ಈಗ ರಾಯರ ಕವಿತೆಗೆ ಪದುಮಳ ಟ್ವೀಟು

ರಾಯರು ಮತ್ತು ಪದುಮ

-ಸುಶ್ರುತ ದೊಡ್ಡೇರಿ

ಮೌನಗಾಳ

ಜರ್ಮನ್ ಗ್ರಾಸ್ ಎಂಬುದು ಹಸಿರಲ್ಲ
ಎಂದರೆ ಒಪ್ಪುವದೇ ಇಲ್ಲ ಇವಳು..
ಹಸಿರು ಎಂದರೆ ಕಳೆ, ಲಂಟಾನ, ಚದುರಂಗ,
ಹೂಗಿಡ, ತಬ್ಬುಬಳ್ಳಿ, ಅಡ್ಡಮರ,
ಪೊಟರೆಯಿಂದಿಣುಕುವ ಹಕ್ಕಿಮರಿ,
ಬೆಟ್ಟದ ಮೇಲೆ ಮೇಯುತ್ತಿರುವ ಗಿಡ್ಡ ದನ,
ತರಗೆಲೆಗಳ ಜೊತೆ ಕೊಳೆಯುತ್ತಿರುವ
ಯಾರೂ ತಿನ್ನದ ಹಣ್ಣು, ಅದರೊಡಲ
ಬೀಜದ ಕನಸು ಎಂದೆಲ್ಲ ಹೇಳಿದರೆ
ಹೋಗೆಲೋ ಎನ್ನುತ್ತಾಳೆ;
ಹೆಸರು ಮರೆತು ಮೊರೆತೆದ್ದದ್ದೇ ಹಸಿರು
ಎಂದರೆ ವಾದ ಮಾಡುತ್ತಾಳೆ.
ಕನಸು ಕಾಣದ ನೀನೊಂದು ಪುತ್ಥಳಿ
ಎಂದರೆ ಮೂಗು ಮುರಿಯುವಷ್ಟು ಮುನಿಸು.


ಅಂಚು ಒದ್ದೆಯಾದ ಲಂಗ ಹಿಂಡುತ್ತ ಲೋಭಾನದ
ಹೊಗೆ ಹರಿಸುತ್ತಿರುವ ತಾಯಿಯ ಬಳೆಯ ಕಿಂಕಿಣಿ
ಸದ್ದಿಗೇ ಮಗು ನಿದ್ದೆ ಹೋದ ಕತೆ ಹೇಳಿದರೆ
ಸಿಲ್ಲಿ ಅನ್ನುತ್ತಾಳೆ.
ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ
ಅಲೆಯೊಂದಿಗೆ ತೇಲಿ ಹೋಯಿತು ಎಂದರೆ
ನಿರ್ಭಾವುಕವಾಗಿ ಆಕಳಿಸುತ್ತಾಳೆ.

ನಾನು ಪಾಸಾದದ್ದೆಲ್ಲ ಥಿಯರಿಯಲ್ಲೇ,
ಪ್ರಾಕ್ಟಿಕಲ್ಲಿನಲ್ಲಿ ಸೊನ್ನೆ ಎಂದರೆ
ಥಟ್ಟನೆ ಈರುಳ್ಳಿಯ ರೇಟು ಹೇಳಿ ನನ್ನನ್ನು
ತಬ್ಬಿಬ್ಬು ಮಾಡಿ ತಾನು ಹೊಟ್ಟೆ ಹಿಡಿದುಕೊಂಡು
ನಗುತ್ತಾಳೆ.

ಇನ್ನೂ ಮಾವನ ಮನೆಯಲಿ ತುಂಬಿದ
ಮಲ್ಲಿಗೆ ಹೂಗಳ ಪರಿಮಳದ ಲಯದಲ್ಲೇ
ತೇಲುತ್ತಿರುವ ರಾಯರು;
ತಾನೇ ಬಂದು ಕಾಫಿ ಕೊಟ್ಟು ಸಕ್ಕರೆ
ಕರಗಿಸಿಕೊಳ್ಳಲು ಸ್ಪೂನು ಕೊಡುವ ಪದುಮ;
ನೀರಾಯಿತು ಅಂತ ಹೇಳಲು ನಾದಿನಿಯೂ ಇಲ್ಲ,
ಅಲ್ಲಿ ಒಳಮನೆಯೂ ಇಲ್ಲ.

ಈಗ ರಾಯರ ಕವಿತೆಗೆ ಪದುಮಳ ಟ್ವೀಟು
ಆಯುರ್ವೇದ ವೈದ್ಯರಿಗೆ ಅಲೋಪತಿಯ ಟ್ರೀಟು
ಅದೇನರ್ಥವಾಗುತ್ತೋ, ಮಾವನಿಗೆ ಇದಕ್ಕೂ ನಗು

4 ಟಿಪ್ಪಣಿಗಳು (+add yours?)

 1. jogi
  ಜನ 29, 2011 @ 10:22:33

  ಅಂದು ಮತ್ತು ಇಂದು ಈ ಕವಿತೆಯ ಒಂದು ಬಿಂದುವಿನಲ್ಲಿ ಸಂಧಿಸಿದಂತಿದೆ.
  ಖುಷಿಯಾಯ್ತು.

  ಉತ್ತರ

 2. Dr.D.M.Sagar
  ಜನ 28, 2011 @ 23:08:28

  ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ ” – ಬಹುಷಃ ಇದು ಹೊಸ ರೂಪಕ. ರೂಪಕಗಳು ವೈವಿಧ್ಯಮಯ ಅರ್ಥಗಳನ್ನು ಹೊರಡಿಸಿ ಶಬ್ದ-ಲಾಲಿತ್ಯಕ್ಕೆ ಕವಿತೆಯ ರಿನ್ಗಣವನ್ನು ತಂದುಕೊಡುತ್ತವೆ.
  ಹೌದು, ಒಳಮನೆಯೂ ಇಲ್ಲ, ನೀರಾಯಿತು ಎಂದು ಹೇಳಲು ನಾದಿನಿಯೂ ಇಲ್ಲ, ಮಾತ್ರವಲ್ಲ, ಬಹಳಷ್ಸ್ತು ಬಾರಿ ನೀರಾಗುವುದೇ ಇಲ್ಲ, ಇನ್ನು ಕೆಲವೊಮ್ಮೆ, ನೀರಾದದ್ದು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ!.
  “ಅದೇನರ್ಥವಾಗುತ್ತೋ, ಮಾವನಿಗೆ ಇದಕ್ಕೂ ನಗು. ” ಅಂದರೆ ಮಾವನಿಗೆ ಅದೆಂತಹ ಅಖಂಡ ಹಾರ್ದಿಕ ಭ್ರಷ್ಟತೆ ಇರಬಹುದು!.

  ಉತ್ತರ

 3. Vijayaraghavan
  ಜನ 27, 2011 @ 21:15:59

  where were you all these days?

  ಉತ್ತರ

 4. ಉದಯ್ ಇಟಗಿ
  ಜನ 27, 2011 @ 12:42:46

  ಹಾಯ್ ಸುಶೃತ,
  ತುಂಬಾ ಚೆಂದದ ಕವಿತೆ. ಅದರಲ್ಲೂ ಈ ಸಾಲುಗಳು ತುಂಬಾ ಇಷ್ಟವಾದವು.
  “ತಾನೇ ಬಂದು ಕಾಫಿ ಕೊಟ್ಟು ಸಕ್ಕರೆ
  ಕರಗಿಸಿಕೊಳ್ಳಲು ಸ್ಪೂನು ಕೊಡುವ ಪದುಮ;
  ನೀರಾಯಿತು ಅಂತ ಹೇಳಲು ನಾದಿನಿಯೂ ಇಲ್ಲ,
  ಅಲ್ಲಿ ಒಳಮನೆಯೂ ಇಲ್ಲ.”
  ಪ್ರೀತಿಯಿಂದ
  ಉದಯ್ ಇಟಗಿ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: