ಚಂದ್ರಶೇಖರ ಆಲೂರು ಕಾಲಂ: ನಿನ್ನಂತ ಅಪ್ಪಾ ಇಲ್ಲ..

ನನ್ನ ಬಾಲ್ಯ ಕಾಲದ ಮಿತ್ರ ಪ್ರಸಾದಿಯ ತಂದೆ ತೀರಿಕೊಂಡ ಸುದ್ದಿ ನನ್ನ ಮೊಬೈಲ್‌ನಲ್ಲಿ ಕಾಣುತ್ತಿದ್ದಂತೆಯೇ ನನಗೆ ತಕ್ಷಣ ಪ್ರತಿಕ್ರಿಯಿಸುವುದು ಸಾಧ್ಯವಾಗಲೇ ಇಲ್ಲ. ನಮ್ಮ ಕಚೇರಿಗೆ ಸಂಬಂಧಪಟ್ಟ ಕೇಸ್‌ಗಾಗಿ ಕೋರ್ಟ್‌ಹಾಲ್‌ನಲ್ಲಿ ಕಾಯುತ್ತಾ ಕುಳಿತಿದ್ದಾಗ ಬಂದ ಮೆಸೇಜು. ಅದನ್ನು ನೋಡಿದಾಕ್ಷಣ ನನ್ನ ಕೇಸು, ಕೋರ್ಟ್‌ಹಾಲ್‌ನಲ್ಲಿ ಕಿಕ್ಕಿರಿದ ಜನರು ಎಲ್ಲವೂ ಮರೆಯಾಗಿ ನಲವತ್ತು ವರ್ಷಗಳ ಹಿಂದಿನ ಗುಬ್ಬಿ, ಸಂಪಿಗೆ ರೋಡು, ಮಲ್ಲಸಂದ್ರ ನೆನಪಾದವು. ಪ್ರಸಾದಿಯ ಊರು ಗುಬ್ಬಿ, ಅವರ ತಂದೆ ಸಂಪಿಗೆ ರೋಡ್‌ನಲ್ಲಿ ಸ್ಟೇಷನ್ ಮಾಸ್ಟರಾಗಿದ್ದರು, ನಮ್ಮ ತಂದೆ ಮಲ್ಲಸಂದ್ರದಲ್ಲಿ. ನಾನು -ಪ್ರಸಾದಿ ಓದುತ್ತಿದ್ದುದು ಗುಬ್ಬಿಯ ಶಾಲೆಯಲ್ಲಿ. ಅವರದ್ದೂ ನಮ್ಮಂತೆಯೇ ತುಂಬು ಸಂಸಾರ. ಮನೆಯ ತುಂಬ ಹೆಣ್ಣುಮಕ್ಕಳು-ಇಬ್ಬರು ಗಂಡು ಮಕ್ಕಳು. ಕಳೆದ ವರ್ಷ ಗಣೇಶ ಹಬ್ಬದಲ್ಲಿ ಬೆಂಗಳೂರಿನ ರೈಲ್ವೆ

ಕಾಲನಿಯಲ್ಲಿರುವ ಪ್ರಸಾದಿಯ ಮನೆಗೆ ಹೋದಾಗ ಅವರೊಂದಿಗೆ ತುಂಬಾ ಹೊತ್ತು ಮಾತಾಡಿದ್ದೆ. ಅವರ ಆರೋಗ್ಯ, ಲವಲವಿಕೆ, ಮಾತುಗಾರಿಕೆಯನ್ನು ಕಂಡು ಸಂಭ್ರಮಿಸಿದ್ದೆ. ಪ್ರಸಾದಿಯ ಮನೆಯಲ್ಲಿ ಪ್ರತಿವರ್ಷವೂ ನಡೆವ ಗಣೇಶ ಹಬ್ಬದ ಕಾರ್ಯಕ್ರಮಕ್ಕೆ ನಾನು ಖಾಯಂ ಅತಿಥಿ. ತಂದೆ-ತಾಯಿ, ಮಕ್ಕಳು-ಮೊಮ್ಮಕ್ಕಳು-ಮರಿ ಮಕ್ಕಳು ಹಾಗೂ ಹತ್ತಾರು ಬಂಧುಮಿತ್ರರ ಈ ಸಂತೋಷಕೂಟದ ಬಗ್ಗೆ ಹಿಂದೊಮ್ಮೆ ಈ ಅಂಕಣದಲ್ಲಿ ಬರೆದಿದ್ದೆ. ಸುಮಾರು ತೊಂಬತ್ಮೂರು ವರ್ಷಗಳ ತುಂಬು ಜೀವನ ನಡೆಸಿದ ಅವರ ಸಾವಿನ ಸುದ್ದಿ ಕಂಡಾಗ ಈಗ್ಗೆ ಒಂಬತ್ತು ವರ್ಷಗಳ ಹಿಂದೆ ಇದೇ ತಿಂಗಳಲ್ಲಿ ಕಣ್ಮರೆಯಾದ ನನ್ನ ತಂದೆ ನೆನಪಾದರು. ಅವರೆಲ್ಲಾ ಕಾಠಿಣ್ಯದ ಅಪ್ಪಂದಿರ ತಲೆಮಾರಿಗೆ ಸೇರಿದವರು. ಆದರೆ ಅವರ ಅಂತಃಕರಣ ತೆಂಗಿನ ಚಿಪ್ಪಿನೊಳಗೆ ಅಡಗಿರುವ ಎಳನೀರಿನಂತೆ.

ನಮ್ಮಲ್ಲಿ ಬಹುಪಾಲು ಜನ ಅಂತಃಕರಣ, ಅನುಕಂಪ, ಮಮತೆ ಅಮ್ಮನಿಗೆ ಮಾತ್ರ ಮೀಸಲೇನೋ (ಅಥವಾ ಹೆಣ್ಣಿಗೆ!) ಎಂಬಂತೆ ಮಾತಾಡುತ್ತಾರೆ. ಆದರೆ ನಾನು, ಪ್ರಸಾದಿ ಮತ್ತೊಬ್ಬ ಗೆಳೆಯ ನಾಗೇಶ್ – ಎಲ್ಲರೂ ಅಪ್ಪನ ಅಂತಃಕರಣದ ಸವಿಯನ್ನುಂಡು ಬೆಳೆದವರು. ನಮಗಿಂತ ಮಿಗಿಲಾಗಿ ನಮ್ಮ ಮನೆಗಳ ಹೆಣ್ಣುಮಕ್ಕಳು ಅಪ್ಪನಿಂದ ಪಡೆದ ಪ್ರೀತಿ, ಪ್ರೋತ್ಸಾಹ, ಮಮತೆ ಅದ್ಭುತವಾದದ್ದು. ನನ್ನ ಬಾಲ್ಯಕಾಲದ ನೆನಪು, ನಮ್ಮ ತಂದೆಯವರ ನೆನಪು, ಪ್ರಸಾದಿಯ ತಂದೆಯ ಅಗಲುವಿಕೆಯ ನೋವು ನನ್ನನ್ನ ಇಡಿಯಾಗಿ ಆವರಿಸಿ ಗುಂಗಾಗಿ ಕಾಡುತ್ತಿರುವಾಗಲೇ ಹಿರಿಯ ಕವಯಿತ್ರಿ ಶಶಿಕಲಾ ವೀರಯ್ಯ ಸ್ವಾಮಿಯವರು ಬರೆದ ಅಪ್ಪ ಮತ್ತು ಮಣ್ಣು ಎಂಬ ನಲವತ್ತು-ನಲವತ್ತೈದು ಪುಟಗಳ ಕಿರು ಹೊತ್ತಗೆಯನ್ನ ಓದಿದೆ.

***

ಎಲ್ಲರೂ ಅಮ್ಮನ ಬಗ್ಗೆ ಬರೆಯುವವರೇ. ಅದೊಂದು ಫ್ಯಾಷನ್ನೇ ಆಗಿಬಿಟ್ಟಿದೆಯೇನೋ ಅನ್ನುವಷ್ಟರ ಮಟ್ಟಿಗೆ. ಲೇಖಕ ಮಿತ್ರರಾದ ವಸುಧೇಂದ್ರ ಮತ್ತು ಮಣಿಕಾಂತ್ ಬಹಳಷ್ಟು ಬರೆದಿದ್ದರೂ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ‘ನಮ್ಮಮ್ಮ ಅಂದ್ರೆ ನನಗಿಷ್ಟ’ ಮತ್ತು ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಎಂಬ ಪ್ರಬಂಧಗಳೇ. ಈ ಹೆಸರಿನ ಪುಸ್ತಕಗಳು ಅಲ್ಪ ಕಾಲದಲ್ಲಿಯೇ ಮರು ಮುದ್ರಣಗಳನ್ನ ಕಂಡವು. ನಮ್ಮ ಭಾರತೀಯ ಜನಸಾಮಾನ್ಯರಲ್ಲಿಯೇ ಅಮ್ಮ ಅಂದರೆ ಪ್ರೀತಿ, ಅಂತಃಕರಣ, ಮಮತೆ… ಎಲ್ಲಾ . ಹೀಗಾಗಿ ಮಕ್ಕಳು ಏನು ಮಾಡಿದರೂ ಚನ್ನ ಎನ್ನುತ್ತಾರಲ್ಲ ಹಾಗೆ ಅಮ್ಮನ ಬಗ್ಗೆ ಯಾರು ಏನು ಬರೆದರೂ ಚಂದವೇ. ಅಪ್ಪನ ಬಗ್ಗೆ ಯಾಕೆ ಯಾರೂ ಬರೆಯುವುದೇ ಇಲ್ಲವಲ್ಲ, ಒಂದು ಕವನವನ್ನೂ ಅಂದುಕೊಳ್ಳುತ್ತಿದ್ದಾಗಲೇ ‘ಅಪ್ಪ ಮತ್ತು ಮಣ್ಣು’ ಕೈಗೆ ಸಿಕ್ಕಿದ್ದು.

೧೯೯೦ರ ಆಗಸ್ಟ್‌ನಲ್ಲಿ ತೀರಿಕೊಂಡ ತಂದೆಯವರ ಮಣ್ಣಿಗೆ ಹೊರಟ ಲೇಖಕಿ ಆ ಒಂದೆರಡು ದಿನದ ತಮ್ಮ ಮನಸ್ಥಿತಿಯನ್ನ ಹೃದಯಂಗಮವಾಗಿ ಈ ಕೃತಿಯಲ್ಲಿ ತೋಡಿಕೊಂಡಿದ್ದಾರೆ : ಐದು ಜನ ಹೆಣ್ಣು ಮಕ್ಕಳು, ಮೂರು ಜನ ಗಂಡು ಮಕ್ಕಳನ್ನು ಪಡೆದ ಅಪ್ಪ ತುಂಬು ಸಂಸಾರಿ, ಮಮತಾಮಯಿ, ತಾಯ್ತನ ಕೇವಲ ಹೆಂಗಸಿನ ಸ್ವತ್ತಲ್ಲ ಎಂದು ನಾನು ಅನುಭವಿಸಿದ್ದು ಕುಟುಂಬ ವತ್ಸಲನಾದ ಅಪ್ಪನ ಆರ್ದ್ರ ಅಂತಃಕರಣ ದಲ್ಲಿ ಮಿಂದಾಗ. ಅವ್ವ-ಅಪ್ಪ ಶಿಕ್ಷಕರಾಗಿದ್ದರು. ಹೀಗೆ ಅಪ್ಪನ ಹೆಣದ ಮುಂದೆ ಕುಂತು, ಭಜನೆಯವರ ಭಜನೆ ಮತ್ತು ದುಃಖತಪ್ತರ ಶೋಕದ ಹಿನ್ನೆಲೆಯಲ್ಲಿ ಅಪ್ಪನನ್ನ ನೆನಪಿಸಿಕೊಳ್ಳುತ್ತಾ ಹೋಗುತ್ತಾರೆ ಲೇಖಕಿ. ಹೊಲದಲ್ಲಿ ಬೆಳೆಯುವ ಸೇಂಗಾ, ಹೆಸರು, ತೊಗರಿ ಹಸಿಕಾಯಿಗಳನ್ನು ತಿನ್ನುವ ಆಸೆಯನ್ನ ಮಕ್ಕಳು ವ್ಯಕ್ತಪಡಿಸಿದಾಗ ಕ್ರಮವಾಗಿ ಎಂಟು, ಆರು ಮತ್ತು ನಾಲ್ಕು ವರ್ಷದ ಹೆಣ್ಣು ಮಕ್ಕಳನ್ನ ಪಾಳಿಯ ಮೇಲೆ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ ಅಪ್ಪನ ಚಿತ್ರ ನೆನಪಾಗುತ್ತದೆ. ಹಾಗೆ ಶಾಲಾದಿನಗಳಲ್ಲಿ ರಾಷ್ಟ್ರೀಯ ಉತ್ಸವಗಳ ಸಮಯದಲ್ಲಿ ಧ್ವಜ ವಂದನೆಯ ಸಮಯದಲ್ಲಿ ಹಾಡಲು ಅಪ್ಪ ನೀಡುತ್ತಿದ್ದ ಪ್ರೋತ್ಸಾಹ.

ಅವರು ಮಕ್ಕಳನ್ನ ಬಯಲಾಟಕ್ಕೆ ಕರೆದುಕೊಂಡು ಹೋಗುತ್ತಿದ್ದ ಪರಿ ನೋಡಿ: “… ಚಳಿಗಾಲವಾಗಿದ್ದರೆ ಎಲ್ಲರಿಗೂ ತಲೆಗೆ ಒಂದೊಂದು ಪಾವಡಾ ಕಟ್ಟಿ, ಸ್ವೆಟರು ಹಾಕಿ, ಒಂದೆರಡು ಚಾದರು-ಜಮಖಾನಿ ಹಿಡಿದುಕೊಂಡು ಚಾವಡಿಗೋ, ಬಜಾರಿನ ಮುಖ್ಯ ಸ್ಥಳಕ್ಕೋ ಕರೆದೊಯ್ಯುವನು. ಸಂಜೆಯೇ ತಾನು ಬಂದು ಕಾದಿರಿಸಿದ ಎತ್ತರದ ಜಾಗದಲ್ಲಿ ಎಲ್ಲರನ್ನೂ ಕೂಡಿಸುವನು…” ಮಕ್ಕಳು ತೂಕಡಿಸಿ ದರೆ ಅವರು ನಿದ್ದೆ ಹೋಗದಂತೆ ಎಚ್ಚರಿಸಿ ಮುಖ ತೊಳೆದು ನೀರು ಕುಡಿಸಿ “ಇನ್ನ ಮ್ಯಾಲೆ ರಾಕ್ಷಸ ಬರ‍್ತಾನ ದೇವರು ಬರ‍್ತಾನ ಮಕ್ಕೊ ಬ್ಯಾಡ್ರಿ” ಎಂದು ನಿದ್ದೆಗೆ ಜಾರದಂತೆ ಎಚ್ಚರಿಸುತ್ತಾರೆ.

“ಅಪ್ಪನ ವ್ಯಕ್ತಿತ್ವದ ಮಾಧ್ಯಮ ಅವನ ತುಂಬು ತಾಯ್ತನ. ತಾಯಿ-ತಂಗಿ ಅನ್ನದೇ ಹೆಣ್ಣುಮಕ್ಕಳನ್ನ, ಬೇರೆ ಹೆಣ್ಣು ಮಕ್ಕಳನ್ನ ಮಾತಾಡಿಸಿ ಗೊತ್ತೇ ಇಲ್ಲ… ಇಡೀ ರಾತ್ರಿ ನಿದ್ದೆಯನ್ನೇ ಮಾಡದೆ ಎಂಟು ಜನ ಮಕ್ಕಳೂ ಮಲಗಿದ್ದಲ್ಲಿ ಬಂದು, ಹೊದಿಕೆ ದಿಂಬುಗಳು ಸರಿದಿದ್ದರೆ ಸರಿ ಮಾಡಿ, ಯಾರ‍್ಯಾರ ಕೈ ಕಾಲುಗಳು ಸ್ಥಾನ ಪಲ್ಲಟವಾಗಿರುತ್ತವೋ ಅವುಗಳನ್ನ ಸ್ವಸ್ಥಾನಕ್ಕೆ ಸೇರಿಸಿ, ತಗಣೆ ಒರೆಯುತ್ತಾ, ಗುಂಗಾಡು ಹೊಡೆಯುತ್ತಾ ಯಾರಿಗಾದರೂ ಎಚ್ಚರವಾದರೆ ‘ನೀರ ಬೇಕೇನ ತಂಗೀ, ನೀರಡಿಕೆ ಆಗೈತೇನೋ ಅಪ್ಪಾ’ ಎಂದು ನೀರು ಕುಡಿಸುತ್ತಾ ವಿದ್ಯುತ್ತು ಇನ್ನೂ ಕಾಲಿಡದ ನಮ್ಮೂರಿನಲ್ಲಿ ಬೆಳ್ಳನ ಬೆಳಗು ಕೈಯಲ್ಲಿ ಕಂದೀಲು ಹಿಡಿದುಕೊಂಡು ಮಕ್ಕಳ ಸುಖ ನಿದ್ದೆಗೆ ಭಂಗ ಬರದಂತೆ ಕಾವಲಿರುವನು. ನಾವು ಶಾಲೆಯಿಂದ ಬರುವುದು ತಡವಾದರೆ “ಯಾಕೋ ತಂಗಿದ್ಯಾರು ಇನ್ನಾ ಬರಲೇ ಇಲ್ಲ” ಎಂದು ಅರ್ಧ ದಾರಿಯವರೆಗೂ ಬಂದು ಬಿಡುವನು.

ಶಶಿಕಲಾರವರ ಈ ನೆನಪಿನ ಮಾಲೆಯಲ್ಲಿ ಇಂಥ ಹತ್ತಾರು ಆತ್ಮೀಯ ಚಿತ್ರಣಗಳಿವೆ. ನಾವೆಲ್ಲಾ ಗಂಡಸರಿಗೆ ಹೆಣ್ಣು ಮಕ್ಕಳ ಮುಟ್ಟು, ಮಾಸಿಕಸ್ರಾವ ಮುಂತಾದ ವಿಚಾರಗಳ ಬಗ್ಗೆ ತಿಳಿವಳಿಕೆಯೇ ಇಲ್ಲ ಎಂದುಕೊಂಡಿರುತ್ತೀವಿ. ಅದು ಗಂಡಸರ ಲೋಕ ದಿಂದ ಹೊರಗೆ ಎಂಬಂತೆ. ಆದರೆ ಶಶಿಕಲಾರವರ ಪುಸ್ತಕದಲ್ಲಿ ಈ ಬಗ್ಗೆ ಒಂದು ಹೃದಯಸ್ಪರ್ಶಿ ಚಿತ್ರಣವಿದೆ: ನನಗೆ ಮಾಸಿಕ ಸ್ರಾವವಾಗುತ್ತಿದ್ದಾಗ ಅಸಾಧ್ಯ ಹೊಟ್ಟೆ ನೋಯುತ್ತಿತ್ತು. ಯಾರೋ ಹೇಳಿದರಂತೆ, ‘ಭೂತರಾಕ್ಷಿ (ಕ್ಯಾಕ್ಟಸ್ ಜಾತಿಯ ಗಿಡ) ಎಲಿ ತಂದು ಸುಟ್ಟು ರಸಾ ತಗದು ಮೂರು ದಿನ ಕುಡಸಬೇಕು’ ಎಂದು. ಆ ದಿನ ರಣ ರಣ ಬಿಸಿಲಿನಲಿ, ಹೊಲ ಹೊಲ ಅಲದಾಡಿ ಭೂತರಾಕ್ಷಿ ಎಲೆ ತಂದು ತಾನೇ ನೀರೊಲೆಯ ಮುಂದೆ ಕುಳಿತು ಸುಟ್ಟು ಆರುವವರೆಗೆ ಕಾದು ಪಡಸಾಲೆಯ ಕಂಬದ ಬಳಿ ನುಣುಪುಗಲ್ಲಿನ ಮೇಲೆ ಅರೆದು ಶೋಧಿಸಿ ಕುಡಿಸುವನು. ಇಂಥವನ್ನೆಲ್ಲ ಒಂದು ದೇವತಾ ಕಾರ್ಯವೇನೋ ಅನ್ನುವಷ್ಟೆ ಶ್ರದ್ಧೆ ಯಿಂದ ಮಾಡುವನು ‘ತಂಗೀ ಬಾಳ ಕಂಯ್ (ಕಹಿ) ಇರ‍್ತದ, ಆಮ್ಯಾಲೆ ಸ್ವಲ್ಪ ಸಕ್ಕರಿ ತಿನ್ನು ಮಲಕ್ಕೊಂಡು ಬಿಡು’ ಎಂದು ಕಳಿಸುವನು. ಮಕ್ಕಳನ್ನು ಎಷ್ಟೆ ಬಗೆಯಲ್ಲಿ ಪ್ರೀತಿಸಿದರೂ ಸಾಲದು.

ಬಾಲ್ಯಕಾಲದಲ್ಲಿ ಅಪಾರ ನಿಷ್ಠೆಯಿಂದ ದೇವರ ಪೂಜೆ ಮಾಡುತ್ತಿದ್ದ, ನೂರ ಒಂದು ಸಲ ‘ಓಂ ನಮಃ ಶಿವಾಯ’ ಬರೆಯುತ್ತಿದ್ದ ಲೇಖಕಿ ಕಾಲೇಜಿನ ದಿನಗಳಲ್ಲಿ ಪೂಜೆ ಮಾಡುವುದನ್ನ ನಿಲ್ಲಿಸಿ ಕೊರಳಿನ ಲಿಂಗವನ್ನು ತೆಗೆದಿರಿಸುತ್ತಾರೆ. ಆಗ ಅವರ ತಂದೆ, “ತಾಯಿ ನಿನಗೆ ದ್ಯಾವರ ಮೇಲೆ ನಂಬಿಕೆ ಇದ್ದರ, ಕೊಳ್ಳಾಗ ಲಿಂಗಪ್ಪನ್ನ ಕಟಗೊ, ಪೂಜಾ ಮಾಡು. ನಂಬಿಕೆ ಇಲ್ಲದ ಸುಮ್ಮನ ಕಟಗೊಳ್ಳೋದು, ಪೂಜಾದ್ದ ನಾಟಕಾ ಮಾಡೂದು ಮಾಡಬಾರದು. ದೇವರಿಗೆ ಅಪಮಾನ ಮಾಡಿದಂಗ ಆಗ್ತದ.”

***

ಶಶಿಕಲಾ ಅವರ ‘ಅಪ್ಪ ಮತ್ತು ಮಣ್ಣು’ ಎಂಬ ಕಿರು ಪುಸ್ತಕವನ್ನ ಓದುವಾಗ ಅವರ ತಂದೆಯ ವರ್ಣನೆಯನ್ನು ಓದಿದಾಗ ನಮ್ಮ ತಂದೆಯವರೇ ನನ್ನ ಎದುರು ಇದ್ದಾರೆ ಅನ್ನಿಸಿತು. ಇಂಥದೊಂದು ಮಾರ್ದವ, ಹೃದಯಸ್ಪರ್ಶಿ ಅನುಭವ ನೀಡಿದ ಲೇಖಕಿಗೆ ನನ್ನ ಕೃತಜ್ಞತೆಗಳು.

9 ಟಿಪ್ಪಣಿಗಳು (+add yours?)

 1. jayamangala
  ಫೆಬ್ರ 05, 2011 @ 22:11:16

  hi chandru…… u remembered my father with perfect analysis about his hard work, vision reg children future, brought up 7 children in one salary …his thougts ….his principled life…. so many things…. which is influencing our day to day life, … proud to be daughter of great soul…. thanks a lot…..

  ಉತ್ತರ

 2. chandrashekhara aluru
  ಫೆಬ್ರ 01, 2011 @ 19:23:32

  Hi thanks to all.

  ಉತ್ತರ

 3. veekay
  ಫೆಬ್ರ 01, 2011 @ 12:34:10

  nice one..

  ಉತ್ತರ

 4. veekay
  ಫೆಬ್ರ 01, 2011 @ 12:31:56

  just wonderful.. my love on my dad is doubled by reading this..
  thanks for such a touching article..

  -veekay

  ಉತ್ತರ

 5. Akarsha Ramesh Kamala
  ಫೆಬ್ರ 01, 2011 @ 06:24:38

  Tumba chennagide maava.

  ಉತ್ತರ

 6. Gubbachchi Sathish
  ಫೆಬ್ರ 01, 2011 @ 00:20:26

  ಅಪ್ಪ ನನ್ನನ್ನ ಪ್ರೀತಿಯಿಂದ ಪುಟ್ಟಿ ಅನ್ನೋರು. ಎಷ್ಟೋ ಸಲ ಅಪ್ಪ ಅಮ್ಮನಾಗಿದ್ದರೆ, ನಾ ಅವರ ಮಗಳಾಗಿದ್ದರೆ ಅನ್ನಿಸುತ್ತಿತ್ತು. ನಾವು ಇದ್ದದ್ದು, ಇರುವುದೂ ಹಾಗೇಯೇ ಎಂದರೆ ಸರಿ. ಧನ್ಯವಾದಗಳು ಸಾರ್.

  ಉತ್ತರ

 7. Anasuya M.R.
  ಜನ 31, 2011 @ 22:36:38

  ” avara anthakarana tengena chippinolage adagiruva elanirinathe.” Entha
  appandirannu padeyalu punya madirabeku.

  ಉತ್ತರ

 8. Vivek
  ಜನ 31, 2011 @ 17:56:49

  Thanks for such a wonderful article

  ಉತ್ತರ

 9. savtri
  ಜನ 31, 2011 @ 11:20:38

  ಸರ್‍ ಲೇಖನ ಎಷ್ಟೊಂದು ಹೃದಯಸ್ಪರ್ಶಿಯಾಗಿದೆ. ಶಶಿಕಲಾ ವೀರಯ್ಯಸ್ವಾಮಿಯವರ ಕೃತಿಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: