‘ಹಾ! ಮಂಗಳೂರಿನವನೆಯೋ..ಸರಿ..ನಿರ್ದೇಶನ ಕಲಿಯುತ್ತಿದ್ದೀಯೋ ಸರಿ..’

ಗುರುವರ್ಯರಿಗೆ ಒಂದು ನುಡಿನಮನ

-ಅಭಯಸಿಂಹ

Abhaya Talkies

ಶಬ್ದಗಳಲ್ಲಿ ಹಿಡಿದಿಡಲಾರದ್ದನ್ನು ವಾಕ್ಯದಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿದ್ದೇನೆ ನಾನು. ಮೂರು ದಿನದಿಂದ ತುಡಿಯುತ್ತಿದ್ದರೂ ಇಂದು ಬರೆಯಲು ಆರಂಭಿಸಿದ್ದೇನೆ. ಜನವರಿ ಹತ್ತನೇ ತಾರೀಕಿನಂದು ಶಿಕಾರಿ ಚಿತ್ರದ ಸಂಕಲನ ಮಾಡುತ್ತಾ ಕುಳಿತಿದ್ದಾಗ ಪ್ರಾಥಸ್ಮರಣೀಯರಾದ ಗುರು ಎಸ್. ರಾಮಚಂದ್ರರ ನಿಧನದ ಸುದ್ದಿ ಬಂದಪ್ಪಳಿಸಿತು. ಅದೇ ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದು ತಕ್ಷಣ ಅತ್ತ ಹೊರಟೆ. ಮರುದಿನ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ನೀವೂ ಓದಿರಬಹುದು. ಅವರ ವೃತ್ತಿಜೀವನದ ಸಾಧನೆಗಳನ್ನು ನೀವು ಈಗಾಗಲೇ ತಿಳಿದಿರಬಹುದು. ಆದರೆ ಇವೆಲ್ಲವಕ್ಕಿಂತ ಮೀರಿ ಅವರೊಡನೆ ನನಗಿದ್ದ ಸಂಬಂಧದ ಕುರಿತಾಗಿ ಬರೆಯಲು ಹೊರಟಿದ್ದೇನೆ ಇಲ್ಲಿ.

ನಾನು ಕನ್ನಡದಲ್ಲಿ ಸಧಬಿರುಚಿಯ ಚಿತ್ರವನ್ನು ಮೊದಲು ನೋಡಿದ್ದೆಂದರೆ ಅದು ಗಿರೀಶ್ ಕಾಸರವಳ್ಳಿಯವರ ಚಿತ್ರ ಘಟಶ್ರಾದ್ಧ. ಆಗಿನ್ನೂ ತಾಂತ್ರಿಕ ವಿಚಾರಗಳ ಕುರಿತಾಗಿ ಏನೂ ತಿಳಿದಿರಲಿಲ್ಲ. ಚಿತ್ರ ಸಂಪೂರ್ಣವಾಗಿ ಅರ್ಥವೂ ಆಗಿರಲಿಲ್ಲ. ಆ ಚಿತ್ರಕ್ಕೆ ಸಂಬಂಧಿಸಿದ್ದೆಲ್ಲವೂ ಪವಿತ್ರ ಎಂದು ಕಾಣುತ್ತಿತ್ತು, ಭಾಸವಾಗುತ್ತಿತ್ತು. ಕೆಲವು ಸಮಯದ ನಂತರ ಚಿತ್ರವನ್ನು ಶಾಸ್ತ್ರೀಯವಾಗಿ ಅಭ್ಯಸಿಸಲು ಆರಂಭಿಸಿದಾಗ ಅದರ ಕ್ಯಾಮರಾ ಕೆಲಸ ಎಸ್. ರಾಮಚಂದ್ರರವರದ್ದು ಎಂದು ತಿಳಿದು ಅಂದಿನಿಂದ ಅವರ ಬಗ್ಗೆ ಅದೊಂದು ವಿಚಿತ್ರ ಭಯ ಮಿಶ್ರಿತ ಗೌರವ. ಆಗಿನ್ನೂ ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಮುಂದೆ ಮಾಲ್ಗುಡಿ ಡೇಸ್ ದಾರವಾಹಿಯೂ ಇವರದ್ದೇ ಕ್ಯಾಮರಾಚಳಕದಲ್ಲಿ ರೂಪಿತವಾದದ್ದು ಎಂದಾಗ ಮತ್ತಷ್ಟು ಗೌರವ, ಭಯ ಹೆಚ್ಚಳ. ಎಫ್ .ಟಿ.ಐ.ಐನಲ್ಲಿ ಕಲಿಯುತ್ತಿರುವಾಗ ಗಿರೀಶ್ ಕಾಸರವಳ್ಳಿಯವರು, ಎಸ್. ರಾಮಚಂದ್ರ, ಎಚ್. ಎಂ ರಾಮಚಂದ್ರ ಇತ್ಯಾದಿ ಕನ್ನಡದ ಚಿತ್ರ ರಂಗದ ದಿಗ್ಗಜರು ಕಲಿತ ಜಾಗದಲ್ಲೇ ನಾನೂ ಕಲಿಯುತ್ತಿದ್ದೇನೆ ಎಂಬ ಪುಳಕ. ಇದೇ ಸಮಯದಲ್ಲಿ ಮಂಗಳೂರಲ್ಲಿ ಗಿರೀಶ್ ಕಾಸರವಳ್ಳಿಯವರು ಹಸೀನ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದರು. ನಾನೂ ಅದೇ ಸಮಯದಲ್ಲಿ ಊರಲ್ಲಿದ್ದ ಕಾರಣ ಚಿತ್ರೀಕರಣ ನೋಡಲು ಹೊರಟು ನಿಂತೆ. ಪುಣ್ಯಪುರುಷರ ಭೇಟಿಗೆ ಹೋಗುವ ಭಕ್ತನಂತೆ ಒಳಗೇ ಒಂಥರಾ ಭಯ, ಭಕ್ತಿ. ಅಷ್ಟರಲ್ಲಿ ಅದಕ್ಕೆ ಕ್ಯಾಮರಾ ಮಾಡುತ್ತಿರುವ ಎಸ್. ರಾಮಚಂದ್ರ ಬಹಳ ಮುಂಗೋಪಿ ಹುಷಾರಾಗಿರು ಎಂದು ನನಗೆ ಎಚ್ಚರಿಕೆ ಸಿಕ್ಕಿತ್ತು. ಸ್ಥಳಕ್ಕೆ ಹೋದಾಗ ರಾಮಚಂದ್ರ ಸರ್ ಟ್ರಾಕ್ ಮೇಲೆ ಕುಳಿತಿದ್ದರು. ನನ್ನ ಪರಿಚಯ ಮಾಡಿಕೊಂಡೆ. “ಹಾ! ಮಂಗಳೂರಿನವನೆಯೋ… ಸರಿ… ಎಫ್ .ಟಿ.ಐ.ಐನಲ್ಲಿ ನಿರ್ದೇಶನ ಕಲಿಯುತ್ತಿದ್ದೀಯೋ ಸರಿ… ಒಳ್ಳೆಯದಾಗಲಿ” ಎಂದರು. ಸಧ್ಯ ಅವರಿಗೆ ಸಿಟ್ಟು ಹುಟ್ಟಿಸದೇ ಆಶಿರ್ವಾದ ಪಡೆದ ಸಂತೋಷದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ವೃತ್ತಿಸಂಬಂಧವಾಗಿ ಬಂದು ನೆಲೆಸಿದಾಗಲೇ ಮತ್ತೆ ರಾಮಚಂದ್ರರನ್ನು ಕಾಣುವ ಅವಕಾಶ ಸಿಕ್ಕಿದ್ದು. ಸುಚಿತ್ರ ಚಿತ್ರ ಸಮೂಹದ ಸಕ್ರಿಯ ಸದಸ್ಯರಲ್ಲೊಬ್ಬರಾಗಿದ್ದ ರಾಮಚಂದ್ರರನ್ನು ಪ್ರತಿ ಆದಿತ್ಯವಾರ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ನಾನೂ ನನ್ನ ಗೆಳೆಯ ವಿಕ್ರಂ ಸೇರಿಕೊಂಡು ಗುಬ್ಬಚ್ಚಿಗಳು ಚಿತ್ರವನ್ನು ಮಾಡಲು ಹೊರಟಾಗ ರಾಮ ಚಂದ್ರರನ್ನೂ ಭೇಟಿಯಾಗಿ ಅವರ ಸಲಹೆ, ಆಶಿರ್ವಾದ ಪಡೆದಿದ್ದೆವು. ಹೀಗೆ ಆಗಿಂದಾಗ್ಗೆ ಭೇಟಿ, ಕೊಂಚ ಮಾತು ಆರಂಭವಾಗಿತ್ತು. ಅವರ ಬಗ್ಗೆ ಇದ್ದ ಗೌರವ ಇನ್ನಷ್ಟು ಹೆಚ್ಚಾಗುತ್ತಾ ಭಯ ಮಾಯವಾಗುತ್ತಾ ಸಾಗಿತ್ತು. ಖಂಡಿತ ಮಾತಿನ, ನಿಷ್ಕಪಟಿ, ತೀವ್ರ ಅಧ್ಯಯನಾಸಕ್ತಿಯುಳ್ಳ, ಚಟುವಟಿಕೆಯ ಮನುಷ್ಯ ರಾಮಚಂದ್ರರು.

ಗುಬ್ಬಚ್ಚಿಗಳು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ ನನ್ನ ಕುಟುಂಬಸ್ಥರು ಅನುಭವಿಸಿದಷ್ಟೇ ಸಂತೋಷ ಇವರೂ ಅನುಭವಿಸಿದ್ದರು. ಅಷ್ಟರಲ್ಲಾಗಲೇ ನಾನು ಮದುವೆಯಾಗಿದ್ದೆ. ನನ್ನ ಪತ್ನಿ ರಶ್ಮಿಯನ್ನು ತಮ್ಮ ಮಗಳಂತೇ ಭಾವಿಸಿ ನಮ್ಮಿಬ್ಬರನ್ನೂ ಗಾಢವಾಗಿ ಹಚ್ಚಿಕೊಂಡರು. ಇಂಥದ್ದೇ ಒಂದು ದಿನ ನನ್ನನ್ನು ಕರೆದು ತನ್ನ ಮನೆಯಲ್ಲಿ ಒಂದು ಬಾಡಿಗೆಗೆ ಕೊಡುವ ಭಾಗವಿದೆ. ನೀವಿಬ್ಬರೂ ಅಲ್ಲಿ ಬಂದಿದ್ದರೆ ನನಗೆ ಸಂತೋಷ ಎಂದರು. ಅವರ ಮನೆಯಿದ್ದದ್ದು ಬಹಳ ಒಳ್ಳೆಯ ಜಾಗದಲ್ಲಿ, ಅದಲ್ಲದೇ ಪೇಟೆಯ ಹೃದಯಭಾಗದಲ್ಲಿ, ನಾವಾಗ ಇದ್ದ ಮನೆಗಿಂತ ಬಹಳ ವಿಶಾಲವಾದ ಮನೆ ಇವೆಲ್ಲಕ್ಕಿಂತ ಹೆಚ್ಚಾಗಿ ಗುರುಗಳ ಸಾನಿಧ್ಯದಲ್ಲಿ ವಾಸ. ನನಗೆ ಇದಕ್ಕಿಂತ ಹೆಚ್ಚಿನದ್ದೇನು ಬೇಕು? ಆದರೆ ಅಂಥಾ ಒಳ್ಳೆಯ ಸ್ಥಳದಲ್ಲಿ ಮನೆ ಬಾಡಿಗೆ ಕಟ್ಟಲಾದೀತೇ ಎಂದು ನಮಗೆ ಸಂಶಯ. ನಮ್ಮ ದ್ವಂದ್ವ ಅರಿತ ಗುರುಗಳು, ಅರ್ಧಕ್ಕೂ ಕಡಿಮೆ ಬಾಡಿಗೆ ಹೇಳಿ, ಜೊತೆಗೆ ಯಾವ ಠೇವಣಿಯೂ ಬೇಡ ಎಂದು, ಜೊತೆಗೆ ಎಲ್ಲಾ ರೀತಿಯ ಸೌಕರ್ಯಗಳನ್ನೂ ಒದಗಿಸಿ ಈಗ ಬಾ ಎಂದರು. ನಾನೂ ರಶ್ಮಿಯೂ ಮೂಕವಿಸ್ಮಿತರಾದೆವು. “ಅಭಯ… ನಾನು ಮನೆಯನ್ನು ಕಟ್ಟಿ ಬಾಡಿಗೆಯಲ್ಲಿ ಜೀವಿಸಬೇಕಿಲ್ಲ. ನನ್ನ ಸರಳ ಜೀವನವನ್ನು ಸಮೃದ್ಧವಾಗಿ ಜೀವಿಸಲು ನನಗೆ ಸುದೈವದಿಂದ ಅನುಕೂಲವಿದೆ. ಸಾಯುವ ಮುನ್ನ, ನನ್ನ ಚಿತ್ರರಂಗದ ಹೊಸ ಪೀಳಿಗೆಗೆ ನಾನೇನು ಮಾಡಿದ್ದೇನೆ ಎಂದು ನನ್ನ ಮುಂದೆ ಪ್ರಶ್ನೆ ಏಳುತ್ತದೆ. ಹೀಗಾಗಿ ನೀನೂ ರಶ್ಮಿಯೂ ನಮ್ಮ ಕಣ್ಣೆದುರು ಇದ್ದರೆ, ಅಭಿವೃದ್ಧಿಹೊಂದಿದರೆ ಅಷ್ಟೇ ನನಗೆ ಸಂತೋಷ” ಎಂದರು ಗುರುಗಳು. ಎಂಥಾ ಮಾತು! ಆದರೆ ಈ ಮಾತನ್ನಾಡಿ ಕೇವಲ ನಾಲ್ಕೇ ತಿಂಗಳಲ್ಲಿ ಗುರುಗಳು ಹೀಗೆ ಅಕಾಲಿಕವಾಗಿ ನಮ್ಮನ್ನು ಬಿಟ್ಟುಹೋಗುತ್ತಾರೆಂದು ಅಂದು ನಾವ್ಯಾರೂ ಊಹಿಸಿಯೂ ಇರಲಿಲ್ಲ. ಗುರುಗಳಿಗೆ ಅದೇಕೆ ಅಂಥಾ ಅವಸರವೋ?

ನಾನೊಬ್ಬನೇ ಅದೃಷ್ಟವಂತನಲ್ಲ, ಗುರುಗಳು ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕರನ್ನು ಪ್ರಭಾವಿತಗೊಳಿಸುತ್ತಾ, ಕನ್ನಡ ಚಿತ್ರರಂಗಕ್ಕೆ ಹೊಸತನವನ್ನು ತರುವ ಪ್ರಯತ್ನಕ್ಕೇ ತಮ್ಮ ವೃತ್ತಿಜೀವನವನ್ನೂ, ವೈಯಕ್ತಿಕ ಜೀವನವನ್ನೂ ಮುಡಿಪಾಗಿರಿಸಿಟ್ಟವರು. ವೃತ್ತಿಯಲ್ಲಿ ಕ್ಯಾಮರಾ ಸಹಚರಿಯಾದರೂ, ರಾಮಚಂದ್ರರ ಆಸಕ್ತಿಯ ಹರವು ತುಂಬಾ ವಿಸ್ತಾರವಾದದ್ದು. ಅಪಾರ ಓದುವಣಿಗೆ ಮಾಡುತ್ತಿದ್ದ ಇವರಿಗೆ ಕಂಪ್ಯೂಟರ್ ಜ್ಞಾನ ಚೆನ್ನಾಗಿತ್ತು. ಹೊಸ ತಂತ್ರಜ್ಞಾನದ ಸಾಧ್ಯತೆಗಳು, ಚಿತ್ರರಂಗದ ಆಗುಹೋಗುಗಳ ಪ್ರಜ್ಞೆ ಇವೆಲ್ಲವುಗಳ ಕಡೆಗೆ ಗುರುಗಳು ಸದಾ ಜಾಗೃತರಾಗಿದ್ದರು. ಬಹಳ ಸ್ವಾಭಿಮಾನಿ, ನಿಗರ್ವಿ ಅಪರೂಪದ ವ್ಯಕ್ತಿತ್ವವನ್ನು ಗುರುಗಳು ಹೊಂದಿದ್ದರು. ತಮ್ಮ ಮನೆಯ ನಲ್ಲಿಯ ವಾಶರ್ ಬದಲಿಸುವುದರಿಂದ ಹಿಡಿದು, ಕಡಿಮೆ ಖರ್ಚಿನಲ್ಲಿ ಕಚ್ಚಾ ಚಿತ್ರಮಂದಿರವನ್ನು ರೂಪಿಸುವಲ್ಲಿಯವರೆಗೆ ಎಲ್ಲದಕ್ಕೂ ಗುರು ರಾಮಚಂದ್ರರು ಸೈ. ಸಾವಯವ ಅಕ್ಕಿಯ ಹಿರಿಮೆ ಅರಿತಿದ್ದ ಅವರು, ಬೆಂಗಳೂರಿನ ಗಲ್ಲಿ ಗಲ್ಲಿಗಳನ್ನು ಸುತ್ತಿ ಎಲ್ಲಿ ಅತ್ಯಂತ ಒಳ್ಳೆಯ ಗುಣಮಟ್ಟದ ಸಾವಯವ ಅಕ್ಕಿ ಸಿಗುತ್ತದೆ ಎಂದು ಕಂಡುಹಿಡಿಯುವುದಾಗಲೀ, ನಲ್ಲಿಯಡಿಯಲ್ಲಿ ಇಡುವ ಇಟ್ಟಿಗೆ ಬೀಳುವ ನೀರಿನಲ್ಲಿ ಕರಗದಂತೆ ಮಾಡಲು ಅದಕ್ಕೆ ಕೆಂಪುಬಣ್ಣದ ಪೈಂಟ್ ಹೊಡೆಯುವುದಾಗಲಿ, ಚಿತ್ರರಂಗದ ತಮ್ಮ ಅನುಭವಗಳನ್ನು ಸ್ವಾರಸ್ಯಕರವಾಗಿ ವಿವರಿಸುವುದಾಗಲಿ, ಚಲನ ಚಿತ್ರವೊಂದನ್ನು ಛಿದ್ರಗೊಳಿಸಿ ಅದನ್ನು ವ್ಯಾಖ್ಯಾನಿಸುವುದೇ ಆಗಲಿ, ಹೊರದೇಶದ ಸಬ್ ಟೈಟಲ್ ಹೊಂದಿದ ಚಿತ್ರಗಳನ್ನು ಸಂಗ್ರಹಿಸಿ, ಅದನ್ನು ಇಲ್ಲಿನವರಿಗೆ ಓದಲು ಅನುಕೂಲವಾಗುವಂತೆ ಪರಿವರ್ತಿಸುವುದೇ ಆಗಲಿ, ಹೀಗೆ ಚಿತ್ರವಿಚಿತ್ರದ ಕೆಲಸಗಳನ್ನು ಮಾಡುತ್ತಾ ತೀವ್ರ ಜೀವನವನ್ನು ಜೀವಿಸುತ್ತಿದ್ದರು ನಮ್ಮ ಗುರುಗಳು ತಮ್ಮ ೬೫ನೇ ವಯಸ್ಸಿನಲ್ಲೂ. ಬೆಂಗಳೂರಿನಲ್ಲಿ ನಡೆಯುವ ಅನೇಕ ಸದಭಿರುಚಿಯ ಚಿತ್ರ ಚಟುವಟಿಕೆಗಳಲ್ಲಿ ವೇದಿಕೆಯ ಹಿಂದೆ, ಪಾದರಸದಂತೆ ಓಡಾಡುತ್ತಾ ಎಲ್ಲವನ್ನೂ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುತ್ತಾ, ಎಲ್ಲೂ ತನ್ನ ಹೆಸರು ಬರದಂತೆ, ತನ್ನ ತಾನು ಮೆರೆಯದ ಜಾಗೃತ ಪ್ರಜ್ಞೆಯೊಂದಿಗೆ ನಮ್ಮ ಗುರು ರಾಮಚಂದ್ರರು ಇದ್ದೇ ಇರುತ್ತಿದ್ದರು.

ತಮ್ಮ ಕಲಿಕೆಯ ದಿನಗಳಲ್ಲಿ ಮನೆಯವರಿಂದ ದುಡ್ಡಿಗೆ ಕೈಚಾಚಬಾರದೆಂದು ತಾವು ಕಲಿತಿದ್ದ ಫ್ರೆಂಚನ್ನು ಜಯಾಬಾಧುರಿಯವರಿಗೆ ಕಲಿಸುತ್ತಿದ್ದುದ್ದು (ಅವರೂ ಎಫ಼್.ಟಿ.ಐ.ಐ ಪದವೀಧರೆ) ನಮೀಬಿಯಾದ ಯಾವುದೋ ವಿದ್ಯಾರ್ಥಿಗೆ ಇಂಗ್ಲೀಷಲ್ಲಿ ನೋಟ್ಸ್ ಬರೆದುಕೊಡುತ್ತಿದ್ದುದು ಇತ್ಯಾದಿ ರೀತಿಯಲ್ಲಿ ಹಣ ಸಂಗ್ರಹಿಸುತ್ತಾ ವಿದ್ಯಾಭ್ಯಾಸ ಮಾಡಿದ ಅಪರೂಪದ ಸ್ವಾಭಿಮಾನಿ ನಮ್ಮ ಗುರುಗಳು. ಅದೇ ತಾವು ಇನ್ನೊಬ್ಬರಿಗೆ ಕೊಡುವ ಸಂದರ್ಭ ಬಂದಾಗ, ಬೆಚ್ಚದಿರುವ ಸ್ವಭಾವ ರಾಮಚಂದ್ರರದ್ದು. ಪುತ್ತೂರಿನ ಹುಡುಗನೊಬ್ಬ ಕ್ಯಾಮರಾ ಕಲಿಯಲು ಶ್ರಮಪಡುತ್ತಿದ್ದುದು ಹೇಗೋ ನಮ್ಮ ಗುರುಗಳಿಗೆ ಗೊತ್ತಾಗಿ ಅವನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಅವನಿಗೆ ತಮ್ಮಲ್ಲಿದ್ದ ಲೈಟ್ ಮೀಟರನ್ನೂ ಕೊಟ್ಟು ಒಂದೆರಡು ವರ್ಷದಷ್ಟರಲ್ಲಿ ಅವನನ್ನು ಸ್ವಯಂಪೂರ್ಣ ಕ್ಯಾಮರಾ ಮನ್ ಮಾಡಿ ಒಂದು ಸ್ವತಂತ್ರ ಚಿತ್ರವನ್ನೂ ವಹಿಸಿಕೊಟ್ಟು ಅವನಿಗೊಂದು ದಾರಿ ತೋರಿಸಿದ ಉದಾಹರಣೆ ಸಧ್ಯದಲ್ಲಷ್ಟೇ ನನ್ನ ಅರಿವಿಗೆ ಬಂತು.

ಯಕ್ಷಗಾನದ ತೀವ್ರ ಆಸಕ್ತಿ ಹೊಂದಿದ್ದ ಗುರುಗಳು, ನಾನು ಮಾಡಿದ ಯಕ್ಷಗಾನ ದಾಖಲೆಯ ಕಿರುಪ್ರಯತ್ನಗಳನ್ನೆಲ್ಲಾ ಸಂಗ್ರಹಿಸಿ, ಆಸಕ್ತಿಯಿಂದ ಗ್ರಹಿಸಿ, ಮುತುವರ್ಜೆಯಿಂದ ತಮ್ಮ ಸಲಹೆ, ಮಾರ್ಗದರ್ಶನವನ್ನು ಕೊಡುತ್ತಿದ್ದರು. ನನ್ನ ಬ್ಲಾಗನ್ನು ಸದಾ ಓದಿ ಬೆನ್ನು ತಟ್ಟುತ್ತಿದ್ದರು. ತಪ್ಪಿದ್ದರೆ ತಿದ್ದುತ್ತಿದ್ದರು, ಹೀಗೇ ಬರೆಯುತ್ತಿರು ಎಂದು ಪ್ರೋತ್ಸಾಹಿಸುತ್ತಿದ್ದರು. ಅವಕಾಶ ಸಿಕ್ಕಿದಾಗಲೆಲ್ಲಾ, ತಮ್ಮ ಚಿತ್ರ ರಂಗದ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು, ನನ್ನ ಅನುಭವದ ವಿಸ್ತಾರವನ್ನು ಹಿಗ್ಗಿಸುತ್ತಿದ್ದರು. ಇಂದು ಈ ಬ್ಲಾಗ್ ಬರವಣಿಗೆಯನ್ನು ಓದಲು ಅವರಿಲ್ಲ, ರಶ್ಮಿ ಮಾಡಿದ ಸಬ್ಸೀಗೇ ಸೊಪ್ಪಿನ ಬಜ್ಜಿಯನ್ನು ಸವಿದು ಕಾಫೀ ಹೀರಿ ವಾಹ್! ಎನ್ನಲು ಅವರಿಲ್ಲ, ಮಲ್ಲೇಶ್ವರಂನಲ್ಲಿ ಇಂಥಾ ಗಲ್ಲಿಯಲ್ಲಿ ಇಂಥಾ ಅಂಗಡಿಯಲ್ಲಿ ಸಾವಯವ ಅಕ್ಕಿಸಿಗುತ್ತದೆ ಎಂದು ಕಂಡು ಹಿಡಿದು ನಮಗೆ ಹೇಳಲು ಅವರಿಲ್ಲ, ನಿಜಾರ್ಥದಲ್ಲಿ ನನ್ನ ಮನೆಯೊಡೆಯ, ಗುರುವರ್ಯ ಎಸ್. ರಾಮಚಂದ್ರ ಸರ್… ಇನ್ನಿಲ್ಲ! ಇದು ಶಬ್ದದಲ್ಲಿ ಬರೆದರೆ, ಮಾತಿನಲ್ಲಿ ಹಂಚಿಕೊಂಡರೆ, ಕತ್ತಲಲ್ಲಿ ಮುಲುಗಿದರೆ ತೀರದ ದುಃಖಃ. ನಾನಿಂದು ವೃತ್ತಿಸಂಬಂಧೀ ಗುರುಗಳು, ವ್ಯಯಕ್ತಿಕವಾಗಿ ಪಿತೃಸಮಾನರೊಬ್ಬರನ್ನು ಹೀಗೆ ಕಳೆದುಕೊಂಡಿದ್ದೇನೆ.

4 ಟಿಪ್ಪಣಿಗಳು (+add yours?)

 1. Nagendra Shah
  ಜನ 15, 2011 @ 09:00:13

  ರಾಮಚಂದ್ರ ಎಲ್ಲಾ ಹೌದು. ಏನೂ ಅಲ್ಲ. ಹಾಗಿದ್ದರು. ನಾನು ಕೂಡ ಸಿನಿಮಾ ಮಿಡಿಯಾದ ಎ.ಬಿ.ಸಿ.ಡಿ. ಕಲಿತದ್ದು ಅವರಿಂದಲೆ… ಜೀವನ ಆಸಕ್ತಿಯನ್ನು ಕಲಿತಿದ್ದು ಅವರಿಂದಲೆ… ಕಲಿಸಿದ ಗುರುವಿಗೆ ನಮೋ ನಮಃ.

  ಉತ್ತರ

 2. armanikanth
  ಜನ 14, 2011 @ 19:30:48

  ಬರಹ ಮನಸ್ಸಿಗೆ ತಟ್ಟಿತು.ಇವತ್ತು ಪ್ರಜಾವಾಣಿ ಯಲ್ಲಿ ಪಿ.ಶೇಷಾದ್ರಿ ಕೂಡ ರಾಮಚಂದ್ರ ಅವರ ಬಗ್ಗೆ ಮನಕಲಕುವಂಥ ಲೇಖನ ಬರೆದಿದ್ದಾರೆ.ಒಂದು ತಲೆಮಾರಿಗೆ ಆದರ್ಶವಾಗುವಂಥ ವ್ಯಕ್ತಿತ್ವದ ಇಂಥ ಮಹನೀಯರ ಬದುಕು,ದೊಡ್ಡ ಗುಣಗಳ ಬಗ್ಗೆ ಅವರು ಬದುಕಿದ್ದಾಗಲೇ ಬರಹದ ಮೂಲಕ ತಿಳಿಸಿದರೆ ಚೆನ್ನ. ಅಲ್ಲವೇ?

  ಉತ್ತರ

 3. D S Ramaswamy
  ಜನ 14, 2011 @ 18:09:15

  a good tribute in abnormal fantasy. hope u vl carry d values he upgraded.

  ಉತ್ತರ

 4. prakashchandra k
  ಜನ 14, 2011 @ 10:36:20

  Ramachandrarantha praathasmaraneeyarannu gurugalaagi padeda abhayasimhara nudi namana arthapoornavaagide. avarige guru krupe sadaa neralaagirali.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: