ಚಂದ್ರಶೇಖರ ಆಲೂರು ಕಾಲಂ: ಅಕ್ಷರ ಆಟಾಟೋಪ


ಮೊದಲೇ ನನ್ನ ಮಿತಿ ಹಾಗೂ ದೌರ್ಬಲ್ಯದ ಬಗ್ಗೆ ಹೇಳಿ ಬಿಡುತ್ತೇನೆ. ನಾನು ಸಾಮಾನ್ಯವಾಗಿ ಸಾಪ್ತಾಹಿಕ ಪುರವಣಿಗಳಲ್ಲಿ ಬರುವ ಲೇಖನಗಳನ್ನಾಗಲೀ, ವಿಮರ್ಶೆಯನ್ನಾಗಲೀ ಓದುವುದಿಲ್ಲ. ಇದು ಕೇವಲ ಆದ್ಯತೆಯ ವಿಷಯ ಮಾತ್ರ, ಬೇರೇನಿಲ್ಲ. (ಹೀಗಾಗಿ ಹಲವಾರು ಸಾಹಿತ್ಯಿಕ ವಾಗ್ವಾದಗಳ ಬಗ್ಗೆ ಸ್ನೇಹಿತರು ಮಾತಾಡುತ್ತಿರುವಾಗ ನಾನು ಅವರನ್ನೇ ಬೆಪ್ಪಾಗಿ ನೋಡುತ್ತಾ ಕುಳಿತಿರುತ್ತೇನೆ.) ಸಮಯವಿದ್ದರೆ ಆ ವಾರ ಪ್ರಕಟವಾಗಿರುವ ಕಥೆಯನ್ನ ಓದಲು ಯತ್ನಿಸುತ್ತೇನೆ. ಅಕಸ್ಮಾತ್ ಭಾನುವಾರ ರಾತ್ರಿಯೊಳಗೆ ಓದಲಾಗದಿದ್ದರೆ ಅದೂ miss ಆದಂತೆಯೇ. ಭಾನುವಾರದಂದು ಎಲ್ಲ ಕನ್ನಡ ದಿನಪತ್ರಿಕೆಗಳನ್ನು ತರಿಸಿದರೂ ಅಂದು ನನ್ನ ಕೆಲಸದ ದಿನವಾದ್ದರಿಂದ ಅವು ಹಾಗೇ ಅಟ್ಟ ಸೇರುವುದೇ ಹೆಚ್ಚು. ಕಳೆದ ಭಾನುವಾರ ಸಂಜೆ ನಾನು ಅತ್ಯಂತ ಗೌರವಿಸುವ, ತುಂಬಾ ಸಜ್ಜನರಾದ ಕನ್ನಡ ಲೇಖಕರೊಬ್ಬರು ಫೋನ್ ಮಾಡಿ, “ಈ ವಾರದ ಸಾಪ್ತಾಹಿಕ ಪುರವಣಿಯಲ್ಲಿ ಹರಕೆ ಹರಾಜು ಎಂಬ ಲೇಖನ ಬಂದಿದೆ ಅಕ್ಷರ ಬರೆದಿದ್ದಾರೆ ಓದಿದ್ರಾ” ಎಂದವರು ಮುಂದುವರಿದು “ನನಗ್ಗೊತ್ತು ಸಾಮಾನ್ಯವಾಗಿ ನೀವು non fiction ಓದಲ್ಲ. ಆದರೆ ದಯವಿಟ್ಟು ಆ ಲೇಖನ ಓದಿ, ಸಾಧ್ಯವಾದರೆ ನಾಲ್ಕನೆಯ ಪುಟದಲ್ಲಿ ಒಂದು ಚಿತ್ರ ವಿಮರ್ಶೆ ಇದೆ. ಅದನ್ನೂ ಓದಿ. ರಾತ್ರಿ ಫೋನ್ ಮಾಡ್ತೇನೆ…” ಎಂದು ನನ್ನ ಉತ್ತರಕ್ಕೂ ಕಾಯದೆ ಫೋನ್ ಇಟ್ಟರು.

ಅವರ ಧ್ವನಿಯಲ್ಲಿ ಒಂದು ಬಗೆಯ ಯಾತನೆ, anguish ಇತ್ತು. ಈ ಕಾರಣಕ್ಕೆ ಕೂಡಲೇ ಆ ದಿನಪತ್ರಿಕೆಯನ್ನು ಓದಲಾರಂಭಿಸಿದೆ. ಸಾಪ್ತಾಹಿಕ ಪುರವಣಿಯ ಮುಖಪುಟ ಲೇಖನ. ಹರಕೆ, ಹರಾಜು ಎಂಬುದು ಲೇಖನದ ಶೀರ್ಷಿಕೆ. ಅದಕ್ಕೆ ಯಾವುದು ಸಹಜ?ಅಯಾವುದು ಅವಮಾನ? ಎಂಬುದು ಉಪ ಶೀರ್ಷಿಕೆ. ಈಚಿನ ಸಿನೆಮಾಗಳ tag line ಥರ! ‘ಎಂಜಲೆಲೆ ಮೇಲೆ ಜನ ಉರುಳಿದ್ದನ್ನು ಮೂಢನಂಬಿಕೆ ಎನ್ನುವ ಜನ ಕ್ರಿಕೆಟಿಗರ ಹರಾಜನ್ನು ಅವಮಾನ ಸೃಷ್ಟಿಸುವ ಘಟನೆ ಎಂದು ಭಾವಿಸುವುದಿಲ್ಲ. ಈ ಹಿಂದಿನ ಮನಸ್ಥಿತಿಯ ಕುರಿತು ಒಂದು ಜಿeಸೆ’- ಎಂಬ intro ಬೇರೆ. ಅಲ್ಲಿಗೆ ಲೇಖನದಲ್ಲಿ ಏನಿದೆ ಎಂಬುದು ತಿಳಿದು ಹೋಯ್ತು. ‘ಹ’ ಎಂಬ ಅಕ್ಷರದಿಂದ ಆರಂಭವಾಗುವುದನ್ನ ಹೊರತುಪಡಿಸಿದರೆ ಹರಕೆ ಮತ್ತು ಹರಾಜು ನಡುವೆ ಯಾವ ಸಂಬಂಧವೂ ಇಲ್ಲ. ಇವೆರಡನ್ನೂ ಒಂದೆಡೆ ಎಳೆದು ತಂದು ತಾಳೆ ಹಾಕಲು ಯತ್ನಿಸಿರುವುದರಲ್ಲಿಯೇ ಲೇಖಕರ ಉದ್ದೇಶ ಸ್ಪಷ್ಟವಾಯ್ತು. ಆದರೂ ಆ ಹಿರಿಯರಿಗೆ ಹೇಳಿದ್ದರಿಂದ ಪೂರಾ ಲೇಖನವನ್ನು ಗಮನವಿಟ್ಟು ಓದಿದೆ.

ಹೆಗ್ಗೋಡಿನ ಕೆ.ವಿ ಅಕ್ಷರ ಅವರು ಈಚಿನ ಎರಡು ಪ್ರಸಂಗಗಳ ಬಗ್ಗೆ ಈ ಲೇಖನದಲ್ಲಿ ಬರೆದಿದ್ದಾರೆ. ಮೊದಲನೆಯದು: ಕಳೆದ ತಿಂಗಳು ಕುಕ್ಕೆ ಸುಬ್ರಮಣ್ಯದಲ್ಲಿ ನಡೆದ ಎಂಜಲೆಲೆಯ ಮೇಲಿನ ಉರುಳು ಸೇವೆ. ಬ್ರಾಹ್ಮಣರು ಪಂಕ್ತಿಯಲ್ಲಿ ಭೋಜನ ಮುಗಿಸಿದ ನಂತರ, ಅವರು ಉಂಡು ಬಿಟ್ಟ ಎಂಜಲೆಲೆಯ ಮೇಲೆ ಕೆಳ ಜಾತಿಗೆ ಸೇರಿದವರು ಉರುಳು ಸೇವೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಎರಡನೆಯದು, ಈ ತಿಂಗಳ ಆರಂಭದಲ್ಲಿ ನಡೆದ ಐ.ಪಿ.ಎಲ್ ಹರಾಜು. ಅಕ್ಷರ ಬರೆಯುತ್ತಾರೆ: “ಹರಾಜಿನ ಸುದ್ದಿಗೆ ಹೋಲಿಸಿದರೆ ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ. ಆ ಸುದ್ದಿಯ ಪ್ರಕಾರ ಯಾವುದೋ ಒಂದು ಪುಟ್ಟ ಊರಿನ ದೇವಾಲಯದಲ್ಲಿ, ಯಾರೋ ಒಂದಿಷ್ಟು ಜನ, ತಮ್ಮದೇ ಸ್ವಂತ ನಂಬಿಕೆಯಿಂದ ಪ್ರೇರಿತರಾಗಿ ನಮ್ಮಂಥ ಹಲವರಿಗೆ ಅಸಹ್ಯಕರವಾಗಿ ಕಾಣಬಹುದಾದ ಒಂದು ಕೆಲಸವನ್ನು ಮಾಡಿದರು. ನಮ್ಮ ಮಾಧ್ಯಮ ವರದಿಗಳು ಅಷ್ಟನ್ನು ಮಾತ್ರ ಹೇಳದೆ, ಇದು ಭಾರತದಲ್ಲಿ ಶತ ಶತಮಾನಗಳಿಂದ ಸತತವಾಗಿ ನಡೆದುಕೊಂಡು ಬಂದಿರುವ ಒಂದು ಮೂಢ ನಂಬಿಕೆಯೆಂಬ ಅರ್ಥದಲ್ಲಿ ಅದನ್ನು ಚಿತ್ರಿಸಿದವು. ಮಾತ್ರವಲ್ಲ ನಗಣ್ಯವೆನ್ನಬಹುದಾದ ಪುಟ್ಟ ಊರಿನ ಈ ಒಂದು ಘಟನೆಯು ಮುಖಪುಟಗಳಲ್ಲಿ ವರದಿಯಾದ ರೀತಿಯಿಂದಲೇ ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಮುಖ್ಯವಾದ ಪಿಡುಗಿನ ಒಂದು ಉದಾಹರಣೆ-ಎಂಬ ಧ್ವನಿಯೂ ಈ ವರದಿಗಳ ಹಿಂದಿತ್ತು.”

ಅಕ್ಷರ ಒಮ್ಮೆ ‘ಯಾವುದೋ ಒಂದು ಪುಟ್ಟ ಊರಿನ’ ಎಂದರೆ ಮತ್ತೊಮ್ಮೆ ‘ನಗಣ್ಯವೆನ್ನಬಹುದಾದ ಪುಟ್ಟ ಊರಿನ’ ಎನ್ನುತ್ತಾರೆ. ಆದರೆ ಇದು ನಗಣ್ಯವಾದ ಯಾವುದೋ ಪುಟ್ಟ ಊರಲ್ಲ. ಕರ್ನಾಟಕದ ಸುಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಕುಕ್ಕೆ ಸುಬ್ರಮಣ್ಯ. ಈ ನಗಣ್ಯವಾದ ಊರಿಗೆ ‘ಸರ್ಪದೋಷ ಪರಿಹಾರ’ಕ್ಕಾಗಿ ಕ್ರಿಕೆಟ್ ಸಾಮ್ರಾಟ ಸಚಿನ್ ಮತ್ತು ಸಿನೆಮಾ ಸಾಮ್ರಾಟ್ ಅಮಿತಾಬ್ ಕುಟುಂಬ ಸಮೇತರಾಗಿ ಬಂದು ಗ್ಲಾಮರ್‌ನ ಸ್ಪರ್ಶ ಕೂಡ ನೀಡಿದ್ದಾರೆ. ಇಂಗ್ಲಿಷ್ ಪತ್ರಿಕೆಗಳಲ್ಲಿ ಎಂಜಲೆಲೆಯ ಮೇಲಿನ ಉರುಳು ಸೇವೆಯ ವರದಿ ಪ್ರಕಟವಾಗಲು ಈ ‘ಪ್ರಸಿದ್ಧಿ’ಯೂ ಕಾರಣವಾಗಿದ್ದರೆ ಆಶ್ಚರ್ಯವಿಲ್ಲ!

ಅಕ್ಷರ ಅವರ ಆರಂಭದ ಪ್ಯಾರಾ ನೋಡಿದರೆ ಸ್ಪಷ್ಟವಾಗುತ್ತದೆ. ಅವರ ಪ್ರಕಾರ ಎಂಜಲೆಲೆಯ ಮೇಲೆ ಉರುಳು ಸೇವೆ ನಡೆಸಿದ್ದು ಒಂದು ಸಹಜ ಕ್ರಿಯೆ. ಅಷ್ಟೇ ಅಲ್ಲ ಅದೊಂದು ಅಮುಖ್ಯ ಸುದ್ದಿ. ಹಾಗೆಯೇ ಕ್ರಿಕೆಟ್ ಆಟಗಾರರ ಹರಾಜು ಮುಖ್ಯ ಸುದ್ದಿ ಮಾತ್ರವಲ್ಲ ಅವಮಾನಕರವಾದುದು. ಯಾರಿಗಾದರೂ ಅವಮಾನವಾದರೆ ಅದನ್ನು ಗುರುತಿಸುವುದಕ್ಕೆ ಲೇಖಕರು ಒಂದು ಬಾಲಿಶ ರೂಪಕವನ್ನೂ ಕೊಡುತ್ತಾರೆ. ಅಲ್ಲದೆ “ಕಡೆಗೂ ಸ್ವತಃ ಅವಮಾನವನ್ನು ಅನುಭವಿಸುತ್ತಿದ್ದಾನೆಂದು ಹೇಳುವಾತನೇ ತನಗೆ ಅವಮಾನವಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳದೆ ಹೋದರೆ ಅದನ್ನು ಅವಮಾನ ಎಂದು ಕರೆಯುವುದು ಕಷ್ಟವೇ ಸರಿ” ಎಂಬ ಮಧ್ಯಂತರ ತೀರ್ಪು ನೀಡಿ ಮತ್ತೆ ಈ ಕುತರ್ಕವನ್ನು ಲಂಬಿಸಿ “ಆಂತ್ಯಿಕವಾಗಿ ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವಾತ ಸ್ವತಃ ಅವಮಾನಿತನೇ ಆಗಿರಬೇಕೇ ಹೊರತು ಆತನ ಪರವಾಗಿ ಇನ್ನೊಬ್ಬರು ಅವನಿಗೆ ಅವಮಾನವಾಗುತ್ತಿದೆ ಎಂದು ತೀರ್ಮಾನಿಸಲಾಗದು” ಎಂದು ಅಂತಿಮ ತೀರ್ಪನ್ನು ನೀಡುತ್ತಾರೆ!

ಎಂಜಲೆಲೆಯ ಮೇಲಿನ ಉರುಳು ಸೇವೆಯನ್ನು ಕೆಲವು ಪ್ರಗತಿಪರರು ವಿರೋಧಿಸಿದ್ದು, ಮಾಧ್ಯಮಗಳು ಖಂಡಿಸಿ ಬರೆದದ್ದೇ ಅಕ್ಷರ ಅವರ ತಣ್ಣಗಿನ ಆಕ್ರೋಶಕ್ಕೆ ಕಾರಣ. ತಮ್ಮೊಳಗೆ ಹುದುಗಿರುವ ಕ್ರೌರ್ಯವನ್ನ ಸಮರ್ಥಿಸಿಕೊಳ್ಳಲು ಅವರು ಮತ್ತೊಂದು ‘ದೇಸಿ’ ಮಾರ್ಗವನ್ನೂ ಹುಡುಕುತ್ತಾರೆ. “ಇನ್ನೊಂದು ಸಂಸ್ಕೃತಿಯ ಮಾನ-ಅವಮಾನಗಳ ನಿರ್ವಚನೆಯನ್ನು ನಾವು ಸಾರಾಸಗಟಾಗಿ ಎರವಲು ಪಡೆದರೆ ಅದರಿಂದ ಅಪಾರ್ಥಗಳೇ ಹುಟ್ಟುತ್ತವೆ. ಅಂಥ ಸಂದರ್ಭಗಳಲ್ಲಿಯೇ ಯಾವುದು ಸಹಜ ಮತ್ತು ಯಾವುದು ಅವಮಾನ ಎಂಬುದು ನಮಗೇ ಗೊತ್ತಾಗದೇ ಹೋಗುತ್ತದೆ ಎನ್ನುತ್ತಾರೆ.” ಇವೆಲ್ಲ ಆಮದು ಮಾಡಿಕೊಂಡ ಪರಿಕಲ್ಪನೆಗಳಲ್ಲ ಕೇವಲ ಕಾಮನ್‌ಸೆನ್ಸ್ ಮಾತ್ರ ಎಂಬುದು ಅಕ್ಷರ ಥರದವರಿಗೆ ತಿಳಿಯದ್ದೇನಲ್ಲ. ಇಂಥ ಅವಮಾನಗಳನ್ನ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೇ ಒಂದು ಸಾಮಾಜಿಕ ಅನಿಷ್ಟ ಎಂದು ಗುರುತಿಸಿದರು. ಅಕ್ಷರ ಅವರು ಹೇಳುವಂತೆ ‘ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನ ತೀರ್ಮಾನಿಸುವಾತ ಸ್ವತಃ ಅವಮಾನಿತನೇ ಆಗಿರಬೇಕು’ ಎಂದು ಬಸವಣ್ಣ, ರಾಜಾರಾಂ ಮೋಹನರಾಯ್, ಜ್ಯೋತಿರಾವ್ ಫುಲೆ, ಅಂಬೇಡ್ಕರ್, ಗಾಂಧಿ ಮುಂತಾದವರು ತಿಳಿದಿದ್ದರೆ ಈ ದೇಶದಲ್ಲಿ ಸತಿ ಪದ್ಧತಿ, ಮಲ ಹೊರುವ ಪದ್ಧತಿ, ಅಸ್ಪ ಶ್ಯತೆಗಳೆಲ್ಲ ಹಾಗೆಯೇ ಉಳಿಯುತ್ತಿದ್ದವೇನೋ. ಯಾಕೆಂದರೆ ಸತಿ ಹೋಗುವವಳು ಆತ್ಮಾರ್ಪಣೆ ಮಾಡಿಕೊಳ್ಳುವ ಮೂಲಕ ತನ್ನ ಪ್ರೇಮವನ್ನ ಸಮರ್ಪಿಸಿಕೊಳ್ಳುತ್ತಿದ್ದಾಳೆ ಎಂದು ಅವಳನ್ನ ನಂಬಿಸಲಾಗಿತ್ತು. ಹಾಗೆಯೇ ಮಲ ಹೊರುವವರಿಗೆ ಕೂಡ ಇತರೆ ‘ಉದ್ಯೋಗಿ’ಗಳಂತೆ ಅದೂ ಒಂದು ಉದ್ದೇಶ ಎಂದು ನಂಬಿಸಲಾಗಿತ್ತು. ಅಸ್ಪೃಶ್ಯತೆಗೂ ಪೂರ್ವ ಜನ್ಮದ ಕರ್ಮದ ನಂಟನ್ನು ಗಂಟು ಹಾಕಲಾಗಿತ್ತು.

ಯಾಕೆ ಅಕ್ಷರ ಹೀಗೆ ಸಮಾಜವನ್ನ ಶತಮಾನ ಕಾಲ ಹಿಂದಕ್ಕೆ ಒಯ್ಯಲು; ಕಾಲ ಹಿಮ್ಮುಖವಾಗಿ ಚಲಿಸಲಿ ಎಂದು ಬಯಸುತ್ತಾರೋ ತಿಳಿಯದು.

ಇನ್ನು ಹರಕೆಯ ಸಂದರ್ಭದಲ್ಲಿ ಅವರು ಅಪ್ರಸುತ್ತವಾಗಿ ಬೇಕೆಂತಲೇ ಎಳೆದು ತಂದಿರುವ ಹರಾಜಿನ ವಿಚಾರ. ಅಕ್ಷರ ಅವರ ವಾದವನ್ನೇ ಲಂಬಿಸುವುದಾದರೆ ಒಂದು ವರ್ಷಕ್ಕೆ ಅಲ್ಲ ಮೂರು ತಿಂಗಳಿಗೆ ಹನ್ನೆರಡು ಕೋಟಿಗೆ ತನ್ನನ್ನ ಮಾರಿಕೊಂಡ ಗೌತಮ್ ಗಂಭೀರ್‌ನೇ ತನಗೆ ಅವಮಾನವಾಗಿದೆ ಎಂದು ಒಪ್ಪಿಕೊಳ್ಳಬೇಕಲ್ಲವೇ. ಹರಾಜಿನ ವಿಚಾರದಲ್ಲಿ ಈ ಬಗೆಯ ಇತಿಹಾಸದ ಉಲ್ಲೇಖವನ್ನು ಯಾರೂ ಮಾಡಿಲ್ಲ ಎಂದು ಅಕ್ಷರ ಆಪಾದಿಸುತ್ತಾರೆ. ಅಂದಿನ ಹರಾಜಿನಲ್ಲಿ ಯಾವ ಗುಲಾಮನೂ ತನ್ನನ್ನ ಮಾರಿಕೊಳ್ಳುತ್ತಿರಲಿಲ್ಲ. ಅವರನ್ನು ಬೇರೆಯವರು ಹಿಡಿದು ತಂದು ಹರಾಜು ಹಾಕುತ್ತಿದ್ದರು. ಅವರಿಗೆ ಯಾರೂ ಹಣ ನೀಡುತ್ತಿರಲಿಲ್ಲ. ಕೊಂಡು ಕೊಂಡವರು ಮಾರಿದವರಿಗೆ ಹಣ ನೀಡಿ ಅವರನ್ನ ಇತರ ಕಚ್ಚಾ ವಸ್ತುಗಳಂತೆ (ಅವರು ಓಡಾಡದಂತೆ ಕೈ ಕಾಲುಗಳಿಗೆ ಸರಪಳಿ ಬಿಗಿದು) ಹಡಗಿನಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಗೌತಮ್ ಗಂಭೀರ್‌ಗೂ ಹದಿನಾರನೆಯ ಶತಮಾನದಲ್ಲಿ ಆಫ್ರಿಕಾದ ಕಡಲ ತೀರದಲ್ಲಿ ಹರಾಜಾದ ಒಬ್ಬ ನೀಗ್ರೋಗೂ ಎಲ್ಲಿಯ ಸಂಬಂಧ!

ಈ ಐ.ಪಿ.ಎಲ್ ಹರಾಜು ಆಧುನಿಕ ಭಾರತದಲ್ಲಿ ಹಣದ ಅಟ್ಟಹಾಸವನ್ನು ತೋರುತ್ತಿದೆ. ಇದು ರಾತ್ರೋ ರಾತ್ರಿ ಆಗಿದ್ದಲ್ಲ, ಸ್ವತಂತ್ರ ಭಾರತದ ಸುವರ್ಣೋತ್ಸವದ ಸಂದರ್ಭದಲ್ಲಿ ಸರ್ಕಾರಿ ಒಡೆತನದ ದೂರದರ್ಶನ ಜಾಹೀರಾತು ಹಣದ ಆಸೆಗಾಗಿ ‘ಶೋಲೆ’ಯಂಥ ಹಿಂಸಾತ್ಮಕ ಚಿತ್ರವನ್ನ ಸ್ವಾತಂತ್ರ್ಯ ದಿನದಂದು ಪ್ರಸಾರ ಮಾಡಿತು. ನಂತರದ ವರ್ಷಗಳಲ್ಲಿ ಉದ್ಯಮಿ ಜೆಆರ್‌ಡಿ ಟಾಟಾರವರಿಗೆ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತರತ್ನ ನೀಡಲಾಯ್ತು. ಇದು ಬದಲಾದ ಭಾರತದ ಆದ್ಯತೆಗಳು. ಈ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಜಗತ್ತಿನ ಹಣದ ಅಟ್ಟಹಾಸವನ್ನ ಅಭ್ಯಸಿಸಬೇಕು, ವಿಶ್ಲೇಷಿಸಬೇಕು, ಖಂಡಿಸಬೇಕು. ಅದರ ಬದಲು ಈ ಹರಾಜಿಗೂ ಹರಕೆಗೂ ಸಂಬಂಧ ಕಲ್ಪಿಸಿ ವಿತಂಡ ವಾದ ಮಂಡಿಸುವುದು ಬೇಡ.

***

ಇದೇ ಪುರವಣಿಯ ನಾಲ್ಕನೆಯ ಪುಟದಲ್ಲಿ ಜನಪ್ರಿಯ ಕತೆಗಾರ ವಸುಧೇಂದ್ರ ಅವರು ಅಪರ್ಣಾ ಸೆನ್ ನಿರ್ದೇಶನದ ‘ಜಪಾನೀಸ್ ವೈಫ್’ ಎಂಬ ಬಂಗಾಳಿ ಚಿತ್ರದ ಬಗ್ಗೆ ಬರೆದಿದ್ದಾರೆ. ಕುನಾಲ್ ಬಸು ಬರೆದ ಜಪಾನೀಸ್ ವೈಫ್ ಕತೆಯ ಸಂಗ್ರಹಾನುವಾದವನ್ನ ಒಂದೆರಡು ವರ್ಷದ ಹಿಂದೆ ‘ಒಲಿದಂತೆ ಹಾಡುವೆ’ಯಲ್ಲಿ ಓದಿದ ನೆನಪು ನಿಮಗಿರಬಹುದು. ಇದೊಂದು ವಿಚಿತ್ರ ಪ್ರೇಮ ಕತೆ. ಪತ್ರಗಳ ಮೂಲಕ ಪ್ರೇಮಿಗಳಾದ ಸ್ನೇಹಮಯ್ ಚಕ್ರವರ್ತಿ ಎಂಬ ಬಂಗಾಳಿ ಯುವಕ ಮತ್ತು ಮಿಯಗೆ ಎಂಬ ಜಪಾನಿ ಯುವತಿ ದೇಹದ, ಕಾಮದ ಹಂಗನ್ನು ತೊರೆದು ವಿವಾಹವಾಗಿ ಬಾಳುವ ಕತೆ. ಮದುವೆಯೂ ಪತ್ರದ ಮೂಲಕವೇ. ದಾಂಪತ್ಯವೂ ಪತ್ರ ಮುಖೇನವೇ. ಅವಳು ಅವನ ಊರಿಗೆ ಬರುವುದು ಅವನ ದೇಹಾಂತ್ಯವಾದ ಮೇಲೆಯೇ. ವಧುವಾಗಿ ಬರಬೇಕಿದ್ದವಳು ವಿಧವೆಯಾಗಿ ಬರುತ್ತಾಳೆ. ಅದೂ ಹೇಗೆ? ಕೇಶಮುಂಡನ ಮಾಡಿಸಿಕೊಂಡು, ಬೋಳು ಹಣೆಯಲ್ಲಿ, ಬಿಳಿಯ ಸೀರೆಯಲ್ಲಿ ‘ಸಾಂಪ್ರದಾಯಿಕ ಬಂಗಾಳಿ ವಿಧವೆ’ಯಂತೆ ಬರುತ್ತಾಳೆ.

ಆ ದೃಶ್ಯದ ಬಗ್ಗೆ ವಸುಧೇಂದ್ರ ಬರೆಯುತ್ತಾರೆ: ‘ಹಿಂದೆಂದೋ ಸಹಜವಾಗಿ ಪತಿರಾಯ ಒಂದು ಪತ್ರದಲ್ಲಿ ಇಲ್ಲಿನ ವಿಧವೆಯ ದಿರಿಸನ್ನು ಹೇಳಿದ್ದನ್ನು ಆಕೆ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡು ಕಾರ್ಯರೂಪಕ್ಕೆ ಇಳಿಸಿರುವುದು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ನಾವೆಂದೋ ಮೌಢ್ಯವೆಂದು ನಿರಾಕರಿಸಿದ ಪದ್ಧತಿಯೊಂದನ್ನು ಆಕೆ ಪಾಲಿಸಿರುವುದು ಕಂಡಾಗ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ ಮನಸ್ಸು ಮೂಕವಾಗುತ್ತದೆ. ವಿಚಿತ್ರವೆಂದರೆ ಅವಳ ಆ ದಿರಿಸು ನಮಗೆ ಮೌಢ್ಯವಾಗಿಯೂ ಕಾಣುವುದಿಲ್ಲ. ತಾನು ಕಾಣದ ಪತಿಯ ಮನೆಯ ಮೂಲೆ ಮೂಲೆಯನ್ನು ಮುಟ್ಟಿ ಅನುಭವಿಸುವ ಆಕೆ ಕೇವಲ ಪ್ರೀತಿಯ ಸಂಕೇತದಂತೆ ನಮ್ಮ ಮುಂದೆ ನಿಲ್ಲುತ್ತಾಳೆ.’ ಮೂಲ ಕತೆಯ ಅಂತ್ಯ ಇಷ್ಟೊಂದು ‘ಆರ್ದ್ರ’ವಾಗಿಲ್ಲ. Then she came-head shaven, wearing the white of a Hindu widow… called fora rickshaw and asked to be taken to the house of the teacher, the one with the Japanese wife.

ಇರಲಿ, ಸಿನೆಮಾದ ಚರ್ಚೆ ಇಲ್ಲಿ ಬೇಡ. ನನ್ನ ಆಕ್ಷೇಪವಿರುವುದು ವಸುಧೇಂದ್ರರ ವಿಮರ್ಶೆಯ ಕಡೆಯ ಸಾಲಿನ ಬಗ್ಗೆ: “ಮತ್ತೊಬ್ಬರ ಮನಸ್ಸನ್ನು ನೋಯಿಸದ ಪ್ರತಿಯೊಂದು ನಂಬಿಕೆಯೂ, ಆಚರಣೆಯೂ ಕೇವಲ ಅವರವರ ಸತ್ಯವಲ್ಲವೇ?” ವಸುಧೇಂದ್ರ ಇಲ್ಲಿ ಕೇಶಮುಂಡನ ಮಾಡಿಸಿಕೊಂಡು, ಬೋಳು ಹಣೆಯಲ್ಲಿ ಬಂದ ಜಪಾನಿ ಹೆಂಡತಿಯ ‘ನಂಬಿಕೆ’, ‘ಆಚರಣೆ’ಯ ಬಗ್ಗೆ ಹೇಳುತ್ತಿದ್ದಾರೆ. ಮತ್ತು ಅದು ಮತ್ತೊಬ್ಬರ ‘ಮನಸ್ಸನ್ನ ನೋಯಿಸದ’ ಘಟನೆ ಎಂದು ಪರೋಕ್ಷವಾಗಿ ಬಣ್ಣಿಸುತ್ತಿದ್ದಾರೆ.

ಆದರೆ ಇದೇ ಬಂಗಾಳದಲ್ಲಿ, ಕುನಾಲ್ ಬಸು, ಅಪರ್ಣಾ ಸೆನ್, ರಾಹುಲ್ ಬೋಸ್‌ರ ಬಂಗಾಳದಲ್ಲಿ ರಾಜಾರಾಂ ಮೋಹನ್‌ರಾಯ್‌ರಂಥ ಮಹಾನ್ ಪುರುಷ ಪ್ರತಿಭಟಿಸುವವರೆಗೂ ಸತಿ ಸಹಗಮನ ಪದ್ಧತಿಯನ್ನ ಅತ್ಯಂತ ಸಹಜ ‘ನಂಬಿಕೆ, ಆಚರಣೆ ಮತ್ತು ಮತ್ತೊಬ್ಬರ ಮನಸ್ಸನ್ನ ನೋಯಿಸದ ವೈಯಕ್ತಿಕ ಕ್ರಿಯೆ’ ಎಂದೇ ಭಾವಿಸಲಾಗಿತ್ತು. ಹೆಂಗಸರು ಸ್ವಯಂ ಪ್ರೇರಣೆಯಿಂದ ಗಂಡನ ಚಿತೆಗೆ ಹಾರುತ್ತಾರೆಂದು ಜಗತ್ತನ್ನ ನಂಬಿಸಲಾಗಿತ್ತು. ರಾಜಾರಾಂ ಮೋಹನ್‌ರಾಯ್ ಎರಡು ಶತಮಾನದ ಹಿಂದೆ ಇದನ್ನು ಖಂಡಿಸಿದರು. ಗಂಡ ಸತ್ತ ನಂತರ ಕೇಶಮುಂಡನ ಮಾಡಿಸಿಕೊಳ್ಳುವುದನ್ನ ವಿರೋಧಿಸಿದರು. ಇದೊಂದು ಸಾಮಾಜಿಕ ಅನಿಷ್ಟ ಎಂಬ ಕಾರಣಕ್ಕಾಗಿ.

ಇವೆಲ್ಲ ಅತ್ಯಂತ ಸರಳ ವಿಚಾರಗಳು. ಈ ಅಕ್ಷರ, ವಸುಧೇಂದ್ರರಿಗೆ ಏನಾಗಿದೆ? ಯಾಕೆ ಹೀಗೆ ಅನಕ್ಷರಸ್ಥರಂತೆ ನಟಿಸುತ್ತಿದ್ದಾರೆ?

3 ಟಿಪ್ಪಣಿಗಳು (+add yours?)

 1. Dr.kiran gajanur
  ಜನ 25, 2011 @ 16:21:09

  ಪ್ರಿತಿಯ ಅಲೂರು ಅವರೆ
  ಎಂಜಲೆಲೆಯ ಮೇಲೆ ಹೊರಳಾಡುವ ಹರಕೆಗಳಲ್ಲಿ ಸಂಕೇತಗೊಂಡಿರುವ ಭಾರತೀಯ ಸಮಾಜದ ಹಲವು ಆಚರಣೆಗಳನ್ನು ಅಪಮಾನ ಎಂದು ಭಾವಿಸುವುದು ವಸಾಹತುಶಾಹಿ ತಿಳವಳಿಕೆಯ ಪರಿಣಾಮ ಎಂದು ಅಕ್ಷರ ಅವರ ಲೇಖನ ದೂಷಿಸುತ್ತದೆ ಮತ್ತು ಅವೆಲ್ಲಾ ಸಹಜ ವಿದ್ಯಮಾನಗಳೆ ಎಂಬ ಸೂಚನೆಯನ್ನೂ ಕೊಡುತ್ತವೆ. ಈ ವಿವರಣೆ ಭಾರತ ಸಮಾಜದ ಕುರಿತು ಅಸ್ಥಿತ್ವದಲ್ಲಿರುವ ಇದುವರೆಗಿನ ಸಮಾಜ ವಿಜ್ಞಾನಗಳ ವಿವರಣೆಗಳು, ಇಲ್ಲಿನ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ಚಿಂತನೆಗಳಿಂದ ಹುಟ್ಟಿದ ಸಾಂಸ್ಕೃತಿಕ ಪರಿಕಲ್ಪನೆಗಳಿಂದ ಚಿತ್ರಿಸಲ್ಪಟ್ಟಿವೆ ಮತ್ತು ಅವುಗಳ ಹಿನ್ನೆಲೆಯಲ್ಲಿಯೇ ಇಲ್ಲಿನ (ಭಾರತ ಸಮಾಜದ) ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿವೆ ಎಂಬ ಇತ್ತಿಚಿನ ಸಂಶೋಧನೆಯಿಂದ ಪ್ರೇರಿತವಾಗಿದೆ
  ಅಂದರೆ ಇತ್ತೀಚಿನ ಕೆಲವು ಸಂಶೋಧನೆಗಳು ಇಂದು ಸಮಾಜ ವಿಜ್ಞಾನಗಳಲ್ಲಿ ಕಂಡುಬರುವ ಭಾರತ ಸಮಾಜದ ಕುರಿತಾದ ವಿವರಣೆಗಳು (ಸಿದ್ಧಾಂತಗಳು), ನಮ್ಮ ಸಮಾಜದ ನಿಜವಾದ ಸ್ವರೂಪವನ್ನು ಕಟ್ಟಿಕೊಡುವಲ್ಲಿ ಸೋತಿವೆ. ಅದಕ್ಕೆ ಪ್ರಬಲವಾದ ಕಾರಣ ಈ ಸಿದ್ಧಾಂತಗಳು ಪಾಶ್ಚ್ಚಾತ್ಯ ಚಿಂತನಾ/ಪರಿಕಲ್ಪನಾ ಚೌಕಟ್ಟಿನಿಂದ ಪ್ರೇರಿತವಾಗಿ ಕಟ್ಟಲ್ಪಟ್ಟವು. ಅವು ಅವರ ಅಂದರೆ ಪಾಶ್ಚಾತ್ಯರ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ನಿರೂಪಣೆಗೊಂಡಂತಹವು ಎಂಬುದನ್ನು ನಿರೂಪಿಸಿವೆ. ಆದ್ದರಿಂದ ಈ ಸಿದ್ಧಾಂತಗಳ ಸಹಾಯದಿಂದ ರೂಪಿತವಾದ ಸಮಾಜ-ವಿಜ್ಞಾನಗಳು ನಮ್ಮ ಸಮಾಜದ ಬಗ್ಗೆ ಪರಿಣಾಮಕಾರಿಯಾದಂತಹ ವಿವರಣೆ ನೀಡುವ ಬದಲು ಒಂದು ರೀತಿಯ ಚಿಜ-ಠಛಿ ವಿವರಣೆಗಳನ್ನು ನೀಡಿವೆ. ಇಲ್ಲಿನ ಸಮಸ್ಯೆ ಎಂದರೆ ಪಾಶ್ಚಾತ್ಯರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಿರೂಪಿತವಾದ ಭಾರತ ಸಮಾಜದ ಕುರಿತಾದ ಈ ವಿವರಣೆ ಒಂದು ವೈಜ್ಞಾನಿಕ ನಿರೂಪಣೆ ಎಂದೇ ಸಮಾಜ-ವಿಜ್ಞಾನಗಳ ವಲಯದಲ್ಲಿ ಇಂದಿಗೂ ನಂಬಲಾಗಿದೆ. ಜೊತೆಗೆ ಈ ವಾದವೇ ಸಮಾಜ ವಿಜ್ಞಾನಗಳ ಎಲ್ಲಾ ಸಿದ್ಧಾಂತಗಳಿಗೆ ಮೆಟಾ ಥಿಯರಿಯಾಗಿ ಕೆಲಸಮಾಡಿದೆ. ಅಷ್ಟೇ ಅಲ್ಲದೇ ಈ ವಿಶ್ಲೇಷಣೆಗಳು ಭಾರತದ ಸಾಮಾಜಿಕ ನ್ಯಾಯ, ಮೀಸಲಾತಿ, ಶಿಕ್ಷಣ ವ್ಯವಸ್ಥೆಗಳನ್ನು ಇಂದಿಗೂ ಪ್ರಭಾವಿಸುತ್ತಿರುವುದನ್ನು ಕಾಣಬಹುದಾಗಿದೆ. ಅದ್ದರಿಂದಲೇ ನಾವು ನಮ್ಮ ಸಮಾಜದ ನೈಜ ಸಮಸ್ಯೆಗಳನ್ನು ವಾಸ್ತವದಲ್ಲಿರುವಂತೆ ಗ್ರಹಿಸುವುದರಲ್ಲಿ ಸೋತಿದ್ದೇವೆ. ನಮ್ಮ ಸಮಾಜ-ವಿಜ್ಞಾನಗಳ ವಲಯದಲ್ಲಿ ಬಹುದೊಡ್ಡ ಪರಿಕಲ್ಪನೆ ಮತ್ತು ಸಿದ್ಧಾಂತಗಳೆಂದು ಗುರುತಿಸಲ್ಪಡುತ್ತಿರುವ ಸೆಕ್ಯುಲರಿಸಂ, ಕಮ್ಯೂನಲಿಸಂ, ಬಹುಸಂಸ್ಕೃತಿ, ಜಾತಿ ವ್ಯವಸ್ಥೆಗಳು ಇಂದಿಗೂ ಸಹ ಸಮಾಜದ ಸಮಸ್ಯೆಗಳಿಗೆ ಪರಿಹಾರವಾಗದೆ ಕೇವಲ ಬೌದ್ಧಿಕ ಜಿಜ್ಞಾಸೆಯಾಗಿ ಉಳಿದಿರುವುದು ಮಾತ್ರವಲ್ಲದೆ ಸಾರ್ವಜನಿಕ ಬದುಕಿನ ಚಚರ್ೆಗಳಲ್ಲಿ ಭಾಗಿಯಾಗಿಲ್ಲದಿರುವುದು ಇದಕ್ಕೆ ನಿದರ್ಶನ. ಆಚರಣೆಗಳಿಗೆ ಸಂಭಂದಿಸಿದ ಚಚರ್ೆಗಳು ಈ ಒಂದು ಬೌದ್ಧಿಕ ಕಸರತ್ತಿಗೆ ಹೊರತಲ್ಲ ಎಂಬುದು ಅಕ್ಷರ ಅವರ ವಾದವಿರಬಹುದು ಒಂದು ವೇಳೆ ಅದೇ ಅಗಿದ್ದರೆ ಅಕ್ಷರ ಅವರ ವಾದವನ್ನು ಒಂದು ಪ್ರಾಕಲ್ಪನೆಯಾಗಿ ತೆಗೆದುಕೊಂಡು ಸಂಶೋಧನೆ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂಬುದು ನನ್ನ ಅಭಿಮತ
  ಡಾ.ಕಿರಣ.ಎಂ ಗಾಜನೂರು

  ಉತ್ತರ

 2. Anasuya M.R.
  ಜನ 24, 2011 @ 23:12:57

  Alur sir, your’s article is very meantngful. Expliotation, humilation will happe
  only when we are in darkness,that means uneducated. The education gives a
  strength to oppose this. Ambedkar is the best example to this. In the name of
  feelings , we should not give up our individuality. I like your’s articles because
  no slogans, no prejudices, notension but with balanced mind.

  ಉತ್ತರ

 3. Tejaswi
  ಜನ 24, 2011 @ 21:58:18

  Hard hitting- unlike alur’s style

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: