ಈರುಳ್ಳಿ..ಹುಷಾರ್..!

ಒಂದು ಕ್ವಿಂಟಲ್ ನೀರುಳ್ಳಿಯ ಬದಲಿಗೆ ಕಾಶ್ಮೀರವನ್ನು ಕೊಟ್ಟರೆ ಹೇಗೆ?

-ಚೇಳಯ್ಯ

ವಾರ್ತಾಭಾರತಿ

ದೇಶದಲ್ಲಿ ನೀರುಳ್ಳಿಗಾಗಿ ಹಾಹಾಕಾರ ಎದ್ದ ಬಳಿಕ ವಿವಿಧ ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.
***
ಸುರೇಶ್ ಕಲ್ಮಾಡಿಯವರ ನಿವಾಸಕ್ಕೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಅಪಾರ ಪ್ರಮಾಣದ ನೀರುಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಅವ್ಯವಹಾರದಿಂದ ಗಳಿಸಿದ ಕೋಟ್ಯಂತರ ಹಣವನ್ನು ಅವರು ನೀರುಳ್ಳಿ ರೂಪಕ್ಕೆ ಪರಿವರ್ತಿಸಿ ಮನೆಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿರುವುದು ಸಿಬಿಐ ಅಧಿಕಾರಿಗಳಿಗೆ ಮನವರಿಕೆಯಾಗಿದೆ. ಕಲ್ಮಾಡಿಯವರು ತಾವು ಮಾಡುವ ಪ್ರತಿ ದಿನದ ಸಾಂಬಾರಿಗೂ ನೀರುಳ್ಳಿ ಬಳಸುತ್ತಿರುವುದು ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಸುಮಾರು ಎರಡು ಗೋಣಿ ನೀರುಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದು ನೂರು ಕೋಟಿಗೂ ಅಧಿಕ ಬೆಲೆ ಬಾಳಬಹುದು ಎಂದು ಅವರು ಅಂದಾಜಿಸಿದ್ದಾರೆ.
***
ಆಸ್ತಿ ಹಂಚಿಕೆಯ ವಿವಾದದಲ್ಲಿ ಅಣ್ಣತಮ್ಮಂದಿರು ಪರಸ್ಪರ ಇರಿದುಕೊಂಡ ಘಟನೆ ವರದಿಯಾಗಿದೆ. ಭೂಮಿ, ಹಣ, ಬಂಗಾರ ಇವೆಲ್ಲ ಹಂಚಿಕೆಯಾದ ಬಳಿಕ ಉಳಿದ ಒಂದು ನೀರುಳ್ಳಿಯನ್ನು ಹಂಚಿಕೊಳ್ಳುವಾಗ ಜಗಳ ಸ್ಫೋಟಿಸಿತು. ಅಣ್ಣನ ಪಾಲಿಗೆ ನೀರುಳ್ಳಿಯ ತುಂಡು ಒಂದು ಇಂಚು ಅಧಿಕ ಹೋಗಿರುವುದು ತಮ್ಮನ ಸಿಟ್ಟಿಗೆ ಕಾರಣವಾಯಿತು ಎನ್ನಲಾಗಿದೆ. ನೀರುಳ್ಳಿಗಾಗಿ ಕಾದಾಡಿದ ಅಣ್ಣ ತಮ್ಮಂದಿರು ಇದೀಗ ಆಸ್ಪತ್ರೆ ಸೇರಿದ್ದಾರೆ.
***
ಪ್ರತಿ ದಿನದ ಸಾರು, ಪಲ್ಯಗಳಿಗೆ ನೀರುಳ್ಳಿಯನ್ನು ಬಳಸುತ್ತಿದ್ದ ಗೃಹಸ್ಥನೊಬ್ಬನ ಮನೆಗೆ ಇನ್‌ಕಂ ಟ್ಯಾಕ್ಸ್ ಅಧಿಕಾರಿಗಳು ಅನಿರೀಕ್ಷಿತವಾಗಿ ದಾಳಿ ನಡೆಸಿದ್ದಾರೆ. ಅವನ ಮನೆಯಲ್ಲಿ ಎರಡು ಕೆ. ಜಿ. ನೀರುಳ್ಳಿ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
***
ರಾಜ್ಯ ರಾಜಕೀಯದಲ್ಲಿ ನೀರುಳ್ಳಿ ಹೊಸ ಸಂಚಲನವನ್ನುಂಟು ಮಾಡಿದೆ. ಹಣದ ವೌಲ್ಯ ತೀರಾ ಕೆಳಗೆ ಇಳಿದುದರಿಂದ ‘ಆಪರೇಷನ್ ಕಮಲ’ಕ್ಕೆ ಶಾಸಕರು ಬಲಿಯಾಗುವುದು ಕಮ್ಮಿಯಾಗಿದ್ದಾರೆ. ಹಲವು ಗೋಣಿ ಹಣವನ್ನು ತುಂಬಿ ಕೊಟ್ಟರೂ ಶಾಸಕರು ಅದಕ್ಕೆ ಮನವೊಲಿಯದೆ ಇರುವುದು ರೆಡ್ಡಿ ಸಹೋದರರನ್ನು ಚಿಂತೆಗೀಡು ಮಾಡಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೊಸ ಸಾಹಸಕ್ಕೆ ಇಳಿದಿದ್ದು, ಶಾಸಕರಿಗೆ ಹಣದ ಬದಲು ನೀರುಳ್ಳಿಯನ್ನು ನೀಡುವುದಾಗಿ ಕಾಳ ಸಂತೆಯಲ್ಲಿ ಘೋಷಿಸಿದ್ದಾರೆ. ಇದರಿಂದಾಗಿ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಶಾಸಕರು ಮತ್ತೆ ಬಿಜೆಪಿಗೆ ಪಕ್ಷಾಂತರ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಎರಡು ಕಿಲೋ ನೀರುಳ್ಳಿಯನ್ನು ಕೊಟ್ಟು ನಾಲ್ಕು ಶಾಸಕರನ್ನು ಕೊಂಡು ಕೊಳ್ಳಲಾಗಿದೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಅಗತ್ಯ ಬಿದ್ದರೆ ಶಾಸಕರನ್ನು 5 ಕೆ. ಜಿ. ನೀರುಳ್ಳಿ ಕೊಟ್ಟಾದರೂ ಕೊಂಡುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
‘ಆಪರೇಷನ್ ಕಮಲ’ಕ್ಕೆ ನೀರುಳ್ಳಿಯನ್ನು ಬಳಸುತ್ತಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರನ್ನು ಕೂಡ ಇಕ್ಕಟ್ಟಿಗೆ ಸಿಲುಕಿಸಿದೆ. 10 ಕೆ.ಜಿ. ನೀರುಳ್ಳಿಯನ್ನು ಕೊಡುವುದಾದರೆ ತಾನು ಬಿಜೆಪಿಯನ್ನು ಸೇರುತ್ತೇನೆ ಎಂಬ ಸಂದೇಶವನ್ನು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಬಿಜೆಪಿ ಮುಖಂಡರಿಗೆ ತಲುಪಿಸಿದ್ದಾರೆ ಎನ್ನುವುದು ರಾಜಕೀಯದೊಳಗಿನ ವದಂತಿ. ಆದರೆ ಹತ್ತು ಕೆ. ಜಿ. ನೀರುಳ್ಳಿಯನ್ನು ನೀಡುವಷ್ಟು ತಾವಿನ್ನೂ ಸಮರ್ಥರಾಗಿಲ್ಲ. ರಾಜ್ಯವನ್ನು ಸಂಪೂರ್ಣವಾಗಿ ಮಾರಾಟ ಮಾಡುವುದಕ್ಕೆ ಲೋಕಾಯುಕ್ತರು ಆಸ್ಪದ ನೀಡುತ್ತಿಲ್ಲ. ಇದರಿಂದಾಗಿ ಪಕ್ಷ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದೆ ಎಂದು ಯಡಿಯೂರಪ್ಪ ಪ್ರತಿ ಸಂದೇಶವನ್ನು ತಲುಪಿಸಿದ್ದಾರೆ ಎನ್ನುವುದೂ ಬರೇ ವದಂತಿಯಂತೆ.
ಇದೇ ಸಂದರ್ಭದಲ್ಲಿ ಸೂಟ್‌ಕೇಸ್‌ನೊಳಗೆ ಕೆಜಿಗಟ್ಟಲೆ ನೀರುಳ್ಳಿಯನ್ನು ಬದಲಾಯಿಸುತ್ತಿರುವುದು ಲೋಕಾಯುಕ್ತದ ಕಣ್ಣನ್ನು ಕೆಂಪು ಮಾಡಿದೆ. ‘ಈ ಹಿಂದೆ ರಾಜ್ಯದಲ್ಲಿ ಭ್ರಷ್ಟಾಚಾರ ಬರೇ ಹಣ ಮತ್ತು ಭೂಮಿಗೆ ಸಂಬಂಧಿಸಿದಂತೆ ಮಾತ್ರ ಇತ್ತು. ಈ ಹಿಂದೆ ಕಾಲ ಇಷ್ಟು ಕೆಟ್ಟಿರಲಿಲ್ಲ. ಕೇವಲ ಭೂಮಿಯನ್ನಷ್ಟೇ ನುಂಗುತ್ತಿದ್ದರು. ಆದರೆ ಇದೀಗ ಸಾರ್ವಜನಿಕವಾಗಿ ಕೆಜಿ ಗಟ್ಟಳೆ ನೀರುಳ್ಳಿಯನ್ನು ಕೊಟ್ಟು ಶಾಸಕರನ್ನು ಕೊಳ್ಳಲಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ವಿಷಯ’ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ರಾಜಕಾರಣಿಗಳ ಮನೆಗಳಿಗೆ ದಾಳಿ ನಡೆಸಿ, ಅಕ್ರಮ ನೀರುಳ್ಳಿ ಮತ್ತು ತರಕಾರಿಗಳನ್ನು ವಶಪಡಿಸಿಕೊಳ್ಳಲಿದ್ದೇನೆ. ನೀರುಳ್ಳಿ ಮತ್ತು ತರಕಾರಿಗಳು ರಾಷ್ಟ್ರದ ಸೊತ್ತು. ಈ ಸೊತ್ತನ್ನು ಅಕ್ರಮವಾಗಿ ರಾಜಕಾರಣಿಗಳು ಇಟ್ಟುಕೊಳ್ಳಲು ನಾನು ಆಸ್ಪದ ನೀಡುವುದಿಲ್ಲ’’ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
***
ನೀರುಳ್ಳಿಯ ತೀವ್ರ ಕೊರತೆಯಾಗಿರುವುದರಿಂದ ಪಾಕಿಸ್ತಾನದಿಂದ ನೀರುಳ್ಳಿಯನ್ನು ಕಿಲೋಗಟ್ಟಲೆ ಆಮದು ಮಾಡಲು ಚಿಂತೆ ನಡೆದಿದೆ ಎಂದು ಅರ್ಥ ಶಾಸ್ತ್ರಜ್ಞರೂ ಆಗಿರುವ ಪ್ರಧಾನಿ ಮನಮೋಹನ್ ಸಿಂಗ್ ಘೋಷಿಸಿದ್ದಾರೆ. ಆದರೆ ನೀರುಳ್ಳಿ ದರ ವಿಪರೀತ ಏರಿರುವುದರಿಂದ ನೀರುಳ್ಳಿ ಆಮದು ಮಾಡುವಷ್ಟು ಶಕ್ತಿ ಭಾರತಕ್ಕಿಲ್ಲ. ಆದುದರಿಂದ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟು ಒಂದು ಕ್ವಿಂಟಲ್ ನೀರುಳ್ಳಿಯನ್ನು ಆಮದು ಮಾಡಿದರೆ ಹೇಗೆ ಎನ್ನುವುದರ ಕುರಿತಂತೆ ಚಿಂತನೆ ನಡೆದಿದೆ. ಒಂದು ವೇಳೆ ವ್ಯಾಪಾರ ಕುದುರಿದ್ದೇ ಆದರೆ, ಅರುಣಾಚಲವನ್ನು ಚೀನಕ್ಕೆ, ಈಶಾನ್ಯ ಭಾಗವನ್ನು ನೇಪಾಳಕ್ಕೆ, ತಮಿಳುನಾಡನ್ನು ಶ್ರೀಲಂಕಾಕ್ಕೆ ಕೊಟ್ಟು ತಲಾ ಒಂದೊಂದು ಕ್ವಿಂಟಾಲ್ ನೀರುಳ್ಳಿಯನ್ನು ಆಮದು ಮಾಡಿಕೊಳ್ಳುವುದಕ್ಕೆ ಮಾತುಕತೆ ನಡೆದಿದೆ. ಆದುದರಿಂದ ದೇಶದ ಜನರು ನೀರುಳ್ಳಿಗಾಗಿ ಚಿಂತೆ ಮಾಡಬೇಕಾಗಿಲ್ಲ ಎಂದು ಅರ್ಥಶಾಸ್ತ್ರಜ್ಞರೂ ಆಗಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ದೇಶದ ಜನತೆಗೆ ಭರವಸೆಯನ್ನು ನೀಡಿದ್ದಾರೆ.
***
ನೀರುಳ್ಳಿಗಾಗಿ ವಿಶ್ವದಲ್ಲಿ ಮಹಾಯುದ್ಧ ನಡೆಯುವ ಎಲ್ಲ ಸಾಧ್ಯತೆಗಳು ಕಾಣುತ್ತಿರುವುದರಿಂದ ಎಲ್ಲ ದೇಶಗಳು ತಮ್ಮ ತಮ್ಮ ಸೇನಾ ನೆಲೆಗಳಿಗೆ ಎಚ್ಚರಿಕೆಯನ್ನು ನೀಡಿವೆ. ಇದೇ ಸಂದರ್ಭದಲ್ಲಿ ‘ನೀರುಳ್ಳಿಯನ್ನು ಸಂಗ್ರಹಿಸಿಡುವುದು ಭಯೋತ್ಪಾದನೆಯ ಒಂದು ಭಾಗ. ಆದುದರಿಂದ ಎಲ್ಲ ದೇಶಗಳು ನೀರುಳ್ಳಿಯನ್ನು ನಿಶ್ಶಸ್ತ್ರೀಕರಣಗೊಳಿಸಬೇಕು’’ ಎಂದು ಅಮೆರಿಕ ಘೋಷಿಸಿದೆ. ತಕ್ಷಣ ಎಲ್ಲ ದೇಶಗಳು ತಮ್ಮ ತಮ್ಮ ನೀರುಳ್ಳಿ ದಾಸ್ತಾನು ಕೇಂದ್ರಗಳನ್ನು ಅಮೆರಿಕದ ಅಧಿಕಾರಿಗಳಿಗೆ ಪರಿಶೀಲಿಸಲು ಅವಕಾಶ ನೀಡಬೇಕು. ಹಾಗೂ ಅಕ್ರಮ ನೀರುಳ್ಳಿಯನ್ನು ತಕ್ಷಣ ಅಮೆರಿಕಕ್ಕೆ ಒಪ್ಪಿಸಬೇಕು ಎಂದು ಅಮೆರಿಕದ ಅಧ್ಯಕ್ಷರು ಘೋಷಿಸಿದ್ದಾರೆ. ನೀರುಳ್ಳಿಯನ್ನು ಬಳಸಬೇಕಾದರೆ ಅಮೆರಿಕದ ಜೊತೆಗೆ ಅವಶ್ಯವಾಗಿ ಒಪ್ಪಂದವನ್ನು ಮಾಡಬೇಕಾಗುತ್ತದೆ. ಅಮೆರಿಕದ ಜೊತೆಗೆ ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ, ಅಮೆರಿಕದ ಅನುಮತಿಯೊಂದಿಗೆ ನೀರುಳ್ಳಿಯನ್ನು ಬಳಕೆ ಮಾಡಬೇಕು. ಆದರೆ ಬಳಕೆ ಮಾಡಿದ ಪ್ರತಿ ನೀರುಳ್ಳಿಯ ಲೆಕ್ಕವನ್ನು ಅಮೆರಿಕಕ್ಕೆ ನೀಡಬೇಕು ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದಾರೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಗೆ ಇದು ಅತ್ಯಗತ್ಯ ಎಂದೂ ಅವರು ಕರೆ ನೀಡಿದ್ದಾರೆ.
***
ಇದೇ ಸಂದರ್ಭದಲ್ಲಿ ದಾವಣಗೆರೆಯಲ್ಲಿ ನೀರುಳ್ಳಿಯನ್ನು ಬೆಳೆದ ರೈತನೊಬ್ಬ ಯೋಗ್ಯ ಬೆಲೆ ಸಿಗದೆ ತೀವ್ರ ನಷ್ಟಕ್ಕೊಳಗಾಗಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.

2 ಟಿಪ್ಪಣಿಗಳು (+add yours?)

 1. Anand
  ಡಿಸೆ 30, 2010 @ 18:50:20

  Ha Ha Ha
  🙂 atyanta chennaagide

  ಉತ್ತರ

 2. ಯಳವತ್ತಿ
  ಡಿಸೆ 30, 2010 @ 08:28:54

  Olle vidambane. chennagide..

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: