ಜೇನುತುಪ್ಪದಲ್ಲಿ ಕಲಸಿ ನೆಕ್ಕಿಸಿದಂತೆ!

ಬುದ್ಧಮಾರ್ಗದ ಎರಡು ಮಹಾಕಾವ್ಯಗಳು

-ಜಿ.ಪಿ.ಬಸವರಾಜು

ಇತ್ತೀಚಿನ ವರ್ಷಗಳಲ್ಲಿ ಪ್ರಕಟವಾಗಿರುವ ಮಹತ್ವದ ಅನುವಾದ ಕೃತಿಗಳಲ್ಲಿ ಅಶ್ವಘೋಷನ ‘ಬುದ್ಧಚರಿತ’ ಮತ್ತು ‘ಸೌಂದರನಂದ’ ಕೃತಿಗಳಿಗೆ ಪ್ರಮುಖವಾದ ಸ್ಥಾನವಿದೆ. ಆದರೆ ಈ ಅನುವಾದಗಳ ಬಗ್ಗೆ ಅಷ್ಟೊಂದು ಚಚರ್ೆ ನಮ್ಮಲ್ಲಿ ನಡೆದಿಲ್ಲ. ಹಾಗೆಂದು ಈ ಕೃತಿಗಳನ್ನು ಕನ್ನಡದ ಜನತೆ ಕಡಗಣಿಸಿದ್ದಾರೆಂದೂ ಅಲ್ಲ. ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಈ ಅನುವಾದಗಳು ಎರಡು ಮೂರು ಮುದ್ರಣಗಳನ್ನು ಕಂಡಿವೆ. ಕನ್ನಡಿಗರು ಬುದ್ಧನ ಬಗ್ಗೆ ಮತ್ತು ಈ ಕೃತಿಗಳ ಬಗ್ಗೆ ಪ್ರೀತಿ ಮತ್ತು ಆದರಗಳನ್ನು ತೋರಿಸಿರುವುದನ್ನು ಈ ಮರು ಮುದ್ರಣಗಳು ಸೂಚಿಸುತ್ತವೆ.

ಸಂಸ್ಕೃತದಲ್ಲಿ ಅಶ್ವಘೋಷ ಈ ಕೃತಿಗಳನ್ನು ರೂಪಿಸಿದ್ದು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ. ಸಂಸ್ಕೃತ ಸಾಹಿತ್ಯ ಚರಿತ್ರೆಯಲ್ಲಿ ಈ ಆಶ್ವಘೋಷನಿಗೆ ಮಹತ್ವದ ಸ್ಥಾನ ಇದೆ. ಈತ ಮಹಾಕವಿ; ಬೌದ್ಧ ಧರ್ಮದ ಅನುಯಾಯಿ. ಬೌದ್ಧಧರ್ಮ ಪ್ರಚಾರಕ, ನಾಟಕಕಾರ, ವಿದ್ವಾಂಸ ಮತ್ತು ಹಾಡುಗಾರ. ಇದೆಲ್ಲದಕ್ಕಿಂತ ಮಿಗಿಲಾಗಿ ಬುದ್ಧನ ನಂತರ ಸುಮಾರು ಐದು ನೂರು ವರ್ಷಗಳ ಅವಧಿಯಲ್ಲಿ ಈ ಮಹಾಕವಿ ಇದ್ದ ಕಾರಣದಿಂದಾಗಿ ಬುದ್ಧನ ಬಗ್ಗೆ ಮತ್ತು ಆತನ ಧರ್ಮದ ಬಗ್ಗೆ ಅಶ್ವಘೋಷ ತನ್ನ ಎರಡು ಕಾವ್ಯಗಳಲ್ಲಿ ಕೊಡುವ ವಿವರಗಳನ್ನು ಅಧಿಕೃತ ಎಂದು ಪರಿಗಣಿಸಬಹುದಾಗಿದೆ. ಬುದ್ಧನ ನಂತರದ ಅತ್ಯಲ್ಪ ಕಾಲಾವಧಿಯಲ್ಲಿಯೇ ಬೌದ್ಧಧರ್ಮ ಬಗೆಬಗೆಯ ರೂಪಾಂತರಕ್ಕೆ ಒಳಗಾಯಿತು, ಹಲವು ಶಾಖೆಗಳಲ್ಲಿ ಹಂಚಿಹೋಯಿತು ಎನ್ನುವುದು ನಿಜವಾದರೂ ಅಶ್ವಘೋಷನ ಕಾಲಕ್ಕೆ ಅದು ಸಂಪೂರ್ಣವಾಗಿ ನಾಶವಾಗಿರಲಿಲ್ಲ ಅಥವಾ ಹೊಸ ರೂಪವನ್ನು ಪಡೆದುಕೊಂಡಿರಲಿಲ್ಲ. ಅನೇಕ ರಾಷ್ಟ್ರಗಳಿಗೆ ಅದು ಚಾಚಿಕೊಳ್ಳುವಷ್ಟು ಪ್ರಭಾವಶಾಲಿಯಾಗಿತ್ತು.

ಆಶ್ವಘೋಷನ ಕಾಲವನ್ನು ಸಾಹಿತ್ಯ ಚರಿತ್ರಕಾರರು ಸುಮಾರು ಕ್ರಿ.ಪೂ. ಎರಡನೆಯ ಶತಮಾನ ಎಂದು ಗುರುತಿಸುತ್ತಾರೆ. ಈತ ಅನೇಕ ಕೃತಿಗಳನ್ನು ರಚಿಸಿದ ಎಂದು ಹೇಳಿದರೂ ಸಿಕ್ಕಿರುವವು ಮಾತ್ರ ಮೂರೇ ಕೃತಿಗಳು: ಬುದ್ಧಚರಿತೆ, ಸೌಂದರನಂದ ಮತ್ತು ಸಾರಿಪುತ್ರ ಪ್ರಕರಣ. ಬುದ್ಧಚರಿತೆಯ ಹದಿನಾಲ್ಕು ಅಧ್ಯಾಯಗಳು ಮಾತ್ರ (ಅಂದರೆ ಕೃತಿಯ ಮೊದಲ ಅರ್ಧ) ಸಿಕ್ಕಿವೆ. ಉತ್ತರಾರ್ಧ ಕಳೆದು ಹೋಗಿದೆ. ಆದರೆ ಚೀನೀ ಮತ್ತು ಟಿಬೆಟಿಯನ್ ಭಾಷೆಗಳಲ್ಲಿ ಈ ಕೃತಿ ಸಂಪೂರ್ಣವಾಗಿ ಇರುವುದರಿಂದ ಉತ್ತರಾರ್ಧವನ್ನು ಟಿಬೆಟಿಯನ್ ಭಾಷೆಯಿಂದ ಇಂಗ್ಲಿಷ್ಗೆ ಮತ್ತು ಮರಳಿ ಸಂಸ್ಕೃತಕ್ಕೆ ಅನುವಾದಿಸಿಕೊಂಡು ಬುದ್ಧಚರಿತೆಯನ್ನು ಪೂರ್ಣ ಮಾಡಿಕೊಳ್ಳಲಾಗಿದೆ. ಟಿಬೆಟಿಯನ್ ಭಾಷೆಯಲ್ಲಿರುವ ಬುದ್ಧಚರಿತೆಯೇ ಅಧಿಕೃತವಾದದ್ದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಆಶ್ವಘೋಷ ಸಂಸ್ಕೃತ ಸಾಹಿತ್ಯದಲ್ಲಿ ಕಾಳಿದಾಸ ಮತ್ತು ಭಾಸರಿಗಿಂತಲೂ ಹಿಂದಿನವನು. ಬುದ್ಧಚರಿತೆ ಸಂಸ್ಕೃತ ಸಾಹಿತ್ಯ ಮತ್ತು ಬೌದ್ಧ ಸಾಹಿತ್ಯಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕಾಳಿದಾಸನ ರಘುವಂಶದ ಮೇಲೆ ಬುದ್ಧಚರಿತೆಯ ಪ್ರಭಾವ ನಿಚ್ಚಳವಾಗಿದೆ ಎಂದು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಮಾಡಿರುವ ವಿದ್ವಾಂಸ ಪ್ರೊ.ಕೆ.ಜಿ.ನಾಗರಾಜಪ್ಪ ಅಭಿಪ್ರಾಯಪಟ್ಟಿದ್ದಾರೆ. ರಘುವಂಶದಲ್ಲಿ ಬರುವ ಕಾಮ-ಶಿವ ಪ್ರಸಂಗ ಮತ್ತು ಬುದ್ಧಚರಿತೆಯ ಮಾರ-ಬುದ್ಧರ ಸಂವಾದವನ್ನು ಇದಕ್ಕೆ ಉದಾಹರಣೆಯಾಗಿ ಕೊಡುತ್ತಾರೆ. ಅಶ್ವಘೋಷ ಮಹಾಕವಿ ಎನ್ನುವದರಲ್ಲಿ ಯಾವುದೇ ಅನುಮಾನವಿಲ್ಲ.

ಅಶ್ವಘೋಷನ ಬುದ್ಧಚರಿತೆಯನ್ನು ಮೊದಲು ಕನ್ನಡಕ್ಕೆ ತಂದವರು ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು. 1974ರಲ್ಲಿ ಅವರು ‘ಕನ್ನಡ ಬುದ್ಧಚರಿತೆ’ಯನ್ನು ಪ್ರಕಟಿಸಿದರು. ಇದು ವಿದ್ವಾಂಸ ವಲಯಕ್ಕೇ ಸೀಮಿತವಾಗುವಂಥ ಅನುವಾದವಾಗಿದ್ದು ಜನರ ಹತ್ತಿರಕ್ಕೆ ಹೋದಂತೆ ಕಾಣುವುದಿಲ್ಲ. ಡಾ.ಎಲ್.ಬಸವರಾಜು ಅವರು ಈ ಬುದ್ಧಚರಿತೆಯನ್ನು ವಿಶಿಷ್ಟವಾದ ರೀತಿಯಲ್ಲಿ ಕನ್ನಡೀಕರಿಸಿದ್ದಾರೆ. 1998ರಲ್ಲಿ ಬಸವರಾಜು ಅವರ ಅನುವಾದ ಶಿವಮೊಗ್ಗೆಯ ‘ಪರಿಸರ ಸಾಹಿತ್ಯ’ದಿಂದ ಪ್ರಕಟವಾಯಿತು. ಬಸವರಾಜು ಅವರ ಅನುವಾದ ಉದಾರವಾದೀ ಧೋರಣೆಯದು ಮತ್ತು ಸುಲಭ ಗ್ರಹಿಕೆಗೆ ದಕ್ಕುವಂಥದ್ದು. ಹೀಗಾಗಿಯೇ ಓದುಗ ವಲಯ ಸಾಕಷ್ಟು ಕುತೂಹಲವನ್ನು ಈ ಕೃತಿಯ ಬಗ್ಗೆ ತೋರಿತು. ಇದರ ಫಲವಾಗಿ ಈ ಕೃತಿ ಬಳ್ಳಾರಿಯ ‘ಲೋಹಿಯಾ ಪ್ರಕಾಶನ’ದಿಂದ 2000ದಲ್ಲಿ ಮರುಮುದ್ರಣಗೊಂಡಿತು. ಜೊತೆಗೆ ಬಸವರಾಜು ಅವರ ಉತ್ಸಾಹ ಹೆಚ್ಚಿ ಅವರು ಅಶ್ವಘೋಷನ ಇನ್ನೊಂದು ಮಹತ್ವದ ಕೃತಿಯಾದ ‘ಸೌಂದರನಂದ’ವನ್ನೂ ಕನ್ನಡಕ್ಕೆ ತಂದರು. ಬುದ್ಧಚರಿತೆಯ ಮರು ಮುದ್ರಣದ ಜೊತೆಯಲ್ಲಿಯೇ ‘ಲೋಹಿಯಾ ಪ್ರಕಾಶನ’ 2000ದಲ್ಲಿ ‘ಸೌಂದರನಂದ’ವನ್ನೂ ಪ್ರಕಟಿಸಿತು. ಅಶ್ವಘೋಷನ ಎರಡು ಮಹಾಕಾವ್ಯಗಳು ಕನ್ನಡಕ್ಕೆ ದೊರೆತವು.

ಹಾಗೆ ನೋಡಿದರೆ ಬೌದ್ಧ ಸಾಹಿತ್ಯವನ್ನು ಮೊದಲು ಕನ್ನಡಕ್ಕೆ ಪರಿಚಯಿಸಿದ ಕೀತರ್ಿ ಜಿ.ಪಿ.ರಾಜರತ್ನಂ ಅವರಿಗೇ ಸಲ್ಲಬೇಕು. ‘ಮಿಳಿಂದ ಪನ್ಹಾ’ ಕೃತಿಯನ್ನು ಅವರು ‘ಮಿಳಿಂದ ಪ್ರಶ್ನೆ’ಯಾಗಿ ಕನ್ನಡಕ್ಕೆ ತಂದರು. ರಾಜರತ್ನಂ ಅವರ ಅಪಾರ ವಿದ್ವತ್ತು ಮತ್ತು ಕನ್ನಡ ಪ್ರೀತಿ ಈ ಕೃತಿಯನ್ನು ಇಂದಿಗೂ ಮಹತ್ವದ ಕೃತಿಯಾಗಿಯೇ ಉಳಿಸಿದೆ. ಅವರ ಅನುವಾದದ ಸೊಗಸು, ಹೊಳಪು ಮತ್ತು ಗಟ್ಟಿತನಗಳೆಲ್ಲ ಈ ಕೃತಿಯಲ್ಲಿ ಬಿಂಬಿತವಾಗಿವೆ. (2007ರಲ್ಲಿ ಈ ಕೃತಿಯನ್ನು ‘ಕನರ್ಾಟಕ ಅನುವಾದ ಸಾಹಿತ್ಯ ಅಕಾಡೆಮಿ’ ಪುನಮರ್ುದ್ರಿಸಿರುವುದು ಕನ್ನಡಿಗರಿಗೆ ಮಾಡಿರುವ ಉಪಕಾರವಾಗಿದೆ.)

ಡಾ.ಎಲ್ ಬಸವರಾಜು ಬುದ್ಧಚರಿತೆ ಮತ್ತು ಸೌಂದರನಂದ ಕೃತಿಗಳು ಎಷ್ಟು ಜನಪ್ರಿಯವಾಗಿವೆ ಎಂದರೆ ಈ ಎರಡೂ ಕೃತಿಗಳನ್ನು ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ಟಸ್ಟ್ ಮತ್ತೆ ಮರ್ುದ್ರಿಸಿದೆ (2010). ಕನ್ನಡ ಓದುಗರು ಬುದ್ಧನ ಬಗ್ಗೆ ತೋರುತ್ತಿರುವ ಪ್ರೀತಿ ನಮ್ಮ ಸಾಮಾಜಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಲನೆಯ ದಿಕ್ಕನ್ನೂ ಸೂಚಿಸುವಂತಿದೆ.

2

ಬುದ್ಧಚರಿತೆಯ ಕೊನೆಯಲ್ಲಿ ಕವಿ ಅಶ್ವಘೋಷ ತನ್ನ ಕಾವ್ಯದ ಉದ್ದೇಶವೇನು ಎಂಬುದನ್ನು ಹೀಗೆ ವಿವರಿಸಿದ್ದಾನೆ:

ಮುನಿಶ್ರೇಷ್ಠನಾದ ಬುದ್ಧನ ಬಗ್ಗೆ ಸಮ್ಮಾನ ಭಾವದಿಂದ-ಆ ಮುನಿಯ ಶಾಸ್ತ್ರ(ಸಿದ್ಧಾಂತ-ಉಪದೇಶ)ದ ಅನುಸಾರವಾಗಿಯೇ ಈ ಕಾವ್ಯವನ್ನು (ಅಶ್ವಘೋಷನೆಂಬ) ನಾನು ಬರೆದೆ-ನನ್ನ ವಿದ್ವತ್ತನ್ನಾಗಲಿ ಕಾವ್ಯಕೌಶಲವನ್ನಾಗಲಿ ಮೆರೆಯುವುದಕ್ಕಲ್ಲ!

ಸೌಂದರನಂದ ಕೃತಿಯ ಕೊನೆಯಲ್ಲಿಯೂ ಇಂಥದೇ ಮಾತು ಬರುತ್ತದೆ:

ಇಲ್ಲಿ

ನಾನು

ಮೋಕ್ಷವಿಚಾರಕ್ಕೆ

ಅನ್ಯವಾದುದೇನನ್ನಾದರೂ ಹೇಳಿದ್ದರೆ

ಅದು ಕಾವ್ಯಧರ್ಮಕ್ಕೆ

ಹೊಂದಿಕೆಯಾಗಲಿಕ್ಕಾಗಿ ಮಾತ್ರವೇ ಹೇಳಲಾಯಿತು-

ಕಹಿಯಾದ ಔಷಧವನ್ನು ಸೇವಿಸಲು

ಸುಲಭವಾಗಲೆಂದು-

ಜೇನುತುಪ್ಪದಲ್ಲಿ ಕಲಸಿ ನೆಕ್ಕಿಸಿದಂತೆ!

ಅಶ್ವಘೋಷನ ಕಾಲವೇ ಧರ್ಮಸಂಘರ್ಷದ ಕಾಲ. ಹುಸಿ ಮತಧರ್ಮಗಳಲ್ಲಿ ನಂಬಿಕೆ ಇಟ್ಟವರನ್ನು ಬೌದ್ಧಧರ್ಮದ ಕಡೆ ಸೆಳೆಯುವುದಕ್ಕಾಗಿಯೇ ಪ್ರಚಾರ ಕಾರ್ಯಗಳು ಬಿರುಸಿನಿಂದಲೂ, ವ್ಯಾಪಕವಾಗಿಯೂ ನಡೆಯುತ್ತಿದ್ದವು. ಧರ್ಮದ ಮೇಲಾಟಕ್ಕಿಂತ ಇಲ್ಲಿ ಜನಹಿತವೇ ಮುಖ್ಯವಾಗಿದ್ದದ್ದನ್ನೂ ಗಮನಿಸಬಹುದು. ಬುದ್ಧನ ಇಡೀ ಬದುಕೇ ಜನಹಿತಕ್ಕೆ ಮೀಸಲಾದದ್ದು. ಅವನು ಕಂಡುಕೊಂಡ ಮಾರ್ಗ ಬಿಡುಗಡೆಯ ಮಾರ್ಗ. ನಿರಂತರ ಸಂಕಟದಲ್ಲಿ, ನೋವಿನಲ್ಲಿ, ದುಃಖದಲ್ಲಿ ಮುಳುಗಿದ ಜೀವಿಗಳನ್ನು ಬಿಡುಗಡೆಗೊಳಿಸುವುದೇ ಬುದ್ಧನ ಮಹಾಯಾತ್ರೆಯ ಮುಖ್ಯ ಉದ್ದೇಶವಾಗಿತ್ತು. ಪ್ರತಿಯೊಂದು ಜೀವಿಯನ್ನೂ ನಿರಂತರವಾಗಿ ಕಾಡುವ ಹುಟ್ಟು ಮುಪ್ಪು ರೋಗ ಸಾವುಗಳ ಬಗ್ಗೆ ಬುದ್ಧ ತನ್ನ ಜೀವನವನ್ನೇ ಪಣವಾಗಿಟ್ಟು ಧ್ಯಾನಿಸಿದವನು. ಹುಟ್ಟು ರೋಗ ಸಾವು ಮುಪ್ಪುಗಳ ಚಕ್ರಕ್ಕೆ ಸಿಕ್ಕಿ ನರಳುವವರನ್ನು ಕಂಡು ಮರುಗಿದವನು. ಇದರಿಂದ ಬಿಡುಗಡೆ ಹೇಗೆಂದು ಚಿಂತಿಸಿ ದಾರಿಯನ್ನು ಕಂಡುಕೊಂಡವನು. ಬೌದ್ಧಧರ್ಮದಲ್ಲಿ, ಬುದ್ಧನ ಬೆಳಕಿನ ಮಾರ್ಗದಲ್ಲಿ ಅಖಂಡ ವಿಶ್ವಾಸವನ್ನಿಟ್ಟಿದ್ದ, ಧರ್ಮಪ್ರಚಾರಕನೂ ಆಗಿದ್ದ ಮಹಾಕವಿ ಅಶ್ವಘೋಷ ತನ್ನ ಕಾಲದ ಧರ್ಮಸಂಘರ್ಷಕ್ಕೆ ಪ್ರತಿಕ್ರಿಯಿಸದೆ ಇರುವುದು ಹೇಗೆ ಸಾಧ್ಯ? ಸಹಜವಾಗಿಯೇ ಅದು ಅವನ ಕಾವ್ಯಗಳ ಮುಖ್ಯ ಜೀವಾಳವಾಗಿದೆ. ಬುದ್ಧನ ಸತ್ಪಥಕ್ಕೆ ಹುಸಿ ಮತಧರ್ಮಗಳ ಜನರನ್ನು ಸೆಳೆಯುವುದು ಮತ್ತು ಆ ಮೂಲಕ ಸರಿದಾರಿಯನ್ನು ತೋರಿಸುವುದು ಅಶ್ವಘೋಷನ ಮುಖ್ಯ ಉದ್ದೇಶವಾಗಿತ್ತು ಎಂಬುದು ಸ್ಪಷ್ಟ.

ಈ ಮುಖ್ಯ ಧ್ಯೇಯವನ್ನು ಇಟ್ಟುಕೊಂಡಿದ್ದರೂ ಅಶ್ವಘೋಷನ ಈ ಎರಡು ಕೃತಿಗಳು ಮೂಲತಃ ಕಾವ್ಯಗಳು. ಕಾವ್ಯವನ್ನು, ಕಾವ್ಯಧರ್ಮವನ್ನು, ಕಾವ್ಯದ ಎಲ್ಲ ಸೊಗಸು ಸೌಂದರ್ಯಗಳನ್ನು ಬಲ್ಲ ಅಶ್ವಘೋಷ ಅವುಗಳಿಗೆ ಮುಖತಿರುಗಿಸಿ ಕೃತಿಕಟ್ಟುವುದು ಸಾಧ್ಯವೂ ಇರಲಿಲ್ಲ. ಹೀಗಾಗಿ ಅವನು ಕಾವ್ಯಮಾರ್ಗ ಮತ್ತು ಧರ್ಮಮಾರ್ಗಗಳನ್ನು ಪರಸ್ಪರ ಪೂರಕವಾಗಿ ಬಳಸಿಕೊಂಡು ತನ್ನ ಕೃತಿಗಳನ್ನು ರೂಪಿಸಿದ. ಅವನಿಗೆ ಭಾರತೀಯ ಕಾವ್ಯ ಪರಂಪರೆಯೂ ತಿಳಿದಿತ್ತು. ಆ ಹೊತ್ತಿಗೆ ಬೌದ್ಧ ಸಾಹಿತ್ಯದಲ್ಲಿ ಬಂದಿದ್ದ ಬುದ್ಧನ ಜೀವನ ಚರಿತ್ರೆಗಳಾದ ಮಹಾವಸ್ತು, ಲೋಕೋತ್ತರವಾದನ್, ಮಹಾಯಾನ, ಸರ್ವಾಸ್ತಿವಾದ, ಲಲಿತ ವಿಸ್ತಾರ ಮೊದಲಾದ ಕೃತಿಗಳನ್ನು ಅವನು ಗಮನಿಸಿದ್ದ. ಕಾವ್ಯದ ಬೆಚ್ಚನೆಯ ಗುಣ, ಸೂಕ್ಷ್ಮ ಸಂವೇದನೆಯ ವಿನ್ಯಾಸಗಳನ್ನು ಉಳಿಸಿಕೊಂಡು ಧರ್ಮದ ವಿಚಾರಗಳ ಒಳ ಹೆಣಿಗೆಯನ್ನು ಮಾಡಿ ಅಶ್ವಘೋಷ ಈ ಎರಡು ಮಹಾಕಾವ್ಯಗಳನ್ನು ಸೃಷ್ಟಿಸಿದ. ಹೀಗಾಗಿಯೇ ಇವು ಸಾವಿರಾರು ವರ್ಷಗಳ ಕಾಲಪ್ರವಾಹವನ್ನು ದಾಟಿಕೊಂಡು ಜನಮನದಲ್ಲಿ ಉಳಿದುಕೊಂಡಿವೆ. ಒಂದಲ್ಲ ಹಲವು ಭಾಷೆಗಳಿಗೆ ಅನುವಾದಗೊಂಡಿವೆ; ಹಲವು ರಾಷ್ಟ್ರಗಳಲ್ಲಿ ಇನ್ನೂ ಅಧ್ಯಯನ ಗ್ರಂಥಗಳಾಗಿ, ಧರ್ಮಗ್ರಂಥಗಳಾಗಿ ಬಳಕೆಯಾಗುತ್ತಲೇ ಇವೆ.

3

ಬುದ್ಧ ಚರಿತೆಯಲ್ಲಿ ಬುದ್ಧನ ಬದುಕಿನ ಕಾವ್ಯಾತ್ಮಕ ವಿವರಗಳಿವೆ. ಬುದ್ಧನ ಹುಟ್ಟು, ಅವನ ಆಸಕ್ತಿಗಳು, ಬದುಕಿನ ಮುಖ್ಯ ಸಮಸ್ಯೆಗಳು ಅವನನ್ನು ಕಾಡಿದ ಪರಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಅವನು ನಡೆಸಿದ ಪ್ರಯತ್ನ, ಅದರ ಫಲವಾದ ‘ಜ್ಞಾನೋದಯ’ ಇವೆಲ್ಲ ಈ ಕೃತಿಯಲ್ಲಿ ಮೈಪಡೆದಿವೆ. ಈಗಾಗಲೇ ಎಲ್ಲರಿಗೂ ತಿಳಿದ ಕಥಾ ವಿವರಗಳೇ ಇಲ್ಲಿವೆ. ಆಶ್ವಘೋಷನ ಈ ಕೃತಿಯ ಅರ್ಧಭಾಗ ಈ ಗೊತ್ತಿರುವ ಕತೆಗೇ ಮೀಸಲು. ಉಳಿದರ್ಧ ಭಾಗ ಅವನ ಧರ್ಮಸಾರವನ್ನು, ಸೂಕ್ಷ್ಮವನ್ನು ಹಿಡಿಯಲು, ಧರ್ಮಪ್ರಚಾರದ ವಿವರಗಳನ್ನು ವಿವರಿಸಲು ನೋಡುತ್ತದೆ. ಧರ್ಮಸೂತ್ರಗಳು ಯಾವಾಗಲೂ ಸಾಮಾನ್ಯರಿಗೆ ನಿಲುಕುವುದಿಲ್ಲ. ಅವನ್ನು ಸರಳವಾಗಿ ಮತ್ತು ಅರ್ಥಗಭರ್ಿತವಾಗಿ ಹೇಳುವುದು ಸುಲಭವಲ್ಲ. ಜೊತೆಗೆ ಬುದ್ಧ ತನ್ನ ಕಾಲದಲ್ಲಿದ್ದ ಅನೇಕ ಮಾರ್ಗಗಳನ್ನು ಅಭ್ಯಸಿಸಿದವನು; ಅನೇಕ ಸಂಪ್ರದಾಯಗಳನ್ನು ತಿಳಿದವನು. ತನ್ನ ಸಾಧನೆಯ ಆರಂಭದ ದಿನಗಳಲ್ಲಿ ಸಾಂಪ್ರಾದಾಯಿಕ ಆಶ್ರಮಗಳಿಗೆ ನಡೆದು ಅಲ್ಲಿನ ಮುನಿಗಳು ಅನುಸರಿಸುತ್ತಿದ್ದ ದೇಹ ದಂಡನೆಯ ಅನೇಕ ಯೋಗಮಾರ್ಗಗಳನ್ನು ಅನುಸರಿಸಿದವನು. ಅವುಗಳ ಅಂತಃಸತ್ವವನ್ನು ಪರೀಕ್ಷಿಸಿದವನು. ದೇಹ ಮತ್ತು ಮನಸ್ಸುಗಳು ಬೇರೆ ಬೇರೆ ಎಂದು ಭಾವಿಸಿದ್ದ ಅವರ ವಾದವನ್ನು ಟೀಕಿಸಿದವನು. ದೇಹ ನಾಶವಾಗುವಂಥದ್ದು ಎಂಬುದನ್ನು ಒಪ್ಪಿಕೊಂಡು, ಆತ್ಮ ಅವಿನಾಶಿಯಾದದ್ದು ಎಂಬುದನ್ನು ಪ್ರಶ್ನಿಸಿದವನು. ಚಿತ್ತಸ್ವಾಸ್ಥ್ಯವನ್ನು ಕಾಯ್ದುಕೊಳ್ಳಬೇಕಾದರೆ ದೇಹಸ್ವಾಸ್ಥ್ಯವನ್ನು ಎಚ್ಚರದಿಂದ ರಕ್ಷಿಸಬೇಕಾದ ಅತಗ್ಯವಿದೆ ಎಂಬುದನ್ನು ಕಂಡುಕೊಂಡವನು. ಹೀಗಾಗಿ ಅವನು ಕಂಡುಕೊಂಡ ಹೊಸ ಮಾರ್ಗ ಮತ್ತು ಅವನ ಧರ್ಮದ ಸಾರ ತುಂಬ ಸಂಕೀರ್ಣವಾದದ್ದು. ಹೀಗಾಗಿ ಅಶ್ವಘೋಷನ ಕಾವ್ಯ ಅನೇಕ ಸವಾಲುಗಳನ್ನು ಎದುರಿಸಿದೆ. ಸ್ವತಃ ಧರ್ಮಪ್ರಚಾರಕನಾಗಿದ್ದ ಅಶ್ವಘೋಷ ಇದನ್ನೆಲ್ಲ ಸೂಕ್ತರೀತಿಯಲ್ಲಿ ಸಂಯೋಜಿಸಿಕೊಂಡು ಮುನ್ನಡೆಯುವುದು ಅನಿವಾರ್ಯವಾಗಿತ್ತು. ಅದನ್ನಾಥ ಬಹಳ ಸಮರ್ಥವಾಗಿಯೇ ಮಾಡಿರುವುದನ್ನು ಈ ಎರಡು ಕೃತಿಗಳು ಸಾಬೀತುಪಡಿಸುತ್ತವೆ.

ಬುದ್ಧಚರಿತೆಯ ಪೂವರ್ಾರ್ಧದಲ್ಲಿ ಬುದ್ಧನ ಹುಟ್ಟು, ಬಾಲ್ಯ, ಯೌವನಗಳ ಚಿತ್ರಣವಿದ್ದರೂ, ಇಲ್ಲಿ ಸೂಕ್ಷ್ಮವಾಗಿ ಕಾಣುವುದು ಬುದ್ಧನಲ್ಲಿದ್ದ ಕರುಣೆ ಮತ್ತು ಅವನ ವೈಚಾರಿಕ ಚಿಂತನೆಯ ಹೊಳಹುಗಳು. ಅವನು ರೋಗಿಯನ್ನು, ವೃದ್ಧನನ್ನು ಮತ್ತು ಸತ್ತವನನ್ನು ಕಂಡಾಗ ಸ್ಪಂದಿಸುವುದು ಈ ಕರುಣೆಯ ಕಾರಣದಿಂದಲೇ. ಇನ್ನೊಮ್ಮೆ ಸಿದ್ಧಾರ್ಥ ವನ ಸಂಚಾರಕ್ಕೆಂದು ಹೊರಟ ಸಂದರ್ಭವನ್ನು ಬಳಸಿಕೊಂಡು ಅಶ್ವಘೋಷ ಈ ಕರುಣೆಯ ಇನ್ನೊಂದು ಮುಖವನ್ನು ತುಂಬ ಸೂಕ್ಷ್ಮವಾಗಿ ಚಿತ್ರಿಸಿರುವುದನ್ನು ಗಮನಿಸಬಹುದು:

ಸುತ್ತಣ

ವನದ ಮೇಲಣ ಒಲುಮೆಯಿಂದ

ಆ ನೆಲದ ಆಕರ್ಷಕ ಗುಣದಿಂದ

ಸೆಳೆಯಲ್ಪಟ್ಟು

ಆ ಉದ್ಯಾನದ

ಆ ಕೊನೆಯಂಚಿನವರೆಗೆ ತಲುಪಿದ

ಅಲ್ಲಿ ನೇಗಿಲ ಗೆರೆಯಿಂದ

ನಿರಿನಿರಿಯಾಗಿ ನೀರು

ಅಲೆಯಾಡಿದಂತಿರುವ

ಉತ್ತ ಭೂಮಿಯನ್ನು ಕಂಡ.

ನೇಗಿಲಿಗೆ ಸಿಕ್ಕಿ ಬುಡಮೇಲಾಗಿ

ಬಿದ್ದಿದ್ದ ಹುಲ್ಲುತೆಂಡೆಯಿದ್ದ

ಮತ್ತು

ಗುಳದ ಏಟು ತಗುಲಿ, ಸತ್ತು

ಅಂಗಾತ ಬಿದ್ದಿದ್ದ, ಕ್ರಿಮಿ-ಕೀಟವಿದ್ದ-

ಆ ಉತ್ತ ಭೂಮಿಯನ್ನು ಕಂಡು,

ಸ್ವಜನರೇ ಕೊಲೆಯಾಗಿ ಬಿದ್ದಿದ್ದಂತೆ

ಬಹುವಾಗಿ ದುಃಖಿಸಿದ.

(ಅಭಿನಿಷ್ಕ್ರಮಣ ಸರ್ಗ)

ಬುದ್ಧನ ಕರುಣೆ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾದುದಲ್ಲ. ಅದು ಎಲ್ಲ ಜೀವಿಗಳಿಗೂ ವಿಸ್ತರಿಸಿಕೊಂಡದ್ದು. ಹೀಗಾಗಿಯೇ ಈ ಕರುಣೆಗೆ ಆಳವೂ ಹೆಚ್ಚು; ವಿಸ್ತಾರವೂ ಹೆಚ್ಚು. ಈ ಕರುಣೆಯೇ ಕಾರಣವಾಗಿ ಬುದ್ಧ ತನ್ನ ಜ್ಞಾನಮಾರ್ಗದ ಕಡೆಗೆ ನಡೆಯುತ್ತಾನೆ. ದುಃಖಮಯವಾದ ಈ ಬದುಕಿನಲ್ಲಿ ನೆಮ್ಮದಿ ಪಡೆಯುವುದು ಹೇಗೆ? ಹುಟ್ಟು ಸಾವುಗಳಿಂದ ಮುಪ್ಪು ರೋಗಗಳಿಂದ ಜೀವಿಗಳನ್ನು ಬಿಡುಗಡೆ ಗೊಳಿಸುವುದು ಹೇಗೆ? ಎನ್ನುವ ಮುಖ್ಯ ಪ್ರಶ್ನೆಗಳೇ ಬುದ್ಧನ ಆಧ್ಯಾತ್ಮಿಕ ಹುಡುಕಾಟಕ್ಕೆ ಪ್ರೇರಣೆ ಒದಗಿಸುತ್ತವೆ.

ಜ್ಞಾನೋದಯವೆನ್ನುವುದು ಏಕಾಏಕಿ ಬುದ್ಧನ ಮೇಲೆರಗಿದ ಮಿಂಚಲ್ಲ. ಅವನ ನಿರಂತರ ಹುಡುಕಾಟದಲ್ಲಿ ಕಾಣಿಸಿದ ಬೆಳಕಿನ ದಾರಿ. ಅವನ ತಪಸ್ಸೆನ್ನುವುದು ಕೂಡಾ ಒಂದು ನಿರಂತರ ಧ್ಯಾನ; ಶೋಧ; ಹುಡುಕಾಟ. ಈ ಹುಡುಕಾಟದಲ್ಲಿ ತರ್ಕ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸರಿ ತಪ್ಪುಗಳ ವಿವೇಚನೆ, ತರ್ಕದ ಮೂಲಕ ಅವನು ಕಂಡುಕೊಂಡ ಸತ್ಯವೇ ಅವನು ಕಂಡುಕೊಂಡ ಬೆಳಕು; ಅದೇ ಜ್ಞಾನೋದಯ. ತನ್ನ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಮನೆ, ಸಂಸಾರ, ರಾಜ್ಯ-ಎಲ್ಲವನ್ನೂ ತೊರೆದು ನಡೆದ ಸಿದ್ಧಾರ್ಥ ಮೊದಲು ಆಶ್ರಮಗಳಿಗೆ ಹೋಗುತ್ತಾನೆ. ತನ್ನಂತೆಯೇ ಇಂಥ ಹುಡುಕಾಟದಲ್ಲಿ ಈ ಆಶ್ರಮವಾಸಿಗಳು ಭಾಗಿಯಾಗಿರಬಹುದೆಂಬ ನಂಬಿಕೆಯಲ್ಲಿ ಆಶ್ರಮಗಳಿಗೆ ಹೋಗುವ ಬುದ್ಧ ಅವರ ‘ತಪಸ್ಸನ್ನು’ ವಿಶ್ಲೇಷಿಸುವುದು, ತನ್ನ ತರ್ಕದ, ವೈಚಾರಿಕ ನಿಲುವಿನ ಬೆಳಕಲ್ಲಿ. ಆ ‘ತಪಸ್ಸನ್ನು’ ದಿಟ್ಟವಾಗಿ ಒರೆಗೆ ಹಚ್ಚುವುದು ಕಾರಣವಾಗಿ ಆ ಮುನಿಗಳ ತಪಸ್ಸೆ್ಸೆನ್ನುವುದು ತೋರುಗಾಣಿಕೆಯದು; ಅರ್ಥವಿಲ್ಲದ್ದು ಎಂಬುದನ್ನು ಕಂಡುಕೊಳ್ಳುತ್ತಾನೆ. ಅವನ ತರ್ಕಶಕ್ತಿ , ಸರಿತಪ್ಪುಗಳನ್ನು ನಿರ್ಣಯಿಸುವ ವಿವೇಚನಾ ಸಾಮಥ್ರ್ಯ ಮತ್ತು ದಿಟ್ಟವಾದ ವೈಚಾರಿಕ ನಿಲುವು ಬುದ್ಧನನ್ನು ಹೊಸದೊಂದು ಮಾರ್ಗದಲ್ಲಿ ಮುನ್ನಡೆಸಿತೆಂಬುದು ನಿಜ.

ಬೋಧಿವೃಕ್ಷದ ಅಡಿಯಲ್ಲಿ ಪರ್ಯಂಕಾಸನ ಹಾಕಿ ಕುಳಿತು ತಾನು ಹುಡುಕುತ್ತಿರುವುದು ಸಿಕ್ಕುವವರೆಗೂ ಮೇಲೇಳುವುದಿಲ್ಲ ಎನ್ನುವ ಹಟದಲ್ಲಿದ್ದಾಗ ಬುದ್ಧನಿಗೆ ತಾನು ಅರಸಿದ್ದು ಸಿಕ್ಕುತ್ತದೆ. ಇದನ್ನೇ ಜ್ಞಾನೋದಯವೆಂದು ಹೇಳಲಾಗಿದೆ. ಈ ಹುಡುಕಾಟವಾದರೂ ಎಂಥದ್ದು? ಒಂದು ರಾತ್ರಿಯ ವಿವಿಧ ಜಾವಗಳಲ್ಲಿ ಅವನು ಕಂಡುಕೊಂಡ, ಅರಿತುಕೊಂಡ ಸಂಗತಿಗಳು. ಮನುಷ್ಯನ ದುಃಖದ ಮೂಲ, ಯಾತನೆಯ ಮೂಲ, ಅವನ ಹುಟ್ಟು, ಸಾವು, ಮುಪ್ಪು, ರೋಗದ ಮೂಲ. ಇದೆಲ್ಲದರ ಹುಡುಕಾಟ ಎಂದರೆ ಅದು ಕಾರಣ ಪರಂಪರೆಯ ಅವಲೋಕನ; ಕಾರ್ಯ-ಕಾರಣ ಸಂಬಂಧಗಳ ಪರಿಶೀಲನೆ. ತರ್ಕ, ವಿವೇಚನೆ, ಪರಿಶೀಲನೆಗಳ ವೈಚಾರಿಕ ಮಾರ್ಗವೇ ಬುದ್ಧನ ಮಾರ್ಗ; ಈ ವೈಚಾರಿಕ ಬೆಳಕೇ ಜ್ಞಾನೋದಯ.

ಇದನ್ನು ಕಂಡುಕೊಂಡ ಕೂಡಲೇ ಬುದ್ಧ ಲೋಕಕ್ಕೆ, ಸಮಾಜಕ್ಕೆ, ಜನರಿಗೆ ಈ ಮಾರ್ಗದ ಬಗ್ಗೆ ತಿಳಿಯಹೇಳಲು ಯಾತ್ರೆ ಹೊರಡುತ್ತಾನೆ. ಇದೊಂದು ಮಹಾಯಾತ್ರೆ. ತನ್ನ ಕೊನೆಯ ಉಸಿರಿನವರೆಗೂ ಬುದ್ಧ ಈ ಯಾತ್ರೆಯನ್ನು ನಿಲ್ಲಿಸುವುದಿಲ್ಲ. ತನ್ನ 29ನೇ ವರ್ಷದಲ್ಲಿ ಅರಮನೆಯನ್ನು ತೊರೆಯುವ ಸಿದ್ಧಾರ್ಥ 35ನೇ ವಯಸ್ಸಿನಲ್ಲಿ ಜ್ಞಾನೋದಯವಾಗಿ ಬುದ್ಧನಾಗುತ್ತಾನೆ. 80ನೇ ವರ್ಷದಲ್ಲಿ ಮಹಾಪರಿನಿವರ್ಾಣ ಹೊಂದುತ್ತಾನೆ. ಸುಮಾರು 45 ವರ್ಷಗಳ ಕಾಲ ಈತ ಭಿಕ್ಷುವಾಗಿ ಲೋಕ ಸಂಚರಿಸುತ್ತಾನೆ. ತನ್ನ ತಂದೆ, ಮಗ, ತಮ್ಮಂದಿರು, ಬಂಧುಗಳು, ಹತ್ತಿರದವರು, ದೂರದವರು, ರಾಜರು, ಶ್ರೀಮಂತರು, ಸಾಮಾನ್ಯರು ಹೀಗೆ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತ ತನ್ನ ಹೊಸ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಾನೆ. ಇದೊಂದು ಅದ್ಭುತ, ಅಪೂರ್ವ ಘಟನೆಯಾಗಿ ಚರಿತ್ರೆಯಲ್ಲಿ ಉಳಿಯುತ್ತದೆ. ಧರ್ಮವಾಗಿ, ನೀತಿಯಾಗಿ, ಬದುಕಿನ ಸೂತ್ರವಾಗಿ ಜಗತ್ತಿನ ಅನೇಕ ರಾಷ್ಟ್ರಗಳಿಗೆ ವ್ಯಾಪಿಸುತ್ತದೆ.

ಬುದ್ಧಚರಿತೆಯ ಪೂವರ್ಾರ್ಧ ಕಥಾನಕ; ಉತ್ತರಾರ್ಧ ವೈಚಾರಿಕ. ಕಥೆಯ ಅಂಶವನ್ನು ಹೇಳುವಾಗ ಅಶ್ವಘೋಷ ಕವಿಯಂತೆ ವತರ್ಿಸುತ್ತಾನೆ. ಧರ್ಮದ ವಿಚಾರಗಳನ್ನು ಹೇಳುವಾಗ ಧರ್ಮಪ್ರಚಾರಕನ ಕಾರ್ಯವನ್ನು ಮಾಡುತ್ತಾನೆ. ಉತ್ತರಾರ್ಧ ಒಣ ವಿಚಾರಗಳಂತೆಯೂ ಕಾಣಿಸಬಹುದು. ಆದರೆ ಅವು ಅನುಪಯುಕ್ತ ವಿಚಾರಗಳಲ್ಲ. ಒಂದು ಮಹಾನ್ ಚೇತನದ ಚಿಂತನೆಯ ಸಾರ ಅಲ್ಲಿದೆ ಎಂಬುದನ್ನೂ ಮರೆಯುವಂತಿಲ್ಲ. ಕೇವಲ ಬೌದ್ಧಧಮರ್ೀಯರಿಗೆ ಮಾತ್ರ ಈ ವಿಚಾರಗಳನ್ನು ಬುದ್ಧ ಹೇಳಿಲ್ಲ. ಮನುಕುಲದ ಯಾತನೆಗೆ ಸಿಕ್ಕ ಎಲ್ಲರಿಗೂ ಅಲ್ಲಿ ಪರಿಹಾರದ ಮಾರ್ಗವಿದೆ; ಬಿಡುಗಡೆಯ ಸೂತ್ರವಿದೆ.

ಸಿದ್ಧಾರ್ಥ ಅರಮನೆಯನ್ನು ನಡುರಾತ್ರಿಯಲ್ಲಿ ಸದ್ದಾಗದಂತೆ ತೊರೆಯುವ ಸಂದರ್ಭ, ಕಾಡಿನಲ್ಲಿ ತನ್ನ ತಲೆಗೂದಲನ್ನು ಕತ್ತರಿಸಿ ಆಗಸಕ್ಕೆ ಎಸೆದು ಸನ್ಯಾಸದ ಬಟ್ಟೆಗಳನ್ನು ತೊಡುವ ಸನ್ನಿವೇಶ, ಬೋಧಿವೃಕ್ಷದ ಅಡಿಯಲ್ಲಿ ಧ್ಯಾನಕ್ಕೆ ಕುಳಿತಾಗ ಅವನ ಧ್ಯಾನವನ್ನು ಕೆಡಿಸಲು ಮುಂದಾಗುವ ಮಾರನ ಭೂತಗಣದ ವರ್ಣನೆ ಹೀಗೆ ಕೆಲವು ಸನ್ನಿವೇಶಗಳನ್ನು ಅಶ್ವಘೋಷ ಕಟ್ಟಿರುವ ರೀತಿ ಅದ್ಭುತವಾಗಿದೆ.

ಸೌಂದರನಂದ ಹೆಚ್ಚು ತೀವ್ರವಾದದ್ದು; ಉತ್ಕಟವಾದದ್ದು. ಕಾವ್ಯವಾಗಿಯೂ ಇದು ಬುದ್ಧಚರಿತೆಗಿಂತ ಹೆಚ್ಚು ಸೊಗಸು, ಚೆಲುವಿನಿಂದ ಕೂಡಿದ್ದು. ಬುದ್ಧಚರಿತೆಗಿಂತ ಸೌಂದರನಂದವನ್ನೇ ಹೆಚ್ಚು ಜನ ಕಾವ್ಯಪ್ರೇಮಿಗಳು ಇಷ್ಟಪಡುತ್ತಾರೆ. ಇದಕ್ಕೆ ಕಾರಣವೂ ಇದೆ. ಬುದ್ಧನ ಮಲತಮ್ಮನಾದ ನಂದ ಅತ್ಯಂತ ಸುಂದರ; ಅವನ ಹೆಂಡತಿ ಸುಂದರಿಯೂ ಅನುಪಮ ರೂಪವಂತೆ. ಇವರಿಬ್ಬರ ನಡುವಣ ಪ್ರೀತಿ ಅಪ್ರತಿಮವಾದದ್ದು. ಇವರಿಬ್ಬರ ನಡುವಿನ ಪ್ರೀತಿ, ಆಕರ್ಷಣೆಗಳು ಅತ್ಯಂತಿಕ ಸ್ಥಿತಿಯನ್ನು ಮುಟ್ಟಿದವು. ಇಂಥ ನಂದನಿಗೆ ಬುದ್ಧ ಸನ್ಯಾಸ ದೀಕ್ಷೆ ಕೊಡುವ, ಅವನನ್ನು ಬೌದ್ಧಭಿಕ್ಷುವಾಗಿ ಪರಿವತರ್ಿಸುವ ಕತೆಯೇ ಸೌಂದರನಂದ ಕಾವ್ಯ. ಇಲ್ಲಿ ಹೃದಯಸ್ಪಶರ್ಿಯಾದ, ಸೂಕ್ಷ್ಮವಾದ ಅನೇಕ ಸನ್ನಿವೇಶಗಳು ಬರುತ್ತವೆ. ಸುಂದರಿ-ನಂದರ ಸೌಂದರ್ಯದ ವರ್ಣನೆ, ಅವರ ನಡುವಣ ಪ್ರೀತಿಯ ಪ್ರಖರತೆಯನ್ನು, ಹಾಗೆಯೇ ವಿರಹದ ತೀವ್ರತೆಯನ್ನು ತೋರಿಸುವ ಸಂದರ್ಭಗಳು, ಬುದ್ಧ ತನ್ನ ಭಿಕ್ಷಾಪಾತ್ರೆಯನ್ನು ನಂದನ ಕೈಯಲ್ಲಿರುಸುವ ಸನ್ನಿವೇಶ, ಸೌಂದರ್ಯದ ಕಲ್ಪನೆಯನ್ನು ಮತ್ತು ಮಿತಿಯನ್ನು ತೋರಿಸಿಕೊಡುವುದಕ್ಕಾಗಿ ಬುದ್ಧ ನಂದನನ್ನು ಕರೆದುಕೊಂಡು ಆಕಾಶಕ್ಕೆ ನೆಗೆದು ಅಲ್ಲಿ ನಂದನಿಗೆ ತೋರಿಸುವ ದೃಶ್ಯಗಳು-ಹೀಗೆ ಈ ಕಾವ್ಯದಲ್ಲಿ ಅತ್ಯಂತ ಸ್ವೋಪಜ್ಞವಾದ, ಚೆಲುವನ್ನು ತುಳುಕಿಸುವ, ಕಾಂತಿಯುಕ್ತ ಭಾಗಗಳು ಅನೇಕವಿವೆ.

ಸೌಂದರನಂದ ಗಾತ್ರದಲ್ಲಿ ದೊಡ್ಡದಲ್ಲ. ಹದಿನೆಂಟು ಸರ್ಗಗಳಿಗೆ ಮಾತ್ರ ಈ ಕೃತಿಚಾಚಿಕೊಂಡಿದೆ. ಆದರೆ ಇದರ ಹೊಳಪು, ಚೆಲವು ಉದ್ದಕ್ಕೂ ಹಬ್ಬಿಕೊಂಡಿದೆ. ನಿದರ್ಶನಕ್ಕೆ ಒಂದು ಸಣ್ಣ ಪದ್ಯಭಾಗವನ್ನು ಕೊಡುವುದಾದರೆ: ಬುದ್ಧ-ನಂದರು ಆಕಾಶಕ್ಕೆ ಹಾರಿ ಬಂದಾಗ ಅವರಿಗೆ ಹಿಮವತ್ಪರ್ವತದ ಸೊಗಸು ಹೀಗೆ ಕಾಣಿಸುತ್ತದೆ-

ದೇವದಾರು ವೃಕ್ಷಗಳು ಗಮ್ಮೆಂದು ನಾರುತ್ತಿದ್ದವು,

ಮೆಲುದನಿ ಮಾಡಿ ನದಿಗಳು ಹರಿಯುತ್ತಿದ್ದವು,

ಸರೋವರಗಳು ನಿರಿನಿರಿ ಮಿಂಚುತ್ತಿದ್ದವು,

ಜಲಪಾತಗಳು ಧುಮುಧುಮು ಧುಮುಕುತ್ತಿದ್ದವು

ಮತ್ತು ಚಿನ್ನದ ಬಂಡೆಗಳು ಮಿರುಗುತ್ತಿದ್ದವು

ಸುರಿಯುತ್ತಿದ್ದ ಹವಿಸ್ಸಿನಿಂದ ಧೂಮವನ್ನೇ

ಉತ್ತರೀಯವಾಗಿ ಹೊದ್ದಂತಿದ್ದ

ಆ ಪರ್ವತದ ಮೇಲೆ

ಸಿದ್ಧರೂ ಚಾರಣರೂ ಸಂಚರಿಸುತ್ತಿದ್ದರೆ

ಆ ಬಳಿಯ-ಆ

ನಿರಾಧಾರ ಅಪಾರ ನೀಲಾಕಾಶದಲ್ಲಿ

ಎರಡು ಮಾನವ ದ್ವೀಪಗಳಂತೆ ಕಂಡರಾ

ಗೌತಮಬುದ್ಧ ಮತ್ತು ನಂದರಿಬ್ಬರು!

(ದಶಮ ಸರ್ಗ)

ಇಲ್ಲಿ ಮೋಕ್ಷ ವಿಚಾರಗಳು, ಧರ್ಮಜಿಜ್ಞಾಸೆ ಇಲ್ಲವೆಂದಲ್ಲ. ಆದರೆ ಬುದ್ಧಚರಿತೆಯಲ್ಲಿರುವಂತೆ ವ್ಯಾಪಕವಾಗಿ ಇಲ್ಲ. ನಂದನಿಗೆ ಬುದ್ಧಗುರು ಮಾಡುವ ಉಪದೇಶದಲ್ಲಿಯೇ ಈ ಎಲ್ಲ ವಿಚಾರಗಳೂ ಅಡಕಗೊಂಡಿವೆ. ಕಥೆಯ ಒಳಗೇ ಧರ್ಮ ವಿಚಾರಗಳು ಅಂತರ್ಗತವಾದಂತೆ ಇರುವುದರಿಂದ ಇದು ಎಲ್ಲಿಯೂ ಹೊರೆಯಾಗುವುದಿಲ್ಲ.

4

ಬುದ್ಧನ ಮಾರ್ಗದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಮಧ್ಯಮ ಮಾರ್ಗವನ್ನು ಬುದ್ಧ ಅನುಸರಿಸಿದ ಎಂದು ಹೇಳಲಾಗಿದೆ. ಈ ಮಧ್ಯಮ ಮಾರ್ಗ ಎನ್ನುವುದು ಭೋಗ ಮತ್ತು ವೈರಾಗ್ಯಗಳ ನಡುವಿನ ಹಾದಿ. ಅತ್ತ ಭೋಗದ ಆತ್ಯಂತಿಕ ಸ್ಥಿತಿಯನ್ನು ಮುಟ್ಟದೆ, ಇತ್ತ ವೈರಾಗ್ಯದ ಕಠಿಣತಮ ಸ್ಥಿತಿಯನ್ನೂ ತಲುಪದೆ ಎರಡರ ನಡುವೆ ಸಮತೋಲನವನ್ನು ಕಂಡುಕೊಳ್ಳುವ ಮಾರ್ಗವೇ ಮಧ್ಯಮ ಮಾರ್ಗ. ದೇಹ ಮತ್ತು ಮನಸ್ಸುಗಳ ನಡುವೆ ಸಮತೋಲನವನ್ನು ಕಂಡುಕೊಂಡ, ಒಂದನ್ನು ಶಿಕ್ಷಿಸಿ ಇನ್ನೊಂದನ್ನು ಸಾಧನೆಗೆ ಒಡ್ಡುವುದು ಸರಿಯಲ್ಲ ಎಂದು ನಂಬಿದ್ದ ಬುದ್ಧ ಈ ಮಾರ್ಗವನ್ನು ಅನುಸರಿಸಿದುದರಲ್ಲಿ ಆಶ್ಚರ್ಯವೇನೂ ಕಾಣುವುದಿಲ್ಲ.

ಭಾರತೀಯ ಪರಂಪರಾಗತ ನಂಬಿಕೆಗೆ ಬುದ್ಧನ ವಿಚಾರಗಳು ಎಂಥ ಪೆಟ್ಟುಕೊಟ್ಟವು ಎಂಬುದನ್ನು ಒಂದೇ ಒಂದು ನಿದರ್ಶನದ ಮೂಲಕ ನೋಡಬಹುದು: ಆತ್ಮ ಅವಿನಾಶಿಯಾದದ್ದು ಎಂಬ ವಾದವನ್ನು ಮೊದಲ ಬಾರಿಗೆ ಬುದ್ಧ ಪ್ರಶ್ನಿಸಿದ. ಆತ್ಮವಾದವನ್ನು ವಿಥ್ಯವಾದ ಎಂದು ಕರೆದ. ‘ಈ ಜಗತ್ತಿನಲ್ಲಿ ಎಲ್ಲವೂ ಪರಿವರ್ತನಶೀಲವಾದದ್ದು. ಬದಲಾಗದಂತೆ ಇರುವುದು ಯಾವುದೂ ಇಲ್ಲ. ಹೀಗಾಗಿ ಈ ಜಗತ್ತು ಅನಾತ್ಮವಾದದ್ದು’ ಎಂದು ಹೇಳಿದ.

ಅರ್ಥವಾಗದ ಪರಿಭಾಷೆಯನ್ನು ಗಮನಿಸಿದಾಗ ಬುದ್ಧನ ಉಪದೇಶ ಕಠಿಣವಾಗಿ ಕಾಣುತ್ತದೆ. ಆದರೆ ಅಂಥ ಧಾಮರ್ಿಕ ಪರಿಭಾಷೆಯ ಆಚೆಗೂ ಬುದ್ಧನ ವಿಚಾರಗಳನ್ನು ಸಾರ ರೂಪದಲ್ಲಿ, ಸರಳ ಗ್ರಹಿಕೆಯಲ್ಲಿ ನೋಡುವುದು ಸಾಧ್ಯವಿದೆ. ಧರ್ಮ, ಅರ್ಥ, ಕಾಮಗಳ ಬಗ್ಗೆ, ಆಹಾರ ನಿದ್ರೆಗಳ ಬಗ್ಗೆ, ಹುಟ್ಟು ಸಾವು ಮುಪ್ಪು ರೋಗಗಳ ಬಗ್ಗೆ ಅವನಾಡಿದ ಮಾತುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಲಾರದು. ‘ಶಾಸ್ತ್ರ ಸಮ್ಮತಿಗಿಂತ ಅಧಿಕವಾಗಿ ಭೂಕಂದಾಯವನ್ನು ವಸೂಲಿ ಮಾಡಬೇಡ, ಪ್ರಜೆಗಳಿಗೆ ಎಂದೂ ತೊಂದರೆ ಕೊಡಬೇಡ, ಅಹಂಕಾರಿಯಾಗಿ ಧಮರ್ಾತ್ಮರಿಗೆ ತೊಂದರೆಕೊಡಬೇಡ’ ಎಂಬ ಸರಳ ಬೋಧನೆಗಳನ್ನೂ ಅವನು ರಾಜರಿಗೆ ಮಾಡಿದ್ದಾನೆ. ಇಂಥದೇ ಉಪದೇಶವನ್ನು ಅವನು ಶ್ರೀಮಂತರಿಗೆ ಮಾಡುತ್ತಾನೆ. ತನ್ನ ಶಿಷ್ಯರಿಗೆ ಅವನು ಹೇಳಿದ ಮಾತುಗಳಂತೂ ಸರ್ವಕಾಲಕ್ಕೂ ಅನ್ವಯವಾಗುವಂತೆ ಕಾಣುತ್ತಿವೆ:

‘ಭೂಮಿ-ಜೀವ-ಅನ್ನ ಮತ್ತು ಹಣ ಮುಂತಾದುವನ್ನು ಬೆಂಕಿಯಂತೆ ಭಾವಿಸಿರಿ.’ ‘ಭೂಮಿಯ ಮೇಲೆ ಏನೆಲ್ಲ ಬೆಳೆಯುತ್ತದೆಯೋ ಅದೊಂದನ್ನೂ ಕಡಿದುರುಳಿಸಬೇಡಿ, ಭೂಮಿಯನ್ನು ಡೊಗರುಗೊಳಿಸದಿರಿ, ಸೀಳದಿರಿ, ಔಷಧಿ (ರಸವಿಕ್ರಿಯೆ) ಮತ್ತು ಜ್ಯೋತಿಷ ವೃತ್ತಿಯಿಂದ ದೂರವಿರಿ -ಇದೇ ಜೀವಿಕೆಯ ಉತ್ತಮ ವಿಧಾನ’ -ಇಂಥ ಮಾತುಗಳು ಇವತ್ತಿನ ಸಮಾಜಕ್ಕೆ ಎಷ್ಟೊಂದು ಅಗತ್ಯವಾಗಿವೆಯಲ್ಲವೇ?

5

ಬುದ್ಧತ್ವ ಪ್ರಾಪ್ತಿಯ 14ನೇ ಸರ್ಗಕ್ಕೆ ಬುದ್ಧಚರಿತೆಯ ಸಂಸ್ಕೃತಮೂಲ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದಿನ ಭಾಗದ ಅನುವಾದಕ್ಕೆ ಡಾ.ಎಲ್.ಬಸವರಾಜು ಅವರು ಬಳಸಿರುವುದು ಇ.ಎಚ್.ಜಾನ್ಸ್ಸ್ಟನ್ ಅವರ ಇಂಗ್ಲಿಷ್ ಅನುವಾದವನ್ನು ಮತ್ತು ಇತರ ಅನುವಾದಿತ ಮೂಲಗಳನ್ನು. ಈ ಕಾರಣದಿಂದಾಗಿಯೊ ಏನೋ ಬಸವರಾಜು ಅವರು 16ನೇ ಸರ್ಗದಿಂದ ಮುಂದಿನ ಭಾಗವನ್ನು ಪದ್ಯದಲ್ಲಿ ಹೇಳದೆ ಗದ್ಯದಲ್ಲಿ ಹೇಳಿದ್ದಾರೆ. ಇದಕ್ಕೆ ಬುದ್ಧನ ಉಪದೇಶ, ವೈಚಾರಿಕ ಚಿಂತನೆ, ಧಾಮರ್ಿಕ, ಯೋಗಿಕ ಪರಿಭಾಷೆಗಳ ವಿವರಗಳು ಸಮೃದ್ಧವಾಗಿ ತುಂಬಿಕೊಂಡಿರುವುದೂ ಕಾರಣವಿರಬಹುದು. ಈ ಭಾಗವನ್ನು ಗದ್ಯದಲ್ಲಿ ಓದುವುದೇ ಹೆಚ್ಚು ಪ್ರಯೋಜನಕಾರಿಯಂತೆಯೂ (ಓದುಗನ ದೃಷ್ಟಿಯಲ್ಲಿ) ಕಾಣುತ್ತದೆ. (ಅಶ್ವಘೋಷನ ಕಾವ್ಯ ಈ ಭಾಗದಲ್ಲಿ ಹೇಗಿದ್ದಿರಬಹುದು ಎಂಬ ಕುತೂಹಲವಂತೂ ಕಾವ್ಯಪ್ರೇಮಿಗಳಲ್ಲಿ ಉಳಿದೇ ಉಳಿಯುತ್ತದೆ.)

ಡಾ.ಎಲ್.ಬಸವರಾಜು ಅವರು ಈ ಎರಡೂ ಕೃತಿಗಳ ಕಾಂತಿ ಮುಕ್ಕಾಗದಂತೆ, ವೈಚಾರಿಕ ಚಿಂತನೆಗೆ ಭಂಗ ಬಾರದಂತೆ, ಕಾವ್ಯಸೂಕ್ಷ್ಮಗಳು ಹಾಳಾಗದಂತೆ ಅನುವಾದ ಮಾಡಿದ್ದಾರೆ. ಅನುವಾದಕ್ಕೆ ಅವರು ಬಳಸಿರುವ ಭಾಷೆ ಸರಳ, ಸ್ಪಷ್ಟ, ನೇರ; ವಚನದ ಭಾಷೆಗೆ ಹತ್ತಿರ. ಭಾವಲಯ ಮತ್ತು ಅರ್ಥಲಯಗಳಿಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳಲು ಬಸವರಾಜು ಅವರು ಶ್ರಮಿಸಿರುವುದು ಪ್ರಧಾನವಾಗಿ ಕಾಣಿಸುತ್ತದೆ. ಓದುಗನಿಗೆ ಎಲ್ಲಿಯೂ ಗೊಂದಲವಾಗಬಾರದೆಂಬ ಎಚ್ಚರ ಉದ್ದಕ್ಕೂ ಕಂಡುಬರುತ್ತದೆ. ಈ ಎಚ್ಚರವೇ ಕಾರಣವಾಗಿ ಅವರು ಬುದ್ಧನ ವಿಚಾರಗಳಿಗೆ ಹತ್ತಿರವಾದ, ಸಮಾನಾಂತರವಾದ ವಚನಗಳನ್ನು ಅಡಿಟಿಪ್ಪಣಿಗಳಲ್ಲಿ ಸಾಕಷ್ಟು ಕೊಟ್ಟಿದ್ದಾರೆ. ಈ ವಚನಗಳು ಬುದ್ಧನ ಧರ್ಮಸೂತ್ರವನ್ನು ಮತ್ತು ಧರ್ಮಸೂಕ್ಷ್ಮವನ್ನು ಅರಿಯಲು ನೆರವು ನೀಡುತ್ತವೆ. ವಚನ ಸಾಹಿತ್ಯದಲ್ಲಿ ಬಸವರಾಜು ಅವರು ನಡೆಸಿದ ತಲಸ್ಪಶರ್ಿಯಾದ ಸಂಶೋಧನೆ ಮತ್ತು ಆಧ್ಯಯನ ಇಲ್ಲಿ ನೆರವಿಗೆ ಬಂದಿರುವುದು ವಿಶೇಷವಾಗಿ ತೋರುತ್ತದೆ. ಬಂಧದ ದೃಷ್ಟಿಯಿಂದ ನೋಡಿದಾಗ ಪೂರ್ಣ ತೃಪ್ತಿಯನ್ನು ಈ ಕೃತಿಗಳ ಪದ್ಯಭಾಗಗಳು ಕೊಡದೇ ಹೋಗಬಹುದು. ಆದರೆ ಎಲ್ಲ ಬಗೆಯ ಓದುಗರನ್ನೂ ಮುಟ್ಟುವಲ್ಲಿ ಈ ಸರಳ ರಚನೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.

ಅಶ್ವಘೋಷನ ಈ ಧಾಮರ್ಿಕ ಕೃತಿಗಳನ್ನು ಅನುವಾದಿಸುವುದು ಬಹಳ ಕಷ್ಟದ ಕೆಲಸ. ಸಂಸ್ಕೃತ, ಪಾಳಿ, ಇಂಗ್ಲಿಷ್ ಹೀಗೆ ಅನ್ಯಭಾಷೆಗಳ ಸರಿಯಾದ ಗ್ರಹಿಕೆ ಇರಬೇಕೆಂಬುದರ ಜೊತೆಗೆ ಹಿಂದೂ, ಬೌದ್ಧ, ಜೈನ, ಬೌದ್ಧಧರ್ಮದ ವಿವಿಧ ಶಾಖೆಗಳ ಪರಿಚಯವೂ ಇರಬೇಕಾಗುತ್ತದೆ. ಈ ಧರ್ಮಗಳ ಧಾಮರ್ಿಕ ಪರಿಭಾಷೆಗಳ ಜೊತೆಗೆ ಯೋಗ ಭಾಷೆಯ ಪರಿಭಾಷೆಯೂ ಅನುವಾದಕನಿಗೆ ಅಗತ್ಯವಾಗಿ ಇರಬೇಕಾಗುತ್ತದೆ. ಈ ಎರಡೂ ಕೃತಿಗಳಲ್ಲಿ ಬಸವರಾಜು ಅವರು ಕೊಟ್ಟಿರುವ ಪದಸೂಚಿಗಳು, ಪೂರಕ ಅನುಬಂಧಗಳು, ಅಡಿ ಟಿಪ್ಪಣಿಗಳು, ವಚನಗಳ ಬಳಕೆ ಇತ್ಯಾದಿ ಅಂಶಗಳನ್ನು ಗಮನಿಸಿದಾಗ ಈ ಕೃತಿಗಳ ಅನುವಾದದ ಹಿಂದೆ ಎಂಥ ಕಠಿಣ ಮತ್ತು ಪಾಂಡಿತ್ಯಪೂರ್ಣ ಪರಿಶ್ರಮವಿದೆ, ಎಷ್ಟು ಅಗಾಧ ಅಧ್ಯಯನವಿದೆ, ಎಂಥ ಸೆಣಸಾಟವಿದೆ ಎಂಬುದು ತಿಳಿಯುತ್ತದೆ. ಬಸವರಾಜು ಅವರು ತಮ್ಮ ಇಳಿವಯಸ್ಸಿನಲ್ಲಿ ಇಂಥ ಒಂದು ಮಹತ್ಕಾರ್ಯಕ್ಕೆ ಕೈಹಾಕಿ ಬಹುದೊಡ್ಡ ಯಶಸ್ಸನ್ನು ಪಡೆದದ್ದು ಕನ್ನಡಿಗರಿಗೊಂದು ಬಹುದೊಡ್ಡ ನಿಧಿಯನ್ನು ದೊರಕಿಸಿದ ಸಾಹಸವಾಗಿಯೇ ಕಾಣುತ್ತದೆ. ಅದಕ್ಕಾಗಿ ಅವರಿಗೆ ಕನ್ನಡಿಗರ ಕೃತಜ್ಞತೆಗಳು ಸಲ್ಲಬೇಕು.

ಬುದ್ಧನ ಬಗ್ಗೆ ಆಸಕ್ತಿ ತೋರುವ ಎಲ್ಲರೂ ಇಟ್ಟುಕೊಳ್ಳಬೇಕಾದ ಮತ್ತು ಶ್ರದ್ಧೆಯಿಂದ ಓದಬೇಕಾದ ಕೃತಿಗಳು ಇವು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: