ಜೋಗಿ ಬರೆಯುತ್ತಾರೆ: ಪಾಪದ ಹೂವು ಎಂಬ ಪುಣ್ಯಫಲ

-ಜೋಗಿ

ಸಾಹಿತ್ಯ ಮನರಂಜನೆಯ ಹೊಸಿಲನ್ನು ದಾಟಿ ಹೊರಗೆ ಅಡಿಯಿಡುವುದಿಲ್ಲ ಎಂದು ನಮ್ಮನ್ನು ನಂಬಿಸುವಂತೆ ಅನೇಕ ವರ್ಷಗಳ ಕಾಲ ಬರೆದವರು, ಬಹು ಮುಖ್ಯವಾದ ವಿಚಾರವೊಂದನ್ನು ಮರೆತುಬಿಟ್ಟಿದ್ದರು ಎಂದು ನಮಗೆ ಈಗೀಗ ಅನ್ನಿಸತೊಡಗಿದೆ. ಯಾವ ಬರಹಗಾರ ತನ್ನ ಪ್ರಜ್ವಲಿಸುವ ಚಿಂತನೆಯಿಂದ ಕೊಳದ ನೀರನ್ನು ಕದಡುವುದಿಲ್ಲವೋ ಅವನು ಸಮೂಹದಿಂದ ದೂರವೇ ಉಳಿದುಬಿಡುತ್ತಾನೆ. ಹಳಸಿಹೋದ ಅನುಭವ, ಪುನರುಜ್ಜೀವನ, ಉದ್ಧಾರದ ಆಶೆ ಮತ್ತು ಲೌಕಿಕ ಆಶಯಗಳನ್ನು ಒಬ್ಬ ಲೇಖಕನತ್ತ ಅಸಡ್ಡೆ ಬೆಳೆಯುವಂತೆ ಮಾಡುತ್ತವೆ. ಬರಹಗಾರ ವಂದಿಮಾಗಧನಂತೆ, ವರದಿಗಾರನಂತೆ, ಸವಕಲು ಮಾತುಗಳನ್ನು ಜೋಳಿಗೆಯಲ್ಲಿಟ್ಟುಕೊಂಡು ಅದನ್ನೇ ಹಂಚಲು ಹೊರಟಾಗ ಕವಿತೆ ನಿಸ್ಸಹಾಯಕ ಅನ್ನಿಸಿಕೊಳ್ಳುತ್ತದೆ.

ಖಾಸಗಿ ಅನುಭವಗಳು ಮತ್ತು ವ್ಯಕ್ತಿ ಏಕಾಂತದಲ್ಲಿ ಅನುಭವಿಸುವ ತೊಳಲಾಟಗಳು ಸಾಹಿತ್ಯ ಅಲ್ಲ ಎಂಬ ನಂಬಿಕೆ ನಮ್ಮಲ್ಲಿ ಮೊದಲಿನಿಂದಲೂ ಇದೆ. ಹೀಗಾಗಿ ನಮಗೆ ದಟ್ಟವಾಗಿ ಅನ್ನಿಸಿದ್ದನ್ನು ದಾಖಲಿಸಲು ನಾವು ಹಿಂಜರಿಯುತ್ತೇವೆ. ಕವಿಯನ್ನೂ ಅವನ ಅನುಭವವನ್ನೂ ಅವನ ಗ್ರಹಿಕೆಯನ್ನೂ ಮೀರಿದ್ದು ನಿಜವಾದ ಸಾಹಿತ್ಯ. ಹೀಗಾಗಿ ಕವಿಗಿಂತ ದೊಡ್ಡವನು ಮತ್ತೊಬ್ಬನಿದ್ದಾನೆ. ಅವನು ಕವಿ, ಇವನು ಬರೀ ಲಿಪಿಕಾರ. ಅವನು ಬರೆಸಿದುದನ್ನು ಇವನು ಬರೆಯುತ್ತಾನೆ ಅಷ್ಟೇ ಎಂದು ಅನಾದಿಕಾಲದಿಂದ ನಂಬಿಕೊಂಡು ಬಂದವರನ್ನು ನಾವು ಕಾಣಬಹುದು.

ಯುರೋಪಿನಲ್ಲಿ ಅಂಥದ್ದೊಂದು ಭಾವನೆ ಇರಲಿಲ್ಲವೆಂದೇ ಹೇಳಬೇಕು. ಅಲ್ಲಿಯ ಬಹುತೇಕ ಕವಿಗಳು ತಮ್ಮ ಅಂತರಂಗದಲ್ಲಿ ಹೊಳೆದದ್ದನ್ನು ತಮ್ಮ ಬದುಕಿನ ತುರ್ತು ಎಂಬಷ್ಟು ಗಾಢವಾಗಿ ಹೇಳತೊಡಗಿದರು. ಅದು ಕ್ರಮೇಣ ಸಾಮಾಜಿಕ ತುರ್ತೂ ಆಗತೊಡಗಿತು. ಪ್ರಭುತ್ವದ ವಿರುದ್ಧ ಸಿಡಿದೆದ್ದು ನಿಂತವರು ಖಾಸಗಿ ಬದುಕಿನಲ್ಲಿ ಕಷ್ಟನಷ್ಟ ಅನುಭವಿಸಿದರು. ಅನೇಕರು ಬಂಧನಕ್ಕೆ ಒಳಗಾದರು. ಮತ್ತೊಂದಷ್ಟು ಮಂದಿ ದೇಶಾಂತರ ಹೋಗಿ ಅಜ್ಞಾತರಾಗಿ ಬದುಕಬೇಕಾಯಿತು.

ಹೀಗೆ ದೇಶ, ಭಾಷೆ, ಸಂಬಂಧ, ಸ್ನೇಹಗಳನ್ನು ಕಳಕೊಂಡೂ ತೀವ್ರವಾಗಿ ಬರೆದ ಹಲವಾರು ಲೇಖಕರು ನಮಗೆ ಬೇರೆ ಬೇರೆ ಭಾಷೆಗಳಲ್ಲಿ ಎದುರಾಗುತ್ತಾರೆ. ನಮ್ಮಲ್ಲಿ ಲೇಖಕರನ್ನು ಕಾಡಿದ್ದು ಕಡುಬಡತನ ಮಾತ್ರ. ಸಾಮಾಜಿಕವಾಗಿ ಹೇಳಿಕೊಳ್ಳಬಹುದಾದ, ರೊಮ್ಯಾಂಟಿಕ್ ಅನ್ನಿಸುವಂಥ ದೇಶಭಕ್ತಿ, ಪ್ರಗತಿಶೀಲತೆಯ ಕುರಿತು ನಮ್ಮವರು ಬರೆದರು. ತಮ್ಮ ಆತ್ಮವನ್ನೂ ಅದಕ್ಕೆ ಹತ್ತಿದ ಗೆದ್ದಲನ್ನೂ ಆತ್ಮದ ಹುಡುಕಾಟವನ್ನೂ ಮುಟ್ಟುವುದಕ್ಕೆ ಭಾರತೀಯ ಲೇಖಕರು ಹಿಂಜರಿದರು.

ಅಂಥ ಹಿಂಜರಿಕೆ ತೋರದಿದ್ದವನು ಯೇಟ್ಸ್. ಅವನ ಕೊನೆಕೊನೆಯ ಕವನಗಳು ಅವನ ಹುಚ್ಚಿನಲ್ಲಿ ಹುಟ್ಟಿದಂತೆ ಕಂಡವು. ವ್ಯಾನ್‌ಗೋ ತನ್ನ ಪೇಟಿಂಗಿನಲ್ಲಿ ತನ್ನ ಏಕಾಂತದಲ್ಲಿ ಮಾತ್ರ ತೋರಬಹುದಾದ ಚೇಷ್ಟೆಗಳನ್ನು ಹಿಡಿದಿಟ್ಟಂತೆ ಅನೇಕ ಲೇಖಕರು ಅತಿರೇಕದ ಅಂಚಿನ ತನಕ ಹೋಗಿ ತಮ್ಮ ಅಭಿವ್ಯಕ್ತಿ ಮಾರ್ಗವನ್ನು ಕಂಡುಕೊಂಡರು. ಕೆಲವೊಮ್ಮೆ ಅದು ಸತ್ಯವನ್ನು ಹೇಳುವ ಉಪಾಯವಾಗಿದ್ದರೆ, ಮತ್ತೆ ಕೆಲವೊಮ್ಮೆ ಸತ್ಯವನ್ನು ಮುಚ್ಚಿಡುವ ಮಾರ್ಗವೂ ಆಗಿತ್ತು.

ತಾನು ಹೇಳಹೊರಟದ್ದನ್ನು ತನ್ನ ಮೂಲಕವೇ ಪ್ರಕಟಪಡಿಸುವ ನರ್ತಕಿಯ ಹಾಗೆ, ಲೇಖಕ ಕೂಡ ತನ್ನನ್ನೇ ಗುರಿಯಾಗಿಸಿಕೊಂಡು ಅಸೀಮನಾಗಲು ಹವಣಿಸುತ್ತಾನೆ. ಆ ಪ್ರಯತ್ನದಲ್ಲಿ ಕೆಲವರು ತಮ್ಮನ್ನು ಮುಚ್ಚಿಕೊಳ್ಳುತ್ತಾರೆ. ಕೆಲವರು ತಮ್ಮನ್ನು ಇಡಿಯಾಗಿ ತೋರಿಸಿಕೊಳ್ಳುತ್ತಾರೆ. ಕಾಮ, ಕ್ರೋಧ, ಲೋಭ ಮತ್ತು ಮೋಹ ಇವೆಲ್ಲವೂ ಅತಿಯಾದಾಗ ಅತಿಯಾಗಿ ಬಿಂಬಿತವಾದಾಗ ಹುಟ್ಟುವ ಸಾಹಿತ್ಯ ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಲಂಕೇಶರ ಆತ್ಮರತಿ ಕೂಡ ಅಂಥ ಒಂದು ಉಪಾಯವೂ ಮಾರ್ಗವೂ ಆಗಿತ್ತು ಎನ್ನುವುದು ನನ್ನ ಈಗಿನ ಗ್ರಹಿಕೆ.

ಲಂಕೇಶರು ಅನುವಾದಿಸುವ ಬೋದಿಲೇರ್‌ನ ಪಾಪದ ಹೂವುಗಳು’ ನಮ್ಮನ್ನು ಕಂಗೆಡಿಸಬಲ್ಲ, ಕದಲಿಸಬಲ್ಲ ಒಂದು ಕೃತಿ. ಅದರ ಮುನ್ನುಡಿಯಲ್ಲಿ ಕನ್ನಡಕ್ಕೆ ಬೋದಿಲೇರ್ ಯಾಕೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವ ಲಂಕೇಶ್, ಅದಕ್ಕೆ ಉತ್ತರಿಸುತ್ತಾ ಹೇಳುತ್ತಾರೆ:

ಜಡಗೊಂಡ ಓದುಗರನ್ನು ತನ್ನ ಅನುಭವದಿಂದ ಬೆಚ್ಚಿ ಬೀಳಿಸದೇ ಇರುವ ಲೇಖಕ ಎಂಥದನ್ನೂ ಮಾಡಲಾರ ಎಂಬುದು ಬೋದಿಲೇರ್ ನಂಬಿಕೆ. ಕೊನೆಯ ಪಕ್ಷ ಬೋದಿಲೇರನ ನರಕದಿಂದಾದರೂ ನಮ್ಮ ವಾಚಕರು ಎಚ್ಚರಗೊಳ್ಳಲಿ ಎಂಬುದು ನನ್ನ ಆಶೆ.’

ಅಂಥ ಆಶೆ ಈಡೇರುವುದು ಯಾವಾಗ? ನಿಜಕ್ಕೂ ಓದುಗರು ಅಂಥದ್ದನ್ನು ಬಯಸುತ್ತಿರುತ್ತಾರಾ? ಕವಿಯಿಂದ ಅಂತ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಸರಿಯಾ? ಈ ಪ್ರಶ್ನೆಗೂ ಲಂಕೇಶರ ಉತ್ತರವಿದೆ:

ಒಂದು ಅನುಭವದ ಅಪಾಯ ಮತ್ತು ದುರಂತವನ್ನು ಎದುರಿಸಿ ಕಾವ್ಯಕ್ಕೆ ಕತ್ತುಕೊಟ್ಟವರು ನಮ್ಮಲ್ಲಿ ಕಡಿಮೆ. ಸಾಮಾನ್ಯನೊಬ್ಬ ಮೂರು ನಿಮಿಷದಲ್ಲಿ ಅನುಭವಿಸಿದ್ದನ್ನು ಒಂದೇ ನಿಮಿಷದಲ್ಲಿ ಬದುಕಲು ಯತ್ನಿಸಿದ ಬೋದಿಲೇರ್ ಮಹಾ ಪಾಪಿ ಮತ್ತು ಸನ್ಯಾಸಿ. ಕೇವಲ ಮೂವತ್ತು ವರುಷಕ್ಕೆ ಮುದುಕನಾಗಿ ಕಾಣುತ್ತಿದ್ದ ಈತ.’

ನಮ್ಮಲ್ಲಿ ಅದೊಂದು ಅಭ್ಯಾಸ. ಜೀವನವನ್ನು ತುಂಬ ವಿರಕ್ತಿಯಿಂದ ಕಾಣುವವನೂ ಸನ್ಯಾಸಿ. ಅತಿಯಾಗಿ ಪ್ರೀತಿಸುವವನೂ ಸನ್ಯಾಸಿ. ಅತಿಯಾಗಿ ಪ್ರೀತಿಸುವವನು ತನ್ನ ವ್ಯಾಮೋಹದಿಂದಲೇ ಧ್ಯಾನಸ್ಥನಾದರೆ, ವಿರಕ್ತಿ ತನ್ನ ನಿರ್ಮೋಹದಿಂದಲೇ ಎಲ್ಲಾ ಸುಖಗಳನ್ನೂ ಅನುಭವಿಸುತ್ತಾನೆ. ಅನುರಾಗಿಯ ಅಕ್ಕರೆ ಮತ್ತು ವಿರಾಗಿಯ ಸಂತೋಷ ಎರಡೂ ಒಂದು ಹಂತದಲ್ಲಿ ಒಂದೇ ಆಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ ಪುರಾಣದಲ್ಲಿ ಬರುವ ಅಜಮಿಳ ಎಂಬ ಪಾತ್ರ ವಿಚಿತ್ರವಾಗಿ ಮಾತಾಡುತ್ತದೆ. ಅವನು ಅತೀವ ವ್ಯಾಮೋಹಿ. ಜೀವನವನ್ನು ವಿಷಯಾಸಕ್ತಿಗಳಲ್ಲಿ ಹಿಡಿದಿಡಲು ಹೊರಟವನು. ಅವನ ಜೀವನದ ಸಾಂಕೇತಿಕತೆ ಹೇಗಿದೆ ನೋಡಿ. ಅವನು ಸತ್ತಾಗ ಅವನನ್ನು ಒಯ್ಯಲು ನರಕದಿಂದ ಯಮದೂತರು ಬರುತ್ತಾರೆ. ಸ್ವರ್ಗದಿಂದ ದೇವದೂತರೂ ಬರುತ್ತಾರೆ. ಇಬ್ಬರ ಮಧ್ಯೆ ವಾಗ್ಯುದ್ಧ ನಡೆಯುತ್ತದೆ. ಅವನು ಪಾಪಿ ಎಂದೂ ಹೀಗಾಗಿ ಶಿಕ್ಷೆಗೆ ಅರ್ಹನೆಂದೂ ನರಕ ಸೇರಬೇಕಾದವನೆಂದೂ ಯಮದೂತರು ವಾದಿಸಿದರೆ, ಅವನು ಪುಣ್ಯವಂತನಾಗಿದ್ದಾನೆಂದು ದೇವದೂತರು ಹೇಳುತ್ತಾರೆ. ಸಾಯುವ ಹೊತ್ತಿನಲ್ಲಿ ನಾರಾಯಣ ಸ್ಮರಣೆ ಮಾಡಿದ್ದರಿಂದ ಅವನ ಪಾಪವೆಲ್ಲ ತೊಳೆದುಹೋಗಿದೆ ಎನ್ನುವುದು ದೇವದೂತರ ವಾದ.

ಇಲ್ಲಿ ನಾರಾಯಣ ಎಂಬುದು ಅವನ ಮಗನ ಹೆಸರು. ಹೀಗಾಗಿ ಅವನು ಮಗನನ್ನು ಕರೆದನೇ ಹೊರತು, ದೇವರ ಸ್ಮರಣೆ ಮಾಡಿದ್ದಲ್ಲ. ಗೊತ್ತಿಲ್ಲದೇ ನಾರಾಯಣ ಸ್ಮರಣೆ ಮಾಡಿದವನಿಗೆ ಕ್ಷಮೆ ಕೂಡದು ಎನ್ನುತ್ತಾರೆ ಯಮದೂತರು. ಆಗ ದೇವದೂತರು ಒಂದು ವಿಚಿತ್ರ ತರ್ಕ ಮಂಡಿಸುತ್ತಾರೆ: ಔಷಧಿ ಎಂದು ಗೊತ್ತಿಲ್ಲದೇ ಔಷಧಿ ಕುಡಿದರೂ ರೋಗ ವಾಸಿಯಾಗುವುದಿಲ್ಲವೇ? ಹಾಗೇ ಗೊತ್ತಿಲ್ಲದೆ ಹರಿಸ್ಮರಣೆ ಮಾಡಿದ್ದರಿಂದ ಅವನ ಪಾಪ ತೊಳೆದುಹೋಗಿದೆ.

ಇಲ್ಲಿರುವ ವಿಸ್ಮಯ ನೋಡಿ. ಧ್ಯಾನಸ್ಥ ಸ್ಥಿತಿ, ಭಕ್ತಿ, ಏಕಾಗ್ರತೆ, ಕಠೋರ ತಪಸ್ಸು, ತನ್ಮಯತೆ ಇವೆಲ್ಲವನ್ನೂ ಯಾವ ಪುರಾಣ ಎತ್ತಿಹಿಡಿದಿತ್ತೋ ಅದೇ ಪುರಾಣ ಮತ್ತೊಂದು ಕಡೆ ತಿರಸ್ಕರಿಸುತ್ತದೆ. ಇಂಥ ಪುರಸ್ಕಾರ ಮತ್ತು ತಿರಸ್ಕಾರ ಎರಡನ್ನೂ ಮುಂದಿಡುವ ಮೂಲಕ ಆಯ್ಕೆಯನ್ನು ನಮಗೇ ಬಿಡುತ್ತದೆ. ಅದು ಯಾವುದನ್ನೂ ನಿರಾಕರಿಸುವುದಿಲ್ಲ, ಸ್ವೀಕರಿಸು ಎಂದು ಹೇಳುವುದೂ ಇಲ್ಲ. ಮರಳುಗಾಡಿನ ಸುಡುಹಾದಿಯಲ್ಲಿ ನಡದರೂ, ಹೂದೋಟದ ಪರಿಮಳದ ದಾರಿಯಲ್ಲಿ ನಡೆದರೂ ಸೇರುವುದು ಒಂದೇ ತಾಣ ಎಂದಾದರೆ ಮರುಭೂಮಿಯಲ್ಲಿ ಯಾಕೆ ಸಾಗಬೇಕು? ಹೂದೋಟದ ಸೊಬಗು ಪ್ರಯಾಣವನ್ನು ನಿಧಾನವಾಗುವಂತೆ ಮಾಡಬಹುದಲ್ಲ? ಬೇಗ ಹೋಗಿ

ಯಾಕಾದರೂ ತಲುಪಬೇಕು? ಹೀಗೆ ಪ್ರಶ್ನೋತ್ತರಗಳ ಮೂಲಕ ನಮ್ಮ ನಮ್ಮ ಜ್ಞಾನ ನಮ್ಮದು, ಅರಿವು ನಮ್ಮದು.

ಬೋದಿಲೇರ್ ಹೀಗೆ ಪ್ರಶ್ನಿಸುತ್ತಾ ಕೂತವನಲ್ಲ. ಅವನು ಉರಿಯುತ್ತಿರುವ ಗೋಲದ ಹಾಗೆ ಬದುಕಿದವನು. ರೋಚಕವಲ್ಲದ ಅರೆಕ್ಷಣ ಕೂಡ ತನ್ನದಾಗಕೂಡದು ಎಂಬ ಕಟ್ಟೆಚ್ಚರದಲ್ಲಿ ಮುನ್ನುಗ್ಗಿದವನು. ಸಾವನ್ನು ಬೆನ್ನಿಗೆ ಕಟ್ಟಿಕೊಂಡೇ ಬದುಕಿದವನು. ಅವನು ಶ್ರೀಮಂತನಲ್ಲ, ಸೊಗಸಾದದ್ದನ್ನು ಬಯಸಿದವನಲ್ಲ, ಒಳ್ಳೆಯ ಊಟ, ಸುಂದರಿಯಾದ ಹೆಣ್ಣು, ಒಳ್ಳೆಯ ಮದ್ಯಕ್ಕಾಗಿ ಹಂಬಲಿಸಿದವನೂ ಅಲ್ಲ. ಸದಾ ಒಣಕಲು ಮೊಲೆಗಳ, ನಶಿಸುತ್ತಿರುವ ಭಿಕ್ಷುಕರ, ಕಲಾವಿದರಂತೆಯೇ ಹೊತ್ತು ಕಳೆಯಲು ಹೊಟ್ಟೆ ಹೊರೆಯಲು ಕಳ್ಳತನ-ಕೊಲೆ ಮಾಡುವವರ, ಭಿಕಾರಿಗಳಾದ ಜೂಜುಕೋರರ, ಕಾಲನ ಕತ್ತರಿಯ ನಡುವೆ ಸಿಕ್ಕ ಸುಂದರಿಯರ ಧ್ಯಾನದಲ್ಲಿ ಇರುವಂತೆ ಕಾಣುವ ಬೋದಿಲೇರ್’ ಈ ಬದುಕನ್ನು ಸಹಿಸಿಕೊಂಡ ರೀತಿಯೇ ವಿಚಿತ್ರ.

ಪಾಪದ ಹೂವುಗಳು ಕೃತಿಯ ಬಗ್ಗೆ ಬೋದಿಲೇರ್ ಹೇಳುವುದು ಕೇಳಿ:

ನಾನು ಈ ಪರಮನೀಚ ಪುಸ್ತಕದೊಳಕ್ಕೆ ನನ್ನೆಲ್ಲ ಹೃದಯವನ್ನು, ನನ್ನೆಲ್ಲ ಪ್ರೀತಿಯನ್ನು, ನನ್ನೆಲ್ಲ ಧರ್ಮವನ್ನು, ನನ್ನೆಲ್ಲ ದ್ವೇಷವನ್ನು ಹಾಕಿದ್ದೇನೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ನಾನು ಇದಕ್ಕೆ ವ್ಯತಿರಿಕ್ತವಾಗಿಯೂ ಮಾತಾಡಬಲ್ಲೆ. ಇದು ಕೇವಲ ಕಲಾತ್ಮಕ ಪುಸ್ತಕವೆಂದು, ಕಪಿಚೇಷ್ಟೆಯ ಗ್ರಂಥವೆಂದು, ದರಿದ್ರ ಪುಸ್ತಕವೆಂದು ಹೇಳುತ್ತಾ ಹೋಗಬಲ್ಲೆ. ಆದರೆ ಹಾಗೆ ಹೇಳುವಾಗ ಕೇವಲ ಜಾಣ ಸುಳ್ಳುಗಳನ್ನು ಹೇಳುತ್ತೇನೆ..’

ಇದನ್ನು ಅನುವಾದಿಸಿದವರು, ಬೋದಿಲೇರ್ ಬಗ್ಗೆ ಮೊದಲು ಬರೆದವರು ಲಂಕೇಶ್. ಅವರಿಗೆ ಆ ಕುರಿತು ಹೇಳಿದವರು ವೈಎನ್‌ಕೆ. ಲಂಕೇಶರು ಅನುವಾದಿಸಿದ ಬೋದಿಲೇರನ ಒಳಗೆ ಲಂಕೇಶರು ಎಷ್ಟಿದ್ದಾರೆ ಎನ್ನುವುದು ನನ್ನ ಕುತೂಹಲ. ಯಾಕೆಂದರೆ ಇಂಗ್ಲಿಷಿನಲ್ಲಿ ಅವನ ಬಗ್ಗೆ ಓದಿದಾಗ ಅಂಥ ಆಸಕ್ತಿಯೇನೂ ಹುಟ್ಟಲಿಲ್ಲ. ಒಣ ಭಾಷೆ, ಹಳೆಯ ಪದಪುಂಜ ಮತ್ತು ನಿರೀಕ್ಷಿತ ಹೊಗಳಿಕೆಗಳಲ್ಲಿ ಬೋದಿಲೇರ್ ಪೇಲವವಾಗಿ ಕಾಣಿಸುತ್ತಿದ್ದ. ಆದರೆ ಲಂಕೇಶರು ಅವನನ್ನು ನಮ್ಮೊಳಗಿನ ದುಷ್ಟನಂತೆ, ಅನಿವಾರ್ಯ ದುಷ್ಟನಂತೆ ಚಿತ್ರಿಸಿದರು.

ಬೋದಿಲೇರನ ಒಂದೆರಡು ಸಾಲುಗಳನ್ನು ನೋಡಿ:

ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು.

ಏನನ್ನು ಕುಡಿಯುವುದು?

ವೈನ್, ಕಾವ್ಯ, ಋಜುತ್ವ

ಯಾವುದನ್ನಾದರೂ:

ಕುಡಿಯಬೇಕು ಮಾತ್ರ.

ತಾಳವನ್ನು ಹೋಲುವ ತೆಳುಬೆರಳುಗಳ ಎತ್ತರ ಬೂಟುಗಳ ಸುಂದರಿಯರು, ಕಿರು ಚಿತ್ರಗಳಲ್ಲಿ ಕಾಣುವ ಕೃಶಾಂಗಿಯರು, ಈ ನಾಜೂಕಿನ ಕಾಲದ ಖೋಟಾ ಹೆಂಗಸರು ನನ್ನ ಹೃದಯ ಮುಟ್ಟಲಾರರು. ಬಣ್ಣಗೆಟ್ಟ ಗುಲಾಬಿಗಳಲ್ಲಿ ನನ್ನ ಆದರ್ಶದ ಕೆಂಪು ದೊರೆಯಲಾರದು. ನನ್ನ ಪಾತಾಳಕ್ಕೊಗ್ಗುವ ಎದೆ ನಿನ್ನನ್ನು ಮೆಚ್ಚುತ್ತದೆ. ಪಾಪಗಳ ಪ್ರವೀಣೆ ನೀನು ಓ ಲೇಡಿ ಮೆಕ್‌ಬೆತ್, ಕಗ್ಗತ್ತಲ ರಾತ್ರಿ ನೀನು ಮೈಕಲೆಂಜಲೋ ಪುತ್ರಿ. ಟೈಟನ್ ದೈತ್ಯನಿಗಾಗಿ ನಿನ್ನ ವಿಚಿತ್ರ ಭಂಗಿಗಳಲ್ಲಿ ಮೋಡಿ ಹಾಕುವ ಮುತ್ತ ಹಡೆಯುವಾಕೆ.

ಹೀಗೆ ಬರೆದ ಬೋದಿಲೇರ್ ಲಂಕೇಶರಿಗೂ ಪೂರ್ತಿ ದಕ್ಕಿದ್ದನೆ? ಆದರೆ ಅವನಂತೆ ಬರೆಯಲು ಹೊರಟ ಅನೇಕರ ಪಾಲಿಗೆ ಅವನು ದೂರದ ಬೆಟ್ಟ, ಭ್ರಮೆ ಮತ್ತು ನಿರಾಶೆ

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: