ಜೋಗಿ ಕೇಳುತ್ತಾರೆ: ಹೌದೂ… ನಾನೇಕೆ ಬರೆಯುತ್ತೇನೆ?


ಇಪ್ಪತ್ತನಾಲ್ಕು ವರ್ಷ ಹಿಂದಿನ ಮಾತು.

ನಾನು ಮತ್ತು ಗೆಳೆಯ ಗೋಪಾಲಕೃಷ್ಣ ಕುಂಟಿನಿ ಆಗಷ್ಟೇ ಪದವಿ ಮುಗಿಸಿದ್ದೆವು. ಅವನಿಗೆ ಹತ್ತಾರೆಕರೆ ತೋಟವಿತ್ತು. ಹೀಗಾಗಿಯೇ ಅವನ ಭವಿಷ್ಯ ಕೂಡ ನಿರ್ಧಾರವಾಗಿತ್ತು. ಅಷ್ಟು ಹೊತ್ತಿಗಾಗಲೇ ನಾನು ಮನೆ ಕಳೆದುಕೊಂಡು ಖುಷಿಯಾಗಿ ಕೂತಿದ್ದೆ. ನನ್ನ ಜೊತೆಗಿದ್ದದ್ದು ಗೆಳೆಯನ ಪ್ರೀತಿ ಮತ್ತು ಏನು ಬೇಕಾದರೂ ಮಾಡಬಲ್ಲೆ ಎಂಬ ಬಿಡುಬೀಸು ಮನಸ್ಸು.

ಆ ನಿರುಮ್ಮಳ ಸ್ಥಿತಿಯಲ್ಲಿದ್ದಾಗ ನೆನಪಾಗುತ್ತಿದ್ದದ್ದು ಯಶವಂತ ಚಿತ್ತಾಲರ ಕಾದಂಬರಿ ಶಿಕಾರಿ’. ತೇಜಸ್ವಿಯವರ ಕರ್ವಾಲೋ’ ಮತ್ತು ಚಿದಂಬರ ರಹಸ್ಯ’, ಲಂಕೇಶರ ಟೀಕೆಟಿಪ್ಪಣಿ. ಎಷ್ಟೋ ಸಲ ನಮ್ಮನ್ನು ಪೊರೆಯುತ್ತಿದ್ದದ್ದು ಲಂಕೇಶರ ಬರಹಗಳೇ. ನಡುನಡುವೆ ಕೇಳುತ್ತಿದ್ದ ಭಾವಗೀತೆಗಳು. ಆಗೊಮ್ಮೆ ಈಗೊಮ್ಮೆ ಅನಂತಮೂರ್ತಿ ಮಾಡುತ್ತಿದ್ದ ಭಾಷಣಗಳು. ತುಂಬ ಸತಾಯಿಸಿದೆ ಓದಿಸಿಕೊಂಡ ಶಾಂತಿನಾಥ ದೇಸಾಯಿ, ಬಿ . ಸಿ. ದೇಸಾಯಿ, ನೀರಭದ್ರ, ರಾಜಶೇಖರ ನೀರಮಾನ್ವಿ, ಕುಂವೀ, ಬೇಂದ್ರೆ, ಕುವೆಂಪು. ನಮ್ಮ ಕಾಲಕ್ಕಾಗಲೇ ಮಾಸ್ತಿ ಹಳಬರಾಗಿದ್ದರು. ಶಿವರಾಮಕಾರಂತರ ಕಾದಂಬರಿಗಳು ಬೋರು ಹೊಡೆಸುತ್ತಿದ್ದವು. ಅದೇ ಹೊತ್ತಿಗೆ ನಮ್ಮನ್ನು ಆಕರ್ಷಿಸಿದ್ದು ದೇವನೂರು ಮಹಾದೇವ ಮತ್ತು ಸಿದ್ಧಲಿಂಗಯ್ಯ.

ಈ ಲೇಖಕರ ಸಂಘದಲ್ಲಿ ಹೊತ್ತು ಹೋಗುತ್ತಿತ್ತು. ನೇತ್ರಾವತಿ ನದಿಯ ಸೇತುವೆಯ ಮೇಲೆ ಕೂತು ನಾನು, ಕುಂಟಿನಿ ಗೋಪಾಲಕೃಷ್ಣ, ಸುಬ್ರಾಯ, ಅಶ್ರಫ್, ಆಂಟನಿ, ಹಮೀದ್, ರಾಧಾಕೃಷ್ಣ, ಸುಬ್ರಹ್ಮಣ್ಯ, ಪುತ್ತೋಳಿ- ಹೀಗೊಂದಷ್ಟು ಮಂದಿ ಹರಟುತ್ತಿದ್ದೆವು. ನಾವು ಓದಿದ ಪುಸ್ತಕಗಳೋ ಲಂಕೇಶರು ಬರೆದ ಲೇಖನಗಳೋ ಆವತ್ತಿನ ಚರ್ಚೆಯ ವಸ್ತು. ಆ ಚರ್ಚೆ ಕೂಡ ವಿಚಿತ್ರ ರೂಪ ಪಡೆಯುತ್ತಿತ್ತು. ಒಮ್ಮೊಮ್ಮೆ ವಿಷ್ಣುವರ್ಧನ್ ಶ್ರೇಷ್ಠನೋ ರಾಜಕುಮಾರನೋ ಎಂಬ ಕುರಿತೂ ಮಾತಾಗುತ್ತಿತ್ತು. ನಾವೆಲ್ಲ ಏಕಪಕ್ಷೀಯವಾಗಿ ವಿಷ್ಣುವರ್ಧನ ಅನ್ನುತ್ತಿದ್ದೆವು. ಅದಕ್ಕೆ ಕಾರಣ ವಿಷ್ಣುವರ್ಧನ್ ಚಿತ್ರರಂಗದಲ್ಲಿ ತುಳಿತಕ್ಕೆ ಒಳಗಾದವರು ಎಂಬುದೂ ಒಂದು ಕಾರಣ.

ಅದೇ ಹೊತ್ತಿಗೆ ನಾವೆಲ್ಲ ತುಂಬ ಮೆಚ್ಚಿಕೊಂಡಿದ್ದ ಹುಡುಗಿಗೆ ಮದುವೆಯಾಯಿತು. ಮೊದಲ ಕತೆ ಆಗಲೇ ಹುಟ್ಟಿಕೊಂಡದ್ದು. ಅವಳು ಸುಖವಾಗಿದ್ದಾಳೆ ಎಂದು ನಂಬುವುದಕ್ಕೆ ನಾವ್ಯಾರೂ ಸಿದ್ಧವಿರಲಿಲ್ಲ. ಅವಳನ್ನು ಮದುವೆ ಆದವನು ಅವಳಿಗೆ ಹಿಂಸೆ ಕೊಡುತ್ತಾನೆ. ಅವಳು ದೇವತೆ. ಅವಳ ಗಂಡ ಅವಳನ್ನು ಯಕಶ್ಚಿತ್ ಹೆಂಡತಿಯಂತೆ ನೋಡುತ್ತಾನೆ. ಯಾಕೆಂದರೆ ಅವನಿಗೆ ಕೆ ಎಸ್ ನರಸಿಂಹಸ್ವಾಮಿ ಪದ್ಯ ಗೊತ್ತಿಲ್ಲ. ಅವನು ಪ್ರೇಮದ ಕಾಣಿಕೆ’ ಸಿನಿಮಾ ನೋಡಿಲ್ಲ. ಅವನಿಗೆ ಟಾಲ್‌ಸ್ಟಾಯ್ ಗೊತ್ತಿಲ್ಲ. ಆನಾ ಕರೇನಿನಾ ಕಾದಂಬರಿಯಲ್ಲಿ ಆನಾಳ ಒಲವು ಯಾಕೆ ಪಥ ಬದಲಿಸಿತು ಅನ್ನುವುದು ಅರ್ಥವಾಗುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಅವನು ಹುಲು ಮಾನವ.

ಹೀಗೆ ನಾವು ಲೆಕ್ಕಾಚಾರ ಹಾಕುತ್ತಿದ್ದೆವು. ಸಾಹಿತ್ಯವಲ್ಲದೇ ಬದುಕನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇರೆ ಮಾರ್ಗವೇ ಇಲ್ಲ ಎಂಬುದು ನಮ್ಮೆಲ್ಲರ ಗಾಢ ನಂಬುಗೆಯಾಗಿತ್ತು. ಸುಬ್ರಾಯನಂತೂ ಆರ್ ಎನ್ ಜಯಗೋಪಾಲ್ ಎಷ್ಟು ಚೆನ್ನಾಗಿ ಹಾಡು ಬರೆಯುತ್ತಾರೆ ಎಂದು ರಾಗವಾಗಿ ಹಾಡಿ ನಮ್ಮನ್ನು ರಂಜಿಸುತ್ತಿದ್ದ. ಅದೆಲ್ಲಿಂದಲೋ ಹೊಸ ಹಾಡುಗಳನ್ನು ಸಂಗ್ರಹಿಸಿ ಅದನ್ನು ಕೆಸೆಟ್ಟು ಮಾಡಿ ಹಂಚುತ್ತಿದ್ದ. ಈ ಮಧ್ಯೆ ಸುಬ್ರಹ್ಮಣ್ಯದ ವಿದ್ಯಾಭೂಷಣರು ದೇವರನಾಮಗಳನ್ನು ಹಾಡಲು ಆರಂಭಿಸಿದರು. ಕೆಲವೊಂದು ಭಕ್ತಿಗೀತೆಗಳು ನಮಗೆ ಪ್ರೇಮಗೀತೆಗಳಂತೆ ಕೇಳಿಸಿ ನಾವು ರೋಮಾಂಚಿತರಾಗುತ್ತಿದ್ದೆವು.

ಆ ಕಾಲವೇ ಹಾಗಿತ್ತು. ನಮ್ಮನ್ನು ಪ್ರತಿಯೊಬ್ಬರೂ ಓದುವಂತೆ ಪ್ರೇರೇಪಿಸುತ್ತಿದ್ದರು. ಲಂಕೇಶ್ ಒಂದು ವಾರದ ಟೀಕೆ ಟಿಪ್ಪಣಿಯಲ್ಲಿ ಮರ್ಲನ್ ಬ್ರಾಂಡೋ ಬಗ್ಗೆ ಬರೆದರ ಅವನ ಆತ್ಮಚರಿತ್ರೆಯನ್ನು ಹುಡುಕಿಕೊಂಡು ತಿಂಗಳುಗಟ್ಟಲೆ ಅಡ್ಡಾಡುತ್ತಿದ್ದೆವು. ನಮ್ಮಲ್ಲಿ ಬೆಂಗಳೂರಿಗೆ ಹೋಗಿ ಬರುವುದರಲ್ಲಿ ಚಾಣಾಕ್ಷನಾಗಿದ್ದವನೊಬ್ಬ ಅದನ್ನೆಲ್ಲಿಂದಲೋ ಸಂಪಾದಿಸಿ ತಂದುಕೊಡುತ್ತಿದ್ದ. ಅದನ್ನು ನಾನು ಓದಿ ಅದರ ಸ್ವಾರಸ್ಯಗಳನ್ನು ಗೆಳೆಯರಿಗೆ ಹೇಳಬೇಕಾಗಿತ್ತು.

ನಮ್ಮೂರು ಉಪ್ಪಿನಂಗಡಿಯಲ್ಲೊಂದು ಪುಟ್ಟ ಲೈಬ್ರರಿಯಿತ್ತು. ಅಲ್ಲಿರುವ ಎಲ್ಲಾ ಪುಸ್ತಕಗಳನ್ನೂ ಒಂದೂವರೆ ವರ್ಷದಲ್ಲಿ ಓದಿ ಮುಗಿಸಿದ ನಂತರ ಪುತ್ತೂರು, ಬೆಳ್ತಂಗಡಿಗೆ ನಮ್ಮ ಪ್ರಯಾಣ ಸಾಗುತ್ತಿತ್ತು. ನಾವು ಇಡೀ ದಕ್ಷಿಣಕನ್ನಡವನ್ನು ಎರಡೇ ವರ್ಷಗಳಲ್ಲಿ ಸುತ್ತಿದ್ದು ಪುಸ್ತಕಗಳಿಗಾಗಿಯೇ. The rise and fall of third riech ಮುಂತಾದ ಪುಸ್ತಕಗಳು ಜರ್ಮನಿಯ ಪರಿಚಯ ಮಾಡಿಕೊಟ್ಟವು. ಆರ್ವೆಲ್ ಇಂಗ್ಲೆಂಡನ್ನು ಕಣ್ಮುಂದೆ ತರುತ್ತಿದ್ದ. ಅಪ್ಪನನ್ನು ಪ್ರೀತಿಸುವುದಕ್ಕೂ ದ್ವೇಷಿಸುವುದಕ್ಕೂ ಕಾಫ್ಕಾ ಕಲಿಸಿಕೊಟ್ಟ. ಕಮೂ ಕಾದಂಬರಿ ಓದುತ್ತಿದ್ದಂತೆ ನಮ್ಮ ಭಾವನೆಗಳಲ್ಲಿ ಸುಳ್ಳೆಷ್ಟು ನಿಜವೆಷ್ಟು ಎಂಬುದು ಅರ್ಥವಾಯಿತು ಅಂದುಕೊಂಡೆವು. ಪೆಂಗ್ವಿನ್ ಬುಕ್ಸ್ ನಂಬಬಹುದಾದ ಪುಸ್ತಕಗಳನ್ನು ಪ್ರಕಟಿಸುತ್ತಿದೆ ಎಂದು ನಂಬಿಕೆ ಬಂತು. ಕನ್ನಡದಲ್ಲಿ ಅದನ್ನು ಹೋಲುವಂಥ ನೆಲಮನೆ ಪ್ರಕಾಶನ ಆರಂಭವಾಗಿ ರೋಮಾಂಚಗೊಳಿಸಿತು. ಕಾಡಲ್ಲಿ ಕೂತು ಸಾಹಿತ್ಯ, ಸಿನಿಮಾ., ರಂಗಭೂಮಿಯ ಪರಿಚಯ ಮಾಡಿಕೊಡುತ್ತಿದ್ದ ಸುಬ್ಬಣ್ಣ ಮತ್ತು ಹೆಗ್ಗೋಡು ಮತ್ತೆ ಮತ್ತೆ ಭೇಟಿ ನೀಡುವ ತಾಣವಾಯಿತು.

ಆಗ ನಮಗೆ ನಾವ್ಯಾರೆಂದು ಪರಿಚಯಿಸಿಕೊಳ್ಳುವ ಹುಮ್ಮಸ್ಸೇ ಇರಲಿಲ್ಲ. ಲೇಖಕರನ್ನು ಮಾತಾಡಿಸುವ ಖಯಾಲಿಯೂ ಇರಲಿಲ್ಲ. ಲಂಕೇಶರನ್ನು ನೋಡಬೇಕು ಎಂಬ ಉತ್ಸಾಹವಾಗಲೀ, ತೇಜಸ್ವಿ ಜೊತೆ ಮಾತಾಡಬೇಕು ಎಂಬ ಆಸಕ್ತಿಯಾಗಲಿ ಕಿಂಚಿತ್ತೂ ಇರಲಿಲ್ಲ. ಅವರೆಲ್ಲ ನಶ್ವರ, ಅವರ ಕೃತಿಗಳಷ್ಟೇ ಅಮರ ಎಂದು ನಾವೆಲ್ಲ ನಂಬಿದ್ದೆವು. ಈ ಮಧ್ಯೆ ಮಮ್ಮೂಟಿ ಸಿನಿಮಾಗಳು ಖುಷಿ ಕೊಡುತ್ತಿದ್ದವು. ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಬಂದ ಸಿನಿಮಾಗಳಾದ ಈಗಲ್ ಹ್ಯಾಸ್ ಲ್ಯಾಂಡೆಡ್, ಗನ್ಸ್ ಆಫ್ ನವರೋನ್, ಆನಿಯನ್ ಫೀಲ್ಡ್ ಮುಂತಾದವು ಮತ್ತೆ ಮತ್ತೆ ನೋಡಿಸಿಕೊಂಡವು. ಆಗ ಪರಿಚಯ ಆದವನು ಷೇಕ್ಸ್‌ಪಿಯರ್.

ಷೇಕ್ಸ್‌ಪಿಯರ್‌ನ ನಾಟಕವೊಂದನ್ನು ಕನ್ನಡಕ್ಕೆ ಅಳವಡಿಸಿ ನೀನಾಸಂ ತಿರುಗಾಟ ಪ್ರದರ್ಶಿಸುತ್ತಿತ್ತು. ಅದನ್ನು ನೋಡಿದ್ದೇ ತಡ ನಮಗೆ ಷೇಕ್ಸ್‌ಪಿಯರ್ ಹುಚ್ಚುಹತ್ತಿತ್ತು. ನಮ್ಮ ಇಂಗ್ಲಿಷ್ ಮೇಷ್ಟರಾಗಿದ್ದ ವೆಂಕಟರಮಣ ಬಳ್ಳರಿಗೆ ಗಂಟುಬಿದ್ದು ಷೇಕ್ಸ್‌ಪಿಯರನ ಅಷ್ಟೂ ನಾಟಕಗಳನ್ನು ಓದಿಯೇ ಓದಿದೆವು. ಷೇಕ್ಸ್‌ಪಿಯರ್‌ಗಿಂತ ದೊಡ್ಡ ಲೇಖಕ ಇಲ್ಲ ಎಂದು ನಾವು ನಂಬುವ ಹೊತ್ತಿಗೇ ಅವರೇ ಹೆರಾಲ್ಡ್ ಪಿಂಟರ್‌ನ ನಾಟಕಗಳನ್ನು ಮುಂದಿಟ್ಟು ನಕ್ಕರು. ನಂತರ ದಾರಿಯೋ ಫೋ, ಬ್ರೆಕ್ಟ್, ಬೆಕೆಟ್ ಪರಿಚಯವಾದರು. ತುಘಲಕ್ ಓದಿದ ಮೇಲಂತೂ ಕಾರ್ನಾಡ್ ಅವರೆಲ್ಲರ ಸಮಕ್ಕೆ ನಿಲ್ಲಬಲ್ಲ ನಾಟಕಕಾರ ಅನ್ನುವುದು ಹೊಳೆಯಿತು.

ಆಗಲೂ ಈಗಲೂ ಓದುವುದು ಮೊದಲ ಖುಷಿ. ಬರೆಯುವುದು ಎರಡನೆಯದು. ಅಷ್ಟು ಹೊತ್ತಿಗಾಗಲೇ ನಾನು ಬೆಂಗಳೂರಿಗೆ ಬಂದಿದ್ದೆ. ವೈಎನ್‌ಕೆ ಪರಿಚಯವಾಗಿದ್ದರು. ಬರೆಯುವುದಕ್ಕೆ ಪ್ರೋತ್ಸಾಹಿಸುತ್ತಿದ್ದರು. ಅವರು ನೆರುಡಾ, ಬೋದಿಲೇರ್, ಅಚಿಬೆ, ಜೆಫ್ರಿ ಬರ್ನಾರ್ಡ್, ಬರ್ನಾರ್ಡ್ ಷಾ, ಕೈಲಾಸಂ, ಮಾಸ್ತಿ ಮುಂತಾದವರನ್ನು ಓದಿಸಿದರು.

ಅಲ್ಲಿಯ ತನಕ ನಾನು ಬರೆದದ್ದು ಏಳೋ ಎಂಟೋ ಕತೆಗಳನ್ನು. ತುಂಬ ಬರೆಯುವುದು ತಪ್ಪು ಎಂಬ ಭಾವನೆಯೇ ನನ್ನಲ್ಲಿತ್ತು. ವೈಎನ್‌ಕೆ ತುಂಬ ಬರೆಯುವುದು ತಪ್ಪಲ್ಲ. ಅನ್ನಿಸಿದ್ದನ್ನು ಬರೆಯುತ್ತಾ ಹೋಗಬೇಕು. ಬರೆದ ನಂತರ ಅದನ್ನು ಮರೆತುಬಿಡಬೇಕು. ಒಂದು ಕೃತಿಯನ್ನು ಬರೆಯುವ ಹೊತ್ತಿಗೆ ಅದು ಕೊಡುವ ಸಂತೋಷವಷ್ಟೇ ನಿನ್ನದು. ನಂತರ ಅದನ್ನು ಕುಂತಿ ಕರ್ಣನನ್ನು ತೇಲಿಬಿಟ್ಟಂತೆ ಬಿಟ್ಟು ಬಿಡಬೇಕು ಎಂದದ್ದು ಮನಸ್ಸಿನಲ್ಲಿ ನಿಂತೇಬಿಟ್ಟಿತು.

ವೈಎನ್‌ಕೆ ಸುಮಾರು ಎಂಟು ವರ್ಷಗಳ ಕಾಲ ನನ್ನಿಂದ ಬರೆಸಿದರು. ಏನು ಬೇಕಾದರೂ ಬರಿ. ಎಷ್ಟು ಬೇಕಾದರೂ ಬರಿ. ಬರೆದ ನಂತರ ಅದು ನಿನ್ನದಲ್ಲ ಎಂದುಕೋ, ಪ್ರತಿಕ್ರಿಯೆಗಳಿಗೆ ಕಾಯಬೇಡ ಅಂದರು. ಇವತ್ತಿಗೂ ನನ್ನನ್ನು ನಡೆಸಿಕೊಂಡು ಬರುತ್ತಿರುವುದು ಅದೇ ಮಾತು.

ಇವತ್ತಿಗೂ ಕೂಡ, ಸೀರಿಯಲ್ಲುಗಳ ಸಂಭಾಷಣೆ ಸೇರಿದಂತೆ ದಿನಕ್ಕೆ ಸುಮಾರು ಐವತ್ತು ಪುಟ ಬರೆಯುತ್ತೇನೆ. ಅದರಲ್ಲಿ ನನ್ನದೆಷ್ಟು ಅನ್ನುವುದು ನನಗೆ ಅರ್ಥವಾಗಿದೆ. ನನ್ನದಲ್ಲದ್ದು ಯಾವುದು ಎಂಬುದು ಗೊತ್ತಾಗಿದೆ. ಕಂಪ್ಯೂಟರ್ ಮುಂದೆ ಕೂತರೆ ಬೆರಳು ತನ್ನಿಂತಾನೇ ಬರೆಯುತ್ತ ಹೋಗುತ್ತದೆ. ನೀನೇಕೆ ಬರೀತೀಯಾ ಅನ್ನುವ ಪ್ರಶ್ನೆಗೆ ನನ್ನಲ್ಲಿ ಉತ್ತರ ಇಲ್ಲ. ನೀನೇಕೆ ಉಸಿರಾಡುತ್ತೀಯ ಎಂಬ ಪ್ರಶ್ನೆಯಷ್ಟೇ ಅದು ಅಸಹಜ ಮತ್ತು ಅರ್ಥಹೀನ.

ಬರೆಯುವ ಹೊತ್ತಿಗೆ ನಾನು ನಾನೇ ಆಗಿರುತ್ತೇನೆ. ಕುವೆಂಪು, ತೇಜಸ್ವಿ, ಕುಮಾರವ್ಯಾಸ, ಕಾಫ್ಕ, ಆರ್ವೆಲ್, ಅನಂತಮೂರ್ತಿ, ದೇಸಾಯಿ, ಮಾಸ್ತಿ ಮುಂತಾದವರೆಲ್ಲ ಇವನೇನು ಬರೆಯಬಲ್ಲ ಎಂದು ನಗುತ್ತಿರುವುದು ಕಣ್ಮುಂದೆ ಬರುತ್ತದೆ. ಮತ್ತೆ ಬರವಣಿಗೆ ಬಿಟ್ಟು ಅವರನ್ನೆಲ್ಲ ಓದುವ ಆಸೆಯಾಗುತ್ತದೆ. ಮತ್ತೊಮ್ಮೆ ನಮ್ಮೂರಿನ ಲೈಬ್ರರಿಯಲ್ಲಿ ಕೂತು ರಾಬರ್ಟ್ ಹಂಟಿಂಗ್‌ಟನ್ ಫ್ಲೆಚರ್ ಬರೆದ ಇಂಗ್ಲಿಷ್ ಸಾಹಿತ್ಯ ಚರಿತ್ರೆಯನ್ನು ಓದುವ ಆಸೆಯಾಗುತ್ತದೆ. ಅದನ್ನು ಓದಲು ಆರಂಭಿಸುತ್ತಿದ್ದಂತೆ ಕಾಫ್ಕಾ ಬರೆದ ಡೈರಿ ನನ್ನನ್ನು ಓದು’ ಎಂದು ಕರೆಯುತ್ತದೆ. ಗಿರಡ್ಡಿ ಗೋವಿಂದರಾಜು ಬರೆದ ಮಣ್ಣು’ ನೀಳ್ಗತೆ ನೆನಪಾಗುತ್ತದೆ. ಅವರ ಪ್ರಬಂಧಕ್ಕೆ ಸ್ಪೂರ್ತಿಯಾದ ಹಿಡಿಯದ ಹಾದಿ’ ಕವಿತೆ ಕಣ್ಮುಂದೆ ಸುಳಿಯುತ್ತದೆ. ಮೊನ್ನೆ ಮೊನ್ನೆ ಬರೆಯಲು ಶುರು ಮಾಡಿದ ಸತ್ಯಬೋಧ ಜೋಶಿಯಂಥ ಹುಡುಗರ ಕಥೆ ಕಣ್ಮುಂದೆ ಸುಳಿಯುತ್ತದೆ. ನನ್ನ ಓರಗೆಯ ಕತೆಗಾರರು ಪ್ರತ್ಯಕ್ಷವಾಗುತ್ತಾರೆ.

ಹೌದು, ನಾನೇಕೆ ಬರೆಯುತ್ತೇನೆ?

ಕಿರಿಯ ಮಿತ್ರರಾಜ ಕುಮಾರ್, ವಿಕಾಸ್ ನೇಗಿಲೋಣಿ ಮುಂತಾದವರು ಸಿಕ್ಕಿದಾಗೆಲ್ಲ ಯಾಕೆ ಬರೀತೀರಿ. ಯಾರು ನಿಮ್ಮ ಬರಹಕ್ಕಾಗಿ ಕಾಯುತ್ತಿದ್ದಾರೆ. ಯಾಕೆ ಈ ಅವಸರ. ನಿಧಾನಕ್ಕೆ ಬರೀಲಿ’ ಅನ್ನುತ್ತಾರೆ. ಸರೀಕರಾದ ಸುರೇಂದ್ರನಾಥ್ ನಿಮ್ಮದು ಅತಿಯಾಯ್ತು’ ಎಂದು ನಗುತ್ತಾರೆ.

ಅದು ನಿಮ್ಮ ಪ್ರಶ್ನೆಯೂ ಆಗದಿರಲಿ ಎಂಬುದು ಸದ್ಯದ ಏಕೈಕ ಆಶೆ.

4 ಟಿಪ್ಪಣಿಗಳು (+add yours?)

 1. ಈಶ್ವರ ಭಟ್,ತೋಟಮನೆ
  ಫೆಬ್ರ 06, 2011 @ 23:01:45

  “ಒಂದು ಕೃತಿಯನ್ನು ಬರೆಯುವ ಹೊತ್ತಿಗೆ ಅದು ಕೊಡುವ ಸಂತೋಷವಷ್ಟೇ ನಿನ್ನದು. ನಂತರ ಅದನ್ನು ಕುಂತಿ ಕರ್ಣನನ್ನು ತೇಲಿಬಿಟ್ಟಂತೆ ಬಿಟ್ಟು ಬಿಡಬೇಕು” ಇದು ನಿಜವಾಗಿಯೂ ಲೇಖಕನಿರಬೇಕಾದ ಮನಸ್ತಿತಿ.

  ಉತ್ತರ

 2. ಕುಮಾರ ರೈತ
  ಫೆಬ್ರ 06, 2011 @ 22:37:12

  ನಮಸ್ತೆ ಜೋಗಿ, ನೀವು ಏನೇ ಬರೆದರೂ ಚೆನ್ನಾಗಿ ಬರೆಯುತ್ತೀರಿ. ಮುಖ್ಯ ಸಂಗತಿ ಎಂದರೆ ಅವೆಲ್ಲವೂ ಈ ನೆಲದ ಕಥೆಗಳೇ ಅನಿಸುತ್ತೆ. ಈ ಕಾರಣಕ್ಕಾಗಿಯೇ ಆಪ್ತ ಎನಿಸುತ್ತೆ. ಲೇಖಕನೋರ್ವನ ಸಾಹಿತ್ಯ ಕೃತಿಗಳು ಬೇರೆಬೇರೆ ಕಾರಣಗಳಿಗೆ ಇಷ್ಟವೆನಿಸಿದರೂ ಮತ್ತೆಮತ್ತೆ ಓದುವುದು ಬೇಸರದ ಸಂಗತಿ. ಆದರೆ ಮತ್ತೆಮತ್ತೆ ಓದಬೇಕೆನ್ನಿಸುವಂತೆ ಬರೆಯುವವರೂ ಇದ್ದಾರೆ. ಇಂಥವರು ವಿರಳ. ಈ ವಿರಳರ ಸಾಲಿನಲ್ಲಿ ನೀವು ಇದ್ದೀರಿ. ‘ಏನು ಬೇಕಾದರೂ ಬರಿ. ಎಷ್ಟು ಬೇಕಾದರೂ ಬರಿ. ಬರೆದ ನಂತರ ಅದು ನಿನ್ನದಲ್ಲ ಎಂದುಕೋ, ಪ್ರತಿಕ್ರಿಯೆಗಳಿಗೆ ಕಾಯಬೇಡ’ ಅಂದರು. ಈ ಮಾತು ಅನೇಕ ಸಂದರ್ಭಗಳಲ್ಲಿ ಮಾತ್ರ ಸತ್ಯ. ಪ್ರತಿಕ್ರಿಯೆಗೆ ಕಾಯದಿದ್ದರೂ ಬಂದಾಗ ಪ್ರತಿಕ್ರಿಯೆ ನೀಡದಿದ್ದರೆ ಅದು ಲೇಖಕ-ಬರಹದ ಸೋಲು

  ಉತ್ತರ

 3. Pramod
  ಫೆಬ್ರ 04, 2011 @ 15:27:49

  ಒಳ್ಳೆ ಮ್ಯಾಜಿಕ್ ಮಾಡಿದ ಹಾಗೆ ಬರೀತೀರಾ ನೀವು, ಸೂಪರ್ 🙂

  ಉತ್ತರ

 4. malathi S
  ಫೆಬ್ರ 04, 2011 @ 13:05:33

  What ever you write is simple and down to earth, thats why it has a high readership follwing, though i admit i started to read you late!!
  and speaking of that Govt. library in Belthangady, It was right in front of our compound,really thank goodness for that , one and half year (srikanth was posted there)passed away in a blur!!
  🙂
  malathi S

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: