ಅಕ್ಷರ, ಮಡೆಸ್ನಾನ, ಗಾಂಧಿ, ಗೋಡ್ಸೆ..

ಕೆ ವಿ ಅಕ್ಷರ ಪ್ರಜಾವಾಣಿಯಲ್ಲಿ ಬರೆದ ಲೇಖನ ‘ಹರಕೆ ಹರಾಜು’ ಲೇಖನವನ್ನು ನೀವು ಓದಿದ್ದೀರಿ. ಅದು ಇಲ್ಲಿದೆ. ತೀವ್ರ ಚರ್ಚೆಯನ್ನು ಹುಟ್ಟುಹಾಕಿದ ಈ ಲೇಖನಕ್ಕೆ ಹಿರಿಯ ಚಿಂತಕ ಡಿ ಎಸ್ ನಾಗಭೂಷಣ ಅವರು ಪ್ರತಿಕ್ರಿಯೆ ಕಳಿಸಿದ್ದರು.

ಅದು ಅಲ್ಲಿ ಪ್ರಕಟವಾಗದ ಕಾರಣ ಆ ಪ್ರತಿಕ್ರಿಯೆಯನ್ನು ಕಳಿಸಿಕೊಟ್ಟಿದ್ದಾರೆ. ಅದು ಇಲ್ಲಿದೆ.

-ಡಿ.ಎಸ್.ನಾಗಭೂಷಣ

ಮಾನ್ಯರೇ,

ಪ್ರಜಾವಾಣಿಯ 16.1.2011ರ ಸಾಪ್ತಾಹಿಕ ಪುರವಣಿಯಯಲ್ಲಿ ಕೆ.ವಿ.ಅಕ್ಷರ ಅವರು ಬರೆದಿರುವ ಹರಕೆ ಹರಾಜು: ಯಾವುದು ಸಹಜ? ಯಾವುದು ಅವಮಾನ? ಎಂಬ ಲೇಖನ ಓದುತ್ತಿದ್ದಂತೆ, ಗಾಂಧಿ ಕೊಲೆ ವಿಚಾರಣೆ ಸಂದರ್ಭದಲ್ಲಿ ನಾಥೂರಾಮ ಗೋಡ್ಸೆ ಪ್ರಸ್ತುತಪಡಿಸಿದ ಒಂದು ವಾದ ಸರಣಿ ನೆನಪಿಗೆ ಬಂತು. ಗಾಂಧೀಜಿಯವರ ಕೊಲೆಯ ಹಿಂದೆ ಕೆಲಸ ಮಾಡಿದ ಸಿದ್ಧಾಂತ ಮತ್ತು ಅದರ ಪ್ರಭಾವದಿಂದಾಗಿ ಆಯೋಜಿತವಾದ ಕೊಲೆ ಪಿತೂರಿಯ ಸ್ವರೂಪವನ್ನು ನ್ಯಾಯಾಲಯದ ಮುಂದೆ ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸುವಲ್ಲಿ ನಿರತರಾಗಿದ್ದ ಸರ್ಕಾರಿ ವಕೀಲ ದಫ್ತರಿಯವರು ತಮ್ಮ ವಾದದ ಸಂದರ್ಭವೊಂದರಲ್ಲ್ಲಿ ಗಾಂಧೀಜಿ ಕೊಲೆಯನ್ನು ಅನೈತಿಕ ಅಪರಾಧವೆಂದು ಬಣ್ಣಿಸಿದರು. ಆಗ ಗೋಡ್ಸೆ ಅದನ್ನು ತೀವ್ರವಾಗಿ ಪ್ರತಿಭಟಿಸಿ ಈ ರೀತಿ ವಾದ ಮಂಡಿಸಿದನು:

ಕನಿಷ್ಟ ಪಕ್ಷ ಈ ಪ್ರಕರಣದಲ್ಲಿ ನೀತಿ ಅಥವಾ ಅನೀತಿಯ ಕುರಿತು ಶೋಧಿಸಲು ಸರ್ಕಾರಿ ವಕೀಲರಿಗೆ ಅಧಿಕಾರವಿರುವುದಿಲ್ಲ. ಅಲ್ಲದೇ, ಆ ಪ್ರಶ್ನೆಯ ಬಗೆಗೆ ನಿರ್ಣಯ ಕೊಡುವ ಅಧಿಕಾರವು ಈ ನ್ಯಾಯಾಲಯಕ್ಕೆ ಇರುವುದಿಲ್ಲ. ಇದು ಅವರ ಅಧಿಕಾರ ವ್ಯಾಪ್ತಿಯ ಹೊರಗಿನ ವಿಷಯ. ನೈತಿಕತೆಯ ವ್ಯಾಖ್ಯೆಯು ಸಮಾಜ-ಸಮಾಜಗಳಲ್ಲಿ, ದೇಶ-ದೇಶಗಳಲ್ಲಿ ಯಾವಾಗಲೂ ಬೇರೆ ಬೇರೆಯಾಗಿರುತ್ತದೆ. ಒಂದು ಸಮಾಜದಲ್ಲಿ ಮಹಿಳೆಯರು ಬುರ್ಖಾ ಹಾಕಿಕೊಳ್ಳದಿದ್ದರೆ ಅನೈತಿಕವೆಂದು ತಿಳಿಯಲಾಗುತ್ತದೆ. ಕೆಲವು ದೇಶಗಳಲ್ಲಿ ಮದ್ಯಪಾನವನ್ನು ಅನೈತಿಕವೆಂದು ತಿಳಿಯಲಾಗುವುದಿಲ್ಲ. ಒಂದು ಯುಗದಲ್ಲಿ ಬ್ರಾಹ್ಮಣರಲ್ಲದವರಿಗೆ ವೇದವಿದ್ಯೆಯನ್ನು ಕಲಿಸಲಾಗುತ್ತಿರಲಿಲ್ಲ. ಆದರೆ ಕಾಲಕ್ಕನುಗುಣವಾಗಿ ಎಲ್ಲ ಕಡೆಗಳಲ್ಲೂ ಇದೆಲ್ಲವೂ ಬದಲಾಗುತ್ತಾ ಹೋಯಿತು. ಹಾಗಾಗಿ ಇದರ ಆಧಾರದ ಮೇಲೆ ತ್ರಿಕಾಲಾಬಾಧಿತವಾದ ನೀತಿ-ಅನೀತಿಯ ಬಗೆಗಿನ ಸ್ಥಿರವಾದ ನಿಯಮವನ್ನು ನಿರ್ಧರಿಸಲಾಗುವುದಿಲ್ಲ.

ಈ ದೃಷ್ಟಿಯಿಂದ ಗಾಂಧೀಜಿ ಕೊಲೆ ಹೇಗೆ ಅನೈತಿಕವಲ್ಲವೋ, ಮಡೆ ಸ್ನಾನವಾಗಲೀ ಅಥವಾ ಕ್ರಿಕೆಟಿಗರ ಹರಾಜಾಗಲೀ ಅನೈತಿಕವಾಗುವುದಿಲ್ಲ;ಹಾಗಾಗಿ ಅವಮಾನಕಾರಿಯೂ ಅಲ್ಲ. ಮಡೆಸ್ನಾನ ಅವಮಾನಕಾರಿಯಾಗುವುದು ಕ್ರಿಕೆಟಿಗರ ಹರಾಜು ಅವಮಾನಕಾರಿಯಾದಾಗ ಮಾತ್ರ; ಮಾಧ್ಯಮಗಳಲ್ಲಿ ಮಡೆಸ್ನಾನದ ಬಗ್ಗೆ ಬಂದ ವರದಿ ಮತ್ತು ಪತ್ರಗಳ ಹಾಗೆಯೇ, ಕ್ರಿಕೆಟಿಗರ ಹರಾಜಿನ ಬಗ್ಗೆಯೂ ಬಂದಾಗ ಮಾತ್ರ! ಎರಡೂ ಸಮಾನ ತೀವ್ರತೆಯಲ್ಲಿ ಬಹಿರಂಗ ವಾದ ವಿವಾದಗಳಿಗೆ ಸಿಕ್ಕಿದಾಗ ಮಾತ್ರ!! ಆಂತರಿಕವಾದದ್ದು ಎನ್ನುವುದು ಏನೂ ಇಲ್ಲ… ಮೆಚ್ಚಬೇಕಾದ ವಾದಸರಣಿಯೇ. ಎಷ್ಟಾದರೂ, ಗಾಂಧೀಜಿ ಕೊಲೆ ಮೊಕದ್ದಮೆ ನಡೆಸಿದ ನ್ಯಾಯಾಧೀಶ ಖೋಸ್ಲಾ ಅವರೇ ಹೇಳಿದ್ದಾರಲ್ಲಾ, ನ್ಯಾಯಾಲಯದಲ್ಲಿ ಗೋಡ್ಸೆ ಮಂಡಿಸಿದ ಸುದೀರ್ಘ ಹೇಳಿಕೆಗಳನ್ನು ಆಲಿಸಿದ ಜನಕ್ಕೇನಾದರೂ ತೀರ್ಪು ನೀಡುವ ಅಧಿಕಾರವಿದ್ದಿದ್ದರೆ, ಗಾಂಧೀಜಿ ಕೊಲೆ ಸರಿ ಎಂದೇ ತೀರ್ಪು ನೀಡಿ ಗೋಡ್ಸೆಯನ್ನು ಖುಲಾಸೆ ಮಾಡಿ ಅವನಿಗೆ ಜೈಕಾರ ಹಾಕಿ ಕರೆದುಕೊಂಡು ಹೋಗುತ್ತಿದ್ದರು ಎಂದು?

-ಡಿ.ಎಸ್.ನಾಗಭೂಷಣ

ಶಿವಮೊಗ್ಗ

10 ಟಿಪ್ಪಣಿಗಳು (+add yours?)

 1. ಕುಮಾರ ರೈತ
  ಫೆಬ್ರ 08, 2011 @ 23:10:44

  ಮಡೆಸ್ನಾನ ಟೀಕಿಸುತ್ತಿರುವ ಮನುಸುಗಳ ಹಿಂದಿನ ಕಾಳಜಿ ಬಹುತೇಕರಿಗೆ ಅರ್ಥವಾದಂತೆ ಕಾಣುವುದಿಲ್ಲ. ಮಡೆಸ್ನಾನ ಮಾಡುವುದು ನಮ್ಮ ಆತ್ಮಗೌರವಕ್ಕೆ ಸ್ವತಃ ನಾವೇ ಅವಮಾನ ಮಾಡಿದಂತೆ. ನಾವು ಅನ್ನವನ್ನು ಬ್ರಹ್ಮವೆಂದು ಭಾವಿಸಿದ್ದರೂ ಊಟ ಮಾಡುವಾಗ ಕಲ್ಲು ಸಿಕ್ಕಾಗ ಅದನ್ನು ತೆಗೆಯುತ್ತೇವೆ. ಅದರೊಂದಿಗೆ ಹೊರಬರುವ ಅನ್ನವನ್ನು ಮತ್ತೆ ಬಾಯೊಳಗೆ ಹಾಕಿಕೊಳ್ಳುವುದಿಲ್ಲ. ಹಾಗೆ ಉಂಡೆದ್ದ ಎಂಜಲೆಲೆ ಮೇಲೆ ಉರುಳಾಡುವುದು ಆತ್ಮಬಲ ರಹಿತ ಮನಸ್ಥಿತಿ. ಇದಕ್ಕೆ ಸಾಮಾಜಿಕ ಮದ್ದು ಹುಡುಕಬೇಕೇ ಹೊರತು ಎಂಜಲೆಲೆ ಮೇಲೆ ಉರುಳಾಡುವುದನ್ನು ಸಮರ್ಥಿಸುವುದಲ್ಲ.
  ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಸಿಡಿ ಆಡಿಸುತ್ತಿದ್ದರು. ಸಿಡಿಯಾಡುವುದಾಗಿ ಹರಕೆ ಹೊತ್ತ ವ್ಯಕ್ತಿಯ ಬೆನ್ನಿಗೆ ಚೂಪಾದ ಕೊಂಡಿ ತೂರಿಸಿ ನೇತಾಡಿಸುವುದು. ಸಾಮಾನ್ಯವಾಗಿ ಸಿಡಿಯಾಡುವವರು ಬದುಕುತ್ತಿರಲಿಲ್ಲ. ಸಿಡಿಯಾಡುವಾತನ ದೃಷ್ಟಿಯಲ್ಲಿ ಇದು ನಂಬಿಕೆ ಪ್ರಶ್ನೆ. ಇಂಥ ಆಚರಣೆಯನ್ನು ಬ್ರಿಟಿಷ್ ಸರಕಾರ ಅಮಾನುಷ ಎಂದು ಭಾವಿಸಿ ನಿಷೇಧಿಸಿತು. ಸತಿಸಹಗಮನ ಕೂಡ ನಂಬಿಕೆ ಪ್ರಶ್ನೆ. ಅಂದಿನ ಭಾರತೀಯ ಸಮಾಜದ ದೃಷ್ಟಿಯಲ್ಲಿ ಇದು ಧಿರೋದತ್ತವಾದ ಆಚರಣೆ. ಇದನ್ನು ಬ್ರಿಟಿಷರೇ ನಿಷೇಧಿಸಬೇಕಾಯಿತು. ಇತ್ತೀಚೆಗೆ ಬೆತ್ತಲೆಸೇವೆಯನ್ನು ಸರ್ಕಾರ ಬಹಳ ಕಷ್ಟಪಟ್ಟು ನಿಲ್ಲಿಸಿದೆ. ಈ ಎಲ್ಲ ಆಚರಣೆಗಳೂ ಅಮಾನವೀಯ. ಮಡೆಸ್ನಾನಕ್ಕೆ ಇಲ್ಲದ ಸ್ವರೂಪ ಕೊಟ್ಟು ಸಮರ್ಥಿಸಿಕೊಂಡರೇ ಇಂಥ ಆಚರಣೆಗಳನ್ನೂ ಬೇಡವೆನ್ನಲಾಗುವುದಿಲ್ಲ. ಇಂಥ ಆಚರಣೆಯನ್ನು ಸಮರ್ಥಿಸಿ ಬರೆದ ಅಕ್ಷರ ಅವರ ಲೇಖನವೇ ನನ್ನಲ್ಲಿ ದಿಗ್ಬ್ರಮೆ ಮೂಡಿಸಿತು. ನಾನು ಬಹಳ ಗೌರವಿಸುವ ಲೇಖಕಿ ವೈದೇಹಿ ಅವರೂ ಅಕ್ಷರ ಅವರ ಲೇಖನ ಸಮರ್ಥಿಸಿಕೊಂಡಿರುವುದು ನನಗೆ ಉಸಿರುಗಟ್ಟಿದಂತಾಗಿದೆ. ಈ ಷಾಕ್ ನಿಂದ ಈ ಕ್ಷಣದವರೆಗೂ ಹೊರಬರಲು ಸಾಧ್ಯವಾಗಿಲ್ಲ. ಮಾನವೀಯತೆಗೆ ಮಸಿಬಳಿಯುವ ಇಂಥ ಆಚರಣೆಗಳನ್ನು ಶಬ್ದಾಂಡಬರಗಳಿಂದ ವೈಭವೀಕರಿಸಲು ಯತ್ನಿಸುವ ಮನಸುಗಳಿಗೆ ನನ್ನ ಸಾತ್ವಿಕ ದಿಕ್ಕಾರ

  ಉತ್ತರ

 2. ravindra
  ಫೆಬ್ರ 08, 2011 @ 17:05:04

  http://kpsaravu.blogspot.com/2010/12/blog-post.html

  ಮಡೆಸ್ನಾನ – ಒಂದು ಚಿಂತನೆ
  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶತ-ಶತಮಾನಗಳಿಂದ ಆಚರಣೆಯಲ್ಲಿರುವ ಮಡೆಸ್ನಾನದ ಬಗ್ಗೆ ಬಹಳಷ್ಟು ವಿರೋಧಾಭಿಪ್ರಾಯಗಳು ಇದೀಗ ಕೇಳಿಬರುತ್ತಿವೆ. ಡಿಸೆಂಬರ್ – ೧೦ ರ ವಿಜಯಕರ್ನಾಟಕದಲ್ಲಿ ೨ ಲೇಖನಗಳು ಬಂದಿವೆ. (ಪುಟ ಸಂಖ್ಯೆ – ೮ ರಲ್ಲಿ). ಕೋಡಿಬೆಟ್ಟು ರಾಜಲಕ್ಷ್ಮಿಯವರು “ಮಡೆಸ್ನಾನ ನಿಷೇಧ ಗೌರವದ ನಡೆ” ಎಂಬ ತಲೆಬರಹದಡಿಯಲ್ಲಿ ದೊಡ್ಡದಾದ ಲೇಖನವನ್ನೂ, ಕೊಪ್ಪಳದ ಅಲ್ಲಮಪ್ರಭು ಬೆಟ್ಟದೂರುರವರು ಸಣ್ಣ ಪ್ರತಿಕ್ರಿಯೆಯನ್ನೂ ನೀಡಿರುತ್ತಾರೆ. ಅದೂ ಅಲ್ಲದೆ ಬಹಳಷ್ಟು “ಪ್ರಗತಿವಂತ ಚಿಂತಕರು”, “ಪ್ರಗತಿಪರ ಸಂಘಟನೆಗಳು” ಎಂದು ಕರೆಯಲ್ಪಡುವವರೂ ಈ ಆಚರಣೆಯ ವಿರುದ್ಧ ದನಿಯೆತ್ತಿ ಪ್ರತಿಭಟನೆ ಮಾಡುವ ಹಂತಕ್ಕೆ ಬಂದಿದ್ದಾರೆ. ಈ ಲೇಖನವು ಮಡೆಸ್ನಾನದ ಬಗ್ಗೆ ಒಂದು ವಿಶ್ಲೇಷಣೆ.

  ಈ ಪದ್ಢತಿಯನ್ನು ವಿರೋಧಿಸುವವರು ಕೊಡುವ ಕಾರಣಗಳು ಈ ರೀತಿಯಾಗಿವೆ:
  ೧. ಎಂಜೆಲಲ್ಲಿ ಹೊರಳಾಡುವುದರಿಂದ ಚರ್ಮ ರೋಗಗಳು ಗುಣವಾಗುತ್ತವೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. (ಅವೈಜ್ಞಾನಿಕ)
  ೨. ಬ್ರಾಹ್ಮಣರು ಉಂಡ ಎಂಜೆಲಲ್ಲಿ ಕೆಳಜಾತಿಯವರು ಮಡೆಸ್ನಾನ ಮಾಡುವುದು ಪುರೊಹೀತಶಾಹಿ ಪದ್ಧತಿಗೆ ಪುಷ್ಟಿ ನೀಡಿ ಜಾತೀಯತೆಯ ಅಧಾರದಲ್ಲಿ ಸಮಾಜವು ಒಡೆಯುತ್ತದೆ.
  ೩. ಪ್ರಾಚೀನ ಪದ್ಧತಿ ಎಂದು ಅದನ್ನು ಅರ್ಥವಿಲ್ಲದೆ ಅನುಸರಿಸುವುದರಿಂದ ಮೂಢನಂಬಿಕೆಗೆ ಬೆಂಬಲ. (ಈಗಿನ ಕಾಲಕ್ಕೆ ಅಪ್ರಸ್ತುತ.) ಹಳೆಯ ಕಾಲದ ಪ್ರಾಣಿಬಲಿ ನೀಡುವ ಪದ್ಧತಿಗಳು ಈಗ ಮಾಯವಾಗಿರುವಂತೆ ಈ ಪದ್ಧತಿಯು ನಿಲ್ಲಬೇಕು.(ವ್ಯಾಪಕವಾಗಿ ಯಜ್ಞಗಳಲ್ಲಿ ಈಗ ಪ್ರಾಣಿ ಬಲಿಯು ಕಂಡುಬರುವುದಿಲ್ಲ.) ಸತೀ ಪದ್ಧತಿಯಂತೆ ಇದೂ ನಿಲ್ಲಬೇಕು.
  ೪. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮಡೆಸ್ನಾನವೇ ಪರಿಹಾರ ಎಂದು ಬಿಂಬಿಸುವ ಮನೋಭಾವ ಬದಲಾಗಬೇಕು.
  ೫. ಅನ್ನದ ಮೇಲೆ ಹೊರಳಾಡುವುದು ಅನ್ನಕ್ಕೆ ಮಾಡುವ ಅವಮಾನ.

  ಇವೆಲ್ಲಾ ಆಕ್ಷೇಪಗಳಿಗೆ ಸಾಮಾಜಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಸ್ವಲ್ಪ ಚಿಂತಿಸೋಣ.

  ವೈದಿಕ ಪರಂಪರೆಯಲ್ಲಿ ಯಜ್ಞ ಎನ್ನುವುದು ಕೇವಲ ಅಗ್ನಿಕುಂಡದಲ್ಲಿ ತುಪ್ಪ ಸುರಿಯುವುದಲ್ಲ, ಅದು ಒಂದು ಪರಿಕಲ್ಪನೆ, ತತ್ವಶಾಸ್ತ್ರ. ಊಟಮಾಡುವುದೂ ಯಜ್ಞವೆಂದೇ ಪರಿಗಣಿಸಲ್ಪಟ್ಟಿದೆ. ಊಟಮಾಡುವುದು ಯಜ್ಞವೆಂದಾದರೆ ಅಗ್ನಿ ರೂಪವು ಯಾವುದು? ಹವಿಸ್ಸು ಏನು? ಯಜ್ಞದ ಯಜಮಾನ ಯಾರು? ಎಂಬ ಅನುಮಾನಗಳು ಬರಬಹುದು. ಅಗ್ನಿಕುಂಡದ ಯಜ್ಞಕ್ಕೆ ೩೬೦ ಇಟ್ಟಿಗೆಗಳು ಇರುವಂತೆ, ಈ ದೇಹದ ೩೬೦ ಎಲುಬುಗಳೇ ಇಟ್ಟಿಗೆಗಳು.(ಎಲುಬು, ಮೃದು ಎಲುಬುಗಳ ಸಮೂಹ). ಊಟಮಾಡುವ ಜೀವನೇ ಈ ಯಜ್ಞದ ಯಜಮಾನ. ವೈಶ್ವಾನರ ಸ್ವರೂಪನಾದ ವಿಷ್ಣುವೇ ಈ ಯಜ್ಞದ ಅಗ್ನಿ. ಅನ್ನವೇ ಹವಿಸ್ಸು. ಮಂತ್ರಪುರಸ್ಸರವಾದ ಪರಿಶಿಂಚನವೇ ಈ ಯಜ್ಞದ ರಕ್ಷಣಾ ಕೋಟೆ. ಭಗವದ್ಗೀತೆಯಲ್ಲಿ:
  ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
  ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ || (ಅಧ್ಯಾಯ ೧೫, ಶ್ಲೋಕ ೧೪)
  ಸರಳ ಕನ್ನಡದಲ್ಲಿ:
  ನಾನು ವೈಶ್ವಾನರನಾಗಿ ಜೀವಿಗಳ ದೇಹವನ್ನು ಆಶ್ರಯಿಸಿದ್ದೇನೆ |
  ಪ್ರಾಣಾಪಾನಗಳ ಜೊತೆಯಾಗಿ ೪ ವಿಧವಾದ ಆಹಾರವನ್ನು ನಾನು ಪಚಿಸುತ್ತೇನೆ ||
  ಆದ್ದರಿಂದ ಊಟಮಾಡುವುದು ಕೇವಲ ದೇಹಪೋಷಣೆಗೆ ಅಲ್ಲ, ಅದು ಭಗವಂತನ ಉಪಾಸನೆಯ ಒಂದು ವಿಧ. ಸಂಸ್ಕೃತದಲ್ಲಿ ಯಜ್ಞ ಶಬ್ದವು “ಯಜ” ಧಾತುವಿನಿಂದ ಉಂಟಾದದ್ದು. “ಯಜ ದೇವಪೂಜಾಯಾಂ” ಎಂಬಂತೆ ಭಗವಂತನ ಆರಾಧನೆಯೇ ನಿಜವಾದ ಯಜ್ಞ. ಭೋಜನ ಸ್ವೀಕಾರ ಮಂತ್ರಗಳನ್ನು ಅವಲೋಕಿಸಿದರೆ ಉಣ್ಣುವುದು ಯಜ್ಞವೇ ಎಂಬುದು ಸ್ಪಷ್ಟ.
  ಯಜ್ಞವು ಆದಮೇಲೆ ಅದರಲ್ಲಿ ಉಳಿದ ಬೂದಿಯನ್ನು ವಿಭೂತಿಯಾಗಿ ಧರಿಸುವುದಿಲ್ಲವೇ? ಅದೇ ರೀತಿ ಸತ್ ಸಂಕಲ್ಪವಿದ್ದರೆ ಪ್ರಾಣಾಗ್ನಿಹೋತ್ರವಾದ ಭೋಜನದ ಉಳಿಕೆಯೂ ಕೂಡ ಪವಿತ್ರವೇ ಸರಿ. ಬೂದಿಯನ್ನು ಬೂದಿಯಾಗಿ ಕಂಡರೆ ಅದು ವಿಭೂತಿಯಾಗದು, ಊಟದ ಉಳಿಯುವಿಕೆಯನ್ನು ಎಂಜಲಾಗಿ ಕಂಡರೆ ಅದು ರೋಗನಿವಾರಕವಾದ ದಿವ್ಯ ಔಷಧಿಯಾಗದು. ಮಡೆಸ್ನಾನದ ಉದ್ದೇಶವೇ ಇದು. ಭಗವಂತನಿಗೆ ಹರಕೆ ಹೊತ್ತ ಭಕ್ತರ ಸೇವೆಯಲ್ಲಿ ಇದೂ ಒಂದು ವಿಧಾನ. ಇದುವೇ ವಿಧಾನವಲ್ಲ, ಇದೂ ಒಂದು ವಿಧಾನ.

  ತಾತ್ವಿಕವಾಗಿ, ಧಾರ್ಮಿಕವಾಗಿ ಇದನ್ನು ನೋಡಿದ್ದಾಯಿತು. ಇನ್ನು ಈ ಪದ್ಧತಿಯನ್ನು ವಿರೋಧಿಸುವವರ ಸಂಶಯಗಳನ್ನು ನೇರವಾಗಿಯೇ ನೊಡೋಣ.

  ೧. ಎಂಜಲಲ್ಲಿ ಹೊರಳಾಡುವುದರಿಂದ ಚರ್ಮ ರೋಗಗಳು ಗುಣವಾಗುತ್ತವೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. (ಅವೈಜ್ಞಾನಿಕ).
  ಮನಸ್ಸಿನ ನಂಬಿಕೆಯು ದೃಢವಾಗಿದ್ದು, ಭಗವಂತನಲ್ಲಿ ಭಕ್ತಿಯಿದ್ದರೆ ಚರ್ಮ ರೋಗವೇಕೆ, ಸರ್ವ ರೋಗಗಳೂ ಗುಣವಾಗುವುದು. ಮಂಜುಗಡ್ಡೆಯನ್ನು ಕೈಯಲ್ಲಿ ಇಟ್ಟು ಹಿಪ್ನೋಟಿಸಂ ಮಾಡಿ ಕೈಯಲ್ಲಿಟ್ಟಿದ್ದು ಬೆಂಕಿ ಎಂದರೆ ಚರ್ಮವು ನಿಜವಾಗಿಯು ಸುಡುವುದಲ್ಲವೇ? ಶರಣಾಗತಿ, ಭಕ್ತಿಯಿಂದ ಅಸಾಧ್ಯ ಯಾವುದು? ಇದಕ್ಕೆ ವಿಜ್ಞಾನವು ಏಕೆ, ಚರ್ಮ ರೋಗ ಗುಣ ಹೊಂದಿದ ಭಕ್ತರೇ ಸಾಲದೇ?

  ೨. ಬ್ರಾಹ್ಮಣರು ಉಂಡ ಎಂಜೆಲಲ್ಲಿ ಕೆಳಜಾತಿಯವರು ಮಡೆಸ್ನಾನ ಮಾಡುವುದು ಪುರೊಹೀತಶಾಹಿ ಪದ್ಧತಿಗೆ ಪುಷ್ಟಿ ನೀಡಿ ಜಾತೀಯತೆಯ ಅಧಾರದಲ್ಲಿ ಸಮಾಜವು ಒಡೆಯುತ್ತದೆ.
  ಪರಿಶಿಂಚನ ಮಾಡಿ, ಮಂತ್ರಪುರಸ್ಸರವಾಗಿ, ಪ್ರಾಣಾಗ್ನಿಹೋತ್ರವಾಗಿ ಊಟಮಾಡುವುದು ಬ್ರಾಹ್ಮಣರಲ್ಲದೆ ಮತ್ತಾರು? ಅದಕ್ಕೇ ಅಲ್ಲವೆ ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಿರುವುದು. ಮತ್ತೆ ಮಡೆಸ್ನಾನ ಮಾಡುವುದರಲ್ಲಿ ಬ್ರಾಹ್ಮಣರೂ ಸೇರಿದ್ದಾರೆ ಎನ್ನುವುದು ನಿಸ್ಸಂಶಯ.

  ೩. ಪ್ರಾಚೀನ ಪದ್ಧತಿ ಎಂದು ಅದನ್ನು ಅರ್ಥವಿಲ್ಲದೆ ಅನುಸರಿಸುವುದರಿಂದ ಮೂಢನಂಬಿಕೆಗೆ ಬೆಂಬಲ. (ಈಗಿನ ಕಾಲಕ್ಕೆ ಅಪ್ರಸ್ತುತ.) ಹಳೆಯ ಕಾಲದ ಪ್ರಾಣಿಬಲಿ ನೀಡುವ ಪದ್ಧತಿಗಳು ಈಗ ಮಾಯವಾಗಿರುವಂತೆ ಈ ಪದ್ಧತಿಯು ನಿಲ್ಲಬೇಕು.(ವ್ಯಾಪಕವಾಗಿ ಯಜ್ಞಗಳಲ್ಲಿ ಈಗ ಪ್ರಾಣಿ ಬಲಿಯು ಕಂಡುಬರುವುದಿಲ್ಲ.) ಸತೀ ಪದ್ಧತಿಯಂತೆ ಇದೂ ನಿಲ್ಲಬೇಕು.
  ಪ್ರಾಣಿ ಬಲಿ, ಸತೀ ಪದ್ಧತಿಗಳು ಹಿಂಸಾತ್ಮಕವಾದದ್ದರಿಂದ ಅದನ್ನು ಕಾಲಕ್ಕೆ ತಕ್ಕಂತೆ ಕೈಬಿಡಲಾಯಿತು. ಮಡೆಸ್ನಾನ ಮಾಡುವ ಭಕ್ತರಿಗೇ ಇದರಲ್ಲಿ ಅಸಹ್ಯವಿಲ್ಲವೆಂದಾದರೆ ಅವರ ನಂಬಿಕೆಯನ್ನು ಪ್ರಶ್ನಿಸುವುದು ಪ್ರಗತಿಪರರ ಅಧಿಕಪ್ರಸಂಗವಲ್ಲವೇ? ಷಷ್ಠಿಯ ದಿನ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ, ಬ್ರಾಹ್ಮಣರ ಪಂಕ್ತಿಯಲ್ಲಿ ಪುರಾಣ ಪ್ರಸಿದ್ಧ ಅಶ್ವತ್ಥಾಮ ಆಚಾರ್ಯರು ಸಾಮನ್ಯ ಬ್ರಾಹ್ಮಣನ ರೂಪದಲ್ಲಿ ಬಂದು ಊಟಮಾಡುತ್ತಾರೆ ಎನ್ನುವುದು ಸುತ್ತಲಿನ ಜನಮಾನಸದಲ್ಲಿ ಪ್ರಸಿದ್ಧ. ಒಂದು ವೇಳೆ ಅಶ್ವತ್ಥಾಮಾಚಾರ್ಯರು ಉಂಡ ಎಲೆಯಲ್ಲಿ ಸೇವೆ ಸಲ್ಲಿಸುವುದು ಭಕ್ತರ ಭಾಗ್ಯವಲ್ಲವೇ.
  ನಮಗೆ ತಿಳಿಯದಿದ್ದದ್ದೆಲ್ಲಾ ಮೂಢನಂಬಿಕೆಯಾದರೆ, ಅಥವಾ ಬೇರೆಯವರ ನಂಬಿಕೆಯು ನಮಗೆ ಮೂಢನಂಬಿಕೆಯಾದರೆ ಅದಕ್ಕೇ ನಾವೇ ಹೊಣೆಯಲ್ಲವೇ?

  ೪. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮಡೆಸ್ನಾನವೇ ಪರಿಹಾರ ಎಂದು ಬಿಂಬಿಸುವ ಮನೋಭಾವ ಬದಲಾಗಬೇಕು.
  ಮಡೆಸ್ನಾನವೇ ಪರಿಹಾರವಲ್ಲ, ಮಡೆಸ್ನಾನವೂ ಒಂದು ಪರಿಹಾರ. ಉರುಳುಸೇವೆಯು ಶರಣಾಗತಿಯ ಪರಾಕಾಷ್ಠೆ. ಮಡೆಸ್ನಾನವೂ ಉರುಳುಸೇವೆಯ ಇನ್ನೊಂದು ವಿಧ. ಇದೂ ಅಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯ ಆಚರಣೆಗಳು ನಮ್ಮ ಸಂಸ್ಕೃತಿಯ ವಿಶಿಷ್ಟತೆಯಲ್ಲವೇ. ವೈವಿಧ್ಯತೆಯೇ ಸುಂದರ, ಏಕತೆಯೇ ಇದಕ್ಕೆ ಆಧಾರ. ಒಬ್ಬ ದೇವನ ಉಪಾಸನೆಗೆ ಸಾವಿರ ಹೆಸರುಗಳೂ, ಸಾವಿರ ಮಾರ್ಗಗಳೂ ಇದೆಯಲ್ಲವೆ.

  ೫. ಅನ್ನದ ಮೇಲೆ ಹೊರಳಾಡುವುದು ಅನ್ನಕ್ಕೆ ಮಾಡುವ ಅವಮಾನ.
  ಮಡೆಸ್ನಾನ ಎಂದರೆ ಅನ್ನದ ಮೇಲೆ ಹೊರಳಾಡುವುದಲ್ಲ. ಅದು ಭೋಜನವಾದ ನಂತರದ ಎಲೆಗಳ ಮೇಲೆ ಉರುಳುಸೇವೆ ಮಾಡುವುದು. ಮಡೆ ಎಂದರೆ ತುಳು ಭಾಷೆಯಲ್ಲಿ ಎಂಜಲು ಎಂದರ್ಥ. ಶರಣರು ಹಚ್ಚುವ ವಿಭೂತಿಯು ಪಾಮರರಿಗೆ ಕೇವಲ ಬೂದಿಯಲ್ಲವೆ. ತಿಳಿದವನಿಗೇ ಅಲ್ಲವೆ ಪಾವಿತ್ರ್ಯತೆಯ ಅರಿವು ಆಗುವುದು.

  ಯಜ್ಞದ ಹಿನ್ನೆಲೆಯಲ್ಲಿ ಇದನ್ನು ನೋಡಿದಾಗ ಮಡೆಸ್ನಾನ ಎನ್ನುವುದು ಎಷ್ಟು ಅರ್ಥಪೂರ್ಣ. ಮಡೆಸ್ನಾನ ಮಾತ್ರವಲ್ಲದೆ ಆದಿ ಸುಬ್ರಹ್ಮಣ್ಯದ ನದಿಯಲ್ಲಿ ಮುಳುಗಿ ಸ್ನಾನ ಮಾಡುವುದರಿಂದಲು ಚರ್ಮ ರೋಗಗಳು ಗುಣವಾಗುತ್ತವೆ. ಮೈ, ಕೈಯಲ್ಲಿ ಗುಳ್ಳೆಗಳೆದ್ದರೆ, ಚರ್ಮ ರೋಗ ಬಂದರೆ ಬೆಳ್ಳಿಯ ನಾಗನನ್ನು ದೇವರಿಗೆ ಅರ್ಪಿಸುವುದು ಹಾಗು ಇದರಿಂದ ಪ್ರಯೋಜನ ಉಂಟಾಗುವುದನ್ನು ಬಹಳ ಪ್ರತ್ಯಕ್ಷವಾಗಿ ನಾನು ಕಂಡವನಿದ್ದೇನೆ.

  ತಿಳಿಯದೇ ವಿರೋಧಿಸುವುದೇ “ಪ್ರಗತಿಪರ” ಸಂಘಟನೆಗಳ ಧ್ಯೇಯವಾದರೆ ಅದಕ್ಕೆ ಮರುಗೋಣವೆ ಅಲ್ಲ ಈ ರೀತಿ ಬರೆದು ತಿಳಿಸುವ ಪ್ರಯತ್ನ ಮಾಡೋಣವೆ? ಅಧ್ಯಯನಶೀಲತೆಯಿಲ್ಲದೆ ತಮ್ಮ ಅಜ್ಞಾನವನ್ನು ದಿನ ಪತ್ರಿಕೆಗಳಲ್ಲಿ ತೋರಿಸುವುದು ಕೇವಲ ವಿರೋಧಿಸುವುದೇ ಅಥವಾ ಅಜ್ಞಾನದ ಇನ್ನೊಂದು ಮುಖವೇ?

  ಉತ್ತರ

 3. ಶ್ರೀವತ್ಸ ಜೋಶಿ
  ಫೆಬ್ರ 07, 2011 @ 19:46:30

  ಈ ಚರ್ಚೆಯನ್ನು ನಿರ್ವಹಿಸಿದ ‘ಅವಧಿ’ಯ ರೀತಿ ನನಗೂ ಇಷ್ಟವಾಗಲಿಲ್ಲ. ವೈದೇಹಿಯವರ ಲೇಖನ ಮತ್ತು ನಿನ್ನೆ ಭಾನುವಾರ ಪ್ರಜಾವಾಣಿಯಲ್ಲಿ ಪ್ರಕಟವಾದ “ಸಿಪ್ಪೆ ಜಗಿಯುವ ಕೆಲಸ” ಎಂಬ ಪತ್ರ (ಟಿ.ಎಲ್.ಪ್ರವೀಣ್ ಮತ್ತು ಸಂದೀಪ್ ಕುಮಾರ್ ಶೆಟ್ಟಿ, ಶಿವಮೊಗ್ಗದಿಂದ ಬರೆದಿರುವುದು) ಇವನ್ನು ‘ಅವಧಿ’ಯು ಬೇಕಂತಲೇ ಚರ್ಚಾವೇದಿಕೆಯಿಂದ ಮರೆಯಲ್ಲಿಟ್ಟಿತು ಎಂದುಕೊಳ್ಳುತ್ತೇನೆ.

  ಉತ್ತರ

  • avadhi
   ಫೆಬ್ರ 07, 2011 @ 20:12:45

   ಅವಧಿ ತನಗೆ ಬರುವ ಲೇಖನಗಳನ್ನು ಮಾತ್ರ ಪ್ರಕಟಿಸುತ್ತದೆ. ಚರ್ಚೆ ಆರಂಭಕ್ಕಾಗಿ ಅಕ್ಷರ ಬರೆದ ಲೇಖನವನ್ನು ಪ್ರಕಟಿಸಿರುವುದನ್ನು ಬಿಟ್ಟರೆ ಉಳಿದ ಎಲ್ಲವೂ ಅವಧಿಯಲ್ಲಿ ಪ್ರಕಟಣೆಗಾಗಿ ಆಯಾ ಲೇಖಕರು ಕಳಿಸಿರುವುದು. ನೀವು ಈ ಕಾಮೆಂಟ್ ನಲ್ಲಿ ತಿಳಿಸಿರುವ ಲೇಖನ ನಮಗೆ ಬಂದಿಲ್ಲ. ಹಾಗಾಗಿ ಮರೆಯಲ್ಲಿಡುವ ಪ್ರಶ್ನೆ ಇಲ್ಲ. ಅಥವಾ ಅವಧಿಯಲ್ಲಿ ಬಂದಿರುವ ಲೇಖನಗಳಿಗೆ ವ್ಯತಿರಿಕ್ತವಾದ, ಪ್ರತಿಕ್ರಿಯಾ ಲೇಖನಗಳೂ ಬಂದಿಲ್ಲ. ನೀವು ಲೇಖನ ಕಳಿಸಿದ್ದರೂ ಪ್ರಕಟ ಮಾಡಬಹುದಿತ್ತು.

   ಉತ್ತರ

 4. Dunkin Jalki
  ಫೆಬ್ರ 07, 2011 @ 17:14:51

  ಸಿಕ್ಕವರನ್ನೆಲ್ಲಾ ಬಯ್ಯುವುದೇ ಸಮಾಜ ಶಾಸ್ತ್ರ ನಮ್ಮ ಡಿ.ಎಸ್.ನಾಗಭೂಷಣರ ಪ್ರಕಾರ.

  ಉತ್ತರ

 5. vinayka
  ಫೆಬ್ರ 07, 2011 @ 15:25:15

  ಈ ವಿಚಾರದಲ್ಲಿ ಅವಧಿ ನಿಲುವು ಸರಿ ಅನ್ನಿಸಲಿಲ್ಲ. ಚರ್ಚೆ ಸಾಗುತ್ತ, ಸಾಗುತ್ತ ವೈಯಕ್ತಿಕ ದಾಳಿಯತ್ತ ಹೊರಟಿದೆ. ಅಕ್ಷರ ಕೂಡ ಒಬ್ಬ ಉತ್ತಮ ಬರಹಗಾರರು, ಭಿನ್ನ ಚಿಂತನೆ ಉಳ್ಳವರು. ವೈದೇಹಿಯವರ ಕುರಿತು ಹೇಳಬೇಕಿಲ್ಲ. ಒಬ್ಬನಿಗೆ ದೋಸೆ ಇಷ್ಟವಾಗಬಹುದು. ಮತ್ತೊಬ್ಬನಿಗೆ ಇಡ್ಲಿ…ಹಾಗೆ ನಂಬಿಕೆಗಳೂ ಕೂಡ. ಒಬ್ಬನಿಗೆ ಬಾಬಾ ಇಷ್ಟವಾಗುತ್ತಾರೆ. ಮತ್ತೊಬ್ಬರಿಗೆ ಶ್ರೀ,ಶ್ರೀ ನಿತ್ಯಾನಂದರು….ಕುಕ್ಕೆಯ ಭಕ್ತರಿಗೆ ಧರ್ಮಸ್ಥಳದಲ್ಲಿ ನಂಬಿಕೆ ಇರಬೇಕು ಎಂಬಂಥ ನಿಲುವು ಸರಿಯಲ್ಲ. ಪ್ರತಿ ಸಾಹಿತಿಗೂ ಅವರದ್ದೇ ಆದ ಅಭಿಮಾನಿ ಬಳಗ ಇರುವಂತೆ ದೇವರಿಗೂ ಕೂಡ! ಅಲ್ಲಿ ಸೇವೆ ಮಾಡುವವರಿಗೇ ಏನು ಅನ್ನಿಸುವುದಿಲ್ಲ ಎಂಬುದು ಮುಂದುವರಿಯುತ್ತಿರುವ ಸೇವೆಯಿಂದ ಸಾಬೀತಾಗಿದೆ. ಹೇಗೆ ಕಾಮದ ತೃಷೆಯುಳ್ಳವರು ಇರುವವರೆಗೂ ಸೂಳೆ ಇರುತ್ತಾಳೊ, ಹಾಗೆ ಭಕ್ತರೂ ಇರುವವರೆಗೂ ಸೇವೆ ಇರುತ್ತದೆ…ಹಾಗಾಗಿ ಈ ಕುರಿತು ವೈಯಕ್ತಿಕ ಕಚ್ಚಾಟ ಸರಿಯಲ್ಲ ಅನ್ನಿಸುತ್ತಿದೆ. ಗುಂಪುಗಾರಿಕೆಗೆ ಇಂಬು ಕೊಡುವ ಈ ಚರ್ಚೆ ನಿಲ್ಲಿಸುವುದು ಸೂಕ್ತ. ಇಲ್ಲವಾದರೆ ಟಿಆರ್‌ಪಿ ಬೆನ್ನತ್ತಿದ ವಾಹಿನಿಗಳಿಗೂ, ಅವಧಿಗೂ ಯಾವುದೇ ವ್ಯತ್ಯಾಸ ಕಾಣಲಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ…
  ಕೋಡ್ಸರ

  ಉತ್ತರ

 6. raju
  ಫೆಬ್ರ 07, 2011 @ 14:39:33

  ಒಂದು ವಿಷಯ ಸ್ಪಷ್ಟವಾಗಲಿಲ್ಲ: ಅದು ಅಲ್ಲಿ ಪ್ರಕಟವಾಗದ ಕಾರಣ ಆ ಪ್ರತಿಕ್ರಿಯೆಯನ್ನು ಕಳಿಸಿಕೊಟ್ಟಿದ್ದಾರೆ. ಅದು ಇಲ್ಲಿದೆ- ಎಂದರೆ ಏನು? ಪ್ರಜಾವಾಣಿಯಲ್ಲಿ ನಿರಾಕರಣೆಗೆ ಒಳಗಾದ ಬರಹಗಳನ್ನೆಲ್ಲ ನೀವು ಪ್ರಕಟಿಸುವಿರಾ? ಅದು ಅಲ್ಲಿ ಪ್ರಕಟವಾಗದ ಕಾರಣ ಆ ಪ್ರತಿಕ್ರಿಯೆಯನ್ನು ಕಳಿಸಿಕೊಟ್ಟಿದ್ದಾರೆ. ಇಷ್ಟಕ್ಕೂ ನಾಗಭೂಷಣರನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (edited) -ರಾಜು

  ಉತ್ತರ

 7. ಸಂದೀಪ್ ಕಾಮತ್
  ಫೆಬ್ರ 07, 2011 @ 14:31:39

  Case re opened !

  ಉತ್ತರ

 8. R. ರಾಣಿ
  ಫೆಬ್ರ 07, 2011 @ 13:09:47

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: