ಚಂದ್ರಶೇಖರ ಆಲೂರು ಕಾಲಂ: ನಿತ್ಯ ಮಡೆ ಸ್ನಾನ ಮಾಡುವ ಮನಸ್ಸುಗಳು

“ಅದೊಂದು polished version of TV-9 report. ಈ ಬಗೆಯ ಮೂಢನಂಬಿಕೆಗಳು, ಆಚರಣೆಗಳ ಬಗ್ಗೆ ಅಂಥ ಛಾನೆಲ್‌ಗಳು hype ಮಾಡಿ ತೋರುವ ಪರಿಣಾಮವನ್ನೇ ಈ ಲೇಖನ ಕೂಡ ಮಾಡುತ್ತದೆ. “ಈಚೀಚೆಗಂತೂ ‘ಮಡೆ ಸ್ನಾನ’ ಮಾಡುವವರ ಸಂಖ್ಯೆ ವಿಪರೀತ ಹೆಚ್ಚುತ್ತಿದೆ ಅಂತೆ ಯಾಕೆ?” ಎಂದು ಅವರು ಪ್ರಶ್ನಿಸುತ್ತಾರೆ. ಕಾಲ ಹಿಮ್ಮುಖವಾಗಿ ಚಲಿಸುತ್ತಿರುವುದೇ ಇದಕ್ಕೆ ಕಾರಣ. ಇಂಥ ಮೂಢನಂಬಿಕೆಗಳನ್ನ ಕಡೆಯ ಪಕ್ಷ ಬಹಿರಂಗವಾಗಿ ಸಮರ್ಥಿಸಲು ಹಿಂಜರಿಯುತ್ತಿದ್ದವರು ಇಂದು ರಾಜಾರೋಷವಾಗಿ ಕಿಂಚಿತ್ತು ಅಳುಕಿಲ್ಲದೆ ಆ ಕೆಲಸ ಮಾಡುತ್ತಿದ್ದಾರೆ. ಆ ಅಮಾಯಕರು ಹರಕೆ ತೀರಿಸಲು ಒಂದು ದಿನ ‘ಮಡೆ ಸ್ನಾನ’ ಮಾಡಿದರೆ ಮಾನಸಿಕವಾಗಿ ದಿನ ನಿತ್ಯ ಮಡೆ ಸ್ನಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ…”

ಹೀಗೆ ಏನೋ ಹೇಳಿ ಫೋನ್ ಇಟ್ಟೆ. ನೀವು ಹನ್ನೊಂದು ವರ್ಷಗಳಿಂದ ನನ್ನನ್ನು ಗಮನಿಸಿದ್ದೀರಿ. ‘ಒಲಿದಂತೆ ಹಾಡುವೆ’ಯಲ್ಲಿ ಸಾಹಿತ್ಯಕ ಚರ್ಚೆ, ವಾಗ್ವಾದಗಳು ಕಾಣಿಸಿಕೊಂಡಿರುವುದು ತೀರಾ ಅಪರೂಪ. ಇದಕ್ಕೆ ಮುಖ್ಯ ಕಾರಣ ಚರ್ಚಾ ಪಟುತ್ವದ ಬಗ್ಗೆ ನನಗಿರುವ ಅಲರ್ಜಿ. ‘ಅಕ್ಷರ ಅಟಾಟೋಪ’ ಲೇಖನವನ್ನ ಮೆಚ್ಚಿಕೊಂಡು ಅಸಂಖ್ಯಾತ ಓದುಗರು ನನಗೆ ಫೋನ್ ಮಾಡಿದರು. ನನ್ನ ಬರಹಗಳ ಖಾಯಂ ಓದುಗರಾದ ಮಿತ್ರ ಕೃಷ್ಣಪ್ರಸಾದ್ ಇತರರಂತೆಯೇ ಮೆಚ್ಚಿಕೊಂಡು ಮಾತಾಡಿದರೂ ಕಡೆಯಲ್ಲಿ “ಸಾರ್ ಇದು ನಿಮಗೆ ಬೇಕಿತ್ತಾ? ನೀವು ತೇಜಸ್ವಿಯವರಂತೆ ನಿಮ್ಮ ಪಾಡಿಗೆ ನೀವು ಬರೆದುಕೊಂಡಿದ್ದೀರಿ. ಈ ವಿವಾದ ಎಲ್ಲ ನಿಮಗೆ ಯಾಕೆ? ಸುಬ್ಬಣ್ಣ ಕೃಪಾ ಪೋಷಿತ ನಾಟಕ ಮಂಡಳಿ ಬಹು ದೊಡ್ಡದು ಸರ್. ಹರಕೆಗೂ ಹರಾಜಿಗೂ ಸಂಬಂಧ ಇಲ್ಲ ಅನ್ನೋದು ಅಕ್ಷರನಿಗೆ ಗೊತ್ತಿಲ್ಲ ಅಂದುಕೊಂಡಿದ್ದೀರಾ? ಅದು ಜಾಣ್ಮೆ ಅಷ್ಟೆ. ನೀವು ಏನೇ ಪ್ರತಿಕ್ರಿಯಿಸಿದರೂ ಅದು ಗಾಳಿಯಲ್ಲಿ ಗುದ್ದಿ ನೋಯಿಸಿಕೊಂಡಂತೆ…” ಮುಂತಾಗಿ ಹೇಳಿದರು.

ಹಾಗಿರುವುದೂ ಒಂದರ್ಥದಲ್ಲಿ ತಪ್ಪಾಗುತ್ತದೆ. ‘ದಿವ್ಯ ನಿರ್ಲಕ್ಷತೆಯೇ ವರ ಕವಿಯ ಪಂಥ’ ಎಂದ ಕುವೆಂಪು ಕೂಡ ಪುರೋಹಿತಷಾಹಿಯ ವಿರುದಟಛಿ ಹರಿಹಾಯ್ದರು. ತೇಜಸ್ವಿ ಕೂಡ ಹಲವು ಕಾಲಘಟ್ಟಗಳಲ್ಲಿ ಇಂಥ ಕ್ರಿಯೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದಾರೆ. ಅಷ್ಟೆ ಅಲ್ಲ ಕನ್ನಡದ ಎಲ್ಲ ಮಹತ್ವದ ಲೇಖಕರೂ ಈ ಕೆಲಸ ಮಾಡಿದ್ದಾರೆ. ಹಾಗೂ ಇದು ಒಬ್ಬ ಲೇಖಕನ ನೈತಿಕ ಹೊಣೆ ಕೂಡ. ಎಂಬತ್ತರ ದಶಕದಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಪಾಲ್ಗೊಂಡಾಗಿನಿಂದ ಈವರೆಗೆ ನಾನೂ ಸಹ ನನ್ನದೇ ಆದ ರೀತಿಯಲ್ಲಿ ಸ್ಪಂದಿಸಿದ್ದೇನೆ. ಲಂಕೇಶರು ಅವರ ಪತ್ರಿಕೆಯಿಂದ ನನ್ನನ್ನು ದೂರ ಮಾಡಲು ಅವರ ಪರ್ಯಾಯ ಸಾಹಿತ್ಯ ಸಮ್ಮೇಳನದ ಬಗ್ಗೆ ಪ್ರತಿಕ್ರಿಯಿಸಿದ್ದೇ ಕಾರಣ. (‘ಆಲೂರು

ತೀರಾ ಇಷ್ಟೊಂದು ಇನ್ನೊಸೆಂಟ್ ಅಂಥ ಗೊತ್ತಿರಲಿಲ್ಲ ಅವನಿಗೆ ಯಾಕೆ ಬೇಕಿತ್ತು ಇದೆಲ್ಲ ಉಸಾಬರಿ.’ಎಂದು ಲಂಕೇಶರು ಹಿರಿಯ ಕವಿ ರಾಮಚಂದ್ರ ಶರ್ಮರ ಬಳಿ ಹೇಳಿದ್ದರಂತೆ!) ಸದಾ ಹೃದಯದ ಮಾತನ್ನ ಆಲಿಸುವ ನಾನು ಎಂದೂ ನನಗೆ ಸರಿ ತೋರಿದ್ದನ್ನ ಹೇಳಲು ಹಿಂಜರಿದವನಲ್ಲ ಹಾಗೆಯೇ ವ್ಯಕ್ತಿ ನಿಂದನೆ ನನ್ನ ಹೃದಯದ ಪರಿಭಾಷೆ ಅಲ್ಲ.

***

ಕಳೆದೆರಡು ವಾರದ ಹಿಂದೆ ಈ ಅಂಕಣದಲ್ಲಿ ಅಕ್ಷರರ ಹರಕೆ-ಹರಾಜು ಬಗ್ಗೆ ಪ್ರತಿಕ್ರಿಯಿಸಿದ್ದನ್ನು ನೀವು ಓದಿದ್ದೀರಿ. ದಿನಪತ್ರಿಕೆಯೊಂದರ ಸಾಪ್ತಾಹಿಕ ಪುರವಣಿಯಲ್ಲಿ ಆ ಲೇಖನ ಪ್ರಕಟವಾಗಿತ್ತು. ಈ ಭಾನುವಾರ ಕನ್ನಡದ ಹಿರಿಯ ಲೇಖಕಿ ವೈದೇಹಿಯವರು ಅಕ್ಷರರ ಲೇಖನವನ್ನ ಬೆಂಬಲಿಸಿ ಬರೆದಿದ್ದಾರೆ. ಅದನ್ನು ‘ನಾ ಓದಿದ ಅಪರೂಪದ, ಹೊಸತೊಂದು ಓದಿನಗತ್ಯದ, ಚಿಂತನಶೀಲ ಬರಹವದು’ ಎಂದು ಬಣ್ಣಿಸಿದ್ದಾರೆ. ಅಕ್ಷರರ ಹರಕೆ ಹರಾಜು ಲೇಖನ ಓದಿದಾಗ ನಾನು ವ್ಯಗ್ರನಾಗಿದ್ದೆ. ತುಂಬಾ ಕೋಪ ಬಂದಿತ್ತು. ಆದರೆ ವೈದೇಹಿಯವರ ಲೇಖನವನ್ನ ಓದಿದಾಗ ಮನಸ್ಸಿಗೆ ತುಂಬಾ ನೋವಾಯ್ತು. ಕನ್ನಡದ ಮುಖ್ಯ ಲೇಖಕರಲ್ಲಿ ಒಬ್ಬರೆಂದು ಹೆಸರಾಗಿರುವ ವೈದೇಹಿಯಂಥವರು ಹೀಗೆ ಚಿಂತಿಸಲು ಸಾಧ್ಯವಾ ಎಂಬ ನೋವು ಅದು. ತಮ್ಮ ವಾದಕ್ಕೆ ಪೂರಕವಾಗಿ ವೈದೇಹಿ ಥೇಟ್ ವರದಿಗಾರ್ತಿಯಂತೆ ಒಂದು ಘಟನೆಯನ್ನು ಬಣ್ಣಿಸುತ್ತಾರೆ. ವರದಿಗಾರ್ತಿ ಎಂದು ಕರೆಯಲು ಕಾರಣವಿದೆ. ಅವರು ಕೂಡ ನಮ್ಮ ದಿನಪತ್ರಿಕೆಗಳ ಕ್ರೈಂ ವರದಿಗಾರರಂತೆ “… ಹೆಸರು ಗೀತಾ ಮಯ್ಯ” ಎಂದು ಆರಂಭಿಸಿ ಆವರಣದಲ್ಲಿ (ಹೆಸರು ಬದಲಿಸಿದೆ) ಎಂದು ಕೊಡುತ್ತಾರೆ. ತಮ್ಮ ಗೆಳತಿಯೊಬ್ಬಳು ಹೀಗೆ ಮಾಡಿದಳು ಅಂದರೆ ಸಾಕಿತ್ತು.

ಕಾಲ್ಪನಿಕ ಹೆಸರು ಮತ್ತು ಅದಕ್ಕೊಂದು ಷರಾದ ಅಗತ್ಯವೇನೂ ಇರಲಿಲ್ಲ. ಇರಲಿ, ಅವರ ಗೆಳತಿಯೊಬ್ಬಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಲೇಖಕಿಯನ್ನ ಕರೆದುಕೊಂಡು ಹೋಗಿ ಅವರ ಅರಿವಿಗೆ ಬರುವ ಮುನ್ನವೇ ಹಠಾತ್ತನೆ ಲೇಖಕಿ ಉಂಡೆದ್ದ ಎಲೆಯ (ಪಂಕ್ತಿ ಭೋಜನ) ಮೇಲೆಯೇ ಉರುಳು ಸೇವೆ ಮಾಡುತ್ತಾಳೆ. ಅದೊಂದು ಕಾಲ್ಪನಿಕ ಹೆಸರಾದ್ದರಿಂದ ಏಕವಚನ ತಾನಾಗಿಯೇ ಬಂದು ಬಿಟ್ಟಿದೆ, ಕ್ಷಮೆ ಇರಲಿ. ನಂತರ ವೈದೇಹಿ ಗೆಳತಿಯ ಕ್ರಮವನ್ನು ಸುಂದರ ಪದಪುಂಜಗಳಿಂದ ಹೀಗೆ ಸಮರ್ಥಿಸಿಕೊಳ್ಳುತ್ತಾರೆ : ಪರಿಹಾರ ಕಾಣದ ವ್ಯಾಕುಲತೆ, ಸಂಕಟಗಳ ಪರಾಕಾಷ್ಠೆಯಲ್ಲಿ ಜಾತಿ ವರ್ಗ, ಮತ ವಿಚಾರ ಯಾವುದೂ ಇರುವುದಿಲ್ಲ. ‘ಸದ್ಯ ಇದು ಆಗಬೇಕು, ಬಂದಿರುವ ಆಪತ್ತು ಕಳೆಯಬೇಕು, ಎದುರಾದ ಗುಡ್ಡ ಮಂಜಿನಂತೆ ಕರಗಬೇಕು.  ಕಾಣದ ದೇವರೇ ಕಾಪಾಡು’ ಎಂಬುದು ಬಿಟ್ಟರೆ ಅಲ್ಲಿ ನಾಚಿಕೆ, ನಾನು, ಅಹಂ ಅವಮಾನ, ಜಾತಿ ಭೇದಗಳ ಗಣನೆಯಿಲ್ಲ. ಪ್ರಾಯಶಃ ಆ ಎಲ್ಲದರ ನೆನಪೇ ಕರಗಿ ಹೋಗುವ ಸ್ಥಿತಿ ಅದು.

ದೇವರ ದಾಸಾನುದಾಸನಾಗುವುದನ್ನ, ಭಕ್ತ ಪರಾನತೆಯನ್ನ ನಮ್ಮ ವಚನಕಾರರು ಹಾಗೂ ದಾಸ ಶ್ರೇಷ್ಠರು ಹೃದಯಂಗಮವಾಗಿ ಹಾಡಿದ್ದಾರೆ. ನಾನತ್ವ ಮೊದಲು ತೊರೆಯಬೇಕು ಎಂದು ಸರಳವಾಗಿ ಹೇಳಿದ್ದಾರೆ. ಇದನ್ನೇ ಲೇಖಕಿ ನಾಚಿಕೆ, ಅಹಂ ಮುಂತಾಗಿ ಕರೆದಿದ್ದಾರೆ. ಆದರೆ ವಚನಕಾರರಿಗಿಂಥ ಹಲವು ಶತಮಾನ ಹಿಂದೆ ಹೋಗಿದ್ದಾರೆ. ಲೇಖಕಿ ಗೀತಾಮಯ್ಯಳ ಬಗ್ಗೆ ಬರೆದದ್ದನ್ನೆ ಮುಂದುವರಿಸಿ, “ವಿಧವೆಯಾದ ಯಮುನಾ ಎಂಬ ಗೆಳತಿ ಗಂಡನ ಮನೆಯವರು, ತಾಯಿಯ ಮನೆಯವರು ಬೇಡವೆಂದರೂ ಕೇಳದೆ ಸ್ವ ಇಚ್ಛೆಯಿಂದ ತಲೆ ಬೋಳಿಸಿಕೊಂಡಳು; ಜಾನಕಿ ಎಂಬ ಸಹಪಾಠಿ ಅಷ್ಟೆಲ್ಲ ವಿದ್ಯೆ ಕಲಿತವಳಾದರೂ ಭಕ್ತಿಯಿಂದ ಬೆತ್ತಲೆ ಸೇವೆ ಮಾಡಿದಳು; ನಮ್ಮ ಮುತ್ತಜ್ಜಿಯ ಗೆಳತಿಯೊಬ್ಬಳು ತುಂಬು ಪ್ರೀತಿಯಿಂದ ಕೆರೆಗೆ ಹಾರವಾಗಿದ್ದಳಂತೆ” …ಮುಂತಾಗಿ ಹೆಸರು ಬದಲಿಸಿ ಅಥವಾ ಬದಲಿಸದೆ ಹೇಳಿಕೊಂಡು ಹೋಗಬಹುದು.

ಇದಷ್ಟೆ ಅಲ್ಲದೆ ಲೇಖಕಿ ಲೇಖನದ ಕಡೆಯಲ್ಲಿ ಮತ್ತೊಂದು ವರ್ಗ ವಿಶ್ಲೇಷಣೆಗೂ ಹೋಗುತ್ತಾರೆ. ಅದೂ ಕೇವಲ ಪ್ರಾಸ ಪ್ರಿಯತೆಯಂತೆ ಕಾಣುತ್ತದೆ : “ಹರಕೆಯ ವರ್ಗ, ಹರಾಜಿನ ವರ್ಗ; ಸಂಕಟದ ವರ್ಗ, ಸಂಪತ್ತಿನ ವರ್ಗ.” ಲೇಖಕಿ ಹೇಳುವ ಸಂಪತ್ತಿನ ವರ್ಗದ ಪ್ರತಿನಿಗಳಾದ ಸಚಿನ್ ಮತ್ತು ಅಮಿತಾಬ್ ಲೇಖಕಿ ಗೆಳತಿಯೊಂದಿಗೆ ಹೋಗಿದ್ದ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿ ಹೋಗಿದ್ದಾರೆ. ಅಂದರೆ ಮೌಢ್ಯವಾಗಲಿ, ಸಂಕಟವಾಗಲೀ ಕೇವಲ ‘ಸಂಕಟದ ವರ್ಗ’ದ ಸ್ವತ್ತಲ್ಲ. ಮಿಗಿಲಾಗಿ ಲೇಖಕಿಯೇ “… ಸಂಕಟಗಳ ಪರಾಕಾಷ್ಠೆಯಲ್ಲಿ ಜಾತಿ ವರ್ಗ, ಮತ ವಿಚಾರ ಯಾವುದೂ ಇರುವುದಿಲ್ಲ ಎಂದಿದ್ದಾರೆ.”

ಈ ವಾದ ವಿವಾದಗಳು ಒತ್ತಟ್ಟಿಗಿರಲಿ. ಅಕ್ಷರ, ವೈದೇಹಿ ಥರದವರಿಗೆ ನನ್ನದು ಒಂದೇ ಪ್ರಶ್ನೆ. ನಾನು ಊಟ ಮಾಡಿ ಎದ್ದ ಎಂಜಲು ಎಲೆಯ ಮೇಲೆ ಅನ್ಯರು ಉರುಳಾಡಿದಾಗ; ನನ್ನೆದುರೇ ಅಮಾಯಕ, ಹರೆಯದ ಹೆಣ್ಣು ಮಕ್ಕಳು ಬೆತ್ತಲೆ ಸೇವೆ ಮಾಡುತ್ತಿದ್ದರೆ; ಹರೆಯದ ಹುಡುಗಿಯೊಬ್ಬಳು ಗಂಡನನ್ನ ಕಳೆದುಕೊಂಡ ಕಾರಣಕ್ಕಾಗಿ ಕೇಶ ಮುಂಡನ ಮಾಡಿಸಿಕೊಂಡು, ಬಳೆ ಒಡೆಸಿಕೊಂಡು, ಕುಂಕುಮ ಅಳಿಸಿಕೊಳ್ಳುತ್ತಿದ್ದರೆ; ಬಾವಿಯಲ್ಲಿ ನೀರು ಬರಲಿಲ್ಲವೆಂದು ಮಗುವನ್ನ ಬಲಿ ಕೊಟ್ಟರೆ-ಒಬ್ಬ ಹೃದಯವಂತ ಮನುಷ್ಯನಿಗೆ ಏನನ್ನಿಸುತ್ತದೆ.

ಅವೆಲ್ಲಾ ಸಹಜ ಆಚರಣೆಗಳು ಎಂದು ನಮ್ಮಂಥ ವಿದ್ಯಾವಂತರಿಗೂ ಅನ್ನಿಸಿದರೆ, ನನ್ನ ಪ್ರಕಾರ ನಾವು ಮನುಷ್ಯರಲ್ಲ!

11 ಟಿಪ್ಪಣಿಗಳು (+add yours?)

 1. bharathi
  ಫೆಬ್ರ 11, 2011 @ 16:54:31

  ಮಡೆಸ್ನಾನ ಸರಿ ಎಂದು ವೈದೇಹಿ ಸಮರ್ಥಿಸಿಕೊಂಡಿದ್ದಾರೆಯೇ? ನಾನು ಅರ್ಥೈಸಿಕೊಂಡ ಪ್ರಕಾರ ’ಇಲ್ಲ’. ಕಷ್ಟದ ಸ್ಥಿತಿಯಲ್ಲಿ, ಸಂಕಟದ ಸಮಯದಲ್ಲಿ ಮನಸ್ಸು ಇಂಥದ್ದರ ಕಡೆ ಹೊರಳುತ್ತದೆ ಅಂತ ಮಾತ್ರ ಅವರು ಹೇಳಿದ್ದಾರೆ ಅಲ್ಲವೇ?

  ಎಂಜಲೆಲೆಯ ಮೇಲೆ ಹೊರಳುವುದು ಕೆಳವರ್ಗ ಮಾತ್ರವಲ್ಲ, ದಿಕ್ಕು ಕಾಣದ ಸಂಕಟದ ವರ್ಗ ಎಂಬುದು ಗ್ಯಾರಂಟಿ. ಮನುಷ್ಯನ ಕೆಲ ಮೌಢ್ಯಗಳು ಮಾಯವೇ ಆಗುವುದಿಲ್ಲ. ವಿಚಾರಕ್ಕೂ ಇದಕ್ಕೂ ಸಂಬಂಧವೇ ಇಲ್ಲದ ಹಾಗೆ ನಿರಂತರವಾಗಿ ಇದ್ದೇ ಇರುತ್ತದೆ. ಈಗಲೂ ಇದೆ, ಈಚೀಚೆಗಂತೂ ‘ಮಡೆಸ್ನಾನ’ ಮಾಡುವವರ ಸಂಖ್ಯೆ ವಿಪರೀತ ಹೆಚ್ಚುತ್ತಿದೆ ಅಂತೆ, ಯಾಕೆ? ….ಇದು ಆ ಬರಹದ ಒಂದು ಭಾಗ. ಇಲ್ಲಿ ಕೂಡಾ ವೈದೇಹಿಯವರು ಮೌಢ್ಯ ಎಂತಲೇ ಕರೆದಿದ್ದಾರೆ ಈ ಆಚರಣೆಯನ್ನ.

  ನಿಜಕ್ಕೂ ಮೌಢ್ಯದ ಪರಮಾವಧಿಯಾದ ಇಂತ ಆಚರಣೆಗಳನ್ನ ಹೇಗೆ ತೊಡೆಯಬೇಕೆನ್ನೋದು ಮುಖ್ಯ ಪ್ರಶ್ನೆಯಾದರೂ ವೈದೇಹಿಯವರು ಈ ಆಚರಣೆಯನ್ನ ಸಮರ್ಥಿಸಿಲ್ಲ ಅನ್ನೋದು ಕೂಡಾ ಮುಖ್ಯ ಅಂಶವಲ್ಲವೇ?

  ದೇವರನ್ನೇ ನಂಬದ ನನ್ನ ಗೆಳೆಯ ಈಗ ಸಂಕಷ್ಟದ ಸ್ಥಿತಿಯಲ್ಲಿ ಮೊನ್ನೆ ಹೇಳುತ್ತಿದ್ದ ’ ಈಗ ಬುಧ ಅಲ್ಲಿದೆಯಂತೆ .. ಶುಕ್ರ ಇಲ್ಲಿದೆಯಂತೆ .. ಇನ್ನು ೨ ವರ್ಷ ಗ್ರಹಗತಿ ಸರಿ ಇಲ್ಲವಂತೆ’ ಅಂತೆಲ್ಲ …! ಕಷ್ಟ ಬಂದಾಗ ಅಡಿಗೆ ಮನೆ ಮತ್ತು ಟಾಯ್ಲೆಟ್ಟನ್ನು ಒಡೆಸಿ ಅದಲು ಬದಲಿಸಿದ ಜನ ಕೂಡಾ ಇದ್ದಾರೆ . ಮಡೆಸ್ನಾನ ಮೌಢ್ಯದ ಆಚರಣೆಯೇ ಆದರೂ ಅದನ್ನು ಮಾಡಲು ಸಜ್ಜಾಗುವ ಮನೌಷ್ಯನ ದುರ್ಬಲ ಮನಸ್ಸನ್ನ ಮೊದಲು ಗಟ್ಟಿ ಮಾಡಬೇಕು ಅಲ್ಲವೇ?

  ಭಾರತಿ

  ಉತ್ತರ

 2. chandrashekhara aluru
  ಫೆಬ್ರ 09, 2011 @ 20:55:23

  yellarigu dhanyavadagalu.

  ಉತ್ತರ

 3. vishwas
  ಫೆಬ್ರ 08, 2011 @ 18:02:19

  ಚಂದ್ರು ಸಾರ್, ನಮ್ಮ ವೈದೇಹಿಯವರು ಅಕ್ಷರ ಹೆಗ್ಗೋಡಿನ ಹಾಗೂ ರುಣ ತೀರಿಸಿಕೊಳ್ಳಲು ಏನೋ ಹಾಗೆ ಬರೆದದ್ದಕ್ಕೆ ನೀವು ಇಷ್ಟು ಸೀರಿಯಸ್ ಆಗೋದೇ?…. ಅಲ್ಲಾರೀ ಮಡೆಸ್ಬಾನ ಹಾಗೂ ಹರಾಜು ಎರಡೂ ಕೆಟ್ಟವು ಅಂತ ಅಕ್ಷರಗೂ ಗೊತ್ತು ವೈದೇಹಿಗೂ ಗೊತ್ತು. ಯಾಕೆಂದರೆ ಅವರನ್ನು ಯಾರಾದ್ರೂ ನೀವು ಮಡೆಸ್ನಾನ ಮಾಡಿ ಎಂದರೆ ದೇವರಾಣೆ ಮಾಡಲ್ಲ. ಆದರೂ ಸುಮ್ಮನೇ ಬೇಕು ಅಂತ ಎರಡನ್ನೂ ಹೋಲಿಸಿ ವಸಾಹತುಶಾಹಿ ಚಿಂತನೆಯ ವಿರುದ್ಧ ಕಹಳೆ ಊದುತ್ತಿರುವ ರೀತಿ ಅಕ್ಷರ ಅಕ್ಷರ ಪೋಣಿಸಿದರು. ಮಡೆಸ್ನಾನದಂತಹ ಆಚರಣೆಗಳು ಜನರಿಗೆ ತಾತ್ಕಾಲಿಕ ನೆಮ್ಮದಿ ನೀಡಬಹುದೇನೋ ಹೊರತು ಅವು ‘ಗೀತಾ ಮಯ್ಯ’ ರ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ ಇಲ್ಲ ಎಂದೂ ಇವರು ತಿಳಿಯದವರಲ್ಲ. ಇಂತಹವುಗಳನ್ನು ನೋಡುವ ‘ನೋಟ’ದ ಬಗ್ಗೆ ಅಕ್ಷರ ಬರೆದಿದ್ದಾರೆ. cognition of necessity is itself freedom ಅಂತ ಮಹಾನುಭಾವರೊಬ್ಬರು ಹೇಳಿದ್ದಾರೆ. ಅದು ನೋವಿರಲಿ, ಶೋಷಣೆಯಿರಲಿ, ದಮನವಿರಲಿ. ನೋವು ನೋವೆಂದು , ಶೋಷಣೆ ಶೋಷಣೆಯೆಂದು, ದಮನ ದಮನವೆಂದು ‘ಅರಿವು’ ಆಗುವವರೆಗೂ ಅವು ಸಹಜವೆಂದೇ ಭಾವವಿರುತ್ತದೆ. ವೈದೇಹಿಯವರ ‘ಅಡುಗೆ ಮನೆಯ ಹುಡುಗಿ’ ಹೊರಗೆ ಹಾರುವ ವಿಮಾನವನ್ನು ನೋಡಿ ತಾನೂ ಒದು ಕನಸು ಕಂಡು ಆ ‘ಅಡುಗೆ ಮನೆಯ ನಾಲ್ಕು ಗೋಡೆ’ಯಿಂದ ಹೊರ ಬರದಿದ್ದರೆ ಕಲ್ಪನಾ ಚಾವ್ಲಾ ಒಬ್ಬಳಿರಲು ಸಾಧ್ಯವಿತ್ತೇ?…. ಆಕೆ ಅಡುಗೆಮನೆಯಿಂದ ಹೊರಬರುವ necessity ಯನ್ನು ಅರಿತಿದ್ದಕ್ಕೇ ತಾನೆ ಇನ್ನೇನನ್ನೋ ಮಾಡಲು ಸಾಧ್ಯವಾಗಿದ್ದು? ಅಡುಎ ಮನೆ ಹುಡುಗೆ ‘ವೈದೇಹಿ’ಯೂ ಆದದ್ದು?. ಮಡೆಸ್ನಾನ, ಹರಕೆಗಳಾಚೆ ಕನಸುಗಳನ್ನು ಹರಡಲು ಅಕ್ಷರವಂತರು ಸಾಧ್ಯವಾದರೆ ಪ್ರಯತ್ನಿಸಬೇಕು.. ಹಿಂಬಾಗಿಲಿನಿಂದ ಯಥಾಸ್ಥಿತಿವಾದಿಗಳಾಗಿಬಿಟ್ಟರೆ ಅದು ಹವ್ಯಕ ಸಮುದಾಯದಿಂದ ಬಂದು ಸಮಾಜದ ಆಸ್ತಿಯಾಗಿ ಇನ್ನೂ ತನ್ನ ವಿಚಾರಗಳಲ್ಲಿ ಬದುಕಿರುವ ಸಾಕ್ಷಾತ್ ಕೆ.ವಿ.ಸುಬ್ಬಣ್ಣರವರಿಗೇ ಮಾಡುವ ಅವಮಾನ ಎಂದು ಅರಿಯಬೇಕು.

  ಉತ್ತರ

  • jaggu
   ಫೆಬ್ರ 08, 2011 @ 18:34:24

   ಹರಕೆ, ಮಡೆಸ್ನಾನ ಪುರೋಹಿತಶಾಹಿ ಮೌಲ್ಯ. ಹರಾಜು ವಸಾಹತುಶಾಹಿ ಮೌಲ್ಯ. ಇವೆರಡೂ ಎಂದೂ ಎದುರು ಬದುರು ಆಗಲು ಸಾಧ್ಯವಿಲ್ಲ. ಹರಾಜಿಗೆ ಒಳಗಾಗುವ ವ್ಯಕ್ತಿಗೆ ಹೇಗೆ ತಾನು ಮಾಡುತ್ತಿರುವುದು ಅವಮಾನವಲ್ಲ. ಅದು ಲೋಕ ಮೆಚ್ಚುವ ಸಹಜ ರೂಢಿ ಎಂಬ ಭಾವ ಇರುತ್ತದೆಯೋ ಹರಕೆ ಹೊತ್ತವನಿಗೂ ಅದು ಸಹಜ ಎಂಬ ಭಾವವಿರುತ್ತದೆ. ಆದರೆ, ಈ ಎರಡೂ ‘ಸಹಜ ಭಾವನೆ’ ಗಳಿಂದ ಭರ್ಜರಿಯಾಗಿಯೇ ಲಾಭಗಳಿಸುವ ಆ ವರ್ಗ ವಸಾಹತುಶಾಹಿಯೂ ಹೌದು, ಪುರೋಹಿತಶಾಹಿಯೂ ಹೌದು.

   ಸಮಾಜದಲ್ಲಿ ಸಮಾನವಾಗಿಯೇ ಜನರ ಮೇಲೆ ಸವಾರಿ ಮಾಡುವ ಎದುರು ಬದುರು ನಿಲ್ಲಿಸುವುದು ಆ ಮೂಲಕ ಒಂದಕ್ಕೆ ‘ಅಕ್ಷರ’ ಚಾಕಚಕ್ಯತೆಯಲ್ಲಿ ಸಹಮತ ಮೂಡಿಸುವುದು, ಅಥವಾ ಮಡೆಸ್ನಾನವನ್ನು ಖಂಡಿಸುವವರನ್ನು ‘ಸಂಶಯದ’ ಕಣ್ಣಿನಿಂದ ಮಾಡಲು ಪ್ರೇರೇಪಣೆ ನೇರವಾಗಿ ಪುರೋಹಿತಶಾಹಿ ಅಂತ ಹೇಳಲು ಬರುವುದಿಲ್ಲವಾದರೂ ಅದರ ವಕ್ತಾರಿಗೆಗೆ ಒಂದು ಮಾರ್ಗ ಎನ್ನಬಹುದು.

   ಅಕ್ಷರ ಅವರು ತಮ್ಮ ತೋಟಕ್ಕೆ ಬೇಕಾದ ಸೊಪ್ಪನ್ನು ಒಂದಿನ ಹೊತ್ತುಕೊಂಡು ಬಂದಿದ್ದರೆ, ಅಥವಾ ತಮ್ಮ ತೋಟದಲ್ಲಿ ಕೆಲಸ ಮಾಡುವ ‘ಹೊಲೆಯ’ರ ಮನೆಗಳಲ್ಲಿ ಒಂದೇ ವಾರ ಅವರಂತೆಯೇ ಬದುಕಿದ್ದರೆ, ಅಥವಾ atleast ಕಾರಂತರಂತೆ ಆ ಬದುಕನ್ನು ಕಲ್ಪಿಸಿಕೊಳ್ಳಲಾದರೂ ಯತ್ನಿಸಿದ್ದರೆ ಇಂತಹ ಬರೆಹ ಬರೆಯುತ್ತಿರಲಿಲ್ಲ. ಅಕ್ಷರ ದ್ರಷ್ಟಿಯಂತೆ ಅಕ್ಷರ ಸ್ರಷ್ಟಿ.

   ಉತ್ತರ

  • ರಾಧಿಕಾ
   ಫೆಬ್ರ 09, 2011 @ 09:36:18

   Like this. (as in FB 🙂 )

   ಉತ್ತರ

 4. akshatha.k
  ಫೆಬ್ರ 05, 2011 @ 21:57:27

  ಆಲೂರು ಸರ್ , ಹೌದು .ನೀವು ಹೇಳಿದಂತೆ ಇಂಥ ಆಚರಣೆಗಳು ನಮಗೆ ಸಹಜ ಅನ್ನಿಸಿದರೆ ನಾವು ನಿಜಕ್ಕೂ ಮನುಷ್ಯರಲ್ಲ . ಆಯಿತು ಇವರ ವಾದವನ್ನೇ ಒಪ್ಪೋಣ ಮನುಷ್ಯ ತನ್ನ ನೋವು, ಸಂಕಟಗಳ ಪರಿಹಾರದ ಒಂದು ಅಶ್ವಾಸನೆಯಲ್ಲೇ ಮಡೆಸ್ನಾನದಂತ ಒಂದು ನಂಬಿಕೆಗೆ ಮೊರೆಹೋಗುತ್ತಾನೆ. ಅದರಲ್ಲಿ ಜಾತಿ ಬೇಧ ಏನು ಇಲ್ಲ ಎಲ್ಲರು ಮಾಡುತ್ತಾರೆ ಎಂದು ಇವರು ಹೇಳುತಿರುವ ವಾದವನ್ನು ಒಪ್ಪಿದರೂ ಅಲ್ಲಿ ಮತ್ತೊಂದು ಪ್ರಶ್ನೆ ಉಧ್ಬವ ಆಗುತ್ತದೆ. ಮಡೆಸ್ನಾನಕ್ಕೆ ಮೊದಲು ಊಟ ನಡೆಯುತ್ತದಲ್ಲ ಅದನ್ನು ಮಡೆ ಊಟ ಎಂದು ಕರೆಯೋಣ . ಆ ಮಡೆ ಊಟ ವನ್ನು ಮಾಡುವವರು ಯಾರು ? ಯಾಕೆಂದರೆ ಮೇಲ್ ಜಾತಿಯವರು ಉಂಡ ಎಲೆಯ ಮೇಲೆ ಉರುಳುವುದು ಯಾರಿಗೂ ಏನು ಅನಿಸಲಿಕ್ಕಿಲ್ಲ. (ಇವರೇ ಹೇಳಿದ ಹಾಗೆ ಸಂಕಟ ನಿವಾರಣೆಗಾಗಿ ) ಆದರೆ ದಲಿತರೂ ಉಂಡ ಎಲೆಗಳು ಅವಾಗಿದ್ದ ಪಕ್ಷದಲ್ಲಿ , ಎಂಥ ಸಂಕಟವೇ ಎದುರಾಗಿದ್ದರೂ ಈ ಏಲೆಗಳ ಮೇಲೆ ಉರುಳಿ ಸಂಕಟವನ್ನು ಕಳೆದುಕೊಳ್ಳುವ ಒಂದು ಸಾದ್ಯಾಸಾದ್ಯತೆ ಬಗ್ಗೆ ಯೋಚಿಸಿದಾಗ … ಈ ವಾದದ ಪೊಳ್ಳುತನ ಅರ್ಥವಾಗುತ್ತದೆ .


  ಕೆ ಅಕ್ಷತಾ
  ———————————-
  94491 74662

  ಉತ್ತರ

 5. Vasanth
  ಫೆಬ್ರ 05, 2011 @ 20:21:56

  Vediehai madam is defending Akshara. Akashara’s article as some one mentioned in this blog is the product of their hidden agenda to maintain the stereotype . Recent publications of Aksahara Prakashan is also on the same line. Even if we take the example of the food culture in Ninasm they wanted this society to be caste oriented and downtrodden must be remained like only. As Lankesh sir long back said “Heggodu is a agrahara” . Akshara is maintaining that status very sincerely in his writings, plays and speech.
  There is no need to surprise.
  Vediehai madam is the frequent guest in Ninasm.

  ಉತ್ತರ

 6. Anaamika
  ಫೆಬ್ರ 05, 2011 @ 16:47:22

  ವೈದೇಹಿಯವರಿಗೆ ಒಂದು ಪ್ರಶ್ನೆ…
  ನಿಮ್ಮ ಗಳತಿ ನಿಮ್ಮ ಎಲೆಯ ಮೇಲೆಯೇ ಉರುಳು ಸೇವೆ ಮಾಡಿದ್ದಾಳೆ ಎಂದಿದ್ದೀರಿ. ನಿಮಗೆ ಅದು ಸರಿ ಅನಿಸಿತ್ತು.
  ಆದರೇ ಅವರು ಉಂಡೆದ್ದ ಎಲೆಯ ಮೇಲೆ ಉರುಳು ಸೇವೆ ಮಾಡುಲು ನಿಮಗೆ ಸಾಧ್ಯವಿದೆಯಾ.. ನೀವು ಮಡೆ ಸ್ನಾನ ಮಾಡಲು ರೆಡಿ ಇದ್ದೀರಾ ?..

  ನಿಮ್ಮ ಎಲೆ ಸೇವೆ ಮಾಡಿ ಅವರ ಸಂಕಟ ಮಾಯವಾಯಿತಾ?.. ದಯವಿಟ್ಟು ತಿಳಿಸಿ … ಆಗಿದ್ದಲ್ಲಿ ನಾನು ಸಂಕಟದಲ್ಲಿದ್ದೀನಿ, ಹಾಗೇನೆ ನನ್ನ ಸುತ್ತ ಮುತ್ತ ಸಂಕಟದಲ್ಲಿ ನರಳುತ್ತಿರುವ ನೂರಾರು ಮುಖಗಳಿದೆ. ನಾನು – ಅವರು ಎಲ್ಲಾ ನೀವು ಉಂಡೆದ್ದ ಎಲೆಯ ಮೇಲೆ ಉರುಳು ಸೇವೆ ಮಾಡುತ್ತೇವೆ.

  ಅವರು ಇನ್ನೂ ಸಂಕಟದಲ್ಲಿ ಇದ್ದರೆ, ದಯವಿಟ್ಟು ಸಂಕಟ ನಿವಾರಣೆಗೆ ಮಡೆಸ್ನಾನ ಪರಿಹಾರ ಅಲ್ಲಾ ಎಂಬುವುದನ್ನ ಅರ್ಥಮಾಡಿಕ್ಕೊಳ್ಳಿ. ಯಾವಾಗ ಅದು ಪರಿಹಾರವಲ್ಲವೋ ನಿಮ್ಮಂಥ fan following ಇರುವ ಬರಹಗಾರ್ತಿಗಳಿಂದ ನಮ್ಮಂಥ ಸಾಮಾನ್ಯರು ನಿರೀಕ್ಷಿಸುವುದು ಇಷ್ಟೇ..
  ಮೂಡ ನಂಬಿಕೆಗಳ ವಿರುದ್ಧ ನೀವು ಹೋರಾಟ ಮಾಡಿಲ್ಲಾದರೂ ಪರವಾಗಿಲ್ಲ , ಅಂಥ ನಂಬಿಕೆಗಳನ್ನ please encourage ಮಾಡಬೇಡಿ.

  ಉತ್ತರ

 7. ಅಶೋಕ್
  ಫೆಬ್ರ 05, 2011 @ 15:50:35

  “ಸುಬ್ಬಣ್ಣ ಕೃಪಾ ಪೋಷಿತ ನಾಟಕ ಮಂಡಳಿ ಬಹು ದೊಡ್ಡದು ಸರ್” ಎಂದು ಕೃಷ್ಣಪ್ರಸಾದ್ ನಿಮಗೆ ಸರಿಯಾಗಿಯೇ ಹೇಳಿದ್ದಾರೆ. ವೈದೇಹಿಯೂ ಇದರಲ್ಲಿ ಸೇರಿದ್ದಾರೆ ಎಂದ ಮೇಲೆ ” ನನ್ನ ಪ್ರಕಾರ ನಾವು ಮನುಷ್ಯರಲ್ಲ”

  ಉತ್ತರ

 8. P. Bilimale
  ಫೆಬ್ರ 05, 2011 @ 15:43:21

  ಪ್ರಿಯ ಆಲೂರು, ಕನ್ನಡದ ಅತ್ಯಂತ ಒಳ್ಳೆಯ ಲಲಿತ ಪ್ರಬಂಧಕಾರರಾದ ತಾವು ಹೀಗೆ ಪ್ರತಿಕ್ರಿಯಿಸಿದ್ದು ಓದಿ ಸಂತೋಷವಾಯಿತು. ಕುಕ್ಕೆ ಸುಬ್ರಮಣ್ಯಕ್ಕೆ ಹತ್ತಿರ ಇದ್ದ ನಾನು ಈ ಎಂಜಲು ಎಲೆಯ ಉರುಳುವಿಕೆಯಿಂದ ತಪ್ಪಿಸಿಕೊಳ್ಳಬೇಕಾದರೆ ಸಾಕಷ್ಟು ಕಷ್ಟ ಪಡಬೇಕಾಯಿತು, ಅನೇಕರಿಗೆ ಇವೆಲ್ಲ ಕತೆಗಳು ಅಥವಾ ಬುದ್ದಿವಂತಿಕೆ ತೋರಲು ಇರುವ ಅವಕಾಶಗಳು, ನನ್ನಂತವರಿಗೆ ಅವು ವಾಸ್ತವಗಳು, ಹಾಗಾಗಿ ಒಮ್ಮೊಮ್ಮೆ ನಕ್ಕು ಸುಮ್ಮನಾಗಿ ಬಿಡಬೇಕಾಗುತದೆ, ಇರಲಿ ಈಚೆಗೆ ಏನು ಬರೆದಿರಿ, ಹೊಸ ಪ್ರಬಂಧ?

  ಉತ್ತರ

 9. SATHYAPRASAD BV
  ಫೆಬ್ರ 05, 2011 @ 15:29:44

  ಚಂದ್ರು ಸರ್, ನಾನು ಸಹ ವೈದೇಹಿಯವರ ಲೇಖನ ಓದಿದಾಗ ಬಹಳ ವ್ಯಥೆಪಟ್ಟೆ. ಯಾಕೆಂದರೆ ಅವರು ನನ್ನ ಮೆಚ್ಚಿನ ಲೇಖಕಿಯರಲ್ಲೊಬ್ಬರು. ಸರ್ ಒಂದು ಕ್ಷಣ ಯೋಚಿಸಿರಿ, ಈಚೆಗೆ ಜರುಗುತ್ತಿರುವ ಕೆಲ ಪ್ರತ್ಯೇಕ ಘಟನೆಗಳು ಒಂದಕ್ಕೊಂದು ಪೂರಕವಾಗಿ ಹೆಣೆದುಕೊಳ್ಳುತ್ತಿರುವಂತೆ ತೋರುತ್ತಿದೆ. ತಮ್ಮ ಬಾಲ್ಯದಲ್ಲಿ ದಲಿತನೊಬ್ಬನಿಂದ ತಮ್ಮ ಪ್ರಾಣ ಉಳಿಸಿಕೊಂಡ ಸ್ವಾಮೀಜಿಯೊಬ್ಬರು, ಆಗ ಬಾಯ್ಬಿಡಲಾಗದೆ ಈಗ ತಮ್ಮ ಇಳಿವಯಸ್ಸಿನಲ್ಲಿ ಪಶ್ಚಾತ್ತಾಪ ಪಡುತ್ತೇನೆಂದು ಹೇಳುತ್ತಾ ದಲಿತರಿಗೆ ದೀಕ್ಷೆ (ನಿಜಕ್ಕೂ ಪರಿವರ್ತನೆ ಬೇಕಾಗಿರುವುದು ಯಾರಿಗೆ???) ನೀಡಲು ಮುಂದಾಗುತ್ತಾರೆ. ಒಂದೆಡೆ ಅಕ್ಷರ ಮತ್ತು ವೈದೇಹಿಯವರು ಮಡೆಸ್ನಾನವನ್ನು ಹಾಡಿ ಹೊಗಳುತ್ತಾರೆ!!!! ಈ ರಾಜ್ಯದ ಮುಖ್ಯಮಂತ್ರಿ ತಮಗೆ ಮಾಯಮಾಟ ಮಾಡಿಸಿದ್ದಾರೆಂದು ಕಣ್ಣೀರಿಡುತ್ತಾರೆ!!!! ಈ ಎಲ್ಲ ಮನುವಾದಿಗಳು ಸಮಾಜವನ್ನು ಹಿಂದಕ್ಕೆಳೆಯಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆನಿಸುತ್ತಿಲ್ಲವೇ? ಅಕ್ಷರ ಮತ್ತು ವೈದೇಹಿಯವರಿಗೆ ಒಂದು ಸರಳ ಪ್ರಶ್ನೆ. ಮಡೆಸ್ನಾನದ ಬಗ್ಗೆ ಇಷ್ಟೊಂದು ಕಾಳಜಿ ಹೊಂದಿರುವ ನಿಮಗೆ ಕೆಲ ದೇವಸ್ಥಾನಗಳಲ್ಲಿ ಗಂಡಸರ ಬನಿಯನ್ ಬಿಚ್ಚಿಸುವುದು, ಮೇಲುಕೋಟೆಯಲ್ಲಿ ಪ್ರಸಾದವನ್ನು ಮೇಲಿಂದ ಎಸೆಯುವುದು ಇತ್ಯಾದಿ ಕ್ರಿಯೆಗಳ ಹಿಂದಿರುವ ಕೊಳಕು ಮನಸ್ಸುಗಳು ನಿಮಗೆ ಗೋಚರಿಸುತ್ತಿಲ್ಲವೇ??? ಅಲ್ಲೆಲ್ಲಾ ವೈದಿಕರೇ ಪಾರುಪತ್ಯ ನಡೆಸುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ??? ದಯವಿಟ್ಟು ಉತ್ತರಿಸಿರಿ.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: