ತಲೆದಿಂಬಿನಡಿಯ ಅಸ್ಪಷ್ಟ ಪತ್ರ

-ಪೂರ್ಣಿಮಾ ಭಟ್ಟ, ಸಣ್ಣಕೇರಿ
Teddington, London, United Kingdom

ಮೌನ-ಮುಗುಳು-ಮಾತು

ಇಷ್ಟೆಲ್ಲ ಅತಿರೇಕಕ್ಕೆ ಹೋಗುತ್ತದೆ ಎಂದು ನನಗೆ ಎಲ್ಲಿ ಗೊತ್ತಿತ್ತು? ಹದಿನೈದು ವರ್ಷಗಳಿಂದ ಅದೇ ಮುಖ, ಅದೇ ಸ್ವಭಾವ, ಅದೇ ನಗು, ಅದೇ ಮೈ – ಕೊನೆಗೆ ಮೈಥುನವೂ ಅದೇ… ನನಗೆ ಬೇಜಾರಾದದ್ದು ತಪ್ಪೇ? ನನ್ನ ಸ್ವಭಾವವೇ ಅಂಥದ್ದು. ಕೆಲಸ ಬದಲಿಸುತ್ತ ಬಂದೆ. ಮನೆ ಐದು ವರ್ಷಕ್ಕೆ ಬೇಜಾರಾಯ್ತು. ಮಕ್ಕಳೂ ಬೋರಾಗಬಹುದೆಂದು ಆ ಗೋಜಿಗೆ ಹೋಗಲಿಲ್ಲ. ಇನ್ನು ಸಂಬಂಧ – ಅದು ಹಳಸಲು ಕಾರಣಗಳು ಬೇಕಿರಲಿಲ್ಲ – ಏನಂತಿ? ಹಾಗೆ ನೋಡಿದರೆ ಹದಿನೈದು ವರ್ಷ ನನ್ನ ಮಟ್ಟಿಗೆ ಸುಲಭದ್ದೇನೂ ಆಗಿರಲಿಲ್ಲ.

ಮೊದಲೆರಡು ವರ್ಷದ ಸಂಭ್ರಮದಲ್ಲಿ ಎಲ್ಲವೂ ಚೆಂದವಿತ್ತು. ಬೆಚ್ಚಗಿನ ಮುತ್ತು ಕೆನ್ನೆಯ ಮೇಲೆ ಬಿದ್ದಾಗ ಚಳಿ ಚಳಿಯ ಮುಂಜಾವು ಅಸಹನೀಯ ಅನ್ನಿಸಲೇ ಇಲ್ಲ. ಶೌಚದ ಸಮಯದಲ್ಲಿ ತೆರೆದಿಟ್ಟ ಬಾಗಿಲೂ ನಮ್ಮಿಬ್ಬರ ಜಗಳಕ್ಕೆ ಕಾರಣವಾಗಬಹುದು ಎಂದುಕೊಂಡಿರಲಿಲ್ಲ. ಹಾಸಿಗೆಯ ಹೊದಿಕೆಯನ್ನು ಪ್ರತಿದಿನ ಸರಿಮಾಡುವುದು ಜಗತ್ತಿನ ಅತೀ ಕಷ್ಟದ ಕೆಲಸ ಎನ್ನಿಸಿದ್ದು ಯಾವಾಗ? ಡಿನ್ನರಿನ ಸಮಯದಲ್ಲಿ ಅಗಿಯುವಾಗ ಶಬ್ದಮಾಡಬೇಡ ಎಂದಿದ್ದಕ್ಕಾಗಿ ರಾತ್ರಿಯಿಡೀ ಮಾತನಾಡದೇ ಇರುವ ದುರ್ಬುದ್ಧಿ ನನಗೇಕೆ ಬಂತು? ತುಂಬ ತಲೆ ನೋವೆಂದು ಮಲಗಿದ ನನಗೆ ಮಾತ್ರೆ ನುಂಗಿಸಿ, ಹಣೆ ನೇವರಿಸಿ ಹೋದರೂ – ಹೊದಿಕೆ ಹೊಚ್ಚದೆ ಹಾಗೇ ಹೋದೆ ಎಂದು ಜಗಳ ತೆಗೆದಿದ್ದು ಯಾಕೆ?

ಎರಡು ವರ್ಷದ ಹಿಂದಿನ ಮಾತೇನೋ. ಅದೊಂದು ಚಳಿಗಾಲದ ಮುಂಜಾವು. ಸ್ನಾನ ಮಾಡುವ ಮುನ್ನ ಸುಮ್ಮನೇ ಬಂದ ಮಾತದು. ತಲೆ ಕೂದಲೆಲ್ಲಾ ಬೆಳ್ಳಗಾಗಿದೆ, ಕಲರಿಂಗ್ ಮಾಡಿದರೆ ಇನ್ನಷ್ಟು ಸೆಕ್ಸಿಯಾಗಿ ಕಾಣ್ತೀ ಎಂದು ನೀ ಹೇಳಿದ್ದಲ್ಲವೇ? ನನ್ನ ಸಿಟ್ಟು ನೆತ್ತಿಗೇರಿತ್ತು. ಸೆಕ್ಸಿಯಾಗಿ ಕಾಣುವ ಸೂಳೆಯರಿಗೇನು ಕಮ್ಮಿ ಈ ಊರಲ್ಲಿ? ಅವರನ್ನು ಒಂದು ಕೈ ನೋಡು ಎಂದು ಕಿರುಚಿದ್ದೆ ನಾನು ಅಲ್ಲವೇ? ಮೊದಲೇ ಜಾಸ್ತಿ ಮಾತಾಡದ ನೀನು ಪೂರ್ತಿ ಮಾತು ಬತ್ತಿದವನಂತೆ ಕಾಣುತ್ತಿದ್ದೆ. ಸಂಜೆ ಊರಲ್ಲಿನ ಅಂಗಡಿಗಳನ್ನೆಲ್ಲ ತಡಕಾಡಿ ಮನೆಗೆ ಬಂದಾಗ ರಾತ್ರಿ. ನನ್ನ ಎದುರ್ಗೊಂಡಿದ್ದೇ ಡೈನಿಂಗ್ ಟೇಬಲ್ ಮೇಲಿನ ಮೂರು ಖಾಲಿ ವೈನ್ ಬಾಟಲ್‌ಗಳು. ಜಾಸ್ತಿ ಮಾತು ಬೇಕಿರಲಿಲ್ಲ. ನಂತರ ಮೂರು ದಿನದ ಮೌನ. ನನ್ನ ಪಾಡಿನ ಊಟ, ನಿದ್ದೆ ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತಲ್ಲ – ಘಟನೆಯನ್ನು ಪೂರ್ತಿ ಮರೆತಂತೆ ಇದ್ದೆ. ನಿನ್ನೊಂದಿಗಿನ ಸಖ್ಯ, ಮಾತು ಬೇಕೆನಿಸಲೇ ಇಲ್ಲ. ನೀ ಮಾತ್ರ ಊಟ, ನಿದ್ದೆ ಎಲ್ಲ ಮರೆತಿದ್ದೆ. ನಿನ್ನ ಬಡಕಲು ಶರೀರ ತೀರ ಗಾಳಿಯಲ್ಲಿ ಓಲಾಡುವಂತಿತ್ತು. ಆರನೇ ದಿನಕ್ಕೆ ಬೊಕೆಯೊಂದಿಗೆ ಬಂದ ನೀನು- ಇಷ್ಟು ದಿನ ಸರಿಯಾಗಿ ಮಾತಾಡದೇ ಇದ್ದಿದ್ದಕ್ಕೆ ಕ್ಷಮಿಸು ಎಂದೆ. ಹದಿನೈದು ವರ್ಷದ ನಮ್ಮ ಸಖ್ಯದಲ್ಲಿ ಇಷ್ಟುದ್ದದ ಜಗಳ ಯಾವುದೂ ಇದ್ದಿರಲಿಕ್ಕಿಲ್ಲ. ಯಾಕಾದರೂ ರಾಜಿ ಮಾಡಿಕೊಂಡೆನೋ ಎಂದು ನಂಗನ್ನಿಸಿತ್ತು ಎಂದರೆ ನಂಬ್ತೀಯಾ?

ಈ ಆರು ದಿನಗಳಲ್ಲಿ ಆಫೀಸಿನ ಯಂಗ್ ಕಲೀಗ್‌ಗಳೊಂದಿಗೆ ಫ್ಲರ್ಟ್ ಮಾಡಲು ಮುಜುಗರವಾಗ್ತಾ ಇರಲಿಲ್ಲ. ಟ್ರಾಫಿಕ್ ಸಿಗ್ನಲ್ಲಿನಲ್ಲಿ ಕಾರ್ ನಿಲ್ಲಿಸಿದಾಗ ಪಕ್ಕದ ಬಿಎಂಡಬ್ಲ್ಯೂ ಕಾರಿನಲ್ಲಿ ಕೂತ ಎಳೆಯ ಸಿಂಗಲ್ ಇರಬಹುದೇ ಎನ್ನಿಸುತ್ತಿತ್ತು. ಮೀಟಿಂಗ್‌ನಲ್ಲಿ ಲಾಭಾಂಶದ ಬಗ್ಗೆ ಮಾತಾಡುತ್ತಿದ್ದ ಕಂಪನಿ ಸೆಕ್ರೇಟರಿಯ ಸೊಂಟದ ಕೆಳಗೆ ಹರಿದ ಕಣ್ಣು ಅಲ್ಲೇ ನಿಂತುಹೋಯ್ತು ಗೊತ್ತಾ? ರಾಜಿಯಾದ ಮಾರನೆಯ ದಿನದಿಂದ ಇದೆಲ್ಲ ಪ್ರಯತ್ನಪಟ್ಟು ನಿಲ್ಲಿಸಿದೆ. ನೀ – ನನ್ನ ಮೊದಲಿಗಿಂತ ಹೆಚ್ಚು ಪ್ರೀತಿಸುತ್ತಿದ್ದಿ ಎನ್ನಿಸತೊಡಗಿ ಸ್ವಲ್ಪ ಭಯ, ಕಿರಿಕಿರಿ ಎಲ್ಲ ಆಯ್ತು. ಅದಕ್ಕೇ ಮನೆಗೆ ಬರುವಾಗ ಬೇಕೆಂತಲೇ ತಡ ಮಾಡಲು ಶುರು ಮಾಡಿದೆ. ಸಿಂಕಿನಲ್ಲಿ ನೀ ಎಸೆದ ಪುಟಾಣಿ ಸ್ಪೂನ್ ನೆವ ಮಾಡಿಕೊಂಡು ಕಿತ್ತಾಡಿದೆ. ಎಂದೋ ಮುಗಿದ ಅಧ್ಯಾಯದ ಪಾತ್ರಧಾರಿಯೊಬ್ಬನ ಮಾತು ಬೇಕೆಂತಲೇ ತೆಗೆದೆ. ಟೀ ಟೇಬಲ್ ಮೇಲೆ ಕಾಲಿಡುವುದು ನಿಷಿದ್ಧ ಎಂಬ ಸಿಲ್ಲಿ ರೂಲ್ ಮಾಡಿದೆ. ಈ ಸಂಬಂಧ ಹಳಸುತ್ತಿದೆ ಎಂದು ಮನಸ್ಸಿನಲ್ಲೇ ಖಾತ್ರಿ ಮಾಡಿಕೊಳ್ಳತೊಡಗಿದೆ. ಇದೆಲ್ಲ ಯಾಕೆ?

ನಲವತ್ತರ ನಂತರ ಹೊಸ ಹರೆಯವಂತೆ. ಸ್ವಲ್ಪ ತಡವಾಗಿ ಹರೆಯ ಬಂದಂತಿದೆ. ನಲ್ವತೈದು ನನಗೀಗ. ಆದರೆ ನಿಲ್ಲದ ಬಯಕೆ. ಕಾಡುವ ಬಯಕೆ. ಕಾಡು ಬಯಕೆ. ಬಯಲಾಗುವ ಬಯಕೆ. ಬತ್ತದ ಬಯಕೆ. ಜಿಮ್ಮಿನಲ್ಲಿ – ಈಜಿನಲ್ಲಿ ದುಡಿಸಿದ, ಮಾಟವಾಗಿಸಿದ ಈ ಮೈಯನ್ನ ಹದ ಮಾಡಲು ಎಳೆಯನೊಬ್ಬನ ಬಯಕೆ ಶುರುವಾದದ್ದು ಯಾವಾಗ? ನೀನು ತೀರ ಪೀಚು ಅನ್ನಿಸತೊಡಗಿದ್ದು ಎಂದಿನಿಂದ? ಬೆಳಗ್ಗೆ – ಡ್ರೈವ್ ವೇಯಿಂದ ಕಾರು ಹೊರಗೆಳೆದು ಕ್ರಾಸ್ ರೋಡಿನಲ್ಲಿ ನಿಂತಾಗ ಹಿಂದೆ ಬಂದ ಕಾರು ಆಫೀಸಿನ ತಿರುವಿನವರೆಗೂ ಸಾಥ್ ಕೊಟ್ಟಾಗ ಮಿರರ್ರ್‌ನಲ್ಲಿ ಹಿಂದಿರುವ ಹುಡುಗನ ಮುಖವನ್ನು ಮತ್ತೆ ಮತ್ತೆ ನೋಡುವಂಥದ್ದೇನಿತ್ತು? ಅದಕ್ಕೇ ನಿನ್ನ ಕೇಳಿದ್ದು – ಹದಿನೈದು ವರ್ಷಗಳಿಂದ ಅದೇ ಮುಖ, ಅದೇ ಸ್ವಭಾವ, ಅದೇ ನಗು, ಅದೇ ಮೈ – ಕೊನೆಗೆ ಮೈಥುನವೂ ಅದೇ… ನನಗೆ ಬೇಜಾರಾದದ್ದು ತಪ್ಪೇ?

ಗಾರ್ಡನ್ನಿನಲ್ಲಿ ಕೂತು ಅರ್ಧ ಗಂಟೆ ನಿನ್ನ ಹಳೆಯ ಕಲೀಗ್ ಒಬ್ಬಳೊಡನೆ ಮಾತಾಡಿದೆ ಎನ್ನುವ ನೆವಕ್ಕಾಗಿ ನಿನ್ನೊಂದಿಗೆ ಕಿತ್ತಾಡಿ ಈ ಹೊಟೇಲಿನಲ್ಲಿ ಬಂದುಳಿದು ಈಗಾಗಲೇ ಮೂರು ವಾರ. ಇನ್ನೂ ಎಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಮೊದಲ ವಾರದಲ್ಲಿ ಮೂರು ಸಲ ರಾಜಿಗಾಗಿ ಬಂದ ನಿನ್ನ ಮುಖಕ್ಕೇ ಬಾಗಿಲು ಬಡಿದ ಮೇಲೆ ನೀನೂ ತಟಸ್ಥನಾಗಿದ್ದಿ. ಈಗೊಂದು ವಾರದಿಂದ ಹರೆಯವೆಲ್ಲ ಹರಿದುಹೋದಂತಿದೆ. ಎಳೆಯರನ್ನು ಆಸೆಗಣ್ಣಲ್ಲಿ ನೋಡಲು ನಾನೇನು ಹದಿನೆಂಟರ ವಯಸ್ಸಿನವಳಾ ಎನ್ನಿಸತೊಡಗಿದೆ. ನಿನಗಾದರೂ ನನ್ನ ಬಿಟ್ಟರೆ ಇನ್ಯಾರು ಎಂದು ನನ್ನಷ್ಟಕ್ಕೇ ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಮೈಮೇಲೆ ಎಸೆದು ಮಲಗುವ ಕಾಲುಗಳೀಗ ಮೊಂಡಾಟ ಹೂಡಿ ತಣ್ಣಗಾಗಿಬಿಟ್ಟಿವೆ – ಯಾವ ಬೆಂಕಿಯೂ ನಮ್ಮನ್ನು ಬಿಸಿ ಮಾಡಲು ಸಾಧ್ಯವಿಲ್ಲ ಎಂಬ ಹಠ ಬೇರೆ. ನಾ ನಿನಗಿಟ್ಟ ಹೆಸರುಗಳನ್ನೆಲ್ಲ ಒಂದೊಂದಾಗಿ ಕರೆಯಬೇಕೆನಿಸಿದೆ. ಈ ಒಂಟಿ ಅಲೆತ ಅಂದುಕೊಂಡಿದ್ದಕ್ಕಿಂತಲೂ ಬೇಗ ಬೋರಾಗುತ್ತಿದೆ. ನಾನಾಗಿ ನಿನ್ನ ಬಳಿ ಬರಲು ಅವಮಾನವೋ, ಅನುಮಾನವೋ, ಅಭಿಮಾನವೋ ಏನೋ ಒಂದು. ಹದಿನೈದು ವರ್ಷಗಳ ನಮ್ಮ ಸಖ್ಯ -ನನ್ನಲ್ಲಿದ್ದ ಶರಣಾಗತ ಗುಣವನ್ನೇ ನುಂಗಿಬಿಟ್ಟಿದೆ ನೋಡು. ನೀ ಬರುವವರೆಗೆ ಕಾಯುತ್ತೇನೆ – ವಾರ, ತಿಂಗಳು, ವರ್ಷ ಹೀಗೆ… ಈ ಬಾರಿ ಮಾತ್ರ ಪ್ರಶ್ನೆಯೂ ನೀನೆ, ಉತ್ತರವೂ ನೀನೆ!

1 ಟಿಪ್ಪಣಿ (+add yours?)

  1. Poornima
    ಜನ 15, 2011 @ 21:08:25

    Thanks Avadhi!

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: