ಚಂದ್ರಶೇಖರ ಆಲೂರು ಕಾಮೆಂಟರಿ: ಅಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿ ಒಟ್ಟಾಗಿ ನೆಲೆಸಲಿ

ಇಲ್ಲಿ ಚಂದ್ರಶೇಖರ್ ಆಲೂರು ಅವರು ಈಜಿಪ್ಟ್ ಬಗ್ಗೆ ತಮ್ಮ ಸ್ಪೆಷಲ್ ಒಳನೋಟವನ್ನು ನೀಡಿದ್ದಾರೆ. ಈ ಲೇಖನ ಬರೆಯುವ ವೇಳೆಗೆ ಮುಬಾರಕ್ ರಾಜಿನಾಮೆ ಘೋಷಿಸಿರಲಿಲ್ಲ.

ಅರಬ್ ಲೋಕವನ್ನು ಆವರಿಸಿದ ‘ಜಾಸ್ಮಿನ್ ಕ್ರಾಂತಿ’ಯ ಕಂಪು

chitra: satish Acharya

ಯಾವಾಗಲೂ ಮೊದಲು ಕೆಟ್ಟದ್ದೇ ನೆನಪಾಗುತ್ತದೆ ಎನ್ನುತ್ತಾರೆ. ಅಥವಾ ಮನಸ್ಸು ಕೆಡುಕನ್ನೇ ನಿರೀಕ್ಷಿಸುತ್ತದೆ. ಈಗ ಆಗಿದ್ದು ಅದೇ. ಅದೇಕೋ ಈಜಿಪ್ಟಿನ ಕೈರೊ, ಅಲೆಗ್ಝಾಂಡ್ರಿಯಾ, ಸುಯಜ್ ಮುಂತಾದ ನಗರಗಳಲ್ಲಿ ಆರಂಭದ ದಿನ ಬಂದ ಜೀನ್ಸ್ ಪ್ಯಾಂಟ್ ಟಿ-ಶರ್ಟ್ ನ ಯುವಕ ಯುವತಿಯರನ್ನು ಕಂಡಾಗ ನೆನಪಿಗೆ ಬಂದದ್ದು ೧೯೮೯ರಲ್ಲಿ ಚೈನಾದ ತಿಯಾನ್ ಮನ್ ಚೌಕದಲ್ಲಿ ನಡೆದ ಘಟನೆ. ಆರಂಭದ ದಿನ ಬಂದವರು ಚೈನಾ ಯುನಿವರ್ಸಿಟಿಯ ಐನೂರು ವಿದ್ಯಾರ್ಥಿಗಳು. ನಂತರ ಪ್ರತಿಭಟನೆ ತೀವ್ರವಾಗುತ್ತಾ ಹೋದಂತೆ ಚೈನಾದ ನಾಲ್ಕುನೂರು ನಗರಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಅಂದು ಬೀಜಿಂಗ್ ನ ತಿಯಾನ್ ಮನ್ ಚೌಕ ಸೇರಿದರು. ಎಲ್ಲರಲ್ಲಿಯೂ ಇದ್ದುದು ಸ್ವಾತಂತ್ರ್ಯದ ಅಭೀಪ್ಸೆ . ಚೈನಾದ ಕಮ್ಯುನಿಸ್ಟ್ ಆಡಳಿತ ಏಳು ವಾರಗಳ ಕಾಲ ಇದನ್ನು ಸಹಿಸಿ ನಂತರ ಎಲ್ಲ ವಿದೇಶಿ ಮಾಧ್ಯಮದವರನ್ನೂ ದೇಶದಿಂದ ಹೊರ ಹಾಕಿ ಜೂ. ನಾಲ್ಕರಂದು ಬೀಜಿಂಗ್ ನಲ್ಲಿ ಸೈನ್ಯದ ಕಾರ್ಯಾಚರಣೆ ನಡೆಸಿ ತನ್ನ ಮಕ್ಕಳನ್ನೇ ಹೊಡೆದು ಸಾಯಿಸಿ ಹುಳುಗಳಂತೆ ಹೊಸಕಿ ಹಾಕಿತು. ಸಾವಿರಾರು ಮಕ್ಕಳು ಈ ಕ್ರೂರ ಕೃತ್ಯದಿಂದ ಹತರಾದರೂ ಬೀಜಿಂಗ್ ಏನೇನೂ ಆಗಿಲ್ಲ ಎಂಬಂತೆ ಮರುದಿನವೇ ಮಡಿಮಾಡಿಕೊಂಡು ನಿಂತು ಬಿಟ್ಟಿತು.

ಆಗಲೂ ಹೊರ ಜಗತ್ತು ಮಕ್ಕಳ ಮೇಲಿನ ಈ ಕೃತ್ಯವನ್ನ ತೀವ್ರವಾಗಿ ಖಂಡಿಸಿತು. ಚೈನಾದ ಕಮ್ಯುನಿಸ್ಟ್ ಆಡಳಿತ ಅಮೆರಿಕ ಮತ್ತು ಯುರೋಪ್ ನ ದುಷ್ಟಪ್ರಭಾವದಿಂದ ಹಾಳಾಗಿದ್ದ ಮಕ್ಕಳನ್ನ ಸರಿ ದಾರಿಗೆ ತಂದುದಾಗಿ ಹೇಳಿಕೊಂಡಿತು.

ಚೈನಾದಲ್ಲಿರುವುದು ಕಮ್ಯುನಿಸ್ಟ್ ಆಡಳಿತವಾದರೆ ಈಜಿಪ್ಟ್ ನಲ್ಲಿರುವುದು ಏಕವ್ಯಕ್ತಿಯ ‘ಪ್ರಜಾಪ್ರಭುತ್ವ’. ಈಜಿಪ್ಟ್ ನ ಪಾರ್ಲಿಮೆಂಟ್ ಗೆ ನಾಲ್ಕು ನೂರ ಹದಿನಾಲ್ಕುಸದಸ್ಯರು ಜನರಿಂದ ಆಯ್ಕೆಯಾಗುತ್ತಾರೆ. ಆದರೆ ಮೂವತ್ತು ವರ್ಷಗಳಿಂದ ಹೊಸ್ನೆ ಮುಬಾರಕ್ . ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಅಣಕ ಮಾಡುತ್ತಾನೆ. ಚುನಾವಣೆ ಎಂಬುದು ಹೆಸರಿಗೆ ಮಾತ್ರ . ಹಲವು ಕ್ರಾಂತಿಗಳನ್ನ , ಅನವರತ ರಕ್ತಪಾತವನ್ನು ಕಂಡ ರಾಷ್ಟ್ರ ಬಯಸುವುದು ಪ್ರಜಾಪ್ರಭುತ್ವವನ್ನಲ್ಲ, ಶಾಂತಿ ಮತ್ತು ಸ್ಥಿರತೆಯನ್ನ ಎಂಬುದನ್ನ ಅರಿತಿದ್ದ ಮುಬಾರಕ್ ಮೂವತ್ತು ವರ್ಷಗಳಿಂದ ಎಲ್ಲ ಬಗೆಯ ವಿರೋಧವನ್ನೂ ಹಣಿದು ಹಾಕಿದ. ಈಜಿಪ್ಟ್ ನಲ್ಲಿ ಶಾಂತಿ ಮತ್ತು ಸ್ಥಿರತೆತಂದಿರುವುದಾಗಿ ಹೇಳಿಕೊಂಡ. ನಮ್ಮ ದೇಶದ ಈಚಿನ ಚುನಾವಣೆಗಳು, ಪಕ್ಷಾಂತರ ರಾಜಕಾರಣಿ-ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟತೆಯನ್ನು ಕಂಡಾಗ ಮಿತ ಸರ್ವಾಧಿಕಾರ ಇದಕ್ಕೆ ಪರಿಹಾರವೇನೋ ಅನ್ನಿಸಿ ಬಿಡುತ್ತದೆ. ಆದರೆ ಸರ್ವಾಧಿಕಾರಕ್ಕೆ ಮಿತಿ ಎಂಬುದು ಇಲ್ಲ . ಇದಕ್ಕೆ ಮುಬಾರಕ್ ನೇ ಉದಾಹರಣೆ. ಆತ ಇಂದು ಹಲವು ಲಕ್ಷ ಕೋಟಿ ರುಪಾಯಿಗಳ ಒಡೆಯ. ಅಮೆರಿಕಾ ಮತು ಯುರೊಪ್ ನಲ್ಲಿ ಅಪಾರ ಆಸ್ತಿ ಮಾಡಿದ್ದಾನೆ. ಹಾಗೆಯೇ ಆತನ ಸಹಾಯಕರು ಮತ್ತು ಚೇಲಾಗಳುಕೂಡ ಕೊಬ್ಬಿದ್ದಾರೆ.

ಇನ್ನಷ್ಟು

ಚಂದ್ರಶೇಖರ ಆಲೂರು ಕಾಲಂ :ಕಾಡು, ಕಡಲು, ಬಯಲು ತೊರೆದು ಮರಳುಗಾಡಿಗೆ …

ಅಲ್ಲಿ: ದೃಷ್ಟಿ ಹಾಯಿಸುವಲ್ಲೆಲ್ಲಾ ಕಾಣುವುದು ಮರಳು, ಬರೀ ಮರಳು. ಬಸ್ಸಿನಲ್ಲಿಯೋ, ಕಾರಿ ನಲ್ಲಿಯೋ ಪ್ರಯಾಣ ಮಾಡುತ್ತಿದ್ದಾಗ ಮಧ್ಯ ನಿಂತರೆ ಮರಳ ಕಡಲಿನ ನಡುವೆ ನಿಂತ ಅನುಭವ. ಒಂದೇ ಒಂದು ಹಸಿರು ಗಿಡವಿಲ್ಲ, ಜೀವರಾಶಿಯ ಸುಳಿವೇ ಇಲ್ಲ. ದೂರದಲ್ಲೆಲ್ಲೋ ಒಂದು ಓಯಸಿಸ್, ಕೆಲವು ಖರ್ಜೂರದ  ಮರಗಳನ್ನ ಬಿಟ್ಟರೆ ಬೇರೇನೂ ಇಲ್ಲ. ಹಸಿರು, ಜೀವರಾಶಿ ಇರಲಿ ನೂರಾರು ಮೈಲಿ ಪಯ ಣಿಸಿದರೂ ಒಂದು ಹನಿ ನೀರೂ ಕಾಣುವುದಿಲ್ಲ! ನಮಗೆ ಕಾಣದ ಎಣ್ಣೆ ಬಾವಿಗಳಷ್ಟೇ ಅಲ್ಲಿರುವುದು. ಅದೊಂದೇ ಅಲ್ಲಿನ ನೈಸರ್ಗಿಕ   ಸಂಪತ್ತು. ಅದೊಂದೇ ಪ್ರಕೃತಿ ನೀಡಿದ ಭಾಗ್ಯ!

ಈ ಪುಟ್ಟ ರಾಜ್ಯವೇ ಒಂದು ಮಲೆನಾಡು. ಎಲ್ಲಿ ಸಂಚರಿಸಿದರೂ ಹಸಿರು ಹೊದ್ದ ಪರ್ವತಗಳು. ಬದಿಯಲ್ಲಿ ಮೇರೆಯರಿಯದ ಕಡಲು. ಹಸಿರೆಂದರೆ ಎಂಥ ಹಸಿರು, ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರ ಕಡಲು. ಒಂದಲ್ಲ, ಎರಡಲ್ಲ ಸಾವಿರಾರು ಸಸ್ಯ ಪ್ರಭೇ ದಗಳು. ಪರ್ವತಗಳಿಂದ ಧುಮುಕುತ್ತಿರುವ ನೂರಾರು ಜಲಪಾತಗಳು. ಬಸ್ಸು ಅಥವಾ ಕಾರಿನಲ್ಲಿ ಪಯಣಿಸುತ್ತಿದ್ದರೆ ನೂರಾರು ಮೈಲಿಗಳ ಹಾದಿಗುಂಟ ಅಸಂಖ್ಯಾತ ನೀರಿನ ಝರಿಗಳು.

ಇಲ್ಲಿ ಏನು ಬೆಳೆಯುವುದಿಲ್ಲ? ಕಾಫಿ, ಟೀ, ಬಾಳೆ, ಏಲಕ್ಕಿ, ರಬ್ಬರ್, ಭತ್ತ; ಕಡಲತಡಿಯ ಗುಂಟ ಹಬ್ಬಿದ ತೆಂಗು, ಸಮುದ್ರ ತಂದು ಸುರಿಯುವ ಮೀನು… ಪುಟ್ಟ ರಾಜ್ಯಕ್ಕೆ ಹಲವು ನೈಸರ್ಗಿಕ   ಬಂದರುಗಳನ್ನ ನೀಡಿರುವ ಸಮುದ್ರ, ಪುಟ್ಟ ಕಡಲಿನಂತೆ ಕಾಣುವ ಬೃಹತ್ ಜಲರಾಶಿ. ಅರೆ ಏನಿಲ್ಲ, ಇದು ನಿಜಕ್ಕೂ ದೇವತೆಗಳು ತಮ್ಮ ಸ್ವಂತಕ್ಕಾಗಿ ಸೃಷ್ಟಿಸಿಕೊಂಡ ಸ್ವರ್ಗವೇ ಸರಿ.

ಇದು ಕೇರಳ. ಅವರೇ ಹೇಳಿಕೊಳ್ಳುವಂತೆ God’s own country. ನಾಲ್ಕು ದಿನಗಳ ಪುಟ್ಟ ಪ್ರವಾಸ ಮುಗಿಸಿ ಅಲ್ಲಿಂದ ಬರುವಾಗ ನನ್ನನ್ನ ಗುಂಪಾಗಿ ಕಾಡಿದ್ದು: ಇಂಥ ನಿಸರ್ಗದತ್ತ ಸ್ವರ್ಗವನ್ನ ತೊರೆದು ಜನ ಕೊಲ್ಲಿ ದೇಶಗಳು ಅಥವಾ ಗಲ್ ಎಂದು ಕರೆಯ ಲ್ಪಡುವ ಆ ಮರಳುಗಾಡನ್ನ ಯಾಕೆ ಹಂಬಲಿಸುತ್ತಾರೆ, ಕನಸುತ್ತಾರೆ? ಅಲ್ಲಿಗೆ ಹೇಗಾದರೂ ಹೋಗಿ ಬಿಡಬೇ ಕೆಂದು ಯಾಕೆ ಹಂಬಲಿಸುತ್ತಾರೆ.

ಇನ್ನಷ್ಟು

ಚಂದ್ರಶೇಖರ ಆಲೂರು ಕಾಲಂ: ನಿತ್ಯ ಮಡೆ ಸ್ನಾನ ಮಾಡುವ ಮನಸ್ಸುಗಳು

“ಅದೊಂದು polished version of TV-9 report. ಈ ಬಗೆಯ ಮೂಢನಂಬಿಕೆಗಳು, ಆಚರಣೆಗಳ ಬಗ್ಗೆ ಅಂಥ ಛಾನೆಲ್‌ಗಳು hype ಮಾಡಿ ತೋರುವ ಪರಿಣಾಮವನ್ನೇ ಈ ಲೇಖನ ಕೂಡ ಮಾಡುತ್ತದೆ. “ಈಚೀಚೆಗಂತೂ ‘ಮಡೆ ಸ್ನಾನ’ ಮಾಡುವವರ ಸಂಖ್ಯೆ ವಿಪರೀತ ಹೆಚ್ಚುತ್ತಿದೆ ಅಂತೆ ಯಾಕೆ?” ಎಂದು ಅವರು ಪ್ರಶ್ನಿಸುತ್ತಾರೆ. ಕಾಲ ಹಿಮ್ಮುಖವಾಗಿ ಚಲಿಸುತ್ತಿರುವುದೇ ಇದಕ್ಕೆ ಕಾರಣ. ಇಂಥ ಮೂಢನಂಬಿಕೆಗಳನ್ನ ಕಡೆಯ ಪಕ್ಷ ಬಹಿರಂಗವಾಗಿ ಸಮರ್ಥಿಸಲು ಹಿಂಜರಿಯುತ್ತಿದ್ದವರು ಇಂದು ರಾಜಾರೋಷವಾಗಿ ಕಿಂಚಿತ್ತು ಅಳುಕಿಲ್ಲದೆ ಆ ಕೆಲಸ ಮಾಡುತ್ತಿದ್ದಾರೆ. ಆ ಅಮಾಯಕರು ಹರಕೆ ತೀರಿಸಲು ಒಂದು ದಿನ ‘ಮಡೆ ಸ್ನಾನ’ ಮಾಡಿದರೆ ಮಾನಸಿಕವಾಗಿ ದಿನ ನಿತ್ಯ ಮಡೆ ಸ್ನಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ…”

ಹೀಗೆ ಏನೋ ಹೇಳಿ ಫೋನ್ ಇಟ್ಟೆ. ನೀವು ಹನ್ನೊಂದು ವರ್ಷಗಳಿಂದ ನನ್ನನ್ನು ಗಮನಿಸಿದ್ದೀರಿ. ‘ಒಲಿದಂತೆ ಹಾಡುವೆ’ಯಲ್ಲಿ ಸಾಹಿತ್ಯಕ ಚರ್ಚೆ, ವಾಗ್ವಾದಗಳು ಕಾಣಿಸಿಕೊಂಡಿರುವುದು ತೀರಾ ಅಪರೂಪ. ಇದಕ್ಕೆ ಮುಖ್ಯ ಕಾರಣ ಚರ್ಚಾ ಪಟುತ್ವದ ಬಗ್ಗೆ ನನಗಿರುವ ಅಲರ್ಜಿ. ‘ಅಕ್ಷರ ಅಟಾಟೋಪ’ ಲೇಖನವನ್ನ ಮೆಚ್ಚಿಕೊಂಡು ಅಸಂಖ್ಯಾತ ಓದುಗರು ನನಗೆ ಫೋನ್ ಮಾಡಿದರು. ನನ್ನ ಬರಹಗಳ ಖಾಯಂ ಓದುಗರಾದ ಮಿತ್ರ ಕೃಷ್ಣಪ್ರಸಾದ್ ಇತರರಂತೆಯೇ ಮೆಚ್ಚಿಕೊಂಡು ಮಾತಾಡಿದರೂ ಕಡೆಯಲ್ಲಿ “ಸಾರ್ ಇದು ನಿಮಗೆ ಬೇಕಿತ್ತಾ? ನೀವು ತೇಜಸ್ವಿಯವರಂತೆ ನಿಮ್ಮ ಪಾಡಿಗೆ ನೀವು ಬರೆದುಕೊಂಡಿದ್ದೀರಿ. ಈ ವಿವಾದ ಎಲ್ಲ ನಿಮಗೆ ಯಾಕೆ? ಸುಬ್ಬಣ್ಣ ಕೃಪಾ ಪೋಷಿತ ನಾಟಕ ಮಂಡಳಿ ಬಹು ದೊಡ್ಡದು ಸರ್. ಹರಕೆಗೂ ಹರಾಜಿಗೂ ಸಂಬಂಧ ಇಲ್ಲ ಅನ್ನೋದು ಅಕ್ಷರನಿಗೆ ಗೊತ್ತಿಲ್ಲ ಅಂದುಕೊಂಡಿದ್ದೀರಾ? ಅದು ಜಾಣ್ಮೆ ಅಷ್ಟೆ. ನೀವು ಏನೇ ಪ್ರತಿಕ್ರಿಯಿಸಿದರೂ ಅದು ಗಾಳಿಯಲ್ಲಿ ಗುದ್ದಿ ನೋಯಿಸಿಕೊಂಡಂತೆ…” ಮುಂತಾಗಿ ಹೇಳಿದರು.

ಹಾಗಿರುವುದೂ ಒಂದರ್ಥದಲ್ಲಿ ತಪ್ಪಾಗುತ್ತದೆ. ‘ದಿವ್ಯ ನಿರ್ಲಕ್ಷತೆಯೇ ವರ ಕವಿಯ ಪಂಥ’ ಎಂದ ಕುವೆಂಪು ಕೂಡ ಪುರೋಹಿತಷಾಹಿಯ ವಿರುದಟಛಿ ಹರಿಹಾಯ್ದರು. ತೇಜಸ್ವಿ ಕೂಡ ಹಲವು ಕಾಲಘಟ್ಟಗಳಲ್ಲಿ ಇಂಥ ಕ್ರಿಯೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದಾರೆ. ಅಷ್ಟೆ ಅಲ್ಲ ಕನ್ನಡದ ಎಲ್ಲ ಮಹತ್ವದ ಲೇಖಕರೂ ಈ ಕೆಲಸ ಮಾಡಿದ್ದಾರೆ. ಹಾಗೂ ಇದು ಒಬ್ಬ ಲೇಖಕನ ನೈತಿಕ ಹೊಣೆ ಕೂಡ. ಎಂಬತ್ತರ ದಶಕದಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಪಾಲ್ಗೊಂಡಾಗಿನಿಂದ ಈವರೆಗೆ ನಾನೂ ಸಹ ನನ್ನದೇ ಆದ ರೀತಿಯಲ್ಲಿ ಸ್ಪಂದಿಸಿದ್ದೇನೆ. ಲಂಕೇಶರು ಅವರ ಪತ್ರಿಕೆಯಿಂದ ನನ್ನನ್ನು ದೂರ ಮಾಡಲು ಅವರ ಪರ್ಯಾಯ ಸಾಹಿತ್ಯ ಸಮ್ಮೇಳನದ ಬಗ್ಗೆ ಪ್ರತಿಕ್ರಿಯಿಸಿದ್ದೇ ಕಾರಣ. (‘ಆಲೂರು

ತೀರಾ ಇಷ್ಟೊಂದು ಇನ್ನೊಸೆಂಟ್ ಅಂಥ ಗೊತ್ತಿರಲಿಲ್ಲ ಅವನಿಗೆ ಯಾಕೆ ಬೇಕಿತ್ತು ಇದೆಲ್ಲ ಉಸಾಬರಿ.’ಎಂದು ಲಂಕೇಶರು ಹಿರಿಯ ಕವಿ ರಾಮಚಂದ್ರ ಶರ್ಮರ ಬಳಿ ಹೇಳಿದ್ದರಂತೆ!) ಸದಾ ಹೃದಯದ ಮಾತನ್ನ ಆಲಿಸುವ ನಾನು ಎಂದೂ ನನಗೆ ಸರಿ ತೋರಿದ್ದನ್ನ ಹೇಳಲು ಹಿಂಜರಿದವನಲ್ಲ ಹಾಗೆಯೇ ವ್ಯಕ್ತಿ ನಿಂದನೆ ನನ್ನ ಹೃದಯದ ಪರಿಭಾಷೆ ಅಲ್ಲ.

***

ಕಳೆದೆರಡು ವಾರದ ಹಿಂದೆ ಈ ಅಂಕಣದಲ್ಲಿ ಅಕ್ಷರರ ಹರಕೆ-ಹರಾಜು ಬಗ್ಗೆ ಪ್ರತಿಕ್ರಿಯಿಸಿದ್ದನ್ನು ನೀವು ಓದಿದ್ದೀರಿ. ದಿನಪತ್ರಿಕೆಯೊಂದರ ಸಾಪ್ತಾಹಿಕ ಪುರವಣಿಯಲ್ಲಿ ಆ ಲೇಖನ ಪ್ರಕಟವಾಗಿತ್ತು. ಈ ಭಾನುವಾರ ಕನ್ನಡದ ಹಿರಿಯ ಲೇಖಕಿ ವೈದೇಹಿಯವರು ಅಕ್ಷರರ ಲೇಖನವನ್ನ ಬೆಂಬಲಿಸಿ ಬರೆದಿದ್ದಾರೆ. ಅದನ್ನು ‘ನಾ ಓದಿದ ಅಪರೂಪದ, ಹೊಸತೊಂದು ಓದಿನಗತ್ಯದ, ಚಿಂತನಶೀಲ ಬರಹವದು’ ಎಂದು ಬಣ್ಣಿಸಿದ್ದಾರೆ. ಅಕ್ಷರರ ಹರಕೆ ಹರಾಜು ಲೇಖನ ಓದಿದಾಗ ನಾನು ವ್ಯಗ್ರನಾಗಿದ್ದೆ. ತುಂಬಾ ಕೋಪ ಬಂದಿತ್ತು. ಆದರೆ ವೈದೇಹಿಯವರ ಲೇಖನವನ್ನ ಓದಿದಾಗ ಮನಸ್ಸಿಗೆ ತುಂಬಾ ನೋವಾಯ್ತು. ಕನ್ನಡದ ಮುಖ್ಯ ಲೇಖಕರಲ್ಲಿ ಒಬ್ಬರೆಂದು ಹೆಸರಾಗಿರುವ ವೈದೇಹಿಯಂಥವರು ಹೀಗೆ ಚಿಂತಿಸಲು ಸಾಧ್ಯವಾ ಎಂಬ ನೋವು ಅದು. ತಮ್ಮ ವಾದಕ್ಕೆ ಪೂರಕವಾಗಿ ವೈದೇಹಿ ಥೇಟ್ ವರದಿಗಾರ್ತಿಯಂತೆ ಒಂದು ಘಟನೆಯನ್ನು ಬಣ್ಣಿಸುತ್ತಾರೆ. ವರದಿಗಾರ್ತಿ ಎಂದು ಕರೆಯಲು ಕಾರಣವಿದೆ. ಅವರು ಕೂಡ ನಮ್ಮ ದಿನಪತ್ರಿಕೆಗಳ ಕ್ರೈಂ ವರದಿಗಾರರಂತೆ “… ಹೆಸರು ಗೀತಾ ಮಯ್ಯ” ಎಂದು ಆರಂಭಿಸಿ ಆವರಣದಲ್ಲಿ (ಹೆಸರು ಬದಲಿಸಿದೆ) ಎಂದು ಕೊಡುತ್ತಾರೆ. ತಮ್ಮ ಗೆಳತಿಯೊಬ್ಬಳು ಹೀಗೆ ಮಾಡಿದಳು ಅಂದರೆ ಸಾಕಿತ್ತು.

ಕಾಲ್ಪನಿಕ ಹೆಸರು ಮತ್ತು ಅದಕ್ಕೊಂದು ಷರಾದ ಅಗತ್ಯವೇನೂ ಇರಲಿಲ್ಲ. ಇರಲಿ, ಅವರ ಗೆಳತಿಯೊಬ್ಬಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಲೇಖಕಿಯನ್ನ ಕರೆದುಕೊಂಡು ಹೋಗಿ ಅವರ ಅರಿವಿಗೆ ಬರುವ ಮುನ್ನವೇ ಹಠಾತ್ತನೆ ಲೇಖಕಿ ಉಂಡೆದ್ದ ಎಲೆಯ (ಪಂಕ್ತಿ ಭೋಜನ) ಮೇಲೆಯೇ ಉರುಳು ಸೇವೆ ಮಾಡುತ್ತಾಳೆ. ಅದೊಂದು ಕಾಲ್ಪನಿಕ ಹೆಸರಾದ್ದರಿಂದ ಏಕವಚನ ತಾನಾಗಿಯೇ ಬಂದು ಬಿಟ್ಟಿದೆ, ಕ್ಷಮೆ ಇರಲಿ. ನಂತರ ವೈದೇಹಿ ಗೆಳತಿಯ ಕ್ರಮವನ್ನು ಸುಂದರ ಪದಪುಂಜಗಳಿಂದ ಹೀಗೆ ಸಮರ್ಥಿಸಿಕೊಳ್ಳುತ್ತಾರೆ : ಪರಿಹಾರ ಕಾಣದ ವ್ಯಾಕುಲತೆ, ಸಂಕಟಗಳ ಪರಾಕಾಷ್ಠೆಯಲ್ಲಿ ಜಾತಿ ವರ್ಗ, ಮತ ವಿಚಾರ ಯಾವುದೂ ಇರುವುದಿಲ್ಲ. ‘ಸದ್ಯ ಇದು ಆಗಬೇಕು, ಬಂದಿರುವ ಆಪತ್ತು ಕಳೆಯಬೇಕು, ಎದುರಾದ ಗುಡ್ಡ ಮಂಜಿನಂತೆ ಕರಗಬೇಕು.  ಕಾಣದ ದೇವರೇ ಕಾಪಾಡು’ ಎಂಬುದು ಬಿಟ್ಟರೆ ಅಲ್ಲಿ ನಾಚಿಕೆ, ನಾನು, ಅಹಂ ಅವಮಾನ, ಜಾತಿ ಭೇದಗಳ ಗಣನೆಯಿಲ್ಲ. ಪ್ರಾಯಶಃ ಆ ಎಲ್ಲದರ ನೆನಪೇ ಕರಗಿ ಹೋಗುವ ಸ್ಥಿತಿ ಅದು.

ದೇವರ ದಾಸಾನುದಾಸನಾಗುವುದನ್ನ, ಭಕ್ತ ಪರಾನತೆಯನ್ನ ನಮ್ಮ ವಚನಕಾರರು ಹಾಗೂ ದಾಸ ಶ್ರೇಷ್ಠರು ಹೃದಯಂಗಮವಾಗಿ ಹಾಡಿದ್ದಾರೆ. ನಾನತ್ವ ಮೊದಲು ತೊರೆಯಬೇಕು ಎಂದು ಸರಳವಾಗಿ ಹೇಳಿದ್ದಾರೆ. ಇದನ್ನೇ ಲೇಖಕಿ ನಾಚಿಕೆ, ಅಹಂ ಮುಂತಾಗಿ ಕರೆದಿದ್ದಾರೆ. ಆದರೆ ವಚನಕಾರರಿಗಿಂಥ ಹಲವು ಶತಮಾನ ಹಿಂದೆ ಹೋಗಿದ್ದಾರೆ. ಲೇಖಕಿ ಗೀತಾಮಯ್ಯಳ ಬಗ್ಗೆ ಬರೆದದ್ದನ್ನೆ ಮುಂದುವರಿಸಿ, “ವಿಧವೆಯಾದ ಯಮುನಾ ಎಂಬ ಗೆಳತಿ ಗಂಡನ ಮನೆಯವರು, ತಾಯಿಯ ಮನೆಯವರು ಬೇಡವೆಂದರೂ ಕೇಳದೆ ಸ್ವ ಇಚ್ಛೆಯಿಂದ ತಲೆ ಬೋಳಿಸಿಕೊಂಡಳು; ಜಾನಕಿ ಎಂಬ ಸಹಪಾಠಿ ಅಷ್ಟೆಲ್ಲ ವಿದ್ಯೆ ಕಲಿತವಳಾದರೂ ಭಕ್ತಿಯಿಂದ ಬೆತ್ತಲೆ ಸೇವೆ ಮಾಡಿದಳು; ನಮ್ಮ ಮುತ್ತಜ್ಜಿಯ ಗೆಳತಿಯೊಬ್ಬಳು ತುಂಬು ಪ್ರೀತಿಯಿಂದ ಕೆರೆಗೆ ಹಾರವಾಗಿದ್ದಳಂತೆ” …ಮುಂತಾಗಿ ಹೆಸರು ಬದಲಿಸಿ ಅಥವಾ ಬದಲಿಸದೆ ಹೇಳಿಕೊಂಡು ಹೋಗಬಹುದು.

ಇನ್ನಷ್ಟು

ಚಂದ್ರಶೇಖರ ಆಲೂರು ಕಾಲಂ: ನಿನ್ನಂತ ಅಪ್ಪಾ ಇಲ್ಲ..

ನನ್ನ ಬಾಲ್ಯ ಕಾಲದ ಮಿತ್ರ ಪ್ರಸಾದಿಯ ತಂದೆ ತೀರಿಕೊಂಡ ಸುದ್ದಿ ನನ್ನ ಮೊಬೈಲ್‌ನಲ್ಲಿ ಕಾಣುತ್ತಿದ್ದಂತೆಯೇ ನನಗೆ ತಕ್ಷಣ ಪ್ರತಿಕ್ರಿಯಿಸುವುದು ಸಾಧ್ಯವಾಗಲೇ ಇಲ್ಲ. ನಮ್ಮ ಕಚೇರಿಗೆ ಸಂಬಂಧಪಟ್ಟ ಕೇಸ್‌ಗಾಗಿ ಕೋರ್ಟ್‌ಹಾಲ್‌ನಲ್ಲಿ ಕಾಯುತ್ತಾ ಕುಳಿತಿದ್ದಾಗ ಬಂದ ಮೆಸೇಜು. ಅದನ್ನು ನೋಡಿದಾಕ್ಷಣ ನನ್ನ ಕೇಸು, ಕೋರ್ಟ್‌ಹಾಲ್‌ನಲ್ಲಿ ಕಿಕ್ಕಿರಿದ ಜನರು ಎಲ್ಲವೂ ಮರೆಯಾಗಿ ನಲವತ್ತು ವರ್ಷಗಳ ಹಿಂದಿನ ಗುಬ್ಬಿ, ಸಂಪಿಗೆ ರೋಡು, ಮಲ್ಲಸಂದ್ರ ನೆನಪಾದವು. ಪ್ರಸಾದಿಯ ಊರು ಗುಬ್ಬಿ, ಅವರ ತಂದೆ ಸಂಪಿಗೆ ರೋಡ್‌ನಲ್ಲಿ ಸ್ಟೇಷನ್ ಮಾಸ್ಟರಾಗಿದ್ದರು, ನಮ್ಮ ತಂದೆ ಮಲ್ಲಸಂದ್ರದಲ್ಲಿ. ನಾನು -ಪ್ರಸಾದಿ ಓದುತ್ತಿದ್ದುದು ಗುಬ್ಬಿಯ ಶಾಲೆಯಲ್ಲಿ. ಅವರದ್ದೂ ನಮ್ಮಂತೆಯೇ ತುಂಬು ಸಂಸಾರ. ಮನೆಯ ತುಂಬ ಹೆಣ್ಣುಮಕ್ಕಳು-ಇಬ್ಬರು ಗಂಡು ಮಕ್ಕಳು. ಕಳೆದ ವರ್ಷ ಗಣೇಶ ಹಬ್ಬದಲ್ಲಿ ಬೆಂಗಳೂರಿನ ರೈಲ್ವೆ

ಕಾಲನಿಯಲ್ಲಿರುವ ಪ್ರಸಾದಿಯ ಮನೆಗೆ ಹೋದಾಗ ಅವರೊಂದಿಗೆ ತುಂಬಾ ಹೊತ್ತು ಮಾತಾಡಿದ್ದೆ. ಅವರ ಆರೋಗ್ಯ, ಲವಲವಿಕೆ, ಮಾತುಗಾರಿಕೆಯನ್ನು ಕಂಡು ಸಂಭ್ರಮಿಸಿದ್ದೆ. ಪ್ರಸಾದಿಯ ಮನೆಯಲ್ಲಿ ಪ್ರತಿವರ್ಷವೂ ನಡೆವ ಗಣೇಶ ಹಬ್ಬದ ಕಾರ್ಯಕ್ರಮಕ್ಕೆ ನಾನು ಖಾಯಂ ಅತಿಥಿ. ತಂದೆ-ತಾಯಿ, ಮಕ್ಕಳು-ಮೊಮ್ಮಕ್ಕಳು-ಮರಿ ಮಕ್ಕಳು ಹಾಗೂ ಹತ್ತಾರು ಬಂಧುಮಿತ್ರರ ಈ ಸಂತೋಷಕೂಟದ ಬಗ್ಗೆ ಹಿಂದೊಮ್ಮೆ ಈ ಅಂಕಣದಲ್ಲಿ ಬರೆದಿದ್ದೆ. ಸುಮಾರು ತೊಂಬತ್ಮೂರು ವರ್ಷಗಳ ತುಂಬು ಜೀವನ ನಡೆಸಿದ ಅವರ ಸಾವಿನ ಸುದ್ದಿ ಕಂಡಾಗ ಈಗ್ಗೆ ಒಂಬತ್ತು ವರ್ಷಗಳ ಹಿಂದೆ ಇದೇ ತಿಂಗಳಲ್ಲಿ ಕಣ್ಮರೆಯಾದ ನನ್ನ ತಂದೆ ನೆನಪಾದರು. ಅವರೆಲ್ಲಾ ಕಾಠಿಣ್ಯದ ಅಪ್ಪಂದಿರ ತಲೆಮಾರಿಗೆ ಸೇರಿದವರು. ಆದರೆ ಅವರ ಅಂತಃಕರಣ ತೆಂಗಿನ ಚಿಪ್ಪಿನೊಳಗೆ ಅಡಗಿರುವ ಎಳನೀರಿನಂತೆ.

ನಮ್ಮಲ್ಲಿ ಬಹುಪಾಲು ಜನ ಅಂತಃಕರಣ, ಅನುಕಂಪ, ಮಮತೆ ಅಮ್ಮನಿಗೆ ಮಾತ್ರ ಮೀಸಲೇನೋ (ಅಥವಾ ಹೆಣ್ಣಿಗೆ!) ಎಂಬಂತೆ ಮಾತಾಡುತ್ತಾರೆ. ಆದರೆ ನಾನು, ಪ್ರಸಾದಿ ಮತ್ತೊಬ್ಬ ಗೆಳೆಯ ನಾಗೇಶ್ – ಎಲ್ಲರೂ ಅಪ್ಪನ ಅಂತಃಕರಣದ ಸವಿಯನ್ನುಂಡು ಬೆಳೆದವರು. ನಮಗಿಂತ ಮಿಗಿಲಾಗಿ ನಮ್ಮ ಮನೆಗಳ ಹೆಣ್ಣುಮಕ್ಕಳು ಅಪ್ಪನಿಂದ ಪಡೆದ ಪ್ರೀತಿ, ಪ್ರೋತ್ಸಾಹ, ಮಮತೆ ಅದ್ಭುತವಾದದ್ದು. ನನ್ನ ಬಾಲ್ಯಕಾಲದ ನೆನಪು, ನಮ್ಮ ತಂದೆಯವರ ನೆನಪು, ಪ್ರಸಾದಿಯ ತಂದೆಯ ಅಗಲುವಿಕೆಯ ನೋವು ನನ್ನನ್ನ ಇಡಿಯಾಗಿ ಆವರಿಸಿ ಗುಂಗಾಗಿ ಕಾಡುತ್ತಿರುವಾಗಲೇ ಹಿರಿಯ ಕವಯಿತ್ರಿ ಶಶಿಕಲಾ ವೀರಯ್ಯ ಸ್ವಾಮಿಯವರು ಬರೆದ ಅಪ್ಪ ಮತ್ತು ಮಣ್ಣು ಎಂಬ ನಲವತ್ತು-ನಲವತ್ತೈದು ಪುಟಗಳ ಕಿರು ಹೊತ್ತಗೆಯನ್ನ ಓದಿದೆ.

ಇನ್ನಷ್ಟು

ಚಂದ್ರಶೇಖರ ಆಲೂರು ಕಾಲಂ: ಅಕ್ಷರ ಆಟಾಟೋಪ


ಮೊದಲೇ ನನ್ನ ಮಿತಿ ಹಾಗೂ ದೌರ್ಬಲ್ಯದ ಬಗ್ಗೆ ಹೇಳಿ ಬಿಡುತ್ತೇನೆ. ನಾನು ಸಾಮಾನ್ಯವಾಗಿ ಸಾಪ್ತಾಹಿಕ ಪುರವಣಿಗಳಲ್ಲಿ ಬರುವ ಲೇಖನಗಳನ್ನಾಗಲೀ, ವಿಮರ್ಶೆಯನ್ನಾಗಲೀ ಓದುವುದಿಲ್ಲ. ಇದು ಕೇವಲ ಆದ್ಯತೆಯ ವಿಷಯ ಮಾತ್ರ, ಬೇರೇನಿಲ್ಲ. (ಹೀಗಾಗಿ ಹಲವಾರು ಸಾಹಿತ್ಯಿಕ ವಾಗ್ವಾದಗಳ ಬಗ್ಗೆ ಸ್ನೇಹಿತರು ಮಾತಾಡುತ್ತಿರುವಾಗ ನಾನು ಅವರನ್ನೇ ಬೆಪ್ಪಾಗಿ ನೋಡುತ್ತಾ ಕುಳಿತಿರುತ್ತೇನೆ.) ಸಮಯವಿದ್ದರೆ ಆ ವಾರ ಪ್ರಕಟವಾಗಿರುವ ಕಥೆಯನ್ನ ಓದಲು ಯತ್ನಿಸುತ್ತೇನೆ. ಅಕಸ್ಮಾತ್ ಭಾನುವಾರ ರಾತ್ರಿಯೊಳಗೆ ಓದಲಾಗದಿದ್ದರೆ ಅದೂ miss ಆದಂತೆಯೇ. ಭಾನುವಾರದಂದು ಎಲ್ಲ ಕನ್ನಡ ದಿನಪತ್ರಿಕೆಗಳನ್ನು ತರಿಸಿದರೂ ಅಂದು ನನ್ನ ಕೆಲಸದ ದಿನವಾದ್ದರಿಂದ ಅವು ಹಾಗೇ ಅಟ್ಟ ಸೇರುವುದೇ ಹೆಚ್ಚು. ಕಳೆದ ಭಾನುವಾರ ಸಂಜೆ ನಾನು ಅತ್ಯಂತ ಗೌರವಿಸುವ, ತುಂಬಾ ಸಜ್ಜನರಾದ ಕನ್ನಡ ಲೇಖಕರೊಬ್ಬರು ಫೋನ್ ಮಾಡಿ, “ಈ ವಾರದ ಸಾಪ್ತಾಹಿಕ ಪುರವಣಿಯಲ್ಲಿ ಹರಕೆ ಹರಾಜು ಎಂಬ ಲೇಖನ ಬಂದಿದೆ ಅಕ್ಷರ ಬರೆದಿದ್ದಾರೆ ಓದಿದ್ರಾ” ಎಂದವರು ಮುಂದುವರಿದು “ನನಗ್ಗೊತ್ತು ಸಾಮಾನ್ಯವಾಗಿ ನೀವು non fiction ಓದಲ್ಲ. ಆದರೆ ದಯವಿಟ್ಟು ಆ ಲೇಖನ ಓದಿ, ಸಾಧ್ಯವಾದರೆ ನಾಲ್ಕನೆಯ ಪುಟದಲ್ಲಿ ಒಂದು ಚಿತ್ರ ವಿಮರ್ಶೆ ಇದೆ. ಅದನ್ನೂ ಓದಿ. ರಾತ್ರಿ ಫೋನ್ ಮಾಡ್ತೇನೆ…” ಎಂದು ನನ್ನ ಉತ್ತರಕ್ಕೂ ಕಾಯದೆ ಫೋನ್ ಇಟ್ಟರು.

ಅವರ ಧ್ವನಿಯಲ್ಲಿ ಒಂದು ಬಗೆಯ ಯಾತನೆ, anguish ಇತ್ತು. ಈ ಕಾರಣಕ್ಕೆ ಕೂಡಲೇ ಆ ದಿನಪತ್ರಿಕೆಯನ್ನು ಓದಲಾರಂಭಿಸಿದೆ. ಸಾಪ್ತಾಹಿಕ ಪುರವಣಿಯ ಮುಖಪುಟ ಲೇಖನ. ಹರಕೆ, ಹರಾಜು ಎಂಬುದು ಲೇಖನದ ಶೀರ್ಷಿಕೆ. ಅದಕ್ಕೆ ಯಾವುದು ಸಹಜ?ಅಯಾವುದು ಅವಮಾನ? ಎಂಬುದು ಉಪ ಶೀರ್ಷಿಕೆ. ಈಚಿನ ಸಿನೆಮಾಗಳ tag line ಥರ! ‘ಎಂಜಲೆಲೆ ಮೇಲೆ ಜನ ಉರುಳಿದ್ದನ್ನು ಮೂಢನಂಬಿಕೆ ಎನ್ನುವ ಜನ ಕ್ರಿಕೆಟಿಗರ ಹರಾಜನ್ನು ಅವಮಾನ ಸೃಷ್ಟಿಸುವ ಘಟನೆ ಎಂದು ಭಾವಿಸುವುದಿಲ್ಲ. ಈ ಹಿಂದಿನ ಮನಸ್ಥಿತಿಯ ಕುರಿತು ಒಂದು ಜಿeಸೆ’- ಎಂಬ intro ಬೇರೆ. ಅಲ್ಲಿಗೆ ಲೇಖನದಲ್ಲಿ ಏನಿದೆ ಎಂಬುದು ತಿಳಿದು ಹೋಯ್ತು. ‘ಹ’ ಎಂಬ ಅಕ್ಷರದಿಂದ ಆರಂಭವಾಗುವುದನ್ನ ಹೊರತುಪಡಿಸಿದರೆ ಹರಕೆ ಮತ್ತು ಹರಾಜು ನಡುವೆ ಯಾವ ಸಂಬಂಧವೂ ಇಲ್ಲ. ಇವೆರಡನ್ನೂ ಒಂದೆಡೆ ಎಳೆದು ತಂದು ತಾಳೆ ಹಾಕಲು ಯತ್ನಿಸಿರುವುದರಲ್ಲಿಯೇ ಲೇಖಕರ ಉದ್ದೇಶ ಸ್ಪಷ್ಟವಾಯ್ತು. ಆದರೂ ಆ ಹಿರಿಯರಿಗೆ ಹೇಳಿದ್ದರಿಂದ ಪೂರಾ ಲೇಖನವನ್ನು ಗಮನವಿಟ್ಟು ಓದಿದೆ.

ಹೆಗ್ಗೋಡಿನ ಕೆ.ವಿ ಅಕ್ಷರ ಅವರು ಈಚಿನ ಎರಡು ಪ್ರಸಂಗಗಳ ಬಗ್ಗೆ ಈ ಲೇಖನದಲ್ಲಿ ಬರೆದಿದ್ದಾರೆ. ಮೊದಲನೆಯದು: ಕಳೆದ ತಿಂಗಳು ಕುಕ್ಕೆ ಸುಬ್ರಮಣ್ಯದಲ್ಲಿ ನಡೆದ ಎಂಜಲೆಲೆಯ ಮೇಲಿನ ಉರುಳು ಸೇವೆ. ಬ್ರಾಹ್ಮಣರು ಪಂಕ್ತಿಯಲ್ಲಿ ಭೋಜನ ಮುಗಿಸಿದ ನಂತರ, ಅವರು ಉಂಡು ಬಿಟ್ಟ ಎಂಜಲೆಲೆಯ ಮೇಲೆ ಕೆಳ ಜಾತಿಗೆ ಸೇರಿದವರು ಉರುಳು ಸೇವೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಎರಡನೆಯದು, ಈ ತಿಂಗಳ ಆರಂಭದಲ್ಲಿ ನಡೆದ ಐ.ಪಿ.ಎಲ್ ಹರಾಜು. ಅಕ್ಷರ ಬರೆಯುತ್ತಾರೆ: “ಹರಾಜಿನ ಸುದ್ದಿಗೆ ಹೋಲಿಸಿದರೆ ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ. ಆ ಸುದ್ದಿಯ ಪ್ರಕಾರ ಯಾವುದೋ ಒಂದು ಪುಟ್ಟ ಊರಿನ ದೇವಾಲಯದಲ್ಲಿ, ಯಾರೋ ಒಂದಿಷ್ಟು ಜನ, ತಮ್ಮದೇ ಸ್ವಂತ ನಂಬಿಕೆಯಿಂದ ಪ್ರೇರಿತರಾಗಿ ನಮ್ಮಂಥ ಹಲವರಿಗೆ ಅಸಹ್ಯಕರವಾಗಿ ಕಾಣಬಹುದಾದ ಒಂದು ಕೆಲಸವನ್ನು ಮಾಡಿದರು. ನಮ್ಮ ಮಾಧ್ಯಮ ವರದಿಗಳು ಅಷ್ಟನ್ನು ಮಾತ್ರ ಹೇಳದೆ, ಇದು ಭಾರತದಲ್ಲಿ ಶತ ಶತಮಾನಗಳಿಂದ ಸತತವಾಗಿ ನಡೆದುಕೊಂಡು ಬಂದಿರುವ ಒಂದು ಮೂಢ ನಂಬಿಕೆಯೆಂಬ ಅರ್ಥದಲ್ಲಿ ಅದನ್ನು ಚಿತ್ರಿಸಿದವು. ಮಾತ್ರವಲ್ಲ ನಗಣ್ಯವೆನ್ನಬಹುದಾದ ಪುಟ್ಟ ಊರಿನ ಈ ಒಂದು ಘಟನೆಯು ಮುಖಪುಟಗಳಲ್ಲಿ ವರದಿಯಾದ ರೀತಿಯಿಂದಲೇ ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಮುಖ್ಯವಾದ ಪಿಡುಗಿನ ಒಂದು ಉದಾಹರಣೆ-ಎಂಬ ಧ್ವನಿಯೂ ಈ ವರದಿಗಳ ಹಿಂದಿತ್ತು.”

ಅಕ್ಷರ ಒಮ್ಮೆ ‘ಯಾವುದೋ ಒಂದು ಪುಟ್ಟ ಊರಿನ’ ಎಂದರೆ ಮತ್ತೊಮ್ಮೆ ‘ನಗಣ್ಯವೆನ್ನಬಹುದಾದ ಪುಟ್ಟ ಊರಿನ’ ಎನ್ನುತ್ತಾರೆ. ಆದರೆ ಇದು ನಗಣ್ಯವಾದ ಯಾವುದೋ ಪುಟ್ಟ ಊರಲ್ಲ. ಕರ್ನಾಟಕದ ಸುಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಕುಕ್ಕೆ ಸುಬ್ರಮಣ್ಯ. ಈ ನಗಣ್ಯವಾದ ಊರಿಗೆ ‘ಸರ್ಪದೋಷ ಪರಿಹಾರ’ಕ್ಕಾಗಿ ಕ್ರಿಕೆಟ್ ಸಾಮ್ರಾಟ ಸಚಿನ್ ಮತ್ತು ಸಿನೆಮಾ ಸಾಮ್ರಾಟ್ ಅಮಿತಾಬ್ ಕುಟುಂಬ ಸಮೇತರಾಗಿ ಬಂದು ಗ್ಲಾಮರ್‌ನ ಸ್ಪರ್ಶ ಕೂಡ ನೀಡಿದ್ದಾರೆ. ಇಂಗ್ಲಿಷ್ ಪತ್ರಿಕೆಗಳಲ್ಲಿ ಎಂಜಲೆಲೆಯ ಮೇಲಿನ ಉರುಳು ಸೇವೆಯ ವರದಿ ಪ್ರಕಟವಾಗಲು ಈ ‘ಪ್ರಸಿದ್ಧಿ’ಯೂ ಕಾರಣವಾಗಿದ್ದರೆ ಆಶ್ಚರ್ಯವಿಲ್ಲ!

ಇನ್ನಷ್ಟು

ನಿರೀಕ್ಷಿಸಿ, ಆಲೂರು ಅಂಕಣ..

ನಿರೀಕ್ಷಿಸಿ

ಸಧ್ಯದಲ್ಲೇ

ಕಾಡುವ ಬರಹಗಳ

ಚಂದ್ರಶೇಖರ ಆಲೂರು

ಅವರ ಅಂಕಣ

%d bloggers like this: