-ಮಾಲತಿ ಶೆಣೈ
ಸ್ಕೂಲಿನ ಗೇಟ್ ಬಳಿ ಒಬ್ಬ ಹಣ್ಣು ಹಣ್ಣು ಮುದುಕಿ ಚಿಕ್ಕ ಚಿಕ್ಕ ಬೋರೆ ಹಣ್ಣು, ಕತ್ತರಿಸಿದ, ಉಪ್ಪು, ಖಾರದ ಪುಡಿ ಹಚ್ಚಿಟ್ಟ ಪೇರಳೆ (ಸೀಬೆ)ಹಣ್ಣು, ಇಲಾಯಚಿ (ನೋಡಕ್ಕೆ ಒಂದು ತರಹ ಹಸಿ ಹುಣಸೆ ಹಣ್ಣಿನ ತರಹ ಇರುತ್ತೆ, ಬೀಜ ಮಾತ್ರ ತಿನ್ನಬೇಕು,ರುಚಿ ಮಾತ್ರ ಒಗರು), ಮತ್ತು ತ್ರಿಕೋಣಾಕಾರದ ಪುಟ್ಟ ಪುಟ್ಟ ಸುಪಾರಿ ಪುಡಿ ಪ್ಯಾಕೆಟ್ ಮಾರುತ್ತಿದ್ದಳು. ನನ್ನ ಆಜೋಬಾ ನನಗೆ ಕೇಳಿದ್ದನ್ನೆಲ್ಲ ಕೊಡಿಸ್ತಿದ್ದರು. ಆದರೆ ರಸ್ತೆ ಪಕ್ಕ ಮಾರುವವರಲ್ಲಿ ಏನು ತೆಗೆದು ಕೊಳ್ಳಲು ಬಿಡುತ್ತಿರಲಿಲ್ಲ. ಶಾಲೆಯ ಇತರ ಮಕ್ಕಳು ತ್ರಿಕೋಣಾಕಾರದ ಪ್ಯಾಕೆಟ್ ನಲ್ಲಿದ ಪುಡಿ ತಿಂದ ಮೇಲೆ ಅವರ ಬಾಯಿಗೆ ಸುವಾಸನೆ ಮತ್ತು ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗುವುದು ನೋಡಿದಾಗ ನನಗೆ ಒಂದು ತರಹ fascination. ನನಗೂ ಅದು ಒಂದು ಸಲನಾದ್ರೂ ತಿನ್ನಬೇಕು ಅನ್ನಿಸಿತ್ತು.ಆದರೆ ಕೇಳಿದ್ರೆ ಅಮ್ಮ, ಆಜೋಬಾ ಇಬ್ಬರು ದುಡ್ಡು ಕೊಡ್ತಿರಲಿಲ್ಲ.
ಒಂದು ಸಲ ಅಮ್ಮ ನನಗೆ ಬಟ್ಟೆಗಳನ್ನು ಕಪಾಟಿನಲ್ಲಿಡಲು ಹೇಳಿದಳು. ಅಲ್ಲೇ ಎದುರಿಗೆ 5 ನಯಾ ಪೈಸೆ ನೋಡಿದೆ. ಕೂಡಲೆ ಅದನ್ನು ತೆಗೆದು , ಶಾಲೆಯ ಯುನಿಫಾರ್ಮ್ ನ ಕಿಸೆಗೆ ಹಾಕಿದೆ. but my bad luck, ನನ್ನ ತಮ್ಮ ಕೃಷ್ಣ ನೋಡಿಬಿಟ್ಟ. ನಾನು ಸುಮ್ಮನಿರದೆ, ನೋಡು ಕೃಷ್ಣ ನಿನಗೂ ಚಾಕಲೇಟ್ ತರ್ತೀನಿ. ದುಡ್ಡು ತೆಗೆದದ್ದು ಅಮ್ಮನಿಗೆ ಹೇಳಬೇಡ ಅಂದೆ!!
ಸರಿ, ಶಾಲೆಗೆ ಹೋಗುವಾಗ ಅಜ್ಜಿ ಹತ್ರ ಪೊಟ್ಟಣಗಳನ್ನು ತೆಗೊಂಡೆ. 5 ಪೈಸೆಗೆ 5 ಪೊಟ್ಟಣಗಳನ್ನು ಕೊಟ್ಟಳು. ಕ್ಲಾಸಿಗೆ ಬಂದು ಒಂದೊಂದೆ ಪೊಟ್ಟಣ ಬಿಚ್ಚುತ್ತಾ ತಿನ್ನುತ್ತ ಹೋದೆ.. ಘಮ ಘಮ ಸುವಾಸನೆಯ, ತೀಕ್ಷ್ಣವಾದ ಸಿಹಿಯಿದ್ದ ಪುಡಿಗಳನ್ನು ತಿಂದು, ನಾಲಗೆ ನೋಡಿಕೊಂಡೆ, ಗುಲಾಬಿ ಬಣ್ಣಕ್ಕೆ ತಿರುಗಿಕೊಂಡಿತ್ತು. ನನ್ನ ಸಹಪಾಠಿ ಕೂಡ ನಿನ್ನ ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗಿವೆ ಅಂದಾಗ ನಾನು ಖುಶ್. ಪರಿಮಳಯುಕ್ತ ಖಾಲಿಯಾದ ಪೊಟ್ಟಣಗಳನ್ನೆಲ್ಲ ನನ್ನ text book ಹಾಳೆಯೆಡೆಯಲ್ಲಿಟ್ಟೆ. ಸಂಜೆ ಮನೆಗೆ ಹೋದೆ.
ನನಗೆ ಮರೆತು ಹೋದ್ರೂ, ನನ್ನ ತಮ್ಮ ನಾನು ತರುವ ಚಾಕಲೇಟ್ ಗೋಸ್ಕರ ಕಾಯ್ತಾ ಇದ್ದ. ಚಾಕಲೇಟ್ ಎಲ್ಲಿ ಅಂದ , ಅರೇ ನನಗೆ ಮರೆತೇ ಹೋಯ್ತು, ಅಂದೆ. ಕೂಡಲೆ ಅಮ್ಮನಿಗೆ ಚಾಡಿ ಹೇಳಿದ. ಅಮ್ಮ ನನಗೆ’ದುಡ್ಡು ಕದ್ದೆಯ?’ ಅಂತ ಕೇಳಿದ್ರು. ತಲೆ ಕೆಳಗೆ ಹಾಕಿ ’ಹೌದು, ತಪ್ಪಾಯ್ತು, ಇನ್ನು ಮುಂದೆ ಕದಿಯಲ್ಲ’ ಅಂದೆ. ಅಮ್ಮ ಅಲ್ಲೆ ಹತ್ತಿರ ಇದ್ದ ಪೊರಕೆಯಿಂದ ನನಗೆ ಸರೀ ಥಳಿಸಿದರು. ನಾನು ಪೆಟ್ಟು ತಿಂದೆ ವಿನಃ ಅಳಲಿಲ್ಲ. ಯಾಕೆಂದ್ರೆ ನಾನು ಮಾಡಿದ್ದು ತಪ್ಪು ಎಂದು ಗೊತ್ತಿತ್ತು. ಅಪ್ಪ ಬರಲಿ ನಿನಗೆ ಮಾಡ್ತೇನೆ ಶಾಸ್ತಿ ಅಂದಾಗ ಹೊಟ್ಟೆಯಲ್ಲಿ ಪುಕು ಪುಕು ಶುರು. ಅಪ್ಪ ಅಂದರೆ ನನಗೆ ಮೊದಲಿನಿಂದಲೂ ಹೆದರಿಕೆ. (ಈಗಲೂ, though i am 41 years old) ಮತ್ತೆ ಒಂದು ಸಲ ಮನೆಗೆ ಸುಣ್ಣ ಹೊಡೆಯುವ ಹುಡುಗ ಪಕ್ಕದ ಮನೆಯವರಿಗೆ ಏನೋ ಎದುರು ಜವಾಬು ಕೊಟ್ಟಿದ್ದಕ್ಕೆ,ಅಪ್ಪ ಅವನನ್ನು ಅಟ್ಟಿಸಿಕೊಂಡು, ಚಪ್ಪಲಿಯಿಂದ ಹೊಡೆದದ್ದು , ಅವನು ’ಬಸ್ ಕರೋ ಸಾಬ್’ಅಂತ ಅತ್ತಿದ್ದು ನೆನಪಿತ್ತು.ಇನ್ನಷ್ಟು ಹೆದರಿ, ಜ್ವರ ಬರುವ ಹಾಗಾಯಿತು.ಆಗಲೇ ಅಮ್ಮ ಹೊಡೆದಿದ್ದ ಜಾಗ ಎಲ್ಲ ಕೆಂಪಾಗಿ ಗೀರು ಬಿಟ್ಟಿತ್ತು, ಸ್ವಲ್ಪ ಉರಿಯುತ್ತ ಇತ್ತು. ಅಪ್ಪ ಬಂದು ಯಾವಾಗ ಇದರಿಂದ ಮುಕ್ತಳಾಗುತ್ತೇನೋ ಅಂತ ಕಾಯ್ತಾ ಇದ್ದರೆ, ಆ ದಿನ ಅಪ್ಪ ಬರುವಾಗ ತುಂಬ ಲೇಟ್.
ಅಪ್ಪ ಶೂ ಬಿಚ್ಚುವ ಮುಂಚೆಯೇ, ಅಜ್ಜಿ ಒಳಗಿಂದ ಅಮ್ಮನಿಗೆ ,’ ಅವನು ಈಗಷ್ಟೆ ಬಂದಿದ್ದಾನೆ, ಆಮೇಲೆ ಹೇಳುವಿಯಂತೆ’ ಅಂದ್ರೂ, ಅಮ್ಮನ ವರದಿ ಶುರು. ಅಪ್ಪ ಕೂಡಲೇ ಫಾಂತ್ರೀ (ಅಪ್ಪ ನನಗಿಟ್ಟ petname)ಅಂತ ಕೂಗು ಹಾಕಿದ್ರು. ಆಗಲೆ ನನಗೆ ಒಂದಕ್ಕೆ ಹೋಗುವ ಅವಸರ ಆಯ್ತು. ಆದರೂ ಅಪ್ಪನ ಎದುರಿಗೆ ಹೋಗಿ ನಿಂತೆ. ಹತ್ತಿರ ಬಾ ಅಂದ್ರು, ಕಾಲೆಳೆದುಕೊಂಡು ಹೋದೆ. ದುಡ್ಡು ತೆಗೆದಿದ್ದಿ ಹೌದಾ ಅಂದ್ರು. ನಾನು ಹೌದೆಂಬಂತೆ ಗೋಣು ಅಲ್ಲಾಡಿಸಿದೆ. ನನ್ನ ಗಲ್ಲ ಸವರಿ ಇನ್ನು ಮುಂದೆ ಹಾಗೆ ಮಾಡಬಾರದು ಅಂದರು.ಅಷ್ಟೆ ಅಂದಿದ್ದು, ಎಲ್ಲಿತ್ತೋ, ಅಷ್ಟು ಹೊತ್ತು ಹಿಡಕೊಂಡಿದ್ದ ಅಳು, ಒನ್ ನಂಬರ ಒಟ್ಟಿಗೆ ಬಂದು ಬಿಡ್ತು. ಅಪ್ಪ ಹೋಗು ಮುಖ ತೊಳಿ ಅಂದ್ರು…ಅಮ್ಮ ಮಾತ್ರ..ಹಾಗೆ ಬಟ್ಟೆ ತೆಗೆದುಕೊಂಡು ಉಚ್ಚೆ ಒರಸು ಅಂದ್ರು…..
ಆ ದಿನ ಅಪ್ಪ ಬೈದು..ಹೊಡೆದಿದ್ದಿದ್ರೆ?? ನಾನಾಗ ಮೂರನೆ ಕ್ಲಾಸ್ ನಲ್ಲಿ ಓದುತಿದ್ದೆ. ಅಜ್ಜ ರಾತ್ರಿ ಬಂದ ಮೇಲೆ ಬಾಸುಂಡೆ ಎದ್ದ ಜಾಗಕೆಲ್ಲ, ತೆಂಗಿನ ಎಣ್ಣೆಯಲ್ಲಿ ಅರಸಿನ ತೇದು ಗಾಯಕ್ಕೆ ಹಚ್ಚಿದ್ರು. ನಾನು ಮಲಗಿದ್ದೇನೆ ಅಂದು ಕೊಂಡು ಅಮ್ಮನಿಗೆ ಬೈದಿದ್ರು..ಮಗುಗೆ ಹೇಗೆ ಹೊಡೆದಿದ್ದಿಯಾ??ಚಂದ ಮಾಡಿ ಹೇಳಿದ್ರೆ ಆಗತಿತ್ತು ಅಂತ.
ಮಕ್ಕಳಿಗೆ ನಾನು ಈ ಕತೆಯನ್ನು ಅವರು primary ಶಾಲೆಯಲ್ಲಿದ್ದಾಗ ಹೇಳಿದ್ದೆ.ಮತ್ತು ಏನಾದ್ರು ಬೇಕಿದ್ದಲ್ಲಿ ನನಗೆ ಕೇಳಿ. ಅದರ ಬಗ್ಗೆ discus ಮಾಡಿ, ಅದನ್ನು ತೆಗೊಳ್ಳಬೇಕಾ ನೋಡುವಾ,ದುಡ್ಡು ಮಾತ್ರ ಕದೀ ಬಾರ್ದು ಅಂತ ಹೇಳಿದ್ದಾಗ ಅವರು ನಕ್ಕಿದ್ದರು.ನಾನು ಆಫಿಸ್ ಗೆ ಹೋಗುವಾಗ ಮಕ್ಕಳಿಗೆ urgent ಏನಕ್ಕೂ ಬೇಕಾದ್ರೆ ಅಂತ ಮನೆಯಲ್ಲಿ ಮಿನಿಮಮ್ 2000 ಕ್ಯಾಶ್ ನಾದ್ರೂ ಇಡುವ ಪರಿಪಾಠ. ಅವರು ಖರ್ಚು ಮಾಡಿದಕ್ಕೆ ಲೆಕ್ಕ ಬರೆದು ಇಡತಿದ್ರು. ಈಗ ಇಬ್ಬರೂ ದೊಡ್ಡವರಾಗಿದ್ದಾರೆ. ಅವರದ್ದೆ ಪಾಕೆಟ್ ಮನಿ ಇರತ್ತೆ.
ಎದುರು ಮನೆಯ ಕೆಲಸದ ಪುಟ್ಟ ಹುಡುಗಿಗೆ ದುಡ್ಡು ಕದ್ದಿದ್ದಾಳೆ ಅಂತ ಬೆಳಿಗ್ಗೆ ತುಂಬಾ ಬೈತಾ ಇದ್ರು. ಅವಳ ಅಮ್ಮ ಅಳುತ್ತ ’ಎಷ್ಟು ವರ್ಷದಿಂದ ಇಲ್ಲಿದ್ದೇನೆ,ನಿನ್ನಿಂದ ನನಗೆ ಕೆಟ್ಟ ಹೆಸರು ಬಂತು’ ಅಂತ ಅವಳಿಗೆ ಹೋಡಿತಾ ಇದ್ರು. ಅವಳು ’ಇಲ್ಲಮ್ಮ ನಾನು ಕದಿಲಿಲ್ಲ’ ಅಂತ ಅಳ್ತಾ ಇದ್ದಳು.ಆದ್ರೆ….ಕತೆ ಬೇರೆನೆ ಇದೆ ಅಲ್ಲಿ…ಬಿಡಿ…ಇನ್ನೊಮ್ಮೆ ಹೇಳ್ತೇನೆ.
🙂
ಜನ 14, 2011 @ 11:57:15
tumbaa chennaagide madam 🙂
Abhi
ಜನ 14, 2011 @ 07:11:54
Thanks Savithri!!
wish you a Happy Sankranthi
🙂
malathi S
ಜನ 13, 2011 @ 21:58:38
ಹೌದು ಮೇಡಂ, ಆ ಸಿಹಿಯಾದ ಬಾಲ್ಯದಲ್ಲಿ ಹುಲಿಬೋರೆ, ಕಾಯಿ ಪೇರಳೆ, ನಾಲಿಗೆಯನ್ನು ತಂಪು ತಂಪಾಗಿಸುವ ಕಾಚು, ತುಟಿ ಹಾಗು ನಾಲಿಗೆಯನ್ನು ಗುಲಾಬಿಯಾಗಿಸುವ ಅಡಿಕೆ ಪುಡಿಯನ್ನು ತಿನ್ನೋದನ್ನು ಯಾಕೆ ತಪ್ಪಿಸಬೇಕು ಅಂತ ಯೋಚಿಸಿ ನಾನೂ ಒಂದೆರಡು ಸಲ ಸಾಸಿವೆ ದಬ್ಬಿಯೊಳಗಿನ ನಾಲ್ಕಾಣೆ ಚೂರನ್ನು ಎತ್ತಿಕೊಂಡು, ಅವ್ವನ ಕೈಯಿಂದ ಕಡುಬು ( ಪೊರಕೆ ಏಟು) ತಿಂದಿದ್ದೆ. ಈ ಅಮ್ಮಂದಿರಿಗೂ, ಮಕ್ಕಳ ತಪ್ಪುಗಳಿಗೂ, ಪೊರಕೆಗೂ ಅವಿನಾಭಾವ ಸಂಬಂಧ ಅನ್ನಿಸಿತ್ತು. ತಮ್ಮ ಲೇಖನವನ್ನು ಓದಿದ ಮೇಲೆ ಅದು ನಿಜವೇ ನಿಜ ಎನ್ನಿಸಿತು. (ಆದರೆ ಕೆಲವು ಜನ ಅಮ್ಮಂದಿರಿಗೆ ಇದು ಅನ್ವಯಿಸುವುದಿಲ್ಲ. ). ಅವಧಿಯಲ್ಲಿಯ ತಮ್ಮ ಲೇಖನಕ್ಕೆ ಅಭಿನಂದನೆಗಳು ಜೊತೆಗೆ ತಮಗೆಲ್ಲರಿಗೂ ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು.
ವಂದನೆಗಳೊಂದಿಗೆ
ಸಾವಿತ್ರಿ