ಬಾ ಹುಲಿಕಲ್ ನೆತ್ತಿಗೆ-11
-ಪ್ರೊ. ಶಿವರಾಮಯ್ಯ
ಈ ದೊಡ್ಡ ನಿಂಗಪ್ಪ ಕವಿ ಬೇರೆ. ಸಾಹಿತಿಗಳನ್ನು ಕಂಡರೆ ಭಯಭಕ್ತಿಗೌರವ. ಆತನ ಊಟೋಪಚಾರ ಆರಂಭವಾಯಿತು. ಹೊತ್ತೊತ್ತಿಗೆ ಸರಿಯಾಗಿ ಕಾಫಿ, ತಿಂಡಿ, ಮುದ್ದೆ ಊಟವನ್ನು ಮನೆಯಿಂದಲೇ ಮಾಡಿತಂದು ಬನ್ನಿಸಾರ್, ಉಣ್ಣಿಸಾರ್ ಎನ್ನುವನು. ನಾವೇನಾದರೂ ‘ಸಾಕಪ್ಪ’ ಎಂದರೂ ಬಿಡದೆ ‘ಏ ಊಟ ಮಾಡಿಸಾರ್’ ಎಂದು ಬಲವಂತ ಮಾಡಲು ಹೊರಟನು. ನಾನು ‘ನಾರಾಯಣಸ್ವಾಮಿಗೆ ಹೊಟ್ಟೆ ಬರ್ತಾ ಇದೆ; ಅನ್ನ ಕಡಿಮೆ ಹಾಕು ಅನ್ನುತ್ತಿದ್ದೆ.
ಆದರೆ ನನ್ನ ಮಾತಿಗೆ ಮೂರುಕಾಸಿನ ಕಿಮ್ಮತ್ತು ಕೊಡದೆ ಆತ ಅನ್ನ ಬಡಿಸುತ್ತಿದ್ದ. ಇನ್ನೂ ವಿಚಿತ್ರ ಎಂದರೆ ನಾವು ಬೆಂಗಳೂರಿಗೆ ಹಿಂದಿರುಗುವ ಹಿಂದಿನ ದಿನ ಇರಬೇಕು; ಬಸವಲಿಂಗಯ್ಯನವರು ಅವರ ಮನೆಗೆ ಊಟಕ್ಕೆ ಕರೆದಿದ್ದರು. ಅಲ್ಲಿ ನಾವು ಊಟಕ್ಕೆ ಕುಳಿತಿದ್ದೆವು; ನನಗೆ ದೊಡ್ಡ ನಿಂಗಪ್ಪನಿಂದ ಪೋನ್ ಬಂತು ‘ಏನು’ ಎಂದರೆ ‘ನೀವು ನಾರಾಯಣ ಸ್ವಾಮಿ ಉಣ್ಣುವಾಗ ಕಂಟ್ರೋಲ್ ಮಾಡಬೇಡಿಸಾರ್, ಅವರು ಚೆನ್ನಾಗಿ ಊಟ ಮಾಡಲಿ’ ಎನ್ನಬೇಕೆ! ಹೀಗಿತ್ತು ದೊಡ್ಡನಿಂಗಪ್ಪನ ಊಟೋಪಚಾರದ ಸೇವೆ.
(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)
ಮೈಸೂರು ಎಂದರೆ ಸೊಳ್ಳೆಗಳ ಸಾಮ್ರಾಜ್ಯ. ಅದರ ಬ್ರೀಡಿಂಗ್ಸೆಂಟರ್ ಕುಕ್ಕರ ಹಳ್ಳಿಕೆರೆ. ಅಂಥ ಕೆರೆಗೆ ಅಂಟಿಕೊಂಡೇ ಇರುವ ರಂಗಾಯಣ. ಮದುಮಗಳು ನಾಟಕವನ್ನು ಇಡೀ ರಾತ್ರಿ ಕುಕ್ಕರಹಳ್ಳಿಕೆರೆಯ ಕಾಡಿನಲ್ಲಿ ಆಡಿಸಲಾಗುತ್ತದೆ ಎಂದಾಗಲೇ ನಾನು ಬೆರಗು-ಭಯಗಳಿಂದ ಕಂಗೆಟ್ಟು ಹೋಗಿದ್ದೆ. ಬೆರಗು ಯಾಕೆಂದರೆ ಬಸವಲಿಂಗಯ್ಯನವರು ಮಾಡ ಹೊರಟಿರುವ ರಂಗಭೂಮಿಯ ಸಾಹಸಯಾತ್ರೆ ಕಲ್ಪಿಸಿಕೊಂಡು. ಭಯ ಯಾಕೆಂದರೆ ಕುಕ್ಕರಹಳ್ಳಿಯ ಈ ಸೊಳ್ಳೆ ಗಾಡಿನಲ್ಲಿ ಈ ನಿದರ್ೆಶಕರು ರಾತ್ರಿ ಸುಮಾರು 9 ಗಂಟೆಗಳ ಕಾಲ ನಮ್ಮನ್ನು ಹೇಗೆ ಕೂರಿಸುತ್ತಾರಪ್ಪಾ ಎಂದು.
ಅದಕ್ಕೆ ಸೂಕ್ತ ಸಮಜಾಯಿಷಿಗಳನ್ನು ಅವರು ಹೇಳಿದುದನ್ನು ಆಗಲೇ ತಿಳಿಸಿದ್ದೇನೆ. ಈಗ ನಾವು ಅತಿಥಿ ಗೃಹದಲ್ಲಿ ಅನುಭವಿಸಿದ ಸೊಳ್ಳೆ ಕಾಟವನ್ನು ಕುರಿತು ಮಾತ್ರ ಹೇಳಬೇಕಾಗಿದೆ. ರಾತ್ರಿ ಹೊತ್ತು ಇರಲಿ, ಹಗಲು ಹೊತ್ತೇ ‘ಆನೆ ಸೊಳ್ಳೆ’ಗಳು ಝೇಂಕರಿಸುತ್ತಿದ್ದವು. ಫ್ಯಾನ್ ತಿರುಗುತ್ತಿದ್ದರೆ ಮಾತ್ರ ಅವು ಕಳ್ಳರಂತೆ ಕಾಟ್, ಟೇಬಲ್, ಛೇರ್ಗಳ ಕೆಳಗೆಲ್ಲೊ ಹೋಗಿ ಅವಿತಿರುತ್ತಿದ್ದವು. ಆದರೆ ಕರೆಂಟ್ ಎಲ್ಲಿಯದು ಫ್ಯಾನ್ ತಿರುಗಲು? 24 ಗಂಟೆ ರೈತರಿಗೆ ಕರೆಂಟ್ ಬಿಡುತ್ತೇವೆ ಎಂದು ಹೇಳಿದ ಬಿಜೆಪಿ ಸಕರ್ಾರ ರೈತರಿಗೆ ದಿನಕ್ಕೆ 6 ಗಂಟೆ ಮಾತ್ರ ಪವರ್ ಕೊಡುತ್ತಿದೆ. ಅಷ್ಟೇ ಅಲ್ಲ ನಗರಗಳಿಗೂ ಲೋಡ್ಶೆಡ್ ಮಾಡುತ್ತಿತ್ತು. ಹಾಗಾಗಿ ಮೈಸೂರು ನಗರದಲ್ಲಿ ಇನ್ನೂ ಫೆಬ್ರವರಿ ತಿಂಗಳಿನಲ್ಲಿಯೇ ಕರೆಂಟ್ ಒಂದು ಗಂಟೆ ಇದ್ದರೆ ಇನ್ನೊಂದು ಗಂಟೆ ಇರುತ್ತಿರಲಿಲ್ಲ. ಆ ಏರುಬೇಸಿಗೆಯ ಸೆಕೆಯನ್ನು ಸಹಿಸಲಾಗುತ್ತಿರಲಿಲ್ಲ.
ರಾತ್ರಿ ಕಳೆಯುವುದಂತೂ ದುಸ್ತರವಾಗುತ್ತಿತ್ತು. ನಾಟಕಕ್ಕೆ ಸೀನ್ ಕಟ್ಟುವ ಕೆಲಸ ತರಾತುರಿಯಲ್ಲಿದ್ದಾಗ ಕಂಪ್ಯೂಟರ್ಗೆ ಕರೆಂಟ್ ಇಲ್ಲದೆ ಏನೂ ಮಾಡಲಾಗುತ್ತಿರಲಿಲ್ಲ. ಕೆಲವು ಐನಾತಿ ಸೊಳ್ಳೆಗಳು ಸೊಳ್ಳೆ ಪರದೆಯೊಳಕ್ಕೂ ನುಸುಳಿ ದಾಳಿ ಮಾಡುತ್ತಿದ್ದವು. ಅಟೆಂಡರ್ ಸಂಜೆಮುಂಚೆ ಬಂದು ಸೊಳ್ಳೆ ಬತ್ತಿ ಹಚ್ಚಿಟ್ಟು ಹೋಗುತ್ತಿದ್ದ. ಅದು ಉರಿಯುತ್ತಿರುವವರೆಗೂ ಎಲ್ಲಾದರೂ ಮತ್ತು ಬಂದವರಂತೆ ಕೂರುತ್ತಿದ್ದವು. ಅದು ಆರಿದ ಕೂಡಲೇ ತಮ್ಮ ಗಂಧರ್ವಗಾನ ಶುರುಮಾಡುತ್ತ ನಮ್ಮ ಮೇಲೆ ಎರಗುತ್ತಿದ್ದವು. ಹೀಗೆ ಕರೆಂಟ್ ಕೈಕೊಟ್ಟ ಸಂದರ್ಭದಲ್ಲಿ ಎದ್ದು ಹೋಗಿ ಹೊರಗೆ ತಿರುಗಾಡುವುದು, ಇಲ್ಲವೆ ಸೊಳ್ಳೆಗಳನ್ನು ಓಡಿಸುವ ಕೆಲಸದಲ್ಲಿ ತೊಡಗುತ್ತಿದ್ದೆವು.
ನುಸಿಕಾಟ ತಡೆಯಲಾರದ ಐತನ ಬೆತ್ತಲೆ ಮೈಗೆ ಪೀಂಚಲು ತೈಲಮರ್ದನ ಮಾಡುತ್ತಿದ್ದುದೂ, ಅವನು ತನ್ನ ಎಳೆ ಬಸುರಿ ಹೆಣ್ಣಿನ ಮೃದು ಮೈಯ ಸ್ಪರ್ಶದ ಶೃಂಗಾರ ಚೇಷ್ಠೆಗೆ ತೊಡಗುವುದೂ ಆದರೆ ಅದೇ ಸಮಯಕ್ಕೆ ಹುಲಿಕಲ್ ನೆತ್ತಿಯಿಂದ ಹುಲಿಗರ್ಜನೆ ಕೇಳಿ ಬರುವುದೂ. ಜೋರಾಗಿ ಮಾತಾಡಿದರೆ ‘ಎಲ್ಲಿ ಹುಲಿಗೆ ಕೇಳಿಸಿ ಬಿಡುತ್ತದೊ’ ಎಂದು ಅವರು ಮೌನವಾಗುವುದೂ ನೆನಪಾಗುತ್ತಿದ್ದವು. ಹೀಗೆ ಕ್ರಿಮಿಕೀಟಗಳಿಂದ ಆಗುವ ಪರೀಪಹ (ತೊಂದರೆ)ವನ್ನು ನಮ್ಮ ದಿಗಂಬರ ಮುನಿಗಳು ಅದ್ಹೇಗೆ ಸಹಿಸಿಕೊಂಡು ಮುಕ್ತರಾದರೊ ಅದೇ ಸೋಜಿಗ. ಜೈನ ಪರಿಭಾಷೆಯಲ್ಲಿ ಕ್ರಿಮಿಕೀಟ, ಪ್ರಾಣಿಗಳಿಂದ ಒದಗುವ ತೊಂದರೆಗಳನ್ನು ತಿರ್ಯಕ್ ಉಪಸರ್ಗ ಎಂದೂ ಕರೆಯುವುದುಂಟು.
ಇಲ್ಲಿಯೇ ಹೇಳಬೇಕಾದ ಇನ್ನೊಂದೆರಡು ಮಾತುಗಳಿವೆ. ಕೆ.ವೈ.ನಾರಾಯಣ ಸ್ವಾಮಿ ಇಲ್ಲಿದ್ದಾರೆ ಎಂಬುದನ್ನು ತಿಳಿದ ಅವರ ಮೈಸೂರಿನ ಕೆಲವು ಗೆಳೆಯರು ನುಗ್ಗಿ ಬರುತ್ತಿದ್ದುದು ಸಾಮಾನ್ಯ. ಇವರಿಂದ ನಮ್ಮ ಕೆಲಸಕ್ಕೆ ಹರ್ಕತ್ ಆಗುತ್ತಿದ್ದರೂ ದಾಕ್ಷಿಣ್ಯಕ್ಕೆ ಸಹಿಸಿಕೊಳ್ಳಬೇಕಾಗಿತ್ತು. ಜೈನಧರ್ಮದಲ್ಲಿ ಈ ಬಗೆ ತೊಂದರೆಗಳನ್ನು ಮಾನುಷೋಪಸರ್ಗ ಎಂದು ಕರೆಯುತ್ತಾರೆ.
ತಮಾಷೆ ಎಂದರೆ ಈ ಸಂದರ್ಭದಲ್ಲಿ ನಾವೊಮ್ಮೆ ದೇವೋಪಸರ್ಗವೆಂಬ ತೊಂದರೆಗೂ ಒಳಗಾದದ್ದು. ಅದು ನಡೆದದ್ದು ಹೀಗೆ: ನಮಗೆ ತೀರಪರಿಚಿತರೂ, ಸಾಹಿತ್ಯ ಕಲೆಗಳಲ್ಲಿ ವಿಶೇಷ ಆಸಕ್ತರೂ ಆಗಿರುವ ಸುಜಾತ ಮೇಡಂ (ವಾತರ್ಾಇಲಾಖೆಯಲ್ಲಿ ನಿದರ್ೆಶಕರಾಗಿದ್ದ ವಿಶುಕುಮಾರ್ರವರ ಪತ್ನಿ)ರವರು, ಅವರ ಊರು ನಗುವನಹಳ್ಳಿ (ಮೈಸೂರಿಗೆ ಹತ್ತಿರ ಇದೆ)ಯಲ್ಲಿ ತೋಟದ ದೇವರು ಮಾಡಿಸಿ, ಮರಿಹೊಡೆಸಿ ಪಾಪ, ಈ ಮಹಾನ್ ಸಾಹಿತಿಗಳು ರಂಗಾಯಣದ ನಾಟಕ ಕ್ಯಾಂಪ್ನಲ್ಲಿ ಸರಿಯಾಗಿ ಊಟ ತಿಂಡಿ ಇಲ್ಲದೆ ಇದ್ದಾರೆಂದು ಭಾವಿಸಿ, ಒಂದು ಕೊಳಗ ಸಾರು, ಡಜನ್ ಮುದ್ದೆ, ಅನ್ನ ವಗೈರೆ ತುಂಬಿ ಕಾರಿನಲ್ಲಿ ಕಳುಹಿಸಿಕೊಟ್ಟರು.
ನಮಗೆ ಅಷ್ಟೆಲ್ಲಾ ತಿನ್ನಲು ಟೈಮೂ ಇರಲಿಲ್ಲ; ಮೂಡೂಬರಲಿಲ್ಲ. ಕಡೆಗೆ ಅಲ್ಲಿ ಬಂದ ಕೆಲವು ಗೆಳೆಯರಿಗೆ ಉಣ್ಣಲು ಹೇಳಿ, ಉಳಿದುದನ್ನು ನಮ್ಮ ನಿತ್ಯದ ಅನ್ನದಾತ ದೊಡ್ಡನಿಂಗಪ್ಪನ ಮನೆಗೆ ಕಳುಹಿಸಬೇಕಾಯಿತು. ಆಮೇಲೆ ಪಾತ್ರೆ ತೆಗೆದು ಕೊಂಡು ಹೋಗಲು ಮೇಡಂ ಬಂದಾಗ ಊಟ ತುಂಬಾ ಚೆನ್ನಾಗಿತ್ತೆಂದು ನಕ್ಕೆವು. ನಮ್ಮ ತಂಡದಲ್ಲಿ ಸದ್ಯ ಯಾರೂ ಗೊರಕೆ ಹೊಡೆಯುವ ಜನರು ಇರಲಿಲ್ಲವಾದ ಕಾರಣ ಸದ್ಯ ಆ ಒಂದು ಅಮಾನುಷ ಬಾಧೆಯಿಂದ ಬಚಾವಾಗಿದ್ದೆವು.
ಮುಂದುವರೆಯುವುದು…….
ಇತ್ತೀಚಿನ ಟಿಪ್ಪಣಿಗಳು