ಸಂಚಾರಿ ಕಳವಾಗಿ ವಾಪಾಸು ಸಿಕ್ಕಿದ ಪ್ರಸಂಗವು…

ರುಕ್ಮಿಣಿ ಮಾಲಾ

ಮಾಯಾ ಲಹರಿ

೩೦-೧೦-೨೦೧೦ರಂದು ಮೈಸೂರು ನಿಲ್ದಾಣದಿಂದ ರಾತ್ರಿ ೯ ಗಂಟೆಗೆ ಮಧುರೆಗೆ ಹೋಗಲು ನಾವು ೧೨ ಮಂದಿ ಸರ್ಕಾರಿ ರಾಜಹಂಸ ಬಸ್ಸೇರಿದಾಗ ಬಾಗಿಲಲ್ಲಿ ಇಬ್ಬರು ನನ್ನನ್ನು ನೂಕುತ್ತ ಇಳಿದರು. ಬಸ್ಸು ಹತ್ತುವ ಜಾಗ ಇಕ್ಕಟ್ಟು. ಒಬ್ಬರಿಗೆ ಮಾತ್ರ ಹೋಗಲು ಜಾಗ ಅಲ್ಲಿ. ನಾನು ಒಳಗೆ ಹತ್ತಿ ಕುಳಿತು ಜಂಭದ ಚೀಲ ನೋಡುತ್ತೇನೆ ಜಿಪ್ ಅರ್ಧ ತೆರೆದಿದೆ. ಅರೆ ಇದು ಯಾರು ಜಿಪ್ ತೆರೆದದ್ದು ಎಂದು ಆಶ್ಚರ್ಯದಿಂದ ಒಳಗೆ ಕೈ ಹಾಕಿದರೆ ನನ್ನ ಸಂಚಾರಿ (ಮೊಬೈಲ್) ಮಾಯ. ಪಕ್ಕದಲ್ಲಿ ಕುಳಿತ ಅಮ್ಮನಿಗೆ ಹೇಳಿ, ಅಮ್ಮನ ಸಂಚಾರಿಯಿಂದ ಕೂಡಲೇ ಮನೆಯಲ್ಲಿದ್ದ ಮಗಳು ಅಕ್ಷರಿಗೆ ನಡೆದ ಸಂಗತಿ ತಿಳಿಸಿ, ಸಿಮ್ ಬ್ಲಾಕ್ ಮಾಡಲು ಹೇಳಿದೆ.

ಅದರಲ್ಲಿದ್ದ ಸಿಮ್ ಅವಳದ್ದು (ಚೆನ್ನೈ ಸಿಮ್). ತಮಿಳುನಾಡಿಗೆ ಹೋಗುವುದೆಂದು ರೋಮಿಂಗ್ ದರ ತಪ್ಪಿಸುವ ಸಲುವಾಗಿ ನನಗೆ ಅವಳ ಸಿಮ್ ಕೊಟ್ಟಿದ್ದಳು. ನನ್ನಲ್ಲಿದ್ದ ಮೊಬೈಲಿನಲ್ಲಿ tracker ಇತ್ತು. ಅದಕ್ಕೆ ಬೇರೆ ಯಾವುದೇ ಸಿಮ್ ಹಾಕಿದರೂ ಕೂಡಲೇ ಅನಂತನ ಸಂಚಾರಿಗೆ ಕ್ಷಿಪ್ರ ಸಂದೇಶ ಬರುತ್ತದೆ ಸಿಮ್ ಕಳುವಾಗಿದೆ ಎಚ್ಚರ ಎಂದು ಹಾಗೂ ಯಾವ ಸಿಮ್ ಹಾಕಿದ್ದಾರೋ ಆ ಸಂಖ್ಯೆ ಬರುತ್ತದೆ. ಮೊಬೈಲ್ ನ imie ಸಂಖ್ಯೆಯನ್ನು ತಡೆಗಟ್ಟಲು ಆಗುತ್ತ ನೋಡು ಎಂದು ಹೇಳಿದೆ. ಮುಂದೆ ೩ ದಿನ ನಮ್ಮ ಪ್ರಯಾಣದುದ್ದಕ್ಕೂ ನಾನು ಅಕ್ಷರಿಗೆ ದೂರವಾಣಿಸಲಿಲ್ಲ. ಆ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಅದೃಷ್ಟ ಇದ್ದರೆ ಸಿಕ್ಕೀತು ಎಂದು ಸುಮ್ಮನಾದೆ.

೨ನೇ ತಾರೀಕು ಬೆಳಗ್ಗೆ ೪.೩೦ ಗಂಟೆಗೆ ರಾಮೇಶ್ವರ ದೇವಾಲಯದಲ್ಲಿ ಸ್ಫಟಿಕಲಿಂಗದ ಅಭಿಷೇಕದ ದರ್ಶನಕ್ಕೆ ಸರತಿ ಸಾಲಿನಲ್ಲಿ ಕಾದಿದ್ದಾಗ, `ನೀನೇನಾದರೂ ಮೊಬೈಲ್ ಸಿಕ್ಕಲು ದೇವರಲ್ಲಿ ಪ್ರಾರ್ಥನೆ ಮಾಡಿದ್ದೀಯ? ನಿನ್ನ ಮೊಬೈಲ್ ಸಿಕ್ಕಿದೆ’ ಎಂದ. `ಅಕ್ಷರಿಯಿಂದ ಕ್ಷಿಪ್ರ ಸಂದೇಶ ಬಂದಿದೆ’ ಎಂದ ಅಣ್ಣ. ನಿಜ ಹೇಳುತ್ತೀದ್ದೀಯ ಎಂದೆ ಬೆರಗಿನಿಂದ. `ಹೌದು. ನಿನ್ನೆ ರಾತ್ರಿಯೇ ೨ ಸಂದೇಶ ಕಳುಹಿಸಿದ್ದಾಳೆ. ನಾನು ನೋಡಿದ್ದು ಇವತ್ತು’ ಎಂದು ಹೇಳಿದ.

೩ನೇ ತಾರೀಕು ಬೆಳಗ್ಗೆ ೭.೪೫ಕ್ಕೆ ಮೈಸೂರು ತಲಪಿ ಮನೆಗೆ ಬಂದಾಗ ಅಕ್ಷರಿ ಸವಿವರವಾಗಿ ಮೊಬೈಲ್ ಸಿಕ್ಕಿದ ಕತೆಯನ್ನು ವಿವರಿಸಿದಳು. ವಿವರ ಹೀಗಿದೆ: ಅಕ್ಷರಿ ೧ನೇ ತಾರೀಕು ಬೆಳಗ್ಗೆ ಮೊಬೈಲ್ ಕೊಂಡ ಅಂಗಡಿ (ಮೈಸೂರಿನ ಧನ್ವಂತರಿ ರಸ್ತೆಯ ಆವಿಷ್ಕಾರ್)ಗೆ ದೂರವಾಣಿಸಿದಾಗ ಅವರಿಂದ `ಇಲ್ಲಿಗೆ ಬನ್ನಿ, ನೋಡುವ’ ಎಂಬ ಭರವಸೆ ಸಿಕ್ಕಿತು. ಅಕ್ಷರಿ ಮಧ್ಯಾಹ್ನ ಅಂಗಡಿಗೆ ಹೋದಳು. ( ಅಜ್ಜಿಗೆ ಪಾಟಕ್ಕೆ ಹೋಗುತ್ತೇನೆ ಎಂದು ಸುಳ್ಳು ಹೇಳಿ. ಇಲ್ಲಾಂದರೆ ಅಜ್ಜಿ ಹೋಗಲು ಬಿಡುವುದಿಲ್ಲ!) ಮೊಬೈಲ್ ಕದ್ದವನು ಅದಾಗಲೇ ಎರಡು ಸಿಮ್ ಬದಲಾಯಿಸಿದ್ದ.

ಆ ಸಂಖ್ಯೆಗೆ ದೂರವಾಣಿಸಿದಾಗ (ಆ ಸಂಖ್ಯೆ ಅನಂತನ ಸಂಚಾರಿಗೆ ಬರುತ್ತದೆ ಎಂಬುದು ನೆನಪಿರಲಿ)ಅವರು ಏನೇನೋ ಹೇಳಲು, ಅಂಗಡಿಗೆ ತಂದು ಕೊಟ್ಟರೆ ಸರಿ, ಇಲ್ಲಾಂದರೆ ಆರಕ್ಷಕರಿಗೆ ದೂರು ಕೊಡುತ್ತೇವೆ ಎಂದು ಹೆದರಿಸಿದಾಗ ದಾರಿಗೆ ಬಂದರು. ನೀವೇ ಇಂತಲ್ಲಿಗೆ ಬನ್ನಿ ಎಂದು ಎರಡು ಸಲ ಸ್ಥಳ ಬದಲಾಯಿಸಿ ಸತಾಯಿಸಿದಾಗ, ಪುನಃ ಹೆದರಿಸಿದಾಗ ಕೊನೆಗೆ ತಿಲಕನಗರಕ್ಕೆ ಬನ್ನಿ ಎಂದು ಹೇಳಿದರು. ಅಂಗಡಿಯ ಮಾಲೀಕರು ಅವರ ಇಬ್ಬರು ಕೆಲಸಗಾರರನ್ನು ಕಳುಹಿಸಿಕೊಟ್ಟರು. ಅಲ್ಲಿ ಕಳ್ಳ ೨೫ ಜನರನ್ನು ಸೇರಿಸಿದ್ದ. ಎಲ್ಲ ಮುಸ್ಲಿಮರು. ನಿಮ್ಮದೇ ಮೊಬೈಲ್ ಎಂಬುದಕ್ಕೆ ಗ್ಯಾರಂಟಿಯೇನು ಹಾಗೇ ಹೀಗೆ ಎಂದು ಸತಾಯಿಸಲು ಹೊರಟಾಗ, ಇವರಿಗೆ ದಿಕ್ಕು ತೋಚದೆ ಮಾಲೀಕರಿಗೆ ದೂರವಾಣಿಸಿದರು. ಅವರು ಜೋರಾಗಿ ಹೆದರಿಸಿದರು. ಅದಕ್ಕೂ ಬಗ್ಗದಿದ್ದರೆ ಪೋಲೀಸರಿಗೆ ಸುದ್ದಿ ಮುಟ್ಟಿಸಿ ಎಂದಾಗ ಮೊಬೈಲ್ ಕೊಟ್ಟರಂತೆ. ಅಂಗಡಿ ಮಾಲೀಕರಿಗೆ ಹಾಗೂ ಕೆಲಸಗಾರರಿಗೆ ಅಕ್ಷರಿ ೩ ನಾಲ್ಕು ಸಲ ಕೃತಜ್ಞತೆ ಹೇಳಿ ದಿಗ್ವಿಜಯದಿಂದ ಮೊಬೈಲ್ ಮನೆಗೆ ತಂದಳು.

ಆವಿಷ್ಕಾರದ ಮಾಲೀಕರು, ಕೆಲಸಗಾರರ ಸಂಪೂರ್ಣ ಸಹಕಾರದಿಂದ ಹಾಗೂ ಅಕ್ಷರಿಯ ಸಾಹಸದಿಂದ ಕಳವಾದ ಸಂಚಾರಿ ಏನೂ ಖರ್ಚಿಲ್ಲದೆ ಕವಚ ಸಮೇತ ವಾಪಾಸ್ ನನ್ನ ಕೈಸೇರಿತು. ಸಿಮ್ ಮಾತ್ರ ಕಾಣೆಯಾಗಿತ್ತು. ಒಮ್ಮೊಮ್ಮೆ ಅದೃಷ್ಟ ನಮಗೊಲಿಯುತ್ತದೆ.

ಕಲಿಯಬೇಕಾದ ಪಾಟ: ಹೊಸ ಮೊಬೈಲ್ ತೆಗೆಯುವಾಗ mobile tracker ಇರುವಂಥ ಮೊಬೈಲನ್ನೇ ತೆಗೆಯಬೇಕು.

ಜಂಬದಚೀಲದ ಹೊರಭಾಗದ ಜಿಪ್ಪಿನಲ್ಲಿ ಯಾವತ್ತೂ ಸಂಚಾರಿಯನ್ನು ಇಡದಿರಿ. ಬಸ್ ಹತ್ತುವಾಗ ಎಚ್ಚರದಿಂದ ಮೈಯೆಲ್ಲ ಕಣ್ಣಾಗಿರಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: