ಇದೊಂಥರಾ ವ್ಯಾಲೆಂಟೈನ್ ಲವ್ ಸ್ಟೋರಿ

ಸಾರಿ ಕಣಯ್ಯ ನಾನು ನಿನ್ನ ಮರ್ತೆ ಬಿಟ್ಟಿದ್ದೆ..!

-ಬಾಲಸುಬ್ರಮಣ್ಯ ಕೆ ಎಸ್

ಕನ್ನಡ ಬ್ಲಾಗರ್ಸ್

ನಾನು ಆಗತಾನೆ ಒಂದನೇ ತರಗತಿಗೆ ಕಾಲಿಟ್ಟದ್ದ ಸಮಯ. ನಮ್ಮ ಮನೆಗೆ ಅಕ್ಕರೆಯ ಸ್ನೇಹಿತನ ಆಗಮನವಾಯಿತು. ಅವನೋ ಮಹಾ ಮಾತುಗಾರ, ಸಂಗೀತಗಾರ, ವಾರ್ತಾವಾಚಕ, ಒಟ್ಟಿನಲ್ಲಿ ನಮ್ಮ ಮನೆಗೆ ವಿಶ್ವದ ದ್ವನಿಯಾಗಿದ್ದ. ಹಳ್ಳಿಯಲ್ಲಿ ಬಾಲ್ಯದ ಬದುಕು ಶುರುಮಾಡಿದ್ದ ನನಗೆ ಬಾಲ್ಯದ ಗೆಳೆಯನಾಗಿ ಬಂದಿದ್ದ . ನಾನು ನನ್ನ ಜೀವನದಲ್ಲಿ ನೋಡಿದ್ದ ಅಚ್ಚರಿಯ ನೋಟದ ಸ್ನೇಹಿತ ಇವನಾಗಿದ್ದ.

ಬಾಲ್ಯದಲ್ಲಿ ದೊಡ್ಡವರು ಹಾಕಿದ್ದನ್ನಷ್ಟೇ ಕೇಳುವ ಸುಯೋಗ ನಮಗೆ. ಹಾಸಿಗೆ ಬಿಟ್ಟು ಏಳುವ ಮುನ್ನ ಬೆಂಗಳೂರು ಆಕಾಶವಾಣಿಯ ಬೆಳಗಿನ ಗೀತಾರಾಧನ, ನಂತರ ಚಿಂತನ, ಓದುವ ಸಮಯದಲ್ಲಿ ಬರುತಿದ್ದ ಕನ್ನಡ ವಾರ್ತೆಗಳು. ನಂತರ ಕನ್ನಡ ಚಿತ್ರಗೀತೆಗಳು . ಅದರಲ್ಲಿ ಎಲ್.ಆರ್. ಈಶ್ವರಿಯ ಕ್ಯಾಬರೆ ಹಾಡುಗಳು ಬಂದರೆ ನಮ್ಮಪ್ಪ ಎಲ್ಲೇ ಇದ್ದರೂ ಓಡಿಬಂದು ರೇಡಿಯೋ ಸ್ವಿಚ್ ಆಫ್ ಮಾಡುತ್ತಿದ್ದರು. ಬಹುಷಃ ಮಕ್ಕಳಿಗೆ ಒಳ್ಳೆಯ ಮಾತುಗಳು ಮಾತ್ರ ಕಿವಿಗೆ ಬೀಳಲಿ ಎಂಬ ಉದ್ದೇಶವಿರಬಹುದು. ಹೀಗೆ ಬಂದ ಇವನು ನಿಧಾನವಾಗಿ ಮನೆಯ ಸದಸ್ಯರ ನೆಚ್ಚಿನ ಗೆಳೆಯನಾದ. ನಾನು ಪ್ರಾಥಮಿಕ ಶಾಲೆ ಯಿಂದ ನಾಲ್ಕನೇ ತರಗತಿ ಮುಗಿಸಿ ಮಳವಳ್ಳಿ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಐದನೇ ಕ್ಲಾಸಿಗೆ ಸೇರಿದ ಮೇಲೆ ಇವನ ಸ್ನೇಹ ಬಲವಾಗಿ ನಾನು ಇವನ ಸನಿಹ ಕೂರತೊಡಗಿದೆ. ಇವನ ಆಕಾರ ನನಗೆ ಮೆಚ್ಚುಗೆ ಯಾಗಿ ನಾನು ಇವನ ಸೇವೆಗೆ ತೊಡಗಿ ಇವನ ಮಾಲಿಶ್ ಮಾಡುವಷ್ಟು ಆತ್ಮಿಯನಾದೆ

ಇವನೋ ನನಗೆ ತನ್ನ ವಿಶ್ವ ರೂಪದ ದರುಶನ ಹಂತ ಹಂತವಾಗಿ ಮಾಡಿಸತೊಡಗಿದ. ಇವನೇ ಸ್ವಾಮೀ ನನ್ನ ನೆಚ್ಚಿನ ಗೆಳೆಯ ಫಿಲಿಪ್ಸ್ ಪ್ರೆಸ್ಟೀಜ್ ರೇಡಿಯೋ. ಪಟ್ಟಣದ ಶಾಲೆಯ ಹುಡುಗನಾದ ನಾನು ಹೊಸ ಹೊಸ ವಿಚಾರಗಳ ಬಗ್ಗೆ ಮಾಹಿತಿ ತಿಳಿಯುವ ಹಾಗೆ ಮಾಡಿದವರು ನಮ್ಮ ಪುಷ್ಪಾವತಿ ಮೇಡಂ, ಹೌದು ಅವರು ಮಕ್ಕಳಾದ ನಮಗೆ ರೇಡಿಯೋ ಬಗ್ಗೆ ಅನೇಕ ಕುತೂಹಲಕಾರಿ ವಿಚಾರ ತಿಳಿಸಿ ನನಗೆ ಆಸಕ್ತಿ ಕೆರಳಲು ಕಾರಣವಾದರು

ಈ ನನ್ನ ಗೆಳೆಯನೋ ಮನೆಯಲ್ಲಿ ತನಗಾಗಿ ಇಡಲಾಗಿದ್ದ ಮರದ ಪೆಟ್ಟಿಗೆಯ ಒಳಗೆ ಕುಳಿತು ದರ್ಭಾರು ಮಾಡಿದ್ದ. ಉತ್ತಮ ರೋಜ್ ವುಡ್ ಮರದ ಕ್ಯಾಬಿನೆಟ್ ಹೊಂದಿ ನಾಲ್ಕು ಬ್ಯಾಂಡ್ ಗಳನ್ನೂ ಹೊಂದಿ ಸುರ ಸುಂದರಾಂಗ ತಾನೆಂದು ಬೀಗಿದ್ದ ಇವನನ್ನು ಸ್ವ್ಟಿಚ್ ಆನ್ ಮಾಡಿದರೆ ನಿಧಾನವಾಗಿ ಎಲ್ಲ ಭಾಗಗಳಿಗೆ ವಿಧ್ಯುತ್ ಹರಿದು ಇವನು ಮಾತಾಡಲು ಶುರುಮಾಡಲು ಕನಿಷ್ಠ ಐದು ನಿಮಿಷ ಬೇಕಿತ್ತು. ಪುಣ್ಯಾತ್ಮನ ದೇಹದೊಳಗೆ ಗಾಜಿನ ಗುಪ್ಪೆಗಳ ಆಕಾರದ ಬಲ್ಬುಗಳು ವೈರುಗಳ ಸರಮಾಲೆ, ಕಾರ್ಬನ್ ತುಂಡು , ಸ್ಪೀಕರ್ ಇತ್ಯಾದಿಗಳ ಸಾಮ್ರಾಜ್ಯ !!!

ಮುಖದಲ್ಲಿ ನಗು ತುಂಬಿದ ಹಾಗೆ ಕಾಣುವ ವಿವಿಧ ಆಕಾರದ ಗುಂಡಗಿನ ತಿರುಗುವ ನಾಬ್ ಗಳು. ತನ್ನ ಸಾಮರ್ಥ್ಯದಲ್ಲಿ ಸಿಗುವ ಭಾರತದ ವಿವಿಧ ಆಕಾಶವಾಣಿ ಕೇಂದ್ರಗಳ ವಿವರ ಹೊಂದಿದ ಡಿಸ್ ಪ್ಲೇ ಹೊಂದಿದ್ದ ಒಟ್ಟಿನಲ್ಲಿ ಸುರ ಸುಂದರ.ಇನ್ನು ನಾನು ಇವನನ್ನು ಅರ್ಥಮಾಡಿಕೊಳ್ಳುತ್ತ ಹೋದಂತೆ ನನ್ನ ಜ್ಞಾನಕ್ಕೆ ಸಮೃದ್ದ ಭೋಜನ ನೀಡುವ ಕೆಲಸ ಇವನದಾಯಿತು. ಪ್ರತಿ ಭಾನುವಾರದಲ್ಲಿ ಬೆಂಗಳೂರಿನ ಆಕಾಶವಾಣಿಯ ಬಾಲಜಗತ್ತಿನ ಕಾರ್ಯಕ್ರಮ ನನಗೆ ಮೊದಲ ಪ್ರಿಯವಾದ ಕಾರ್ಯಕ್ರಮ ಅದರಲ್ಲಿ ಬರುತ್ತಿದ್ದ ನಿರೂಪಕಿ ನಿರ್ಮಲ ರವರ ದ್ವನಿ ಹಾಗು ಅವರು ಹೇಳುತ್ತಿದ್ದ ಕಥೆಗಳು , ಕಾರ್ಯಕ್ರಮದ ನಿರೂಪಣೆ ಅವರ ಮುಖ ನೋಡದಿದ್ದರೂ ಅವರ ಧ್ವನಿ ಇಂದಿಗೂ ಮರೆಯದೆ ಹಾಗೆ ಇದೆ. ನಾನು ಮರೆಯಲಾಗದ ಸಂಗೀತ ದಿಗ್ಗಜರ ಧ್ವನಿ ಕೇಳಿದ್ದು ಇದೆ ರೇಡಿಯೋದಿಂದ, ಚಿಕ್ಕವಯಸ್ಸಿನಲ್ಲೇ ನನಗೆ ಕಾಳಿಂಗರಾಯರ, ಸುಬ್ಬಲಕ್ಷ್ಮಿಯವರ, ವಸಂತಕುಮಾರಿಯವರ, ಭೀಮಸೇನ ಜೋಷಿಯವರ , ಮಲ್ಲಿಕಾರ್ಜುನ ಮನ್ಸೂರರ ಹಾಗು ಇನ್ನೂ ಬಹಳಷ್ಟು ಮಹನೀಯರ ಹಾಡುಗಳ ಕೇಳುವ ಸೌಭಾಗ್ಯ ಕರುಣಿಸಿದ.

ಇನ್ನು ವಾರ್ತಾವಾಚಕರಾದ ಶ್ರೀಯುತರಾದ ಉಪೇಂದ್ರ ರಾವ್, ರಂಗರಾವ್, ಶುಭಾದಾಸ್, ರಾಮ್ ಕೃಷ್ಣ , ಪ್ರದೇಶ ಸಮಾಚಾರ ವಾಚಕರಾದ ಎಂ. ಎಸ. ಪುರುಷೋತ್ತಮ್ , ನಾಗಮಣಿ ಎಸ. ರಾವ್. ಕೃಷಿ ದರ್ಶನ ಕಾರ್ಯಕ್ರಮದ ಜಯಣ್ಣ , ಮನೆಯ ಮಾತಿನ ಏ.ಎಸ ಮೂರ್ತಿ , ಇವರೆಲ್ಲರೂ ನನಗೆ ಪ್ರತಿನಿತ್ಯ ರೇಡಿಯೋ ದಲ್ಲಿ ಸ್ವಚ್ಛ ಕನ್ನಡ ಮಾತಾಡಿ ಅಂದಿನ ಸೂಪರ್ ಸ್ಟಾರ್ ಗಳಾಗಿ ಪ್ರತಿ ಕನ್ನಡಿಗನ ಮನದಲ್ಲಿ ನೆಲೆ ಕಂಡಿದ್ದರು. ಹಾಗೂ ಹೀಗೂ ಹೈ ಸ್ಕೂಲ್ ತಲುಪಿದ ನನಗೆ ಕನ್ನಡ ಕಾರ್ಯಕ್ರಮದ ಜೊತೆಗೆ ಹಿಂದಿ ಹಾಡುಗಳು ಪ್ರಿಯವೆನಿಸಿ ಶ್ರೀ ಲಂಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ , ಹಾಗು ವಿವಿಧ ಭಾರತಿ ಕೇಂದ್ರಗಳ ಪರಿಚಯವಾಗಿ ಮನ್ನಾ ಡೇ, ಮೊಹಮದ್ ರಫಿ, ಮುಖೇಶ್, ಮಹೇಂದ್ರ ಕಪೂರ್, ಕಿಶೋರ್ ಕುಮಾರ್, ಲತಾ-ಉಷಾ ಮಂಗೇಶ್ಕರ್ ಗಳು, ಆಶಾ ಭೋಂಸ್ಲೆ, ಗೀತಾ ದತ್ ಇವರ ಹಾಡಿನ ಮೋಡಿಗೆ ಬಿದ್ದಿದ್ದೆ.

ನಂತರ ಮೈಸೂರಿನ ನನ್ನ ಸಂಭಂದಿ ಕೇಳಿಸಿದ ಇಂಗ್ಲೀಶ್ ಹಾಡಿನ ಸಂಗೀತಕ್ಕೆ ಮನಸೋತು ಅಂತರಾಷ್ಟ್ರೀಯ ರೇಡಿಯೋ ಕೇಂದ್ರಗಳ ಹುಡುಕಾಟ ನಡೆಸಲು ಶುರುಮಾಡಿದೆ. 25 ನೆ ಮೀಟರ್ ಬ್ಯಾಂಡಿನಲ್ಲಿ ಶ್ರೀಲಂಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ , ಬಿ.ಬಿ. ಸಿ. ರೇಡಿಯೋ ದೊಇ ಛೆ ಬೆಲ್ಲ ಜರ್ಮನಿ,ಅರ್ಥವಾಗದ ಅರೇಬಿಯನ್ , ಜಪಾನಿ,ಚೀನಿ ಭಾಷೆಗಳ ಕಾರ್ಯಕ್ರಮಗಳ ಭರಾಟೆ., 31 ನೆ ಬ್ಯಾಂಡಿನಲ್ಲಿ ರೇಡಿಯೋ ಮಾಸ್ಕೋ , ವಿ.ಓ.ಏ .[ವಾಯ್ಸ್ ಆಫ್ ಅಮೇರಿಕ , ವಿವಿಧ ಭಾರತಿ, ಶ್ರೀಲಂಕಾ ಬ್ರಾಡ್ಕಾಸ್ಟಿಂಗ್ ಕೋ. ಇಂಗ್ಲಿಷ್ , ಇವುಗಳ ಜಾಲ,13 , 16 , 19 ಮೀಟರ್ ಬ್ಯಾಂಡಿನಲ್ಲಿ ರೇಡಿಯೋ ಆಸ್ಟ್ರೇಲಿಯ , ಬಿ ಬಿ ಸಿ , ಏ. ಬಿ. ಸಿ. ಕೊರಿಯನ್ , ಉರ್ದು ,ಇವುಗಳ ಜಾಲ ಹರಿದಾಡುತ್ತಿತ್ತು. ರಜೆ ಬಂತೆಂದರೆ ಇವುಗಳ ಜಾಲಾಟದಲ್ಲಿ ದಿನ ಕಳೆದದ್ದು ತಿಳಿಯುತ್ತಿರಲಿಲ್ಲ.ಇವುಗಳ ಜಾಲಾಟದಲ್ಲಿ ನಾನು ಮೈಕೆಲ್ ಜಾಕ್ಸನ್ , ಲೈಒನೆಲ್ ರಿಚಿ , ಬೀಟಲ್ಸ್ , ಒಸಿಬಿಸ್ಸಾ , ಬೋನಿ ಎಂ,ಅಬ್ಬಾ ಡೋನಾ ಸುಮ್ಮರ್, ಎಲ್ವಿಸ್ ಪ್ರೀಸ್ಲೆ, ಬಕಾರ , ಬಹಳಷ್ಟು ಪಾಪ್ ಗಾಯಕರ ಸಂಗೀತ ಕೇಳಿದ್ದೆ.

ಬಿ.ಬಿ.ಸಿ ವಾರ್ತೆ ಕೇಳಿದ್ದೆ, ರೇಡಿಯೋ ಆಸ್ಟ್ರೇಲಿಯಾದ ನಿರೂಪಕ ಭಾರತೀಯ ಸಂಜಾತ ಚಕ್ರಪಾಣಿ ದ್ವನಿ ಕೇಳಿದ್ದೆ. ನನ್ನ ಜೀವನದಲ್ಲಿ ಅರ್ಥ ಪೂರ್ಣ ಮಾಹಿತಿ ನೀಡಿದ ನನ್ನ ಗೆಳೆಯ ಇಂದು ಬೆಲೆ ಇಲ್ಲದವನಾಗಿ ಅರೋಗ್ಯ ಸರಿ ಇಲ್ಲದೆ ಮೂಲೆ ಯಲ್ಲಿ ಕುಳಿತಿದ್ದಾನೆ. ಇವನನ್ನು ಸರಿಪಡಿಸಲು ಬಿಡಿ ಬಾಗ ಸಿಗದೆಂದು ತಾಂತ್ರಿಕ ಪರಿಣಿತರು ಕೈಚೆಲ್ಲಿ ಕುಳಿತ್ತಿದ್ದಾರೆ. ಕೆಲವರು ಇವನನ್ನು ನೋಡಿದರೆ ಏನ್ ಸಾರ್ ಈ ಟೀ. ವಿ ಕಾಲದಲ್ಲಿ ಇದನ್ನು ಯಾಕೆ ರಿಪೇರಿ ಮಾಡಿಸಲು ಹೆಣಗುತ್ತಿರಿ ಅಂಥಾ ಬುದ್ದಿ ಹೇಳುತ್ತಾರೆ. ಮೂಲೆಯಲ್ಲಿ ನನ್ನ ಅಸಹಾಯಕ ರೇಡಿಯೋ ನಮ್ಮಿಬ್ಬರ ಸಂಭಂದಕ್ಕೆ ಬೆಲೆ ಇಲ್ಲ ವೆಂದು ಅರಿತು , ಗತಕಾಲದ ನೆನಪು ಗಳ ಮೆಲಕು ಹಾಕುತ್ತಾ ಮೂಲೆಯಲ್ಲಿ ಕುಳಿತಿದೆ.

ಇವತ್ತು ಕಣ್ಣಿಗೆ ಬಿದ್ದ ಈ ಅಪರೂಪದ ಜೀವದ ಗೆಳೆಯನಿಗೆ ಜೀವ ಕೊಡಲಾಗದೆ ಅಸಹಾಯಕನಾಗಿ ನೆನಪಿನ ಕಥೆಗಳ ಕಾಣಿಕೆ ನೀಡಿ ಸ್ಮರಿಸಿದ್ದೇನೆ.[ಹಾಗೆ ಇವನ ಅರೋಗ್ಯ ಸರಿ ಮಾಡುವ ನುರಿತ ತಂತ್ರಜ್ನರಿದ್ದರೆ ದಯಮಾಡಿ ತಿಳಿಸಿ

. ನನ್ನ ಬಾಲ್ಯದ ಗೆಳೆಯನನ್ನು ಉಳಿಸಿಕೊಳ್ಳುತ್ತೇನೆ.]ಗೆಳೆಯ ನಮ್ಮ ಸ್ನೇಹದ ದಿನಗಳು ಚಿರಾಯು ನಿನ್ನನ್ನು ಇಷ್ಟುದಿನ ಮರೆತದಕ್ಕೆ ನನ್ನ ಕ್ಷಮಿಸಿಬಿಡು!!

2 ಟಿಪ್ಪಣಿಗಳು (+add yours?)

 1. prakashchandra
  ಫೆಬ್ರ 16, 2011 @ 10:55:24

  Ee kaaladalli snehitharannu smarisikolluva nimmantha sahrudayarige namanagalu. nimma snehithana kaayile yaavudendu thilisillavalla…?

  ಉತ್ತರ

 2. Pramod
  ಫೆಬ್ರ 16, 2011 @ 08:28:22

  Super friend. Even I had a such a friend.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: