ನವೋಮಿ ಕಾಲಂ: ಕನಸಿನಲ್ಲಿ ಬಂದವನಾರೆ….

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.

 

 

 

 

ಅವನೆಂದರೆ ಲಕ್ಷಾಂತರ ಜನರಿಗೆ ಪ್ರಿಯ..ಅವನ ಒಂದು ಝಲಕ್ ಗಾಗಿ ಕಾಯೋ ಜನ ಅದೆಷ್ಟೋ..ಅವಳ ಹಣೆ ಬರಹ ಚೆನ್ನಾಗಿತ್ತೇನೋ..

ಅವನಿಗಾಗಿ ಕಾದಿರಿಸಿದ ಲಿಫ್ಟ್ ನಲ್ಲಿ ಇವಳು ನುಗ್ಗಿದ್ದಳು…ಪಕ್ಕದಲ್ಲೇ ನಿಂತಿದ್ದ. ಅವನ ಅಸಿಸ್ಟೆಂಟ್ ಮುಖಮುಖ ನೋಡುತ್ತಿದ್ದ…

ಆತನೂ ಒಮ್ಮೆ ನೋಡಿದ. ಇವಳಿಗೆ ಏನೂ ಮಾಡಬೇಕೋ ಅರ್ಥವಾಗಲಿಲ್ಲ..ಆತ ನಕ್ಕು ಹಾಯ್ ಎಂದ..ಇವಳು ನಡುಗುತ್ತಲೇ  ಹಲೋ ಎಂದಳು…

ನಾನು ನಿಮ್ಮ ದೊಡ್ಡ ಪ್ಯಾನ್ ಎಂದಳು ಅವಳಿಗೇ ಗೊತ್ತಾಗದಂತೆ.

ಥ್ಯಾಂಕ್ಸ್….ನಿಮ್ಮ ಹೆಸರು?

ಹೇಳಿದಳು.

ನಿಮ್ಮ ಫೋನ್ ನಂಬರ್ ?…ಕೇಳೋದು ಕೇಳಿ ಯಾಕಾದರೂ ಕೇಳಿದ್ನಪ್ಪಾ ಎಂದು ತುಟಿಕಚ್ಚಿಕೊಂಡಳು.

ನಿಮ್ಮದು ಹೇಳಿ. ನಾನು ಎಸ್ಎಂಎಸ್ ಮಾಡ್ತೀನಿ ಎಂದ.

……944… ಒಂದೇ ಉಸಿರಿಗೆ ಹೇಳಿದ್ದಳು.

ಲಿಪ್ಟ್ ನಿಂತಿತ್ತು.

ಹ್ಯಾವ್ ಎ ನೈಸ್ ಡೇ ಎಂದು ಹೊರಟಿದ್ದ..

ಇವಳು ಏನೂ ಹೇಳದೇ ಹಾಗೆ ನಿಂತಿದ್ದಳು. ಇವಳಿಗಾಗಿ ಕಾದು ನಿಂತಿದ್ದ ಗೆಳತಿ

ಏನೇ ಹಾಗೆ ನಿಂತಿದ್ದೀಯಾ..ಅಪರೂಪಕ್ಕೆ ಬಂದಿದ್ದೀಯಾ..ಬಾ

ಎಂದಳು.

ಫೈಸ್ಟಾರ್ ಹೊಟೆಲ್ನಲ್ಲಿ ಆಕೆ ಫ್ರಂಟ್ ಆಫೀಸರ್…

ಇಡೀ ಹೊತ್ತು ಎಸಿನಲ್ಲಿ ಬೇಜಾರಾಗಲ್ವೇನೆ?

ಗ್ರೇಟ್ ಹಂಕ್ಸ್ ಬರ್ತಾವಲ್ಲ..ಆ ಬಿಸಿಗೆ ಎಸಿ ಕಡಿಮೆ ಎನಿಸುತ್ತೆ ..ಆಕೆ ನಕ್ಕಿದ್ದಳು.

ಗೆಳತಿನ ನೋಡಲು ಬಂದವಳು ಅವನ ಧ್ಯಾನದಲ್ಲಿ ಮುಳುಗಿದ್ದಳು..ಮೊಬೈಲ್ ನೋಡುತ್ತಲೇ ಇದ್ದಳು.ಎಸ್ಎಂಎಸ್ ಈಗ ಬರಬಹುದು ಆಗ ಬರಬಹುದು ಎಂದು..ಒಂದೊಂದು ಕ್ಷಣವೂ ಕಳೆಯಲು ಅಸಾಧ್ಯ ಎನಿಸುತ್ತಿದೆಯಲ್ಲಾ.

ಬೇಕಂತ ಹೇಳಿರ್ಬೇಕು..ಛೇ..ಫೂಲ್ ಆಗ್ಬಿಟ್ನಲ್ಲಾ…ಫೋನ್ ನಂಬರ್ ಕೊಡಬಾರದಿತ್ತು…ಮತ್ತೆ ಮೊಬೈಲ್ ನೋಡುತ್ತಾಳೆ.ಛೇ..ನೆಟ್ವರ್ಕ ಇಲ್ಲ. ಒಳ್ಳೇ ಶವದ ಹಾಗೆ  ಮೊಬೈಲ್ ಒಂದೇ ಒಂದು ಕಡ್ಡಿಯಲ್ಲಿ  ಉಸಿರಾಡ್ತಾ ಇದೆ..

ಅವಳೇನು ಹೇಳಿದಳೋ ಇವಳೇನು ಕೇಳಿದಳೋ.ಟಾಟಾ ಬೈಬೈ ಎಂದು ಹೊರಗೋಡಿ  ಬಂದಿದ್ದಳು.ಥಟ್ಟನೆ ಬಂದಿತ್ತು. ಮೊಬೈಲ್ ಗೆ ಜೀವ.ಅದರೊಂದಿಗೆ ಬಂದಿತ್ತು…ಅವನ ಎಸ್ಸೆಂಎಸ್ಸ್…

Hai…Nice to meet  you..

ಮೊಬೈಲ್ ನ ಎದೆಗವುಚಿಕೊಂಡಿದ್ದಳು.

ಮಹಾಸ್ವಾರ್ಥಿ ನಾನು..ಆತ ಲಿಪ್ಟ್ ನಲ್ಲಿ ಸಿಕ್ಕಿದ್ದನ್ನು ಪ್ರೀತಿಯ ಗೆಳತಿಗೂ ಹೇಳಲಿಲ್ಲ.

ಮನೆಗೆ ಬಂದವಳೇ ರೂಮಿನ ಬಾಗಿಲು ಜಡಿದು…ಮ್ಯಾಸೇಜ್ ಬಾಕ್ಸ್ ಮತ್ತೆ ಓಪನ್ ಮಾಡುತ್ತಾಳೆ…ಮತ್ತೆ ಮತ್ತೆ ನೋಡುತ್ತಾಳೆ…

ಎಸ್ಸ್ಎಂಎಸ್ ಮಾಡಿ ನಂಬರ್ ಕಳುಹಿಸಿದ್ದಾನೆಂದರೆ ಏನರ್ಥ…

ಫೋನ್ ಮಾಡಬಹುದು ಅಂಥ ಅರ್ಥ ತಾನೆ

ಅದಿಲ್ಲದಿದ್ದರೆ ಕನಿಷ್ಟ ಎಸ್ಸೆಎಮ್ಮೆಸ್ ಮಾಡಬಹುದು ಅಂಥ ತಾನೆ..

ಒಮ್ಮೆ ಫೋನ್ ಮಾಡಲೇ? …ಏನು ಮಾತಾಡಲಿ..ವಿಷಯ ಏನೂ ಇಲ್ಲ. ನಂಬರ್ ಕೊಟ್ಟ ತಕ್ಷಣ ಹಾಗೆ ಮಾತಾಡೋದು ಸರಿನೂ ಅಲ್ಲ.ಆತ ಏನಿದ್ರೂ ಸೆಲೆಬ್ರಿಟಿ..ಹೀಗೆ ಅದೆಷ್ಟು ಜನ ಅವರಿಗೆ ಸಿಗುತ್ತಾರೋ.ಎಲ್ಲರಿಗೂ ಆತ ಎಸ್ಸೆಮ್ಮೆಸ್ ಮಾಡ್ತಾ ಇರ್ಬಹುದಾ…ಮುಂಬೈಯಿಂದ ಬೆಂಗಳೂರಿಗೆ ಶೂಟಿಂಗ್ ಗೆ ಬಂದಿರೋ ವಿಷಯ ಪೇಪರ್ನಲ್ಲಿ ಓದಿದ್ದೇನೆ.ಆವನ ಫಿಲ್ಮ್ ನ ಹಿರೋಯಿನ್ ಒಳ್ಳೇ ದಂಥದ ಗೊಂಬೆ ಹಾಗಿದ್ದಾಳೆ. ಹೀಗೆ ಅದೆಷ್ಟೋ ಚೆಂದದ ಜನ ಅವನ ಹಿಂದೆ ಮುಂದೆ ಇರಬಹುದು.ಹಾಗಿದ್ದರೆ ನಾನೇಕೆ ಅಷ್ಟು ವಿಚಲಿತಳಾಗುತ್ತಿದ್ದೇನೆ…

ನನ್ನ ಮನಸ್ಸೇಕೆ ಬೇಡ ಬೇಡ ಎಂದರೂ ಅವನನ್ನು ನೆನಪಿಸಿಕೊಳ್ಳುತ್ತಿದೆ…

ಸ್ವಲ್ಪ ಹೊತ್ತಿನ ಮುಂಚೆ ಎಷ್ಟೊಂದು ಬೇಸರದಿಂದ ಇದ್ದೆ..ನನ್ನ ಜೀವನದಲ್ಲಿ ಏನೂ ಇಲ್ಲ.ನಾನೇನೂ ಮಾಡುತ್ತಿಲ್ಲ..ಯಾವುದು ಖುಷಿಕೊಡುವಂಥ ವಿಚಿತ್ರ ನನ್ನ ಜೀವನದಲ್ಲಿ ಘಟಿಸುತ್ತಿಲ್ಲ..ಇಂಥ ಜೀವನ ಯಾಕೆ…ಹೀಗೆ ಏನೆಲ್ಲಾ ಚಿಂತಿಸುತ್ತಿದ್ದೇನಲ್ಲಾ…ಇದ್ದಕ್ಕಿದ್ದಂತೆ ಮನಸ್ಸಿಗೆ ಹಿತವಾಗತೊಡಗಿದೆಯಲ್ಲಾ…ಯಾರ ಬಗ್ಗೆನೋ ಚಿಂತಿಸುವಂತೆ ಮಾಡಿದೆಯಲ್ಲಾ…

ನನಗೇಕೆ ಹೀಗಾಗುತ್ತಿದೆ..

ಫೋನ್ ಮಾಡಲೇ. ಅದು ಅಸಾಧ್ಯ..

ಕನಿಷ್ಟ ಎಸ್ಸೆಎಮ್ಮೆಸ್ ಮಾಡೋ ಧೈರ್ಯ ಮಾಡುತ್ತೇನೆ,

ಟೈಪ್ ಮಾಡುತ್ತಾಳೆ…ಅಳಿಸುತ್ತಾಳೆ…ಮತ್ತೆ ಎಡಿಟ್..ಡಿಲೀಟ್

ಹಾಗೆ ಸಂಜೆಯಾಗುತ್ತದೆ..ಸರಿಸುಮಾರು ರಾತ್ರಿ 1ಘಂಟೆ ಹೊತ್ತಿಗೆ ಮೆಸೇಜ್ ರೆಡಿಯಾಗುತ್ತದೆ.

 

I really felt good today..Gdnight

ಕಷ್ಟಪಟ್ಟು ಕಳಿಸುತ್ತಾಳೆ.

ಇನ್ನು ಅಲ್ಲಿಂದ ಪ್ರತಿಕ್ರಿಯೆಗಾಗಿ ಕಾದು ಹೃದಯದೊತ್ತಡ ಹೆಚ್ಚಿಸಿಕೊಳ್ಳಲು ಅವಳಿಂದ ಸಾಧ್ಯವಾಗುತ್ತಿಲ್ಲ. ಬೆಳಗಿನಿಂದಲೇ ಸಾಕಷ್ಟಾಗಿದೆ. ಇನ್ನು ನಿಶ್ಟಿಂತೆಯಿಂದ ಮಲಗುತ್ತೇನೆ…ನಿದ್ದೆಹೋಗುತ್ತಾಳೆ.

ಬೆಳಗಾಗುವ ಹೊತ್ತಿಗೆ ಮೆಸೆಜ್ ಬಾಕ್ಸ್ ನಲ್ಲಿ ಕೂತಿದೆ ಅವನ ಸಂದೇಶ..ನಡುಗುತ್ತಲೇ ಓದುತ್ತಾಳೆ.

 

Good morning…Thanks a lot…My pleasure too..have a great day..take care

ಓದುತ್ತಲೇ ಇದ್ದಳು…

ಆತ ಲಿಪ್ಟ್ ನಲ್ಲಿ ಅಚಾನಕ್ಕಾಗಿ ಸಿಕ್ಕಿದ್ದು…ನಂಬರ್ ಕೊಟ್ಟಿದ್ದು,,ಆತನ ಎಸ್ಸೆಎಂಎಸ್ ….ಅವಳು ಕಾಯುತ್ತಿದ್ದ ಖುಷಿ ಕೊಡೋ ವಿಚಿತ್ರ ಇದೇ ಆಗಿತ್ತೇನೋ…

ಅವಳು ಕಿಟಕಿಯಿಂದ ಹಾಗೆ ನೋಡಿದಳು…ಮನೆಯಲ್ಲಿ ಮಕ್ಕಳ ಗಲಾಟೆ,,,ಗಂಡನ ಬಿಜನೆಸ್ ಸಂಭಾಷಣೆ,…ಆಳುಗಳ ಕಂಪ್ಲೇಂಟ್ಸ್….ಇದ್ಯಾವುದೂ ಅವಳಿಗೆ ಕೇಳಿಸುತ್ತಿರಲಿಲ್ಲ..

ಇಂದು ಖುಷಿಖುಷಿಯಿಂದಲೇ ಮಕ್ಕಳಿಗೆ ಕೈತುತ್ತು ಮಾಡಿ ಉಣಿಸಲು ಮುಂದಾಗುತ್ತಾಳೆ..ಸ್ನಾನ ಮಾಡಿಬಂದ ಗಂಡನ ಬೆನ್ನು ಒರೆಸುತ್ತಾಳೆ…ಅಡಿಗೆ ಮನೆಗೆ ತಾನೇ ಹೋಗಿ ವಗ್ಗರಣೆ ಹಾಕುತ್ತಾಳೆ…ಎಂದೂ ಇಲ್ಲದ ಈ ಪರಿವರ್ತನೆ ಕಂಡು ಗಂಡ-ಮಕ್ಕಳು-ಆಳುಕಾಳಿಗೆಲ್ಲಾ ಬೆರಗು.

..ಅವರೆಲ್ಲ ಹೊರಹೋಗುತ್ತಲೇ…ದೊಡ್ಡದಾಗಿ ಮ್ಯೂಜಿಕ್ ಪ್ಲೇಯರ್ ಆನ್ ಮಾಡಿದಳು…

ಯಾವುದೋ ಹಾಡಿಗೆ ತಾನು ಗುನುಗುನಿಸಿದಳು…ಮರೆತೇ ಹೋಗಿದ್ದ ನೃತ್ಯಕ್ಕೆ ಹೆಜ್ಜೆ ಹಾಕಿದಳು…

ಆ ಹಾಡಿನಲ್ಲಿ ತನ್ನನ್ನೇ ತಾನು ಕಂಡಳು…ಅರೆ ಇದೇನಿದು…ಆ ಹಾಡಿನಲ್ಲಿ ನನ್ನ ಜೋಡಿಯಾಗಿ ಅವನಿದ್ದಾನೆ,.ನಗುತ್ತಿದ್ದಾನಲ್ಲ…..ಬಚ್ಚಿಟ್ಟಿದ್ದ ಮೊಬೈಲ್  ಅನ್ನು ಮತ್ತೆ ನೋಡಿದಳು…..ಮತ್ತೆ ಮತ್ತೆ  ಅದನ್ನೇ  ಓದಿದಳು…

ಇಲ್ಲಿಗೆ ಅವಳಿಗೂ ಸಾಕೆನಿಸಿತು.ಇನ್ನೂ ಯಾವುದೇ ಕಾರಣಕ್ಕೂ ಎಸ್ಸೆಮ್ಮೆಸ್ ಮಾಡಬಾರದು….ರಿಪ್ಲೈ ಬಂದರೂ ಬರಬಹುದು…ಬರದೇ ಇದ್ದರೂ ಅಚ್ಚರಿಯಿಲ್ಲ..ಲಕ್ಷಾಂತರ ಅಭಿಮಾನಿಗಳು ಅವನಿಗೆ.ಅವರನ್ನೆಲ್ಲ ಖುಷಿಯಾಗಿಡುವ ಪರಿ ಇದಿರಬಹುದು. ಆದರೆ ಕೆಲ ಘಳಿಗೆಯಾದರೂ ನನ್ನಲ್ಲಿ ಜೀವಂತಿಕೆ, ಬದುಕುವ ಖುಷಿ ನೀಡಿದನಲ್ಲಾ ಅದಕ್ಕಾಗಿಯಾದರೂ ನಾನು ಆತನಿಗೆ ಮನಸ್ಸಿನಲ್ಲಿಯೇ ಕೃತಜ್ಞತೆ ಸಲ್ಲಿಸಬೇಕು…ಇದ್ದಕ್ಕಿದ್ದಂತೆ ಆಗಾಗ ಹುಟ್ಟಿಕೊಳ್ಳುವ ಸ್ಮಶಾನ ವೈರಾಗ್ಯದಿಂದ ನಾನು ಮುಕ್ತಳಾಗಬೇಕು…ಕನಸು ಯಾವುದಾದರೂ ಸರಿ ನಾನು  ಕನಸು ಕಾಣಲೇ ಬೇಕು…

ಅವಳ ಮನಸ್ಸು ಕೂಗಿ ಕೂಗಿ ಹೇಳಿತು.

ಅವಳ ಗೆಳತಿ ಹೇಳಿದ್ದು ನೆನಪಾಯಿತು.

ಕನಸು ಕಾಣೋಕೆ ಯಾರದೇ ಪರ್ಮಿಷನ್ ಬೇಕಾಗಿಲ್ಲ ಕಣೆ…ಯಾರಾದರೂ ನೋಡಿಯಾರೆಂಬ ಭಯವಿಲ್ಲ..ಸಿಕ್ಕಿಹಾಕಿಕೊಳ್ಳೋ ಪ್ರಮೇಯವೇ ಇಲ್ಲ.. ಗೆಳೆಯನ ಜೊತೆ ಕನಸಿನಲ್ಲಿ ಮನಸ್ಸಿಗೆ ಹಗುರವಾಗುವಂತೆ ಒಂದೆರಡು ಮಾತನಾಡಿದರೆ ಯಾರಪ್ಪನ ಗಂಟೂ ಖರ್ಚಾಗಲ್ಲ….ಕನಸು ಕಾಣೋದನ್ನು ಕೂಡ ಕಿತ್ತುಕೊಳ್ಳುವ ಹಾಗಿದ್ದಿದ್ದರೆ ನಮ್ಮ ಜನ ಅದನ್ನು ಮಾಡುತ್ತಿದ್ದರೇನೋ.ಇದೊಂದೇ ನಮ್ಮ ಪಾಲಿಗಿರೋದು. …ಕನಸು ಕಾಣು ಹುಡುಗಿ…ಕನಸು ಕಾಣು… ಏನೂ ಆಗಲ್ಲ ……..

ಅದಾದನಂತರ ಅವಳೆಂದಿಗೂ ಎಸ್ಸೆಎಮ್ ಎಸ್ ಮಾಡಿಲ್ಲ..ಕನಸಿನಲ್ಲಿ ದಿನಾ ಪ್ರತ್ಯಕ್ಷ ಆಗುವ ಅವನೊಂದಿಗೆ ಅವಳು ಒಂದೇ ಸಮ ಮಾತನಾಡುತ್ತಾಳೆ.ಅದಾಯ್ತು ಇದಾಯ್ತು…ಹೀಗೆನಿಸುತ್ತೆ ಹಾಗೇನಿಸುತ್ತೆ….ಹೀಗೆ ಏನೇನೆಲ್ಲ…

 

 

 

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: