ಚಂದ್ರಶೇಖರ ಆಲೂರು ಕಾಮೆಂಟರಿ: ಅಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿ ಒಟ್ಟಾಗಿ ನೆಲೆಸಲಿ

ಇಲ್ಲಿ ಚಂದ್ರಶೇಖರ್ ಆಲೂರು ಅವರು ಈಜಿಪ್ಟ್ ಬಗ್ಗೆ ತಮ್ಮ ಸ್ಪೆಷಲ್ ಒಳನೋಟವನ್ನು ನೀಡಿದ್ದಾರೆ. ಈ ಲೇಖನ ಬರೆಯುವ ವೇಳೆಗೆ ಮುಬಾರಕ್ ರಾಜಿನಾಮೆ ಘೋಷಿಸಿರಲಿಲ್ಲ.

ಅರಬ್ ಲೋಕವನ್ನು ಆವರಿಸಿದ ‘ಜಾಸ್ಮಿನ್ ಕ್ರಾಂತಿ’ಯ ಕಂಪು

chitra: satish Acharya

ಯಾವಾಗಲೂ ಮೊದಲು ಕೆಟ್ಟದ್ದೇ ನೆನಪಾಗುತ್ತದೆ ಎನ್ನುತ್ತಾರೆ. ಅಥವಾ ಮನಸ್ಸು ಕೆಡುಕನ್ನೇ ನಿರೀಕ್ಷಿಸುತ್ತದೆ. ಈಗ ಆಗಿದ್ದು ಅದೇ. ಅದೇಕೋ ಈಜಿಪ್ಟಿನ ಕೈರೊ, ಅಲೆಗ್ಝಾಂಡ್ರಿಯಾ, ಸುಯಜ್ ಮುಂತಾದ ನಗರಗಳಲ್ಲಿ ಆರಂಭದ ದಿನ ಬಂದ ಜೀನ್ಸ್ ಪ್ಯಾಂಟ್ ಟಿ-ಶರ್ಟ್ ನ ಯುವಕ ಯುವತಿಯರನ್ನು ಕಂಡಾಗ ನೆನಪಿಗೆ ಬಂದದ್ದು ೧೯೮೯ರಲ್ಲಿ ಚೈನಾದ ತಿಯಾನ್ ಮನ್ ಚೌಕದಲ್ಲಿ ನಡೆದ ಘಟನೆ. ಆರಂಭದ ದಿನ ಬಂದವರು ಚೈನಾ ಯುನಿವರ್ಸಿಟಿಯ ಐನೂರು ವಿದ್ಯಾರ್ಥಿಗಳು. ನಂತರ ಪ್ರತಿಭಟನೆ ತೀವ್ರವಾಗುತ್ತಾ ಹೋದಂತೆ ಚೈನಾದ ನಾಲ್ಕುನೂರು ನಗರಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಅಂದು ಬೀಜಿಂಗ್ ನ ತಿಯಾನ್ ಮನ್ ಚೌಕ ಸೇರಿದರು. ಎಲ್ಲರಲ್ಲಿಯೂ ಇದ್ದುದು ಸ್ವಾತಂತ್ರ್ಯದ ಅಭೀಪ್ಸೆ . ಚೈನಾದ ಕಮ್ಯುನಿಸ್ಟ್ ಆಡಳಿತ ಏಳು ವಾರಗಳ ಕಾಲ ಇದನ್ನು ಸಹಿಸಿ ನಂತರ ಎಲ್ಲ ವಿದೇಶಿ ಮಾಧ್ಯಮದವರನ್ನೂ ದೇಶದಿಂದ ಹೊರ ಹಾಕಿ ಜೂ. ನಾಲ್ಕರಂದು ಬೀಜಿಂಗ್ ನಲ್ಲಿ ಸೈನ್ಯದ ಕಾರ್ಯಾಚರಣೆ ನಡೆಸಿ ತನ್ನ ಮಕ್ಕಳನ್ನೇ ಹೊಡೆದು ಸಾಯಿಸಿ ಹುಳುಗಳಂತೆ ಹೊಸಕಿ ಹಾಕಿತು. ಸಾವಿರಾರು ಮಕ್ಕಳು ಈ ಕ್ರೂರ ಕೃತ್ಯದಿಂದ ಹತರಾದರೂ ಬೀಜಿಂಗ್ ಏನೇನೂ ಆಗಿಲ್ಲ ಎಂಬಂತೆ ಮರುದಿನವೇ ಮಡಿಮಾಡಿಕೊಂಡು ನಿಂತು ಬಿಟ್ಟಿತು.

ಆಗಲೂ ಹೊರ ಜಗತ್ತು ಮಕ್ಕಳ ಮೇಲಿನ ಈ ಕೃತ್ಯವನ್ನ ತೀವ್ರವಾಗಿ ಖಂಡಿಸಿತು. ಚೈನಾದ ಕಮ್ಯುನಿಸ್ಟ್ ಆಡಳಿತ ಅಮೆರಿಕ ಮತ್ತು ಯುರೋಪ್ ನ ದುಷ್ಟಪ್ರಭಾವದಿಂದ ಹಾಳಾಗಿದ್ದ ಮಕ್ಕಳನ್ನ ಸರಿ ದಾರಿಗೆ ತಂದುದಾಗಿ ಹೇಳಿಕೊಂಡಿತು.

ಚೈನಾದಲ್ಲಿರುವುದು ಕಮ್ಯುನಿಸ್ಟ್ ಆಡಳಿತವಾದರೆ ಈಜಿಪ್ಟ್ ನಲ್ಲಿರುವುದು ಏಕವ್ಯಕ್ತಿಯ ‘ಪ್ರಜಾಪ್ರಭುತ್ವ’. ಈಜಿಪ್ಟ್ ನ ಪಾರ್ಲಿಮೆಂಟ್ ಗೆ ನಾಲ್ಕು ನೂರ ಹದಿನಾಲ್ಕುಸದಸ್ಯರು ಜನರಿಂದ ಆಯ್ಕೆಯಾಗುತ್ತಾರೆ. ಆದರೆ ಮೂವತ್ತು ವರ್ಷಗಳಿಂದ ಹೊಸ್ನೆ ಮುಬಾರಕ್ . ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಅಣಕ ಮಾಡುತ್ತಾನೆ. ಚುನಾವಣೆ ಎಂಬುದು ಹೆಸರಿಗೆ ಮಾತ್ರ . ಹಲವು ಕ್ರಾಂತಿಗಳನ್ನ , ಅನವರತ ರಕ್ತಪಾತವನ್ನು ಕಂಡ ರಾಷ್ಟ್ರ ಬಯಸುವುದು ಪ್ರಜಾಪ್ರಭುತ್ವವನ್ನಲ್ಲ, ಶಾಂತಿ ಮತ್ತು ಸ್ಥಿರತೆಯನ್ನ ಎಂಬುದನ್ನ ಅರಿತಿದ್ದ ಮುಬಾರಕ್ ಮೂವತ್ತು ವರ್ಷಗಳಿಂದ ಎಲ್ಲ ಬಗೆಯ ವಿರೋಧವನ್ನೂ ಹಣಿದು ಹಾಕಿದ. ಈಜಿಪ್ಟ್ ನಲ್ಲಿ ಶಾಂತಿ ಮತ್ತು ಸ್ಥಿರತೆತಂದಿರುವುದಾಗಿ ಹೇಳಿಕೊಂಡ. ನಮ್ಮ ದೇಶದ ಈಚಿನ ಚುನಾವಣೆಗಳು, ಪಕ್ಷಾಂತರ ರಾಜಕಾರಣಿ-ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟತೆಯನ್ನು ಕಂಡಾಗ ಮಿತ ಸರ್ವಾಧಿಕಾರ ಇದಕ್ಕೆ ಪರಿಹಾರವೇನೋ ಅನ್ನಿಸಿ ಬಿಡುತ್ತದೆ. ಆದರೆ ಸರ್ವಾಧಿಕಾರಕ್ಕೆ ಮಿತಿ ಎಂಬುದು ಇಲ್ಲ . ಇದಕ್ಕೆ ಮುಬಾರಕ್ ನೇ ಉದಾಹರಣೆ. ಆತ ಇಂದು ಹಲವು ಲಕ್ಷ ಕೋಟಿ ರುಪಾಯಿಗಳ ಒಡೆಯ. ಅಮೆರಿಕಾ ಮತು ಯುರೊಪ್ ನಲ್ಲಿ ಅಪಾರ ಆಸ್ತಿ ಮಾಡಿದ್ದಾನೆ. ಹಾಗೆಯೇ ಆತನ ಸಹಾಯಕರು ಮತ್ತು ಚೇಲಾಗಳುಕೂಡ ಕೊಬ್ಬಿದ್ದಾರೆ.

ಹೀಗಾಗಿ ನೂರಾರು ಫ್ಲೈ ಓವರ್ ಗಳ ನಗರ ಕೈರೊದಲ್ಲಿ ಅಧಿಕಾರ, ಆಸ್ತಿ , ಸಂಪತ್ತು ಕೇವಲ ಕೆಲವೇ ಮಂದಿಯಲ್ಲಿ ಹಂಚಿ ಹೋಗಿದೆ. ಉಳ್ಳವರು ಮತ್ತುಇಲ್ಲದವರ ನಡುವಣ ಕಂದರ ಹೆಚ್ಚಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಇಡೀ ಅರಬ್ ನ ಸಾಂಸ್ಕೃತಿಕ ರಾಜಧಾನಿಯಂತಿರುವ ಕೈರೊ ಹಲವು ವಿಶ್ವವಿದ್ಯಾನಿಲಯಗಳ ಆಗರ. ಈ ಯೂನಿವರ್ಸಿಟಿಗಳಿಂದ ಹೊರಬರುತ್ತಿರುವ ಪದವೀಧರರಿಗೆ ಉದ್ಯೋಗವಿಲ್ಲ. ಉದ್ಯೋಗದಲ್ಲಿರುವವರಿಗೂ ಸರಿಯಾದ ಸಂಬಳವಿಲ್ಲ . ಅಲ್ಲದೆಸಂಬಳ-ಸಾರಿಗೆಯನ್ನು ಮೀರಿದ ಸ್ವಾತಂತ್ರ್ಯದ ವಾಂಛೆ ಯುವ ಚೇತನಗಳಲ್ಲಿ ಕಿಚ್ಚು ಮತ್ತು ಕೆಚ್ಚನ್ನು ಮೂಡಿಸಿದೆ.

 

ಅಂತೆಯೇ ಆರಂಭದ ಎರಡು ದಿನ ಬೀದಿಗೆ ಬಂದವರು ಕಾಲೇಜು ವಿದ್ಯಾರ್ಥಿಗಳು ಮತ್ತು ತರುಣ ತರುಣಿಯರೇ. ನಂತರ ಹೆಡ್ ಸ್ಕಾರ್ಫ್ ಧರಿಸಿದ ಯುವತಿಯರು, ಬುರ್ಖಾಧಾರಿ ಮಹಿಳೆಯರು, ಮಧ್ಯವಯಸ್ಕರು ತಾಹ್ರಿರ್ ಸ್ಕ್ವೇರ್ ತಲುಪಿದರು. ನಂತರ ಬಂದವರು ಅರಬ್ ಜಗತ್ತಿನಲ್ಲಿ ಸಾಕಷ್ಟು ಪ್ರಭಾವ ಉಳಿಸಿಕೊಂಡಿರುವ ಮುಸ್ಲಿಂ ಬ್ರದರ್ ಹುಡ್ ನವರು. ನಂತರ ಅಲ್ಲಿ ಎಲ್ಲ ಪ್ರಭುತ್ವ ವಿರೋಧಿಗಳೂ ಸೇರಿಕೊಂಡರು. ನೂರಾರು, ಸಾವಿರಾರು ವಿದ್ಯಾರ್ಥಿನಿಯರು, ಶಿಕ್ಷಕಿಯರು, ಇತರೆ ಉದ್ಯೋಗಸ್ಥ ಮಹಿಳೆಯರು ರಸ್ತೆಗಳಲ್ಲಿಯೇ ಮಲಗಿದರು. ಮೊದಲ ಶುಕ್ರವಾರದ ಪ್ರಾರ್ಥನೆಯ ನಂತರ ಕೈರೊ, ಅಲೆಗ್ಝಾಂಡ್ರಿಯಾ, ಸೂಯಜ್ ಮುಂತಾದ ನಗರಗಳಲ್ಲಿ ಸೇರಿದ ಜನ ಸಮೂಹವನ್ನು ಕಂಡು ಮುಬಾರಕ್ ಬೆಚ್ಚಿದ. ಸೈನ್ಯ ಕೂಡ ಹಿಂಜರಿಯಿತು. ಬಹುಶಃ ಇಪ್ಪತ್ತೊಂದನೆಯ ಶತಮಾನದ ಅಭೂತಪೂರ್ವ ಪ್ರತಿಭಟನೆ ಇದು.

 

ಮುಬಾರಕ್ ನ ಆಡಳಿತದಿಂದ ಈಜಿಪ್ಟ್ ನ ಜನತೆ ಎಷ್ಟೊಂದು ರೋಸಿ ಹೋಗಿದ್ದರೆಂದರೆ ಅಲ್ಲಿ ಸೇರಿದವರೆಲ್ಲ ಸ್ವ ಇಚ್ಛೆಯಿಂದ ಬಂದವರೇ. ಆರಂಭದ ದಿನಗಳಲ್ಲಿ ಈ ಜನ ಸಮೂಹಕ್ಕೆ ನಾಯಕತ್ವವೇ ಇರಲಿಲ್ಲ . ಆದರೂ ಎಲ್ಲರೂ ಒಂದು ನೇಯ್ಗೆಯಂತೆ ಕಾಣುತ್ತಿದ್ದರು. ತನ್ನ ಸ್ವಾರ್ಥಕ್ಕಾಗಿ ಅರಬ್ ರಾಷ್ಟ್ರಗಳ ಸರ್ವಾಧಿಕಾರಿ ಪ್ರಭುತ್ವಗಳನ್ನ ನಿರಂತರವಾಗಿ ಪೋಷಿಸಿಕೊಂಡು ಬಂದಿರುವ ಅಮೆರಿಕಾ ಕೂಡ ಸ್ವಯಂ ಸೂ.ರ್ತಿಯಿಂದ ಸೇರಿದ ಜನ ಸಾಗರವನ್ನು ಕಂಡು ಬೆಚ್ಚಿತು. ಒಬಾಮ ಹೊರಗೆ ಮುಬಾರಕ್ ಗೆ ಎಚ್ಚರಿಕೆ ನೀಡಿ ಒಳಗೆ ಮುಬಾರಕ್ ಪದತ್ಯಾಗಕ್ಕೆ ಆತನ ಮನ ಒಲಿಸುವಂತೆ ತನ್ನ ಹಿತೈಷಿಗಳಿಗೆ ಸೂಚಿಸಿದ. (ಹಿಲರಿ ಕ್ಲಿಂಟನ್ ಮಾತುಗಳನ್ನು ಗಮನಿಸಿ)

 

ಈಕಾರಣದಿಂದಲೇ ಮುಬಾರಕ್ ಮುಂದಿನ ಸೆಪ್ಟಂಬರ್ ನಲ್ಲಿ ತಾನು ಅಧಿಕಾರದಿಂದ ಇಳಿಯುವುದಾಗಿಯೂ, ಮತ್ತೊಮ್ಮೆ ಸ್ಪರ್ಧಿಸುವುದಿಲ್ಲವೆಂದೂ ತಿಳಿಸಿದ. ಆದರೆ ಇಷ್ಟಕ್ಕೇ ಜನತೆ ಒಪ್ಪಲಿಲ್ಲ. ಆಗ ಸೈನ್ಯದ ಅಪೂರ್ವ ಸಂಯಮವನ್ನು ಕಂಡು ಗಲಿಬಿಲಿಗೊಂಡ ಮುಬಾರಕ್ ತನ್ನ ಖಾಸಗಿ ಸೈನ್ಯವನ್ನು ಅಂದರೆ ಗೂಂಡಾಗಳನ್ನುಅಸಹಾಯಕ ಜನತೆಯ ಮೇಲೆ ಛೂ ಬಿಟ್ಟ . ಈಜಿಪ್ಟಿನ ನಾಗರಿಕರು ಇದರಿಂದ ವಿಚಲಿತರಾದಂತೆ ಕಾಣುತ್ತಿಲ್ಲ .ಈಕ್ಷಣದಲ್ಲಿ ಮುಬಾರಕ್ ತೊಲಗಬೇಕು. ಆತನಿಗೆ ಕೊಂಚವೂ ಕಾಲಾವಕಾಶ ನೀಡಬಾರದು ಎಂದು ಜನತೆಯ ಅಭೀಪ್ಸೆ. ಜನ ಸಾಮಾನ್ಯನ ಸ್ವಯಂಸ್ಫೂರ್ತಿ ಈ ಪ್ರತಿಭಟನೆಯ ಬಹುದೊಡ್ಡ ಶಕ್ತಿ. ಹಾಗೆಯೇ ಈ ಹೋರಾಟದ ಬಹುದೊಡ್ಡ ಕೊರತೆ ಎಂದರೆ ಇಡೀ ಚಳವಳಿಗೆ ಒಂದು ನಾಯಕತ್ವ ಇಲ್ಲದಿರುವುದು. ಹರಿಯುವ ನದಿ ತನ್ನ ದಿಕ್ಕನ್ನು ಗುರುತಿಸಿಕೊಂಡಂತೆ ಹೋರಾಟವೇ ನಾಯಕತ್ವವನ್ನೂ ರೂಪಿಸಿಕೊಳ್ಳುತ್ತಿದೆ.

 

ಅಮೆರಿಕಾ ಮತ್ತು ಇಸ್ರೇಲ್ ನ ಸಖ್ಯಕ್ಕಾಗಿ ಅರಬ್ಬರು ಈಜಿಪ್ಟನ್ನು ದೂಷಿಸಿದರೂ ಇಂದಿಗೂ ಅರಬ್ ಲೋಕದ ಸಾಂಸ್ಕೃತಿಕ ನಾಯಕತ್ವ ಈಜಿಪ್ಟ್ ದೇ ಆಗಿದೆ. ಹೀಗಾಗಿ ಇಂದು ಈಜಿಪ್ಟ್ ಸೃಷ್ಟಿಸಿದ ಕಂಪನ ಇಡೀ ಅರಬ್ ಜಗತ್ತನ್ನ, ಎಲ್ಲ ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರಭುತ್ವವನ್ನೂ ತಲ್ಲಣಗೊಳಿಸಿದೆ. ಯೆಮೆನ್, ಜೋರ್ಡಾ.,ಸಿರಿಯಾ, ಅಲ್ಬೇನಿಯಾ, ಅಲ್ಜೀರಿಯಾ ಮುಂತಾದ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಜನತೆ ತಾವಾಗಿಯೇ ಬೀದಿಗೆ ಬಂದು ಸರ್ವಾಧಿಕಾರಿ ಆಡಳಿತದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಕೈರೋದ ತಾಹ್ರಿರ್ ಚೌಕದಲ್ಲಿ ಸೇರಿರುವ ಲಕ್ಷಾಂತರ ಜನತೆಯೇ ಈ ಹೋರಾಟಗಳಿಗೆ ಸ್ಫೂರ್ತಿ.

 

ಆದರೆ ಇಂಥ ಈಜಿಪ್ಟ್ ಗೂ ಸೂ.ರ್ತಿ ನೀಡಿದ್ದು ಮತ್ತೊಂದು ಆಫ್ರಿಕ. ರಾಷ್ಟ್ರ ಟ್ಯುನಿಷಿಯಾ. ಮೆಡಿಟರೇನಿಯನ್ ಕಡಲ ತೀರದಲ್ಲಿ ಲಿಬಿಯಾಮತ್ತು ಅಲ್ಜೀರಿಯಾ ದೇಶಗಳ ನಡುವೆ ಇರುವ ಪುಟ್ಟ ರಾಷ್ಟ್ರ ಟ್ಯುನಿಷಿಯಾ. ಇತರ ಅರಬ್ ರಾಷ್ಟ್ರಗಳಂತೆಯೇ ಇಲ್ಲಿಯೂ ಸರ್ವಾಧಿಕಾರಿಯ ಆಡಳಿತ. ೧೯೮೭ರಿಂದ ಇದುವರೆಗೂ ಆತನದ್ದೇ ನಿರಂಕುಶ ಪ್ರಭುತ್ವ. ಜಗತ್ತಿನ ಎಲ್ಲ ಬಹುದೊಡ್ಡ ಪಲ್ಲಟಗಳು, ಚಳವಳಿಗಳು, ಕ್ರಾಂತಿಗಳು ಯಾವುದೋ ಒಂದು ಸಣ್ಣ ಘಟನೆಯಿಂದ ಪ್ರೇರಿತವಾಗಿರುವುದೇ ಹೆಚ್ಚು . ಟ್ಯುನಿಷಿಯಾದಲ್ಲಿ ಆಗಿದ್ದು ಅದೇ. ಆ ದೇಶದ ಸಿಡಿ ಬೊಯೆಜ್ ಎಂಬ ಪುಟ್ಟ ಪಟ್ಟಣದಲ್ಲಿ ಮಹಮದ್ ಎಂಬಾತ ತಳ್ಳುಗಾಡಿಯಲ್ಲಿ ತರಕಾರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ . ಆಗಾಗ ಅತನ ಬಳಿ ಬಂದು ಗಲಾಟೆ ಮಾಡುವ ಪೊಲೀಸರಿಗೆ ಗೊಣಗಿಕೊಂಡೇ ಮಾಮೂಲಿ ಕೊಡುತ್ತಿದ್ದ . ಕಳೆದ ಡಿಸೆಂಬರ್ ೧೬ರಂದು ಇದೇ ಪುನರಾವರ್ತನೆ ಆಗುವುದರಲ್ಲಿತ್ತು . ಆದರೆ ವಿನಾಕಾರಣ ಸಿಟ್ಟಿಗೆದ್ದ ಪೊಲೀಸ್ ಅಧಿಕಾರಿ ಆತನನ್ನ ಥಳಿಸಿ, ಪೊಲೀಸ್ ಠಾಣೆಗೆ ಬರಲು ಹೇಳಿ, ನೂರಾರು ಜನರೆದುರು ಆತನನ್ನ ಅವಮಾನಿಸಿದರು. ಇದರಿಂದ ತೀವ್ರವಾಗಿ ನೊಂದ ಯುವಕ ಮರುದಿನ ಪಟ್ಟಣದ ಮಧ್ಯಭಾಗದಲ್ಲಿರುವ ವೃತ್ತದ ಬಳಿ ಬಂದು ಮೈ ಮೇಲೆಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ.

 

ಸರ್ಕಾರಿ ಒಡೆತನದ ದೂರದರ್ಶನ ಇದನ್ನು ಮರೆಮಾಚಿದರೂ ಫೇಸ್ ಬುಕ್ ಮತ್ತು ಯು-ಟ್ಯೂಬ್ ಗಳಲ್ಲಿ ಈ ಆತ್ಮಾಹುತಿ ಯತ್ನದ ವಿಡಿಯೊ ಪ್ರಸಾರವಾಯ್ತು . ಇದನ್ನು ನೋಡಿದ, ಸುದ್ದಿ ಕೇಳಿದ ಜನತೆ ರೊಚ್ಚಿಗೆದ್ದರು. ರಾಜಧಾನಿ ಟ್ಯುನಿಸ್ ಸೇರಿದಂತೆ ಎಲ್ಲೆಡೆ ಉಗ್ರ ಪ್ರತಿಭಟನೆಗಳು ನಡೆದವು. ಕ್ರಮೇಣ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಉದ್ಯೋಗಿಗಳು, ವಕೀಲರು, ವೈದ್ಯರು ಮುಂತಾಗಿ ಎಲ್ಲವರ್ಗದ ಜನ ಹೋರಾಟಕ್ಕೆ ಧುಮುಕಿದರು. ಸರ್ವಾ.ಕಾರಿಯ ಸೈನ್ಯ ಹಿಂಸಾಚಾರಕ್ಕೂ ಇಳಿಯಿತು. ಈ ನಡುವೆ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಮದ್ ಈ ವರ್ಷದ ಜನವರಿ ನಾಲ್ಕರಂದು ಮೃತನಾದ. ಪ್ರತಿಭಟನೆ ಮತ್ತಷ್ಟು ತೀವ್ರವಾಗಿ, ಇಡೀ ರಾಷ್ಟ್ರವೇ ರಸ್ತೆ ಸೇರಿತು. ಅಮೆರಿಕಾ ಮತ್ತು ಫ್ರಾನ್ ನ ಪರೋಕ್ಷ ಬೆಂಬಲವಿದ್ದರೂ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನ ಮನಗಂಡ ಸರ್ವಾಧಿಕಾರಿ ಬೆನ್ ಅಲಿ ಜನವರಿ ೧೫ರಂದು ಸೌದಿ ಅರೇಬಿಯಾಕ್ಕೆಪಲಾಯನ ಮಾಡಿದ. ಆ ಕ್ಷಣದಲ್ಲಿಯೇ ಈ ಹೋರಾಟ ‘ಜಾಸ್ಮಿನ್ ರೆವಲ್ಯೂಷನ್’ ಎಂದು ಖ್ಯಾತಿ ಪಡೆಯಿತು. ಈ ಜಾಜಿ ಮಲ್ಲಿಗೆಯ ಕಂಪು ಇಂದು ಇಡೀ ಅರಬ್ ಜಗತ್ತನ್ನ ವ್ಯಾಪಿಸಿದೆ.

 

ಟ್ಯುನಿಷಿಯಾದ ರಾಷ್ಟ್ರೀಯ ಪುಷ್ಪ ಜಾಸ್ಮಿನ್ ಹೆಸರು ಪಡೆದ ಈ ಕ್ರಾಂತಿ ಇಂದು ಇಡೀ ಪ್ರಪಂಚದ ಗಮನ ಸೆಳೆದಿದೆ. ಅರಬ್ ಜನತೆ ಪ್ರಜಾಪ್ರಭುತ್ವ , ಸ್ವಾತಂತ್ರ್ಯದ ಸಹಜ ಕಂಪನ್ನು ಆಘ್ರಾಣಿಸಲು ಕಾತುರರಾಗಿದ್ದಾರೆ. ಯಾವುದೇ ಕ್ರಾಂತಿ, ಚಳವಳಿಯ ಬಳಿಕ ಸರ್ವಾಧಿಕಾರಿಯೊಬ್ಬ ಉದಿಸುವುದು ಸುಲಭ, ಫ್ರೆಂಚ್ ಕ್ರಾಂತಿಯ ಕೂಸಾದ ನೆಪೋಲಿಯನ್ ನಂತೆ. ಅಥವಾ ಸೈನ್ಯ ಅಧಿಕಾರ ಹಿಡಿಯುವುದು ಇನ್ನೂ ಸುಲಭ. ಆದರೆ ಪ್ರಜೆಗಳೇ ದೊರೆಗಳಾದ ಪ್ರಜಾಪ್ರಭುತ್ವದ ಹಾದಿ ಕಠಿಣ. ಈಜಿಪ್ಟ್ ನಲ್ಲಿ ಕೂಡಾ ಈ ಪರಿವರ್ತನೆಯ ಹಾದಿ ಸುಗಮವಾಗಿಲ್ಲ . ಈಜಿಪ್ಟ್ ನ ಮುಕ್ಕಾಲು ಭಾಗ ಜನಸಂಖ್ಯೆ ಕೈರೊ, ಅಲೆಗ್ಝಾಂಡ್ರಿಯಾ, ಸೂಯಜ್, ಲಕ್ಸರ್, ಕಾರ್ನಾಕ್ ನಗರಗಳಲ್ಲಿ ಇರುವುದರಿಂದ ಜನಸೇರುವುದು ಸುಲಭವಾಯ್ತು . ಆದರೆ ಜನರೇ ಅಧಿಕಾರ ಪಡೆಯುವುದು? ಮುಬಾರಕ್ ಹಿಂದೆ ಸರಿದಂತೆ ಕಂಡರೂ ಅಷ್ಟೇ ಸುಲಭವಾಗಿ ಅಧಿಕಾರ ಬಿಡುವಂತೆಕಾಣುತ್ತಿಲ್ಲ . ೧೯೨೮ರಲ್ಲಿ ಜನ್ಮ ತಾಳಿದ ಮುಸ್ಲಿಂ ಬ್ರದರ್ ಹುಡ್ (ಅಲ್ ಇರ‍್ವಿನ್ -ಅಲ್ ಮುಸಿಲ್ಮನ್ )ನ ಮಂದಿ ತಾಹ್ರಿಸ್ ಚೌಕಕ್ಕೆ ಪ್ರತಿಭಟನೆಯ ನಾಲ್ಕನೆಯ ದಿನಕಾಲಿಟ್ಟು ಈಗ ಪ್ರಭಾವಿಗಳಾಗಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ ಅಂತಿಮವಾಗಿ ಸೈನ್ಯದ ನಿಲುವೇನು ಎಂಬುದು ಸ್ಪಷ್ಟವಾಗಿಲ್ಲ .

 

ಆದರೆ ಜನತೆಯ ಇಚ್ಛಾಶಕ್ತಿ ಮತ್ತು ಸ್ವಾತಂತ್ರ್ಯದ ಅಭೀಪ್ಸೆ ಈಜಿಪ್ಟನ್ನ ಮೂರು ದಶಕಗಳ ಕಾಲ ಆಳಿದ ಸರ್ವಾಧಿಕಾರಿ ಮುಬಾರಕ್ ನಿಂದ ಮುಕ್ತಗೊಳಿಸುವುದಂತೂ ಖಚಿತ.

 

***

 

ಇದನ್ನೆಲ್ಲ .ರೆಯುತ್ತಿರುವಾಗ ನನ್ನ ಎದೆಯಲ್ಲಿ ಒಂದು ಬಗೆಯ ತವಕ, ಅಲ್ಲಿನ ಅಮಾಯಕ ಜನತೆಗೆ ಏನಾಗುತ್ತದೋ ಎಂಬ ಆತಂಕ. ಇಂದು ಲಕ್ಷಾಂತರ ಜನಸೇರಿರುವ, ನೂರಾರು ಮಿಲಿಟರಿ ಟ್ಯಾಂಕರುಗಳು ಓಡಾಡುತ್ತಿರುವ ತಾಹ್ರಿರ್ ಚೌಕ, ರ್ಯಾಮ್ಸಸ್ ಚೌಕ, ಜಗದ್ವಿಖ್ಯಾತ ಮ್ಯೂಸಿಯಂ ರಸ್ತೆ, ರೇಲ್ವೆ ಸ್ಟೇಷನ್ ಮತ್ತು ನಿಲ್ದಾಣಗಳಿಗೆ ಸಾಗುವ ರಸ್ತೆಗಳು, ಪಿರಮಿಡ್ ನ ದೂರದ ಹಾದಿ, ನೂರಾರು ಫ್ಲೆ ಓವರ್ ಗಳು, ಅಲ್ಲಲ್ಲಿ ಪ್ರತ್ಯಕ್ಷವಾಗುವ ಮಲಿನಗೊಂಡ ನೈಲ್ , ಹಳೆಯ ಚರ್ಚುಗಳ ಕಾಷ್ಟಿಕ್ ಕೈರೊ, ಪುರಾತನ ಮಸೀದಿಗಳ ಇಸ್ಲಾಮಿಕ್ ಕೈರೊ… ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ಅಂತೆಯೇ ಮೆಡಿಟರೇನಿಯ. ಕಡಲ ತೀರದಲ್ಲಿ ಮೈಲಿಗಟ್ಟಲೆ ಹಬ್ಬಿರುವ ಅಲೆಗ್ಝಾಂಡ್ರಿಯಾದಲ್ಲಿ ದಿನವಿಡೀ ನಡೆದಾಡಿದ್ದು; ಸೂಯಜ್ ಕಾಲುವೆಯ ಬಳಿ ನಮ್ಮ ಟ್ಯಾಕ್ಸಿ ಡ್ರೈವರ್ ಪುಟ್ಟಿಯನ್ನು ಮೂಕ ಭಾಷೆಯಲ್ಲಿಮಾತಾಡಿಸಿ ಪರ್ಸ್ ನಲ್ಲಿ ಇಟ್ಟುಕೊಂಡಿದ್ದ ತನ್ನ ಮಗಳ ಭಾವಚಿತ್ರ ತೋರಿದ್ದು; ನಟ್ಟ ನಡು ರಾತ್ರಿಯಲ್ಲಿ ಕೈರೋದ ಬೀದಿಗಳಲ್ಲಿ ಪತ್ನಿ ಮತ್ತು ಮಗಳೊಂದಿಗೆಈಜಿಪ್ಟಿನ ವಿಶೇಷ ಸಿಹಿ ತಿನಿಸುಗಳು ಹಾಗೂ ಐಸ್ ಕ್ರೀಂ ತಿನ್ನುತ್ತಾ ಅಡ್ಡಾಡುತ್ತಿದ್ದುದು; ಕೆಂಪು ಸಮುದ್ರದ ಬೀಚ್ ಬಳಿ ಇದ್ದ ಅಂಗಡಿಯೊಂದರ ಮಾಲೀಕ (ಹರೆಯದಯುವಕ) ಐ ಲವ್ ಗಾಂಧೀಜಿ ಎಂದು ಗಾಂಧಿ ಸಿನೆಮಾದ .ಗ್ಗೆ ಚರ್ಚಿಸಿದ್ದು; ಹರ್ ಗಡಾದಿಂದ ಬರುವಾಗ ಅರೇಬಿಯನ್ ಸಿನೆಮಾವೊಂದರಲ್ಲಿ ತೋರಿದ ಹಂದಿಚಿತ್ರದ ದೃಶ್ಯ: ಭಾರತ್ . ಮಾತಾಕಿ ಜೈ … ಇದೆಲ್ಲಕ್ಕಿಂತ ಮಿಗಿಲಾಗಿ ಥೇಟು ಭಾರತೀಯರಂತೆಯೇ ಕಾಣುವ ಅಲ್ಲಿನ ಜನರು.

 

ಅಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿ ಒಟ್ಟಾಗಿ ನೆಲೆಸಲಿ.

 

 

1 ಟಿಪ್ಪಣಿ (+add yours?)

  1. shashi
    ಫೆಬ್ರ 13, 2011 @ 20:12:24

    great victory of the people….and by the people.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: