ಜೋಗಿ ಬರೆದಿದ್ದಾರೆ: ಮಾತಿನ ಹೆಣ ಬಿದ್ದ ಮನಸಿನಂಗಳದಲ್ಲಿ….

‘ಅವಳಿಂದ ನಾನೇನು ಬಯಸುತ್ತಿದ್ದೇನೆ ಅಂತ ಕೇಳಿಕೊಂಡರೆ ಏನೂ ಇಲ್ಲ. ಏನೇನೂ ಇಲ್ಲ. ನಮ್ಮಿಬ್ಬರ ಮಧ್ಯೆ ಸೆಕ್ಸ್ ಇಲ್ಲ. ಅವಳ ದೇಹವನ್ನು ನಾನು ಬಯಸುತ್ತಿಲ್ಲ. ಆದರೂ ಅವಳ ಜೊತೆ ಮಾತಾಡಬೇಕು ಅನ್ನಿಸುತ್ತೆ. ಅವಳಿಗೆ ವ್ಯಾಲೆಂಟೇನ್ ಡೇ ದಿನ ಒಂದು ಸಂದೇಶ ಕಳಿಸಬೇಕು ಅನ್ನಿಸುತ್ತೆ. ಅವಳ ಜೊತೆ ಹರಟುವ ಮನಸ್ಸಾಗುತ್ತೆ. ಏನಿದು ಹೇಳಿ?’

ಗೆಳೆಯ ಕೇಳಿದ. ಅದನ್ನು ಹಂಬಲ ಎಂದು ಕರೆಯುತ್ತಾರೆ ಎನ್ನಬೇಕಿನ್ನಿಸಿತು. ಅದು ಹಂಬಲವೇ ಹೌದಾ, ವ್ಯಾಮೋಹವೂ ಇರಬಹುದಾ, ಅಥವಾ ಒಂದು ಚಟವಾ, ವೈವಿಧ್ಯವನ್ನು ಬಯಸುವ ಮನಸ್ಸಿನ ತುಡಿತವಾ? ನೂರೆಂಟು ಪ್ರಶ್ನೆಗಳು. ಮಾತು ಯಾತನೆಯ ದಿಡ್ಡಿ ಬಾಗಿಲು.

ಅಂಥ ಹಂಬಲ ಅನೇಕರನ್ನು ಕಾಡುವುದನ್ನು ನೋಡಿದ್ದೇನೆ. ಅದು ಅಪಾಯಕಾರಿಯೇನೂ ಅಲ್ಲ. ಸುಮ್ಮನೆ ಒಂದು ಸೆಳೆತ. ಅದು ವಿವಾಹಬಾಹಿರ ಸಂಬಂಧವಾಗಿ ಅರಳುವುದೂ ಇಲ್ಲ. ಹಾಗಂತ ಒಣಗಿ ಹೋಗುವ ಸೆಲೆಯೂ ಅಲ್ಲ. ಹೆಂಡತಿಗೋ ಗಂಡನಿಗೂ ಸಿಟ್ಟು ಬರಿಸುವ, ದಾಂಪತ್ಯದಲ್ಲಿ ಸಣ್ಣದೊಂದು ವಿರಸ ಮೂಡುವಂತೆ ಮಾಡುವ ಅಂಥ ಸಂಬಂಧಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಸುಮ್ಮನೆ ಬಿಟ್ಟುಬಿಡಬೇಕು.

ಯಾರು ಬಿಡುತ್ತಾರೆ? ಅವಳ ಒಂದು ನಗು, ಸುಮ್ಮನೆ ಆಡುವ ಮಾತು, ಹುಡುಗಾಟ, ಹುರುಪು ಇವನಲ್ಲಿ ಸಣ್ಣದೊಂದು ಉತ್ಸಾಹ ತುಂಬುತ್ತದೆ. ಅವಳು ಕೊಡುವ ಸಂತೋಷ ಪ್ರೀತಿಯಲ್ಲ ಎಂಬುದೂ ಪ್ರೀತಿಯಾಗಿ ಅರಳಲಾರದು ಎನ್ನುವುದೂ ಅವನಿಗೆ ಗೊತ್ತು. ಅದು ಅವಳಿಗೂ ಗೊತ್ತು. ‘ಹೆಚಿ‘ನ ವಿವರ’ಗಳನ್ನು ಬಯಸಿದಾಕ್ಷಣ ಆ ಸಂಬಂಧ ಕೂಡ ದಾಂಪತ್ಯದಷ್ಟೇ ಸೊರಗುತ್ತದೆ. ಅದು ಎಲ್ಲಿರಬೇಕೋ ಅಲ್ಲಿರಬೇಕು. ಆಗೀಗ ಒಂದು ಮಾತು, ಒಂದಿಷ್ಟು ತಮಾಷೆ. ಒಂಚೂರು ಹರಟೆ. ಸಣ್ಣದೊಂದು ಮುನಿಸು.

ಅಷ್ಟಕ್ಕೂ ಅವರೇನು ಮಾತಾಡುತ್ತಾರೆ ಎಂದು ಹುಡುಕಾಡಿದರೆ ಸಿಕ್ಕಿದ್ದು ಮುಕ್ಕಾಲು ಪದ್ಯ. ನಿನ್ನ ನಗು ತುಂಬ ಚೆನ್ನಾಗಿದೆ. ಕಿವಿಗೆ ಹಿತವಾಗಿ ಕೇಳಿಸುತ್ತೆ ಅನ್ನುತ್ತಾನೆ ಅವನು. ಅವಳು ಜೋರಾಗಿ ನಗುತ್ತಾಳೆ. ಅವನಲ್ಲಿ ಮತ್ತಷ್ಟು ಹುರುಪು. ನಿನ್ನನ್ನು ಈಗಿಂದೀಗಲೇ ನೋಡಬೇಕು ಅನ್ನಿಸುತ್ತದೆ ಅಂತ ಅವನು. ಕಣ್ಮುಚಿಕೋ ಕಾಣಿಸ್ತೀನಿ ಅಂತ ಅವಳು. ಕಣ್ಣು ಬಿಟ್ಟರೆ ಕಣ್ಮರೆಯಾಗುತ್ತೀಯಲ್ಲ ಅಂತ ಅವನ ಕೊರಗು. ಎಷ್ಟು ಚೆಂದ ಮಾತಾಡುತ್ತಾನೆ ಅನ್ನೋದು ಅವಳ ಬೆರಗು.

ಇದನ್ನು ಫ್ಲರ್ಟಿಂಗ್ ಎನ್ನುತ್ತಾರಾ? ಅದು ನಮ್ಮ ಕಾಲದಲ್ಲಿ ಚಾಲ್ತಿಯಲ್ಲಿಲ್ಲದೇ ಇದ್ದ ಪದ. ಆಗ ಅದಕ್ಕೆ ಚೊಕ್ಕವಾದ ಕನ್ನಡ ಪದವಿತ್ತು- ಚಕ್ಕಂದ. ಗಂಡು ಹೆಣ್ಣು ತುಂಬ ಹುರುಪಿನಿಂದ ಮಾತಾಡುತ್ತಿದ್ದರೆ ಹಿರಿಯರು ‘ಏನದು ಚಕ್ಕಂದ ಆಡೋದು. ಕೆಲಸ ನೋಡ್ಕೊಳ್ಳಿ’ ಎಂದು ರೇಗುತ್ತಿದ್ದರು. ಗಂಡು ಹೆಣ್ಣು ಮಾತಾಡಿದರೆ ಚಕ್ಕಂದ, ಹೆಂಗಸರೆಲ್ಲ ಒಟ್ಟಾಗಿ ಕೂತು ಹರಟಿದರೆ ಪಟ್ಟಾಂಗ, ಬರೀ ಗಂಡಸರೇ ಕೂತು ಮಾತಾಡುತ್ತಿದ್ದರೆ ವ್ಯವಹಾರ, ಮುದುಕಿಯರು ಮಾತಾಡುತ್ತಿದ್ದರೆ ಬೋಗಾರ, ಹುಡುಗರೆಲ್ಲ ಸೇರಿ ಮಾತಾಡಿದರೆ ಹರಟೆ, ದಂಪತಿಗಳದ್ದಾದರೆ ಲಲ್ಲೆ, ಶಾಸ್ತ್ರೀಯ ಭಾಷೆಯಲ್ಲಿ ಅದು ಸಲ್ಲಾಪ. ಮುದ್ದಣ ಮನೋರಮೆಯರು ಆಡಿದ ಮಾತುಗಳಿಗೆ ಅದೇ ಹೆಸರು.

ಫ್ಲರ್ಟಿಂಗ್ ಅನ್ನುವ ಪದಕ್ಕೆ ಗಾಬರಿಯಾಗುವಂಥ ಅರ್ಥಗಳನ್ನು ಆರೋಪಿಸಲಾಗಿದೆ. Flirting is non-physical sexual communication between two people to negotiate mutual attraction through body language and verbal tactics. ಬಹುಶ ಫ್ಲರ್ಟ್ ಮಾಡುವವರಿಗೂ ಅದು ಅದೇ ಅಂತ ಗೊತ್ತಿರಲಿಕ್ಕಿಲ್ಲ. ಅದು ಮೊದಲ ಸಲಕ್ಕೆ ಹರಟೆ, ನಂತರ ಲಲ್ಲೆ, ಆಮೇಲೆ ಚಕ್ಕಂದ, ಕೊನೆಗೆ ಸಲ್ಲಾಪ. ಸಲ್ಲಾಪದ ಹಂತಕ್ಕೆ ಹೋಗುವುದಕ್ಕೂ ಈಗ ಬಹಳ ಕಾಯಬೇಕಾಗಿಲ್ಲ. ಹಾಗೆ ನೋಡಿದರೆ ಫ್ಲರ್ಟಿಂಗ್ ಅಂದರೆ to speak sweet nothing ಅಷ್ಟೇ. ಯಾವ ಅರ್ಥವನ್ನೂ ಹೊರಡಿಸದ ಮಧುರವಾದ ಮಾತುಗಳನ್ನು ಆಡುವುದು. ವಿನಾಕಾರಣ ಮಾತು, ವಿನಾಕಾರಣ ಸಲ್ಲಾಪ. ಅದು ಒಬ್ಬನಿಗೋ ಒಬ್ಬಳಿಗೋ ಸೀಮಿತವಾಗಿರಬೇಕಾಗಿಲ್ಲ. ಏಕಕಾಲಕ್ಕೆ ಹಲವಾರು ಮಂದಿಯ ಜೊತೆ ಫ್ಲರ್ಟ್ ಮಾಡಿದರೂ ಅಪರಾಧ ಏನಲ್ಲ. ಯಾಕೆಂದರೆ ಇಬ್ಬರಿಗೂ ಅದು ಕಮಿಟ್‌ಮೆಂಟ್ ಅಲ್ಲ ಅನ್ನುವುದು ಸ್ವಷ್ಟವಾಗಿ ಗೊತ್ತಿರುತ್ತದೆ.

ಅದರಿಂದ ಏನು ಲಾಭ ಎಂದು ಗೆಳೆಯನನ್ನು ಪ್ರಶ್ನಿಸಿದೆ. ಅವನಿಗೂ ಗೊತ್ತಿರಲಿಲ್ಲ. ಒಂಥರ ಬಿಡುಗಡೆ ಸಿಗುತ್ತದೆ. ಮನಸ್ಸಿನಲ್ಲಿ ಇರೋದನ್ನು ಧಾರಾಳವಾಗಿ ಹೇಳಿಕೊಳ್ಳುವ ಅವಕಾಶ ಇರುತ್ತದೆ. ಯಾವ ಅಡೆತಡೆಯೂ ಇಲ್ಲದೇ ಕೆಲವು ಮಾತುಗಳನ್ನು ಹೇಳಿಬಿಡಬಹುದು. ನೀನಂದ್ರೆ ಇಷ್ಟ ಕಣೇ ಅಂದರೆ ಅವಳು ತಪ್ಪು ತಿಳಿಯುವುದಿಲ್ಲ. ಅದನ್ನು ಆಕೆ ನಂಬುವುದಿಲ್ಲ, ನಂಬಿದಂತೆ ನಟಿಸುತ್ತಾಳೆ. ನೀನೂ ಮ್ಯಾನ್ಲೀಯಾಗಿದ್ದೀಯ ಅಂತ ಅವಳೂ ಹೇಳುತ್ತಾಳೆ. ಇವನು ಬೆಳಗ್ಗೆಯಷೆ‘ ಕನ್ನಡಿ ನೋಡಿಕೊಂಡಿರುತ್ತಾನೆ.

-೨-

ಕೆ. ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ದಲ್ಲೊಂದು ಪ್ರಸ್ತಾಪ ಬರುತ್ತದೆ. ಅವರು ಹರ್ಮನ್ ಬ್ರಾಖ್‌ನ ಸ್ಲೀಪ್ ವಾಕರ್ಸ್ ಕಾದಂಬರಿಯಲ್ಲಿ ಬರುವ ಒಂದು ಪುಟ್ಟ ಪ್ರಸಂಗವನ್ನು ಹೇಳುತ್ತಾರೆ. ಅವನು ಮತ್ತು ಅವಳು ಅಣಬೆ ಹೆಕ್ಕಲು ಕಾಡಿಗೆ ಹೋಗುತ್ತಾರೆ. ಇಬ್ಬರೇ ಇರುವಂಥ ಏಕಾಂತದ ಸಂದರ್ಭ ಅಲ್ಲಿ ಸೃಷ್ಟಿಯಾಗಿದೆ. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಅದು ಸರಿಯಾದ ಸಮಯ ಎಂದು ಇಬ್ಬರು ಭಾವಿಸುತ್ತಾರೆ.

ತಮ್ಮ ಪ್ರೇಮವನ್ನು ಹೇಳಿಕೊಳ್ಳಲು ಅದಕ್ಕಿಂತ ಒಳ್ಳೆಯ ಅವಕಾಶ ಮತ್ತೆಂದೂ ಸಿಗಲಾರದು ಎಂದು ಗೊತ್ತಿದ್ದು ಕೂಡ ಅವರು ಪ್ರೇಮದ ಬಗ್ಗೆ ಮಾತಾಡುವುದಿಲ್ಲ. ಬರೀ ಅಣಬೆಗಳ ಕುರಿತೇ ತಮ್ಮಿಬ್ಬರ ದಾರಿ ಕವಲೊಡೆಯುವ ತನಕ ಮಾತಾಡುತ್ತಾರೆ. ನಂತರ ತಮ್ಮ ತಮ್ಮ ಹಾದಿ ಹಿಡಿದು ಹೊರಟು ಹೋಗುತ್ತಾರೆ. ಉತ್ಕಟವಾದ ಪ್ರೇಮ ಮನಸ್ಸಿನಲ್ಲಿದ್ದು ಕೂಡ ಅವರಿಬ್ಬರೂ ಪ್ರೇಮದ ಮಾತೇ ಆಡದೇ, ಬರೀ ಅಣಬೆಯ ಕುರಿತೇ ಯಾಕೆ ಮಾತಾಡುತ್ತಾರೆ ಎಂಬುದು ಪ್ರಶ್ನೆ.

ತಿರುಮಲೇಶ್ ಬರೆಯುತ್ತಾರೆ: ಮಂಜಿನೊಳಗಿದೆ ಒಂದು ಮುಖ, ಮುಟ್ಟಲಾರೆ ಅದನ್ನ. ಇಬ್ಬನಿಯೊಳಗಿದೆ ಒಂದು ಲೋಕ, ತಲುಪಲಾರೆ ಅದನ್ನ.

ಅಸಾಧ್ಯವಾದ ಮೌನವೊಂದು ಇಬ್ಬರ ನಡುವೆ ಥರ್ಟಿ ಫಾರ್ಟಿ ಸೈಟು ತೆಗೆದುಕೊಂಡು ಮನೆಕಟ್ಟಿ ಕುಳಿತುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ. ಅಂಥದ್ದೊಂದು ಸ್ಥಿತಿ ದಾಂಪತ್ಯದಲ್ಲಿ, ಗೆಳೆತನದಲ್ಲಿ, ಅಪ್ಪ ಮಗನ ಮಧ್ಯೆ, ಅಮ್ಮ ಮಗನ ಮಧ್ಯೆ, ಯಾವ ಸಂಬಂಧದ ನಡುವೆ ಬೇಕಾದರೂ ಸೃಷ್ಟಿಯಾಗಬಹುದು. ಅದಕ್ಕೆ ಕಾರಣಗಳೂ ಬೇಕಿಲ್ಲ. ಒಂದು ಸರಳ ಮಾತಿನಿಂದ, ಒಂದು ನಗುವಿನಿಂದ ಸಲೀಸಾಗುವಂಥ ಎಷ್ಟೋ ಸಂಬಂಧಗಳನ್ನು ನಾವೇ ಎಷ್ಟೋ ಸಲ ನಿರಾಕರಿಸುವುದಿಲ್ಲವೇ? ಅದ್ಯಾಕೆ ಹಾಗೆ ಮಾಡುತ್ತೇವೆ?

ನಮಗೆ ಪ್ರೀತಿಸುವುದಕ್ಕೂ ಮಾಧ್ಯಮ ಬೇಕೋ ಏನೋ? ಮಧ್ಯವರ್ತಿ ಬೇಕಾಗುತ್ತಾರೋ ಏನೋ? ನನ್ನೊಬ್ಬ ಗೆಳೆಯ ಫೋನಿನಲ್ಲಿ ಆತನ ಗೆಳತಿಯ ಬಳಿ ಗಂಟೆಗಟ್ಟಲೇ ಮಾತಾಡುತ್ತಾನೆ. ಅವಳು ಎದುರು ಬಂದಾಗ ಮೌನಿಯಾಗುತ್ತಾನೆ. ಇಷ್ಟೂ ದಿನ ತನ್ನೊಂದಿಗೆ ಮಾತಾಡಿದ್ದು ಇವನೇನಾ ಎಂದು ಆಕೆ ಅನುಮಾನಪಡುವಷ್ಟು ಮೌನಿ. ಯಾಕೆ ಹಾಗಾಗುತ್ತದೆ ಅನ್ನುವುದು ಅವನಿಗೂ ಗೊತ್ತಿಲ್ಲ.

ನನ್ನ ಗಂಡ ಹೊರಗೆ ತುಂಬ ಮಾತಾಡುತ್ತಾರೆ. ಮನೆಗ ಬಂದಾಕ್ಷಣ ಸೆಟೆದುಕೊಂಡು ಕುಳಿತುಬಿಡುತ್ತಾರೆ. ಅವರ ನಗು, ತಮಾಷೆ ಎಲ್ಲವೂ ನಿಂತೇ ಹೋಗುತ್ತದೆ. ಅದೇ ಮನೆಗೆ ಮತ್ಯಾರಾದರೂ ಅವರ ಮಿತ್ರರು ಬಂದರೆ ಮತ್ತೆ ತಮಾಷೆಯ ಮೂಡಿಗೆ ಮರಳುತ್ತಾರೆ. ಅದರ ಅರ್ಥ ಏನು? ಅವರ ತಮಾಷೆಯನ್ನು ಸ್ವೀಕರಿಸುವಷ್ಟು ನಾನು ಪ್ರಬುದ್ಧಳಲ್ಲ ಎಂದೇ. ತುಂಬ ಒಳ್ಳೊಳ್ಳೆಯ ಸಿನಿಮಾ ನೋಡುವ ನನ್ನ ಗಂಡ, ಆ ಸಿನಿಮಾಗಳ ಕುರಿತು ನನ್ನ ಹತ್ತಿರ ಒಂದು ಮಾತೂ ಆಡುವುದಿಲ್ಲ. ನಾನಾಗಿ ನಾನೇ ಹೇಗಿತ್ತು ಸಿನಿಮಾ ಅಂತ ಕೇಳಿದರೆ ಚೆನ್ನಾಗಿತ್ತು ಅಂದುಬಿಡುತ್ತಾರೆ. ಅದೇ ಅವರ ಗೆಳೆಯ ಬಂದರೆ, ಆ ಸಿನಿಮಾದ ಒಂದೊಂದು ಸನ್ನಿವೇಶವನ್ನೂ ಚಪ್ಪರಿಸಿಕೊಂಡು ಹೇಳುತ್ತಾರೆ. ಅದನ್ನೇ ನನಗೆ ಯಾಕೆ ಹೇಳುವುದಿಲ್ಲ.

ಹಾಗಂತ ಆಕೆ ಕೇಳುತ್ತಾರೆ. ಗೆಳೆಯ ಆಕಾಶ ನೋಡುತ್ತಾನೆ. ಗುಟ್ಟಾಗಿ ಹೇಳುತ್ತಾನೆ. ‘ಅವಳಿಗೆ ಹೇಳಬಾರದು ಅಂತೇನಿಲ್ಲ. ಆದರೆ ಕೆಲವು ಸಂಗತಿಗಳನ್ನು ಅವಳ ಮುಂದೆ ಹೇಳಲಾಗುವುದೇ ಇಲ್ಲ. ಅದರ ಅರ್ಥ ನಾನು ಅವಳನ್ನು ದ್ವೇಷಿಸುತ್ತೇನೆ ಅಂತಲ್ಲ. ಅವಳನ್ನು ಕಂಡರೆ ಆಗುವುದಿಲ್ಲ ಅಂತಲೂ ಅಲ್ಲ. ಯಾಕೋ ಗೊತ್ತಿಲ್ಲ, ಹೇಳಬೇಕು ಅನ್ನಿಸುವುದಿಲ್ ಅಷ್ಟೇ.

ಈ ವಿಸ್ಮಯದ ಕುರಿತು ಯೋಚಿಸುತ್ತಿರುವಾಗಲೇ ಗೆಳೆಯ ಆಗಷ್ಟೇ ಕೊಂಡ ಹೊಸ ಮೊಬೈಲು ತಂದು ತೋರಿಸುತ್ತಾ ಹೇಳಿದ: ಇದರ ಕಾಲ್ ಹಿಸ್ಟರಿಯಿಂದ ಒಂದು ಔಟ್‌ಗೋಯಿಂಗ್ ಕಾಲ್ ಡಿಲೀಟ್ ಮಾಡೋದು ಹೇಗೆ? ನಾನು ಅವನ ಮುಖ ನೋಡಿದೆ. ಅವನು ಸಣ್ಣಗೆ ನಕ್ಕ.

‘ಯಾವ ಅಕ್ರಮ ಸಂಬಂಧವೂ ಇಲ್ಲ. ಹಳೆಯ ಗೆಳತಿಗೊಂದು ಫೋನ್ ಮಾಡಿದ್ದೆ. ಸುಮ್ಮನೆ ಸ್ವಲ್ಪ ಹೊತ್ತು ಮಾತಾಡಿದೆವು. ಬರೀ ಹರಟೆ ಅಷ್ಟೇ. ಅವಳಿಗೆ ಗೊತ್ತಾದರೆ ಏನು ಮಾತಾಡೋದಿರುತ್ತೆ, ಹೋಗ್ಲಿ ಏನೇನು ಮಾತಾಡಿದ್ರಿ ಹೇಳಿ ಅಂತಾಳೆ. ಅದನ್ನು ಹೇಳೋದಕ್ಕೆ ಸಾಧ್ಯವೇ ಇಲ್ಲ. ಸುಮ್ಮನೆ ಜಗಳ ಆಗುತ್ತೆ’ ಅಂದ.

ನಂಗೊಂದು ಚೂರು ಸ್ಪೇಸ್ ಕೊಡು. ನಾನು ನಿನ್ನನ್ನು ಇನ್ನೂ ಗಾಢವಾಗಿ ಪ್ರೀತಿಸುತ್ತೇನೆ ಎಂದು ಆತ ಹೇಳಿದಂತೆ ಭಾಸವಾಯಿತು. ಸಂಬಂಧದ ವಿಸ್ಮಯ ತಿರುವುಗಳ ಕುರಿತು ಯೋಚಿಸತೊಡಗಿದೆ. ತಿರುಮಲೇಶ್ ಸಾಲು ಮತ್ತೆ ಕಣ್ಮುಂದೆ ಬಂತು: ಹುಡುಕುವುದು ಅಲೆಯುವುದು, ಯಾಕೆಂದು ತಿಳಿಯದೇ ಬಂದಲ್ಲಿಗೇ ಮರಳುವುದು

4 ಟಿಪ್ಪಣಿಗಳು (+add yours?)

 1. Manasa
  ಫೆಬ್ರ 20, 2011 @ 06:29:01

  ಮನದ ತಪ್ಪಿತಸ್ಥ ಭಾವಗಳಿಗೆ ಕೊಂಚ ನೆಮ್ಮದಿ ನೀಡಿದ ಬರವಣಿಗೆ ಅದ್ಭುತವಾಗಿದೆ. ಉತ್ತರ ಸಿಗದ ಭಾವ, ಅಭದ್ರತೆ ಯನ್ನು ಸೃಷ್ಟಿಸೋ ಭಾವ.

  ನಮಗೆ sweet nothing ಮಾತನಾಡಲು ಒಂದು ಹುಡುಗಿ/ಒಂದು ಪರಿಚಯ ಬೇಕೆನಿಸುತ್ತದೆ. ಆದರೆ ಅದೇ ಭಾವ ಮಡದಿಗೂ ಮೂಡಿ, ಆಕೆಯು ಮತ್ತೊಂದು ಮನದ ಜೊತೆ sweet nothing ಮಾತನಾಡಲು ಶುರು ಮಾಡಿದಾಗ… ನಮ್ಮ ಮನ ಪ್ರಕ್ಷುಬ್ದದ ಕಡಲಾಗುತ್ತದೆಯಲ್ಲವೇ..? ಯಾಕೆ ಹಾಗೆ????

  ಉತ್ತರ

 2. shashi
  ಫೆಬ್ರ 19, 2011 @ 21:15:56

  AKRAMA ………… SAKRAMA……… halavara taakalaatakke uttara odagisiddeeri….. 🙂

  ಉತ್ತರ

 3. sandhya
  ಫೆಬ್ರ 19, 2011 @ 14:30:37

  ವಾಸ್ತವಕ್ಕೆ ತು೦ಬಾ ಹತ್ತಿರವಾಗಿದೆ.. ಈ ತಾಕಲಾಟ ಹಲವರಲ್ಲಿದೆ ……ತು೦ಬಾ ಚೆನ್ನಾಗಿ ಬರೆದಿದ್ದೀರಿ..

  ಉತ್ತರ

 4. RJ
  ಫೆಬ್ರ 19, 2011 @ 11:50:21

  Lively.Lovely.

  -RJ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: