಲಾ! ಅಟ್ಟದ ಮೇಲೆ ದೊಣ್ಣೆ ಹಿಡಿದು ಹೋರಾಡುತ್ತಿರುವ ಅಜ್ಜ ಅಜ್ಜಿ ಯಾವುದೋ ಪುರಾತನ ಹಗೆಯನ್ನು ಚುಕ್ತಾ ಮಾಡಲು ಖಡಾಖಾಡಿಯಲ್ಲಿ ತೊಡಗಿರುವಂತೆ ನನಗೆ ಭಾಸವಾಗುತ್ತಿತ್ತು. ನಮ್ಮ ದೊಡ್ಡಜ್ಜಿ ಮತ್ತು ಅಮ್ಮ ಇಂಥ ಸಾಹಸದ ಕೆಲಸಗಳಿಗೆಲ್ಲಾ ಕೈ ಹಾಕುತ್ತಿರಲಿಲ್ಲ. ನಮ್ಮ ಅಜ್ಜನಿಗೆ ಸಮಾಸಮವಾಗಿ ಇಂಥ ಕೆಲಸ ಮಾಡುತ್ತಿದ್ದಾಕೆ ಸೀತಜ್ಜಿಯೇ.ಧೂಳು ಝಾಡಿಸಿದ್ದಾದ ಮೇಲೆ ಸುಣ್ಣ ಬಳಿಯುವ ತಯಾರಿ. ಹಿತ್ತಲ ಕಟ್ಟೆಯ ಕೆಳಗೆ ಒಂದು ಸುಣ್ಣ ಬೇಯಿಸುವ ಗುಡಾಣವಿತ್ತು. ಸಂತೆಯಿಂದ ಸುಣ್ಣಕಲ್ಲನ್ನು ಆ ಕಡಾಯಿಯಲ್ಲಿ ಸುರುವಿ ಮೇಲೆ ಎರಡು ಕೊಡ ನೀರು ಹೊಯ್ದರೆ ಸುಣ್ಣ ಕೊತ ಕೊತ ಕುದಿಯುವುದಕ್ಕೆ ಪ್ರಾರಂಭವಾಗುತ್ತಿತ್ತು. ತಣ್ಣೀರಲ್ಲಿ ಸುಣ್ಣದ ಕಲ್ಲು ಕುದ್ದು ಕುದ್ದು ಬೆಳ್ಳಗೆ ಮಲ್ಲಿಗೆಯಂತೆ ಅರಳಿಕೊಳ್ಳುವುದು ನನಗಂತೂ ತುಂಬಾ ಚೋದ್ಯದ ವಿಷಯವಾಗಿತ್ತು.

ಇನ್ನಷ್ಟು

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಆ ಘಟನೆ ಹೃದಯ ತಲ್ಲಣಗೊಳಿಸಿತ್ತು…

ಅಳಿಯಲಾರದ ನೆನಹು-೨೫

ಎಚ್ ಎಸ್ ವೆಂಕಟೇಶಮೂರ್ತಿ

೧೯೮೮. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರ ನನಗೆ ಬಂದ ವರ್ಷ. ಬೆಳಗಾಬೆಳಿಗ್ಗೆ ನನ್ನ ಬನಶಂಕರಿ ಮನೆಗೆ ಧಾವಿಸಿ ಬಂದವರು ಸಿ.ಅಶ್ವತ್ಥ್. ಏನು ಸ್ವಾಮೀ..? ಇನ್ನೂ ಮಲಗಿದ್ದೀರಿ? ನಿಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ…ಎಂದು ಹೊರಗಿನಿಂದಲೇ ಗಟ್ಟಿಯಾಗಿ ಅವರು ಕೂಗು ಹಾಕಿದ್ದು. ಕೆಲವೇ ನಿಮಿಷದಲ್ಲಿ ನರಹಳ್ಳಿ ಬಂದರು.

ದೂರವಾಣಿಯ ಮೂಲಕ ಸ್ನೇಹಿತರು, ಬಂಧುಗಳು, ಆಪ್ತರು ಒಂದೇ ಸಮ ಕರೆಮಾಡುತ್ತಾ ಅಭಿನಂದನೆ ಹೇಳತೊಡಗಿದರು. ಅದೇ ಸಂಜೆ ನನ್ನ ಬಹುಕಾಲದ ಗೆಳೆಯ ಶಂಕರ್ ಒಂದು ಔತಣಕೂಟ ಏರ್ಪಡಿಸಿದ. ಅದಕ್ಕೆ ಹಿರಿಯರಾದ ಪುತಿನ, ಕೆ.ಎಸ್.ನ ,ಜಿ.ಎಸ್.ಎಸ್ ಇಂದ ಹಿಡಿದು ನನಗೆ ಪ್ರಿಯರಾದ ಎಲ್ಲ ಲೇಖಕ ಮಿತ್ರರೂ, ಹಿತೈಷಿಗಳೂ ಆಗಮಿಸಿದ್ದರು.

ಈ ಉತ್ಸುಕತೆ ಉತ್ಸವ ನನಗೆ ಸಂತೋಷ ನೀಡಬೇಕಲ್ಲವೇ? ಆದರೆ ನನಗೆ ಇದೆಲ್ಲಾ ಆಳದಲ್ಲಿ ಮನಸ್ಸಿಗೆ ಒಂದು ಬಗೆಯ ದಿಗಿಲನ್ನೂ ಆತಂಕವನ್ನೂ ನೀಡಿತೆನ್ನುವುದು ವಾಸ್ತವ ಸತ್ಯ. ವಿಪರೀತ ಸಂತೋಷ ಯಾವಾಗಲೂ ನನ್ನಲ್ಲಿ ವಿಪರೀತ ದುಃಖದ ಸಾಧ್ಯತೆಯನ್ನು ಉದ್ರೇಕಿಸುತ್ತದೆ. ಇದೊಂದು ವಿಲಕ್ಷಣತೆ ಎಂದೇ ನೀವು ಬೇಕಾದರೆ ಕರೆಯಿರಿ.

ಇನ್ನಷ್ಟು

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಸೀತಜ್ಜಿಗೆ ನೂರು ವರ್ಷ

ಅಳಿಯಲಾರದ ನೆನಹು-೨೪

ಎಚ್ ಎಸ್ ವೆಂಕಟೇಶಮೂರ್ತಿ

ಸೀತಜ್ಜಿಗೆ ನೂರು ವರ್ಷ ತುಂಬಿತು ಎಂದು ನಾನೂ ಮಕ್ಕಳು ಸೊಸೆಯರು ಎಲ್ಲಾ ಸೇರಿ, ಕೂಡಿಕಳೆದು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದೆವು. ಕಾರಣ ಸೀತಜ್ಜಿಯ ಹುಟ್ಟಿದ ದಿನಾಂಕ ಯಾರಿಗೂ ಗೊತ್ತಿರಲಿಲ್ಲ. ಅವಳ ಜಾತಕ ಯಾರೂ ಬರೆಸಿ ಇಟ್ಟಿರಲಿಲ್ಲ. ಅಜ್ಜಿಗೆ ಹದಿನೆಂಟು ಇರಬೇಕಾದರೆ ನಮ್ಮ ಅಮ್ಮ ಅವಳಿಗೆ ಹುಟ್ಟಿರಬಹುದು. ನಮ್ಮ ಅಮ್ಮನಿಗೆ ಹದಿನೆಂಟು ಇರುವಾಗ ನಾನು ಹುಟ್ಟಿದ್ದು.

ಈಗ ನನಗೆ ಅರವತ್ತೇಳು. ಅಂದಮೇಲೆ ನಮ್ಮ ಅಜ್ಜಿಗೆ ಎಷ್ಟು ವಯಸ್ಸಾಗಿರಬಹುದು ಎಂದು ಲೆಕ್ಕಾಚಾರ ಮಾಡಿ ಈ ವರ್ಷದ ಕೊನೆಗೆ ಅವಳಿಗೆ ನೂರು ತುಂಬುತ್ತದೆ ಎಂದು ನಾವೆಲ್ಲಾ ಒಮ್ಮತದಿಂದ ತೀರ್ಮಾನಿಸಿದೆವು! ಮತ್ತು ಅದನ್ನು ದೃಢವಾಗಿ ನಂಬಲಿಕ್ಕೆ ಶುರುಮಾಡಿದೆವು. ಅಜ್ಜಿಯ ಜನ್ಮಶತಮಾನೋತ್ಸವವನ್ನು ವಿಜೃಂಭಣೆಯಿಂದ ಮಾಡಬೇಕೆಂದು ನನ್ನ ಮಕ್ಕಳು ನಿರ್ಧರಿಸಿದರು. ನಾನು ಸೊಸೆಯಿಂದ ನಮ್ಮ ಅಮ್ಮನಿಗೆ ಫೋನ್ ಮಾಡಿಸಿದೆ.

ಅಜ್ಜಿಗೆ ಆಗ ಕಿವಿ ಸುತ್ರಾಂ ಕೇಳಿಸುತ್ತಿರಲಿಲ್ಲ. ಅವಳಿಗೆ ಏನಾದರೂ ತಿಳಿಸುವುದು ತುಂಬಾ ಕಷ್ಟವಾಗುತ್ತಿತ್ತು. ಎಡ ಕಿವಿಯ ಬಳಿ ಯಾವುದೋ ಅಂತರದಲ್ಲಿ ಯಾವುದೋ ಒಂದು ನಿಶ್ಚಿತ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಮಾತಾಡಿದಾಗ ಮಾತ್ರ ಆಕೆ ಅಲ್ಪ ಸ್ವಲ್ಪ ಗ್ರಹಿಸಬಲ್ಲವಳಾಗಿದ್ದಳು. ಹೀಗೆ ಮಾತಾಡುವುದು ನಮ್ಮ ಅಮ್ಮನಿಗೆ ಮಾತ್ರ ಸಿದ್ಧಿಸಿತ್ತು.ಅಮ್ಮನ ಮೂಲಕ ನಾವು ಅಜ್ಜಿಯೊಂದಿಗೆ ನಡೆಸಿದ ಸಂಭಾಷಣೆಯ ಸ್ಥೂಲ ರೂಪ ಕೆಳಕಂಡಂತಿದೆ

(ಚಿತ್ರ ಶಿವರಾಂ ಪೈಲೂರು)

ಈ ಕಡೆಯಿಂದ: ಅಜ್ಜೀ…ನಿನಗೆ ಮುಂದಿನ ತಿಂಗಳು ನೂರು ತುಂಬುತ್ತದೆ.. ನಿನಗೆ ಏನು ಬೇಕು ಹೇಳು..ತರುತ್ತೇವೆ…

ಆ ಕಡೆಯಿಂದ: ಈ ವಯಸ್ಸಿನಲ್ಲಿ ನನಗೆ ಏನು ಬೇಕಮ್ಮಾ? ನೀವೆಲ್ಲಾ ಹಳ್ಳಿಗೆ ಬಂದು ನನ್ನ ನೋಡಿಕೊಂಡು ಹೋಗಿ..ಅಷ್ಟೇ ಸಾಕು…

ಈ ಕಡೆಯಿಂದ: ನಾವು ಬರೋದು ಇದ್ದೇ ಇದೆ…ನಾವು ಮಾತ್ರವಲ್ಲಾ…ನಂಟರಿಷ್ಟರನ್ನೆಲ್ಲಾ ಸೇರಿಸುತ್ತೇವೆ…ನಿಮಗೆ ನಾವೆಲ್ಲಾ ಸೇರಿ ಏನಾದರೂ ಪ್ರೆಸೆಂಟ್ ಮಾಡಬೇಕೆಂದಿದ್ದೇವೆ…ಸಂಕೋಚಪಡದೆ ಏನು ಬೇಕೋ ಕೇಳಿ…

ಆ ಕಡೆಯಿಂದ(ತಾಯಿ ಮಗಳ ನಡುವೆ ಸ್ವಲ್ಪ ಚರ್ಚೆಯಾದ ಮೇಲೆ): ನನಗೊಂದು ಗೋಲ್ಡ್ ಕವರಿಂಗ್ ಸರ ತಗೊಂಡು ಬನ್ನಿ…ತಿಗಿಣೇ ಪ್ಯಾಟ್ರನ್ದು…ತೆಳ್ಳಗೆ ಚಿನ್ನದ ಸರದ ಹಾಗೇ ಇರಬೇಕು… ನೋಡಿದವರಿಗೆ ಚಿನ್ನದ್ದೇ ಅನ್ನಿಸ ಬೇಕು…ವೇದನ್ನ ಕರ್ಕೊಂಡು ಹೋಗಿ …ಅವಳು ಚೆನ್ನಾಗಿ ಆರಿಸ್ತಾಳೆ!

ಇನ್ನಷ್ಟು

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಲೋ..ರಂಗಧಾಮ

ಅಳಿಯಲಾರದ ನೆನಹು-೨೩

ಹೊಟ್ಟೆಪಾಡಿಗಾಗಿ ನನ್ನ ಪಡ್ಡೆ ಕಾಲದ ಗೆಳೆಯ ರಂಗಧಾಮ ಈ ಕಾಡುಗುಡ್ಡಗಳ ದಟ್ಟ ಹಸಿರಿನ ರಮ್ಯ ಪ್ರದೇಶಕ್ಕೆ ಬಂದು ನೆಲೆಸಿದ್ದು, ಪ್ರಕೃತಿಯ ಐಭೋಗವನ್ನು ಮೆಚ್ಚಿ ಆಕರ್ಷಿತನಾಗಿಯೇನೂ ಅಲ್ಲ. ಆದರೆ ಒಮ್ಮೆ ಬಂದು ಬೇಕಾಗಿಯೋ ಅನಿವಾರ್ಯವಾಗಿಯೋ ಇಲ್ಲಿ ನೆಲೆಸಿದ ಮೇಲೆ ಕಾನುಗುಡ್ಡದ ಆ ರಮ್ಯ ಸ್ಥಳವನ್ನು ಅವನು ಪ್ರೀತಿಸಲಿಕ್ಕೆ ಶುರುಮಾಡಿದ. ಎಷ್ಟು ಪ್ರೀತಿಸ ತೊಡಗಿದ ಅಂದರೆ ಅವನಿಗೆ ಮನೆ ಹೆಂಡತಿ ಮಗ ಯಾವುದೂ ಈಚೆಗೆ ಮುಖ್ಯ ಎನ್ನಿಸುತ್ತಿಲ್ಲ. ಬಿಡುವು ದೊರೆತಾಗಲೆಲ್ಲಾ ಒಂಟಿಯಾಗಿ ಈ ಎತ್ತರದ ಬೆಟ್ಟಮುಡಿಗಳಲ್ಲಿ, ಆಳವಾದ ಹಸಿರು ಕಣಿವೆಗಳಲ್ಲಿ ಅಲೆಯುತ್ತಾ ಕಾಲ ಕಳೆಯುತ್ತಾನೆ.

ತಾನು ಈ ಪಾಟಿ ಹಚ್ಚಿಕೊಂಡ ಕಾಡುಗುಡ್ಡಕಣಿವೆಗಳನ್ನು ತನ್ನ ಬಾಲ್ಯದ ಗೆಳೆಯನಿಗೆ ತೋರಿಸ ಬೇಕೆಂದು ಅವನಿಗೆ ಯಾಕೆ ಅನ್ನಿಸಿತೋ. ಈ ವಸಂತಕ್ಕೆ ನೀನು ಯಾವ ಸಬೂಬೂ ಹೇಳದೆ ಇಲ್ಲಿಗೆ ಬರಬೇಕು ಎಂದು ಪತ್ರ ಬರೆದು ಬಲವಂತ ಪಡಿಸಿದ. ಇನ್ನೂ ವಸಂತ ದೂರದಲ್ಲಿ ಇತ್ತು. ಮುಂದಿನ ತಿಂಗಳು ಬಾ ಎಂದಿದ್ದರೆ ನಾನು ಖಂಡಿತ ಆಗುವುದಿಲ್ಲ ಎನ್ನುತ್ತಿದ್ದೆ. ದೂರದಲ್ಲಿ ಇದ್ದಾಗ ನಾವು ಸಾಮಾನ್ಯವಾಗಿ ದೂರದ ಪ್ರಯಾಣಕ್ಕೆ ಒಪ್ಪಿಕೊಂಡುಬಿಡುತ್ತೇವೆ! ಇನ್ನೂ ಆರು ತಿಂಗಳು ಇದೆ…ಆಗ ನೋಡಿಕೊಳ್ಳೋಣ ಎಂದು ನಾನು ಆಗಲಿ ಎಂದದ್ದೇ ತಪ್ಪಾಯಿತು. ರಂಗಧಾಮ ರಿಜಿಸ್ಟರ್ ಪೋಸ್ಟ್ ಮೂಲಕ ರೈಲ್ವೇ ಟಿಕೆಟ್ ಕಳಿಸಿ ನನ್ನ ಪ್ರಯಾಣವನ್ನು ಗಟ್ಟಿಮಾಡಿಬಿಟ್ಟ.

ನನ್ನನ್ನು ತನ್ನ ಪುಟ್ಟ ವಿಸ್ತರಣಕ್ಕೆ ಕರೆದೊಯ್ಯಲು ರಂಗಧಾಮನೇ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ. ಅವನನ್ನು ನಾನು ನೋಡಿ ಹನ್ನೆರಡು ವರ್ಷವಾಗಿದ್ದರೂ ನೋಡಿದ ಕೂಡಲೇ ಗುರುತು ಹಿಡಿದು ಲೋ..ರಂಗಧಾಮ ಎಂದು ಗಟ್ಟಿಯಾಗಿ ಕೂಗು ಹಾಕಿದೆ. ಹೀಗೆ ನಾನು ಗೆಳೆಯರನ್ನು ನೋಡಿದಾಗ ಕೂಗು ಹಾಕುತ್ತಿದ್ದುದು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ. ಆ ಹಳೆಯ ವಾಸನೆ ಈಗ ಭೂಮಿಯ ಗರ್ಭಕೋಶದಿಂದ ಥಟಕ್ಕನೆ ಅಗ್ನಿಮುಖಿಯ ಮುನ್ನಾ ಹೊಗೆಯಂತೆ ಹೊರಕ್ಕೆ ಚಿಮ್ಮಿದ್ದು ನೆನೆದಾಗ ಈವತ್ತೂ ನನಗೆ ಆಶ್ಚರ್ಯವಾಗುತ್ತದೆ. ನಮ್ಮ ಹಳೆಯ ದಿನಗಳಲ್ಲಿ ನನ್ನ ಆ ಬಗೆಯ ಕೂಗಿಗೆ ರಂಗಧಾಮನೂ ಹಾಗೇ ಪ್ರತಿಕೂಗು ಹಾಕುತ್ತಿದ್ದ. ಈಗ ಅವನ ಬಾಯಿಂದ ಯಾವುದೇ ಧ್ವನಿ ಹೊರಡಲಿಲ್ಲ.

ಸಣ್ಣಗೆ ಕಿರುನಗೆಯೊಂದನ್ನು ಬೀರಿ, ಅದೇ ಅಳ್ಳಕಬಳಕ ಪ್ಯಾಂಟು ಸೊಂಟದ ಮೇಲೆ ಎಡಗೈಯಲ್ಲಿ ಏರಿಸುತ್ತಾ, ಬಲಗೈ ಮೆಲ್ಲಗೆ ಅರ್ಧದಷ್ಟು ಮಾತ್ರ ಮೇಲೆತ್ತಿ ಆಡಿಸಿದ್ದು ನೋಡಿದಾಗ ಏನಾಗಿದೆ ಈ ರಂಗಧಾಮನಿಗೆ ಎಂದು ಆ ಮಿಲನೋತ್ಸಾಹದ ಕ್ಷಣದಲ್ಲೂ ಒಂದು ಸಣ್ಣ ಸುಳಿ ನನ್ನ ಮನಸ್ಸಲ್ಲಿ ಎದ್ದು ಹಾಗೇ ಮುಳುಗಿಹೋಯಿತು. ನನ್ನ ಪ್ರತಿಕ್ರಿಯೆ ಸ್ವಲ್ಪ ಅತಿಯಾಯಿತೇನೋ ಎಂದು ನಾನೇ ಮುಜುಗರಪಡುವಂತಾಯಿತು. ಮೆಲ್ಲಗೆ ಕಾಲೆಳೆಯುತ್ತಾ ನನ್ನ ಬಳಿ ಬಂದ ರಂಗಧಾಮ, ನಿಮ್ಮ ಪ್ರಯಾಣ ಸುಖಕರವಾಗಿ ಆಯಿತಷ್ಟೇ? ಯಾವ ತೊಂದರೆಯೂ ಆಗಲಿಲ್ಲವಷ್ಟೆ? ಎಂದು ತುಂಬ ಗ್ರಾಂಥಿಕವಾಗಿ ತಗ್ಗಿದ ಧ್ವನಿಯಲ್ಲಿ ಪ್ರಶ್ನಿಸಿ, ಅತ್ತಿಗೆ ಬಂದಿದ್ದರೆ ಚೆನ್ನಾಗಿತ್ತು. ಇರಲಿ. ಆ ಬಗ್ಗೆ ನಿಮ್ಮನ್ನು ತದನಂತರ ಬೈಯುವುದಾಗುತ್ತದೆ. ಸದ್ಯ ಮನೆ ಸೇರೋಣ ಬನ್ನಿ…ಎಂದು ಬಲವಂತವಾಗಿ ನನ್ನ ಸೂಟ್ಕೇಸನ್ನ ತಾನೇ ಎತ್ತಿಕೊಂಡು ತನ್ನ ಜೀಪು ನಿಂತಿದ್ದ ಜಾಗಕ್ಕೆ ನನ್ನನ್ನು ಸಾಗಿಸಿದ.

ಇನ್ನಷ್ಟು

Previous Older Entries

%d bloggers like this: