ಮಲೆಗಳಲ್ಲಿ ಮದುಮಗಳು: ಭೀರುವಿಗೆ ಭಯಂಕರ ರಸಿಕ ಧೀರಂಗೆ ಕಲಾಶಂಕರ

ಬಾ ಹುಲಿಕಲ್ ನೆತ್ತಿಗೆ-13

-ಪ್ರೊ. ಶಿವರಾಮಯ್ಯ

ಸ್ವಲ್ಪ ದೂರ ಹೋದಮೇಲೆ ಗುಡ್ಡದ ಕಡಿಪು ಕಡಿಮೆಯಾಗತೊಡಿಗಿ, ಕಡೆಗೆ ಸಮತಟ್ಟಾಗುತ್ತಾ ಬಂದಿತು. ಇನ್ನೂ ಸ್ವಲ್ಪ ಮುಂದೆ ಹೋದಮೇಲೆ ಮರಗಳೂ ವಿರಳವಾಗಿ, ಹಳು ಹಕ್ಕಲಾದಂತೆ ತೋರಿ, ಕಡೆಗೆ ಬಂಡೆಯ ಹಾಸುಗಲ್ಲಿನ ಮೇಲೆ ನಿಂತಾಗ ನೆತ್ತಿಯ ಮೇಲೆ ಆಕಾಶವೂ ಕಾಣಿಸತೊಡಗಿತು. ಚುಕ್ಕಿ ಕಿಕ್ಕಿರಿದು ಕಾಡಿನ ಒಳಗಿದ್ದ ಕಗ್ಗತ್ತಲೆಗೆ ಬದಲಾಗಿ ನಕ್ಷತ್ರ ಕಾಂತಿಯ ಮಬ್ಬುಗತ್ತಲೆ ಹಬ್ಬಿ, ವಸ್ತುಗಳ ಬಹಿರಾಕಾರಗಳೂ ಮಂಜುಮಂಜಾಗಿ ಹೆಂದಕ್ಕೆ ಸರಿದು, ದೂರದೂರದ ಪರ್ವತ ಶ್ರೇಣಿಗಳ ಮಷೀಮಯ ರೂಪಗಳಲ್ಲಿ ಕೊನೆಗೊಂಡಿತ್ತು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಇದೇ ಹುಲಿಕಲ್ಲು ನೆತ್ತಿ ಕಣೇ! ಎಂದನು ಗುತ್ತಿ. (ಮಲೆಗಳಲ್ಲಿ ಮದುಮಗಳು, ಪು. 235-237. ಮೂರನೇ ಮುದ್ರಣ 1985, ಉದಯರವಿ ಪ್ರಕಾಶನ, ವಾಣೀವಿಲಾಸಪುರಂ, ಮೈಸೂರು)

ಆದ್ದರಿಂದಲೇ ಹುಲಿ ಸಂಚಾರದ ತಂಗುದಾಣವಾದ ಗುಡ್ಡಕ್ಕೆ ಹುಲಿಕಲ್ಲುಗುಡ್ಡ ಎಂಬ ಅನ್ವರ್ಥನಾಮ! ಅಕ್ಷರಶಃ ಅದು ‘ಭೀರುವಿಗೆ ಭಯಂಕರ ರಸಿಕ ಧೀರಂಗೆ ಕಲಾಶಂಕರ’ ಇಂಥ ಭಯಾನಕ ಗುಡ್ಡದ ಮೇಲಿರುವ ಕಾವಲು ಮಂಟಪದಲ್ಲಿ ಪೀಂಚಲು, ಐತ, ಚಿನ್ನಮ್ಮ, ಮುಕುಂದಯ್ಯ ಗುತ್ತಿ ತಿಮ್ಮಿಯರು ಒಂದು ರಾತ್ರಿ ಕಳೆಯುತ್ತಾರೆ. ‘ಶಿವ ಮಂದಿರ ಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕ್ಕೆ ಈ ಆರು ಜನ ಮದುಮಕ್ಕಳನ್ನು ತಂದುನಿಲ್ಲಿಸುವ ಕುವೆಂಪು ಅವರ ಸಂವಿಧಾನ ಕೌಶಲ ಅನನ್ಯ.

ಅವರಲ್ಲಿ ತಿಮ್ಮಿ ಗುತ್ತಿಯರು ನವದಂಪತಿಗಳು ಪೀಂಚಲು ಎಳೆಬಸುರಿ-ಅವಳ ಗಂಡ ಐತ; ಮದುವಣಗಿತ್ತಿಯಾಗಿ ಅದೇ ರಾತ್ರಿ ಹಸೆಮಣೆ ಏರಬೇಕಿದ್ದ ಚಿನ್ಮಮ್ಮ ತನ್ನ ಪ್ರೀತಿ ಪಾತ್ರ ಮುಕುಂದಯ್ಯನೊಡನೆ ಹುಲಿಕಲ್ ನೆತ್ತಿಗೆ ಹೊರಟು ಬಂದಿದ್ದಾಳೆ_ಒಲ್ಲದ ಮದುವೆಗೆ ಒಪ್ಪದೆ. ಈ ಮೂರು ಜೋಡಿಗಳ ಸಾಹಸಯಾತ್ರೆಗೆ ಹುಲಿಕಲ್ಲು ಗುಡ್ಡವೇ ನಿಲ್ದಾಣ! ಹೆಬ್ಬುಲಿಯೂ ನಿಬ್ಬೆರಗಾಗಿ ನಿಂತು ದಾರಿ ಬಿಟ್ಟಿರಬೇಕು. ಆ ಶುಭ ಮೂಹೂರ್ತದಲ್ಲಿ ಶಿವ ಪಾರ್ವತಿಯರು ಬಂದು ಹೂಮಳೆಗರೆದು ಆಶೀರ್ವದಿಸಿರಬೇಕು. ಅಂಥ ಪವಿತ್ರಾತ್ಮರು ಆ ಮೂರು ಜೋಡಿಗಳು. ಕನ್ನಡ ಸಾಹಿತ್ಯ ಲೋಕದಲ್ಲಿ ಇದೊಂದು ಮನೋನ್ನತ ಎತ್ತರ .

ಉತ್ತುಂಗ ಬೆಟ್ಟದ ಕೋಡುಗಲ್ಲಿಗೆ ಕಬ್ಬಿಣದ ಸರಪಳಿಯಿಂದ ಕಟ್ಟಲ್ಪಟ್ಟ ಷೆಲ್ಲಿಯ ಚಿರಂಜೀವಿ ಪ್ರೊ. ಮಿಥಿಯಸ್; ಖೇಯಾಸ್ ಎಂಬ ಮಹಾಸಾಗರವನ್ನು ಲಂಘಿಸಲು ಹೊರಟ ಮಿಲ್ಟನ್ನನ ಪ್ರತೀಕಾರ ಮೂತರ್ಿ ಸೇಟನ್; ಶತಯೋಜನ ಸಾಗರದಾಟಲು ಹೊರಟ ವಾಲ್ಮೀಕಿಯ ಆಂಜನೇಯ ಇತ್ಯಾದಿ. ಜಗತ್ಸಾಹಿತ್ಯದ ಇಂಥ ಅನೇಕ ಸಾಹಸಯಾತ್ರೆಗಳಿಗೆ ಈ ಮದುಮಕ್ಕಳ ಚಾರಣ ಪಯಣ ಹೊಯ್ಕಯ್ಯಾಗಿ ನಿಲ್ಲುತ್ತದೆ. ಪಂಪನ ವೈಶಂಪಾಯ ಸರೋವರ ಇದು ಪಾತಾಳಬಿಲಕ್ಕೆ ಬಾಗಿಲ್’ ಎಂಬಂತ್ತಿದ್ದರೆ ಕುವೆಂಪುರವರ ಹುಲಿಕಲ್ಲು ಗುಡ್ಡ ಸ್ವರ್ಗಕ್ಕೆ ನಿಚ್ಚಣಿಕೆ ಎಂಬತಿದೆ.

ಕನ್ನಡ ಸಾಹಿತ್ಯದಲ್ಲಿ ಹುಲಿಕಲ್ಲುಗುಡ್ಡವನ್ನು ಹೋಲುವ ಇನ್ನೂ ಒಂದೆರಡು ಎತ್ತರಗಳಿವೆ. ಒಂದು ಪಂಪಕವಿ ಆದಿಪುರಾಣದಲ್ಲಿ ಕಟ್ಟಿನಿಲ್ಲಿಸಿರುವ ಸಮವಸರಣ ಮಂಟಪ; ಇನ್ನೊಂದು ಶಿವಗಣ ಪ್ರಸಾದಿ ಮಹಾದೇವಯ್ಯನು ಶೂನ್ಯಸಂಪಾದನೆಯಲ್ಲಿ ನಿಮರ್ಿಸಿರುವ ಅನುಭವಮಂಟಪ. ಇವು ಅಂಥ ಎತ್ತರದ ಪ್ರತಿಮೆಗಳು. ಆದರೆ ಕುವೆಂಪು ಸೃಜಿಸಿರುವ ಹುಲಿಕಲ್ಲು ಗುಡ್ಡ (ಕುಂದಾದ್ರಿ) ಇವೆರಡಕ್ಕೂ ಭಿನ್ನವಾಗಿ ಪ್ರಾಕೃತಿಕವಾಗಿ ತಾನೇ ತಾನಾಗಿ ಮೈದೋರಿರುವುದನ್ನು ಮಲೆನಾಡಿನ ಚಾರಣಿಗರೆಲ್ಲ ಬಲ್ಲರು. ಕವಿಶೈಲ, ಸಿಬ್ಬಲುಗುಡ್ಡೆ, ನವಿಲುಕಲ್ಲು, ಹುಲಿಕಲ್ನೆತ್ತಿ-ಹೀಗೆ ಕುವೆಂಪು ಸಾಹಿತ್ಯದಲ್ಲಿ ಕಂಡುಬರುವ ಕೆಲವು ಅಜರಾಮರ ಸೃಜನಶೀಲ ರಸಸ್ಥಳಗಳು.

ಈ ಆರೂ ಜನ ಆದಿನ ಹುಲಿಕಲ್ಲು ನೆತ್ತಿಯ ಕಾವಲು ಮಂಟಪದಲ್ಲಿ ನೆರೆಯುವ ಮೊದಲೇ ಒಂದು ದಿನ ಬೆಟ್ಟಳ್ಳಿಕೇರಿಯಿಂದ ಓಡಿಬಂದ ತಿಮ್ಮಿ ಮತ್ತು ಗುತ್ತಿಯರು ಅಲ್ಲಿ ರಾತ್ರಿ ತಂಗಿದ್ದು, ಮರುದಿನ ಹೊತ್ತು ಹುಟ್ಟುವುದನ್ನು ಕಂಡಿದ್ದರು. ಉಷಃಕಾಲದ ಮೂಡಣ ದಿಗಂತವನ್ನು ಕಂಡ ತಿಮ್ಮಿ ಇದೇ ಮೊದಲ ಸಾರಿ ಎಂಬಂತೆ ವಿಸ್ಮಯದಿಂದ ಕೂಗಿಕೊಂಡಳು ಅಯ್ಯೋ ಅಯ್ಯೋ ಅಯ್ಯೋ! ಅದೇನು ಬಾವ, ಅದೂ? ನೊರೆ, ನೊರೆ, ನೊರೆ, ಹಾಲು! ಕಡ್ಳು ನಿಂತ್ಹಾಂಗೆ ಅದೆಯಲ್ಲಾ! ಆ ಮೇಲೆ ಹತ್ತಿಪ್ಪತ್ತು ಮಾರು ಇಬ್ಬರೂ ಇಳಿಯತೊಡಗಿದ್ದರು. ತಿಮ್ಮಿ ಮತ್ತೆ ಅದ್ಭುತ ದರ್ಶನವಾದಂತೆ ಕೂಗಿಕೊಂಡಳು. ಗುತ್ತಿಗೆ ದಿಗಿಲಾಗುವಂತೆ, ಅಯ್ಯೋ ಅಯ್ಯೋ ಅಯ್ಯೋ! ಬಾವ, ಬಾವ, ಬಾವ! ಅಲ್ನೋಡು, ಅಲ್ನೋಡು, ಅಲ್ನೋಡು! ಮುಂದೆ ಮಾತುನಿಂತು ಕೈಮುಗಿದುಕೊಂಡು ಭಾವಪರವಶಳಾಗಿ ನಿಂತುಬಿಟ್ಟಳು (ಮದುಮಗಳು ಪುಟ-231) ಈ ಸನ್ನಿವೇಶ ಕುವೆಂಪು ಅವರ ಪಕ್ಷಿಕಾಶಿ ಸಂಕಲನದಲ್ಲಿರುವ ‘ಬಾ ಫಲ್ಗುಣ ರವಿ ದರ್ಶನಕೆ’ ಎಂಬ ಕವಿತೆಗೆ ಬರೆದ ಬಾಷ್ಯ ಎಂಬಂತಿದೆ. ಅಲ್ಲಿ ಮೂಡಣ ರವಿ ದಯಮಾಡುತ್ತಿದ್ದಾನೆ:

ತೆರೆತೆರೆಯಾಗಿಹ ನೊರೆ ನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ

ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀ ಸಮಹಿಮಬಾನ್ಕರೆಗೆ

ಜೀವ ಚೈತನ್ಯದಾಯಕನಾದ ರವಿಯ ಆಗಮನದಿಂದ ಭುವಿಯೆ ಸಂಚಲನಗೊಳ್ಳುತ್ತಿದೆ. ಅದು ಕವಿಕಣ್ಣು ಎಂತೋ ಅಂತೆಯೇ ಬೆಟ್ಟದ ಬೀಡಿನ ಜೀವಿಗಳಾದ ತಿಮ್ಮಿ ಗುತ್ತಿಯರ ಅನುಭವಕ್ಕೂ ಬರುತ್ತದೆ. ಅವರ ತೊದಲ್ನುಡಿಗೆ ಕವಿ ಮಾತು ಕೊಟ್ಟರೆ, ಅವರು ಆ ಕವನಕ್ಕೆ ಭಾಷ್ಯ ಬರೆದರೊ ಎಂಬಂತಿದೆ ಈ ಎರಡೂ ಸನ್ನಿವೇಶಗಳ ಸಾಂಗತ್ಯ.

ಇಲ್ಲಿಯೇ ಗುತ್ತಿಯ ಜೀವನ ಸಂಗಾತಿ ಅವನ ಹುಲಿಯ ಎಂಬ ನಾಯಿಯ ಬಗ್ಗೆಯೂ ಅಗತ್ಯ ಒಂದು ಮಾತು ಹೇಳಬೇಕಾಗಿದೆ. ಹುಲಿಯನಿಲ್ಲದೆ ಗುತ್ತಿ ಕಾಡಿಗೆ ಅದೂ ಆ ಹುಲಿಕಲ್ಲುನೆತ್ತಿಗೆ ಹೋದವನೆಲ್ಲ. ಅದು ಮುಕುಂದಯ್ಯನಿಗೆ ‘ಒಲುಮೆ ಕರುಣೆಗೆ ಸಾಟಿಯೆ’ ಎಂಬ ನೀತಿ ಪಾಠ ಕಲಸಿದೆ.

ಮುಂದುವರೆಯುವುದು………..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: