ಶ್ರೀಲಂಕಾದಲ್ಲಿ ಜೋಗಿ

ಲಂಕಾದಹನದ ಪ್ರಸಂಗವು

ಮಾವಿನ ಕಾಯಿ ಮಾರುವ ಮುದುಕ, ಎಳನೀರು ಹೆಚ್ಚುತ್ತಾ ನಿಂತ ಹೆಣ್ಮಕ್ಕಳು, ಏರ್ ಪೋರ್ಟು, ಬಸ್ಸು ನಿಲ್ದಾಣ ಎಲ್ಲ ಕಡೆಯೂ ಅವರದ್ದೇ ಸಾಮ್ರಾಜ್ಯ. ಬರೀ ಹೆಣ್ಣುಮಕ್ಕಳು ಮತ್ತು ಮುದುಕರು ಮಾತ್ರ ಕೆಲಸ ಮಾಡುತ್ತಾರಾ ಇಲ್ಲಿ ಅನ್ನಿಸುವಂತ ದೇಶ. ನಮ್ಮ ಪ್ರಕಾರ ಇದಕ್ಕೊಂದು ಪೌರಾಣಿಕ ಹಿನ್ನೆಲೆ. ಆದರೆ ಇಲ್ಲಿನ ಮಂದಿಗೆ ಅದ್ಯಾವುದರ ಪರಿವೆಯೂ ಇಲ್ಲ. ಅವರ ಪಾಲಿಗ ಬುದ್ಧನೇ ಸರ್ವಸ್ವ. ಭಕ್ತಿಗೆ, ವ್ಯಾಪಾರಕ್ಕೆ, ಆರಾಧನೆಗೆ. ಪ್ರದರ್ಶನಕ್ಕೆ, ಮಾರಾಟಕ್ಕೆ, ವಿದೇಶಿ ವಿನಿಮಯ ಗಳಿಸುವುದಕ್ಕೆ ಬುದ್ಧನೇ ಸಿದ್ಧಪುರುಷ.

ಅದು ಇವತ್ತಿನ ಶ್ರೀಲಂಕಾ. ರಸ್ತೆಗಳು ಚೆನ್ನಾಗಿದ್ದರೂ ಜನ ಗೊಣಗಾಡುತ್ತಾರೆ. ಬಹಳ ವರ್ಷದ ನಂತರ ಅವರು ಮನೆಕಡೆ ತಿರುಗಿ ನೋಡಿದ್ದಾರೆ ಅನ್ನಿಸುತ್ತದೆ. ಇಷ್ಟು ವರ್ಷ ಅವರಿಗೆ ಬೇಲಿ ಭದ್ರಮಾಡುವ ಚಿಂತೆಯಿತ್ತು. ಈಗ ಬೇಲಿ ಬಲವಾಗಿದೆ. ಒಳಗಿನ ಸಮಸ್ಯೆಗಳನ್ನು ನಿಭಾಯಿಸುವುದು ಮುಖ್ಯವಾಗಿ ಕಾಣಿಸುತ್ತಿದೆ.

ಹುಡುಗರೆಲ್ಲ ದಣಿದಿದ್ದಾರೆ. ಯುದ್ಧ ಈಗಷ್ಟೇ ಮುಗಿದಿದೆ. ಹೀಗಾಗಿ ಅವರು ಆರಾಮಾಗಿ ತಿರುಗಾಡಿಕೊಂಡಿದ್ದಾರೆ. ತಮ್ಮ ತಮ್ಮ ಪ್ರೇಯಸಿಯರನ್ನು ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ. ಯುದ್ಧದ ಕರಾಳ ನೆರಳು ಮರೆಯಾಗಿಲ್ಲ. ಆ ದಿನಗಳ ನೆನಪು ಅವರನ್ನು ಇನ್ನೂ ಬಾಧಿಸುತ್ತಿದೆ. ಹೀಗಾಗಿ ಸಣ್ಣ ಭಯವೊಂದು ಎಲ್ಲರನ್ನೂ ಕಾಡುತ್ತಿದೆ ಎಂದು ಸಿನಿಮಾ ನಿರ್ದೇಶಕ ಪ್ರಸನ್ನ ವಿತನಗೆ ವಿವರಿಸುತ್ತಾರೆ. ಅವರ ಪ್ರಕಾರ ಶ್ರೀಲಂಕಾದ ಕುರಿತು ಬರೆಯುವವರೆಲ್ಲ ಹೊರಗೆ ನಿಂತು ದೇಶವನ್ನು ನೋಡುತ್ತಾರೆ. ಒಳಗಿದ್ದು ಅನುಭವಿಸಿ ಬರೆಯುವ ಲೇಖಕರ ಬರಹಗಳು ಇಂಗ್ಲಿಷಿಗೆ ಅನುವಾದವಾಗಿಲ್ಲ. ಶ್ರೀಲಂಕಾದ ಅನೇಕ ಬರಹಗಾರರು ಎಲ್ಲೋ ದೂರ ಕೂತು, ಹಳೆಯ ನೆನಪಿನಿಂದ ಬರೆಯುತ್ತಾರೆ ಅಷ್ಟೇ. ಅವರಿಗೂ ದೇಶದಲ್ಲಿ ಏನಾಗುತ್ತಿದೆ ಅನ್ನುವುದು ಗೊತ್ತಿಲ್ಲ.

ನಮಗೆ ನಾಯಕರೇ ಇಲ್ಲ ಅಂದರು ಪ್ರಸನ್ನ. ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ತಿಂಗಳ ನಂತರ ಬ್ರಿಟಿಷರು ಶ್ರೀಲಂಕಾಕ್ಕೂ ವಿದಾಯ ಹೇಳಿದರು. ನಮಗೂ ಗಾಂಧೀಜಿಯೇ ಸ್ವಾತಂತ್ರ್ಯ ಪುರುಷ. ಭಾರತದಿಂದ ಹೊರಬಿದ್ದ ಬ್ರಿಟಿಷರು ಶ್ರೀಲಂಕಾದ ಮೇಲೆ ಹತೋಟಿ ಸಾಧಿಸಿ ಮಾಡುವುದೇನು ಅಂದುಕೊಂಡು ದೇಶ ಬಿಟ್ಟು ಹೋದರು. ಇಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಯಾರು ಅಂತ ಕೇಳಿದರೆ ನಾನು ಹೇಳುವುದು ಗಾಂಧೀಜಿಯ ಹೆಸರನ್ನೇ ಅನ್ನುವ ಪ್ರಸನ್ನರ ಪ್ರಕಾರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಮೊನ್ನೆ ಮೊನ್ನೆ.

ಇಡೀ ಅನುರಾಧಾಪುರಕ್ಕೆ ಹೊರಗಿನವರು ಕಾಲಿಡುತ್ತಲೇ ಇರಲಿಲ್ಲ. ಎಲ್ಲಿ ಏನಾಗುತ್ತೋ ಎಂಬ ಭಯ. ಕಾಲ ಕೆಳಗೆ ಏನು ಸಿಡಿಯುತ್ತೋ ಎಂಬ ಗಾಬರಿ. ಹೀಗಾಗಿ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತ್ತು. ಹೊಟೆಲುಗಳನ್ನು ಕೇಳುವವರೇ ಇರಲಿಲ್ಲ. ಈಗ ಸ್ವಲ್ಪ ಉಸಿರಾಟ ಶುರುವಾಗಿದೆ. ಇವರಿಂದ ಬಿಡುಗಡೆ ಸಿಗದೇ ಹೋಗಿದ್ದರೆ ಇನ್ನು ಆರೆಂಟು ವರ್ಷಗಳಲ್ಲಿ ಈ ದೇಶ ಇನ್ನಷ್ಟು ಬಡವಾಗುತ್ತಿತ್ತು ಅನ್ನುತ್ತಾರೆ ಹೊಟೆಲು ಮಾಲಿಕ ನೆಲ್ಸನ್. ಅವರದೊಂದು ಪುಟ್ಟ ಹೊಟೆಲು. ಹದಿನಾಲ್ಕೇ ರೂಮು. ಕಳೆದ ಆರು ತಿಂಗಳಿಂದ ಕನಿಷ್ಟ ಐದಾರು ರೂಮುಗಳು ತುಂಬುತ್ತಿವೆ. ವಿದೇಶೀಯರು ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೂ ಮುಂಚೆ ಕೊಲಂಬೋದಿಂದ ಜಾಫ್ನಾಗೆ ಯಾರೂ ಅನುರಾಧಾಪುರದ ಮಾರ್ಗವಾಗಿ ಹೋಗುತ್ತಲೇ ಇರಲಿಲ್ಲ. ಹೀಗಾಗಿ ಆ ರಸ್ತೆ ಚೆನ್ನಾಗಿದೆ.

ಓಲ್ಡ್ ಸಿಟಿ ಎಂದು ಕರೆಸಿಕೊಳ್ಳುವ ಅನುರಾಧಾಪುರದ ತುಂಬ ಬುದ್ಧನ ಅವಶೇಷಗಳು. ಅಷ್ಟೆತ್ತರದ ದಾಗೋಬಗಳು. ಅದರೊಳಗೆ ಬುದ್ದನ ಅವಶೇಷಗಳಿವೆಯಂತೆ. ಬಂಗಾರ, ರತ್ನಗಳನ್ನು ಹುಗಿದಿಟ್ಟಿದ್ದಾರಂತೆ. ಹೀಗಾಗಿ ಅವುಗಳ ಬಗ್ಗೆ ವಿದೇಶಿಯರಿಗೆ ಕುತೂಹಲ. ಅಲ್ಲಿನ ಮಂದಿಗೆ ಅದು ಸರ್ವೇಸಾಮಾನ್ಯ. ಯಾರೂ ಅದನ್ನು ಅಷ್ಟಾಗಿ ಗಮನಿಸುವುದಿಲ್ಲ. ಅದರ ಆಸುಪಾಸಿನಲ್ಲಿ ಪ್ರೇಮಿಗಳು ಅಡ್ಡಾಡುತ್ತಾರೆ.

ಯಾವ ದಿಕ್ಕಿನಲ್ಲಿ ಬೆಳೆಯಬೇಕು ಅನ್ನುವುದೂ ಅವರಿಗೆ ಗೊತ್ತಿಲ್ಲ. ಚಿತ್ರರಂಗ ಕೂಡ ಕಷ್ಟದಲ್ಲಿದೆ. ಷಾರುಕ್ ಖಾನ್ ಇಲ್ಲಿಯ ಜನಪ್ರಿಯ ಹೀರೋ. ಅವನಂತೆಯೆ ಆಗಲು ಹೆಣಗಾಡುತ್ತಿರುವ ಯುವಕರು, ಅವನನ್ನು ಅಪಾರವಾಗಿ ಪ್ರೀತಿಸುವ ಯುವತಿಯರು. ಬೇರೆ ಸ್ಟಾರುಗಳನ್ನು ಕೇಳುವವರಿಲ್ಲ. ವರ್ಷಕ್ಕೆ ಇಪ್ಪತ್ತು ಸಿನಿಮಾ ತಯಾರಾದರೆ ಹೆಚ್ಚು. ಒಂದೊಂದರ ಬಜೆಟ್ಟು ಅರವತ್ತರಿಂದ ಎಪ್ಪತ್ತು ಲಕ್ಷ. ಅಂದರೆ ಭಾರತದ ಕರೆನ್ಸಿಯಲ್ಲಿ ಮೂವತ್ತು ಲಕ್ಷ. ಸಿನಿಮಾ ಮಾಡಿದವನೇ ಅದನ್ನು ಬಿಡುಗಡೆ ಮಾಡಬೇಕು. ಇದ್ದ ಮುನ್ನೂರು ಥೇಟರುಗಳಲ್ಲಿ ಅರ್ಧಕ್ಕರ್ಧ ಯುದ್ಧಕ್ಕೆ ಬಲಿಯಾಗಿದೆ. ಉಳಿದ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ನಿರ್ಮಾಪಕನಿಗೂ ಪ್ರದರ್ಶಕನಿಗೂ ತಲಾ ನಲವತ್ತೈದು ಪರ್ಸೆಂಟು. ವಿತರಕನಿಗೆ ಹತ್ತು ಪರ್ಸೆಂಟು. ಶುದ್ಧ ಲೆಕ್ಕಾಚಾರ.

ಬಾಲಿವುಡ್ ಒಂದು ಕಡೆಯಿಂದ ನಮ್ಮನ್ನು ಬಲಿತೆಗೆದುಕೊಳ್ಳುತ್ತಿದ್ದರೆ, ಅಮೇರಿಕಾ ಮತ್ತೊಂದು ಕಡೆಯಿಂದ ಆಕ್ರಮಿಸಿಕೊಳ್ಳುತ್ತದೆ ಎನ್ನುತ್ತಾರೆ ಪ್ರಸನ್ನ. ವಿದೇಶಿ ಸರಂಜಾಮುಗಳು ಆಗಲೇ ಬಂದು ಸೇರಿವೆ. ಅತ್ಯಂತ ಕಡಿಮೆ ಬೆಲೆಯ ಶ್ರೀಲಂಕಾದ ಸಾಂಪ್ರದಾಯಿಕ ಉಡುಪುಗಳು ಕಣ್ಮರೆಯಾಗುತ್ತಿವೆ. ಫ್ಯಾಷನ್ನು, ಫುಡ್ಡು, ಫಿಲ್ಮು- ಮೂರೂ ವಿದೇಶದಿಂದ ಬಂದರೆ ಯಾವ ದೇಶ ಉಳಿದೀತು ಅನ್ನುವುದು ಇವರ ಆತಂಕ.

ಅನುರಾಧಾಪುರದ ತುಂಬ ಸರೋವರಗಳು. ದೂರದ ಕ್ಯಾಂಡಿಯ ಬೆಟ್ಟಗಳಲ್ಲಿ ಮಳೆಯಾದರೆ ಆ ಸರೋವರಗಳು ಉಕ್ಕುತ್ತವೆ. ಎಂಟು ವರ್ಷದ ನಂತರ ಈ ವರ್ಷ ಉಕ್ಕಿದ ಸರೋವರ ಅರ್ಧ ಊರನ್ನು ಮುಳುಗಿಸಿದೆ. ಯಾವ ದಿಕ್ಕಿನಿಂದ ಹೊರಗೆ ಬರಲು ಯತ್ನಿಸಿದರೂ ಕಾಲಿಗೆ ತೊಡರುವ ಪ್ರವಾಹ. ಅರ್ಧಕ್ಕರ್ಧ ಮುಳುಗಿದ ಮನೆಗಳು. ಎಲ್ಲಾ ಧರಣಿಯಿಲ್ಲ, ಗದ್ದಲ ಇಲ್ಲ. ಜನ ಸುಮ್ಮನೆ ರಸ್ತೆ ಬದಿಗೋ ಎತ್ತರದ ಜಾಗಕ್ಕೋ ಬಂದು ರೇಡಿಯೋ ಕೇಳುತ್ತಾ ಕುಳಿತಿರುತ್ತಾರೆ. ಸರ್ಕಾರದಿಂದ ನೆರವು ಬರುವುದಿಲ್ಲವೇ ಎಂದು ಕೇಳಿದರೆ ಅವರೇನು ಮಾಡುತ್ತಾರೆ ಪಾಪ ಅಂತ ಸುಮ್ಮನಾಗುತ್ತಾರೆ.

ಕ್ರಿಕೆಟಿಗ ಸನತ್ ಜಯಸೂರ್ಯ ಇಲ್ಲಿನ ಸಂಸದ. ಅರ್ಜುನ್ ರಣತುಂಗೆ ವಿರೋಧ ಪಕ್ಷದಲ್ಲಿದ್ದಾರೆ. ಇಬ್ಬರ ಕುರಿತೂ ಜನಕ್ಕೆ ಪ್ರೀತಿಯಿದೆ. ಆದರೆ ಅವರಿಬ್ಬರಿಗಿಂತ ಸಚಿನ್ ಇಷ್ಟ. ಸಚಿನ್ ಇಲ್ಲೂ ಕೂಡ ಜಾಹೀರಾತಿಗೆ ಹೀರೋ. ಬಿಟ್ಟರೆ ಕರಿಷ್ನಾ, ಕರೀನಾ ಇದ್ದಾರೆ. ಅಕ್ಷಯ್ ಕುಮಾರನ ಬಗ್ಗೆ ಅನಗತ್ಯ ಅಸಡ್ಡೆ.

ಹೊಟೆಲುಗಳಿಗೆ ಗಿರಾಕಿಗಳೇ ಇಲ್ಲ. ಹೇಗಾದರೂ ಮಾಡಿ ಅವುಗಳನ್ನು ಒಂದಷ್ಟು ಕಾಲ ಉಳಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ ಸರ್ಕಾರವೇ ಬೆಲೆ ಹೆಚ್ಚಿಸಿಕೊಳ್ಳಿ ಅಂತ ಸೂಚನೆ ನೀಡಿದೆಯಂತೆ. ಹೀಗಾಗಿ ಬೆಂಗಳೂರಿನಲ್ಲಿ ಮೂರು ಸಾವಿರಕ್ಕೆ ಸಿಗುವ ಹೊಟೆಲು ರೂಮಿಗೆ ಇಲ್ಲಿ ಆರು ಸಾವಿರ ರುಪಾಯಿ. ಇಂಟರ್-ನೆಟ್ಟು ಮಾತ್ರ ಅಗ್ಗವೋ ಅಗ್ಗ. ಫೋನು ಕೂಡ.

ಗಸ್ತು ತಿರುಗುವ ಪೊಲೀಸರು, ಅಲ್ಲಲ್ಲಿ ಕಾಣಿಸುವ ಮಿಲಿಟರಿ ಮಂದಿಯ ನಡುವೆ ಜನ ನಿಶ್ಯಂಕೆಯಿಂದ ಓಡಾಡುತ್ತಿದ್ದಾರೆ. ರಾಜಭವನದ ಸಮೀಪದಲ್ಲೇ ರೆಡ್ ಲೈಟ್ ಏರಿಯಾ ಸ್ಥಾಪಿಸುವುದಕ್ಕೆ ಸರ್ಕಾರ ನಿರ್ಧರಿಸಿದ್ದಾಗಿದೆ. ಮುಂದಿನ ವರುಷ ಕೊಲಂಬೋಗೆ ಕಾಲಿಟ್ಟವರಿಗೆ ರಾಜಭವನ ಸಮೀಪದದಲ್ಲೇ ರಾಣೀವಾಸವೂ ಲಭ್ಯ.

ತೆಳ್ಳಗಿನ ಹುಡುಗರು, ದಡೂತಿ ಹೆಣ್ಣುಮಕ್ಕಳು, ಕಣ್ಣ ಬೆಳಕಾರಿದ ಮುದುಕರು, ಯಾವುದೋ ಚಿಂತೆಯಲ್ಲಿರುವ ಮಧ್ಯವಯಸ್ಕರು. ದೇಶವೂ ಸಣ್ಣಗೆ ನಿದ್ದೆ ತೂಗುತ್ತಿದೆ. ಎಚ್ಚರಿಸುವುದಕ್ಕೆ ಮತ್ತೊಂದು ಕ್ರಾಂತಿಯಾಗಬೇಕು ಎಂದು ಕಾಯುತ್ತಿರುವಂತಿದೆ. ಆದರೆ ಒಳಗಿನಿಂದಲೇ ಬಂಡೇಳುವುದಕ್ಕೆ ದೇಶ ಸಿದ್ಧವಿಲ್ಲ.

2 ಟಿಪ್ಪಣಿಗಳು (+add yours?)

  1. uma rao
    ಜನ 21, 2011 @ 17:19:07

    jogi, shrilankaada chitran aashtu kadime padagalalli dattavaagi mudi bandide. innu vivarada baraha baredare chennagirutte.uma

    ಉತ್ತರ

  2. ಆಸು ಹೆಗ್ಡೆ
    ಜನ 20, 2011 @ 10:49:29

    ಓದಿ ಮುಗಿಸುದಾಗ, ಅದ್ಯಾಕೋ ಲಂಕಾಪ್ರವಾಸ ಬೇಗನೇ ಮುಗಿಯಿತು ಅಂತ ಅನಿಸಿತು.

    ಎಲ್ಲಾ ಸರಿ, ನಮ್ಮ ದೇಶದ ಸದ್ಯದ “ಟ್ರೇಡ್‍ಮಾರ್ಕ್” ಆಗಿರೋ “ಭ್ರಷ್ಟಾಚಾರ” ಶ್ರೀಲಂಕಾದಲ್ಲೂ ಇದೆಯಾ? ಯಾವ ಮಟ್ಟದಲ್ಲಿ ಇದೆ ಅನ್ನುವುದನ್ನು ತಿಳಿದುಕೊಳ್ಳುವ ಆಸೆ ಆಗ್ತಿದೆ!

    ಅವರನ್ನೂ ನಮ್ಮೊಂದಿಗೆ ತೂಗಿನೋಡುವ ಬಯಕೆ!

    ಉತ್ತರ

Leave a reply to ಆಸು ಹೆಗ್ಡೆ ಪ್ರತ್ಯುತ್ತರವನ್ನು ರದ್ದುಮಾಡಿ