ಇಂದು ಆ ಮಹಾನ್ ಸಾಹಿತಿ ಕುವೆಂಪು ಜನ್ಮ ದಿನ. ಆ ಸಂದರ್ಭಕ್ಕಾಗಿ ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಲ್ಲಿ ಬಸವಲಿಂಗಯ್ಯ ನಿರ್ದೇಶಿಸಿದ ಇಡೀ ರಾತ್ರಿ ನಾಟಕ ಮಲೆಗಳಲ್ಲಿ ಮದುಮಗಳು ನಾಟಕದ ಬಗೆಗಿನ ಪುಸ್ತಕವೂ ಬಿಡುಗಡೆಯಾಗುತ್ತಿದೆ. ‘ಯಾರೂ ಮುಖ್ಯರಲ್ಲ..’ ಎನ್ನುವ ಅರ್ಥಪೂರ್ಣ ಹೆಸರಿನ ಈ ಪುಸ್ತಕದಲ್ಲಿ ನಾನು ಬರೆದಿರುವ ಸಾಲುಗಳು ಇಲ್ಲಿವೆ
-ಜಿ ಎನ್ ಮೋಹನ್

‘ಮಲೆಗಳಲ್ಲಿ ಮದುಮಗಳು’ ಒಂದು ಕಾದಂಬರಿ. ಕನ್ನಡದ ಮನಸ್ಸನ್ನು ದಶಕಗಳಿಂದ ಆಳಿರುವ, ಆಳುತ್ತಿರುವ ಕಾದಂಬರಿ. ಕಿನ್ನರಿ ಜೋಗಿಗಳ ಬಗಲ ಜೋಳಿಗೆಯಿಂದ ಹಿಡಿದು ಮನೆ ಮನೆಯ ಕಪಾಟಿನಲ್ಲೂ, ಹಲವು ಕೈಗಳಲ್ಲೂ ಕಾಣಿಸಿಕೊಳ್ಳುವ ಕಾದಂಬರಿ. ಈ ಕಾದಂಬರಿ ಈಗ ಪ್ರಶ್ನೆ ಎತ್ತುತ್ತಿರುವುದು ಕಾದಂಬರಿ ಲೋಕದ ಬಗ್ಗೆ ಅಲ್ಲ, ರಂಗಭೂಮಿಯ ಬಗ್ಗೆ. ಸಿ ಬಸವಲಿಂಗಯ್ಯ ರಂಗಾಯಣಕ್ಕಾಗಿ ಒಂದು ದೊಡ್ಡ ಸವಾಲು ಮುಂದಿಟ್ಟುಕೊಂಡಿದ್ದೇ ತಡ ಈ ಸವಾಲು ಹಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿದೆ. ಇದರಲ್ಲಿ ರಂಗಭೂಮಿಯನ್ನು ನೋಡುವ ಬಗೆ ಹೇಗೆ ಎಂಬ ಪ್ರಶ್ನೆಯೂ ಒಂದು.
ಭೈರೇಗೌಡರ ಕಾರಣದಿಂದಾಗಿ ‘ಮಲೆಗಳಲ್ಲಿ ಮದುಮಗಳು’ ಕುರಿತ ಹತ್ತು ಹಲವು ವಿಮರ್ಶೆಯನ್ನು ಓದಬೇಕಾದ ಪ್ರಸಂಗ ಎದುರಾಯಿತು. ರಂಗಭೂಮಿಯ ಬಗ್ಗೆ ಏನನ್ನು ಓದುವುದೂ ಖುಷಿಯ ವಿಚಾರವಾದ ನನಗೆ ಇದು ಅಂತಹ ಮತ್ತೊಂದು ಸಂತಸದ ಕೆಲಸವಾಗಿತ್ತು. ನಾನು ರಂಗಭೂಮಿಯನ್ನು ಒಂದು ಕುತೂಹಲದ ಕಣ್ಣಿನಿಂದ ನೋಡುತ್ತಲೇ ಬಂದಿದ್ದೇನೆ. ಜೊತೆಗೆ ಮಾಧ್ಯಮದ ವಿದ್ಯಾರ್ಥಿಯಾಗಿ ನನಗೆ ರಂಗಭೂಮಿ ಮತ್ತು ಮಾಧ್ಯಮದ ಸಂಬಂಧ ಸಹಾ ಕಾಡುವ ವಸ್ತು.
ಭೈರೇಗೌಡರು ಕೈಗಿತ್ತ ಮದುಮಗಳು ವಿಮರ್ಶೆಯ ಕಟ್ಟನ್ನು (..ಅಥವಾ ಕೆ ವಿ ನಾರಾಯಣ್ ಪರಿಭಾಷೆಯಲ್ಲಿ ಹೇಳುವುದಾದರೆ ‘ಕಂತೆ’ಯನ್ನು) ಓದಿದಾಗ ನನಗೆ ಮೊದಲು ಎದ್ದು ಕಂಡಿದ್ದು ಸಾಹಿತ್ಯ ವಿಮರ್ಶೆ ಎನ್ನುವುದು ಇನ್ನೂ ಜೀವಂತವಿದೆ ಎನ್ನುವುದು. ಈ ಸಂತೋಷದ ಬೆನ್ನಲ್ಲೇ ಅರಿವಾದದ್ದು ರಂಗ ವಿಮರ್ಶೆ ಎನ್ನುವುದು ನಾಪತ್ತೆಯಾಗಿದೆ ಎನ್ನುವುದು. ಅಸಲಿಗೆ ರಂಗ ವಿಮರ್ಶೆ ಎನ್ನುವುದು ಎಂದಾದರೂ ಇತ್ತೇ? ಎನ್ನುವ ಪ್ರಶ್ನೆಯೂ ನನ್ನ ಮುಂದಿದೆ. ನಾನು ಹಲವು ವರ್ಷಗಳ ಕಾಲ ರಂಗ ವಿಮರ್ಶೆಯೆಂಬ ಖುಷಿಯಲ್ಲಿ ಮಿಂದವನು. ನನಗೆ ರಂಗಭೂಮಿಯ ಮೂರು ವರ್ಷದ ಪದವಿ ತೆಕ್ಕೆಯಲ್ಲಿತ್ತು. ವರ್ಷಾನುಗಟ್ಟಲೆ ರಂಗ ವಿಮರ್ಶೆ ಬರೆದರೂ ನನಗೆ ಈ ಅತೃಪ್ತಿ ಒಡಲ ಹಸಿವಿನಂತೆ ಉಳಿದೆ ಬಿಟ್ಟಿದೆ.
ವಿಮರ್ಶೆ ಎನ್ನುವುದು ಏನು? ಅದರ ತಯಾರಿ ಹೇಗೆ?
ಅಥವಾ ಶಾಸ್ತ್ರೋಕ್ತ ತಯಾರಿ ಎನ್ನುವುದು ಬೇಕೇ?
ಎನ್ನುವ ಪ್ರಶ್ನೆಯನ್ನೂ ನಾನು ಮೇಲಿಂದ ಮೇಲೆ ಕೇಳಿಕೊಂಡಿದ್ದೇನೆ. ನನಗೆ ರಂಗ ವಿಮರ್ಶೆ ಮಾಡುವಾಗ ಇದ್ದ ದೊಡ್ಡ ವಿಶ್ವಾಸವೆಂದರೆ ಹವ್ಯಾಸಿ ರಂಗಭೂಮಿಯ ಬೆಳವಣಿಗೆಯ ಎಲ್ಲಾ ಹಂತಗಳಿಗೂ ನಾನು ನೋಡುಗನಾಗಿ ಸಾಕ್ಷಿಯಾಗಿದ್ದೆ ಎಂಬುದು. ಬಾಲಭವನದಲ್ಲಿ ಭಿನ್ನ ರಂಗಭೂಮಿಗೆ ಬೀಜ ಇತ್ತ ಪ್ರಸನ್ನರ ‘ಗರೀಬಿ ಹಠಾವೋ’ ಅಥವಾ ಎನ್ ಎಸ್ ವೆಂಕಟರಾಮ್ ಅವರ ‘ಆನೆಮರಿ’ ನಾಟಕಗಳನ್ನು ನಾನು ನೋಡಿಲ್ಲವಾದರೂ ಈಗ ಸಂಸ ಕಲಾಕ್ಷೇತ್ರವಾಗಿ ಎದ್ದು ನಿಂತಿರುವ ಕಲಾಕ್ಷೇತ್ರದ ಹಿಂದಿನ ಬಯಲಿನಲ್ಲಿ ಆಗ ಎದ್ದು ನಿಂತಿದ್ದ ತಾತ್ಕಾಲಿಕ ರಂಗ ಮಂದಿರದಲ್ಲಿ, ಬಿ ವಿ ಕಾರಂತರ ನೇತೃತ್ವದಲ್ಲಿ ರಂಗಭೂಮಿ ಹಿಡಿಸಿಕೊಂಡ ಹುಚ್ಚಿನಿಂದ ಆರಂಭಿಸಿ ಇಲ್ಲಿಯವರೆಗೆ ಬಹುತೇಕ ನಾಟಕಗಳನ್ನು ನೋಡಿದ್ದೇನೆ. ಹಾಗಾಗಿ ಇಷ್ಟಂತೂ ಸತ್ಯ. ಹವ್ಯಾಸಿ ನಾಟಕಗಳ ಪೈಕಿಯೇ ಹೋಲಿಸಿ ನೋಡುವ, ರಂಗದ ಸಾಧ್ಯತೆಗಳನ್ನು ಬೆಳಕಿನಲ್ಲಿಟ್ಟು ನೋಡುವ, ಪ್ರಸಾಧನ, ಬೆಳಕು ಇತ್ಯಾದಿ ರಂಗ ನೇಪಥ್ಯದ ಸಂಗತಿಗಳಲ್ಲಿ ಯಾವುದು ಮುನ್ನೆಲೆಯಲ್ಲಿದೆ ಎಂಬುದನ್ನು ಹತ್ತು ಹಲವು ನಾಟಕಗಳ ಅನುಭವದಲ್ಲಿ ತೂಗಿ ನೋಡುವ ನೋಟವಂತೂ ದಕ್ಕಿದೆ. ಬಹುಷಃ ನಾನು ಮಾತ್ರವಲ್ಲ, ನನ್ನ ಜೊತೆಯೇ ನಾಟಕ ವಿಮರ್ಶೆ ಮಾಡುತ್ತಿದ್ದ ಸಮಕಾಲೀನರ ಅನುಭವವೂ ಇದಕ್ಕಿಂತ ಭಿನ್ನವಾಗಿರುವ ಸಾಧ್ಯತೆಗಳಿಲ್ಲ. ರಂಗ ಚಟುವಟಿಕೆಯಲ್ಲೇ ತೊಡಗಿಸಿಕೊಂಡವರು ವಿಮರ್ಶೆ ಬರೆದಾಗ ನೋಡುವ ಅನುಭವದ ಬದಲಿಗೆ ಒಂದು ಅಕ್ಕಿ ಕಾಳು ತೂಕ ಆಡುವ ಅನುಭವ ಅಲ್ಲಿ ಕಂಡಿದೆ ಎನ್ನುವಷ್ಟು ಮಾತ್ರ ವ್ಯತ್ಯಾಸ ಕಂಡಿದ್ದೇನೆ.
More
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು