ಜೋಗಿ ಬರೆಯುತ್ತಾರೆ: ಇಲ್ಲಿ ಸಲ್ಲದ ಮಾತು…

(ಮಮತಾ ಜಿ. ಸಾಗರ ಲೇಖನಗಳ ಸಂಗ್ರಹಕ್ಕೆ ಜೋಗಿ ಬರೆದ ನಾಲ್ಕು ಮಾತು)

ಮಮತಾ ಸಾಗರ

ಯಾವುದೋ ಅಜ್ಞಾತ ದೇಶಗಳಲ್ಲಿ, ಅಪರಿಚಿತ ಕವಿಗಳ ಜೊತೆ ಓಡಾಡಿಕೊಂಡಿದ್ದು ಒಂದಾನೊಂದು ದಿನ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ, ನಮಗೇ ಗೊತ್ತೇ ಇಲ್ಲದ ಅದ್ಯಾವುದೋ ಭಾಷೆಯ ಕವಿಯನ್ನು ಹಿಡಿದು ತಂದು ಮುಂದೆ ಕೂರಿಸಿ, ಸೂಫಿ ಹಾಡುಗಳನ್ನು ಕೇಳಿಸಿ, ಸುಮ್ಮನೆ ಊಟ ಹಾಕಿಸಿ, ಒಮ್ಮೆ ಎತ್ತರದ ಮನೆಯ ರಾಣಿಯಂತೆಯೂ ಮತ್ತೊಮ್ಮೆ ಬಾಲ್ಯಗೆಳೆತಿಯಂತೆಯೂ ಇನ್ನೊಮ್ಮೆ ಅದಮ್ಯ ಜೀವನೋತ್ಸಾಹದ ಬತ್ತದ ಸೆಲೆಯಂತೆಯೂ ಭಾಸವಾಗುತ್ತಾರೆ ಮಮತಾ. ಇವರ ಮನೆ ಏಳು ಸುತ್ತಿನ ಕೋಟೆಯಂತೆಯೂ ವೀರಪಾಂಡೆ ಕೋಟ್ಟೈಯಿಲೆ ಎಂಬ ಹಾಡಲ್ಲಿ ಕಾಣಿಸುವ ದುರ್ಗದಂತೆಯೂ ನನಗೆ ಕಂಡು ಬೆಕ್ಕಸ ಬೆರಗಾಗಿಸಿದೆ. ವಿಶ್ವವಿದ್ಯಾಲಯ, ಕವಿಗೋಷ್ಠಿ, ನಾಟಕ, ಸಿನಿಮಾ, ಶಂಕರಪುರದ ಇಡ್ಲಿ, ಗಂಭೀರ ಚಿಂತನೆ, ತುಂಟಮಾತು, ಶರಂಪರ ಜಗಳ, ಜಿದ್ದಾಜಿದ್ದಿ, ಯಾವತ್ತೂ ಒಂದೇಟಿಗೆ ಸಿಗದ ಮೊಬೈಲು, ಬಗಲಿಗೆ ಬಿದ್ದ ಎಚ್ ಎನ್ ಆರತಿ -ಇವೆಲ್ಲ ಸೇರಿದರೆ ಮಮತಾ ಸಾಗರ ಭರ್ತಿ ಮತ್ತು ಪೂರ್ತಿ.

ಅವರ ಬರಹ

ಈಕೆಯ ಕುರಿತು ಹೊಟ್ಟೆಕಿಚ್ಚು. ಈಕೆಯ ಸುತ್ತಾಟದಲ್ಲಿ ಹುಟ್ಟುವ ಕವಿತೆ, ಎದುರಾಗುವ ಅನುಭವ, ಸಿಕ್ಕುವ ಸ್ತ್ರೀಪುರುಷರು, ಮನೆಯಾಳು, ಲಕ್ಷ್ಮಿ, ಸೂಫಿ, ಈಸೋಪ- ಎಲ್ಲರೂ ಸೇರಿದ ಶ್ರೀಮಂತ ಚರಿತೆ ಇದು. ಇಲ್ಲಿ ಸಲ್ಲುವ ಮಾತು ಅಲ್ಲಿಯೂ ಸಲ್ಲುತ್ತದೆ ಎಂದು ನಂಬುವುದು ಕತೆಗಾರ. ಅದು ಎಲ್ಲೆಲ್ಲಿಯೂ ಸಲ್ಲುತ್ತದೆ ಎಂದು ಭ್ರಮಿಸುವುದು ವಿಮರ್ಶಕ. ಎಲ್ಲ ಕಾಲಕ್ಕೂ ಸಲ್ಲುತ್ತದೆ ಎನ್ನುವ ಭರವಸೆ ಕವಿಗೆ. ಅದು ನಿಜದ ನಂಬುಗೆ ಕೂಡ.

ಮಮತಾ ಬರೆದ ಗದ್ಯ ಒಂದೇ ಗುಟುಕಿಗೆ ಓದುತ್ತಾ ಹೋದಾಗ ಎದುರಾದದ್ದು ವೈವಿಧ್ಯಮಯ ಅನುಭವಗಳ ಸಂತೆ. ಮಮತಾ ಯಾಕೆ ಕಾದಂಬರಿ ಬರೆಯಬಾರದು ಎಂಬ ಪ್ರಶ್ನೆ. ಎಂದೂ ತೀರ ಭಾವುಕವಾಗಿ ಮಾತಾಡದ, ಆದರೆ ಆರ್ದ್ರತೆ ಕಳೆದುಕೊಳ್ಳದ ಮಮತಾ ಬರಹ, ಆಕೆಯ ಖಾಸಗಿ ಡೈರಿಯಂತಿದೆ. ಆಕೆ ಮನಸ್ಸಿನಲ್ಲೇ ಮಾಡಿಕೊಂಡ ಟಿಪ್ಪಣಿಯಂತಿದೆ. ಇವು ಮುಂದೊಂದು ದಿನ ಕತೆಯಾಗಿಯೋ ಕವಿತೆಯಾಗಿಯೋ ಆತ್ಮಕತೆಯಾಗಿ ಮರುರೂಪ ತಳೆಯುವುದರಲ್ಲಿ ನನಗಂತೂ ಅನುಮಾನವಿಲ್ಲ. ಮಮತಾಗೂ ಆ ಅನುಮಾನ ಬೇಕಿಲ್ಲ.

ಸುಮ್ಮನೆ ಟಿಪ್ಪಣಿ

ಯಾವ ದಿಕ್ಕಿನಿಂದ ಬೀಸಿದರೂ ಗಾಳಿ ಗಾಳಿಯೇ. ಯಾವ ಋತುವಿನಲ್ಲಿ ಸುರಿದರೂ ಮಳೆ ಮಳೆಯೇ. ಅಕಾಲದಲ್ಲಿ ಕೆಂಡಸಂಪಿಗೆ ಅರಳುವುದನ್ನು ಕಂಡ ಹೆಣ್ಮೊಬ್ಬಳು ತನಗೆ ವಯಸ್ಸಾಯಿತು, ಹೂವಿನ ತಪ್ಪಿಲ್ಲ, ತನ್ನ ಲೆಕ್ಕಾಚಾರವೇ ತಪ್ಪು ಎಂದು ಭಾವಿಸುತ್ತಾಳೆ. ಆಗ ಹೂವು ಹೇಳುತ್ತದೆ:

ನಿನ್ನ ಲೆಕ್ಕಾಚಾರದಲ್ಲಿ ತಪ್ಪಿಲ್ಲ. ನಾನು ಕಾತರತೆ ತಡೆಯಲಾರದೆ ಅರಳಿದೆ. ಮುಂದಿನ ವರ್ಷದ ಹೊತ್ತಿಗೆ ನಿನಗೆ ಮತ್ತಷ್ಟು ವಯಸ್ಸಾಗಿರುತ್ತದೆ. ನನ್ನನ್ನು ನೋಡುವ ಆಸಕ್ತಿಯನ್ನೂ ನೀನು ಕಳೆದುಕೊಳ್ಳಬಹುದೆಂಬ ಭಯ ನನಗೆ.

ನಮ್ಮೆಷ್ಟೋ ಅನುಭವಗಳು ಆ ಹೂವಿನಂತೆಯೇ ಮಾತಾಡುತ್ತವೆ. ಮತ್ತೊಂದು ಗಳಿಗೆಯಲ್ಲಿ ಅವುಗಳ ಮೇಲಿನ ಆಸಕ್ತಿಯನ್ನು ನಾವು ಕಳಕೊಳ್ಳಬಹುದು, ಅವನ್ನು ಕಡೆಗಣಿಸಬಹುದು ಎಂಬ ಏಕೈಕ ಕಾರಣಕ್ಕೆ ಆ ಕ್ಷಣವೇ ನಮ್ಮಿಂದ ಬರೆಯಿಸಿಕೊಳ್ಳುವಷ್ಟರ ಮಟ್ಟಿಗೆ ಪೀಡಿಸುತ್ತದೆ

ಕವಿಗೆ, ಕತೆಗಾರನಿಗೆ ಅದು ಅನಿವಾರ್ಯ ಋತುವಿಲಾಸ.

ಮಮತಾ ಬರೀತಿರಲಿ. ಕೆಂಡಸಂಪಿಗೆ ಆಕೆಯ ಜೊತೆ ಮಾತಾಡುತ್ತಿರಲಿ.

3 ಟಿಪ್ಪಣಿಗಳು (+add yours?)

 1. ಪ್ರಜ್ಞಾ
  ಫೆಬ್ರ 17, 2011 @ 08:52:25

  ಮಮತಾ ಅವ್ರನ್ನ ನಾನು ಜಾಸ್ತಿ ಓದಿಲ್ಲ. ಆದ್ರೆ ಅವ್ರ ಬಗ್ಗೆ ನೀವು ಬರೆದಿರೋದು ಇಷ್ಟವಾಯ್ತು!
  -ಪ್ರಜ್ಞಾ

  ಉತ್ತರ

 2. Gubbachchi Sathish
  ಫೆಬ್ರ 15, 2011 @ 22:17:46

  chennagide…

  ಉತ್ತರ

 3. Sushrutha
  ಫೆಬ್ರ 15, 2011 @ 18:16:17

  ಲೈಕ್ಡೂ….. 🙂

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: