ದಾರಿ ಯಾವುದಯ್ಯಾ ಮುಂದಕೆ ?

-ನಾ ದಿವಾಕರ

ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆಗಳೇ ಪ್ರಜೆಗಳ ಪರಮಾಸ್ತ್ರ, ಬ್ರಹ್ಮಾಸ್ತ್ರ ಎಲ್ಲ. ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಜಾರಿಗೊಳಿಸಲಾಗಿರುವ ಪಂಚಾಯತ್ ವ್ಯವಸ್ಥೆ ಯಶಸ್ವಿಯಾಗಿರುವುದಕ್ಕೂ ಚುನಾವಣಾ ಪ್ರಕ್ರಿಯೆಯೇ ಕಾರಣವಾಗಿದೆ. ರಾಜಕೀಯ ಪಕ್ಷಗಳು ಏನೇ ಪ್ರಯತ್ನಗಳನ್ನು ಮಾಡಿದರೂ ಜನಸಾಮಾನ್ಯರು ಪಂಚಾಯತ್ ಸಂಸ್ಥೆಗಳ ಮೂಲಕ ತಮ್ಮ ಸೀಮಿತ ಅಧಿಕಾರವನ್ನು ಚಲಾಯಿಸುವುದರಲ್ಲಿ ಸಫಲರಾಗಿದ್ದಾರೆ. ಆದರೂ ಕಲುಷಿತಗೊಂಡಿರುವ ರಾಜಕೀಯದ ರಾಡಿಹಯಲ್ಲಿ ಮಿಂದು ತೇಲಾಡುತ್ತಿರುವ ಈ ವ್ಯವಸ್ಥೆ ಕ್ರಮೇಣ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು ರಾಜಕೀಯ ಪಕ್ಷಗಳ ಕರಾಳ ಅವತಾರಗಳೆಲ್ಲವೂ ಗ್ರಾಮಮಟ್ಟದಲ್ಲಿ ಅನಾವರಣಗೊಳ್ಳುತ್ತಿವೆ.

 

ಚುನಾವಣಾ ಪ್ರಣಾಳಿಕೆ ಎಂದರೆ, ಪ್ರದೇಶದ ಅಭಿವೃದ್ಧಿಗಾಗಿ, ಜನತೆಯ ಅಭ್ಯುದಯಕ್ಕಾಗಿ ಪಕ್ಷಗಳು ಅನುಸರಿಸಲಿರುವ ರಾಜಕೀಯ-ಸಾಮಾಜಿಕ-ಆರ್ಥಿಕ ನೀತಿಗಳ ಸ್ಪಷ್ಟ ಚಿತ್ರಣ ನೀಡುವಂತಿರಬೇಕು. ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ತಮ್ಮ ಪಕ್ಷ ಯಾವ ರೀತಿಯ ಆರ್ಥಿಕ-ರಾಜಕೀಯ ನೀತಿಗಳನ್ನು ಅನುಸರಿಸುತ್ತದೆ, ಗ್ರಾಮ-ಪಟ್ಟಣ ಮತ್ತು ಜಿಲ್ಲೆಗಳ ಅಭಿವೃದ್ಧಿಗಾಗಿ, ಪ್ರಜೆಗಳ ಅಭ್ಯುದಯಕ್ಕಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸ್ಪಷ್ಟವಾಗಿ ತಿಳಿಯಪಡಿಸುವ ಒಂದು ಲಿಖಿತ ಪ್ರಮಾಣವನ್ನೇ ಪ್ರಣಾಳಿಕೆ ಎಂದು ಹೇಳಲಾಗುತ್ತದೆ.

ಈ ಪ್ರಣಾಳಿಕೆಗಳ ಮೂಲಕವೇ ಪಕ್ಷಗಳ ಸಿದ್ಧಾಂತ ಮತ್ತು ನೈತಿಕ ಬದ್ಧತೆಯೂ ಸ್ಪಷ್ಟವಾಗುತ್ತದೆ. ಆದರೆ ಕರ್ನಾಟಕದ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ನೋಡಿದರೆ ರಾಜ್ಯದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಹೊರತಂದಿರುವ ಪ್ರಣಾಳಿಕೆಯನ್ನು ನೋಡಿದರೆ, ನಮ್ಮೂರಿನ ಜಾತ್ರೆಯ ಸನ್ನಿವೇಶ ನೆನಪಾಗುತ್ತದೆ.

ಜಾತ್ರೆಗಳಲ್ಲಿ ವ್ಯಾಪಾರಿಗಳು ತಮ್ಮ ಸರಕಿನ ಮಾರಾಟಕ್ಕಾಗಿ ಅಗ್ಗದ ದರದಲ್ಲಿ ನೀಡುವ ಘೋಷಣೆ ಮಾಡುತ್ತಿರುವುದು, ಕೆಲವು ಸಿದ್ಧೌಷದ ಮಾರಾಟಗಾರರು ತಮ್ಮ ಔಷಧಿಗಳಿಂದ ಎಲ್ಲ ರೋಗಗಳನ್ನೂ ವಾಸಿ ಮಾಡುತ್ತೇವೆಂದು ಹೇಳುತ್ತಿರುವುದು, ಗಿಣಿ, ಕವಡೆ ಶಾಸ್ತ್ರ ಹೇಳುವವರು ಜನರನ್ನು ಮರುಳು ಮಾಡುತ್ತಿರುವುದು ಇವೆಲ್ಲವೂ ಜಾತ್ರೆಯ ವೈಶಿಷ್ಟ್ಯಗಳು. ರಾಜ್ಯದ ಮೂರೂ ಪ್ರಮುಖ ಪಕ್ಷಗಳ ಪ್ರಣಾಳಿಕೆಗಳು ಈ ಸೂಚನೆಯನ್ನೇ ನೀಡುತ್ತವೆ. ಭಾಜಪದ ಪ್ರಣಾಳಿಕೆಯಲ್ಲಿರುವ ಭರವಸೆಯ ಮಹಾಪೂರವನ್ನು ನೋಡಿದರೆ ಇದು ಸಾಧ್ಯವೇ ಎಂದು ಹುಬ್ಬೇರಿಸಬೇಕಾಗುತ್ತದೆ.

ಹೆದ್ದಾರಿಗಳ ದುರಸ್ತಿಯನ್ನೂ ಪ್ರಣಾಳಿಕೆಯಲ್ಲಿ ಸೇರಿಸಿರುವುದು ಹಾಸ್ಯಾಸ್ಪದ ಎನಿಸುತ್ತದೆ. ಜೆಡಿಎಸ್ ದೃಷ್ಟಿಯಲ್ಲಿ ಪ್ರಣಾಳಿಕೆ ಎಂದರೆ ಪರನಿಂದೆಯ ಒಂದು ದಸ್ತಾವೇಜು ಎಂಬಂತಿದೆ. ಅವರು ಮಾಡದಿರುವುದನ್ನು ನಾವು ಮಾಡುತ್ತೇವೆ ಅಥವಾ ಅವರು ಮಾಡಿರುವ ಹಾಗೆ ನಾವು ಮಾಡುವುದಿಲ್ಲ ಎಂದು ಹೇಳುವುದೇ ಪ್ರಣಾಳಿಕೆಯಾದರೆ, ಪ್ರಜಾತಂತ್ರವನ್ನು ಪರಮಾತ್ಮನೇ ಕಾಪಾಡಬೇಕು. ಹಣಬಲ, ತೋಳ್ಬಲಗಳಿಂದ ಮತದಾರರನ್ನು ಕೊಂಡುಕೊಳ್ಳುವ ತಮ್ಮ ಅಪರಿಮಿತಿ ಸಾಮಥ್ರ್ಯದಲ್ಲಿ ಅಪಾರ ವಿಶ್ವಾಸವಿರುವ ಈ ಪಕ್ಷಗಳು ಜನತೆಯನ್ನು ಮತದಾರ ಪ್ರಭುಗಳು ಎಂದು ಪರಿಗಣಿಸದೆ, ತಾವು ಎಸೆಯುವ ತುಣುಕುಗಳಿಗಾಗಿ ಕೈ ಒಡ್ಡಿ ನಿಂತಿರುವ ಯಾಚಿಕರು ಎಂದು ಭಾವಿಸಿದಂತಿದೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರವನ್ನು ಪ್ರಜೆಗಳ ಬಳಿಗೆ ಕೊಂಡೊಯ್ಯುವ ಒಂದು ಸಾಧನವಾಗಿ ಪಂಚಾಯತ್ ವ್ಯವಸ್ಥೆ ರೂಪುಗೊಂಡರೂ ನಿಜವಾಗಿ ವಿಕೇಂದ್ರೀಕರಣಗೊಂಡಿರುವುದು ರಾಜಕೀಯ ಅರಾಜಕತೆ ಮತ್ತು ಭ್ರಷ್ಟತೆಯೇ ಹೊರತು ಅಧಿಕಾರವಲ್ಲ. ಕರ್ನಾಟಕದ ಸಂದರ್ಭದಲ್ಲೇ ಹೇಳುವುದಾದರೆ ನಜೀರ್ ಸಾಬ್ ಅವರಂತಹ ನಿಷ್ಠಾವಂತ ಮುತ್ಸದ್ದಿಗಳು ಹಾಕಿಕೊಟ್ಟ ಮಾರ್ಗ ಅವಿಸ್ಮರಣೀಯ.

ಆದರೆ ಇಂತಹ ಸನ್ಮಾರ್ಗಗಳನ್ನು ಕರ್ನಾಟಕದ ರಸ್ತೆಗಳಷ್ಟೇ ಅಧ್ವಾನವಾಗಿ ಮಾಡಿಬಿಟ್ಟಿದ್ದಾರೆ ಇಂದಿನ ರಾಜಕಾರಣಿಗಳು. ಹಾಗಾಗಿಯೇ ಪ್ರಸ್ತುತ ಚುನಾವಣೆಗಳಲ್ಲಿ ಪ್ರಣಾಳಿಕೆಗಳು ಕೇವಲ ಆಲಾಪನೆಗಳಾಗಿವೆ, ಮೂಲ ಸ್ವರಗಳನ್ನು ಎಲ್ಲೋ ಕಳೆದುಕೊಂಡಿವೆ ಎನಿಸುತ್ತದೆ. ಈ ಅವ್ಯವಸ್ಥೆಗೆ ಹಣಬಲ, ತೋಳ್ಬಲ, ಜಾತಿ ಮುಂತಾದ ಅನಿಷ್ಠಗಳು ಒಂದು ಕಾರಣವಾದರೆ ಮತ್ತೊಂದೆಡೆ ನಿಜವಾದ ಪ್ರಜಾತಾಂತ್ರಿಕ ಅಧಿಕಾರವನ್ನು ಜನತೆಯ ಮಡಿಲಿಗೆ ಒಪ್ಪಿಸಲು ನಿರಾಕರಿಸುವ ಊಳಿಗಮಾನ್ಯ ಧೋರಣೆ ಮತ್ತೊಂದು ಕಾರಣವಾಗಿದೆ. ಮುಖ್ಯವಾಹಿನಿಯ ಪ್ರತಿಯೊಂದು ಪಕ್ಷವೂ, ಎಡಪಕ್ಷಗಳನ್ನು ಹೊರತುಪಡಿಸಿ, ಇದೇ ಊಳಿಗಮಾನ್ಯ ವ್ಯವಸ್ಥೆಯನ್ನು ಪ್ರತಿನಿಧಿಸುವುದು ಸರ್ವವೇದ್ಯ.

ಆದರೆ ಈ ಊಳಿಗಮಾನ್ಯ ಧೋರಣೆಯನ್ನು ತೊಡೆದುಹಾಕಲು ಇರುವ ಏಕೈಕ ಮಾರ್ಗ ಚುನಾವಣೆಯೇ ಆಗಿದೆ. ಚುನಾವಣೆಗಳ ಪೂರ್ವಭಾವಿ ಸಿದ್ಧತೆಯೇನೋ ಎಂಬಂತೆ ಕಪ್ಪೆಗಳು ಹಾರಾಡುವ ಹಾಗೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವ ರಾಜಕಾರಣಿಗಳನ್ನು ನೋಡಿದಾಗ ಯಜಮಾನ್ಯದ ಪರಂಪರೆ ನಮ್ಮಲ್ಲಿ ಇನ್ನೂ ನಶಿಸಿಲ್ಲವೆಂದು ಮನದಟ್ಟಾಗುತ್ತದೆ. ಅಷ್ಟೇ ಅಲ್ಲ, ಯಾವುದೇ ಎಗ್ಗಿಲ್ಲದೆ, ಸಾರ್ವಜನಿಕವಾಗಿ ಚಪ್ಪರ ಹಾಕಿಸಿ, ಪಟಾಕಿ ಸಿಡಿಸಿ ಸಂಭ್ರಮದಿಂದ ಪಕ್ಷಾಂತರ ಮಾಡುವ ನಮ್ಮ ಆಳ್ವಿಕರ ಪರಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಅಣಕಿಸುವಂತಿದೆ.

ತಮ್ಮ ಸ್ವಾರ್ಥ ಸಾಧನೆಗಾಗಿ ಪಕ್ಷಾಂತರ ಮಾಡುವ ರಾಜಕಾರಣಿಗಳು ತಮ್ಮ ವಿನಮ್ರತೆ ಮತ್ತು ಢೋಂಗಿ ಸಾಮಾಜಿಕ ಕಾಳಜಿಯ ಮೂಲಕ ಗುಲಾಮಗಿರಿಯ ಸಂಕೇತವಾಗಿ ಕಂಡುಬರುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ಮತ್ತೊಬ್ಬರ ನಾಯಕತ್ವವನ್ನು ಬೇಷರತ್ತಾಗಿ ಒಪ್ಪಿಕೊಳ್ಳುವ ಮೂಲಕವೇ ತಮ್ಮ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಮೂಲಕ ಯಜಮಾನ ಸಂಸ್ಕೃತಿಯನ್ನೂ ಪೋಷಿಸುತ್ತಾರೆ. ಇವೆರಡು ಪ್ರಕ್ರಿಯೆಗಳ ನಡುವೆ ಸಿಲುಕಿ ಪರದಾಡುವುದು ಮತದಾರ ಎಂಬ ಬಿರುದು ಪಡೆದಿರುವ ಜನಸಾಮಾನ್ಯ.

ಈ ಜನಸಾಮಾನ್ಯನ ಕೈಯಲ್ಲಿರುವ ಅಸ್ತ್ರ ಮತದಾನ ಒಂದೇ. ಸಮಾಜದ ಅನೈತಿಕತೆ, ಅರಾಜಕತೆ, ಅಧಃಪತನದ ವಿರುದ್ದ ಹೋರಾಡಲು ಇರುವ ವೇದಿಕೆ ಚುನಾವಣೆ ಒಂದೇ. ಈ ವೇದಿಕೆಯೂ ಪ್ರಬಲ ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆಯ ಅಖಾಡ ಆಗುತ್ತಿರುವ ಸಂದರ್ಭದಲ್ಲಿ ಮತದಾರ ಏನು ಮಾಡಲು ಸಾಧ್ಯ ? ಪ್ರತಿಭಟನೆ, ಹೋರಾಟ, ಸಂಘರ್ಷ ಮತ್ತು ಪ್ರಜಾಸತ್ತಾತ್ಮಕ ಚಳುವಳಿ ಇವೇ ಮುಂದಿರುವ ದಾರಿ.

ನಿಮ್ಮ ಟಿಪ್ಪಣಿ ಬರೆಯಿರಿ