ಓದುಗ ಎಂಬ ಪೋಲಿಸ್

ಗಾಳಿ ಬೆಳಕು

gali5_thumbnail-1ನಟರಾಜ್ ಹುಳಿಯಾರ್

ನೀವು ಇತ್ತೀಚಿಗೆ ಬರೆದ ಕವಿತೆಗಳಲ್ಲಿ ಹಳೆಯ ರೊಚ್ಚು ಇಲ್ಲವಲ್ಲ? ಎಂದರು ಒಬ್ಬರು. ನಿಮ್ಮ ಕವಿತೆಗಳ ಬೆಂಕಿಯ ಗುಣ, ಬಡಿದೆಬ್ಬಿಸುವ ಗುಣ ಎಲ್ಲಿ ಮರೆಯಾಯಿತು? ಎಂದರು ಇನ್ನೊಬ್ಬರು. ನೀವು ಎಂ.ಎಲ್.ಸಿ ಆದಮೇಲೆ ನಿಮ್ಮ ಕಾವ್ಯ ತನ್ನ ಶಕ್ತಿ ಕಳೆದುಕೊಂಡಿದೆ ಎಂದು ಮತ್ತೊಬ್ಬರು ಹೇಳಿಕೆ ಕೊಟ್ಟರು.

ಅವರೆಲ್ಲ ಕನ್ನಡ ಅಧ್ಯಾಪಕರು, ರಿಫ್ರೆಶರ್ ಕೋರ್ಸ್ ಒಂದರಲ್ಲಿ ‘ಕವಿಯೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲಿತಕವಿ ಸಿದ್ಧಲಿಂಗಯ್ಯನವರು ಓದಿದ್ದ ಈಚಿನ ಕವಿತೆಗಳಿಗೆ ಆ ಅಧ್ಯಾಪಕರು ಪ್ರತಿಕ್ರಿಯಿಸುತ್ತಿದ್ದರು. ಅವತ್ತು ಸಿದ್ಧಲಿಂಗಯ್ಯವನವರು ಓದಿದ ಕವಿತೆಗಳು ಕೊಂಚ ಮೆಲುದನಿಯ, ಕವಿ ತನ್ನೊಳಗೇ ಮಾತಾಡಿಕೊಳ್ಳುತ್ತಿದ್ದ ಕವಿತೆಗಳಾಗಿದ್ದವು. ಅವುಗಳ ಜೊತೆಗೇ ಅವರು ಒಂದರೆಡು ಹಳೆಯ ಕವಿತೆಗಳನ್ನೂ ಓದಿದ್ದರು. ಆದರೆ ಅವನ್ನು ಹಿಂದಿನ ಆವೇಶದಲ್ಲಿ ಓದದೆ ಕೊಂಚ ಮೆಲುದನಿಯಲ್ಲಿಯೇ ಓದಿದ್ದರು.

books3

ಓದುಗರ ಪ್ರತಿಕ್ರಿಯಗಳನ್ನು ಕೇಳಿಸಿಕೊಂಡ ಸಿದ್ಧಲಿಂಗಯ್ಯ, ಒಂದು ಕಾಲಕ್ಕೆ ಹಸಿವು ಹಾಗೂ ಬಡತನ ನನ್ನ ತೀವ್ರವಾದ ಅನುಭವವಾಗಿತ್ತು. ಆಗ ಆ ಅನುಭವಕ್ಕೆ ತಕ್ಕ ಕವಿತೆಗಳನ್ನು ಬರೆದೆ. ಆದರೆ ಹಸಿವೊಂದೇ ಮುಖ್ಯ ಅನುಭವವಾಗದೇ ಇರುವ ನನ್ನ ಇಂದಿನ ಸ್ಥಿತಿಯಲ್ಲಿ ಎದುರಾಗುತ್ತಿರುವ ಹೊಸ ಅನುಭವ, ಕಾಳಜಿಗಳನ್ನಾಧಾರಿಸಿದ ವಸ್ತುಗಳನ್ನು ಕುರಿತು ಇವತ್ತು ಬರೆಯುತ್ತಿದ್ದೇನೆ ಅನ್ನಿಸುತ್ತೆ ಎಂದರು.

ಆದರೆ ಕವಿಯ ಬದಲಾದ ಇಮೇಜನ್ನು ಒಪ್ಪಲು ಆ ಓದುಗರು ಸಿದ್ಧರಿರಲಿಲ್ಲ.. ಕವಿ ಅಥವಾ ಲೇಖಕನೊಬ್ಬ ಬೆಳದಂತೆ ಅವನ ಆಸಕ್ತಿಯ ಕೇಂದ್ರಗಳು ಹಾಗೂ ವಸ್ತುಗಳು ಕೂಡ ಬದಲಾಗುತ್ತಿರುತ್ತವೆ ಎಂಬ ಅಂಶವನ್ನು ಪರೀಕ್ಷಿಸಿ ನೋಡಲು ಆ ಸಾಹಿತ್ಯದ ಅಧ್ಯಾಪಕರುಗಳು ತಯಾರಿರಲಿಲ್ಲವೆಂಬುದು ಅಚ್ಚರಿಯುಂಟುಮಾಡಿತ್ತು. ಸೂಕ್ತ ವಿಮರ್ಶಾ ಪರಿಕರಗಳ ಮೂಲಕ ಸಿದ್ಧಲಿಂಗಯ್ಯನವರ ಅಂದಿನ ಕಾವ್ಯ ಮತ್ತು ಇಂದಿನ ಕಾವ್ಯವನ್ನು ಹೋಲಿಸಿ ಅವರ ಈಚಿನ ಕಾವ್ಯ ಸತ್ವ ಕಳೆದುಕೊಂಡಿದೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು. ‘ಹೊಲೆ ಮಾದಿಗರ ಹಾಡು’ ಬರೆದಾಗ ಅದನ್ನು ಓದಿ ಬೆಳೆದ ಅವರ ವಾರಗೆಯ ಅಧ್ಯಾಪಕರು ಅಲ್ಲಿಂದಾಚೆಗೆ ಬೆಳೆಯಲು ನಿರಾಕರಿಸಿದಂತಿತ್ತು.

ಬಾಲ್ಯದ ಶೀಶುಗೀತೆ ಲಯಗಳನ್ನೇ ತಲೆಯಿಟ್ಟುಕೊಂಡು ಅಂಥದನ್ನು ಮಾತ್ರ ಕಾವ್ಯವನ್ನು ಮುಗ್ಧರಂತೆ ಆ ಅಧ್ಯಾಪಕರೂ ಪ್ರತಿಕ್ರಿಯಿಸುತ್ತಿದ್ದರು. ಅಂದರೆ ಹದಿಹರೆಯದಲ್ಲಿ ತಾವಿಟ್ಟುಕೊಂಡ ಕಾವ್ಯ ಕಲ್ಪನೆಯ ಮೂಲಕವೇ ಇವತ್ತಿನ ಸಿದ್ಧಲಿಂಗಯ್ಯನವರನ್ನೂ ನೋಡಲೆತ್ನಿಸುತ್ತಿದ್ದರು.

ಲೇಖಕನೊಬ್ಬ ತರುಣನಾಗಿದ್ದಾಗ ಬರೆದದ್ದನ್ನೇ ಸದಾ ತಲೆಯಲ್ಲಿಟ್ಟುಕೊಂಡು ಅವನ ಎಲ್ಲ ಕವಿತೆಗಳನ್ನೂ ನೋಡತೊಡಗಿದರೆ ಏನಾಗುತ್ತದೆ ಎಂಬ ಬಗ್ಗೆ ಇಂಗ್ಲೀಷ್ ಕವಿ ಆಡೆನ್ ಮಾಡುವ ವಿಶ್ಲೇಷಣೆ ಕುತೂಹಲಕರವಾಗಿದೆ. ಆಡೆನ್ ಪ್ರಕಾರ ತರುಣ ಲೇಖಕನ ಬರವಣಿಗೆ ಕೆಲವು ಸಲ ಅವನ ಖಾಸಗಿ ವ್ಯಕ್ತಿತ್ವಕ್ಕೆ ಒಂದು ಚಿಕಿತ್ಸಕ ಕ್ರಿಯೆಯಾಗಿರುತ್ತದೆ. ತಾರುಣ್ಯದ ಘಟ್ಟದ ಕೆಲವು ನಿರ್ದಿಷ್ಟ ಭಾವನೆಗಳು, ಯೋಚನೆಗಳು ಅವನನ್ನು ತೀವ್ರವಾಗಿ ಹಿಡಿದುಬಿಟ್ಟಿರುತ್ತವೆ. ಹೀಗಾಗಿ ಅವನು ತನ್ನ ಆಳದ ಹಾಗೂ ನಿಜವಾದ ಆಸಕ್ತಿಗಳು, ಕಾಳಜಿಗಳು ಯಾವುವು ಅಂಬುದನ್ನು ಹುಡುಕಿಕೊಳ್ಳುವ ಮುನ್ನ ಆ ತಾರುಣ್ಯದ ಘಟ್ಟದ ತೀವ್ರ ಭಾವಗಳಿಗೆ ಶರಣಾಗುತ್ತಾನೆ; ತನ್ಮೂಲಕ ಅವುಗಳಿಂದ ಶಾಶ್ವತವಾಗಿ ಬಿಡಿಸಿಕೊಳ್ಳಲೆತ್ನಿಸುತ್ತಾನೆ. ಅವನ್ನು ಉಚ್ಛಾಟಿಸಲೆತ್ನಿಸುತ್ತಾನೆ. ಈ ಘಟ್ಟದಲ್ಲಿ ಕೆಲ ಬಗೆಯ ಭಾವನೆಗಳನ್ನು ಉಚ್ಛಾಟಿಸಲು ಅವನು ಬರೆದದ್ದು ಅವನ ವಾರಗೆಯವರಿಗೆ, ಸಮಕಾಲೀನರಿಗೆ ಆಕರ್ಷಕವಾಗಿ ಕಾಣುತ್ತದೆ. ಅವರ ಭಾವನೆಗಳನ್ನೂ ಈ ಕವಿತೆಗಳು ವ್ಯಕ್ತಪಡಿಸುತ್ತವೆಯೆಂಬುದು ಈ ಆಕರ್ಷಣೆಗೆ ಮುಖ್ಯ ಕಾರಣ. ಆದರೆ ಆ ಭಾವಗಳಿಂದ ಬಿಡುಗಡೆಗೊಳ್ಳಲು ಕವಿ ಬರೆಯುತ್ತಿದ್ದರೆ, ಅವನ ಸಮಕಾಲೀನ ಓದುಗರು ಆ ಭಾವಗಳನ್ನು ಮೆಲುಕು ಹಾಕುತ್ತಾ ಆನಂದಿಸುತ್ತಿರುತ್ತಾರೆ. ಆದ್ದರಿಂದಲೇ ಆ ಕ್ಷಣಕ್ಕೆ ಕವಿ ತಮ್ಮೆಲ್ಲರ ವಕ್ತಾರನೆಂಬಂತೆ ಆ ಸಮಕಾಲೀನರಿಗೆ ಕಾಣತೊಡಗುತ್ತಾನೆ. ಆದರೆ ಕಾಲ ಉರುಳುತ್ತದೆ. ತನ್ನನ್ನು ಆವರಿಸಿದ್ದ ವಿಷದಿಂದ ಮುಕ್ತನಾದ ಲೇಖಕ ತನ್ನ ಆಳದ ಹಾಗೂ ನಿಜವಾದ ಆಸಕ್ತಿಗಳತ್ತ ಹೊರಳಲೆತ್ನಿಸುತ್ತಾನೆ. ಆದರೆ ಅವನ ಅಭಿಮಾನಿಗಳಿಗೆ ಇವುಗಳಲ್ಲಿ ಆಸಕ್ತಿಯಿಲ್ಲ. ಅವರು ಹಿಂದೆಂದೂ ಆ ಬಗ್ಗೆ ಆಸಕ್ತಿ ತಳೆದವರೂ ಅಲ್ಲ. ಆದ್ದರಿಂದಲೇ ತನ್ನ ತಾರುಣ್ಯದಿಂದಾಚೆಗೆ ಬದಲಾದ ಲೇಖಕನನ್ನು ಅವರು ‘ದ್ರೋಹಿ!’ ಎಂದು ಜರಿಯತೊಡಗುತ್ತಾರೆ.

ಶುರುವಿನಲ್ಲಿ ಬರೆದಂತೆ ಈಗಲೂ ಯಾಕೆ ಬರೆಯುತ್ತಿಲ್ಲ ಎಂದು ಕವಿಯನ್ನು ಜಗ್ಗಿಸಿ ಕೇಳುವ ಓದುಗನ ಮನಃಸ್ಥಿತಿಯನ್ನು ಆಡೆನ್ ಗ್ರಹಿಸುವ ರೀತಿ ಇದು. ನನ್ನ ಟಿಪ್ಪಣಿಯ ಉದ್ದೇಶ, ಲೇಖಕನೊಬ್ಬ ಬದಲಾದಂತೆ ಅವನ ಸಾಹಿತ್ಯದ ವಸ್ತುಗಳು ಹಾಗೂ ಮಂಡನೆಯ ರೀತಿಯೂ ಬದಲಾಗುವುದನ್ನು ಚರ್ಚಿಸುವುದೇ ಹೊರತು ಲೇಖಕನೊಬ್ಬ ತನ್ನ ಖಾಸಗಿ ಜೀವನದಲ್ಲಿ ಪತನಗೊಳ್ಳುವುದನ್ನು ಸಮರ್ಥಿಸಿಕೊಳ್ಳುವುದಲ್ಲ. ತನ್ನ ಒಂದು ಘಟ್ಟದ ಕಾವ್ಯವ್ಯಕ್ತಿತ್ವದಿಂದ ಇನ್ನೊಂದು ಘಟ್ಟದ ಕಾವ್ಯವ್ಯಕ್ತಿತ್ವಕ್ಕೆ ಕವಿಯೊಬ್ಬ ಚಲಿಸುವಾಗ ಎದುರಾಗುವ ಸವಾಲುಗಳ ಒಂದು ಮುಖವನ್ನು ಅರಿಯುವುದಷ್ಟೇ ಈ ಟಿಪ್ಪಣಿಯ ಉದ್ದೇಶ. ಸಾಮಾನ್ಯವಾಗಿ ಓದುಗ ಅಥವಾ ಸಹೃದಯನ ಮಹತ್ವವನ್ನು ಕುರಿತೇ ಕವಿಗಳು ಹಾಡಿಹೊಗಳಿರುವುದರಿಂದ ಓದುಗ ಸೃಷ್ಠಿಸುವ ದಿಗ್ಭಂಧನದ ಉಸಿರುಕಟ್ಟಿಸುವ ಮುಖ ಕುರಿತು ಇಲ್ಲಿ ಚರ್ಚಿಸಲೆತ್ನಿಸಿದ್ದೇನೆ.

ತಮ್ಮ ಹಳೆಯ ಇಮೇಜಿನಿಂದ ಹೊಬರಲೆತ್ನಿಸುವ ಎಲ್ಲ ಲೇಖಕರೂ ಒಂದು ಸವಾಲನ್ನು ಎದುರಿಸುತ್ತಿರುತ್ತಾರೆ ಎನ್ನಿಸುತ್ತದೆ. ಅದೇನೆಂದರೆ ತಮ್ಮ ಹಳೆಯ ಓದುಗವರ್ಗವನ್ನು ರೂಪಾಂತರಿಸುವುದು ಅಥವಾ ಹೊಸ ಓದುಗವರ್ಗವನ್ನು ಸೃಷ್ಟಿಸಿಕೊಳ್ಳುವುದು. ಇದು ಬಾಯಲ್ಲಿ ಹೇಳುವಷ್ಟು ಸುಲಭವಲ್ಲ. ಹಾಗೆಯೇ ಓದುಗರ ಒತ್ತಾಯ ಸದಾ ಲೇಖಕನನ್ನು ದಾರಿ ತಪ್ಪಿಸುತ್ತದೆ ಎಂದು ತೀರ್ಮಾನಿಸುವುದು ಕೂಡ ಅಷ್ಟು ಸರಿಯಲ್ಲ ಎಂಬುದನ್ನೂ ಇಲ್ಲೇ ಹೇಳಿಬಿಡಬೇಕು. ಶೇಕ್ಸ್ಪಿಯರ್ ತನ್ನ ನಾಟಕಗಳಲ್ಲಿ ಜನಪ್ರಿಯ ಅಂಶಗಳನ್ನು ತರುತ್ತಿದ್ದುದು ಪ್ರಾಯಶಃ ಪ್ರೇಕ್ಷಕರ ಸುಪ್ತ ಒತ್ತಾಯದ ಮೇರೆಗೇ. ಆದರೆ ಅವೆಲ್ಲವನ್ನೂ ಜೀವನದ ಸತ್ಯ ಹುಡುಕಲು ಬಳಸುವ ಕಲೆ ಶೇಕ್ಸ್ಪಿಯರ್ ಗೆ ಕರಗತವಾಗಿತ್ತು. ನಾವು ಇವತ್ತು ದೊಡ್ಡ ತಾತ್ವಿಕ ಚಿಂತನೆಗಳೆಂದು ಚರ್ಚಿಸುವ ಸಂಗತಿಗಳನ್ನೆಲ್ಲ ತನ್ನ ಅನಕ್ಷರಸ್ಥ ಪ್ರೇಕ್ಷಕರ ಹತ್ತಿರಕ್ಕೂ ಒಯ್ಯುತ್ತಿದ್ದ ಶೇಕ್ಸ್ಪಿಯರ್ ನಾನೇರುವೆತ್ತರಕೆ ನೀನೂ ಏರು ಎಂದು ಓದುಗನನ್ನು ಕರೆದೊಯ್ಯುತ್ತಿದ್ದ.

ಆದರೆ ಈ ಬಗೆಯಲ್ಲಿ ಓದುಗನ ದಿಗ್ಭಂಧನವನ್ನು ಮೀರಲು ಎಲ್ಲರೂ ಶೇಕ್ಸ್ಪಿಯರ್ ಗಳಾಗಿರಬೇಕಿಲ್ಲ ಇಂಥ ಭಾಗ್ಯವಿರದ ಎಷ್ಟೋ ಲೇಖಕರು ತಮ್ಮ ಮೊದಲ ಕಾದಂಬರಿಯಿಂದ ನೂರನೆಯ ಕಾದಂಬರಿಯವರೆಗೂ ಒಂದೇ ಶೈಲಿಯನ್ನು (ಅದನ್ನು ಶೈಲಿ ಎನ್ನುವುದಾದರೆ!) ಯಾಕೆ ಸವೆಸುತ್ತಾರೆ ಎಂಬ ಪ್ರಶ್ನೆಗೆ ಉತ್ತರವಾಗಿ ಒಂದು ಚಿತ್ರ ಕಣ್ಣಮುಂದೆ ಬರುತ್ತದೆ: ನೂರು ಕಾದಂಬರಿಗಳನ್ನು ಬರೆದ ಲೇಖಕನೊಬ್ಬ ಸರಳುಗಳ ಹಿಂದೆ ಬರೆಯುತ್ತಾ ಕೂತಿದ್ದಾನೆ. ಸರಳಿನ ಈ ಬದಿಗೆ ಅವನೆದುರು ಅಡ್ಡಾಡುತ್ತಿರುವ ಪೋಲಿಸನೊಬ್ಬ ಅವನು ಹೀಗೇ ಬರೆಯಬೇಕೆಂದು ಸೂಚಿಸುವಂತೆ ಲಾಠಿ ತಿರುವುತ್ತಿದ್ದಾನೆ. ಆ ಪೋಲಿಸ್ ಇನ್ಯಾರೂ ಅಲ್ಲ, ಅವನು ಆ ಲೇಖಕನ ಖಾಯಂ ಓದುಗ.

ತನಗೆ ಖಾಯಂ ಓದುಗ ಬಳಗವಿದೆ ಎಂದು ಸಡಗರಪಡುವ ಲೇಖಕನ ಸೆರೆಮನೆಗೆ ಎಷ್ಟು ಭಯಾನಕವಾದ್ದೆಂಬುದು ಹೊಳೆಯಿತೆ?

(ಫೆಬ್ರವರಿ 23, 2000)

3 ಟಿಪ್ಪಣಿಗಳು (+add yours?)

 1. kirankumari
  ಜನ 18, 2011 @ 12:38:10

  sir ,anubhavada maathu sathya. haage, shyliyannu ulisikondu hogale bekennuva haTa kooda ashtu olleyadalla. barahagarana:la varthamana sthithi..Athana or akeya shyliyannu badalisuvanthe sada prerane needuthiruthade. kavyavagali, lekhanavagali..barahada shyli badalagabeke horathu..Ashaya matthu baddathe badalaaguvudilla yembudu nanna abhipraya. shyli matthu abhivyakthi prakaara aaya kaalaghattavannu prathinidhisutthade allave sir..

  kiran kumari.s.

  ಉತ್ತರ

 2. shankar
  ಫೆಬ್ರ 27, 2009 @ 16:09:24

  neevu heLuvadu nija. Hageye tanage kayam odugariddare annuva lekhaka yeStu asahayakano tanna kayam lekhaka andu beeguva oduganoo obba jailu vasiye.

  ಉತ್ತರ

 3. kaviswara shikaripura
  ಫೆಬ್ರ 25, 2009 @ 18:03:07

  huliyar kuda thamma lekhana shyli badalisikondiruvudu samadhanada viahaya.. adare baravanigaya jothege kaviya niluvu-ashayagalu badalaagadirali…

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: