ಏನೆಂದು ಹೇಳಲಿ ನೀರಿನ ಮಹಿಮೆಯ…
-ಸಾವಿತ್ರಿ ವಿ ಎಚ್
ಅವತ್ತು ತೋಟಕ್ಕೆ ಹೋದಾಗ ಅದು ತೋಟ ಅನ್ನುವ ಲಕ್ಷಣವನ್ನು ಉಳಿಸಿಕೊಂಡಿರಲಿಲ್ಲ. ತೋಟಗಾರಿಕಾ ಇಲಾಖೆಯಿಂದ ಉಚಿತವಾಗಿ ತಂದು ನೆಟ್ಟಿದ್ದ ಸೀಬೆ, ಮಾವು, ತೆಂಗು, ಲಿಂಬಿಯ ಸಸಿಗಳು ಹತ್ತಿದ್ದೇ ತಡ, ನೀರಿನ ಕೊರತೆಯಿಂದಾಗಿ ಹಾಗೆ ಬೇರು ಸಹಿತ ಒಣಗಿಹೋಗಿದ್ದವು. ಪುಟ್ಟ ತಮ್ಮನೊಂದಿಗೆ ತಲೆ ಮೇಲೆ ಸಸಿಗಳನ್ನು ಹೊತ್ತುಕೊಂಡು ಲಾರಿ ಏರಿ ಮನೆಗೆ ಬಂದಿದ್ದ ನೆನಪು ನೋವಾಗಿ ಉಳಿಯಿತು. ಮೊದಲಿದ್ದ ತೆಂಗಿನ ಗಿಡಗಳಲ್ಲಿ ಅದೇ ತಾನೇ ಇಣುಕಿ ಹಾಕುತ್ತಿದ್ದ ಕಾಯಿಗಳು ಉದುರಿ ಬೀಳತೊಡಗಿದ್ದವು. ಏಕೈಕ ಚಿಕ್ಕು(ಸಪೋಟ) ಹಣ್ಣಿನ ಗಿಡ ಹೂ ಕಾಯಿಗಳಿಂದ ಕೂಡಿದ್ದರೂ, ಅದೇಕೋ ಮಿಡಿಗಾಯಿ ಹಂತಕ್ಕೆ ತಲುಪಿದಾಗ ಕಾಯಿಗಳು ಉದುರಿ ಹೋಗುತ್ತಿದ್ದವು. ಭೂಮಿಯೆಲ್ಲ ಹಸಿರಾಗಿರಬೇಕಾಗಿದ್ದ ಮಳೆಗಾಲದಲ್ಲಿಯೂ ಬಿಕೋ ಎನ್ನತೊಡಗಿತ್ತು. ಮಳೆಗಾಲವಾದರೂ ಮಳೆಯ ದರ್ಶನವೇ ಇರಲಿಲ್ಲವಲ್ಲ ಅದಕ್ಕೆ! ಹೊಲದ ದಕ್ಷಿಣ ಭಾಗದ ಬದುವಿನಲ್ಲಿದ್ದ ಜಾಲಿಗಿಡದಲ್ಲಿ ಜೀರುಂಡೆಗಳು ಜೀಂಯ್ ಅಂತ ಸ್ವರ ತೆಗೆದು ಹಾಡುತ್ತಿದ್ದವು. ಉತ್ತರ ಭಾಗದ ಬೇವಿನ ಮರಗಳಲ್ಲಿ ಗಿಳಿ, ಗೊರವಂಕ ಇತ್ಯಾದಿ ಪಕ್ಷಿಗಳು ಬರಲಿರುವ ಹಸಿರು ಕಾಲಕ್ಕಾಗಿ ನಿರೀಕ್ಷಿಸುತ್ತಿವೆಯೇನೋ ಎಂಬಂತೆ ಆಗೀಗ ಹಾಡುತ್ತಿದ್ದವು.
ಅವ್ವ(ಅಮ್ಮ) ಹೊಲ ಸೇರಿದ್ದೇ ತಡ, ಸೀರೆಯ ನೆರಿಗೆಯನ್ನು ಎತ್ತಿಕಟ್ಟಿ, ಸೆರಗಿನಿಂದ ತಲೆಸುತ್ತ ಹೊದ್ದುಕೊಂಡು ಕಾಯಕನಿರತಳಾಗಿಯೇ ಬಿಟ್ಟಳು. ಆಕೆಗೆ ಮಾತ್ರ ಅದೆಷ್ಟು ಪ್ರೀತಿ ಈ ಭೂಮಿ ಎಂದರೆ! ಹಸಿರಿನಿಂದ ತುಂಬಿ ಸಂಭ್ರಮವನ್ನು ಸೂಸುತ್ತಿದ್ದ ಕಾಲದಲ್ಲಿಯೂ, ನೀರು ಕಾಣದೇ ಬಿಸಿ ಉಸಿರು ಚೆಲ್ಲುತ್ತಿದ್ದ ಕಾಲದಲ್ಲಿಯೂ ಅವ್ವ ಈ ಭೂಮಿಯನ್ನು ಒಂದೇ ಪ್ರೀತಿಯಿಂದ ಕಾಣುತ್ತಾಳಲ್ಲವೇ ಎಂದುಕೊಂಡವಳಿಗೆ ಕಣ್ಣುಗಳಲ್ಲಿ ನೀರು ತುಂಬಿ, ಪಟಕ್ಕನೇ ತೊಟ್ಟಿಕ್ಕಿತ್ತು. ಅವ್ವ ಮಾತ್ರ ಬಾಹ್ಯವನ್ನು ಮರೆತು, ಅಲ್ಲಲ್ಲಿ ಬಿದ್ದಿದ್ದ ಮುಳ್ಳು, ಕಸ ಕಡ್ಡಿಗಳನ್ನು ಆಯ್ದು ಒಂದೆಡೆ ಗುಂಪಿ ಹಾಕತೊಡಗಿದ್ದಳು.
ನಾನೂ ಹೊಲದ ನಾಲ್ಕೂ ದಿಕ್ಕಿಗೂ ಸುಮ್ಮನೇ ಓಡಾಡಿದೆ. ಅಲ್ಲಲ್ಲಿ ಬಿದ್ದಿದ್ದ ಅನವಶ್ಯ ಕಲ್ಲುಗಳನ್ನು ಎತ್ತಿ ಬದುವಿನಲ್ಲಿರುವ ಹೊಳ್ಳಗಟ್ಟೆಗೆ ಹಾಕಲು ಅವ್ವನಿಗೆ ಸಹಾಯ ಮಾಡಿದೆ. ಒಂದೊಮ್ಮೆ ಕನಕಾಂಬರ, ಸೇವಂತಿಗೆಯಿಂದ, ಸಜ್ಜೆ, ಮಡಿಕೆ, ಗುರೆಳ್ಳು(ಹುಚ್ಚೆಳ್ಳು) ಹುರುಳಿ, ಗೋದಿಗಳ ಬೆಳೆಯಿಂದ ತನ್ನದೇ ಆದ ಪರಿಮಳ ಸೂಸುತ್ತಿದ್ದ ನಮ್ಮ ಪ್ರೀತಿಯ ಪುಟ್ಟ ಹೊಲದಲ್ಲಿ, ಜೀವನಾಧಾರವಾಗಿದ್ದ ಭೂತಾಯಿಯ ಮಡಿಲಲ್ಲಿ ಅವತ್ತು ಏನೆಂದರೆ ಏನೂ ಇರಲಿಲ್ಲ. ಅದಾಗಲೇ ಬಿಸಿಲಿನ ದಗೆಗೂ, ಚಿಂತೆ ಆವರಿಸಿದ್ದಕ್ಕಾಗಿಯೂ ನನಗೆ ದಣಿವಾಗಿ, ಬಾಯಾರಿ ಹೋಗಿತ್ತು. ಬಾವಿಯ ಕಡೆ ಓಡಿ ಹೋದೆ. ಅವ್ವ ನೋಡಿಯಾಳೆಂದು ಕದ್ದಿನಿಂದ ಆಕೆಯ ಕಣ್ತಪ್ಪಿಸಿ ಬಾವಿಯಲ್ಲಿ ಇಳಿದೆ. ನಮ್ಮ ಬಾವಿ ಒಣಗಿ ಹೋಗಿ ಬಿರುಕು ಬಿಟ್ಟಿದ್ದನ್ನು ನನ್ನ ಬಾಲ್ಯದಿಂದಲೂ ಎಂದೂ ನೋಡಿರಲಿಲ್ಲ. ಆದರೆ ಅವತ್ತು ಮೊದಲ ಸಲ ಒಣಬಾವಿಯನ್ನು ಕಂಡಿದ್ದವು ಪಾಪಿ ಕಣ್ಣುಗಳು! ಒಂದು ಚೂಪಾದ ಕಲ್ಲಿನಿಂದ ಗಂಗಮ್ಮನ ಎದೆಯನ್ನು ಬಗೆಯತೊಡಗಿದೆ. ಎಷ್ಟು ಹೊತ್ತು ಬಗೆದರೂ ಒಂದು ಅಡಿ ತೋಡುವಷ್ಟರಲ್ಲಿ ಬೆವರೊಡೆದು ಕೈ ಸೋತು ಹೋದಾಗಲೇ ನಾನೇನು ಮಾಡುತ್ತಿದ್ದೇನೆಂದು ಪ್ರಜ್ಞೆಗೆ ಬಂತು. ಕಣ್ಣುಗಳಲ್ಲಿ ಧಾರಾಕಾರವಾಗಿ ನೀರಿಳಿದು ತೊಟ್ಟಿಕ್ಕಿ ತೋಡಿದ್ದ ಆ ಪುಟ್ಟ ಗುಂಡಿಯಲ್ಲಿ ಜಾರಿ ಬೀಳತೊಡಗಿತ್ತು. ಸಾಕಷ್ಟು ಅತ್ತೆ. ಅಮೃತಮಯಿಯಾದ ನೀನಾ ಹಿಂಗ ಒಣಗಿ ಹೋದ್ರ ನಮ್ ಗತಿ ಹೆಂಗವ್ವಾ? ನನ್ನ ತಾಯಿ ಎದೆ ಒಣಗಿ ಸಣ್ಣದಾಗಿ ಹೋಗಿದ್ದನ್ನ ಕಂಡು ನನ್ನ ಕೈಯಿಂದ ತಾಳಾಕಾಗವಲ್ದು. ನೀನು ಮತ್ತೆ ತುಂಬಿ ನಿಲ್ಲು. ಮತ್ತೆ ನಮ್ಮ ಹೊಲ ಹಸಿರಾಗ್ಲಿ. ಮತ್ತೆ ನನ್ನ ತವರಿನ ಹಟ್ಟಿಯೊಳಗ ಹಸು ದನ ಕರುಗಳು ಅಂಬಾ ಅಂತ, ಹಸಿರು ಮೇವನ್ನು ಮೆದ್ದು ಮೆಲುಕಾಡಿಸಲಿ. ನನ್ನ ಅಣ್ಣ ತಮ್ಮಂದಿರು ನೊರೆಹಾಲನ್ನು ಕುಡಿದು, ನಲಿದಾಡಲಿ… ನನ್ನ ಅಪ್ಪ ದನ ಕರುಗಳ ಮೈ ನೀವುತ್ತಾ ಸಂಭ್ರಮಿಸಲಿ… ಅವ್ವನ ಕಡೆಗೋಲು ಸರಬರ ಅಂತ ನತರ್ಿಸಿ ಮಜ್ಜಿಗೆ ಗಡಿಗೆಯಲ್ಲಿ ಚೆಂಡು ಚೆಂಡು ಬೆಣ್ಣೆ ತೇಲಾಡಲಿ… ಹೀಗೇ ಸಿಕ್ಕಾಪಟ್ಟೆ ಬೇಕುಗಳನ್ನು ಮುಂದಿಟ್ಟು ಭೂತಾಯಿಗೆ ಪ್ರಾಥರ್ಿಸಿ ಅತ್ತೆ.
ಅವ್ವ ಬಾರಕೇರ ತೋಟದ ಬಾವಿಯಿಂದ ಒಂದು ಮೊಗೆ ನೀರು ತಂದು ಸಾವೀ ಬಾ, ಬಾವ್ಯಾಗ್ಯಾಕಿಳ್ದೀಯ ಯವ್ವ, ಬಾವಿ ಬಿರುಕು ಬಿಟ್ಟು ಹೋಗೇತಿ. ಏನ್ ಪಾಪ ಮಾಡಿದ್ವೇನವ್ವ ಹಡೆದವ್ವ…ಎಂದಾಗ ಅವ್ವನ ಮುಖ ನೋಡಿದೆ ಬಾವಿಯೊಳಗಿದಂದಲೇ ತಲೆ ಮೇಲೆತ್ತಿ. ಅವ್ವ ಸೀರೆಯ ಸೆರಗಂಚಿನಿಂದ ಕಣ್ಣೊರೆಸಿಕೊಳ್ಳತೊಡಗಿದ್ದಳು. ನಾನು ಬಾವಿಯಿಂದ ಹೊರಬಂದು ಅವ್ವನ ಕೈಯಿಂದ ಮೊಗೆಯನ್ನು ಪಡೆದು ನೀರು ಕುಡಿದೆ. ಒಯ್ದಿದ್ದ ಬುತ್ತಿಯಲ್ಲಿದ್ದ ರೊಟ್ಟಿಗೆ ಇರುವೆ ಮುತ್ತಿದ್ದವು. ಹಸಿವೆಯ ಪೂರ್ತಗೆ ಒಂದೊಂದು ರೊಟ್ಟಿಯನ್ನು ತಿಂದೆವು.
ಅವ್ವ ಮನೆಯಿಂದ ಒಯ್ದಿದ್ದ ಬೀಜದ ಗಂಟನ್ನು ಬಿಚ್ಚಿ, ಬದುವಿನಲ್ಲಿ ಅವರೆ, ಹೀರೆ, ತುಪ್ಪರಿ(ತುಪ್ಪದ ಹೀರೆ), ಕುಂಬಳ ಕಾಯಿ ಬೀಜಗಳನ್ನು ಊರಿದಳು. ಬಂದ ಮಳೆ ಹೋದ ಮಳೆಗೆ ಅವು ಹುಟ್ಟಿಕೊಂಡು ಹಬ್ಬಿಯಾವೆಂದು ಆಕೆಯ ನಿರೀಕ್ಷೆಯಾಗಿತ್ತು.
ನಾಲ್ಕು ತಿಂಗಳಗಳ ನಂತರ ಮತ್ತೆ ಊರಿಗೆ ಹೋದಾಗ ನನಗೆ ಒಂದು ಸಿಹಿ ಸುದ್ದಿ ತಿಳಿಯಿತು. ಚಿತ್ತಿ ಮಳೆಯೊಂದರಿಂದಲೇ ನಮ್ಮ ಊರಿನ ಕೆರೆ ಬಾವಿಗಳೆಲ್ಲ ತುಂಬಿ ಕೋಡಿ ಬಿಟ್ಟಿದ್ದರು. ಅದೇ ಸುಸಮಯವೆಂದು ಅಣ್ಣ ಒಂದಿಪ್ಪತ್ತು ಸಾವಿರ ಸಾಲ ಎತ್ತಿ ತೋಟವನ್ನು ಮತ್ತೆ ಚಲಾವಣೆಗೆ ತಂದಿದ್ದ. ಅವ್ವ, ಅತ್ತಿಗೆ ಹಾಗೂ ಸಹೋದರರು ತೋಟದಲ್ಲಿ ಉತ್ಸಾಹದಿಂದ ತರಕಾರಿ ಬೀಜಗಳನ್ನು ಊರಿದ್ದರು. ಮಾವನ ತೋಟದಿಂದ ಸ್ವಲ್ಪ ಸೇವಂತಿಗೆ ಸಸಿಯನ್ನು ತಂದು ನಾಟಿ ಮಾಡತೊಡಗಿದ್ದರು. ಅಪ್ಪ ಸ್ವಲ್ಪ ಮೊತ್ತದಲ್ಲಿಯೇ ಎರಡು ಹೋರಿ ಕರುಗಳನ್ನು, ಎರಡು ಹಸುಗಳನ್ನು ತಂದು, ಅವುಗಳನ್ನು ಇನ್ನಿಲ್ಲದ ಸಂಭ್ರಮದಿಂದ ಮೇಯಿಸುತ್ತ ಬದುವಿನಲ್ಲಿ ಸಾಕ್ಷಾತ್ ಗೋಪಾಲ ಕೃಷ್ಣನಂತೆ ನಲಿದಾಡುತ್ತಿದ್ದರು. ಅಕ್ಕ ಸಾಕಿದ್ದ ಹಸು ಮರಿ ಹಾಕಲು ದಿನಗಳನ್ನು ಎಣಿಸತೊಡಗಿತ್ತು.
ಬಾಗಲಕೋಟ ಬಿಜಾಪುರ ಜಿಲ್ಲೆಗಳ ಅನೇಕ ಹಳ್ಳಿಗಳು ಜಲಾವೃತವಾದ ಸಮಯವದು. ಅದೇ ಸಮಯದಲ್ಲಿ ನಮ್ಮ ಭಾಗದ ಎಷ್ಟೋ ಸಣ್ಣ ರೈತರು ನೀರು ಕಂಡು ಬದುಕುವ ಆಸೆಯನ್ನು ಪೂರೈಸಿಕೊಳ್ಳತೊಡಗಿದ್ದರು. ನನ್ನ ತಂದೆಯೂ ಅಂತಹ ಆಶಾವಾದಿಗಳಲ್ಲಿ ಒಬ್ಬರು. ನನಗೆ ನೀರಿನ ಆವಾಂತರವನ್ನು ಕಂಡು ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಓದಿನ ನಿಮಿತ್ಯ ಬಿಜಾಪುರದಲ್ಲಿದ್ದೆನಲ್ಲ ಅಲ್ಲಿ ಅಲ್ಲಿಯ ಸ್ಥಿತಿಗತಿಯನ್ನು ಕಂಡು ಅತ್ತಿದ್ದು ಸಾಕಾಗಿತ್ತು. ಈಗ ನನ್ನ ಬಾವಿಯ ದಂಡೆಯಲ್ಲಿ ನಿಂತಿದ್ದೆ. ಬಾವಿ ತುಂಬಿ ಬಸುರಿ ಹೆಂಗಸಂತೆ ಕಾಣತೊಡಗಿತ್ತು. ಜಗತ್ತಿನ ಪರಿವೆಯಲ್ಲ ಮರೆತು ಹೋಯಿತು. ಅಂತೂ ನನ್ನ ತವರಿನ ಬಾವಿ ಮತ್ತೆ ನೀರಿನಿಂದ ತುಂಬಿತಲ್ಲ, ಮತ್ತೆ ನಮ್ಮ ಭೂಮಿತಾಯಿ ಹಸಿರಾಗಿ ನಿಲ್ಲುತ್ತಿದ್ದಾಳಲ್ಲ, ನಮ್ಮ ಹಟ್ಟಿಯಲ್ಲಿ ಗೋವುಗಳು, ಎತ್ತುಗಳು ಕರು ಮರಿಗಳು ಅಂಬಾ ಎನ್ನುತ್ತಿವೆಯಲ್ಲ ಅಂತ ಸಂತಸ ಹೃದಯದಲ್ಲಿ ಆವರಿಸಿತು. ಮೆಲ್ಲನೆ ಬಾವಿಯನ್ನು ಇಳಿಯತೊಡಗಿದೆ. ಬಾವಿಯ ಮೆಟ್ಟಿಲು ಮೂರುಭಾಗ ನೀರಿನಿಂದ ಮುಚ್ಚಿ ಹೋಗಿತ್ತು. ಮಳೆಯ ರಭಸಕ್ಕೆ ತೆರೆದು ಕೊಚ್ಚಿ ಹೋಗಿತ್ತು. ಮೆಟ್ಟಿಲುಗಳು ಸಪಾಟಾಗಿ, ದಾರಿ ಏಕೈಕ ಏರಿಯಂತಾಗಿತ್ತು. ಅಲ್ಲಲ್ಲಿ ಸುಣ್ಣಬುರುಳೆಯ ಹಳ್ಳುಗಳು ಕಾಲನ್ನು ಜಾರುವಂತೆ ಕಿಚಾಯಿಸುತ್ತಿದ್ದವು. ಬಾವಿಗೆ ಬಿದ್ದರೆ ಭಯವೇನೂ ಇರಲಿಲ್ಲ. ಜೊತೆಯಲ್ಲಿ ಅಣ್ಣ ಕಲಿಸಿದ ಈಜು ಇತ್ತು. ಅದೇ ಧೈರ್ಯದಿಂದ ದುಡುದುಡುನೇ ಬಾವಿಯಲ್ಲಿ ಇಳಿದೆ. ಸಾವಕ್ಕಾ ಬಾವ್ಯಾಗ ಇಳೀಬ್ಯಾಡ, ಬಾವಿ ಗ್ವಾಡಿ ಅದ್ರಾಗ್ಯಾವು… ಕಪ್ಪರಿಸ್ತೈತೆಬೇ… ಅಂತ ಅಣ್ಣ ಕಕ್ಕುಲತೆಯಿಂದ ಕೂಗಿಕೊಂಡು ಬಾವಿಯ ಕಡೆ ಓಡಿ ಬರುವ ಹೊತ್ತಿಗೆ, ನಾನು ಬೊಗಸೆಯಲ್ಲಿ ನೀರನ್ನೆತ್ತಿಕೊಂಡು ಮೊಗೆ ಮೊಗೆದು ಕುಡಿಯುತ್ತಲಿದ್ದೆ… ನನ್ನ ಆನಂದಭಾಷ್ಪ ಮುತ್ತಿನಂತೆ ಉದುರಿ ಬಾವಿಯ ನೀರಿನಲ್ಲಿ ಲೀನವಾಗುತ್ತಿರುವಂತೆಯೇ ಆ ಮುತ್ತುಗಳನ್ನು ಹಿಡಿಯಲು ಬಾವಿಯಲ್ಲಿದ್ದ ಪುಟ್ಟ ಪುಟ್ಟ ಮೀನುಗಳು ಗರಿ ಗೆದರಿ ಓಡಾಡತೊಡಗಿದ್ದವು.
ಜನ 21, 2011 @ 12:19:04
ತುಂಬಾ ಚೆನ್ನಾಗಿದೆ ..
ಜನ 21, 2011 @ 12:57:35
ಧನ್ಯವಾದಗಳು ಅಣ್ಣ.
ಜನ 21, 2011 @ 00:06:26
esht chanaag bardidira.. ishta aythu..
ಜನ 21, 2011 @ 10:31:43
Thank You Sushrutanna.
ಜನ 20, 2011 @ 13:26:19
Thank You Madam.
ಜನ 20, 2011 @ 12:07:05
Thank You Madam. Avadhiya Preetige tumba thanks.
ಜನ 20, 2011 @ 08:23:15
what a powerful narration Savi!!! ತುಂಬಾ ಇಷ್ಟವಾಯ್ತು
🙂
ಮಾಲತಿ ಎಸ್.