ಈ ನೀಲು..

ಅಶೋಕ್ ಶೆಟ್ಟರ್

ಶಾಲ್ಮಲಾ

ಈ ನೀಲು,
ಕಾವ್ಯಕ್ಷೇತ್ರದ ಈ ಬ್ಲ್ಯೂ,
ಫಿಲ್ಮೀ ಹುಡುಗಿಯರಿಗೆ ಮಿಗಿಲಾದ ನಿಗೂಢೆ
ಹಲವರ ಕಾಡುವ ಕನ್ಯಾಮಣಿ
ಆಹಾ ಏನಾಕೆಯ ಕಾವ್ಯಸರಣಿ!

ಬೇರಾರೂ ಕಾಣದ್ದನ್ನು ಕಾಣುತ್ತಾಳೆ
ಕಂಡದ್ದು ಕಂಡ ಹಾಗೆ ಹೇಳುತ್ತಾಳೆ
ಎಲ್ಲೆಡೆಯಿಂದ ಬರುವ ಸುದ್ದಿ ಶಬ್ದ ಲಯ ಆಟ ಹೂಟಗಳಿಗೆ
ಕಿವಿ ತೆರೆದು ಕೂತಿರುತ್ತಾಳೆ
ಮೂಡ್ ಬಂದರೆ ಒಮ್ಮೊಮ್ಮೆ
ಪ್ರೇಮ,ಕಾಮ,ಕಾವ್ಯದ ಅ ಆ ಇ ಈ ಹೇಳತೊಡಗುತ್ತಾಳೆ.

ಗಂಡನ ಸೋಮಾರಿತನದ ಬಗ್ಗೆ ಗೊಣಗದ
ಮಕ್ಕಳ ಸ್ಕೂಲು, ಫೀಸು, ಪ್ರೊಗ್ರೇಸ್ ರಿಪೋರ್ಟ್ ಇತ್ಯಾದಿ ಕೊರೆಯದ
ಏರುತ್ತಿರುವ ಬೆಲೆ, ಗ್ಯಾಸ್ ಸಿಲಿಂಡರ್ ವಿಳಂಬ
ಕಾಂಪೌಂಡಿನೊಳಗೆ ಹಂದಿ ನುಗ್ಗುವದೇ ಮೊದಲಾದ
ಲೌಕಿಕದ ಮಾತಾಡದ
ಈ ಪಾರಮಾರ್ಥೆ ಬರೆಯದಿದ್ದರೆ
ಕೊರಡು ಕೊನರದಿರುವದೇ ಬರಡು ಚಿಗುರದಿರುವದೇ
ಕ್ರಾಂತಿ ಘಟಿಸದಿರುವದೇ.. ಅರಿಯೆ

ಆದರೆ
ಹುಲ್ಲುಗರಿಕೆ ಹೂವು ಗಿಡ ಮರ ಬಳ್ಳಿಗಳ ಔನ್ನತ್ಯಕ್ಕೇರಿಸುವ
ದಿನನಿತ್ಯದ ನೋಟಗಳಿಗಸಂಖ್ಯ ಅರ್ಥ ಹೊಮ್ಮಿಸುವ
ಗರತಿಯರಿಗೆ ಕಚಗುಳಿ ಇಡುವ
ಹುಡುಗಿಯ ತುಂಟತನ ತತ್ವಜ್ನಾನಿಯ ಗಾಂಭೀರ್ಯ ಮೆರೆವ
ಮಾನವಸ್ವಭಾವದ ಆಳಕ್ಕೆ ಇಳಿವ ಈ ರಮಣಿ ಬರೆದರೆ
ಕಪ್ಪುಮಸಿಯ ಬಾಟಲ್ ನಲ್ಲಿ ಕಟ್ಟಿರುವೆಯ ಅದ್ದಿ
ಬಿಳಿಯ ಹಾಳೆಯ ಮೇಲೆ ಓಡಿಸಿದಂತಿರುತ್ತದೆ.

ಪಾಳೆಗಾರಿಕೆ ಯಜಮಾನಿಕೆಗಳ ದಿಟ್ಟತನದ ಬಗ್ಗೆ
ಈ ಕೋಮಲೆ ಇತ್ತೀಚೆಗೆ ಮಾತಾಡತೊಡಗಿದ ಧಿಮಾಕಿಗೆ
ಅಸುಖ ಪಟ್ಟವರ ಮಾತು ಬಿಡಿ
ಅಕ್ಷರವಿಟ್ಟಳುಪದೊಂದಗ್ಗಳಿಕೆಯೇನೂ ಇಲ್ಲದ ಈಕೆ
ಅಕ್ಷರಗಳ ಹೊಡೆದುಹಾಕುವ ಚಂದಕ್ಕೇ ಮಾರು ಹೋಗಿದ್ದಾನೆ ಇಲ್ಲೊಬ್ಬ
ಹೀಗೆ ಕಚಗುಳಿ ಇಟ್ಟಂತೆ ಕವಿತೆ ಬರೆಯುವ ಈಕೆ ಪ್ರತಿಕ್ರಾಂತಿಕಾರಿಣಿಯಾದರೂ ಸರಿಯೇ
ನಾನವಳ ವರಿಸುವೆ ಎನ್ನುತ್ತಾನೆ ಇನ್ನೊಬ್ಬ

ಇನ್ನುಳಿದಂತೆ ಇವಳನ್ನು ಹಲವಾರು ಡ್ರೆಸ್ ಗಳಲ್ಲಿ ಕಲ್ಪಿಸಿಕೊಂಡಿರುವ
ಕನ್ನಡದ ತರುಣ ಕವಿಗಣ ಈಗ ಇವಳ ಅಡ್ರೆಸ್ ಅಷ್ಟು ಸಿಕ್ಕರೆ ಸಾಕು
ಇವಳಾರಾಕೆ ಇವಳಾರಾಕೆ ಇವಳಾರಾಕೆ ಎಂದೆಣಿಸದೇ
ಈಕೆ ನಮ್ಮಾಕೆ ಈಕೆ ನಮ್ಮಾಕೆ ಈಕೆ ನಮ್ಮಾಕೆ ಎಂದೆಣಿಸಿ
ಪ್ರೇಮಪತ್ರಗಳ ಮಹಾಪೂರವನ್ನೇ ಹರಿಸಿ
“ಚಲ್ ಮೇರೆ ನೀಲೂ” ಎಂದು ಹೆಗಲ ಮೇಲೆ ಕೈಹಾಕಿ ಹೊರಡಲು ಸಿದ್ಧವಿದೆ

“ಈ ಹೆಣ್ಣುಗಳೇ ಹೀಗೆ”, “ನಾವು ಹುಡುಗಿಯರೇ ಹೀಗೆ”, “ಅತ್ತು ಬಿಡೇ ಗೆಳತಿ”
ಎಂದು ಸೊರಸೊರಗುಟ್ಟುವ ಕವಯಿತ್ರಿಸ್ತೋಮದ ನಡುವೆ
ನೀಲುನಂಥ ಹತ್ತಾರು ಪಗದ್ಯ ಅಥವ ಗಪದ್ಯ ಪ್ರತಿಭೆಗಳೇನಾದರೂ ಪುಟಿದೆದ್ದರೆ
ನಾನು ಗಂಡಸರ ಕಾವ್ಯ ಓದುವದನ್ನೂ ಬಿಡಬೇಕೆಂದಿದ್ದೇನೆ…. ….!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: