ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುವುದಿಲ್ಲ ?

-ಉದಯ್ ಇಟಗಿ

ಬಿಸಿಲ ಹನಿ

“ನೀವು ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷಿನಲ್ಲೇಕೆ ಬರೆಯುವದಿಲ್ಲ?” ಹೀಗೊಂದು ಪ್ರಶ್ನೆಯನ್ನು ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ನನ್ನ ಕೇಳಿದರು. ಆಕೆ ಈ ಪ್ರಶ್ನೆಯನ್ನು ನನ್ನನ್ನೂ ಸೇರಿಸಿ ಕನ್ನಡದಲ್ಲಿ ಬರೆಯುತ್ತಿರುವ/ಬರೆದ ಇಂಗ್ಲೀಷ್ ಅಧ್ಯಾಪಕರನ್ನು ಉದ್ದೇಶಿಸಿ ಕೇಳಿದ್ದರು. ಆಕೆ ಮೂಲತಃ ಆಂಧ್ರದವರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಇಂಗ್ಲೀಷ್ ವಿಭಾಗದಲ್ಲಿ ಹತ್ತು ವರ್ಷ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿ ಈಗ ನನ್ನೊಟ್ಟಿಗೆ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೀಷ್ ಸಾಹಿತ್ಯದ ಬಗ್ಗೆ ತುಂಬಾ ಓದಿಕೊಂಡಾಕೆ ಹಾಗೂ ಕೆಲಸದ ನಿಮಿತ್ತ ಹತ್ತು ವರ್ಷಗಳನ್ನು ಮೈಸೂರಿನಲ್ಲೇ ಕಳೆದಿದ್ದರಿಂದ ಕನ್ನಡವನ್ನು ಚನ್ನಾಗಿ ಮಾತನಾಡುತ್ತಿದ್ದರು.

 

ಜೊತೆಗೆ ಕನ್ನಡಿಗರೊಂದಿಗಿನ ತಮ್ಮ ಒಡನಾಟ ಮತ್ತು ಆಸಕ್ತಿಯಿಂದಾಗಿ ಕನ್ನಡಸಾಹಿತ್ಯದ ಬಗ್ಗೆ ತುಸು ಹೆಚ್ಚೇ ತಿಳಿದುಕೊಂಡಿದ್ದರು. ಹಾಗೆ ತಿಳಿದುಕೊಳ್ಳಲು ಒಂದು ಕಾರಣವೂ ಇತ್ತು. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಎ. ಮೊದಲ ವರ್ಷಕ್ಕೆ ಪಠ್ಯವಾಗಿರುವ “Indian Writing in English” ಎಂಬ ಪತ್ರಿಕೆಗೆ ಕನ್ನಡದ ಖ್ಯಾತ ಲೇಖಕ ಯು.ಆರ್.ಅನ್ಂತಮೂರ್ತಿಯವರ ಇಂಗ್ಲೀಷಿಗೆ ಅನುವಾದಗೊಂಡಿರುವ ಪ್ರಸಿದ್ಧ ಕಾದಂಬರಿ ‘ಸಂಸ್ಕಾರ’ವನ್ನು ಬೋಧಿಸುತ್ತಿದ್ದರು.

ಆ ನೆಪದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಅನೇಕ ಲೇಖಕರ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದರು ಹಾಗೂ ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರೆಂಬುದು ಆಕೆಗೆ ಚನ್ನಾಗಿ ಗೊತ್ತಿತ್ತು. ಅದೇ ಪ್ರಶ್ನೆಯನ್ನು ‘ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರಲ್ಲವೆ?’ ಎಂದು ಕೇಳಿದರು. ನಾನು ಹೌದೆಂದು ತಲೆಯಾಡಿಸಿ ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡದಲ್ಲಿ ಬರೆದವರು ಹಾಗೂ ಬರೆಯುತ್ತಿರುವವರ ದೊಡ್ಡ ಪಟ್ಟಿಯನ್ನೇ ಕೊಟ್ಟೆ.

ಅದು ಬಿ. ಎಮ್. ಶ್ರೀ. ಯವರಿಂದ ಶುರುವಾಗಿ ವಿ. ಕೃ. ಗೋಕಾಕ್, ಪೋಲಂಕಿ ರಾಮಮೂರ್ತಿ, ಶಂಕರ್ ಮೊಕಾಶಿ ಪುಣೇಕರ್, ಕೀರ್ತಿನಾಥ ಕುರ್ತಕೋಟಿ, ಅನಂತಮೂರ್ತಿ, ಅಡಿಗ, ಚಂಪಾ, ಶಾಂತಿನಾಥ ದೇಸಾಯಿ, ಸುಮತೀಂದ್ರ ನಾಡಿಗ್, ಲಂಕೇಶ್, ಜಿ.ಎಸ್. ಆಮೂರು, ವೀಣಾ ಶಾಂತೇಶ್ವರ, ಸರೋಜಿನಿ ಶಿಂತ್ರಿ, ರಾಮಚಂದ್ರ ಶರ್ಮ, ಜಿ.ಕೆ. ಗೋವಿದರಾವ್, ಕೆ. ವಿ. ತಿರುಮಲೇಶ್, ಓ.ಎಲ್. ನಾಗಭೂಷಣ ಸ್ವಾಮಿ, ವೇಣುಗೋಪಾಲ ಸೊರಬ, ಚಿ. ನ. ಮಂಗಳ, ಜಿ. ರಾಮಕೃಷ್ಣ, ಡಾ. ಪ್ರಭುಶಂಕರ್, ಸಿ. ನಾಗಣ್ಣ, ಕೆ. ಎಸ್. ಭಗವಾನ್, ರಾಜೇಂದ್ರ ಚೆನ್ನಿ, ಮಾಲತಿ ಪಟ್ಟಣಶೆಟ್ಟಿ, ನಟರಾಜ್ ಹುಳಿಯಾರ್, ವನಮಾಲ ವಿಶ್ವನಾಥ್, ಕೆ.ಟಿ. ಗಟ್ಟಿ, ಕೃಷ್ಣಮೂರ್ತಿ ಚಂದರ್ ವರೆಗೂ ಮುಂದುವರೆದು, ಇತ್ತೀಚಿಗೆ ಬರೆಯುವ ಕನಕರಾಜು. ಬಿ. ಆರನಕಟ್ಟೆ, ಕಲಿಗಣನಾಥ ಗುಡದೂರು, ಎಚ್. ಆರ್. ರಮೇಶ್, ಸುಕನ್ಯಾ ಕನಾರಳ್ಳಿ ಯವರಲ್ಲಿ ಕೊನೆಗೊಳ್ಳುತ್ತದೆ; ಇನ್ನೂ ಸಾಕಷ್ಟು ಜನರಿದ್ದಾರೆ, ಆದರೆ ಇವರೆಲ್ಲ ಹೆಸರು ಮಾಡಿರುವದರಿಂದ ಅವರನ್ನಷ್ಟೇ ಹೆಸರಿಸಲಾಗಿದೆ ಎಂದು ಹೇಳಿದೆ.

ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ಶ್ರೀಮಂತಗೊಡಿದ್ದು ಹಾಗೂ ಹೊಸ ಆಯಾಮಗಳನ್ನು ಪಡೆದುಕೊಂಡಿದ್ದು ಈ ಎಲ್ಲ ಲೇಖಕರಿಂದ ಎಂದು ಹೇಳಿದರೆ ತಪ್ಪಾಗುವದಿಲ್ಲ ಎಂದೂ ಸೇರಿಸಿದೆ. ಆಕೆ ಮತ್ತೆ ಮುಂದುವರೆದು ಅವರೇಕೆ ‘ಇಂಗ್ಲೀಷಿನಲ್ಲಿ ಬರೆಯಲಿಲ್ಲ ಅಥವಾ ಬರೆಯುತ್ತಿಲ್ಲ?’ ಎಂದು ಕೇಳಿದರು. ನನಗೆ ಅವರ ಪ್ರಶ್ನೆ ತುಸು ವಿಚಿತ್ರವಾಗಿ ಕಂಡಿತು. ನಾನು ಅದು ಅವರವರ ಇಷ್ಟ ಎಂದೆ. “ಅಲ್ಲ, ಅವರು ನೇರವಾಗಿ ಇಂಗ್ಲೀಷಿನಲ್ಲಿಯೇ ಬರೆಯಬಹುದಿತ್ತಲ್ಲ?” ಎಂದು ಮತ್ತೆ ಕೇಳಿದರು. “ಏಕೆ? ಕನ್ನಡದಲ್ಲಿ ಬರೆಯುವದು ಅವಮಾನವೇನು?” ಎಂದು ನಾನು ಮರು ಪ್ರಶ್ನೆ ಹಾಕಿದೆ. “ಹಾಗಲ್ಲ, ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ನೇರವಾಗಿ ಇಂಗ್ಲೀಷಿನಲ್ಲಿ ಬರೆದಿದ್ದರೆ ಚೆನ್ನಿತ್ತು. ಆಗವರು ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆಯುತ್ತಿದ್ದರು.” ಎಂದರು. ನಾನು “ಅದು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಇಂಗ್ಲೀಷ್ ಅವರ ಮಾತೃಭಾಷೆಯಲ್ಲ. ಮಾತೃಭಾಷೆಯಲ್ಲಿ ಬರೆದಿದ್ದು ಮಾತ್ರ ಯಶಸ್ವಿಯಾಗಬಲ್ಲದು” ಎಂದೆ.

ಆಕೆ ಮತ್ತೊಂದು ಪ್ರಶ್ನೆಯನ್ನು ಮುಂದಿಟ್ಟರು. “ಹಾಗೆ ನೋಡಿದರೆ ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಲೇಖಕರ್ಯಾರದು ಇಂಗ್ಲೀಷ್ ಯಾವತ್ತೂ ಮಾತೃಭಾಷೆಯಾಗಿರಲಿಲ್ಲ. ಆದರೂ ಅವರು ಇಂಗ್ಲೀಷಿನಲ್ಲಿಯೇ ಬರೆದು ಯಶಸ್ವಿಯಾಗಲಿಲ್ಲವೇನು? ಖ್ಯಾತಿಯನ್ನು ಪಡೆಯಲಿಲ್ಲವೇನು?” ಎಂದರು. ನಾನು ಒಂದು ಕ್ಷಣ ಸುಮ್ಮನಾದೆ. ಮತ್ತೆ ಅವರೇ ಮುಂದುವರಿದು “ಅವರು ಕೂಡ ನಿಮ್ಮಂತೆಯೇ ಮಾತೃಭಾಷೆಯ ಬಗ್ಗೆ ಯೋಚಿಸಿದ್ದರೆ ಇವತ್ತು ಭಾರತದಲ್ಲಿ ಇಂಗ್ಲೀಷಿನಲ್ಲಿ ಬರೆಯುವ ಲೇಖಕರು ಒಬ್ಬರೂ ಇರುತ್ತಿರಲಿಲ್ಲ. ಆದರೂ ಅವರು ಅದ್ಹೇಗೆ ಇಂಗ್ಲೀಷಿನಲ್ಲಿ ಬರೆದರು? ಬರೆದು ಯಶಸ್ವಿಯಾದರು? ಅಂದರೆ ನೀವು ಇಂಗ್ಲೀಷಿನಲ್ಲಿ ಬರೆಯಲಾರದ್ದಕ್ಕೆ ಮಾತೃಭಾಷೆಯ ಗೋಡೆಯನ್ನು ಅಡ್ಡ ತರುತ್ತಿರುವಿರಿ. ಅದರಲ್ಲಿ ಬರೆದರೆ ಮಾತ್ರ ಪರಿಣಾಮಕಾರಿಯಾಗಿರುತ್ತದೆ, ಯಶಸ್ವಿಯಾಗಿರುತ್ತದೆ ಎಂದೆಲ್ಲ ಕುಂಟುನೆಪ ಹೇಳುತ್ತಾ ಜಾರಿಕೊಳ್ಳುತ್ತಿರುವಿರಿ. ಹಾಗೆ ಕುಂಟುನೆಪವೊಡ್ಡುವ ಬದಲು ನಾನು ಇಂಗ್ಲೀಷಿನಲ್ಲಿ ಬರೆಯಲು ಅಸಮರ್ಥನಿದ್ದೇನೆ ಎಂದು ನೇರವಾಗಿ ಒಪ್ಪಿಕೊಳ್ಳಿ. ಇಲ್ಲವೇ ಇಂಗ್ಲೀಷಿನಲ್ಲಿ ಬರೆದು ತೋರಿಸಿ. ಪ್ರಯತ್ನಿಸದೆಯೇ ನೀವು ಅದ್ಹೇಗೆ ಇಂಗ್ಲೀಷಿನಲ್ಲಿ ಬರೆದರೆ ಯಶಸ್ವಿಯಾಗುವದಿಲ್ಲವೆಂದು ಹೇಳುತ್ತೀರಿ?” ಎಂದು ಕೇಳಿದರು.

ನನಗೆ ಒಂದು ಕ್ಷಣ ಪೆಚ್ಚೆನಿಸಿದರೂ “ಹೌದಲ್ಲವೆ? ಅವರು ಹೇಳುವದರಲ್ಲಿ ಸತ್ಯವಿದೆಯಲ್ಲವೆ?” ಎನಿಸಿತು. ಭಾರತೀಯ ಇಂಗ್ಲೀಷ್ ಬರಹಗಾರರಾದ ಆರ್. ಕೆ. ನಾರಾಯಣ್, ಮುಲ್ಕ್ರಾಜಾನಂದ, ರಾಜಾರಾವ್, ಸರೋಜಿನಿ ನಾಯ್ದು, ಟ್ಯಾಗೋರ್, ವಿಕ್ರಂ ಶೇಠ್, ತೋರು ದತ್, ನೀರಧ್ ಚೌಧರಿ, ಕಮಲಾ ದಾಸ್, ಎ.ಕೆ ರಾಮಾನುಜನ್, ಸಲ್ಮಾನ್ ರಶ್ದಿ, ಅನೀತಾ ದೇಸಾಯಿ, ಕಿರಣ್ ದೇಸಾಯಿ, ಅರುಂಧತಿ ರಾಯ್, ಶಶಿ ದೇಶಪಾಂಡೆ ಇನ್ನೂ ಮುಂತಾದವರದ್ಯಾರದು ಮಾತೃಭಾಷೆ ಇಂಗ್ಲೀಷ್ ಆಗಿರಲಿಲ್ಲ. ಅದು ಬೇರೆಯದೇ ಆಗಿತ್ತು. ಆದರೂ ಅವರೆಲ್ಲ ಇಂಗ್ಲೀಷಿನಲ್ಲಿ ಬರೆದು ಯಶಸ್ವಿಯಾದರಲ್ಲವೆ? ಹಾಗಾದಾರೆ ಕನ್ನಡದಲ್ಲಿ ಬರೆಯುವ ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುತ್ತಿಲ್ಲ? ಎನಿಸಿತು. ಇದುವರೆಗೂ ಅವರಲ್ಲಿ ಕೆಲವರು ಇಂಗ್ಲೀಷಿನಲ್ಲಿ ಒಂದಿಷ್ಟು ಅನುವಾದಗಳನ್ನು ಮಾಡಿದ್ದು ಬಿಟ್ಟರೆ, ಅಥವಾ ತಮ್ಮ ಪಿಎಚ್.ಡಿ ಪ್ರಬಂಧವನ್ನು ಇಂಗ್ಲೀಷಿನಲ್ಲಿ ಬರೆದಿದ್ದು ಬಿಟ್ಟರೆ ಅಥವಾ ಯಾವುದಾದರು ಸೆಮೆನಾರಿಗೆ ಇಂಗ್ಲೀಷಿನಲ್ಲಿ ಒಂದಿಷ್ಟು ಪೇಪರ್ ಪ್ರಸೆಂಟ್ ಮಾಡಿದ್ದು ಬಿಟ್ಟರೆ ಯಾರೊಬ್ಬರು ಹೆಚ್ಚಿಗೆ ಏನನ್ನೂ ಬರೆದಂತೆ ಕಾಣುವದಿಲ್ಲ. ಏಕೆ ಬರೆಯಲಿಲ್ಲ? ವನ್ಸ ಅಗೇನ್ ಅದೇ ಮಾತೃಭಾಷೆಯ ಪ್ರಶ್ನೆ ಏಳುತ್ತದೆ.

ನನಗೆ ಮೊದಲಿಗೆ ಅವರ ವಾದದಲ್ಲಿ ತಿರುಳಿದೆ ಎನಿಸಿದರೂ ಯೋಚಿಸುತ್ತಾ ಹೋದಂತೆ ನನ್ನ ಗ್ರಹಿಕೆಗೆ ಸಿಕ್ಕಿದ್ದನ್ನು ನಿಧಾನಕ್ಕೆ ಅವರಿಗೆ ಹೇಳುತ್ತಾ ಹೋದೆ; ಕನ್ನಡದಲ್ಲಿ ಬರೆಯುವ ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷ್ ಬರಹಗಾರರಾರೇ ಆಗಿರಬೇಕೆಂದು ನೀವೇಕೆ ಬಯಸುತ್ತೀರಿ? ಅವರು ಇಂಗ್ಲೀಷಿನಲ್ಲಿಯೇ ಬರೆಯಬೇಕೆಂಬ ಅಲಿಖಿತ ನಿಯಮವೇನಾದರು ಇದೆಯೇನು? ನೀವು ಹೇಳುವದು ಹೇಗಿದೆಯೆಂದರೆ ಎಲ್ಲ ಕಂಪ್ಯೂಟರ್ ಇಂಜಿನೀಯರುಗಳು ಬಿಲ್ ಗೇಟ್ಸೇ ಆಗಬೇಕು, ಎಲ್ಲ ಸಿವಿಲ್ ಇಂಜಿನೀಯರುಗಳು ವಿಶ್ವೇಶರಯ್ಯನೇ ಆಗಬೇಕು, ಎಲ್ಲ ವಿಜ್ಞಾನದ ವಿದ್ಯಾರ್ಥಿಗಳು ವಿಜ್ಞಾನಿಗಳೇ ಆಗಬೇಕು, ಎಲ್ಲ ಉದ್ಯಮಿಗಳು ಅಂಬಾನಿ ತರಾನೆ ಆಗಬೇಕು ಎನ್ನುವಂತಿದೆ. ಹಾಗೆ ಎಲ್ಲರೂ ಆಗಲು ಸಾಧ್ಯವೆ? ಒಂದು ವೇಳೆ ಪ್ರಯತ್ನಿಸಿದರೂ ಅವರಂತೆ ಎಲ್ಲರೂ ಆಗಬಲ್ಲರೆ? ಸಾಧ್ಯವಿಲ್ಲ. ಏಕೆಂದರೆ ಈ ಜಗತ್ತಿನಲ್ಲಿ ಒಬ್ಬರೋ ಇಬ್ಬರೋ ಮಾತ್ರ ಉದಾಹರಣೆಯಾಗಬಲ್ಲರು. ಎಲ್ಲರೂ ಅಲ್ಲ. ಒಬ್ಬ ವ್ಯಕ್ತಿಯ ಯಶಸ್ಸು ಅವನ ಪರಿಶ್ರಮದ ಮೇಲೆ ನಿರ್ಧಾರವಾಗುತ್ತಾದರೂ ಪರಿಶ್ರಮಪಟ್ಟವರೆಲ್ಲ ಯಶಸ್ವಿಯಾಗುತ್ತಾರೆಂದು ಹೇಳಲು ಬರುವದಿಲ್ಲ.

ಇನ್ನು ಇಂಗ್ಲೀಷ್ ಅಧ್ಯಾಪಕರಾಗಿರುವ ಕನ್ನಡದ ಲೇಖಕರು ಕನ್ನಡವನ್ನೇ ತಮ್ಮ ಅಭಿವ್ಯಕ್ತಿಗೆ ಏಕೆ ಆಯ್ಕೆಮಾಡಿಕೊಂಡರೆಂದು ಕೇಳಿದರೆ ಇಂಗ್ಲೀಷಿಗಿಂತ ಅದರಲ್ಲಿ ಬರೆಯುವದು ಅವರಿಗೆ ಹೆಚ್ಚು ನಿರಾಳವೆನಿಸಬಹುದು. ಅಥವಾ ನೀವು ಹೇಳುವಂತೆ ನೇರವಾಗಿ ಇಂಗ್ಲೀಷಿನಲ್ಲಿ ಬರೆಯಲು ಅವರ ಹ್ಯಾಡಿಕ್ಯಾಪ್ಟ್ ಆಟಿಟ್ಯುಡ್ ಕಾರಣವಾಗಿರಬಹುದು. ಅಂದರೆ ಇಂಗ್ಲೀಷಿನಲ್ಲಿ ತಿಣುಕಾಡಿ ಬರೆಯುವದಕ್ಕಿಂತ ಕನ್ನಡದಲ್ಲೇ ಸಲೀಸಾಗಿ ಬರೆಯಬಹುದಲ್ಲ ಎಂಬ ಧೋರಣೆಯಿರಬಹುದು. ಹಾಗಂತ ಅವರೆಲ್ಲ ಇಂಗ್ಲೀಷಿನಲ್ಲಿ ಅಸಮರ್ಥರಾಗಿದ್ದಾರೆ ಎಂದರ್ಥವಲ್ಲ. ಒಂದು ಭಾಷೆಯನ್ನು ಕಲಿಸುವದಕ್ಕೂ ಹಾಗೂ ಬರಹದ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಳ್ಳುವದಕ್ಕೂ ತುಂಬಾ ವ್ಯತ್ಯಾಸವಿದೆ.

ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ. ಇಂಗ್ಲೀಷ ಅಧ್ಯಾಪಕನಾಗಿದ್ದುಕೊಂಡು ಕನ್ನಡದಲ್ಲಿ ಬರೆಯುವವನು ನಾನೂ ಒಬ್ಬ. ನಾನು ಕನ್ನಡದಲ್ಲಿ ಏಕೆ ಬರೆಯುತ್ತೇನೆಂದರೆ ಅದನ್ನು ನನ್ನ ಮನೆಯ ಭಾಷೆಯಾಗಿ ಬಾಲ್ಯದಿಂದಲೇ ಕಲಿತುಕೊಂಡು ಬಂದಿದ್ದೇನೆ. ಅದು ನನ್ನ ಮೈ ಮನಗಳಲ್ಲಿ ಹಾಸುಹೊಕ್ಕಾಗಿದೆ. ಕನ್ನಡದಲ್ಲಿ ಬರೆದಾಗ ಮಾತ್ರ ನಾನು ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದೇನೆ ಎಂದನಿಸುತ್ತದೆ. ನನ್ನ ಬೇರುಗಳು ಕನ್ನಡದಲ್ಲಿರುವದರಿಂದ ನಾನು ಅದರಲ್ಲಿ ಬರೆಯುವಾಗ ನನ್ನೆಲ್ಲ ಭಾವನೆಗಳನ್ನು ಸಂಪೂರ್ಣವಾಗಿ ಹೊರಹಾಕಬಲ್ಲೆ. ನನ್ನ ಸಂವೇದನೆಗಳೆಲ್ಲ ಅದರಲ್ಲಿಯೇ ಮುಳುಗಿ ತೇಲಾಡಿದ್ದರಿಂದ ನನ್ನ ಬರಹಗಳೆಲ್ಲ ನನ್ನ ಅಂತರಂಗವನ್ನು ಮೀಟಿಕೊಂಡು ಬರಬಲ್ಲವು.

ಬಾಲ್ಯದಲ್ಲಿ ಯಾವ ಭಾಷೆ ನಮ್ಮ ಸಂವೇದನೆಯಲ್ಲಿ ಬೆರೆತಿರುತ್ತದೋ ಅದೇ ಭಾಷೆ ಕೊನೆ ತನಕ ಬರುತ್ತದೆ ಮತ್ತು ಅದೊಂದೇ ಭಾಷೆ ನಮ್ಮ ಸಂವೇದನೆಯ, ಅಭಿವ್ಯಕ್ತಿಯ, ಸೃಜನಶೀಲತೆಯ ತಾಯಿ ಬೇರಾಗಿರುತ್ತದೆ. ಈ ಹಿಂದೆ ನನ್ನ ಬ್ಲಾಗ್ ಮಿತ್ರರೊಬ್ಬರು “ಕರ್ನಾಟಕದಲ್ಲಿ ಇಂಗ್ಲೀಷಿನಲ್ಲಿ ಬರೆಯುವವರು ತುಂಬಾ ಕಮ್ಮಿ. ನೀವೇಕೆ ಕನ್ನಡದಲ್ಲಿ ಬರೆಯುವ ಬದಲು ಇಂಗ್ಲೀಷಿನಲ್ಲಿ ಬರೆದು ಆ ಕೊರತೆಯನ್ನು ನೀಗಿಸಬಾರದು?” ಎಂದು ಸಲಹೆಕೊಟ್ಟಿದ್ದರು. ಸರಿ, ಒಮ್ಮೆ ನೋಡಿಯೇಬಿಡೋಣವೆಂದು ನೇರವಾಗಿ ಇಂಗ್ಲೀಷನಲ್ಲಿ ಬರೆಯತೊಡಗಿದರೆ ಅದರಲ್ಲಿ ಜೀವ ಮಾತ್ರವಿದ್ದು ಭಾವದ ಕೊರತೆ ಎದ್ದು ಕಾಣುತ್ತಿತ್ತು. ಹಾಗೂ ಅದರಲ್ಲಿ ಬರೀ ನನ್ನ ಅಕ್ಷರಗಳಿದ್ದವೇ ವಿನಃ ನಾನಿರಲಿಲ್ಲ. ಹೀಗಾಗಿ ಕನ್ನಡದಲ್ಲಿ ಬರೆಯಲು ಗಟ್ಟಿಯಾದ ನಿರ್ಧಾರ ಮಾಡಿದೆ. ಇನ್ನು ಭಾರತೀಯ ಇಂಗ್ಲೀಷ್ ಲೇಖಕರ ಬಗ್ಗೆ ಹೇಳುವದಾದರೆ ಬಹುಶಃ ಇಂಗ್ಲೀಷ ವಾತಾವರಣ ಅಥವಾ ಇಂಗ್ಲೀಷಿನಲ್ಲಿ ಬರೆಯಲು ಪೂರಕವಾಗುವ ಅಂಶಗಳು ಅವರಿಗೆ ಬಾಲ್ಯದಿಂದಲೇ ಸಿಕ್ಕಿರಬಹುದು. ಅಥವಾ ಇಂಗ್ಲೀಷಿನಲ್ಲಿ ಬರೆದರೆ ಮಾತ್ರ ಅದನ್ನು ಎಲ್ಲರಿಗೂ ಮುಟ್ಟಿಸಿ ಖ್ಯಾತಿಯನ್ನು ಪಡೆಯಬಹುದೆಂಬ ಒಳ ಆಸೆಯಿಂದ ಅವರು ಅನಿವಾರ್ಯವಾಗಿ ಇಂಗ್ಲೀಷಿನಲ್ಲಿ ಬರೆದಿರಬಹುದು.

ಸಾಮಾನ್ಯವಾಗಿ ನಾವೆಲ್ಲರೂ ಇಂಗ್ಲೀಷ್ ಭಾಷೆಯನ್ನು ಬರೆಯುವಾಗ/ಮಾತನಾಡುವಾಗ ಮೊದಲು ನಾವು ನಮ್ಮ ಮಾತೃಭಾಷೆಯಲ್ಲಿ ಯೋಚಿಸಿ ಆನಂತರ ಅದನ್ನು ಇಂಗ್ಲೀಷಿಗೆ ಭಾಷಾಂತರಗೊಳಿಸುತ್ತೇವೆ. ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಒಮ್ಮೆ “ನಾನು ಏನಾದರೂ ಬರೆಯುವದಿದ್ದರೆ ಮೊದಲು ಕನ್ನಡದಲ್ಲಿ ಬರೆಯುತ್ತೇನೆ. ಆನಂತರ ಅದನ್ನು ಇಂಗ್ಲೀಷಿಗೆ ಭಾಷಾಂತರಿಸುತ್ತೇನೆ. ಆಗಲೇ ನನ್ನೆಲ್ಲ ಭಾವನೆಗಳು ಸ್ಪಷ್ಟವಾಗಿ ಮೂಡಲು ಸಾಧ್ಯ.” ಎಂದು ಹೇಳಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಕನ್ನಡದ ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯಲಿಲ್ಲ/ಬರೆಯುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿದೆ.

ನನ್ನ ಉತ್ತರದಿಂದ ಅವರು ಕನ್ವಿನ್ಸ್ ಆದಂತೆ ಕಾಣಲಿಲ್ಲ. ನಾನೂ ಕೂಡ ಅವರನ್ನು ಹೆಚ್ಚು ಬಲವಂತದಿಂದ ಕನ್ವಿನ್ಸ್ ಮಾಡಲು ಹೋಗಲಿಲ್ಲ.

7 ಟಿಪ್ಪಣಿಗಳು (+add yours?)

 1. ಎ ವಿ ಗೋವಿಂದ ರಾವ್
  ಜನ 02, 2011 @ 08:02:08

  ಚಿಂತನೆಗೆ ಗ್ರಾಸ ಒದಗಿಸುವ ಲೇಖನ. ಜೀವನೋಪಾಯಕ್ಕಾಗಿ ಇಂಗ್ಲಿಷ್ ಕಲಿತ ಮಾತ್ರಕ್ಕೆ ಅದರಲ್ಲಿ ಕೃತಿ ರಚಿಸುವಷ್ಟು ಪ್ರಭುತ್ವ ಇರಬೇಕೇಕೆಂದು ನಿರೀಕ್ಷಿಸುವುದು ಸಾಧುವೇ? ಹಾಗೆ ನೋಡಿದರೆ ಬಹುಮಂದಿ ಕನ್ನಡ ಪ್ರಾಧ್ಯಪಕರೂ ಲೇಖಕರಾಗಿಲ್ಲ. ಯಾವ ಭಾಷೆಯಲ್ಲಿ ನಾವು ಆಲೋಚಿಸುತ್ತೇವೆಯೋ ಆ ಭಾಷೆಯಲ್ಲಿ ವ್ಯವಹರಿಸುವುದು ಸುಲಭ. ಇತ್ತೀಚೆಗೆ, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಸ್ವಲ್ಪಮಟ್ಟಿಗೆ ಇಂಗ್ಲಿಷ್ ನಲ್ಲಿ ಆಲೋಚಿಸುವುದನ್ನು ರೂಢಿಸಿಕೊಂಡಿದ್ದಾರೆ. ಇಂಥವರು ಮಾತನಾಡುವ, ಬರೆಯುವ ಕನ್ನಡದಲ್ಲಿ ಅದರ ಜಾಯಮಾನಕ್ಕೆ ಒಗ್ಗದ ಇಂಗ್ಲಿಷ್ ಸಂರಚನೆಗಳನ್ನು ಹೇರಳವಾಗಿ ಕಾಣಬಹುದು.

  ಉತ್ತರ

 2. vasanth
  ಡಿಸೆ 31, 2010 @ 22:32:45

  Lot of literary criticism in Kannada was also came from those who teach English. There are not many from Kannada literary world who have been taken Kannada criticism except few like Rahamat Sir.

  ಉತ್ತರ

 3. kanam
  ಡಿಸೆ 30, 2010 @ 16:49:46

  idu kevala bhaasheya aykeya prashne maatravalla. ondu bhaasheyannu kaliyuvudu bere, ondu samskrutiyannu maigoodisikolluvudu bere. ondu bhaasheya parisaradalli beleda vyaktige aa parisarada satva vyaktigatavaaguttade. adarindaagi abhivyakti sahajavu saakaaravu aagiruttade. ene aadaru idondu svarasyakaravaada charcheyaagide.
  kanam

  ಉತ್ತರ

 4. Shai;aja S Bhat
  ಡಿಸೆ 30, 2010 @ 15:04:04

  I have something else to tell you. Many of the present day and Olden day English writers had their Education in English from their childhood, they learnt English as their first language and read English books in their childhood .They were brought up in metropolitan cities. Exposure to the language from the childhood makes a vast difference. I write in both English and Kannada, but my writing in Kannada gives me satisfaction !( I am not a great writer in both the languages)
  Shailaja

  ಉತ್ತರ

 5. Arun
  ಡಿಸೆ 30, 2010 @ 10:59:47

  neevu hesarisida ellarigoo english hottepaadina bhashe, Kannada abhivyakthiya bhashe. mattu illi gamanisabekada innondu vishaya namma ella prasiddha lekhakaroo english meshtrugalagiruvudarindale english saahityada prabhavadindaagi kannada sahityakke hosa hosa ayamagalanna taralu sadhyavayithu, hosa saadhythegala bagge prayoga nadesalu saadhyvayitu.

  ಉತ್ತರ

 6. ವಸುಧೇಂದ್ರ
  ಡಿಸೆ 30, 2010 @ 10:26:33

  ಪ್ರಿಯ ಉದಯ್,

  ನೀವು ಹೆಸರಿಸಿದ ಎಲ್ಲಾ ಇಂಗ್ಲೀಷ್ ಪ್ರಾಧ್ಯಾಪಕರು ಕನ್ನಡದಲ್ಲಿ ಬರೆದಿರುವುದಕ್ಕೆ ಕಾರಣ ಕೇವಲ ಅವರ ಮಾತೃಭಾಷೆ ಕನ್ನಡವೆಂಬುದಲ್ಲ. ಬಹುತೇಕ ಅವರೆಲ್ಲರ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಆಗಿದೆ. ಯಾರೂ ಕಾನ್ವೆಂಟ್ ಶಾಲೆಗೆ ಹೋಗಿ ಕಲಿತವರಲ್ಲ. ಆದ್ದರಿಂದ ಕನ್ನಡ ಅವರಿಗೆ ಒಲಿದಿದೆ. ಮುಂದೆ ಇಂಗ್ಲೀಷನ್ನು ಮತ್ತೊಂದು ಭಾಷೆಯಾಗಿ ಕಲಿತರೂ ಆ ವೇಳೆಗಾಗಲೇ ಅವರ ಭಾವಾಭಿವ್ಯಕ್ತಿಗೆ ಕನ್ನಡದ ಆಯ್ಕೆಯಾಗಿರುತ್ತದೆ. ಅದೇ ರೀತಿ ನೀವು ತಿಳಿಸಿದ ಭಾರತೀಯ ಇಂಗ್ಲೀಷ್ ಲೇಖಕರೆಲ್ಲಾ ಅಪ್ಪಟ ಕಾನ್ವೆಂಟಿನಲ್ಲಿ ಓದಿದವರು. ಬಾಲ್ಯದಲ್ಲಿಯೇ ಒಳ್ಳೆಯ ಇಂಗ್ಲೀಷನ್ನು ಕಲಿತಿರುತ್ತಾರೆ. ಅವರಿಗೆ ತಮ್ಮ ಮಾತೃಭಾಷೆಯಲ್ಲಿ ಬರೆಯಲು ಬರುತ್ತದೆಯೇ ಎಂಬುದು ನನ್ನ ಅನುಮಾನ. ಕನ್ನಡ ಮಾಧ್ಯಮದಲ್ಲಿ ಓದದೇ ಕೇವಲ ಕನ್ನಡ ಮಾತೃಭಾಷೆಯೆಂಬ ಕಾರಣಕ್ಕೆ ಯಾರಾದರೂ ಕನ್ನಡದಲ್ಲಿ ಸಾಹಿತ್ಯ ಬರೆಯಬಹುದೆಂದು ನನಗನ್ನಿಸುವದಿಲ್ಲ (ಅಪವಾದಗಳಿದ್ದೇ ಇರುತ್ತವೆ). ಇಂದು ಕನ್ನಡ ಮಾಧ್ಯಮದ ಶಾಲೆಗಳು ಕಣ್ಮರೆಯಾಗುತ್ತಿರುವ ವೇಗವನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಕನ್ನಡ ಸಾಹಿತಿಗಳ ಸಂಖ್ಯೆ ಕಡಿಮೆಯಾಗಬಹುದೆಂಬ ಆತಂಕವಾಗುತ್ತದೆ. ಆದರೆ ನಮ್ಮ ಮುಂದಿನ ಜನಾಂಗ ಕನ್ನಡದ ಕಥೆಯನ್ನು ಇಂಗ್ಲೀಷಿನಲ್ಲಿ ಹೇಳಲು ಶುರು ಮಾಡುತ್ತಾರೆ, ಆರ್.ಕೆ. ನಾರಾಯಣ್ ಕಥೆ ಹೇಳಿದಂತೆ.

  ವಸುಧೇಂದ್ರ

  ಉತ್ತರ

 7. Laxminarayana V.N
  ಡಿಸೆ 30, 2010 @ 09:09:49

  ಇಟಗಿಯವರೆ, ನಿಮ್ಮ ಆಂಧ್ರಮೂಲದ ಕನ್ನಡಬಲ್ಲ ಲಿಬಿಯಾದಲ್ಲಿ ಇಂಗ್ಲಿಷ್ ಕಲಿಸುತ್ತಿರುವ ಸ್ನೇಹಿತರು ಕೇಳಿದ ಪ್ರಶ್ನೆ ಸಮಂಜಸವಾಗಿದೆ. ಬಹುಶಃ ಅವರು ಹೇಳುವ ಅಸಮರ್ಥತೆ ಇಂಗ್ಲಿಷ್ ಜ್ಞಾನ/ಪರಿಣತಿ ಕುರಿತಾದ ತೊಂದರೆ ಅಲ್ಲದಿರಬಹುದು. ಆರ್.ಕೆ.ನಾರಾಯಣ್ ರ ಪ್ರಾರಂಭದ ದಿನಗಳ ಇಂಗ್ಲಿಷ್ ತೀರಾ ಎಲಿಮೆಂಟರಿಯಾಗಿದೆ. ಅದು ಮೂಲತಃ ಅವರ ಸಾಹಿತ್ಯಕ ಕಳೆಪೆತನದಿಂದ ಬಂದ ಕೊರತೆಯೂ ಹೌದು. ಪ್ರತಿಭೆಗೆ ಲಗತ್ತಾದ ಭಾಷೆ ಇಲ್ಲದಿದ್ದಾಗಲೂ ಸಾಹಿತ್ಯ ಕಳಪೆಯಾಗುತ್ತದೆ. ಮಾತೃಭಾಷೆಯಲ್ಲದ ಭಾಷೆಯನ್ನು ಸೃಜನಶೀಲರು ಸೃಜನಾತ್ಮಕ/ಅಭಿವ್ಯಕ್ತಿ ಮಾಧ್ಯಮವನ್ನಾಗಿ ಬಳಸಲು/ಯೋಚಿಸಲು
  /ಸೃಜಿಸಲು ಆ ಭಾಷೆಯ ಪರಿಸರದಲ್ಲಿ ಬದುಕಬೇಕಾಗುತ್ತದೆ. ಅದರ ಈಡಿಯಮ್ ಅನ್ನು ಮೈಗೂಡಿಸಿ
  ಕೊಳ್ಳಬೇಕಾಗುತ್ತದೆ. ನಮ್ಮ ಬಹುತೇಕ ಇಂಗ್ಲಿಷ್ ಅಧ್ಯಾಪನದ-ಕನ್ನಡ ಸೃಜನಶೀಲರ ಇಂಗ್ಲಿಷ್ ಭಾಷೆ ಸೃಜನಾತ್ಮಕವಾಗಬೇಕಾದಾಗ ಈ ಕಾರಣಕ್ಕಾಗಿ ಸೋಲುತ್ತದೆ. ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಗೊಂಡ ಕೃತಿಗಳ ಈಡಿಯಮ್ ಸಹ ಇಂಗ್ಲಿಷ್ ಆಗದಿರುವುದರಿಂದಲೇ ವಾಕ್ಯರಚನೆಗಳು ಬಹಳಸಲ ತಮಾಷೆಯಾಗಿ ಕಾಣುತ್ತವೆ. ಆದ್ದರಿಂದ ಅವರು ಅಸಮರ್ಥರೆ.ಪ್ರಸಿದ್ಧಿಗಾಗಿ ಇಂಗ್ಲಿಷ್ ಆರಿಸಿಕೊಳ್ಳುವ ಸಲಹೆ ಸೃಜನಾತ್ಮಕತೆಯ ಆಚೆಗೆ ಸಂಬಂಧಿಸಿದ ಟಿಪ್. ಆಯ್ಕೆಯ ಪ್ರಶ್ನೆ ಅವರವರದ್ದೆ. ಹೊರಗಿನಿಂದ ಕೇಳುವ ಸಮಂಜಸ ಪ್ರಶ್ನೆಗೆ ಸಮಂಜಸ ಉತ್ತರ ದೊರೆಯಲಾರದು.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: