ಎಚ್ಚೆಸ್ವಿ ಬರೆಯುತ್ತಾರೆ: ಅದು ಮದುವೆ ಕಥೆ

ಚಳುವಳಿಕಾಲದಲ್ಲೊಂದು ಮದುವೆ ದಿಬ್ಬಣ…..

ಎಚ್.ಎಸ್.ವೆಂಕಟೇಶಮೂರ್ತಿ

ಭೀಮಜ್ಜಿ ಊರಿಗೆ ಬಂದಾಗ ನಾನು ಅವರ ಪಕ್ಕದಲ್ಲೇ ಮಲಗುತ್ತಿದ್ದೆ. ಕಾರಣ ಅವರು ನನಗೆ ಒಳ್ಳೊಳ್ಳೆ ಕಥೆ ಹೇಳುತಾ ಇದ್ದರು. ನನ್ನ ಕಂಚಿನ ತೇರು ಅಂತ ಪದ್ಯ ಇದೆಯಲ್ಲ, ಅದರ ಮೂಲ ಭಿತ್ತಿ ನನಗೆ ದೊರೆತದ್ದು ದೊಡ್ಡಜ್ಜಿಯಿಂದಲೇ. ಕೆಲವು ಸಾರಿ ಭೀಮಜ್ಜಿಯಂಥ ಕಥಾಸರಿತ್ಸಾಗರವೂ ಯಾಕೋ ಬತ್ತಿ ಹೋಗೋದು. ಎಲ್ಲಾ ಕಥೆ ಮುಗಿಯಿತಪ್ಪಾ….ಇನ್ನೇನು ಹೇಳ್ಳಿ ನಾನು?- ಅಂತ ಉದ್ಗಾರ ತೆಗೆಯುತ್ತಿದ್ದರು. ನಾನು ಸುಮ್ಮನಾಗುತ್ತಿರಲಿಲ್ಲ. ನೀನೇ ಹೊಸ ಕಥೆ ಕಟ್ಟಿ ಹೇಳು ಅನ್ನುತಾ ಇದ್ದೆ.

ಒಂದು ರಾತ್ರಿ ದೀಪ ಆರಿಸಿ ಎಲ್ಲಾ ಮಲಗಿದ ಮೇಲೆ…ನನಗೆ ನಿದ್ದೆ ಬರತಾ ಇಲ್ಲ…ಎನಾದರೂ ಕಥೆ ಹೇಳು- ಅಂತ ದೊಡ್ಡಜ್ಜಿಯನ್ನ ಕಾಡ ತೊಡಗಿದೆ. ದೊಡ್ಡಜ್ಜಿ ಸ್ವಲ್ಪ ಹೊತ್ತು ಏನೂ ಮಾತಾಡಲಿಲ್ಲ. ಕೊನೆಗೆ, ನಿಮ್ಮಮ್ಮನ ಮದುವೆ ಕಥೆ ಹೇಳುತೀನಿ ಕೇಳು ಅಂತ ಶುರು ಮಾಡಿದರು. ನಾನು ಅಂಗಾತ ಮಲಗಿದ್ದೆ. ಸೂರಿನ ತುಂಬ ಬೆಳಕಿನ ಕಿಂಡಿಗಳು ಕಾಣುತಾ ಇದ್ದವು. ಅದೊಳ್ಳೆ ಆಕಾಶದ ಹಾಗೇ ನನಗೆ ಕಾಣುತಾ ಇತ್ತು. ಬೆಂಗಟೆ ಬಳಿ ಇದ್ದ ಬೆಳಕಿಂಡಿ ಅಡ್ಡಂಬಡ್ಡ ಚಂದ್ರನ ಹಾಗಿತ್ತು. ಹೀಗೆ ನನ್ನದೇ ಆಕಾಶದ ಕೆಳಗೆ ಮಲಗಿ ನಾನು ನನ್ನ ಅಮ್ಮನ ಮದುವೆ ಕಥೆ ಕೇಳತೊಡಗಿದೆ.

********

ನಿಮ್ಮ ಅಮ್ಮನಿಗೆ ಹನ್ನೆರಡು ನಡೀತಾ ಇತ್ತು. ನಮ್ಮ ಮನೇಲಿ ನರಸಿಂಹ ಮೂರ್ತಿ ಅಂತ ಸ್ಕೂಲ್ ಮೇಷ್ಟ್ರು ಬಾಡಿಗೆಗೆ ಇದ್ದರು. ಅವರಿಗೆ ಬಸವಾಪಟ್ಣಕ್ಕೆ ವರ್ಗವಾಯಿತು. ಅವರು ಹೆಂಡತಿ ಇಬ್ಬರು ಮಕ್ಕಳನ್ನ ಇಲ್ಲೇ ಬಿಟ್ಟು ಬಸವಾಪಟ್ಣಕ್ಕೆ ಹೋದರು. ವಾರ ವಾರ ಬಂದು ಹೋಗಿ ಮಾಡುತಾ ಇದ್ದರು. ಅಲ್ಲಿ ಅವರು ನಾರಾಯಣಭಟ್ಟ ಅಂತ ಒಬ್ಬ ಹುಡುಗನ್ನ ನೋಡಿದಾರೆ. ಭಾಳ ಜಾಣನಂತೆ ಅವನು. ನೋಡಕ್ಕೂ ಲಕ್ಷಣವಾಗಿದ್ದನಂತೆ. ನಮ್ಮ ರತ್ನಂಗೆ ಇವನು ಒಳ್ಳೆ ಜೋಡಿ ಆಗ್ತಾನೆ..ವರಸಾಮ್ಯ ಚೆನ್ನಾಗಿರತ್ತೆ ಅಂದಕಂಡು ಮೇಷ್ಟ್ರು ಹುಡುಗನ್ನ ಕರದು ವಿಚಾರಿಸಿದಾರೆ. ನಾನು ಹುಡುಗಿ ನೋಡಿ ಆಮೇಲೆ ಹೇಳ್ತೀನಿ ಅಂದನಂತೆ ತುಮುಕೂರು ಕಾಲೇಜಲ್ಲಿ ಇಂಟರ್ ಓದುತ್ತಿದ್ದ  ಆ ಕಿಲಾಡಿ ಹುಡುಗ. ಆಯಿತು ಹಂಗೇ ಮಾಡು ಅಂದಿದಾರೆ ನಮ್ಮ ಮೇಷ್ಟ್ರು.

ಇನ್ನೂ ವಾರ ಕೂಡ ಆಗಿಲ್ಲ. ಒಂದು ಸಂಜೆ ಹುಡುಗ ಬಂದೇ ಬಿಟ್ಟ ಬಸವಾಪಟ್ಣದಿಂದ. ನಿಮ್ಮಜ್ಜಿ ಅವತ್ತು ಒಳಗಿರಲಿಲ್ಲ. ನಿಮ್ಮಮ್ಮ ಇನ್ನೂ ಚಿಕ್ಕೋಳು. ಅವಳಿಗೆ ಒಂದು ಕೆನ್ನೆ ಹಾಲು; ಒಂದು ಕೆನ್ನೆ ನೀರು. ಅವಳು ಏನು ಮಾಡ್ತಾಳೆ ಹೇಳು? ನಿಮ್ಮ ಅಜ್ಜಿ , ಭರಂಪುರದ ರಾಮಣ್ಣ ತಾತ ಇಲ್ಲವಾ ಅವರ ಮನೆಗೆ ಹೋಗಿದಾಳೆ. ಅವನ ಹೆಂಡತಿ ಪಾತಕ್ಕನಿಗೆ ಹೇಳಿದಾಳೆ. ನೋಡೇ ಪಾತಕ್ಕ…ನಮ್ಮ ರತ್ನನ್ನ ನೋಡಕ್ಕೆ ಹುಡುಗ ಬಂದಿದೆ ಕಣೆ…ಕಾಫಿ ಮಾಡಿಕೊಡೋರೂ ಯಾರೂ ಇಲ್ಲ. ಅದಕ್ಕೇ ನಿಮ್ಮ ಮನೆಗೆ ಓಡಿ ಬಂದಿದೀನಮ್ಮ…ಅಂದಳಂತೆ. ಅಯ್ಯೋ…ಅದಕ್ಕ್ಯಾಕಿಷ್ಟು ಪೇಚಾಡಿಕೊಳ್ತಿ…ನಾನೇ ಬರ್ತೀನಿ ನಡಿ ಮನೆಗೆ ಅಂದಳಂತೆ ಪಾತಕ್ಕ. ಪಾತಕ್ಕ ಬಂದು ಉಪ್ಪಿಟ್ಟು, ಕಾಫಿ ಮಾಡಿ ಹುಡುಗನಿಗೆ ಕೊಟ್ಟಿದ್ದಾಳೆ. ಅತ್ತೇ…ಭಾಳ ಚೆನ್ನಾಗಿದೆ ಉಪ್ಪಿಟ್ಟು…ಇದು ಯಾರು ಮಾಡಿದ್ದು? ಅಂತ ಕೇಳಿದನಂತೆ ಹುಡುಗ. ಪಾತಕ್ಕ ಥಟ್ಟನೆ ಹೇಳಿದಾಳೆ…ನಮ್ಮ ರತ್ನ ಮಾಡಿದ್ದಪ್ಪ…ನಿಂಗೆ ಹಿಡಿಸಿತಾ….ಹುಡುಗ ಮುಸಿಮುಸಿ ನಕ್ಕು ಹುಡುಗೀನೂ ಚೆನ್ನಾಗಿದಾಳೆ…ಉಪ್ಪಿಟ್ಟೂ ಚೆನ್ನಾಗಿದೆ ಅಂದುಬಿಡೋದೆ?

ಹುಡುಗ ಒಪ್ಪೇ ಬಿಟ್ಟ ನಿಮ್ಮ ಅಮ್ಮನ್ನ. ಆದರೆ ಅವಂದು ಒಂದೇ ಕಂಡೀಷನ್ನು. ನನ್ನ ಎರಡು ವರ್ಷ ಇಂಟರ್ ಮುಗೀಬೇಕು. ಆಮೇಲೆ ಮದುವೆ. ಮತ್ತೂ ನಮ್ಮ ಮನೇಲಿ ಹಣಕಾಸಿನ ಪರಿಸ್ಥಿತಿ ಏನೂ ಚನ್ನಾಗಿಲ್ಲ…ಇವರೇ ನನ್ನ ಓದಿಸಬೇಕು…ಇದಕ್ಕೆ ಒಪ್ಪೋದಾದರೆ ನಾನು ಈ ಹುಡುಗೀನ ಮದುವೆ ಆಗ್ತೀನಿ…

ನಿಮ್ಮ ಅಜ್ಜ ಮಹಾ ಜುಗ್ಗ ಅಲ್ಲವಾ? ಅವನು ಸುತರಾಂ ಒಪ್ಪೋನಲ್ಲ. ಆದರೆ ಮೇಷ್ಟ್ರು ಬಿಡಬೇಕಲ್ಲ…ಇಂಥ ವಿದ್ಯಾವಂತ ಹುಡುಗ ಮತ್ತೆ ನಿಮಗೆ ಸಿಗ್ತಾನಾ? ನೋಡೋಕು ಲಕ್ಷಣ ವಾಗಿದಾನೆ…ಚಿಕ್ಕ ವಯಸ್ಸು…ಒಳ್ಳೇ ಗುಣವಂತ…ಬಸವಾಪಟ್ಣದ ತುಂಬ ಇವನನ್ನ ಜನ ಹೊಗಳ್ತಾರೆ ಅಂದರೆ ಅಷ್ಟಿಷ್ಟಲ್ಲ….ಶಾನುಭೋಗರೇ ಸುಮ್ಮಗೆ ಒಪ್ಪಿಕೊಳ್ಳಿ…ನನ್ನ ಮಾತಲ್ಲಿ ವಿಶ್ವಾಸ ಇಡಿ…ತಿಂಗಳಿಗೆ ನೂರು ರೂಪಾಯಿ ಖರ್ಚು ಬರತ್ತಂತೆ…ಹೇಗೋ ಹೊಂದಿಸಿ… ಮೂಟೆ ಮೂಟೆ ಭತ್ತ ಬಂದು ಬಿದ್ದಿದೆಯಲ್ಲಾ…ಮಾರಿ ಅದನ್ನ…ಎಣ್ಣೆ ಬಂದಾಗ ಕಣ್ಣು ಮುಚ್ಚಿಕೋಬಾರ್ದು…ಅಂತ ಬುದ್ಧಿ ಹೇಳಿ ನಿಮ್ಮ ಅಜ್ಜನ್ನ ಒಪ್ಪಿಸಿದರಂತೆ…ನಿಮ್ಮ ಅಜ್ಜ ನಿಮ್ಮ ಅಪ್ಪನ ಓದು ಮುಗಿಯೋ ತನಕ ತಿಂಗಳಿಗೆ ನೂರು ರುಪಾಯಿ ಮನಿಯಾರ್ಡರ್ ಮಾಡೋನು….

ಅವನು ಕೊನೇ ಪರೀಕ್ಷೆ ಇನ್ನೂ ಬರೆದೇ ಇಲ್ಲ…ಇಲ್ಲಿ ನಿಮ್ಮಮ್ಮ ದೊಡ್ಡೋಳಾಗಿ ಕೂತುಕೊಂಡಳು…ನಿಮ್ಮಜ್ಜ ಸತ್ತೆನೋಕೆಟ್ಟೆನೋ ಅಂತ ಕೆಲ್ಲೋಡಿಗೆ ಓಡಿ ಬಂದ…ಭೀಮಕ್ಕ…ಹಿಂಗಾಗಿ ಬಿಟ್ಟಿದೆ…ಬೇಗ ಮದುವೆ ಮಾಡ್ಲೇ ಬೇಕು… ಎಂಥದೂ ಅನುಕೂಲ ಇಲ್ಲ…. ಆಗ ನಮ್ಮ ಅಪ್ಪ ಅಳಿಯನಿಗೆ ಧೈರ್ಯ ಹೇಳಿ, ನೀನೇನು ಯೋಚನೆ ಮಾಡಬ್ಯಾಡ…ಕೆಲ್ಲೋಡಲ್ಲೇ ದೇವಸ್ಥಾನದಲ್ಲಿ ಮದುವೆ ಮಾಡಿಬಿಡೋಣ…ಇಲ್ಲಿ ನನ್ನ ಮಾತು ನಡೀತದೆ…ಹಣಕಾಸು ಎಷ್ಟು ಆಗತ್ತೋ ಅಷ್ಟು ಜೋಡಿಸು…ಸಾಲದೆ ಬಂದರೆ ನಾರ್ಸೇಗೌಡನ ಹತ್ರ ಕೈಗಡ ಮಾಡಿದರಾಯಿತು…ಹುಚ್ಚಾ ಇದಕ್ಕೆಲ್ಲಾ ಹೆದರತಾರೇನೋ…

ಎರಡೇ ತಿಂಗಳಲ್ಲಿ ಮದುವೆ ಅಂತ ನಿಶ್ಚಯ ಆಗೇ ಹೋಯ್ತು. ಲಗ್ನ ಪತ್ರಿಕೇನೂ ಬರಸಿದರು. ನಿಮ್ಮ ಅಪ್ಪನ ತಂದೆ ಗಂಗಾಧರಭಟ್ಟ ಅಂತ…ಅವನೂ ಅಂತ ತಿಳಿದೋನಲ್ಲ…ನಿಮ್ಮ ಅಪ್ಪನ ಅಣ್ಣ ರಾಮಭಟ್ಟನೂ ಅಂತ ಬುದ್ಧಿವಂತನೇನಲ್ಲ. ಬರೀ ಗಂಡಸರಿದ್ದ ಮನೆ. ಕೈಯಿ ಬಾಯಿ ಸುಟ್ಟಿಕೊಂಡು ಅವರೇ ಬೇಯಿಸಿಕೊಂಡು ತಿನ್ನುತ್ತಿದ್ದರು ಅಂತ ಕಾಣತ್ತೆ…

ಇನ್ನೇನು ಒಂದು ಹದಿನೈದು ದಿನಾ ಇದೆ ಮದುವೆಗೆ. ಶುರುವಾಯಿತು ನೋಡಪ್ಪ ಕಾಂಗ್ರೆಸ್ ಗಲಾಟೆ. ಅಲ್ಲಿ ಬಸ್ಸು ಸುಟ್ಟರು…ಇಲ್ಲಿ ಟಪಾಲು ಕಚೇರಿ ಸುಟ್ಟರು…ಇನ್ನೊಂದು ಕಡೇ ತಾಲೋಕು ಕಚೇರಿಗೆ ಬೆಂಕಿ ಇಟ್ಟರು…ಗಲಾಟೆಯೋ ಗಲಾಟೆ ಬಿಡು…ಬಸ್ಸು ಸರ್ವೀಸು ನಿಂತು ಹೋಯಿತು…ಟಪಾಲು ಕಚೇರಿ ಮುಚ್ಚಿಬಿಟ್ಟರು….ನಾವು ಲಗ್ನಪತ್ರಿಕೆ ಹೆಂಗೆ ಕಳಿಸಬೇಕು? ನಿಮ್ಮಜ್ಜ ಕೂನಬೇವಿಗೆ, ಕೆಲ್ಲೋಡಿಗೆ, ಬಸವಾಪಟ್ನಕ್ಕೆ, ಮತ್ಸಮುದ್ರಕ್ಕೆ ಮುದ್ದಾಂ ಆಳು ಅಟ್ಟಿದ. ಮದುವೆ ನಾಳೆ ಅನ್ನ ಬೇಕಾದರೆ ನಾವೆಲ್ಲಾ ಕಮಾನು ಗಾಡಿ ಕಟ್ಟಿಕೊಂಡು ಕೆಲ್ಲೋಡಿಗೆ ಹೊರಟೆವು. ಬುಡೇನ್ ಸಾಬರದ್ದು ಗಾಡಿ. ಗಲಾಟೆ ಆಗ್ತಾ ಇದೆ ನಾವು ಬರಲ್ಲ ನಾವು ಬರಲ್ಲ ಅಂತ ಎಲ್ಲಾ ಕೈಆಡಿಸಿಬಿಟ್ಟಿದ್ದರು.

ಆಗ ನಮ್ಮ ಬುಡೇನ್ ಸಾಬರು ಮುಂದೆ ಬಂದು, ಅದರಕ್ಕನ್…ಅದೇನ್ ಆಗ್ತದೋ ಆಗೇ ಬಿಡ್ಲಿ…ನಮ್ಮ ಹುಡುಗಿ ಮದುವೆಗೆ ನಾನೇ ಗಾಡಿ ತರ್ತೀನೇಳ್ರಿ…ಖುದಾ ಅವನೆ …ಅಂತ ಹೊರಟೇ ಬಿಟ್ಟರು. ಇನ್ನೂ ನಸುಕು ನಸುಕು ಬೆಳಿಗ್ಗೆ. ಗಾಡಿಯಲ್ಲಿ ಭತ್ತದ ಹುಲ್ಲು ಹಾಕಿಕೊಂಡು, ಮೇಲೆ ಗುಡಾರ ಹಾಕಿ, ದೆಬ್ಬೆಗೆ ಒರಗು ದಿಂಬು ಇಟ್ಟು ಕೊಂಡು ನಿಮ್ಮಮ್ಮ, ನಾನು, ನಿಮ್ಮ ಅಜ್ಜ-ಅಜ್ಜಿ ಹೊರತೇ ಬಿಟ್ಟೆವು ಕೆಲ್ಲೋಡಿಗೆ. ಜೀವದಲ್ಲಿ ಜೀವ ಇಲ್ಲ ನಮಗೆ. ಯಾರು ಗಾಡಿ ತಡಿತಾರೋ…ಏನು ಗಲಾಟೆ ಆಗ್ತದೋ ಅಂತ. ಮಧ್ಯಾಹ್ನ ಒಳ್ಳೇ ಸೂರ್ಯ ನೆತ್ತಿ ಮೇಲೆ ಉರಿಯೋ ಹೊತ್ತು, ಉಷ್ಷಪ್ಪ ಅಂದುಕೊಂಡು ನಾವು ಕೊಂಡದಹಳ್ಳಿ ತಲಪಿದಾಗ. ಕೊಂಡದಹಳ್ಳಿ ಶಾನುಭೋಗರು ನಿಮ್ಮ ಸುಬ್ಬಣ್ಣದೊಡ್ಡಪ್ಪನ ಬೀಗರಾಗಬೇಕು. ಅವರ ಮನೆಗೆ ಊಟಕ್ಕೆ ಇಳಿದೆವು. ಊಟಮಾಡಿ ಕೈತೊಳೆದ ನೀರು ಒಣಗಿಲ್ಲ, ಮತ್ತೆ ಗಾಡಿ ಹೂಡೇ ಬಿಟ್ರು ಬುಡೇನ್ ಸಾಬ್ರು. ನಾವೆಲ್ಲಾ ಗಾಡೀಲಿ ತೂಕಡಿಸ್ತಾ ಕೂತ್ಕಂಡಿದೀವಿ. ಇದ್ದಕ್ಕಿದ್ದಂಗೆ ಹೊರಗೆ ಏನೋ ಗಲಾಟೆ ಕೇಳ್ತು. ಕಣ್ಬಿಟ್ಟು ನೋಡಿದರೆ ಕಾಂಗ್ರೆಸ್ ಹುಡುಗರು. ನಾವು ಮದುವೆ ದಿಬ್ಬಣದೋರಪ್ಪಾ…ತಡೀಬ್ಯಾಡಿ ಅಂತ ನಿಮ್ಮ ಅಜ್ಜ ಕೈಮುಗಿದು ಅವರನ್ನ ಕೇಳಿಕೊಂಡ…ದೇಶ ಹತ್ತಿ ಉರಿಯೋವಾಗ ಎಂಥದರೀ ನಿಮ್ಮ ಮದುವೆ ದಿಬ್ಬಣ ಅಂದ ಒಬ್ಬ ಹುಡುಗ. ಅವರಲ್ಲಿ ಒಬ್ಬ ಹಿರಿಯ , ಪಾಪ…ಶುಭಕೆಲಸಕ್ಕೆ ಹೊರಟಿದಾರೆ…ತೊಂದರೆ ಆಗೋದು ಬ್ಯಾಡ ಅವರಿಗೆ ಅಂತ ಸಮಜಾಯಿಸಿ ಹೇಳಿದ…ಅವರು ಅರುಗಾಗಿ ಗಾಡಿಗೆ ದಾರಿಬಿಟ್ಟರು. ನಮ್ಮ ಬುಡೇನ್ ಸಾಬ್ರಿಗೆ ಅದೇನು ಹುಮ್ಮಸ್ಸು ಬಂತೋ…ಗಾಂಧೀ ಮಾತ್ಮಂಗೆ ಜೈ ಅಂತ ಗಟ್ಟಿಯಾಗಿ ಕೂಗಿದರು ನೋಡು. ಕಾಂಗ್ರೆಸ್ ಹುಡುಗರೂ ಜೈ ಜೈ ಅಂತ ಕೂಗುತಾ ನಮ್ಮನ್ನ ಸುಮ್ಮನೆ ಬಿಟ್ಟು ಬಿಟ್ಟರು. ನಾವು ಗಾಡಿ ಓಡಿಸಿಕೊಂಡು ಮುಂದೆ ಹೊರಟೆವು. ನಮ್ಮ ಗಾಡಿ ಕೆಲ್ಲೋಡು ತಲಪಿದಾಗ ಕತ್ತಲಾಗುತಾ ಇತ್ತು. ಇಡೀ ದಿನ ಗಾಡಿ ಪ್ರಯಾಣ ಮಾಡಿದ್ದಲ್ಲವಾ? ಗಾಡಿ ಅದ್ಲಿಗೆ ಮೈ ಹಣ್ಣಾಗಿ ಹೋಗಿತ್ತು. ಸದ್ಯ…ಬಂದು ಬಿದ್ದೆವಪ್ಪ ಕೆಲ್ಲೋಡಿಗೆ…ಇನ್ನು ಭಯವಿಲ್ಲ…ನಿಮ್ಮ ಪುಟ್ಟಜ್ಜ ಇದಾನೆ…ಅವನ ಎದ್ರು ಮಾತಾಡೋರು ಆಸುಪಾಸಲ್ಲೇ ಯಾರೂ ಇಲ್ಲ…ಅಂತ ನಾವೆಲ್ಲಾ ನಮಗೆ ನಾವೇ ಸಮಾಧಾನ ಹೇಳಿಕೊಂಡೆವು…

ನಿಮ್ಮ ಪುಟ್ಟಜ್ಜನ ಮನೆ ಗುಡಿಯ ಪೌಳಿಯಲ್ಲೇ ಇತ್ತು. ಮನೆ ಮುಂದೆ ನಾರ್ಸೇಗೌಡ ಚಪ್ಪರ ಹಾಕಿಸಿದ್ದ. ಬೆಳಿಗ್ಗೆ ಚಪ್ಪರ ಪೂಜೆ ಮುಗಿದು ಹೋಗಿತ್ತು. ನರಸಮ್ಮ ಹೂರಣದ ಹೋಳಿಗೆ ಮಾಡಿದ್ದಳಂತೆ. ಒಂದೊಂದು ಹೋಳಿಗೆ ಇಷ್ಟಿಷ್ಟಗಲ! ನಾವು ಚಾಪೆಮೇಲೆ ಉರುಳಿಕೊಂಡು ಐದು ನಿಮಿಷ ಆಗಿತ್ತು ಅಷ್ಟೆ. ಬೀಗರು ಬಂದರು…ಬೀಗರು ಬಂದರು ಅಂತ ಯಾರೋ ಕೂಗಿದರು. ಎರಡು ಗಾಡಿ ಭರ್ತಿಜನ. ಬಸವಾಪಟ್ಣದಿಂದ ಗಾಡಿಕಟ್ಟಿಸಿಕೊಂಡು ಎರಡು ದಿನ ಪ್ರಯಾಣ ಮಾಡಿ ಇಲ್ಲಿಗೆ ಬಂದಿದ್ದರು. ಬೆಳಗಾಬೆಳಿಗ್ಗೆ ಹೊಸದುರ್ಗದಿಂದ ನಡಕೊಂಡೇ ಸುಬ್ಬಾಭಟ್ಟರು ಬಂದರು. ಗಟ್ಟಿಯಾಗಿ ವಾಲಗ ಕೂಡ ಊದಂಗಿಲ್ಲ. ಶಾಸ್ತ್ರಕ್ಕೆ ಅವನು ಕನುಕುಂಟಿನಿ ಅಂತ ಒಂದು ನುಡಿ ಬಾರಿಸಿ ಹೋಗಿಯೇ ಬಿಟ್ಟ. ಎಲ್ಲರಿಗೂ ಕಾಂಗ್ರೆಸ್ ಗಲಾಟೆ ದಿಗಿಲು. ಮತ್ತೆ? ದೇಶ ಸ್ವಾತಂತ್ರಕ್ಕಾಗಿ ಆ ಪಾಟಿ ಹೊಡೆದಾಡತಿರಬೇಕಾದರೆ ನಾವು ಮದುವೆ ಹಚ್ಚಿಕೊಂಡರೆ ಹೆಂಗೆ ಹೇಳು…ಆದರೆ ಮಾಡದೇನಪ್ಪಾ? ಹಚ್ಚಿಕೊಂಡ ಮಂಗಳ ಕಾರ್ಯ ನಿಲ್ಲಿಸಕ್ಕೆ ಬರ್ತದಾ? ಕಾಂಗ್ರೆಸ್ನೋರು ಎಲ್ಲಿ ಬರ್ತಾರೋ? ಅವರನ್ನ ಅಟ್ಟಿಸಿಕೊಂಡು ಪೋಲೀಸ್ನೋರು ಎಲ್ಲಿ ಬರ್ತಾರೋ ಅಂತ ಪುಟ್ಟಜ್ಜನಿಗೂ ಒಳಗೊಳಗೇ ದಿಗಿಲು. ಆದರೆ ಅವನು ಅದನ್ನ ಮೇಲೆ ತೋರಿಸೋಹಂಗಿಲ್ಲ. ತೋರಿಸಿದರೆ ಉಳಿದೋರೆಲ್ಲಾ ಕಂಗಾಲಾಗಿಬಿಡ್ತಾರಲ್ಲ?

ಯಂಕಣ್ಣಾ…ಒಂದೊಂದಲ್ಲಪ್ಪಾ…ನಿಮ್ಮ ಅಮ್ಮನ ಮದುವೇಲಿ ಆದ ಅಪಶಕುನ…! ಕಳಸದ ತಟ್ಟೆ ಕೈಜಾರಿ ಬಿತ್ತು…ಹುಡುಗ, ತಲೆಬಾಗಿಲಿಗೆ ಹಣೆ ತಾಗಿಸಿಕೊಂಡ.  ಬಾಸಿಂಗ ಸಮೇತ ಪೇಟ ನೆಲಕ್ಕೆ ಬಿತ್ತು…ನಾವೆಲ್ಲಾ ರೂಮಲ್ಲಿ ಸೇರ್ಕಂಡು ಅಳ್ತಾ ಇದ್ದರೆ ಹುಲಿಯಂಗಿದ್ದ ನಿಮ್ಮ ಪುಟ್ಟಜ್ಜ ಬಂದು ಒಂದು ಕೂಗು ಹಾಕಿದ…ಮತ್ತೆ ಹೆಂಗಸರು ಕಳಸ ಕನ್ನಡಿ ಹಿಡಕಂಡು ಓಡಿದರು ನೋಡು ಗುಡಿಗೆ…

ಮದುವೆಮನೇಲಿ ಅಡುಗೆ ಮಾಡಲಿಕ್ಕೂ ಜನ ಸಿಕ್ಕಲಿಲ್ಲಪ್ಪ…ನಿಮ್ಮ ಅಪ್ಪೂರಾಯಜ್ಜನೇ ಅಷ್ಟು ಜನಕ್ಕೂ ಅಡುಗೆ ಮಾಡಿದರು. ಇಪ್ಪತ್ತೇ ಜನ ಮದುವೆಗೆ ಹೊರಗಿಂದ ಬಂದೋರು! ಹೆಂಗೋ ಮದುವೆ ಅಂತೂ ಆಗೇ ಹೋಯ್ತು…ಮದುವೆ ಮುಗಿಸಿಕೊಂಡು ಗಂಡಿನ ಕಡೆಯೋರು ಗಾಡಿಕಟ್ಟಿಕೊಂಡು ಬಸವಾಪಟ್ಣಕ್ಕೆ ಹೋದರು. ನಾವೆಲ್ಲ ಬಸ್ಸು ಸರ್ವೀಸು ತಿರ್ಗಾ ಶುರುವಾಗಬೋದು ಅಂದಕಂಡು ಒಂದುವಾರ ಕೆಲ್ಲೋಡಲ್ಲೇ ಉಳಕೊಂಡೆವು. ನಾವು ಬಂದಿದ್ದ ಗಾಡೀಲಿ ಹಿಂದಕ್ಕೆ ಹೋದೋರು ಬುಡೇನ್ಸಾಬ್ರು ಮತ್ತು ನಿಮ್ಮ ಭೀಮಜ್ಜ ಇಬ್ರೇ! ಸಾಬ್ರು ಗಾಡಿ ಬಾಡಿಗೆ ಕೂಡ ತಗಳ್ಳಲಿಲ್ಲವಂತೆ.

ಮುಂದಿನ ತಮಾಷೆ ಏನು ಗೊತ್ತ? ಕಾಂಗ್ರೆಸ್ ಹುಡುಗರ ಮೇಲೆ ಬುಡೇನ್ ಸಾಬರಿಗೆ ವಿಪರೀತ ಅಭಿಮಾನ ಬೆಳೆದು ಬಿಡ್ತು. ಅವರು ಖಾದಿ ಹಾಕಕ್ಕೆ ಶುರು ಮಾಡಿದರಂತೆ. ಇದೇನು ಸಾಬ್ರೇ ಖಾದಿ ಬಟ್ಟೆ ಅಂತ ಯಾರಾದ್ರೂ ಕೇಳಿದರೆ, ನಮ್ಮ ಹುಡುಗಿ ಕಲ್ಯಾಣಕ್ಕೆ ಅವರು ತೊಂದರೆ ಮಾಡ್ಲಿಲ್ಲ…ಅಂದಮೇಲೆ ಅವರು ಕೆಟ್ಟೋರು, ಅವರು ಮಾಡುತಿರೋ ಚಳುವಳಿ ಕೆಟ್ಟದು ಅಂತ ಹೆಂಗೆ ಹೇಳದು ನಾವು?

ಮುಂದೆ ಅರ್ಧವಾಯು ಬಡದು ಸಾಯೋ ತಂಕ ಬುಡೇನ್ ಸಾಬ್ರು ಖಾದಿ ಬಟ್ಟೇನೇ ಹಾಕ್ಕಂತಿದ್ದರು….ಮತ್ತೆ ಮದುವೇ ಹೊಸದ್ರಲ್ಲಿ ನಿಮ್ಮ ಅಪ್ಪಂಗೆ ಒಂದು ಗಾಂಧಿ ಟೋಪಿ ತಂದುಕೊಟ್ಟು, ಇದು ನನ್ನ ಉಡುಗರೆ ಕಣಪ್ಪಾ ಅಂದರಂತೆ. ನಿಮ್ಮ ಅಪ್ಪ ಅದನ್ನ ಎಷ್ಟೊ ದಿನ ಹಾಕಂತಿದ್ದ…..ಪಿಟಾರೀಲಿ ಇದ್ರೂ ಇರಬೌದು…ಸಿಕ್ರೆ ನಿಂಗೆ ತೆಕ್ಕೊಡ್ತೀನಿ ಸುಮ್ನಿರು…

********

ಐವತ್ತೈದು ವರ್ಷಗಳ ಹಿಂದಿನ ಆ ರಾತ್ರಿ ದೊಡ್ಡಜ್ಜಿ ಹೇಳುತ್ತಿದ್ದ ಆ ಕಥೆ ಯಾವಾಗ ಮುಗಿಯಿತೋ ನನಗೆ ಗೊತ್ತಿಲ್ಲ. ಆವತ್ತು ರಾತ್ರಿ ಕನಸಲ್ಲೂ ನನಗೆ ಅವರು ಕಥೆ ಹೇಳುತ್ತಿದ್ದ ಹಂಗೇ ಕಾಣತಾ ಇತ್ತು.

 

14 ಟಿಪ್ಪಣಿಗಳು (+add yours?)

  1. kiran.m gajanur
    ಫೆಬ್ರ 17, 2011 @ 16:16:43

    nice sir

    ಉತ್ತರ

  2. rajashekhar malur
    ಫೆಬ್ರ 13, 2011 @ 11:55:10

    Simply superb.

    ಉತ್ತರ

  3. ಪೂರ್ಣಪ್ರಜ್ಞ
    ಫೆಬ್ರ 11, 2011 @ 21:49:14

    ಮೇಷ್ಟ್ರು ಮತ್ತೆ ಬರೀತಿರೋದು ತುಂಬಾ ಖುಷಿ ಕೊಡ್ತಾ ಇದೆ. ಸರಳವಾದ ಶೈಲಿಯಲ್ಲಿ ಮನಮುಟ್ಟುವಂತೆ ಇದೆ. ಈ ಪ್ರಸಂಗದಿಂದ ಇನ್ನೊಂದು ವ್ಯಕ್ತ ವಾಗೊದಂದರೆ ಮಾನವೀಯತೆಯಿಂದ ತುಂಬಿದ ಆಗಿನ ಕಾಲದ ಸಮಾಜ. ನಾವೆಲ್ಲಾ ಅದನ್ನು ಕಳೆದುಕೊಳ್ಳುತ್ತಾ ಇದ್ದೀವೇನೋ ಅಂತ ಅನ್ನಿಸುತ್ತೆ.

    ಉತ್ತರ

  4. ಸುರೇಶ್ ಕೆ.
    ಫೆಬ್ರ 10, 2011 @ 16:59:56

    ನಿಮ್ಮ ಬರಹ ಮತ್ತು ಪ.ಸ. ಕುಮಾರ್ ಚಿತ್ರ, ಹಾಲು-ಜೇನು ಒಂದಾದಂತಿದೆ! ತುಂಬಾ ಖುಷಿ ಕೊಡ್ತು ಸರ್.

    ಉತ್ತರ

  5. ರಾಮಚಂದ್ರ ನಾಡಿಗ್
    ಫೆಬ್ರ 10, 2011 @ 13:25:28

    ಅಜ್ಜಿ ಹೇಳಿದ ಕಥೆ ಬಾಳಾ ಚೆನ್ನಾಗಿದೆ…. ಅದನ್ನ ನೀವು ಹೇಳಿರೋ (ಬರೆದಿರೋ) ಶೈಲಿ ಇನ್ನೂ ಚೆನ್ನ….

    ಉತ್ತರ

  6. ರಾಧಿಕಾ
    ಫೆಬ್ರ 10, 2011 @ 13:06:18

    ಸರ್, ನಿಮ್ಮ ನೆನಪಿನ ಸರಣಿಯನ್ನು ಅವಧಿಯಲ್ಲಿ ಓದುತ್ತಾ ಓದುತ್ತಾ ಭೀಮಜ್ಜಿ ನಮ್ಮನೆಯವರೇ ಅನ್ನಿಸತೊಡಗಿದೆ 🙂 . ಎದುರಲ್ಲೇ ಕೂತು ಕಥೆ ಹೇಳ್ತಾ ಇದ್ದಾರೇನೋ ಅನ್ನುವಷ್ಟು ನೈಜವಾಗಿದೆ.

    ಉತ್ತರ

  7. H S V Murthy
    ಫೆಬ್ರ 10, 2011 @ 12:45:13

    ಶ್ರೀ ಪ ಸ ಕುಮಾರ್ ಅವರ ಚಿತ್ರ ನನಗೂ ತುಂಬ ಇಷ್ಟವಾಯಿತು. ಅವರಿಗೂ ಮತ್ತು ಅವಧಿಗೂ ನನ್ನ ಅಭಿನಂದನೆಗಳು.
    ಎಚ್ಚೆಸ್ವಿ

    ಉತ್ತರ

  8. harshakugwe
    ಫೆಬ್ರ 10, 2011 @ 12:35:15

    ಸೊಗಸಾಗಿದೆ.

    ಉತ್ತರ

  9. ವಸುಧೇಂದ್ರ
    ಫೆಬ್ರ 10, 2011 @ 11:46:02

    ಪ್ರಿಯ ಸಾರ್,

    ಎಷ್ಟು ಚೆನ್ನಾಗಿ ನಿರೂಪಿಸಿದ್ದೀರ! ಓದಿ ಖುಷಿಯಾಯ್ತು.

    ಪ.ಸ. ಕುಮಾರ್ ಚಿತ್ರ ತುಂಬಾ ಚೆನ್ನಾಗಿದೆ. ನಿಮ್ಮ ನಿರೂಪಣೆಯ ಖುಷಿಯನ್ನು ದುಪ್ಪಟ್ಟುಗೊಳಿಸಿತು.

    ವಸುಧೇಂದ್ರ

    ಉತ್ತರ

  10. Halesh.J
    ಫೆಬ್ರ 10, 2011 @ 11:32:20

    ಸೂಪರ್ ಸರ್ ಅನಾತ್ಮ ಕತನದ ಮುಂದುವರೆದ ಕತೆ , ನಾನು ಹುಟ್ಟಿದ ಊರು ಬಸವಪಟ್ಟಣ (ಚನ್ನಗಿರಿ ತಾಲೂಕ್) ನಿಮ್ಮ ಕತೆಯ (ನಿಮ್ಮ ಜೀವನದ) ಭಾಗವಗಿರುವುದನ್ನು ಓದಿ ನಿಜಕ್ಕೂ ಖುಷಿಯಾಯಿತು.

    ಉತ್ತರ

  11. prakashchandra
    ಫೆಬ್ರ 10, 2011 @ 10:59:05

    Kathe sogasaagide. pa.sa.kumar sundara kale jothege hsv avara varnane thumba hidisithu.

    ಉತ್ತರ

  12. armanikanth
    ಫೆಬ್ರ 10, 2011 @ 10:40:56

    tumbaa ista aaytu sir..

    ಉತ್ತರ

  13. jayadeva prasad
    ಫೆಬ್ರ 10, 2011 @ 08:53:03

    Pa sa Kumar avra chitra bahaLa ishta aaytu

    ಉತ್ತರ

  14. malathi S
    ಫೆಬ್ರ 10, 2011 @ 08:43:18

    Lovely!!!
    chandada kathege chandada (pa.sa.kumar avara)chitrada saath!! eraDoo isTa ayatu!!
    🙂
    malathi S

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ