ಬಂದ್ ಆಗಿರುವುದು ಜನತೆಯ ಪ್ರಜ್ಞೆ: ಪ್ರತಿಕ್ರಿಯೆಗೆ ಸ್ವಾಗತ

ಇದು ‘ಜುಗಾರಿ ಕ್ರಾಸ್’ ಇಲ್ಲಿ ಕಾಣಿಸುವ ಬರಹಗಳು ಚರ್ಚೆಯನ್ನು ಪ್ರೇರೇಪಿಸುತ್ತದೆ. ಮೊನ್ನೆ ನಡೆದ ಕರ್ನಾಟಕ ಬಂದ್ ಕುರಿತು ಈಗಾಗಲೇ ಅವಧಿ’ಯಲ್ಲಿ ಸಾಕಷ್ಟು ಬರಹಗಳನ್ನು ಬರೆದಿರುವ ನಾ ದಿವಾಕರ್ ಅವರು ಬರೆದಿದ್ದಾರೆ. ಪ್ರತಿಕ್ರಿಯೆಗೆ ಸ್ವಾಗತ.

-ನಾ. ದಿವಾಕರ

ಭಾರತ ಸ್ವತಂತ್ರ ರಾಷ್ಟ್ರವಾಗಿ ತನ್ನದೇ ಅದ ಸಂವಿಧಾನವನ್ನು ರೂಪಿಸಿಕೊಂಡು ಗಣತಂತ್ರ ರಾಷ್ಟ್ರವಾಗಿ ರೂಪುಗೊಂಡ ಸಂದರ್ಭವನ್ನು ಗಣರಾಜ್ಯೋತ್ಸವದ ದಿನ ನೆನೆಯಲಾಗುತ್ತದೆ. ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಆಳ್ವಿಕರು ಮತ್ತು ದೇಶದ ಪ್ರಜೆಗಳು ತಮ್ಮ ನೈತಿಕ-ಸಾಮಾಜಿಕ-ರಾಜಕೀಯ ಕರ್ತವ್ಯ ಪ್ರಜ್ಞೆಯನ್ನು ಮರೆಯದಿರಲೂ ಈ ಆಚರಣೆಗಳು ನೆರವಾಗುತ್ತವೆ. ಆದರೆ ಈ ಬಾರಿಯ ಗಣತಂತ್ರ ದಿನ ಕರ್ನಾಟಕದ ಮಟ್ಟಿಗೆ ಅತಂತ್ರದ ದಿನಾಚರಣೆಯಾಗಿ ಪರಿಣಮಿಸಿದೆ. ಇಲ್ಲಿ ಸಮಸ್ಯೆ ಉದ್ಭವಿಸಿರುವುದು ಜನತೆಯಿಂದಲ್ಲ, ಯಾವುದೇ ಸಂಘಟನೆಯಿಂದಲ್ಲ ಅಥವಾ ನೈಸರ್ಗಿಕ ಕಾರಣಗಳಿಂದಲೂ ಅಲ್ಲ. ಸಂವಿಧಾನದ ಆಶಯಗಳನ್ನು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಸಾಕಾರಗೊಳಿಸುವ ಗುರುತರ ಜವಾಬ್ದಾರಿ ಹೊತ್ತಿರುವ ಎರಡು ಸಾಂವಿಧಾನಿಕ ಸಂಸ್ಥೆಗಳ ನಡುವೆ ಏರ್ಪಟ್ಟಿರುವ ಸಂಘರ್ಷವೇ ಸಮಸ್ಯೆಯಾಗಿ ಕಾಡುತ್ತಿದೆ.

ಒಂದೆಡೆ ಸಾರ್ವಭೌಮ ಪ್ರಜೆಗಳಿಂದ ಚುನಾಯಿತವಾಗಿರುವ ಒಂದು ಪ್ರಜಾಸತ್ತಾತ್ಮಕ ಸಂಸ್ಥೆ ಮತ್ತೊಂದೆಡೆ ಸಂಯುಕ್ತ ರಾಜ್ಯಾಡಳಿತ ವ್ಯವಸ್ಥೆಯ ಅನುಸಾರ ಸಂವಿಧಾನರೀತ್ಯಾ ನೇಮಿಸಲ್ಪಟ್ಟ ಮೇಲ್ವಿಚಾರಕ ಸಂಸ್ಥೆ. ಈ ಎರಡೂ ಸಂಸ್ಥೆಗಳ ಇರಬೇಕಾದ್ದು ಸಂವಿಧಾನ ಬದ್ಧತೆ, ಪ್ರಜಾಹಿತದ ಬಗ್ಗೆ ಕಾಳಜಿ ಮತ್ತು ಸಾಂವಿಧಾನಿಕ ಕರ್ತವ್ಯ ಪ್ರಜ್ಞೆ. ಸಾರ್ವಭೌಮ ಪ್ರಜೆಗಳ ಅಭ್ಯುದಯಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸಿ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮತ್ತು ಸಾಂಸ್ಕೃತಿಕ ಔನ್ನತ್ಯಗಳನ್ನು ರಕ್ಷಿಸುವ ಜವಾಬ್ದಾರಿ ಇರುವುದು ಆಳ್ವಿಕರ ಮೇಲೆ. ಈ ಆಳ್ವಿಕರ ಕಾರ್ಯಾಚರಣೆಯ ಬಗ್ಗೆ ನಿಗಾ ವಹಿಸಿ ಸಂವಿಧಾನದ ರಕ್ಷಣೆ ಮಾಡುವುದು ರಾಜ್ಯಪಾಲರ ಹೊಣೆಗಾರಿಕೆ. ದೇಶದ ಜನತೆಯಾಗಲೀ, ಕಾನೂನು ವ್ಯವಸ್ಥೆಯಾಗಲೀ ಇದಕ್ಕೂ ಮೀರಿದ ಅಪೇಕ್ಷೆ ಹೊಂದಿರಲಾರದು.

ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವುದೇನು. ರಾಜ್ಯದ ಸಮಸ್ತ ಜನತೆಯನ್ನು ಪ್ರತಿನಿಧಿಸುವ ಸರ್ಕಾರ ಭ್ರಷ್ಟಾಚಾರ ಹಗರಣಗಳ ಕೂಪವಾಗಿದೆ. ಮುಖ್ಯಮಂತ್ರಿಗಳೂ, ಹಲವು ಮಂತ್ರಿಗಳೂ ಭ್ರಷ್ಟತೆಯ ಆರೋಪ ಎದುರಿಸುತ್ತಿದ್ದಾರೆ . ಆರೋಪ ಸಾಬೀತಾಗುವವರೆಗೂ ಯಾರೂ ಅಪರಾಧಿಯಲ್ಲ ಎನ್ನುವ ನ್ಯಾಯ ಸಂಹಿತೆ ಈ ಜನಪ್ರತಿನಿಧಿಗಳನ್ನು ಅಧಿಕಾರದಲ್ಲಿ ಮುಂದುವರೆಸಲು ಅನುಕೂಲಕರವಾಗಿದೆ. ಭಾಜಪದ ಅಧ್ಯಕ್ಷ ನಿತಿನ್ ಗಡ್ಕರಿ ಚೀನಾದಲ್ಲಿ ಒಂದು ಹೇಳಿಕೆ ನೀಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗಳ ಕ್ರಮ ಅನೈತಿಕವೇನೋ ಹೌದು ಆದರೆ ಅಪರಾಧವೇನಲ್ಲ, ಹಾಗಾಗಿ ರಾಜೀನಾಮೆ ನೀಡುವ ಅಗತ್ಯವಿಲ್ಲ . ಈ ಹೇಳಿಕೆ ಏನನ್ನು ಸೂಚಿಸುತ್ತದೆ. ಕಾನೂನು ರೀತ್ಯಾ ಅಪರಾಧ ನಿರೂಪಿತವಾದಲ್ಲಿ ಮಾತ್ರ ಜನಪ್ರತಿನಿಧಿಗಳು ತಪ್ಪಿತಸ್ಥರಾಗುತ್ತಾರೆ. ಇಲ್ಲವಾದಲ್ಲಿ ಅವರು ಆಳಲು ಯೋಗ್ಯರೇ ! ರಾಜಕೀಯದಲ್ಲಿ ನೈತಿಕತೆಯ ಪ್ರಶ್ನೆ ಏಕೆ ? ಇದು ರಾಷ್ಟ್ರದ ಪ್ರಮುಖ ಮುಖ್ಯವಾಹಿನಿ ಪಕ್ಷದ ಅಧ್ಯಕ್ಷರ ಉವಾಚ.

ಮತ್ತೊಂದೆಡೆ ರಾಜ್ಯ ಸರ್ಕಾರಗಳ ಕಾರ್ಯವೈಖರಿ ಸಂವಿಧಾನ ಬದ್ಧವಾಗಿರುವಂತೆ ನೋಡಿಕೊಳ್ಳಲು ಕೇಂದ್ರದಿಂದ ನೇಮಿಸಲಾಗುವ ರಾಜ್ಯಪಾಲರ ಕಛೇರಿ. ರಾಜ್ಯದ ಚುನಾಯಿತ ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿಯ ಭ್ರಷ್ಟಾಚಾರದ ಹಗರಣಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುವ ಪ್ರಜೆಗಳ ಆಶಯಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಪರಿಣಾಮ ಈ ರಾಜ್ಯದ ಮುಖ್ಯಮಂತ್ರಿ ನ್ಯಾಯದ ದೃಷ್ಟಿಯಲ್ಲಿ ಆರೋಪಿಯಾಗುತ್ತಾರೆ. ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ ರಾಜ್ಯಪಾಲರ ಕ್ರಮ ಸಾಂವಿಧಾನಿಕವಾಗಿ ಸ್ವೀಕಾರಾರ್ಹವೇ ? ಸಂವಿಧಾನದ ಅಡಿಯಲ್ಲಿ ರಾಜ್ಯಪಾಲರಿಗೆ ಈ ಹಕ್ಕು ಖಚಿತವಾಗಿಯೂ ಇದೆ. ಇದನ್ನು ಅಲ್ಲಗಳೆಯಲೂ ಆಗುವುದಿಲ್ಲ. ಇನ್ನು ನೈತಿಕತೆಯ ಪ್ರಶ್ನೆ. ಆಡಳಿತಾರೂಢ ಪಕ್ಷದ ಅನೈತಿಕ ರಾಜಕಾರಣದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರವನ್ನು ನೈತಿಕತೆಯ ನೆಲೆಗಟ್ಟಿನಲ್ಲಿ ಹೇಗೆ ವಿಶ್ಲೇಷಿಸಲು ಸಾಧ್ಯ ? ರಾಜಕೀಯ ಪಕ್ಷಗಳ ನೈತಿಕ ಪ್ರಜ್ಞೆ ಅವನತಿಯತ್ತ ಸಾಗುತ್ತಿದೆ ಎಂದ ಮಾತ್ರಕ್ಕೆ ಅದಕ್ಕೆ ಮಾನ್ಯತೆ ನೀಡಬೇಕಿಲ್ಲ.

ಈ ಪ್ರಶ್ನೆಗಳ ನಡುವೆಯೇ ವಿಶ್ಲೇಷಣೆಗೊಳಪಡಬೇಕಾದ ವಿದ್ಯಮಾನ ಎಂದರೆ ಸರ್ಕಾರ ಮತ್ತು ರಾಜ್ಯಪಾಲರ ಕಛೇರಿಯ ನಡುವಿನ ಸಂಘರ್ಷ. ಯಾರಿಗಾಗಿ ಈ ಸಂಘರ್ಷ ? ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರದ ಕೂಪದಲ್ಲಿ ಮಿಂದು ಈಜಾಡಲೆಂದು ಈ ರಾಜ್ಯದ ಜನತೆ ಅಪೇಕ್ಷಿಸಿರಲಿಲ್ಲ. ಅಥವಾ ಕೇವಲ ಭ್ರಷ್ಟಾಚಾರದ ವಿರುದ್ಧ ಹೋರಾಡಲೆಂದೇ ವಿರೋಧ ಪಕ್ಷಗಳಿಗೂ ಮತ ನೀಡಿರಲಿಲ್ಲ. ಜನತೆಗೆ ಬೇಕಿರುವುದು ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮತ್ತು ನಿತ್ಯ ಜೀವನದಲ್ಲಿ ನೆಮ್ಮದಿಯಿಂದ ಬಾಳುವ ಸನ್ನಿವೇಶ. ಈ ಆಶಯಗಳೇ ಬ್ಯಾಲಟ್ ಬಾಕ್ಸ್ಗಳಲ್ಲಿ ವೋಟುಗಳ ಮೂಲಕ ವ್ಯಕ್ತವಾಗುತ್ತವೆ. ಈ ಸದಾಶಯಗಳನ್ನು ಪೂರೈಸುವ ಹೊಣೆಗಾರಿಕೆ ಇರುವುದು ಚುನಾಯಿತ ಸರ್ಕಾರದ ಮೇಲೆ. ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಸಂಭವಿಸುವ ಯಾವುದೇ ಅಪರಾಧವಾದರೂ ಅದು ಶಿಕ್ಷಾರ್ಹವೇ. ಪ್ರಜೆಗಳಿಗೆ ಆಳ್ವಿಕರನ್ನು ಶಿಕ್ಷಿಸುವ ಅವಕಾಶ ಸಿಗುವುದು ಚುನಾವಣೆಗಳಲ್ಲಿ ಮಾತ್ರ. ಆದರೆ ನ್ಯಾಯಾಂಗ ವ್ಯವಸ್ಥೆ ಸದಾ ಜಾಗೃತವಾಗಿಯೇ ಇರುತ್ತದೆ. ಪ್ರಜೆಗಳು ಇದನ್ನೇ ನಂಬಿರುತ್ತಾರೆ. ನ್ಯಾಯಾಂಗದ ಈ ಹೊಣೆಗಾರಿಕೆಯ ಬಗ್ಗೆ ಆಗಾಗ್ಗೆ ಎಚ್ಚರಿಸುವುದು ಪ್ರಜೆಗಳ ಕರ್ತವ್ಯವಷ್ಟೇ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವುದೂ ಅದೇ ಅಲ್ಲವೇ ? ಪ್ರಜೆಗಳ ಈ ಆಶಯಕ್ಕೆ ರಾಜ್ಯಪಾಲರು ಸಮ್ಮತಿ ನೀಡಿದ್ದಾರೆ.

ಆದರೆ ನೈತಿಕತೆಯ ಪ್ರಶ್ನೆಯನ್ನು ಭೂಗರ್ಭದಲ್ಲಿ ಹೂತು ರಾಜಕೀಯ ಅನಿವಾರ್ಯತೆಯನ್ನೇ ಪ್ರಧಾನವಾಗಿ ಪರಿಗಣಿಸುವ ಆಳ್ವಿಕರಿಗೆ ರಾಜ್ಯಪಾಲರ ಈ ಕ್ರಮ ಅನೈತಿಕವಾಗಿಬಿಡುತ್ತದೆ ! ಪರಿಣಾಮ ರಾಜ್ಯ ಸರ್ಕಾರ ಘೋಷಿತ-ಪ್ರೇರಿತ-ಪ್ರೋತ್ಸಾಹಿತ ಬಂದ್. ಜನಸಾಮಾನ್ಯರನ್ನು ಪ್ರತಿನಿಧಿಸುವ ಸಂಘಟನೆಗಳು ಬಂದ್ ಮಾಡುವುದನ್ನೇ ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಆಳುವ ಪಕ್ಷಗಳಿಗೂ ಇದು ಅನ್ವಯಿಸುತ್ತದೆ. ಆದರೂ ಇಡೀ ರಾಜ್ಯದಲ್ಲಿ ಬಂದ್ ಆಚರಿಸಿರುವುದನ್ನು ಹೆಮ್ಮೆಯಿಂದ ನೋಡಲಾಗುತ್ತಿದೆ. ಜನತೆ ಸ್ವಯಂಪ್ರೇರಿತವಾಗಿ ಬಂದ್ ಮಾಡಿರುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದೆ. ಸರ್ಕಾರವೇ ಬಂದ್ ಆಚರಿಸುವುದರಿಂದ ಜನತೆ ಎದುರಿಸುವ ಕಷ್ಟಗಳಿಗಿಂತಲೂ ರಾಜ್ಯಪಾಲರ ಕ್ರಮ ಸರಿಯೇ ಅಥವಾ ಸರ್ಕಾರದ ಕ್ರಮ ಸರಿಯೇ ಎಂಬ ಪ್ರಶ್ನೆಯೇ ಪ್ರಧಾನವಾಗಿ ಚರ್ಚೆಗೊಳಗಾಗುತ್ತಿದೆ.

ರಾಜ್ಯ ಸರ್ಕಾರ ಘೋಷಿಸಿದ ಬಂದ್ ಒಂದು ದಿನಕ್ಕೆ ಅಂತ್ಯವಾಗಿದೆ. ರಾಜ್ಯಪಾಲರ ಸಮ್ಮತಿ ದೊರೆತಿದ್ದು ಮುಂದಿನ ಕ್ರಮ ನ್ಯಾಯಾಲಯದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳೂ ಬಂದ್ ಆಚರಿಸಬಹುದು, ಮುಖ್ಯಮಂತ್ರಿಗಳ ರಾಜಿನಾಮೆ ಆಗ್ರಹಿಸಿ. ಇವೆಲ್ಲವೂ ತಾತ್ಕಾಲಿಕ ಮತ್ತು ಕ್ಷಣಿಕ. ಆದರೆ ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸುವ ಮೂಲಕ ಸಂವಿಧಾನದ ರಕ್ಷಣೆಗಾಗಿ ತಾವು ಚುನಾಯಿಸುವ ಜನಪ್ರತಿನಿಧಿಗಳು ನೈತಿಕತೆ, ಕರ್ತವ್ಯ ಪ್ರಜ್ಞೆ , ಸಂವಿಧಾನ ಬದ್ಧತೆ ಮತ್ತು ಮೌಲ್ಯಗಳನ್ನು ಮರೆತು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಧ್ಯೇಯವನ್ನು ಮಾತ್ರ ಹೊಂದಿರುವುದನ್ನು ನೋಡಿಯೂ ನೋಡದವರಂತೆ ಸಹಿಸಿಕೊಂಡಿರುವ ಸಾರ್ವಭೌಮ ಪ್ರಜೆಗಳ ಪ್ರಜ್ಞೆ ಬಂದ್ ಆಗಿರುವುದು ಮಾತ್ರ ಶಾಶ್ವತವೇನೋ ಎನಿಸುತ್ತದೆ !

 

7 ಟಿಪ್ಪಣಿಗಳು (+add yours?)

 1. ಅರಕಲಗೂಡು ಜಯಕುಮಾರ್
  ಜನ 25, 2011 @ 17:58:22

  @ ಅವಧಿ, ನಾ. ದಿವಾಕರ್ ಸಮಯೋಚಿತವಾದ ವಿಚಾರವನ್ನು ಸರಳವಾಗಿ ಹೇಳಿದ್ದಾರೆ ಸಂತೋಷ, ಹಗರಣದಲ್ಲಿ ಸಿಲುಕಿಯೂ ತಮ್ಮ ವಿರುದ್ದವಾಗಿ ಗುರುತರವಾದ ಆಪಾದನೆಗಳು ಬಂದಿದ್ದರೂ ಸಹಾ ಸರ್ಕಾರಿ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಮುಖ್ಯ ಮಂತ್ರಿ ಯಡಿಯೂರಪ್ಪ ಕರ್ನಾಟಕ ಬಂದ್ ಗೆ ಕರೆಕೊಟ್ಟದ್ದು ಸರಿಯಾದ ಕ್ರಮವಲ್ಲ. ತನ್ನ ಮೇಲೆ ಆರೋಪ ಬಂದಾಗ ಹಿಂದಿನ ಮುಖ್ಯ ಮಂತ್ರಿಗಳ ಡಿನೋಟಿಫೈ ಬಗ್ಗೆ ಮಾತನಾಡುತ್ತಿರುವ ಯಡ್ಡಿಯೂರಪ್ಪ 2ವರ್ಷದಿಂದ ಅಧಿಕಾರ ನಡೆಸಿದರಲ್ಲ ಆಗ ಕಡುಬು ತಿನ್ನುತ್ತಿದ್ದರಾ? ಅಂದರೆ ಈತನ ಕಣ್ಣು ಹೋಗುವ ಸಮಯ ಬಂದಾಗ ಅವನ ಕಣ್ಣು ಹೋಗಲಿ ಎಂಬ ಧೋರಣೆಯಿಂದ ಏನೂ ಪ್ರಯೋಜನವಾಗದು. ಪರಸ್ಪರರನ್ನು ಬೆತ್ತಲೆ ಮಾಡಿಕೊಂಡರೆ ಒಳ್ಳೆಯದೇ ಜನರಿಗೆ ಸತ್ಯ ತಿಳಿಯುತ್ತದೆ ಮತದಾರ ಪಾಠ ಕಲಿಸುವ ಜಾಗದಲ್ಲಿ ಸರಿಯಾಗಿ ಕಲಿಸುತ್ತಾನೆ ಅಲ್ವೇ? ಅವಧಿ ಪ್ರಸಕ್ತ ವಿಚಾರಗಳಿಗೆ ಹೀಗೆಯೇ ಚರ್ಚಾ ವೇದಿಕೆಯಾಗಲಿ ಎಂಬುದು ನನ್ನ ಆಶಯ .

  ಉತ್ತರ

 2. ಸಂದೀಪ್ ಕಾಮತ್
  ಜನ 25, 2011 @ 17:47:46

  ಮು. ಮಂತ್ರಿ ಮಾಡಿರೋ ಹಗರಣ 800 ಕೋಟಿಯದ್ದಂತೆ !
  ಒಂದು ದಿನದ ಬಂದ್ ನಿಂದ ಆಗಿರೋ ನಷ್ಟ 2000 ಕೋಟಿಯಂತೆ! ಎಂಥದು ಮಾರಾಯ್ರೆ ಇದು !

  ಉತ್ತರ

 3. dineshpatwardhan
  ಜನ 25, 2011 @ 17:32:23

  janaru jagrataraga beeku

  ಉತ್ತರ

 4. dineshpatwardhan
  ಜನ 25, 2011 @ 17:22:23

  andu nadedaddu pritiya-nyayada para bandh alla. bhiti haagu anyadda samartdane. janaralli prasnisuva manohbava allivarege sattiruttadoo alliyavarege edella idde eruttade anisuttade… dinesh patwardhan

  ಉತ್ತರ

 5. ಈಶ್ವರ ಭಟ್, ತೋಟಮನೆ
  ಜನ 25, 2011 @ 17:20:56

  ಇಥಂತಹ ಸ್ಥಿತಿಗೆ ನಮ್ಮ ಜಡತ್ವ ಕಾರಣವಾಗಿದೆ. ರಾಜಕೀಯ ಒಂದು ವೃತಿಯಾಗಿ ಮಾರ್ಪಟು ಆ ಆ ಪಕ್ಷದವರ ಹಿತರಕ್ಷಣೆಗೆ ಕೆಲಸಮಾಡುತ್ತದೆ. ಹಾಗೇ ಸಾರ್ವಜನಿಕ ಯೊಜನೆಗಳನ್ನು ಅತೀ ಮುತುವರ್ಜಿಯಿಂದ ನಿರ್ವಹಿಸುವ ಆಸಕ್ತಿ ಯಾರಿಗೂ ಇಲ್ಲ. ಸ್ವಯಂ ಲಾಭಕ್ಕೊಸ್ಕರ ಹುಟ್ಟಿಕೊಂಡ ಒಂದು ಬಿಸಿನೆಸ್ ಅದು ಕೆಟ್ಟದಾದ ರೀತಿಯಲ್ಲಿ. ಎಲ್ಲದಕ್ಕೂ ಬಂದ್ ಕರೆಯುವುದು ಸಾರ್ವಜನಿಕರಿಂದ ( ಬಂದ ಮಾಡುವವರು) ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡುವುದು. ನಾವೇ ಕಟ್ಟಿಕೊಂಡ ಮನೆಯನ್ನು ಸುಡುವುದು ಯಾವ ಮಾನವರ ಲಕ್ಷಣ? ನಮಗೆಲ್ಲಾ ತಿಳಿದಿದ್ದರೂ ಬುದ್ಧಿ ಮಾತ್ರವಿಲ್ಲ. ನಿಜವಾಗಿ ಈ ಮಣ್ಣಿನ ಕಳಕಳಿಯಿರುವ ಸೀದಾ ಸಾಚಾ ಪ್ರತಿನಿಧಿ ಯನ್ನು ಪಕ್ಷಾತೀತವಾಗಿ ಆರಿಸಿ ಪಕ್ಷಾತೀತ ರಾಜಕೀಯ ವ್ಯವಸ್ಥೆ ಗೆ ನಾವು ವಾಲಬೇಕಿದೆಯೇನು? ಬಹಳಷ್ಟು ತಯಾರಿ ಮಾಡಬೇಕಿದೆ ಅಷ್ಟೆ.

  ಉತ್ತರ

 6. kanam nagaraju
  ಜನ 25, 2011 @ 16:04:14

  bhrashtatanada paravaagi bundh maadalu namage naachikeyaaguvudilla.
  ekendare bhrashtatanadalli naavellaa paaludaararu.
  kanam

  ಉತ್ತರ

 7. Manjunatha HT
  ಜನ 25, 2011 @ 14:41:27

  ಮೊನ್ನೆ ಆಡಳಿತಾರೂಢ ಬಿಜೆಪಿಯಿ೦ದ ಕರ್ನಾಟಕ ಬ೦ದ್, ನಾಳೆ ವಿರೋಧ ಪಕ್ಷವಾದ ಕಾ೦ಗ್ರೆಸ್ಸಿನಿ೦ದ ಬ೦ದ್, ಇನ್ನೊ೦ದು ದಿನ ಜೆಡಿಎಸ್ ಪ್ರಾಯೋಜಿತ ಬ೦ದ್! ಕೊನೆಗೆ ನಮ್ಮ ಬಾಯಿ ಬ೦ದ್, ಹೊಟ್ಟೆಗೆ ಬೀಳುವ ರೊಟ್ಟಿ ಬ೦ದ್, ಕುಡಿಯುವ ನೀರು ಬ೦ದ್, ಎಲ್ಲವೂ ಬ೦ದ್!! ಭ್ರಷ್ಟರಿ೦ದ ಭ್ರಷ್ಟರಿಗಾಗಿ ಭ್ರಷ್ಟರೇ ನಡೆಸುತ್ತಿರುವ ಈ ಭ್ರಷ್ಟ ವ್ಯವಸ್ಥೆ ನಿಜಕ್ಕೂ ಆಧುನಿಕ ಜಗತ್ತಿನ ಪ್ರಜಾಪ್ರಭುತ್ವದ ಕಹಿ ಅಣಕ.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: