ಜೋಗಿ ಬರೆಯುತ್ತಾರೆ: ಓದುಗ ಎಂಬ ಭಕ್ತವತ್ಸಲ

ಓದುಗ ಎಂಬ ಭಕ್ತ ವತ್ಸಲನನ್ನು ಮತ್ತೆ ಇಲ್ಲಿ ನೆನೆಸಿಕೊಂಡಿದ್ದೇವೆ

ಸಾಹಿತಿಯ ಕಷ್ಟ ಮತ್ತು ಓದುಗರ ಕಷ್ಟ ಆಳದಲ್ಲಿ ಒಂದೇ ಸ್ವರೂಪದ್ದು. ಪ್ರತಿಯೊಬ್ಬ ಓದುಗ ಕೂಡ ತನಗೊಪ್ಪುವ, ತನ್ನ ಮನೋಧರ್ಮ, ಅಭಿರುಚಿ ಮತ್ತು ಅಗತ್ಯಗಳನ್ನು ಪೂರೈಸುವ ಕತೆಗಾರನನ್ನೋ ಕಾದಂಬರಿಕಾರನನ್ನೋ ಕವಿಯನ್ನೋ ಹುಡುಕುತ್ತಿರುತ್ತಾನೆ. ಹಾಗೇ, ತನ್ನ ಆಶಯಗಳನ್ನು ಸಮರ್ಥವಾಗಿ ಅರ್ಥ ಮಾಡಿಕೊಳ್ಳಬಲ್ಲ, ತನಗೆ ಸ್ಪಂದಿಸಬಲ್ಲ ಓದುಗನಿಗ ಹುಡುಕಾಟದಲ್ಲಿ ಸಾಹಿತಿಯ ಬಾಳೂ ಸವೆಯುತ್ತದೆ. ಇವೆರಡೂ ಯಾವ ಬಿಂದುವಿನಲ್ಲಿ ಸಂಧಿಸುತ್ತದೆ ಎಂದು ಹೇಳುವುದು ಕಷ್ಟ.

ಸಾಹಿತಿಯ ಮುಂದೆ ಆಯ್ಕೆಗಳಿಲ್ಲ. ಯಾವ ಲೇಖಕನೂ ತನ್ನದೇ ಆದ ಮತ್ತು ತನಗೇ ನಿಷ್ಠರಾಗಿರುವ ಓದುಗರ ಬಳಗವೊಂದನ್ನು ಕಟ್ಟಿಕೊಂಡು ಬಹಳ ದಿನ ಬರೆಯಲಾರ. ಓದುಗನಿಗೆ ಹೆಚ್ಚು ಆಸಕ್ತಿ ಹುಟ್ಟಿಸುವ ಮತ್ತೊಬ್ಬ ಬರಹಗಾರ ಕಾಣಿಸಬಹುದು. ತುಂಬಾ ಪುಸ್ತಕಗಳನ್ನು ಓದುವವನು ಬಹಳ ಬೇಗ, ಲೇಖಕನನ್ನು ಮೀರಿ ನಡೆದುಬಿಡಬಹುದು. ಅಂಥ ಹೊತ್ತಲ್ಲಿ ಲೇಖಕ ಬಹಳ ಬೇಗ ಹಳಬನೂ ಅಪ್ರಸ್ತುತನೂ ಆಗುತ್ತಾನೆ.

ಅದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಇವತ್ತಿನ ಇಂಗ್ಲಿಷ್ ಸಾಹಿತ್ಯದ ಓದುಗರು. ಅವರ ಮುಂದೆ ಅಸಂಖ್ಯ ಆಯ್ಕೆಗಳಿವೆ. ಚೇತನ್ ಭಗತ್ನಿಂದ ಖಾಲೆದ್ ಹೊಸೇನಿಯ ತನಕ ಎಲ್ಲರೂ ಅವನ ಕೈಗೆ ಸಿಗುವವರೇ. ಅವರೆಲ್ಲ ಬೋರಾಗುತ್ತಿದ್ದಂತೆ ರಾಬಿನ್ ಶರ್ಮ ಎದುರಾಗುತ್ತಾನೆ. ಮತ್ತೊಬ್ಬ ್ಚಮೈ ಲಾಸ್ಟ್ ಲೆಕ್ಚರ್’ ಬರೆಯುತ್ತಾನೆ. ಅಷ್ಟು ಹೊತ್ತಿಗೆ ಮೂರು ಕಪ್ ಚಹಾ ಸಿದ್ಧವಾಗಿರುತ್ತದೆ. ಅದೆಲ್ಲ ಸಾಕೆನ್ನಿಸುವ ಹೊತ್ತಿಗೆ ಅರವಿಂದ ಅಡಿಗ ಮತ್ತೊಂದು ಪುಸ್ತಕ ಮಾರುಕಟ್ಟೆಗೆ ಬರುತ್ತದೆ.

ಹಾಗೆ ನೋಡಿದರೆ ಹೊಸ ಓದುಗರನ್ನು ಕೊಂಚವಾದರೂ ಹಿಡಿದಿಟ್ಟಿರುವವನು ಚೇತನ್ ಭಗತ್. ಅವನಿಗೆ ನಿಷ್ಠಾವಂತ ಓದುಗರಿದ್ದಾರೆ. ಚೇತನ್ ಭಗತ್ನನ್ನು ಮಾತ್ರ ಓದುವವರಿದ್ದಾರೆ. ಅವರನ್ನು ಉಳಿದವರು ಓದುಗರೆಂದು ಪರಿಗಣಿಸುವ ಹಾಗಿಲ್ಲ. ಕಮಲ್ಹಾಸನ್ ಸಿನಿಮಾಗಳನ್ನು ಮಾತ್ರ ನೋಡುವ ಪ್ರೇಕ್ಷಕರ ಹಾಗೆ ಅವರದು ಏಕನಿಷ್ಠೆ. ಅಂಥ ಏಕನಿಷ್ಠೆ ಕನ್ನಡದಲ್ಲಿ ಬೈರಪ್ಪನವರ ಕುರಿತು ವ್ಯಕ್ತವಾಗುತ್ತದೆ. ಎಸ್ ಎಲ್ ಬೈರಪ್ಪನವರ ಹೊಸ ಪುಸ್ತಕ ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಳ್ಳಲು ಕಾದಿರುವವರ ಸಂಖ್ಯೆ ದೊಡ್ಡದಿದೆ. ಆ ಓದುಗರು ಕೂಡ ಕೇವಲ ಬೈರಪ್ಪನವರನ್ನು ಮಾತ್ರ ಓದುತ್ತಾರೆ. ಅವರ ಎಲ್ಲಾ ಕಾದಂಬರಿಗಳನ್ನು ಓದಿರುವ, ಅದರ ಕುರಿತು ಚಚರ್ಿಸುವ, ಹೊಸ ಕಾದಂಬರಿಗಾಗಿ ಕಾಯುವ ಅಂಥ ಒಂದು ಓದುಗರ ಬಳಗವನ್ನು ಹೊಂದಿದ ಲೇಖಕ ನಿಜಕ್ಕೂ ಪುಣ್ಯವಂತ. ಪೂರ್ಣಚಂದ್ರ ತೇಜಸ್ವಿಯವರಿಗೂ ಅಂಥ ಓದುಗರ ಬಳಗ ಇತ್ತು.

ಏನು ಕೊಟ್ಟರೂ ಓದುತ್ತೇನೆ. ಎಲ್ಲವನ್ನೂ ಓದುತ್ತೇನೆ, ಚೆನ್ನಾಗಿರುವುದು ಯಾರು ಬರೆದರೂ ಸರಿ ಎಂದು ಓದುವ ಮತ್ತೊಂದು ಬಳಗವಿದೆ. ಓದುವುದು ಅವರ ಮೂಲ ಅಭಿರುಚಿ, ಆಸಕ್ತಿ, ಪ್ರವೃತ್ತಿ. ಆ ಓದಿಗೆ ಆ ಕ್ಷಣಕ್ಕೆ ಏನಾದರೂ ಆದೀತು. ಯಾರಾದರೂ ಆದೀತು. ಇಂಥ ಓದುಗರಿಂದ ಲೇಖಕರಿಗೆ ಅಂಥ ವಿಶೇಷ ಪ್ರಯೋಜನವೇನೂ ಇಲ್ಲ. ಎಲ್ಲವನ್ನೂ ಓದುತ್ತಾರೆ ಎಂಬುದು ಯಾವುದನ್ನೂ ಓದುವುದಿಲ್ಲ ಎಂಬುದಕ್ಕೆ ಸಮ. ಇಂಥ ಓದುಗರು ಯಂಡಮೂರಿ ವೀರೇಂದ್ರನಾಥ್, ಸಾಯಿಸುತೆ, ತೇಜಸ್ವಿ, ಬೈರಪ್ಪ ಹೀಗೆ ಎಲ್ಲರ ಕೃತಿಗಳನ್ನೂ ಓದುತ್ತಾರೆ. ಆ ಕ್ಷಣಕ್ಕೆ ಅದು ನೀಡುವ ಮನರಂಜನೆಯ ಆಚೆಗೆ ಅವರೇನನ್ನೂ ನಿರೀಕ್ಷಿಸುವುದಿಲ್ಲ. ಸಾಮಾನ್ಯವಾಗಿ ಇದು ಹದಿಹರೆಯದ ಓದು. ತಡವಾಗಿ ಓದಲು ಆರಂಭಿಸುವವರು ಕೂಡ ಹೀಗೆ ಎಲ್ಲವನ್ನೂ ಓದಲು ಶುರುಮಾಡುತ್ತಾರೆ.

ಇಂಥ ಓದುಗ ಚಚರ್ೆಗಿಳಿಯುವುದಿಲ್ಲ. ತಾನು ಓದುತ್ತೇನೆ ಎಂದು ತೋರಿಸಿಕೊಳ್ಳುವುದಿಲ್ಲ. ಯಾವ ಪುಸ್ತಕ ಚೆನ್ನಾಗಿದೆ, ಯಾವ ಲೇಖನ ಶ್ರೇಷ್ಠ ಎಂಬ ವಾಗ್ವಾದದಲ್ಲಿ ಅವರಿಗೆ ಆಸಕ್ತಿಯಿಲ್ಲ. ಓದಬೇಕು ಅನ್ನಿಸುವ ಹೊತ್ತಿಗೆ ಅವರಿಗೊಂದು ಪುಸ್ತಕ ಬೇಕು. ಬೆಂಗಳೂರಿಗೆ ಯಾವುದೋ ಕಾರಣಕ್ಕೆ ಬಂದು, ಮಧ್ಯಾಹ್ನದ ಹೊತ್ತಿಗೆ ಕೆಲಸ ಮುಗಿಸಿಕೊಂಡು, ರಾತ್ರಿ ವಾಪಸ್ಸು ಹೋಗುವ ತನಕ ಹೊತ್ತು ಕಳೆಯಲು ಯಾವುದಾದರೂ ಥೇಟರಿಗೆ ನುಗ್ಗುವಂತ ಪ್ರೇಕ್ಷಕರ ಸಾಲಿಗೆ ಸೇರಿದ ಈ ಓದುಗರು ಪುಸ್ತಕ ಮಾರಾಟಕ್ಕೆ ನೆರವಾಗುತ್ತಾರೆ, ಲೇಖಕನ ಬೌದ್ಧಿಕ, ಸೃಜನಶೀಲ ಬೆಳವಣಿಗೆಗೆ ಯಾವ ಕೊಡುಗೆಯನ್ನೂ ನೀಡುವುದಿಲ್ಲ.

ಮತ್ತೊಂದು ಜಾತಿಯ ಅಪಾಯಕಾರಿ ಓದುಗರಿದ್ದಾರೆ. ಅವರು ಏನು ಓದಬೇಕು ಅನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ. ಅವರದೊಂದು ವಾದವನ್ನೂ ಅವರು ಮುಂದಿಟ್ಟುಕೊಂಡೇ ಹೊರಡುತ್ತಾರೆ. ಒಂದು ರಾಜಕೀಯ ಸಿದ್ಧಾಂತವನ್ನೋ, ಆದರ್ಶವನ್ನೋ ಬೆಂಬಲಿಸಲು ಹೊರಡುವ ಇವರು ಅದಕ್ಕೆ ಪೂರಕವಾದ ಸಂಗತಿಗಳನ್ನು ಮಾತ್ರ ಓದುತ್ತಾರೆ. ಉದಾಹರಣೆಗೆ ದನದ ಮಾಂಸ ತಿನ್ನುವುದು ತಪ್ಪು ಎಂಬುದು ಅವರ ಧೋರಣೆಯಾದರೆ, ಆ ನಿಲುವನ್ನು ಬೆಂಬಲಿಸುವ ಎಲ್ಲವನ್ನೂ ಅತ್ಯಂತ ಶ್ರದ್ಧೆಯಿಂದ ಓದುತ್ತಾರೆ. ಅವರ ಪಾಲಿಗೆ ಓದು ಮನರಂಜನೆ ಅಲ್ಲ. ಅಧ್ಯಯನಶೀಲ ಓದು ಅದು. ತಮ್ಮ ನಿಲುವು ಮತ್ತು ತತ್ವಗಳನ್ನು ಪೋಷಿಸುವ ಪುಸ್ತಕಗಳು ಅವರಿಗೆ ಅಚ್ಚುಮೆಚ್ಚು. ಅದನ್ನು ವಿರೋಧಿಸುವ ಕೃತಿಗಳನ್ನೂ ಅವರು ಒಮ್ಮೊಮ್ಮೆ ಓದುವುದಿದೆ. ಆದರೆ ಅದರಾಚೆಗೆ ಅವರ ಓದು ದಾಟಿಕೊಳ್ಳುವುದಿಲ್ಲ. ಅವರ ಪಾಲಿಗೆ ಸಾಹಿತ್ಯ ಮನರಂಜನೆಯೂ ಅಲ್ಲ, ಕಲೆಯೂ ಅಲ್ಲ. ಪ್ರತಿಯೊಂದು ಬರಹ ಕೂಡ ಅವರ ನಿಲುವನ್ನು ಗಟ್ಟಿಗೊಳಿಸುವ ಇಟ್ಚಿಗೆ. ಸಮಾಜವಾದವನ್ನು ಒಪ್ಪುವ ಮಂದಿ ಒಂದು ಕಾಲದಲ್ಲಿ ರಷ್ಯಾದ ಬಹುತೇಕ ಲೇಖಕರ ಕಾದಂಬರಿಗಳನ್ನೂ ಬರಹಗಳನ್ನೂ ಓದುತ್ತಿದ್ದರು. ರಷ್ಯನ್ ಲೇಖಕರು ದಂಡಿಯಾಗಿ ಕನ್ನಡಕ್ಕೆ ಅನುವಾದಗೊಂಡರು. ಇವತ್ತು ರಷ್ಯನ್ ಕಾದಂಬರಿಗಳು ಬೇಕೆಂದರೂ ಸಿಗುತ್ತಿಲ್ಲ. ರಷ್ಯಾದಲ್ಲೇ ಸಾಹಿತ್ಯ ಹುಟ್ಟುತ್ತಿಲ್ಲವೋ, ಇಲ್ಲಿಯ ರಷ್ಯಾವಾದಿಗಳು ಕಣ್ಮರೆಯಾಗಿದ್ದಾರೋ ಗೊತ್ತಿಲ್ಲ. ಹೀಗೆ ಒಂದೊಂದು ವಾದಕ್ಕೆ ಕಟ್ಟುಬಿದ್ದು, ಅದಕ್ಕೆ ಪೂರಕವಾದದ್ದನ್ನು ಓದುವವರು ಈಗಲೂ ಸಿಗುತ್ತಾರೆ.

ನಾಲ್ಕನೆಯ ಓದುಗ ವರ್ಗ ವಿಮರ್ಶಕರದು. ವಿಮಶರ್ೆಗೆ ಒಳಪಡುವಂಥ ಕೃತಿಗಳಿಗೆ ಮಾತ್ರ ಅವರ ಜಗತ್ತಿನೊಳಗೆ ಪ್ರವೇಶವಿದೆ. ಆಯಾ ಕಾಲಕ್ಕೆ ಯಾವುದು ವಿಮಶರ್ೆಗೆ ಅರ್ಹ ಮತ್ತು ಅರ್ಹವಲ್ಲ ಎನ್ನುವುದನ್ನು ಅವರೇ ತೀಮರ್ಾನಿಸುತ್ತಾರೆ. ಪತ್ರಿಕೆಯಲ್ಲಿ ಬರುವ ಅಂಕಣ ಎಷ್ಟೇ ಜನಪ್ರಿಯವಾಗಿರಲಿ, ಅದು ಪುಸ್ತಕವಾಗಿ ಎಷ್ಟೇ ಮಾರಾಟವಾಗಲೀ, ಅದು ಅವರ ಪಾಲಿಗೆ ಶ್ರೇಷ್ಠವಲ್ಲ. ಅವರು ಶ್ರೇಷ್ಠತೆಯನ್ನು ಮಂಡಿಸುವುದಕ್ಕೆ ಕೆಲವು ಪರಿಭಾಷೆಯನ್ನು ರೂಢಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿ, ತಾತ್ವಿಕ ನೆಲೆಗಟ್ಟು, ಸಾಂಸ್ಕೃತಿಕ ಬಿಕ್ಕಟ್ಟು, ಸಮಾನತೆಯ ನೆಲೆ- ಮುಂತಾದ ಅವರ ಪರಿಭಾಷೆಗಳಿಗೆ ಒಗ್ಗುವಂಥ ಕೃತಿಗಳನ್ನು ಮಾತ್ರ ಅವರು ಓದುತ್ತಾರೆ. ಇನ್ನು ಕೆಲವರು ಅಭಿಜಾತ, ಸಮಗ್ರೀಕರಣ ಬಲ ಮುಂತಾದ ಪಾರಿಭಾಷಿಕ ಪದಗಳನ್ನು ಮುಂದಿಟ್ಟುಕೊಂಡು ಯುದ್ಧಸನ್ನದ್ಧರಾಗುತ್ತಾರೆ. ಒಂದು ಕೃತಿಯ ಓದು ಅವರ ಪಾಲಿಗೆ ತಮ್ಮ ಸೃಜನಶೀಲತೆ, ಜ್ಞಾನ, ವಿಮಶರ್ಾಕ್ಷೇತ್ರದಲ್ಲಿ ತಮ್ಮ ಸಾಧನೆಗಳನ್ನು ಪ್ರತಿಪಾದಿಸುವ ಒಂದು ಅವಕಾಶ ಮಾತ್ರ. ಅಲ್ಲಿ ಕೃತಿ ಗೌಣ, ಅವರ ವಿಚಾರಗಳದ್ದೇ ವಿಜೃಂಭಣೆ.

ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುವ ಓದುಗ ವರ್ಗವೊಂದಿದೆ. ಅವರು ಅನಿವಾರ್ಯ ಓದುಗರು. ಕುವೆಂಪು, ಕಾರಂತ, ಮಾಸ್ತಿ, ಚೆನ್ನವೀರ ಕಣವಿ – ಇವರನ್ನೆಲ್ಲ ಪರೀಕ್ಷೆಗೋಸ್ಕರ ಓದುವ ವಿದ್ಯಾಥರ್ಿ ಓದುಗರು. ಅವರಿಗೆ ಆ ಓದು ಅತ್ಯಂತ ಕಷ್ಟದ ಕೆಲಸ. ಜಗತ್ತಿನ ಅತ್ಯುತ್ತಮ ಸಾಹಿತ್ಯ ಕೂಡ ಅಂತಿಮವಾಗಿ ಹೆಚ್ಚು ಅಂಕ ಪಡೆಯುವುದಕ್ಕೆ ನೆರವಾಗಬೇಕು ಎಂಬುದು ಅವರ ಉದ್ದೇಶ. ಸಾಹಿತ್ಯದಲ್ಲಿ ಎಲ್ಲರಿಗೂ ಆಸಕ್ತಿ ಇರಬೇಕು ಅಂತೇನೂ ಇಲ್ಲವಲ್ಲ. ಹೀಗಾಗಿ ಈ ಓದುಗರ

ಅನಿವಾರ್ಯ ಕರ್ಮವನ್ನು ಟೀಕಿಸುವುದು ಬೇಡ. ಶೆಲ್ಲಿಯ ಒಂದು ಪದ್ಯದ ವಿಮಶರ್ಾತ್ಮಕ ವಿಶ್ಲೇಷಣೆ ಮಾಡು ಎಂದು ಕೊಟ್ಟರೆ, ಸಾಹಿತ್ಯದಲ್ಲಿ ಒಂದಿಷ್ಟೂ ಆಸಕ್ತಿಯಿಲ್ಲದ ಹುಡುಗ ಹೇಗಾದರೂ ಅರ್ಥಮಾಡಿಕೊಳ್ಳಬೇಕು. ಈ ಓದುಗರ ನಡುವೆಯೇ ನಿಜವಾದ ಆಸಕ್ತಿಯಿಂದ ಓದುವ ಒಂದಷ್ಟು ಮಂದಿ ಸಿಗುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಅನಿವಾರ್ಯಕ್ಕಾಗಿ ಓದುವ ಹತ್ತು ಹುಡುಗರಲ್ಲಿ ಒಬ್ಬನಾದರೂ ಪ್ರೀತಿಯಿಂದ ಓದುತ್ತಾನೆ. ಇವತ್ತಿನ ಹೊಸ ಬರಹಗಾರರಿಗೆ ಅವರೇ ಆಶಾದೀಪ.

ಇವರೆಲ್ಲರ ಆಚೆಗಿರುವ ಮತ್ತೊಂದು ಬಳಗ ಸಹೃದಯ ಓದುಗರದು. ಸಾಹಿತಿಗಳು ಅಕ್ಷರವನ್ನು ಎಷ್ಟು ಪ್ರೀತಿಸುತ್ತಾರೋ ಇವರಿಗೆ ಅಷ್ಟೇ ಪ್ರೀತಿ. ಓದುವುದು ಅವರ ಪಾಲಿಗೆ ಜೀವನಕ್ರಮ. ವಾರಕ್ಕೊಮ್ಮೆ ಪುಸ್ತಕದ ಅಂಗಡಿಗೆ ಹೋಗಿ, ಹೊಸ ಪುಸ್ತಕ ಏನು ಬಂದಿದೆ ಅಂತ ವಿಚಾರಿಸಿಕೊಂಡು, ವಾರ ವಾರ ಪ್ರಕಟವಾಗುವ ಪುಸ್ತಕದ ಪಟ್ಟಿಯನ್ನು ಗಮನಿಸುತ್ತಾ, ಟಾಪ್ ಟೆನ್ ಪಟ್ಟಿಯಲ್ಲಿ ಏನಿದೆ ಎಂದು ಗಮನಿಸಿ, ತನ್ನ ಪುಸ್ತಕಮಿತ್ರನಿಗೆ ಫೋನ್ ಮಾಡಿ ಏನು ಓದಿದೆ ಅಂತ ಕೇಳಿ, ಮತ್ತೊಬ್ಬನಿಗೆ ತಾನು ಓದಿದ್ದನ್ನು ಹೇಳಿ ಓದುವುದನ್ನು ಅತ್ಯಂತ ಪ್ರೀತಿಯಿಂದ ಮಾಡುವ ಈ ಸಹೃದಯ ಓದುಗರ ಜೀವನಪ್ರೀತಿ ದೊಡ್ಡದು. ಅವರು ಯಾರನ್ನೂ ಓಲೈಸುವುದಿಲ್ಲ, ಯಾರನ್ನೂ ಕೀಳಾಗಿಯೂ ಕಾಣುವುದಿಲ್ಲ. ಯಾರನ್ನೂ ಅನಗತ್ಯ ಆರಾಧಿಸುವುದಿಲ್ಲ. ವಸ್ತಾರೆಯ ಪದ್ಯ, ವಸುಧೇಂದ್ರರ ಗದ್ಯ, ಸೂರಿಯ ನಾಟಕ, ಅರುಣ್ ಜೋಳದಕೂಡ್ಲಿಗಿ ಕಾವ್ಯ, ಎಚ್ ಆರ್ ರಮೇಶ್ ಸಾಲು, ಜಿಎನ್ ಮೋಹನ್ ಪ್ರವಾಸಕಥನ, ರಾಮಸ್ವಾಮಿ ವಿಮಶರ್ೆ, ಕಿ. ರಂ. ನಾಗರಾಜ್ ಮಾತು, ಲಕ್ಷ್ಮಣರಾವ್ ಭಾವಗೀತೆ, ಎಚ್ಎಸ್ವಿ ಕಂದಪದ್ಯ, ನರಹಳ್ಳಿ ವಿಮಶರ್ೆ, ಷ. ಶೆಟ್ಟರ್ ಚರಿತ್ರೆ ಎಲ್ಲವೂ ಇವರಿಗಿಷ್ಟ. ವಿವೇಕರ ಸಂಯಮದ ಬರವಣಿಗೆಯಷ್ಟೇ ಕಾಯ್ಕಿಣಿಯ ಭಾವುಕತೆಯನ್ನೂ ಮೆಚ್ಚುತ್ತಾರೆ. ಅನಂತಮೂತರ್ಿಯವರ ಒಳನೋಟವನ್ನೂ ಬೈರಪ್ಪನವರ ಅಧ್ಯಯನಶೀಲತೆಯನ್ನೂ ವೆಂಕಟಸುಬ್ಬಯ್ಯನವರ ಪಾಂಡಿತ್ಯವನ್ನೂ ದಿವಾಕರ್ ಓದಿನ ವಿಸ್ತಾರವನ್ನೂ ಗಣೇಶಯ್ಯ ಕೃತಿಗಳ ಹೊಸತನವನ್ನೂ ರಾಘವೇಂದ್ರ ಪಾಟೀಲರ ಲಾಲಿತ್ಯವನ್ನೂ ಓದಿ ಸವಿಯಬಲ್ಲ ಹದಗೊಂಡ ಮನಸ್ಸಿನ ಈ ಓದುಗರು ಸಾಹಿತ್ಯಲೋಕಕ್ಕೆ ಶ್ರೀರಕ್ಷೆ. ಅವರಿಗೆ ಪೂರ್ವಗ್ರಹವಿಲ್ಲ, ಯಾವುದೂ ವಜ್ರ್ಯವೂ ಅಲ್ಲ. ಅತ್ಯುತ್ತಮ ಅಭಿರುಚಿ, ಆಸಕ್ತಿ, ಸೃಜನಶೀಲ ಮನಸ್ಸು ಮತ್ತು ಮೆಚ್ಚಿಕೊಂಡದ್ದನ್ನು ಪಸರಿಸುವ ಗುಣ ಇವರಲ್ಲಿ ಕಾಣಬಹುದು.

ಕಾಲಕಾಲಕ್ಕೆ ಸಾಹಿತ್ಯ ಜಗತ್ತು ಹೊಸ ಹೊಸ ಓದುಗರಿಗೆ ಮುಖಾಮುಖಿಯಾಗಬೇಕಾಗುತ್ತದೆ. ಸಾಹಿತ್ಯದಲ್ಲಿ ರಮ್ಯ, ನವೋದಯ, ನವ್ಯ, ಬಂಡಾಯ, ದಲಿತ, ನವ್ಯೋತ್ತರ ಎಂಬ ಪಂಥಗಳು ಹುಟ್ಟಿಕೊಂಡ ಹಾಗೆ ಓದುಗರಲ್ಲೂ ಅಂಥ ಪಂಥಗಳು ಹುಟ್ಟಿಕೊಂಡುವೇನೋ ಎಂಬ ಅನುಮಾನ ಮೂಡುವಂತೆ ಓದುಗ ವಲಯ ಒಡೆದುಹೋಯಿತು. ಈಗ ಚಳವಳಿಗಳೂ ಪಂಥಗಳೂ ಇಲ್ಲದ ಕಾಲದಲ್ಲಿ ಮತ್ತೆ ಓದುಗರು ಒಟ್ಟಾಗುತ್ತಿದ್ದಾರೆ, ಒಂದಾಗುತ್ತಿದ್ದಾರೆ.

ಓದುಗನನ್ನು ಓಲೈಸುವುದು ಲೇಖಕನ ಕೆಲಸ ಅಲ್ಲ. ಅವನು ತನಗನ್ನಿಸಿದ್ದನ್ನು ಬರೆಯುತ್ತಾ ಹೋಗುತ್ತಾನೆ. ಹಾಗೆ ಬರೆದದ್ದು ಅದರ ಸತ್ವದಿಂದಾಗಿ, ತತ್ವದಿಂದಾಗಿ ಓದುಗನಿಗೆ ಇಷ್ಟವಾದರೆ ಅದು ಕವಿಯ ಭಾಗ್ಯ. ಒಂದು ಕಾಲಘಟ್ಟದಲ್ಲಿ ಓದುಗರನ್ನು ಬೆಳೆಸುವಂಥ ಲೇಖಕರೂ ಲೇಖಕರನ್ನು ಬೆಳೆಸುವಂಥ ಓದುಗರೂ ಇದ್ದುಬಿಟ್ಟರೆ ಅದೇ ಸುವರ್ಣಯುಗ. ಅಂಥ ಸುವರ್ಣಯುಗದಲ್ಲಿ ನಾವಿದ್ದೇವೆ ಎಂದು ಧೈರ್ಯವಾಗಿ ಹೇಳಿಕೊಳ್ಳಬಹುದು.

6 ಟಿಪ್ಪಣಿಗಳು (+add yours?)

 1. Vinod
  ಜನ 13, 2011 @ 13:09:52

  ತುಂಬಾ ಸೊಗಸಾಗಿದೆ. ನನ್ನಿಗಳು ಜೋಗಿಯವರಿಗೆ.
  ಈ ನಿಮ್ಮ ಓದುಗ-ವಿಂಗಡಣೆ ಒಬ್ಬ ವ್ಯಕ್ತಿಯಲ್ಲೇ ಕಾಣುವ ಹಲವು ಹಂತಗಳು – ಓದುಗ ವಿಕಾಸಾನೆಯೆಂದರೆ ತಪ್ಪಾಗಲಾರದಲ್ವೇ?

  ಉತ್ತರ

 2. srinivas deshpande
  ಜನ 02, 2011 @ 01:06:09

  Dear Jogi,

  hosa varshada shubhashayagalu nimagu haagu nimma kutumbakkoo.
  Lekhana chennagide. Oduganemba bhaktavatsalanannu trupthi padesuva saadhyate haagu anivaaryathe lekhakanigilla. Aadare lekhaka thanna antharpathyavanna aagaga hechhisikollutta odugarottige thaanu beleyabeku,oduganaagabeku. Intaha krishiyalli todagikondiruvad S.L..Bhairappa, todagikondidda P. Lankesh, Tejaswi ethararu bahukaala odugana manadangaladalli iddare. Prayashaha saahityavonde yaava vasheeli illade dhyaanakke haagu swadhyayakke dakkuva vishaya-Srinivas Deshpande

  ಉತ್ತರ

 3. subhanu raravi
  ಜೂನ್ 21, 2010 @ 21:43:34

  Dear Gireesh rao(Jogi)
  your aricle is intersting and fantastic.

  ಉತ್ತರ

 4. H S V Murthy
  ಜೂನ್ 21, 2010 @ 06:18:05

  ಓದುಗನೆಂಬ ಭಕ್ತವತ್ಸಲ ಚೆನ್ನಾಗಿದೆ. ಅದನ್ನು ಓದುತ್ತಾ ನನ್ನಲ್ಲಿ ಅನೇಕ ಸಮಾನಾಂತರ ವಿಚಾರಗಳು ಮೂಡಿದವು. ಅವನ್ನೊಂದು ಪ್ರತ್ಯೇಕ ಲೇಖನವನ್ನಾಗಿಯೇ ಬರೆಯಬೇಕೆನ್ನಿಸಿತು. ಯೋಚಿಸಲಿಕ್ಕೆ ಹಚ್ಚುವ ಇಂಥ ಲೇಖನ ಬರೆದದ್ದಕ್ಕಾಗಿ ಜೋಗಿಗೆ ಅಭಿನಂದನೆಗಳು.
  ಎಚ್ಚೆಸ್ವಿ

  ಉತ್ತರ

 5. sharada
  ಜೂನ್ 20, 2010 @ 10:06:31

  very interesting..

  ಉತ್ತರ

 6. Siddalingamurthy B G
  ಜೂನ್ 19, 2010 @ 10:23:23

  ತುಂಬಾ ಸೊಗಸಾದ ಲೇಖನ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: