ಎಚ್ಚೆಸ್ವಿ ಅನಾತ್ಮ ಕಥನ: ತಂಬೂರಿಯ ತಂತಿ ಕಿತ್ತು ಹೋದ ಮೇಲೂ…

ಮನುಷ್ಯ ಸಂಬಂಧಗಳೆಲ್ಲವೂ ನಮ್ಮ ನಮ್ಮ ಅಹಂಕಾರಗಳ ಗೊಣಸಿನ ಮೇಲೆ ಕೂತಿವೆಯೆ? ಯಾಕೋ ಈ ಇಳಿಹೊತ್ತಿನಲ್ಲಿ ಒಮ್ಮೆಗೇ ಈ ಪ್ರಶ್ನೆ ಮೂಡಿ ನನ್ನ ಎದೆ ಧಸಕ್ಕೆಂದಿದೆ. ಇಷ್ಟು ದಿನ ಮನಸ್ಸಿನ ಯಾವ ಮುಡುಕಿನಲ್ಲಿ ಈ ಪ್ರಶ್ನೆ ಹುದುಗಿಕೊಂಡಿತ್ತೋ? ಈವತ್ತು ಯಾಕಾದರೂ ನನ್ನ ಮುಚ್ಚಿದ ಕಣ್ಮುಂದಿನ ಹಳದಿಗಪ್ಪು ತೆರೆಯ ಮೇಲೆ ಒಮ್ಮೆಗೇ ಮೂಡಿತೋ ನಾನು ಉತ್ತರಿಸಲಾರೆ.ಈಗಾಗಲೇ ಕಳೆದುಹೋಗಿರುವ ಅನೇಕ ಆಪ್ತರು ನನ್ನ ಕಣ್ಣ ಮುಂದೆ ಪೆರೇಡು ನಡೆಸುತ್ತಾರೆ. ಈ ಎಲ್ಲ ಮುಖಗಳೂ ಯಾಕೆ ಮಂಕಾಗಿವೆ? ಯಾಕೆ ಯಾವ ಮುಖದಲ್ಲೂ ಉತ್ಸಾಹವೇ ಕಾಣದಾಗಿದೆ? ನನ್ನ ಕಣ್ಣಿಗೆ ಅವರು ಕಾಣುತ್ತಿರುವಂತೆ ನಾನು ಅವರ ಕಣ್ಣಿಗೆ ಕಾಣುತ್ತಿಲ್ಲವೋ ಹೇಗೆ? ಮೆಲ್ಲಗೆ ಆಕಾಶದಿಂದ ಕತ್ತಲ ಫರದೆ ಕೆಳಗಿಳಿಯುತ್ತಾ ಇದೆ. ಅವರು ಕತ್ತಲ ಕಾವಳದಲ್ಲಿ ನಿಧಾನಕ್ಕೆ ಮರೆಯಾಗಲಿಕ್ಕೆ ಹತ್ತಿದ್ದಾರೆ.

ವರ್ತಮಾನಕ್ಕೆ ಭೂತದ ಕಾಟವಿದೆ. ಆದರೆ ಭೂತಕ್ಕೆ ವರ್ತಮಾನದ ಹಂಗಿಲ್ಲವೋ ಹೇಗೆ? ಎಡಗೈ ಅತ್ತಿತ್ತ ತಿರುವುತ್ತಾ ನಿಧಾನಕ್ಕೆ ನಡೆಯುತ್ತಾ ಇರುವವಳು ನನ್ನ ಪತ್ನಿ. ಆಕೆಯನ್ನು ಗಮನಿಸಿಯೇ ಇಲ್ಲ ಎಂಬಂತೆ ಆಕೆಯನ್ನು ಹಿಂಬಾಲಿಸುತ್ತಾ ಇರುವವರು ನನ್ನ ಅಜ್ಜಿಯರು. ಅವರಾದರೂ ಪರಸ್ಪರ ಅಪರಿಚಿತರಂತೆ ನಡೆಯುತ್ತಾ ಇದ್ದಾರೆ. ಅವರ ಹಿಂದೆ ಜಲೋದರದ ಭಾರ ಹೊತ್ತು ತೇಕುತ್ತಾ ನಡೆಯುತ್ತಿರುವವರು ನನ್ನ ಅಜ್ಜ. ಮತ್ತೆ ಇವರು? ನನಗೆ ತುಂಬ ಪ್ರಿಯವಾದ ಆಕೃತಿಯಾಗಿತ್ತಲ್ಲ ಅದು? ಯಾರು ಮಾರಾಯರೇ ಆಕೆ? ನನ್ನ ಗೆಳೆಯ ನಾರಾಯಣನ ಪತ್ನಿ ನಾಗಿಣಿಯಲ್ಲವೇ?

ನಾಗಿಣಿ ನನ್ನ ಗೆಳೆಯನ ಕೈಹಿಡಿದ ಹೊಸದರಲ್ಲಿ ಚಾಮರಾಜಪೇಟೆಯ ನಮ್ಮ ಬಾಡಿಗೆ ಗೂಡಿಗೆ ಊಟಕ್ಕೆ ಅತಿಥಿಗಳಾಗಿ ಬಂದಾಗ ನಾನು ಆಕೆಯನ್ನು ಮೊದಲು ನೋಡಿದ್ದು. ತೆಳ್ಳಗೆ ಬಳ್ಳಿಯ ಹಾಗೆ ಇದ್ದರು ಆಕೆ. ಮದುವೆಯ ಹೋಮ ಕುಂಡದ ಕೆಂಪು ಇನ್ನೂ ಆಕೆಯ ಕಣ್ಣುಗಳಲ್ಲಿ ಹೊಳೆಯುತ್ತಾ ಇತ್ತು. ಬಲೇ ಮಾತುಗಾರನಾಗಿದ್ದ ನನ್ನ ಗೆಳೆಯನಿಗೆ ಹೋಲಿಸಿದರೆ ಆಕೆ ಪರಮ ಮೌನಿ. ನಮ್ಮ ಇಡೀ ಮನೆ ನನ್ನ ಗೆಳೆಯನ ನಗೆ, ಕೇಕೆ, ಉತ್ಸಾಹದ ಮಾತುಗಳಿಂದ ತುಂಬಿಹೋಗಿತ್ತು. ಆಕೆ ಬೆರಗು ಮತ್ತು ಮುಗ್ಧತೆಯನ್ನು ಮುಖದಲ್ಲಿ ಬಚ್ಚಿಟ್ಟುಕೊಳ್ಳುತ್ತಾ ಮೆಲ್ಲಗೆ ನನ್ನ ಪತ್ನಿಯ ಜತೆ ಅಡುಗೆ ಮನೆಯ ಮಬ್ಬುಗತ್ತಲೆಗೆ ಸರಿದಿದ್ದಳು. ಈಡು ಜೋಡು ತುಂಬ ಚೆನ್ನಾಗಿದೆ ಎಂದು ರಾತ್ರಿ ನನ್ನ ಹೆಂಡತಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದಳು. ಉತ್ಸಾಹದ ಅಂಕ ಮುಗಿದ ಮೇಲೆ ನಾಗಿಣಿ ತುಂಬ ಒಳ್ಳೆಯ ಹುಡುಗಿ ಎಂಬ ಮಾತು ನನ್ನ ಪತ್ನಿಯ ಬಾಯಿಂದ ಹೊರಬಿತ್ತು. ಆ ಮಾತು ಪೂರ್ತಿ ಕಿವಿಯಲ್ಲಿ ಇಂಗುವ ಮೊದಲೇ ನಾನು ಒತ್ತಿಬರುತ್ತಿದ್ದ ನಿದ್ದೆಯಲ್ಲಿ ಮುಳುಗುತ್ತಾ ಇದ್ದೆ….

ಆಗಾಗ ನಾಗಿಣಿ ನಾರಾಯಣ ನಮ್ಮ ಮನೆಗೆ ಬರುತ್ತಾ ಇದ್ದರು. ನಾನು ನನ್ನ ಪತ್ನಿ ಅವರ ಮನೆಗೆ ಹೋಗುತ್ತಾ ಇದ್ದೆವು. ನಾರಾಯಣನ ತಾಯಿ ಮಾಡುತ್ತಿದ್ದ ಉಪ್ಪಿಟ್ಟು ಮತ್ತು ಕಾಫಿ ನನ್ನ ಪತ್ನಿಗೆ ತುಂಬ ಇಷ್ಟ. ಅವರದ್ದು ದೊಡ್ಡ ಕುಟುಂಬವಾದುದರಿಂದ ಒಂದು ತಪ್ಪಲೆ ಉಪ್ಪಿಟ್ಟು ಮಾಡಿ ಅಡುಗೆ ಮನೆ ಕಟ್ಟೆಯಮೇಲೆ ಇಟ್ಟಿರುತ್ತಿದ್ದರು. ಯಾರು ಬಂದರೂ ಉಪ್ಪಿಟ್ಟಿನ ಆತಿಥ್ಯ ಸಾರೋದ್ಧಾರವಾಗಿ ನಡೆಯುತ್ತಾ ಇತ್ತು. ಕಾಲ ಕಳೆದಂತೆ ನನ್ನ ಪತ್ನಿ ಮತ್ತು ನಾಗಿಣಿ ಖಾಸಾ ಗೆಳತಿಯರಾಗಿಬಿಟ್ಟರು. ಇನ್ನೂ ಕೆಲವು ವರ್ಷಗಳಾದ ಮೇಲೆ ನಾವು ಗೆಳತಿಯರಲ್ಲ, ಅಕ್ಕ ತಂಗಿಯರು ಅನ್ನಲಿಕ್ಕೆ ಹತ್ತಿದರು.ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯವಿರಲಿ ನಾಗಿಣಿ ಮತ್ತು ನಾರಾಯಣ ಇಲ್ಲದೆ ನಡೆಯುವಂತಿರಲಿಲ್ಲ. ನಮ್ಮ ಮಕ್ಕಳಿಗೆ ಅವರಿಬ್ಬರೂ ಪ್ರೀತಿಯ ಅತ್ತೆ ಮಾವ ಆಗಿಬಿಟ್ಟಿದ್ದರು.

ನಮ್ಮ ಹುಡುಗರು ಬೆಳೆದು ಮದುವೆಗೆ ಬಂದಾಗ ಹೆಣ್ಣು ನೋಡುವುದಕ್ಕೂ ನಾಗಿಣಿ-ನಾರಾಯಣ್ ಬರಲೇ ಬೇಕು. ವಡವೆ ವಸ್ತ್ರ ಕೊಳ್ಳುವುದಕ್ಕೆ ನಾಗಿಣಿಯದೇ ಮಾರ್ಗದರ್ಶನ. ನಾರಾಯಣ್ ತುಂಬ ಛಾತಿಯ ಮನುಷ್ಯನಾದುದರಿಂದ ನನ್ನಿಂದ ಅವನು ಇಂಥ ಯಾವುದೇ ಸಹಕಾರವನ್ನು ಯಾವತ್ತೂ ನಿರೀಕ್ಷಿಸಿದವನಲ್ಲ. ಅಪ್ಪಾ…ನೀನು ಕಾರ್ಯಕ್ರಮಕ್ಕೆ ಬಾ…ಆರಾಮಾಗಿ ಕೂತುಕೋ…ಅದೇ ನನಗೆ ದೊಡ್ಡ ಸಹಾಯ ಅನ್ನುತ್ತಾ ನನ್ನನ್ನು ಹಾಸ್ಯ ಮಾಡುತ್ತಾ ಇದ್ದ. ಅವರಿಗೆ ಬರೆಯುವುದು ಓದುವುದು ಬಿಟ್ಟರೆ ಬೇರೇನು ತಿಳಿಯುತ್ತದೆ ಹೇಳಿ? ಎಂದು ನನ್ನ ಪತ್ನಿ ಎಲ್ಲರೆದುರೂ ನನ್ನನ್ನು ಛೇಡಿಸುತ್ತಿದ್ದಳು. ನಾನಾದರೂ ಅದನ್ನೊಂದು ಪ್ರಶಸ್ತಿಯೆಂದೇ ಸ್ವೀಕಾರ ಮಾಡುತ್ತಿದ್ದೆ. ನಾರಾಯಣ ಇಲ್ಲದೆ, ಬಾಲು ಇಲ್ಲದೆ, ಎಸ್.ಬಿ ಇಲ್ಲದೆ, ಉಪಾಧ್ಯರಿಲ್ಲದೆ ನಮ್ಮ ಮನೆಯಲ್ಲಿ ಏನು ನಡೆಯಲಿಕ್ಕೆ ಸಾಧ್ಯವಿತ್ತು.

ಸೈಟ್ ಕೊಳ್ಳುವಾಗ ನನಗೆ ಜೊತೆಯಲ್ಲಿ ಗೆಳೆಯರಿರಬೇಕು! ಮನೆ ಕಟ್ಟುವಾಗ ಜೊತೆಗೆ ಗೆಳೆಯರಿರಬೇಕು. ಮಕ್ಕಳಿಗೆ ಉಪನಯನ ಮದುವೆ ಮಾಡುವಾಗ ಜೊತೆಗೆ ಗೆಳೆಯರಿರಬೇಕು. ಗೆಳೆಯರಾದ ಮೇಲೆ ಶಿಷ್ಯರು ಆ ಜವಾಬುದಾರಿ ವಹಿಸಿಕೊಂಡರು. ನಮ್ಮ ರವಿ ಇದಾನಲ್ಲಾ! ಕಾರ್ಯಕ್ರಮವಾದರೆ ಎಲ್ಲ ಸಾಮಾನು ಸರಂಜಾಮು ಅವನೇ ಒದಗಿಸಬೇಕು. ಆಕಡೆಯಿಂದ ರವಿಯ ಫೋನ್ ಬರುತ್ತದೆ. ಮಾವ ಇದ್ದಾರೆ ಕೊಡುತ್ತೇನೆ ತಡೆಯಿರಿ ಎಂದು ನನ್ನ ಸೊಸೆ ಹೇಳುತ್ತಾಳೆ. ಅಯ್ಯೋ…ನಿಮ್ಮ ಮಾವ ಬೇಡ ಕಣಮ್ಮ…ಅಕ್ಕಾವರಿಗೆ ಫೋನ್ ಕೊಡು… ಮೇಷ್ಟ್ರಿಗೆ ಏನು ಗೊತ್ತಾಗತ್ತೆ!-ಎನ್ನುತ್ತಾನೆ ನನ್ನ ಶಿಷ್ಯೋತ್ತಮ.

ಮದುವೆ ಮನೆಯಲ್ಲಿ ಎಲ್ಲ ಜವಾಬುದಾರಿ ಮಣಿ ನಿರ್ವಹಿಸುತ್ತಿದ್ದರೆ ಬೀಗರ ಕಡೆಯೋರು ಕೇಳೋರು. ಅವರು ನಿಮ್ಮ ಮನೆಯವರ ತಂಗಿಯೇ? ಹೂಂ ಎನ್ನುತ್ತಿದ್ದೆ ನಾನು! ಇದು ನಮ್ಮ ನೆಂಟರಿಷ್ಟರಲ್ಲಿ ಎಷ್ಟು ಜನಕ್ಕೆ ಎಷ್ಟು ರೀತಿಯಲ್ಲಿ ಅಸಹನೆ ಉಂಟು ಮಾಡುತ್ತಿತ್ತೋ ದೇವರೇ ಬಲ್ಲ. ಕೆಲವರು ಹೊಟ್ಟೆಗೆ ಹಾಕಿಕೊಂಡು ಸುಮ್ಮನಿರುತ್ತಿದ್ದರು. ಕೆಲವರು ಜೀರ್ಣಿಸಿಕೊಳ್ಳದೆ ಉರಿದೇಗು ಹಾಯಿಸಲಿಕ್ಕೆ ಶುರು ಮಾಡುತ್ತಿದ್ದರು. ಮಣಿಗೆ ಕೇಳಿಸುವಂತೆಯೇ ಹ್ವಾಕೆ ಸ್ವಾಕೆ ಮಾತು ಆಡಿ ತಮ್ಮ ಎದೆಯುರಿ ಹೆಚ್ಚಿಸಿಕೊಳ್ಳುತ್ತಿದ್ದರು. ಅದಕ್ಕೆಲ್ಲಾ ನಾಗಿಣಿಯವರದ್ದು ನಿರ್ಭಾವದ ಮುಗುಳ್ನಗೆಯೊಂದೇ ಉತ್ತರ! ಕೆಲಸ ಯಾರೂ ಮಾಡಬಹುದು. ಬನ್ನಿ! ಮಾತಾಡುವ ಬದಲು ಕೆಲಸ ಮಾಡಿ ಎನ್ನುವಂತಿರುತ್ತಿತ್ತು ಆ ಪ್ರಸನ್ನವಾದ ಮುಗುಳ್ನಗೆ. ಇಂಥ ಮಾತು ಕಿವಿಗೆ ಬಿದ್ದಾಗ ನಾಗಿಣಿಗಿಂತ ಹೆಚ್ಚಾಗಿ ನೊಂದುಕೊಳ್ಳುತ್ತಿದ್ದವಳು ನನ್ನ ಪತ್ನಿಯೇ. ಜನ ಎಂದರೆ ಹಾಗೇ ಮತ್ತೆ. ತಾವೂ ಮಾಡುವುದಿಲ್ಲ. ಬೇರೆಯವರು ಹಚ್ಚಿಕೊಂಡು ಮಾಡಿದರೆ ಅದನ್ನು ಸಹಿಸುವುದೂ ಇಲ್ಲ. ರಕ್ತದಿಂದ ಯಾವುದನ್ನು ಅಂಟಿಸಲಿಕ್ಕಾಗುತ್ತದೆ ಹೇಳಿ. ಅಂಟುವ ಗುಣ ಇರುವುದು ಬೆಲ್ಲದ ಪಾಕಕ್ಕೆ ಮಾತ್ರ.

ನಾರಾಯಣ್ ಸೀದಾ ಸಾದ ಸರಳ ಮನುಷ್ಯ. ನಾಗಿಣಿ ಹಾಗಲ್ಲ. ಆಕೆ ಉಡುವುದು ತೊಡುವುದು ಎಲ್ಲದರಲ್ಲೂ ಮಹಾ ಸೌಂದರ್ಯಪ್ರಜ್ಞೆ ಹೊಂದಿದವರಾಗಿದ್ದರು. ಒಮ್ಮೆ ತನ್ನ ಸೊಸೆಯನ್ನ ನಾಗಿಣಿಯವರ ಮನೆಗೆ ನನ್ನ ಪತ್ನಿ ಕರೆದುಕೊಂಡು ಹೋಗಿದ್ದಾಳೆ. ಉದ್ದೇಶ ಮತ್ತೇನಿಲ್ಲ. ನಾಗಿಣಿಯವರ ಸೀರೆಗಳನ್ನು ನೋಡುವುದೇ ಆವತ್ತಿನ ಕಾರ್ಯಕ್ರಮ. ಅದೆಷ್ಟು ಸೀರೆಗಳಪ್ಪಾ ಆಕೆಯ ಬೀರುಗಳಲ್ಲಿ. ಇವು ಧಾರೆಗೆ ಉಡುವ ಸೀರೆಗಳು; ಇವು ರಿಸೆಪ್ಷನ್ನಲ್ಲಿ ಉಡತಕ್ಕವು. ಇವು ದೇವಸ್ಥಾನಕ್ಕೆ ಹೋಗುವಾಗ. ಇವು ಸುಮ್ಮನೆ ಸಂಜೆ ಪೇಟೆಗೆ ಹೋಗುವಾಗ. ಇವಿವೆಯಲ್ಲಾ ಇವು ರಾತ್ರಿ ಪಾರ್ಟಿಗೀರ್ಟಿಗೆ ಹೋಗುವಾಗ. ನಾಟಕ ಸಿನಿಮಾಗಳಿಗೆ ಹೋಗುವಾಗ ಉಡತಕ್ಕ ಸೀರೆಗಳು ಇವು. ಆವತ್ತು ನನ್ನ ಸೊಸೆ ಮೂರ್ಛೆಹೋಗದೆ ಮನೆಗೆ ಕ್ಷೇಮವಾಗಿ ಬಂದಳೆಂಬುದೇ ಒಂದು ಕೌತುಕ.

ಆದರಾತಿಥ್ಯದಲ್ಲಿ ನಾಗಿಣಿ ಎತ್ತಿದ ಕೈ. ಮಧ್ಯಾಹ್ನದ ಹೊತ್ತಿಗೆ ಹೋದರೆ ಮುಗಿಯಿತು. ಊಟ ಮಾಡದೆ ಅವರ ಮನೆಯಿಂದ ಹೆಜ್ಜೆ ಕೀಳುವಂತೆಯೇ ಇಲ್ಲ. ಜಟ್ ಪಟ್ ಅಂತ ಅದೆಷ್ಟು ಬೇಗ ಅಷ್ಟೆಲ್ಲಾ ಅಡುಗೆ ಮಾಡಿಮುಗಿಸಿಬಿಡುತ್ತಿದ್ದರಾಕೆ! ಅದೂ ನನ್ನ ಪತ್ನಿಯೊಂದಿಗೆ ನಗುನಗುತ್ತಾ ಮಾತಾಡುತ್ತಲೇ. ಆಕೆಗೆ ಕೆಲಸದ ಶ್ರಮ ಎನ್ನುವುದೇ ಇಲ್ಲ. ಮತ್ತೆ ಯಾವ ಅತಿಥಿಗೆ ಯಾವ ಅಡುಗೆ ಇಷ್ಟ ಎಂಬುದು ಆಕೆಗೆ ಗೊತ್ತು. ಯಾವತ್ತೇ ಹೋಗಲಿ ನನಗೆ ಪ್ರಿಯವಾದ ಅಡುಗೆಯೇ ಎಲೆಯ ಮೇಲೆ ಪ್ರತ್ಯಕ್ಷವಾಗುತ್ತಿತ್ತು. ನಾವು ಒಟ್ಟಿಗೇ ಕುಳಿತು ಅದೆಷ್ಟೋ ಹೊತ್ತು ಊಟಮಾಡುತ್ತಿದ್ದೆವು. ಊಟ ಕಮ್ಮಿಯೇ. ಊಟಕ್ಕಿಂತ ಮಾತೇ ಜಾಸ್ತಿ. ಮತ್ತೆ ಅಷ್ಟು ಸಾರಿ ನಾವು ಅವರ ಮನೆಗೆ ಹೋಗುತ್ತಿದ್ದರೂ ಎಂದೂ ಆ ಪುಣಾತ್ಗಿತ್ತಿ ಬರಿ ಕೈಯಲ್ಲಿ ನನ್ನ ಪತ್ನಿಯನ್ನ ಬೀಳ್ಕೊಟ್ಟವರಲ್ಲ. ಎಲೆ ಅಡಕೆ ದಕ್ಷಿಣೆ ಕುಬುಸದ ಬಟ್ಟೆ ಕೊಟ್ಟೇ ಆಕೆ ಅತಿಥಿಗಳನ್ನು ಬೀಳ್ಕೊಡುತ್ತಿದ್ದುದು.

ನನ್ನ ಗೆಳೆಯನೋ ನನ್ನ ಬರವಣಿಗೆಯ ಮಹಾ ಟೀಕಾಕರಾನಾಗಿದ್ದನು! ಅದಕ್ಕೆ ತದ್ವಿರುದ್ಧವಾಗಿ ನಾನು ಬರೆದುದೆಲ್ಲವನ್ನೂ ಹೊಗಳುತ್ತಾ -ನೀವು ಸುಮ್ಮನಿರಿ ಮತ್ತೆ…ಅವರ ಬರವಣಿಗೆ ಅಂದರೆ ನನಗಂತೂ ತುಂಬ ಇಷ್ಟ… ಹಾಲು ಬೆಳ್ಳಗಿದೆ ಎಂದು ಟೀಕಿಸುವುದಷ್ಟೇ ನಿಮಗೆ ತಿಳಿಯೋದು..ಎಂದು ನಗು ನಗುತ್ತಲೇ ಆಕೆ ಗಂಡನ ಬಾಯಿಮುಚ್ಚಿಸಲು ಯತ್ನಿಸುತ್ತಿದ್ದರು. ನನಗೆ ಗೊತ್ತು ನನ್ನ ಗೆಳೆಯ ಮಾತಾಡುವುದು ನನ್ನನ್ನು ರೇಗಿಸುವುದಕ್ಕಷ್ಟೆ ಅಂತ. ಅವನ ವಿಮರ್ಶೆಯಲ್ಲಿ ಸೂಕ್ಷ್ಮಗ್ರಾಹತ್ವ ಇರುತ್ತಿತ್ತು. ತುಂಬ ಚೆನ್ನಾಗಿದೆ ಅನ್ನಿಸಿದ್ದನ್ನು ಅವನು ಹಿಗ್ಗಾಮುಗ್ಗಾ ಟೀಕಿಸುತ್ತಾ ಇದ್ದ. ಸುಮಾರಾಗಿದೆ ಅನ್ನಿಸಿದರೆ…ಇದು ನೋಡಪ್ಪ…ನಿನ್ನ ಮಾಸ್ಟರ್ ಪೀಸ್ ಅನ್ನೋದು. ಕನ್ನಡ ಸಾಹಿತ್ಯದಲ್ಲಿ ಯಾರು ಯಾರು ಘನವಾದ ಲೇಖಕರೋ ಅವರನ್ನೆಲ್ಲಾ ಆರಿಸಿಕೊಂಡು ಅವರ ಅತ್ತ್ಯುತ್ತಮ ಕೃತಿಗಳನ್ನು ಹಿಗ್ಗಾಮುಗ್ಗ ಟೀಕಿಸಿ ಸಂತೋಷಪಡುವುದೇ ನನ್ನ ಗೆಳೆಯನ ಸ್ವಭಾವವಾಗಿತ್ತು! ಈ ಸೂಕ್ಷ್ಮ ನಾಗಿಣಿಗೆ ಗೊತ್ತಾಗುತ್ತಾ ಇರಲಿಲ್ಲ. ನಾನೆಲ್ಲಿ ಬೇಜಾರು ಮಾಡಿಕೊಳ್ಳುತ್ತೇನೋ ಎಂದು ಆಕೆಯ ಆತಂಕ. ಇವಾ ಓದಿ ನನ್ನನ್ನು ಬೈದು ನಾಲಗೆ ಮಸೆದುಕೊಳ್ಳುತ್ತಿದ್ದ. ಆತನ ಪತ್ನಿಯಾದರೋ ಓದದೆಯೇ ನನ್ನನ್ನು ಹೊಗಳಿ ಗಾಯಕ್ಕೆ ಮುಲಾಮು ಸವರಲು ಯತ್ನಿಸುತ್ತಿದ್ದರು. ನನ್ನ ಮಿತ್ರ ಟೀಕಿಸಿದಾಗ ನನಗೆ ಖುಷಿಯಾಗುತ್ತಿತ್ತೇ ವಿನಾ ನೋವಲ್ಲ. ಅವನ ಮಾತಿನ ವರಸೆ ನನಗೆ ಯಾವತ್ತೂ ಪ್ರಿಯವೇ!

ನಾಗಿಣಿ ನಮ್ಮ ಮನೆಯ ಎಲ್ಲ ಶುಭಸಮಾರಂಭದ ಫೋಟೋಗಳಲ್ಲೂ ತಪ್ಪದೆ ಕಂಗೊಳಿಸುತ್ತಾರೆ. ಇನ್ನು ನನ್ನ ಗೆಳೆಯನನ್ನು ನಾನು ಫೋಟೋದಲ್ಲಿ ದುರ್ಬೀನು ಹಾಕಿಕೊಂಡು ಹುಡುಕಬೇಕು! ಫೋಟೋಕ್ಕೆ ನಿಲ್ಲುವ ಅವಕಾಶವನ್ನು ಯಾವತ್ತೂ ನಾಗಿಣಿ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆಕೆಯನ್ನು ಕಂಡಾಗಲೆಲ್ಲಾ ಮುಗ್ಧ ಮುತ್ತೈದೆ ಎಂದೇ ನಾನು ಮನಸ್ಸಲ್ಲಿ ಅಂದುಕೊಳ್ಳುತ್ತಿದ್ದೆ. ನಾಗಿಣಿಗೆ ಮೇಕಪ್ಪಿನ ಹುಚ್ಚೂ ವಿಪರೀತವಾಗಿತ್ತು. ನಮ್ಮ ಸೊಸೆಯರಿಗೆ ರಿಸೆಪ್ಷನ್ ಅಲಂಕಾರಕ್ಕೆ ಬ್ಯೂಟೀ ಪ್ಯಾರಲರ್ಗೆ ಕರೆದುಕೊಂಡು ಹೋಗುತ್ತಿದ್ದುದು ಯಾವತ್ತೂ ನಾಗಿಣಿಯೇ. ವಿಶೇಷವೆಂದರೆ ಹೇಗೂ ಹೋಗಿರುತ್ತಿದ್ದರಲ್ಲಾ, ವಧುವಿನೊಂದಿಗೆ ತಾವೂ ಅಲಂಕರಣಗೊಳ್ಳುವುದನ್ನು ಈ ಮುತ್ತೈದೆ ಮರೆಯುತ್ತಲೇ ಇರಲಿಲ್ಲ. ನಾವು ಒಟ್ಟಿಗೆ ಸೇರಿದಾಗ ಹಾಸ್ಯ, ಮಾತು, ರುಚಿ ರುಚಿ ತಿಂಡಿ ಊಟ. ಅದು ನಮ್ಮ ಮನೆ ಆಗಬಹುದು. ಅವರ ಮನೆ ಆಗಬಹುದು. ಅಥವಾ ಯಾವುದೋ ಪೇಟೆ ಬೀದಿಯ ರುಚಿಖ್ಯಾತ ಹೋಟೆಲ್ಲಿರಬಹುದು.

ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಅವರು ಬದುಕಲ್ಲಿ ಏರುಗಾಲು ಹಾಕಿ ನಡೆಯಲಿಕ್ಕೆ ನಾಗಿಣಿ ಕಾರಣವಾಗಿದ್ದರು. ನಮ್ಮ ಮಕ್ಕಳೆಂದರೂ ಅವರಿಗೆ ಅಷ್ಟೇ ಸಲುಗೆ. ಅವರು ಚೆನ್ನಾಗಿ ಓದಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದಾಗ ನಮ್ಮ ಮನೆಗೆ ಬಂದು ಸಿಹಿ ಹಂಚಿತ್ತಿದ್ದವರು ಈ ನಾರಾಯಣ್ ದಂಪತಿ. ನಮ್ಮೆಲ್ಲರಿಗೂ ವಯಸ್ಸಾಗುತ್ತಿತ್ತು. ಸಣ್ಣ ಪುಟ್ಟ ಬೇನೆ ಬೇಸರಿಕೆಗಳು ಕಾಡತೊಡಗಿದವು. ಆದರೆ ಯಾವುದೂ ನಮ್ಮನ್ನು ಯಾವತ್ತೂ ನೆಲ ಹಿಡಿಸಿದ್ದಿಲ್ಲ. ಹೀಗಿರುವಾಗ ಒಂದು ರಾತ್ರಿ ನಾರಾಯಣ ಫೋನ್ ಮಾಡಿ, ನಾಗಿಣಿಗೆ ಆರೋಗ್ಯ ಚೆನ್ನಾಗಿಲ್ಲ, ಹಾಸ್ಪಿಟಲ್ಲಿಗೆ ಅಡ್ಮಿಟ್ ಮಾಡಿದ್ದೇವೆ. ಬೇಗ ಬಾ…ಎಂದಾಗ ನನ್ನ ಜಂಘಾಬಲವೇ ಉಡುಗಿಹೋಯಿತು. ನಾವು ಹೋದಾಗ ನಾಗಿಣಿಗೆ ಎಚ್ಚರವೇ ಇರಲಿಲ್ಲ. ಆಕೆ ಐಸೀಯೂದಲ್ಲಿ ಇದ್ದರು. ಕೃತಕ ಉಸಿರಾಟದ ವ್ಯವಸ್ಥೆ ಒದಗಿಸಲಾಗಿತ್ತು. ಉಳಿಯುವ ಭರವಸೆಯಿಲ್ಲ ಎಂದು ನನ್ನ ಮಹಾವಾಗ್ಮಿ ಗೆಳೆಯ ಮಾತಿಗೆ ತಡವರಿಸಿದಾಗ ನನ್ನ ಕುತ್ತಿಗೆ ಬಿಗಿದು ಬಂತು. ನನ್ನ ಪತ್ನಿಯಂತೂ ಅಳಲಿಕ್ಕೇ ಶುರು ಹಚ್ಚಿದ್ದಳು. ಮಾರನೇ ದಿನ ನಾಗಿಣಿ ಈ ಪ್ರಪಂಚದ ಪರ್ಲು ಹರಿದುಕೊಂಡು ಲೌಕಿಕ ಜಗತ್ತಿಗೆ ವಿದಾಯ ಹೇಳಿಯೇಬಿಟ್ಟರು.

ಇನ್ನು ಈ ವಿಷಾದಪರ್ವವನ್ನು ಹೆಚ್ಚು ಬೆಳೆಸದೆ ಒಂದು ಕೌತುಕದ ಪ್ರಸಂಗದ ಕಡೆಗೆ ನಿಮ್ಮ ಗಮನ ಸೆಳೆಯ ಬೇಕಾಗಿದೆ. ಒಮ್ಮೆ ಗೆಳೆಯ ನನ್ನ ಮನೆಗೆ ಬಂದವನು , ಈವತ್ತು ನಾಗಿಣಿ ಜತೆಗೆ ಮಾತಾಡಿದೆ ಕಣೋ…!ಎನ್ನೋದೆ. ಕನಸು ಗಿನಿಸು ಕಂಡಿರಬಹುದು ಎಂದುಕೊಂಡೆ ನಾನು. ಕನಸಲ್ಲ. ಇಲ್ಲಿಗೆ ಅನತಿ ದೂರದಲ್ಲೇ ಒಂದು ದೇವಾಲಯವಿದೆ. ಅರ್ಚಕರ ಮೈ ಮೇಲೆ ದೇವಿಯ ಆವಾಹನೆಯಾಗುತ್ತದೆ. ನಾವು ಯಾರ ಜೊತೆಯಲ್ಲಿ ಮಾತಾಡ ಬೇಕು ಎಂದು ಸೂಚಿಸಿದರೆ ದೇವಿ ಆ ಆತ್ಮವನ್ನು ತನ್ನ ಸನ್ನಿಧಿಗೆ ತಕ್ಷಣವೇ ಕರೆಸಿಕೊಳ್ಳುತ್ತಾಳೆ. ನಾವು ಏನು ಬೇಕಾದರೂ ಪ್ರಶ್ನೆ ಕೇಳಬಹುದು. ಅರ್ಚಕರ ಮೂಲಕ ಆತ್ಮ ನಮ್ಮೊಂದಿಗೆ ಮಾತಾಡುತ್ತದೆ. ಮಾತು ಅಂದರೆ ಬರವಣಿಗೆ ಮೂಲಕ. ಆತ್ಮದ ಮಾತನ್ನು ಅರ್ಚಕರು ಸ್ಲೇಟು ಬಳಪ ಹಿಡಿದು ನಮಗೆ ಬರೆದು ತೋರಿಸುತ್ತಾರೆ. ಗೆಳೆಯ ಹೇಳಿದ: “ನಾನು, ನಾಗು ಹೇಗಿದ್ದೀ ಎಂದು ಕೇಳಿದೆ. ಅವಳು ಬರೆಹದ ಮೂಲಕ ಹೇಳಿದಳು. ನಾನು ಆರಾಮಾಗಿದ್ದೇನೆ. ಊಟ ತಿಂಡಿ ಯಾವುದಕ್ಕೂ ಕೊರತೆ ಇಲ್ಲ. ನಿಮ್ಮ ಮತ್ತು ಮಕ್ಕಳ ಯೋಚನೆ ಮಾತ್ರ. ನೀವು ಆರೊಗ್ಯ ಚೆನ್ನಾಗಿ ನೋಡಿಕೊಳ್ಳಿ. ನಾನು ದೇವಿಯ ಸನ್ನಿಧಾನದಲ್ಲೇ ಇರುವುದರಿಂದ ಮನಸ್ಸು ಬೇಗ ಪ್ರಸನ್ನತೆಗೆ ತಿರುಗುತ್ತದೆ. ಅಂದಹಾಗೆ ರಾಜಲಕ್ಷ್ಮಿ ಹೇಗಿದ್ದಾರೆ?”.

ಮಹಾ ವಿಚಾರವಾದಿಯಾಗಿದ್ದ, ವೈಜ್ಞಾನಿಕ ಮನೋಧರ್ಮದವನಾಗಿದ್ದ ನನ್ನ ಗೆಳೆಯನಿಗೆ ಏನಾಗಿದೆ? ಇದನ್ನೆಲ್ಲಾ ಅವನು ನಂಬಿ ಆಡುತ್ತಿದ್ದಾನ ಅಥವಾ ಅವನ ಸಹಜ ಚೇಷ್ಟೆಯ ಮನೋಧರ್ಮ ಹೀಗೆ ಅವನಿಂದ ಮಾತಾಡಿಸುತ್ತಿದೆಯಾ? ನಾನು ಕುತೂಹಲದಿಂದ ಗೆಳೆಯನ ಮುಖ ನೋಡಿದೆ. ಅವನ ಮುಖದಲ್ಲಿ ದೃಢವಾದ ವಿಶ್ವಾಸವಿತ್ತು. ಸಂದೇಹಕ್ಕೆ ಆಸ್ಪದವೇ ಇರಲಿಲ್ಲ. ಒಂದು ಬಗೆಯ ವಿಚಿತ್ರ ಸಮಾಧಾನ ಅವನ ಕಣ್ಣುಗಳಲ್ಲಿ ತುಂಬಿತ್ತು. ಅವನ ಕಣ್ಣಂಚು ಮಾತ್ರ ಕೊಂಚ ಒದ್ದೆಯಾಗಿತ್ತು. ನಾಗಿಣಿ ಒಂದು ವೇಳೆ ಮಾತಾಡಿದ್ದರೆ ಹೀಗೇ ಮಾತಾಡುತ್ತಿದ್ದರು. ಅದರಲ್ಲಿ ಮಾತ್ರ ನನಗೆ ಚೂರೂ ಸಂದೇಹವಿಲ್ಲ. ಸ್ಲೇಟಿನಲ್ಲಿ ಅರ್ಚಕ ಕಣ್ಣು ಮುಚ್ಚಿಕೊಂಡು, ಹೂಂಕಾರದೊಂದಿಗೆ ಮೈ ದೂಗುತ್ತಾ ಬರೆದದ್ದು ನಾಗಿಣಿಯ ಮಾತುಗಳನ್ನೇ. ತಂತಿಗಳೆಲ್ಲಾ ಕಿತ್ತು ಹೋಗಿದ್ದರೂ ತಂಬೂರಿ ಧ್ವನಿಗೈಯುತ್ತಲೇ ಇತ್ತು: ನಾನಾಗ ಏಕಾಂಗಿ ಧ್ಯಾನಿಯಾಗಿದ್ದೆ. ಸತ್ತವರ ಮಾತನ್ನು ನಾವು ಕರಾರುವಾಕಾಗಿ ಕಲ್ಪಿಸಬಹುದು. ಅವು ನೂರಕ್ಕೆ ನೂರು ಸತ್ಯವಾಗಿರುತ್ತವೆ. ಪ್ರೀತಿ ಮತ್ತು ನಂಬಿಕೆಗಿಂತ ಬಲವತ್ತರವಾದ ಶಕ್ತಿ ಇನ್ನೊಂದಿಲ್ಲ. ಅದು ಇಲ್ಲದ್ದನ್ನೂ ನಮ್ಮ ಕಣ್ಣೆದುರೇ ಸೃಷ್ಟಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ…..ಗೊಣಸು ಮುರಿದಾಗ ಸಿಂಹಾಸನ ಮುರಿದು ಬೀಳಬಹುದು; ಸಂಬಂಧವಲ್ಲ ಎಂಬುದು ಮತ್ತೊಮ್ಮೆ ನನ್ನ ಮನಸ್ಸಿಗೆ ಬೋಧೆಯಾಗಿ ವಿಲಕ್ಷಣ ಸಮಾಧಾನ ಉಂಟಾಯಿತು…ಅದು ಆ ಕ್ಷಣದ ಸತ್ಯ…ನಿಜ; ಆದರೆ ಕ್ಷಣಿಕ ಅನ್ನುವಂತಿಲ್ಲ….

 

೦೦೦೦೦

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: