ಬಾ ಹುಲಿಕಲ್ ನೆತ್ತಿಗೆ-10
-ಪ್ರೊ. ಶಿವರಾಮಯ್ಯ
ತನ್ನ ಮುದ್ದಿನ ಹೆಂಡತಿ ಪೀಂಚಲು ಮುಕುಂದಯ್ಯನ ಜೊತೆ ಸಂಬಂಧ ಇಟ್ಟುಕೊಂಡಿರಬಹುದೆ ಎಂಬ ಅನುಮಾನ ಐತನ ತಲೆಹೊಕ್ಕಾಗ:
ಅನುಮಾನವೆಂಬ ವಿಷದ ಬಿಂದು..
ಹಾಲಂತ ಐತನ ಹೃದಯ ಕಡಲಿಗೇ….
ಬಿತ್ತೋ ಅಯ್ಯೊ ಬಿತ್ತೋ……
‘ಕಾಳಗಾತ್ರದ ಹುಳು, ಮುಷ್ಟಿಗಾತ್ರದ ಉಂಡೆ
ಉರುಳಿಸುತ್ತೈತೋ ಜೀವ ಬಂತೇನೋ’
(ತಿಮ್ಮಿಗಾಗಿ ಪರಿತಪಿಸುತ್ತಿದ್ದ ಗುತ್ತಿ ಚಿತ್ತಸ್ಥಿತಿ)
‘ಅತ್ತ ಮುಳ್ಳಿನ ಪೊದೆಯು
ಇತ್ತ ಕೇದಿಗೆ ವನವು’
‘ಲೋಕವೇ ಹೊತ್ತಿಕೊಂಡು ಉರಿವಾಗ ಧಗಧಗ’
‘ಬಂತು ಬಂತು ಬಂತು ಬೀಸೇಕಲ್ಲು
ಪರದೇಶಿ ಮಾಲು’……. (ದೇವಯ್ಯನ ಸೈಕಲ್ ಸವಾರಿ)
‘ಬರುವೆನೆಂದ ನಲ್ಲ,
ಬರದೇ ಹೋದ ನಲ್ಲ…..(ತೀರ್ಥಯಾತ್ರೆ ಹೋಗಿ ಬಾರದ ಗಂಡನ ನೆನೆದು ರಂಗಮ್ಮ)
‘ಕರೀಮ್ಸಾಬರ ಕುದುರೆ ಬಂದಿತ್ತ’
‘ಯಾರಿವನು ಯಾರಿವನು ಮೋಹನಾಂಗನು
ಬ್ರಹ್ಮದೇವನು ತೂಕಡಿಸಿ ಕೆತ್ತಿದವನು’ (ತಿಮ್ಮಪ್ಪಹೆಗ್ಗಡೆ)
‘ಸಾಬರು ನಾವು ಸಾಬರು ಹೊನ್ನಾಳಿ ಹೊಡ್ತದ ಸಾಬರು’
***
(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)
ಅತ್ತ ಬೆಂಗಳೂರಿನಲ್ಲಿ ಹಂಸಲೇಖರು ವೆಬ್ಸೈಟ್ ಮೇಲೆ ಬಂದ ಈ ಕೆಲವು ಹಾಡುಗಳಿಗೆ ಸ್ವರ ಪ್ರಸ್ತಾರ ಹಾಕಿ ಸಂಗೀತಕ್ಕೆ ಅಳವಡಿಸುತ್ತಿದ್ದರು. ಬಸವೇಶ್ವರನಗರದ ಅವರ ಸಂಗೀತ ಶಾಲೆಗೆ ಹೋಗಿ ಕೆಲವು ಹಾಡುಗಳನ್ನು ಕೇಳಿಬಂದೆವು. ನಮ್ಮ ತಂಡದಲ್ಲಿದ್ದ ಡಾ.ಬೈರೇಗೌಡ ಕೂಡ ಜಾನಪದ ಹಾಡುಗಾರ ಹಾಗೆ ಕೃಷ್ಣಪ್ರಸಾದ್ ಒಬ್ಬ ನಾಟಕಕಾರರಾಗಿದ್ದರು. ಬೈರೇಗೌಡರು ಹಾಡು ಹಾಡುತ್ತಲೇ ಲ್ಯಾಪ್ಟ್ಯಾಪ್ನಲ್ಲಿ ಸೀನ್ ಕಟ್ಟುತ್ತ ಹೋಗುವರು, ಕೆಲವೊಮ್ಮೆ ಆ ಗುಂಗಿನಲ್ಲಿ ಒಂದೊಂದು ಸೀನ್ ಹಿಂದುಮುಂದಾಗಿ ಬೈಸಿಕೊಂಡದ್ದೂ ಉಂಟು.
ಉದಾಹರಣೆಗೆ ದೃಶ್ಯ ಹನ್ನೊಂದರಲ್ಲಿ ಕೋಣೂರು ತೋಟದ ಮನೆಯಲ್ಲಿ ಅನಂತಯ್ಯನವರು ಆಳುಗಳಿಗೆ ದ್ರೌಪದಿ ವಸ್ತ್ರಾಪಹರಣ ನಾಟಕವನ್ನು ಪ್ರಾಕ್ಟೀಸ್ ಮಾಡಿಸುತ್ತಿರುತ್ತಾರೆ. ಗೌಡರು ಆ ದೃಶ್ಯವನ್ನು ಕಟ್ಟಬೇಕಾಗಿತ್ತು. ಆದರೆ ದುಶ್ಯಾಸನ ಪಾತ್ರಧಾರಿ ದ್ರೌಪದಿಗೆ ನಡೆನಡೆ ನೀಂ ತಡೆಯನೀಗ ಬಿಡೆನು ನಿನ್ನ ದ್ರೌಪದಿ ಎಂಬ ಮಟ್ಟನ್ನು ಹಾಡುತ್ತ ತಲ್ಲೀನರಾದ ಗೌಡರು ಮುಂದೆ ಆಳುಗಳ ಸಂಭಾಷಣೆಗೆ ಬದಲಾಗಿ, ವೆಂಕಟಣ್ಣ ಮತ್ತು ನಾಗತ್ತೆ ಇವರ ನಡುವೆ ನಡೆದ ಸಂಭಾಷಣೆಯನ್ನು (ಆರನೆಯ ದೃಶ್ಯದ್ದು) ಟೈಪ್ ಮಾಡಿಟ್ಟಿದ್ದರು.
ಕೆಲವು ಪರೀಷಹಗಳು
ಜಿನಧರ್ಮದ ಪ್ರಕಾರ, ಪರೀಷಹಗಳೆಂದರೆ ಮೋಕ್ಷಗಾಮಿ ಜೀವನಿಗೆ ಒದಗುವ ತೊಂದರೆಗಳು. ಅವು ಹಸಿವು, ಬಾಯಾರಿಕೆ, ಚಳಿ, ಸೆಕೆ, ಕ್ರಿಮಿಕೀಟಗಳ ಕಡಿತ, ಮಲಗುವಾಗ ಕೂರುವಾಗ ಆಗುವ ಬಾಧೆ, ಜನರು ಪುರಸ್ಕರಿಸದಿದ್ದಾಗ ಆಗುವ ಬಾಧೆ-ಹೀಗೆ ಇವು 22 ಬಗೆಯಾಗಿರುತ್ತವೆ. ಕಳೆದ ಶಿವರಾತ್ರಿ (ಫೆಬ್ರವರಿ 23 2010) ಹಬ್ಬದ ತರುವಾಯ ಮದುಮಗಳು ಕೃತಿಯನ್ನು ರಂಗರೂಪಕ್ಕೆ ಅಳವಡಿಸುವ ಸಲುವಾಗಿ ನಾನು, ಕೆವೈಎನ್, ಬೈರೇಗೌಡ ಮತ್ತು ಕೃಷ್ಣಪ್ರಸಾದ್ ನಾವು ನಾಲ್ಕು ಜನ ರಂಗಾಯಣದ ಕ್ವಾರ್ಟಸ್ನಲ್ಲಿ ತಂಗಬೇಕಾಗಿ ಬಂತಷ್ಟೆ. ಆಗ ನಾವು ಅನುಭವಿಸಿದ ಈ ಕೆಲವು ಪರೀಷಹಗಳನ್ನು ಇಲ್ಲಿ ಪ್ರಸ್ತಾಪಿಸಿದರೆ ತಪ್ಪಾಗಲಾರದು. ಮೊದಲಿಗೆ ನಮ್ಮ ಊಟೋಪಚಾರ ನೋಡಿಕೊಳ್ಳಲು ರಂಗಾಯಣದ ಬಸಣ್ಣ ಎಂಬ ಒಬ್ಬ ಅಟೆಂಡರನ್ನು ನೇಮಿಸಿದ್ದರು. ಆತ ಎಲ್ಲಿಂದ ಊಟ_ತಿಂಡಿ ತರುತ್ತಿದ್ದನೋ ಅದನ್ನು ತಿನ್ನಲಾಗುತ್ತಿರಲಿಲ್ಲ. ನಮಗೆ ಮುದ್ದೆ ಸಾರು ಆಗಿದ್ದರೂ ಸಾಕಾಗಿತ್ತು. ಆದರೆ ಆತ ತರುತ್ತಿದ್ದ ಅನ್ನ ಸಾಂಬಾರ್ ಪಲ್ಯ ಬಾಯಲ್ಲಿಡಲು ಆಗುತ್ತಿರಲಿಲ್ಲ. ಕೇಳಿದರೆ ರಂಗಾಯಣದ ಕಲಾವಿದರಿಗೆ ತಯಾರಿಸುತ್ತಿದ್ದ ಅಡುಗೆಯನ್ನೇ ನಿಮಗೂ ಸಪ್ಲೈ ಮಾಡಲು ಹೇಳಿದ್ದಾರೆ ಸಾರ್ ಎನ್ನುತ್ತಿದ್ದ. ನಾವೇ ದುಡ್ಡು ಕೊಡುತ್ತೇವೆ ಯಾವುದಾದರೂ ಮುದ್ದೆ, ಸಾರು ಮಾಡುವ ಹೋಟೇಲಿನಿಂದ ಊಟ ತೆಗೆದುಕೊಂಡು ಬಾ ಎನ್ನುತ್ತಿದ್ದೆವು.
ನಾವು ಅಲ್ಲಿ ಹೋದ ಮೂರನೆ ದಿನ ಇರಬೇಕು ನಮ್ಮ ಬೈರೇಗೌಡರು ತಟ್ಟೆಗೆ ಅನ್ನ ಸಾಂಬಾರ್ ಹಾಕಿಕೊಂಡಿದ್ದವರು, ತಿನ್ನಲಾರದೆ ಕೈತೊಳೆದು ಕೊಂಡುಬಿಟ್ಟರು. ಹೀಗೆ ಹಸಿವಿಗೆ ಪರದಾಡುತ್ತಿದ್ದಾಗ ಅದೇ ದಿನ ಕಾ.ತ. ಚಿಕ್ಕಣ್ಣನವರು ನಾಟಕದ ಪ್ರೋಗ್ರೆಸ್ ಹೇಗಿದೆ ಎಂದು ನೋಡಿ ಹೋಗಲು ಬಂದರು. ಅವರು ನಮ್ಮ ಊಟ ತಿಂಡಿ ತಾಪತ್ರಯ ಕಂಡು, ಅದೇ ಕ್ವಾರ್ಟಸರ್್ನಲ್ಲಿ ಮನೆ ಮಾಡಿಕೊಂಡಿದ್ದ ರಂಗಾಯಣದ ಇನ್ನೊಬ್ಬ ನೌಕರ ಆಲೂರು ದೊಡ್ಡನಿಂಗಪ್ಪ ಎಂಬಾತನನ್ನು ಕರೆದು ‘ಇನ್ನು ಮೇಲೆ ಇವರಿಗೆ ಊಟದ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿ ನಿನ್ನದು’ ಎಂದು ಒಪ್ಪಿಸಿ ಹೋದರು.
ಇತ್ತೀಚಿನ ಟಿಪ್ಪಣಿಗಳು