ಕರುನಾಡಿನಲ್ಲಿ ‘ಎಂಡಾಸುರ’…

-ಗಾಣಧಾಳು ಶ್ರೀ ಕಂಠ

ಪಸೆ

ಎಂಡೋಸಲ್ಫಾನ್ ಎಂಬ ಕೀಟನಾಶಕದ ‘ಬೀಜ’ ನಾಡಿನ ಮೂಲೆ ಮೂಲೆಗಳಲ್ಲಿ ಮೊಳೆಯುತ್ತಿದೆ. ಗೇರು, ಭತ್ತ, ಕಾಫಿ, ತೊಗರಿ ತರಕಾರಿಯಲ್ಲೂ ಎಂಡೋ ವಿಷದ ಪಳೆಯುಳಿಕೆಗಳಿವೆ. ಶೀಘ್ರ ಎಚ್ಚೆತ್ತುಕೊಳ್ಳದಿದ್ದರೆ ಕೊಕ್ಕಡ, ಪಟ್ರಮೆಯಂಥ ದುರಂತಗಳು ಮತ್ತೆ ಮರುಕಳಿಸಬಹುದು.

ಬೆಳಗ್ಗೆಯೆದ್ದರೆ, ಸಂಜೆಯಾದರೆ ಕಾಫಿ-ಚಹಾ ಕುಡಿಯುತ್ತೀವಲ್ಲ; ಚಿತ್ರಾನ್ನ, ಪುಳಿಯೋಗರೆ, ಪಲಾವ್ ಎಂದು ಸೋನಾ ಮಸೂರಿ ಅಕ್ಕಿಯ ಉಣ್ಣುತ್ತೀವಲ್ಲ; ಊಟದಲ್ಲಿ ತೊಗರಿಬೇಳೆ ತೊವ್ವೆಯನ್ನು, ಹೀರೆಕಾಯಿ ಖಾದ್ಯವನ್ನು ಚಪ್ಪರಿಸುತ್ತೇವಲ್ಲ; ಶ್ಯಾವಿಗೆ ಪಾಯಸದಲ್ಲಿರುವ ಗೋಡಂಬಿಯನ್ನು ಪೌಷ್ಟಿಕ ಎಂದು ತಿನ್ನುತ್ತೇವಲ್ಲ- ಹಾಂ, ಇವೆಲ್ಲವೂ ವಿಷಮಯ! -ಕಾರಣ, ‘ಎಂಡೋಸಲ್ಫಾನ್’ನಂತಹ ಕೀಟನಾಶಕಗಳು!

ಪಕ್ಕದ ಕೇರಳದಲ್ಲಿ ಇದೀಗ ಎಂಡೋಸಲ್ಫಾನ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ನಿಷೇಧವಿದ್ದರೂ ವ್ಯಾಪಕವಾಗಿ ಬಳಕೆಯಾಗುತ್ತಿರುವ ಈ ಕೀಟನಾಶಕವನ್ನು ದೇಶದಿಂದಲೇ ಹೊರಗಟ್ಟುವಂತೆ ವಿವಿಧ ಕೃಷಿ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳಲ್ಲೂ ಎಂಡೋಸಲ್ಫಾನ್ ಉಪಟಳವಿದೆ. ಅಲ್ಲಿನ ಹಲವು ಕುಟುಂಬಗಳು ವಿಷದ ಭಾದೆ ಅನುಭವಿಸುತ್ತಿವೆ. ಗೇರು ತೋಟಗಳ ಮೇಲೆ ನಡೆದ ಎಂಡೋಸಲ್ಫಾನ್ ಅಭಿಷೇಕದಿಂದ 200ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ರೋಗಗ್ರಸ್ತರಾಗಿದ್ದಾರೆ. ಆದರೆ ಈ ಬಗ್ಗೆ ಮಾತನಾಡುವವರೇ ಕಡಿಮೆ.

ಮೇಲಿನ ಮೂರೂ ಗ್ರಾಮಗಳಲ್ಲಿ ಅಂಗವಿಕಲರು, ಬುದ್ಧಿಮಾಂದ್ಯರು, ಹುಟ್ಟುಕುರುಡರು, ಹೆಳವರು.. ಹೀಗೆ ಎಂಡೋ ಬಾಧೆಯ ನೆರಳಿನಲ್ಲೇ ಜೀವನ ಸಾಗಿಸುವವರಿದ್ದಾರೆ. ಎಂಡೋ ಇವರ ವಂಶವಾಹಿಯಲ್ಲಿಯೇ ನೆಲೆ ಕಂಡುಕೊಂಡಿದೆ. ತಾಯಿಯ ಹೊಟ್ಟೆಯಲ್ಲಿರುವ ಮಕ್ಕಳನ್ನೂ ಎಂಡೋ ಭೂತ ಕಾಡುತ್ತಿದೆ. ಸಾರ್ವಜನಿಕರು ಒಕ್ಕೊರಲಿನಿಂದ ಪ್ರತಿಭಟಿಸಿದ್ದರಿಂದ 2002ರಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಸ್ಥಗಿತಗೊಂಡಿದೆ. ಆದರೆ ಪರಿಣಾಮಗಳು?

ಸರ್ವವೂ ವಿಷಮಯ

ಮಳೆ ನಿಂತರೂ ಮರದ ಹನಿ ನಿಲ್ಲದು. ‘ಎಂಡೋ ಸಿಂಪಡಣೆ’ ನಿಂತರೂ ಅದರ ಪರಿಣಾಮ ಮಾತ್ರ ಈ ಮೂರೂ ಗ್ರಾಮಗಳ ನೆಲ, ಜಲ, ಸಸ್ಯಗಳಲ್ಲಿ ವ್ಯಾಪಿಸಿಕೊಂಡಿದೆ. ಈ ವಿಷದಿಂದ ಕಲುಷಿತಗೊಂಡಿದ್ದ ನದಿಯಲ್ಲಿನ ಸತ್ತ ಮೀನುಗಳನ್ನು ತಿಂದವರು ಇಂದೂ ರೋಗದಿಂದ ಬಳಲುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಅಂಗವಿಕಲ ಮಕ್ಕಳ ಜನನ, ಗರ್ಭಪಾತದ ಪ್ರಕರಣಗಳು ಹೆಚ್ಚಾಗಿವೆ ಎಂದು ವೈದ್ಯರೂ ಸ್ಪಷ್ಟಪಡಿಸುತ್ತಾರೆ.

‘ಎಂಡೋಸಲ್ಫಾನ್ ಸಿಂಪಡಣೆ ನಿಂತ ನಂತರ ಹೊಸ ಕಾಯಿಲೆಗಳು ಕಂಡು ಬಂದಿಲ್ಲ. ಹಳೆಯ ಕಾಯಿಲೆಗಳು ಕಡಿಮೆಯಾಗಿಲ್ಲ’ ಎನ್ನುವುದು ಸ್ಥಳೀಯ ವೈದ್ಯ ಡಾ.ಮುರುಳೀಧರ್ ವಿವರಣೆ. ಇತ್ತೀಚೆಗೆ ಕೊಕ್ಕಡದಿಂದ ಮದುವೆಯಾದ ಹೆಣ್ಣುಮಗಳಿಗೆ ಅಂಗವಿಕಲ ಮಗು ಜನಿಸಿದೆ. ಮುಖ್ಯಮಂತ್ರಿಗಳು ಪರಿಹಾರ ವಿತರಣೆಗೆ ಆಗಮಿಸುವ ಮುನ್ನ ಮೂವತ್ತೈದರ ಹರೆಯದ ಯುವಕನೊಬ್ಬ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ ಎನ್ನುವುದು ಸ್ವತಃ ಎಂಡೋ ಫಲಾನುಭವಿಯಾಗಿರುವ ಕೊಕ್ಕಡದ ಶ್ರೀಧರ್‌ಗೌಡರ ವಿವರಣೆ.

ಇದೇ ಗ್ರಾಮದ ಶಿಕ್ಷಕ ಜೋಸೆಫ್ ಪಿರೇರಾ ಈ ಮಾತಿಗೆ ಸಮ್ಮತಿಯ ಮುದ್ರೆ ಒತ್ತುತ್ತಾರೆ. ‘ಇಲ್ಲಿ ರೋಗಗ್ರಸ್ತರು ಸುಧಾರಿಸಿಲ್ಲ. ಸಂತೋಷ್, ಚಿತ್ರ, ನಿರ್ಮಲಾರಂಥವರು ಹಳೆಯ ಕಾಯಿಲೆಗಳಿಂದ ನರಳುತ್ತಿದ್ದಾರೆ. ರೋಗಬಾಧೆ ತೀವ್ರವಾಗಿ ಕೆಲವರು ಸಾವನ್ನಪ್ಪಿದ್ದಾರೆ. ಹಣದ ಕೊರತೆಯಿಂದಾಗಿ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿದೆ’ ಎನ್ನುವುದು ಅವರ ಅಳಲು.

ಕಾಫಿ ನಾಡಿನಲ್ಲೂ ಸದ್ದು

ದಕ್ಷಿಣ ಕನ್ನಡದ ಮೂರು ಗ್ರಾಮಗಳನ್ನು ಎಡಬಿಡದೇ ಕಾಡುತ್ತಿರುವ ಎಂಡೋಸಲ್ಫಾನ್ ಕರ್ನಾಟಕದ ಕಾಫಿನಾಡನ್ನೂ ಬಿಟ್ಟಿಲ್ಲ. ಆದರೆ ಅನಾಹುತ ಉಂಟು ಮಾಡುವಂತಹ ಮಟ್ಟಕ್ಕೆ ಬೆಳವಣಿಗೆಯಾಗಿಲ್ಲ.

ಕರಾವಳಿ ಸರಹದ್ದು ದಾಟಿದ ಎಂಡೋ ಘಟ್ಟ ಹತ್ತಿ ಚಿಕ್ಕಮಗಳೂರಿಗೆ ಬಂದಿದೆ. ಕಳೆದ ವರ್ಷ ಚಿಕ್ಕಮಗಳೂರಿನಲ್ಲಿ ಕಾಫಿಗೆ ಕಾಯಿಕೊರಕ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿತ್ತು. ವಿಜ್ಞಾನಿಗಳ ‘ಸಲಹೆ’ಯ ಮೇರೆಗೆ ಎಂಡೋ ಪ್ರಾಶನ ನಡೆಯಿತು. ಸಾವಿರಾರು ಎಕರೆ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಿದ್ದಾಯಿತು. ರೋಗ ನಿಯಂತ್ರಣಕ್ಕೆ ಬಂದಿತೆಂಬ ಸಮಾಧಾನ ಬೆಳೆಗಾರರಿಗೆ. ಆದರೆ ಗದ್ದೆಬಯಲು, ಅಂತರ್ಜಲ, ಕೆರೆ, ಹೊಂಡಗಳು ಮಲಿನಗೊಂಡವು. ಜೀವವೈವಿಧ್ಯ ನಾಶವಾಯಿತು. ಇವುಗಳು ಲೆಕ್ಕಕ್ಕೆ ಸಿಗಲಿಲ್ಲ, ಬೆಳಕಿಗೆ ಬರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ಮೂಡಿಗೆರೆಯ ಕಾಫಿ ಬೆಳೆಗಾರ ಭೂತನಕಾಡು ಅರವಿಂದ.

ಶುಂಠಿ, ಏಲಕ್ಕಿ, ಕಾಳುಮೆಣಸು ಕೃಷಿ ವ್ಯಾಪಕವಾಗಿರುವ ಸಕಲೇಶಪುರ, ಚಿಕ್ಕಮಗಳೂರು ತೋಟಗಳಲ್ಲಿ ಎಂಡೋಸಲ್ಫಾನ್‌ನಂತಹ ಕೀಟನಾಶಕಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ‘ಗುತ್ತಿಗೆ ಕೃಷಿ’ ಕೃಷಿ ಕರ್ನಾಟಕಕ್ಕೆ ಕಾಲಿಟ್ಟ ಮೇಲೆ ಭತ್ತದ ಗದ್ದೆಗಳೆಲ್ಲ ‘ವಿಷದ ತೊಟ್ಟಿಲು’- ‘ವಿಷಕನ್ಯೆ’ ಎನ್ನಲು ಅಡ್ಡಿಯಿಲ್ಲ. ಏಕೆಂದರೆ, ಅಲ್ಲೆಗ ಏನು ಬೆಳೆಯಬೇಕಾದರೂ ‘ವಿಷ’ದ ನೆರವು ಬೇಕು. ಆ ತೋಟಗಳಲ್ಲಿ ಬಳಸುವ ಕೀಟನಾಶಕಗಳಿಗೆ ಅಳತೆ-ಪ್ರಮಾಣವೇನಿಲ್ಲ. ಅಂಗಡಿಯವರು ಹೇಳಿದಷ್ಟು, ಬೆಳೆಗಾರರು ಬಳಸಿದಷ್ಟು!

ಮಲೆನಾಡಿನಲ್ಲಿ ಕೀಟನಾಶಕದ ಪ್ರಮಾಣ ಹೆಚ್ಚಿದ ಮೇಲೆ ‘ವಿಷಮುಕ್ತ’ ಆಹಾರ ಬೆಳವಣಿಗೆ ಕಷ್ಟವಾಗಿದೆ. ಕಾಫಿ ತೋಟದ ತಗ್ಗಿನಲ್ಲಿರುವ ಗದ್ದೆಗಳಲ್ಲಿ ಸಾವಯವ ಕೃಷಿ ಅಸಾಧ್ಯವಾಗಿದೆ. ಇಂಥ ಪ್ರದೇಶದಲ್ಲಿ ಬೆಳೆದ ಬೆಳೆಗೆ ಸಾವಯವ ಕೃಷಿ ದೃಢೀಕರಣ ಪ್ರಮಾಣ ಪತ್ರಗಳನ್ನು ನೀಡಲಾಗುವುದಿಲ್ಲ ಎನ್ನುತ್ತದೆ ಸಂಬಂಧಪಟ್ಟ ಸಂಸ್ಥೆ. ಹಾಗಾದರೆ ಮಹಾನಗರಗಳಿಗೆ ಸರಬರಾಜಾಗುವ ಸಾವಯವ ಉತ್ಪನ್ನಗಳ ಕಥೆ ಏನು?

ಅನ್ನದ ಬಟ್ಟಲಲ್ಲೂ..

ದಕ್ಷಿಣದಲ್ಲಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲೂ ‘ಎಂಡೋ’ ಬಳಕೆಯಲ್ಲಿದೆ. ತುಂಗಭದ್ರಾ ಜಲಾಶಯದ ಆಶ್ರಯದಲ್ಲಿ ಭತ್ತ ಬೆಳೆಯುವ ಕೊಪ್ಪಳ, ಗಂಗಾವತಿ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಗದ್ದೆ ಅಂಗಳದಲ್ಲಿ ಕೀಟನಾಶಕಗಳ ವಾಸನೆ ಮೂಗಿಗೆ ಅಡರುತ್ತದೆ. ಆಂಧ್ರಪ್ರದೇಶದ ಗುತ್ತಿಗೆದಾರರು ಈ ಭಾಗಕ್ಕೆ ಕಾಲಿಟ್ಟ ಮೇಲೆ ಎಂಡೋಸಲ್ಫಾನ್ ಬಳಕೆ ಹೆಚ್ಚಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಮೊನ್ನೆ ಗುಲ್ಬರ್ಗದಲ್ಲಿ ತೊಗರಿ ಬೆಳೆಗೆ ಎಂಡೋಸಲ್ಫಾನ್ ಸಿಂಪಡಿಸುವಾಗ, ಎರಡು ಎತ್ತುಗಳು ‘ಘಾಟಿಗೆ ತತ್ತರಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿವೆ. ಕಡೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಕೀಟನಾಶಕ ಸಿಂಪಡಿಸುತ್ತಿದ್ದ ರೈತ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾನೆ. ಇವೆಲ್ಲ ದುಷ್ಟಾಂತಗಳಲ್ಲ, ನೈಜ ಘಟನೆಗಳು.

ಕೀಟನಾಶಕದ ವಿಷಯ ಮಾತಾಡುವಾಗ ಗೆಳೆಯರೊಬ್ಬರು ಹೇಳಿದ ಘಟನೆ ನೆನಪಾಗುತ್ತದೆ. ಕೊಪ್ಪಳ, ಗಂಗಾವತಿ ಭಾಗದ ರೈತರು ಕೀಟನಾಶಕ ಸಿಂಪಡಿಸುವಾಗ, ವೈದ್ಯರೊಬ್ಬರನ್ನು ಚಹಾ ಕುಡಿಯಲು ಆಹ್ವಾನಿಸುತ್ತಾರೆ. ಅರೆ ವೈದ್ಯರಿಗೂ, ಕೀಟನಾಶಕ ಸಿಂಪಡಣೆಗೆ ಏನು ಸಂಬಂಧ ಎಂದು ಕೇಳಿದರೆ, ‘ಏನಿಲ್ಲ, ಸ್ಪ್ರೇ ಮಾಡ್ಬೇಕಾದರೆ, ಏನಾದರೂ ಹೆಚ್ಚೂ-ಕಡಿಮೆ ಆದ್ರೆ ಇರಲಿ ಅಂತ ಡಾಕ್ಟರ್ ಕರೆದಿರ್ತೀವಿ? ಅಷ್ಟೇ’ ಎನ್ನುತ್ತಾರೆ.

ಕೀಟನಾಶಕ ಸಿಂಪಡಿಸುವವನಿಗೇ ಇಷ್ಟು ತ್ರಾಸಾದರೆ ಇನ್ನು ‘ಸೋನಾ ಮಸೂರಿ ಸಣ್ಣಕ್ಕಿಯೇ ಬೇಕೆಂದು ಹಟ ಹಿಡಿದು ಉಣ್ಣುವ ಗ್ರಾಹಕನ ಪಾಡು? ಈ ವಿಷ ಭೂಮಿಗಿಳಿದಾಗ ಅಲ್ಲಿರುವ ಕ್ರಿಮಿ-ಕೀಟಗಳ ಪಾಡು? ಹೀಗೆ ನಿತ್ಯದ ಆಹಾರದ ಮೂಲಕ ನಮಗರಿವಿಲ್ಲದಂತೆ ಅನ್ನದ ಬಟ್ಟಲಿಗೆ ‘ಎಂಡೋಸಲ್ಫಾನ್’ನಂತಹ ಕೀಟನಾಶಕಗಳು ಬಂದು ಬೀಳುತ್ತಿವೆ. ಹಾಗಾದರೆ ನಾವೆಷ್ಟು ಸುರಕ್ಷಿತರು?

ಭತ್ತದ ಕಥೆ ಬಿಡಿ ಸ್ವಾಮಿ, ಬೆಂಗಳೂರು ಗ್ರಾಮಾಂತರ- ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ತರಕಾರಿಯಲ್ಲಿಯೂ ಎಂಡೋ ವಿಷ ಅಡಗಿದೆ ಎನ್ನುತ್ತವೆ ಇತ್ತೀಚಿನ ಕೆಲವು ಅಧ್ಯಯನಗಳು. ತಾಜಾ ಕೀಟನಾಶಕಗಳೊಂದಿಗೆ ಈ ತರಕಾರಿಯೂ ನಮ್ಮ ಉದರ ಸೇರುತ್ತಿದೆ. ಪುರಾಣದ ಈಶ್ವರನಿಗೆ ಕಂಠದಲ್ಲಿ ಮಾತ್ರ ವಿಷ. ಆಧುನಿಕ ಮನುಷ್ಯನಿಗೆ ಮೈಯೆಲ್ಲಾ ವಿಷ!

ದುರಂತಗಳು ಕಣ್ಣೆದುರೇ ಇದ್ದರೂ, ಎಂಡೋಸಲ್ಫಾನ್‌ನಂತಹ ಕೀಟನಾಶಕಗಳನ್ನು ಬಳಸಿ ಎಂದು ಕೃಷಿ ವಿಜ್ಞಾನಿಗಳು ರೈತರಿಗೆ ‘ಸಲಹೆ’ ನೀಡುತ್ತಿದ್ದಾರೆ. ಏನನ್ನುವುದು ಜೀವದೊಂದಿಗಿನ ಈ ಚೋದ್ಯಕ್ಕೆ?

 

1 ಟಿಪ್ಪಣಿ (+add yours?)

  1. apsubrahmanyam
    ಡಿಸೆ 27, 2010 @ 10:32:20

    ನಿನ್ನೆ ಪ್ರಜಾವಾಣಿ ರವಿವಾರ ಪುರವಣಿ ಮುಖಪುಟ ಲೇಖನದಲ್ಲಿ ಎ೦ಡಾಸುರ ಜೀವಜಗತ್ತಿನ ಮೇಲೆ ಮಾಡಿದ ಯುದ್ಧ ಕುರಿತ ಮನಮುಟ್ಟುವ ಚಿತ್ರ, ಶ್ರೀಪಡ್ರೆಯವರ ಬರಹದಲ್ಲಿ ಮೂಡಿದೆ. ಚಿ೦ತನೆಗೆ, ಕಾರ್ಯಕ್ಕೆ ಪ್ರಚೋದನೆಯಾಗಲಿ !

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: