‘ಯಾರ’ ಸಂವೇದನೆಯನ್ನು ‘ಯಾರು’ ಕೊಂದರು?

-ಜಿ.ಪಿ.ಬಸವರಾಜು

ಕೆ.ವಿ.ಅಕ್ಷರ ಅವರು ಇತ್ತೀಚೆಗೆ ಪ್ರಜಾವಾಣಿಯಲ್ಲಿ ಪ್ರಕಟಿಸಿದ ‘ಹರಕೆ-ಹರಾಜು’ ಲೇಖನ ಅನೇಕ ಪ್ರಶ್ನೆಗಳನ್ನು ಎತ್ತಲು ಅವಕಾಶಕೊಡುತ್ತದೆ. ಇಂಥ ಮುಖ್ಯ ಸಂಗತಿಗಳ ಬಗ್ಗೆ ನಮ್ಮ ಸಮೂಹ ಮಾಧ್ಯಮ ವಹಿಸುತ್ತಿರುವ ಪಾತ್ರದ ಬಗ್ಗೆ ಅವರು ಕೆಲವು ಪ್ರಶ್ನೆಗಳನ್ನು ಎತ್ತುತ್ತಾರೆ.

ಮಾಧ್ಯಮವನ್ನು ನಮ್ಮ ಸಮಾಜದ ಒಂದು ಅಂಗವಾಗಿಯೇ ನೋಡಬೇಕು; ಹೊರಗಿಟ್ಟು ನೋಡಬಾರದು. ಒಂದು ಸಮಾಜದ ಸಂವೇದನೆ ಜಡವಾಗಿದ್ದರೆ ಮಾಧ್ಯಮದ ಸಂವೇದನೆ ಅದಕ್ಕನುಗುಣವಾಗಿರುತ್ತದೆ. ನಮ್ಮ ದೇಶದಲ್ಲಿ ಮಾಧ್ಯಮಗಳು ಚುರುಕಾಗಿಯೂ ಕೆಲಸ ಮಾಡಿವೆ; ಜಡವಾಗಿಯೂ ವರ್ತಿಸಿವೆ. ಇತ್ತೀಚೆಗೆ ಅನೇಕ ಮುಖ್ಯ ಹಗರಣಗಳು ಬಯಲಾಗಲು, ಸಾರ್ವಜನಿಕ ಚರ್ಚೆಯ ವಿಷಯಗಳಾಗಲು ಮಾಧ್ಯಮ ವಹಿಸಿದ ಪಾತ್ರವೇ ಕಾರಣ ಎಂಬುದನ್ನು ನಾವು ಮರೆಯಲಾಗದು. ನಮ್ಮ ಕ್ರಿಕೆಟ್ ‘ಕಲಿ’ಗಳನ್ನು ಮಾರುಕಟ್ಟೆಯ ವಸ್ತುಗಳಂತೆ ಬಿಕರಿ ಮಾಡುವುದನ್ನು ಒಂದು ‘ಅವಮಾನದ’ ಸಂಗತಿಯಾಗಿ ಪರಿಗಣಿಸಲಾಗದಷ್ಟು ಮಾಧ್ಯಮ ಜಡವಾಗಿವೆ ಎಂಬುದು ನಿಜ. ಹೀಗೆ ಕ್ರಿಕೆಟ್ಟಿಗೆ ಮಾತ್ರ ಈ ಅವಮಾನವನ್ನು ಸೀಮಿತಗೊಳಿಸಬೇಕಾಗಿಯೂ ಇಲ್ಲ. ನಮ್ಮ ಶಿಕ್ಷಣ ಕ್ಷೇತ್ರವನ್ನೇ ನೋಡಿದರೂ ಇದು ತಿಳಿಯುತ್ತದೆ: ಸಾಫ್ಟ್ವೇರ್ ಇಂಜಿನಿಯರುಗಳು ಮತ್ತು ವೈದ್ಯರನ್ನು ಮಾತ್ರ ಅಂತರ ರಾಷ್ಟ್ರೀಯ ಮಾರುಕಟ್ಟೆಯ ಸರಕಾಗಿ ಬೆಲೆಕಟ್ಟಿ ಉಳಿದ ಜ್ಞಾನಶಾಖೆಗಳಲ್ಲಿ ಅಧ್ಯಯನ ಮಾಡುವ ಲಕ್ಷಾಂತರ ಪ್ರತಿಭಾವಂತರನ್ನು ಕಾಲ ಕಸ ಮಾಡಿರುವುದರ ಹಿಂದೆ ಇರುವ ಮನಸ್ಸು ಯಾರದು? ಹಾಗೆಯೇ ಇನ್ನು ಅನೇಕ ಉದಾಹರಣೆಗಳನ್ನು ಕೊಡಬಹುದು.

ಜಾಗತೀಕರಣ ಎನ್ನುವುದು ಹಣದ ರೂಪದಲ್ಲಿ ಮಾತ್ರ ನಮ್ಮನ್ನು ಆವರಿಸಿದ್ದರ ಕೆಟ್ಟ ಪರಿಣಾಮ ಎಲ್ಲೆಲ್ಲಿಯೂ ಮುಖ ತೋರುತ್ತಿದೆ. ಈ ಹಣ ಎನ್ನುವುದು ನಮ್ಮ ಸಮಾಜದ ಸೂಕ್ಷ್ಮ ಸಂವೇದನೆಯನ್ನು ತಿಂದು ಹಾಕಿದೆ; ಮಾಧ್ಯಮಗಳೂ ಹೀಗಾಗಿರುವುದು ವಿಷಾದದ ಸಂಗತಿ. ಆದರೆ ಸುಬ್ರಹ್ಮಣ್ಯ ದೇವಾಲಯವೊಂದರಲ್ಲಿ ಹಲವು ಹರಕೆದಾರರು ಎಂಜಲೆಲೆಗಳ ಮೇಲೆ ಹೊರಳಾಡಿದ ಸುದ್ದಿ ಮುಖಪುಟದ ವರದಿಯಾದದ್ದು ಮತ್ತು ‘ವರದಿಯಾದ ರೀತಿಯಿಂದಲೇ ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಮುಖ್ಯವಾದ ಪಿಡುಗಿನ ಒಂದು ಉದಾಹರಣೆ-ಎಂಬ ಧ್ವನಿಯೂ ಈ ವರದಿಗಳ ಹಿಂದಿತ್ತು’ ಎಂಬುದು ನಮ್ಮ ಮಾಧ್ಯಮಗಳು ನಿರ್ವಹಿಸಿದ ಅಗತ್ಯ ಕರ್ತವ್ಯ ಹಾಗೂ ಎಚ್ಚೆತ್ತ ರೀತಿಯನ್ನೂ ತೋರುತ್ತಿದೆ.

ಅಕ್ಷರ ಅವರು ಭಾವಿಸುವಂತೆ ಇದು, ‘ನಗಣ್ಯವೆನ್ನಬಹುದಾದ ಒಂದು ಪುಟ್ಟ ಊರಿನ ಒಂದು ಘಟನೆ.’ ಹಾಗೆಯೇ, ‘ದೇವಾಲಯದಲ್ಲಿ ಯಾರೋ ಒಂದಿಷ್ಟು ಜನ, ತಮ್ಮದೇ ಆದ ನಂಬಿಕೆಯಿಂದ ಪ್ರೇರಿತರಾಗಿ’ ಮಾಡಿದ ಕೆಲಸ ಇದು. ಸುಬ್ರಹ್ಮಣ್ಯದಂಥ ‘ಪುಟ್ಟ ಊರು’ಗಳು ನಮ್ಮ ಧಾರ್ಮಿಕ ಕ್ಷೇತ್ರದಲ್ಲಿ ಇಂಥ ನಂಬಿಕೆಗಳನ್ನು ಬಿತ್ತುವ, ಸಮೃದ್ಧ ಫಸಲನ್ನು ತೆಗೆಯುವ ಪ್ರಭಾವೀ ಕ್ಷೇತ್ರಗಳೆಂಬುದು ಮತ್ತು ಇಂಥ ಪುಟ್ಟ ಊರುಗಳು ಭಾರತದ ತುಂಬ ಕ್ರಿಯಾಶೀಲವಾಗಿದ್ದವು ಮತ್ತು ಈಗಲೂ ಕ್ರಿಯಾಶೀಲವಾಗಿವೆ ಎಂಬುದನ್ನು ನಾನು ವಿವರಿಸಬೇಕಾದ ಅಗತ್ಯವಿಲ್ಲ. ತಿರುಪತಿಯೂ ಪುಟ್ಟ ಊರೇ; ಧರ್ಮಸ್ಥಳವೂ ಪುಟ್ಟ ಊರೇ. ಪುಟಪರ್ತಿ ಇನ್ನೂ ಸಣ್ಣ ಊರು.

ತಲೆಯ ಮೇಲೆ ಮಲ ಹೊರುವ ವ್ಯಕ್ತಿ ಇದು ತನಗೆ ಅಪಮಾನಕರ ಎಂದು ಭಾವಿಸುವುದಕ್ಕೆ ಸಾವಿರ ಸಾವಿರ ವರ್ಷಗಳೇ ಬೇಕಾದವು. ಇಂಥ ಪ್ರಜ್ಞೆಯನ್ನು ದಲಿತರಿಗಿಂತ ಮೊದಲೇ ಪಡೆದಿದ್ದ ಮೇಲ್ಜಾತಿ ಮತ್ತು ವರ್ಗಗಳು ಇದನ್ನು ಯಾಕೆ ಅವನ ಅರಿವಿಗೆ ಬರುವಂತೆ ಮಾಡಲಿಲ್ಲ. ಅಂಥ ಒಂದು ಸೂಕ್ಷ್ಮ ಸಂವೇದನೆಯೇ ಅವನಲ್ಲಿ ಇಲ್ಲದಂತೆ ಮಾಡಿದವರು ಯಾರು? ಇಂಥ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವಾದಾಗ ಮಾತ್ರ, ಎಂಜಲೆಲೆಯ ಮೇಲೆ ಉರುಳುವವರು ಸ್ವಂತ ನಂಬಿಕೆಯಿಂದ ಮತ್ತು ಪ್ರೇರಣೆಯಿಂದ ಹಾಗೆ ಮಾಡುತ್ತಾರೊ ಅಥವಾ ಬೇರೆಯ ಕಾರಣಗಳು ಇದರ ಹಿಂದೆ ಇರಬಹುದೊ ಎಂಬುದು ಅರ್ಥವಾಗುವುದು ಸಾಧ್ಯ.

ಅಕ್ಷರ ಅವರ ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯ ಬೆತ್ತಲೆ ಸೇವೆಯನ್ನು ಇನ್ನೊಂದು ನಿದರ್ಶನವಾಗಿ ನೋಡಬಹುದು. ಬೆತ್ತಲೆಸೇವೆ ಮಾಡುವವರು ಇದು ತಮಗೆ ಅವಮಾನದ ಸಂಗತಿ ಎಂದು ಎಂದೂ ಹೇಳಲಿಲ್ಲ. ಆದರೆ ಅದನ್ನು ಸರ್ಕಾರ ನಿಷೇಧಿಸಿದ್ದು ಯಾಕೆ? ಇನ್ನೂ ಹಿಂದಿನ ಚರಿತ್ರೆಗೆ ಹೋಗಿ ನೋಡುವುದಾದರೆ ಸತಿಪದ್ಧತಿಯೂ ‘ಸ್ವಪ್ರೇರಣೆ’ಯದೇ. ಅದನ್ನು ತಡೆದದ್ದು ಯಾಕೆ?

ಪ್ರಜಾಪ್ರಭುತ್ವ ಎನ್ನುವುದು ಕೇವಲ ರಾಜಕೀಯ ವ್ಯವಸ್ಥೆಯಲ್ಲ. ಬಹುಮತದಿಂದ ಅಧಿಕಾರ ಹಿಡಿಯುವ ರಾಜಕೀಯ ಪಕ್ಷ ಅಥವಾ ಪಕ್ಷಗಳು ನಡೆಸುವ ಸರ್ಕಾರ ಮಾತ್ರವೂ ಅಲ್ಲ. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಹೀಗೆ ಅನೇಕ ಸಂಗತಿಗಳನ್ನು ಒಳಗೊಂಡ ಒಂದು ಸಂಕೀರ್ಣ ವ್ಯವಸ್ಥೆ. ಸಮಾಜ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರುಬಿಡುವಂತೆ ನೋಡಿಕೊಳ್ಳುತ್ತದೆ. ನಂಬಿಕೆಯೆನ್ನುವುದು ಸಾರ್ವಜನಿಕ ಆಚರಣೆಯಾದಾಗ, ಸಾರ್ವಜನಿಕ ಕ್ರಿಯೆಯಾದಾಗ ಅದು ಸಾರ್ವಜನಿಕ ಚರ್ಚೆಗೆ ಎಡೆಮಾಡಿಕೊಡುತ್ತದೆ. ಸಮುದಾಯದ ಹಿತಕ್ಕೆ ಮಾರಕವಾಗುವಂತಿದ್ದರೆ, ಸಮಾಜದ ಘನತೆಗೆ ಕುಂದುಂಟುಮಾಡುವಂತಿದ್ದರೆ, ನಾಗರಿಕ ಸಮಾಜಕ್ಕೆ ಅವಮಾನಕರವಾಗಿದ್ದರೆ ಅಂಥ ನಂಬಿಕೆ ಪ್ರಶ್ನಾರ್ಹವಾಗುತ್ತದೆ; ವ್ಯಕ್ತಿಯ ಗಡಿಯನ್ನು ದಾಟಿ ಸಮಾಜದ ಚರ್ಚೆಯ ವ್ಯಾಪ್ತಿಯನ್ನು ಇಂಥ ನಂಬಿಕೆಗಳು ಪಡೆದುಕೊಳ್ಳುತ್ತವೆ. ಈ ಕಾರಣದಿಂದಾಗಿಯೇ ಬೆತ್ತಲೆ ಸೇವೆ ನಿಲ್ಲುವುದು ಸಾಧ್ಯವಾಯಿತು. ನರಬಲಿ ನಿಂತಿರುವುದರ ಹಿಂದೆಯೂ ಇದೇ ತರ್ಕ ಕೆಲಸಮಾಡುತ್ತದೆ. ಇದೆಲ್ಲ ಸಾಧ್ಯವಾದದ್ದು ಪ್ರಜಾಪ್ರಭುತ್ವದ ಕಾರಣದಿಂದಾಗಿಯೇ. ಪ್ರಜಾಪ್ರಭುತ್ವ ಎನ್ನುವುದು ನಿರಂತರವಾಗಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ಬೆಳೆಯುವ ಪ್ರಕ್ರಿಯೆ. ಇದು ಎಂದೂ ನಿಂತ ನೀರಾಗಿರುವುದಿಲ್ಲ.

ಇವತ್ತು ನಮ್ಮಲ್ಲಿ ಚಾಲ್ತಿಯಲ್ಲಿರುವ ಬಹುಪಾಲು ಧಾರ್ಮಿಕ ಆಚರಣೆಗಳು ಮತ್ತು ಮೂಢ ನಂಬಿಕೆಗಳು ‘ನಗಣ್ಯ’ ಊರಿನ ‘ಘಟನೆಗಳು’ ಮಾತ್ರ ಆಗಿರುವುದಿಲ್ಲ.’ ‘ಮಧ್ಯಯುಗದ ಭಾರತದ ಅನಾಗರಿಕ ಮನಃಸ್ಥಿತಿಯು ಇನ್ನೂ ಮುಂದುವರಿಯುತ್ತಿರುವ ಸಂಕೇತ’ ಎಂದು ಇಂಥ ಘಟನೆಗಳನ್ನು ಪತ್ರಿಕೆಗಳು ಮುಖಪುಟಗಳಲ್ಲಿ ವರ್ಣಿಸುತ್ತಿವೆ ಎಂದರೆ ಅವು ತಮ್ಮ ಕರ್ತವ್ಯವನ್ನು ಸರಿಯಾಗಿಯೇ ನಿರ್ವಹಿಸುತ್ತಿವೆ ಎಂದೇ ಅರ್ಥ.

ನಮಗೆ ಅವಮಾನವಾಗುತ್ತಿದ್ದರೆ ಅದು ನಮಗೆ ಖಂಡಿತಾ ತಿಳಿಯಬೇಕು. ಸೂಕ್ಷ್ಮ ಸಂವೇದನೆ ಇದ್ದರೆ ಇಂಥ ಅವಮಾನಗಳು ನಮಗೆ ತಿಳಿಯುತ್ತವೆ ಮತ್ತು ನಮ್ಮನ್ನು ತೀರಾ ಕುಗ್ಗಿಸುತ್ತವೆ. ಅಕ್ಷರ ಅವರ ಈ ಅಭಿಪ್ರಾಯವನ್ನು ಖಂಡಿತಾ ಒಪ್ಪಬೇಕು. ಆದರೆ ನಮ್ಮ ಸಮಾಜದ ಇತಿಹಾಸ ಬಹಳ ದೊಡ್ಡದು. ಸಾವಿರಾರು ವರ್ಷಗಳ ಹಿಂದಿನ ಚರಿತ್ರೆಯ ಕಳಂಕ ಪುಟಗಳು ಅದರಲ್ಲಿ ಸೇರಿಹೋಗಿವೆ. ಬಹುಸಂಖ್ಯಾತರಾದ, ತಳ ಸಂಸ್ಕೃತಿಯನ್ನು ಮತ್ತು ಮಾನವೀಯ ಕಾಳಜಿಗಳನ್ನು ಅತ್ಯಂತ ಎಚ್ಚರದಿಂದ ರಕ್ಷಿಸಿಕೊಂಡು ಬಂದ ಹಲವು ತಳ ಸಮುದಾಯಗಳ ಸಂವೇದನೆಯನ್ನೇ ಬರ್ಭರವಾಗಿ ಕೊಂದು ಹಾಕಿದವರು ಯಾರು? ಅಂಥವರ ತಲೆಗಳ ಮೇಲೆ ಮಲ ಹೊರಿಸಿದವರು ಯಾರು? ಅಂಥವರನ್ನು ಬೆತ್ತಲೆಗೊಳಿಸಿ ‘ಬೆತ್ತಲೆ ಸೇವೆಯನ್ನು’ ಮಾಡಿಸಿಕೊಂಡವರು ಯಾರು? ನಂಬಿಕೆಗಳ ಹೆಸರಿನಲ್ಲಿ ನರಬಲಿಯನ್ನು ಕೊಡುವಂಥ ಮನಃಸ್ಥಿತಿಯನ್ನು ಅಚ್ಚೊತ್ತಿದವರು ಯಾರು?

ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳದೆ, ನಮ್ಮ ಸಮಾಜದ ಸಂಕೀರ್ಣ ಸ್ವರೂಪವನ್ನು ಗಮನಿಸದೆ ವ್ಯಕ್ತಿಯ ನಂಬಿಕೆಯನ್ನು ನಿರ್ಧರಿಸುವುದು, ವ್ಯಕ್ತಿಯ ಪ್ರೇರಣೆಗಳನ್ನು ಗುರುತಿಸುವುದು ಸರಳವಾಗುತ್ತದೆ. ಬಾಲಿಶವಾಗುತ್ತದೆ.

8 ಟಿಪ್ಪಣಿಗಳು (+add yours?)

 1. jayaram k h
  ಫೆಬ್ರ 06, 2011 @ 22:57:25

  Preetiya akshare,
  yaake heege ketta cricket ge gambeeravada holasu paddatige; holasu harajannu holisiddaare ennuvudu arthavaguttilla; yaakendare K.V.Akshasa
  yaavude kaaranakku jaativaadiyalla. Haagagi avara abhiprayavannu bere reetiyalli artaisabahudagittu!!!!!!!!!!
  Dear Akshara
  Sir , Neevu oota maadida eleya mele, innobba horalaadi nimma seve maaduvudannu ishtapadutteera?
  Neevu EE prakanakke sambaddapatta hage holasu abhiprayavannu tegedukondiddeeri.
  jayaram k h
  9448923673
  sagar

  ಉತ್ತರ

 2. Uma
  ಜನ 24, 2011 @ 14:26:18

  Heggodina Vidwaamsaraada Shri Shri Shri K.V.Askhara avaru illina yaava lekhanagaligoo pratikriyisuvudilla…. avareega harake haraaju kurite tamma ninaasam vidyaarathigalige idondu saamskrutika moulyada paatavembante bodhisuvudaralli mulugihogiddaare.

  ಉತ್ತರ

 3. govindraaj
  ಜನ 22, 2011 @ 16:52:05

  its good article

  ಉತ್ತರ

 4. govindraaj
  ಜನ 22, 2011 @ 16:51:04

  The questioned raised by GPB sir with regard to the write-up of K.V.Akshara who plainly advocated and defended social evils.

  ಉತ್ತರ

 5. Ganesh Shenoy
  ಜನ 22, 2011 @ 13:45:35

  It is mere bluffing and a big bluffing illusion that media gives freedom though it talks about freedom all the time. Most the media employees are regulated and are dressed to blindly imitate the west and all media-generated mannerisms and outlooks are a reckless and illogical massacare of Indian culture which Mahatama Gandh had long before anticipated 100 years ago in his epic book “Hind Swaraj.” The tools of the multimedia and mannerisms imparted by the corporate sector are just a copy of the West. There is no scope for individuality. And on the other side our traditions and rituals and customs have become so rudderless and little of meaning that Mr. Akshara has done extremely well to invoke a healthy debate through a very provocative but a valid comparison. At least he had the guts, when most of our otherwise well-meaning intellectuals have crafted so many Lakshmana Rekhas around themselves and have so much fear of imaginary Ravans, that the real Ravana, our selflessness and diminishing Indianness is rarely noticed if at all.

  ಉತ್ತರ

 6. ಈಶ್ವರ ಭಟ್
  ಜನ 22, 2011 @ 12:10:13

  ಇತಿಹಾಸದ ಪುನರಾರ್ತನೆಯಾಗುತ್ತಾ ಇರುವುದು ಖೇದ ತರವಂತದ್ದು . ಹಾಗೇ ಯಾವುದೇ ಆಚರಣೆಯನ್ನು ಗುಣಾತ್ಮಕವಾಗಿ ಸಂಘಟಿಸಿ , ಮನಸ್ಸಿಗೆ ಶಕ್ತಿಕೊಡುವ ಭಕ್ತಿವಿಧಾನವನ್ನು ಬದಲಿಸಬೇಕಿದೆ. ಆದರೆ ಅದು ಹೊಸ ರೀತಿಯ ಆಚರಣೆಯಿಂದ ಮಾತ್ರ ಸಾಧ್ಯ ಆಲ್ಲವೇ?

  ಉತ್ತರ

 7. savitri
  ಜನ 22, 2011 @ 12:00:31

  ಸತೀಪದ್ಧತಿ, ಬಾಲ್ಯವಿವಾಹಗಳಂಥ ಕೆಲವು ಆಚರಣೆಗಳು ಮುಖ್ಯವಾಗಿ ರಾಜಕೀಯ ಸ್ಥಿತ್ಯಂತರಗಳಿಂದ ಉಂಟಾದವುಗಳಲ್ಲವೇ? ಬೆತ್ತಲೆ ಸೇವೆ, ದೇವದಾಸಿಯಂತಹ ಪದ್ದತಿಗಳು ಆರ್ಥಿಕ ಹಾಗೂ ಮಾನಸಿಕ ಸ್ಥತ್ಯಂತರಗಳಿಂದ ಉದ್ಭವಿಸಿದಂಥವು. ಪ್ರಾಣಿ ಬಲಿ, ಮಡೆ ಸ್ನಾನದಂತಹ ಆಚರಣೆಗಳು ಹಾಗೆ ಮಾಡುವವರ ನಂಬಿಕೆ, ಮೌಢ್ಯತೆಗೆ ಸಂಬಂಧಿಸಿದಂಥವು ಎನ್ನಿಸುತ್ತದೆ.
  ಮಲ ಹೊರಿಸುವುದು (ಹೊತ್ತು ಶುಚಿಗೊಳಿಸುವುದು) ಅದೊಂದು ಉದ್ಯೋಗವಾಗಿತ್ತು ಎಂಬುದನ್ನು ಮರೆಯಲಾಗದು ಅಲ್ಲವೇ? ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅರ್ಹತೆ (ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯ)ಗೆ ತಕ್ಕಂತೆ ಜೀವನೋಪಾಯಗಳನ್ನು ಕೈಕೊಳ್ಳಲು ಸೀಮಿತ ಅವಕಾಶಗಳಿದ್ದವು. ಜೊತೆಗೆ ’ಶಿಕ್ಷಣವೆಂಬುದು ನಮ್ಮ ಸ್ವತ್ತು’ ಎಂದವರಿಗಿಂತಲೂ, ತಮ್ಮ ಸ್ವತ್ತು ಅಲ್ಲವೆಂದು ಕೈಕಟ್ಟಿ ಕುಳಿತವರೆ ಜಾಸ್ತಿ ಇದ್ದರು. ಹಾಗಾಗಿಯೇ ಎಲ್ಲ ಘಾತುಕ ಚಟುವಟಿಕೆಗಳು ನಡೆದಿದ್ದು ನಿಜ. ಆದರೆ ಈಗ ಪ್ರಜಾಪ್ರಭುತ್ವವಿದೆಯಲ್ಲ? ಯಾವುದೇ ಸರಕಾರ ಬಂದರೂ ಎಷ್ಟೇ ಸ್ವಾರ್ಥಿಯಾಗಿದ್ದರೂ ಜನರಿಗೆ ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿವೆಯಲ್ಲ? ಜೊತೆಗೆ ಅದೆಷ್ಟು ಸೇವಾ ಸಂಸ್ಥೆಗಳು ಸಮಾಜಕ್ಕಾಗಿ ದುಡಿಯುತ್ತಿವೆಯಲ್ಲ? ಈಗಲೂ ಶೋಷಣೆ ನವೀನ ರೀತಿಯಲ್ಲಿ ಮುಂದುವರೆಯುತ್ತಿದೆಯಾದರೂ ಅದರ ಪ್ರಮಾಣ ತುಂಬ ಕಡಿಮೆ. ಜನತೆಯ ಎದುರಿಗೆ ಎಲ್ಲ ರೀತಿಯಿಂದಲೂ ಬಹಳಷ್ಟು ಆಯ್ಕೆಗಳಿವೆ ಅಲ್ಲವೇ? ಯಾವುದೇ ಜಾತಿಯವರು ಎಂತಹ ಶಿಕ್ಷಣವನ್ನು ಬೇಕಾದರೂ ಪಡೆಯಲು ಅವಕಾಶವಿದೆ. ಯಾವುದೇ ಉದ್ಯೋಗವನ್ನು ಯಾರಾದರೂ ಬದಲಾಯಿಸಬಹುದು. ಒಟ್ಟಿನಲ್ಲಿ ಸಂವಿಧಾನದತ್ತ ಎಲ್ಲ ಹಕ್ಕುಗಳು ಜನತೆಯ ಕೈಯಲ್ಲಿವೆ. ಜೊತೆಗೆ ಪಾರದರ್ಶಕ ಸೇವೆಯನ್ನು ಒದಗಿಸುತ್ತಿರುವ ಮಾಧ್ಯಮಗಳ ಸಂಖ್ಯೆ ಜಾಸ್ತಿ ಇದೆ.
  ಹಿಂದುಳಿದ ಜನ ಎಲ್ಲ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸುಧಾರಿಸಬೇಕಿದೆ. ಅಂತಹ ಬದಲಾವಣೆಗಳನ್ನು ಬಯಸುವ ವ್ಯಕ್ತಿ ಸಂವೇದನಾಶೀಲನಾಗಿರುತ್ತಾನೆ.
  ಸಂವೇದನಾಶೀಲತೆಯನ್ನು ಯಾರಾದರೂ ಕೊಲ್ಲುವುದಕ್ಕೆ ಸಾಧ್ಯವಿದೆಯೇ? ಅದನ್ನು ತಡೆಯಲು, ಅಡ್ಡಿಪಡಿಸಲು ಪ್ರಯತ್ನಗಳು ನಡೆದಿಲ್ಲವೆಂದಲ್ಲ. ಆದರೆ ತಡೆದಷ್ಟೂ ಪ್ರಬಲವಾಗುವ ಕ್ರಿಯೆ ಅದು. ಕೆಲವು ವ್ಯಕ್ತಿಗಳಿಗೆ ಅಂತಹ ಬದಲಾವಣೆ ಬಯಸುವ ಸಂವೇದನಾಶೀಲತೆ ಇರುವುದಿಲ್ಲ. ಅಲ್ಪತೃಪ್ತರಾಗಿದ್ದುಬಿಡುತ್ತಾರೆ. ತಮಗೋಸ್ಕರ ಕಳಕಳಿಯನ್ನು ವ್ಯಕ್ತಪಡಿಸುವ ಹಿತೈಷಿಗಳನ್ನು ಸಹ ಅರ್ಥ ಮಾಡಿಕೊಳ್ಳುವ ಗೋಜಿಗೆ ಅವರು ಹೋಗುವುದಿಲ್ಲ.
  ಒಂದೇ ಕೈಯಿಂದ ಚಪ್ಪಾಳೆ ತಟ್ಟಲು ಆಗುತ್ತದೆಯೇ?
  ಹಿಂದೆ ದರ್ಪ ಮತ್ತು ಮೌಢ್ಯತೆಗಳಿಗೆ ಒಳಗಾಗಿ ಗತಿಸಿ ಹೋದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ತಿರು ತಿರುಗಿ ಹಂಗಿಸುವುದರಲ್ಲೇನಿದೆ? ಯಾವುದೂ ಉಪಯೋಗವಿಲ್ಲದೇ ಚರ್ಚೆಯಲ್ಲಿ ಭಾಗವಹಿಸಿದವರ ಮನಸ್ಸುಗಳೇ ಕಹಿಯಾಗುವ ಸಂಭವವೇ ಜಾಸ್ತಿ.
  ಇಂತಹ ಎಲ್ಲ ಮೂಢ ಆಚರಣೆಗಳು ಸಂಪೂರ್ಣ ತೊಲಗಬೇಕೆಂದರೆ ಈ ಜನರಿಗೆ ಮುಖ್ಯವಾಗಿ ಬೇಕಿರುವುದು ಉತ್ತಮ ಶಿಕ್ಷಣ , ಮೌಲ್ಯ ಶಿಕ್ಷಣ ಬೇಕು. ನಾನು ಅದಕ್ಕಾಗಿಯೇ ಮತ್ತೆ ಹೇಳುತ್ತೇನೆ. ಜನರು ತಮಗೆ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಂಡು ಶಿಕ್ಷಿತರಾದರೆ, ಜಾಗೃತರಾದರೆ, ಸಂವೇದನಶೀಲರಾದರೆ, ಮೌಢ್ಯದಿಂದ ಹೊರಬಂದರೆ ಅವರನ್ನು ಯಾರೂ ಶೋಷಿಸಲಾರರು. ಶೋಷಣೆಗೆ ಒಳಗಾಗದೇ ಇರುವಂತಹ ವ್ಯಕ್ತಿತ್ವವನ್ನು ಗಳಿಸಿಕೊಳ್ಳಬೇಕಷ್ಟೆ.

  ಉತ್ತರ

 8. Rajashekhar Malur
  ಜನ 22, 2011 @ 10:50:50

  ಅಕ್ಷರ – ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ದಯವಿಟ್ಟು ಸುಮ್ಮನಿರಬೇಡಿ.

  ಮಾಳೂರು ರಾಜಶೇಖರ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: