ಜೋಗಿ ಕಾದಂಬರಿ ಹೀಗಿದೆ: ಈಗಲೇ ಓದಿ ಬಿಸಿ ಬಿಸಿ

ಭಾನುವಾರ ಬೆಳಗ್ಗೆ ೧೦-೩೦ ಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಬಿಡುಗಡೆ, ಖಂಡಿತಾ ಬನ್ನಿ ಅನ್ನುತ್ತಿದ್ದಾರೆ ಜೋಗಿ-

ಆವ ರೂಪದೊಳು ಬಂದರೂ ಸರಿಯೇ

ಶೋಭಾರಾಣಿಗೆ ಭಿಕ್ಷುಕರನ್ನು ಕಂಡರೆ ಭಯ. ಮನೆ ಮುಂದೆ ನಿಂತು `ಅಮ್ಮಾ’ ಅಂತ ಯಾರೇ ಕೂಗಿದರೂ ಸರಿಯೇ, ಶೋಭಾ ಕೈಲಿದ್ದ ಕೆಲಸ ಬಿಟ್ಟು ಒಂದು ರುಪಾಯಿಯನ್ನೋ ಒಂದಷ್ಟು ಹಣ್ಣನ್ನೋ ಹಳೇ ಬಟ್ಟೆಯನ್ನೋ ಕೊಟ್ಟು ಕಳುಹಿಸುತ್ತಾಳೆ. ಒಂದೆರಡು ಸಲ ಮನೆ ತುಂಬ ನೆಂಟರಿದ್ದಾಗಲೋ, ಸ್ನಾನ ಮಾಡುತ್ತಿರುವಾಗಲೋ ಭಿಕ್ಷುಕ ಬಂದು ಕರೆದಾಗ ಶೋಭಾ ಒಳಗೊಳಗೇ ಚಡಪಡಿಸಿದ್ದಿದೆ. ಅವರಿಗೆ ಏನೂ ಕೊಡಲಿಕ್ಕಾಗಲಿಲ್ಲವಲ್ಲ ಎಂಬ ಪಾಪಪ್ರಜ್ಞೆಯಲ್ಲೇ ಇಡೀ ದಿನ ಕಳೆದದ್ದಿದೆ.

ಶೋಭಾಳಿಗೆ ಬೇಡುವವರ ಮೇಲೆ ಪ್ರೀತಿ ಏನಿಲ್ಲ. ಅವಳು ಸಣ್ಣ ಹುಡುಗಿಯಾಗಿದ್ದಾಗ ಅಮ್ಮ ರುಕ್ಮಿಣಿ ಅವಳಿಗೆ ದಿನಕ್ಕೊಂದು ಕತೆ ಹೇಳುತ್ತಿದ್ದರು. ಮಹಾ ದೈವಭಕ್ತೆಯಾಗಿದ್ದ ರುಕ್ಮಿಣಿ ಹೇಳುತ್ತಿದ್ದದ್ದೆಲ್ಲ ದೈವಭಕ್ತಿಯ ಕತೆಗಳನ್ನೇ. ಸುದಾಮ ಕೃಷ್ಣನಿಗೆ ಅವಲಕ್ಕಿ ಕೊಟ್ಟದ್ದು, ಜಿಪುಣ ಪುರಂದರದಾಸರ ಅಂಗಡಿಗೆ ವಿಠ್ಠಲ ಯಾವುದೋ ರೂಪದಲ್ಲಿ ಬಂದದ್ದು, ವ್ಯಾಸರಾಯರ ಶಿಷ್ಯರಾದ ವಾದಿರಾಜರಿಗೆ ಹರಿ ಕುದುರೆಯ ರೂಪಲ್ಲಿ ಹಯವದನನಾಗಿ ಕಾಣಿಸಿಕೊಂಡದ್ದು, ಸತಿ ಸಕ್ಕೂಬಾಯಿಗೆ ಭಗವಂತ ಕಾಣಿಸಿದ್ದು, ಸಿರಿಯಾಳನ ಮನೆಗೆ ಹಸಿದ ಹೊಟ್ಟೆಯಲ್ಲಿ ಶಿವ ಬಂದದ್ದು- ಹೀಗೆ ಹರಿಹರರಿಬ್ಬರ ಕತೆಗಳನ್ನೂ ರುಕ್ಮಿಣಿ ಹೇಳಿ ಶೋಭಾರಾಣಿಯನ್ನು ದೈವಭಕ್ತಿಸಂಪನ್ನನಾಗಿ ಮಾಡಿದ್ದಳು. ಆ ಕತೆಗಳೆಲ್ಲ ಅವಳ ಮನಸ್ಸಿನಲ್ಲಿ ಹೇಗೆ ಕೂತುಬಿಟ್ಟಿದ್ದವು ಎಂದರೆ, ಯಾವ ಭಿಕ್ಷುಕ ಬಂದರೂ ಅವನು ದೈವಸ್ವರೂಪಿಯೇ ಯಾಕಾಗಿರಬಾರದು ಎಂಬ ಅನುಮಾನ ಅವಳಲ್ಲಿ ಮೊಳೆಯುತ್ತಿತ್ತು. ಎಷ್ಟೋ ಸಲ ಭಿಕ್ಷೆ ಹಾಕುವಾಗ ಅವಳು ಜೋಳಿಗೆ ಮುಂದೆ ಚಾಚಿದವರ ಮುಖವನ್ನೇ, ಅಲ್ಲಿ ದೈವಕಳೆ ಕಂಡರೂ ಕಂಡೀತೇನೋ ಎಂಬ ಆಸೆಯಿಂದ ಗಮನಿಸುತ್ತಿದ್ದದ್ದೂ ಉಂಟು. ಯಾವತ್ತೂ ಅವಳಿಗೆ ಅಂಥದ್ದೇನೂ ಕಂಡಿರಲಿಲ್ಲ. ಹೆಚ್ಚಿನ ಭಿಕ್ಷುಕರು ಸೋಮಾರಿಗಳ ಥರ, ಕೊಲೆಗಡುಕರ ಥರ, ಕಳ್ಳರ ಥರ ಕಾಣಿಸುತ್ತಿದ್ದರು. ಆದರೂ, ಅವರು ಭಿಕ್ಷುಕರಲ್ಲವೇ ಅಲ್ಲ, ವೇಷ ಮರೆಸಿಕೊಂಡ ಮಹಾಮಹಿಮರು ಎಂದು ನಂಬುವುದನ್ನು ಮಾತ್ರ ಅವಳು ನಿಲ್ಲಿಸಿರಲಿಲ್ಲ.

ಆವತ್ತೂ ಹಾಗೆಯೇ ಆಯ್ತು . ಶೋಭಾರಾಣಿ ಸ್ನಾನಕ್ಕೆ ಹೋಗಿದ್ದಳಷ್ಟೇ. ಗೇಟು ಸದ್ದಾಯಿತು. ಯಾರೋ ಆರ್ತತೆ ಮತ್ತು ಗಾಂಭೀರ್ಯ ಬೆರೆತ ದನಿಯಲ್ಲಿ ಭಿಕ್ಷ ಹಾಕೀಮ್ಮಾ ಅಂದದ್ದು ಕೇಳಿಸಿತು. ಸ್ನಾನಕ್ಕೆ ಇಳಿದಿರದೇ ಇದ್ದರೆ ಶೋಭಾ ಅವನನ್ನು ಬರಿಗೈಲಿ ಕಳಿಸುವ ಧೈರ್ಯ ಮಾಡುತ್ತಿರಲಿಲ್ಲ. ಅವನು ಇನ್ನೂ ಕಾಯುತ್ತಿರಬಹುದಾ, ಹೋಗಿರಬಹುದಾ ಎಂಬ ಕಾತರದಲ್ಲಿ ಅವಳು ಬೇಗ ಸ್ನಾನ ಮುಗಿಸಿದ್ದಳು, ತಲೆಯನ್ನೂ ಸರಿಯಾಗಿ ಒರೆಸಿಕೊಳ್ಳದೇ ಹೊರಗೆ ಬಂದು ನೋಡಿದರೆ ಅವನು ಹೊರಟು ಹೋಗಿದ್ದ. ಗೇಟಿನ ಸಮೀಪ ಬಂದು ಬೀದಿಯನ್ನು ಹಣಿಕಿ ಹಾಕಿದರೆ, ರಸ್ತೆಯ ಕೊನೆಯ ತಿರುವಲ್ಲಿ ತಂಬೂರಿ ಮತ್ತು ಭಿಕ್ಷಾಪಾತ್ರೆ ಹಿಡಕೊಂಡ ಎತ್ತರದ ಮನುಷ್ಯನೊಬ್ಬ ಮರೆಯಾಗುವುದರಲ್ಲಿದ್ದ. ಜೋರಾಗಿ ಕೂಗಿ ಅವರನ್ನು ವಾಪಸ್ಸು ಕರೆಸಿಕೊಂಡು ಭಿಕ್ಷೆ ಹಾಕಲೇಬೇಕು ಎಂಬ ಆಸೆಯನ್ನು ಶೋಭಾರಾಣಿ ಕಷ್ಟಪಟ್ಟು ತಡೆದುಕೊಂಡಳು.

ಇಂಥದ್ದೇ ಗಾಬರಿ ಅವಳಿಗೆ ಫೋನ್ ಬಂದಾಗಲೂ ಆಗುತ್ತದೆ. ತನ್ನ ಮೊಬೈಲಿಗೆ ಬಂದ ಪ್ರತಿಕರೆಯನ್ನೂ ಅವಳು ತಪ್ಪದೇ ಸ್ವೀಕರಿಸುತ್ತಾಳೆ. ಮಿಸ್ಡ್ ಕಾಲ್‌ಗಳಿಗೆ ತಪ್ಪದೆ ಉತ್ತರಿಸುತ್ತಾಳೆ. ಎಷ್ಟೋ ಸಲ ಅದು ರಾಂಗ್ ನಂಬರ್ ಆಗಿರುತ್ತದೆ. ಕೆಲವರಿಗೆ ತಾವು ಫೋನ್ ಮಾಡಿದ್ದೇ ಮರೆತುಹೋಗಿರುತ್ತದೆ. ಮತ್ತೆ ಕೆಲವು ಪರಿಚಿತರು `ಯಾಕೋ ಮಾಡ್ದೇರಿ, ಮರೆತೇ ಹೋಯ್ತು’ ಎಂದು ಯಾವ ಭಾವಾವೇಶವೂ ಇಲ್ಲದೇ ಹೇಳಿ ಅವಳನ್ನು ಸಿಟ್ಟಿಗೆಬ್ಬಿಸುತ್ತಾರೆ. ಅವರು ಹೇಳಬೇಕಾಗಿದ್ದ ಯಾವುದೋ ಮಾಹಿತಿ ತಪ್ಪಿಹೋಯಿತು ಎನ್ನುವ ಸಂಕಟ ಅವಳನ್ನು ಬಾಧಿಸುತ್ತಲೇ ಇರುತ್ತದೆ.

ಅವಳ ಈ ಚಾಳಿಯನ್ನು ನರಹರಿ ಗೇಲಿ ಮಾಡುವುದಿದೆ. ಅವಳು ಯಾವುದೋ ಒಂದು ದುರ್ಬಲ ಗಳಿಗೆಯಲ್ಲಿ ತನಗೆ ಭಿಕ್ಷುಕರ ಬಗ್ಗೆ ಯಾಕೆ ಅಷ್ಟೊಂದು ಭಯ ಎನ್ನುವುದನ್ನು ನರಹರಿಗೆ ಹೇಳಿಬಿಟ್ಟಿದ್ದಳು. ನರಹರಿ ಅದನ್ನು ಕೇಳಿಸಿಕೊಂಡು ಗಂಟೆಗಟ್ಟಲೆ ನಕ್ಕಿದ್ದ. ಅವಳ ಫೋನ್ ಪ್ರೀತಿಯೂ ಅವನಿಗೆ ಗೊತ್ತು. ನಡುರಾತ್ರಿ ಬರುವ ಸಿಂಗಲ್ ರಿಂಗ್ ಮಿಸ್ ಕಾಲ್‌ಗಳನ್ನೂ ನಿರ್ಲಕ್ಷ್ಯಮಾಡದ ಅವಳ ಬಗ್ಗೆ ಅವನಿಗೆ ಅನುಕಂಪವೂ ಇತ್ತು. ಎಷ್ಟೋ ಸಲ ಅವನು `ಯಾಕೆ ಹೀಗೆ ಎಲ್ಲವನ್ನೂ ಅತಿಯಾಗಿ ಮಾಡ್ತೀಯ ಹೇಳು. ಫೋನ್ ಮಾಡಿದವರು ಅವರಿಗೆ ಅಗತ್ಯವಿದ್ದರೆ ಮತ್ತೆ ಮಾಡುತ್ತಾರೆ. ನೀನೇ ಮೇಲೆ ಬಿದ್ದು ಮಾಡೋ ಅಗತ್ಯ ಏನಿದೆ. ಹೆಚ್ಚಿನವರು ಮಾಡೋದಕ್ಕೆ ಬೇರೆ ಕೆಲಸ ಇಲ್ಲದೇ ಫೋನ್ ಮಾಡುತ್ತಾರೆ. ಹಾಗೆ ಫೋನಲ್ಲೇ ಏನೋ ಒಂದು ಪವಾಡ ನಡೆದುಬಿಡೋದಿಲ್ಲ. ನೀನು ಮಾಡೋದು ನೋಡಿದ್ರೆ ಶ್ರೀಕೃಷ್ಣನೋ ಶ್ರೀಮನ್ನಾರಾಯಣನೋ ಫೋನ್ ಕೂಡ ಮಾಡಬಹುದು ಅಂದುಕೊಂಡಿರೋ ಹಾಗಿದೆ’ ಎಂದು ಅವಳನ್ನು ಛೇಡಿಸುತ್ತಿದ್ದ. ಅವನು ಹೇಳುವಾಗ ಅದು ಸರಿ ಅನ್ನಿಸುತ್ತಿತ್ತು. `ಇನ್ಮೇಲೆ ನಂಗೆ ಫೋನೇ ಬೇಡ’ ಅಂತ ಅವಳು ಫೋನನ್ನು ಅವನ ಕೈಗೆ ಕೊಟ್ಟುಬಿಡುತ್ತಿದ್ದಳು. ಅವನು ಅದನ್ನು ಆಫ್ ಮಾಡಿ ಪಕ್ಕಕ್ಕೆ ಎಸೆಯುತ್ತಿದ್ದ. ಅದು ಪ್ರಜ್ಞಾಹೀನ ಸ್ಥಿತಿಗೆ ಹೋದ ಅರ್ಧಗಂಟೆಗೆಲ್ಲ ಅವಳ ದೈವಪ್ರಜ್ಞೆ ಜಾಗೃತವಾಗುತ್ತಿತ್ತು. `ಯಾಕೆ ಬೇಕು ರಗಳೆ. ಅಮ್ಮ ಫೋನ್ ಮಾಡಬಹುದು. ಯಾರೋ ಗೆಳೆಯರಿಗೋ ಸಂಬಂಧಿಕರಿಗೋ ತೊಂದರೆ ಆಗಬಹುದು. ಅಕ್ಕ ನಮ್ಮನೆಗೆ ದಾರಿ ಸಿಗದೇ ಇಲ್ಲೆಲ್ಲೋ ಅಲೀತೀರಬಹುದು. ಯಾವುದೋ ಕೊರಿಯರ್ ಅಂಗಡಿಯವರು ನಮ್ಮನೆ ದಾರಿ ಕೇಳ್ತಾ ಫೋನ್ ಮಾಡಬಹುದು’ ಎಂದೆಲ್ಲ ಯೋಚಿಸಿ ಫೋನ್ ತಂದು ಆನ್ ಮಾಡಿ ತಲೆದಿಂಬಿನ ಪಕ್ಕ ಇಟ್ಟುಕೊಳ್ಳುತ್ತಿದ್ದಳು. ಅವಳ ಫೋನಿಗೆ ಮಿಸ್ಡ್ ಕಾಲ್ ಅಲರ್ಟ್ ಆಕ್ಟಿವೇಟ್ ಆಗಿದ್ದರಿಂದ ಆಫ್ ಮಾಡಿದಾಗ ಫೋನ್ ಮಾಡಿದ್ದು ಕೂಡ ತಿಳಿಯುತ್ತಿತ್ತು. ಒಂದರ್ಧ ಗಂಟೆ ಸ್ವಿಚಾಫ್ ಮಾಡಿಟ್ಟಾಗಲೂ ಐದೋ ಆರೋ ಕರೆಗಳು ಮಿಸ್ಸಾಗಿರುತ್ತಿದ್ದವು. ಅವರಿಗೆ ಪೋನ್ ಮಾಡಿ ಯಾರು ಏನು ಎಂದು ವಿಚಾರಿಸಿಕೊಳ್ಳದ ಹೊರತು ಅವಳಿಗೆ ಸಮಾಧಾನ ಆಗುತ್ತಿರಲಿಲ್ಲ. ಹೀಗಾಗಿ ಫೋನ್ ಆಫ್ ಮಾಡುವುದು ನಿರರ್ಥಕ ಎಂಬ ತೀರ್ಮಾನಕ್ಕೆ ನರಹರಿ ಬಂದುಬಿಟ್ಟಿದ್ದ.

ನರಹರಿಗೆ ಶೋಭಾರಾಣಿಯ ಮೇಲೆ ಅನುಕಂಪ, ಅಕ್ಕರೆ. ನರಹರಿ ಅವಳನ್ನು ಮದುವೆಯಾಗಿ ಏಳು ವರ್ಷವಾಗಿದೆ. ಏಳು ವರ್ಷದಲ್ಲಿ ಅವರಿಬ್ಬರೂ ಯಾವತ್ತೂ ಜಗಳ ಆಡಿದವರೇ ಅಲ್ಲ. ಜಗಳಾಡದೇ ಇರುವುದರಿಂದಲೇ ತಮ್ಮ ನಡುವೆ ಪ್ರೀತಿ ಇಲ್ಲವೇನೋ ಎಂದು ಅನೇಕ ಸಲ ನರಹರಿ ಯೋಚಿಸಿದ್ದುಂಟು. ಅವನ ಮಿತ್ರರೆಲ್ಲ ಎರಡು ದಿನಕ್ಕೊಮ್ಮೆ ಕಡ್ಡಾಯವೆಂಬಂತೆ ಹೆಂಡತಿಯ ಹತ್ತಿರ ಜಗಳ ಕಾಯುತ್ತಿದ್ದರು. ಅದನ್ನು ತಮಾಷೆಯಾಗಿ ನರಹರಿಯ ಮುಂದೆ ವರದಿ ಒಪ್ಪಿಸುತ್ತಿದ್ದರು. ಅವರ ಜಗಳದ ಕಾರಣ ಕೇಳುವಾಗ ನರಹರಿಯ ತುಟಿಯಂಚಲ್ಲಿ ವಿಷಾದಭರಿತ ನಗುವೊಂದು ಮೂಡುತ್ತಿತ್ತು.

ಅದೆಲ್ಲ ಜಗಳ ಆಡುವುದಕ್ಕೆ ಕಾರಣವೇ ಅಲ್ಲ ಎಂಬುದು ಅವನ ನಂಬಿಕೆ. `ರಾತ್ರಿ ಊಟಕ್ಕೆ ಕರಕೊಂಡು ಹೋಗ್ತೀನಿ ಅಂದಿದ್ದೆ. ಆಪೀಸಲ್ಲಿ ಲೇಟಾಯ್ತಲ್ಲ. ಮನೆಗೆ ಹೋಗುವ ಹೊತ್ತಿಗೆ ಅವಳು ಏ.ಕೆ. 47 ಹಿಡ್ಕೊಂಡು ರೆಡಿಯಾಗಿದ್ಳು. ಒಂದು ಗಂಟೆ ಜಗಳ ಆಡಿದ್ವಿ’ ಅಂತಲೋ, `ಅವಳ ಚಿಕ್ಕಮ್ಮನ ಮಗ ಬರ್ತಿದ್ದಾನಂತೆ. ಅವನನ್ನು ನಾನು ಬಸ್‌ಸ್ಟಾಂಡಿಗೆ ಹೋಗಿ ಕರಕೊಂಡು ಬರಬೇಕಂತೆ. ನಾನು ಹೋಗೋಲ್ಲ ಅಂದೆ. ನಾನೇ ಹೋಗ್ತೀನಿ ಅಂತ ಹೋದ್ಳು. ಬಂದ ಮೇಲೆ ಒಂದೂ ಮಾತಿಲ್ಲ. ಇವತ್ತಿಡೀ ಔಟ್‌ಗೋಯಿಂಗ್ ಬಾರ್‌ಡ್’’ ಎಂದೋ ಅವರೆಲ್ಲ ತಮ್ಮ ಕೌಟುಂಬಿಕ ಕಲಹದ ವಿಲಕ್ಷಣ ಗಳಿಗೆಗಳನ್ನು ಹಂಚಿಕೊಳ್ಳುತ್ತಿದ್ದರು. ನರಹರಿ ಮಾತ್ರ ಯಾವತ್ತೂ ಅದನ್ನೆಲ್ಲ ಹೇಳಿಕೊಂಡವನಲ್ಲ. ಹೇಳಿಕೊಳ್ಳುವುದಕ್ಕೆ ಅಂಥ ಘಟನೆಗಳೇ ಇಲ್ಲವಲ್ಲ ಎಂದು ಅವನು ಅನೇಕ ಸಲ ಅಂದುಕೊಂಡಿದ್ದಾನೆ.

ನರಹರಿ ಹುಟ್ಟಿಬೆಳೆದದ್ದು ಉತ್ತರಕನ್ನಡದ ಪುಟ್ಟ ಹಳ್ಳಿ ಬನವಾಸಿಯಲ್ಲಿ. ಶೋಭಾರಾಣಿಯದು ತರೀಕೆರೆ. ಅವಳನ್ನು ನೋಡುವುದಕ್ಕೆಂದು ತರೀಕೆರೆಗೆ ಹೋದಾಗ ನರಹರಿಗೆ ಮದುವೆ ಆಗುವ ಯಾವ ಆಸೆಯೂ ಇರಲಿಲ್ಲ. ಅಪ್ಪ ಆನಂದರಾಯ ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ದರು. `ನಿಂಗೆ ಬೇರೆ ಯಾವ ಹುಡುಗೀನೂ ಸಿಗಲ್ಲ ನೋಡ್ತಿರು. ಸರ್ಕಾರಿ ಆಫೀಸಲ್ಲಿ ಕೆಲಸ ಮಾಡ್ತಾ ಹತ್ತೋ ಹನ್ನೆರಡೋ ಸಾವಿರ ಸಂಬಳ ತಗೊಳ್ಳೋ ನಿನ್ನನ್ನು ಯಾರೋ ಮದುವೆ ಆಗ್ತಾರೆ. ನಮ್ಮ ಜಾತಿಯಲ್ಲಿ ಇರೋರೆಲ್ಲ ಶ್ರೀಮಂತರೇ. ತೀರಾ ಬಡವರ ಮನೆ ಹುಡುಗಿ ತಂದ್ರೆ ಕಷ್ಟಕ್ಕೆ ಸುಖಕ್ಕೆ ಮಾವನ ಮನೆ ಇದೆ ಅಂತ ನೆಚ್ಚಿಕೊಳ್ಳೋಹಾಗಿಲ್ಲ. ಈ ಮನೆತನ ಚೆನ್ನಾಗಿದೆ. ತಕ್ಕಮಟ್ಟಿಗೆ ಶ್ರೀಮಂತರು. ಒಬ್ಬಳೇ ಮಗಳು. ಇಡೀ ಆಸ್ತಿ ಇವತ್ತಲ್ಲ ನಾಳೆ ಅವಳ ಹೆಸರಿಗೇ ಆಗುತ್ತೆ. ಮಕ್ಕಳ ಮದುವೆಗೋ ಏನಕ್ಕೋ ಸಹಾಯ ಆಗುತ್ತೆ’ ಅಂತ ಉಪದೇಶ ಮಾಡಿಯೇ ಅವನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಕೂಡ ಆನಂದರಾಯರು ಹುಡುಗಿಯ ಕುರಿತು ಹೆಚ್ಚಿಗೇನೂ ಕೇಳಿರಲಿಲ್ಲ. ಎಷ್ಟು ತೋಟ ಇದೆ. ಉತ್ಪತ್ತಿ ಎಷ್ಟು. ನೀರಿನ ವ್ಯವಸ್ಥೆ ಹ್ಯಾಗೆ. ಮುಂದೆ ತೋಟ ವಿಸ್ತಾರ ಮಾಡೋದಕ್ಕೆ ಜಾಗ ಇದೆಯಾ. ಮಾರಿದರೆ ಎಷ್ಟು ಬರುತ್ತೆ ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕಿದ್ದರು. ಆ ಪ್ರಶ್ನೆಗಳಿಗೆ ಬರುವ ಉತ್ತರದ ಮೇಲೆ ತಾನು ಮದುವೆಯಾಗುವ ಹುಡುಗಿ ನಿರ್ಧಾರವಾಗುತ್ತಾಳೆ ಅಂತ ನರಹರಿಗೆ ಅನ್ನಿಸಿ ಸಿಟ್ಟುಬಂದಿತ್ತು. ಆ ಸಿಟ್ಟಲ್ಲೇ ಅವನು `ನಿಮ್ಮ ಮಗಳು ಏನು ಓದಿದ್ದಾಳೆ’ ಅಂತ ಕೇಳಿದ್ದ. ಶೋಭಾರಾಣಿಯ ಅಪ್ಪ ಗಜಾನನ ಹೆಗಡೆ ಅದೊಂದು ಪ್ರಶ್ನೆಯೇ ಅಲ್ಲ ಎಂಬಂತೆ ತಳ್ಳಿ ಹಾಕಿದ್ದರು. `ಹೆಣ್ಣಲ್ವಾ, ನಾವು ಹೆಚ್ಚು ಓದಿಸೋಕೆ ಹೋಗಲಿಲ್ಲ. ಹೆಣ್ಮಕ್ಕಳು ಎಷ್ಟು ಓದಿದ್ರೂ ಅಷ್ಟೇ. ಧರ್ಮದಂಡ. ನಿಮಗೆ ಅವಳನ್ನು ಕೆಲಸಕ್ಕೆ ಕಳಿಸೋ ಯೋಚನೆ ಏನಾದ್ರೂ ಉಂಟಾ? ಇದ್ರೆ ಈಗ್ಲೇ ಹೇಳಿಬಿಡಿ.. ನಮ್ಮ ಹುಡುಗಿ ಕೆಲಸ ಮಾಡೋದು ನಮಗೆ ಸರ್ವಥಾ ಇಷ್ಟ ಇಲ್ಲ‘ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದರು. ಆನಂದರಾಯರು, `ನೀವು ಕಳ್ಸಿ ಅಂತ ಹೇಳಿದ್ರೂ ನಮ್ಮ ಸೊಸೇನ ನಾವು ದುಡಿಯೋಕೆ ಕಳಿಸೋದಿಲ್ಲ’ ಎಂದು ಅದೇ ಬಿರುಸಿನಲ್ಲಿ ಉತ್ತರ ಕೊಟ್ಟಿದ್ದರು. ಅದಾಗಿ ಆರನೇ ತಿಂಗಳಿಗೆ ಇಬ್ಬರಿಗೂ ಬನವಾಸಿಯ `ರಾಘವೇಂದ್ರ ಕುಟೀರ’ದಲ್ಲಿ ಮದುವೆ ಆಗಿತ್ತು.

ಛೇ, ಭಿಕ್ಷುಕ ಹೊರಟೇ ಹೋದನಲ್ಲ. ಏನಾದ್ರೂ ಕೊಡಬಹುದಾಗಿತ್ತು. ಅಂಗಡಿಗೆ ಹೋಗಿ ತರಕಾರಿಯನ್ನಾದರೂ ತರುತ್ತೇನೆ ಎಂದುಕೊಂಡು ಬ್ಯಾಗ್ ಹಿಡಕೊಂಡು ಮನೆ ಬೀಗದ ಕೀ ಎತ್ತಿಕೊಂಡು ತರಕಾರಿಗೆ ಬೇಕಾದಷ್ಟೇ ದುಡ್ಡನ್ನು ಕೈಯಲ್ಲಿಟ್ಟುಕೊಂಡು ಮನೆಗೆ ಬೀಗ ಹಾಕಿ ಗೇಟು ದಾಟಬೇಕು ಅನ್ನುವಷ್ಟರಲ್ಲಿ ಶೋಭಾರಾಣಿಗೆ ಮತ್ತೆ ಅದೇ ಧ್ವನಿ ಕೇಳಿಸಿತು. ಅಮ್ಮಾ ಭಿಕ್ಷೆ ಹಾಕೀ. ಅಂತೂ ಬಂದನಲ್ಲ ಅಂತ ಶೋಭಾರಾಣಿ ತಿರುಗಿ ನೋಡಿದರೆ ಅಲ್ಲಿ ಯಾರೂ ಇರಲಿಲ್ಲ.

ತಾನು ಕೇಳಿಸಿಕೊಂಡದ್ದೇ ಸುಳ್ಳಾ, ಅವನು ಕರೆದದ್ದೇ ಸುಳ್ಳಾ. ಕೇಳಿಸಿದ ಹಾಗೆ ಅನ್ನಿಸಿರಬೇಕು ಅಂದುಕೊಂಡು ಶೋಭಾ ಗೇಟು ತೆಗೆದು ಮನೆಯ ಪಕ್ಕದ ಕಾಲುದಾರಿಯಲ್ಲಿ ಸಾಗಿ ನಾಣಿಯ ತರಕಾರಿ ಅಂಗಡಿಗೆ ಹೋದಳು. ಅಮ್ಮಾ ಭಿಕ್ಷೆ ಹಾಕೀ ಎಂಬ ಧ್ವನಿ ತನ್ನನ್ನು ಹಿಂಬಾಲಿಸುತ್ತಿದೆ ಅಂತ ಯಾಕೋ ಅನ್ನಿಸುತ್ತಿತ್ತು.

8 ಟಿಪ್ಪಣಿಗಳು (+add yours?)

 1. Nasser Siddik Jubail
  ಜನ 11, 2011 @ 11:13:58

  jogiya itteechegina lekhanagalella yaavudo maayaa lokhakke kondoyyuvantide.suspence thriller aagi hora baruttide.nimma snehita appucha hegiddaare jogiyavare?

  ಉತ್ತರ

 2. Dr.M.Nagaraja
  ಜನ 11, 2011 @ 10:53:10

  Nice story, I am very eager to read full novel.

  ಉತ್ತರ

 3. nagaraj
  ಜನ 11, 2011 @ 10:46:45

  Wonderful story telling. Kannige kattidantide kathe.

  ಉತ್ತರ

 4. ravi kulkarni
  ಜನ 10, 2011 @ 12:31:27

  Nimmantha innobba lekhakarilla. abhinandane.

  ಉತ್ತರ

 5. prakashchandra
  ಜನ 10, 2011 @ 11:20:41

  jogi kathegalendare eno visesha idde iruthade. trailer ishtu chennaagiddare kaadambari poorthi innoo chennage iruthade ennodu guarantee…!

  ಉತ್ತರ

 6. shridhar hegde bhadran
  ಜನ 09, 2011 @ 17:52:21

  poorti Odalu kaayuttiddEne……….

  ಉತ್ತರ

 7. ಸುಘೋಷ್ ಎಸ್. ನಿಗಳೆ
  ಜನ 09, 2011 @ 08:11:50

  ಸೂಪರ್ರೋ…ಸೂಪರ್ರು…

  ಉತ್ತರ

 8. ಸಂದೀಪ್ ಕಾಮತ್
  ಜನ 08, 2011 @ 20:40:57

  Trailer ಚೆನ್ನಾಗಿದೆ !!!

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: